ಗೌತಮ್ ಜ್ಯೋತ್ಸ್ನಾ ಕಥೆ : ಮಾರೀಚ

ಮಾರೀಚ

ಅಥವಾ ಒಂದು ಅಪಾಯಕಾರಿ ಮನಸ್ಸಿನ ಪ್ರಣಯ ಪ್ರಸಂಗ

“…Which is why we cannot say of the purloined letter that, like other objects, it must be or not be in a particular place but that unlike them it will be and not be where it is, wherever it goes.”

                                     – JacquesLacan

ಮಳೆ ಹೀಗೆ ಮುಖಕ್ಕೆ ಉಗಿದಂತೆ ಆತುರ ಆತುರವಾಗಿ ಸುರಿಯುತ್ತಿರುವುದಕ್ಕೆ ಇಲ್ಲಿ ಬಂದು ಕೂತಿದ್ದೀನ ಅಥವಾ ನಿಜಕ್ಕೂ ಆ ಮನುಷ್ಯನ ಸ್ವತ್ತನ್ನು ಹಿಂದಿರುಗಿಸುವುದೇ   ನನ್ನ ಮುಖ್ಯ ಅಜೆಂಡಾವೇ ಎನ್ನುವ ಪಹೇಲಿಯನ್ನು ಬಿಡಿಸಲು ಹೆಣಗುತ್ತಾ ಖಾಲಿ ಗ್ಲಾಸಿನ ಮೂಲಕ ನಸು ಗುಲಾಬಿ ಹಾಗೂ ಅಚ್ಚ ಕಿತ್ತಳೆ ಬಣ್ಣದಲ್ಲಿ ಹೊಳೆಯುತ್ತಿದ್ದ ಆ ಪಾನಗೃಹದ ವಯ್ಯಾರವನ್ನು ಗಂಭೀರವಾಗಿ ಗಮನಿಸುತ್ತಿದ್ದ ಶ್ರೀವತ್ಸ. ಬಾರ್ ಟೆಂಡರ್ ಆಕರ್ಷಕವಾಗಿ ಲಕಲಕಿಸುತ್ತಿದ್ದ ವಿನ್ಯಾಸಮಯ ಗ್ಲಾಸುಗಳಿಗೆ ನೊರೆ-ನೊರೆ ಬ್ರ್ಯೂ ಬೀರನ್ನು  ತುಂಬಿಸುತ್ತಿದ್ದ. ಅವನ ಪಕ್ಕದಲ್ಲಿ ಮತ್ತೊಬ್ಬ ವೊಡ್ಕ, ಪುದಿನಾ, ಲಿಂಬೆಯ ಕಾಕ್‍ಟೇಲ್ ಗ್ರೀನ್ ಫಾರೆಶ್ಟ್  ತಯ್ಯಾರಿಯಲ್ಲಿ ಮೈ ಮರೆತಿದ್ದ. ಮುಸ್ಸಂಜೆ ಆರರ ಹೊತ್ತು. ಈ ಮೂಲೆಯಲ್ಲಿದ್ದ ಅಗಲವಾದ ಪಾರದರ್ಶಕ ಕಿಟಕಿಯಿಂದ ಮುಟ್ಟುವಷ್ಟು ಹತ್ತಿರದಿಂದ ಧುಮುಕುತ್ತಿದ್ದ ಆಕಾಶ ಕಾಣುತ್ತಿತ್ತು. ಒಂದು ಕ್ಷಣ ಸ್ತಬ್ಧ ನೀಲಿ ಸಮುದ್ರವೇ ಮೇಲೆ ಹತ್ತಿ ಹೋದಂತೆ ಭ್ರಮೆಯಾಗುವ ಸಮಯ.

                ಅವನಿದ್ದದು ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಆರಂಭವಾಗಿದ್ದ spindrift Brew bar ನಲ್ಲಿ. ಕುಡಿಯುವುದಕ್ಕೆ ಟಾಟಾ ಹೇಳಿ ಇಂದಿಗೆ ಬರೋಬ್ಬರಿ ಆರು ತಿಂಗಳಾಗಿ ಏಳನೆಯ ದಿನ ನಡೆಯುತ್ತಿತ್ತು… ಸಾರ್ಹಾಳ ಜತೆ ಕಡೇ ಬಾರಿ ಈ ಬಾರಿಗೆ ಕಾಲಿಟ್ಟು ಏಳು ತಿಂಗಳಾಗಿ, ಎರಡನೆಯ ದಿನ… ಬೇಡ ಬೇಡವೆಂದರೂ ಈ ದಿನ  ಲೆಕ್ಕ ಹಿಡಿಯುವ ಚಟ ವತ್ಸನನ್ನು ಇನ್ನೂ ಬಿಟ್ಟಿರಲಿಲ್ಲ. ಚಳಿ-ಚಳಿ ಹವೆ… ಛಂಡಿ ಛಂಡಿ ಅಂಗಿ… ಒದ್ದೆ-ಒದ್ದೆ ಕೂದಲು… ಆಚೀಚೆ ಕಣ್ಣು ಹಾಯಿಸಿದ. ಯಾರೋ ಒಬ್ಬ ಅಪರಿಚಿತ, ವಿಚಿತ್ರ ಮೌನದಲ್ಲಿ ಇವನನ್ನೇ ನೋಡುತ್ತಿದ್ದ. ಉದ್ದ-ಉದ್ದ ಗಡ್ಡ… ಕಪ್ಪು ತುಪ್ಪಳದಂತೆ ಅಬ್ಬೇಪಾರಿಯಾಗಿ ಚದುರಿದ್ದ ಗುಂಗುರು ಕೂದಲು,   ಠೊಣಪ.

        ‘ಆ ಸೂಳೆ ಸಾರ್ಹ ಆಗಾಗ ಹುಕ್ಕಾ ಬಾರ್ಗೆ ಒಬ್ಬನ್ನ ಜತೆ ಹೋಗ್ತಿದ್ದೆ ಅಂತಿದ್ಲಳ್ಳ ಅವ್ನೇನ ಇದು, ಇಲ್ಲಾ  ಆ ಪುಣ್ಯಾತ್ಮ ಅವ್ಳ ದಿ ಗ್ರೇಟ್ ಹಳೇ ಬಾಯ್ ಫ್ರೆಂಡಾ.. ಎಷ್ಟ್ ಸಲ ಕೊರೀತಿದ್ಲು ನನ್ನ ಆ ಮುಂಡೆ, ಅವ್ನ ಕಥೆ ಹೇಳಿ… ಹೇಳಿ…’   ಯೋಚಿಸುತ್ತಿದ್ದ ವತ್ಸ. ಆದರೆ ಕೂಡಲೇ ಹಿಂದಿನ ರಾತ್ರಿಯಷ್ಟೇ ತಾನು ಮಾಡಿದ ಘನಕಾರ್ಯದ ಜ್ಞಾಪಕವಾಗಿ ಮನಸ್ಸು ಮತ್ತೆ ಪ್ರಕ್ಷುಬ್ಧವಾಯಿತು. ‘ಥೂ… ಥೂ ಆ ಹಾಳ್ ಚಾಟಿಂಗ್ ಸೈಟ್ಗೆ ಲಾಗಿನ್ ಆಗಿ, ಮೂರುವರೆ ತನ್ಕ ಎದ್ದು ಯಾರ್ಯಾರ್ ಜತೆನೋ ಪಟ್ಟಾಂಗ ಗಲೀಜು… ಆ ಸಾರ್ಹನ ಫೋಟೋ ಬೇರೆ ಅಲ್ಲಿ ಅಪ್‍ಲೋಡ್ ಮಾಡ್ದೆ… … ಅದನ್ನ ಏನಾದ್ರೂ ಟ್ರೇಸ್ ಮಾಡಿ, ಈತ ನನ್ನ ಹುಡ್ಕಂಡ್ ಇಲ್ಲಿಗೆ ಬಂದ್ ವಾಚ್ ಮಾಡ್ತಿದ್ದಾನ… ಆನ್‍ಲೈನ್ ಪ್ರೆಡೇಟರ್ಸ್ ಹಿಡಿಯೋ ಸಿಕ್ರೇಟ್ ಇಂಟರ್ ನ್ಯಾಶನಲ್  ಸೀಕ್ರೆಟ್ ಏಜೆಂಟಾ.. ಅಥವಾ ಇವ್ನ ಭೇಟಿಯಾಗಕ್ಕೇ ಇಲ್ಗೆ ಬಂದ್ನ ನಾನು ಹಾಗಾದ್ರೆ… ನನ್ನ ಪರ್ಫೆಕ್ಟ್ ಆಗಿ ಟ್ರಾಪ್ ಮಾಡಕ್ಕೆ ಎಲ್ಲ ಸೇರಿ ಈ ಡಿಸ್‍ಪ್ಲೇಸ್ಮೆಂಟ್ ಪೋಸ್ಟ್ ನಾಟ್ಕ ಆಡಿದ್ರಾ…’ ಮೈಯೆಲ್ಲ ಬಿಸಿ-ಬಿಸಿಯಾಯಿತು. ಉಸಿರಿನ ವೇಗ ತೀವ್ರವಾಯಿತು. ಆತ ಇನ್ನೂ ಅದೇ ಥರ ನೋಡುತ್ತಿದ್ದ. ಇನ್ನು ತಡೆಯಲಿಕ್ಕಾಗದೆ, ಏರುತ್ತಿದ್ದ ಭಯ ಮತ್ತು ಗುರುತೇ ಇರದಂತಹ ಕೋಪದಲ್ಲಿ, ‘ಎನಿಥಿಂಗ್  ಫನ್ನಿ… ಮೇ ಐ…’ ಎಂದು ತೊದಲಿದ ವತ್ಸ, ಸ್ಪಷ್ಟವಾಗಿ ಏನು ಹೇಳಬೇಕೆಂದು ಅರಿಯದೆ. ಆ ಟೊಣಪ ಯಾವ ವಿವರಣೆ ನೀಡದೆ ನಿರ್ವಿಕಾರವಾಗಿ ‘ದ ಪೆನ್…’ ಎಂದು ವತ್ಸನ ಎದೆಯ ಕಡೆ ಬೊಟ್ಟು ಮಾಡಿ  ಬಿಲ್ಲು ಕೊಡಲು ಎದ್ದು ಹೋದ. ಇವನ   ತಿಳಿನೀಲಿ ಬಣ್ಣದ ಲಿನನ್ ಶರ್ಟ್ ಜೇಬಿನ  ತಳದಲ್ಲಿ ಕೆಂಪು ಶಾಹಿಯು ಪದರ-ಪದರವಾಗಿ ಹಬ್ಬುತ್ತಿದ್ದನ್ನು ಕಂಡು ತಬ್ಬಿಬ್ಬಾದ. ವ್ಯಾಲ್ಯೂಷೇನ್ಗೆ ಬೇಕಾಗತ್ತೆ ಅಂತ ಎಲ್ಲೋ ಬಿದ್ದಿದ್ದ ರೆಡ್ಡಿಂಕ್ ಪೆನ್ನನ್ನು ಇಲ್ಲಿ ತುರುಕಿಸಿ ಅದೇ ದೊಡ್ಡ ರಾಡಿಯಾಗಿತ್ತು.   ಆ ಪೆನ್ನನ್ನು ಮೆಲ್ಲಗೆ ಸೋಫಾದಡಿ ಬಿಸಾಡಿ, ಟಿಶ್ಯುವಿಂದ ಗಸ-ಗಸನೆ    ಜೇಬನ್ನು ತೀಡಿದ. ಆದರೆ ಕಲೆ ಇನ್ನೂ ಹುಚ್ಚನಂತೆ ತಲೆ ಕೆದರಿ ಅಡ್ಡಾ-ದಿಡ್ಡಿ ಹರಡಿತ್ತು.

                 ‘ಥತ್…  ಈ ಕಾರಣಕ್ಕಾದರೂ ಒಂದ್ ಪೆಗ್ ಹಾಕ್ಬೇಕು…’  ಆದರೆ ಸರ್ವರ್ ಹತ್ತಿರ ಬಂದಾಗ, ಇನ್ನೂ ಒಬ್ಬ ಬರಲಿಕ್ಕಿದ್ದಾನೆ ಎಂದು ಗಟ್ಟಿ ಸ್ವರದಲ್ಲಿ ಕಿರುಚಿದ.  ‘ಈ ಹಾಳಾದವನು ಇನ್ನೂ ಎಷ್ಟು ಹೊತ್ತು ಕಾಯಿಸ್ತಾನೋ…’ ಎಂದು ಕೂತಲ್ಲೇ ಒದ್ದಾಡಿದ. ಬಾರು ನಿಧಾನಕ್ಕೆ ಪೊರೆ ಬಿಡಿಸಿಕೊಳ್ಳುತ್ತಾ ಜೀವ ತಳೆಯುತ್ತಿತ್ತು. ಉದ್ದದ ಛತ್ರಿ ಮಡಚಿಕೊಂಡು ಐವರು ಜನ ಹುಡುಗ-ಹುಡುಗಿಯರು ಕೇಕೆ-ನಗು ಗುಟುರು ಹಾಕುತ್ತಾ ಬಂದು ಈತನ ವಿರುದ್ಧ ದಿಕ್ಕಿನಲ್ಲಿದ್ದ ಸೋಫಾದ ಮೇಲೆ ಆರಾಮಕ್ಕೆ ಅಪ್ಪಳಿಸಿದರು.

                 ಮೊಬೈಲ್ ಫೋನ್ ನೋಡಿದ. ಬರಬೇಕಾಗಿದ್ದ ಮನುಷ್ಯನಿಂದ ಬೇರೆ ಏನೂ ಉತ್ತರ ಬಂದಿರಲಿಲ್ಲ.  ಸುಮ್ನೇ ಯೂಟ್ಯೂಬ್ ಆಪ್ ಅದುವಿದ.  ಇವನು ಅಪ್‍ಲೋಡ್ ಮಾಡಿದ್ದ ವೀಡಿಯೊಗೆ ಎಷ್ಟು ವೀಕ್ಷಕರು ಸಿಕ್ಕಿದ್ದಾರೆ ಎಂಬ ಕುತೂಹಲದಲ್ಲಿ ತನ್ನದೇ ಲೆಕ್ಚರಿಂಗ್ ಸೆಶನ್ನಿನ ದೃಶ್ಯವನ್ನು ಚಲಾಯಿಸಿದ.

            ‘Knowledge is controlled in every society, through mechanisms of power. Anywhere you find knowledge there also you will find power. They are linked. They are conditions for the possibility of one another. Knowledge is a regime of power as Foucault sometime says… See Rebellion and Knowledge do have a strange connection… Madness is a sort of rebellion… but look how society treats the mad… you know they want to make them more human! I hate the word more human… it makes me sick… and they… you know the powerful… they know how to isolate knowledge from the rebels and from the insane… they know that very well! How to cut of the umbilical cord that connects …. That they know perfectly… you know… they know that.. aaaa… Distraction… all they ever do… is, …distracting us… they love to do it… e…e…e its its like the the… tragedy of Maricha… you know ’

              ‘ಥೂ… ತುಂಬಾ ಕೆಟ್ಟದ್ದಾಗಿ ಮಾತಾಡಿದ್ದೀನಿ… ಎಷ್ಟು ಸ್ಟಗ್ರಲ್ ಮಾಡ್ತಾ ಇದ್ದೀನೋ ಒಂದೊಂದ್ ಪದ ಸೇರ್ಸಕ್ಕೇ…’ ಎಂದು  ಶಪಿಸಿ ಮೊಬೈಲನ್ನ ಮಲಗಿಸಿದ. ‘ಈ ಕ್ಲಾಸ್ ತಕ್ಕೊಂಡ ದಿನಾನೇ ತಾನೇ… ಇಲ್ಲ… ಇಲ್ಲ ಅದ್ರ ಮಾರ್ನೆಗೆ ಅವ್ನ ಈ ಕೊರಿಯರ್ ಬಂದಿದ್ದು… ಎಂಥಾ ಡಿಸ್‍ಪ್ಲೇಸ್ಮೆಂಟ್!’ ಎಂದು ತಪ್ಪಿ   ವಶವಾಗಿದ್ದ ಆ ತೂಕವೇ ಇಲ್ಲದೆ ತೇಲುತ್ತಿದ್ದ ಲಕೋಟೆಯನ್ನು ನುಣುಪಾಗಿ ಮುಟ್ಟಿದ. ಅದ್ಭುತವಾಗಿದ್ದ  ಹುಡುಗಿಯೊಬ್ಬಳು ಮೆನು ನೋಡುತ್ತಾ ನಗುತ್ತಿದ್ದಳು. ಅವಳ ಗೆಳೆಯನ ತೊಡೆಯನ್ನು ಪಾದದಲ್ಲಿ   ಸವರುತ್ತಿದ್ದಳು. ಆಕೆಯನ್ನೇ ಗುಟ್ಟಾಗಿ ಸ್ಕ್ಯಾನ್ ಮಾಡುತ್ತಿದ್ದ ಶ್ರೀವತ್ಸನನ್ನು ಹಠಾತ್ತಾನೆ ಅವಳು ನೋಡಿದಳು. ಕಣ್ಣಿಗೆ ಕೆಂಡ ಸುರಿದಂತಾಗಿ, ಬೇರೆ ಕಡೆ ದೃಷ್ಟಿ ತಿರುಗಿಸಲು ಒದ್ದಾಡಿ, ಥಂಡಿ ತಲೆಯನ್ನು ಉಜ್ಜಿದ ಶ್ರೀವತ್ಸ ಮತ್ತೆ ಬಾರ್‍ನ entrance  ಬಾಗಿಲಿನತ್ತ ಇಣುಕಿದ. ಪಕ್ಕದಲ್ಲಿದ್ದ ಖಾಲಿ ಜಾಗವನ್ನು ಉಗುರಿನಲ್ಲಿ ಕೆರೆದ. ಅಪ್ರಜ್ಞಾಪೂರ್ವಕವಾಗಿ ಮತ್ತೆ ಅವಳತ್ತ ಕಣ್ಣು ತಿರುಗಿಸಿದ. ವಿಕ್ಷಿಪ್ತವಾಗಿ ಆ ಹುಡುಗಿ ಈತನನ್ನು ಇನ್ನೂ ಪರಿಶೀಲಿಸುತ್ತಿದ್ದಳು. ಜೋರಾಗಿ ಕೆಮ್ಮಿದ. ಗೊತ್ತಿಲ್ಲದಂತೆಯೇ ಹೃದಯದ ಬಡಿತ ಲಯಬದ್ಧವಾಗಿ ಏರುತ್ತಿತ್ತು. ಕತ್ತಿನ ನರಗಳು ಉಬ್ಬಿ ಕಣ್ಣು ಮಿಟುಕಿಸುವ ಮನಸ್ಸಾಗುತ್ತಿತ್ತು. ತುಸು ದೂರದಲ್ಲಿ ಇನ್ನೊಂದು ಟೇಬಲ್‍ನ ಆರ್ಡರ್ ಬರೆದು ಕೊಳ್ಳುತ್ತಿದ್ದ ವೈಟರ್‍ನನ್ನು ತಾಳ್ಮೆಗೆಟ್ಟು ಕರೆದು, ‘Cihvas… on the rock and some vegetable salad …no… no.. Carrot and tomato just cucumber…’

              ಚಿನ್ನದ ನೀರಾಗಿ, ಕರಗುತ್ತಿರುವ ಮಂಜಿನ ಮೇಲೆ ಹರಿಯುತ್ತಿದ್ದ ಶಿವಾಸನ್ನು ಒಂದೇ ಏಟಿಗೆ ಬಾಯೊಳಗೆ ಸುರಿದುಕೊಂಡ; ನಿಮಿಷಗಳ ನಂತರ ನರಗಳೆಲ್ಲ ಹಾಯಿ ದೋಣಿಯಷ್ಟು ಹಗುರುವಾಯಿತು ಹಾಗೇ ಒರಗಿ ಕಾಲಗಲಸಿ, ತನ್ನಷ್ಟಕ್ಕೇ ಮುಗುಳ್ನಕ್ಕ… ಆರು ತಿಂಗಳಿಂದ ತಾನು ಪಟ್ಟ ಪಾಡೆಲ್ಲ ಈಗ ಎಷ್ಟು ಕ್ಷುಲ್ಲಕವೆನ್ನಿಸಿತು. ಎಲ್ಲವೂ ಅತಿ ಸಹಜ ಮತ್ತು   ಸುಂದರ ಎನಿಸಿತು.

­                ಇನ್ನೂ ಒಂದೆರಡು ಪೆಗ್ಗು ಏರಿಸಿದ ಮೇಲೆ ಲಘುವಾದ ಹೃದಯದಲ್ಲಿ ಮೈಚಳಿ ಬಿಟ್ಟು ಮೈ ಮುರಿದ ಶ್ರೀವತ್ಸನನ್ನು ಕಡುಕಪ್ಪು ಬಣ್ಣದ ಜಾಕೆಟ್ ಹಾಕಿದ, ಅಷ್ಟೇ ಕಪ್ಪಗೆ ಒತ್ತು ಒತ್ತಾಗಿ ಗಡ್ಡ ಬಿಟ್ಟು, ಸ್ಪಿನ್ ಡ್ರಿಫ್ಟ್‌ನ ಎಲುಬಿಲ್ಲದ ಬಾಗಿಲನ್ನು ನೂಕಿ ಬಂದ  ಅಪರಿಚಿತನೊಬ್ಬನ  ನಗ್ನ ಕಣ್ಣುಗಳು ಬೆಚ್ಚಗೆ ಉರಿಸಿದವು. ಆ ಕ್ಷಣದಲ್ಲೇ ವತ್ಸನಿಗೆ ಆ ವ್ಯಕ್ತಿಯನ್ನೇ ತಾನು ಇಷ್ಟೊತ್ತು ಕಾಯುತ್ತಿದ್ದದು ಎಂದು ಕರಾರುವಕ್ಕಾಗಿ ಅನ್ನಿಸಿತು. ಇವನ ಊಹೆಯನ್ನು ಪ್ರತಿಪಾದಿಸುವಂತೆ ಅವನು ಬಂದವನೇ ಈತನನ್ನು ಚೆನ್ನಾಗಿಯೇ ಬಲ್ಲವನಂತೆ, ಇವನಿದ್ದ ಕುರ್ಚಿಯತ್ತ ವೇಗವಾಗಿ ಹೆಜ್ಜೆ ಹಾಕಿದ. ಪರಮಾತ್ಮ ಒಳಗಿಲ್ಲದಿದ್ದರೆ ಇಷ್ಟೊತ್ತಿಗೆ ಭಯದಲ್ಲಿ  ವತ್ಸ ಆ ಜಾಗದಿಂದ ಪೇರಿ ಕೀಳುತ್ತಿದ್ದದ್ದು ಖಂಡಿತಾ.

                ‘ಶ್ರೀವತ್ಸ  ಅಲ್ಲ…?’ ಎನ್ನುತ್ತಾ ಬೆರಗಿನಲ್ಲಿ ಇವನ ಕಣ್ಣು ತುಟಿಗಳನ್ನೇ ಕೆಕ್ಕರಿಸುತ್ತಾ ಬಂದವನು ಬಿದಿರಿನ ಖುಷನ್ ಕುರ್ಚಿಯನ್ನು ಎಳೆದು ಕೂತ. ಇನ್ನೊಬ್ಬನ ತೊಡೆ ಮೇಲೆ ಪಾದಗಳನ್ನು ಅಲ್ಲಾಡಿಸುತ್ತಿದ್ದ ಆ ಹಾಲು ಬಣ್ಣದ ಹುಡುಗಿಗೆ ಈತ ಅಡ್ಡವಾಗಿದ್ದ.

          ‘Ya…Ya… that’s right,  ನೀವು Avinash ತಾನೇ… ನೋಡಿ  I have no idea …. How this happened ಹೋದ ತಿಂಗಳು ಆಫೀಸಿನಲ್ಲಿ ಯಾರೋ ಈ ರಿಜಿಶ್ಟರ್ ಪೋಸ್ಟ್ ನನ್ದು ಅಂತ ಅಸ್ಯೂಮ್ ಮಾಡ್ಬಿಟ್ಟು  ತೆಗೆದ್ಬಿಟ್ಟಿದ್ದಾರೆ. ಅಡ್ರೆಸ್ ನೋಡ್ತಿದ್ದ ಹಾಗೇ ಗೊತ್ತಾಯಿತು this is a case of displacement…!’ ಎನ್ನುತ್ತಾ ವತ್ಸ ತನ್ನ ಗ್ಲಾಸನ್ನು ಖಾಲಿ ಮಾಡಿ, ತುಂಬಾ ಎಕ್ಸೈಟ್ ಆಗಿ  ರಿಫೀಲ್ ಎಂದ.

                ಇವನ ಜಾಯಮಾನವನ್ನೆಲ್ಲಾ ನೋಟದಲ್ಲೇ ಅಳೆಯುವಂತೆ ನೋಡುತ್ತಿದ್ದ ಅವಿನಾಶ್, ಕಣ್ಣುಗಳನ್ನು ಮೊನಚಾಗಿ ಕಿರಿದುಗೊಳಿಸಿ ಗ್ಯಾಂಬ್ಲರ್ನ ಹಾಗೆ,       ‘save it man…. ! I don’t care ನನ್ನ  ಪೋಸ್ಟ್ ನಿನ್ಗೆ ಬಂತು let us not start a postmortem analysis! do you still have it…’ಎನ್ನುವಾಗ   refill ಗಾಗಿ ಬಂದಿದ್ದ ವೈಟರ್‍ನನ್ನು ಹತ್ತಿರ ಕರೆದು,    Ultra strong beer… give me some… may be a can of bud…’

                ತನ್ನ ಕಡು ಕಂದುಬಣ್ಣದ ಕಾಟನ್ ಟ್ರೌಶರಿನಿಂದ ಹೆಚ್ಚು ಕಮ್ಮಿ ಮುದ್ದೆಯಾದಂತಿದ್ದ ತೆಳು ಬಿಳಿ-ನೀಲಿಯ ಲಕೋಟೆಯನ್ನು ಮತ್ತೊಮ್ಮೆ ಆಚೆಗೆ ಎಳೆದ ಶ್ರೀವತ್ಸ. ಒಂದು ಕ್ಷಣ ನಿಟ್ಟುಸಿರು ಬಿಡುತ್ತಾ ನಿಧಾನಕ್ಕೆ ಅದನ್ನು ಎತ್ತಿದ, ಅದಕ್ಕಿನ್ನೂ ಜೀವವಿದೆಯೋ ಇಲ್ಲವೋ ಎನ್ನುವಂತೆ.

          ‘Looks like a very tiny structure is caught inside… hope I did not cause any damage …’ ಎಂದ ವತ್ಸ. ನೈಂಟಿ ಆಗಿ ವನ್ ಟ್ವೆಂಟಿಯ ಪರ್ವ ನಡೆಯುತ್ತಿದ್ದರ ಅರಿವು ಅವನಿಗೂ ಇತ್ತು.   ಇಷ್ಟೊಂದು  livelyಯಾಗಿ ಈ ಜೀವಿಯ ಜತೆ ತಾನು ಮಾತು ಬೆಳೆಸುತ್ತಿರುವುದು ವತ್ಸನಿಗೆ  ಒಂದು ವಿಶೇಷ ಹುರುಪನ್ನು ತಂದಿತ್ತು. ಚಪ್ಪಲಿಯನ್ನು ಬಿಚ್ಚಿ, ಸಾಕ್ಸ್ ಸುತ್ತಿಕೊಂಡ ಕಾಲನ್ನು ಸೋಫಾದ ಮೇಲೆ ಸುಖವಾಗಿ ಚಾಚಿದ, ಹಾಗೆ ಒಂದೆರಡು ಸೌತೆಕಾಯಿಯನ್ನು ಜಗಿದ.

          ‘Aye…! it is a card alright… an id card …’ ಎಂದು ಆಕಳಿಸಿ, ಮುಖ ಉಜ್ಜಿದ ಇನ್ನೊಬ್ಬ. ‘ಯಾವ್ದೋ ಎಡಿಟಿಂಗ್ ವರ್ಕ್‍ಗೆ ಅಂತ ಮಂಗ್ಳೂರ್ಗೆ ಬಂದಿದ್ದರಿಂದ ನನ್ನ ಹೊಸ ಕಾರ್ಡ್ನ ಪಿಕ್ ಮಾಡಕ್ಕೆ ನೆಪ ಸಿಗ್ತು… ಮಂಗ್ಳೂರ್ ಇಷ್ಟೆಲ್ಲ ಬೆಳ್ದಿದೆ ಅಂತ ಈ ಪುಣ್ಯ ಕ್ಷೇತ್ರಕ್ಕೆ ಬಂದ್ಮೇಲೆ ತಿಳೀತು, ಹ್ಞಾ! ಎನಿವೇ ಇವತ್ತು ರಾತ್ರಿ ತನಕ ಟೈಮಿದೆ ನನ್ನ ಟ್ರೈನ್ಗೆ … ಇಲ್ಲೇ, ಅಲ್ಲಿ ತನ್ಕ ತುಂಬಾ  ಎಕ್ಸ್‌ಪ್ಲೋರ್ ಮಾಡ್ಬಹುದು’ ಎಂದು ಮೆನು ನೋಡುತ್ತಾ ಕುಹು-ಕುಹು ಅಂತ ನಕ್ಕ, ಅವನ ನಗು ಹುಡುಗಿಯ ಕಿಸಿಕಿಸಿಯಂತಿತ್ತು.

‘ಮಳೆ ಬಂತಲ್ಲ… ಅದಕ್ಕೆ ಇಲ್ಗೇ ಬನ್ನಿ ಅಂತ ಕರ್ದೆ’

‘ಶ್ಯೂರ್ ಥಿಂಗ್! ಶ್ಯೂರ್ ಥಿಂಗ್!  ಸೋ… ಸೋ… ನೀವ್ ಟೀಚರಲ್ಲ…’

‘ನೀನು ಅಂತಾನೇ ಕರಿಯಪ್ಪ… ಪರ್ವಾಗಿಲ್ಲ! ಬಟ್  ಹೇಗ್ ಗೊತ್ತಾಯ್ತು ನಿನ್ಗೆ ಇದು…’

‘ವತ್ಸ ಸರ್… or so says the true caller’ ಎಂದು ಎರಡು ಡುಮ್ಮ-ಡುಮ್ಮ ಗುಟುಕುಗಳನ್ನು ನುಂಗಿ ಢೇರನೆ ತೇಗಿ, ಇದ್ದಕ್ಕಿದ್ದಂತೆ ‘ಈ ಸಾರ್ಹಾ… ನಿನ್ನ ಸ್ಟೂಡೆಂಟ…’ ಎಂದ ತೀರ ಸಹಜವಾಗಿ.

                ಅತಿ ಸೂಕ್ಷ್ಮವಾಗಿ ಪ್ರಕಟವಾದ ಈ ಶಬ್ಧವು ಶ್ರೀವತ್ಸನನ್ನು ತಟ್ಟಿತು. ಎಲ್ಲಿಯೋ ಕಾದು ಕೂತಿದ್ದಂತೆ ಹಠಾತ್ತನೆ ಸಾರ್ಹಾಳ ಹುಚ್ಚು ಹಿಡಿಸುವ ಅರೇಬಿಯಾದ ಸುಗೌಂಧ ದ್ರವ್ಯದ ನಾತದ ನೆನಪು ಧುತ್ತನೆ ಎದ್ದು ವತ್ಸನ ಆತ್ಮವನ್ನೇ ಮಂಕಾಗಿಸಿತು. ಅವಳ ಹಿಮದ ಮುದ್ದೆಯಂತಹ ಚರ್ಮ…   ತೊಡೆ, ನಿತಂಬಗಳು  ಸಮಾಧಿಯಷ್ಟು ಕಪ್ಪಗಿದ್ದ ಕಾಲೇಜಿನ ಆಡಿಯೋ ರೂಂನೊಳಗೆ ಇವನ ಕೈವಶವಾದದ್ದು… ದೆವ್ವಗಳು ಓಡಾಡುವ ಹೊತ್ತಿನಲ್ಲಿ ಪೆಟ್ರೋ ಮ್ಯಾಕ್ಸ್ ದೀಪಗಳಲ್ಲಿ ಮರುಭೂಮಿಯಂತೆ ಹೊಳೆಯುತ್ತಿದ್ದ ಅಪರಿಚಿತ ರಸ್ತೆಗಳ ಮೇಲೆ ಬೈಕಿನಲ್ಲಿ ವೇಗವಾಗಿ ಹಾರುವಾಗ ಅವಳ ಪುಟಾಣಿ ಮಲ್ಲಿಗೆ ಬೆರಳುಗಳು ವತ್ಸನ ಹೊಟ್ಟೆ ಸವರಿದ್ದು; ಆ ಹಳೆಯ ರೂಮಿನ ಧೂಳು ಹಿಡಿದ ಮಂಚದಲ್ಲಿ ಮಗುವಿನಂತೆ ಬೆತ್ತಲಾಗಿ ಬಿದ್ದಿದ್ದ ಅವಳು, ಆ ನೀಲಿಗೋಡೆಯ ಮೇಲೆ ನಾಯಿಯ ನೆರಳನ್ನು ಕೆತ್ತಿದ್ದು… ಎರಡು ಕೆಂಪು ವಜ್ರಗಳಂತೆ, ಸೈತಾನನ ಅವಳಿ ಕಣ್ಣುಗಳಂತೆ ಜಗಮಗಿಸುತ್ತಿದ್ದ ಅವಳ ಕುಚಗಳು… ಪ್ರಜ್ಞೆ ತಪ್ಪಿದಂತಾದ ವತ್ಸ. ದೃಶ್ಯಾವಳಿಗಳ ಮೊಂಟಾಜೊಂದು ಲೀಲಾಜಾಲವಾಗಿ ಆತನೊಳಗೆ ಜೀವಂತವಾಯಿತು.

ತಲೆ ಗಿರ್ರೆಂದಿತು… ಹಣೆಯನ್ನು ಹೆಬ್ಬೆರೆಳುಗಳಲ್ಲಿ ಉಜ್ಜಿದ ಕಣ್ಣು ಮಿಟುಕಿಸಬೇಕೆನಿಸಿತು.  ಒಂದೇ ಏಟಿಗೆ ಆ  ಪೆಗ್ಗನ್ನು ಸ್ವಾಹ ಎನ್ನಿಸಿದ. ಮತ್ತೆ ಕಚ ಕಚ ಅಂತ ಮೆಣಿಸಿನ ಕೆಚಪ್ಪಲ್ಲಿ ಅಜ್ಜಿದ ಸೌತೆ ಕಚ್ಚಿ, ತೇಗಿದ.

‘ಸಾರ್ಹಾ… yes! ಮುಂಚೆ ಆಗಿದ್ಲು … ಅಂದ್ರೆ ಈಗ ಓದ್ ಮುಗ್ಸಿ ಪಾಸ್ ಔಟ್ ಆದ್ರಲ್ಲ ಆ ಬ್ಯಾಚ್ ಅವ್ಳು… ನಿನ್ಗೆ… ಹ್ಹ…’

‘ಭಾರೀ wild  ಆಗಿ ನನ್ಗೆ  text ಮಾಡಿದ್ದಾಳೆ!  “Don’t follow me,  You nasty dog… I’m warning you…” May be ನಿನ್ನ ನಂಬರ್ಗೆ ಬರ ಬೇಕಾಗಿದ್ದ ಮೆಸೇಜು ಇರ್ಬೇಕು ಇದು’

ಆಘಾತವಾಯಿತು ವತ್ಸನಿಗೆ. ಆ ಎದೆ ಚುಚ್ಚುವ ಮೆಸೇಜ್‍ನಿಂದಲೋ, ಅಥವಾ ಈ ರಹಸ್ಯವನ್ನು ಇನ್ನೊಬ್ಬನಿಂದ ಕೇಳುವ ಗತಿ ಎಂದೋ… ಗೊತ್ತಿಲ್ಲ.

‘ಓಹೋ… ಹ್ಮ್‍ಮ್… ಅದೇ ನಿನ್ಗೆ ಹೇಗೆ… ಅವಳ ಮೆಸೇಜ್…’

‘May be ಈ  parcel’ ವಿಷ್ಯದಲ್ಲಿ ಆದ್ಹಾಗೆ… ನಂಬರ್ಸ್ ಕ್ರಾಸ್ ಕನೆಕ್ಷನ್ ಆಯ್ತೇನೋ’

‘ನಿನ್ನ ನಂಬರ್ ಏನು…?’

‘7022908463’

‘ ಓ…! ಮೊದ್ಲು ನಾನ್ ಅದೇ ನಂಬರಲ್ಲಿದ್ದೆ, I don’t live with that sim anymore ನಿಂದು ಹೊಸ ಸಿಮ್ಮು ಅನ್ಸುತ್ತೆ…’

‘ಹ್ಞೂಂ, ಒಂಥರಾ ಹಂಗೇ, ಮೂರ್ ತಿಂಗ್ಳಾಯ್ತೂ…’

‘…’

                ಮೂರನೆಯ ಬಡ್‍ವೈಸರ್ ಕ್ಯಾನ್ ಉಡಾಯಿಸುತ್ತಿದ್ದ ಅವಿನಾಶ  ಕೆದರಿದ್ದ ಹುಬ್ಬಿನ ಕೆಳಗೆ ತಣ್ಣಗೆ ಹತ್ತಿಕೊಂಡಿದ್ದ ಕಣ್ಣುಗಳನ್ನು ವಕ್ರಗೊಳಿಸಿ, ‘ಏನಪ್ಪ, ಉರಿತಾ ಇದ್ದಾಳಲ್ಲ ಅವ್ಳು! ಈ ಥರ ಕೆಂಡ ಕಾರೋ ಮೆಸೇಜ್… ಅಂಥದೇನಾಯ್ತೂ…   may I ask…’

                ಒಂದು ಕ್ಷಣ ಮಂಕಾದ ವತ್ಸ ಹೇಗೆ ಶುರುಮಾಡುವುದು ಎಂದೇ ತೋಚಲಿಲ್ಲ. ಚುಟುಕಾಗಿ ಸಾರ್ಹಾನ ಮತ್ತು ತನ್ನ ಸೀಕ್ರೇಟ್ ಅಫೈರ್… ಪದೇ ಪದೇ ಅದೇ ಬಾಯ್‍ಫ್ರೆಂಡ್ನ ತಲೆ ಚಿಟ್ಟು ಹಿಡಿಸುವ ಅದೇ ಹಳೇ ಕಥೆಯನ್ನು ಬೇರೆ ಬೇರೆ ವರಸೆಯಲ್ಲಿ ಹೇಳುತ್ತಿದ್ದರಿಂದ ರೋಸಿ ಹೋಗಿ ಈತ ಅವಳನ್ನು ಉಗಿದದ್ದು… ಅವಳು ಮಾತು ಬಿಟ್ಟಿದ್ದು;  ಮತ್ತೆ ಎಂದೋ ಎಲ್ಲೋ ಮಲಗಿದ್ದು, ಆ ವಿಷಯ ಕಾಲೇಜಿನಲ್ಲಿ ಪಂಚಾಯಿತಿಯಾಗಿ ಮ್ಯಾನೇಜ್‍ಮೆಂಟಿಂದ   ಖಡಕ್ ವಾರ್ನಿಂಗ್ ಬಂದದ್ದು… ಇಷ್ಟಾದರೂ ಇವರಿಬ್ಬರೂ ಮತ್ತೆ ಮತ್ತೆ ಗುಟ್ಟಾಗಿ ಭೇಟಿಯಾಗುತ್ತಿದ್ದದ್ದು… ಆದರೆ ಇನ್ಯಾರೋ ಪುಣ್ಯಾತ್‍ಗಿತ್ತಿ ಹಳೆಯ ಶಿಷ್ಯೆಯರ ಜತೆ ಹಿಂದೆ ಈತನಿಗಿದ್ದ numerous affairs ನೆಲ್ಲಾ ಆಕೆಯ ಬಳಿ ನಿವೇದಿಸಿದ್ದು…  ಸಾರ್ಹ ಈತನೊಬ್ಬ ಅಸಹ್ಯ ಜಂತುವಂತೆ ಕಂಡು ದೂರ ಸರಿದದ್ದು…

                ‘ಅದಾದ್ಮೇಲೆ last week ಅವಳ್ಗೆ text ಮಾಡಿದ್ದೆ, ಅವ್ಳ ಮದ್ವೆ ಆಯ್ತು ಅಂತ ಗೊತ್ತಾಗಿ, ಆದ್ರೇ she did not reply… But now I know she did…’  ಎಂದು ಫಕ್ಕನೇ ಅವಿನಾಶನನ್ನು ನೋಡಿದ, ನಿನಗ್ಯಾಕೆ ನಾನೀ ಕಥೆ ಹೇಳುತ್ತಿದ್ದೇನೆ ಎನ್ನುವಂತೆ.

                ‘Now she gets a man… ಅವಳ ಪ್ರೊಫೈಲ್ dp ನೋಡ್ದೆ, but I will tell you what man she is a beautiful slut…   ನೋಡಿದ್ಯಾ…’ ಎಂದು ತುಂಟನಗೆ ನಕ್ಕ. ಆತ  ‘SLUT’ ಎಂದು ಕರೆದ ಪರಿಯೇ ವತ್ಸನನ್ನು ತುಂಬಾ ಟೆಂಪ್ಟ್ ಮಾಡಿತು. ಅವನ ತಟ್ಟೆ ಪೂರ್ತಿ ನಜ್ಜುಗುಜ್ಜಾದ ಸೌತೆ ಚೂರುಗಳು ಮತ್ತು ಕೆಚಪ್ನ ರಾಡಿ… ಮುರುಕಾಗಿದ್ದ ಒಂದು ತುಂಡನ್ನು ಜಗಿದ. ಲಾಂಜಿನ ಕೇಸರಿ ಪ್ರಭೆ ಆತನ ಚರ್ಮವನ್ನು ಸೀಳಿ ಒಳಗೆ ಇಳಿಯುತ್ತಿತ್ತು. ಅವಿನಾಶ ಮೊಬೈಲಿನಲ್ಲಿ ಆಕೆಯ ಚಿತ್ರವನ್ನು ಝೂಮ್ ಮಾಡಿ ಈತನ ಕಣ್ಮುಂದೆ ಹಿಡಿದ.

                ‘ವಾವ್ ಮ್ಯಾನ್! ಈ ಪಿಕ್ ನೋಡಿಲ್ಲ ನಾನು… ನಿಜ ಅಧ್ಬುತವಾಗಿ ಕಾಣ್ತಾ ಇದ್ದಾಳೆ, ಅದೇನ್ ಡೈಯಟ್ ಮಾಡ್ತಾ ಇದ್ದಾಳೋ… ಆವತ್ತಿಗಿಂತ  ಫ್ರೆಶ್  ಮತ್ತೆ ಯಂಗ್ ಆಗಿದ್ದಾಳೆ… guess her face is somewhat restored through surgery or something like that…’

                ‘ ಓಹೋ… ಭಾರೀ ಚಾಲಾಕಿ ಹೆಣ್ಣ ಹಾಗಾದ್ರೇ… ಆಕ್ಟ್ ಮಾಡ್ತಾಳ? I may try to make her act in one of my flick…’ ಎಂದ ಅವಿನಾಶ, ಏನನ್ನೋ ಬಹಳ ಬೇಗ ಕೇಳುವ ಅವಸರ ಅಂಟಿದ ಸಮಾಧಾನದಲ್ಲಿ.

‘what …. I don’t know, ನನ್ನ ಎರಡು ಕಾಲೇಜ್ ಡೇ ಡ್ರಾಮದಲ್ಲಿ she acted…. She acted quite well… do you want her in your…’

‘no… no just asking…out of curiosity… forget it… ‘

‘ya… that is how it should be…! Forget it…! So… you make films…?’

 ‘Not yet… I mean yes I do…. ಅಂದ್ರೆ ಈಗ ಬರೀ ಶಾರ್ಟ್ ಫಿಲ್ಮ್, ಹಾಗೇ ಕೆಲವು ಡಾಕ್ಯುಮೆಂಟರಿ ಮಾಡ್ತಿದ್ದೀನಿ; ಮೊನ್ನ್ ಮೊನ್ನೆ  ನಮ್ಮ ಅಧ್ಯಕ್ಷರ ಇಂಟ್ರಿಕೇಟೆಡ್ ಲೈಫ್   ಮೇಲೇನೇ ಒಂದ್ ಮಾಡಿದ್ದೆ. I enjoyed it, really; if everything goes fine, I may get a chance to meet him at his office, ನಾನೇನ್ politically ಅಷ್ಟೇನು ಆಕ್ಟೀವ್ ಇಲ್ಲ, ಆದ್ರೂ ಅಧ್ಯಕ್ಷರನ್ನ ಮೀಟ್ ಆಗೋದು ಥ್ರಿಲ್ ಅನ್ಸುತ್ತೆ ನನ್ಗೆ’

            ‘I don’t care much for politics either so ತಲೆ ಕೆಡಿಸ್ಕೋಬೇಡ ನನ್ಗೇನು ಸಮಸ್ಯೆಯಿಲ್ಲ ನೀನು ಅಧ್ಯಕ್ಷ್ರ ಪಕ್ಕ ನಿತ್ಕೊಂಡು ಫೋಟೋ ತೆಗಿಸಿಕೊಂಡ್ರೆ! ನನ್ನ ಮತ್ತು  ideology ಸಂಬಂಧ ಶಾಂತರಾಮ  ಮೇಷ್ಟ್ರನ್ನ ಒಂದ್ಸಲ ನಮ್ಮ literary club inauguration eventಗೆ ಕರೆದ ದಿನಕ್ಕೆ ಮುಗೀತು. Afterwards ಈ ಸಾರ್ಹ ಪಂಚಾಯಿತೇನೇ ಮಹಾಪ್ರಸಂಗ ಆಗಿ,  ಆ ಕಡೆ ಈ ಕಡೆ ತಲೆ ತಿರುಗಾಡ್ಸಕ್ಕೇ ಆಗ್ದೇ  ನನ್ನ ಕೆಲ್ಸ ಉಳಿಸಿಕೊಳ್ಳಕ್ಕೆ ಹರ ಸಾಹಸ ಪಡೋ ಸ್ಥಿತಿ ಬಂತು. ಇರ್ಲಿ ಅದೆಲ್ಲಾ, ಆದ್ರೇ  ಆವತ್ತು ಮಾತ್ರ ಆ ಶಾಂತರಾಮ ಶಾಸ್ತ್ರಿಗಳು ಏನ್ ಮಾತಾಡಿದ್ರಪ್ಪ.  ಅಬ್ಬ…!  ನಮ್ಮ ಪ್ರಿನ್ಸಿಪಾಲೇ ಹೆದ್ರಿ ಹೋದ್ರು, ಆ ideas ಕೇಳಿ…’

                ‘ಮೊನ್ನೆ ಒಬ್ರು ಶಾಂತರಾಮ್ ಅನ್ನೋ ಮನುಷ್ಯನ ಬೆಂಗಳ್ಳೂರಲ್ಲಿ ಶೂಟ್ ಮಾಡಿ ಕೊಂದ್ ಹಾಕಿದ್ರು, ಭಾರೀ ಗಲಾಟೆಯಪ್ಪ!  ಎಷ್ಟೋ ಜನ fundamentalist ಆತ ನಕ್ಸಲ್ ಸಿಂಪಥೈಸರ್ ಆಗಿದ್ದ  ಅವ್ನ ಹೊಡೆದಿದ್ದು ಸರಿ ಅಂತ ಜಾಥಾ ಎಲ್ಲಾ ಮಾಡಿದ್ರು ಜಾಗ್ಟೆ ಬಾರಿಸ್ಕೊಂಡು,   ಇದು ಅವ್ರೆನಾ…?’

            ‘what… no way! of course ಮೇಷ್ಟ್ರು ತುಂಬಾನೇ ಲೆಫ್ಟ್ ಲೀನೀಂಗ್,  ಕೆಲವ್ ಸಲ ತುಂಬಾ extreme  ಆಗ್ ಮಾತನಾಡ್ ಬಿಡೋರು;              but never a sympathizer  ಯಾವಾಗ ಆಗಿದ್ದು ಇದು?

                ನಿನ್ನೆನೂ newsಲ್ಲಿ ಏನು ಬಂದಿಲ್ಲ. ಇವತ್ತಿನ ಪೇಪರ್ ಓದೋಕ್ಕಾಗಿಲ್ಲ ನಂಗೆ’ ಎಂದು ಗಾಬರಿಯಲ್ಲಿ ಮೇಷ್ಟ್ರಿಗ್ ಕಾಲ್ ಮಾಡಲು ಫೋನ್ ಎತ್ತಿದ, ಆದರೆ ಅದು ನೇಣು ಹಾಕಿಕೊಂಡವನಂತೆ ಕಕಪಕ ಅನ್ನುತಿತ್ತು. ಆ ಗ್ಲಾಸನ್ನು ಖಾಲಿಮಾಡಿ refill ಎಂದ. ಅವನ ಎಡ ಕೆನ್ನೆಯು ಕುಡಿದ ಒತ್ತಡಕ್ಕೋ ಏನೋ, ಯಾರೋ ಹಿಡಿದು ಎಳೆದಂತೆ ಕುಣಿಯುತ್ತಿತ್ತು.

          ‘mostly ಹೋದ ವಾರ… ಎಲ್ಲೋ ನೋಡಿದ್ ಹಾಗಿತ್ತು may be on some news channel, anyway forget it man! may be its  not him So ನೀನು ನಾಟ್ಕ ಡೈರೆಕ್ಟ್ ಮಾಡ್ತೀಯ’

                ಮೇಷ್ಟ್ರ ಹುಂಬ ಆದರ್ಶದ  ವಲಯದಿಂದ ಜಾರಿಕೊಳ್ಳಲು ಕಾಯುತ್ತಿದ್ದ ವತ್ಸನಿಗೆ ಈ ಪ್ರಶ್ನೆ ತುಂಬಾ ಅಪ್ಯಾಯಮಾನವಾಗಿ, ‘ಹಾಗೇನಿಲ್ಲ, ಮುಂಚೆ ಈಜಿಪ್ಟ್ ಮಮ್ಮಿ ಬ್ಯಾಕ್‍ಗ್ರೌಂಡಲ್ಲಿ ಸ್ಟೇಜ್ ಕಟ್ಟಿ, ಅಲ್ಲೇ ಒಂದು ನಾಟ್ಕ ಆಡೋ ಆಸೆ ಇತ್ತು ತುಂಬಾ. ಆದ್ರೆ ಅದಕ್ಕೂ ಮೊದಲು ಈಜಿಪ್ಟ್ ಇಸ್ರೇಲ್, ಅಲೆಕ್ಸಾಂಡ್ರಿಯ ಎಲ್ಲಾ ಕಡೆ ಅಡ್ಡಾಡಿಕೊಂಡು ಬಂದು ಆ ವಿಶನ್ ಅರಿಗಿಸ್ಕಂಡು, ಎಲ್ಲದಕ್ಕೂ ಒಗ್ಗೋ ಹಾಗೇ ಏನಾದ್ರೂ ಕ್ರಿಯೇಟ್ ಮಾಡ್ಬೇಕು ಅಂತ ಯೋಚ್ನೇ ಮಾಡ್ದೇ… ಬಟ್ ನನ್ಗೆ ವೀಸಾ ಸಿಗ್ಲೇ ಇಲ್ಲ, ಬ್ಯಾಚುಲರ್ಸ್ಗೆ ಹಾಗೆಲ್ಲಾ ಇಸ್ರೇಲ್ಗೆ ಹೋಗೊಕ್ಕೆ ಪರ್ಮೀಟಿಲ್ವಂತೆ…!’

                ‘ಹಯ್ಯೋ! ನಾನ್ ಹೋಗಿದ್ದೆ ಇಸ್ರೇಲ್ ಕಡೆ…   ಆದ್ರೆ ಅದೇ  ನನ್ನ್ ಮದ್ವೆ ಫಿಕ್ಸ್ ಆಗಿತ್ತಾಗ, ಈ ಬೆಂಗ್ಳೂರ್ಗೆ ಹೋದ ಹೊಸತ್ರಲ್ಲಿ.  ಮತ್ತೆ ನನ್ಗೆ ತಹಸೀಲ್ದಾರ್ರೂ ರೆಕಮಂಡ್ ಲೆಟರ್ ಕೂಡ ಕೊಟ್ಟಿದ್ರು… ಆದ್ರೂ ವತ್ಸ, ಈಜಿಪ್ಟ್ ನೋಡಿದ್ರೆ ಹೊಟ್ಟೆ ಉರಿಯುತ್ತೆ ಮಾರಾಯ… ಕೈರೋ ರಾಜ ಬೀದೀಲಿ ಕುದ್ರೆ ಹೆಣ ಕಸದ ರಾಶಿ ಮಧ್ಯೆ…    ಟೆರಿಬಲ್’

                ‘ಹೌದ… ಸ್ಯಾಡ್… ಏನೇ ಆಗ್ಲೀ ಈಜಿಪ್ಟ್ ಅಂದ್ರೆನೇ ನನ್ಗೆ  ಸೆಳೆತ ಆ ಪಿರಮಿಡ್ ಕಾಡುತ್ತೆ ನನ್ನ… ಟ್ರೈ ಮಾಡ್ಬೇಕು ವೀಸಾಕ್ಕ್ ಹೇಗಾದ್ರೂ… ಆಮೇಲೆ ಈ ದಸ್ತಯೇವಸ್ಕಿ  Notes From the Underground ಅನುವಾದ ಮಾಡಕ್ಕ್ ಕೂತೂ ತುಂಬಾ ಸಮಯ ಹಾಳಾಯ್ತು ನಂದು, ಕೊನೆಗೂ ಅದ್ನ ನೆಟ್ಗೆ ಮಾಡ್ಲಿಲ್ಲ!  ಪಬ್ಲಿಷರ್ಸ್‍ಗೆ ಅದಕ್ಕೆ ಇನ್ನೊಂದು  dystopina ಕಾದಂಬರಿ ಬರ್ದು ಕೊಡ್ತಿನಿ, A Clockwork Orange ತರದ್ದು ಅಂದು, ಮೇಷ್ಟ್ರು ಹತ್ತಿರ ಹೋಗಿ ಸುಮಾರು ಪಾಯಿಂಟ್ ಹಾಕ್ಕೊಂಡು ಬಂದೆ;  ಅಷ್ಟರಲ್ಲಿ ಈ ಸಾರ್ಹ ನಾನ್  ಇಂಚಾರ್ಜ್ ಆಗಿದ್ದ ಥಿಯೇಟರ್ ಕ್ಲಬ್ಬಿನ ಮೆಂಬಾರಾದ್ಲೂ ನೋಡು!’

‘ನಿನ್ಗೆ  ಸಾರ್ಹ ಒಂದು obsession ಅಲ್ಲ?’

                ‘ಹ್ಞಾ ಹಾಗೇ ಆಗಿದೆ. ಅಂದ್ರೆ ಈ ಪಾರನೈಯಾ ಮತ್ತೆ ಪ್ರೀತಿ ಇವೆರಡೂ ಕತ್ತು ಕತ್ತರಿಸೋ ಈವಿಲ್ ಕಾಂಬಿನೇಶನ್, ಈ ಹಾಳ್ಮುಂಡೆ  ಇದ್ದಕ್ಕಿದ್ದ ಹಾಗೇ  ಒಂದ್ ರಾತ್ರಿ ನನ್ನ ಮದ್ವೆ ಆಗಕ್ಕೂ ರೆಡಿ ಅಂದಿದ್ಲು… ನಾನಿರೋ ಫ್ಲಾಟಿಗೇ ಬಂದ್ ಸೆಟ್ಲ್ ಆಗ್ತೀನೀ ಅಬುದಾಬಿಗೆ ಹೋಗಲ್ಲ ಅಂದ್ಲು,  ಥೂ! ಡಿಸೈಡ್ ಮಾಡಕ್ಕೆ ಆಗ್ಲಿಲ್ಲ ನನ್ಗೇ ಆಗ, ಆ ಹೊತ್ತಲ್ಲಿ ಮಾತ್ರ ಅವ್ಳು ನನ್ನ ಶರಣೇ ಅನ್ಸಿ, ಇನ್ನೇನು ಬೇಡ ಅಂತರಾತ್ಮ ತೃಪ್ತಿಯಾತಲ್ಲ ಅಂಥ ಸಮಾಧಾನ ಇತ್ತು… ಬಿಟ್ಬಿಟ್ಟೆ ಸಾರ್ಹನ, ಹೋಗು ನೀನ್ ಲಿಬಿರೇಟೆಡ್ ಅನ್ನೋ ಹಾಗೆ. ಮತ್ತೆ ನಾನು ಮರುಕಳ್ಸಿತ್ತೀನಿ ಅವ್ಳ ಕಡೆಗೆ ಬೇತಾಳನ ಹಾಗೇ ಅಂತ ಆಗ ಊಹೆ ಕೂಡ ಮಾಡಿರ್ಲಿಲ್ಲ  ಅವಿನಾಶ್…’

                ‘ ಹ್ಹ… ಹ್ಹ… ನೀನ್ ಅಂದಾಗ ನೆನಪಾಯ್ತು ನೋಡ್, ನನ್ಗೂ ಒಂಥರಾ ಪ್ಯಾರನಾಯ ಇತ್ತು. ಮದ್ವೆ ಆದ ತಕ್ಷಣ ಹಬ್ಬಿ ಬಿಡ್ತು ತಲೆ ತುಂಬಾ… ನನ್ಗೆ ಹುಚ್ಚು ಹಿಡಿದ್ ಬಿಟ್ರೆ ಅನ್ನೋ ಥರದ ತಳಮಳ. but social psychologist ನರೇಂದ್ರ ಪೈ ಅಂತ… ಒಳ್ಳೇ ಶ್ರಿಂಕ್… ಒಂದ್ ten sittings counseling, medication through ನನ್ನ  ಮತ್ತೆ   ನಾರ್ಮಲ್ ಲೆವೆಲ್ಗೇ ತಂದ್ರೂ ಅನ್ನಪ್ಪ…’

                ‘ನರೇಂದ್ರ ಪೈ… ಕೇಳಿದ್ದೀನಿ, ಅವ್ರ ಪೈ  ಫಾರ್ಮಸಿ, ರೀಸೆಂಟ್ ಆಗಿ ಈ ಊರಲ್ಲೂ ಓಪನ್ ಆಗಿದೆ… ಸೈಕೋ ಥೆರಪಿ ಸೆಂಟರ್ಸ್, ಕೌನ್ಸೆಲಿಂಗ್  ಆಂಟಿ ಡಿಪ್ರೆಸಿವ್ ಡ್ರಗ್ಸ್ ಅವೆಲ್ಲಾ ಅವೈಲ್ ಅಂತೆ… ಆ ಬಾಲಿವುಡ್ ಆಕ್ಟೆರ್ಸ್… ಅದೇ ನನ್ಗೂ ಡಿಪ್ರೆಶನ್ನ್ ಇತ್ತು ಅಂದ್ಳಲ್ಲಪ್ಪಾ ಯಾರದು… ಆಆಆ…’

‘ಐಶ್ವರ್ಯ ಕಂಬದಕೋಣೆ…’

‘ಹ್ಞಾ ಅದೇ ಆ ಕಂಬಕೋಣೆ ಇನ್‍ಆಗರೇಟ್ ಮಾಡಿದ್ದು’

                ‘ಏ ಆ ಕೋಣೆ ಏನ್ ಮಹಾ… ನಮ್ಮ ಅಧ್ಯಕ್ಷರೇ ಎನ್‍ಡೋರ್ಸ್ ಮಾಡಿದ್ರಲ್ಲ ಪೈ ಹೆಲ್ತ್ ಸೆಂಟರ್ಸನ… ಎಲ್ಲಾ ನ್ಯೂಸ್ ಪೇಪರ್‍ಗಳ ಫ್ರಂಟ್ ಪೇಜೆಸ್ ಪೂರ್ತಿ ಅದೇ ಆಡ್ಸ್… ಅಧ್ಯಕ್ಷರು ಮತ್ತೆ ಪೈ ಹೆಲ್ತ್ ಕೇರ್ ಬಾಂಡೇಜ್ ಅನ್ನೋ ಹಾಗೇ…  The institution’s popularity is rising

                ‘ಸೋ ಈ ನರೇಂದ್ರ ಪೈ ಸ್ವತಃ ನಿನ್ನ ಭೇಟಿ ಮಾಡ್ತಿದ್ರಾ…! ಗ್ರೇಟ್…’

‘yes Narendra Pai in all his glory… Now I get obsessed only with the scripts that I write’

‘that’s acute…  Are you working on one now?’

 ‘yes… A script that reflects on Satanic Cults…’

‘Satan and Karnataka ತುಂಬಾ ದೂರ! Two discordinated vices’

                ‘ಅದ್ ನಿನ್ನ ಒಪೀನಿಯನ್ ಅಪ್ಪಾ! ಈ ಡೋಮೀನೋಸ್, ಬಡ್‍ವೈಸರ್ ಅಷ್ಟೆಲ್ಲಾ ಯಾಕೆ ಹೋಗೋದು, ನಿನ್ನ ಇಡೀ ಹಾಲಿವುಡ್ ಐ ಮ್ಯಾಕ್ಸೇ ಇಲ್ಲಿ ತನಕ ಇಳಿದು ಬಂದಿರೋವಾಗ, ಈ ಸೈತಾನಿಗೇನು ಗಾದೆ ಹೇಳ್ದಂಗೆ, ಋಷಿಯ ತೊಡೆನೇ ಸಾಕು ಅವನ್ಗೆ ನುಸುಳ್ಕಂಡ್ ಬರಕ್ಕೆ’ ಎನ್ನುತ್ತಿದ್ದಾಗಲೇ ಸರ್ವರ್ ಮತ್ತೊಮ್ಮೆ ರೀಫಿಲ್ ಮಾಡಿ, ಇನ್ನೊಂದು ತಟ್ಟೆ ತುಂಬಾ ಸೌತೆ ತಂದಿಟ್ಟ. ಅವಿನಾಶ್ ಹಾಫ್ ಬಾಯಿಲ್ಡ್ ಬೇಕೆಂದು ಹೇಳಿ, ಅದನ್ನು ಎಷ್ಟು ಬೇಯಿಸ ಬೇಕು ಎಂದು ಬಹಳಷ್ಟು ಆಸಕ್ತಿಯಲ್ಲಿ ವಿವರಿಸುತ್ತಿದ್ದ.

‘ಏನೋ ತೀರ ಆಂಬಿಗ್ಯುಸ್ ಇದೊಂಥರ, ನಿನ್ನೆ ರಾತ್ರಿ ಸೇಟನ್ಸ್ ಚೈಲ್ಡ್ ಅನ್ನೋ ಯುಸರ್ ಒಬ್ಬ…’ ಎಂದು ಆ ಅಮಲಲ್ಲೇ ಮೆತ್ತಗಾಗಿದ್ದ ವತ್ಸ   ಇವತ್ತಿನ ಮೂರನೆಯ ಜಾವದ ಹೊತ್ತಿಗೆ ಕಾಮಭ್ರಾಂತಿಯಲ್ಲಿ ಯಾವುದೋ ಆನ್‍ಲೈನ್ ಲೇಟ್‍ನೈಟ್ ಚಾಟ್ ಸೈಟ್ ಹೊಕ್ಕು,   ಮುಖವಿಲ್ಲದ ವ್ಯಕ್ತಿಗಳ ಜತೆ ಪೋಲಿ ಹರಟೆ ಹೊಡೆಯುತ್ತಾ ಈ ಸಾರ್ಹಾಳ ನಂಜು ವಿದುಳುಗೇರಿ,  ಅವಳ  ಫೋಟೋನ್ನೆಲ್ಲ ಅಪ್‍ಲೋಡ್ ಮಾಡಿ,   ಇದು ನನ್ನ distant kid cousin ಎಂದು ಢೋಂಗಿ ಹೊಡೆದು, ಆ ಜನ ಅವಳನ್ನು ವಕ್ರ-ವಕ್ರವಾಗಿ ನಿಂದಿಸಿದ್ದನ್ನು, ಅವರವರ ಭಾವ-ಭಕ್ತಿಗೆ ತಕ್ಕಂತೆ  ಲೈಂಗಿಕ ಸ್ವೇಚ್ಛಾಸಕ್ತಿಯಲ್ಲಿ  ಆಕೆಯ ದೇಹರಚನೆಯ  ಬಗ್ಗೆ ಏನೇನೋ ಅಂದದ್ದನ್ನು,   ಅವಳ ಚೆಲುವನ್ನು  ತೀವ್ರವಾಗಿ ಪದಗಳಲ್ಲಿ ಚಿತ್ರಿಸಿದ್ದನ್ನು   ಮತ್ತು ವತ್ಸ ಅವರ ಪ್ರತಿಯೊಂದು ರೆಸ್ಪಾನ್ಸನ್ನೂ ಸವಿದ್ದದ್ದನ್ನೂ ಕೂಡ ಇಲ್ಲಿ ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟ.

                ಸ್ವಲ್ಪ ಜಾಸ್ತಿಯೇ ಬೆಳೆದಿದ್ದ ಉಗುರಿನಲ್ಲಿ  ತುಟಿ ಸವರಿಕೊಂಡು, ವತ್ಸನನ್ನು ವಿಕ್ಷಿಪ್ತವಾಗಿ ನೋಡುತ್ತಾ, ಎಲ್ಲ ಮಾತಿಗೆ ಕಿವಿ ಕೊಟ್ಟಿದ್ದ ಅವಿನಾಶ್, ಈಗ ನಾಲಗೆಯ ತುದಿಯಿಂದ ಬಾಯಿಯ ಮೂಲೆಯನ್ನು ನೆಕ್ಕಿ, ‘ನಿನ್ನ ಫೆಟಿಶ್ಸ್ ಸಕತ್ತಾಗಿದೆ ಮಾರಾಯ! ನನ್ಗೆ ನನ್ನ ಟ್ವಿಶ್ಟೆಡ್ ಖುಷಿಗಳೇ  ಭಾಳ ಫ್ರೀಕಿ ಅನ್ನಿಸೋದು, ನೀನ್ ನನ್ನ ಮೀರಿಸ್ದೆ ಬಿಡು!’ ಎಂದು ಬೀರ್ ಗ್ಲಾಸನ್ನು ಬರಿದಾಗಿಸಿದ.

‘Twisted Happiness yeh?’  ಎಂದ ವತ್ಸ, ಪೂರ್ತಿ ತಿನ್ನದೆ ಅರ್ಧಕ್ಕೇ ಆ ಸೌತೆ ಚೂರನ್ನು ಬಿಟ್ಟ. ಚಿಕ್ಕದಾಗಿ ತೇಗಿದಾಗ ಬಾಯಲ್ಲಿ ಬರೀ ಸೌತೆ ನೀರು ಮತ್ತು ಶಿವಾಸ್ನ ರಾಸಾಯನಿಕ ರುಚಿಯ ಅಲೆ; ಒಂಥರಾ ಅನ್ನಿಸಿತು.

            ‘Ah don’t ask, ಅಂಥಾರಲ್ಲ ಹಾಗೆ  ಅವು,  some time I’d be so happy if my wife  gets her periods right on  time ಅವ್‍ಳ್ಗೆ periods ಆಗಿದಿದ್ರೇ ಏನಪ್ಪಾ ಮಾಡೋದು ಅಂಥಾನೇ ನನ್ಗೆ  ಸಿಕ್ಕಾಪಟ್ಟೆ ಟೆನ್ಷನ್ ಆಗೋದು,  ನನ್ನ ಜೀವ ಹೋಗ್ತಿದೆ ಅನ್ನೋ ಹಾಗೇ. ಅದೇ ಥರ  ಮೊದ್ಲೆಲ್ಲ ನನ್ನ ಹೆಂಡ್ತಿ ಜತೆ you know ಮಲಗಕ್ಕೂ ಭಯ ಆಗೋದು, ಅವ್ಳ ತಬ್ಬಿ ಮುದ್ದಾಡಿ  sexual ಆಗಿ ಇಂಟಿಮೇಟ್ ಆಗಕ್ಕೂ ಭಯ… ಸ್ಪಷ್ಟವಾಗಿ ಯಾಕೆ ಅಂತ ಹೊಳೀತಾನೆ ಇರ್ಲಿಲ್ಲ; ರಾತ್ರಿ ಆಗ್ತಾ ಇದೇ, ಈ ಸೆಕ್ಸ್ ಅನ್ನೋ ರಿಚುವಲ್ ಶುರು ನಾನೇ ಮಾಡ್ಬೇಕಲ್ಲ ಅಂತ ಆಂಕ್ಝೈಟಿ. ಆವಾಗ ಹಾದೀ-ಬೀದೀಲಿ ಹೋಗೋ ಜನ ಮಕ್ಕಳ್ನ ಎತ್ತಿಕೊಂಡಿರೋದ್ನ ನೋಡಿನೂ ಹೆದ್ರಿಕೆ ಆಗೋದು. ಎಷ್ಟು ಆರಾಮಕ್ಕೆ ಮಕ್ಳಾಗಿದೆ ಇವ್ರ್ಗೆ! ಹುಟ್ಟಿಸೋದ್ ಎಂಥಾ ಭಯಂಕರ ಕರ್ಮ ಅನ್ಸೋದು, but now she is pregnant… somehow it happened like… like evolution… and I feel so divine man…’ ಎಂದು ಮೂಗು ತೀಡಿಕೊಂಡು ಎದ್ದು, ಬಂದೆ  ಈ ಸಂಭಾಷಣೆ ಮುಂದುವರಿಯುತ್ತದೆ ಎನ್ನುವಂತೆ ಕಣ್ ಸನ್ನೆ ಮಾಡಿ ವಾಶ್‍ರೂಂ ದಾರಿ ಹುಡುಕಿದ…

      ವತ್ಸನ ಹೊಟ್ಟೆಯೊಳಗೆ ಏನೋ ಚುಚ್ಚಿದ ಹಾಗೆ ನೋವು, ಇಡೀ ಶರೀರ ಬಿಗಿಯಾಗುತ್ತಿದ್ದ ಭಾವ. ಆ ಬಾರಿನ ದೀಪದ ಬುರುಡೆಗಳು ಈಗ ದಟ್ಟ ಹಳದಿ ಪ್ರಭೆಯಲ್ಲಿ ಧಗಧಗಿಸುತ್ತಿದ್ದವು, ಯಾವುದೋ ಅನ್ಯ ಗ್ರಹದಲ್ಲಿ ಗ್ರಹಣವಾದಾಗ ಮಬ್ಬಾಗಿ ಬೆಳಕಾದಂತೆ. ಈ ಬೆಳಕಿನ ಶಾಖ ಕಣ್ಣನ್ನು ಚುಚ್ಚಿ ಚುಚ್ಚಿ ಕುಕ್ಕಿದಂತಾಗಿ ವತ್ಸ ಒದ್ದಾಡಿದ; ಸ್ಮೋಮ್ಕಿಂಗ್ ಝೋನ್‍ನತ್ತ ಇಣುಕಿದ. ‘ಏಳ್ ತಿಂಗ್ಳ ಹಿಂದೆ ಇಷ್ಟೊತ್ತಿಗೆ, ನಾನು ಅವ್ಳು ಆ ಝೋನಲ್ಲಿ ನಿಂತು ಹೊಗೆಯಲ್ಲಿ ಮುಳುಗಿದ್ವಿ… ಅವ್ಳ ಲಿಪ್‍ಶ್ಟಿಕ್ ಅಂಟಿತ್ತು ಸಿಗಾರ್ ಬಟ್ಸ್‍ಗೇ… “ಐ ಆಮ್ ಸೋ ಹೈ ಮ್ಯಾನ್…” ಅಂತ ಅಂಟಿಕೊಳ್ತಾ ಇದ್ಲು… ಕೆಂಚ್ ಕೂದ್ಲೂ… ವಿಷಕನ್ಯೆ ಕಣ್ಣು… ದ್ವೈತ ಅದ್ವೈತ ಅಂತಾ ಕೊರೀತ, ನಾನ್ ತುಂಬಾ ನೋವಲ್ಲಿದ್ದೀನಿ ಅಂತ ಶೋ ಮಾಡ್ತಿದ್ದರೆ, ಎಷ್ಟು ಸೈಲೆಂಟಾಗಿ, ಕತ್ತಲೆ ಬೀದಿ ನೋಡ್ತಾ ನನ್ನ ತಬ್ಬಿದ್ಲು… ಅವ್ಳ ವಾಸನೇ ಈಗ್ಲೂ ಗಾಳೀಲಿ ಹಾರ್ತಿದೆ ಅನ್ಸುತ್ತೆ… ಆದರೆ ಈಗ ಆ ಜಾಗ… ಆ ಝೋನ್… ಆ ಸಿಗರೇಟ್ ಹೊಗೆ ಎಲ್ಲಾ ಅಲ್ಲೇ ಇದೆ… ಅವ್ಳ್ನ ಬಿಟ್ಟು… ಏನ್ ಜಾದೂ ಇದು… ನಾನೂ ಕೂಡ ಇದ್ದೀನಿ ಇಲ್ಲೇ… ಛೇ…!’ ಈ ನೆನಪಿನ ಮತ್ತು ಎಷ್ಟು ಜೋರಾಗಿತ್ತೆಂದರೆ, ಆ ಕಡೆ ಹೋದರೆ, ತಾನು ನಾಶ್ಟಾಲಿಜಿಯ ದುಃಖದಲ್ಲಿ ನಾಶವಾಗಿ ಹೋಗುತ್ತೇನೆ ಎಂದು ಹೆದರಿ ವತ್ಸ ಕೂತಲ್ಲೇ ಮುದುರಿದ. ಈ ಕೇಸರಿ ಬೆಳಕು ತನ್ನನ್ನು ಉರಿಸುತ್ತಿರುವ ಭ್ರಮೆಯಾಯಿತು. ಎಂತಹ ಘೋರ ದುರಂತ ಈ ಸ್ಥಳದಲ್ಲಿ ನಡೆದಿದೆ, ಇದರ ಪರಿವೆಯೇ ಇಲ್ಲದೆ ಮಿಕ್ಕವರೆಲ್ಲ ಮಜಾ ಉಡಾಯಿಸುತ್ತಿದ್ದಾರಲ್ಲ ಎಂದು ನೊಂದ. ‘ಥೂ ಮತ್ತೆ ಬೇಕಾ ನನ್ಗೇ ಇದೆಲ್ಲಾ! ಬರ್ಬಾದಿತ್ತು ಇಲ್ಲಿಗೇ… ಇನ್ನು ಅದೆಷ್ಟು ವರ್ಷ ಜೀವಂತವಾಗಿರ್ಬೇಕಲ್ಲ ಹೀಗೇ ಅಬ್ಬಾ…!’

                ಇದ್ದಕ್ಕಿದ್ದಂತೆ ಅವಿನಾಶನ ಫೋನು ಘೋ.. ಘೋ.. ಎಂದು ತಲ್ಲಣಿಸಿತು, ನೆಲದಡಿಯ ಮಂಡಲ ಹಾವಿನಂತೆ. ಯಾರದು ಕೆಟ್ಟ ಕುತೂಹಲದಿಂದ ಫೋನ್ ಎತ್ತಿದ. life calling… life calling ಈ ಲೈಫ್‍ನ ಚಿತ್ರವೂ ಫಳ-ಫಳನೆ ಮಿನುಗುತ್ತಿತ್ತು, ಆ ಮೊಬೈಲಿನ ಡಿಸ್‍ಪ್ಲೇಯಲ್ಲಿ. ಆದರೆ ಸೂಕ್ಷ್ಮವಾಗಿ ಆಕೆಯ ಮುಖ ನೋಡಲು ಝೂಮ್ ಮಾಡಲು ಹೋಗಿ, ವತ್ಸ ಕಾಲನ್ನು ತಪ್ಪಿ ರಿಸೀವ್ ಮಾಡಿಯೆ ಬಿಟ್ಟ. ಆ ಕಡೆಯಿಂದ ಮೊದಲು ‘ಕಿಯಾವ್’   ಎಂದ ಹಾಗೆ ಛೀರಾಟ,  ಯಾವುದೇ ಪ್ರಾಣಿಯಂತೆ. ಬೆಚ್ಚಿ ವತ್ಸ, ‘ಹಲೋ! ಸಾರಿ! he is gone to washroom’ ಎಂದ ಗಲಿಬಿಲಿಯಲ್ಲಿ. ಆಗ ಆ ಬದಿಯ ಧ್ವನಿ ಇದ್ದಕ್ಕಿದಂತೆ ‘ಏನಾಗಿದೆ ನಿನಗೆ…  ಎಲ್ಲಿದ್ದೀಯಾ…?’ ಎಂದಿತು. ಹೆದರಿದ ವತ್ಸ, ಆದಷ್ಟು ಕರಾರುವಕ್ಕಾಗಿ ಮಾತನಾಡಲು ಹೆಣಗಿದ. ‘Your husband is not  here; he left… left his phone…’  ಮಿಕ್ಕಿದ್ದನ್ನು ಹೇಳುವ ಸಾಹಸ ಮಾಡಲಿಲ್ಲ. ‘ದೆವ್ವದ್ ಹಾಗೆ ಮಾಡ್ತಿದ್ದೀಯಲ್ಲ, ಪುನಃ ಏನಾದ್ರೂ ಕುಡಿದಿದ್ಯಾ?  ಓಯ್…’ ‘No Mam, this is Vatsa, Shri Vatsa and  your husband is not here…’  ಎಂದ, ಕೊನೆಯ ಸಾರಿ ಎಂಬಂತೆ. ಈಗ ಆ ಧ್ವನಿಯೂ ಬೆದರಿತು. ಗಾಬರಿಯಿಂದ ಅಮೂರ್ತ ಭೀತಿಯಲ್ಲಿ ಬಿಳಿಚಿಕೊಂಡಂತೆ.  ಅಷ್ಟೇ… ಮತ್ತೆ ಮಿಕ್ಕಿದ್ದೆಲ್ಲ ಮೌನ… ನಿರರ್ಗಳ  ಮೌನ.

       ಬಂದ ಕೂಡಲೇ ಅವಿನಾಶನಿಗೆ ಈ ವಿಷಯ ಗೊತ್ತಾಯಿತು. ಸುಮ್ಮನೆ  ನಕ್ಕು, ‘ಪ್ರಾಣಿ ಥರ ಕಿರಿಚಿರ್ಬೇಕಲ್ಲ ಅವ್ಳು?! ಹಾಗೇನೇ ನನ್ನ ಹೆಂಡ್ತಿ, ಅವಳ್ನ ನಾವು ಕೇಳ್ಸಿಕೊಳ್ಳೇಬೇಕು ಅನ್ನೋವಾಗ ಒಂಥರಾ ಕೂಗ್ತಾಳೆ… ಅದೇನು ಪ್ರಾಣಿನೋ, ಪಕ್ಷಿನೋ ಇಲ್ಲಾ ಆಕ್ಟೋಪಸ್ಸೋ ಗೊತ್ತಾಗಲ್ಲ… ಕೆಲವು ಸಲ್ ರಾತ್ರಿ ಎಚ್ಚರ್ದಾಗ  ಬಾತ್‍ರೂಂ ಲೈಟ್ ಆನ್ ಆಗಿರುತ್ತೆ, ನಿಧಾನಕ್ಕೆ ಬಾಗಿಲು ತಕ್ಕೊಂಡ್, ಮೆತ್ತಗೆ ಈಚೆ ಬರ್ತಾಳೆ. ಅವ್ಳ baby bump ಥೇಟ್  ಉಬ್ತಾ ಇರೋ ಮೊಟ್ಟೆ ಥರಾನೆ ಕಾಣ್ಸುತ್ತೆ… ಅವ್ಳ ಮುಖನೂ ಯಾವ್ದೋ ಜೀವಿ ಥರಾ… ತಣ್ಗೇ ಸ್ಟೇರ್ ಮಾಡ್ತಾ ಇರೋ ಭಕ್ಷಕನ ಥರ… ಅಂತಹಾ ಟೈಮಲ್ಲಿ ಎದೆ ಹೇಗ್ ಹೊಡ್ಕೋಳತ್ತೆ ಗೊತ್ತಾ ನನ್ದು… ಮತ್ತೆ ಅವಾಗವಾಗ ಅನ್ಸೋದು, ಈ ಹೆಣ್ಣಿನ ಹೊಟ್ಟೆ ಸೀಳ್ಕೋಂಡ್…’

ಅವೀ… ಸಾಕು… ಅದೆಲ್ಲ ನೀನ್ ನನ್ಗೇ ಹೇಳ್ಬೇಕು ಅಂತೇನಿಲ್ಲ…… ಈ ಸಂಭಾಷಣೆ … I am not comfortable with this kind of conversation… you don have to…’ಎನ್ನುತ್ತಾ ನಡುವನ್ನು ಒತ್ತಿ, ಹಾಗೇ  ನಿಧಾನಕ್ಕೇ ತೇಗಿದ ವತ್ಸ… ಆ ತೇಗು ಭಗ್ಗೆಂದು ಎದೆಯನ್ನು ಉರಿಸಿದಾಗ, ಒಂದೆರೆಡು ಸಾರಿ ಕೆಮ್ಮಿದ.

                ಈ ಥರದ ಮುನ್ಸೂಚನೆಯಿಲ್ಲದ ಅಡ್ಡಿಯಿಂದ ಕೊಂಚ ಕೆರಳಿದ ಅವಿನಾಶ್, ‘ಹಂಗದ್ರೆ ಏನ್ ಮಾರಯ?! ನಾಲ್ಕು ಕ್ಯಾನ್ ಬೀರ್ ಆದ್ಮೇಲೂ ಅದೇನ್ ನಿನ್ದು ಅಂಥಾ ಡಿಪ್ಲೊಮೆಸಿ…’ ಎಂದು ರೇಗಿ ಕೆಕ್ಕರಿಸಿದ, ‘ಇನ್ನೂ ಟೈಮಿದೆ ಮುಚ್ಕಂಡ್ ಕೇಳು… ನಿನ್ನ್ದೇನು ಉದರೋಗಲ್ಲ…’ ಎನ್ನುವಂತೆ.

                ಈ ದಬ್ಬಾಳಿಕೆ ಧೋರಣೆಯಿಂದ ವತ್ಸ ಇನ್ನೂ ಹಗುರಾದ, ಯಾವ ಕಟ್ಟುಪಾಡುಗಳಿಲ್ಲದ ಕೇಳುಗನಾಗಿ, ‘ಸೋ ನಿನ್ನ ಹೆಂಡ್ತಿ ಪ್ರೆಂಗ್ನೆಟ್ ಆದ್ಮೇಲೇ… ನೀನು, ಅಂದ್ರೇ ಈ ಥರ…’

                ‘ ಗುರೂ… ಇಲ್ಲಿ ಆದ್ಮೇಲೇ… ಮುಂಚೆ… ಇವಲ್ಲ ವಿಷ್ಯ… ಏನೋ ಆಗ್ತಾ ಇದೆ… ಅದಕ್ಕೇ ನನ್ಗೇ ಹೀಗೆಲ್ಲ ಅನಿಸ್ತಾ ಇದೆ… ಅದೇ ಹೇಳ್ತಿದ್ದಿನಲ್ಲ, ಈ ಹೆಣ್ಣಿನ ಹೊಟ್ಟೆ ಸೀಳ್ಕೋಂಡ್ ಅವೆಷ್ಟೊ ಆಕ್ಟೋಪಸ್ ಮರಿಗಳು ಟುಯ್ಯ್ಞ… ಟುಯ್ಯ್ಞ…  ಅಂತ ನನ್ನ ಫ್ಲೋರ್ ಮೇಲೆಲ್ಲಾ ಕೆಂಪು ಲೋಳೆ-ಲೋಳೆ ಸುರಿಸ್ಕಂಡು ಹರಿದಾಡ್ತಾ ಇರುವಾಗ್ಲೂ ಅವ್ಳು ಹಂಗೇ ಕಿರಿಚ್ಬೋದೇನೋ ಅಂತ…’ ಎಂದು ಆ ಅಪೂರ್ಣ ಆಲೋಚನೆಯನ್ನು ಅಲ್ಲೇ ಹಾಗೇ ಕೈ ಬಿಟ್ಟು ಸುಮ್ಮನಾದ. ದಿಗ್ಭ್ರಮೆ ಮೆತ್ತಿದ ಉತ್ಸಾಹದಲ್ಲಿ ಈ ಮಾತುಗಳನ್ನು ಕಣ್ಣಲ್ಲೇ ಹೀರುತ್ತಿದ್ದ ವತ್ಸ. ಒಂದೇ ಉಸಿರಿನಲ್ಲಿ ಅವಿನಾಶನನ್ನೇ ನೋಡುತ್ತಿದ್ದ. ಸಮಯ ಆಗ ಒಂಭತ್ತು ಮೂವತ್ತು…

                ಒಂದು ಐದು ನಿಮಿಷ ಇಬ್ಬರೂ ಮಾತನಾಡಲಿಲ್ಲ. ಮೇಲಿಂದ ಇಣುಕಿದರೆ ಕೆಂಪು, ಹಳದಿ, ಬಿಳಿ ಪ್ರಭೆ ಕಾರುತ್ತಾ ಸದ್ದೇ ಮಾಡದೆ ತೆವಳುತ್ತಿದ್ದ ವಾಹನಗಳು… ಕೊನೆಗೆ  ಅವಿನಾಶನೇ ಬಿಲ್ಲ್ ಕೇಳಿ, ಕಾರ್ಡ್ ಸ್ವೈಪ್ ಮಾಡಿ, ಆದ ವೆಚ್ಚ ತೀರಿಸಿದ, ಸಿಟ್ಟಿನಲ್ಲಿ ನನ್ನ ಕಡೆಯಿಂದ ಇವತ್ತಿನ ಪಾನಗೋಷ್ಠಿ ಎಂದು ವತ್ಸ ಎಷ್ಟೇ ಪ್ರತಿರೋಧಿಸುತ್ತಿದ್ದರೂ…

   ವಾಶ್‍ರೂಂನ ಕನ್ನಡಿಯೆದುರು ನಿಂತು ಪದೇ ಪದೇ ಮುಖದ ಮೇಲೆ ನೀರೆಚಿಕೊಳ್ಳುತ್ತಿದ್ದ ವತ್ಸ. ಅವನ ಎಡಕ್ಕೆ ಗ್ರೀಕ್ ಕಾಲದ ಗುಂಗುರು ಕೂದಲಿನ ಯುವಕನೊಬ್ಬನ ಶ್ವೇತ ಶಿಲೆಯೊಂದು   ತನ್ನ ಎಡಗಾಲನ್ನೇ ದಿಟ್ಟಿಸುತ್ತಾ ಮೌನವಾಗಿತ್ತು.  ಆ ಮೂರ್ತಿಯ ಮುಖ ದಿಗಂತದಂತೆ ಟೊಳ್ಳು ಭಾವನೆಯ ಕೂಟವಾಗಿತ್ತು.

                ‘ಸುಮ್ನೇ ಕೇಳ್ತೀನಿ… ಅವ್ರು ಕೊಡೋ ಇಪತ್ತು ಸಾವ್ರಕ್ಕೆ ಇಂಥಾ ಜಾಗನ ಅಫೋರ್ಡ್ ಮಾಡಕ್ಕೆ ಆಗುತ್ತಾ ನಿನ್ಗೇ…’ ಎನ್ನುವ ಧ್ವನಿ ವತ್ಸನನ್ನು ತಲ್ಲಣಗೊಳಿಸಿತು. ಕತ್ತೆತ್ತಿದಾಗ ಕನ್ನಡಿಯಲ್ಲಿ ಅವಿನಾಶ ಕಂಡ.

                ‘ನಿನ್ಗೇ ನನ್ನ ಸ್ಯಾಲರಿ ಎಷ್ಟು ಅಂತೆಲ್ಲ ಹೇಗ್ ಗೊತ್ತು…?! ಬಿಸೈಡ್ಸ್ ಐ ಕ್ಯಾನ್… ಸೋರ್ಸ್ಸ್ ಇದೆ ನನ್ನ ಹತ್ರ ಖರ್ಚ್ ಮಾಡಕ್ಕೇ…’ ಏಕೋ ವತ್ಸನಿಗೆ ರೇಗಿತು… ಮತ್ತೊಂದು ತೇಗಿನ ಗಾಳಿ ಸತತವಾಗಿ ಒಳ ಎದೆಯನ್ನು ಉರಿಸುತಿತ್ತು.

                ‘ಆಯ್ತು ಬಿಡಪ್ಪ… ಸುಮ್ನೆ ಕೇಳ್ದೇ… ಈವನ್ ನನ್ನ ಹತ್ರನೂ ಸೋರ್ಸ್ ಇದೆ… ಹಾಗೇ ತಿಳೀತು…’ ಎಂದು ಪೋಲಿ ನಗೆ ನಕ್ಕು, ‘ಆಯ್ತಾ…! ಬೇಗ…  ಬೇಗ…  we gotta leave man, the train is gonna leave soon’ ಅಂದ ಅವಸರದಲ್ಲಿ.

‘We…? what you mean we! ನೀನು ಹೋಗ್ತಿರೋದು’ ಎಂದು ವತ್ಸ  ಮಾತನ್ನು ಪೂರ್ಣಗೊಳಿಸುವ ಮುನ್ನವೇ ಆತ, ‘Oh man…! ರಕ್ತ ಬರ್ತಾ ಇದೆ ನಿನ್ನ ಎದೆಯಿಂದ! ಗಾಯ ಆಗಿರೋ ಹಾಗಿದೆ…’ ಎನ್ನುತ್ತಾ ಶ್ರೀವತ್ಸನ ಪ್ರತಿಕ್ರಿಯೆಗೇ ಕಾಯದೇ ಅವನ ಶರ್ಟಿನ ಎರಡು ಗುಂಡಿಗಳನ್ನು ಬಿಡಿಸಿ, ರಭಸವಾಗಿ ಅದನ್ನು ಇಬ್ಭಾಗಿಸಿದ. ಆ ಜೋರಿಗೆ ಬನಿಯನ್ ಕೂಡ ಅಂಕುಡೊಂಕಾಗಿ, ಹಾಕಿದ್ದ ಕಾಟನ್ ಟ್ರೌಶರ್ ಚೂರು ಜಾರಿತು, ಅವನ ಕಿಬ್ಬೊಟ್ಟೆಯ ಮೇಲ್ಭಾಗ ನಿಶ್ಯಬ್ಧವಾಗಿ ಇಣುಕಿತು.

‘Holy shit… ನಿನ್ಗೂ ಅಲ್ಲಿ ಗಾಯದ ಗುರ್ತಿದೆ ಮಾರಾಯ!’ ಎಂದು ತಬ್ಬಿಬ್ಬಾದ ಅವಿನಾಶ್. ಯಾಕೋ ಏರುತ್ತಿದ್ದ ಹೊಟ್ಟೆಯ ತಳಮಳದಿಂದ ವತ್ಸ ಕೆರಳಿ, ‘ಏನ್ ತಲೆಕೆಟ್ಟಿದ್ಯಾ ನಿನ್ಗೆ, ಏನ್ ಗಾಯ’ ಎನ್ನುವಷ್ಟರಲ್ಲೇ, ಅವಿನಾಶ್ ಟ್ರೌಶರ್ ಅರ್ಧ ಜಾರಿಸಿ, ಆತನ ತೊಡೆಯ ಮೇಲ್ತುದಿಯತ್ತ ಬೊಟ್ಟು ಮಾಡಿ, ‘ಆಪರೇಷನ್ ಆಗಿತ್ತು ನನ್ಗೆ… ಒಂದ್ ಆಲ್ಮೋಶ್ಟ್ ಫೇಟಲ್ ಆಕ್ಸಿಡೆಂಟ್ ಆದ್ಮೇಲೆ, ನೋಡಿಲ್ಲಿ…! ಈ ಕಿಬ್ಬೊಟ್ಟೆ ಹತ್ರ, ಬಿಚ್ಚು ಪ್ಯಾಂಟ್‍ನ ನೋಡೋಣ… ನಿನ್ಗೂ ಹಾಗೇನಾ ಅಂತಾ’

ಕೌತುಕದಲ್ಲಿ, ಗೊತ್ತಿದ್ದ ಸತ್ಯವನ್ನೇ ಇನ್ನೊಮ್ಮೆ ಪರೀಕ್ಷಿಸಲು ಟ್ರೌಷರ್ ಸಡಿಲಿಸಿದ ವತ್ಸ.

 ‘ಹ್ಹ… ಹಾ…  ಅಲ್ಲೇ, ಹಾಗೇ ಇದೇ ನೋಡು ನಿನ್ಗೂನು’

ತಬ್ಬಿಬ್ಬಾದ ವತ್ಸ… ಹೇಗೋ ಆ ಕ್ಷಣಕ್ಕೆ ಸಂಭಾಳಿಸಿಕೊಂಡು,

                ‘ ಓ… ಅದೇ… ಸರಿ… ಆದ್ರೆ ಹೇಗೇ… ನಿನ್ಗೆ  ಇಷ್ಟು ಡೀಪ್ ವೂಂಡ್ ಆಗಿದ್ದು’ ಎಂದ ವಿಲಕ್ಷಣ ಶಾಂತಿಯಲ್ಲಿ, ಪ್ಯಾಂಟ್ ಮೇಲೆಳೆದುಕೊಳ್ಳುತ್ತಾ.

            ‘well let me cut the long story shot, I was seeing a Slut and   ನನ್ಗೆ ಮದ್ವೆ ಫಿಕ್ಸ್ ಆದ್ಮೇಲೆ ಈ ಅಫೇರ್ ಸ್ಟಾರ್ಟ್ ಆಯ್ತು… ನಾವಿಬ್ರೂ ಅಡಿಕ್ಟ್ ಆದಷ್ಟು ಇಷ್ಟಪಡ್ತಿದ್ವಿ… ಕೊನೆಗೇ ನನಗೋಸ್ಕರ ನಿನ್ನ ಹೆಂಡ್ತೀನ ಬಿಟ್ಟ ಬಾ ಅನ್ನಕ್ಕ್ ಶುರು ಮಾಡಿದ್ಲು… ನನ್ನ ನಾನೇ ಅರ್ಪಿಸಿಕೊಂಡಿದ್ದೀನಿ ನಿನ್ಗೆ ಅಂಥಾ ಗುಂಡಿಗೆ ಇಲ್ಲಾಂದ್ರೆ ಹೇಳು ನಾನೇ ಮಾತಾಡ್ತೀನಿ ಅವಳ್ಹತ್ರ ಅಂದ್ಲು… ಅದ್ ಮಾತ್ರ ನಡೆಯಲ್ಲ ಅಂದೆ, ಅಷ್ಟಕ್ಕೇ ರಂಪ ಎಬ್ಬಿಸಿದ್ಲು, ನನ್ನ ಇನ್ನು ಯಾವತ್ತೂ ನೋಡಲ್ಲ ಅಂದ್ಲು, ನನ್ಗೆ ಹುಚ್ಚ್ ಹಿಡ್ದ ಹಾಗ್ ಆಯ್ತು, ಸಡನ್ ಆಗಿ ಕಿರ್ಚೋದು, ಗೆಟ್ ಔಟ್ ಅನ್ನೋದು, ಎಲ್ಲ ಖತಂ ಅನ್ನೋದು ಮಾಡಿದ್ಲು, ಉರೀತಿತ್ತು ನನ್ಗೇ… ಎಷ್ಟೋ ಕನ್ವಿನ್ಸ್ ಮಾಡ್ದೇ… ಕೇಳ್ಮಿಲ್ಲ… ಮುದ್ದಾಗಿರೋ ರಾಕ್ಷಸಿ ಅವ್ಳು… ನನ್ಗೇ ತೀರ ಬೇಕಾಗಿದ್ಲು, ನೆಗೆದ್ ಬಿದ್ದು ಸಾಯಿ   ಅಂತ ಅಲ್ಲಿಂದ ಹೋಗಕ್ಕೆ ನನ್ಗೇ ಮನಸ್ಸಿಲ್ಲ, ಆದ್ರೇ ನನ್ನ್ ಜತೆ ಅಫೇರ್ ಮುಂದ್‍ವರ್ಸಕ್ಕೆ ಆಕೆ ರೆಡಿಯಿಲ್ಲ, ಅರ್ಥ   ಮಾಡ್ಸೋದ್ ಹೇಗೆ ಅಂತಾನೇ ಗೊತ್ತಾಗ್ಲಿಲ್ಲ ಕೋಪ ಹೆಂಗ್ ಬಂತೂ ಅಂದ್ರೇ, ಒಂದೇ ಏಟ್ಗೇ ಅವ್ಳ ಮೂಗ್ನ ಕಚ್ದೇ, ಬಲ ಹಾಕಿ ಕಚ್ದೇ… as she was breathing blood  ಎಷ್ಟೋ ನಿರಾಳ ಅನ್ನಿಸ್ತು   her was face was bloody bleeding mess then  ಇನ್ನೂ ಆಕೆ ಕಿರಿಚಾಡ್ತಾ ಇದ್ಲು… ಆಗ ನಗು ಬರೋದು ನನ್ಗೇ ಅವ್ಳ ಮುಖ ನೋಡಿ… ಈ ಪ್ರಾಣಿನ ಹೋಗಿ ಹೋಗಿ ನೋಡ್ತಿದ್ದ್ನಲ್ಲ ಅಂತ…  ನಾನ್ ನನ್ ಪಾಡಿಗೆ ಬೈಕ್ ಎತ್ತಿ ಸ್ಪೀಡ್ ಆಗಿ ಹೋದೆ… ಆದ್ರೇ ಗ್ರಹಚಾರ ಮುಂದೆ ದೊಡ್ಡ ಕರ್ವ್ ಕಂಡೇ ಇಲ್ಲ ನನ್ಗೇ,  ಬಸ್‍ನವನು ಬೇರೆ ಸಡನ್ ಆಗಿ ಝಯ್ಯೋ ಅಂತ ಬಂದ್ಬಿಟ್ಟ, ಡಿಸ್ಕ್ ಬ್ರೇಕ್ ಹೊಡ್ದು, ಲೆಫ್ಟಗೆ ಕಿತ್ತಕೊಂಡ್   ರೋಡ್ಮೇಲೆ ರುಬ್ಬ್ ಹೋದೆ…’

‘ವತ್ತೆ ಅವ್ಳು…’

‘ ಅಯ್ಯೋ ಕೇಳ್ಲೇ ಬೇಡ… ಮುಖ-ಮೂತಿಯೆಲ್ಲಾ ಚಚ್ಚಿ ಹೋಗಿ , ಆಮೇಲೇ ನನ್ನ ಮೇಲೆ ಕೇಸ್ ಹಾಕ್ತೀನಿ ಅಂದು… ದೊಡ್ಡ ಕಥೇ! ಇನ್ನೊಂದ್ ಸಲ ಸಿಕ್ಕಿದ್ರೇ ಹೇಳ್ತೀನಿ… ಈವಾಗ ಬೇಡ’

                ಸಮುದ್ರವನ್ನು ಕುಡಿದಂತೆ ಮಂಗಳೂರಿನ ರಸ್ತೆಗಳು ಛಂಡಿಯಾಗಿದ್ದವು. ಟಾರಿನ ಕಪ್ಪು ರಸ್ತೆ ಮೇಲೆಲ್ಲಾ ನೀಲಿ ಕೆಂಪು, ನೇರಳೆ ಬಣ್ಣಗಳ ಪ್ರತಿಫಲನ. ನಗರವೇ ಬಾಗಿಲು ಮುಚ್ಚಿಕೊಳ್ಳುವ ಹೊತ್ತು.  ಇದ್ದಬದ್ದ ಜ್ಞಾನವನ್ನೆಲ್ಲಾ ರೈಡಿಂಗ್ ಮೇಲೇ ಕೇಂದ್ರೀಕರಿಸಿ ಬೈಕು ಓಡಿಸುತ್ತಿದ್ದ ಶ್ರೀವತ್ಸ. ಯಾವ್-ಯಾವುದೋ ಗಲ್ಲಿಗಳಲ್ಲೆಲ್ಲ ಬಂಡಿ ಓಡುತಿತ್ತು. ಗವ್ವನೇ ಕಟ್ಟಡಗಳೆಲ್ಲ ಶಾಪಗ್ರಸ್ಥ ಕಿನ್ನರರಂತೆ ಕೃತ್ರಿಮ ಬೆಳಕಿನಲ್ಲಿ ಕಣ್ಣು ಮಿಣುಕಿಸುತ್ತಿದ್ದವು.  ಅವಿನಾಶನಿಗೆ ಹತ್ತೂವರೆಗೆ ಟ್ರೈನ್. ಆತ ಹಿಂದೆ ಇದ್ದ, ಅವನ ಹೆಂಡತಿಯ ಜತೆ  ಫೋನಿನಲ್ಲಿ ಮಾತನಾಡುತ್ತಾ ತಾಳ್ಮೆಗೆಟ್ಟು ರೇಗಾಡುತ್ತಿದ್ದ.

                ‘ಶ್ರೀ ರಕ್ಷಾ ಅಲ್ಲ ಮಾರಾಯ್ತೀ… ವತ್ಸ ಶ್ರೀ ವತ್ಸ, ಅವ್ನ ಜತೇ ಇದ್ದೆ ಇಷ್ಟೊತ್ತು… ಸುಮ್ನೆ ಕೆರಳ್ಸ್ಬೇಡಾ ನನ್ನ… ನಿನ್ನ ವ್ಯಂಗ್ಯ ಎಲ್ಲ ಬೇಡ, ಕಾರ್ಡ್ ಕಲೆಕ್ಟ್ ಮಾಡ್ಕಂಡ್ ಹೊರ್ಟೇ ತಾನೇ ಈಗ, ಏನ್ ಚಕ್ಕಂದಾ ಆಡ್ತಾ ಕೂತಿಲ್ಲ ಇಲ್ಲಿ ನಾನು ಯಾವ್ದೋ ಹುಡ್ಗೀ ಜತೆ… ಇಲ್ಲಮ್ಮ ಜೆಲಸ್ ಹಸ್ಬೆಂಡ್ ಆಗಕ್ಕೆ ಅವನ್ಗೆ ಮದ್ವೇ ಆಗಿದ್ರೇ ತಾನೆ… ಇಲ್ಲ ಆಗಿಲ್ಲ… ಹ್ಞಾ…? ಅಯ್ಯೋ ಕಥೇ… ಎಷ್ಟ್ ಸಲ ಹೇಳ್ಲೀ… ಕಾರ್ಡ್ ತಗೋಳಕ್ಕೆ ಅವ್ನ ಭೇಟಿ ಆಗಿದ್ದೇ… ಈಗ್ಲೂ ಇಲ್ಲೇ ಇದ್ದಾನೇ ಮಾತಾಡ್ತೀಯಾ…ಕೊಡ್ಲಾ  ಫೋನ್ ?…!’

ಅಂತೂ ರೈಲ್ವೇ ಸ್ಟೇಶನ್ ಬಂತು. ಅಲ್ಲಿಯ ತನಕವೂ ನಡೆದ ಸಂಭಾಷಣೆಯನ್ನು ಕೇಳಿಸಿಕೊಂಡೇ ಇಲ್ಲವೆನ್ನುವಂತೆ ಸುಮ್ಮನೇ ಇದ್ದ ವತ್ಸ ಈಗ ಪ್ಲಾಟ್‌ಫಾರ್ಮ್ ಕಡೆಗೆ ಹೆಜ್ಜೆ ಹಾಕುತ್ತಾ, ‘ಇಷ್ಟಕ್ಕೂ what does that… card do…’ ಎಂದ.

                ‘ ಹ್ಞಾ… ಆ ಕಾರ್ಡು… ಓಖೇ… ಆ ಕಾರ್ಡ್ ಕೆಲ  chosen ಜನಕ್ಕೆ ಮಾತ್ರ ಸಿಗೋದಪ್ಪ!  ಒಂಥರ ಡಾರ್ಕ್ ವೆಬ್ಬ್ ಅನುಭವ ಅನ್ನು… ಸೇಟನ್ ಕಥೆ ನನ್ನ ತಲೇಗ್ ಬಂದಿದ್ದೇ ಆ ಗುಪ್ತ ಪಂಗಡಗಳಿಂದ! ವಿಚಿತ್ರವಾದ ಕಲ್ಟ್ಸ್ ಅವು  and  fortunately ನಾನು ಈಗ ಈ ಸೊಸೈಟಿಯ ಮೆಂಬರ್; ಇಷ್ಟು ದಿನ ನನ್ನ  ಕಾನ್‍ಶ್ಟಾಂಟ್ಲೀ    ವಾಚ್ ಮಾಡಿ ಕೊನೆಗೂ ಕನ್‍ವಿನ್ಸ್            ಆಗಿ ಈಗ ನನ್ನ ಅವ್ರ  ಡೇಟ ಇಂಜಿನ್ನಲ್ಲಿ ಸೇರ್ಸಿದ್ ಮೇಲೇನೆ ನನ್ಗೆ ಈ ಕಾರ್ಡ್ ದಕ್ಕಿರೋದು… ನಿನ್ನ ಹುಡುಕಕ್ಕೆ ಸೋರ್ಸ್ ಸಿಕ್ಕಿದ್ದು ನಾನು ಇಲ್ಲಿನ member  ಆಗಿದ್ದರಿಂದಾನೇ. ಈ ನಂಬರ್ ಮುಂಚೇ ನಿನ್ನ ಪಾಲಾಗಿತ್ತು   ಅಂತ ನನ್ಗೆ ಮೊದ್ಲೇ ಗೊತ್ತಿತ್ತು. ನಮ್ಮ ಡಾರ್ಕ್ ಮ್ಯಾನಶನ್ ಸೊಸೈಟಿ ಸಿಸ್ಟಮಲ್ಲಿ ಆ ನಂಬರ್ ರನ್ ಮಾಡ್ತಿದ್ದ ತಕ್ಷಣ ನಿನ್ನ ಆಧಾರ್, ನಿನ್ನ ಅಡ್ರೆಸ್ ಚಕ-ಚಕ ಅಂತ ಓಪನ್ ಆಯ್ತು…’

                ‘ಹಾಗಾದ್ರೇ…’ ಹೇಗೇ ಶುರು ಮಾಡಬೇಕೆಂದು ಗೊತ್ತಾಗಲಿಲ್ಲ ವತ್ಸನಿಗೆ. ಗ್ರಹಣ ಶಕ್ತಿಯೇ ನಾಗಲೋಟದಲ್ಲಿ ಪರಿಭ್ರಮಿಣಿಸಿದಂತಾಗಿ ತಲೆಯನ್ನು ಒತ್ತಿ ಹಿಡಿದ. ಸೌತೆ-ಸೌತೆ ತೇಗು, ಹಿಂಡು- ಹಿಂಡು ಬಂಜಾರ ಹೆಣ್ಣು ಮಕ್ಕಳು ತಮ್ಮ ಬೋಗಿ ಹುಡುಕುತ್ತಾ ಸಾಗುತ್ತಿರುವುದು, ಸ್ಟೇಶನ್ ತುಂಬಾ ಹರಡಿದ್ದ ಮಂಕು ಟ್ಯೂಬ್ ಲೈಟ್ ಶ್ವೇತ ಪ್ರಭೆ, ಅದನ್ನೇ ನೆಂಚ್ಕೊಂಡು ತಿನ್ನುವ ಹಾಗೆ ಅಶ್ಟಾವಕ್ರ ಹಲ್ಲುಗಳಿದ್ದ, ಬಿಳಿ ಪಂಚೆ ತೊಟ್ಟ ಕಪ್ಪು ಆಸಾಮಿಗಳಿಬ್ಬರು ಯದ್ವಾ ತದ್ವಾ ಅಗಿಯುತ್ತಿದ್ದ ಮೆಣಸಿನಪುಡಿ ಮಯವಾಗಿದ್ದ ಸೌತೆಕಾಯಿಗಳು, ದಪ್ಪ ಮೀಸೆ, ಉಬ್ಬು ಹಲ್ಲಿನಲ್ಲಿ, ಕರಿ ಕೋಟಿನ ಸ್ಟೇಷನ್ ಮಾಸ್ಟರ್ಗಳು…….                   ಅವರನ್ನು ದಿಕ್ಕಾಪಾಲಾಗಿ ಸುತ್ತುವರೆದಿದ್ದ ಅಗಣಿತ ಜನ ಸಮೂಹ… ಎಲ್ಲರ ಅವಹಾಲನ್ನು ಕೇಳುವ ಸಹುಕಾರನಂತೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಟ್ರೈನ್ ದೌಡಾಯಿಸಲಿದ್ದರೂ, ಎಲ್ಲದಕ್ಕೂ ಸಾಕಷ್ಟು ಸಮಯವಿರುವಂತೆ, ಆರಾಮದಲ್ಲಿ ಆ ಗಾಬರಿ, ಗಡಿಬಿಡಿ ಮತ್ತು ಗೊಂದಲದ ಮೂತಿಗಳನ್ನು  ಸಮಧಾನದಲ್ಲಿ ಮುಖಾಮುಖಿಯಾಗುತ್ತಿದ್ದ ಈ ಅಧಿಕಾರಿಗಳ ದಿವ್ಯ ನಿಗೂಢತೆ…  ವತ್ಸನ ಸ್ವಾಸ್ಥ್ಯವನ್ನು ಚಿಂದಿ ಮಾಡುತ್ತಿದ್ದವು. ಎಲ್ಲವನ್ನೂ ಮನಸ್ಸಾರೆ ಕಕ್ಕಿಬಿಡುವ  ಆಸೆ ಹತ್ತಿಕಲಾರದಷ್ಟು ಪ್ರಖರವಾಯಿತು.

                ಅವಿನಾಶನಿಕ್ಕಿಂತ ಮುಂಚೆಯೇ ಈತ ಟ್ರೈನ್ ಹತ್ತಿ, ಟಾಯ್ಲೆಟ್ ಬಾಗಿಲನ್ನು ಒದ್ದು ಹೃದಯವನ್ನೇ ಆಚೆ ಹಾಕುವಷ್ಟು ರಭಸದಲ್ಲಿ ಸಕಲವನ್ನೂ ಕಾರಿದ. ಆದರೂ ಹೊಟ್ಟೆಯ ಕಲಮಲ ನಿಲ್ಲಲಿಲ್ಲ. ಕೊಳೆ ಕಟ್ಟಿದ್ದ ಸಿಂಕಿಗೆ ಅಂಟಿಕೊಂಡಿದ್ದ ನಲ್ಲಿ ತಿರುಗಿಸಿ ನೀರು ಚಿಮುಕಿಸಿಕೊಂಡ. ಗೊಂದಲ ಶಮನವಾಗಲಿಲ್ಲ. ಇನ್ನೊಮ್ಮೆ ವಾಂತಿಯಾಗುತ್ತದೋ ನೋಡಿದ… ಗಂಟಲಿನ ದಟ್ಟ ಕತ್ತಲಿನಾಳಕ್ಕೆ ನಾಲ್ಕು ಬೆರಳು ತುರುಕಿಸಿ ಮತ್ತೆ ಉಗಿಯಲು ಯತ್ನಿಸಿದಾಗ  ಅವನೇ ಗುರುತಿಸಲಾಗದ, ವಿಲಕ್ಷಣವಾದ ಆರ್ತನಾದವು ಸ್ವರಪೆಟ್ಟಿಗೆಯಿಂದ ಉತ್ಪತ್ತಿಯಾಗುತಿತ್ತು.

                ವಾಪಾಸ್ಸಾದಾಗ   ಅವಿನಾಶ ಇವನನ್ನು ತನ್ನ ವಿಂಡೋ ಸೀಟಿನಲ್ಲಿ ಕೂರಿಸಿ, ‘ಏನ್ ಹಂಗ್ ಕಿರಿಚ್ತಾ ಕಕ್ತಿದ್ದಿಯಲ್ಲ… ಜನ ಎಲ್ಲ ನಿನ್ನ್ ಕಡೇನೇ ನೋಡ್ತಿದ್ರೂ…’ ಎಂದು ವ್ಯಂಗ್ಯವಾಡಿದ. ಮಾತನಾಡಲು ಉದಾಸೀನವಾಗಿ, ಅವಿನಾಶನ ಅಸ್ತಿತ್ವವನ್ನೇ ವತ್ಸ ಹತ್ತಿಕ್ಕಲು ಹೆಣಗಿದ. ‘ಪರ್ವಾಗಿಲ್ವಾ ಈಗ…? ರಿಲ್ಯಾಕ್ಸ್ ಆಗಪ್ಪಾ…! ನೀನ್ ಏನ್ ಸಾಯ್ತಾ ಇಲ್ಲ, ಬಿ ಬ್ರೇವ್…’ ಎಂದ ಅವಿನಾಶ್. ವತ್ಸ ನಿಧಾನಕ್ಕೆ ಏಳಲು ನೋಡಿದ. ಏಕೋ ಈಗಂತೂ ಈತನಿಗೆ ಈ ಇನ್ನೊಬ್ಬನೊಡನೆ ಮಾತಾನಾಡಲು ಪದಗಳನ್ನು ಹುಡುಕುವುದೂ ಕೂಡ ವಾಕರಿಕೆ ತರಿಸುತಿತ್ತು.

                ‘ಹ್ಞಾ…! ಅಂತೂ ಟೈಮ್ ಆಯ್ತೂ… ಸರಿ  ಟೇಕ್ ಕೇರ್ ನೀನ್ ಸಿಕ್ಕಿದ್ದ್ ಒಳ್ಳೇದಾಯ್ತು ನೋಡು ಇವತ್ತು, Mostly ನಾಳೆ ನನ್ನ ಹೆಂಡ್ತಿ would come to pick up …  ಹೇಳೀದ್ದೀನೀ ಅವಳ್ಗೇ…’ ಎಂದ. ವೇಗವಾಗಿ ಉಸಿರಾಡುತ್ತಿದ್ದ ವತ್ಸ, ಬಿಕ್ಕಳಿಸಿ, ಬೋಳಿಸಿದ್ದ ಮುಖದಿಂದ ಜಿನುಗುತ್ತಿದ್ದ ನೀರನ್ನು ಕೈಯಲ್ಲೇ ಒರೆಸಿದ. ಇನ್ನೂ ಏನೇನೋ ಒತ್ತರಿಸಿ ಬಂದ ಹಾಗೆ ಆಗುತಿತ್ತು. ಆ ಕುಕುಂಬರ್ ಘಾಟು ಅವನನ್ನು ವಾಕರಿಕೆಯ ಬಿರುಗಾಳಿಯಲ್ಲಿ ಎತ್ತಿ-ಎತ್ತಿ ಹಾಕುತಿತ್ತು.  ಹೇಗೇ ಈಗ ಎದ್ದು ಆಚೆ ಹೋಗುವುದು, ಈ ಅವಿನಾಶನಿಗೆ ಯಾವ ರೀತಿ ಫೇರ್ ದಿ ವೆಲ್ ಹೇಳುವುದು, ಈ ಮಾಯ ಯಾತನೆಯನ್ನು ಹೇಗೆ ಕೊನೆಗಾಣಿಸುವುದು ಎಂದು ಖಾಲಿ ಮನಸ್ಸಿನಲ್ಲಿ ಯೋಚಿಸುತ್ತಿರುವಾಗಲೇ, ರೈಲು ಕಾಡಾನೆಯಂತೆ ಘೀಳೀಟ್ಟಿತ್ತು.

      ಇದ್ದಕ್ಕಿದ್ದಂತೆ ಅವಿನಾಶ್ ಆ  ಲಕೋಟೆಯನ್ನು ವತ್ಸನ  ಪ್ಯಾಂಟಿನ ಕಿಸೆಗೆ ತುರುಕಿ, ಅಲ್ಲಿದ್ದ ಬೈಕ್ ಕೀಯನ್ನು ದಬಾಯಿಸಿ ಎತ್ತಿ, ‘ಟಿಕೇಟ್ ಫಾರ್ವಡ್ ಮಾಡಿದ್ದೀನಿ ನಿನ್ನ ಫೋನ್‌ಗೆ… ಐಡಿ ಏನಾದ್ರೂ ಕೇಳಿದ್ರೇ ಈ ಕವರಲ್ಲಿರೋ ಕಾರ್ಡ್ ತೋರ್ಸು  you’re the one who is living ಎಂದು ಕತ್ತೆಕಿರುಬನಂತೆ ಹಲ್ಲು ಕಿರಿದು, ಫ್ಲಾಟ್‍ಫಾರ್ಮ್‍ನತ್ತ ಜಿಗಿದ. ‘ಏಯ್… ಏಯ್…’ ಎಂದು ಗಾಬರಿಯಲ್ಲಿ ಅರಚುತ್ತಾ ಹಿಂಡಿ-ಹಿಂಡಿ ಕೃಶವಾಗಿದ್ದ   ದೇಹವನ್ನು ಎಳೆದು, ಗಡಿಬಿಡಿಯಲ್ಲಿ ಮುತ್ತುತ್ತಿದ್ದ ಜನಗಳನ್ನು ಸೀಳಿ, ಢಾಳವಾಗಿ ಹಸಿರು, ನೀಲಿ ವರ್ಣದಲ್ಲಿ ಉರಿಯುತ್ತಿದ್ದ   ಪೆಟ್ಟಿಗೆ ಅಂಗಡಿಗಳನ್ನು ದಾಟಿ ಮಾಯವಾಗಲು ಅಣಿಯಾಗಿದ್ದ ಅವನ ಚಲನವಲನವನ್ನು ಇಲ್ಲಿಂದಲೇ ಗಮನಿಸಿದ ವತ್ಸ. ರೈಲು ತಾಳ್ಮೆಯಲ್ಲಿ   ಸ್ಟೇಷನ್ ದಾಟಿ  ಮುಂದೆ-ಮುಂದೆ ಓಡುತಿತ್ತು. ಹಳದಿ-ಹಳದಿ ಹೊಗೆ ಮತ್ತು ಇರುಳಿನ ಹಾದಿ ಬೆಳೆಯುತ್ತಿತ್ತು.

                ಕುಸಿದು ಹೋಗಿ ಆ ವಿಂಡೋ ಸೀಟಿನಲ್ಲಿ ಕೂತ ವತ್ಸನ ಮನಸ್ಸೇ ಕಲಸುಮೇಲೋಗರದ ಸಾಗರವಾಗಿತ್ತು. ‘ಎಲ್ಲಿ ಹೋದ ಅವನು… ಏನಾದರೂ ಸಾರ್ಹಾಳನ್ನು ಹುಡುಕಿ ಹೋದನೇ…?’ ಇದ್ದಕ್ಕಿದ್ದಂತೆ ಅವನ ಮೈ ಇಡೀ ನಡುಗಿತು. ಮತ್ತೆ-ಮತ್ತೆ ಜಠರವು ಸುಳಿಯಾಗಿ ಪ್ರತಿಭಟಿಸುತಿತ್ತು. ಆ ಬೋಗಿಯಿಡೀ ರಾತ್ರಿಯ ಕಾಡಿಗೆ ಬಳಿದುಕೊಂಡಿದ್ದ ಅಪರಿಚಿತ ವ್ಯಕ್ತಿಗಳಿಂದ ಕಿಕ್ಕಿರಿದಿತ್ತು. ಅವರ ಮುಖಗಳೆಲ್ಲ ಮಾತಾನಾಡಿಕೊಂಡಂತೆ ನಿರ್ಲಕ್ಷ್ಯದಲ್ಲೇ ಅಲಂಕೃತಗೊಂಡಿದ್ದವು. ಇಲ್ಲಿಂದ ತನಗೆ ಮುಕ್ತಿಯಿಲ್ಲ ಎನ್ನುವುದು ಆತನಿಗೆ ಮನದಟ್ಟಾಯಿತು. ಈಗ ಎಲ್ಲಿ  ಅಂತ ನಾನು ಹೋಗೋದು… ಅವನ ಹೆಂಡತಿ ಮನೆಗೇ…? ಇಲ್ಲ ಅವನ ಮನೆಗೆ….? ಅವಳು ಗರ್ಭಿಣಿಯಂತೆ! ಮರುಕ್ಷಣವೇ ವಿಟ್ರಿಫೈಡ್ ಟೈಲ್ಸ್ ಮೇಲೆಲ್ಲ ಯದ್ವಾತದ್ವಾ ಹರಿದಾಡಿ ಚಂಡೆ ಎಬ್ಬಿಸುವ ಆಕ್ಟೋಪಸ್ ಮರಿಗಳು… ಅವನ್ನೆಲ್ಲಾ ಮಮತೆಯಲ್ಲಿ ಅಸಾಮಾನ್ಯ ತೇಜಸ್ಸಿನಲ್ಲಿ ನೋಡುವ ಆಕೆ,  ಎಷ್ಟು ಮುದ್ದಾಗಿದೆ ಅಲ್ವಾ ಎಂದು ವಿಪರೀತ ಪ್ರೀತಿಯಲ್ಲಿ ಈತನನ್ನು ಅಪ್ಪಿದಂತೆ… ಆಕೆಯ ಕೈ-ಕಾಲುಗಳೆಲ್ಲ ಮಂಗಳ ವಾದ್ಯಗಳ ಮೇಳದಷ್ಟೇ ದಟ್ಟವಾಗಿ ಹಬ್ಬಿ, ವತ್ಸನನ್ನು ಬಾಚಿ ಅದುಮಿದಂತೆ… ಎಷ್ಟೊಂದು ಪ್ರೀತಿ, ತನ್ನ ಬೇಗುದಿಯಿಂದಲೇ ಉದ್ಭವವಾಗಿರುವ ರುದ್ರಸೊಬಗದು…     ಆಹಾ! ಎಷ್ಟು ಭಯಂಕರ  ಆದರೂ ಸಹಜ. ಧೊಸಕ್ಕನೇ ಅಲ್ಲೇ ಕುಸಿದ. ಬಾಯಿ ಬಡಿದುಕೊಂಡು, ‘ಅಯ್ಯಯ್ಯೋ… ಕಾಪಾಡೀ… ಕಾಪಾಡೀ…’ ಎಂದು ಚೀರವ ಬಯಕೆ ಪುಟಿಯಿತು.

       ಕಿಸೆಯಲ್ಲಿದ್ದ ಲಕೋಟೆಯ ನೆನಪಾಯಿತು. ನಿಧಾನಕ್ಕೆ ಅದನ್ನು ಹೊರಗೆಳೆದು ಒಡೆದ. ಅಚ್ಚ ಕೇಸರಿ ಬಣ್ಣದಲ್ಲಿ ಮಿಂಚುತ್ತಿದ್ದ ಆ ಕಾರ್ಡಿನಲ್ಲಿ ಏನೇನೋ ಸಂಖ್ಯೆಗಳು, ಮತ್ತೊಂದು ಬಾರ್ ಕೋಡಿತ್ತು. ಆ ಕಾರ್ಡ್ ಸ್ಕ್ಯಾನ್ ಆಗುತ್ತಿದ್ದ ಹಾಗೇ, ರೇಮ್ಝ್ ಎಂದು ತಲ್ಲಣಿಸುತ್ತಾ ಉರಿಯುವ ಕೆಂಪು ಬಲ್ಬು, ತೆರೆದುಕೊಳ್ಳುವ ಕಬ್ಬಿಣದ ಬಾಗಿಲು, ಅಲ್ಲೊಂದು ಗರ್ಭಗುಡಿಯಷ್ಟು ಪುಟ್ಟದಾಗಿರುವ ಕೋಣೆ; ಅಲ್ಲಿದ್ದ ವಿಕ್ಟೋರಿಯನ್ ಕಾಲದ, ರಾಜ-ರಾಣಿಯರು, ಹಸಿರು ಕಾಡಿನಲ್ಲಿ ಅಡ್ಡಾಡುತ್ತಿರುವ ರಮ್ಯ ಸಂಜೆಯ ವರ್ಣಪಟದಡಿ ವಿರಮಿಸುತ್ತಿರುವಾಗ ಮುಖವಿಡೀ ಒತ್ತಿ ಕಟ್ಟಿ, ಮುಚ್ಚಿ ಹೋಗಿದ್ದರೂ ತುಟಿ, ಕಣ್ಣು ಮಾತ್ರ ಕಾಣುವಂತೆ ಸುತ್ತಿಕೊಂಡಿದ್ದ ಕಪ್ಪು ಮುಸಕಲ್ಲಿ ನಗ್ನಳಾಗಿ ಕೆಂಪು ಬೆಳಕಿನ ಕೋಣೆಯಲ್ಲಿ ಇವನ ಸುತ್ತಲೂ ಬಳುಕುತ್ತಾ ಕುಣಿಯುವ ಆ ನೀರೆಯ ಆಕೃತಿ ಮನಸ್ಸಿನಲ್ಲಿ ಸಂಭವಿಸಿತು. ಈತ ಆಗ ಸಾರಾಂಗದ ಮುಖವಾಡ ಹಾಕಿ ಹ್ಞೂಂಕರಿಸಿದಂತೆ, ಅವಳು ಈತನನ್ನು ಹಿಂಬಾಲಿಸಿದಂತೆ… ಇನ್ನೂ ಬಲಿತಿರದ ಬಾಲಕಿಯ ಧ್ವನಿಯನ್ನು ಮಿಮಿಕ್ರಿ ಮಾಡುವಂತೆ… ಕಿರುಚಿ ಇವನನ್ನು ಅಣಕಿಸಿದಂತೆ…

                ಅನೈಚ್ಛಿಕವಾಗಿ ‘ಮ್ಮ್ ಮ್ಮ್ ಹ್ಮ್…’ ಎಂದು ಮುಗುಳ್ನಕ್ಕ; ಕಾಲು ಚಾಚಿ, ಸೀಟಿಗೆ ಒರಗಿ ಕಣ್ಣು ಮುಚ್ಚಿದ; ರೈಲು ತನ್ನ ಸಹಜ ವೇಗವನ್ನು ವೃದ್ಧಿಸಿತು. ಪಕ್ಕದಲ್ಲೇ ಸಣ್ಣದಾಗಿ ಆ ಗರ್ಭಿಣಿ, ಜಂತುವಿನ ಸ್ವರದಲ್ಲಿ ಉಸಿರಾಡುತ್ತಿರುವುದು ಕೇಳಿಸಿದಂತಾಗಿ, ಶ್ರೀವತ್ಸನ ಹೃದಯ ಸಮಾಧಾನದಲ್ಲಿ ತೂಕಡಿಸಿತು.

2 comments to “ಗೌತಮ್ ಜ್ಯೋತ್ಸ್ನಾ ಕಥೆ : ಮಾರೀಚ”
  1. ಗೌತಮ್ ತನ್ನನ್ನು ಯಾವಾಗಲು ಕಾಡುವ ಪ್ರಶ್ನೆಗಳಿಗೆ ಉತ್ತರ ಕಂಡಕೊಳ್ಳಲು ಯತ್ನಿಸಿದ್ದಾರೆ

  2. A story intensly told story guess Gawtam is obsessed with duality and individuality of nature… A true Lacansque write up in Kannada … Kudos

ಪ್ರತಿಕ್ರಿಯಿಸಿ