ಗಮಕ : ಕರ್ಣಭೇದನ (ಕುಮಾರವ್ಯಾಸ ಭಾರತ : ಉದ್ಯೋಗ ಪರ್ವ – ೧೦ನೇ ಸಂಧಿ)

ಕರ್ಣಭೇದನವು ಹಲವು ಕಾರಣಗಳಿಗೆ ಪ್ರಸಿದ್ದವಾದ ಪ್ರಸಂಗ. ಯಕ್ಷಗಾನ ತಾಳಮದ್ದಳೆಯಾಗಿಯೂ ಹೆಸರು ಮಾಡಿರುವ ಪ್ರಸಂಗವಿದು . ಕುಮಾರವ್ಯಾಸನ ಉದ್ಯೋಗಪರ್ವದಲ್ಲಿ ಹತ್ತನೇ ಸಂಧಿಯಲ್ಲಿ ಇದು ಬರುತ್ತದೆ . ಕೃಷ್ಣನ ರಾಜಕೀಯದ ಪಟ್ಟುಗಳು, ಕರ್ಣನನ್ನು ಭಾವನೆಯ ಬಲೆಯಲ್ಲಿ ಬಂಧಿಸಿ ಅವನ ಸ್ವಾಮಿನಿಷ್ಠೆಯನ್ನು ಪರೀಕ್ಷಿಸುವುದು ಎಲ್ಲ ಅತ್ಯಂತ ನಾಟಕೀಯವಾಗಿದೆ. ಸಂಧಾನಕ್ಕೆಂದು ಹೋಗಿದ್ದ ಕೃಷ್ಣ ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರನಡೆದ ಮೇಲೆ ಘಟಿಸುವ ಘಟನೆಯಿದು. ಕರ್ಣನನ್ನು ಏಕಾಂತಕ್ಕೆ ಕರೆದುಕೊಂಡುಹೋಗಿ, ಅವನ ಹುಟ್ಟಿನ ವಿವರಗಳನ್ನು ಅವನಿಗೆ ತಿಳಿಸಿ, ಅವನನ್ನು ಒಲಿಸಿಕೊಳ್ಳುವ ಪ್ರಯತ್ನವೇ ಈ ಪ್ರಸಂಗದ ತಿರುಳು.

ಕುಮಾರವ್ಯಾಸನ ಕೃಷ್ಣನಂತೂ ನುರಿತ ಮನೋವಿಜ್ಞಾನಿಯಂತೆ, ಪಳಗಿದ ಸೇಲ್ಸ್ ಮ್ಯಾನ್ ಒಬ್ಬನಂತೆ ಆಕರ್ಷಕವಾದ ಮಾತು, ನಡೆಗಳ ಮೂಲಕ ಕರ್ಣನನ್ನು ಒಳಗೊಳಗೇ ಕುಸಿಯುವಂತೆ ಮಾಡುತ್ತಾನೆ. ಕುಮಾರವ್ಯಾಸನ ಕೃಷ್ಣನು ಇನತನೂಜನಕೂಡೆ ಮೈದುನತನದ ಸರಸವನೆಸಗಿ ವಿಷಯ ಶುರುಮಾಡುತ್ತಾನೆ. (ಶತ್ರುಪಾಳಯದವನಾದ ಕರ್ಣ ಕುಂತಿಯ ಮಗನಾಗಿದ್ದದ್ದು ಇಷ್ಟು ದಿನ ನೆನಪಿಗೆ ಬರದೇ ಈಗ ಬರುತ್ತದೆ, ಕುಂತಿ ಕೃಷ್ಣನ ಅತ್ತೆ, ಅಂದಮೇಲೆ ಕರ್ಣ ಭಾವಮೈದುನನಾಗಬೇಕಲ್ಲ) ಯಾದವ ಕುಲತಿಲಕನಾದ ಕೃಷ್ಣ ಸೂತಪುತ್ರನಾದ ಕರ್ಣನನ್ನು ಬರಸೆಳೆದು, ತೊಡೆ ಸೋಂಕಿನಲಿ ಕುಳ್ಳಿರಿಸಿ ತಬ್ಬಿಬ್ಬಾಗಿಸುತ್ತಾನೆ. ಅವನ ಕರದೊಳು ಕರತಳವನಿಕ್ಕಿ, ನಿನ್ನಯ ಕುಲವನರಿ, ವೃಥಾ ಸೇವಕತನದಲಿ ಇಹುದು ಉಚಿತವಲ್ಲ ಅಂತ ಅವನ ಹಿತೈಷಿಯಂತೆ ಮಾತಾಡುತ್ತಾನೆ.

ಕರ್ಣ ಮನಸ್ಸು ಮಾಡಿದರೆ, ಕುರುಕ್ಷೇತ್ರ ಯುದ್ಧವೇ ನಡೆಯುವುದಿಲ್ಲ. ಆಗ ಹಿರಿಯನಾದ ಕರ್ಣನಿಗೆ ಪಟ್ಟಕಟ್ಟಿ ಕೌರವ ಪಾಂಡವ ಮತ್ತಿತರರು ಒಟ್ಟಿಗೇ ಕೂತರೆ ಆ ಚಿತ್ರ ಹೇಗಿರುತ್ತದೆ? “ಎಡದ ಮೈಯಲಿ ಕೌರವೇಂದ್ರರ ಗಡಣ. ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳು !” ಅಂತ ಆಮಿಷ ಒಡ್ಡುತ್ತಾನೆ. “ಒಪ್ಪುವ ಕಡುವಿಲಾಸವ ಬಿಸುಟು, ಕುರುಪತಿ ನುಡಿಸೆ,ಜೀಯ ಹಸಾದವೆಂಬುದು ಕಷ್ಟ ನಿನಗೆ !” ಅಂತ ಒಗ್ಗರಣೆ ಹಾಕುತ್ತಾನೆ.

ಈ ತಂತ್ರಗಾರಿಕೆಗೆ ಕರ್ಣನ ಕೊರಳ ಸೆರೆ ಹಿಗ್ಗುತ್ತದೆ, ದೃಗುಜಲ ಉರವಣಿಸುತ್ತದೆ, ಅವನು ಕಡುನೊಂದನು ಅನ್ನುತ್ತಾನೆ ಕವಿ. ಕರ್ಣನೇನು ಕೃಷ್ಣನ ಜಾಣ್ಮೆಯ ಅರಿವಾಗದಷ್ಟು ದಡ್ಡನಲ್ಲ. ಹೀಗಾಗಿ ಭೇದದಲಿ ಹೊಕ್ಕಿರಿದನೋ ಮಧುಸೂದನನು, ನೀನು ಕೌರವೇಂದ್ರನ ಕೊಂದೆ ಅಂತೆಲ್ಲ ಹೇಳಿ ತಾನೇಕೆ ಕೌರವಪಕ್ಷವನ್ನು ತೊರೆಯಲಾರೆ ಅಂತ ಹೇಳುವುದನ್ನು ಕುಮಾರವ್ಯಾಸ ಸೊಗಸಾಗಿ ಚಿತ್ರಿಸಿದ್ದಾನೆ.


ಪೀಠಿಕೆ ಪಠ್ಯ : ಶರತ್ ಭಟ್ ಸೇರಾಜೆ

3 comments to “ಗಮಕ : ಕರ್ಣಭೇದನ (ಕುಮಾರವ್ಯಾಸ ಭಾರತ : ಉದ್ಯೋಗ ಪರ್ವ – ೧೦ನೇ ಸಂಧಿ)”
  1. ಅಡಿಗರನ್ನು, ಅಡಿಗರಿಗರಿವಾಗದಷ್ಟು ಅಗಲಕ್ಕೆ ‘ಹೊಸನಾಡೊಂದನ್ನು’ಕಟ್ಟಿದ ಗಮಕ ಸಾಮ್ರಾಟನಿಗೆ ನಮಿಸುವೆ.

  2. ಕೃಷ್ಣ ನ ಕುಟಿಲತೆ ..ಪಾಂಡವರನ್ನು ಯಾದವರು ಅನ್ನುತ್ತಾರೆ.. ಪಾಂಡವರು ಅನ್ನದೆ. ದುರ್ಯೋಧನನ
    ಬಾಯ್ದಂಬುಲಕೆ ಅಂತ ಹೇಳಿ ಹೀಯಾಳಿಸಿ ಕರ್ಣ ನ ನಿರ್ಧಾರಕ್ಕೆ ತಳ್ಳುತ್ತಾನೆ
    ತಳ್ಳುತ್ತಾನೆ ಪಾಂಡವರನ್ನು ಕೊಲ್ಲುವುದಿಲ್ಲ ಅಂತ ಹೇಳಿ ಒಂದು ರೀತಿ ಅವ್ನ ಗೆಳೆಯನಿಗೆ ಅಧ್ಯಾಯ ಮಾಡಿದಂತೆ ಆಗಿ ಅವ್ನ ವ್ಯಕ್ತಿತ್ವ ಕುಂದಿತಲ್ಲವೇ

    ಪಾರ್ಥಸಾರಥಿ ಕೆ ಎಸ್

  3. ಎಂತಾ ಪ್ರಸಂಗ! ಕರ್ಣ ತಾಯಿಯನ್ನು ಅಷ್ಟು ವರುಷದ ನಂತರ ನೋಡಿದ ಮನಸ್ಥಿತಿ ಹೇಗಿರಬೇಕು. ಮಾತು ಕೇಳಿದಾಗ ಹೇಗಾಗಿರಬೇಕು. ಇಷ್ಟಾಗಿಯೂ ಅವನು ಕೌರವರ ಪರವಾಗಿಯೇ ನಿಂತ ದೃಢವೋ..ನಮ್ಮ ಕಾವ್ಯಗಳು ಅದೆಷ್ಟು ಅದ್ಭುತವಾಗಿವೆ!!

ಪ್ರತಿಕ್ರಿಯಿಸಿ