ಕಣ್ಣು ಕಡಲು ೩ : ಅಳವೆಕೋಡಿಯ ಮೀನುಪೇಟೆಯಲ್ಲಿ ..

ನನ್ನ ವ್ಯಕ್ತಿತ್ವದ ಸಹಜ ಗುಣವೊಂದನ್ನ ಇತ್ತೀಚಿನ ತನಕವೂ ದೊಡ್ಡ ಆದರ್ಶವೆಂದೇ ನಾನು ನಂಬಿದ್ದೆ. ಸಹಜ ಗುಣವೆನ್ನುವುದಕ್ಕಿಂತ ನನ್ನೊಳಗಿನ ದೌರ್ಬಲ್ಯವೆಂದೂ ಹೇಳಬಹುದೇನೋ. ವ್ಯಾಪಾರದಲ್ಲಿ ಚೌಕಾಶಿ ನನಗೆಂದೂ ಆಗಿಬಂದದ್ದಿಲ್ಲ. ಅದರಲ್ಲೂ ರಸ್ತೆ ಬದಿಯ ತರಕಾರಿ,ಹಣ್ಣು ಮಾರುವ ಅಂಗಡಿಗಳಲ್ಲಂತೂ ಚೌಕಾಶಿ ಮಾಡುವುದೇ ಇಲ್ಲ. ಇದನ್ನ ಗುರುತಿಸಿರುವ ಸಂಬಂಧಿಕರು, ಸ್ನೇಹಿತರು “ ಕೇಳಿದಷ್ಟು ಕೊಟ್ಟು ಬರ್ತಿಯಲ್ಲಯ್ಯ.. ಚೌಕಾಶಿ ಮಾಡಬೇಕು” ಅಂತ ಕಿಚಾಯಿಸಿದಾಗಲೆಲ್ಲ “ ನೀವು ರಸ್ತೆ ಬದಿ ಪಾಪದವರ ಹತ್ರ ಚೌಕಾಶಿ ಮಾಡ್ತಿರಾ. ಅದೇ ಮಾಲ್ ಗಳಲ್ಲಿ ಹೋಗಿ ಕೇಳಿದಷ್ಟು ಕೊಟ್ಟು ಬರ್ತಿರಾ. ಅವರು ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಡ್ತಾರೆ. ಇವ್ರು ಪಾಪ ಎಷ್ಟು ದುಡಿದ್ರು ಜೀವನಪೂರ್ತಿ ಒಂದು ಮನೆ ಕಟ್ಟೋಕು ಒದ್ದಾಡಬೇಕು” ಎಂದೆಲ್ಲ ಡೈಲಾಗ್ ಹೊಡೆದದ್ದಿದೆ.

ನನ್ನ ಈ ನಿಲುವಿಗೆ ನಾನಿಂದಿಗೂ ಬದ್ಧನೇ. ಈ ಬಗೆಯ ನಿಲುವನ್ನಿಟ್ಟುಕೊಂಡವರೂ ಸಾಕಷ್ಟು ಸಹೃದಯರಿದ್ದಾರೆ. ಇದರ ಬಗ್ಗೆ ನನ್ನ ಆಕ್ಷೇಪಣೆಗಳೇನಿಲ್ಲ. ಆದರೆ ನನ್ನ ಈ ಆದರ್ಶದ ‘ದೊಡ್ಡ’ ಗುಣ ನಿಜವಾಗಿಯೂ ನಾ ಮೇಲೆ ಹೇಳಿದ ಚಿಂತನೆಯಿಂದಲೇ ಹುಟ್ಟಿದ್ದೆಂದು ಹೇಳಲಾರೆ. ಪ್ರಾಮಾಣಿಕವಾಗಿ ಅವಲೋಕಿಸಿದಾಗಲೆಲ್ಲ ಆದರ್ಶಕ್ಕಿಂತ ಹೆಚ್ಚಾಗಿ ಸಂಕೋಚದ ಸ್ವಭಾವವೇ ನನ್ನನ್ನು ಚೌಕಾಶಿ ಮಾಡದೇ ತಡೆಯುತ್ತಿತ್ತು ಎಂದನಿಸುತ್ತದೆ. ಇದರ ಜ್ನಾನೋದಯ ನನಗಾಗಿದ್ದು ಅಳವೆಕೋಡಿಯ ಮೀನು ಪೇಟೆಯಲ್ಲಿ. ನಮ್ಮ ಕರಾವಳಿಯ ಹೆಣ್ಣುಮಕ್ಕಳ ಏಕಸ್ವಾಮ್ಯ ಎಲ್ಲಾದರೂ ಇದ್ದರೆ ಅದು ಮೀನುಪೇಟೆಯಲ್ಲಿ. ಒಬ್ಬನೇ ಒಬ್ಬ ಗಂಡು ವ್ಯಾಪಾರಿಯಿಲ್ಲದ ಈ ಮಾರ್ಕೆಟ್ಟನ್ನು ಆಳುವವರು ಇಂದಿಗೂ ಹೆಣ್ಣುಮಕ್ಕಳೇ.


ಚಿಕ್ಕ ಊರಿನ ಗಮ್ಮತ್ತೆಂದರೆ ಇಲ್ಲಿ ಹೆಚ್ಚು ಕಡಿಮೆ ಎಲ್ಲರೂ ನಿಮ್ಮ ಪರಿಚಯದವರಾಗಿರುತ್ತಾರೆ. ಬೆಳಿಗ್ಗೆ ಕಿರಾಣಿ ಅಂಗಡಿಯಲ್ಲಿ ಸಿಕ್ಕವನೇ ಸಂಜೆ ಸಂತೆಪೇಟೆಯಲ್ಲೂ ಸಿಗುತ್ತಾನೆ. ಪ್ರತಿದಿನ ಸಿಕ್ಕರೆ ಮಾತನಾಡಲಿಕ್ಕೆ ವಿಷಯವಾದರೂ ಬೇಕಲ್ಲವೇ? ಪುರಾಣ-ಪ್ರವಚನ-ಫೆಸ್ ಬುಕ್ಕು ಎಲ್ಲ ಮುಗಿದ ಮೇಲೆ ಮಾತು ಹೊರಳುವುದು ಇವತ್ತುಮಾರ್ಕೆಟ್ಟಲ್ಲಿ ಯಾವ್ ಮೀನ್ ಬಂದಿದೆ ಅನ್ನೋದರ ಬಗ್ಗೆಯೇ. ನಾನು ನೂರು ರೂಪಾಯಿಗೆ ಮೂರು ದೊಡ್ಡ ಬಂಗಡೆ ತಂದಿದ್ದರೆ ಆ ದಿನ ಸಿಕ್ಕವರೆಲ್ಲ ನೂರು ರೂಪಾಯಿಗೆ ಎಂಟು ಬಂಗಡೆ, ಹತ್ತು ಬಂಗಡೆ ತಂದೆ ಅನ್ನೋರು. ನನ್ನೀ ಸ್ವಭಾವದೋಷದಿಂದ ಮೀನುಪೇಟೆಯಲ್ಲಿ ಸ್ವಲ್ಪ ದಿನ ಪ್ರಖ್ಯಾತನಾಗಿದ್ದೂ ಉಂಟು. ಕೇಳಿದಷ್ಟು ಕೊಡುತ್ತಾನೆಂದು ತಿಳಿದದ್ದೇ ಮೀನಮ್ಮಂದಿರೆಲ್ಲ ನನ್ನ ಕಂಡೊಡನೆ “ಒಡೆಯ ಇಲ್ಲ್ ಬಾ ತಾಜಾ ಮೀನು ತಂದಿಟ್ಟಿದೀನಿ ನಿಮಗೋಸ್ಕರವೇ” ಎಂದು ದುಂಬಾಲು ಬೀಳುವರು. ಈ ಮೀನು ಖರೀದಿಯಲ್ಲಿ ಯಾವುದು ತಾಜಾ? ಯಾವುದು ಐಸ್ ಮೀನು? ಅದನ್ನು ಪತ್ತೆಹಚ್ಚುವುದಾದರೂ ಹೇಗೆ ಎಂಬುದು ಈ ಶೇರು ಮಾರ್ಕೆಟ್ಟಿನಷ್ಟೇ ಕ್ಲಿಷ್ಟಕರ. ಅಲ್ಲಿನಂತೆ ಇಲ್ಲಿಯೂ ಎಲ್ಲ ಒಂದು ಅಂದಾಜಿನ ಮೇಲೆ ನಡೆಯುತ್ತಿರುತ್ತದೆ. ಎಂಥ ನಿಪುಣನಿಗೂ ಪ್ರತಿಬಾರಿ ತಾಜಾ ಮೀನೆ ಸಿಗುತ್ತದೆ ಎಂಬುದರ ಖಾತ್ರಿಯಿಲ್ಲ. ಮೀನು ಖರೀದಿಯ ಅನುಭವವೊಂದೇ ಈ ವಿಷಯದಲ್ಲಿ ನಿಮ್ಮನ್ನು ಉಳಿಸಬಲ್ಲುದು. ಹಲವು ಬಾರಿ ಕೇಳಿದಷ್ಟು ತೆತ್ತು ಕಳಪೆ ಮೀನನ್ನು ಮನೆಗೆ ಹೊತ್ತು ತಂದ ಮೇಲೆ ಹೆಂಡತಿ ಬ್ರಹ್ಮೋಪದೇಶ ಮಾಡಿದಳು.

“ ನೋಡ್ರೀ ಎಲ್ರೂ ನಿಮ್ಮ ತರ ಪೆದ್ದು ಇರಲ್ಲ. ಮೀನು ಮಾರೋ ಹೆಂಗಸ್ರಿಗೆನೂ ತಲೆ ಇಲ್ವಾ ಲಾಸ್ ಮಾಡಿ ಕೊಡೊಕೆ. ನಾವು ಕಡಿಮೆಗೆ ಕೊಡ್ತಿವಿ ಅಂತಾನೆ ಅವರು ಜಾಸ್ತಿ ಹೇಳ್ತಾರೆ. ಅವರು ಜಾಸ್ತಿ ಹೇಳ್ತಾರೆ ಅಂತಾನೇ ನಾವು ಕಡಿಮೆಗೆ ಕೇಳ್ತಿವಿ. ಇದರ ಮಧ್ಯೆನೆ ಒಂದು ವ್ಯಾಪಾರ ನಡಿಯೋದು. ಒಂದಿನ ಲಾಭ. ಒಂದಿನ ಲುಕ್ಸಾನು ಇಬ್ರಿಗೂ ಆಗುತ್ತೆ. ಮತ್ತೆ ಇಲ್ಲಿ ವ್ಯಾಪಾರ ಮಾಡೋಕೆ ಹೋಗೊರೆಲ್ಲ ಏನ್ ಶ್ರೀಮಂತರಾ? ಅವರೂ ಹಣ ಉಳ್ಸೋದು ಬೇಡ್ವಾ?“ ಅಂತ ಒಂದು ಪ್ರವಚನ ಕೊಡುವುದರ ಜೊತೆಗೆ ಒಂದು ಲೆಕ್ಕಾಚಾರವನ್ನೂ ಕೊಟ್ಟಳು.
“ಈಗ ಅವರು ನೂರು ರೂಪಾಯಿಗೆ ಮೂರು ಬಂಗಡೆ ಅಂದ್ರೆ ನೀವು ೯ ಕೊಡಿ ಅಂತ ಕೇಳಬೇಕು.
ಅಂದ್ರೆ ಮೂರು ಪಟ್ಟು. ಆಗ ಎಲ್ಲ ಚೌಕಾಶಿ ಆಗಿ ೬ ಆದ್ರೂ ಕೊಡ್ತಾರೆ. ಸುಮ್ನೆ
ಬಾಯ್ಮುಚಕೊಂಡು ಕೊಟ್ಟಷ್ಟು ತೊಗೊಂಡು ಬರೋದಲ್ಲ.”

**

ಈಗ ಮೀನುಪೇಟೆಗೆ ಹೋದಾಗ ಸ್ವಲ್ಪ ಸ್ವಲ್ಪ ಚೌಕಾಶಿ ಮಾಡಲು ಕಲಿತಿರುವೆ. ಚೌಕಾಶಿಯ ದೊಡ್ಡ ಪ್ರಯೋಜನವೆಂದರೆ ಗಿರಾಕಿ-ವ್ಯಾಪಾರಿ ನಡುವಿನ ಬಾಂಧವ್ಯ. ಹಣದ ಚೌಕಾಶಿಯ ಜೊತೆಗೆ ಇನ್ನೊಂದಿಷ್ಟು ಮಾತುಗಳು ಬದಲಾಗುತ್ತವೆ. ಮನೆಗೆ ಬಂದ ನೆಂಟರು, ಅವರಿಗಿಷ್ಟದ ಮೀನುಸಾರು ಅದನ್ನ ಮಾಡುವ ಬಗೆ ಬಗ್ಗೆ ಗಿರಾಕಿಗಳು ಮಾತನಾಡಿದರೆ ಮೀನು ವ್ಯಾಪಾರದ ಕಷ್ಟ ಸುಖ , ಬೆವರಿಳಿಸುವ ಬಿಸಿಲು, ಮುಗಿಯದ ಬಡ್ಡಿಸಾಲಗಳ ಬಗ್ಗೆ ಮೀನಮ್ಮರು ಮಾತನಾಡುತ್ತಾರೆ. ಹೀಗೆ ಮನುಷ್ಯ ಮನುಷ್ಯರ ನಡುವೆ ಮಾತಿನ ಪಾತಳಿಯಲ್ಲಿ ಸಂಬಂಧ ಹುಟ್ಟಿಕೊಳ್ಳುತ್ತದೆ. ಸಮುದಾಯವೊಂದು ಗಟ್ಟಿಗೊಳ್ಳುತ್ತದೆ.

ಬದಲಾದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಮೀನುಪೇಟೆಯಲ್ಲಿ ಇತ್ತೀಚೆಗೆ ಕಂಡ ಚಿತ್ರವನ್ನ ನಿಮ್ಮೊಂದಿಗಿಲ್ಲಿ ಹಂಚಿಕೊಳ್ಳಬೇಕು.
ಸ್ವಲ್ಪ ಸಮಯದ ಹಿಂದೆ ಬೋಟಿಯವರ ಹರತಾಳದಿಂದಾಗಿ ನಮ್ಮಲ್ಲಿ ಹೆಚ್ಚಿನ ಮೀನಿನ ಸಪ್ಲೆ ಇರಲಿಲ್ಲ. ಇದ್ದ ಮೀನುಗಳೂ ದುಬಾರಿ. ದುಬಾರಿ ಎಂದು ಮೀನು ತಿನ್ನದಿರಲಾದೀತೆ? ಸರಿ ಎಂದು ಇದ್ದುದರಲ್ಲೆ ಸೋವಿ ಮೀನಿನ ಹುಡುಕಾಟದಲ್ಲಿ ಅಳವೆಕೋಡಿಯ ಮೀನು ಪೇಟೆಗೆ ಬಂದಿದ್ದೆ.

ಮಾರ್ಚ್ ತಿಂಗಳ ಬಿಸಿಲು. ಸುತ್ತಲೆಲ್ಲೂ ಗಾಳಿಯ ಸೊಲ್ಲಿಲ್ಲ. ಬಿಸಿಲಿಗೆ ಹೆದರಿ ಮೋಡಗಳೂ ಚಲಿಸದೇ ಸ್ತಬ್ದವಾಗಿವೆ. ಅಳವೆಕೋಡಿಗೆ ಅಂಟಿಕೊಂಡಂತಿರುವ ಗೊಡ್ಡೆ ಮರಗಳು. ಮೀನು ಬೇಟೆಗೆ ಹೊಂಚಿ ಹಾಕಿ ಕುಳಿತಿರುವ ಬೆಳ್ಳಕ್ಕಿ ಸಾಲು. ಇವುಗಳಿಗೆ ಪೈಪೋಟಿ ಕೊಡುವಂತೆ ಬಾನೆತ್ತರದಲ್ಲಿ ಮೀನಿಗಾಗಿ ಗಸ್ತು ತಿರುಗುತ್ತಿರುವ ಹದ್ದುಗಳು. ಮೀನಿಗಿಂತ ಗಿರಾಕಿಗಳೇ ಹೆಚ್ಚಾಗಿ ಮೀನಿನ ರೇಟೆಲ್ಲ ದುಬಾರಿಯಾಗಿ ಬೆಸ್ತರ ಹೆಂಗಸರಿಗೂ ಗಿರಾಕಿಗಳಿಗೂ ಮಾತಿಗೆ ಮಾತು ಬೆಳೆದು ಅಲ್ಲೊಂದು ಚಿಕ್ಕ ರಣರಂಗವೇ ಸೃಷ್ಠಿಯಾಗಿತ್ತು.

ಈ ಸೆಖೆಯಲ್ಲಿ ಈ ಗಿಜಿಗಿಜಿ ಗಲಾಟೆಯಲ್ಲಿ ಮಾರ್ಕೆಟ್ಟಿನಲ್ಲಿ ನಾನಿದ್ದೆ. ಮಾರ್ಕೆಟ್ಟಿನ ತುಂಬೆಲ್ಲ ಚೆಟ್ಲಿ, ಕೊಕ್ರ ಬಿಟ್ರೆ ಬೇರೆನಿಲ್ಲ. ಮಧ್ಯಾಹ್ನ ಬೇರೆ ಬಾಗಿಲಲ್ಲಿ ಬಂದು ನಿಂತಿದೆ. ಈ ಬಿಸಿಲಿನ ತಾಪದಿಂದ ತಪ್ಪಿಸಿಕೊಂಡು ಮನೆಗೆ ಸೇರುವ ಆತುರ ಕೊಳ್ಳುವವರಿಗೂ. ಮಾರುವವರಿಗೂ.

ಅಲ್ಲೊಬ್ಬಳು ಮುಸಲ್ಮಾನ ಹೆಂಗಸು, ಒಂದೇ ಒಂದು ಶವಟೆ ಮೀನನ್ನು ಹಿಡಿದು ಕುಳಿತಿದ್ದಾಳೆ. ಸುಮಾರು ದೊಡ್ಡ ಮಿನೇ. ಒಂದಿಪ್ಪತ್ತೈದು
ಫ್ರೈ ಮಾಡಲೇನಡ್ಡಿಯಿಲ್ಲ. ಶವಟೆ ನೋಡಲು ಸ್ವಲ್ಪ ಶಾರ್ಕ್ ನಂತಿರುವ ರುಚಿಕಟ್ಟಾದ ಹೊಳೆಮೀನು. ಸಮುದ್ರದಲ್ಲಿ ಸಿಗುವ ಈಸೋಣ್ (ಆಂಜೆಲ್) ಮೀನಿಗೆ ಹೊಳೆಮೀನಿನಲ್ಲಿ ಶವಟೆಯೇ ಪರ್ಯಾಯ. ಬಾಯಲ್ಲಿಟ್ಟರೆ ಕರಗುವ, ತಿಂದಷ್ಟು ಮತ್ತೆ ಬೇಕೆನಿಸುವ ಈ ಮೀನಿನ ರುಚಿಯಂತೇ ರೇಟೂ ಹೆಚ್ಚು.
ಆಕೆಯ ಎದುರಿಗೆ ಒಬ್ಬ ಮಧ್ಯವಯಸ್ಕ. ಅರ್ಧ ಬೊಳುತಲೆಯಿರುವ ಹಣೆಯ ಮೇಲೆ ಉದ್ದನೆಯ ಕೆಂಪು ನಾಮ. ಕೇಸರಿ ಶಾಲು. ಬಿಳಿ ಶರ್ಟು, ಬಿಳಿ ಪೈಜಾಮ. ಈ ದಿನಗಳ ಹಿಂದೂ ಭಕ್ತರ ಟಿಪಿಕಲ್ ವೇಷ ಭೂಷಣ. ಬೆವರುವ ಬಿಸಿಲಲ್ಲಿ ಈ ಬಟ್ಟೆ ಧರಿಸಿ ಆತ ಏಕೆ ಮೀನುಪೇಟೆಗೆ ಬಂದಿದ್ದನೋ ತಿಳಿಯಲಿಲ್ಲ. ಬಹುಷಃ ಯಾವುದೋ ಕಾರ್ಯಕ್ರಮ ಮುಗಿಸಿ ಸೀದಾ ಬಂದಿರಬೇಕು. ಆತನಿಗೆ ಶವಟೆ ಪ್ರಿಯವಾದ ಮೀನು ಎಂದು ಆಗಾಗ ಉಗುಳು ನುಂಗುವ ಆತನ ಕೊರಳೇ ಹೇಳುತ್ತಿದೆ.

ಇವನ ಬೆಲೆಗೆ ಆಕೆ ಬಂದಿದ್ದರೆ ಅದಾಗಲೇ ಶವಟೆಯ ಆಂಬಟ್ ಮಾಡಿ ಅದಕ್ಕೆ ಮುಕ್ತಿ ತೋರಿಸುತ್ತಿದ್ದ. ಅವಳು ನಾಲ್ಕು ನೂರರ ಕಡಿಮೆಗೆ ಕೊಡಲು ಸುತಾರಾಂ ಒಪ್ಪುತ್ತಿಲ್ಲ.

ಈತ ನೂರು ರೂಪಾಯಿ ಮೇಲೆ ಒಂದು ಪೈಸೆ ಕೊಟ್ಟರೂ ಹೆಚ್ಚೇ ಅದಕ್ಕೆ ಅನ್ನುತ್ತಿದ್ದಾನೆ. ಎಲ್ಲ ಕಡೆ ಮೀನಿನ ಕೊರತೆ ಇರುವಾಗ ತನಗೆ ೪೦೦ ರೂಪಾಯಿ ಸಲ್ಲಲೇಬೇಕು ಎಂಬುದು ಆ ಹೆಂಗಸಿನ ಅಪೇಕ್ಷೇ. ಅಷ್ಟು ಕೊಟ್ಟು ತೊಗೊಂಡು ಹೋಗೋಕೆ ಅದೇನು ಇಸೋಣು, ಪಾಪ್ಲೆಟ್ಟೆ? ಇಬ್ಬರಲ್ಲೂ ಬಲು ಹೊತ್ತಿನಿಂದ ಚೌಕಾಶಿ ನಡೆದ ಹಾಗಿದೆ. ಇನ್ನೂ ನಡೆಯುತ್ತಲೇ ಇದೆ. ಅವನಾಗಲೇ ಎರಡು ಬಾರಿ ಮೀನುಪೇಟೆ ಸುತ್ತು ಹಾಕಿ ಬಂದು, ಬೇರೆ ಮೀನು ತೊಗೊಳ್ಳುವ ಮನಸ್ಸಿಲ್ಲದೆ, ಇನ್ನೆಲ್ಲಿಯೂ ಒಳ್ಳೆ ಮೀನು ಕೂಡ ಇಲ್ಲ ಎನ್ನುವುದನ್ನ ಖಾತ್ರಿ ಮಾಡಿಕೊಂಡಿದ್ದಾನೆ.

“ ಸರಿಯಾಗಿ ದರ ಹೇಳು.. ಸುಮ್ನೆ ೪೦೦ ರೂಪಾಯಿ ಕೊಡು ಅಂದ್ರೆ ಹೆಂಗೆ. ಅದಕ್ಕೊಂದು ನ್ಯಾಯ ಇಲ್ವ?” ಎಂದು ದಬಾಯಿಸಿದ. ಅಕ್ಕ ಪಕ್ಕ ನಿಂತ ನಮ್ಮನ್ನೆಲ್ಲ ನೋಡುತ್ತ.

ಮೀನಿನ ಮಾರ್ಕೆಟ್ಟಿನಲ್ಲಿ ಹಾಗೆಯೇ, ಒಂದು ವ್ಯಾಪಾರ ಕುದುರುತ್ತಿದೆ ಅಂದರೆ ಸುತ್ತ ನಾಕು ಜನ ಗುರಾಯಿಸಿ ನೋಡುತ್ತಿರುತ್ತಾರೆ. ಇವನ್ಯಾವ ದರಕ್ಕೆ ಕೊಂಡ ? ಅವಳ್ಯಾವ ರೇಟಿಗೆ ಬಿಟ್ಟುಕೊಟ್ಟಳು? ಇದನ್ನೆಲ್ಲ ವಿವೇಚಿಸಿ , ಭಾಗಾಕಾರ, ಗುಣಾಕಾರ ಹಾಕಿ ಕೊನೆಗೆ ತಾನು ಯಾವ ಮೀನಿಗೆ ಯಾವ ರೇಟು ಕೊಟ್ಟರೆ ಸರಿಯಾಗುತ್ತದೆ ಎಂಬ ನಿರ್ಧಾರಕ್ಕೆ ಬರುವ ಆಸಾಮಿಗಳ ದೊಡ್ಡ ಹಿಂಡೇ ಇಲ್ಲಿರುತ್ತದೆ. ದಿನಂಪ್ರತಿ ಬದಲಾಗುವ ಮೀನಿನ ದರಕ್ಕೆ ಅಳತೆಗೋಲೇ ಇಲ್ಲದಿರುವುದರಿಂದ ಅವರದೂ ತಪ್ಪಿಲ್ಲವೆನ್ನಿ. ಆಕೆಗೂ ಬೆಳಗ್ಗಿನಿಂದ ಬಿಸಿಲಿನಲ್ಲಿ ಕೂತು ಸಾಕಾಗಿದೆ. ವ್ಯಾಪಾರ ಮುಗಿದರೆ ದಿನಸಿ ಸಾಮಾನು ತೆಗೆದುಕೊಂಡು ಮನೆಗೆ ಹೋಗಿ ಅಡಿಗೆ ಮಾಡುವ ಆಲೋಚನೆ ಅವಳದ್ದು. ಅದನ್ನೇ ಗೊಣಗುತ್ತಿದ್ದಾಳೆ.

“ ನೀವು ದೊಡ್ಡೋರು.. ಇಷ್ಟು ದೊಡ್ಡ ಶವಟೆಗೆ ೧೦೦ ರೂಪಾಯಿಗೆ ಕೇಳಿದ್ರೆ ನಾನೇನು ಮಾಡೋದು. ಸರಿಯಾದ ದರ ಹೇಳಿ” ಅಂತ ಈಕೆ.
ಆ ಮುಸಲ್ಮಾನ ಹೆಂಗಸಿಗೆ ಬಗ್ಗುವ ಮನಸಿಲ್ಲ ಅವನಿಗೆ. ಹಾಗಂತ ಶವಟೆ ಬಿಟ್ಟು ಬೇರೆನಾದರೂ ತೆಗೆದುಕೊಂಡು ಹೋಗಲೂ ಆತ ರೆಡಿಯಿಲ್ಲ. ಒಂದು ಕಡೆ ಬಂದವರೆಲ್ಲ ಶವಟೆ ಮೀನಿನ ದರ ವಿಚಾರಿಸಿಕೊಂಡು ಬೇರೆ ಹೋಗ್ತಿದಾರೆ. ಯಾರಾದರೂ ತನಗಿಂತ ಹೆಚ್ಚು ದರ ಕೊಟ್ಟು ತೊಗೊಂಡು ಹೋದರೆ ಏನು ಎಂಬ ಕಳವಳವೂ ಅವನಲ್ಲಿದೆ.
ಶವಟೆ ಮೀನಿನೆಡೆಗೆ ಆಸೆಯಿಂದ ನೋಡುತ್ತಿರುವ ಕೇಸರಿ ನಾಮದ ಮಧ್ಯವಯಸ್ಕ. ಬಿಸಿಲಿನ ಬೇಗೆ ತಾಳಲಾರದೆ ತನ್ನ ಕಪ್ಪು ಬುರ್ಕಾವನ್ನ ಕಣ್ಣಿನ ತನಕ ಎಳೆದುಕೊಂಡು ಕೂತಿರುವ ಹೆಂಗಸು.

ನಡುವೆ ಒಂದು ನಿರ್ಜೀವ ಮೀನು.

ಇದು ನಮ್ಮ ದೇಶದ ನಿತ್ಯದ ಚಿತ್ರ. ಇದು ನಮ್ಮ ಬದುಕು; ಮತ್ತದರ ಸ್ವಾರಸ್ಯ.
ಈ ಕುದುರದ ವ್ಯಾಪಾರ ನೋಡುತ್ತ ನಮ್ಮ ನಡುವೆಯೇ ನಿಂತಿದ್ದ ಮುದಕಪ್ಪನೊಬ್ಬ “ ಈ ರಣಬಿಸಿಲಲ್ಲಿ ಅದೇನ್ ಪುರಾಣ ಮಾಡ್ತಿರೋ.. ನೂರು ರೂಪಾಯಿಗೆ ಒಂದವೈತ್ತು ಸೇರ್ಸಿ ಕೊಡು ಅತ್ಲಾಗೆ.. ಎಷ್ಟು ಅಂತ ಚೌಕಾಶಿ ಮಾಡ್ತಾ ಕೂರ್ತಿರಾ.” ಅಂತ ಇಬ್ಬರನ್ನುದ್ದೇಶಿಸಿ ಹೇಳಿದ.
ಚಕ್ಕನೇ ಆಕೆ ಐವತ್ತು ಬೇಡಣ್ಣ.. ಇನ್ನೂರು ಕೊಟ್ಬಿಡು . ನಾನೇ ಕಟ್ ಮಾಡಿ ಕಿಲೀನ್
ಮಾಡಿ ಕೊಡ್ತಿನಿ ತೊಗೊ ಅಂತ ಶವಟೆ ಮೀನನ್ನೊಮ್ಮೆ ತೊಳೆದು ತನ್ನ ಬದಿಯಲ್ಲಿದ್ದ ಮೊಂಡು ಚಾಕುವಿನಿಂದ ಮೀನಿಗೆ ಬಲವಾದ ಏಟೋಂದನ್ನು ಕೊಟ್ಟಳು. ಆತ ಜೇಬಿನಲ್ಲಿದ್ದ ಪ್ಲಾಸ್ಟಿಕ್ ಖೊಟ್ಟೆಯನ್ನ ಜೋಳಿಗೆಯಂತೆ ತೆರೆದು ಮೀನಿನ ತುಂಡುಗಳಿಗೆ ಕಾದು ಕುಳಿತ.

******

One comment to “ಕಣ್ಣು ಕಡಲು ೩ : ಅಳವೆಕೋಡಿಯ ಮೀನುಪೇಟೆಯಲ್ಲಿ ..”
  1. ನಾವು ಬಯಲು ಸೀಮೆಯವರು, ಈ ಲೇಖನ ಓದಿ ಕರಾವಳಿಗೆ ಬಂದ ತಾಯಿತು, ಸುಂದರ ಬರವಣಿಗೆ,ಓದಿಸಿ ಕೊಂಡು ಹೋಗುವ ಬರಹ. ತಮಗೆ ಧನ್ನೆ ವಾದಗಳು.

ಪ್ರತಿಕ್ರಿಯಿಸಿ