ನಮ್ಮ ಸದ್ಯದ ಬದುಕನ್ನು ಎರಡೇ ಪದಗಳಲ್ಲಿ ಹಿಡಿದಿಡಬೇಕೆಂದರೆ ಥಟ್ಟನೆ ನೆನಪಾಗುವುದು ಆತಂಕ ಮತ್ತು ಧಾವಂತ.
ಹೊಸ ಕಾಲದ ಹೊಸ ಬಗೆಯ ಮೌಢ್ಯಗಳು ನಮ್ಮ ಸುತ್ತ ಹಬ್ಬಿರುವ ಇಂತಹ ವಿಷಮ ಕಾಲಘಟ್ಟದಲ್ಲಿ ಸಾಹಿತ್ಯ ಪತ್ರಿಕೆಯೊಂದು ಏನು ಮಾಡಬಹುದು? ಅದು ಓದುಗರಲ್ಲಿ ವೈಚಾರಿಕತೆಯನ್ನು ಬೆಳೆಸಬೇಕು ಎಂಬುದು ನಮ್ಮ ನಂಬಿಕೆ.
ಋತುಮಾನದ ಎರಡನೇ ವರುಷ ನಾವು ಆಲೋಚಿಸಿದ್ದು ಇದನ್ನೇ. ಹಾಗಾಗಿ ಕತೆ, ಕಾವ್ಯಗಳಿಗೆ ಸಮ ಸಮವಾಗಿಯೇ ಹೆಚ್ಚು ವಿಚಾರ ಪ್ರಚೋದಕ ಸಾಹಿತ್ಯ ಈ ವರುಷ ನಮ್ಮ ಆಯ್ಕೆಯಾಗಿತ್ತು. ಇಲ್ಲೂ ಒಂದು ಅಪಾಯವಿತ್ತು. ವೈಚಾರಿಕತೆಯ ಹೆಸರಿನಲ್ಲಿ ಹುಸಿ ಪ್ರೊಪಗಾಂಡವನ್ನು ಬಿತ್ತುವ ಅಪಾಯ. ಹಾಗಾಗಿ ಯಾವುದೇ ಬರಹಗಳನ್ನು ಪ್ರಕಟಿಸುವ ಮುನ್ನ ಹೆಚ್ಚು ಜವಾಬ್ದಾರಿಯಿಂದಿರಬೇಕಾದ ಜರೂರು ಹೆಚ್ಚಿತ್ತು. ಈ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದೇವೆಂಬುದನ್ನು ಸಹೃದಯ ಓದುಗ ವಲಯವೇ ಹೇಳಬೇಕು. ಮುಂಬರುವ ದಿನಗಳಲ್ಲೂ ಋತುಮಾನ ವೈಚಾರಿಕ ಸಾಹಿತ್ಯಕ್ಕೆ ಹೆಚ್ಚು ಆದ್ಯತೆ ನೀಡಲಿದೆ.
ಎರಡು ಸಂವತ್ಸರ ಮುಗಿದು ಮೂರಕ್ಕೆ ಮುಖ ಮಾಡಿ ನಿಂತಿರುವ ಹೊತ್ತಿನಲ್ಲಿ ನೆನೆಯಬೇಕಾದವರ ಪಟ್ಟಿ ದೊಡ್ಡದಿದೆ. ದಿನದಿಂದ ದಿನಕ್ಕೆ ಋತುಮಾನದ ಬಳಗವೂ ವಿಸ್ತರಿಸಿಕೊಳ್ಳುತ್ತಿದೆ. ಕಾಲಕಾಲಕ್ಕೆ ಲೇಖನಗಳನ್ನು ಬರೆದುಕೊಟ್ಟ ಲೇಖಕರ ಜೊತೆಗೆ ಪ್ರೂಫ್ ರೀಡ್ ಮಾಡಿಕೊಟ್ಟ, ಯು ಟ್ಯೂಬ್ ವೀಡಿಯೊಗಳಿಗೆ ಉಪ ಶೀರ್ಷೀಕೆ ಬರೆದುಕೊಟ್ಟ, ಬರಹಗಳಿಗೆ ಸೂಕ್ತ ರೇಖಾ ಚಿತ್ರಗಳನ್ನು ಚಿತ್ರಿಸಿಕೊಟ್ಟ, ಹಳೆಯ ಧ್ವನಿಮುದ್ರಣಗಳನ್ನು ಒದಗಿಸಿದ ಮತ್ತು ಸಂಸ್ಕರಿಸಲು ನೇರವಾದ, ವೀಡಿಯೋ ಚಿತ್ರಿಕರಣ, ಸಂಕಲನಕ್ಕೆ ನೆರವಾದ ಎಲ್ಲ ಹಿರಿಯ , ಕಿರಿಯ ಮಿತ್ರರಿಗೂ ಋಣಿಯಾಗಿದ್ದೇವೆ. ನಿಮ್ಮ ಪ್ರೀತಿ ಹೀಗೆ ಇರಲಿ..
ಅಭಿನಂದನೆಗಳ ಹೊರತಾಗಿ ಋತುಮಾನದ ಕುರಿತು ನಿಮ್ಮ ಪ್ರಾಮಾಣಿಕ ಅನಿಸಿಕೆ/ ಅಭಿಪ್ರಾಯ ನಮಗೆ ಹೆಚ್ಚು ಪ್ರೋತ್ಸಾಹದಾಯಕವಾಗಬಲ್ಲದು.
Ruthumana.com