ಬೇರೆ ಭಾಷೆಯಿಂದ ಆಮದುಗೊಂಡ ಪದಗಳಿಂದ ಹೊರತಾದ ಅಚ್ಚಗನ್ನಡದ್ದೇ ಪದಗಳನ್ನು ಕಟ್ಟಬೇಕೆಂಬ ಕಾರ್ಯ ನಮ್ಮಲ್ಲಿ ಬಹಳ ಕಾಲದಿಂದಲೂ ಆಗುತ್ತಾ ಬಂದಿದೆ. ಅದೇ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವ ಅಮರ್ ಅವರ ವಿಜ್ಞಾನ , ಗಣಿತ ಸಂಬಂಧಿತ ಅಂಕಣ ‘ಕದಿರ ಕೋಲು’ ಇನ್ನು ಮುಂದೆ ಋತುಮಾನದಲ್ಲಿ ಆಗಾಗ್ಗೆ ಪ್ರಕಟಗೊಳ್ಳುತ್ತದೆ.
ತಲಕಾವೇರಿಗೆ ಸಿಗುವ ಮದಿಪು, ಪೂಜೆ, ದಾರಿಯಲ್ಲಿ ಕೂಡಿ ಹಿರಿದಾಗಿಸುವ ಶಿಂಷಾ, ಹಾರಂಗಿಗೆ ದೊರೆತೀತೇ? ನುಡಿಯೂ ಹರಿಯುವ ಹೊನಲಂತೆ ಎಂದೊಡೆ, ನುಡಿಯ ಮೂಲ ಪದಗಳಿಗೆ ಕೊಡುವಶ್ಟು ಬೆಲೆಯನ್ನು ಬೆಳವಣಿಗೆಯ ದಾರಿಯಲ್ಲಿ ಸೇರಿಕೊಂಡ ಹೆರನುಡಿಗಳ ಪದಗಳಿಗೆ ಕೊಡಲಾದೀತೇ? ಹೊಸ ಪದಗಳ ಬೇಡಿಕ ಎದುರಾದಾಗ, ಯಾವ ಕುಗ್ಗು, ಅಂಜಿಕೆಗಳಿಲ್ಲದೆ, ಕನ್ನಡದ ಮೂಲ ಪದಗಳಿಗೆ ಹೊರಳುವುದು ಸರಿಯೆಂಬುದು ನನ್ನ ಮತ್ತು ನನ್ನಂತಹ ಹಲವು ಕನ್ನಡಿಗರ ನಂಬಿಕೆ. ಅದೇ ಕೆಚ್ಚನ್ನು ಅಲ್ಲಲ್ಲಿ ತಣಿಸಿ, ಮೊನಚನ್ನು ಹದಗೊಳಿಸಿ ಮೂಡಿಸಿದ ಬರಹವಿದು.
ಇರ್ವರಸೆ ಎಂಬುದು ಬರಿದೇ ಕಟ್ಟುಕತೆಯಲ್ಲ ಇಲ್ಲ, ಕಣ್ಣಿಗೆ ಕಾಣದ ಯಾವುದೋ ಒಂದು ರೂಪಿಲ್ಲದ, ಪರಿಜೆಯಿಲ್ಲದ (formless) ಗುಟ್ಟೂ ಅಲ್ಲ. ನಮ್ಮ ದಿನನಿತ್ಯದ ಬದುಕಿನ ಹಲವು ತೊಡಕುಗಳನ್ನ ಬಿಡಿಸಲು ಇದು ನೆರವಾಗುತ್ತದೆ. ಅಲ್ಲದೇ, ಇನ್ನೂ ಮೇಲ್ಮಟ್ಟದ ಮತ್ತು ಸಿಕ್ಕಲು ಸಿಕ್ಕಲಾದ ಹಮ್ಮುಗೆಗಳ ಒಳ ಆಳ ಮತ್ತು ಹರವಿನ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಇರ್ವರಸೆ ಮತ್ತು ವಾಡಿಕೆಯ ತೀರ್ಮೆಯ (formal logic) ನಡುವಿನ ನಂಟು, ಕಿರು ಮತ್ತು ಹಿರಿ ಗಣಿತದ ನಡುವಿನ ನಂಟಿಗೆ ಹೋಲುತ್ತದೆ.
ಈ ನಂಟನ್ನು ಇನ್ನೂ ಚೆನ್ನಾಗಿ ಬಿಡಿಸಿ ಹೇಳಲು, ಒಂದು ಎತ್ತುಗೆಯನ್ನು ಕೊಡುತ್ತೇನೆ. ಅರಿಸ್ಟಾಟಲ್ನ ತೀರ್ಮೆಯಲ್ಲಿ “ಸಿಲ್ಲೋಜಿಸಮ್” ಎಂಬ ಕುರಿಪು ಎದುರಾಗುತ್ತದೆ. (ಸಿಲ್ಲೋಜಿಸಮ್ ಎಂದರೆ, ಮೂರು ಬಗೆಯ ಹೇಳಿಕೆಗಳಿಂದ ಕೂಡಿದ ಎರಡು ಸೊಲ್ಲುಗಳಿಂದ, ಒಂದು ತೀರ್ಮಾನಕ್ಕೆ ಬರುವುದು. ಆ ಹೇಳಿಕೆಗಳು, ಒರ್ಗುರುತು (particular), ಗುಂಪುಗುರುತು (individual) ಮತ್ತು ನೆರೆಗುರುತು (universal) ಎಂಬ ಮೂರು ನೆಲೆಗಳಲ್ಲಿ ಇರುತ್ತವೆ. 1. ಕೆಂಚ (ಒರ್ಗುರುತು) ಒಂದು ನಾಯಿ (ಗುಂಪುಗುರುತು). 2. ಎಲ್ಲ ನಾಯಿಗಳಿಗೂ ನಾಲಕ್ಕು ಕಾಲುಗಳಿರುತ್ತವೆ (ನೆರೆಗುರುತು). ಈ ಎರಡು ಸೊಲ್ಲುಗಳಿಂದ ಯಾವ ತೀರ್ಮಾನಕ್ಕೆ ಬರಬಹುದು? ಕೆಂಚನಿಗೂ ನಾಲಕ್ಕು ಕಾಲಿದೆ ಎಂಬುದು. ಈ ಬಗೆಯ ಓರಿಕೆಯ ಬಗೆಗೆ “ಸಿಲ್ಲೋಜಿಸಮ್” ಎಂಬ ಹೆಸರಿದೆ).
ಆ ಅರಿಸ್ಟಾಟಲನ ತೀರ್ಮೆ ಹೀಗೆ ತೊಡಗುತ್ತದೆ. “ಅ” ಎಂಬ ಬರಿಗೆಯು/ಅಕ್ಶರವು ಇನ್ನೊಂದು “ಅ” ಎಂಬ ಬರಿಗೆಗೆ ಸಾಟಿಯಾಗಿದೆ. ನಮ್ಮ ದಯ್ನಂದಿನ ಕೆಲಸಗಳಲ್ಲಿ ಮತ್ತು ಹಲವು ಸಾಮಾನ್ಯ ಬಳಕೆಗಳಲ್ಲಿ, ಈ ಹೇಳಿಕೆಯನ್ನು ನಾವು ಕಣ್ಣು ಮುಚ್ಚಿ ನಂಬಬಹುದು. ಆದರೆ ನಿಜಕ್ಕೂ “ಅ” ಇನ್ನೊಂದು “ಅ” ಗೆ ಸರಿಸಾಟಿಯೇ? ಒಂದು ಹಿಗ್ಗುಗನ್ನಡಿಯಲ್ಲಿ ಈ ಎರಡೂ ಬರಿಗೆಗಳನ್ನು ನೋಡಿದರೆ ತಿಳಿಯುತ್ತದೆ, ಇವುಗಳ ನಡುವಿನ ಬೇರ್ಮೆ ಏನು ಎಂದು! ಈ ಎರಡೂ ಬರಿಗೆಗಳ ನಡುವಿನ ಅಳತೆ, ಆಕಾರದಲ್ಲಿ ಬೇರ್ಮೆ ಇಂತಿಶ್ಟಾದರೂ ಇದ್ದೇ ಇರುತ್ತದೆ! ಆದರೆ, “ಅ” ಬರಿಗೆಯ ಅಳತೆ, ಆಕಾರಗಳನ್ನು ನೋಡಬಾರದು; ನಿಜಕ್ಕೂ “ಅ” ಬರಿಗೆಯನ್ನು ಬಳಸಿದ್ದು ಮತ್ತೊಂದು ಯಾವುದೋ ಒಂದನ್ನು ಸಂಕೇತಿಸಲು; ಎತ್ತುಗೆಗೆ, ಒಂದು ಕೇಜಿ ಸಕ್ಕರೆ ಇರಬಹುದು; ಎಂದೂ ನಾವು ವಾದಮಾಡಬಹುದು. ಹಾಗಾಗಿ, ಒಂದು ಕೇಜಿ ಸಕ್ಕರೆ, ಇನ್ನೊಂದು ಕೇಜಿ ಸಕ್ಕರೆಗೆ ಸಮನಾಗಿರುತ್ತದೆ ಎಂದು ಹೇಳಬಹುದು! ಆದರೆ, ಇಲ್ಲೂ ಒಂದು ಹುಳುಕಿದೆ. ಎರಡು ಬೇರೆಬೇರೆಯಾಗಿ ಇರಿಸಿದ ಒಂದು ಕೇಜಿ ಸಕ್ಕರೆ ಪೊಟ್ಟಣಗಳನ್ನ ಸರಿಯಾಗಿ ಗಮನಿಸಿದರೆ, ಒಂದಿಶ್ಟು ಬೇರ್ಮೆಗಳು ಇದ್ದೇ ಇರುತ್ತವೆ. (ಕೋಟಿ ಪಾಲುಗಳಲ್ಲಿ ಒಂದರಶ್ಟಾದರೂ ತೂಕದಲ್ಲಿ ಬೇರ್ಮೆ ಇರುವುದಿಲ್ಲವೇ?!). ಹಾಗಾಗಿ, ಎರಡು “ಒಂದು ಕೇಜಿ” ಸಕ್ಕರೆಯ ಪೊಟ್ಟಣಗಳು ಸಾಟಿಯಾಗಿರಲಾರದು. ಹೋಗಲಿ, ಒಂದು ಕೇಜಿ ಸಕ್ಕರೆ ತನಗೆ ತಾನೇ ಸಾಟಿ ಎನ್ನೋಣವೇ! ಅದೂ ಆಗದು. ಏಕೆಂದರೆ, ಯಾವ ವಸ್ತುವೂ ಹೊತ್ತಿನ ಹಿನ್ನೆಲೆಯಲ್ಲಿ, ಒಂದೇ ಒಟ್ಟಲಿನಲ್ಲಿ, ಅಳತೆಯಲ್ಲಿ ಇರಲಾರದು. ಹೊತ್ತು ಹೊತ್ತಿಗೂ ಒಂದಿಶ್ಟು ಕಣಗಳು ಕೂಡುವುದು, ಕಳೆವುದು ನಡೆಯುತ್ತಲೇ ಇರುತ್ತದೆಯಲ್ಲವೇ? ಇನ್ನು ಹೇಗೆ ಆ ಸಾಟಿಯನ್ನ ಗುರುತಿಸುವುದು ಎಂದು ಕೇಳಿದಾಗ, ಹೀಗೂ ಕೆಲವರು ಹೇಳುತ್ತಾರೆ. “ಒಂದು ಕೇಜಿ ಸಕ್ಕರೆ, ಒಂದು ನಿರ್ದಿಶ್ಟ ಹೊತ್ತಿನಲ್ಲಿ, ತನಗೆ ತಾನೇ ಸರಿಸಮಾನವಾಗಿರುತ್ತದೆ”, ಎಂದು. ಆದರೆ, ಇದು ಒಂದು ತಲೆಬುಡವಿಲ್ಲದ ತೀರ್ಮೆ! ಆ ” ನಿರ್ದಿಶ್ಟ ಹೊತ್ತು” ಎಂದರೇನು? ತೀರಚಿಕ್ಕ (infinitesimal) ಅಳತೆಯಿರುವ ಹೊತ್ತಿನ ತೆರಹೇ (interval)? ಅದೇ ಹುರುಳುಳ್ಳದ್ದಾಗಿದ್ದರೆ, ಆ ತೀರಚಿಕ್ಕ ಹೊತ್ತಿನ ತೆರಹಿನಲ್ಲಿ, ಆ ಸಕ್ಕರೆಯ ಒಟ್ಟಲಿನಲ್ಲಿ ತೀರಚಿಕ್ಕ ಮಾರ್ಪಾಡುಗಳು ಖಂಡಿತ ಆಗುತ್ತಿತ್ತು! ಅದು ಸಾಯಲಿ. “ನಿರ್ದಿಶ್ಟ ಹೊತ್ತು” ಎಂದರೆ, ಯಾವ ತೆರಹೂ, ಹರಿವೂ ಇಲ್ಲದ, “ಶೂನ್ಯ” ಅಳತೆಯ ಹೊತ್ತೇ? ಮುಂಡಾಮೋಚ್ತು! ನಿಜ ಬದುಕಿನಲ್ಲಿ ಆ “ಶೂನ್ಯ” ತೆರಹಿನ ಹೊತ್ತು ಇರಲು ಸಾಧ್ಯವೇ ಇಲ್ಲ! ಜಗತ್ತಿನ ಎಲ್ಲ ಗೆಯ್ಮೆಗಳು ನಡೆಯುವುದು ಹರಿವ ಹೊತ್ತಿನ ಹಿನ್ನೆಲೆಯಲ್ಲೇ. ಎಲ್ಲವೂ ಇರುವುದು ಆ ಹರಿಯುವ ಹೊತ್ತಿನಲ್ಲಿ ಮತ್ತು, ಹೊತ್ತು ಹೊತ್ತಿಗೂ ಆ ಇರುವಿಕೆಗಳು ಮಾರ್ಪಾಡುಗೊಳ್ಳುವವು.
ಹಾಗಾಗಿ, “ಅ” ಎಂಬುದು “ಅ”ಗೆ ನಿಜವಾಗಿಯೂ ಸಮಾನವಾಗುವುದು, ಅದು ಮಾರ್ಪಾಡುಗೊಳ್ಳದಿದ್ದರೆ. ಒಂದುವೇಳೆ ಮಾರ್ಪಾಡುಗೊಳ್ಳದಿದ್ದರೆ, ” ಅ” ಎನ್ನುವುದು ನಿಜವಾಗಿಯೂ ಅಸ್ತಿತ್ವದಲ್ಲಿ ಇಲ್ಲ ಅಂತಲೇ ಅರ್ಥ!
ಇಂತಹ ಚೆಚ್ಚರಿಕೆಗಳು (subtleties) ತುಂಬಿದ ಮಾತುಗಳು ತಿರುಳಿಲ್ಲದ್ದು ಎಂದು ಅನಿಸಬಹುದು. ಹಲವು ವಲಯಗಳಲ್ಲಿ, “ಅ” “ಅ” ಗೆ ಸಾಟಿಯಾಗಿದೆ ಎಂಬ ತೀರ್ಮೆಯ ಬಳಕೆ ಮುಖ್ಯವಾದುದ್ದೇ. ಆದರೆ, ಈ ತೀರ್ಮೆಯು, ನಮ್ಮ ಎಲ್ಲಾ ತಿಳಿವುಗಳಿಂದ ಜಾರಿಕೊಳ್ಳುವ ಅಗಲು ಬಾಗಿಲಾದಶ್ಟೇ (departure door), ನಮ್ಮ ಎಲ್ಲಾ ತಪ್ಪು ತಿಳಿವಳಿಕೆಗಳಿಂದ ಹೊರಾಸಾರುವ ಅಗಲು ಬಾಗಿಲೂ ಆಗಿದೆ! ಕೆಲವೇ ಕೆಲವು ಎಲ್ಲೆಗಳ ಇತಿಮತಿಯಲ್ಲಶ್ಟೇ, “ಅ” “ಅ” ಗೆ ಸರಿಸಮಾನವಾಗಿದೆ ಎಂಬ ಮಾತನ್ನು ಗಟ್ಟಿದನಿಯಲ್ಲಿ ಬಳಸಬಹುದು. ಅದು ಯಾವಾಗೆಂದರೆ, “ಅ”ದರ ಅಳವಿಯಲ್ಲಾಗುವ (quantity) ಮಾರ್ಪಾಡನ್ನು ಕಡೆಗಣಿಸಿದಾಗ (ಇಲ್ಲ, ಕಡೆಗಣಿಸುವಶ್ಟು ಕಿರುದಾದಾಗ). ಎತ್ತುಗೆಗೆ, ಒಂದು ಕೇಜಿ ಸಕ್ಕೆರೆಯನ್ನು ಒಬ್ಬ ಕೊಳ್ಳುಗ ಮತ್ತು ಮಾರುಗ ನೋಡುವ ಬಗೆ ಒಂದೇ ಆಗಿರುತ್ತದೆ. ಅವರಿಬ್ಬರಿಗೂ, ಒಂದು ಕೇಜಿ ಸಕ್ಕರೆ ” ಒಂದೇ” ತೆರನಾಗಿ ಕಂಡುಬರುತ್ತದೆ.
ಆದರೆ, ಆ ಅಳವಿಯಲ್ಲಿನ ಮಾರ್ಪಾಡು ಎಲ್ಲೆ ಮೀರಿದರೆ, ಅದು ಪರಿಚೆಯ (qualitative) ಮಾರ್ಪಾಡಿಗೆ ಎಡೆಮಾಡಿಕೊಡುತ್ತದೆ. ಎತ್ತುಗೆಗೆ, ಅದೇ ಒಂದು ಕೇಜಿ ಸಕ್ಕರೆಯನ್ನ ನೀರಿನಲ್ಲಿ ಬೆರೆಸಿದರೆ, ತನ್ನ ಹಳೆಯ ಪರಿಚೆಯನ್ನ ಅದು ಕಳೆದುಕೊಂಡು, ಹೊಸ ಪರಿಚೆಯ ರೂಪನ್ನು ಪಡೆದುಕೊಳ್ಳುತ್ತದೆ. ಯಾವ ಕುತ್ತದ ಎಡೆಯಲ್ಲಿ (critical point), ಅಳವಿಯ ಮಾರ್ಪಾಡು ಪರಿಚೆಯ ಮಾರ್ಪಾಡಾಗಿ ಹೊರಳುತ್ತದೆ ಎಂದು ಅರಸುವುದು, ಕೂಡಣದರಿಮೆಯನ್ನೂ (sociology) ಒಳಗೊಂಡಂತೆ, ಹಲವು ಅರಿಮೆಗಳ ಮುಖ್ಯ ಹುಡುಕಾಟಗಳಲ್ಲೊಂದು.
ಕಯ್ಗಾರಿಕೆಯಲ್ಲಿ ಕೆಲಸ ಮಾಡುವ ಗೆಯ್ಯಾಳುಗಳಿಗೆ, ಈ ಅಳವಿಯ ಮತ್ತು ಪರಿಚೆಯ ಮಾರ್ಪಾಡುಗಳು ಚೆನ್ನಾಗಿ ಗೊತ್ತು. ಒಂದೇ ಬಗೆಯ ಎರಡು ಮುಟ್ಟು/ಸಲಕರಣೆಗಳನ್ನ ಮಾಡುವಾಗ, “ತಾಳಿಕೆ” (tolerance) ಎಂಬ ಕುರಿಪನ್ನು ಅವರು ಗಮನದಲ್ಲಿರಿಸಿಯೇ ಕೆಲಸಮಾಡುವರು. ಮಾಡಿದ ಎರಡು ಮುಟ್ಟುಗಳು, ಆ ತಾಳಿಕೆಯ ಎಲ್ಲೆಯನ್ನು ಮೀರದಂತಿದ್ದರೆ, ಅವೆರಡೂ ಒಂದೇ ರೂಪಿನದು ಎಂದೋ, ಒಂದೇ ತೂಕದ್ದು ಎಂದೋ ಹೇಳಬಹುದು. ಒಂದು ವೇಳೆ, ಆ ತಾಳಿಕೆಯನ್ನ ಮೀರಿ ಮತ್ತೊಂದು ಮುಟ್ಟನ್ನ ಉಂಟುಮಾಡಿದರೆ, ಆ ಮುಟ್ಟನ್ನ ಎಸೆಯಬೇಕಾಗುತ್ತದೆ. ಏಕೆಂದರೆ, ಈಗ ಅದರ ಅಳವಿಯೊಂದೇ ಅಲ್ಲ, ಪರಿಚೆಯೇ ಬದಲಾಗಿದೆ!
ಹಲವು ಚಳಕಗಳನ್ನೊಳಗೊಂಡ (techniques) ನಮ್ಮ ಸಾಮಾನ್ಯ ಪಳಗಿಕೆಯ ಒಂದು ಕಿರುಭಾಗವೇ ಅರಿಮೆಯ ಓರಿಕೆ (scientific thinking). ಅದರಿಂದ ಮೂಡಿದ ಕುರಿಪುಗಳಿಗೂ (concepts) ಒಂದು ತಾಳಿಕೆಯೆಂಬುದು ಇರುತ್ತದೆ. “ಅ” ಗೆ “ಅ” ಸಮನಾದುದು ಎಂಬುದನ್ನ ನಾವು, ವಾಡಿಕೆಯ ತೀರ್ಮೆಯಿಂದಶ್ಟೇ ನೋಡದೆ, ಎಲ್ಲವೂ ಮಾರ್ಪಡುತ್ತಲೇ ಇರುತ್ತದೆ ಎಂಬ ಇರ್ವರಸೆಯ (dialectic) ತೀರ್ಮೆಯಿಂದಲೂ ನೋಡಬೇಕಾಗುತ್ತದೆ. ನಮ್ಮ ಸಾಮಾನ್ಯ ಅರಿವು, ಈ ಇರ್ವರಸೆಯ ತಾಳಿಕೆ ಮತ್ತು ಅದನ್ನು ಮೀರುವ ಪ್ರಕ್ರಿಯ ತಿಳಿವನ್ನು ಒಳಗೊಂಡಿರಬೇಕು.
ವಾಡಿಕೆಯ ಮನಸ್ಸೊಂದು, ನೈತಿಕತೆ, ಬಂಡವಾಳ, ಬಿಡುಗಡೆ, ಗೆಯ್ಯಾಳ್ಗಳ ಆಳ್ವಿಕೆ; ಹೀಗೆ ಎಲ್ಲವನ್ನೂ “ಜಡ” ವಾಗಿ ಕಾಣುತ್ತದೆ. ಬಂಡವಾಳಶಾಹಿ ಬಂಡವಾಳಶಾಹಿಗೆ ಸಾಟಿಯೆಂದೋ, ನೈತಿಕತೆ ನೈತಿಕತೆಗೆ ಸಾಟಿಯೆಂದೋ ಹಲಬುತ್ತದೆ. ಆದರೆ, ಇರ್ವರಸೆಯ ಮನಸ್ಸು, ಎಲ್ಲಾ ವಸ್ತು ಮತ್ತು ಆಗುಹಗಳನ್ನ ಜಡವಾಗಿ ನೋಡದೆ, ಯಾವತ್ತೂ ಮಾರ್ಪಾಡುಗಳಿಗೆ ಒಳಪಡುವವು ಎಂದು ಕಾಣುತ್ತದೆ. ಅಲ್ಲದೆ, “ಅ” “ಅ” ಗೆ ಸಾಟಿ ಎಂಬುದನ್ನು ಕೊನೆಗಾಣಿಸುವ ಎಲ್ಲೆಯನ್ನು ಮತ್ತು, ಆ ಎಲ್ಲೆಗೆ ತಲುಪಲು ದೂಸರು/ಕಾರಣವಾದ ಸರಕಿನ ಗೊತ್ತುಪಾಡನ್ನು (material conditions) ಆ ಮನಸ್ಸು ಗುರುತಿಸುತ್ತದೆ.
ವಾಡಿಕೆಯ ಮನಸ್ಸಿನ ಕೊರತೆಯೇನೆಂದರೆ, ಯಾವತ್ತೂ ಸಾಗಾಟದಲ್ಲಿ ತೊಡಗಿರುವ ಜಗತ್ತನ್ನು ಅದು, ನಿಂತ ನೀರಿನಂತೆ ನೋಡಬಯಸುವುದು. ಇರ್ವರಸೆಯ ಓರಿಕೆಯು, ಈಗಾಗಲೇ ಮೂಡಿರುವ ಕುರಿಪುಗಳಿಗೆ, ತನ್ನ ಕೂರರಕೆಯಿಂದ, ನವಿರು ಗ್ರಹಿಕೆಯಿಂದ, ನಿರಂತರ ತಿದ್ದುಪಡಿಗಳಿಂದ, ಹೊಸ ತಿರುಳನ್ನು, ಹೊಂದಿಕೊಳ್ಳುವ (flexibility) ಅಳವನ್ನು ತುಂಬುತ್ತದೆ. ಎಶ್ಟರಮಟ್ಟಿಗೆ ಎಂದರೆ, ನಾವು ಪಡೆದ ಅರಿವು, ನಮ್ಮ ಸುತ್ತಣದ ನೈಜ್ಯತೆಗೆ ತುಂಬ ಹತ್ತಿರವಾಗುವಶ್ಟು. ಇರ್ವರಸೆಯ ಬಗೆ, ಯಾವತ್ತಿನ ಬಂಡವಾಳಶಾಹಿಯ ಕುರಿತು ಮಾತನಾಡುವುದಿಲ್ಲ. ಮಾರ್, ಆ ಹೊತ್ತಿನ ಆ ನಿರ್ದಿಷ್ಟ ಹಂತದ ಬಂಡವಾಳಶಾಹಿಯ ಬಗ್ಗೆಯಶ್ಟೇ ಮಾತನಾಡುತ್ತದೆ. ಯಾವತ್ತಿನ ಗೆಯ್ಯಾಳ್ಗಳ ಆಳ್ವಿಕೆಯ ಕುರಿತು ಮಾತನಾಡದೆ, ವಸಾಹತುಶಾಹಿ ನಾಡುಗಳಿಂದ ಸುತ್ತುವರೆದ, ಒಂದು ಹಿಂದುಳಿದ ನಾಡಿನ ಗೆಯ್ಯಾಳ್ಗಳ ಆಳ್ವಿಕೆಯ ಕುರಿತು ಮಾತನಾಡುತ್ತದೆ (ಇಲ್ಲಿ, ಆಗಿನ ರಶ್ಯನ್ ಗೊತ್ತುಪಾಡಿನ ಬಗ್ಗೆ ಟ್ರಾಟ್ಸ್ಕಿ ಮಾತನಾಡುತ್ತಿದ್ದಾನೆ).
ಇರ್ವರಸೆ ತೀರ್ಮೆಗೂ, ವಾಡಿಕೆಯ ತೀರ್ಮೆಗೂ ಇರುವ ನಂಟನ್ನು ನಾವು, ನೆಲೆಗೊಂಡ ಚಿತ್ರಕ್ಕೂ ಚಲನಚಿತ್ರಕ್ಕೂ ಇರುವ ನಂಟಿನೊಂದಿಗೆ ಹೋಲಿಸಬಹುದು. ಚಲನಚಿತ್ರ ಇಲ್ಲ ಓಡುತಿಟ್ಟ, ನೆಲೆಗೊಂಡ ಚಿತ್ರವನ್ನ ಅಲ್ಲಗಳೆಯುವುದಿಲ್ಲ. ಮಾರ್, ಅಂತಹಾ ನೆಲೆಗೊಂಡ ಹಲವಾರು ಚಿತ್ರಗಳನ್ನು ಒಂದು ಸಾಗಾಟದ ಕ್ರಮ/ಕಟ್ಟಳೆಯಲ್ಲಿ ಓಡಿಸಿ, ಹೊಸ ಅನುಭವವನ್ನ ಮೂಡಿಸುತ್ತದೆ. ಅಂತೆಯೇ, ಇರ್ವರಸೆಯು “ಸಿಲ್ಲೋಜಿಸಮ್” ಅನ್ನು ಅಲ್ಲಗಳೆಯದೆ, ಹಲವು ಸಿಲ್ಲೋಜಿಸಮ್ಗಳನ್ನ ಒಂದು ಪಾಂಗಿನಲ್ಲಿ ಜೋಡಿಸಿ ನೋಡಿ, ಯಾವತ್ತೂ ಮಾರ್ಪಡುವ ನಮ್ಮ ಜಗತ್ತಿನ ದಿಟವನ್ನು ತೆರೆದಿಡುತ್ತದೆ. ಹೆಗೆಲ್ ತನ್ನ “ಲಾಜಿಕ್” ಪುಸ್ತಕದಲ್ಲಿ, ಅಳವಿಯಿಂದ ಪರಿಚೆಯೆಡೆಗಿನ ಮಾರ್ಪಾಡು, ತನ್ನೆದುರ್ತನಗಳಿಂದ ಏಳಿಗೆ (development through contradictions), ಮಾರ್ಪಡಿಕೆಗಳಲ್ಲಿನ ಎಡರು ತೊಡರುಗಳು, ಹೀಗೆ ಮುಂತಾದ ಕಟ್ಟಲೆಗಳ ಬಗ್ಗೆ ಮಾತನಾಡಿದ್ದಾನೆ. ಇವೆಲ್ಲವೂ, ಗೆತ್ತ ಓರಿಕೆಯನ್ನು (theoretical thought) ಒಟ್ಟಾರೆಯಾಗಿ ರೂಪಿಸಲು ಪೂರಕವಾಗಿವೆ.
ಪದನೆರಕೆ :
ಕುರಿಪು – ವಿಷಯ
ಓರಿಕೆ – ಯೋಚನೆ
ಬರಿಗೆ – ಅಕ್ಷರ
ಬೇರ್ಮೆ – ವ್ಯತ್ಯಾಸ
ಎತ್ತುಗೆ – ಉದಾಹರಣೆ
ಒಟ್ಟಲು – group, mass
ಗೆಯ್ಮೆ – ಕೆಲಸ
ಅಳವು – ಶಕ್ತಿ, ಸಾಮರ್ಥ್ಯ
ಪರಿಚೆ – quality , ಗುಣ
ತನ್ನೆದುರ್ತನ – contradiction
ಗೆತ್ತ – theoretical
ದೂಸರು – ಕಾರಣ
ಉನ್ನಿಕೆ – ಕಲ್ಪನೆ
ಆಳ್ಕುಡಿ – ಮನುಜಕುಡಿ/ಮಾನವಜನಾಂಗ
ಒಣರ್ಕೆ – ಭಾವನೆ
ನಿರಿಗೊಳಿಸು – ಬೇರೆಬೇರೆಯಾಗಿ ಇರಿಸು, classify
ಓದಿದ್ದು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ . ಒಂದೆರಡು ವರ್ಷ MNC ಗಳಲ್ಲಿ ವೃತ್ತಿ. ಈಗ ಅದೆಲ್ಲ ಬಿಟ್ಟು ಮಕ್ಕಳಿಗೆ ಫಿಸಿಕ್ಸ್ ಗಣಿತ ಹೇಳ್ಕೊಡ್ತಾರೆ. ಪ್ರಸ್ತುತ ಬೆಂಗಳೂರಲ್ಲಿ ವಾಸ.
ಒಳ್ಳೆಯ ಪ್ರಯತ್ನ. ಪ್ರಾರಂಭದ ಓದು ಕಷ್ಟವೆನಿಸುತ್ತಿದೆ. ಆದರೂ ಪ್ರಯತ್ತಿಸುವೆ.
I DIDN’T UNDERSTAND ANYTHING. G T NARAYANRAO IS ONE BEST EXAMPLE FOR HOW TO WRITE SCIENCE IN KANNADA. SCIENCE IS ALREADY QUITE DIFFICULT TO UNDERSTAND. LANGUAGE LIKE THIS DOING MORE COMPLICATIONS.
ಇರುವ ಕನ್ನಡವನ್ನೇ ಉಳಿಸಿಕೊಳ್ಳಲಾಗದ ಈ ಹೊತ್ತಿನಲ್ಲಿ ಈ ಕನ್ನಡ ಮೂಲಭೂತವಾದಿಗಳು ಬರೆಯುವುದಾದರೂ ಯಾಕೆ? ಈಗಾಗಲೇ ಯಾರು ಓದದೆ ಕತ್ತಲಲ್ಲಿ ಕೊಳೆಯುತ್ತಿರುವ ಪಟ್ಟಿಗೆ ಇನ್ನಷ್ಟು ತುಂಬಿಸಲೆ? ಕನ್ನಡಕ್ಕೆ ಹೊಸ ಪದಗಳ ಹರಿವನ್ನು ಸಹಿಸದ ಇಂತಹ ಜನರಿಂದಲೇ ಕನ್ನಡದಲ್ಲಿ ಕ್ಲಿಷ್ಟಕರ ವಿಷಯಗಳನ್ನು ಹೇಳಿದರೆ ಅರ್ಥವಾಗುವುದಿಲ್ಲ ಎಂಬ ಭಾವನೆ ಬೆಳದುಬಂದಿದೆ. ಕೆಲವು ವಿಷಯಗಳೇ ಕ್ಲಿಷ್ಟಕರವಾಗಿರುತ್ತದೆ, ಅದರ ಜೊತೆಗೆ ಭಾಷೆಯೂ ಈ ರೀತಿಯಾಗಿದ್ದರೆ ಕನ್ನಡದ ಕಡೆ ಯಾರೂ ತಲೆಯಿಟ್ಟು ಮಲಗುವುದಿಲ್ಲ.