-೧೦-
ನಿಮಗೆ ಸ್ಪಟಿಕಮಹಲಲ್ಲಿ ಬಹಳ ನಂಬಿಕೆ, ಏಕೆಂದರೆ ಅದು ಅಮರ್ತ್ಯ. ಹೌದಪ್ಪ ಹೌದೂ, ಇದನ್ನು ಸ್ಪಟಿಕದಲ್ಲೇ ಕಟ್ಟಿದ್ದಾರೆ; ಇದು ಅಮರ್ತ್ಯ; ಇದನ್ನು ನೋಡಿ ಕದ್ದು ನಾಲಗೆ ಚಾಚಿ ಅಣಕಿಸುವುದು ಮೂಗು ಸಿಂಡರಿಸುವುದು ಇದೆಲ್ಲಾ ಆಗಿಹೋಗುವ ಮಾತುಗಳೇ ಅಲ್ಲ; ಅದೂ ರಹಸ್ಯವಾಗಿಯೂ ಈ ಮಹಲನ್ನು ಆಡಿಕೊಂಡು ಬಿದ್ದು ಬಿದ್ದು ನಗುವುದೂ ಸಾಧ್ಯವಿಲ್ಲ… ಹಾಗಾಗಿಯೇ ನನಗೆ ಈ ಮಹಾ ಮಹಲೆಂದರೆ ತುಂಬಾ ತುಂಬಾ ಭೀತಿ.
ನೋಡಿ… ಈಗ ಆ ಸ್ಫಟಿಕಮಹಲಿನ ಬದಲು ಅಲ್ಲೊಂದು ಕೋಳಿಮನೆ ಇತ್ತೆಂದೇ ಇಟ್ಟುಕೊಳ್ಳಿ; ಜೋರಾಗಿ ಮಳೆ ಬಂತಪ್ಪ; ಒದ್ದೆಯಾಗೋದೇ ಬೇಡ ಅಂತ ನಾನು ಆ ಗುಡಿಸೊಳಗೆ ನುಸಿಳಿರಬಹುದು. ಆದರೆ, ನನಗೆ ಉಳಿಯಲು ಜಾಗ ಕೊಟ್ಟ ಈ ಕೋಳಿ ಮನೆಯನ್ನೇ ಅಂಧವಿಶ್ವಾಸದಲ್ಲಿ ನಾನು ಮಹಾಮಹಲೆಂದು ಎಂದಿಗೂ ಕಲ್ಪಿಸಿಕೊಳ್ಳುವುದಿಲ್ಲ. ನೀವು ಮತ್ತೆ ನಕ್ಕಿರಿ, ಆಮೇಲೆ ಏನೋ ಅಂದಿರಿ, ಏನು…? ಆ ವಾದಕ್ಕೆ ಕಟ್ಟು ಬಿದ್ದು ನೋಡಿದರೆ, ಕೋಳಿಮನೆಗೂ, ಭವ್ಯ ಬಂಗಲೆಗಳಿಗೂ ಏನೂ ವ್ಯತ್ಯಾಸವಿರುವುದೇ ಇಲ್ಲ ಅಂತ ಏನೋ ಹೇಳಿದಿರಾ? ಹೌದ್-ಹೌದು… ಒಂದು ಪಕ್ಷ ಬದುಕಿನ ಅರ್ಥ ಇರುವುದು ಒದ್ದೆಯಾಗದೆ ಇರುವುದರಲ್ಲೇ ಎಂದಾದರೆ ನಿಮ್ಮ ಮಾತನ್ನು ನಾನು ಯಾವ ಕ್ಯಾತೆ ತೆಗೆಯದೆ ಒಪ್ಪುತ್ತೇನೆ ಗುರುಗಳೇ.
ಆದರೆ ನಾನೇದರೂ ಅದೊಂದೇ ಬದುಕಿನ ಅಂತಿಮ ಗುರಿ ಎಂಬ ನಿಮ್ಮ ನಂಬಿಕೆಯಲ್ಲಿ ಮನಸ್ಸಿಡದೆ, ಬದುಕಿದ್ರೆ ಮಹಾ ಮಹಲಲ್ಲೇ ಬದ್ಕ್ ಬೇಕು ಅಂತ ಹಠ ಹಿಡಿದರೆ… ಅದೇ ನನ್ನ ಇಚ್ಛೆ, ಆಸೆ. ಗುರಿ ಎಲ್ಲ; ಈ ಲಕ್ಷ್ಯವನ್ನು ನನ್ನಿಂದ ನೀವು ಕಿತ್ತು ಹಾಕುವುದು, ನನ್ನ ಇಚ್ಛೆಯನ್ನು ನೀವು ಬದಲಿಸಿದಾಗ ಮಾತ್ರ. ಸರಿ, ಇನ್ನೊಂದನ್ನೇನಾದರೂ ನಾನು ಮೆಚ್ಚುವಂತೆ ಮಾಡಿ… ಬೇರೊಂದು ಐಡಿಯಲಿಸಮ್ಮನ್ನು ನನಗೆ ಹುಡುಕಿ ಕೊಡಿ. ಹಾಗಂತ ನಾನು ಮಾತ್ರ ಕೋಳಿಮನೆಯೇ ಮಹಾಮಹಲೆಂಬ ಭ್ರಮೆಗೆ ಬೀಳುವುದೇ ಇಲ್ಲ. ನಾನು ಇಛ್ಚಿಸಿದ ಸ್ಫಟಿಕಮಹಲು ನನ್ನ ಪೆದ್ದು ಕನವರಿಕೆಗಳ ತುಂಡೋ, ನೈಸರ್ಗಿಕ ವಿಧಿಗಳಿಗೆ ವಿಮುಖವಾಗಿ ಅರಳಿರುವ ಅಸಂಗತವೋ, ನನ್ನ ಪೀಳಿಗೆಯ ಪ್ರಾಚೀನ ಅವಿವೇಕಿ ಚಟಗಳಿಂದ ಹುಟ್ಟಿದ ಕಲ್ಪನೆಯೋ… ಅದೇನೋ. ಆದರೆ ಅದು ಅಸ್ತಿತ್ವದಲ್ಲಿಯೇ ಇರಲೇ ಕೂಡದು ಎಂದು ಎಲ್ಲ ಬೊಂಬ್ಡ ಬಜಾಯಿಸಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಏಕೆಂದರೆ ಅದು ಇರುವುದು ನನ್ನ ಇಚ್ಛೆಯಲ್ಲಿ… ಅಥವಾ ನನ್ನ ಇಚ್ಛೆ ಇರುವ ತನಕವೂ ಅದೂ ಇರುತ್ತದೆ. ಮತ್ತೆ ನಕ್ಕಿರಿ ನೀವು; ಆಯಿತು, ಸಂತೋಷ, ನಗಿ…ನಗಿ… ನಿಮ್ಮೆಲ್ಲಾ ವ್ಯಂಗ್ಯ, ಚುಚ್ಚುಮಾತುಗಳು, ಕುಹಕ, ಕುಟುಕು ಎಲ್ಲ ಬರಲಿ ನನ್ನತ್ತ. ನೀವೇನೇ ಕಟ್ಟಿರುವೆ ಬಿಟ್ಟುಕೊಂಡು ಕೂಗಾಡಿದರೂ, ಹಸಿದಿರುವಾಗ ನನಗೆ ತೃಪ್ತಿಯಾಯಿತು ಎಂದು ಸುಳ್ಳಾಡುವುದಿಲ್ಲ ನಾನು; ಈ ಮರುಕಳಿಸುವ ಸೊನ್ನೆಯ ಅಸ್ತಿತ್ವ ನೈಸರ್ಗಿಕ ವಿಧಿಗಳಿಗೆ ಅನುಸಾರವಾಗಿದೆ ಅಂತಲೋ, ಅಥವಾ ಅದೇ ವಾಸ್ತವಾಂಶ ಅಂತಲೋ, ನಾನು ಅದರ ಜತೆಯೂ ಯಾವ ಒಪ್ಪಂದಕ್ಕೂ ರಾಜಿಯಾಗುವುದಿಲ್ಲ. ಮೂಡಾ ಸೈಟಲ್ಲಿ ಕಟ್ಟಿದ ಮನೆಯನ್ನು, ಸಾವಿರ ವರುಷ ಭೋಗ್ಯಕ್ಕೆ ಹಾಕಿ, ಬಹುಶಃ ಅದರ ಬಾಗಿಲಿನ ಮೇಲೇ ಡೆಂಟಿಶ್ಟ್ ಅನ್ನೋ ಬೋರ್ಡ್ ನೇತು ಹಾಕಿ, ಅದರ ಕೀಲಿಯನ್ನು ನನ್ನ ಕಡೆ ಬಿಸಾಡಿ, ‘ನಿನ್ನ ಎಲ್ಲಾ ಆಸೆಗಳ ಕಿರೀಟವಿದು…’ ಎಂದು ನೀವು ಹೇಳಿದರೆ ನಾನು ನೀವಿತ್ತ ಕೊಡುಗೆಯನ್ನು ಎಡಗಾಲಲ್ಲಿ ಒದೆಯುವೆ.
ನನ್ನ ಇಚ್ಛೆಗಳನ್ನೆಲ್ಲಾ ಉರಿಸಿ ಬಿಡಿ; ನನ್ನ ಆದರ್ಶಗಳನ್ನೆಲ್ಲ ಅಳಿಸಿ ಬಿಡಿ; ಅವೆಲ್ಲಕ್ಕಿಂತಲೂ ಇನ್ನೂ ಅದ್ಭುತವಾಗಿರುವಂತದ್ದು ಏನಾದರೂ ಇದ್ದರೆ ನನಗೆ ಹೇಳಿ; ಆಗ ಬೇಕಾದರೆ ನಾನು ನಿಮ್ಮನ್ನು ಹಿಂಬಾಲಿಸುವೆ. ಬಹುಶಃ ಈಗ ನೀವನ್ನುವಿರಿ, “ನಿನ್ನ ಜತೆ ಭಾಗಿಯಾಗುವುದು, ತೀರ ಅರ್ಥಹೀನ” ಹಾಗಿದ್ದರೆ ನನಗೂ ಹಾಗೇ ಎದುರುತ್ತರ ಕೊಡಲು ಬರುತ್ತದೆ ಗುರುಗಳೇ. ಇದೊಂದು ಬಹು ಗಾಢ, ಗಂಭೀರ ಚರ್ಚೆ, ನಿಮಗೆ ನನ್ನ ಕಡೆ ಗಮನ ಹರಿಸುವುದು ಬೇಕಿಲ್ಲದ್ದಿದ್ದರೆ, ಕುದುರೆ ಬಾಲ; ನಾನೇನು ಬನ್ನಿ ಮಾತಾಡೀ, ಚರ್ಚೆ ಮಾಡಿ ಅಂತ ಬೇಡುವುದಿಲ್ಲ ನಿಮ್ಮನ್ನು. ಅವಕ್ಕೆಲ್ಲ ನನ್ನ ಬಿಲದಲ್ಲಿ ಜಾಗವಿದೆ ನನಗೆ.
ಆದರೆ ನಾನು ಇನ್ನೂ ಜೀವಂತವಿರುವಾಗ, ಒಳಗೆ ಆಸೆಯ ಖೋಡಿ ಹರಿಯುವಾಗ ಆ ವಠಾರದಲ್ಲಿರುವ ಮನೆಗಳಿಗೆ ಇಟ್ಟಿಗೆ ಹೊರುವ ಪ್ರಸಂಗ ಏನಾದರೂ ಬಂದರೆ ನನ್ನ ಕೈಗಳನ್ನೇ ತರಿದುಕೊಳ್ಳುವೆ. ಈ ನಾಲಗೆಯನ್ನು ಹೊರಹಾಕಿ ನಿಮ್ಮ ಸ್ಫಟಿಕಮಹಲನ್ನು ಅಣಕಿಸಲಾಗುವುದಿಲ್ಲ ಎಂಬ ಕ್ಷುಧ್ರ ಕಾರಣಕ್ಕೆ ಮೊನ್ನೆಯಷ್ಟೇ ಅದನ್ನು ತಿರಸ್ಕರಿಸಿದೆ ಎಂಬ ವಿಷಯವನ್ನು ಮತ್ತೆಮತ್ತೆ ಹೇಳ ಬೇಡಿ. ಆದರೂ ನಾಲಗೆಯ ಚಾಚಿ ಪ್ರದರ್ಶಿಸುವುದು ನನಗೆ ಬಹಳ ಇಷ್ಟ, ಎಂಬ ಕಾರಣಕ್ಕಾಗಿ ಈ ಮಾತು ಹೇಳುತ್ತಿಲ್ಲ… ಆ ಮಾತು ಹಾಗಿರಲಿ ಈಗ ಈ ಕ್ರಿಶ್ಟಲ್ ಪ್ಯಾಲೇಸು ಅಂದ್ರೆ ಏನಪ್ಪಾ? ಎಲ್ಲವೂ ಚೂರೂ ತಪ್ಪಿಲ್ಲದೆ ನಿಮ್ಮ-ನಿಮ್ಮ ಯುಟಿಲಿಟೇರಿಯನ್ನ್ ಮನಃಸ್ಥಿತಿಗೆ ಹೊಂದಿಕೊಂಡು, ದೇಶವನ್ನು ಬೆಳೆಸುವ, ಸ್ಪಟಿಕದಷ್ಟು ಸ್ಪಷ್ಟವಾಗಿರುವ ಮಾಡ್ರನ್ನ್ ಡೆವಲಪ್ಪ್ಮೆಂಟಿನ ಘಾಟು ಹೊಡೆಯುವ ಅತಿ ದೊಡ್ಡ ಅರಮನೆ- ಆಧುನಿಕ ಜಗತ್ತಿನಲ್ಲಿ ಕ್ರಾಂತಿಕಾರಿ ಬೆಳವಣಿಗೆಯ ಮಹಾ ಪ್ರತೀಕ… ಮಹಾ ಗಗನಚುಂಬಿ ಕಟ್ಟಡಗಳ ಹಾಗೆ! ಅಂದರೆ ರೀಸನಬಲ್ಲಿಗೆ ಹುಟ್ಟಿರುವ ಇನ್ನೊಂದು ಪ್ರತಿಮೆ. ಎಲ್ಲವೂ ಹೀಗೆ ರೀಸನಬಲ್ಲಾದರೇ, ನನ್ನ ಐಲುಗಳಿಗೇ ಅರ್ಥವೇ ಇರುವುದಿಲ್ಲ… ಧರ್ಮ, ನಂಬಿಕೆಗಳು ಸರ್ವೂಥೋಮುಖವಾಗಿ ರೀಸನಬಲ್ಲಿನ ಜತೆ ಕಚ್ಚೆ ಕಟ್ಟಿ ನಿಂತರೆ, ಬೇಡ-ಬೇಡವೆಂದರೂ ವ್ಯಂಗ್ಯವಾಡ ಬಯಸುವ ನನ್ನ ಐಲುಪೈಲು ಬುದ್ಧಿಯ ಕಥೆ ಏನಾಗಬೇಡ ಸ್ವಾಮೀ! ಈ ಐಲುಗಳೆಂದರೆ ಆಗದು ನನಗೆ… ಆದರೆ ರೀಸನಬಲ್ಲಾಗಿ ಒಳ್ಳೆ ಗರುಡಗಂಬದ ಹಾಗೇ ನಿಮ್ಮ ಏರ್ ಕಂಡಿಷನಡ್ ಕ್ರಿಶ್ಟಲ್ ಪ್ಯಾಲೇಸಿನಲ್ಲಿ ಉಳಿಯಲು ನನಗೆ ಚೂರೂ ಇಷ್ಟವಿಲ್ಲ.
ನಿಮ್ಮ ಅಷ್ಟು ಕಟ್ಟಡಗಳ ಜೊಂಪೆಯಲ್ಲಿ, ಒಂದೇ ಒಂದು ಮನೆಯೂ ನನ್ನ ಚಾಚಿದ ನಾಲಗೆಯ ಅಣಕದಿಂದ ತಪ್ಪಿಸಕೊಳ್ಳಲಾಗಲಿಲ್ಲ ಎಂದೇ ನನಗೆ ಕೋಪ ಬಂತೇನೋ! ಒಂದು ಪಕ್ಷ ಎಲ್ಲಾ ಲೋಪಗಳು ಮಾಯವಾಗಿ, ಒಂದಾನೊಂದು ದಿನ ನಾಲಗೆ ಚಾಚಿ ವ್ಯಂಗ್ಯವಾಡುವ ಆ ಐಲೇ ನನ್ನಲ್ಲಿ ಮಾಯವಾದರೆ ಕೇವಲ ಆ ಮಹಾ ಒಳ್ಳೆಯ ದಿನಗಳ ಸ್ಮರಣೆಗೆಂದೇ, ಅಣಕವಾಡಲು ಹಠ ಮಾಡುವ ನನ್ನ ನಾಲಗೆಯನ್ನು ಹರಿದು ಹಾಕುತ್ತೇನೆ; ಆದರೆ ಲೋಪದೋಷಗಳು ಹುಚ್ಚಾಪಟ್ಟೆಯಾಗಿರುವಾಗ ಯಾರೂ ಹೆಚ್ಚು ಹೆಚ್ಚು ಹುಚ್ಚು ಪ್ರಶ್ನೆಗಳನ್ನು ಎತ್ತದೆ, ವ್ಯಂಗ್ಯ-ಟೀಕೆ ಮಾಡದೆ, ನಿಮ್ಮ ತರ್ಕವನ್ನು ಪವಿತ್ರ ತೀರ್ಥವೆಂದು ಸೇವಿಸಿ, ನನ್ನ ಐಲು, ತೀಟೆ, ಖಯಾಲಿಗಳನ್ನು ಅಸ್ಪರ್ಶ್ಯರೆನ್ನದೇ, ಅವನ್ನೆಲ್ಲ ಬಾಚಿ ತಬ್ಬುವ ನನ್ನ ಕನಸಿನ ಆ ಸ್ಪಟಿಕದ ಅರಮನೆ ಎಂದೆಂದೂ ನನಗೆ ದಕ್ಕುವುದಿಲ್ಲ, ಅದಕ್ಕೇ ಇಂತಹ ಮೂಡ ಸೈಟಿನಲ್ಲಿ ಕಟ್ಟಲಾಗಿರುವ ಹೌಸಿಂಗ್ ಬೋರ್ಡುಗಳಲ್ಲೇ ನಾನು ತೃಪ್ತಿ ಕಾಣಬೇಕು ಎಂದರೆ, ಆ ರೀತಿಯ ರೀಸನಬಲ್ಲಾಗಿರುವ ಕಾಂಪ್ರಮೈಸನು ಒಪ್ಪಲ್ಲ ನಾನು; ಮತ್ತದು ನನ್ನ ತಪ್ಪೂ ಅಲ್ಲ. ಹಾಗಾದರೆ ಯಾಕೆ ಇಂತಹ ಖಯಾಲಿಗಳು ನನ್ನಲ್ಲಿ ಸೃಷ್ಠಿಯಾಗಿವೆ? ಹೀಗೆ ನಾನು ತಯ್ಯಾರಾಗಿರುವುದು ನನ್ನನ್ನು ನಿರ್ಮಿಸಿರುವ ರಚನೆಯೇ ವಂಚನೆಯೆಂದು ನಿರೂಪಿಸಲೇ? ಅಷ್ಟಕ್ಕೋಸ್ಕರವೇ ಈ ದೊಂಬರಾಟಗಳು? ನನ್ನ ಐಲುಗಳೆಲ್ಲ ಮೋಸ ಎಂದು ಪತ್ತೆ ಹಚ್ಚುವುದೇ ನನ್ನ ಗುರಿಯೇ? ಇಲ್ಲ, ನನಗೆ ಹಾಗೆ ಅನ್ನಿಸುತ್ತಿಲ್ಲ.
ಧರ್ಮವೆಂದರೆ ಏನು ಹಾಗದರೆ? ನಂಬಿಕೆ ಅನ್ನೋದು ಏನು? ಕೋಳಿಮನೆಗೂ ಧರ್ಮಸೌಧಕ್ಕೂ ತುಂಬಾ ಸಾಮ್ಯತೆಗಳಿಲ್ಲವೇ? ಅಲ್ಲಿ ಒದ್ದೆಯಾಗಲ್ಲ ನಾನು ಅಂತ ಖಾತ್ರಿಯಿದೆ, ಇಲ್ಲಿಯೂ ಅಂತದೇ ಒಂದು ನಂಬಿಕೆಯಿದೆ ಆದರೆ ಅದಕ್ಕೊಂದು… ಈಗ… ಆ… ಬಿಡಿ… ಬಿಡಿ… ಏನು ಗೊತ್ತಾ…? ನನ್ನಂತಹ, ನೆಲಮಾಳಿಗೆಯೊಳಗೆ ಅಡಗುವ ಮಾನವರನ್ನು ನಿಗಾವಹಿಸಿ ಕಾಯಬೇಕು. ನಮಗೆ ಮೌನವಾಗಿ ಕುಳಿತಿರಲು ಗೊತ್ತಿದೆ ನಿಜ. ನಲವತ್ತು ವರುಷ ಕಾಯುತ್ತಾ ಈ ಕತ್ತಲೆಯಲ್ಲಿ ಭೂಗತವಾಗಿದ್ದೇವೆ ಅದೂ ಸತ್ಯವೇ. ಆದರೆ ದಿನದ ಬೆಳಕಿಗೆ ಮೈಯುಡ್ಡುತ್ತಿದ್ದಂತೆಯೇ ನಾವು ಮಹಾ ಮಾತಿನಮಲ್ಲರಾಗುತ್ತೇವೆ.
-೧೧-
ಇಷ್ಟೆಲ್ಲಾ ಆದ ಮೇಲೆ ಸಜ್ಜನರೇ: ಏನೂ ಮಾಡದೇ ಸುಮ್ಮನಿರುವುದೇ ಲೇಸು! ಅಪ್ರಜ್ಞಾಪೂರ್ವಕ ಜಡತ್ವವೇ ಎಲ್ಲದಕ್ಕಿಂತಲೂ ಲೇಸು! ಅದಕ್ಕೇ ನೆಲಮಾಳಿಗೆ ಚಿರಾಯುವಾಗಲಿ! ಆಗೊಮ್ಮೆ ಹೇಳಿದ್ದೆ, ಸಹಜಮನುಜನನ್ನು ನೋಡುತ್ತಿದ್ದ ಹಾಗೆಯೇ ನಾನು ಸೇಡಿನಲ್ಲಿ ಬೆಂದು ಹಸಿರಾಗುತ್ತೇನೆಂದು. ಆದರೂ ಆತನ ಹಾಗಿರಲು ಮಾಡಲೇಬೇಕಾದ ಕ್ರಿಯಾ-ಕರ್ಮಗಳನ್ನು ಗಮನಿಸಿದಾಗ ಅವನ ಜಾಗಕ್ಕೆ ನಾನು ಹೋಗುವ ಪರಿಸ್ಥಿತಿ ಒಕ್ಕರಿಸಿದರೆ, ಆ ಉಸಾಬರಿಯೇ ಬೇಡ ಅಂತ ಓಡಿ ಹೋಗಿ ನನ್ನ ಬಿಲ ಹೊಕ್ಕಿ ಬಿಡುತ್ತೇನೇನೊ(ಹಾಗೆಂದ ಮಾತ್ರಕ್ಕೆ ಅವನನ್ನು ನೋಡಿ ಕರುಬುವುದನ್ನೂ ಬಿಟ್ಟು ಬಿಡುವೆ ಎಂದುಕೊಳ್ಳಬೇಡಿ, ಅದು ಎಂದಿಗೂ ಆಗದ ಮಾತು). ಹಾಗೇ ನನ್ನ ಬಿಲವಾದ ಈ ನೆಲಮಾಳಿಗೆಯಲ್ಲಿ ಬಹಳ ಮಜವಿದೆ. ಕಡೇ ಪಕ್ಷ, ಅಲ್ಲಿಯಾದರೂ ಒಬ್ಬ… ಆಹ್…! ಆದರೆ ಇಲ್ಲೂ ನಾನು ಸುಳ್ಳಾಡುತ್ತಿರುವೆ. ಏಕೆಂದರೆ ನೆಲಮಾಳಿಗೆಯ ಬಿಲವಲ್ಲ ಹೆಚ್ಚು ಶ್ರೇಷ್ಠವಾದುದು, ಆದರೆ ಬೇರೇನೋ ಭಿನ್ನ… ತುಂಬಾ ವಿಭಿನ್ನವಾಗಿರುವಂತಹುದಕ್ಕೆ ನಾನು ಹಂಬಲಿಸುತ್ತಿದ್ದೇನೆ. ಅದು ಯಾವುದೋ ಕಾಣಲಾಗದ್ದು, ಹುಡುಕಲಾಗದ್ದು, ಆದರೆ ಅದೇ ಹೆಚ್ಚು ಶ್ರೇಷ್ಠವಾದುದು ಎಂಬುದನ್ನು ಎರಡೆರಡಲ ನಾಲ್ಕು ಎನ್ನುವಷ್ಟು ಕರಾರುವಕ್ಕಾಗಿ ಬಲ್ಲೆ ನಾನು! ಅದಕ್ಕಾಗಿ ಚಡಪಡಿಸುತ್ತಿದ್ದೇನೆ ಆದರೂ ಕೈಗೇ ಸಿಗುತ್ತಿಲ್ಲ ಅದು… ಈ ನೆಲಮಾಳಿಗೆಯ ಮನೆ ಹಾಳಾಗ!
ಇನ್ನೊಂದು ಹೇಳಲೇ ಬೇಕಾದ ನುಡಿಮುತ್ತು ನಿಮಗಾಗಿ… ನಾನು ಇಲ್ಲಿಯ ತನಕ ಬರೆದಿದ್ದರಲ್ಲಿ, ನನಗೇ ಅಕ್ಷರಶಃ ನಂಬಿಕೆ ಇಲ್ಲ. ಆಣೆ ಮಾಡುತ್ತೇನೆ ಗೆಳೆಯರೆ, ನನ್ನಿಂದ ಹೊರಬಂದ ಒಂದೇ ಒಂದು ಪದದಲ್ಲೂ ನನಗೆ ನಂಬಿಕೆ ಇಲ್ಲ. ಇದು ಹೇಗೆಂದರೆ, ಬಹುಶಃ ನನಗೆ ನಂಬಿಕೆ ಇದೆಯೇನೋ, ಆದರೆ ಅದೇ ಹೊತ್ತಿನಲ್ಲಿ, ಉತ್ತರ ಕುಮಾರನಂತೆ ಬೊಗಳೆ ಬಿಡುತ್ತಿರುವೆಯೇನೋ, ಎಂಬ ಗುಮಾನಿ ಬೇರೆ…
“ಹಾಗಿದ್ದರೆ ಇಷ್ಟೆಲ್ಲಾ ಬರೆದದ್ದು ಏಕೆ?” ನೀವು ಕೇಳುತ್ತಿರಿ. “ನಲ್ವತ್ತು ವರುಷ ನೆಲಮಾಳಿಗೆಯಲ್ಲಿ ನಾನು ನಿನ್ನನ್ನು ಭೂಗತವಾಗಿಸಿ, ಆಮೇಲೆ ದಶಕ-ದಶಕಗಳ ನಂತರ ಅಲ್ಲಿ ನಿನ್ನ ಗತಿಯೇನಾಗಿದೆ ಎಂದು ನೋಡಲು ಮೆಲ್ಲನೆ ನೀನಿದ್ದ ಆ ತಳದ ಬಳಿ ಬಂದರೆ ಹೇಗಿರುತ್ತದೆ? ಹೇಗೆ ಮನುಷ್ಯನೊಬ್ಬನನ್ನು ನಾಲ್ಕು ದಶಕಗಳ ಕಾಲ ನಿಶ್ಚಲನಾಗಿ ಇರಿಸುವುದು?”
ಈಗ ಮತ್ತೆ ನೀವು ಕತ್ತನೆಲ್ಲ ಗಡಿಯಾರದ ಲೋಲಕದ ಹಾಗೆ ಸಿಟ್ಟಿನಲ್ಲಿ ಅಲ್ಲಾಡಿಸುತ್ತಾ ಹೇಳುತ್ತೀರಿ, “ಬದುಕಿನ ದಾಹ ನಿನಗೆ… ಹಾಗಿದ್ದೂ ಬದುಕಿನ ಕ್ಲಿಷ್ಟ ಸಮಸ್ಯೆಗಳನ್ನು ಕೇವಲ ಒಂದು ತರ್ಕಬದ್ಧ ಗೊಂದಲದಿಂದ ನೀನು ಪರಿಹರಿಸುವೆ. ನಿನ್ನದು ಸೊಕ್ಕಿನ ನಿರಂತರ ಆಕ್ರಮಣ, ಆದರೆ ಅದೇ ಹೊತ್ತಿನಲ್ಲಿ ತೀವ್ರ ಭಯದಲ್ಲಿ ಬಳಲುತ್ತಲೂ ಇರುವ ಆಸಾಮಿ ನೀನು. ನೀನೊಬ್ಬ ಪುಕ್ಕಲ, ಅಸಂಗತ ಮಾತುಗಳಲ್ಲೇ ಉಲ್ಲಾಸ ಕಾಣುವ ದುರಹಂಕಾರಿ… ಆದರೆ ಹಾಗಿರುವುದಕ್ಕೂ ಹೆದರಿಕೆ ನಿನಗೆ. ಅದಕ್ಕೇ ಮತ್ತೆಮತ್ತೆ ತಳಮಳದಲ್ಲಿ ಕ್ಷಮೆ ಕೇಳುತ್ತಲೇ ಇದ್ದೀಯ. ನೀನೊಬ್ಬ ಯಾವುದಕ್ಕೂ ಅಂಜದ ಗಂಡು ಎಂದು ಅರುಚಿ, ಮುಂದಿನ ಕ್ಷಣದಲ್ಲೇ ನಮ್ಮನ್ನು ಮೆಚ್ಚಿಸಲು ನೆಗೆದಾಡುತ್ತೀಯ. ಹಲ್ಲನ್ನು ಕೋಪದಲ್ಲಿ ಕಡಿಯುತ್ತಿರುವೆ ಎಂದು ನೀನು ನಮಗೆ ಭರವಸೆ ಹುಟ್ಟಿಸಿ, ಮರುಘಳಿಗೆಯಲ್ಲೇ ನಮ್ಮನ್ನು ನಗಿಸಲೆಂದು ಹಾಸ್ಯಚಟಾಕಿ ಹಾರಿಸಿ, ಕೋತಿಮನುಷ್ಯನಂತೆ ಆಡುತ್ತೀಯ. ನಿನ್ನ ಜೋಕುಗಳು ಮಜ-ರುಚಿ ಇಲ್ಲದ್ದು. ಆದರೆ ಆ ತಮಾಷೆಯ, ಸಾಹಿತ್ಯ ಸತ್ವದಲ್ಲಿ ನಿನಗೇ ಅಪರಿಮಿತವಾದ ನಂಬಿಕೆ ಬೇರೆ. ನೀನು ಒಮ್ಮೊಮ್ಮೆ ನೋವಿನಲ್ಲಿ ತಲ್ಲಣಿಸಿರಬಹುದು, ಆದರೆ ಆ ವೇದನೆಗೆ ನೀನೇ ಕವಡೆಕಾಸಿನ ಬೆಲೆ ಕೊಡುತ್ತಿಲ್ಲ. ನೀನು ಪ್ರಾಮಾಣಿಕನಾಗಿರಬಹುದು, ಆದರೆ ನಿರ್ಲಜ್ಜ. ನಿನ್ನ ಈ ಪ್ರಾಮಾಣಿಕತೆಯನ್ನೂ, ನೀನು ಕಂಡುಕೊಂಡ ಸತ್ಯವನ್ನೂ, ಚಿಲ್ಲರೆ ಒಣಡೌಲಿನ ಸಿಂಗಾರದಲ್ಲಿ ತಲೆಮೇಲೆ ಹೊತ್ತು, ಸಂತೆಯಲ್ಲಿ ನಿಂತ ಬಡ ಸೂಳೆಯಂತೆ ಪ್ರದರ್ಶಿಸುತ್ತಾ ಇದ್ದೀಯ, ಅದೂ ಪ್ರಚಾರಕ್ಕಾಗಿ. ನೀನು ದಿಟವಾಗಿ ಏನನ್ನೋ ಹೇಳಲು ಇಷ್ಟಪಟ್ಟರೂ, ಭಯದಲ್ಲಿ ನಿನ್ನ ಕಟ್ಟಕಡೆಯ ಪದಗಳನ್ನು ನುಂಗುತ್ತಾ ಇದ್ದೀಯ. ನಿನಗೆ ಆ ಶಬ್ಧಗಳನ್ನು ಉಸುರಲೂ ಧಮ್ಮಿಲ್ಲ. ಹೀನ ಪುಕ್ಕಲ ಅಂದರೆ ನೀನೆ. ಈ ನಿನ್ನ ಅರಿವೇ ಶ್ರೇಷ್ಟ ಎಂಬ ದುರಂಹಕಾರದಲ್ಲಿ ಮೆರೆಯುತ್ತಾ ಇದ್ದೀಯ; ಆದರೆ ನಿನ್ನ ನಿಲುವಿನ ಬಗ್ಗೆಯೇ ನಿನಗೆ ಗುಮಾನಿ. ಬರೀ ಹಿಂದೂ-ಮುಂದೂ ನೋಡುತ್ತಾ ಒಂದೂ ನಿರ್ಧಾರಕ್ಕೆ ಬಾರದೆ ತ್ರಿಶಂಕು ಹಾಗಿರುವ ಸ್ಥಿತಿ ನಿನ್ನದು. ಏಕೆಂದರೆ ನಿನ್ನ ತಲೆ ನೆಟ್ಟಗಿದ್ದರೂ ನಿನ್ನ ಹೃದಯವು ಭ್ರಷ್ಟವಾಗಿ ಹತಾಶೆಯ ಕತ್ತಲಲ್ಲಿದೆ. ಶುದ್ಧ ಹೃದಯ ಇಲ್ಲದೆಡೆ, ಮುಕ್ತ, ಅಪ್ಪಟ ಅರಿವಿರದು. ಎಲ್ಲ ವಿಷಯಕ್ಕೂ ಮೂಗು ತೂರಿಸುವ ಅಧಿಕ ಪ್ರಸಂಗಿ ನೀನೇ. ಹೇಗೆಲ್ಲಾ ಹಠ ಮಾಡುವೆ ನೀನು…! ಹೇಗೆಲ್ಲಾ ಮುಖ ಕಿವುಚುವೆ…! ಸುಳ್ಳು, ಖೋಟ, ಬುರುಡೆ ದಾಸಯ್ಯ…”
ದೇವರಾಣೆ, ನೀವು ಹೇಳುವ ಈ ಮೇಲಿನ ಮಾತುಗಳನ್ನು ಸೃಷ್ಟಿಸಿದ್ದೂ ನಾನೇ, ಅದೂ ನೆಲಮಾಳಿಗೆಯೊಳಗಿಂದ! ಕಳೆದ ನಲವತ್ತು ವರುಷಗಳಿಂದ ನಿಮ್ಮ ಈ ಮಾತುಗಳು ನೆಲಮಾಳಿಗೆಯ ಬಿರುಕುಗಳ ಮೂಲಕ ನನ್ನ ಕಿವಿಗೆ ಕೇಳುತ್ತಲೇ ಇವೆ. ಅದಕ್ಕೇ ಇಲ್ಲಿ ಬೇರೇ ಏನನ್ನೂ ಆವಿಷ್ಕರಿಸಲಾಗದೇ ಹೋದ್ದರಿಂದ ನಿಮ್ಮ ಮಾತುಗಳನ್ನೇ ಮತ್ತೆ ಆವಿಷ್ಕರಿಸಿದೆ ಅಷ್ಟೇ. ಆ ಎಲ್ಲಾ ಶಭ್ದಗಳು ಬಾಯಿಪಾಠವಾಗಿ, ಸಾಹಿತ್ಯದ ರೂಪ ತಾಳಿರುವುದರಲ್ಲಿ ಅಚ್ಚರಿಯೇನು ಇಲ್ಲ ಬಿಡಿ.
ಆದರೆ ನೀವು, ಬರೆದದ್ದನ್ನೆಲ್ಲ ನಾನು ಅಚ್ಚು ಹಾಕಿಸಿ ಪ್ರಕಟಿಸುವೆ ಎಂದು ಕಲ್ಪಿಸಿಕೊಳ್ಳುವಷ್ಟು ಮುಗ್ಧರೇನು? ಆಮೇಲೆ ನಾನು ಸಹಿ ಮಾಡಿದ ಪ್ರತಿಯನ್ನು ನಿಮಗೆ ಓದಲು ಕೊಡುವೆ ಎಂದೇನಾದರೂ ಯೋಚಿಸಿದ್ದೀರ? ಮರೆತಿದ್ದೆ. ಇನ್ನೊಂದು ಸಮಸ್ಯೆಯಿದೆ ನನಗೆ; ನಿಮ್ಮನ್ಯಾಕೆ ನಾನು ಆಗಾಗ “ಗೆಳೆಯರೇ”, “ಸಜ್ಜನರೇ” ಅಂತಾ ಕರೆಯಬೇಕು? ನೀವೇನೋ ನಿಜಕ್ಕೂ ನನ್ನ ಓದುಗ ದೇವರುಗಳು ಎನ್ನುವಂತೆ. ನನ್ನ ವಿಚಿತ್ರ ನಿವೇದನೆಗಳೆಂಬ ಸಾಹಸವನ್ನು ನಾನು ಪಬ್ಲಿಶ್ಶೂ ಮಾಡಲ್ಲ. ಜನಗಳು ತಪ್ಪದೇ ಓದಲೆಂದು ಅಚ್ಚಾಗಿರುವ ಪುಸ್ತಕಗಳನ್ನು ಬಿಟ್ಟಿ ಹಂಚುವುದೂ ಇಲ್ಲ. ಅಷ್ಟೆಲ್ಲಾ ಆತ್ಮಶಕ್ತಿ ನನಗಿಲ್ಲ. ಮತ್ತೆ ಅಂತಹ ಶಕ್ತಿಯ ಅವಶ್ಯಕತೆಯೂ ನನಗೆ ಇಲ್ಲ ಬಿಡಿ. ಆದರೆ ಒಂದು ಖಯಾಲಿ ಎಲ್ಲಿಂದಲೂ ಬಂದು ಬಿದ್ದಿದೆ ನನ್ನಲ್ಲಿ; ಅದನ್ನು ಹೇಗಾದರು ಮಾಡಿ ಸ್ಪಷ್ಟವಾಗಿ ಅರಿತುಕೊಳ್ಳಲೇ ಬೇಕು. ಎಷ್ಟೇ ಬೆಲೆ ತೆತ್ತಾದರು, ಎಷ್ಟೇ ಬೆಂದಾದರು… ವಿವರಿಸಿವೆ ತಾಳಿ.
ಪ್ರತಿ ಮನುಷ್ಯನ ಬಳಿ ನೆನಪುಗಳಿರುತ್ತವೆ. ಅವನ್ನೆಲ್ಲ ಆತ ಬಿಚ್ಚಿಡುವುದು ಕೇವಲ ತನ್ನ ಆಪ್ತರ ಜತೆ ಮಾತ್ರ. ಆದರೆ ಇನ್ನು ಕೆಲವು ವಿಷಯಗಳನ್ನು ಆತ ತನ್ನ ಗೆಳೆಯರ ಜತೆಯೂ ನಿವೇದಿಸದೆ ಅವನೊಳಗೆ ಇಟ್ಟುಕೊಳ್ಳುತ್ತಾನೆ, ಗುಟ್ಟಾಗಿ. ಹಾಗೇ ಇನ್ನೂ ಕೆಲವು ಸಂಗತಿಗಳಿವೆ; ಅವನ್ನು ಮಾತ್ರ ಆತ ತನ್ನ ಜತೆಯೂ ಹಂಚಿಕೊಳ್ಳಲು ಅಂಜಿ, ತನ್ನಿಂದಲೂ ಬಚ್ಚಿಡುತ್ತಾನೆ. ಸಭ್ಯ ಮನುಷ್ಯರು ಇಂತಹ ಹಲವಾರು ರಹಸ್ಯಗಳನ್ನು ಮನಸ್ಸಿನ ಕೊಪ್ಪರಿಯಲ್ಲಿ ಚೆನ್ನಾಗಿ ಶೇಖರಿಸಿಟ್ಟಿರುತ್ತಾರೆ. ಹೀಗೆ ಹೇಳೋಣ: ಮನುಷ್ಯ ಮಹಾ ಸಭ್ಯನಾದಷ್ಟೂ ಇಂತಹ ಅದೆಷ್ಟೋ, ಆತನೂ ಅರಿಯದ ಹೆದರಿಸುವ ಗುಟ್ಟುಗಳು ಅವನ ಚಿತ್ತದೊಳಗೆ ಹಿಗ್ಗುತ್ತಿರುತ್ತವೆ. ಅದೆಲ್ಲ ಏನೇ ಇರಲಿ, ಕಡೇ ಪಕ್ಷ ನಾನು ಇದ್ದಬದ್ದ ಧೈರ್ಯವೆನ್ನೆಲ್ಲ ಒಗ್ಗೂಡಿಸಿ, ಸ್ವಲ್ಪ ಕೆಚ್ಚದೆಯಲ್ಲಿ, ನನ್ನ ಹಳೆ ಸಾಹಸಗಳನ್ನು ನೆನಪಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಇಲ್ಲಿಯವರೆಗೂ ದಿಗಿಲಿನಲ್ಲಿ, ಅವುಗಳಿಂದ ತಪ್ಪಿಸಿಕೊಳ್ಳಲು ಹೆಣಗುತ್ತಲೇ ಇದ್ದ ಪಾಯಿ ನಾನು. ಆದರೆ ಈಗ ನನ್ನ ನೆನಪುಗಳನ್ನು ಮತ್ತೆ ಜ್ಞಾಪಿಸಿಕೊಳ್ಳುವುದಷ್ಟೇ ಅಲ್ಲ ಈ ಭೂತಗಳನ್ನು ಬರೆದು ದಾಖಲಿಸುವ ಯೋಚನೆಯಲ್ಲಿದ್ದೇನೆ. ಮನುಷ್ಯ ಮುಕ್ತನಾಗಿ, ತನಗೆ ತಾನೇ ನಿಷ್ಠನಾಗಿ, ಸತ್ಯಕ್ಕೆ ಹೆದರದೆ ಇರಬಲ್ಲನೇ? ಹೇನ್ ನಮಗೆ ಭರವಸೆ ಇತ್ತಿದ್ದಾನೆ, ಸತ್ಯವಾದಿ ಆತ್ಮ ಚರಿತ್ರೆಗಳು ಬರೀ ಸುಳ್ಳಿನ ಕಂತೆಗಳು; ಬಹುಶಃ ಮನುಷ್ಯ ತನ್ನ ಬಗ್ಗೆ ತಾನೇ ಒದರುವ ಢೋಂಗಿ ಮಾತುಗಳು… ನಿಜಕ್ಕೂ ಅಂತಹ ಮುಕ್ತವಾದ ಆತ್ಮಚರಿತ್ರೆಗಳ ಅಸ್ತಿತ್ವವೇ ಅಸಾಧ್ಯವೆಂದು* ಅವನೇ ಹೇಳುವಂತೆ ರೂಸೋ, ತನ್ನ ಆತ್ಮಚರಿತ್ರೆಯಾದ “ನಿವೇದನೆ”ಯಲ್ಲಿ ಕಟ್ಟಿರುವುದು ಸುಳ್ಳಿನ ಹುತ್ತ ಅಷ್ಟೇ! ಅದೂ ಕೇವಲ ಪೆÇಳ್ಳು ಖ್ಯಾತಿಗೊಸ್ಕರ! ಹೇನ್ ಮಾತುಗಳು ಅಪ್ಪಟ ಸತ್ಯ. ನನಗೆ ಅದು ಖಾತ್ರಿಯಾಗಿದೆ. ಹಾಗೇ ಓರ್ವ ವ್ಯಕ್ತಿಯು ನಿಷ್ಪ್ರಯೋಜಕ ಥಳುಕು-ಬಳುಕಿನ ಪ್ರತಿಷ್ಠೆಯಿಂದ ಅನುದಿನದ ಅಪರಾಧಗಳನ್ನು ತನಗೆ ತಾನೇ ಆರೋಪಿಸಿಕೊಳ್ಳುತ್ತಾನೆ ಎನ್ನುವುದೂ ನನಗೆ ಅರ್ಥವಾಗಿದೆ; ಆ ಡೌಲುಗಳ ಪರಿಚಯವೂ ನನಗಿದೆ. ಈ ಹೇನ್ ಟೀಕಿಸುವುದು ಸಾರ್ವಜನಿಕವಾಗಿ ನಿವೇದಿಸುವ ದೊಡ್ಡ ಮನುಷ್ಯರನ್ನ! ನಾನು ಬರೆಯುವುದು ಕೇವಲ ನನಗಾಗಿ. ಆದರೆ ನಾನು ಒಬ್ಬ ಕಾಲ್ಪನಿಕ ಓದುಗನ ಜತೆ ಸಂವಾದಿಸುತ್ತಿರುವಂತೆ ಬರೆಯುವೆ. ಇದು ನನ್ನ ಬರೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಬೇಕಾದರೆ ತಂತ್ರ ಸಾಧನವೆನ್ನಿ, ಖಾಲಿ ತಂತ್ರಸಾಧನ. ನನಗೆ ಯಾವ ಓದುಗನೂ ಇಲ್ಲ, ಇದನ್ನಾಗಲೇ ಹೇಳಿಯಾಗಿದೆ.
ನೆನಪಿರುವುದನ್ನೆಲ್ಲಾ ಹಾಗೇ ಬರೆಯುತ್ತೇನೆ, ಅಷ್ಟೇ, ಯಾವ ಷರತ್ತುಗಳಿಲ್ಲದೆ. ನನ್ನ ಟಿಪ್ಪಣಿಗಳನ್ನು ಗೀಚಲು ವ್ಯವಸ್ಥೆಯ ಅಥವಾ ಕ್ರಮದ ಹಂಗಿಗೆ ಬೀಳೆನು ನಾನು.
“ಹಾಗಾದರೆ…” ನೀವು ಕೇಳಬಹುದು, “ಬರೆಯುವ ಕರ್ಮ ನಿನಗ್ಯಾಕೆ? ಓದುಗರು ಬೇಡ ಅನ್ನುತ್ತೀಯ; ಮತ್ತೆ ಅಷ್ಟೆಲ್ಲಾ ಷರತ್ತುಗಳೆನ್ನೇಕೆ ನಿನ್ನ ಮೇಲೂ, ನಿನ್ನ ಹಾಳೆಗಳ ಮೇಲೂ ಹೇರುತ್ತಿದ್ದೀಯ? ವಿಧಿವಿಧಾನಗಳಿಲ್ಲದೇ ನೆನೆಪನ್ನು ಗೀಚುವೆ… ಹಾಗೆ-ಹೀಗೆ ಅಂದಿಯಲ್ಲ… ಸರಿಯಾಗಿ ಹೇಳಪ್ಪ ಏನನ್ನು ವಿವರಿಸಲು ಈ ಪರಿಶ್ರಮ? ಯಾವ ತಪ್ಪಿಗೆ ನೀನು ಹೀಗೆ ಕ್ಷಮೆ ಕೇಳುತ್ತಿರುವೆ?
“ನಿಜ…ನಿಜ ಗುರುಗಳೇ…” ಬಂತು ನನ್ನ ಪ್ರತ್ಯುತ್ತರ, “ಆದರೆ ಸಮಸ್ಯೆ ಇರುವುದೇ ಅಲ್ಲಿ…”
ಈ ಸಮಸ್ಯೆ ಮತ್ತು ಅದರ ಪರಿಹಾರ ನಮ್ಮನ್ನು ಸೈಕಾಲಜಿಯ ಸೈಕಲ್‍ಗೆ ದೂಕುತ್ತವೆ. ಬಹುಶಃ ನಾನು ಪುಕ್ಕಲನಿರಬಹುದು, ಅಥವಾ ಬೇಕೆಂದೇ ನಾನು ಓದುಗ ವೃಂದವನ್ನು ಕುರಿತು ಮಾತನಾಡುತ್ತಿರುವಂತೆ ನಟಿಸುತ್ತಿರಬಹುದು, ಬರೆಯುವಾಗ ಧೀಮಂತನಂತೆ ಇರಬೇಕೆಂಬ ಆಸೆಯಿಂದ(ಅಂದರೆ ಬರೆದದ್ದನ್ನು ಓದಲು ಜನ ಇದ್ದಾರೆ ಎಂದಾಗ ತಾನೇ ನಮ್ಮ ಧೀಮಂತ ಸಾಹಿತಿಗಳು ಅಷ್ಟೆಲ್ಲ ಘನಂಧಾರಿ ಅನುಭವಗಳನ್ನು ಕೇಜಿಗಟ್ಟಲೆ ಸಮಗ್ರ ಸಾಹಿತ್ಯದಲ್ಲಿ ಬರೆದಿಟ್ಟುರುವುದು). ಇನ್ನೂ ಸಾವಿರದೊಂದು ಕಾರಣಗಳೂ ಇರಬಹುದು.
ಹಾಗಾದರೆ ಇನ್ನೊಂದು ಮುಖ್ಯ ವಿಷಯ: ನಾನೇಕೆ ಬರೆಯುತಿದ್ದೇನೆ? ಮತ್ತೆ ಏನು ಹೇಳಲು ಹೆಣಗಾಡುತ್ತಿದ್ದೇನೆ? ಜನರಿಗಾಗಿ ನಾನು ಬರೆಯುವುದಿಲ್ಲ ಎಂದಾದರೆ, ಬರೆಯದೇ ಕೂರುವುದು ಒಳ್ಳೆಯದಲ್ಲವೇ? ನನ್ನ ಮನಸ್ಸಿನಲ್ಲೇ ಈ ಭೂತಗಳನ್ನು ಇಟ್ಟುಕೊಳ್ಳಬಹುದಲ್ಲ… ಈ ಹಾಳೆಯಲ್ಲೇಕೆ ಈ ಯೋಚನೆಗಳಿಗೆ ಆಕಾರ ಕೊಡಬೇಕು?
ಅವೆಲ್ಲ ನಿಜ ಬಿಡಿ. ಆದರೆ ಹಾಳೆಯಲ್ಲಿ ನನ್ನ ಆಲೋಚನೆಗಳು ಪ್ರಬಲವಾಗಿ ಇರಬಹುದೇನೋ, ಶಾಸ್ತ್ರೋಕ್ತವಾದ ಗಾಂಭೀರ್ಯ ಅದಕ್ಕೆ ಸಿಗಬಹುದೇನೋ…ಈ ಮೂಲಕ ನನ್ನನ್ನು ನಾನೇ ವಿಮರ್ಶಿಸಿಕೊಂಡು ನನ್ನ ಶೈಲಿಯನ್ನು ಪ್ರಖರಗೊಳಿಸಬಹುದೇನೋ… ಇವೆಲ್ಲವನ್ನು ಬಿಟ್ಟು ನೋಡಿದರೂ ಬರವಣಿಗೆಯೇ ಬಹುಶಃ ನನ್ನ ನಿಜ ಸಮಾಧಾನ. ಇವತ್ತು ನನ್ನ ಮತ್ತೆ-ಮತ್ತೆ ಕಾಡಿ ಮರುಕಳಿಸಿರುವ ಈ ನೆನಪೇ ಇದಕ್ಕೆ ಒಳ್ಳೆಯ ದೃಷ್ಟಾಂತ; ಇದನ್ನು ಮೊನ್ನೆಯಷ್ಟೇ ಜ್ಞಾಪಿಸಿಕೊಂಡಿದ್ದೆ. ಆನಂತರ ನನ್ನಲ್ಲೇ ಐಕ್ಯವಾಗಿ ಬಿಟ್ಟಿದೆ ಈ ಸ್ಮೃತಿ. ಇದು ಕೆರಳಿಸುವ ರಾಗದಂತೆ… (ಆ ರಾಗವು ಕೆಣಕುತ್ತಿರುತ್ತದೆ, ರೇಗಿಸುತ್ತಿರುತ್ತದೆ… ಹಿಂಸಿಸುತ್ತಿರುತ್ತದೆ.. ಆದರೆ ಮರೆಯಲಾಗುವುದಿಲ್ಲ; ಆ ರಾಗದಿಂದ ಕಳಚಿಕೊಳ್ಳಬೇಕು ಎಂದು ಯತ್ನಿಸಿದರೂ ಅದು ಬಿಟ್ಟೇ ಬಿಡದಂತೆ ಅವುಚಿಕೊಂಡಿರುತ್ತದೆ.) ಅಂತಹ ನೂರಾರು ಸ್ಮರಣೆಗಳು ಹುತ್ತ ಕಟ್ಟಿ ಚಿರಂತನವಾಗಿ ನನ್ನೊಳಗೆ ಮಲಗಿವೆ. ಒಮ್ಮೊಮ್ಮೆ ಯಾವ ಕುರೂಹೂ ಕೊಡದೆ, ಇದ್ದಕ್ಕಿದ್ದಂತೆಯೇ ಒಂದೊಂದು ನೆನಪು ಒಳಗಿಂದ ಹೆಡೆಯೆತ್ತುತ್ತವೆ. ಜೋತು ಬಿದ್ದು ಪೀಡಿಸುತ್ತದೆ. ಆಗ, ಏಕೆ ಎಂದು ಗೊತ್ತಿಲ್ಲ, ಈ ನೆನಪುಗಳನ್ನು ಹಾಳೆಯ ಮೇಲೆ ನಿವೇದಿಸಿದರೆ, ನಾನು ಅವುಗಳ ಸೆರೆಯಿಂದ ಮುಕ್ತನಾಗುತ್ತೇನೆ ಅನ್ನಿಸುತ್ತದೆ, ಯತ್ನಿಸಿ ನೋಡಬಹುದಲ್ಲವೇ, ಅದಕ್ಕೆ ಬರೆಯುತ್ತೇನೆ.
ಅದೂ ಅಲ್ಲದೆ ವಿರಕ್ತಿಯಲ್ಲಿ ದಿನ ದೂಡುತ್ತಿರುವ ಸೋಮಾರಿ ನಾನು. ಮಾಡಲು ಯಾವ ಕೆಲಸವೂ ಯಾವತ್ತೂ ಇರಲೇ ಇಲ್ಲ. ನೆನಪುಗಳನ್ನು ವಿಷಯಗಳನ್ನು, ನೋವುಗಳನ್ನು ಇವೆಲ್ಲವನ್ನೂ ಬರೆದಿಡುವುದೇ ಒಂದು ಬಗೆಯ ಕಾಯಕವೆನ್ನಿಸುತ್ತದೆ. ಕಾಯಕದಿಂದ ಮನುಷ್ಯ ಕರುಣಾಳುವೂ, ಪ್ರಾಮಾಣಿಕನೂ ಆಗುತ್ತಾನಂತೆ, ಬಲ್ಲವರು ಆಡುವ ಮಾತಿದು. ಅದೇನೆ ಇರಲಿ ಕನಿಷ್ಟಪಕ್ಷ, ಆ ಅವಕಾಶವಂತೂ ಖಂಡಿತ ಇದೆ.
ಮಂಜು ಬೀಳುತ್ತಿದೆ. ಒದ್ದೆ ಮಂಜು, ಹಳದಿ, ಕೊಳಕು ಮಂಜು. ನಿನ್ನೆಯೂ ಹಿಮ ಬಿದ್ದಿತ್ತು. ಮೊನ್ನೆಯೂ ಅಷ್ಟೇ. ಈ ಹಿಮಕ್ಕೆ ಅಂಟಿಕೊಂಡೇ ಬಂದ ಆ ಕಥೆಯ ಪೊರೆಯು ನನ್ನ ನೆನಪಿನ ಪಟಲದಲ್ಲಿ ಹದವಾಗಿ ಕರಗುತ್ತಿದೆ. ಮನಸ್ಸಿಗೆ ಚಳಿಯಾಗುವಷ್ಟು ಬೆಚ್ಚಗೆ ಆ ಸ್ರ್ಮುತಿ ನನ್ನನ್ನು ಸುತ್ತಿಕೊಂಡಿದೆ. ಹಾಗಾಗಿ, ಈ ನೆನಪು ತೇವದ ಮಂಜಿಗೆ ಜೋತು ಬಿದ್ದು ಬರುವ ಕಥೆಯಾಗಲಿ.
ಮುಂದುವರೆಯುವುದು…
ಅನುವಾದ : ಗೌತಮ್ ಜ್ಯೋತ್ಸ್ನಾ
ಚಿತ್ರ : ಮದನ್ ಸಿ.ಪಿ
ಟಿಪ್ಪಣಿಗಳು
*ಅವರು ಸ್ಪಟಿಕದರಮನೆಯ ಕಟ್ಟುವವರು: ಒಂದೇ ಕಲ್ಲಲ್ಲಿ ಎರಡು ಹಕ್ಕಿಯನ್ನು ಹೊಡೆದಂತೆ ದಸ್ತಯೇವ್ಸ್ಕಿ ಇಲ್ಲಿ ಕ್ರಾಂತಿಕಾರಿ ಪ್ರಜಾಪ್ರಭುತ್ವವಾದಿ ನಿಕೊಲಯ್ ಚೆರಿನ್ಶ್ವೆಸ್ಕಿಯ [1828-89] ‘ವ್ಹಾಟ್ ಇಸ್ ಟು ಬಿ ಡನ್?’ ಎಂಬ ಕಾದಂಬರಿಯ ಕಡೆಗೆ ದೃಷ್ಟಿ ಹಾಯಿಸಿದ್ದಾನೆ. ಇದರಲ್ಲಿ ಗಾಜು ಮತ್ತು ಎರೆ ಕಬ್ಬಿಣದ ಸ್ಫಟಿಕದರಮನೆಯ ಉಲ್ಲೇಖವಿದ್ದು ಇದು ಚಾರ್ಲ್ಸ್ ಫೆÇೀರಿಯರ್ನ ಥಿಯರಿ ಆಫ್ ಯುನಿವರ್ಸಲ್ ಯುನಿಟಿ (1841-43)ಯಲ್ಲಿ ಒಂದೇ ಸಮುದಾಯದವರು ಸೌಹಾರ್ದತೆಯಲ್ಲಿ ಬೆರೆಯಲು ಸ್ಫಳಾವಕಾಶವಾಗಲೆಂದು, ಗಾಜು ಮತ್ತು ಎರೆಕಬ್ಬಿಣದಲ್ಲಿ ಕಟ್ಟಿದ್ದ ಛತ್ರವನ್ನು ಪ್ರತಿಬಿಂಬಿಸುತ್ತದೆ. ದ ಕ್ರಿಸ್ಟಲ್ ಪ್ಯಾಲೇಸ್ ಅಥವಾ ಸ್ಫಟಿಕದರಮನೆಯು ಆರಂಭದಲ್ಲಿ ಹೈಡ್ ಪಾರ್ಕ್ಲ್ಲಿ ಸ್ಥಾಪಿತವಾಗಿದ್ದರೂ ಇದನ್ನು 1854ರಲ್ಲಿ ದಕ್ಷಿಣ ಲಂಡನ್ನಲ್ಲಿರುವ ಸಿಡನ್ ಹ್ಯಾಮ್ ಹಿಲ್ಗೆ ವರ್ಗಾಯಿಸಲಾಯಿತು. ಸತ್ತು ಐವತ್ತೈದು ವರುಷಗಳ ತರುವಾಯ ಅಂದರೆ 1936ರಲ್ಲಿ ಇದನ್ನು ಸುಟ್ಟು ಹಾಕಿದರು.
ಅನ್ಯೇವ್ಸ್ಕಿ* ಒಬ್ಬ ಸಾಹಿತ್ಯದ ಪತ್ರಕರ್ತ, ತೀರ ಕಳಪೆ ದರ್ಜೆಯ ಬರವಣಿಗೆಯಿಂದಾಗಿ ನಗೆಪಾಟಲಿಗೀಡಾದ ಮಹಾಶಯನಿವನು. ಒಂದು ಲೇಖನದಲ್ಲಿ ಈತ ಕೊಲಾಸಸ್ ಆಫ್ ರೋಹ್ಡ್ಸ್ (Coloss of Rhodes) ಪ್ರತಿಮೆ ಪ್ರಕೃತಿಯ ಸೃಷ್ಠಿ ಎಂದಿದ್ದ.
ಆಗಾಗ ನಮಗೆ ನಾವೇ ಬಾರಿಸಿಕೊಂಡು ಚಡಿಏಟು ತಿನ್ನಲು- ಗೋಗಲ್ನ ಸಹಕಾರಿ ಸಾಹೇಬರು(1836) ಕಥೆಯಲ್ಲಿ ಬರುವ ಸನ್ನಿವೇಶವನ್ನು ದಸ್ತಯೇವ್ಸ್ಕಿ ಇಲ್ಲಿ ನೆನೆಪಿಸಿಕೊಂಡಿದ್ದಾರೆ. ಅದರಲ್ಲಿ ಸರಕಾರಿ ಗುಮಾಸ್ತನಿಗೆ ಯಾರದೋ ಹೆಂಡತಿಗೆ ಚಾವಟಿಯಲ್ಲಿ ಬಾರಿಸುವ ಜವಾಬ್ದಾರಿ ಗಂಟು ಬಿದ್ದಾಗ “ಅಯ್ಯೋ ಅವಳಿಗೆ ಅವಳೇ ಚಾವಟಿಯಲ್ಲಿ ಬಾರಿಸಿಕೊಂಡಾಗಿದೆ, ಇನ್ನೊಮ್ಮೆ ನಾನು ಬಾರಿಸುವ ಅವಶ್ಯಕತೆಯಿಲ್ಲ” ಎಂದು ಹೇಳಿ ನುಣುಚಿಕೊಳ್ಳುತ್ತಾನೆ.
*ಹೇನರಿಕ್ ಹ್ಯೇನ್[1797-1856): ರೂಸೋನ ಆತ್ಮಚರಿತೆಯನ್ನೇ ಟೀಕಿಸಿ, ಸತ್ಯವನ್ನು ಮುಚ್ಚಲು ಇವನು ಸುಳ್ಳು ನಿವೇದನೆಗಳನ್ನು ಇಲ್ಲಿ ಮಾಡಿದ್ದಾನೆ ಎಂಬ ಆರೋಪವನ್ನು ಅವನ ಮೇಲೆ ಹೊರಿಸಿದ. ಅತಿ ಮುಖ್ಯ ಜರ್ಮನ್ ರೊಮ್ಯಾಂಟಿಕ್ ಕವಿ. ಅವನ ‘ಕನ್ಫೆಶನ್’[1853-54] ಕೃತಿಯಲ್ಲಿ ಈ ರೀತಿ ಆತ ರೂಸೋನನ್ನು ದೂರಿದ್ದ.
ಕಂತು ೧ : http://ruthumana.com/2018/10/14/notes-from-underground-part-1/
ಕಂತು ೨ : http://ruthumana.com/2018/10/14/notes-from-underground-part-2/
ಕಂತು ೩ : http://ruthumana.com/2018/10/14/notes-from-underground-part-3/