ಅಧೋಲೋಕದ ಟಿಪ್ಪಣಿಗಳು – ಕಂತು ೫ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)

ಭಾಗ – ೨
ತೇವದ ಮಂಜಿಗೆ ಜೋತು ಬಿದ್ದು

When from dark error’s subjugation
My words of passionate exhortation
Had wrenched thy fainting spirit free;
And writhing prone in thine affliction
Thou didst recall with malediction
The vice that had encompassed thee:
And when thy slumbering conscience, fretting
By recollection’s torturing flame,
Thou didst reveal the hideous setting
Of thy life’s current ere I came:
When suddenly I saw thee sicken,
And weeping, hide thine anguished face,
Revolted, maddened, horror-stricken,
At memories of foul disgrace.
*NEKRASSOV
(translated by Juliet Soskice).

ತಪ್ಪಿನ ಆ ಕಪ್ಪಿನಿಂದ, ಬಿಸಿ ಒತ್ತಾಯದ ಮಾತಿನಿಂದ
ಬೆಳಕಿಗೆ ತಂದರೆ ನಿನ್ನ ಪತಿತ ಆತ್ಮ ಆಗ,
ಕೈ ಕೈಯದೊ ಹಿಸುಕಿ ನರನರಳಿ, ನೊಂದು ನೋವ ಕೂಪದಲ್ಲಿ ಬೆಂದು
ಕೈ ಕಟ್ಟಿದ ಪಾಪವ ಶಪಿಸಿದಾಗ, ಕತೆ ಕರೆದು,
ಹಳೆಯ ನಮ್ಮ ಕಳೆದ ಕತೆಯ ಮರಳಿ ಮಂಡಿಸಿ, ಆತ್ಮಸಾಕ್ಷಿಯ ದಂಡಿಸಿ,
ಒಡನೆ ಕೈಯಲ್ಲಿ ಮುಖ ಮರೆಸಿ, ಕರಗಿ ಕಣ್ನೀರಲ್ಲಿ, ಅಪಮಾನ ಭಯ
ರೋಷದಲ್ಲಿ ನಲುಗಿ…ಮುಂತಾಗಿ
(Transalted by Pattabhi Rama Somayaji)

ನೆಲ ಕಚ್ಚಿದ ನಿನ್ನಾತ್ಮವವನ್ನು
ಅಪರಾಧದ‌ ಕತ್ತಲಿಂದ
ಬೆಂಬಿಡದ ಮೂದಲಿಕೆಯಿಂದ
ನಾನು ಬೆಳಕಿಗೆ ತಂದೆ
ಆದರೆ ನೀನು ಕೈ‌ ಕೈ‌ ಹಿಸುಕಿ
ನೋವಿನಿಂದ ಕುಸಿದು
ವಿಸ್ಮೃತಿಗೆ ತೆರಳಿದ ನಿನ್ನ ಆತ್ಮಸಾಕ್ಚಿಯನ್ನು
ನಮ್ಮ ಭೇಟಿಯ ಮೊದಲಿನ ವೃತ್ತಾಂತವನ್ನೆಲ್ಲ ಹೇಳಿ ಶಿಕ್ಷಿಸುವಾಗ
ದುರ್ಮಾರ್ಗದ ಬಲೆಯಲ್ಲಿ ಬಂಧಿಯೆಂದು ಶಪಿಸಿದೆ
ಇದ್ದಕ್ಕಿದ್ದಂತೆ ನಿನ್ನ ಮುಖವನ್ನು
ಕೈಗಳಿಂದ ಮುಚ್ಚಿಕೊಂಡು
ಕಂಬನಿಯಲ್ಲಿ ಕರಗಿಹೋದೆ
ಕುಪಿತಳಾಗಿ, ಭಯಭೀತಳಾಗಿ
ಅವಮಾನದಿಂದ ತತ್ತರಿಸಿ ಇನ್ನೂ ಮುಂತಾಗಿ… ಮುಂತಾಗಿ…
(Translated by Jyothi Guruprasad)

 

-೧-

ಆಗ ನನಗೆ ಬರೀ ಇಪ್ಪತ್ತನಾಲ್ಕು. ಆ ದಿನಗಳಲ್ಲೂ ನನ್ನ ಬದುಕು ಏಕಾಂಗಿಯ ದಿನಚರಿತ್ರೆಯೇ; ಕಳಾಹೀನ, ಯದ್ವಾತದ್ವಾ; ಕಿರಾತಕನ ಹಾಗೆ. ಯಾರ ಜತೆಯೂ ಸ್ನೇಹ ಮಾಡದೆ, ಅಪ್ಪಿತಪ್ಪಿಯೂ ಯಾರ ಕೂಡೆ ಮಾತೂ ಆಡದೆ, ಸಮಯ ಸಿಕ್ಕಾಗಲೆಲ್ಲ ನನ್ನ ಬಿಲದೊಳಗೆ ಹೂತು ಹೋಗುತ್ತಿದ್ದೆ. ಆಫೀಸಿನಲ್ಲಿಯೂ ಅಷ್ಟೇ; ಯಾರೊಬ್ಬರ ಕಡೆಗೆ ತಿರುಗೂ ನೋಡುತ್ತಿರಲಿಲ್ಲ. ನನ್ನ ಸಹೋದ್ಯೋಗಿಗಳ ಕಣ್ಣಲ್ಲಿ ನಾನೊಬ್ಬ ವಿಚಿತ್ರ ಜೀವಿ. ಹಾಗೇ ನನ್ನ ನೋಡಿದರೆ ಅವರಿಗೆ ವಾಕರಿಕೆ(ನನಗೆ ಹಾಗೆ ಸ್ಪಷ್ಟವಾಗಿ ಅನ್ನಿಸಿತ್ತು) ಎಷ್ಟೋ ಸಲ ಯೋಚಿಸಿದ್ದೆ “ಏಕೆ ಎಲ್ಲರಿಗೂ ನನ್ನಂತೆ ಅನ್ನಿಸುವುದಿಲ್ಲ,- ಅಂದರೆ ಜನ ನಿಮ್ಮನ್ನು ಒಂದು ಅಸಹ್ಯ ಜಂತುವಂತೆ ನೋಡುತ್ತಿದ್ದಾರೆ ಅನ್ನುವಂತಹ ಅನಿಸಿಕೆ-” ಅಂತ. ಉದಾಹರೆಣೆಗೆ, ಒಬ್ಬ ವಿಕಾರಿ ಮನುಷ್ಯ ನನ್ನ ಕಛೇರಿಯಲ್ಲಿದ್ದ. ಮುಳ್ಳು ಮುಖದವನು. ಕ್ರಿಮಿನಲ್ಲುಗಳಿಗೆ ಇರುತ್ತಲ್ಲ ಅಂತಹ ಮುಖ. ನನಗೇನಾದರೂ ಅಂತಹ ವಾಕರಿಕೆಯ ಮುಖವಿದ್ದರೆ ಇತರರತ್ತ ತಿರುಗಿ ಕೂಡ ನೋಡುತ್ತಿರಲಿಲ್ಲವೇನೋ! ಮತ್ತೊಬ್ಬ ಅಬ್ಬೇಪಾರಿ, ಕೊಳಕು ಬಟ್ಟೆಯವ; ಸದಾ ಗಬ್ಬು ವಾಸನೆ ಹೊಡೆಯುತ್ತಿದ್ದ. ವಿಷಯ ಹೀಗಿದ್ದರೂ ಈ ಇಬ್ಬರೂ ಸಜ್ಜನರಿಗೂ ಅವರವರ ಅಧ್ವಾನ ಸ್ಥಿತಿಯ ಅರಿವೇ ಇದ್ದಂತಿರಲಿಲ್ಲ; ಹಾಗೆಯೇ ಆ ಕಛೇರಿಯ ಯಾವ ಪುಣ್ಯಾತ್ಮನೂ ತಾನೆಂದರೆ ಬೇರೆಯವರಿಗೆ ವಾಕರಿಕೆ ಎಂಬ ಕಲ್ಪನೆಯನ್ನೂ ಮಾಡಿಕೊಂಡಿರಲಿಲ್ಲವೇನೋ! ಈಗ ಒಂದು ವೇಳೆ ಅಂತಹ ಕಲ್ಪನೆಯಿದ್ದರೂ ಅವರ್ಯಾರೂ ಖಂಡಿತ ತಲೆಕೆಡಿಸಿಕೊಂಡಿರಲಿಲ್ಲ. ಏಕೆಂದರೆ ಅವರ ಬಾಸ್ ಒಬ್ಬನನ್ನು ಬಿಟ್ಟು ಮಿಕ್ಕವರೆಲ್ಲಾ ಇವರನ್ನು ತಿಪ್ಪೆಯಂತೆ ಕಂಡರೂ ಬೆದರದ ಗಟ್ಟಿಗರಿವರು.

ಕೆಲಸಕ್ಕೆ ಬಾರದ ಗರ್ವ ಎಲ್ಲೆ ಮೀರಿದ್ದರಿಂದ, ಹಾಗೇ ಈ ಹೈಸ್ಟಾಂರ್ಡ್ರ್ಸುಗಳನ್ನು ನನ್ನ ಮೇಲೆ ನಾನೇ ಹೇರಿಕೊಂಡಿದ್ದರಿಂದ, ಆ ದಿನಗಳಲ್ಲಿ ನಾನೆಂದರೆ ನನಗೇ ರೋಷ, ಅಸಹ್ಯ ಹುಟ್ಟಿದ್ದರಿಂದ, ಮಿಕ್ಕವರೂ ನನ್ನ ಹಾಗೇ ತಮ್ಮ ಚಹರೆಯನ್ನು ತಾವೇ ದ್ವೇಷಿಸಲೇ ಬೇಕು ಎಂದು ನಂಬಿದ್ದೆ ಅಂತ ಈಗ ಇವೆಲ್ಲವನ್ನೂ ಮೆಲುಕು ಹಾಕುವಾಗ ಸ್ಪಷ್ಟವಾಗಿ ಅನ್ನಿಸುತ್ತಿದೆ ನನಗೆ. ಅವತ್ತೆಲ್ಲ ನನ್ನ ಮುಖವನ್ನು ಕಂಡರೇ ಆಗುತ್ತಿರಲಿಲ್ಲ ನನಗೆ. ಅದೊಂದು ಕುರೂಪ ಮುಸುಡಿ ತುಚ್ಛ ಭಾವನೆಗಳ ಬಾವಿಯೆಂದೇ ನಂಬಿದ್ದ ಮಹಾಶಯ ನಾನು. ದಿನಾ ಆಫೀಸಿಗೆ ಬರುವಾಗ ಆದಷ್ಟು ಇಂಡಿಪೆಂಡೆಂಟಾಗಿ ಇದ್ದು, ಭಾರಿ ಅದ್ಭುತವಾಗಿರುವ ಎಕ್ಸ್ಪ್ರೆಶ್ಶನ್ನುಗಳನ್ನು ನನ್ನ ಮೋರೆಯಲ್ಲಿ ಕ್ರಮವಾಗಿ ಸೃಷ್ಟಿಸಲು ಹೆಣಗುತ್ತಿದ್ದದ್ದು, ನಾನು ತುಚ್ಛನೆಂದು ಅವರು ಪತ್ತೆ ಹಚ್ಚದೆ ಇರಲಿಯೆಂದು. “ಸರಿ ನನ್ನದು ಕುರೂಪ ಮುಸುಡಿಯೇ ಇರಬಹುದು; ಆದರೆ ಇದು ಸದಾ ಭಾವಪೂರ್ಣ; ಹಾಗೇ ಮಿತಿಮೀರಿದ ಬುದ್ಧಿಯಿರುವ ಬುದ್ಧಿಜೀವಿಯ ಮುಖ…” ಹಾಗಿದ್ದೂ ನನ್ನ ಮುಖದಲ್ಲಿ ಈ ಬುದ್ಧಿಜೀವಿಗಳ ಎಕ್ಸ್ಪ್ರೆಶನ್ನುಗಳನ್ನು ಮೂಡಿಸುವುದು ಅಸಂಭವ ಎನ್ನುವ ನಗ್ನ ಸತ್ಯವನ್ನು ಚೆನ್ನಾಗಿಯೇ, ತುಂಬಾ ನೋವಿನಲ್ಲಿ ಅರಿತೂ ಇದ್ದೆ. ಹಾಳಾದ ನನ್ನ ಮುಖವಿರುವುದು ಯಾವ ಸ್ಮಾರ್ಟ್ನೆಸ್ಸು ಇಲ್ಲದ ಕಾಡುಕಪಿಯಂತೆ. ಒಂದು ಪಕ್ಷ ನೀವೆಲ್ಲ “ನೋಡಿ ಇವನ ಎಕ್ಸ್ಪ್ರೆಶನ್ನುಗಳೆಲ್ಲ ಕಾಡುಕಪಿಯಂತೆ, ಆದರೆ ಈತ ಬುದ್ಧಿಜೀವಿ…’ ಅಂತ ನನ್ನ ಬುದ್ಧಿಜೀವಿತನವನ್ನು ಈ ಮುಖ ನೋಡಿಯೇ ಕಂಡುಹಿಡಿದಿದ್ದರೆ, ಈ ಕಾಡುಕಪಿ ಮುಸುಡೂ ಕೂಡ ನನಗೆ ಆಗ ಉಲ್ಲಾಸ ತರುತಿತ್ತೇನೋ.

ನನ್ನ ಜೊತೆ ಕೆಲಸ ಮಾಡುತ್ತಿದ್ದವರೆಲ್ಲರನ್ನೂ ನಿಶ್ಕಲ್ಮಶವಾಗಿ ದ್ವೇಷಿಸುತಿದ್ದೆ. ಅವರೆಂದರೆ ಅಸಹ್ಯ ನನಗೆ. ಏನೋ ಒಂಥರಾ ಭಯ ಬೇರೆ . ಒಂದು ಕ್ಷಣ ಅಸೂಯೆ ಮತ್ತೊಂದು ಕ್ಷಣ ಭಯ. ಅವರು ನನಗಿಂತಲೂ ದೊಡ್ಡ ಮನುಷ್ಯರು ಎಂದು ಭಾವಿಸಿದ್ದರಿಂದ ತಲ್ಲಣ. ಅಪರೂಪಕ್ಕೊಮೊಮ್ಮೆ, ಅವರೆಲ್ಲರೂ ದೊಡ್ಡಮನುಷ್ಯರು ಅಂತ ನಿಜಕ್ಕೂ ಹೆದರಿಯೂ ಇದ್ದ ದಿನಗಳಿವೆ. ಇದ್ದಕ್ಕಿದ್ದಂತೆ ಆಗುತ್ತಿದ್ದ ಪ್ರಕ್ರಿಯೆ ಇದು: ಈ ಕ್ಷಣದಲ್ಲಿ ಇವರೆಲ್ಲರೂ ದೊಡ್ಡ ಮನುಷ್ಯರು ಅಂತ ಹೆದರೋದು. ಮುಂದಿನ ಕ್ಷಣದಲ್ಲೇ ‘ಥೂ ಕಳ್ಳ ನನ್ಮಕ್ಳು…’ ಅಂತ ಕೀಳಾಗಿ ಕಾಣೋದು… ಒಂದು ವಿಷಯ ಹೇಳ್ತೀನಿ ಕೇಳೀ: ಈ ಡೀಸೆಂಟಾಗಿರುವ ಬುದ್ಧಿಜೀವಿಗೆ ಇಂಥಾ ಹೈಸ್ಟಾಂರ್ಡ್ರ್ಸುಗಳಿರಲೇ ಬೇಕು ಸಾರ್. ಕೆಲವು ಸಂಧರ್ಭಗಳಲ್ಲಿ ಆತ ಸ್ವದ್ವೇಷ ಹುಟ್ಟೋಷ್ಟು ತೀವ್ರವಾಗಿ, ತನ್ನ ತಾನೇ ಕೀಳಾಗಿ ಕಾಣ್ಲೇ ಬೇಕು… ಇಲ್ಲದಿದ್ದರೆ ಈ ಬುದ್ಧಿಜೀವಿ ಪಟ್ಟಕ್ಕೆ ಗರ್ವದ ನಂಜೇರುವುದು ಹೇಗೆ ಅಲ್ಲವೇ? ನಾನೇನು ಅವರನ್ನು ಕೀಳಾಗಿ ಕಾಣುತ್ತಿದ್ದೆನೋ ಅಥವಾ ದೊಡ್ಡಮನುಷ್ಯರೂ ಅಂದುಕೊಳ್ಳುತ್ತಿದ್ದೆನೋ ಒಟ್ಟಿನಲ್ಲಿ ಯಾರೇ ಎದುರು ಸಿಕ್ಕಲಿ, ಕೂಡಲೇ ನನ್ನ ಕಣ್ಣ ದೃಷ್ಟಿ ನೆಲಕ್ಕೆ ಬೀಳುತಿತ್ತು, ಆಗುತ್ತಿರಲಿಲ್ಲ ನನಗೆ, ಕಂಡವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು. ಆದರೂ ಆ ಕಾಲದಲ್ಲಿ ನನ್ನದೊಂದು ಪ್ರಯೋಗದ ಸಾಹಸವೂ ಆಗಿತ್ತು. ಆಗಾಗ, ಇಂಥವರೊಂದಿಗೆ ದೃಷ್ಟಿಯುದ್ಧ ನಡೆಸಿ ಅವರನ್ನು ಸೋಲಿಸಬೇಕು, ಅವರ ಕಣ್ಣ ತಗ್ಗಿಸಬೇಕು ಎಂದೆಲ್ಲಾ; ಆದರೆ ಆ ಎದುರಾಳಿ ನನ್ನ ಮುಂದೆಯೇ ಹಾದು ಹೋಗುತ್ತಿದ್ದಾಗ ನನ್ನ ಕಣ್ಣುಗಳೇ ಸಂಪೂರ್ಣವಾಗಿ ತಗ್ಗಿ, ಮಣ್ಣಿಗೆ ಇಳಿದು ಬಿಡುತ್ತಿದ್ದವು. ಈ ಮಹಾ ಪರಾಭವದಿಂದ ಕೋಪಿಷ್ಟನಾಗಿ, ವಾರಗಟ್ಟಲೇ ಶಾಪ ಕೊಡುವ ಕೆಂಡಾಮಂಡಲ ಜಡೆಮುನಿಯಂತೆ ನನ್ನ ಕೋಣೆಯಲ್ಲಿ ಶತಪಥ ತಿರುಗುತ್ತಿದ್ದೆ.

ವಿಚಿತ್ರವಾಗಿ ಕಂಡು ಬಿಡುವ ದಿಗಿಲಿನಿಂದಲೂ ಹೀಗೆ ಅಸ್ವಸ್ಥನಾಗಿದ್ದೆ ನಾನು. ಹೀಗಾದ್ದರಿಂದಲೇ ನಾನು ಹೊರ ಜಗತ್ತಿನಲ್ಲಿ ರೂಢಿಗನುಸಾರವಾಗಿರುವ ಎಲ್ಲ ಕ್ರಮ-ನಿಯಮಗಳ ದಾಸನಾಗಿದ್ದು. ಅದಕ್ಕೋಸ್ಕರವೇ ನಾನು ಸಹಜರೂಢಿಯನ್ನು ಬೆಂಬಿತ್ತಿತ್ತದ್ದು. ಅದೂ ಅಲ್ಲದೆ ನನ್ನಲ್ಲಿದ್ದ ಥರ-ಥರದ ತಿಕ್ಕಲು ಐಲುಗಳಿಂದ ಗಾಢವಾಗಿ ಹೆದರಿದ್ದೆ ಕೂಡ. ಏಕೆಂದರೆ ಹಿಂದೆ ಹೇಳೀದ್ದ ಈ ನನ್ನ ಐಲುಗಳಿಗೆ ತಕ್ಕ ಮಗನಂತೆ ಹೇಗೆ ಬದುಕಲಾಗುತಿತ್ತು ನನಗೆ? ಅದೂ ಜಾಸ್ತಿ ತಿಳಿದ ಬುದ್ಧಿಜೀವಿ ನಾನಾಗಿರುವಾಗ. ಜಾಸ್ತಿಯೆಂದರೆ ನಮ್ಮ ಕಾಲದ ಮನುಷ್ಯನಿಗೆ ಎಷ್ಟು ಬೇಕೋ ಅಷ್ಟು. ಆದರೆ ನನ್ನ ಬಿಟ್ಟು ಆ ಮಿಕ್ಕವರೆಲ್ಲ ಪೆದ್ದರು; ಕುರಿಮಂದೆಯಲ್ಲಿ ಹೆದರಿ ಹಿಕ್ಕೆ ಹಾಕಿ ಒಂದೇ ಥರ “ಬ್ಞೇ… ಬ್ಞೇ…” ಅಂಥ ಕೂಗುವ ಕುರಿಗಳು… ಬಹುಶಃ ನಾನೊಬ್ಬ ದಾಸ ಹಾಗೂ ಪುಕ್ಕಲ ಎಂದು ಈ ಕುರಿಗಳ ನಡುವೆ ಊಹಿಸಿದ್ದವನು ನಾನು ಮಾತ್ರ. ಆದರೆ ಅತಿ ತಿಳಿದ ಬುದ್ಧಿಜೀವಿ ನಾನಾಗಿದ್ದಕ್ಕೇ ಹೀಗೆ ಊಹಿಸಲಾಯಿತು ನನಗೆ. ಇದು ಬರೀ ಊಹೆಯಲ್ಲ ಗುರುಗಳೇ ಸತ್ಯ ಕೂಡ. ಆ ದಿನಗಳಲ್ಲಿ ನಾನೊಬ್ಬ ದಾಸ ಹಾಗೂ ಪುಕ್ಕಲನೇ… ನಾಚಿಕೆ ಇಲ್ಲದೇ ಹೀಗೆ ಘೋಷಿಸಿ ಬಿಡುವೆ: ನಮ್ಮ ಕಾಲದ ಪ್ರತಿಯೊಬ್ಬ ನಾಗರಿಕನೂ ಪುಕ್ಕಲ ಮತ್ತು ದಾಸ. ಇದೇ ಅವನ ಸಹಜ ಸ್ಥಿತಿ. ಇದನ್ನು ನಾನು ಆಳವಾಗಿ ಅರಿತಿದ್ದೇನೆ. ಆತನನ್ನು ರಚಿಸಿ, ಕ್ರಮವಾಗಿ ಸಿದ್ಧಪಡಿಸಿರುವುದು ಆತ ಹಾಗಿರಲಿ ಎಂದೇ. ಈ ಕಾಲದಲ್ಲಿ ಅಥವಾ ಧುತ್ತನೇ ಎದ್ದು ಬಂದ ಕಂಟಕದ ದಿನಗಳಲ್ಲಿ ಮಾತ್ರವೇ ಅಲ್ಲ ಸಾಮಾನ್ಯವಾಗಿ ಎಲ್ಲಾ ಸಮಯದಲ್ಲೂ, ಎಲ್ಲ ಸಭ್ಯರೂ ಕೂಡ ಪುಕ್ಕಲರೂ ಮತ್ತು ದಾಸರೇ. ಪ್ರಕೃತಿಯು ಸಮಗ್ರ ಸಭ್ಯರಿಗೆಂದು ಸೃಷ್ಟಿಯಾಗಿರುವ ವಿಧಿಯಿದು. ಒಂದು ವೇಳೆ ಅವರಲ್ಲಿ ಯಾರೋ ಒಬ್ಬ ಒಮ್ಮೆ ಧೀರನಾಗಿದ್ದರೆ ಅದರಿಂದ ಆತ ಜಾಸ್ತೀ ಪ್ರೇರಿತನಾಗಿ, ನೆಮ್ಮದಿ ಗಿಟ್ಟಿಸಬೇಕಿಲ್ಲ. ಏಕೆಂದರೆ ಮತ್ತೊಂದು ಸಂಧರ್ಭದಲ್ಲಿ ಈತ ವೀರನಾಗಲು ಹೆದರಿ ದಿಗಿಲಿನಲ್ಲಿ ನೀಲಿಗಟ್ಟುತ್ತಾನೆ. ಅಂತಿಮ ಹಾಗೂ ತಪ್ಪಿಸಲಾಗದ ಪರಿಣಾಮವಿದು. ಯಾರು ಧೀರರು ನೀವೇ ಹೇಳಿ? ಕತ್ತೆಗಳು ಹಾಗೂ ಹೇಸರಗತ್ತೆಗಳು ಧೀರರಂತೆ ನಟಿಸುತ್ತವೆ, ಅದೂ ಗೋಡೆಯ ವಿರುದ್ಧ ಅವುಗಳನ್ನು ದಬ್ಬುವ ತನಕ. ಬಿಡಿ ಕತ್ತೆಗಳ ಕತೆ ಏಕೆ ಈಗ, ಲೆಕ್ಕಕ್ಕೆ ಬಾರದ ಜೀವಿಗಳವು.
ಇನ್ನೊಂದು ಸನ್ನಿವೇಶ ನನ್ನನ್ನು ಆ ದಿನಗಳಲ್ಲಿ ಗಾಬರಿಯಾಗಿಸಿತ್ತು, “ನನ್ನಂತೆ ಯಾರೂ ಇಲ್ಲ ಯಾರಂತೆಯೂ ನಾನಿಲ್ಲ” “ನಾನು ಒಬ್ಬನೇ ಅವರೆಲ್ಲರು”
ಆಗ ನಾನಿನ್ನೂ ಎಳಸು-ಎಳಸು ಹುಡುಗ; ನೋಡಿ ಈ ಯೋಚನೆಯೇ ಅದಕ್ಕೇ ಸಮರ್ಪಕ ಸಾಕ್ಷಿ.

ಅಪರೂಪಕ್ಕೊಮ್ಮೆ ನನ್ನ ಅನಿಸಿಕೆಗೆ ವಿರುದ್ಧವಾದ ಘಟನೆಗಳೂ ಜರುಗುತ್ತಿದ್ದವು. ಕೆಲವು ಸಲ ಕಛೇರಿಗೆ ಹೋಗವುದೇ ಮಹಾ ಭಯಾನಕ ಶ್ರಮ ಎನಿಸುತಿತ್ತು. ಇದೇ ಅತಿರೇಕವಾಗಿ ಎಷ್ಟೋ ಸಲ ಕೆಲಸ ಮುಗಿಸಿ ಮನೆಗೆ ವಾಪಾಸ್ಸು ಬಂದಾಗ ತೀವ್ರವಾಗಿ ಅಸ್ವಸ್ಥನಾಗಿರುತ್ತಿದ್ದೆ. ಇದ್ದಕ್ಕಿದ್ದಂತೆಯೇ ಸಂದೇಹ ಮತ್ತು ಉದಾಸೀನ ಪರ್ವ ನನ್ನನ್ನು ಆವರಿಸುತಿತ್ತು(ಪರ್ವಗಳಲ್ಲೇ ನನ್ನ ಬದುಕನ್ನು ನಿರೂಪಿಸಬಹುದು). ಆಗಂತೂ ನನ್ನ ಈ ಅಸಹನೆ, ಹಾಗೂ ಅತೀ ನಾಜೂಕಿನ ಮನಸ್ಥಿತಿಗೆ ಹಿಡಿ ಶಾಪ ಹಾಕುತ್ತಿದ್ದೆ. ಈ ವಿಚಿತ್ರ ಗುಣಗಳನ್ನು ವ್ಯಂಗ್ಯವಾಡುತ್ತಿದ್ದೆ; ಅತೀ ‘ರೊಮ್ಯಾಂಟಿಕ್’ ಆಗಿದ್ದಕ್ಕೆ ನನ್ನನ್ನು ನಾನೇ ನಿಂದಿಸುತ್ತಿದ್ದೆ. ಒಮ್ಮೊಮ್ಮೆ ಯಾರನ್ನೂ ಮಾತನಾಡಿಸುವ ಆಸೆಯೇ ಆಗುತ್ತಿರಲಿಲ್ಲ, ಅದೇ ಒಮ್ಮೊಮ್ಮೆ ಹೇಗೆಲ್ಲ ಹರಟೆ ಕೊಚ್ಚುತ್ತಿದ್ದೆ… ಜತೆಯಲ್ಲಿರುವವರೆಲ್ಲಾ ನನ್ನ ಚಡ್ಡಿ ದೋಸ್ತಿಗಳೇನೋ ಎನ್ನುವ ಹಾಗೆ, ಅವರನ್ನು ಮತ್ತೆ ಮತ್ತೆ ಭೇಟಿಯಾಗಬೇಕು ಎನ್ನುವ ಹಾಗೆ. ಆಗ ನನ್ನೆಲ್ಲಾ ಬಿಗುಮಾನಗಳು, ನಾಜೂಕು ಮಂಗಮಾಯವಾಗುತಿತ್ತು. ಯಾರಿಗೆ ಗೊತ್ತು ಈ ಥರದ ನಡವಳಿಕೆ ನನ್ನದಲ್ಲವೇ ಅಲ್ಲವೇನೋ! ಜಾಸ್ತಿ ಪುಸ್ತಕಗಳನ್ನು ಓದಿದ್ದ ಪರಿಣಾಮದಿಂದ ಆದದ್ದೇನೋ. ಈ ಪ್ರಶ್ನೆಗೆ ನನಗಿನ್ನೂ ಉತ್ತರ ಸಿಕ್ಕಿಲ್ಲ. ಒಮ್ಮೊಯಂತು ಅವರ ಜತೆಯ ಗೆಳೆಯನಂತೆ ಅವರ ಮನೆಗೆ ಹೋಗಿ… ಇಸ್ಪೀಟಾಡಿ… ಮತ್ತೆ ಅವರೆಲ್ಲರ ಜತೆ ವೊಡ್ಕಾ ಕುಡಿದು… ಪ್ರಮೋಷನ್ ಕತೆ ಮಾತನಾಡಿ… ಒಂದು ನಿಮಿಷ; ಈ ವಿಷಯ ಸ್ವಲ್ಪ ಹೊತ್ತು ಇಲ್ಲೇ ಇರಲಿ; ಇನ್ನೊಂದೇನೋ ಹೇಳಬೇಕು…

ನಮ್ಮ ರಷ್ಯಾದಲ್ಲಿ ಈ ಪೆದ್ದುಪೆದ್ದು ಅಧಿಕಪ್ರಸಂಗಿ ‘ರೊಮ್ಯಾಂಟಿಕ್’ಗಳಿರಲಿಲ್ಲ. ಜರ್ಮನಿ ಮತ್ತು ಫ್ರಾನ್ಸ್ನಲ್ಲಿ ಇಂತಹ ರೊಮ್ಯಾಂಟಿಕ್ಕುಗಳಿದ್ದರು ಬಿಡಿ, ಅದು ಬೇರೆ. ಅವರೆಲ್ಲಾ ಮಹಾ ಸ್ಪಿರಿಚುವಲ್ಲುಗಳು. ಯಾವ ರಕ್ತಪಾತವೂ, ಎಂತಹ ಮಾರಣಹೋಮವೂ, ಎಷ್ಟೇ ತೀವ್ರವಾದ ರಕ್ತಕ್ರಾಂತಿಗಳೂ ಈ ಸ್ಪಿರಿಚುವಲ್ಲುಗಳ ಮೇಲೆ ಚೂರೇ ಚೂರೂ ಪರಿಣಾಮ ಬೀರುವುದಿಲ್ಲ. ಭೂಕಂಪವೇ ಆಗಲಿ, ಇಡೀ ಫ್ರಾನ್ಸ್ ದೇಶವೇ ಉಕ್ಕಿನ ಬೇಲಿಗಳಲ್ಲಿ ಕ್ಷಯಿಸಲಿ, ಈ ಮಂದಿ ಪ್ರತಿಕ್ರಿಯಿಸುವುದೂ ಇಲ್ಲ. ಮೌನವಾಗಿ ಬಾಯಿ-ಬಾಯಿ ಬಡಿದುಕೊಳ್ಳುವುದೂ ಇಲ್ಲ. ಅವೆಲ್ಲ ಏನೂ ಆಗಿಯೇ ಇಲ್ಲವೆಂಬಂತೆ ತಮ್ಮ ರೊಮ್ಯಾಂಟಿಕ್ಕ್ ಐಲುಗಳನ್ನೇ ಹಾಸಿ ಹೊದ್ದುಕೊಂಡು ಚೆಚ್ಚಗೆ ಮಲಗಿರುವ ಡೀಸೆಂಟು ಜನಗಳಿರಿವರು. ಹಾಗಂತ ಇವರೇನು ದಬಾಕಿಕೊಂಡು ಗೊರಕೆ ಹೊಡೆಯುವ ವ್ಯಕ್ತಿಗಳೆಂದು ಊಹಿಸಲೇ ಬೇಡಿ; ಆದರೆ ಆಗಲೂ ಸಹ ತಮ್ಮ ಅಧಿಕಪ್ರಸಂಗಿ ರೊಮ್ಯಾಂಟಿಕ್ಕ್ ಸಾಂಗುಗಳನ್ನು ಸಾಯುವ ಕೊನೆಯ ಘಳಿಗೆಯವರೆಗೂ ಹಾಡುವ ಮೂರ್ಖರು ಇವರೆಲ್ಲ. ನಮ್ಮ ರಷ್ಯಾದಲ್ಲಿ ಇಂತಹ ಮೂರ್ಖರಿಲ್ಲ. ಎಲ್ಲರಿಗೂ ಗೊತ್ತಿರುವ ವಿಚಾರವೇ ಇದು. ಇದೇ ನಮ್ಮನ್ನು ಈ ಪರದೇಸಿಯರಿಗಿಂತ ಭಿನ್ನವಾಗಿಯೂ, ವಿಶಿಷ್ಟವಾಗಿಯೂ ಇಟ್ಟಿರುವುದು. ಇದರ ಪರಿಣಾಮವೆಂಬಂತೆ ಈ ಅಧಿಕಪ್ರಸಂಗಿ ರೊಮ್ಯಾಂಟಿಕ್ಕ್ ಎಕ್ಸ್ಪ್ರೆಶನ್ನುಗಳು ನಮ್ಮಲ್ಲಿ ಅಲ್ಲಿಯ ಹಾಗೆ ಶುದ್ಧವಾಗಿ ವ್ಯಕ್ತವಾಗುತ್ತಿರಲಿಲ್ಲ. ಆದರೆ ಇಲ್ಲಿಯೂ ಅವೆಲ್ಲ ಶುರುವಾದದ್ದು ನಮ್ಮಲ್ಲಿರುವ *‘ಪಾಸಿಟಿವ್’ ಪತ್ರಕರ್ತರು ಮತ್ತು ವಿಮರ್ಶಕರು ಈ ಕೊಸ್ಟಾನ್ಝ್ಹೋಗ್ಲೊಗಳು ಮತ್ತು ಮಾವ *ಪಿಯೋತರ್ ಇವೋನಿವಿಚ್ಗಳ ಮೇಲೆ ಕಣ್ಣಿಟ್ಟು, ಅವರೇ ನಮ್ಮ ಐಡಿಯಲ್ಲುಗಳು ಎಂದು ಪೆದ್ದುಪೆದ್ದಾಗಿ ಒಪ್ಪಿದ್ದರಿಂದ. ಈ ಪಾಪಿಗಳೇ ಪಾಪ ನಮ್ಮ ‘ರೊಮ್ಯಾಂಟಿಕ್’ಗಳತ್ತ ಮಣ್ಣು ಎರಚಿದ್ದು ಅವರನ್ನು ಮೈಲಿಗೆ ಮಾಡಿದ್ದು, ಕೊನೆಗೆ ನಮ್ಮ ‘ರೊಮ್ಯಾಂಟಿಕ್ಕು’ಗಳೂ ಸಹ ಜರ್ಮನ್, ಫ್ರಾನ್ಸ್ ಕಡೆಯ ಅಧಿಕಪ್ರಸಂಗಿಗಳ ಥರದವರೇ ಅಂತ ಹಾಗೇ ಸುಮ್ಮನೆ ಅಂದುಕೊಂಡಿದ್ದು. ಆದರೆ ಸತ್ಯ ಈ ಊಹೆಗೆ ತದ್ವಿರುದ್ಧ. ನಮ್ಮ ‘ರೊಮ್ಯಾಂಟಿಕ್ಕು’ಗಳ ಸ್ಟೈಲ್ಲೇ ಬೇರೆ ಥರ. ಇವರು ಯುರೋಪಿನ ಥರದ ಥರದ ಅಧಿಕ ಪ್ರಸಂಗಿಗಳಿಗಿಂತ ತೀರ ವಿಭಿನ್ನ.( ಈ ‘ರೊಮ್ಯಾಂಟಿಕ್’ ಅನ್ನೋದು ತುಂಬಾ ಪ್ರಾಚೀನವಾದ, ಸಮಯವೂ ಸಲಾಂ ಹೊಡೆದ, ಗೌರಾವಾನ್ವಿತ ಪದ. ಇದು ಎಲ್ಲರಿಗೂ ಚಿರಪರಿಚಿತವೆ. ಈ ಶಬ್ಧವನ್ನು ಇಲ್ಲಿ ನನಗೆ ಬಳಸಲು ಬಿಡಿ) ನಮ್ಮ ರೊಮ್ಯಾಂಟಿಕ್ಕುಗಳ ಗುಣಲಕ್ಷಣವೆಂದರೆ: ಎಲ್ಲವನ್ನೂ ಅರ್ಥಮಾಡಿಕೊಳ್ಳುವುದು, ಎಲ್ಲವನ್ನೂ ನಮ್ಮ ಪಾಸಿಟಿವ್ ಬುದ್ಧಿಜೀವಿಗಳು ಗ್ರಹಿಸಿದಕ್ಕಿಂತಲೂ ಸೂಕ್ಷ್ಮವಾಗಿ ಗ್ರಹಿಸುವುದು. ಆದರೆ ಇವರು ಹೇಗೆಂದರೆ ಯಾರನ್ನೂ ಮತ್ತು ಯಾವುದನ್ನೂ ಒಪ್ಪುವುದಿಲ್ಲ. ಹಾಗಂತ ಯಾರನ್ನೂ ಮತ್ತು ಯಾವುದನ್ನೂ ಉಗಿಯುವುದೂ ಇಲ್ಲ… ಬೇಗ ರಾಜಿಯಾಗಿ ಎಲ್ಲದಕ್ಕೂ ಸೈ ಅಂತ ತಲೆಯಾಡಿಸುವುದರಲ್ಲಿ ಭಾರಿ ನಿಪುಣರಿವರು. ಹಾಗೇ ಬಹಳ ಸಮಯ ಪ್ರಜ್ಞೆಯಿಂದ ವರ್ತಿಸುವ ಕುಶಲಜೀವಿಗಳು. ಅದಕ್ಕೇ ಅಪ್ಪಿತಪ್ಪಿಯೂ ಈ ರೊಮ್ಯಾಂಟಿಕ್ಕುಗಳು ಲೌಕಿಕ ಲಕ್ಷ್ಯವನ್ನು ಮರೆಯದೇ ಜೀವಿಸುವುದು(ಅಂದರೆ ಗರ್ವಮೆಂಟಿಂದ ಬರೋ ಪೆನ್ನ್ಶನ್ನು, ಬಾಡಿಗೆ ಇಲ್ದೇ ಇರೋ ಕ್ವಾರ್ಟಸ್ಸು, ಸಿಟಿ ಮಧ್ಯದಲ್ಲೇ ಒಳ್ಳೆ ಲ್ಯಾಂಡು, ಗ್ರಾನೈಟಲ್ಲೇ ಆರ್ಟಿಶ್ಟಿಕ್ ಆಗಿ ಕಟ್ಟಿರೋ ಬಂಗ್ಲೇ, ಹೊಸ ಏಸಿ ಕಾರು ಇತ್ಯಾದಿ,ಇತ್ಯಾದಿ.); ಎಂತಹ ಕವಿಸಮಯವಾಗಿರಲಿ, ಯಾವ ಸಮ್ಮೇಳನವಾಗಿರಲಿ ಇವರ ಒಂದು ಕಣ್ಣು ಈ ಲಕ್ಷ್ಯದತ್ತವೇ ನೆಟ್ಟಿರುತ್ತದೆ. ವಾಲ್ಯುಮ್ಗಟ್ಟಲೇ ಸಮಗ್ರ ಕಥೆ-ಕಾವ್ಯ ಸುಷ್ಟಿಸುವಾಗಲು ಇವರ ದೃಷ್ಟಿ ಇತ್ತವೇ. ಆದರೆ ಅದೇ ಸಮಯಕ್ಕೆ ಸರಿಯಾಗಿ ಇವರಲ್ಲಿರುವ ಕನ್ಯೆಯಂಥಾ “ಅದ್ಭುತ ಚೆಲುವನ್ನು” ಸಾವಿನ ಕಡೇ ನಿಮಿಷದವರೆಗೂ ಸಂರಕ್ಷಿಸಿಡುವುದು; ಹಾಗೇ ಅಕಸ್ಮಾತಾಗಿ, ಕನಿಷ್ಟ ಪಕ್ಷ ಆ ಅದೇ ಹಳೆಯ ಅದ್ಭುತ ಚೆಲುವಿಗೋಸ್ಕರವಾದರೂ ಇವರು ತಮ್ಮನ್ನು ತಾವೇ ರೇಷ್ಮೆ ಬಟ್ಟೆಯಲ್ಲಿ ಸುತ್ತಿಡುವ ವಜ್ರದೋಲೆಯಂತೆ, ಸಂರಕ್ಷಿಸಿಕೊಂಡೂ ಇಟ್ಟಿರುತ್ತಾರೆ ಎಂಬುದನ್ನು ನೀವು ಮರೆಯಬಾರದು. ನಮ್ಮ ರೊಮ್ಯಾಂಟಿಕ್ಕುಗಳು ತಮ್ಮೆಲ್ಲ ಅನುಕೂಲ-ಸೌಲಭ್ಯಗಳಿಗೆ ಏನೂ ಚ್ಯುತಿ ಬರದ ಹಾಗೆ ಬದುಕುವ ವಿಸ್ತಾರ ವ್ಯಕ್ತಿತ್ವದ ಪರೋಪಕಾರಿಗಳು ಹಾಗೇ ಖದೀಮ ಕಳ್ಳರು. ಹೌದೂ ಸ್ವಾಮೇ… ನನಗೆ ಚೆನ್ನಾಗಿ ಗೊತ್ತು ಎಂಥಾ ಖದೀಮರು ಇವರು ಅಂತ. ಆಣೆ ಮಾಡಿ ಹೇಳುತ್ತಿದ್ದೇನೆ.

ಆದರೆ ಒಂದೇ ಏಟಿಗೆ ಇಷ್ಟೆಲ್ಲ ಆಗಬೇಕೆಂದರೆ ಆ ರೊಮ್ಯಾಂಟಿಕ್ ಮೊದಲು ಬುದ್ಧಿಜೀವಿಯಾಗಿರಬೇಕು. ಆದರೆ, ಅಯ್ಯೋ! ಏನು ಮಾತು ಅಂತ ಆಡುತ್ತಾ ಇದ್ದೇನೆ ನಾನು! ಈ ರೊಮ್ಯಾಂಟಿಕ್ ಸದಾ ಬುದ್ಧಿಜೀವಿಯೇ. ಈ ಮಾತು ಯಾಕೆ ಬಂತು ಅಂದರೆ ನಮ್ಮಲ್ಲಿ ಮೂರ್ಖ ರೊಮ್ಯಾಂಟಿಕ್ಕುಗಳೂ ಇದ್ದರು. ಆದರೆ ಬಿಡಿ ಅವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅದ್ಯಾಕೆ ಅಂತೀರ? ಅದೇನಾಯಿತು, ಈ ಮೂರ್ಖರೊಮ್ಯಾಂಟಿಕ್ಕುಗಳು, ಯೌವ್ವನ ಹೂವಾಗಿ ಅರಳುತ್ತಿರುವ ಕಾಲದಲ್ಲಿ, ಸಂಪೂರ್ಣ ಜರ್ಮನ್ನುಗಳಾಗಿ ರೂಪಾಂತರ ಹೊಂದಿ ಭ್ರಷ್ಟರಾದರು; ಹಾಗೇ ತಮ್ಮ ಅಮೂಲ್ಯ ರತ್ನಗಳನ್ನು ಉಳಿಸಿಕೊಳ್ಳಲು ಈ ಜನ ಅಲ್ಲೇ ಎಲ್ಲೋ ಸೆಟ್ಲ್ ಕೂಡ ಆದರು. ಬಹುಶಃ ಈ Weimಚಿಡಿ ಅಲ್ಲೋ ಅಥವಾ ಈ ಃಟಚಿಛಿಞ ಈoಡಿesಣ ಅಲ್ಲೋ.

ಈಗ ನನ್ನನ್ನೇ ನೋಡಿ. ನನ್ನ ಸರಕಾರಿ ನೌಕರಿಯ ಕಂಡರೆ ಶುದ್ಧ ಹೇಸಿಗೆ, ಸಿಟ್ಟು ಎಲ್ಲಾ ಇದ್ದರೂ, ಮುಕ್ತವಾಗಿ ಅದನ್ನು ಉಗಿಯುವುದು ಬೈಯುವುದೆಲ್ಲ ಎಂದೂ ಮಾಡಲೇ ಇಲ್ಲ. ಏಕೆ ಹೇಳೀ? ಅಲ್ಲಿ ಹೋಗಿ ಸುಮ್ಮನೆ ಕೂತಿದ್ದಕ್ಕೆ ತಿಂಗ್-ತಿಂಗ್ಳು ಒಳ್ಳೆ ಸಂಬಳ ಬರೋದು. ಇದರ ಪರಿಣಾಮ ಎಂಬಂತೆ ನಾನು ನನ್ನ ನೌಕರಿಯನ್ನು ಯಾವತ್ತೂ ಉಗಿಯುತ್ತಿರಲಿಲ್ಲ(ಇದರ ಟಿಪ್ಪಣಿ ಮಾಡಿಕೊಳ್ಳಿ). ನಮ್ಮ ರೊಮ್ಯಾಂಟಿಕ್ಕುಗಳು ನನ್ನ ಹಾಗೆಯೇ. ಬೇಕಾದರೆ ಬೇಗನೆ ಇವರೆಲ್ಲ ಹುಚ್ಚರಾಗುತ್ತರೇ ವಿನಃ- ಇವರು ಹುಚ್ಚರಾದ ಸಂಧರ್ಭಗಳೇ ತೀರ ಅಪರೂಪ! ಇರಲಿ- ಯಾರನ್ನೂ ಅಪ್ಪಿತಪ್ಪಿಯೂ ಉಗಿಯುವುದು ಬೈಯುವುದು ಎಲ್ಲ ಮಾಡೋದಿಲ್ಲ. ಇವರ ಟೀಕೆ-ಗೀಕೆ, ನರಬಿಟ್ಟೋ ಹಾಗೆ ಅರಚೋದು… ಇದೆಲ್ಲ ಯಾವಾಗ ಅಂದರೆ ಬೇರೆ ಏನಾದರೂ ಕರಿಯರ್ರು ಇವರಿಗಾಗಿಯೇ ರೆಡಿ ಆಗಿದ್ದಾಗ… ಇಲ್ಲಾಂದ್ರೆ ಎಂತಾ ಸೌಮ್ಯ ಸ್ವಭಾವದ ಎಂದೂ ಬೆವರದ, ಬೈಯದ, ನ್ಯೂರೊಸಿಸಲ್ಲಿ ನರಳದ ಆರೋಗ್ಯ ಜೀವಿಗಳಪ್ಪ ಇವರು; ಮತ್ತೆ ತಲೆ ಮೇಲೆ ತಲೆ ಬೀಳಲಿ, ಇವರನ್ನು ಯಾರೂ ಎಲ್ಲಿಂದಲೂ ಉಗಿದು ಒದ್ದು ಆಚೆ ಎಸೆಯುವುದಿಲ್ಲ. ಅಕಸ್ಮಾತ್ ಈ ಮಹಾಶಯರಿಗೆ ನಿಜಕ್ಕೂ ಹುಚ್ಚು ಏರಿದರೂ ರಾಜ ಮರ್ಯಾದೆಯೊಂದಿಗೆ “ಸ್ಪೇನ್ ದೊರೆಗಳಂತೆ”* ಹುಚ್ಚಾಸ್ಪತ್ರೆಯವರೆಗೆ ಮೆರವಣಿಗೆ ಮಾಡಿಸಿ ಇವರನ್ನು ಪೀಠಾರೋಹಣ ಮಾಡಿಸಲಾಗುತ್ತದೆ ಅಷ್ಟೇ. ಆದರೆ ನಮ್ಮ ರಷ್ಯಾದಲ್ಲಿ, ಕಡ್ಡಿದೇಹದಲ್ಲಿ ಬಿಳಿಚಿಕೊಂಡಿರುವ ಕೂದಲಿರುವ ಜನರಿಗೆ ಮಾತ್ರ ನಿಜಕ್ಕೂ ಹುಚ್ಚು ಹಿಡಿಯುವುದು; ಒಳ್ಳೇ ಬ್ಯಾಂಕ್ ಬ್ಯಾಲ್ನ್ಸಿರುವ ರೊಮ್ಯಾಂಟಿಕ್ಕುಗಳಿಗಲ್ಲ. ಏಕೆಂದರೆ ಈ ಅಗಣಿತ ರೊಮ್ಯಾಂಟಿಕ್ಕುಗಳು ತಮ್ಮತಮ್ಮ ಕರೀಯರ್ರನ ಉತ್ತರಾರ್ಧದಲ್ಲಿ ಒಳ್ಳೇ ಹೈ ಪೆÇಸಿಷನ್ನ್ಗೆ ಹೇಗೆ ನೆಗೆಯುತ್ತಾರೆ ಅಂದರೆ ಕಪ್ಪೆಗಳು ಕೂಡ ಇವರನ್ನು ಕಣ್ಣು-ಬಾಯಿ ಬಿಡ್ತಾ ನೋಡಬೇಕಷ್ಟೇ. ಅಬ್ಬಾ, ಅಬ್ಬಾ, ಅಬ್ಬಾ ಅತಿಜಾಣರು…! ಅತಿಜಾಣರು! ಎಂಥಾ ವರ್ಸಟೈಲ್ ಪರ್ಸನಾಲ್ಟಿ ರ್ರೀ ಇವರ್ರದ್ದು ಹ್ಞಾ! ಎಂಥಾ ಕಾಂಟ್ರಿಡಕ್ಟರೀ ಫಿûೀಲಿಂಗ್ಸು ಇವ್ರ್ದು…! ಚಿತ್ರ ಬರೀತಾರೆ, ಸಂಗೀತ ಹಾಡ್ತಾರೆ, ಡೋಲು, ವೀಣೆ, ಮೃದಂಗಗಳನ್ನೂ ಬಡೀತರೆ… ಕಥೆ, ಕವಿತೆ ಅದೆಲ್ಲ ಬರೆಯೋದು ಇದ್ದದ್ದೇ ಬಿಡಿ. ಮತ್ತೆ ಎಂಥಾ ಭಾಷಣ ಮಾಡ್ತಾರೆ, ಇವರ ಮಾತನ್ನ ಕೇಳ್ತಾ ಇರೋ ಆಯ್ದು ತಿನ್ನೋ ಕೋಳಿಗಳಂತಹ ಕೇಳುಗರು ಗಾಬರಿ ಆಗೋ ಹಾಗೇ ಜಗತ್ತನ್ನ, ಜನರನ್ನ, ದೊಡ್ಡ ಮನುಷ್ಯರನ್ನ ಖಂಡಿಸ್ತಾರೆ… ಆದರೆ ಅದೇ ಹೊತ್ತಿಗೆ ಒಳ್ಳೇ ಸಂಬಳ ಎಣಿಸ್ಕೊಂಡು, ಸಂಜೆ ಹೊತ್ತು ವಾಕಿಂಗ್ ಮಾಡ್ತಾ, ಬೋಂಡ ಬಜ್ಜಿ ತಿನ್ತಾ, ಹಾಯಗಿ ಇರ್ತಾರೆ.

ಆ ದಿನಗಳಲ್ಲೂ ಹೀಗೇ ಅಂದುಕೊಂಡು ಹಾಯಾಗಿ ಇದ್ದೆ ನಾನಿ. ಈಗಲೂ ನನ್ನದು ಇದೇ ಅಭಿಪ್ರಾಯ. ಅದಕ್ಕೇ ನಮ್ಮಲ್ಲಿನ ಅದೆಷ್ಟೋ ದೊಡ್ಡ ಮನುಷ್ಯರು ಅವರವರ ಅಧಃಪತನದ ಆಳದಲ್ಲೂ ತಮ್ಮ ಆದರ್ಶವನ್ನು ಒಂಟಿಯಾಗಿಸಿ ಪೇರಿ ಕೀಳುವುದಿಲ್ಲ. ಪಕ್ಕಾ ಖದೀಮರೂ ಮತ್ತು ದ್ರೋಹಿಗಳೂ ಆಗಿದ್ದರೂ, ತಮ್ಮ ಐಡಿಯಲ್ಲಿಗೋಸ್ಕರ ಒಂದು ಕಿರುಬೆರಳನ್ನೂ ಎತ್ತದೇ ಇದ್ದರೂ, ತಮ್ಮ ಮೂಲ ಆದರ್ಶವನ್ನು ಸಿಕ್ಕಾಪಟ್ಟೆ ಗೌರವಿಸುವ- ಅಂದರೆ ಗೌರವದಲ್ಲಿ ಕಣ್ಣೀರು ಸುರಿಸುವಷ್ಟು- ಅಸಾಮಾನ್ಯ ಪ್ರಾಮಾಣಿಕ ಹೃದಯದವರಿವರು. ಹೌದು ಸ್ವಾಮಿ! ನಮ್ಮಲ್ಲಿ ಪಕ್ಕಾ ಫಟಿಂಗರೇ ತಾನೇ ಅಧ್ಬುತ ಪ್ರಾಮಾಣಿಕರು. ಹೇಳಿದ ಮಾತೇ,ಆದರೂ ಇನ್ನೊಮ್ಮೆ ಹೇಳುವೆ ಕೇಳಿ: ನಮ್ಮ ಈ ರೊಮ್ಯಾಂಟಿಕ್ಕುಗಳ ಮಠದಿಂದ ಒಮ್ಮೊಮ್ಮೆ ಪಾಸಿಟಿವ್ ಬಗ್ಗೆ ಪಕ್ಕಾ ಜ್ಞಾನವಿರುವ ಎಂಥೆಂಥ ವ್ಯಾಪಾರಿ ಪ್ರಾಕ್ಟಿಕಲ್, ಕ್ಯಾಪಿಟಲಿಶ್ಟ್ ತಿಮಿಂಗಲಗಳು, (ಮುದ್ದಿನಲ್ಲಿ ಇಲ್ಲಿ “ತಿಮಿಂಗಿಲಗಳು” ಅನ್ನೋ ಪದ ಬಳಸಿರುವೆ) ಹೇಗೆ ಏಳುತ್ತವೆ ಎಂದರೆ ಆಗ ದಿಗ್ಮೂಢರಾದ ಇವರ ಬಾಸುಗಳು ಮತ್ತು ಪಬ್ಲಿಕ್ಕು ಮೌನವಾಗಿ ಇವರನ್ನು ನೋಡುತ್ತಾ ಆಶ್ಚರ್ಯದಲ್ಲಿ ಸ್ಖಲಿಸಿಕೊಳ್ಳಬೇಕಷ್ಟೇ.

ಇವರ ಬಹುಮುಖ ಪ್ರಭೆ ಅತ್ಯದ್ಭುತ! ಈ ಪ್ರಭೆಯು ಹೇಗೆಲ್ಲಾ ಕವಲೊಡೆಯವುದೋ, ಹಾಗೇ ಬರುವ ಭವಿಷ್ಯಕ್ಕೆ ಇದು ಹೇಗೇ ತಗಲುತ್ತದೋ, ಆ ದೇವರೇ ಬಲ್ಲ! ಇದೇನು ಬಡಪಾಯಿ ಸರಕಲ್ಲ. ಹಾಗೆಯೇ ನಾನೇನು ಪೆದ್ದು-ಪೆದ್ದಾದ ಅಥವಾ ದರ್ಪದ ದೇಶ ಪ್ರೇಮದಲ್ಲಿ ಹೀಗೆಲ್ಲ ಹೇಳುತ್ತಿಲ್ಲ. ಆದರೆ ನಾನು ಮತ್ತೆ ತಮಾಷೆ ಮಾಡುತ್ತಿದ್ದೇನೆ ಎಂದು ನೀವು ಕಲ್ಪಿಸಿಕೊಂಡಿದ್ದೀರ? ಅಥವಾ ಬಹುಶಃ ನಾನು ನಿಜಕ್ಕೂ ಹಾಗೇ ಯೋಚಿಸುತ್ತಿದ್ದೇನೆ ಎನ್ನುವುದು ನಿಮ್ಮ ಊಹೆಯೇ? ಅದೇನೇ ಇರಲಿ, ಸಜ್ಜನರೇ ನಿಮ್ಮ ಈ ಎರಡೂ ದೃಷ್ಟಿಕೋನಗಳನ್ನೂ ನಾನು ಸ್ವಾಗತಿಸುತ್ತೇನೆ, ಅವೇ ನನಗೆ ಮಹಾ ಮರ್ಯಾದೆಯಂತೆ, ವಿಶೇಷ ಉಪಕಾರದಂತೆ. ಹಾಗೆಯೇ ಅಡ್ಡದಾರಿ ಹಿಡಿದು ಈ ವಿಷಯ ಮಾತನಾಡಿದ್ದಕ್ಕೆ ಕ್ಷಮಿಸಿ ನನ್ನನ್ನು.
ಸಹೋದ್ಯೋಗಿಗಳ ಜೊತೆ ನನ್ನ ಗೆಳೆತನ ಎಂದಿಗೂ ಸ್ಥಿರವಾಗಿ ಉಳಿಯುತ್ತಿರಲಿಲ್ಲ. ಸಹಜವಾಗಿಯೇ, ನಾನು ಕಾಲು ಕೆರೆದುಕೊಂಡು ಜಗಳವಾಡಿ ಅವರೆಲ್ಲರನ್ನೂ ಓಡಿಸಿ ಬಿಡುತ್ತಿದ್ದೆ. ನನ್ನ ಹುಡುಗುಬುಧ್ಧಿಯಿಂದಾಗಿ ಅವರು ಎದುರಿಗೆ ಸಿಕ್ಕಾಗ ಹಲ್ಲು ಗಿಂಜಿ ನಗುವುದನ್ನೂ ನಿಲ್ಲಿಸಿದ್ದೆ, ಅವರ ಜತೆಗಿದ್ದ ಎಲ್ಲ ಸಂಬಂಧಗಳ ಬೇರುಗಳನ್ನು ನಾನು ಕತ್ತರಿಸಿಕೊಂಡಂತೆ. ಆದರೆ ಹೀಗೇ ಆಗಿದ್ದು ಒಮ್ಮೆ ಮಾತ್ರ. ಯಾವುದೋ ಸಾಮಾನ್ಯ ನಿಯಮದಂತೆ ನಾನು ಸದಾ ಏಕಾಂಗಿಯಾಗಿರುತ್ತಿದ್ದೆ.

ನೋಡಿ, ಆ ಕಾಲದಿಂದಲೂ ನಾನು ತುಂಬಾ ಹೊತ್ತು ಮನೆಯಲ್ಲೇ ಭೂಗತವಾಗಿ ಬರೀ ಓದುತ್ತಾ ಇರುತ್ತಿದ್ದೆ. ಬಾಹ್ಯ ಸಂವೇದನೆಯಿಂದಾದರೂ ನನ್ನೊಳಗೆ ಒಂದೇ ಸಮನೆ ಕೊತ-ಕೊತನೆ ಕುದಿಯುತ್ತಿದ್ದ ಪ್ರಜ್ಞಾ ಪ್ರವಾಹ ಮೆತ್ತಗಾಗುವುದೋ ಎಂಬ ಆಸೆಯಿಂದ. ಆದರೆ ನನಗಿದ್ದ ಬಾಹ್ಯ ಸಂವೇದನೆಯೆಂದರೆ ಅದು ಓದು ಮಾತ್ರ. ಇದರಿಂದ ಎಷ್ಟೋ ಉಪಕಾರವಾಗಿದೆ ನನಗೆ. ನನ್ನನ್ನು ಉದ್ರೇಕಗೊಳಿಸುತ್ತಿದ್ದು, ಪರಮಾನಂದದಲ್ಲಿ ತೇಲಿಸಿದ್ದು, ಗೋಳಾಡಿಸಿದ್ದು ಓದೇ! ಹಾಗಿದ್ದೂ ಆಗಾಗ ಈ ಓದು ಸಹ ಬೇಸರತರಿಸುತ್ತಿತ್ತು. ಕಸರತ್ತಿನ ಅವಶ್ಯಕತೆ ನನಗೂ ಇದೆ ಸ್ವಾಮಿ! ಆಗೆಲ್ಲಾ ನಾನು ಇದ್ದಕ್ಕಿದ್ದಂತೆಯೇ ಭೂಗತದ ಕತ್ತಲಲ್ಲಿ ಗಬ್ಬೆದ್ದು ಹೋಗಿರುವ ಕ್ಷುಲ್ಲಕ ಹಾದರ ಲೋಕದೊಳಗೆ ಒಬ್ಬನೇ ಮುಳುಗಿಬಿಡುತ್ತಿದ್ದೆ. ಅಯ್ಯೋ…. ಆಗ ಉನ್ಮಾದರೋಗದ ತಳಮಳದಲ್ಲಿ ನಾನು ಹೇಗೆಲ್ಲ ತಲ್ಲಣಿಸಿದ್ದೆ! ನನ್ನೊಳಗೆ ಉಕ್ಕುತ್ತಿದ್ದ ರೋಗಗ್ರಸ್ತ ಮುಂಗೋಪದ ಫಲಿತಾಂಶವೆಂಬಂತೆ ಈ ನೀಚ ಖಯಾಲಿಗಳು ತೀವ್ರವಾಗಿ ನನ್ನನ್ನು ಉರಿಸುತ್ತಿದ್ದವು. ಓದುವುದನ್ನು ಬಿಟ್ಟು ನನಗೆ ಬೇರೇ ಯಾವ ಆಸ್ತಿಯೂ ಇರಲಿಲ್ಲ. ಅಂದರೆ, ಆಗ ನನ್ನ ಸುತ್ತಮುತ್ತಲು ನನ್ನನ್ನು ಸೆಳೆಯುವ ಮತ್ತು ನನ್ನಿಂದ ಮರ್ಯಾದೆ ಪಡೆಯುವ ಎಂಥದ್ದೂ ಇರಲಿಲ್ಲ. ಇದರೆಲ್ಲದರ ಜತೆಗೆ, ಹತಾಶೆಯ ವಿಷಬಳ್ಳಿಗಳು ಹಬ್ಬುತ್ತಾ ನಿಧಾನಕ್ಕೆ ನನ್ನನ್ನು ಆವರಿಸಿಕೊಳ್ಳುತ್ತಿದ್ದವು. ವೈರುಧ್ಯವನ್ನು, ಅಸಂಗತವನ್ನೂ ಮತಿಭ್ರಾಂತನಂತೆ ಹಂಬಲಿಸಿ ವ್ಯಭಿಚಾರಿಯಾದೆ. ನಾನು ಮಾಡಿದ್ದೇ ಸರಿ ಎಂದು ಸಾಧಿಸಲು ಇವೆಲ್ಲವನ್ನು ಬರೆಯುತ್ತಿಲ್ಲ. ಆದರೆ ಇಲ್ಲ… ಇಲ್ಲ… ಅದೂ ಸುಳ್ಳು! ನಿಜಕ್ಕೂ ನನ್ನನ್ನು ನಾನೇ ಸಮರ್ಥಿಸಲೇ ಬೇಕಿಲ್ಲಿ. ನನ್ನ ಲಾಭಕ್ಕೆಂದೇ ಈ ಸೂಕ್ಷ್ಮ ಅವಲೋಕನ ಸಜ್ಜನರೇ. ನನಗೆ ಸುಳ್ಳು ಹೇಳಲು ಇಷ್ಟವಿಲ್ಲ. ಹೇಳುವುದಿಲ್ಲವೆಂದು ಆಣೆ ಕೂಡ ಮಾಡಿದ್ದೇನೆ.

ಠಕ್ಕನಂತೆ ಅಂಜುತ್ತಾ ರಾತ್ರಿಯ ಹೊತ್ತು ಹಾದರದ ಮೇಲೆ ಹಾದರ ಮಾಡುತ್ತಿದ್ದಾಗ ನಾಚಿಕೆಯಂತೂ ಬಿಟ್ಟೇ ಹೋಗದ ಮಡದಿಯಂತೆ ನನಗೆ ಅಂಟಿಕೊಂಡಿರುತಿತ್ತು. ಆ ಘಳಿಗೆಗಳಲ್ಲಿ ಅವಮಾನ ಸಿಟ್ಟಿನಲ್ಲಿ ಕುದ್ದು ಶಪಿಸಿಯೂ ಇದ್ದೆ. ಆ ದಿನಗಳಲ್ಲಿಯೂ ನನ್ನ ಅಧೋಲೋಕವನ್ನು ಈ ಆತ್ಮದೊಳಗೆ ಇಟ್ಟುಕೊಂಡು ತಿರುಗಾಡುತ್ತಿದ್ದೆ. ಗೊತ್ತಿದವರನ್ನು ಅಲ್ಲಿ ನೋಡಿ ಬಿಡುವ ಅಥವಾ ನೋಡಿದವರು ನನ್ನನ್ನು ಗುರುತು ಹಿಡಿಯುವ ಭಯವಿದ್ದರಿಂದ ಬೇರೆ-ಬೇರೆ ಮೂಲೆಯಲ್ಲಿದ್ದ, ಅನಾಮಿಕ ಗುಪ್ತಸ್ಥಳಗಳಿಗೆ ನುಗ್ಗುತ್ತಿದ್ದೆ.
ಒಂದಿರಿಳು, ಯಾವುದೋ ಶೇಂದಿ ಅಂಗಡಿಯ ಪಕ್ಕದಲ್ಲೇ ಹಾದು ಹೋಗುತ್ತಿದ್ದೆ. ಅಲ್ಲಿನ ಕಿಟಕಿಯಿಂದ ತುಂಬಾ ಬೆಳಕು ಮತ್ತೆ ಹೊಗೆ; ಒಳಗೆ ನೋಡಿದರೆ ಕೆಲ ಸಜ್ಜನರು ಬಿಲಿಯರ್ಡ್ಸ್ ಕೋಲುಗಳನ್ನೇ ಬೀಸಿ ಹೊಡೆದಾಡುತ್ತಿದ್ದಾರೆ! ಜಗಳ ಬಿಸಿಯೇರಿ, ಒಬ್ಬನನ್ನಂತೂ ಅದೇ ಕಿಟಕಿಯಿಂದ ಕೊನೆಗೆ ಆಚೆಗೇ ಬಿಸಾಡಿದರು ಬೇರೆ. ಮಮೂಲಿ ರಾತ್ರಿಗಳಲ್ಲಾಗಿದ್ದರೆ ನಾನು ಹೇಸಿಗೆಯಲ್ಲಿ ಥೂ ಥೂ ಅಂದುಕೊಂಡು ಮನೆಗೆ ವಾಪಾಸ್ಸಾಗುತ್ತಿದ್ದೆ. ಆದರೆ ಅವತ್ತು ನನ್ನ ಮನಃಸ್ಥಿತಿ ಎಷ್ಟು ಕೆಟ್ಟಿತ್ತೆಂದರೆ ಬಿಸಾಡಲ್ಪಟ್ಟ ಸಜ್ಜನನ್ನು ನೋಡುತ್ತಿದ್ದ ಹಾಗೆ ಹೊಟ್ಟೆಯಲ್ಲಿ ಅಸೂಯೆ ಹೊತ್ತಿತು. ಅದರ ಆಳ ಎಷ್ಟಿತ್ತೆಂದರೆ ನಾನು ಆ ಶೇಂದಿ ಅಂಗಡಿಯ ಒಳ ಹೊಕ್ಕವನೇ, ಆ ಜಟಾಪಟಿಯ ತಾಣವಾಗಿದ್ದ ಬಿಲಿಯರ್ಡ್ಸ್-ರೂಮ್ಗೆ ನುಗ್ಗಿದೆ. “ಬಹುಶಃ” ನಾನು ಯೋಚಿಸುತ್ತಲೇ ಇದ್ದೆ “ ಅವರ ಜತೆ ನಾನೂ ಕಚ್ಚಾಡುವೆ, ಆಗ ನನ್ನನ್ನೂ ಅವರು ಕಿಟಕಿಯಿಂದ ಆಚೆಗೆ ಬಿಸಾಡುವರು”

ನಾನು ಕುಡಿದಿರಲಿಲ್ಲ. ಆದರೇನು ಮಾಡಲಿ ನೀವೇ ಹೇಳಿ? ಹತಾಶೆಯ ನಶೆ ಏರಿದಾಗ ಈ ಪರಿಯ ಉನ್ಮಾದ ರೋಗಗಳು ನಿಮ್ಮನ್ನು ಇಂತಹ ಕ್ರಿಯೆಗಳಿಗೆ ಪ್ರೇರೇಪಿಸುತ್ತವೆ. ಆದರೆ ಅವತ್ತು ಮಾತ್ರ ಅಲ್ಲಿ ಏನೂ ಆಗಲಿಲ್ಲ. ಕಿಟಕಿಯಿಂದ ಹೊರಗೆ ಬಿಸಾಡಲ್ಪಡುವುದಕ್ಕೂ ನಾನು ಯೋಗ್ಯವಾಗಿರಲಿಲ್ಲವೇನೋ! ನನಗೆ ಬೇಕಾಗಿದ್ದ ನನ್ನ ಮಾರಾಮಾರಿಯಿಲ್ಲದಯೇ ಬೇಜಾರಲ್ಲಿ ವಾಪಾಸ್ಸು ಮನೆಗೆ ಹೋದೆ.
ಒಂದು ದಿನ ಆಫೀಸರೊಬ್ಬ ನನ್ನನ್ನು ನನ್ನ ಜಾಗದಲ್ಲಿ ಇಟ್ಟು ಕೆಣಕಿದ್ದ.

ಅದೇನಾಯಿತು ಅಂದರೆ, ಒಂದು ಬಿಲಿಯರ್ಡ್ಸ್-ಟೇಬಲ್ನ ಪಕ್ಕ ನಾನು ಏನೋ ಯೋಚಿಸುತ್ತಾ ಸುಮ್ಮನೇ ನಿಂತಿದ್ದೆ. ಅದು ನೋಡಿದರೆ ಜನ ಓಡಾಡುವ ಜಾಗ; ಅವರಿಗೆಲ್ಲ ನಾನು ಅಡ್ಡ ಎಂಬ ಪರಿಕಲ್ಪನೆಯೂ ನನಗಿರಲಿಲ್ಲ. ಆಗಲೇ ಈ ಮನುಷ್ಯನೂ ಆ ಕಡೆ ಹೋಗಬೇಕಿತ್ತೋ ಏನೋ; ಈತ ನನ್ನ ಹೆಗಲನ್ನು ಹಾಗೆ ಹಿಡಿದು, ಒಂದೂ ಮಾತಾಡದೆ, ಏನನ್ನುನ್ನೂ ಹೇಳದೆ, ಯಾವ ಸಮಜಾಯಿಷಿಯನ್ನೂ ಸಹಾ ನೀಡದೆ, ಆ ಹೆಂಡದಂಗಡಿಯ ಇನ್ನೊಂದು ಮೂಲೆಗೆ ನನ್ನ ರವಾನಿಸಿದ. ನಂತರ ನನ್ನ ಅಸ್ತಿತ್ವವನ್ನು ಗಮನಿಸಿಯೇ ಇಲ್ಲವೆಂಬಂತೆ ಆತ ಮರಳಿ ಬಂದ ದಿಕ್ಕಿನಲ್ಲಿ ಹೋದ. ಅವನು ನನ್ನ ಜಾಡಿಸಿ ಒದ್ದಿದ್ದರೂ, ನಾನು ಅವನನ್ನು ಖಂಡಿತವಾಗಿಯೂ ಕ್ಷಮಿಸಿ, ಪುನಃ ಎದ್ದು ನಿಂತು ನನ್ನ ಎದೆಯತ್ತ ಬೊಟ್ಟು ಮಾಡಿ ಮುಂದೆಳೆದುಕೊಂಡು ‘ಇನ್ನೊಮ್ಮೆ ಒದೆ’ ಎನ್ನುತ್ತಿದ್ದೆನೆನೋ… ಆದರೆ ಹೀಗೆ ನನ್ನನ್ನು ನಿರ್ಜೀವ ಕುರ್ಚಿಯಂತೆ ಎತ್ತಿ ಒಗೆದನಲ್ಲ ಅವನು, ಇದು ಆಕ್ಷಮ್ಯ.

ದೆವ್ವಕ್ಕೇ ಗೊತ್ತು ಒಂದೊಳ್ಳೆ ಅಚ್ಚುಕಟ್ಟಾದ, ಡೀಸೆಂಟಾದ, ಸಾಹಿತ್ಯಿಕ ಹೊಡೆದಾಟಕ್ಕೆ ನಾನು ಏನೆಲ್ಲ ಮಾಡಲು ಸಿದ್ಧನಿದ್ದೆ ಎಂದು. ಆ ಅಧಿಕಾರಿ ಆರಡಿ ಉದ್ದದ ದೊಡ್ಡಾಳು, ನಾನೋ ಕ್ಷೀಣಿಸುತ್ತಿರುವ ಕುಳ್ಳ, ನನ್ನನ್ನು ಒಂದು ನೊಣದಂತೆ ಕಂಡಿದ್ದ ಅವನು. ಹಾಗಿದ್ದರೂ ಈಗ ಜಗಳದ ಕೀಲಿ ಇದ್ದದ್ದು ನನ್ನ ಕೈಯಲ್ಲಿ. ನಾನು ಪ್ರತಿಭಟಿಸಬೇಕಿತ್ತು ಅಷ್ಟೇ. ಖಂಡಿತವಾಗಿಯೂ ಆಗ ನನ್ನನ್ನು ಈ ದೊಡ್ಡ ಮನುಷ್ಯರು ಕಿಟಕಿಯಿಂದ ಆಚೆಗೆ ಎಸೆಯುತ್ತಿದ್ದರು. ಆದರೆ ನನ್ನ ಮನಸ್ಸಿಗೆ ಇನ್ನೊಂದೇನೋ ಬೇಕಾಗಿತ್ತು… ಅದಕ್ಕೇ ನನ್ನ ದ್ವೇಷವನ್ನು ಮೃದುವಾಗಿ ಸವರುತ್ತ ಹೊರಗೆ ಹೋದೆ; ಕತ್ತಲಿನ ಜತೆ ಕತ್ತಲಾದೆ.
ನೇರವಾಗಿ ಮನೆಗೇ ಹೋದೆ. ಗೊಂದಲಗೊಂಡ ಮನಸ್ಸು ಪ್ರಕ್ಷುಬ್ಧವಾಗಿತ್ತು. ಮರು ರಾತ್ರಿ ಮತ್ತೆ ನನ್ನ ತಿರುಗಾಟ; ಅದೇ ಲಂಪಟ ಇರಾದೆಯಲ್ಲಿ, ಆದರೆ ದುಃಖಿತನಾಗಿ ಧಿಗ್ಮೂಡನಾಗಿ, ಯಾವತ್ತಿಗಿಂತಲೂ ತೀರ ಕುಗ್ಗಿಹೋಗಿ, ಹೀನನಾಗಿ; ದೀನನಾಗಿ ಕಣ್ಣೀರು ಕಚ್ಚುವಂತೆ. ಇಷ್ಟಿದ್ದರೂ ನಾನು ಹೋಗಿದ್ದೆ. ಹಾಗೆಂದು ನಾನೊಬ್ಬ ಹೇಡಿ, ಅದಕ್ಕೇ ಆ ಆಫೀಸರ್ರಿಗೆ ಹೆದರಿ ಓಡಿದೆ ಆ ರಾತ್ರಿ ಎಂದೆಲ್ಲ ಕಲ್ಪಿಸಿಕೊಳ್ಳಲೇ ಬೇಡಿ. ಹೌದು ಕ್ರಿಯೆಯಲ್ಲಿ ನಾನು ಪುಕ್ಕಲ ಅಷ್ಟೇ, ಆದರೆ ನನ್ನದು ಪುಕ್ಕಲು ಹೃದಯದವಲ್ಲ. ಈಗಲೇ ಆತುರ ಪಟ್ಟು ನಗಬೇಡಿ-ಎಲ್ಲವನ್ನೂ ನಾನು ವಿವರಿಸುತ್ತೇನೆ, ಖಂಡಿತವಾಗಿಯೂ.

ಈಗ ಈ ಆಫೀಸರ್ರ್ *ಡ್ಯುಯೆಲ್ ಚಾಲೆಂಜ್ಗೆ ಥಟ್ಟನೆ ಸಿದ್ಧರಾಗಿ ಹಾಜರಾಗುವ ಕುಲದವನಾಗಿದ್ದರೆ ಎಷ್ಟು ಸೊಗಸಾಗಿರುತಿತ್ತು! ಆದರೆ ಇಲ್ಲ, ಈತ ಬರೀ ಬಿಲಿಯರ್ಡ್ಸ್ ಕೋಲುಗಳಿಂದ ಮಾತ್ರ ಆಕ್ಷನ್ ತಕ್ಕೊಳ್ಳುವ ಸಜ್ಜನರ (ಅಕಟಕಟ! ಬಹು ಕಾಲದ ಹಿಂದೆಯೆ ಅಳಿದು ಹೋದ) ಹಾಗೆ; ಅಥವಾ ಗೋಗಲ್ನ ಕಥೆಯಲ್ಲಿ ಬರುವ ಲ್ಯೂಟಿನೆಂಟ್ ಪಿರೋಗವ್ನ ಥರ ಇವನೂ ಮಾತು ಮಾತಿಗೂ ಪೋಲಿಸರ ಬಳಿ ಓಡುವ ಜಾತಿಯವನು. ಮತ್ತೆ ಈ ದೊಡ್ಡ ಮನುಷ್ಯರೆಲ್ಲ ಡ್ಯುಯೆಲ್ಂದರೆ ಮಾರು ದೂರ ಓಡುತ್ತಾರೆ. ಅದೂ ಅಲ್ಲದೆ ನನ್ನಂತಹ ಸಿವಿಲಿಯನ್ನಿನ ಜತೆ ಡ್ಯುಯೆಲ್ಗೆ ಈ ಮನುಷ್ಯ ಇಳಿಯುವುದು ಕನಸಿನ ಮಾತು. ಇವೆರೆಲ್ಲ ಈ ಡ್ಯುಯೆಲ್ ಎನ್ನುವ ಸಾಯೋ ಆಟವನ್ನು ಅಸಂಭವವೆಂದೂ, ಮುಕ್ತ ಆಲೋಚನೆಯೆಂದೂ ಹಾಗೇ ¥sóÉ್ರಂಚಿನ ಆಮದು ಎಂದೂ ಊಹಿಸುವ ಮಹನೀಯರು. ಆದರೆ ಇವರು ಜಗಳಕ್ಕೆ ಮಾತ್ರ ಸದಾ ಸಿದ್ಧರಾಗಿರುತ್ತಾರೆ. ಈ ಪೀಡಕ ಗುಣ ಆರಡಿ ಉದ್ದವಿರುವ ಈ ಕುಲದ ಗಂಡುಗಳಲ್ಲಿ ತುಸು ಜಾಸ್ತಿಯೇ.

ನಾನು ಅಂಜುಬುರುಕನಂತೆ ಹಿಂಜರಿದದ್ದು ಪುಕ್ಕಲುತನದಿಂದಲ್ಲ ಆದರೆ ಎಣೆಯಿಲ್ಲದ ಸೊಕ್ಕಿನಿಂದ. ಅವನು ಆರಡಿ ಉದ್ದವಿದ್ದ ಅದೇನು ನನ್ನ ಹೆದರಿಸಿರಲಿಲ್ಲ. ಚೆನ್ನಾಗಿ ಒದೆ ತಿನ್ನುತ್ತೇನೆಂದಾಗಲೀ, ಕಿಟಕಿಯಿಂದ ಎಸೆಯಲ್ಪಡುತ್ತೇನೆಂದಾಗಲಿ, ನಾನು ಖಂಡಿತವಾಗಿಯೂ ಅಂಜಿರಲಿಲ್ಲ. ದೈಹಿಕವಾಗಿ ಅಂದು ಹೊಡೆದಾಡುವ ತಾಕತ್ತು ಖಂಡಿತಾ ಇತ್ತು ನನ್ನಲ್ಲಿ. ಆದರೆ ನೈತಿಕ ಸ್ಥೈರ್ಯವಿರಲಿಲ್ಲ ಅಷ್ಟೇ. ಆ ಜಾಗದಲ್ಲಿ ಎಂಥೆಂಥವರು ಇದ್ದರು; ತಮ್ಮ ಕೊಳೆತ ಅಂಗಿಯಲ್ಲೇ ಕುಡಿಯುತ್ತಿದ್ದ ಓದೇ ಗೊತ್ತಿಲ್ಲದ ಗುಮಾಸ್ತರು. ಪಟ್ಟಾಂಗ ಹೊಡೆಯುತ್ತಿದ್ದ ಹೊಲಸು ನಾತದ ಕೆಳದರ್ಜೆ ನೌಕರರು. ಬೀಡಿ ಸೇದುತ್ತಿದ್ದ ಜಿಡ್ಡು, ಜಿಡ್ಡು ಬಟ್ಟೆಯ ಮೊಡವೆ ಮುಖದ ಜವಾನರು… ಆ ಹಾಳು ಜನರಿಗೆ ನನ್ನ ಮರ್ಯಾದಾ-ಯುದ್ಧ ಮೋಜಿನ ಆಟವಾಗುತಿತ್ತು. ನಾನು ಪ್ರತಿಭಟಿಸಿ, ಶುದ್ಧ ಸಾಹಿತ್ಯದ ಭಾಷೆಯಲ್ಲಿ ಅವರನ್ನೆಲ್ಲ ಉದ್ದೇಶಿಸಿ ಮಾತಾಡಿದ್ದರೆ ಅವರಿಗೆಲ್ಲ ಆ ಸೂಕ್ಷ್ಮ ಅರ್ಥವೇ ಆಗುತ್ತಿರಲಿಲ್ಲ. ಏಕೆಂದರೆ ನಮ್ಮ ರಷ್ಯಾದಲ್ಲಿ ಮರ್ಯಾದೆ ಪಾಯಿಂಟನ್ನು- ಬರೀ ಮರ್ಯಾದೆ ಅಲ್ಲ; ಮರ್ಯಾದೆ ಪಾಯಿಂಟ್ ಗೊತ್ತಾಯ್ತಾ? (Point D’honneur)—- ಈ ಮುಂಡೇವಕ್ಕೆ ಅರ್ಥ ಆಗೋ ಆರ್ಡಿನರಿ ಭಾಷೆಯಲ್ಲಿ ಹೇಳಕ್ಕೆ ಸಾಧ್ಯನೇ ಇಲ್ಲ; ಶುದ್ಧ ಸಾಹಿತ್ಯದ ಭಾಷೆಗೇ ಮಾತ್ರ ಆ ತಾಕತ್ತು ಇರೋದು. ನಾನು ಸಕತ್ತಾಗಿ ಒದೆ ತಿನ್ನುತ್ತಾ ಈ ಮರ್ಯಾದೆ ಪಾಯಿಂಟ್ ಬಗ್ಗೆ ಭಾಷಣ ಹೊಡೀತಾ ಇದ್ದರೆ ಈ ಜನ ಅದರ ತಲೆಬುಡ ತಿಳೀದೆ, ಚಪ್ಪಾಳೆ ಹೊಡೆದು ನಕ್ಕೇ ನಗುತ್ತಿದ್ದರು(ನನ್ನ ರೊಮ್ಯಾಂಟಿಸಮ್ಮಿನ ಜತೆಗೇ ಹೇಗೆ ವಾಸ್ತವವನ್ನು ಗ್ರಹಿಸಿರುವೆ ನೋಡಿ!). ಮತ್ತೆ ಆ ಆಫೀಸರ್ರ್ ನನಗೇನು ಉಗಿಯದೆ ಬರೀ ಹೊಡೆಯುತ್ತಿದ್ದನೇ? ಖಂಡೀತಾ ಇಲ್ಲ. ಮಂಡಿಯಲ್ಲಿ ನನ್ನ ಕುಂಡೆಗೆ ಒದೆಯುತ್ತಲೇ, ಆ ಬಿಲಿಯರ್ಡ್ಸ್ ಮೇಜಿನ ಮೇಲೆಲ್ಲಾ ನನ್ನನ್ನು ಎಳೆದಾಡಿ, ಕೊನೆಗೆ ಏನೋ ಔದಾರ್ಯದಲ್ಲಿ ಎನ್ನುವಂತೆ ಕಿಟಕಿಯಿಂದ ನನ್ನ ಆಚೆಗೆ ಬಿಸಾಡುತ್ತಿದ್ದ.

ನಿಸ್ಸಂಶಯವಾಗಿ ಈ ಲಂಡ ಆಫೀಸರ್ರಿನ ಅಧ್ಯಾಯ ಅಷ್ಟು ಬೇಗ ಪರ್ಯಾವಸನಗೊಳ್ಳುವುದು ನನಗೆ ಇಷ್ಟವಿರಲಿಲ್ಲ. ಈ ಹಲ್ಕಟ್ ಮನುಷ್ಯನನ್ನು ನಾನು ಎಷ್ಟೋ ಸಲ ಬೀದಿಯಲ್ಲಿ ನೋಡಿ ಆತನ ಮುಖದ ರೇಖಾಚಿತ್ರವನ್ನು ಮನಸ್ಸಿನಲ್ಲಿ ಬಿಡಿಸಿಕೊಂಡಿದ್ದೆ. ಆದರೆ ಅವನು ನನ್ನನ್ನು ಗುರುತು ಹಿಡಿದನೇ…? ಅಥವಾ ಇಲ್ಲವೇ…? ನನಗೆ ಖಾತ್ರಿ ಇರಲಿಲ್ಲ. ಇರಲಿಕ್ಕಿಲ್ಲ, ನನ್ನ ಗುರುತು ಅವನಿಗೆ ಸಿಕ್ಕಿರಲಿಕ್ಕಿಲ್ಲ. ಆದರೆ ನಾನು ಮಾತ್ರ ಭೀಭತ್ಸ ಹಗೆಯಲ್ಲಿ ವರುಷಾನುಗಟ್ಟಳೆ ಆತನನ್ನು ಹಾಗೇ ದಿಟ್ಟಿಸುತ್ತಲೇ ಇದ್ದೇ ಸ್ವಾಮಿ! ವರುಷ-ವರುಷ ಮುಗಿದಂತೆ ನನ್ನ ಹಗೆ ಊದಿ ಗಟ್ಟಿಯಾಯಿತು. ಮಜುಬೂತಾಯಿತು. ಮೊದ-ಮೊದಲು, ಸದ್ದಿಲ್ಲದೆ ಈ ಆಫೀಸರ್ರಿಗೆ ಸಂಬಂಧಿಸಿದ ವಿಷಯಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದೆ; ಆದರೆ ನನಗೆ ಯಾರ ಪರಿಚಯವೂ ಇರಲಿಲ್ಲವಾದುದರಿಂದ ಇದು ತುಂಬಾ ಇಕ್ಕಟ್ಟಿನ ಕಾರುಬಾರೆನೆಸಿತು. ಒಂದು ದಿನ ಯಾರೋ ಆತನ ಕೊನೆಯ ಹೆಸರನ್ನು ಬೀದಿಯಲ್ಲಿ ಕೂಗಿದರು. ಅವನ ಹಿಂದೆಯೇ ಕುದುರೆಗೆ ಅಂಟಿಕೊಂಡು ಓಡುವ ಬಂಡಿಯಂತೆ, ಆಣತಿ ದೂರದಲ್ಲಿ ನಾನು ನಡೆಯುತ್ತಿದ್ದರಿಂದ, ಆ ಶಬ್ಧ ತೀರ ಸ್ಪಷ್ಟವಾಗಿ ಕೇಳಿತ್ತು ನನಗೆ . ಸ್ವಲ್ಪ ದಿನಗಳ ಕಾಲ ಅವನನ್ನೇ ಹಿಂಬಾಲಿಸಿ, ಆತನ ವಠಾರದ ಕಾವಲುಗಾರನಿಗೆ ಒಂದಷ್ಟು ಲಂಚ ತಿನ್ನಿಸಿ, ಅವನ ಕುಲ-ಗೋತ್ರ-ಜಾತಕವೆಲ್ಲವನ್ನೂ ಪತ್ತೆ ಹಚ್ಚಿದೆ. – ಅವನು ವಾಸವಾಗಿದ್ದ ಮಹಡಿ, ಅವನೊಬ್ಬನೆಯೇ ಅಥವಾ ಅವನಿಗೊಂದು ಸಂಸಾರವಿದೆಯೆ ಇತ್ಯಾದಿ…ಇತ್ಯಾದಿ… ವಿಷಯಗಳು -ವಾಚ್ಮ್ಯಾನಿಂದ ಕಕ್ಕಿಸಬಹುದಾದ ಮಾಹಿತಿಗಳು- ಆ ಒಂದು ಬೆಳಗ್ಗೆ ಅಚನಾಕ್ಕಾಗಿ ಒಂದು ಆಲೋಚನೆ. ‘ನಾನೇಕೆ ಈ ಆಫೀಸರ್ರಿನ ಮೇಲೊಂದು ವಿಡಂಬನಾ ಕಾವ್ಯ ಬರೆಯಬಾರದು?! ಒಳ್ಳೇ ಐಡಿಯಾ ಇದು ಅನ್ನಿಸಿತು. ಆದರೆ ಎಂದೂ ಬರೆದು ಗೊತ್ತಿಲ್ಲದ ಮನುಷ್ಯ ನಾನು, ಈಗ ಹೇಗೆ ಶುರು ಮಾಡುವುದು ಅನ್ನೋ ದ್ವಂದ್ವದಲ್ಲಿದ್ದಾಗಲೇ, ‘ಇಲ್ಲ ಬರೆದು ಈತನೆಂಥಾ ದುಷ್ಟ ಅಂತ ತೋರಿಸಬೇಕು ಈ ಸಣ್ಣಕಥೆಯಲ್ಲಿ’ ಅಂತ ಲೆಕ್ಕ ಹಾಕಿ ಬಹಳ ಸಂತೋಷದಲ್ಲೇ ಬರೆದೆ, ಬರೆದೆ, ಬರೆದೆ. ಅವನ ಆ ಕಳ್ಳನ ಮುಖ ನನ್ನ ಕಥೆಯಲ್ಲಿ ಕಳಚಿ ಬೀಳುವವರೆಗೂ ಬರೆದೆ, ಆದರೆ ಸ್ವಲ್ಪ ಉತ್ಪ್ರೇಕ್ಷೆ ಜಾಸ್ತಿಯಾಗಿತ್ತು. ಆದರೂ ಚೆನ್ನಾಗಿಯೇ ಅವನನ್ನು ಆ ಕಾದಂಬರಿಯಲ್ಲಿ ಉಗಿದಿದ್ದೆ- ಇಷ್ಟಾದ ಮೇಲೆ ಅವನ ಕೊನೆಯ ಹೆಸರನ್ನು ಕಂಡರೂ ಕಾಣದಂತೆ ಅಥವಾ ಕಾಣದಿದ್ದರೂ ಕಾಣುವಂತೆ ಮರುಸೃಷ್ಟಿಸಿದ್ದೆ. ಆದರೂ ನೋಡಿದ ತಕ್ಷಣ ಆ ಹೆಸರು ಅವನದ್ದೇ ಎಂದು ಓದಿದವರು ಗ್ರಹಿಸುವ ಹಾಗೆ. ಆಮೇಲೆ ಪ್ರೌಢ ಪರಿಶೀಲನೆಯ ಬಳಿಕ, ನನಗೆ ಈ ‘ನಾಮ ರಾಜಕೀಯ’ ಹಿಡಿಸದೆ, ಆ ಹೆಸರನ್ನು ಬದಲಿಸಿ, ಆ ಕಥೆಯನ್ನು ‘ಪಿತೃಭೂಮಿಯ ಟಿಪ್ಪಣಿಗಳು’ ಪತ್ರಿಕೆಗೆ ಕಳುಹಿಸಿದೆ. ನನ್ನ ಗ್ರಹಚಾರ, ಆ ಕಾಲದಲ್ಲಿ ಖಂಡನೆ, ನಿಂದನೆ, ವಿಡಂಬನೆಗೆ ಸಾಹಿತ್ಯದಲ್ಲಿ ಜಾಗವಿರಲಿಲ್ಲ ಆದ್ದರಿಂದ ಅವರು ನನ್ನ ಕಥೆಯನ್ನು ಪ್ರಕಟಿಸಲೇ ಇಲ್ಲ. ಈ ವಿಷಯ ನನ್ನನ್ನು ಕೆಲಕಾಲ ರೇಗಿಸಿತ್ತು.

ಕೆಲವು ಸಲ ನನ್ನ ಹಗೆ ಹರಿತವಾಗಿ ನನ್ನ ಕತ್ತನ್ನು ಯಾರೋ ಹಿಸುಕಿ ಬಿಟ್ಟ ಹಾಗಾಗುತಿತ್ತು. ಕೊನೆಗೆ ಈ ಕಾಟ ತಾಳಲಾರದೆ ಅವನನ್ನು ಡ್ಯುಯೆಲ್ಗೆ ಆಹ್ವಾನಿಸಿಯೇ ಬಿಡೋಣ ಎಂದೇ ನಿರ್ಧರಿಸಿದೆ. ಆಕರ್ಷಕವೂ, ಸುಂದರವೂ ಆಗಿದ್ದ ಪತ್ರವೊಂದನ್ನು ಸಿದ್ಧವಾಯಿತು; ಅದರಲ್ಲಿ ಆತ ತಪ್ಪದೇ ನನ್ನಲ್ಲಿ ಕ್ಷಮೆ ಬೇಡಲೇ ಬೇಕೆಂದು, ಹಾಗೊಂದು ಪಕ್ಷ ಆತ ನಿರಾಕರಿಸಿದರೆ ಡ್ಯುಯೆಲ್ ಅನಿವಾರ್ಯ… ಎನ್ನುವ ಅರ್ಥ ಬರುವಂತೆ ನೋಡಿಕೊಂಡಿದ್ದೆ. ಆಹಾ…! ಎಂಥ ಸೊಗಸಾದ ಪತ್ರವದು ಸ್ವಾಮಿ! ಆ ಆಫೀಸರ್ರ್ ಏನಾದರೂ ‘ಅದ್ಭುತ ಚೆಲುವಿನ’ ಪುಟಾಣಿ ತುಂಡಿನ ರುಚಿಯನ್ನೇನದರೂ ಕಂಡಿದ್ದರೆ, ಆತ ಓಡೋಡಿ ನನ್ನ ಜಾಗಕ್ಕೆ ಬಂದು, ಎರಡೂ ಕೈ ಚಾಚಿ ನನ್ನನ್ನು ಬಲವಾಗೊ ಅಪ್ಪಿ, “ ಇನ್ನುಮುಂದೆ ನಾವಿಬ್ಬರೂ ಆಪ್ತಮಿತ್ರರು” ಎನ್ನುತ್ತಿದ್ದ. ಆನಂತರ ನಾನು ಅವನೂ ಎಂಥಹಾ ಒಳ್ಳೆಯ ಜೋಡಿಯಾಗುತ್ತಿದ್ದೆವು! ಆತನ ಹೈರ್ಯಾಂಕೇ ನನಗೆ ಶ್ರೀರಕ್ಷೆ ಆಗುತಿತ್ತು ಆಗ. ಹಾಗೇ ನಾನೂ ಅವನ ಮನಸ್ಸನ್ನು ಇನ್ನೂ ಸುಧಾರಿಸುತ್ತಿದ್ದೆ, ನನ್ನ ಕಲ್ಚರ್ರಿನಿಂದ… ಹಾಗೇ ಐಡಿಯಾಗಳಿಂದ ಛೆ..ಛೆ….! ಎಷ್ಟೆಲ್ಲಾ ಆಗಬಹುದಿತ್ತು ಆಗ..

ಆದರೆ ನೀವೇ ಸುಮ್ಮನೆ ಯೋಚಿಸಿ ಎರಡು ವರುಷ ಕಳೆಯಿತು. ಈ ಹೊತ್ತಿನಲ್ಲಿ ನನ್ನ ಸವಾಲೆಲ್ಲ ನಗೆಪಾಟಿಲಿಗೆ ಈಡಾಗುವಷ್ಟು ಓಬಿರಾಯನ ಕಾಲದ್ದು. ನನ್ನ ನಯವಂಚಕ ಪತ್ರವು ಎಷ್ಟೇ ಜಾಣ್ಮೆಯಲ್ಲಿ ನನ್ನ ಈ ಸವಾಲೆಂಬ ಪುರಾತನ ವೈಖರಿಯನ್ನು ಮುಚ್ಚಲು ಯತ್ನಿಸಿದ್ದರೂ, ನನ್ನ ಈ ಹುನ್ನಾರವೇ ತೀರ ಹಾಸ್ಯಾಸ್ಪದ ಮತ್ತು ತೀರ ಹಳೇ ಕಾಲದ ನೆರಳು. ಕೊನೆಗೂ ನಾನು ಆ ಪತ್ರವನ್ನು ಆತನಿಗೆ ಕಳುಹಿಸಲೇ ಇಲ್ಲ. ಸಧ್ಯ! ಅಪ್ಪಾ, ದೇವರೇ ನಿನಗೆ ನಮಸ್ಕಾರ ನನ್ನ ಮನಸ್ಸು ಗಟ್ಟಿ ಮಾಡಿದೆ ನೀನು. ಅಪ್ಪಿತಪ್ಪಿ ಆ ಪತ್ರವನ್ನೇನಾದರೂ ಅವನಿಗೆ ಕಳುಹಿಸಿದ್ದರೆ ಏನೆಲ್ಲಾ ಆಗುತಿತ್ತು… ಯೋಚಿಸಿದಾಗಲೆಲ್ಲಾ ನನ್ನ ಮೈ ಜುಂ ಎನ್ನುತ್ತದೆ.

ಆದರೆ ಒಂದೇ ಸಲಕ್ಕೆ, ಅಚಾನಕ್ಕಾಗಿ, ಸದ್ದೇ ಇಲ್ಲದೆ ಅತಿ ಸರಳವಾಗಿ ನನ್ನ ಹಗೆಯ ಪೂರೈಸಿಕೊಂಡೆ ನಾನು, ಕುಶಾಗ್ರಮತಿಯಂತೆ. ಇದ್ದಕ್ಕಿದಂತೆಯೇ ಉಜ್ವಲ ಆಲೋಚನೆಯೊಂದು ನನ್ನ ಮನಸ್ಸಿನಲ್ಲಿ ಬೆಳಕಿನಂತೆ ಅರಳಿತು. ರಜಾ ದಿನಗಳಲ್ಲಿ ಸಂಜೆ ನಾಲ್ಕು ಗಂಟೆಯಾಗುತ್ತಿದ್ದಂತೆಯೇ ನೆವ್ಸ್ಕಿಯಲ್ಲಿನ ಚಿನ್ನದ ಬೆಳಕಿನ ಬೀದಿಗಳಲ್ಲಿ ಅಡ್ಡಾಡುವುದು ನನ್ನ ಚಾಳಿ. ಅದನ್ನು ಅಡ್ಡಾಡುವುದು ಎಂದು ಕರೆಯುವುದು ತೀರ ಕಷ್ಟ, ಲೆಕ್ಕವಿಲ್ಲದ ಬೇಗುದಿಗಳ ಸರಮಾಲೆಯ, ಕೋಪ ಅವಮಾನಗಳ ಸಂಗಮ ಎಂದು ಕರೆಯುವುದೇ ಹೆಚ್ಚು ಸೂಕ್ತ; ಆದರೆ ನನಗೆ ಬೇಕಿದ್ದದ್ದು ಅದೇ ಅನ್ನಿ. ಒಂದು ಮೀನಿನಂತೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಒದ್ದಾಡುತ್ತಿದ್ದೆ, ತೀರ ಕೆಟ್ಟದಾಗಿ. ಈಗ ಸೈನ್ಯಾಧಿಕಾರಿಗಳಿಗೆ, ಈಗ ಹುಸ್ಸಾರುಗಳಿಗೆ ಈಗ ಲೇಡೀಸ್ಗಳಿಗೆ, ಈಗ ಶೋಕಿ ಲಾಲರಿಗೂ, ಈಗ ಬಣ್ಣ ಬಳಿದುಕೊಂಡಿದ್ದ ಶ್ರೀಮಂತ ಮುದುಕಿಯರಿಗೆ… ಹೀಗೆ ಅಲ್ಲಿ ವಾಕ್ ಮಾಡುತ್ತಿದ್ದ ಸಂಭಾವಿತರಿಗೆಲ್ಲ ಅಸಹ್ಯವಾಗಿ ತೂರಾಡುತ್ತ ಜಾಗ ಬಿಡುತ್ತಿದ್ದೆ, ನೀರು ಹಾವಿನಂತೆ. ಆ ಕ್ಷಣದಲ್ಲೇ ನಾನು ತೊಟ್ಟಿದ್ದ ಅನಿಷ್ಟ ಉಡುಪಿನ ಯೋಚನೆ, ನನ್ನನ್ನು ಅಪ್ಪಚ್ಚಿಗೊಳಿಸುವ ನೋವಂತೆ ಹೃದಯದೊಳಗೆ ಅರಳಿ, ಬೆನ್ನುಹುರಿಯಲ್ಲಿ ಗುರುಗುಟ್ಟುತ್ತಾ, ರೊಯ್ಯನೆ ತಲೆಗೇರುತಿತ್ತು. ಹೇಗೆ ನಾನೊಂದು ತುಚ್ಛ ಇಲಿಯಂತೆ ಸರ-ಸರನೇ ಓಡುತ್ತಿದ್ದೇನಲ್ಲ… ಇದೇ ಮಹಾತ್ಮರು ಉಂಡಿದ್ದ ಖಡಾಖಂಡಿತವಾದ ಚಿತ್ರಹಿಂಸೆ; ಅನುದಿನದ ವೀರಮರಣ; ನಿರಂತರವಾದ ಅಪಮಾನ, ಸ್ಪಷ್ಟವಾದ ಸಹಿಸಲಾರದಂತಹ ಸತತ ತೇಜೋವಧೆ. ಈ ಜಗತ್ತಿನ ಕಣ್ಣಿನಲ್ಲಿ ನಾನೊಂದು ಕಚಡಾ ನೊಣ- ಎಲ್ಲರಿಗಿಂತಲೂ ಹೆಚ್ಚು ಜಾಣ, ಮಿಕ್ಕವರಿಗಿಂತಲೂ ಹೆಚ್ಚು ಶುದ್ಧ ಭಾವನೆಗಳಿರುವ ಶ್ರೇಷ್ಠ- ಯಕಃಷ್ಚಿತ್ ನೊಣ, ನಾಚಿಕೆಯಿಲ್ಲದೆಯೇ ಎಲ್ಲರಿಗೂ ಜಾಗ ಬಿಡುವ, ಎಲ್ಲರಿಂದಲೂ ಉಗಿಸಿಕೊಳ್ಳುವ, ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಳ್ಳುವ ನೊಣ. ಹಾಗಿದ್ದೂ ಈ ಅಪನಿಂದೆಗಳಿಗೆ ನಾನೇಕೆ ಕತ್ತು ಕೊಡುತ್ತಿದ್ದೆ? ಈ ನೆವ್ಸ್ಕಿಗೆ ಮತ್ತೆ ಮತ್ತೆ ಯಾಕಾದರೂ ಬರುತಿದ್ದೆ? ಗೊತ್ತಿಲ್ಲ. ಆದರೆ ಈ ಪ್ರದೇಶ, ಅವಕಾಶ ಸಿಕ್ಕಾಗೆಲ್ಲಾ ನನ್ನನ್ನು ಸೆಳೆಯುತಿತ್ತು.

ಮೊದಲನೆಯ ಭಾಗದಲ್ಲಿ ಹೇಳಿದ್ದ, ಆ ಆನಂದದ ತರಂಗಗಳು, ಈಗಾಗಲೇ ನನ್ನನ್ನು ಸಮ್ಮೋಹನಗೊಳಿಸುತ್ತಿದ್ದವು. ಆದರೆ, ಈ ಆಫ಼ೀಸರ್ರಿನ ಘಟನೆಯ ನಂತರ ನಾನು ಈ ತರಂಗಗಳತ್ತ ಇನ್ನೂ ತೀವ್ರವಾಗಿ ಸೆಳೆಯಲ್ಪಟ್ಟೆ. ಇವನನ್ನು ನಾನು ನೆವ್ಸ್ಕಿಯಲ್ಲೇ ಆಗಾಗ ಭೇಟಿಯಾಗುತ್ತಿದ್ದದು. ಅಲ್ಲೇ ಆತನನ್ನು ನೋಡಿ ಮೆಚ್ಚುತ್ತಿದ್ದದು. ಅವನೂ ಆ ಜಾಗಕ್ಕೆ ಹೆಚ್ಚಾಗಿ ರಜಾ ದಿನಗಳಲ್ಲೇ ಹೋಗುತ್ತಿದ್ದ. ಅವನೂ ವರಿಷ್ಟಸೇನಾನಿಗಳಿಗೆ, ಮಹಾಪದವಿಯಲ್ಲಿದ್ದವರಿಗೆಲ್ಲ ಜಾಗ ಬಿಡುತ್ತಿದ್ದ. ಅವನೂ ಅವರ ನಡುವೆ ನೀರು ಹಾವಿನಂತೆ ನುಣುಚಿಕೊಳ್ಳುತ್ತಿದ್ದ. ಆದರೆ ಅವನೂ ನನ್ನಂತಹವರನ್ನೂ ನನ್ನಕ್ಕಿಂತಲೂ ಚೆನ್ನಾಗಿ ಇದ್ದವರನ್ನೂ, ಆರಾಮಕ್ಕೆ ಹಿಂದಕ್ಕೆ ತಳ್ಳಿ ಮುಂದ-ಮುಂದ ಹೋಗುತ್ತಿದ್ದ ಹಿಂದೆ ನೋಡದೆ… ಆತ ಒಂದು ಬಾಣದ ಹಾಗೇ ನುಗ್ಗುತ್ತಿದ್ದ, ಎದುರು ಇರುವ ಆಸಾಮಿಗಳು, ಮನುಷ್ಯರೇ ಅಲ್ಲ, ರೂಪವೇ ಇರದ ತೆಳು ಗಾಳಿಯಪೊರೆ ಎನ್ನುವಂತೆ; ಎಂತಹ ಸಂಧರ್ಭದಲ್ಲೂ ಆತ ಇಂಥವರಿಗೆಲ್ಲ ದಾರಿ ಬಿಟ್ಟು ಅತ್ತಿತ್ತ ಸರಿಯುತ್ತಲೇ ಇರಲಿಲ್ಲ. ಅದೇ ನಾನು ಮಾತ್ರ ಅವನನ್ನೇ ನೋಡುತ್ತಾ ಕರುಬಿ, ಹಗೆಯಲ್ಲಿ ಹಿಗ್ಗಿ, “ಅವನ ಸರಿಸಮಾನನಾಗಿ ಇಲ್ಲಾದರೂ ಅವನ ಭುಜಕ್ಕೆ ಭುಜಕೊಟ್ಟು ಅವನ ಹೆಜ್ಜೆಯ ಜತೆ ನನ್ನ ಹೆಜ್ಜೆಯನಿಡಲು ಆಗುತಿಲ್ಲವಲ್ಲ…” ಅಂತಾ ಕೆರಳಿ ಹೋಗಿದ್ದೆ.

ಸುಮಾರು ಸಲ, “ನೀನೇ ಯಾಕೆ ಸದಾ ದಾರಿ ಬಿಡಬೇಕು? ಆ ಥರದ ಯಾವ ಕಾನೂನು ಇಲ್ಲವಲ್ಲ. ಹಾಗಿದ್ದರೂ ಯಾಕೆ ಹೆದರಿ ನೀನೇ ಯಾವತ್ತೂ ದೂರ ಸರಿಯಬೇಕು?” ಎಂದು ನೀರವ ರಾತ್ರಿಯಲ್ಲಿ ಮೂರು ಘಂಟೆಯ ಹೊತ್ತಿಗೆ ಎದ್ದುಕುಳಿತು ಚಿತ್ತೋದ್ರೇಕ ರೋಷದಲ್ಲಿ ನನ್ನನ್ನು ನಾನೇ ಪೀಡಿಸಿದ್ದೆ ‘ಯಾಕೆ ನೀನೇ ಸದಾ ಸೋಲುವೆ, ಸಾಮಾನ್ಯವಾಗಿ ಶುದ್ಧ ಮನುಷ್ಯರು ಭೇಟಿಯಾಗುವಾಗ ಜಾಗ ಬಿಡುವುದರಲ್ಲೂ ಸಮಾನತೆ ಇದ್ದೇ ಇರುತ್ತದೆ. ಅರ್ಧ ನೀನು ಅತ್ತ ಸರಿ, ಇನ್ನರ್ಧ ಅವನು ಇತ್ತ ಸರಿಯಲಿ; ಆಗ ಒಬ್ಬರಿಗೊಬ್ಬರು ಪರಸ್ಪರ ಮರ್ಯಾದೆ ಕೊಟ್ಟು ನಿಮ್ಮ-ನಿಮ್ಮ ಹಾದಿ ಹಿಡಿಯಬಹುದಲ್ಲ”
ಗ್ರಹಚಾರ! ಹಾಗೇ ಆಗಲೇ ಇಲ್ಲ ನೋಡಿ. ಸದಾ ನಾನೇ ಹಿಂದಕ್ಕೆ ಸರಿದು ಜಾಗ ಬಿಟ್ಟು ಕೊಡುತ್ತಿದ್ದೆ. ಆದರೆ ನಾನು ಹೀಗೆ ದಾರಿ ಬಿಟ್ಟು ಕೊಡುವುದನ್ನು ಆತ ಗಮನಿಸಿತ್ತಲೂ ಇರಲಿಲ್ಲ. ಆ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಒಂದು ಅತ್ಯಧ್ಬುತ ಐಡಿಯಾ ನನ್ನನ್ನು ತಟ್ಟಿತು, “ಈಗ ಅವನು ನನ್ನ ಹಿಂದೆಯೇ ಬರುವಾಗ ನಾನು ದಾರಿಯೇ ಬಿಡದಿದ್ದರೇ…! ಬೇಕುಬೇಕಂತಲೇ ಪಕ್ಕಕ್ಕೇ ಸರಿಯದಿದ್ದರೆ…! ನಾನು ಅವನೂ ದೂಕಿಕೊಂಡು, ತಳ್ಳಾಡಿದರೂ ಸರಿ, ಆದರೆ ನಾನು ಮಾತ್ರ ದಾರಿ ಬಿಡದಿದ್ದರೆ…! ಆಗ ಹೇಗಿರುತ್ತದೆ?” ಈ ಕೆಚ್ಚಿನ ಕಲ್ಪನೆ ಸಾಂದ್ರವಾಗಿ ಹೇಗೆ ನನ್ನನ್ನು ಆವರಿಸಿತೆಂದರೆ, ನನಗೆ ಆರಾಮವೆಂಬುದೇ ಇಲ್ಲದಾಯಿತು. ಅದೇ ನನ್ನ ಧ್ಯಾನವಾಗಿ, ಭಯಂಕರವಾಗಿ ಮತ್ತೆಮತ್ತೆ ಆ ಸಾಹಸವನ್ನೇ ಧೇನಿಸುತ್ತಾ . ಪದೇಪದೇ ನೆವೆಸ್ಕಿಗೆ ಹೋಗಿ ಅಡ್ಡಾಡುತ್ತಿದ್ದೆ. ಮನಸ್ಸಲ್ಲೇ ಎಲ್ಲ ರೂಪುರೇಷೆ ಹಾಕಿಕೊಂಡು, ಹೇಗೆ, ಯಾವಾಗ, ಯಾವ ರೀತಿ ಎಂದೆಲ್ಲ ಲೆಕ್ಕ ಹಾಕುತ್ತಿದ್ದೆ. ನನ್ನ ಕಲ್ಪನೆ ಈಗ ವಾಸ್ತವವಾಗುವ ಕಾಲ, ಆಕಾರ ಸಿಗುವ ಕಾಲ ಹತ್ತಿರವಾಗುತ್ತಲಿದೆ ಅನ್ನಿಸುತಿತ್ತು.

“ಛೆ… ಛೆ… ತುಂಬಾ ಜೋರಾಗಿ ತಳ್ಳೊದೇನು ಬೇಡ ಅವನನ್ನ,” ಎಂದು ಆಗಲೇ ಶುದ್ಧ ಆನಂದದಲ್ಲಿ ಗೆದ್ದೇ ಬಿಟ್ಟ ಹುಮ್ಮಸ್ಸಿನೊಂದಿಗೆ ತುಂಬಾ ಕರುಣಾಳುವೂ ಆಗಿದ್ದೆ. “ನಾನು ಏನೇ ಆದರೂ ಹಿಂದಕ್ಕೆ ಮಾತ್ರ ಹೋಗುವುದಿಲ್ಲ; ಒಬ್ಬರಿಗೊಬ್ಬರು ನೋವಾಗುವಷ್ಟು ಅಲ್ಲದಿದ್ದರೂ, ಭುಜಕ್ಕೆ ಭುಜ ರಭಸವಾಗಿ ತಿಕ್ಕುವಷ್ಟು ವೇಗದಲ್ಲಿ ತಳ್ಳಾಡುತ್ತೇನೆ, ಶಿಷ್ಟಾಚಾರ ಮೀರದಂತೆ. ಅವನೆಷ್ಟು ಜೋರಾಗಿ ತಳ್ಳುತ್ತಾನೋ, ಅಷ್ಟೇ ಜೋರಾಗಿ ನಾನು ಅವನನ್ನು ತಳ್ಳುತ್ತೇನೆ.” ಕೊನೆಗೂ ನನ್ನ ನಿರ್ಧಾರ ಗಟ್ಟಿಯಾಗಿ, ಈ ಸಾಹಸವನ್ನು ನೆರೆವೇರಿಸುವ ಮನಸ್ಸು ಮಾಡಿದೆ. ಆದರೆ ನನ್ನ ಸಿದ್ಧತೆಗಳು ಮುಗಿಯಲು ತುಂಬಾ ಸಮಯ ಹಿಡಿಯಿತು. ಮೊದಲನೆಯದಾಗಿ ಶ್ರೇಷ್ಟದರ್ಜೆಯ ಬಟ್ಟೆ ಖರೀದಿಸಿ, ಒಳ್ಳೆ ದೊರೆಯಂತೆ ಕಾಣುವ ಹಾಗೆ ತಯ್ಯಾರಾಗಬೇಕು. ನೋಡಿ, ಇಲ್ಲಿ ಇರುವವರೆಲ್ಲಾ ದೊಡ್ಡ ಮನುಷ್ಯರೇ -ಅಲ್ಲೊಬ್ಬ ರಾಜಕುಮಾರ, ಅಲ್ಲೊಂದು ಅಪ್ಸರೆ; ಮತ್ತೆ ಎಲ್ಲ ಮಹಾನ್ ಸಾಹಿತಿಗಳ ದಂಡು- ಚೆಂದವಾದ ಉಡುಪನ್ನೇ ಇಲ್ಲಿ ತೊಡಬೇಕು. ಈ ಪಾಪಿಯನ್ನು ನಾನು ತಳ್ಳುವಾಗ, ಸಿಟ್ಟಿಗೆದ್ದು ಆತ ನನ್ನ ಕಪಾಲಕ್ಕೆ ಒಂದೇಟು ಬಿಟ್ಟು ಗುಲ್ಲೆದ್ದರೆ ನನ್ನ ಈ ಆಕರ್ಷಕವಾಗಿರುವ ಉಡುಪನ್ನು ನೋಡಿಯಾದರೂ ಈ ಸಂಭಾವಿತರು, “ಓಹೋ! ಇವರಿಬ್ಬರೂ ಒಂದೇ ಕ್ಲಾಸಿಗೆ ಸೇರಿದ ಮಹನೀಯರು… ಮಹನೀಯ-ಮಹನೀಯರು ಹೊಡೆದಾಡುವುದರಲ್ಲಿ ಯಾವ ತಪ್ಪೂ ಇಲ್ಲ… ಅಂತ ತಮ್ಮಷ್ಟಕ್ಕೇ ಇರುತ್ತಾರೆ. ಅದಕ್ಕೇ ಯಾವತ್ತೂ ಚೆನ್ನಾಗಿರೋ ಬಟ್ಟೆ ಹಾಕೋಬೇಕು ಅನ್ನೋದು.

ಈ ಲಕ್ಷ್ಯವನ್ನೇ ಮನಸಲ್ಲಿಟ್ಟು, ತಿಂಗಳ ಕೊನೆಗೂ ಕಾಯದೇ, ಮುಂಚೆಯೇ ಒಂದಿಷ್ಟು ಸಂಬಳ ಕೇಳಿ, ಕೈಗೆ ಸಿಕ್ಕ ಹಣದಲ್ಲಿ ಸಭ್ಯವಾದ ಟೋಪಿ ಮತ್ತು ಕಪ್ಪು ಗ್ಲೌಸುಗಳನ್ನು ಕೊಂಡೆ. ಕಪ್ಪೇ ಸರಿ, ಧೀಮಂತ ಛಾಯೆ ಇದೆ ಆ ರಂಗಿಗೆ. ಅಲ್ಲಿ ನಿಂಬೆ ಹಣ್ಣಿನ ಬಣ್ಣದ ಒಂದು ಗ್ಲೌಸಿತ್ತು. ಅದರ ಬಣ್ಣ ತುಂಬಾ ತೀಕ್ಷ್ಣವಾಗಿತ್ತು. ಈ ಢಾಳದ ಬಣ್ಣದಲ್ಲಿ ಮನುಷ್ಯ ಬೇರೆಯವರ ಕಣ್ಣಿ ಕುಕ್ಕುವಷ್ಟು ಮೊನಚಾಗಿ ಕಾಣುತ್ತಾನಾದ್ದರಿಂದ ಅದನ್ನು ಅಲ್ಲೇ ಬಿಟ್ಟೆ. ಬೋನ್ ಸ್ಟಡ್ಸ್ಗಳಿರುವ ಒಂದು ಒಳ್ಳೆ ಬಿಳಿ ಶರ್ಟನ್ನು ತುಂಬಾ ಮುಂಚೆಯೇ ಸಿದ್ಧ ಮಾಡಿಟ್ಟಿದ್ದೆ. ಆದರೆ ಈ ಓವರ್ ಕೋಟಿನಿಂದಾಗಿ ತುಂಬಾ ತುಂಬಾ ಸಮಯ ಹಾಳಾಯಿತು. ಆ ಹಳೆಯ ಕೋಟು ತುಂಬಾ ಚೆನ್ನಗೇನೊ ಇತ್ತು; ನನ್ನ ಬೆಚ್ಚಗೂ ಇಟ್ಟಿತ್ತು; ಆದರೆ ತುಂಬಾ ಮುದ್ದೆಮುದ್ದೆಯಾಗಿ, ವಲ್ಗಾರಿಟಿಯ ಪರಾಮಾವಧಿಯಂತೆ ಈ ಕೋಟಿಗೆ *ರಕೂನ್ ಕಾಲರ್ ಬೇರೆ ಇತ್ತು. ಎಂತಹ ತ್ಯಾಗ, ಬಲಿದಾನ ಮಾಡಿಯಾದರೂ ಈ ಕಾಲರ್ ಬದಲಿಸುವ ಪರಿಸ್ಥಿತಿಯಲ್ಲಿದ್ದೆ ನಾನು. ಅದಕ್ಕೇ ಆಫೀಸರ್ಗಳು ಹಾಕುವ *ಬೀವರ್ ಕಾಲರ್ ಖರೀದಿಸ ಬೇಕಾಗಿ ಬಂತು. ಈ ಉದ್ದೇಶಕ್ಕೆಂದೇ ನಾನು ಮತ್ತೆಮತ್ತೆ ಗಾಸ್ಟಿನಿ ಡೋರ್* ಕಡೇ ಹೋಗಿ ಹೋಗಿ ಒಂದು ಚೀಪಾಗಿರುವ ಜರ್ಮನ್ ಬೀವರ್ ತುಂಡೊಂದನ್ನು ಕೊಳ್ಳುವುದು ಎಂದು ಲೆಕ್ಕ ಹಾಕಿದೆ. ಆದರೆ ಈ ಜರ್ಮನ್ ಬೀವರ್ಗಳು ಬೇಗನೇ ಹಾಳು ಬಿದ್ದು ಹೋಗಿ ನೀಚವಾಗಿ ಕಾಣುತ್ತದೆಯಾದರೂ, ಹೊಸದಾಗಿದ್ದಾಗ ಲಕ-ಲಕನೇ ಹೊಳೆಯುತ್ತವೆ. ನನಗೆ ಹೇಗೂ ಈ ಪ್ರಸಂಗಕ್ಕೆ ಮಾತ್ರ ಈ ಪೋಷಾಕು ಬೇಕಾಗಿತ್ತು; ಅದಕ್ಕೇ ಅದರ ಬೆಲೆ ವಿಚಾರಿಸಿದೆ. ಈ ಬೀವರ್ ಕೂಡ ನನ್ನ ಬಜೆಟ್ಟಿಗೆ ನಿಲುಕುತ್ತಿರಲಿಲ್ಲ. ಸಾಕಷ್ಟು ಹಣ ಹೊಂದಿಸುವುದು ಹೇಗೆಂದು ತುಂಬಾ ಯೋಚಿಸಿ ಕಡೆಗೆ ನನ್ನ ಹಳೆಯ ರಕೂನ್ ಕಾಲರನ್ನು ಮಾರಿದೆ. ಆಗಲೂ ಸಾಲಲಿಲ್ಲ. ಇನ್ನೇನು ಮಾಡಲಿ ಎಂದು ತಲೆ ಕೆಡಿಸಿಕೊಂಡಿದ್ದಾಗ ನಮ್ಮ ವಿಭಾಗದ ಮುಖ್ಯಸ್ಥ, ಗಂಭೀರನೂ, ನಂಬಿಕಸ್ಥನೂ ಆದ, ಆ್ಯಂಟೋನಿಕ್ ನೆನಪಾದ. ಹಾಗೆಲ್ಲ ಎಲ್ಲರಿಗೂ ಸಾಲ ಕೊಡುವ ಆಸಾಮಿಯಲ್ಲ ಈ ಆ್ಯಂಟೋನಿಕ್. ಆದರೆ ಈ ಕೆಲಸಕ್ಕೆ ನಾನು ಸೇರಿದಾಗ ಓರ್ವ ಗಣ್ಯ ಪುರುಷನೊಬ್ಬ ನನ್ನ ಶಿಫಾರಸು ಮಾಡಿದ್ದರಿಂದ ಈತನ ಹತ್ತಿರ ಹೋಗುವ ಧೈರ್ಯವಿತ್ತು ನನಗೆ. ಸನ್ನಿವೇಶ ನನ್ನ ಪರವಾಗಿದ್ದರೂ ನನಗೆ ಸಾಲ ಕೇಳುವ ಕಾಯಕ ಮಹಾ ಸಮುದ್ರ ಮಂಥನದಂತೆ ಗೋಚರಿಸಿತ್ತು. ಮೂರ್ನಾಲ್ಕು ರಾತ್ರಿ ನಿದ್ರಾಹೀನನಾಗಿ ಒದ್ದಾಡುವ ಗತಿ ಬಂತು. ಜ್ವರ ಬೇರೆ ಏರುತ್ತಿತ್ತು. ಹೃದಯ ಢವಢವ ಅಂತ ತಾಳಮದ್ದಳೆಯಾಟ ಆಡುತ್ತಿತ್ತು. ಒತ್ತಡದಲ್ಲಿ ಕೊನೆಗೂ ಹೋದೆ. ಆತ ಒಮ್ಮೆ ಅಚ್ಚರಿಯಲ್ಲಿ ಕಣ್ಣುಮಿಟಿಕಿಸಿದ; ಮತ್ತೆ ಶೂನ್ಯ ದೃಷ್ಟಿಯಲ್ಲಿ ಅತ್ತಿತ್ತ ನೋಡಿದ. ಆಮೇಲೆ ಹುಬ್ಬೇರಿಸಿದ. ಆದರೆ ನಂತರ ಹಣ ಕೊಟ್ಟ, ಅದೂ “ಈ ಸಾಲವನ್ನು ನನ್ನ ಸಂಬಳದಿಂದ ಮರಳಿ ಪಡೆಯುವ ಹಕ್ಕು ಇವರಿಗಿದೆ…” ಎಂದು ನಾನು ಸಹಿ ಹಾಕಿ ರಸೀತಿ ಬರೆದ ಕೊಟ್ಟ ಮೇಲೆ.

ಅಂತು ಇಂತೂ ಕೊನೆಗೆ ಎಲ್ಲವೂ ತಕ್ಕ ಮಟ್ಟಿಗೆ ಸಿದ್ಧಾವಾಯಿತು. ಚೆಲುವ ಬೀವರ್, ಸ್ವಾರ್ಥಿಯಂತಿದ್ದ ರಕೂನ್ನ ಜಾಗಕ್ಕೆ ಬಂದ. ಹೇಗ್ಹೇಗೋ ಆಡಿ ನನ್ನ ಮಿಷನ್ನನ್ನು ಹಾಳು ಮಾಡದೆ, ಹಂತ, ಹಂತವಾಗಿ, ಎಲ್ಲೂ ಜಾರದೆ, ಎಲ್ಲೂ ಎಡವದೆ, ಅಚ್ಚುಕಟ್ಟಾಗಿ ನನ್ನ ಗುರಿಯನ್ನು ಸಾಧಿಸಬೇಕು ಚಾಣಾಕ್ಷನಂತೆ ಅಂತ ಲೆಕ್ಕ ಹಾಕಿದೆ. ಆದರೆ ಇಂತಹ ಎಷ್ಟೋ ಪ್ರಯತ್ನಗಳ ಬಳಿಕ ಕೊನೆಗೂ ನಾನು ಹತಾಶನಾಗಿದ್ದೆ ಎಂಬುದನ್ನು ಇಲ್ಲಿ ನಿವೇದಿಸಲೇ ಬೇಕು: ಏನೇ ಆದರೂ ನಾವಿಬ್ಬರೂ ಭುಜ-ಭುಜ ಕೊಟ್ಟು ಜಗ್ಗಾಡುವ ಆ ಘಳಿಗೆಯೇ ಬರುತ್ತಲೇ ಇರಲಿಲ್ಲ!. ಹೇಗೆಲ್ಲ ಅಣಿಯಾಗಿ, ಏನೆಲ್ಲ ಲೆಕ್ಕಾಚಾರ ಹಾಕಿ ಇನ್ನೇನು ನಾವು ಗುದ್ದಿಯೇ ಬಿಟ್ಟೆವು ಎನ್ನುವಾಗ- ಏನಾಗುತ್ತಿದ್ದೆ ಎಂದು ತಿಳಿಯುವ ಮುನ್ನವೇ, ಹಾಳಾದ ನಾನೇ ಪಕ್ಕಕ್ಕೆ ಸರಿದು ಬಿಡುತ್ತಿದೆ; ಅವನು ಎಂದಿನಂತೆ ನಾನು ಅಸ್ತಿತ್ವದಲ್ಲಿಯೇ ಇಲ್ಲವೆನ್ನುವ ಹಾಗೆ ನನ್ನ ದಾಟಿ ನಡೆದು ಬಿಡುತ್ತಿದ್ದ. ಒಂದು ದಿನವಂತೂ ಇದಿನ್ನೂ ಅಧ್ವಾನ ಆಗಿ ಹೋಯಿತು. ಆತ ನನ್ನ ಹಿಂದೆ ಬರುತಿದ್ದಾಗ ನಾನು ಸಂಪೂರ್ಣವಾಗಿ ತಯ್ಯಾರಾಗಿ, ತಳ್ಳಲು ಸಿದ್ಧಾನಗಿದ್ದೆ. ಆದರೆ ಥತ್, ಆತ ಕೇವಲ ಆರಿಂಚು ಇಂಚು ದೂರವಿರುವಾಗ ನನ್ನೆಲ್ಲಾ ಮಾನಸಿಕ ಸ್ಥೈರ್ಯ ಸತ್ತು ಹೋಗಿ, ಕೆಟ್ಟದಾಗಿ ನಾನು ಎಡವಿ ಅವನ ಕಾಲಿಗೆ ಬಿದ್ದಿದ್ದೆ. ಆತ ಎಂದಿನ ಬುದ್ಧ ಸಮಾಧಾನದಲ್ಲಿ ನನ್ನ ದಾಟಿ ಸಾಗಿದ್ದರೆ, ನಾನು ಚೆಂಡಂತೆ ಚಂಗನೆ ಅವನಿಂದ ದೂರ ಜಿಗಿದಿದ್ದೆ. ಆ ರಾತ್ರಿ ಮತ್ತೆ ಹುಷಾರು ತಪ್ಪಿ, ಜ್ವರದ ಉನ್ಮಾದದಲ್ಲಿ ಕನವರಿಸಿ ಒದ್ದಾಡಿದ್ದೆ.

ಆದರೆ ಅಚಾನಕ್ಕಾಗಿ ಎಲ್ಲವೂ ಮಂಗಳದಾಯಕವಾಗಿ ಮುಕ್ತಾಯವಾಯಿತು. ಆ ಹಿಂದಿನ ರಾತ್ರಿ ಈ ಅಪಾಯಕಾರಿ ಹಗೆಯ ಸಾಧಿಸುವ ಮಿಶನ್ನು ನನ್ನಿಂದಾಗದು ಇವೆಲ್ಲವನ್ನು ವಿಸರ್ಜಿಸಬೇಕು ಎಂದು ಅನ್ನಿಸಿತ್ತು. ಈ ಲಕ್ಷ್ಯವನ್ನೇ ಮನಸ್ಸಲ್ಲಿಟ್ಟು, ಮರುದಿನ ಕಟ್ಟ ಕಡೆಯ ಬಾರಿಗೆ ನೆವೆಸ್ಕಿಯತ್ತ ಪಾದ ಬೆಳೆಸಿದ್ದೆ, ಎಲ್ಲವನ್ನೂ ನಾನು ಹೇಗೆ ಏನೂ ಸಾಧಿಸದೆ ಬಿಟ್ಟು ಬಿಡಲಿದ್ದೇನೆ ಎಂದು ಅಂತಿಮವಾಗಿ ಪರಿಶೀಲಿಸಲೆಂದು. ಇದ್ದಕ್ಕಿಂದತೆಯೇ ಮೂರು ಹೆಜ್ಜೆಗಳ ಹಿಂದೆ ನನ್ನ ಶತ್ರು ಇರುವ ಘೋರ ಸತ್ಯ ಈ ಇಂದ್ರಿಯಗಳಿಗೆ ತಿಳಿಯಿತು. ಹಠಾತ್ತಾಗಿ ಯಾವ ಮುನ್ಸೂಚನೆಯೂ ಇಲ್ಲದೆ ನಾನು ಮನಸ್ಸು ಮಾಡಿಯೇ ಬಿಟ್ಟೆ. ಕಣ್ಣುಗಳನ್ನು ಮುಚ್ಚಿದೆ, ಚೂರೂ ಕದಲಲಿಲ್ಲ. ಅವನು ಬಂದ, ಬಂದ, ಹತ್ತಿರ ಬಂದೇ ಬಿಟ್ಟ. ನಾವು ಒಟ್ಟೊಟ್ಟಿಗೆ ಓಡಿ ವಾಲಿದೆವು, ಒಬ್ಬನ ಭುಜಕ್ಕೆ ಇನ್ನೊಬ್ಬನ ಭುಜ! ಭುಜಗಳ. ಕೈಗಳ, ತೊಡೆಗಳ ಸಮಾನ ತಿಕ್ಕಾಟ! ನಾನು ಆಚೀಚೆ ನೋಡದೆ ವೇಗವಾಗಿ ನಡೆಯುತ್ತಿದ್ದೆ, ಆತನಲ್ಲಿ ಇಲ್ಲವೇ ಇಲ್ಲವೆನೋ ಎಂಬಂತೆ. ಒಂದು ಸೂಜಿಮೊನೆಯಷ್ಟೂ ಸರಿಯದೆ ಅವನ ಜತೆ-ಜತೆಗೆ ವೇಗವಾಗಿ ಮುನ್ನುಗಿದವು, ನನ್ನ ಪಾದಗಳು. ಅವನೂ ಸುತ್ತ-ಮುತ್ತ ನೋಡತ್ತಲೇ ಇರಲಿಲ್ಲ. ಏನನ್ನೂ ಗಮನಿಸದಂತೆ ನಟಿಸುತ್ತಿದ್ದ ಬೇರೆ! -ಹೌದು, ಅದು ನಟನೆ ನನಗೆ ಅದು ಅವತ್ತೇ ಖಾತ್ರಿಯಾಗಿತ್ತು, ಈಗಲೂ ನಾನು ಹಾಗೇ ನಂಬಿದ್ದೇನೆ! ಸಹಜವಾಗಿಯೇ ಇಲ್ಲಿಯೂ ನಾನೇ ತೀರ ನೊಂದದ್ದು, ಅವನು ಬಿಡಿ ನನಗಿಂತ ಗಟ್ಟಿಗ. ಆದರೆ ಮುಖ್ಯ ವಿಷಯವೆಂದರೆ, ಆತನ ಸಮಕ್ಕೂ ,ಅದೂ ಸಂಭಾವಿತ ದೊಡ್ಡ ಮನುಷ್ಯರು ಓಡಾಡುವ ಜಾಗದಲ್ಲಿ, ಆತನ ಹೆಜ್ಜೆ ಜತೆ ಹೆಜ್ಜೆ ಹಾಕಿ, ನನ್ನ ಹಗೆಯ ತಣಿಸಿದ್ದೆ. ನನ್ನ ಮುಯ್ಯಿ ಮುಗಿಸಿ, ನಾನೂ ಸಂಭಾವಿತನಾಗಿ ಪುಳಕಿತನಾಗಿ ಮರಳಿ ಮನೆಗೆ ಬಂದು, ವಿಜಯೋತ್ಸಾಹದಲ್ಲಿ ಇಟಾಲಿಯನ್ ಗೀತೆಗಳ ಹಾಡಿದ್ದೆ. ಸಹಜವಾಗಿಯೇ, ಮುಂದಿನ ಮೂರು ದಿನಗಳಲ್ಲಿ ಏನೆಲ್ಲಾ ಘಟಿಸಿತು ಎಂದು ನಾನು ವಿವರಿಸುವುದಿಲ್ಲ. ಈ ಟಿಪ್ಪಣಿಯ ಮೊದಲನೆಯ ಭಾಗವನ್ನು ಏನಾದರೂ ಓದಿದ್ದರೆ ಆಗ ನೀವೇ ಊಹಿಸಬಲ್ಲಿರಿ. ಆ ಆಫೀಸರ್ರ್ ಸ್ವಲ್ಪದಿನಗಳ ಬಳಿಕ ಬೇರೆಲ್ಲಿಗೋ ವರ್ಗವಾಗಿ ಈ ಊರಿನಿಂದಲೇ ಗಂಟುಮೂಟೆ ಕಟ್ಟಿದ. ಹದಿನಾಲ್ಕು ವರುಷಗಳಿಂದ ಆತನ ಸುದ್ದಿಯಿಲ್ಲ. ಆ ಮುದ್ದಿನ ಆಸಾಮಿ ಏನು ಮಾಡುತ್ತಿರಬಹುದು ಈಗ? ಯಾರನ್ನು ಆತ ಹಿಂದೆ ತಳ್ಳಿ ಹಿಂಡುತ್ತಿರಬಹುದು?

ಮುಂದುವರೆಯುವುದು…

ಅನುವಾದ :  ಗೌತಮ್ ಜ್ಯೋತ್ಸ್ನಾ

ಚಿತ್ರ : ಮದನ್ ಸಿ.ಪಿ


ಟಿಪ್ಪಣಿಗಳು

* ಈ ನೆಕ್ರಾಸವ್ ರಷ್ಯಾದ ಪೊಲಿಟಿಕಲ್ ಹಾಗೂ ರೊಮ್ಯಾಂಟಿಕ್ ಕವಿ. ಈತನನ್ನು ಚೆನ್ನಾಗಿ ಟೀಕಿಸಲು ಮತ್ತು ಈತನ ಅತಿ ರೊಮ್ಯಾಂಟಿಕ್ ಕವಿತೆಯನ್ನು ಮೂದಲಿಸಲು, ದಸ್ತವೇಸ್ಕಿ ಈತನ ಒಂದು ಕವಿತೆಯಿಂದಲೇ ಈ ಭಾಗವನ್ನು ಆರಂಭಿಸಿದರೂ, ಮುಂತಾಗಿ… ಮುಂತಾಗಿ ಅಂತ ಆ ಕವಿತೆಯನ್ನು ಅಲ್ಲೇ ಅರ್ಧಕ್ಕೇ ನಿಲ್ಲಿಸಿದ್ದಾರೆ; ಈ ಕವಿತೆಯೂ ಮತ್ತದೇ ಹಳೇ ರಾಗದ ಬುಡುಬುಡಿಕೆ ಎನ್ನುವಂತೆ. ಈ ಕವಿತೆಯಲ್ಲಿ ಸಂಶಾಯತ್ಮಕ ಹಿನ್ನಲೆಯಿರುವ ಹೆಣ್ಣೊಬ್ಬಳು ಮದುವೆಯ ನಂತರ, ಅದೂ ತನ್ನ ಪ್ರೇಮಿಯನ್ನು ಮದುವೆಯಾದ ಮೇಲೆ ಹೇಗೆ ಧರ್ಮಪತ್ನಿಯಾಗಿ ಬದಳಾದಳು ಎನ್ನುವ ಕಥೆಯಿದೆ. ಈ ಥರ ಸಮಾಜ ಮೆಚ್ಚುವಂತೆ ಪರಿವರ್ತನೆಯಾಗುವುದ್ದೆಲ್ಲ ದಸ್ತೇವಿಸ್ಕಿಗೆ ತುಂಬಾ ಸಿಟ್ಟು ಬರಿಸಿತಿತ್ತು. ಕಡೇ ಪಕ್ಷ ನಮ್ಮ ಅನಾಮಿಕ ನರೇಟರ್ರಿಗಾದರೂ ಅದು ಸಿಟ್ಟು ಬರಿಸುತ್ತದೆ… ನಿಸ್ಸಂಶಯವಾಗಿಯೇ ಇದನ್ನು ವ್ಯಂಗ್ಯಪೂರ್ಣವಾಗಿ ಎರಡನೆಯ ಭಾಗದಲ್ಲಿ ಬಳಸಿಕೊಂಡಿದ್ದಾನೆ.
* Positive ಪತ್ರಕರ್ತರು, ವಿಮರ್ಶಕರು: (1798-1857) Augustus Comte’s Positivism ಸಿದ್ಧಾಂತದ ಅನುಯಾಯಿಗಳು, ಈ ಸಿದ್ಧಾಂತದ ಪ್ರಕಾರ ಒಂದು ವಿಷಯವು ಜ್ಞಾನವೆಂದು ಪರಿಗಣಿಸಲ್ಪಡುವುದು ಪ್ರಯೋಗ ಮತ್ತು ವಿಜ್ಞಾನದ ಸಂಶೋಧನೆಯಿಂದ ಪರೀಶೀಲನೆಯ ಬಳಿಕವೇ.
*ಕೊಸ್ಟಾನ್ಝ್ಹೋಗ್ಲೊ, ಪಿಯೋತರ್ ಇವೋನಿವಿಚ್: ಪಾತ್ರ ಗೋಗಲ್ನ ಅಪೂರ್ಣ ಕಾದಂಬರಿಯಾದ Dead Souls II ಮಾದರಿ ಜಮೀನ್ದಾರ. ರಷ್ಯನ್ ಕಾದಂಬರಿಕಾರ ಐ.ಎ. ಗಾನ್ಚರವ್(1912-91) ಕಾದಂಬರಿಯಾದ A Common Story ಯಲ್ಲಿ ಬರುವ ಚುರುಕು ಬುದ್ಧಿಯ ಆದರ್ಶ ಮಾವನೇ ಈ ಪಿಯೋತರ್ ಇವೋನಿವಿಚ್.ತನ್ನ ರೊಮ್ಯಾಂಟಿಕ್ ಮನಸ್ಸಿನ ಸೋದರಳಿಯನಿಗೆ ತುಂಬಾ ಪ್ರಿಯವಾದವನು.
*ಈ ಮಹಾಶಯರಿಗೆ ನಿಜಕ್ಕೂ…ಪೀಠಾರೋಹಿಸುತ್ತಾರೆ: ಗೋಗಲ್ನ The Diary of Mad Man ,ಇಲ್ಲಿ ಪ್ರಸ್ತಾಪ ಮಾಡಲಾಗಿದೆ. ಇದರ ನಾಯಕ ತನ್ನನ್ನು ತಾನೇ ಸ್ಪೇನ್ ದೊರೆ ಎಂದೇ ನಂಬಿ ಕೊನೆಗೆ ಹುಚ್ಚಾಸ್ಪತ್ರೆ ಸೇರುತ್ತಾನೆ.
* ಗಾಸ್ಟಿನಿ ಡೋರ್- A Department Store in Russia
* ರಕೂನ್ ಮತ್ತು ಬೀವರ್- ಈ ರಕೂನ್ ಎಂಬುದು ಉತ್ತರ ಅಮೇರಿಕದ ಸಸ್ತನಿಯ ಹೆಸರೂ ಹೌದು, ಈ ಬೀವರ್ ಎಂಬುದೂ ಅದೇ ದೇಶದ ಉದ್ದ ಹಲ್ಲುಗಳಿರುವ ಇನ್ನೊಂದು ನಿಶಾಚರಿ ಸಸ್ತನಿ. ಇವೆರಡೂ ಹೆಸರುಗಳನ್ನು ಬಳಸಿ ತನ್ನ ತನ್ನ ವಸ್ತ್ರಕ್ಕೂ ಈ ಸಸ್ತನಿಗಳಿಗೂ ನಂಟಿದ್ದಂತೆ ಇಲ್ಲಿ ಮಾತನಾಡುತ್ತಾನೆ ಈ ಅನಾಮಿಕ ನರಟೇರ್.

ಪ್ರತಿಕ್ರಿಯಿಸಿ