ಆದಿಮ – ಒಂದು ಪ್ರೇಮ ಕಥೆ

ಹಲವು ದಶಕಗಳಿಂದ ವಿವಿಧ ಸಾಮಾಜಿಕ ಆಂದೋಲನಗಳಲ್ಲಿ ತೊಡಗಿದ್ದ ಕೆಲವು ಗೆಳೆಯರು ನಮ್ಮ ಸಂಸ್ಕೃತಿಯ ಜೀವಪರ ಬೇರುಗಳನ್ನು ಅರಸಿ ನೀರೂಡಿಸುವ ಕನಸು ಕಂಡರು. ಅದರ ಫಲವಾಗಿ ಕೋಲಾರ ಜಿಲ್ಲೆ ಅಂತರಗಂಗೆ ಬೆಟ್ಟದ ಮೇಲೆ ಜಿಂಕೆ ರಾಮಯ್ಯ ಜೀವತಾಣದಲ್ಲಿ ಆ ಗೆಳೆಯರು ಕೂಡಿ ಆರಂಭಿಸಿದ ನಡಿಗೆಯೇ ಆದಿಮ.

ಇರುವೆಗಳು ಗೂಡು ಕಟ್ಟುವ ಹಾಗೆ ಹತ್ತಾರು ವರ್ಷಗಳ ಕಾಲ ಎಷ್ಟೋ ಮಂದಿ ಸಮಾನ ಮನಸ್ಕರು ದಿನಕ್ಕೊಂದು ರೂಪಾಯಿಯ ಹಾಗೆ ಸಂಗ್ರಹಿಸಿದ ಮೊತ್ತವೇ ಆದಿಮದ ಮೂಲ ನಿಧಿ. ಆ ಹಣದಲ್ಲಿ ಮೊದಲಿಗೆ ಮಣ್ಣಿನ ಕುಟೀರವೊಂದನ್ನು ಕಟ್ಟಿಕೊಂಡು ಆದಿಮ ತನ್ನ ನಡೆ ಆರಂಭಿಸಿತು. ಆಗಿನಿಂದ ಜಾತಿ ಮತ ಅಂತಸ್ತುಗಳಾಚೆ, ಹೆಚ್ಚಾಗಿ ಮಕ್ಕಳ ಚಟುವಟಿಕೆಗಳ ಸುತ್ತಲೇ ಆದಿಮ ಸಾಂಸ್ಕೃತಿಕ ಎಚ್ಚರದ ದಿಕ್ಕಿನಲ್ಲಿ ಹೆಜ್ಜೆಗಳನ್ನಿಡುತ್ತ ಬಂದಿದೆ. ನಿರ್ಲಕ್ಷಿತ ಸಾಂಸ್ಕೃತಿಕ ಸಮುದಾಯಗಳ ಅಂತರಂಗದ ಚಿಲುಮೆಯಾಗಲು ಯತ್ನಿಸುತ್ತ ಆ ಸಮೂಹದ ಘನತೆಯನ್ನು ಎತ್ತರಿಸುತ್ತ ಬಂದಿದೆ.

2006 ರಿಂದ 2008 ನಡುವಿನ ಆದಿಮಾದ ನಡಿಗೆಯನ್ನು ಶ್ರೀಕಾಂತ್ ಪ್ರಭು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಸಾಕ್ಷ ಚಿತ್ರ ಇಲ್ಲಿದೆ .

ಕೋಟಗಾನಹಳ್ಳಿ ರಾಮಯ್ಯಾ ಅಂದರೆ ಅದೊಂದು ತನ್ನದೇ ಆದ ಜಗತ್ತು. ಸಾಹಿತ್ಯ, ಟೀ ವಿ,ಚಲನಚಿತ್ರ ಸುದ್ದಿ ಮಾಧ್ಯಮ,ಅನೇಕ ಚಳುವಳಿಗಳು ಹೀಗೆ ಎಲ್ಲದರಲ್ಲೂ ಆಗಲೇ ಹೆಸರು ಮಾಡಿ ಅನೇಕ ಮಾಧ್ಯಮದ ಮೇಲೆ ಗೆಲವು ಸಾಧಿಸಿದ ಮನುಷ್ಯ ಎಲ್ಲವನ್ನೂ ಬಿಟ್ಟು ಕೋಲಾರದ ಬೆಟ್ಟದ ಮೇಲೆ ಹೊಸದೇನನ್ನೋ ಸಾಧಿಸಲು ಹೊರಟಿದ್ದಾರೆ ಅಂತ ಕೇಳಿದಾಗಲೇ ನನ್ನ ಕುತೂಹಲ ಕೆರಳಿತ್ತು. ಚಿತ್ರದಲ್ಲಿ ಮಾತನಾಡಿದ ಎಲ್ಲರೂ ಈ ಕನಸಿನ ಅರ್ಥ ಮತ್ತು ಅದರ ಮೂಲದ ಬಗ್ಗೆ ಮಾತನಾಡುತ್ತಾರೆ. ಜನಸಾಮಾನ್ಯರಿಂದ ಒಂದು ಸಾರಿಗೆ ಒಂದೇ ರೂಪಾಯಿ ಇಸಿದುಕೊಂಡು ವರ್ಷಗಟ್ಟಲೆ ಸಂಗ್ರಹ ಮಾಡಿ ಆ ನಿಧಿಯನ್ನು ತೊಂದರೆಯಲ್ಲಿರುವವರಿಗೆ ಮೂಲಧನದಂತೆ ಕೊಟ್ಟು ಯಾವುದಾದರೂ ವ್ಯವಸಾಯ ಮಾಡುವಂತೆ ಪ್ರೇರೇಪಿಸುವದು ಅಷ್ಟು ಪ್ರಾಕ್ಟಿಕಲ್ ಅನ್ನಿಸದಿರಬಹುದು ಆದರೆ ಅದರ ಹಿಂದೆ ಕೆಲಸ ಮಾಡುವ ಯೋಚನೆಗಳ ಸಭ್ಯತೆ ಅಸಾಧಾರಣವದದ್ದು. ಆದಿಗೆ ಹೋಗಿ ನೆಲಸಂಸ್ಕ್ರತಿಯ ಬೇರುಗಳನ್ನು ಗಟ್ಟಿಗೊಳಿಸಲು ಸಾಧ್ಯವಾದರೆ ಅದಕ್ಕಿಂತ ಒಳ್ಳೆಯ ಕೆಲಸ ಬೇರೆ ಇಲ್ಲ. ಬೇರುಗಳು ಎಲ್ಲಿಯೂ ಹೋಗಲ್ಲ ಅವುಗಳನ್ನು ಗುರುತಿಸಿ ನೀರೆರೆಯುವದು ಮಾತ್ರ ನಾವು ಮಾಡಬೇಕಾದ ಕೆಲಸ ಅನ್ನಿಸುತ್ತದೆ.

ರಾಮಯ್ಯಾ ಅವರು ತನ್ನ ಈ ಕನಸುಗಳ ಬಗ್ಗೆ ಹೇಳಿಕೊಂಡಾಗ ನನಗೆ ಅರ್ಥವಾಗಿದ್ದು ಕಡಿಮೆ ಆದರೂ ಇದೆಲ್ಲವನ್ನೂ ಸಾಧ್ಯವಾದಷ್ಟು ದಾಖಲಿಸಿದರೆ ಒಂದು ಒಳ್ಳೆಯ ಆಕರವಾಗುತ್ತದೆ ಅಂತ ಅನ್ನಿಸಿತು. ಅವರು ಕೇಳಿದಾಗ ನಾನು ಇಲ್ಲ ಎನ್ನುವ ಪ್ರಷ್ಣೆಯೇ ಇರಲಿಲ್ಲ. ಕೇಳದಿದ್ದರೆ ಸ್ವಲ್ಪ ಬೇಜಾರಾಗುತ್ತಿತ್ತೇನೊ. ಆ ಬೆಟ್ಟದ ಪ್ರದೇಶವನ್ನು ಜಿಂಕೆ ರಾಮಯ್ಯನ ಬೆಟ್ಟ ಅಂತ ಕೂಡಾ ಗುರುತಿಸಲಾಗುತ್ತದೆಯಂತೆ. ಅವಧೂತನಂತಿರುವ ರಾಮಯ್ಯಾ ಅನ್ನುವ ಬೇರೆ ಒಬ್ಬ ಒಬ್ಬ ವ್ಯಕ್ತಿ ಅಲ್ಲಿ ಗಾಯಗೊಂಡು ಬಿದ್ದಿದ್ದ ಜಿಂಕೆಯೊಂದನ್ನು ಬದುಕಿಸಿ ಉಪಚಾರ ಮಾಡಿ ತನ್ನೊಂದಿಗಿಟ್ಟುಕೊಂಡು ಬದುಕಿದ್ದನಂತೆ. ಅಲ್ಲಿಯೇ ಆತನ ಸಮಾಧಿಯೂ ಇದೆ ಅಂತ ನೆನಪು. ಸ್ವಲ್ಪ ಮೇಲಕ್ಕೆ ಹೋದರೆ ಮುಸ್ಲಿಂ ಸಂತನೊಬ್ಬನ ದರ್ಗಾ ಕೂಡ ಇದೆ.ಅವಧೂತರಿಗೆ ಹೇಳಿ ಮಾಡಿಸಿದ ಜಾಗ.ನಾನು ಮೊದಲ ಸಲ ಅಲ್ಲಿಗೆ ಹೋದಾಗ ಅಲ್ಲಿ ಸರಿಯಾದ ಕಟ್ಟಡವೂ ಇರಲಿಲ್ಲ. ತೆಂಗಿನ ಗರಿಯ ಚಪ್ಪರದ ಮಾಡು ಅದರಾಚಿ ನಕ್ಶತ್ರ ತುಂಬಿದ ಇಲ್ಲವೇ ಕಪ್ಪು ಮಸಿ ತುಂಬಿದ ಆಕಾಶ. ಬೆಳಿಗ್ಗೆ ಎದ್ದರೆ ಪೂರ್ತಿ ಮುಸುಕಿದ ಮಂಜು ಬೆಟ್ಟವನ್ನೇ ನುಂಗಿ ಕುಳಿತಿರುತ್ತಿತ್ತು. ಸಿನೆಮಾ ಅಂದರೆ ಹೆಚ್ಚು ಕಡಿಮೆ ಯುದ್ದ ಭೂಮಿಯಂತೆ ಅನ್ನುತ್ತಾರೆ ಇಲ್ಲಿ ಗೋಡೆಗಳು ಗಡಿಗಳು ಯಾವುದೂ ಇರಲಿಲ್ಲ.ಬೆಳಿಗ್ಗೆಯ ಚಳಿಗೆ ಕೆಮೆರಾದೊಳಗಡೆ ಇಬ್ಬನಿ ಸೇರಿಕೊಂಡು ದೊಡ್ಡ ಗೋಳಾಗುತ್ತಿತ್ತು. ಹೀಗಾಗಿ ಅಲ್ಲಿಯ ಸೂರ್ಯೋದಯದ ಅಧ್ಭುತವನ್ನು ನನಗೆ ಕೊನೆಗೂ ಸೆರೆ ಹಿಡಿಯಲಾಗಲಿಲ್ಲ. ಮಲಗಿದವರು ಯಾರಾದರೂ ಎದ್ದು ಒಲೆ ಹಚ್ಚಿ ಬೆಂಕಿಯ ಬಿಸಿ ಸಿಗುವಂತೆ ಮಾಡಿದರೆ ಅದರ ಮುಂದೆ ಜೋಪಾನವಾಗಿ ನನ್ನ ಹೊಸ ಸೋನಿ ಪಿ ಡಿ 170 ಕೆಮೆರಾ ಹಿಡಿದು ಶಾಖ ಕೊಟ್ಟು ಬಿಸಿ ಮುಟ್ಟಿಸಿ ಕಾಳಜಿಯಿಂದ ಅದು ಶುರುವಾಗುವವರೆಗೂ ಕಾಯಬೇಕಿತ್ತು. ಮುಂದೆ ಅದು ನನ್ನ ಕೆಮೆರಾಗೆ ಸ್ವಲ್ಪ ಜಾಸ್ತಿಯೇ ಅನ್ನಿಸುವಷ್ಟು ತೊಂದರೆ ಉಂಟುಮಾಡಿತು. ಇಲ್ಲಿ ರಿಪೇರ್ ಮಾಡುವವರು ಸಿಗದೇ ಚೆನ್ನೈ, ದಿಲ್ಲಿ ಅಂತ ಪರದಾಡಬೇಕಾಯಿತು. ಇವತ್ತು ಆ ಟೇಪ್ ಗಳೂ ಇಲ್ಲ, ಕೆಮೆರಾದ ಬಳಕೆ ಕೂಡಾ ಬೇರೆ ಸ್ಥರಕ್ಕೆ ಮುಟ್ಟಿದೆ. ಉಪಯೋಗಿಸದೇ ಉಳಿದ ಟೇಪ್ ಗಳು ಗಪ್ ಚಿಪ್ ಅಂತ ಅಂಟಿಕೊಂಡು ಕೂತಿವೆ. ತಂತ್ರಜ್ಞಾನದ ಅವಿರತ ಬದಲಾವಣೆ ಈ ಮಾಧ್ಯಮವನ್ನು ಒಂದು ಅಸ್ಥಿರತೆಯತ್ತ ದೂಡಿದೆ. ಅವರು ಜಾನಪದ ಗಾಯಕರನ್ನು ಕರೆಸಿ ದಿನಗಟ್ಟಲೆ ದೊಡ್ಡ ಮೇಳ ಹಚ್ಚಿದಾಗ ನಾನು ಅದನ್ನೂ ರೆಕಾರ್ಡ್ ಮಾಡಿದೆ. ಆಡಿಯೋ ಸಿ ಡಿ ಗಳನ್ನು ತಕ್ಶಣ ಕೊಟ್ಟು ಬಿಡುತ್ತಿದ್ದೆ.

ಇದನ್ನು ಹೇಳುವದಕ್ಕೆ ಕಾರಣವೆಂದರೆ ಮುಂದೆ ಒಂದು ದಿನ ನನ್ನ ಕಂಪ್ಯುಟರ್ ಅಚಾನಕ್ ಆಗಿ ದುರ್ಮರಣಕ್ಕೀಡಾದಾಗ ಈ ರೀತಿಯ ಅನೇಕ ರಿಕಾರ್ಡಗಳು ಕಳೆದು ಹೋದವು. ಅವರು ಕರೆದಾಗ ಸಾಧ್ಯವಾದರೆ ಹೋಗುವದು ಶೂಟ್ ಮಾಡಿ ಅಲ್ಲೇ ರಾತ್ರಿ ಕಳೆದು ಬೆಳಿಗ್ಗೆ ಬೆಂಗಳೂರಿಗೆ ವಾಪಸ್. ಒಂದೊಂದಾಗಿ ಗೋಡೆಗಳು ಏಳುತ್ತಿದ್ದವು ಗಟ್ಟಿ ತಾಣಗಳು ತಯಾರಾಗುತ್ತಿದ್ದವು.ನಾನು ನನಗೆ ಬೇಕಾದ್ದನ್ನು ಚಿತ್ರೀಕರಿಸಿ ಸಂಗ್ರಹ ಮಾಡುವದರಲ್ಲಿ ತೊಡಗಿದ್ದೆ. ಅಲ್ಲಿಯ ಬೆಳವಣಿಗೆಯಲ್ಲಿ ನನ್ನದೇನೂ ಕೈ ಇರಲಿಲ್ಲ. ಅದು ನನ್ನ ಅಳತೆಗೆ ಮೀರಿದ್ದು. ಜನ ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದರು. ನೂರುಗಟ್ಟಲೆ ಮಕ್ಕಳನ್ನು ಸೇರಿಸಿ ಅವರು ನಡೆಸುವ ಮೇಳಗಳು ಅದ್ಭುತ. ಹುಣ್ಣಿಮೆಗೊಂದು ಸಾರಿ ನಡೆಯುವ ಕಾರ್ಯಕ್ರಮಗಳಿಗೆ ಬೆಟ್ಟ ತುಂಬುವಷ್ಟು ಜನ. ಚಿತ್ರದ ಕೊನೆಗೆ ಹಾಕಿದ ಡೊಳ್ಳು ಕುಣಿತವನ್ನು ಅವರು ಸ್ಟೇಜ್ ಮೇಲೆ ಪ್ರದರ್ಶಿಸಿದಾಗ ನಾನು ಅದನ್ನು ರೆಕಾರ್ಡ್ ಮಾಡಬೇಕಿತ್ತು. ಸಂಜೆ ಸುಮಾರು ಆರು ಘಂಟೆಗೆ ಕೆಮೆರಾ ಹಿಡಿದು ಒಡಿಯಾಡುತ್ತಿದ್ದವನಿಗೆ ಕೆಮೆರಾ ಇಡಲು ಜಾಗ ಸಿಗದಶ್ಟು ಜನ ಸಂದಣಿ. ಕಷ್ಟ ಪಟ್ಟು ನನ್ನ ಟ್ರೈಪಾಡ್ ಗೆ ಜಾಗ ಮಾಡಿ ನಿಂತವನಿಗೆ ಒಂದುರೀತಿಯ ಬಂದಿವಾಸ ಸುಮಾರು ಮೂರು ಘಂಟೆಯಷ್ಟು ಆಗಲೇ ನಿಂತಾಗಿತ್ತು. ಡೊಳ್ಳು ಕುಣಿತ ಯಾವಾಗ ಬರುತ್ತದೆ ಎಂದು ತಿಳಿಸುವವರೂ ಇಲ್ಲ. ಕೆಮೆರಾ ಬಿಡುವ ಹಾಗಿರಲಿಲ್ಲ ಅದು ಬೀಳದಂತೆ ಕಾಪಾಡಿಕೊಂಡರೆ ಸಾಕಿತ್ತು. ವ್ಯವಸ್ಥಾಪಕರೊಡನೆ ಸಂಪರ್ಕ್ ಮಾಡಲೂ ಆಗದ ಸ್ಥಿತಿ. ಎಲ್ಲರೂ ಬಿಸಿ. ಇನ್ನೇನು ಅದು ಬರಲ್ಲ ಅಂತ ಕೆಮೆರಾ ಜೊತೆ ಕೆಳಗಿಳಿದ ಸ್ವಲ್ಪ ಹೊತ್ತಿನ ಮೇಲೆ ಬಣ್ಣ ಬಣ್ಣದ ದೀಪಗಳ ನಡುವೆ ಅದ್ಭುತ ಡೊಳ್ಳು ಕುಣಿತ. ನನ್ನ ಮೂರು ಕಾಲಿನ ನರ್ತನಕ್ಕೆ ಹಿಡಿದಿದ್ದ ಜಾಗ ಆಗಲೇ ಫುಲ್ಲ್. ಇದು ಸಿನಿಮಾದವರ ನಿತ್ಯದ ಗೋಳು. ಕೆಲವೇ ನಿಮಿಶಗಳಲ್ಲಿ ನಿಮ್ಮ ಮೆಚ್ಚಿನ ಶಾಟ್ ಕಣ್ಣೆದುರಿಗೆ ಮಾಯವಾಗುತ್ತಿರುತ್ತದೆ ನೀವು ಹತಾಶರಾಗಿ ಸುಮ್ಮನೇ ನೋಡುತ್ತ ನಿಲ್ಲಬೇಕು. ನಕ್ಕು ಬಿಟ್ಟು ಸುಮ್ಮನಾಗುತ್ತೀರಿ.ಆಗಲೇ ಬೇಕು ನಿರ್ವಾಹವಿಲ್ಲ

ಇದರಲ್ಲಿ ಕೆಮೆರ, ಸೌಂಡ್,ಎಡಿಟಿಂಗ್, ಹೀಗೆ ..

ಎಲ್ಲವನ್ನೂ ನಾನೇ ಮಾಡಿದ್ದೇನೆ ಅಂತ ಹೆಗ್ಗಳಿಕೆಯಾಗಿ ಹೇಳಿಕೊಳ್ಳುತ್ತಿಲ್ಲ. ಕೆಲವೇ ಕೆಲವು ವರ್ಷಗಳ ಕೆಳಗೆ ಈ ರೀತಿಯ ಒಂದು ಪ್ರಯತ್ನ ಸಾಧ್ಯವಾಗುತ್ತದೆ ಅಂದರೆ ಯಾರೂ ನಂಬುವಂತಿರಲಿಲ್ಲ. ಇವತ್ತು ಡಿಜಿಟಲ್ ಟೆಕ್ನೊಲೊಜಿ ಎಲ್ಲವನ್ನೂ ನಮ್ಮ ಹತ್ತಿರಕ್ಕೆ ತಂದಿದೆ. ಯಾವಾಗ ಬೇಕಾದರೂ ಎಲ್ಲಿಯೂ ಚಿತ್ರೀಕರಿಸುವುದು ಇಂದು ಸಾಧ್ಯ. ಆದರೂ ಅನ್ನಿಸುತ್ತದೆ ಆ ಡೊಳ್ಳಿನ ಕುಣಿತ ಒಂದು ಸಿಕ್ಕಿದ್ದರೆ ಅದರ ಮಜಾನೇ ಬೇರೆ ಇರ್ತಿತ್ತು ಅಂತ. ನೋಡೋಣ ಮುಂದೆಂದಾದರೂ ಸಾಧ್ಯವಾಗಬಹುದು.ಸಿನಿಮಾ ಬದುಕಿ ಉಸಿರಾಡುವದೇ ಆ ತರಹದ ನಂಬಿಕೆಯ ಮೇಲೆ. ಇಲ್ಲಿಯ ವರೆಗೆ ತಾಳ್ಮೆಯಿಂದ ಓದಿದ್ದಕ್ಕೆ ನೀವು ನನ್ನ ಧನ್ಯವಾದಗಳ ಹಕ್ಕುದಾರರು. ಧನ್ಯವಾದ.


One comment to “ಆದಿಮ – ಒಂದು ಪ್ರೇಮ ಕಥೆ”
  1. ಶ್ರೀಕಾಂತ್ ಪ್ರಭು ಅವರದು ಚೆನ್ನಾದ ಬರಹ. ಕೆ.ರಾಮಯ್ಯ ಅವರು ಸುಮ್ಮನೆ ಸಿದ್ಧಾಂತ ಹೇಳಿಕೊಂಡು ಹರಟುವವರಲ್ಲ. ಪ್ರಾಯೋಗಿಕವಾಗಿ ತೊಡಗಿಸಿಕೊಂಡವರು. ಅವರ ಬಗ್ಗೆ ಮತ್ತು ಅವರು ಹುಟ್ಟು ಹಾಕಿದ “ಆದಿಮ” ಸಾಂಸ್ಕೃತಿಕ ಸಂಚಲನವಾದ ಬಗೆ ಅನನ್ಯ. ಮೊದಲು ನನ್ನ ಮೊಬೈಲ್ ಗೆ “ಆದಿಮ”ದಿಂದ ಒಂದು ಮೆಸೇಜ್ ಬರ್ತಿತ್ತು. ಪ್ರತಿ ತಿಂಗಳ ‘ಹುಣ್ಣಿಮೆ ಹಾಡ’ದು. ಮಿತ್ರರಾದ ಮಾ. ಶಿವಶಂಕರ್ ಅವರಿಗೆ “ಆದಿಮ” ಅನ್ನತಕ್ಕಂತ ಪತ್ರಿಕೆ ಬರ್ತಿತ್ತು. ಈ ಬಗ್ಗೆ ನಾವು ಕೆಲವಷ್ಟು ಸ್ನೇಹಿತರು ಪ್ರತಿವಾರ ಮಾತುಕತೆ ಇದ್ದೇ ಇರ್ತಿತ್ತು. ಇದು ನಾನು ವಾಸ ಮಾಡುವ ತಿರುಮಕೂಡಲು ನರಸೀಪುರದ ಸುತ್ತಮುತ್ತಲಷ್ಟೆ ಅಂದುಕೊಂಡರೆ ಅದು ತಪ್ಪು. ಆದರೆ ಇದೇ ರೀತಿ “ಆದಿಮ” ಕರ್ನಾಟಕದ ಚಳುವಳಿ ಹೋರಾಟ ಸಾಹಿತ್ಯಕ ಒಟನಾಟದ ಮನಸುಗಳು ಮಾತಾಡಿಕೊಂಡು ತನ್ನ ವಿಸ್ತಾರತೆಯನ್ನು ಹೆಚ್ಚಿಸಿಕೊಂಡಿರುವುದು ಅದರ ಹೆಚ್ಚುಗಾರಿಕೆ. ಈ ಹೆಚ್ಚುಗಾರಿಕೆ .ರಾಮಯ್ಯನವರ ಕಾಳಜಿ ಶ್ರಮದ ದ್ಯೂತಕ ಅನ್ನಬಹುದು. ಏಕೆಂದರೆ ಅವರ “ತಲಪರಿಗೆ” ಸಿದ್ದಗೊಳ್ಳುವಾಗ ಪ್ರತಿ ಅಕ್ಷರ, ಪುಸ್ತಕದ ಪುಟ, ವಿನ್ಯಾಸ, ತಲಪರಿಗೆ ಸಂದರ್ಶನ ಮಾಹಿತಿಯ ಬರಹ ವಿವರವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದುದ ನಾನು ಜೊತೆ ಇದ್ದು ಗಮನಿಸಿದ್ದೇನೆ. ಒಟ್ಟಾರೆ “ಆದಿಮ” ಬೆರಗು ಹುಟ್ಟಿಸುವ ಒಂದು ಸಾರ್ಥಕ ಪ್ರಯತ್ನ!
    *
    ಎಂ.ಜವರಾಜು

ಪ್ರತಿಕ್ರಿಯಿಸಿ