-೨-
ಆದರೆ ನನ್ನ ಹೀನ ಹಾದರದ ಪರ್ವವು ಮುಗಿದು, ಕೊನೆಗೆ ಅದೂ ನನಗೆ ವಾಕರಿಕೆ ತರಿಸುತಿತ್ತು. ನಂತರ ಶುರುವಾಗುತ್ತಿದ್ದದ್ದು ಪಶ್ಚಾತಾಪ ಪರ್ವ. ಅದನ್ನೂ ಒದ್ದು ಓಡಿಸಲು ಪ್ರಯತ್ನಿಸುತ್ತಿದ್ದೆ. ಅಬ್ಬಾ…! ಆಗಂತೂ ವಾಕರಿಕೆ ಅಂದರೆ ವಾಕರಿಕೆ… ಜ್ವರದ ಪರ್ವ ಅದು. ಕ್ರಮೇಣ ಅದೂ ಅಭ್ಯಾಸ ಆಯಿತು. ಎಲ್ಲದ್ದಕ್ಕೂ ಒಗ್ಗಿಕೊಳ್ಳುತ್ತಿದ್ದ ಮನುಷ್ಯ ನಾನು, ಅಥವಾ ಸ್ವಯಂ ಪ್ರೇರಣೆಯಿಂದಲೇ ಇವೆಲ್ಲವನ್ನೂ ಸಹಿಸಲು ಒಪ್ಪುತ್ತಿದ್ದವ. ಆದರೆ ನನಗೆ ಒಂದು ದಾರಿ ಗೊತಿತ್ತು. ಎಲ್ಲ ದುಸ್ತರ ಗೊಂದಲಗಳನ್ನೂ ಪರಿಹರಿಸುತ್ತಿದ್ದ ಆ ಮಾರ್ಗದ ಹೆಸರೇ ಅದ್ಭುತ ಚೆಲುವಿನತ್ತ ಪಲಾಯನ! ಕನಸಲ್ಲಿ, ಸಹಜವಾಗಿಯೇ ಇವೆಲ್ಲವೂ ಘಟಿಸುತ್ತಿದ್ದದ್ದು ನನ್ನ ಹಗಲು ಕನಸಿನಲ್ಲಿ ಮಾತ್ರ. ನಾನೊಬ್ಬ ಭಯಂಕರ ಕನಸುಗಾರ. ನನ್ನ ಕೋಣೆಯ ಮೂಲೆಯಲ್ಲಿ ಕುಕ್ಕರಿಸಿಕೊಂಡು ಬರೋಬ್ಬರಿ ಮೂರು ತಿಂಗಳ ಕಾಲ ಈ ಕನಸುಗಳಲ್ಲಿ ತೇಲಾಡುತ್ತಿದ್ದೆ. ಆ ಕ್ಷಣಗಳಲ್ಲಿ ನನಗೂ ಹಾಗೂ ತನ್ನ ಪುಕ್ಕಲು ಹೃದಯದ ತಲ್ಲಣದಲ್ಲಿ ಜರ್ಮನ್ ಬೀವರ್ ಕಾಲರ್ನನ್ನು ತನ್ನ ಮಹಾ ಕೋಟ್ನ ಮೇಲೆ ಹಾಕಿಕೊಂಡಿದ್ದ ಆ ಸಜ್ಜನನಿಗೂ ಯಾವ ಸಾಮ್ಯತೆಯೂ ಇರುತ್ತಲೇ ಇರಲಿಲ್ಲ. ಇದ್ದಕ್ಕಿದ್ದಂತಲೇ ನಾನು ಮಹಾಪುರುಷನಾಗುತ್ತಿದ್ದೆ. ಆಗೇನಾದರೂ ಆ ಆರಡಿ ಲ್ಯೂಟಿನೆಂಟ್, ನನ್ನನ್ನು ಆತನ ಜತೆಗೇ ಡಿನ್ನರ್ಗೋ, ಬೀರ್ ಹಾಕಲೋ ಕರೆದಿದ್ದರೆ ಅವನತ್ತ ಕಣ್ಣೂ ತೇಲಿಸದ, ಆತ ಹೇಗಿದ್ದ ಎನ್ನುವುದನ್ನೇ ಮರೆತಿದ್ದ ಮಹಾಮನುಷ್ಯನಾಗಿ ಬಿಡುತ್ತಿದ್ದೆ.
ಹೀಗೆ ನನ್ನನ್ನು ಅತಿಮಾನುಷನಾಗಿಸುತ್ತಿದ್ದ ಆ ಕನಸುಗಳು ಎಂತಹು ಮತ್ತು ಅವುಗಳಿಂದ ನಾನು ಹೇಗೆ ತೃಪ್ತಿ ಪಟ್ಟಿದ್ದೆ ಎಂದೆಲ್ಲಾ ಈಗ ಹೇಳುವುದು ಕಷ್ಟ. ಆದರೆ ಈ ಕನಸುಗಳು ನನಗೆ ಆಗ ಶುದ್ಧವಾದ ಸಮಾಧಾನ ನೀಡಿದ್ದವು. ಈಗಲೂ ಅಷ್ಟೇ; ನನ್ನ ಕನಸುಗಳೆಂದರೆ ನನಗೆ ತಕ್ಕ ಮಟ್ಟಿಗೆ ತೃಪ್ತಿಯೇ. ವಿಶೇಷವಾಗಿ ಈ ಕನಸುಗಳು ತುಂಬಾ ಸಿಹಿಯಾಗಿಯೂ, ತುಂಬಾ ಸ್ಫುಟವಾಗಿಯೂ ಹಾರಿ ಬರುತ್ತಿದ್ದದು, ಹೀನ ಹಾದರದ ನಂತರವೇ. ಪಶ್ಚಾತಾಪ ಮತ್ತು ಕಣ್ಣೀರಿನ ಜತೆಗೆ, ಶಾಪ ಹಾಗೂ ಆನಂದದ ಜತೆಗೆ ತೇಲಿಕೊಂಡು ಬಂದು ಸುರಿಯುವ ಸುವರ್ಣ ಸ್ವಪ್ನಗಳವು. ಮನಸ್ಸಿನಲ್ಲಿ ಆರೋಗ್ಯ ಉಕ್ಕಿಸುವ ಆ ಕಡು ಸೊಗಸು ಎಷ್ಟು ತೀಕ್ಷ್ಣವೆಂದರೆ ದೇವರಾಣೆಗೂ ಆಗ ನನ್ನೊಳಗೆ ಗುಲಗಂಜಿಯಷ್ಟೂ ವ್ಯಂಗ್ಯದ ಅಥವಾ ಸಿಟ್ಟಿನ ಸುಳಿವಿರುತ್ತಿರಲಿಲ್ಲ. ಅಲ್ಲಿ ಶ್ರದ್ಧೆ ಇತ್ತು, ಭರವಸೆ ಇತ್ತು, ಪ್ರೀತಿಯಿತ್ತು. ಆದರೆ ಪವಾಡದಿಂದಲೋ ಅಥವಾ ಭೂತದಯೆಯಿಂದಲೋ ಇವೆಲ್ಲವೂ ಹಠಾತ್ತಾಗಿ ಹಿಗ್ಗಿ, ತೆರೆದುಕೊಂಡಂತೆ, ಇದ್ದಕ್ಕಿದ್ದಂತೆಯೇ ನನಗಾಗಿಯೇ ತಯ್ಯಾರಾಗಿರುವ ಕ್ರಿಯಾವಳಿಯೊಂದು- ಅನುಕೂಲಕರ, ಸುಂದರ ಹಾಗೂ ಅತಿ ಮುಖ್ಯವಾಗಿ ಸಿದ್ಧವಾಗಿರುವ ಸಡಗರದ ಕ್ರಿಯಾವಳಿ (ಅವು ಎಂತಹಾ ಕೋಲಾಹಲ…ಎಂತಹ ಸಡಗರ ಅದೆಲ್ಲಾ ಗೊತ್ತಿಲ್ಲ. ಆದರೆ ಹಿಗ್ಗಿನ ವಿಷಯವೆಂದರೆ ಒಪ್ಪವಾಗಿ ನನಗೆ ಬೇಕಾದ ಹಾಗೆ ಸಜ್ಜಾಗಿರುತಿದ್ದ ಸಂಭ್ರಮವದು)- ನನ್ನೆದುರು ಪ್ರತ್ಯಕ್ಷವಾದಂತೆ; ಆಗ ಈ ಕ್ರಿಯೆಯನ್ನು ನಾನೇ ನೆರವೇರಿಸಲೆಂದು, ಬೆಳ್ಳನೆ ಬೆಳಗಿನ ಸ್ಪಷ್ಟ ಬೆಳಕಿನಲ್ಲಿ, ಅಚ್ಚ ಶ್ವೇತ ಅಶ್ವವನ್ನು ಏರಿ, ವಜ್ರ ಖಚಿತ ಕಿರೀಟದಿಂದ ಸನ್ಮಾನಿತನಾಗಿ ನಾನು ಆವಿರ್ಭವಿಸಿದಂತೆ… ನನ್ನನ್ನು ಹೊರ ಜಗತ್ತಿಗೆ ತಳ್ಳುತ್ತಿದ್ದ, ನನ್ನಿಂದ ಏನನ್ನೋ ಮಾಡಿಸಲು ಸಿದ್ಧವಾಗಿಸುತ್ತಿದ್ದ ಕ್ರಿಯಾವಳಿಯದು.
ನಾನು ಇಷ್ಟ ಪಟ್ಟಿದ್ದು ಪರಮಾತ್ಮನಾಗ ಬೇಕೆಂದೇ; ಅದಕ್ಕೆ ಸಮನಲ್ಲದ ಬೇರೆಲ್ಲ ಪದವಿಗಳ ಬಗ್ಗೆ ನನಗೆ ಬರೀ ತಿರಸ್ಕಾರ, ಜಿಗುಪ್ಸೆ; ಹಾಗಾಗಿ ಹಟಕ್ಕೆ ಬಿದ್ದು, ಪರಮನೀಚನ ಪದವಿಯನ್ನು ಈ ವಾಸ್ತವದಲ್ಲಿ ಗೆದಿದ್ದೆ. ಒಂದೋ ಮಹಾಪುರುಷನಾಗುವೆ, ಇಲ್ಲ ಮಣ್ಣಿನಹುಳ; ಮಧ್ಯೆ ಇರುವ ಎಡಬಿಡಂಗಿ ಆಗಲು ಒಲ್ಲೆನಯ್ಯ ಸ್ವಾಮೀ . ಆದರೆ ಅದೇ ನನ್ನ ಅಧಃಪತನ ಏಕೆಂದರೆ ಮಣ್ಣಲ್ಲಿ ಬಿದ್ದಾಗ ಬೇರೆ ಬೇರೆ ಕಾಲಮಾನದಲ್ಲಿ ನಾನು ಪರಮಾತ್ಮನಾಗಿದ್ದೆ ಅನ್ನೋ ಭಾವದಿಂದ ಖುಷಿ ಪಟ್ಟಿದ್ದೆ. ಹಾಗೇ ಈ ಪರಮಾತ್ಮ ನಾನೆಂಬ ಅಹಂ ನನ್ನನ್ನು ಮಣ್ಣಿಂದ ಮಲಿನನಾಗದಂತೆ ಕಾಯುವ ಮುಸುಕಾಗಿತ್ತು. ನನಗೇ ನಾನು ಹೇಳಿಕೊಳ್ಳುತ್ತಿದ್ದೆ, “ಪೆದ್ದೇ ಪರಮಾತ್ಮನಾಗು! ನೋಡು, ಎಲ್ಲರಂತವನು ಮಣ್ಣಲ್ಲಿ ಮುಳುಗಲು ಅಂಜಿ ಬೆವರುವನು, ಏಕೆಂದರೆ ಆತ ಸಾಮಾನ್ಯ, ಮಿತಿಯಲ್ಲಿ ಬದುಕುವ ಸರ್ವೇ ಸಾಮಾನ್ಯ; ಇಂಥವರಿಗೆಲ್ಲ ಮಣ್ಣೆಂದೆರೆ ಅವಮಾನ, ಮಿತಿಯಿರಿದ ಅಸಹ್ಯ. ಪರಮಾತ್ಮನ ಹೆಸರು ಹೇಳಿ ಕೈ ಮುಗಿದು, ಅಡ್ಡ ಬಿದ್ದು, ‘ನಮ್ಮಂತವರನ್ನು ಕಾಯಪ್ಪ’ ಎಂದು ಭಕ್ತಿಭಾಷ್ಪ ಹರಿಸುವ ಪಾಪದವರು. ಆದರೆ ಪರಮಾತ್ಮ ಸಾರ್ವಭೌಮ, ಅದಕ್ಕೋಸ್ಕರವೇ ಯಾರೂ ಅವನಿಗೆ ಮಣ್ಣು ಮೆತ್ತುವುದಿಲ್ಲ; ಮೆತ್ತುವುದು ಬಿಡು, ಆತನ ಕಾಲ ಧೂಳನ್ನೇ ಕಣ್ಣಿಗೆ ಒತ್ತಿಕೊಳ್ಳುವ ಬಡಪಾಯಿಗಳು ಈ ಮಿಕ್ಕವರು. ಅದಕ್ಕೇ ತನಗೇ ತಾನೇ ಮಣ್ಣು ಎರೆಚಿಕೊಳ್ಳುವ ಹಕ್ಕಿರುವುದು ಅವನಿಗೆ ಮಾತ್ರ… ಏಕೆಂದರೆ ಅವನೇ ತಾನೇ ಪರಮಾತ್ಮ ಅವನು ಏನು ಮಾಡಿದರೂ ನಡೆಯುತ್ತದೆ…!”
‘ಅದ್ಭುತ ಚೆಲುವಿನ’ ಆಕ್ರಮಣಗಳು ನಾನು ನೀಚ ಹಾದರದಲ್ಲಿ ಚೆಲ್ಲಾಪಿಲ್ಲಿಯಾಗಿ ಪಾತಾಳ ಸೇರಿದ್ದ ಅವಧಿಯಲ್ಲೂ ನನ್ನತ್ತೆ ತೇಲಿ ಬರುತ್ತಿದ್ದವು, ಎಂಬುದನ್ನೂ ನೀವು ಗಮನಿಸಬೇಕಿಲ್ಲಿ. ಪುಟ್ಟ-ಪುಟ್ಟ ಮಿಂಚಂತೆ, ಬಿಡಿಬಿಡಿಯಾಗಿ ಅವುಗಳ ಅಸ್ತಿತ್ವವನ್ನು ನನಗೆ ನೆನೆಪಿಸುವಂತೆ ಪಿಚಕ್ಕನೇ ನನ್ನ ಮೇಲೆ ಚಿಮ್ಮುತ್ತಿದ್ದವು. ಹಾಗಿದ್ದೂ ನನ್ನ ಹೀನ ಹಾದರವನ್ನು ಮಾತ್ರ ಈ ಆಕ್ರಮಣಗಳು ಕಿತ್ತೊಗೆಯುತ್ತಿರಲಿಲ್ಲ. ಆದರೆ ಅದಕ್ಕೆ ವಿರುದ್ಧವಾಗಿ ಆ ಸ್ಥಿತಿಗೆ ಹುರುಪಿನ ಉಪ್ಪನ್ನು ಬೆರೆಸುತ್ತಿದ್ದವು. ರುಚಿ ಏರಿಸಿ, ಹಸಿವು ಹೆಚ್ಚಿಸುವ ಒಳ್ಳೇ ಗೊಜ್ಜಿನಷ್ಟೇ ಅಳತೆಯಲ್ಲಿ ಘಮ-ಘಮಿಸಿದ್ದವು. ನನ್ನ ಕಥೆಯಲ್ಲಿ ಬರುವ ಈ ಗೊಜ್ಜು, ತಳಮಳ ತುಂಬಿದ ಆಂತರಿಕ ಬಿಡಿನೋಟಗಳ, ಕುದಿಯುವ ಬೇಗುದಿಗಳ, ಹಬೆಯಾಡುವ ವೈರುಧ್ಯಗಳ ಸಂಗಮ. ಈ ಎಲ್ಲಾ ಯಾತನೆಗಳು- ಎಷ್ಟೇ ಚಿಕ್ಕದೋ, ದೊಡ್ಡದೋ ಆಗಿದ್ದರೂ- ನನ್ನ ಪುಟ್ಟ ಪುಟ್ಟ ಹಾದರಗಳನ್ನು ಉತ್ತೇಜಿಸಿ, ಅವಕ್ಕೆ ಒಂದು ಥರದ ಘನತೆಯನ್ನು ಸೃಷ್ಟಿಸಿದ್ದವು. ಹಾಗೇ ಇವೆಲ್ಲದಕ್ಕೂ ಒಂದು ಗಂಭೀರವಾದ ಪಾರ್ಶ್ವವೂ ಇತ್ತು. ಇಲ್ಲದಿದ್ದರೆ ಯಕಃಶ್ಚಿತ್ ಗುಮಾಸ್ತನಿಗೆ ತಕ್ಕದಾದ ಹೀನ, ಸ್ವಯಂಪ್ರೇರಿತ, ಕ್ಷುಲ್ಲಕ ಹಾದರಕ್ಕೆ ನನ್ನಂತಹವನು ಇಳಿದು, ನನ್ನತ್ತ ನಾನೇ ಮಣ್ಣೆರೆಚಿ ಆ ಮೈಲಿಗೆಯನ್ನು ಸಹಿಸಿಕೊಳ್ಳುತ್ತಿದ್ದೇನೆಯೆ? ಖಂಡಿತಾ ಇಲ್ಲ; ಈ ಹಾದರದತ್ತ ನನ್ನನ್ನೂ ಆಕರ್ಷಿಸಿದ್ದೂ ಈ ಅದ್ಭುತ ಚೆಲುವೇ, ಇದೇ ಮರುಳು ಮಾಡಿ, ರಾತ್ರಿಯ ಬೀದಿಗಿಳತ್ತ ನನ್ನ ಸೆಳೆದದ್ದು. ಆಮೇಲೇ, ಎಲ್ಲ ಮುಗಿದ ಮೇಲೆ ಭವ್ಯ ಮಾರ್ಗವಾದ ಅಧ್ಭುತ ಚೆಲಿವಿನತ್ತ ತಿರುಗಿ ಈ ಪಾಪಗಳಿಂದ ತಪ್ಪಿಸಿಕೊಳ್ಳುವ ಕಲೆಯೂ ನನಗೆ ಗೊತಿತ್ತು.
ಆದರೆ ನಿಮಗೆ ಗೊತ್ತೆ… ತುಂಬಾ ತುಂಬಾ ಪ್ರೀತಿಯನ್ನು ನನ್ನ ಮಾಯಾಬಜಾರ್ನಲ್ಲಿ ಅನುಭವಿಸಿದ್ದೆ, ದೇವರೇ ಎಷ್ಟು ಚೆಂದದ ಪ್ರೀತಿ ತುಂಬಿದ ದಯೆಯದು. ಅದ್ಭುತ ಚೆಲುವಿನಲ್ಲಿ ಆಶ್ರಯ ಪಡೆದು ಎಂತಹ ಪ್ರೀತಿಯನ್ನು ಸವಿದಿದ್ದೆ! ನನಗೆ ಇದು, ವಾಸ್ತವದಲ್ಲಿ ಮನುಷ್ಯನಿಗೆ ದಕ್ಕದಂತಹ ಕಲ್ಪನಾ ಪ್ರೀತಿ ಎಂಬ ಅರಿವು ಆ ದಿನಗಳಲ್ಲೂ ಇದ್ದೇ ಇತ್ತು. ಆದರೆ ಈ ಪ್ರೀತಿಯ ಒಡಲು ಸದಾ ಸಮೃದ್ಧ! ಕಾಲ ಕಳೆದಂತೆ ಇದನ್ನು ನಿಜಸ್ಥಿತಿಗೆ ಜೋಡಿಸಿ ಆಚರಿಸುವುದೇ ದುಂದಿನ ಬೆಡಗು ಎನಿಸಿತ್ತು ಹೇಗೋ ಏನೋ ಕೊನೆಗೆ ಎಲ್ಲವೂ ಕಲೆಯಾಗಿ ರೂಪಾಂತರಗೊಳ್ಳುವ ಸಮಯ ಬಂದೇ ಬರುತಿತ್ತು; ಅಮಲು ಮತ್ತು ಆಲಸ್ಯ ಮೇಳೈಸಿದ ಆ ಪರಿವರ್ತನೆ. ಇಲ್ಲಿ ಕಲೆಗೆ, ಎಂದರೆ ಸಿದ್ಧವಾಗಿಯೇ ಬಿದ್ದಿರುವ, ಕವಿಗಳಿಂದ ಮತ್ತು ಕಥೆಗಾರರಿಂದ ಅಗಾಧವಾಗಿ ನಾನು ದೋಚಿದ್ದ, ನನ್ನ ಬಗೆ-ಬಗೆಯ ಹಂಬಲ, ಅನುಕೂಲಗಳಿಗೆಲ್ಲಾ ಹೊಂದಿಕೊಳ್ಳುವಂತೆ ಸೃಷ್ಟಿಸಿದ್ದ ಸೌಂದರ್ಯದ ಇರುವಿಗೆ. ಇನ್ನೂ ಸೂಕ್ಷ್ಮವಾಗಿ, ಸ್ಪಷ್ಟವಾಗಿ ಹೇಳಬೇಕೆಂದರೆ ಈ ಯುರೋಪಿಯನ್ನರ ಪುಸ್ತಕಗಳನ್ನು ಓದಿ-ಓದಿ ನಾನು ಕಲಿತಿದ್ದ, ಸೆಲಿಬೇಶ್ರನ್ನಿಂದ, ಟೆಶ್ಟ್ ಟ್ಯೂಬಿನಿಂದ ಹುಟ್ಟಿದ್ದ ಆನಂದ… ಈ ನನ್ನ ಕಲ್ಪನೆಯಲ್ಲಿ ಎಲ್ಲರನ್ನೂ ನಾನು ಗೆಲ್ಲುತ್ತಿದ್ದೆ, ಎಲ್ಲರೂ(ಅಂದರೆ ಸಹಜವಾಗಿಯೇ ಧೂಳು ಮತ್ತು ಬೂದಿಯಲ್ಲಿ ಬಿದ್ದಿರುವವರು!) ಒತ್ತಾಯಕ್ಕೆ ಮಣಿದು, ವಿಧಿಯಿಲ್ಲದೆಯೇ ತಮ್ಮ ಸ್ವಂತ ಇಚ್ಛೆಯಿಂದ ನನ್ನ ಪರಿಪೂರ್ಣತೆಯನ್ನು ತಲೆಬಾಗಿಸಿ ಒಪ್ಪುತ್ತಿದ್ದರು. ಆಗ ನಾನು ಎಲ್ಲರನ್ನೂ ಕ್ಷಮಿಸಿ, ಮಹಾಕವಿ ಹಾಗೂ ಅವತಾರವೆತ್ತಿದ್ದ ಪರಮಾತ್ಮನಾಗಿರುತ್ತಿದ್ದೆ; ನಾನು ಸಕಲಜೀವಿಗಳನ್ನೂ ಪವಿತ್ರವಾಗಿ ಪ್ರೀತಿಸುತ್ತಿದ್ದೆ. ಲೆಕ್ಕಕ್ಕೇ ಸಿಗದ ಕೋಟಿ-ಕೋಟಿ ಜನಗಳ ಉದ್ಧಾರಕ್ಕೇ ತಾನೇ ನಾನು ಬಂದದ್ದು, ಅದಕ್ಕೋಸ್ಕರವೇ ನಾನು ಪಾದವಿಟ್ಟ ಕ್ಷಣದಲ್ಲೇ ಅವರೆಲ್ಲರನ್ನೂ ಮನುಷ್ಯತ್ವದ ಭಕ್ತರಾಗಿಸುತ್ತಿದ್ದೆ. ಆದರೆ ಅದೇ ಹೊತ್ತಿನಲ್ಲಿ ನನ್ನ ನಾಚಿಕೆಗೇಡಿನ ಹೀನಹಾದರಗಳನ್ನು ಅವರ ಸಮ್ಮುಖದಲ್ಲೇ ನಿವೇದಿಸುತ್ತಲೂ ಇದ್ದೆ; ಆದರೆ ಅವೆಲ್ಲಾ ಬರೀ ನಾಚಿಕೆಗೇಡಿನ ಹೀನ ಹಾದರಗಳಾಗಿರುವುದಿಲ್ಲ ಸಜ್ಜನರೇ; ಆದರೆ ಮಾನ್ಫ಼್ರಡ್ನ* ಶೈಲಿಯಲ್ಲಿ ಅದ್ಭುತ ಚೆಲುವನ್ನೂ ತಮ್ಮಲ್ಲಿಟ್ಟುಕೊಂಡಿರುವ ಸುಂದರಘನಗಳು.
ಎಲ್ಲರೂ ಆಗ ಅತ್ತು ಅತ್ತು ನನಗೆ ಮುತ್ತಿಡುತ್ತಾರೆ(ಹಾಗೆ ಮಾಡದವರೆಲ್ಲಾ ಮಹಾ ಮೂರ್ಖರು),ಆದರೆ ನಾನು ಮಾತ್ರ ನಡೆಯುತ್ತಲೇ ಇರುತ್ತೇನೆ, ಬರಿಗಾಲಲ್ಲಿ, ಹಸಿದು, ನವ್ಯ ತತ್ವಗಳ ಸಾರಲು, ಆಸ್ಟರ್ಲಿಟ್ಝ್ನಲ್ಲಿರುವ ಪ್ರತಿಗಾಮಿಗಳ ನಾಶ ಮಾಡಲು. ಆಗ ಬ್ಯಾಂಡಿನ ಜನ ಮಾರ್ಚಿಂಗ್ಗ್ ಮ್ಯೂಸಿಕ್ಕನ್ನ ಊದುವರು, ಅಮ್ನೆಶ್ಟಿನೂ ಡಿಕ್ಲೇರ್ ಆಗೋದು ಆಗಲೇ. ನಾನು ಆಗ ಗೆದ್ದ ನೆಪೋಲಿಯನ್ನಂತೆ. ಆಗ ಈ ಪೋಪ್ ಕೂಡ ನನ್ನ ಇರಾದೆಗೆ ಬಗ್ಗಿ ಹೋಗಿ ರೋಮ್ ಬಿಟ್ಟು ಬ್ರೆಜಿಲ್ಗೆ ಕಡೆಗೆ ದಯಮಾಡಿಸಲೇ ಬೇಕು. ಮತ್ತೆ ಇಡೀ ಇಟಲಿಗಾಗಿ ಮಜಾಕೂಟ! ಅದೂ ಕೋಮೋ ಸರೋವರದ ತಟದಲ್ಲಿರುವ ಬೂರ್ಗ್ವೀಸ್ ಬಂಗಲೆಯಲ್ಲಿ! ಈ ಥರ ಪಾರ್ಟಿಗೆಂದೇ ಈ ಲೇಕ್ ಕೋಮೋವನ್ನೇ ರೋಮಿಗೆ ವರ್ಗಾಯಿಸುರುತ್ತೇನೆ ನಾನು! ಆಮೇಲೆ ಅಲ್ಲಿ ದಟ್ಟವಾಗಿ ಹಬ್ಬಿರುವ ಪೊದೆಗಳಲ್ಲಿ ಒಂದು ಸೀನು ಇತ್ಯಾದಿ, ಇತ್ಯಾದಿ.- ಅದೆಲ್ಲಾ ನಿಮಗೆ ಗೊತ್ತಿರೋ ಕಥೆನೇ ತಾನೇ? ಆನಂದ ಮತ್ತು ಕಣ್ಣೀರಿನ ಹನಿಗಳನ್ನು ನಿವೇದಿಸಿದ ಮೇಲೆ ಹೀಗೇ ನಾನು ಎಲ್ಲವನ್ನೂ ಮುಕ್ತವಾಗಿ ಹೇಳುವುದು ಕ್ಷುದ್ರ ಹಾಗೂ ಹೀನ ಅನ್ನಬಹುದು, ನೀವು. ಏಕೆ ಹಾಗೆ ಅನ್ನಿಸುತ್ತಿದೆ ನಿಮಗೆ? ಇವೆಲ್ಲದರ ಬಗ್ಗೆ ನನಗೆ ನಾಚಿಕೆ ಇದೆ ಎಂದುಕೊಂಡಿದ್ದೀರ… ಅಥವಾ ನಿಮ್ಮ ಬದುಕಲ್ಲಿ ಘಟಿಸಿದ ಅನೇಕ ಘಟನೆಗಳಿಗಿಂತ, ನನ್ನ ಈ ಹಗಲುಗನಸುಗಳು ಪೆದ್ದುಪೆದ್ದಾಗಿವೆ ಎಂಬ ಕಾರಣಕ್ಕಾಗಿ ನನ್ನ ಬಗ್ಗೆ ಅಸಹ್ಯಪಡುತ್ತಿದ್ದೀರ? ಮತ್ತೆ ಈ ಕೆಲವು ಖಯಾಲಿಗಳು ಖಂಡಿತವಾಗಿಯೂ ಕೆಟ್ಟದಾಗಿ ರಚಿಸಲ್ಪಟ್ಟಿಲ್ಲ… ಹಾಗೇ ಎಲ್ಲವೂ ಲೇಕ್ ಕೊಮೋ ದಂಡೆಯ ಮೇಲೆ ನಡೆಯಲೂ ಇಲ್ಲ. ಹಾಗಿದ್ದರೂ ನಿಮ್ಮ ಊಹೆ ಸರಿಯಾಗಿಯೇ ಇದೆ; ಅಂದರೆ ಇದು ನಿಜಕ್ಕೂ ಕ್ಷುದ್ರ ಹಾಗೂ ಹೀನವೇ. ಆದರೆ ಎಲ್ಲ ನೀಚ, ಹೀನ ಕ್ಷುದ್ರತೆಗಳ ಪರಾಕಾಷ್ಟೆಯೆಂದರೆ ನಿಮ್ಮೆದುರು ನನ್ನನ್ನು ನಾನೇ ಸಮರ್ಥಿಸಿಕೊಳ್ಳಲು ಶುರುಮಾಡಿರುವುದು. ಇನ್ನೂ ಹೆಚ್ಚು ಕ್ಷುದ್ರವಾಗಿರುವ ಸಂಗತಿಯೆಂದರೆ ಈಗ ಈ ಟೀಕೆ-ಟಿಪ್ಪಣಿಯನ್ನು ಬರೆಯುತ್ತಿರುವದೂ ನಾನೇ. ಸಾಕಪ್ಪ…ಸಾಕು, ಹೀಗೆ ಬರುವ ಕ್ಷುದ್ರ ಮಾತುಗಳಿಗೆ ಕೊನೆಯೆಂಬುದೇ ಇಲ್ಲ.
ಕರಾರುವಕ್ಕಾಗಿ, ಮೂರು ತಿಂಗಳಿಗಿಂತ ಜಾಸ್ತಿ ಕಾಲ ಕನಸು ಕಾಣಲಾಗುತ್ತಿರಲಿಲ್ಲ ನನಗೆ. ಏಕೆಂದರೆ ಅಷ್ಟು ದಿನ ಹೋಗುತ್ತಿದ್ದಂತೆಯೇ ಸಮಾಜಕ್ಕೆ ಧುಮುಕುವ ಹಂಬಲ ಬೇತಾಳದಂತೆ ನನಗೆ ಜೋತು ಬಿದ್ದು ಬಿಡುತ್ತಿತ್ತು. ಸಮಾಜದಾಚೆ ನನ್ನನ್ನು ನಾನೇ ಎಸೆದುಕೊಳ್ಳುವುದೆಂದರೆ, ಜನಗಳನ್ನು ಭೇಟಿಯಾಗುವುದು, ಜನಗಳನ್ನು ಹೋಗಿ ಭೇಟಿಯಾಗುವುದೆಂದರೆ ನನ್ನ ಪ್ರಕಾರ, ನನ್ನ ವಿಭಾಗದ ಮುಖ್ಯಸ್ಥನಾದ ಆಂಟೋನಿಕ್ನನ್ನು ಭೇಟಿಯಾಗುವುದು. ಈ ಜೀವನ ಪೂರ್ತಿ ನನಗಿದ್ದ ಏಕೈಕ ಪರಿಚಯಸ್ಥನೆಂದರೆ ಅವನೊಬ್ಬನೇ. – ಈ ಸತ್ಯ ನನ್ನನ್ನು ಈಗಲೂ ಆಶ್ಚರ್ಯಗೊಳಿಸುತ್ತದೆ- ಅವನನ್ನೂ ನಾನು ಭೇಟಿಯಾಗುತ್ತಿದ್ದದು ನನ್ನ ಕನಸುಗಳು ಕಡು ಆನಂದದ ಸ್ಥಿತಿಯನ್ನು ತಲುಪಿದಾಗ. ಆಗ ನನ್ನಲ್ಲಿ ಅನಾಮತ್ತಾಗಿ ಮನುಷ್ಯ ಪ್ರೀತಿ ಮೊಳಗಿ ಬಿಡುತಿತ್ತು. ಆಗಲೇ ನನ್ನ ಸ್ನೇಹಿತರನ್ನು ಮತ್ತು ಇಡೀ ಮನುಕುಲವನ್ನು ತಬ್ಬುವ ಆಸೆಯಾಗುತ್ತಿತ್ತು. ಈ ವ್ಯಕ್ತಿ ಆ ಆಸೆಯ ಪೂರೈಕೆಗೆಂದೆ ಅಸ್ತಿತ್ವದಲ್ಲಿ ಇರುವನೇನೋ ಅನ್ನುವಂತೆ ಇದ್ದ! ಆತ ಸಿಗುತಿದ್ದುದು ಮಂಗಳವಾರದಂದು. ಹಾಗಾಗಿ ಈ ಮನುಕುಲವನ್ನು ಅಪ್ಪಿಕೊಳ್ಳುವ ಕಾರ್ಯಕ್ರಮವನ್ನು ಮಂಗಳವಾರದಂದೇ ನಾನು ನೆರೆವೇರಿಸಬೇಕಿತ್ತು. ಇವನ ಮನೆ ಇದ್ದದ್ದು Five cornersನ ಮೂರನೆಯ ಮಜಲಿನಲ್ಲಿ. ಎರಡು ಹೆಣ್ಣು ಮಕ್ಕಳು ಮತ್ತು ಆ ಮಕ್ಕಳ ಚಿಕ್ಕಮ್ಮನ ಜತೆ ವಾಸವಾಗಿದ್ದ ಈ ಆಂಟೋನಿಕ್. ಆ ಚಿಕ್ಕಮ್ಮ ಪಿಂಗಾಣಿ ಬಟ್ಟಲುಗಳಿಗೆ ಚಹಾ ಸುರಿಯುವುದರಲ್ಲೇ ಯಾವಾಗಲೂ ನಿರತಳಾಗಿರುತ್ತಿದ್ದಳು. ಅವನ ಹೆಣ್ಣು ಮಕ್ಕಳಲ್ಲಿ ಒಬ್ಬಳಿಗೆ ಹದಿಮೂರು ಮತ್ತೊಬ್ಬಳಿಗೆ ಹದಿನಾಲ್ಕು. ಅವರಿಬ್ಬರದೂ ಪುಟ್ಟ ಗಿಡ್ಡ ಮೂಗುಗಳು. ಅವರೆಂದರೆ ನನಗೆ ಭಯಂಕರ ನಾಚಿಕೆ. ನಾನು ಅಲ್ಲಿಗೆ ಹೋದಾಗಲೆಲ್ಲಾ ಪಿಸುಗುಟ್ಟಿ ಮಾತನಾಡುತ್ತಾ ಕಿಸಿಕಿಸಿ ನಗುತ್ತಿದ್ದರು. ಈ ಆಂಟೋನಿಕ್ ಸಾಮಾನ್ಯವಾಗಿ ಓದುವ ಕೋಣೆಯೊಳಗಿದ್ದ ಚರ್ಮದ ಕುರ್ಚಿಯ ಮೇಲೆ ಕೂತಿರುತಿದ್ದ. ಅವನ ಜತೆಯಲ್ಲಿ ಕೆಲವು ಬೂದು ಕೂದಲಿನ ಜನರು- ನಮ್ಮದೇ ಕಛೇರಿಯ ನೌಕರರೋ ಅಥವಾ ಇನ್ನೊಂದು ಕಛೇರಿಯವರೋ- ಸದಾ ಇರುತ್ತಿದ್ದರು. ನಾನು ಎರಡು, ಮೂರು ಮಂದಿಗಿಂತ ಹೆಚ್ಚು ಜನರನ್ನು ಇಲ್ಲಿ ಯಾವತ್ತೂ ಕಂಡಿಲ್ಲ. ಈ ಮೂರು ಮೂತಿಗಳೇ ಇಲ್ಲಿನ ಖಾಯಂ ಅತಿಥಿಗಳು. ಅಬಕಾರಿ ವಿಷಯಗಳ ಬಗ್ಗೆ, ಸೆನೆಟ್ಟಿನಲ್ಲಿ ಆಗುವ ವಾದ-ವಿವಾದಗಳ ಬಗ್ಗೆ, ಸ್ಯಾಲರಿ ಪ್ರಮೋಷನ್ ಬಗ್ಗೆ, ಮಹಾರಾಜರ ಬಗ್ಗೆ, ಮಹಾರಾಜರ ಅಂಡು ಬಡಿಯುವ ಕಲೆಯ ಬಗ್ಗೆ ಇತ್ಯಾದಿ-ಇತ್ಯಾದಿ ವಿಷಯಗಳ ಬಗ್ಗೆ ಈ ಮಹಾನುಭಾವರು ಧೀರ್ಘ ಕಾಲ ಚರ್ಚಿಸುತ್ತಿದ್ದರು. ಇವರೆಲ್ಲರ ಜತೆ, ಹೆಚ್ಚುಕಮ್ಮಿ ನಾಲ್ಕುಗಂಟೆಗಳ ಕಾಲ ಸದ್ದಿಲ್ಲದೆ ಕೂತು, ತಾಳ್ಮೆಯಲ್ಲಿ ಎಲ್ಲವನ್ನೂ ಆಲಿಸುತ್ತಾ ದೊಡ್ಡ ಹೆಡ್ಡನಂತೆ ಹೇಗೆ ಸಂಭಾಷಣೆಯನ್ನು ಶುರುಮಾಡಬೇಕೆಂದು ತಿಳಿಯದೆ ಚಿಂತಾಕ್ರಾಂತನಾಗಿ, ಒಂದೇ ಭಂಗಿಯಲ್ಲಿ ಬೆವರುತ್ತಾ ಕೂತಿರುತ್ತಿದ್ದೆ ನಾನು. ಇನ್ನ್ನೇನು ಲಕ್ವಾ ಹೊಡೇದೇ ಬಿಡುತ್ತದೆ ಎನ್ನುವ ಭಾವನೆಯು ಬಹಳ ಪ್ರಬಲವಾಗಿರುತ್ತಿತ್ತು, ಆಗ. ಒಂದು ಲೆಕ್ಕದಲ್ಲಿ ಇದೂ ನನಗೆ ಆಹ್ಲಾದಕರವೇ ಹಾಗೇ ಒಳ್ಳೆಯದೇ. ಏಕೆಂದರೆ ಇಷ್ಟೆಲ್ಲಾ ಆಗಿ ಮನೆಗೆ ಬಂದ ಮೇಲೆ ಮನುಕುಲವನ್ನು ತಬ್ಬಿಕೊಳ್ಳುವ ಬಯಕೆಯನ್ನು ಸ್ವಲ್ಪ ಕಾಲ ಬಿಟ್ಟು ಬಿಡುತ್ತಿದ್ದೆ ನಾನು.
ಇಷ್ಟೆಲ್ಲ ಇದ್ದರೂ ನನ್ನ ಪರಿಚಿತನೆಂದು ಕರೆಯಲ್ಪಡಬಹುದಾದ ಇನ್ನೊಬ್ಬ ವ್ಯಕ್ತಿಯೂ ಇದ್ದ. ಅವನೇ ಸೈಮೊನವ್. ನನ್ನ ಶಾಲಾದಿನಗಳ ಹಳೇ ಸಹಪಾಠಿ. ಪೀಟರ್ಸ್ಬರ್ಗ್ನಲ್ಲಿ ನನಗೆ ತುಂಬಾ ಕ್ಲಾಸ್ಮೇಟುಗಳಿದ್ದರು. ಆದರೆ ಯಾರ ಜತೆಯೂ ಸ್ನೇಹ ಬೆಳೆಸಿರಲಿಲ್ಲ ನಾನು. ಅಷ್ಟೇ ಏಕೆ, ಬೀದಿಯಲ್ಲಿ ಸಿಕ್ಕಾಗ ಅವರನ್ನು ನೋಡುವುದು, ಹಲ್ಲು ಕಿರಿಯುವುದು, ಮಾತನಾಡುವುದು ಎಲ್ಲವನ್ನೂ ಖೈದುಗೊಳಿಸಿದ್ದೆ. ಬಹುಶಃ ಅವರ ಜತೆ ದುಡಿಯುವುದನ್ನು ತಪ್ಪಿಸಲೆಂದೇ ನಾನು ಬೇರೆ ಡಿಪಾರ್ಟೆಮೆಂಟು ಸೇರಿದ್ದೆ ಎನಿಸುತ್ತದೆ. ಅವರಿಂದಲೂ ಹಾಗೂ ಹಗೆಯಲ್ಲಿ ಅದ್ದಿದ್ದ ನನ್ನ ಬಾಲ್ಯಾವಸ್ಥೆಯಿಂದಲೂ ನನ್ನನ್ನು ನಾನು ಕತ್ತರಿಸಿಕೊಂಡು ದೂರ ಹೋಗಲು ಹಾಗೆ ಮಾಡಿದ್ದೆನೇನೋ. ನಾನು ಓದಿದ್ದ ಶಾಲೆಗೂ, ದಂಡನೆ ಮತ್ತು ಗುಲಾಮಗಿರಿಯ ಆ ಭೀಭತ್ಸ ವರುಷಗಳಿಗೂ ಬೆಂಕಿ ಹಾಕ! ಒಂದೇ ಪದದಲ್ಲಿ ಹೇಳುವುದಾದರೆ ನಾನೊಬ್ಬ ಸ್ವತಂತ್ರ ಮನುಷ್ಯನಾದ ಕೂಡಲೇ ನನ್ನ ಎಲ್ಲಾ ಸಹಪಾಠಿಗಳಿಂದ ಬೇರೆಯಾದೆ. ಆದರೂ ಎರಡು-ಮೂರು ಜನರು ಉಳಿದಿದ್ದರು, ನನ್ನ ಶಾಲೆಯ ನೆನೆಪಿನ ಅವಶೇಷಗಳನ್ನು ನೆನಪಿಸುವಂತೆ. ಅವರನ್ನು ನೋಡಿ ಮುಗುಳ್ನಗುವುದು, ಕೈಬೀಸುವುದು ಇವೆಲ್ಲಾ ಮಾಡುತ್ತಿದ್ದೆ. ಈ ಸೈಮೊನವ್ ಅವರಲೊಬ್ಬ. ಮೆಳ್ಳಗಣ್ಣಿನ ಕುಳ್ಳ. ತಣ್ಣಗಿನ ಮನಃಸ್ಥಿತಿಯ ಮೌನಿ, ಶಾಲೆಯಲ್ಲಿ ಅದ್ಭುತವಾಗಿರುವುದೇನನ್ನೂ ಸಾಧಿಸಿರದ ಆಸಾಮಿ ಇವನು. ಆದರೆ ಅವನಲ್ಲಿ ನಿರ್ದಿಷ್ಟವಾದ ಮುಕ್ತ ವ್ಯಕ್ತಿತ್ವವನ್ನೂ, ಪ್ರಾಮಾಣಿಕತೆಯನ್ನೂ ಗುರುತಿಸಿದ್ದೆ. ಸೀಮಿತ ಸ್ವಭಾವದ ವ್ಯಕ್ತಿ ಇವನು ಎಂದು ನನಗೆ ಅನ್ನಿಸಿಯೇ ಇಲ್ಲ. ನಾವಿಬ್ಬರೂ ಜತೆಯಲ್ಲಿ ಉಲ್ಲಾಸಮಯ ಕ್ಷಣಗಳನ್ನು ಕಳೆದಿದ್ದರೂ, ಅವೆಲ್ಲ ಬೇಗನೇ ಮುಗಿದು, ಹೇಗೋ ಅಳಿಸಿ, ಮಂಜಿನೊಳಗೆ ಮಾಯವಾದವು. ಈ ನೆನಪು ನಿಸ್ಸಂಶಯವಾಗಿಯೇ ಅವನ ಮೇಲೆ ಭಾರವಾಗಿ, ಬೇಡದ ರೀತಿಯಲ್ಲಿ ಇಳಿದಿತ್ತು. ನಾನು ಮತ್ತೆ ಮೊದಲಿನಂತೆ ಅವನ ಜತೆ ನಡೆದುಕೊಳ್ಳುವೆನೇನೋ ಎಂಬ ಭಯ ಅವನ್ನನ್ನು ಕಾಡಿದ್ದರೂ ಅದರಲ್ಲಿ ಅಚ್ಚರಿಯೇನು ಇಲ್ಲ. ನಾನೆಂದರೆ ಅವನಿಗೆ ಹೇಸಿಗೆ ಎನ್ನುವ ಗುಮಾನಿ ಬೇರೆ ನನಗೆ. ಹಾಗಿದ್ದೂ ಅರ್ಧಂಬರ್ಧ ಮನಸ್ಸಿನಲ್ಲಿ, ಆಗಾಗ ಅವನನ್ನು ಭೇಟಿಯಾಗುತ್ತಿದ್ದೆ.
ಒಂದು ಗುರುವಾರ. ಸಹಿಸಲಾಗದಂತಹ ಏಕಾಂಗಿತನ. ಏನು ಮಾಡುವುದು? ಗುರುವಾರದಂದು ಆಂಟೋನಿಕ್ ಸಿಗುವುದಿಲ್ಲ. ಆಗ ಈ ಸೈಮೊನವ್ ನೆನಪಾದ. ಮೂರನೆಯ ಮಜಲಿನಲ್ಲಿದ್ದ ಅವನ ಮನೆಗೆ ಮೆಟ್ಟಿಲು ಹತ್ತುತ್ತಿರುವಾಗಲೇ ಈ ಮಹನೀಯನಿಗೆ ನಾನು ಬೇಸರ ತರಿಸುತ್ತೇನೆ, ಆದ್ದರಿಂದ ನಾನು ಅವನನ್ನು ಭೇಟಿಯಾಗಬಾರದು ಎಂದು ಯೋಚಿಸಿದ್ದೆ. ಆದರೆ ಯಾವಾಗಲೂ ಆಗುವಂತೆ ಈ ಆಲೋಚನೆಗಳು ನನ್ನನ್ನು ಇರಲೂ ಆಗದ, ಬಿಡಲೂ ಆಗದ ಸಂದಿಗ್ಧ ಸ್ಥಿತಿಗೆ ರವಾನಿಸಿದ್ದವು. ಹಾಗಾಗಿ ನಾನು ಒಳಗೆ ಹೋದೆ. ಬಹುಶಃ ಸೈಮೊನವ್ನನ್ನು ನಾನು ಕಡೆಯ ಬಾರಿ ನೋಡಿದ್ದು ಹೋದ ವರುಷವಿರಬೇಕು.
ಮುಂದುವರೆಯುವುದು…
ಅನುವಾದ : ಗೌತಮ್ ಜ್ಯೋತ್ಸ್ನಾ
ಚಿತ್ರ : ಮದನ್ ಸಿ.ಪಿ
ಟಿಪ್ಪಣಿಗಳು
*ಡ್ಯುಯೆಲ್: ಇಬ್ಬರ ನಡುವಿನ ಅಸಾಮಾಧಾನ, ಹಗೆ ಇತ್ಯಾದಿ ವಿಷಮ ಭಾವನೆಗಳನ್ನು ತಣಿಸಲು ಆಡುತ್ತಿದ್ದ ಮೃತ್ಯು ಸ್ವರೂಪ ಕದನ. ಇಬ್ಬರೂ ಪಿಸ್ತೂಲನ್ನು ಹಿಡಿದಿರುತ್ತಾರೆ, ಇಬ್ಬರೂ ಸರದಿಯಂತೆ ಗುಂಡು ಹಾರಿಸುತ್ತಾರೆ, ಈ ಆಟವನ್ನು ಇಬ್ಬರೂ ಸ್ಪರ್ಧಿಗಳ ಹಗೆ ತಣಿಯುವ ತನಕವೂ ಆಡಬಹುದು, ಈ ಆಟವು ಬಹುತೇಕ ಇಬ್ಬರಲ್ಲಿ ಯಾರಾದರೂ ಒಬ್ಬರೂ ಸಾಯುವ ತನಕವೂ ಅಥವಾ ಗಂಭೀರವಾಗಿ ಗಾಯಗೊಳ್ಳುವ ತನಕ ಸಾಗುತಿತ್ತು. ದಸ್ತಯೇವ್ಸ್ಕಿಯ ಪ್ರಿಯ ಬರಹಗಾರ ಪುಷ್ಕಿನ್ ಸತ್ತದ್ದು ಇದೇ ಡ್ಯುಯ್ಲ್ ಅಲ್ಲಿ. ಇವರ ನಡುಗಿಸುವ “ The Possesed”ಕಾದಂಬರಿಯಲ್ಲಂತೂ ಈ ಕ್ರೀಡೆಗೆ ಮಹತ್ವದ ಸ್ಥಾನವಿದೆ. ದಸ್ತಯೇವ್ಸ್ಕಿಗೀಂತ ಹಿರಿಯನಾದ ವಿಲಿಯಂ ಮೇಕ್ಪೀಸ್ ಥ್ಯಾಕರೆಯ ಪಿಕೇರ್ಸ್ಕ್ ಅಥವಾ ಲಫ಼ಂಗ ಪ್ರಕಾರದ “ಬ್ಯಾರಿ ಲಿಂಡನ್” ಕಾದಂಬರಿಯಲ್ಲಿ ಇದರ ಪ್ರಸ್ತಾಪವಿದೆ.
*ಮಾನ್ಫ಼್ರಡ್: ಇವನು ಬೈರಾನ್ನ ಅದೇ ಹೆಸರಿನ ಕಥನ-ಕಾವ್ಯದ ನಾಯಕ, ಆಳವಾದ ಚಿಂತಕ, ಏಕಾಂಗಿ. ಆದರೆ ಇಲ್ಲಿ ಈ ಹೆಸರಿಗೆ ಇನ್ನೂ ಹಲವು ರೀತಿಯ ಇಂಪ್ಲಿಕೇಷನ್ನ್ ಗಳಿವೆ. ಯುರೋಪಿಯನ್ನರ ಪ್ರಭಾವದಿಂದ, ಈ ರೊಮ್ಯಾಂಟಿಕ್ಕ್ ಹಾಗೂ ಮತ್ತಿತ್ತರ ಸಾಹಿತ್ಯ ಪ್ರಕಾರಗಳ ಪರಿಣಾಮದಿಂದ, ರಷ್ಯಯನ್ನರು ತಮ್ಮ ಮಣ್ಣಿನ ಸಂಸ್ಖ್ರುತಿಯಿಂದ ದೂರ ಸರಿಯುತ್ತಿದ್ದಾರೆ ಎಂದು ದಸ್ತವೇಸ್ಕಿ ತುಂಬಾ ನೊಂದಿದ್ದ. ಆ ಪರಿಣಾಮದ ತುದಿಯನ್ನು ತೋರಿಸಲೇ ಇಲ್ಲಿ ಈ ಅನಾಮಿಕ ನರೇಟರ್ಗೆ ಯಾವ ಅಸಲೀ ಭಾವನೆಗಳೇ ಇಲ್ಲದೇ ಇರುವುದು .. ಆತನು ಹಾಡುವ ಗೀತೆಗಳು ಇಟಲಿಯಿಂದ, ಆತನು ಓದುವ ಕಾವ್ಯಗಳು ಇಂಗ್ಲೀಷಿನಿಂದ, ಆತ ಎಲ್ಲವನ್ನೂ ಪುಸ್ತಕಗಳನ್ನು ಓದಿ ಓದಿ ಕಲಿತಿದ್ದಾನೆ ವಿನಃ ತನ್ನ ಸ್ವಂತ ಅನುಭವದಿಂದಲ್ಲ… ಇಲ್ಲಿರುವುದು ಮಣ್ಣಿನ, ಬೇರಿನ ಅಭಾವ.. ಪುಸ್ತಕದಿಂದ ಎರವಲು ಪಡೆದ ಜ್ಞಾನ, ಆತ ಪ್ರೀತಿಸುವುದು, ಮನುಕುಲವನ್ನು ತಬ್ಬಲು ಇಷ್ಟಪಡುವುದು, ಎಲ್ಲರನ್ನೂ ಮುಕ್ತಿಗೊಳಿಸಲು ಹವಣಿಸುವುದು ಅತಿಯಾಗಿ ಪುಸ್ತಕ ಓದಿ ಕಲಿತಿದ್ದರಿಂದಲೇ… ಹಾಗೇ ಈತ ಪ್ರೇರಿಪಿತನಾಗಿರುವುದೂ ಫ಼್ರೆಂಚಿನ ನೆಪೋಲಿಯನ್ನಿಂದ… ಈ ಸಾರವೇ ದಸ್ತವೇಸ್ಕಿಯ ಅತ್ಯಂತ ಮಹಾ ಕಾದಂಬರಿಯಾದ ಕ್ರೈಂ ಆಂಡ್ ಪನೀಶ್ಮೆಂಟಲ್ಲಿ ದೈತ್ಯಾಕಾರವಾಗಿ ಬೆಳೆದಿರುವುದನ್ನು ಓದುಗರು ಗಮನಿಸಬೇಕು. ಅಲ್ಲಿ ರಾಸ್ಕೋನಿಕೋವ್ ನಾನು ನೆಪೋಲಿಯನ್ನಂತೆ ಎಂದು ಭ್ರಮಿಸಿ ಹಣಕೂಡಿಟ್ಟ ಶ್ರೀಮಂತ ಬಡ್ಡಿ ಬಂಗಾರಮ್ಮನಂತಹ ಮುದುಕಿಯನ್ನೂ ಹಾಗೇ ಏನೂ ಕಪಟ ಗೊತ್ತಿಲ್ಲದ ಆಕೆಯ ಪಾಪದ ತಂಗಿಯನ್ನು ಕೊಡಲಿಯಲ್ಲಿ ಕೊಚ್ಚಿ ಕೊಚ್ಚಿ ಹಾಕುತ್ತಾನೆ… ಇವೆಲ್ಲ ಯುರೋಪಿಯನ್ ಪರಿಣಾಮಕ್ಕೆ ದಸ್ತವೇಸ್ಕಿ ಕೊಡುವ ಕೆಲ ನಿದರ್ಶನಗಳು..
Pingback: ಅಧೋಲೋಕದ ಟಿಪ್ಪಣಿಗಳು – ಕೊನೆಯ ಕಂತು (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ) – ಋತುಮಾನ