ವೈದೇಹಿಯವರ ಕಥೆಗಳನ್ನು ಆಧರಿಸಿ ನಿರ್ಮಾಣವಾಗಿರುವ “ಅಮ್ಮಚ್ಚಿಯೆಂಬ ನೆನಪು” ಚಿತ್ರದ ಬಗ್ಗೆ , ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದಲೂ ಪ್ರಶಂಶೆ ಕೇಳಿಬರುತ್ತಿದೆ. ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ವೇಗ ಪಡೆದುಕೊಳ್ಳುತ್ತಿರುವ ಸ್ವತಂತ್ರ ಚಿತ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಮತ್ತೊಂದು ಸೇರ್ಪಡೆ ಈ ಚಿತ್ರ . ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿಯವರೊಡನೆ ಹರೀಶ್ ಮಲ್ಯ ನಡೆಸಿಕೊಟ್ಟ ಸಂದರ್ಶನ ಇಲ್ಲಿದೆ .
“ಅಮ್ಮಚ್ಚಿ ಎಂಬ ನೆನಪು”, ಡಾ|ವೈದೇಹಿ ಅವರ ವಿವಿಧ ಕಥೆಗಳ ಆಧಾರಿತ ಚಿತ್ರ. ಈ ಬೇರೆ ಬೇರೆ ಕಥೆಗಳ ಕಲ್ಪನೆಗಳನ್ನು ಒಗ್ಗೂಡಿಸಿ ಚಿತ್ರವನ್ನು ಹೇಗೆ ಮಾಡಿದಿರಿ?
ನನ್ನ ಬಾಲ್ಯದಿಂದಲೇ ಕನ್ನಡ ಸಾಹಿತ್ಯದಲ್ಲಿ ನನಗೆ ಅತ್ಯಾಸಕ್ತಿ, ಮತ್ತು ಈಗ ರಂಗಭೂಮಿಯಲ್ಲಿ ತೊಡಗಿರುವುದರಿಂದ, ನಾಟಕವಾಗಬಹುದಾದ ಕಥೆಗಳನ್ನು ಹುಡುಕಿ, ಓದುವುದು ನನ್ನ ದಿನಚರಿ ಆಗಿದೆ. ಹೀಗೆ ಒಂದು ದಿನ ‘ಪ್ರಜಾವಾಣಿ’ ಓದುತ್ತಿರುವಾಗ, ಆಶಾದೇವಿ ಅವರು ವಿಮರ್ಶಿಸಿದ್ದ ‘ಅಕ್ಕು’ ಕಥೆ ನನ್ನ ಗಮನಸೆಳೆದಿತ್ತು. ಅಕ್ಕುವಿನ ಪಾತ್ರ ಹಾಗೂ ಆ ಪಾತ್ರದಲ್ಲಿನ ಸಂಘರ್ಷ ನನ್ನನ್ನು ಬಹಳ ಕಾಡಿತ್ತು. ಆದರೆ, ಅದಷ್ಟನ್ನೆ ಒಂದು ಪೂರ್ಣ ಪ್ರಮಾಣದ ಚಿತ್ರವನ್ನಾಗಿ ಮಾಡುವುದು ಕಷ್ಟಸಾಧ್ಯವಾಗಿತ್ತು.
ಹಾಗಾಗಿ ನಾನು ವೈದೇಹಿ ಅವರ ಬೇರೆ ಕಥೆಗಳನ್ನು ಓದಿದಾಗ, ಅವರ ಕಥೆಗಳಲ್ಲಿನ ಪಾತ್ರಗಳ ಮಧ್ಯೆ ಒಂದಕ್ಕೊಂದು ಹತ್ತಿರದ ಸಂಬಂಧ ಇದೆ ಎನ್ನಿಸಿತು. ಇದೇ ಮುಂದೆ ನನಗೆ ಪುಟ್ಟಮ್ಮತ್ತೆ ಮತ್ತು ಅಮ್ಮಚ್ಚಿಯ ಪಾತ್ರಗಳನ್ನು ಅಕ್ಕುವಿನ ಜೊತೆಗೆ ಜೋಡಿಸಲು ಕಾರಣವಾದದ್ದು. ಅದಲ್ಲದೇ ಮೂಲ ಕಥೆಯಲ್ಲಿ ಅಕ್ಕು ವಾಸವಿರುವುದು ಒಂದು ಅಷ್ಟೇನೂ ಶ್ರೀಮಂತವಲ್ಲದ ದೊಡ್ಡ ಮನೆಯಲ್ಲಿ. ಪುಟ್ಟಮ್ಮತ್ತೆ ಮತ್ತು ಅವಳ ಮೊಮ್ಮಗಳು ಅಮ್ಮಚ್ಚಿ, ಒಂದು ದೊಡ್ಡ ಮನೆಯ ಪಕ್ಕದಲ್ಲಿ ವಾಸವಿರುತ್ತಾರೆ. ಹಾಗಾಗಿ ಈ ರಚನೆ , ಮೂರು ಪಾತ್ರಗಳ ಕಥೆಗಳನ್ನು ಬೆಸೆಯಲು ಅನುಕೂಲವಾಯಿತು. ಈ ಕಥೆಗಳಲ್ಲಿನ ಆವರಣ ಹಾಗೂ ಸನ್ನಿವೇಶಗಳು ಹೆಚ್ಚು ಕಡಿಮೆ ಒಂದನ್ನೊಂದು ಹೋಲುತ್ತಿದ್ದುದರಿಂದ ಈ ಪ್ರಯತ್ನ ಕುತೂಹಲ ಹುಟ್ಟಿಸುವುದರ ಜೊತೆಗೆ , ಮುಂದೆ ಯಶಸ್ವಿಯೂ ಆಗಬಹುದೆಂಬ ನಂಬಿಕೆಯೂ ಮೂಡಿತು.
ನಮ್ಮ ನಿರೂಪಣೆಯಲ್ಲಿ ಹಾಡುಗಳನ್ನು ಅಳವಡಿಸಬೇಕಾದಾಗ ವೈದೇಹಿ ಅವರ “ಹೂವು ಕಟ್ಟುವ ಕಾಯಕ” ದ ಪದ್ಯಗಳನ್ನು ಆರಿಸಿಕೊಂಡೆವು .
ನೀವು ಲೇಖಕರಿಂದ ಸಲಹೆಗಳನ್ನು ಪಡೆದಿದ್ದೀರಾ?
ಹೌದು. ಈ ಚಲನಚಿತ್ರದ ಆಲೋಚನೆ ಬಂದಾಗಿನಿಂದಲೂ ಡಾ.ವೈದೇಹಿ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಚಿತ್ರಕಥೆ ಬರೆಯಲು ಆರಂಭಿಸಿದ ಸಮಯದಿಂದಲೂ ಅವರ ಮೌಲ್ಯಯುತ ಮತ್ತು ವಸ್ತುನಿಷ್ಠ ಸಲಹೆಗಳು ಈ ಯೋಜನೆಗೆ ಬೆನ್ನೆಲುಬಾಗಿವೆ.
ಸಿನೆಮಾದಲ್ಲಿ ಅಕ್ಕುವಿನ ಪಾತ್ರ ತುಂಬಾ ಪ್ರಬುದ್ಧವಾಗಿದೆ ಮತ್ತು ಅಂತ್ಯ ಕಂಡಿದೆ. ಆದರೆ ಅಮ್ಮಚ್ಚಿ ಪಾತ್ರ ನಿರ್ವಹಣೆಯಲ್ಲಿ ಇದು ಕಾಣುವುದಿಲ್ಲ. ಅಕ್ಕುವಿನ ಕಥೆ ಮತ್ತೆರಡು ಕಥೆಗಳಿಗಿಂತ ಹೆಣೆಯುವಿಕೆಯಲ್ಲಿ ಚೆನ್ನಾಗಿದೆ ಅನಿಸುತ್ತದೆ ಅಥವಾ ಇದು ಚಿತ್ರಕಥೆ ಬರೆಯುವಾಗ ತೆಗೆದುಕೊಂಡ ನಿರ್ಧಾರವೇ ? .
ನನ್ನ ದೃಷ್ಟಿಯಲ್ಲಿ ಇಲ್ಲಿ ಎಲ್ಲಾ ಪಾತ್ರಗಳೂ ಸಮಾನ. ಅಕ್ಕುವಿನ ಪಾತ್ರವೊಂದನ್ನೇ ಪ್ರಬುದ್ಧವಾಗಿ ತೋರಿಸಿಲ್ಲ ಅಥವಾ ಅಂತಹ ಆಲೋಚನೆಯೂ ನನಗೆ ಬಂದಿರಲಿಲ್ಲ. ಇಲ್ಲಿ ಎಲ್ಲಾ ಪಾತ್ರಗಳಿಗೂ ತಮ್ಮದೇ ಆದ ದ್ವಂದ್ವಗಳಿವೆ. ವೈದೇಹಿ ಒಂದು ಮಾತನ್ನು ಹೇಳುತಿದ್ದರು – ಆ ಕಾಲಘಟ್ಟದಲ್ಲಿ ಹೆಣ್ಣು ತನಗೆ ಅನ್ನಿಸಿದ್ದನು ಹೇಳಬೇಕಾದರೆ ಒಂದೋ ಅವಳಿಗೆ ಮರ್ಲ್ (ಹುಚ್ಚು) ಹಿಡಿದಿರಬೇಕು ಅಥವಾ ಮರ್ಲ್ ತರ ನಟಿಸುತ್ತಿರಬೇಕು ಎಂದು. ಉಳಿದಿಬ್ಬರೂ ಇನ್ನೂ ಒಂದು ಚೌಕಟ್ಟಿನೊಳಗೇ ಬದುಕುತ್ತಿರುತ್ತಾರೆ. ಆದರೆ ಅಕ್ಕು ಆ ಚೌಕಟ್ಟನ್ನು ಮೀರಿ ತನ್ನದೇ ಆದ ಒಂದು ಲೋಕವನ್ನು ಕಂಡುಕೊಂಡಿರುವುದರಿಂದ ನಿಮಗೆ ಆ ಪಾತ್ರ ಪೋಷಣೆ ಹಾಗೆ ಕಂಡಿರಲೂಬಹುದು . ಅಕ್ಕುವಿನಲ್ಲಿ ಕಾಣುವ ವ್ಯತ್ಯಾಸವೇನೆಂದರೆ ತನ್ನ ಮಾನಸಿಕ ಅಸ್ವಸ್ಥತೆಯಲ್ಲೂ ಅಕ್ಕು ತನ್ನ ದೃಷ್ಟಿ ಕೋನ ಮತ್ತು ವಾದಗಳಿಗೆ ಸರಿಯಾದ ನಿಲುವುಗಳನ್ನು ತಾಳುತ್ತಾಳೆ. ಅದಕ್ಕೇ ಅವಳ ಪಾತ್ರ ವಿಭಿನ್ನ ಮತ್ತು ಪ್ರಬುದ್ಧವೆನಿಸುತ್ತದೆ ಎಂದು ಅನ್ನಿಸುತ್ತದೆ. ಅಮ್ಮಚ್ಚಿ ಕೂಡಾ ಇಂತಹದೇ ದ್ವಂದ್ವಗಳನ್ನು ಎದುರಿಸುತ್ತಾಳೆ ಆದರೆ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಯೋಗ್ಯಳಾದ ಅವಳು ಬೇರೆಯದೇ ಹಾದಿ ಹಿಡಿಯುತ್ತಾಳೆ. ಹಾಗೆಂದ ಮಾತ್ರಕ್ಕೆ ಅದು ದುರ್ಬಲ ಪಾತ್ರವಂತಲ್ಲ.
ರಾಜ್ ಶೆಟ್ಟಿ ಅವ್ರ ‘ಒಂದು ಮೊಟ್ಟೆಯ ಕಥೆ’ ಚಿತ್ರದಲ್ಲಿ ನಿರ್ವಹಿಸಿದ ಪಾತ್ರ ತುಂಬಾ ಸೌಮ್ಯ ಸ್ವಭಾವದ್ದು . ಇಲ್ಲಿ ಅದಕ್ಕೆ ತದ್ವಿರುದ್ದ . ಅಂಥಾ ವ್ಯಕ್ತಿ ಈ ಪಾತ್ರಕ್ಕೆ ಸರಿ ಅಂತ ಹೇಗೆ ಅನ್ನಿಸಿತು?
ನಾನು ಆ ಚಿತ್ರವನ್ನು ಹಲವು ಬಾರಿ ನೋಡಿದ್ದೇನೆ. ಆ ಚಿತ್ರದಲ್ಲಿರುವ ಪ್ರಾಮಾಣಿಕತೆ ಮತ್ತು ಆ ತಂಡದ ಪ್ರಯತ್ನ ಬಹಳ ಇಷ್ಟ ಆಯಿತು. ನಾನು ಮತ್ತೆ ನೋಡುವಾಗ ಆ ಚಿತ್ರದಲ್ಲಿನ ನಟನೆ ಕಡೆ ಗಮನ ಕೊಟ್ಟೆ. ರಾಜ್ ಅವರ ಪಾತ್ರಕ್ಕೆ ಜೀವ ತುಂಬಿರುವ ರೀತಿ ನಿಜವಾಗಲೂ ಶ್ಲಾಘನೀಯ. ಉದಾಹರಣೆಗೆ, ತನ್ನ ಮುನಿಸನ್ನು ವ್ಯಕ್ತ ಪಡಿಸುವ ಕಡೆ, ಅವರು ಅದನ್ನ ನಟಿಸಲಿಲ್ಲ. ಅದನ್ನ ಅನುಭವಿಸಿ ಆ ಅನುಭವವನ್ನ ತೆರೆಯ ಮೇಲೆ ತೋರಿಸಿದರು. ನನ್ನ ಕಥೆಯಲ್ಲಿ ನನಗೆ ಬೇಕಾಗಿದ್ದು ಕೇವಲ ಒಬ್ಬ ಮಾಮೂಲಿ ಖಳನಾಯಕನಲ್ಲ, ಭಯವನ್ನ ತನ್ನಲ್ಲಿ ಆವರಿಸಿಕೊಂಡು ತೆರೆಯ ಮೇಲೆ ಅದನ್ನ ವ್ಯಕ್ತಪಡಿಸುವ ನಟ. ಹಾಗಾಗಿ ನನಗೆ ರಾಜ್ ಈ ಪಾತ್ರಕ್ಕೆ ಸರಿಯಾದ ವ್ಯಕ್ತಿ ಅನ್ನಿಸಿತು. ಇದು ಒಂದು ಸಣ್ಣ ಪಾತ್ರವಾದರೂ ಇಡೀ ಕಥೆಯಲ್ಲಿ ಅದರದೇ ಆದ ಒಂದು ವಿಶಿಷ್ಟ ಸ್ಥಾನ ಹೊಂದಿದ್ದು, ನೋಡುಗರ ಮೇಲೆ ಪರಿಣಾಮ ಬೀಳಿಸುತ್ತದೆ.
ನೀವು ಪುಟ್ಟಮ್ಮತ್ತೆ ಪಾತ್ರಕ್ಕೆ ನಟನನ್ನ ಉಪಯೋಗಿಸಿದ್ದೀರಿ. ಅದು ಉದ್ದೇಶಪೂರ್ವಕಗಾಗಿಯೇ ಮಾಡಿದ್ದ?
ರಾಧಾಕೃಷ್ಣ ಉರಾಳ ನನಗೆ ೧೦ ವರ್ಷಗಳಿಂದ ಆತ್ಮೀಯ ಸ್ನೇಹಿತ. ಚಿತ್ರಕಥೆ ಬರೆಯುವುದಕ್ಕೂ ಮುಂಚಿನಿಂದಲೇ, ಅಂದರೆ ಅಕ್ಕುವಿನ ನಿರೂಪಣೆಯೊಂದಿಗೆ ಪುಟ್ಟಮ್ಮತ್ತೆಯ ಕಥೆಯನ್ನು ಹೇಳುವ ದೃಷ್ಟಿಯಿಂದ ಆಕೆಯ ಕಥೆಯನ್ನು ಓದುವಾಗಲೇ ಇವರನ್ನು ಈ ಪಾತ್ರದಲ್ಲಿ ತೋರಿಸಬೇಕೆಂದು ಯೋಚಿಸಿದ್ದೆ. ಅದು ಏಕೆ ಎಂದು ಈಗಲೂ ನನಗೆ ತಿಳಿದಿಲ್ಲ. ಉರಾಳ ಒಬ್ಬ ಬಹುಮುಖ ಪ್ರತಿಭೆ. ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಸಹಜವಾಗಿಯೇ ಹೆಣ್ಣು ಮತ್ತು ಗಂಡಿನ ಗುಣಗಳು ಇರುತ್ತವೆ. ಉರಾಳರಲ್ಲಿ ಕ್ಷಮಿಸುವ ಗುಣ, ಇತರರ ಬಗ್ಗೆ ಕಾಳಜಿ, ಹಾಗು ಬಹು ಮುಖ್ಯವಾಗಿ ತಾಳ್ಮೆ, ಈ ಮೂರೂ ಬಲವಾಗಿ ಇದ್ದವು ಎಂದು ನನಗೆ ಯಾವಾಗಲೂ ಅನಿಸುತಿತ್ತು.
ನಾನು ಅವರ ಜೊತೆ ಬಹಳಷ್ಟು ನಾಟಕಗಳಲ್ಲಿ ಕೆಲಸ ಮಾಡಿದ್ದೇನೆ. ಅವರು ಸ್ತ್ರೀ-ಆಧಾರಿತ ಪಾತ್ರಗಳನ್ನೂ ಮಾಡುತ್ತಾ ಬಂದಿದ್ದಾರೆ. ಅದಲ್ಲದೆ, ಅವರು ನಮ್ಮ ಚಿತ್ರ ನಡೆಯುವ ಸ್ಥಳ, ಕುಂದಾಪುರದ ಕಡೆಯವರು. ಬಾಲ್ಯದಲ್ಲಿ ಅವರು ಪುಟ್ಟಮ್ಮತ್ತೆಯಂತಹ ವ್ಯಕ್ತಿಗಳನ್ನು ಕಂಡಿದ್ದು ಈ ಪಾತ್ರದಲ್ಲಿ ನಟಿಸಲು ಪ್ರೇರಣೆಯಾಯಿತು.
ಸಿನೆಮಾದ ಛಾಯಗ್ರಹಣದ ಬಗ್ಗೆ ಬಹಳ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ನೀವು ಅದನ್ನು ಹೇಗೆ ನಿಭಾಯಿಸಿದಿರಿ? ಅದರಲ್ಲೂ ಪೂರ್ವಭ್ಯಾಸದ ಸಮಯದಲ್ಲಿ ನಿಮ್ಮ ನಡುವಿನ ಮಾತುಕತೆಗಳು ಹೇಗಿರುತ್ತಿದ್ದವು? ನಿಮ್ಮ ರಂಗಭೂಮಿಯ ಅನುಭವ ಇದಕ್ಕೆ ಸಹಾಯವಾಗಿದೆಯಾ?
ಚಿತ್ರೀಕರಣದ ಸ್ಥಳಗಳನ್ನು ಹುಡುಕಿದ ನಂತರ ನನ್ನ ಮತ್ತು ನವೀನ್ ನಡುವೆ ಸಾಕಷ್ಟು ಮಾತುಕತೆಗಳು ನಡೆದಿದ್ದವು. ಮೊದಲ ಹಾಡು ನಿರ್ಣಾಯಕವಾಗಿತ್ತು. ನಾವು ಅಮ್ಮಚ್ಚಿಯ ಪಾತ್ರವನ್ನು ಸಂಪೂರ್ಣವಾಗಿ ಪರಿಚಯಿಸಬೇಕಿತ್ತು. ಆದರೆ ಆ ಪಾತ್ರದ ಹಿನ್ನಲೆಯನ್ನು ನಿರೂಪಣೆ ಮಾಡುವ ಅವಕಾಶವಿರಲಿಲ್ಲ, ಒಂದೇ ದಾರಿಯಿದ್ದದ್ದು ಅದನ್ನು ಹಾಡಿನ ಮೂಲಕ ಹೇಳುವುದು. ಹಾಡಿಗಾಗಿ ಪೂರಕರವಾದ ಸ್ಥಳಗಳನ್ನು ಹುಡುಕಿದೆವು. ಆಶ್ಚರ್ಯ ಎನ್ನುವಂತೆ ನಮಗೆ ಬೇಕಾಗಿದ್ದ ಲೊಕೇಶನ್‍ಗಳು ಸಿಕ್ಕವು.
ಆ ಲೊಕೇಶನ್‍ಗಳು ಬರೀಗಣ್ಣಿಗೆ ಅಷ್ಟು ಅದ್ಭುತವಾಗಿ ಕಾಣುತ್ತಿದ್ದಾಗ, ಆ ಎಲ್ಲವನ್ನು ಕ್ಯಾಮರದಲ್ಲಿ ಅಷ್ಟೇ ಸುಂದರವಾಗಿ ಸೆರೆಹಿಡಿಯಬಹುದು ಎಂಬುದರಲ್ಲಿ ಯಾವ ಅನುಮಾನಗಳಿರಲಿಲ್ಲ. ಪ್ರತಿ ಶಾಟ್ ಮುಗಿದ ನಂತರ ನವೀನ್ ಸಲಹೆಗಳನ್ನು ಕೊಡುತ್ತಿದ್ದರು. ಇಲ್ಲಿ ಸಂತೋಷ ಮತ್ತು ದುಃಖ ಎನ್ನುವುದನ್ನು ಕತ್ತಲು ಮತ್ತು ಬೆಳಕಿನ ಮೂಲಕ ತೋರಿಸಿದ್ದೇವೆ. ಸಂತೋಷವನ್ನು ಪೂರ್ಣ ಬೆಳಕಿನಲ್ಲಿ ತೋರಿದರೆ, ದುಃಖವನ್ನ ಕತ್ತಲಿನಲ್ಲಿ ತೋರಿದ್ದೇವೆ. ಈ ಎಲ್ಲವೂ ಚಿತ್ರೀಕರಣದ ಸ್ಥಳದಲ್ಲೇ ನಮ್ಮ ಚರ್ಚೆಯ ಪರಿಣಾಮವಾಗಿ ಮಾಡಿಕೊಂಡ ಬದಲಾವಣೆಗಳು. .
ರಂಗಭೂಮಿಯಲ್ಲಿ ನಾಟಕ ಕಟ್ಟುವಾಗ ಮಾಡಿಕೊಳ್ಳುವ ಪೂರ್ವ ತಯಾರಿ, ಪಾತ್ರಪೋಷಣೆಯ (Staging) ಅನುಭವ ಖಂಡಿತವಾಗಿ ಇಲ್ಲಿಯೂ ಬಳಕೆಯಾಗಿದೆ. ನಾಟಕ ರಂಗದ ಮೇಲೆ ನಡೆಯುವುದರಿಂದ ಅದಕ್ಕೊಂದು ಮಿತಿ ಇರುತ್ತದೆ. ಆದರೆ ಸಿನೆಮಾದಲ್ಲಿ ಪಾತ್ರವನ್ನು ಇನ್ನಷ್ಟು ವಿಸ್ತಾರಗೊಳಿಸುವುದಕ್ಕೆ, ಅದ್ಭುತವಾಗಿ ದೃಶ್ಯರೂಪಕ್ಕೆ ಒಗ್ಗಿಸಿಕೊಳ್ಳುವುದಕೆ ಪೂರಕವಾದ ಲೊಕೇಶನ್‍ಗಳನ್ನು ಹುಡುಕಿಕೊಂಡೆ.
ಪುಟ್ಟಮತ್ತೆಯ ಪಾತ್ರವನ್ನು ಆದಷ್ಟು ಕಮ್ಮಿ ಬೆಳಕಿನಲ್ಲೇ ಚಿತ್ರಿಸಬೇಕು ಎಂದು ಮೊದಲೇ ಪ್ಲಾನ್ ಮಾಡಿಕೊಂಡಿದ್ದೆ . ಛಾಯಾಗ್ರಹಣವೂ ಕೂಡ ನಮ್ಮ ಭಾವನೆಗಳನ್ನು ವಿಸ್ತರಿಸಿಕೊಳ್ಳಲು ನೆರವಾಗಬೇಕಲ್ಲವೇ. ನಮ್ಮ ಇಮೋಶನ್ ಜೊತೆಗೆ ನೆರಳು, ಬೆಳಕು ಕೂಡ ಆಕ್ಟ್ ಮಾಡುತ್ತಿರುತ್ತದೆ . ನವೀನ್ ಆ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ನಂಬಿಕೆ ನನ್ನದು .
ನಿರ್ಮಾಣದ ಹಂತದಲ್ಲಿ ಎದುರಿಸಿದ ಸಂಕಷ್ಟಗಳು ಏನು? ಸಿನೆಮಾದ ಡಿಸ್ಟ್ರಿಬ್ಯೂಷನ್ ಆಗಿದ್ದು ಹೇಗೆ?
ನಾನು ಈ ಬಗ್ಗೆ ನನ್ನ ಹತ್ತಿರದ ಒಡನಾಡಿಗಳ ಜತೆ ಮಾತನಾಡಿದಾಗ ಬಹುತೇಕರು, ಇದರ ಭಾಗವಾಗಲು ಮುಂದೆ ಬಂದರು. ಈ ಹಿಂದೆ ಸಾಕಷ್ಟು ಪ್ರಾಜೆಕ್ಟ್‍ಗಳಲ್ಲಿ ನಾವೆಲ್ಲ ಕೆಲಸ ಮಾಡಿದ್ದರೂ, ಇದೊಂದು ಸ್ಪಲ್ಪ ಹೆಚ್ಚು ಎನ್ನುವಷ್ಟೇ ಬಂಡವಾಳವನ್ನು ಬೇಡುವ ಪ್ರಾಜೆಕ್ಟ್ ಆಗಿತ್ತು.
ಇದೊಂದು ಪ್ರಜ್ಞಾಪೂರ್ವಕ ನಿರ್ಧಾರ. ಈ ಸಿನೆಮಾಗೆ ಗೆಳೆಯರು ಮತ್ತು ಕುಟುಂಬದವರದೇ ಕೊಡುಗೆ. ಸಿನೆಮಾದ ಚಿತ್ರಕತೆ ಹಾಗೂ ಪಾತ್ರಗಳ ಆಯ್ಕೆಯ ವಿಚಾರದಲ್ಲಿ ಹೊಂದಾಣಿಕೆ ಅಥವಾ ರಾಜಿಯಾಗಬಾರದು ಎನ್ನುವ ಕಾರಣಕ್ಕೆ, ನಾವು ಯಾವುದೇ ವೃತ್ತಿಪರ ನಿರ್ಮಾಪಕರನ್ನು ಈ ಕುರಿತು ವಿಚಾರಿಸಿಲ್ಲ. ನಮ್ಮ ಮಿತಿಯಲ್ಲಿದ್ದ ಬಂಡವಾಳದಲ್ಲೇ ಸಿನೆಮಾ ಮೊದಲ ಕಾಪಿಯನ್ನು ಪಡೆದುಕೊಂಡೆವು. ಇದು ಸಾಧ್ಯವಾಗಿದ್ದಕ್ಕೆ ನಾನು ನನ್ನ ತಂಡಕ್ಕೆ ಕೃತಜ್ಞ.
ಇನ್ನು ವಿತರಣೆ ಮಾಡುವುದಕ್ಕೆ ನಮ್ಮಲ್ಲಿ ಬಂಡವಾಳವಿರಲಿಲ್ಲ. ಇಂತಹ ಸಿನೆಮಾಗಳನ್ನ ವಿತರಣೆ ಮಾಡುವುದು ಕೂಡ ಅಷ್ಟು ಸುಲಭವಲ್ಲ. ನಾವೇ ಈ ಸಿನೆಮಾದ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇವೆ. ಪ್ರಚಾರಕ್ಕಾಗಿ ಮಾಧ್ಯಮಗಳಲ್ಲಿ ಹಣ ಪೋಲು ಮಾಡುವ ಬದಲು, ಸಾಧ್ಯವಾದಷ್ಟು ಸಿನೆಮಾವನ್ನ ಜನರಿಗೆ ತಲುಪಿಸುವುದರ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತಿದ್ದೇವೆ.
ವಿಮರ್ಶಕರು ಹಾಗೂ ಪ್ರೇಕ್ಷಕರು ನಿಮ್ಮ ಚಿತ್ರವನ್ನು ಪ್ರಶಂಸಿಸಿದಾಗ ನಿಮಗೆ ಏನನ್ನಿಸುತ್ತೆ?
ನನಗೆ ಚಿತ್ರದ ವ್ಯವಹಾರ ಅಥವಾ ದುಡ್ಡು ಮಾಡುವ ವಿಚಾರಗಳು ತಿಳಿದಿಲ್ಲ. ನನಗಿದ್ದ ಮುಖ್ಯ ಸವಾಲೆಂದರೆ ಮೂಲ ಕಥೆಯಲ್ಲಿದ್ದ ಸೂಕ್ಷ್ಮತೆಗಳಿಗೆ ಧಕ್ಕೆ ಬರದಂತೆ ಚಿತ್ರದ ಭಾವನೆಗಳನ್ನ ಕಾಪಾಡಿಕೊಂಡು ಬರುವುದು. ಕಥೆಗಳು ಬಹಳ ಪ್ರಭಾವಶಾಲಿಯಾಗಿದ್ದು, ಅದು ಪ್ರೇಕ್ಷಕರನ್ನ ಮುಟ್ಟುತ್ತೆ ಅನ್ನುವ ನಂಬಿಕೆ ನನಗೆ ಯಾವಾಗಲೂ ಇತ್ತು. ಪ್ರತಿಯೊಬ್ಬರ ಜೀವನದಲ್ಲೂ ಸುಖ ದುಃಖಗಳು ಇದ್ದೆ ಇರುತ್ತೆ. ಬೇರೆ ಯಾವುದಕ್ಕೂ ಅಲ್ಲದಿದ್ದರೂ ಮನುಷ್ಯ ದು:ಖಕ್ಕೆ ಸಹಜವಾಗಿಯೇ ಸ್ಪಂದಿಸುತ್ತಾನೆ ಎನ್ನುವ ನಂಬಿಕೆ ನನ್ನದು . ಹಾಗಾಗಿ ಈ ಕಥೆಗಳಲ್ಲಿ ಇರುವುದು ಮೂರು ಹೆಣ್ಣುಗಳ ದು:ಖದ ಕಥೆ . ನಾನು ಒಬ್ಬ ಹೆಣ್ನಾಗಿದ್ದರಿಂದ ಅದನ್ನು ಚೆನ್ನಾಗಿ ಚಿತ್ರಿಸಬಲ್ಲೇ ಎಂಬ ಆತ್ಮವಿಶ್ವಾಸ ಇದ್ದೇ ಇತ್ತು . ಚಿತ್ರ ತಮ್ಮ ಮನಸನ್ನ ಮುಟ್ಟಿತು ಎಂದು ಜನರು ಹೇಳಿದಾಗ ನನ್ನ ಶ್ರಮ ಸರಿಯಾದ ದಿಕ್ಕಿನಲ್ಲಿತ್ತು ಅನ್ನುವ ಖುಷಿ ನನಗಿರುತ್ತದೆ.
ದೊಡ್ಡ ದೊಡ್ಡ ನಟ-ನಟಿಯರು, ರಿಮೇಕುಗಳ ಕಾಲದಲ್ಲಿ, ಹೊಸ ಕಥಾವಸ್ತು ಆಧಾರಿತ ಚಿತ್ರಗಳಿಗೆ ಅವಕಾಶ ಇದೆ ಅಂತ ನಿಮಗನ್ನಿಸುತ್ತದೆಯೇ? ಪ್ರೇಕ್ಷಕರಿಗೆ ತಾವು ನೋಡುವ ಮಾಮೂಲಿ ಚಿತ್ರಗಳಿಗಿಂತ ಬೇರೆ ತರಹದ ಚಿತ್ರಗಳನ್ನು ತೋರಿಸಬೇಕಿದೆಯೇ?
ನೀವು ೮೦ರ ದಶಕವನ್ನು ಗಮನಿಸಿದರೆ ಅಂತಹ ಚಿತ್ರಗಳೇ ಬರುತ್ತಿದ್ದವು. ಕಥೆಯಲ್ಲಿ ಮನೋರಂಜನೆಯ ಜೊತೆಗೆ ಜೀವನದ ಮೌಲ್ಯಗಳು ಇದ್ದವು. ಈಗ ಕಾಲ ಬದಲಾಗಿದೆ. ಈಗಿನ ಹೆಚ್ಚಿನ ಗಮನ ಅತಿರೇಕದ ಕಲ್ಪನೆ, ಹೀರೋಯಿಸಂ ಕಡೆ ಇದೆ. ಈ ಕಲ್ಪನಾತೀತ ಕಥೆಗಳು ಜನರ ಗಮನ ಸೆಳೆಯುವ ಹಾಗೆ, ವಾಸ್ತವಿಕ ಕಥೆಗಳೂ ಗಮನ ಸೆಳೆಯುತ್ತದೆ ಎಂದು ನನಗನ್ನಿಸುತ್ತದೆ. ಏಕೆಂದರೆ ಅವುಗಳಿಗೆ ಜನರಿಗೆ ತಮ್ಮ ಬಗ್ಗೆ ತಾವೇ ಆಲೋಚಿಸುವಂತೆ ಮಾಡುವ ಸಾಮರ್ಥ್ಯವಿರುತ್ತದೆ
ನನ್ನ ದೃಷ್ಟಿಯಲ್ಲಿ ಈ ತರಹದ ಚಿತ್ರಗಳನ್ನು ಇಷ್ಟ ಪಡುವ ಒಂದು ಪ್ರೇಕ್ಷಕವರ್ಗ ಇದೆ. ಒಂದು ಜೋಶ್ ಕೊಡುವ, ಹಾಸ್ಯಭರಿತ ಅಥವಾ ಮನೋರಂಜನೆ ಇರುವ ಮಾಮೂಲಿ ಚಿತ್ರ ನೋಡಿ ಹೊರಬಂದಾಗ ಅದನ್ನ ಹೊಗಳಿ ಇನ್ನೊಬ್ಬರ ಬಳಿ ಮಾತಾಡುತ್ತೇವೆ. ಆದರೆ ಕಥಾವಸ್ತು ಇಷ್ಟೊಂದು ಆಳವಾಗಿ ಬೇರೂರಿರುವಂತಹ ನಮ್ಮ ಚಿತ್ರ ನೋಡಿದಾಗ ಪ್ರೇಕ್ಷಕರು ತಮ್ಮ ಆಲೋಚನೆಗಳಲ್ಲಿ ಮುಳುಗಿಹೋಗುತ್ತಾರೆ. ಇದರಿಂದ ಹೊರಬಂದು ಚಿತ್ರದ ಬಗ್ಗೆ ಮಾತನಾಡಲು ಸಮಯ ಬೇಕಾಗುತ್ತದೆ.
ಇದು ಕೇವಲ ಜನರನ್ನು ಸಂತೋಷಗೊಳಿಸಲು ಮಾಡಿದ್ದ ಚಿತ್ರವಲ್ಲ. ಇದು ಜನರಿಗೆ ಒಂದು ವಿಶಿಷ್ಟ ಅನುಭವ ನೀಡಲು ಮಾಡಿದ ಚಿತ್ರ. ನನ್ನ ತಿಳಿದ ಮಟ್ಟಿಗೆ ನಿಧಾನವಾಗಿ ಜನರು ಇದನ್ನು ನೋಡಲು ಬರುತ್ತಾರೆ. ನಾನು Blockbuster ಅಪೇಕ್ಷೆ ಮಾಡುತ್ತಿಲ್ಲ. ಒಂದು ಸಂವೇದನಾಶೀಲ, ಮನಮುಟ್ಟುವಂತಹ ಚಿತ್ರ ಮಾಡಲು ಪ್ರಯತ್ನಿಸಿದ್ದೇನೆ ಎಂಬ ಸಂತಸ ನನಗಿದೆ. ಇಂತಹ ಇನ್ನಷ್ಟು ಚಿತ್ರಗಳು ಬಂದರೆ ನಮಗೆ ಒಂದು ಉತ್ತಮ ನೆಲೆ ಸಿಕ್ಕಿ ಪ್ರೇಕ್ಷಕರಿಗೆ ಹೊಸದನ್ನೇನಾದರೂ ಪರಿಚಯ ಮಾಡಿಕೊಡಲು ಅನುಕೂಲವಾಗುತ್ತದೆ.
ಸಂದರ್ಶಕರು : ಹರೀಶ್ ಮಲ್ಯ | ಕೃಪೆ : thenewsminute.com
ಕೃತಜ್ಞತೆಗಳು : ಸಹನಾ ಪ್ರಸನ್ನ , ನರೇಶ್ ಭಟ್ , ಶ್ರೀಕಾಂತ್ ಚಕ್ರವರ್ತಿ , ಸಂದೀಪ್ ಈಶಾನ್ಯ
ಚಿತ್ರ ನೋಡುವ ಕುತೂಹಲ ಹೆಚ್ಚಾಗಿದೆ. ಚಂಪಾ ರವರ ಸೂಕ್ಷ್ಮತೆ ಸಂವೇದನಾಶೀಲತೆ ಖುಷಿ ನೀಡಿದೆ. ಸದಾ ಹೊಸತನದ ಹಂಬಲ, ಇಂಥ ಮಹಾ ಸಾಹಸಕ್ಕೆ ಅವರನ್ನು ತೊಡಗಿಸಿದೆ. ನಿಂತ ನೀರಾಗಿ, ಕೊಳೆತು ನಾರುತ್ತಿರುವ ಮನರಂಜನೋದ್ಯಮಕ್ಕೆ ಕೊಂಚವಾದರೂ ಕಲ್ಲು ಬೀರಿ ಸಂಚಲನ ಮೂಡಿಸುವ ಇಂಥ ಪ್ರಯತ್ನ ನಿಜಕ್ಕ್ಕೂ ಸಂತಸ ನೀಡುತ್ತಿದೆ.