ಅಧೋಲೋಕದ ಟಿಪ್ಪಣಿಗಳು – ಕಂತು ೮ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)

4

ನನಗೆ ಗೊತಿತ್ತು, ಏನೇ ಆದರೂ ನಾನೇ ಇಲ್ಲಿಗೆ  ಮೊದಲು ಬಂದು ತಲುಪುತ್ತೇನೆ, ಆಗ ನಾನೇ ಆ ಖದೀಮರನ್ನ ಕಾಯಬೇಕಾಗುತ್ತದೆ ಎಂದು. ಆದರೆ ವಿಷಯ ಅದಲ್ಲ. ನಾನು ಅಲ್ಲಿಗೆ ಇಪ್ಪತೈದು ನಿಮಿಷ ಲೇಟಾಗಿ ಹೋದರೂ, ಅಲ್ಲಿ ಈ ನನ್ನ ಮಕ್ಕಳಲ್ಲಿ ಒಬ್ಬನೇ ಒಬ್ಬನೂ ಕಾಣಲಿಲ್ಲ ನನಗೆ. ಇಷ್ಟೇ ಅಲ್ಲ, ಈ ಹಾಳು ಮುಂಡೆಗಂಡನ್ನ ಪಾರ್ಟಿಗೇ ಅಂತ ಈ ಕಳ್ಳ ನನ್ನಮಕ್ಳು ರಿಸರ್ವ್ ಮಾಡಿಟ್ಟ ರೂಮನ್ನು ಹುಡುಕಿ ಹುಡುಕಿ ಸಾಕಾಯ್ತು ಬೇರೆ. ಡಿನ್ನರ್ ಉಣ್ಣಕ್ಕೆ  ಟೇಬಲನ್ನೂ ಇಟ್ಟಿರಲಿಲ್ಲ ಇನ್ನೂ. ಇದಕ್ಕೆಲ್ಲ ಏನರ್ಥ ಹಾಗಾದರೆ?  ಸುಮಾರು ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಅಂತೂಇಂತೂ ಮಾಣಿಗಳಿಂದ ಡಿನ್ನರ್‍ಗೆ ಶುರು ಆಗೋದೇ ಆರಕ್ಕೆ, ಐದಕ್ಕಲ್ಲ ಅನ್ನೋ ನಿಜನ ಪತ್ತೆ ಮಾಡ್ದೆ. ’ಈ ಮಾಣಿಗಳ ಹತ್ತಿರ ಇಷ್ಟೆಲ್ಲ ವಿಚಾರಣೆ ಮಾಡಿ ಅವರನ್ನೂ  ಸುಸ್ತು ಮಾಡಿಬಿಟ್ಟ್ನಲ್ಲಾ ಅಂತ  ನಾನೇ ಅವಮಾನನೂ ಪಟ್ಟೆ. ಇನ್ನೂ ಐದುಇಪ್ಪತೈದಷ್ಟೇ; ಹೆಚ್ಚುಕಮ್ಮೀ ಅರ್ಧಗಂಟೆ ಕಾಯ್ಬೇಕು ಇಲ್ಲೇ ನಾನು, ಈ ಪಾಪಿಗಳಿಗೆ… ಡಿನ್ನರ್ರೇ ಕಂಡೇ ಇಲ್ಲ ಅನ್ನೋ ಥರ ಕುಂಡೆ ಊರ್ತಾ ಕಾಯ್ಬೇಕು. ಥೂ, ಬದುಕನ್ನ ತಬ್ಕೋಬೇಕು ಅಂತ ಅಲ್ವಾ ಬಂದಿದ್ದು ನಾನು ನನ್ನ ಬಿಲದಿಂದ; ಆಗ್ಬೇಕು ನನ್ಗೆ ಹೀಗೆ… ಇರಲಿ. ಬದುಕನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ತೇನೇ ಇವತ್ತೇ. ಏನ್ ಬೇಕಾದ್ರು ಆಗ್ಲೀ;  ಇದೇ ಅಲ್ವಾ ನನ್ನ ಆಸೆ… ಇದಕ್ಕೇ ಅಂತ ತಾನೇ ಆಚೆ ಬಂದಿದ್ದು ನಾನು, ನನ್ನ್ ಬಿಲದ ಶ್ರೀರಕ್ಷೆಯೆಲ್ಲ ಬಿಟ್ಟು… ಆ ಜನ ಏನು ಕತ್ತೆ ಕಾಯ್ತಿದ್ರಾ? ಪೋಶ್ಟಿಂಗ್ ಸರ್ವೀಸು ಅಷ್ಟು ಚೆನ್ನಾಗಿ ಇರೋವಾಗ, ಒಂದ್ ಮೆಸೇಜಾದ್ರೂ ಹಾಕ್ ಬಾರ್ದಿತ್ತಾ ನನಗೆ ಮುಂಚೆನೇ. ಈ ಥರ ಈ ಸುಡುಗಾಡ್ ಸಿದ್ಧ ಮಾಣಿಗಳ ಮುಂದೆ ನನ್ನ ಮಾನಮರ್ಯಾದೆ ಕಳದ್ರಲ್ಲ… ಇವರೆಲ್ಲ ಒಳ-ಒಳ್ಗೇ ನಗ್ತಾ ಇರ್ತಾರೆ ನನ್ನ ನೋಡಿ,”ನೋಡಿ, ಹೇಗೆ ಒಂಟಿ ಗೂಬೆ ಥರ ಫ಼್ರೆಂಡ್ಸ್ನೆಲ್ಲ್ಲಾ ಕಾಯ್ತಾ ಕೂತಿದ್ದಾನೆ; ಅವರ್ಯಾರೂ ತಲೆಕೆಡಿಸಿಕೊಂಡೇ ಇಲ್ಲ ಇವ್ನ ಬಗ್ಗೆ, ಇವ್ನೇ ಮೂಗುತೂರಿಸುಕೊಂಡು ಬಂದಿದಾನೆ…”ಹೀಗೆ ಮಾತಾಡ್ತಾ ಇರ್ತಾರೆ ಅಡಿಗೆಮನೆಲೀ ಈ ಹಾಳು ವೈಟರ್ಸು… ಸಮಾಜನ ತಬ್ಬೋದು ಎಷ್ಟೊಂದು ದೊಡ್ಡ ಅವಮಾನಪ್ಪ ಥೂ…!’

ತಪ್ಪಿಸಿಕೊಂಡ ಡೇಗೆ ಹಕ್ಕಿಯಂತೆ ಮನಸ್ಸು ದಿಕ್ಕಪಾಲಾಗಿತ್ತು. ಹಾಗೆ ಕೂತಿದ್ದೆ. “ಕೂತೇ ಇರ್ಬೇಕಪ್ಪ ಕಂದಾ ನೀನು  ಇನ್ನೇನು ತಾನೇ ಮಾಡಕ್ಕೆ ಆಗಕ್ಕೆ ನಿನ್ನ ಕೈಲೀ?  ಈ ಮಾಣಿ ಹಾಳಾದವ್ನು ಈಗ ಡಿನ್ನರೆಗೆ ಟೇಬಲನೆಲ್ಲ ರೆಡಿ ಮಾಡಕ್ಕೆ ಶುರು ಮಾಡ್ತಿದ್ದಾನೆ. ಆತ ಇನ್ನೂ ಅಲ್ಲೇ ಓಡಾಡ್ತ ಇದಿದ್ದೇ ನನ್ನ ತಲೆಗೆ ಚಿಟ್ಟು ಹಿಡಿಸ್ತಾ ಇದೆ. ಆರು ಘಂಟೆ ಆಗ್ತಿದ್ದ ಹಾಗೆ    ಮೇಣದ ಬತ್ತಿಗಳು ಬಂದ್ವು.   ಆಗ್ಲೇ  ಅದೆಷ್ಟೋ ಲ್ಯಾಂಪುಗಳು ಉರಿತಾ ಇದ್ರು ಈ ನನ್ನಮಕ್ಳ ಮುಖಕ್ಕೇ ಕ್ಯಾಂಡಲ್ ಲೈಟ್ ಡಿನ್ನರ್ರ್ ಬೇರೆ ಕೇಡು ಥೂ ಅಜ್ಞಾನಿಗಳಾ, ನಿಮ್ಮ ಜನ್ಮಕ್ಕಿಷ್ಟು… ಈ ಮಾಣಿ ಬೇರೆ ಇಲ್ಲೇ ಗೂಟ ಹೊಡ್ಕಂಡು ನಿಂತು ಹತ್ತಿಸ್ತಾ ಇದ್ದಾನೆ ಬತ್ತೀನ… ನಾನು ಕೂತು ಅಷ್ಟೊತ್ತು ಆಯ್ತು, ಆವಾಗ ನೆನೆಪಾಗ್ಲಿಲ್ಲ ಈ ಮುಟ್ಠಾಳ್ನಂಗೆ ಈ ರೊಮ್ಯಾಂಟಿಕ್ಕ್ ಕ್ಯಾಂಡಲ್ ಲೈಟ್ ಡಿನ್ನರ್ರು,  ಈಗ ಆರಕ್ಕೆ ಕರೆಕ್ಟಾಗಿ ಇವ್ನ ಧಣಿಗಳು ಒಕ್ಕರಿಸೋ ಹೊತ್ಗೆ ಈ ದೀಪ ಬೆಳಗಿಸೋ ಕಾರ್ಯಕ್ರಮನ ನೆರವೇರಿಸ್ತಿದ್ದಾನೆ ಈ ಬಡವ…”

 ಅಲ್ಲಿದ್ದ ಪಕ್ಕದ ಕೋಣೆಯಲ್ಲಿ ಮುಖ ಗಂಟಿಕ್ಕಿಕೊಂಡು ಮೌನವಾಗಿ ಆಗಮಿಸಿದ ಅತಿಥಿಗಳು, ಬೇರೆ ಬೇರೆ ಟೇಬಲ್ಲುಗಳೆದುರು ಕೂತು ಉಣ್ಣುತಿದ್ದರು. ಯಾವುದೇ ಒಂದು ಕೋಣೆಯಿಂದ ತುಂಬಾ ಶಬ್ಧ. ಆ ಕಡೆಯಿಂದ ಅರುಚಾಟ-ಕೂಗಾಟ ಬೇರೆ. ಇನ್ನೊಂದು ಕಡೆ ಯಾವುದೋ ದೊಡ್ಡ ಗುಂಪು “ಕಕ್ಕಕ್ಕೋ” ಅಂತ ಬಿದ್ದು, ಬಿದ್ದು ನಗುತ್ತಿತ್ತು. ಆಗಾಗ ಕೆಲ ಕಚಡಾ ಫ್ರೆಂಚ್ ಕೇಕೆಗಳೂ ಹಾರುತ್ತಿತ್ತು: ಹಾಗೆ ಏನೂ ನೋಡೋಣ ಅಂತ ಇಣುಕಿದಾಗ  ಕಿಸಿಕಿಸಿ ಕಿಸಿತಾಯಿರೋ, ಬಣ್ಣ ಬಳಿದುಕೊಂಡಿರೋ ಕೆಲ  ಲೇಡಿಸ್ ಮುಖ ಕಾಣ್ತಾ ಇತ್ತು.   ಒಂದೇ ಮಾತಿನಲ್ಲಿ ಹೇಳೋದಾದರೆ ಆ ಪರಿಸರದಿಂದ ನನ್ನ ಹೊಟ್ಟೆ ತೊಳೆಸಕ್ಕೆ ಶುರು ಆಯ್ತು.  ಹೀಗೆ ಹಿಡಿಸದ, ವಾಕರಿಕೆ ಬರಿಸೋ ಜಾಗಗಳಲ್ಲಿ ಕಳೆದ ಸಂಜೆಗಳು ನನ್ನ ಬದುಕಿನಲ್ಲಿ ಬಹಳ ಕಡಿಮೆ. ಅದಕ್ಕೇ ಏನೋ,   ಈ ಪಾರ್ಟಿಪಟಲಾಂ ಆರು ಗಂಟೆಗೆ ಬರುತ್ತಿದ್ದಂತೆ, ಆ ಪರಿಚಿತ ಮುಖಗಳ ನೋಡಿ,  ನನ್ನ ಮನಸ್ಸು ಸಮಾಧಾನದಲ್ಲಿ ಹಿಗ್ಗಿತು. ಆ ಕ್ಷಣದಲ್ಲಿ ನನ್ನನ್ನು ಈ ಕೂಪದಿಂದ ಮುಕ್ತಿಗೊಳಿಸುವ ದೇವತೆಗಳೇ ಈ ಮಹಾಜನರು ಅನ್ನಿಸಿಬಿಡ್ತು. ನಾನು ಕೆರಳಿ, ‘ಬಡ್ಡಿಮಕ್ಳ ಇಷ್ಟೊತ್ತು ಕಾಯ್ಸಿದ್ರಲ್ಲೋ ನನ್ನ…’ ಅಂತ ಅವರಿಗೆ ಉಗಿಯಬೇಕು ಅನ್ನೋ ಸಮಾಚಾರನೇ ಹೆಚ್ಚುಕಮ್ಮಿ ಮರೆತೇ ಬಿಟ್ಟೆ.

ಝ್ವರ್‍ಕೋವ್ ಗುಂಪಿನ ಮಹಾನಾಯಕ; ಅವನೇ ಮುಂದೆ; ಮಿಕ್ಕವರೆಲ್ಲ ಅವನ ಬೆನ್ನ ಹಿಂದೆ, ಆತನ ಹಿಂಬಾಲಕರು ಅನ್ನೋ ಹಾಗೆ… “ಎಲ್ಲ ನಗ್ತಾ ಇದ್ದಾರೆ; ಆದರೆ ನನ್ನ  ನೋಡ್ತಾ, ನೋಡ್ತಾ ಏನೋ ಕಳ್ಳಾಟ ಆಡ್ತಾ ಇದ್ದಾನೇನೋ ಅನ್ನೋ ಥರ ಹತ್ತಿರ ಬಂದು ಈ ಝ್ವರ್‍ಕೋವ್  ಫ಼್ರೆಂಡ್ಲೀ ಆಗಿ- ಅದೂ ಜಾಸ್ತಿ ಫ಼್ರೆಂಡ್ಲೀ ಏನ್ ಅಲ್ಲ, ತುಂಬಾ   ಎಚ್ಚರಿಕೇಲಿ, ಭಾರೀ ಫ಼ಾರ್ಮಲ್ಲ್  ಆಗಿ,   ನನ್ನ ಕೈ ಕುಲುಕಿ ಯಾವುದೋ ದೊಡ್ಡ್‍ರೋಗದಿಂದ ತಪ್ಪಿಸುಕೊಳ್ಳೋ ಹಾಗೆ- ನನ್ನ ಕೈ ಒತ್ತಿದ. ನಾನು ಹೀಗಾಗುತ್ತೆ ಅಂತ ಊಹೆ ಕೂಡ ಮಾಡಿರ್ಲೇ ಇಲ್ಲ. ’ನಾನ್ ಏನ್ ಅಂದ್‍ಕೊಂಡಿದ್ದೇ, ಅದೇ ಕುತ್ಸಿತ ಮುಖ ಬಿಟ್ಕಂಡು ಈ ಝ್ವರ್‍ಕೋವ್ ಹಲ್ಲ್ ಕಿರಿತಾನೆ; ಅದೇ ಥರ್ಡ್ ರೇಟ್ ಕಾಮಿಡೀ ಮಾಡ್ತಾ ಕ್ಕೊ…ಕ್ಕೊ…ಕ್ಕೋ ಅಂತ ನಗ್ತಾನೆ… ಆ ಹಳೇ ಬೂಟಾಟಿಕೆ ಬುದ್ದಿವಂತ್ಕೆ ತೋರ್ಸಕ್ಕೇ ನಾಕಾರು ಭಾರೀ ಸ್ಮಾರ್ಟ್ ಮಾತಗಳ್ನ ಆಡ್ತಾನೆ ಅಂತ…  ಈತನ ಈ ವರಸೆಗಳಿಗೆಲ್ಲ ನಾನು ಯಾವ್ ಥರ ಉಲ್ಟಾ ಹೊಡ್ದು, ಅವ್ನು ಮತ್ತ ಅವ್ನ ಭಕ್ತರನ್ನು ಹೇಗೆ ಬೆಚ್ಚಿಸ್ಬೇಕು ಅಂತೆಲ್ಲ ಲೆಕ್ಕ ಹಾಕ್ತಾ ನಿನ್ನೆ  ಸಂಜೆಯಿಂದನೇ  ಯೋಚ್ಸಿ, ಯೋಚ್ಸಿ ರೆಡಿ ಆಗ್ತಿದ್ದೆ. ಆದರೆ ದೇವ್ರಾಣೆ, ಈ ಪುಣ್ಯಾತ್ಮ ಇಷ್ಟು ಸಲುಗೆಲೀ ನನ್ನ  ಸ್ವಾಗತಿಸ್ತಾನೆ ಅಂತ ಊಹೆನೂ ಮಾಡಿರ್ಲಿಲ್ಲ ಬಿಡಿ. ಹಂಗಾದ್ರೆ  ಈತನ್ಗೇ ನಾನು ಯಾವ ರೀತಿಲೂ ಸಮ ಆಗಕ್ಕೆ ಆಗಲ್ಲ ಅಂತ ಒಂಚೂರೂ ಅನುಮಾನನೇ ಇಲ್ದೇ ತಿಳ್ಕಂಡಿದ್ದಾನೆ; ಇಲ್ಲ ಆ ಥರದ ಭ್ರಮೆಗೇ ಬಿದ್ದಿದ್ದಾನೆ ಅದಕ್ಕೇ ಇವ್ನ ಈ ಹೈ ಅಫ಼ಿಶಿಯಲ್ಲು ಸೋಗು! ಹೀಗೆಲ್ಲ ಆಡ್ತಾ ನನ್ನ ರೇಗ್ಸಿ, ಅವಮಾನ ಮಾಡ್ಬೇಕು ಅಂತೇನಾದ್ರೂ ಯೋಚಿಸಿದ್ರೆ  ಅದೇನು ಅಂಥಾ ದೊಡ್ಡ ವಿಷಯನೇ ಅಲ್ಲ!   ಈ ಥರ ಸೂಳೆನಾಟ್ಕ ಆಡೋವ್ರಗೆ ಹೇಗ್ ಅವಮಾನ ಮಾಡೋದು ಅಂತ ಗೊತ್ತು ನನ್ಗೆ ಚೆನ್ನಾಗಿ… ಆದರೆ  ಅಸಲಿಗೆ, ಅವ್ನ್ಗೆ ನಾನು ಯಾವ ರೀತಿನೂ ಸಾಟಿಯಾಗಲ್ಲ ಅನ್ನೋ ವಿಚಾರ ಅವನ ದಪ್ಪ ಬುರುಡೆಯೊಳಗೆ ನುಸುಳಿ, ಅವ್ನೇ    ನನಗಿಂತ ತುಂಬಾ ತುಂಬಾ ಶ್ರೇಷ್ಠ ಅಂತಾ ಗೊತ್ತಾಗಿ, ಏನೋ ಪಾಪ ಹೋಗ್ಲೀ ಅಂತ ನನ್ನ ಮೇಲೆ ಕರುಣೆ ತೋರ್ಸೋ ಹಾಗೆ… ಭಿಕ್ಷೆ ಹಾಕೋ ಹಾಗೆ, ಈ ಹೈ ಅಫಿಶಿಯಲ್ಲು ರೀತಿಯಲ್ಲಿ ನನ್ನ ಕೈ ಕುಲ್ಕತ್ತಾ ಇದ್ದಾನ?” ಈ ಅನಾಮತ್ತ್ ಊಹೆಯೇ ಒಂದು ಚಣ ನನ್ನ ಉಸಿರನ್ನು   ಕಿತ್ತುಕೊಂಡಿತು.

‘“ಆಶ್ಚರ್ಯ ಆಯ್ತು ನೀನು ನಮ್ಮ-ಮ್ಮ ಜಜಜ…ಜತೆ ಪಾರ್ಟಿಗೆ ಬರಕ್ಕೆ ಆಸೆ ಪಡ್ತೀದ್ದೀಯ ಅಂತ  ಕೇಳಿ”  ಝ್ವರ್‍ಕೋವ್  ಗೊಜಗುಜ ಅಂದ, ಇವನ್ಯಾಕೆ ಹೀಗೆ ಉಗ್ತಾ ಇದ್ದಾನೆ, ಗೊತ್ತಾಗ್ಲಿಲ್ಲ. “ಅದೆಷ್ಟೋ ವರುಷಗಳಾಯ್ತು ನಾವಿಬ್ರೂ ಭೇಟೀ ಆಗಿ; ಅದೇನು ಅಷ್ಟು ನಾಚ್ಕೆ, ಆತಂಕ ನಿನ್ಗೆ ನಾವೂ ಅಂದ್ರೆ?! ನೀನಂದುಕೊಂಡಷ್ಟು ಭಯಂಕರ ಮನುಷ್ಯರು   ನಾವಲ್ಲಪ್ಪ. ಏನೋ ಮತ್ತೆ ನೀನ್ ನಮ್ಮ ಬಳಗಕ್ಕೆ ಬಂದ್-ಬಂದ್-ಬಂದ್ದೀಯ… ವೆಲ್‍ಕಮ್…”

ಹಾಗಂದು  ಆರಾಮಕ್ಕೆ ತಿರುಗಿ ಕಿಟಕಿ  ಅಡಿಗಟ್ಟಿನ ಮೇಲೆ   ಟೋಪಿ ಇಟ್ಟು ಕೂತ.

 “ತುಂಬಾ ಹೊತ್ತಾಯ್ತೇನೋ ಬಂದು”, ಅಂದ ಟ್ರೂಡೋಲಿಬೋವ್. “ನಿಮ್ಮ್ ಮಾತ್   ಕೇಳಿ ಸರಿಯಾಗಿ ಐದಕ್ಕೇ  ಬಂದೆ ಆದ್ರೆ ಇಲ್ಲಿ ನೋಡಿದ್ರೇ…” ಸಿಡಿಯೋ ಹಾಗೆ ಕಿರುಚ್ದೆ.

“ಅಲ್ಲ… ಅವನ್ಗೆ ಹೇಳಿಲಿಲ್ವಾ… ನಾವು ಆರು ಗಂಟೆಗೆ ಅಂತ ಮತ್ತೆ ಮಾತಾಡ್‍ಕೊಂಡ್ವಲ್ಲ…? ಟ್ರೂಡೋಲಿಬೋವ್ ಸೈಮೊನವ್‍ನತ್ತ ನೋಡ್ತಾ ಅಂದ.

“ಇಲ್ಲ…  ಮರ್ತೇ ಹೋಯ್ತ ನೋಡ್ ನನಗೆ”, ಆ ಕಡೆಯಿಂದ ಬಂತು ಅವ್ನ ಪ್ರತ್ಯುತ್ತರ. ನನ್ನ ಹತ್ತಿರ ಕ್ಷಮೆ ಕೇಳೋ ಯಾವ ಕುರುಹೂನೂ ಇಲ್ದೇ, ಯಾವ ಪಾಪ-ಪುಣ್ಯ ಮಾತನ್ನೂ ಆಡ್ದೇ ಒಂದೇ ಏಟ್ಗೆ  ಈ    Horse D’Oeuvre ಆರ್ಡರ್ ನೆನೆಪಾಗಿ ಮೆಲ್ಗೇ ಜಾರ್‍ಕೊಂಡ ಖದೀಮ.

“ವಾ! ಹಾಗಾದ್ರೆ ನೀನು ಪಾಪ ಒಂದು ಗಂಟೆಯಿಂದಾ ಇಲ್ಲೇ ಅನ್ನೂ…” ಅಣಕಿಸೋ ಹಾಗೆ ಬೊಗಳ್ತಾ ಇದ್ದಾನೆ ಝ್ವರ್‍ಕೋವ್. ಅವ್ನ ಕಣ್ಗೆ ಇದೆಲ್ಲ ಮಹಾ ತಮಾಷೆ  ಪ್ರಸಂಗದ ಹಾಗೆ ಕಾಣ್ತೋ ಏನೋ. ಆ ಬೇವರ್ಸಿ  ಫರ್‍ಫಿಚ್ಕಿನ್ ಜೋರಾಗ್ ನಕ್ಕ, ಅದೇ ಕುಬ್ಚ ಸ್ವರ… ನಾಯಿ ಕುನ್ನಿ  ಕೀರಲು ಧ್ವನಿ… ಅವನಿಗೂ ಈ ಸಂದರ್ಭ ಮಹಾ ಹಾಸ್ಯಾಸ್ಪದವಾಗಿತ್ತು ಅನ್ಸುತ್ತೆ.

“ಯಾಕೋ ಕೋತಿ ಕುಣೀತಿದಿಯಾ ಇಲ್ಲಿ. ಯಾಕೆ ನಗ್ತೀದಿಯಾ? ಏನೂ ಆಗಿಲ್ಲ ನೀನು ಅಷ್ಟು ಹಲ್ಲ್ ಬಿಡೋ ಅಂತದ್ದು”,  ಫರ್‍ಫಿಚ್ಕಿನ್‍ನನ್ನು ನೋಡಿ ನಾನು ಜೋರ್ರಾಗೇ ಕಿರಿಚ್ದೆ ತುಂಬಾ ಕಿರಿಕಿರಿಯಲ್ಲಿ. “ಇದೆಲ್ಲ ನಿಮ್ದೇ ತಪ್ಪು, ನನ್ಗೂ  ಹೇಳ್ಬೇಕು ಲೇಟಾಗಿ ಬರಕ್ಕೇ ಅನ್ನೋ ಕನಿಷ್ಠ ಪ್ರಜ್ಞೆನೂ ನಿಮ್ಗಿಲ್ಲ, ನಾನ್ ಬೇಗ ಬರೋದು, ಬಂದ್ ನಿಮ್ನ ಕಾಯೋದು ಇದೆಲ್ಲ… ಇದು…ಇವೆಲ್ಲಾ… ಎಷ್ಟು ಪೆದ್ದ್-ಪೆದ್ದಾಗಿದೆ.”

“ಪೆದ್ದ್-ಪೆದ್ದಾಗಿ ಮಾತ್ರ ಅಲ್ಲ. ಅದರ ಜತೆಗೆ ಇನ್ನೂ ಯಾವ್ದೋ ಒಂಥರಾ ಇದೆ ಅಣ್ಣಾ…!” ಟ್ರೂಡೋಲಿಬೋವ್ ಪಿಟಿಗುಟ್ಟ್ದ ಮತ್ತೆ… ಭಾರೀ ಒಳ್ಳೆಯವನು ತಾನು ಅನ್ನೋ ಹಾಗೆ, ಏನೋ ನನ್ನ ಪರವಾಗಿರೋ ಥರ. “ ಛೇ… ಛೇ… ಹೀಗ್ ಆಗ್ಬಾರ್ದಿತ್ತು ನಿನ್ಗೆ… ಏನೇ ಇರ್ಲಿ ನಿನ್ನ ಹೀಗೆ ಕಾಯಿಸಿದ್ದು ತಪ್ಪೇ. ಬೇಕು-ಬೇಕಂತ  ಯಾರೂ ಹೀಗ್ ಮಾಡಿರಿಲಿಕ್ಕಿಲ್ಲ, ಆದ್ರೂ  ಸೈಮೊನವ್ ಯಾಕೆ ಹಾಗ್ ಮಾಡ್ದ … ಹ್ಞಾಂಂಂ!”

 “ನನ್ನ ಜತೆ ಏನಾದ್ರೂ ಹೀಗೆ ಕಾಯಿಸೋ ಆಡಿದ್ರೆ…” ಫರ್‍ಫಿಚ್ಕಿನ್ ಸೇರಿಸಿದ. “ನಾನಾಗ…”, “ಹ್ಞಾಂಂಂ… ನೀನ್ ಏನಾದ್ರೂ ಆಗಿದ್ರೆ ಡಿನ್ನರ್ರೇ ಆರ್ಡರ್ ಮಾಡಿ ಉಂಡ್ ಹೋಗ್ತಿದ್ದೇ…” ಬಂತು ಝ್ವರ್‍ಕೋವ್ ಅಡ್ಡ್‍ಬಾಯಿ.

 “ಯಾವ ದೊಣ್ಣೆ ನಾಯಕನ್ನ ಕೇಳ್ದೇ ನಾನು ಇದ್ನೆಲ್ಲಾ ಮಾಡ್ ಬಿಡ್ತಿದ್ದೇ ಗೊತ್ತಾಯ್ತಾ…”  ಈಗ ನನ್ನ ಅಡ್ಡ ಬಾಯಿ. “ಆದ್ರೂ ನಾನು ಕಾದಿದ್ದೆ, ಯಾಕಂದ್ರೆ…”

“ಎಲ್ರೂ ಕೂರೋಣ ದಯವಿಟ್ಟು…” ಸೈಮೊನವ್ ಕಿರಿಚ್ದ, ಈ ದೊಡ್ಡ ಮನುಷ್ಯ ಬಂದಿದ್ದೇ ಈಗ.   “ಸರಿ, ಎಲ್ಲ ರೆಡಿಯಾಗಿದೆ ಅಣ್ಣಾ… ಶಾಂಪೇನ್ ಅಂತೂ ಸಕ್ಕತ್ತೆ ಚಿಲ್ಡ್ ಆಗಿದೆ… ನಿನ್ನ   ಅಡ್ರೆಸ್ಸೆ ಇಲ್ಲವಲ್ಲಪ್ಪ ನನ್ನ ಹತ್ರ… ಎಲ್ಲಿ ಅಂತ ಹುಡುಕೋದ್ ನಿನ್ನ ಹೇಳು?” ಒಂದೇ ಸಲಕ್ಕೆ ನನ್ನ್ ಕಡೆ ತಿರುಗ್ದ ಆದ್ರೆ  ನನ್ನ  ನೋಡ್ಲಿಲ್ಲ.   ಯಾವುದೋ ವಿಷಯಕ್ಕೆ ನನ್ನ ಮೇಲೆ ಅವನ್ಗೆ ಕತ್ತಿ ಮಸೆಯೋ ಅಷ್ಟು ಹಗೆ ಇತ್ತು; ಅದು ಮಾತ್ರ ದಿಟ. ನಾನಿಲ್ಲಿಗೆ   ಬಂದದ್ದು ಅವನಿಗೆ ಚೂರೂ ಹಿಡಿಸಿರ್ಲಿಲ್ಲ. ನಿನ್ನೆ ನಾನ್ ಮಾಡಿದ್ದ ಪಂಚಾಯಿತಿಯಿಂದ ಹಾಗ್ ಕೋಪ ಬಂದಿತ್ತೋ   ಏನೋ.’

ಹೀಗೆ ಬಂದಿದ್ದ ಎಲ್ಲ ಮಹನೀಯರನ್ನೂ ನಾನು ಮನಸೋ ಇಛ್ಚೆ ಉಗಿಯುತ್ತಾ ಇದ್ದಾಗ ಎಲ್ಲರೂ ಕೂತರು, ನಾನು ಸಹಾ. ಗುಂಡಾದ ಮೇಜದು. ಟ್ರೂಡೋಲಿಬೋವ್ ನನ್ನ ಎಡದಲ್ಲಿ. ಸೈಮೊನವ್ ನನ್ನ ಬಲದಲ್ಲಿ, ಝ್ವರ್‍ಕೋವ್ ನನ್ನ ವಿರುದ್ಧ ದಿಕ್ಕಲ್ಲಿ. ಅವನ ಪಕ್ಕ ಫರ್‍ಫಿಚ್ಕಿನ್.

 “ಹೆ…ಹೇಳು… ನಿನ್ ಕೆಲ್ಸಾ ಡಿಪಾರ್ಟ್-ಮೆಂಟ್…ಮೆಂಟ್ ಮೆಂಟಲ್ಲಾ?”, ನನ್ನನ್ನು ನೋಡುತ್ತಾ ಝ್ವರ್‍ಕೋವ್ ಮತ್ತೆ ಶುರು ಮಾಡಿದ್ದ. ನಾನು ಮುಜುಗರಗರ ಪಡುತ್ತಾ ಇದ್ದದ್ದನ್ನೇ ನೋಡಿ  ಈತ ನನ್ನ ಜತೆ ಆತ್ಮೀಯವಾಗಿ, ಏನೋ ನನ್ನನ್ನು ಹುರಿದುಂಬಿಸುವಂತೆ ಮಾತನಾಡಲೇ ಬೇಕು ಎಂಬ ಹಠಕ್ಕೆ ಬಿದ್ದಂತಿದ್ದ.

‘ಈ ಮುಂಡೇಗಂಡನ್ನ ತಲೆಗೇ ಬಾಟ್ಲಿಲೀ ಚಚ್ಚ್ಲಾ… ಅದೇ ಬೇಕಾ ಇವನ್ಗೇ… ತುಂಬಾ ಸಿಟ್ಟ್ ಬೇರೆ ಬರ್ತಾ ಇದೆ…’ ತುಂಬಾ ಹೊಸದಾದ ಪರಿಸ್ಥಿತಿಯಲ್ಲಿ ನಾನು ಸಿಕ್ಕಿ ಹಾಕಿಕೊಂಡಿದ್ದರಿಂದ, ಅತಿ ವೇಗವಾಗಿ, ಅಷ್ಟೇ ಅಸ್ವಾಭಾವಿಕವಾಗಿ ಕಿರಿಕಿರಿಗೊಂಡಿದ್ದೆ.

“ಹ್ಞೂಂ  X ಕಛೇರಿಯಲ್ಲಿ…” ಉತ್ತರಕೋಸ್ಕರ ಉತ್ತರ ಕೊಟ್ಟೆ, ಊಟದ ತಟ್ಟೆಯನ್ನೇ ನೋಡುತ್ತಾ.

“ಮ್‍ಮ್ಮ್‍ಮತ್ತೆ…ಹಳೆ ನೌಕ್ರಿ ಬಿಟ್ಟು, ಉ…ಉ…ಉಪಯೋಗ ಆಯ್ತೋ? ಹೆ..ಹೆ..ಹೇಳು, ಏನ್, ಒ…ಒ…ಒತ್ತ… ಒತ್ತಡ ಇತ್ತು ಅಂತಾ ನಿನ್ನ ಆ ಹಳೆ ಕೆಲ್ಸಾ  ಬಿಟ್ಟ್ ಬಿಟ್ಟೆ  ?”

“ಅಯ್ಯೋ ಅಲ್ಲಿಂದ ಕಳಚ್ಕೊಬೇಕೂ ಅನ್ನೋ ನನ್ನ ಆಸೆನೇ ನನ್ನ ಒ…ಒ…ಒತ್ತ…ಒತ್ತ…ಒತ್ತಡ ಅಪ್ಪಾ! ಅದಕ್ಕೆ ಆ ಕಛೇರಿ ಸಾವಾಸನೇ ಬೇಡ ಅಂತ ಬಿಟ್ಟೆ…”  ನಾನು  ಅವನಿಗಿಂತ ಜಾಸ್ತಿ  ರಾಗವೆಳೆದೆ, ಇನ್ನು ಹಿಡಿದಿಡಲಾಗಲಿಲ್ಲ ನನ್ನಿಂದ. ಫರ್‍ಫಿಚ್ಕಿನ್  ಕಿಸಿಕಿಸಿ ನಕ್ಕ. ವ್ಯಂಗ್ಯವಾಗಿ ನನ್ನತ್ತ ನೋಡಿದ, ಟ್ರೂಡೋಲಿಬೋವ್ ತಿನ್ನುವುದನ್ನು ಬಿಟ್ಟು ಒಮ್ಮೆ ನನ್ನ ದಿಟ್ಟಿಸಿದ.   ಸೈಮೊನವ್ ಕುತೂಹಲದಲ್ಲಿ ನನ್ನ ಗಮನಿಸಿದ.

ಝ್ವರ್‍ಕೋವ್‍ಗೆ ಆಘಾತವಾಯಿತು, ಆದರೂ ಅದನ್ನು ಬಿಗಿದು ಮುಚ್ಚಿದ್ದ.

“ಓಹೋ ಅದಾ ವಿಷ್ಯಾ…  ಮತ್ತೆ ನಿನ್ನ   remuneration?”

 “ಎಂಥಾ ರೆಮ್ಯುನರೇಷನ್ನು ಮಾರ್ರಾಯಾ?”

 “ಅಲ್ಲಾ … ಅಂದ್ರೆ…. ಎಷ್ಟು ನಿನ್ನ್ ಸ…ಸ…ಸ…ಂಬ್ಳ…”

“ ಓ ಸಂಬ್ಳಾ?! ಅದೇನ್ ನಿನ್ಗ್ ಧಿಢೀರ್ ಆಸಕ್ತಿ ಈಗ ನನ್ನ ಸಂಬ್ಳದಲ್ಲಿ…”

ಹಾಗೇ ಮುಖಕ್ಕೆ ಹೊಡೆದಂತೆ ಮಾತನಾಡಿದ್ದರೂ ನನಗೆ ಎಷ್ಟು ಸಂಬಳ ಸಿಗುತ್ತೇ ಅಂತ ಬಹಳ ಬೇಗನೇ ಒದರಿಯೂ ಇದ್ದೆ; ಅಷ್ಟೇ ವೇಗದಲ್ಲಿ ನಾನು ವಿಪರೀತವಾಗಿ ಕೆಂಪೂ ಆಗಿದ್ದೆ.

“ಓಹೋ! ಅಷ್ಟೇ ಅನ್ನೂ ಜಾಸ್ತಿ ಜಾಸ್ತಿ ಏನಿಲ್ಲ…” ಅಂದ  ಝ್ವರ್‍ಕೋವ್.

“ಹೌದು ಗುರುಗಳೇ ಕಾಪಿಹೌಸಲ್ಲಿ ಉಣ್ಣೋ ಭಾಗ್ಯ ಎಲ್ಲರ್ಗೂ ಎಲ್ಲಿರುತ್ತೆ ಅಲ್ಲೂವ್ರ…!” ಈ ಫರ್‍ಫಿಚ್ಕಿನ್ ಬಿಡಿ, ವ್ಯಂಗ್ಯಕ್ಕೇ ಹುಟ್ಟಿರೋ ಪಿಂಡ, ಅದಕ್ಕೇ ಈ ಮಾತು ಬಿಟ್ಟ.

“ ಪಾಪ ಛೇ… ತುಂಬಾ ಕಡ್ಮೇ ನಿನ್ನ ಇನ್‍ಕಮ್ಮು ಅನ್ಸಿತ್ತಿದ್ದೆ ನನ್ಗೇ” ಬಹಳ ಗಂಭೀರವಾಗಿ  ಟ್ರೂಡೋಲಿಬೋವ್ ಮುತ್ತಿನಹಾರದಂತಹ ನುಡಿಯನ್ನು ಎಸೆದ.

“ಏನೋ ಹೀಗ್ ಕಡ್ಡಿ ಥರ ಆಗೋಗಿದ್ದೀಯ! ಅವತ್ತು ನೋಡಿದಿಕ್ಕೂ ಇವತ್ತ್ಗೂ ತುಂಬಾ ವ್ಯತ್ಯಾಸ ಇದೆ ಬಿಡು…ಸೀದೋಗಿರೋ ಬೊಂಬೆ ಥರ ಆಗ್ ಬಿಟ್ಟಿದ್ಯಯಲ್ಲಪ್ಪಾ” ಅಂದ ಝ್ವರ್‍ಕೋವ್, ಈ ಸಲ ಮಾತ್ರ ವಿಷ ವಿತ್ತು ಅವನ ಮಾತಲ್ಲಿ.  ನನ್ನನ್ನೂ, ನನ್ನ ಮೈ ಮೇಲಿದ್ದ ಬಟ್ಟೆಯನ್ನು ವಿಕ್ಷಿಪ್ತ ದುರಂಹಕಾರ ದಯೆಯಲ್ಲಿ ಪರೀಕ್ಷಿಸುತ್ತಾ ಇದ್ದ.

“ಸಾಕಪ್ಪ ಅವ್ನ ಕಿಚಾಯಿಸಿದ್ದು ಹುಡ್ಗ ನಾಚ್ಕೊಂಡಿದ್ದಾನೆ…” ಕಿರುಚಿದ, ಫರ್‍ಫಿಚ್ಕಿನ್ ಕೆಟ್ಟದಾಗಿ ಹಲ್ಲು ಕಿರಿದು.

“ಚಿನ್ನಾ…ನಾಚ್ಕೆ-ಗೀಚ್ಕೆ ಏನೂ ಆಗಿಲ್ಲ ನನಗೆ ಅದ್ನ ತಿಳ್ಕೋ…” ಕೊನೆಗೂ ನಾನು ಸಿಡಿದೆ, “ಕೇಳಿಸ್ತಾ ಸ್ವಾಮಿ? ಈ ಕಾಫಿûಹೌಸಲ್ಲಿ ನನ್ದೇ ಖರ್ಚಲ್ಲಿ ಉಣ್ತೀರೋದು ನಾನು, ಕಂಡವ್ರ ದುಡ್ಡಲ್ಲಿ ಅಲ್ಲ-ಅದನ್ನ ಟಿಪ್ಪ್ಣಿ  ಮಾಡಿ, ದೊರೆ ಫರ್‍ಫಿಚ್ಕಿನ್‍ರವರೇ”.

“ಏಏಏ..ಏನು.. ಅವರ್ದೇ ಖರ್ಚಲ್ಲಿ ಊಟ ಮಾಡ್ದವ್ರು ಇಲ್ಲಿ ಯಾರ್ರೋ ಇದ್ದಾರೆ ಏಯ್…! ನೀನು ಹೇಳೋದ್ ನೋಡೀದ್ರೆ…” ಫರ್‍ಫಿಚ್ಕಿನ್ ಹರಿಹಾಯ್ದ, ಏಡಿಯಂತೆ ಕೆಂಪಾಗಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಇರಿಯುತ್ತಾ.

“ಆಯ್ತು, ಬಿ…ಬಿಟ್ಟಾಕ್ಕು… ಇದನ್ನೆಲ್ಲಾ” ಯಾಕೋ ಜಾಸ್ತಿ ಆಡಿದೆ ಎನಿಸಿ ನಾನು ಮಾತು ಬದಲಿಸಿದೆ, “ಮಾತಾಡಕ್ಕೆ ಸುಮಾರು ಬುದ್ಧಿವಂತ ವಿಷಯಗಳೆಲ್ಲಾ ಇವೇ ಅಲ್ವಾ…”

“ಓಹೋ ಸಾಹೇಬರು ಬುದ್ಧಿವಂತ್ಕೆ ಪ್ರದರ್ಶನ ಮಾಡ್ತಾರೆ ಈಗ.”

“ಅಯ್ಯೋ ಇಲ್ಲಾಪ್ಪ! ತಲೆಕೆಡೆಸ್ಕೋ ಬೇಡ! ಅಂತಾ ಪ್ರದರ್ಶನಕ್ಕೆಲ್ಲ ಇದು ಸರಿಯಾದ ಜಾಗ ಅಲ್ವೇ ಅಲ್ಲ.”

“ಏನ್ ವಟಗುಡ್ತಿದ್ದೀಯ ಅಣ್ಣಾ! ನಿನ್ನ ಆ ಕಛೇರಿಯಲ್ಲಿ ಇದ್ದು-ಇದ್ದು ನಿನ್ನ್ ತಲೆ ಕೆಟ್ಟಿದೆ ಅನ್ಸುತ್ತೆ.”

“ಗುರುಗಳೇ ಸಾಕ್ ಮಾಡಿ”  ಕಿರುಚಿದ ಝ್ವರ್‍ಕೋವ್, ಅಧಿಕಾರವಾಣಿಯಲ್ಲಿ.

“ಥೂ ಒಳ್ಳೆ ತಮಾಷೆ ಆಯಿತು ಇದು” ಗೊಣಗಿದ ಸೈಮೊನವ್.

“ಏನಿದು?! ಪೆದ್ದ್-ಪೆದ್ದಾಗಿ… ಛೇ! ನಾವೆಲ್ಲರೂ ಇಲ್ಲಿ ಸೇರಿರೋದು ನಮ್ಮ ಕಾಮ್ರೇಡ್‍ನ ಫ಼ೇರ್ವೆಲ್ ಪಾರ್ಟಿಗೆ ಅಂತಾ… ನೀನು ನೋಡಿದ್ರೆ ಯಾವುದೋ ಹಾಳಾದ  ಹಳೆ ಬಾಕಿ ತೀರ್ಸಕ್ಕೇ ಹೊಂಚ್ ಹಾಕ್ತಾ ಇದ್ದೀಯಲ್ಲಾ…” ಅಂದ ಟ್ರೂಡೋಲಿಬೋವ್ ನನ್ನನ್ನೇ ತೀಕ್ಷ್ಣವಾಗಿ ನೋಡುತ್ತಾ ಒರಟಾಗಿ. “ನೀನಾಗಿ ಬಂದೇ ಬರ್ತೀನಿ ಅಂತ ಹಟಮಾಡಿ ಇಲ್ಲಿಗೆ ಒಕ್ಕರ್ಸಿ ಈಗ ನಮ್ ಗುಂಪಿನ ಶಾಂತಿ ಕೆಡಿಸ್ ಬೇಡ ತಂದೇ…”

“ಅಲ್ರೋ ಹೋಗ್ಲೀ ಬಿಡ್ರಪ್ಪಾ… ಸಾಕು ಸಾಕು ಬಿಡಿ” ಕಿರುಚಿದ ಝ್ವರ್‍ಕೋವ್, “ನಿಲ್ಲಿಸ್ರಪ್ಪಾ; ಈಗ ಅವೆಲ್ಲಾ ಬೇಡ. ಮೊನ್ನೆ ಇನ್ನೇನು ನನ್ನ ಮದುವೆನೇ ಆಗಿ ಬಿಡ್ತಿತ್ತು ಗೊತ್ತಾ, ಅದ್ರ ಕಥೆ ಕೇಳೀಗ….”

ಆಮೇಲೆ ಮುಂದಿನ ಒಂದು ಘಂಟೆ ಆ ‘ಮೊನ್ನೆ ಇನ್ನೇನು ಆಗೀಯೇ ಬಿಡ್ತಿದ್ದ ಮದುವೆಯ ಕತೆಯೇ’ ಓಡುತಿತ್ತು. ಮದುವೆಯ ಬಗ್ಗೆ ಏನೇನೂ ಹೇಳದಿದ್ದರೂ, ಅಲ್ಲಿಗೆ ಬಂದಿದ್ದ   generals,  colonels,   ಮಹನೀಯರು, ಅವರ ಜತೆಗಿದ್ದ ನಾಯಿಗಳು,  ಹಾಗೇ ಅಲ್ಲಿದ್ದ ಯುವ ದೊರೆಗಳು, ಹೆಚ್ಚು ಕಮ್ಮಿ ಅವರೆಲ್ಲರ ನಾಯಕನಾಗಿದ್ದ ಝ್ವರ್‍ಕೋವ್‍ನ ಸುತ್ತವೇ ಈ ಕಥನ ಕಾವ್ಯ ಸುತ್ತುತಿತ್ತು. ಈ ಗೋಷ್ಠಿಯನ್ನು ಎಲ್ಲರೂ ಮೆಚ್ಚಿದ್ದರು.   ಫರ್‍ಫಿಚ್ಕಿನ್ ಸಂತೋಷದಲ್ಲೇ ‘ಕೀ…ಕೀ’ ಅಂತ ಊಳಿಡುತ್ತಿದ್ದ.

ಅವರು ನನ್ನನ್ನು ಸಂಪೂರ್ಣವಾಗಿಯೇ ವಿಸರ್ಜಿಸಿದ್ದರು.  ನಾನು ಹಾಗೇ ಕೂತು, ಪುಡಿ-ಪುಡಿಯಾಗಿ, ಸೊನ್ನೆಯಾಗಿದ್ದೆ.

ಓಹ್ ದೇವರೇ! ಇವರೆಲ್ಲರೂ ನಿಜಕ್ಕೂ ನನ್ನಂತವರೇ? ಯೋಚಿಸುತ್ತಾ ಇದ್ದೆ ನಾನು. “ಎಂಥಾ ಪೆದ್ದನ ಥರ ಅವ್ರ ಕಣ್ಗೇ ನಾನು ಕಾಣ್ತಾ ಇರ್ಬಹುದು…  ಆ ಫರ್‍ಫಿಚ್ಕಿನ್‍ನ್ನದ್ದಂತೂ ತುಂಬಾ ಜಾಸ್ತಿಯಾಯಿತು. ನಾನೇ ಬಿಟ್ಟಿದ್ದು ಅವನ್ಗೇ ಹಾಗೆಲ್ಲ ನನ್ನ ಉಗಿಯಕ್ಕೆ, ಚುಚ್ಚಕ್ಕೆ…”  ಈ ಹೆಣಗಳು ನಾನು ಇವರ ಪಕ್ಕ ಕೂತಿರುವುದೇ ನನಗೆ ಮಹಾ ಸನ್ಮಾನವೆಂದು ಕಲ್ಪಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ನಾನು ಇಲ್ಲಿರುವುದೇ ಅವರಿಗೆ ದೊಡ್ಡ ಮರ್ಯಾದೆ! ಆದರೆ ನಾನು ತುಂಬಾ ಸವೆದು ಹೋಗಿದ್ದೇನೆ! ಮತ್ತೆ ನನ್ನ ಬಟ್ಟೆಗಳು ಹೇಗೆ ಆಗಿವೆ! ಥೂ…ನನ್ನ ಈ ಪ್ಯಾಂಟ್‍ಗೆ ಬೆಂಕಿ ಹಾಕ!  ಆ ಝ್ವರ್‍ಕೋವ್ ಬಂದ ಕ್ಷಣದಲ್ಲೇ ನನ್ನ ಮಂಡಿಯಲ್ಲಿ ಪಡಿಯಚ್ಚೊತ್ತಿದ್ದ ಹಳದಿ ಕಲೆಯನ್ನು ಖಂಡಿತಾ ಗಮನಿಸಿಯೇ ಇರುತ್ತಾನೆ ಈ ಕ್ಷಣದಲ್ಲೇ  ನಾನು ಒಂದೂ ಮಾತನಾಡದೆ  ಎದ್ದು ಹೋಗಬೇಕು, ಹಾಗೇ ಅವರನ್ನು ನಾನು ವಿಸರ್ಜಿಸಬೇಕು. ನಾಳೆ ಏನಾದರೂ ಆಗಲಿ… ಬೇಕಾದರೆ ನಾನೇ ‘ಧಮ್ಮಿದ್ರೆ ಡ್ಯುಯೆಲ್‍ಗೆ ಬನ್ರೋ’ ಎಂದು ಕಿರುಚಿ ಸವಾಲು ಹಾಕುತ್ತೇನೆ! ಸೂಳೆಮಕ್ಕಳು! ಆ ಏಳು ರೂಬೆಲ್ಲಿಗೋಸ್ಕರ ಇಲ್ಲಿ ಕೂತಿದ್ದೀನಿ ಅನ್ನೋದು ಅವರ ಯೋಚನೆ. ಏನು ಬೇಕಾದರೂ ಯೋಚಿಸಲಿ ಅವರು, ಆ ಏಳು ರೂಬೆಲ್ಲು ಹಾಳಾಗಿ ಹೋಗಲಿ! ಎಲ್ಲ ಸಾಯಲಿ!  ನಾನಂತೂ ಒಂದು ನಿಮಿಷದೊಳಗೆ ಇಲ್ಲಿಂದ ಖಾಲಿಯಾಗುವೆ…

     ಅನುಮಾನವೇ ಬೇಡ, ಒಂದಿಂಚೂ ಕದಲದೆ ನಾನಲ್ಲಿಯೇ ಉಳಿದೆ.

     ಹೃದಯವನ್ನು ಕೊಲ್ಲುವ ಕ್ಲೇಶದಲ್ಲಿ ಲೋಟದ ತುಂಬಾ ತುಂಬಿದ್ದ ವೈನನ್ನು ಹೊಟ್ಟೆಯೊಳಗೆ ಸುರಿದುಕೊಂಡೆ. ಇವೆಲ್ಲಾ ನನಗೆ ಅಷ್ಟು ಅಭ್ಯಾಸವಿರಲಿಲ್ಲ. ಅದಕ್ಕೇ ನಶೆ  ಬೇಗನೇ ಧಿಮ್ಮನೆ ತಲೆಗೇರಿತು, ಇದರ ಜತೆ-ಜತೆಗೇ ನನ್ನ ಬೇಗುದಿಗಳು ಸಹ. ಇದ್ದಕ್ಕಿದ್ದಂತೆಯೇ ಅವರೆಲ್ಲರನ್ನೂ ನಡುಗಿಸಿ ಬಿಡುವಷ್ಟು ಅವಮಾನಿಸುವ ಮನಸ್ಸಾಯಿತು. “ಚೆನ್ನಾಗಿ ಉಗಿ ಬೇಕು. ಆಮೇಲೆ ಈ ಜಾಗ  ಖಾಲಿ ಮಾಡ್ಬೇಕು” ಎಂದುಕೊಂಡೆ.  ಆಗ   ಅರಿಯುತ್ತಾರೆ ಎಲ್ಲ “ಇವನು ಅಸಂಗತ ಮನುಷ್ಯ, ಆದರೆ ಮಹಾ ಬುದ್ಧಿವಂತ”…ಮತ್ತೆ…ಮತ್ತೆ… ಒಂದೇ ವಾಕ್ಯ, ಸುಡುಗಾಡಿಗೆ ಹೋಗಲಿ ಎಲ್ಲಾ.

ಗರ್ವದಲ್ಲಿ  ಅವರೆಲ್ಲರನ್ನೂ ನನ್ನ ತೂಕಡಿಸುವ ಕಣ್ಣುಗಳಲ್ಲಿ  ಪರಿಶೀಲಿಸಿದೆ. ಆದರೆ ಅಷ್ಟು ಹೊತ್ತಿಗೆ ಅವರೆಲ್ಲರೂ ನನ್ನನ್ನು ಮರೆತೇ ಬಿಟ್ಟಿದ್ದರು. ಬರೀ ಕಿರುಚಾಟ, ಶೋಕಿ ಕೇಕೆಗಳು, ಗಲಾಟೆಯ ನಗುವಲ್ಲಿ ಅವರೆಲ್ಲ ಮುಳುಗಿದ್ದರು. ಝ್ವರ್‍ಕೋವ್ ಅದೇನೋ ಹೇಳುತ್ತಿದ್ದ. ನಾನು ಹಾಗೇ ಮೆಲ್ಲನೆ ಬಗ್ಗಿ ಕೇಳಿಸಿಕೊಂಡೆ. ಯಾರೋ ಭರ್ಜರಿ ಹೆಣ್ಣೊಬ್ಬಳನ್ನು ಈ ಝ್ವರ್‍ಕೋವ್ ಮೋಡಿ ಮಾಡಿದ್ದ ಬಗ್ಗೆ ಬಡಾಯಿ ಕೊಚ್ಚುತ್ತಿದ್ದ( ಅದೆಲ್ಲಾ ಸುಳ್ಳೇ! ಅಲೆಮಾರಿ ಕುದುರೆ ಸರದಾರರು ಬುರುಡೆ ಬಿಟ್ಟ ಹಾಗೆ) ಈ  ಪ್ರಣಯ ಪ್ರಸಂಗಕ್ಕೆ ಮುಖ್ಯವಾಗಿ ಇವನ ಆಪ್ತಮಿತ್ರನಾದ ಪ್ರಿನ್ಸ್ ಕೋಲ್ಯ ಎನ್ನುವನು ಹೇಗೆ ನೆರವಾಗಿದ್ದ ಎಂದೂ ವಿವರಿಸುತ್ತಿದ್ದ ನಮ್ಮ ಉತ್ತರಕುಮಾರ. ಹುಸ್ಸಾರ್  ಬಿರುದು ಗೆದ್ದಿದ್ದ ಈ ಕೋಲ್ಯನಿಗೆ ಮೂರು ಸಾವಿರ ಗುಲಾಮರಿದ್ದರಂತೆ.

“ಆದರೂ ಈ ಕೋಲ್ಯ, ಮೂರು ಸಾವಿರ  ಗುಲಾಮರ ಯಜಮಾನ ಹ್ಞಾ…! ಇವತ್ತು ರಾತ್ರಿ ನಿನ್ನ ಸೆಂಡ್ ಆಫ಼್ ಪಾರ್ಟಿಗೇ ಬರ್ಲೇ ಇಲ್ವಲ್ಲಾ ಗುರುಗಳೇ…” ನಾನು ಕತ್ತರಿ ಹಾಕಿದೆ. ಒಂದು ಕ್ಷಣ ಎಲ್ಲರೂ ಮೌನವಾದರು.

“ಕುಡಿದಿದ್ಯಾ ನೀನು ತುಂಬಾ”  ಅಂದ ಟ್ರೂಡೋಲಿಬೋವ್, ಅಂತೂ ಇಂತೂ ನನ್ನ ಇರುವಿಕೆಯ ಗಮನಿಸೋ ಕೃಪೆ ತೋರಿಸಿದ, ನಿಂದನೆಯ ನೋಟದಲ್ಲಿ.

ಝ್ವರ್‍ಕೋವ್ ಮೌನವಾಗಿ ನಾನೊಂದು ಕೀಟವೇನೋ ಎನ್ನುವಂತೆ ನನ್ನನ್ನು ಪರಿಶೀಲಿಸುತಿದ್ದ. ನನ್ನ ದೃಷ್ಟಿಯ ತಗ್ಗಿಸಿದೆ. ಸೈಮೊನವ್ ಮಾತು ಮರೆಸುವಂತೆ ಲೋಟಗಳಿಗೆಲ್ಲ ಶಾಂಪೇನ್ ಸುರಿದ.

ಟ್ರೂಡೋಲಿಬೋವ್ ತನ್ನ ಲೋಟವೆನ್ನಿತ್ತಿದ, ನನ್ನನ್ನು ಬಿಟ್ಟು ಎಲ್ಲರೂ ಅವನು ಮಾಡಿದ ಹಾಗೇ ಮಾಡಿದರು.

“ಚೆನ್ನಾಗಿ ಇರೋ… ಹಾಗೇ ನಿನ್ನ ಪ್ರಯಾಣನೂ ಚೆನ್ನಾಗೇ ಆಗ್ಲೀ,” ಕಿರುಚಿ ಝ್ವ್‍ರ್‍ಕೋವ್‍ನನ್ನು ಹಾರೈಸಿದ. “ನಮ್ಮ ನಿನ್ನೆ… ನಾಳೆಗಳಿಗೆ, ಹೆ…ಹೇ!”

ಎಲ್ಲರೂ ಒಂದೇ ಗುಟುಕಲ್ಲಿ ತಮ್ಮ ಲೋಟಗಳನ್ನು ಖಾಲಿ ಮಾಡಿ ಝ್ವರ್‍ಕೋವ್‍ನನ್ನು ತಬ್ಬಲು, ಮುತ್ತಿಡಲು ಓಡಿದರು. ನಾನು ಮಾತ್ರ ಓಡಲು ಇಲ್ಲ, ಕುಡಿಯಲೂ ಇಲ್ಲ ನನ್ನ ಗ್ಲಾಸು ಶಾಂಪೈನಲ್ಲಿ ತುಂಬಿತುಳುಕಿತ್ತು.

“ಅವನ್ಗೆ ಒಳ್ಳೇದಾಗ್ಲಿ ಅಂತ ಹಾರೈಸಿ ಕುಡಿಯಲ್ವ ಮಾರಾಯ ನೀನು!?” ಘರ್ಜಿಸಿದ ಟ್ರೂಡೋಲಿಬೋವ್ ತಾಳ್ಮೆ ಕಳೆದುಕೊಂಡು, ಬೆದರಿಸುವ ಹಾಗೆ ನನ್ನತ್ತೆ ತಿರುಗಿ.

 “ ಟ್ರೂಡೋಲಿಬೋವ್ ಸ್ವಾಮ್‍ಗಳೇ… ಒಂದೇಒಂದ್ ನಿಮ್ಷ ಕೊಡಿ… ನಂದೇ ಬೇರೆಯಾಗಿರ್ರೋ ಒಂದ್ ಸ್ಪೆಷ್ಷಲ್ಲು ಸ್ಪೀಚ್ ಮಾಡ್ಬೇಕು… ಆಯ್ತಾ… ಅಲ್ಲಿ ತನ್ಕ ಡೋಂಟ್… ಡಿಶ್ಟ್ರಬ್ಬ್ಬ್ಬ್ ಮೀ ಓಕೇ…? ಆಮೇಲೇ ನಾನ್… ನಾನು ಕುಡಿಯೋದು… ಆಹ್ಞಾ…”

“ ಥೂ ಕೊಳಕು ಮಂಡಲ,” ಗೊಣಗಿದ ಸೈಮೊನವ್.

ಕುರ್ಚಿಯನ್ನು ಎಳೆದುಕೊಂಡೆ. ಉದ್ವಿಗ್ನನಾಗಿ ನನ್ನ ಲೋಟವನ್ನು ಎತ್ತಿ, ವಿಚಿತ್ರವಾದದ್ದು ಏನೋ ಒಂದು ಘಟಿಸುತ್ತದೆ ಎಂಬಂತೆ ಸಿದ್ಧನಾಗಿದ್ದೆ. ಆದರೆ ಈಗ ಏನು ಮಾತು ಮಾತಾನಾಡುವುದು? ನನಗೇ ಸ್ಪಷ್ಟವಾಗಿ ಗೊತ್ತಿರಲಿಲ್ಲ.

“ಸದ್ದು…!” ಕಿರುಚಿದ ಫರ್‍ಫಿಚ್ಕಿನ್. “ಬುದ್ಧಿ ಪ್ರದರ್ಶನ ಈಗ ಚತುರರಿಂದ! ಎಲ್ಲರೂ ದಯ ಮಾಡಿ ತೆಪ್ಪಗಿರ್ರಪ್ಪಾ.” ಝ್ವರ್‍ಕೋವ್ ಬಹಳ ಗಂಭೀರನಾಗಿ ಕಾಯುತಿದ್ದ. ಅವನಿಗೆ ಇನ್ನೇನು ಆಗಲಿರುವ ಅನಾಹುತದ ಅರಿವಿತ್ತು.

“Mr. Lieutenant Zverkov,” ನಾನು ಕೊನೆಗೂ ಶುರು ಮಾಡಿಯೇ ಬಿಟ್ಟೆ, “ನೋಡು ನನಗೆ ಈ ಚೆನ್ನಾಗಿರೋ ಮಾತುಗಳೇ ಆಗಲ್ಲ… ಈ  ಚೆನ್ನಾಗಿರೋ ಮಾ…ಮಾತ್… ಮಾತುಗಳ್ನಾ ಸೃಷ್ಠಿ ಮಾಡ್ತಾರಲ್ಲಾ ಅವ್ರಂತೂ ಬಿಲ್ಕುಲ್ ಆಗಲ್ಲ. ಮತ್ತೆ, ಈ ಪೆಟ್ಟಿಕೋಟು ಹಾಕೋ ಗಂಡಸ್ರ್ನ ಕಂಡ್ರಂತೂ ತುಂಬಾ ದ್ವೇಷ ನನಗೆ! ಏಯ್ ಐ ಹೇಟ್ ಸಚ್ ಮೆನ್ ಯಾ…! ಇಷ್ಟು ವೆರಿ ಫ಼ಶ್ಟ್ ಪಾಯಿಂಟ್ ಆಯ್ತಾ…  ಸೆಕೆಂಡ್ ವೆರಿವೆರಿ ಇಂಪಾರ್ಟೆಟೆಂಟ್ ಪಾಯಿಂಟ್ ಈಗ ಬಂತೂ”

   ಇಷ್ಟಕ್ಕೆ ಗುಂಪು  ಭರ್ಜರಿಯಾಗಿಯೇ ಕದಡಿತ್ತು. ಎಲ್ಲರೂ ಹಲ್ಲುಕಡಿಯುತ್ತಿದ್ದರು.

“ಎರಡನೆಯ ಮುಖ್ಯಾಂಶ: ಈ ಪೋಲಿ ಕತೆಗಳು. ಅದನ್ನು ಸೊಗಸಾಗಿ ಹೇಳೋ ಪೋಲಿಗಳ್ನ  ಐ ಹೇಟ್ ಯಾ… ಹೌದು, ಇಂಪಾರ್ಟೆಂಟ್ಲೀ ಅಂಥಾ ಕಥೇ ಹೇಳೋ ಬೋಳಿಮಕ್ಳನ್ನ ನಾನು ತುಂಬಾ ದ್ವೇಷ ಮಾಡೋದು ಹ್ಞೂಂ… ಅವ್ರನ್ನೇ ನಾನು ದ್ವೇಷ್ಸೋದು. ಆಯ್ತಾ ಆವ್ಕ್ ಹ್ಞೋ… ಈಗ ಬಂತು ನೋಡಿ ಮೂರನೆ  ಮುಖ್ಯಾಂಶ: ನನ್ಗೆ, ಸತ್ಯ, ಪ್ರಾಮಾಣಿಕತೆ, ಸಹೃದಯ ಇವೆಲ್ಲಾ ತುಂಬಾ ತುಂಬಾ ಇಷ್ಟಾ,” ಈಗಂತೂ ಯಾಂತ್ರಿಕವಾಗಿ ಮಾತನಾಡುತಿದ್ದೆ. ಭೀತಿಯಲ್ಲಿ ಮರಗಟ್ಟಿ ಹೋಗಿ ಯಾಕೆ ಈ ಥರ ಎಲ್ಲಾ ಹೇಳುತಿದ್ದೇನೆ ಎಂದು ಅರಿಯಲೂ ಸೋತು, “ಚಿಂತನೆಗಳನ್ನ, ಕಲ್ಪನೆಗಳನ್ನ ತುಂಬಾ ಪ್ರೀತಿಸ್ತೀನಿ ನಾನು ಝ್ವರ್‍ಕೋವ್; ನಿಜವಾದ ಸ್ನೇಹ… ಟ್ರೂ  ಫ಼್ರೆಂಡ್ಷಿಪ್ಪು… ಅಂದ್ರೆ ಸಮಾನ ಸ್ನೇಹ… ಎರಡೂ ಸ್ನೇಹಿತರ ಮನಸ್ಸಲ್ಲಿ ಸಮವಾಗಿ ಇರೋ ಅಂತ   ಫ಼್ರೆಂಡ್ಷಿಪ್ಪು ನನ್ಗೆ  ತುಂಬಾ ಇಷ್ಟ ಕಣೋ, ಮತ್ತೆ ನನ್ಗೆ… ಅದೂ… ಅದೇನೇ ಇದ್ರೂ ಹ್ಞೂಂ… ನಾನು ಪ್ರೀತಿಸೋದು… ಅದೆಲ್ಲಾ ಹಾಳಾಗ್ಲಿ! ಇರ್ಲಿ, ನಿನ್ನ ಹೆಲ್ತಿಗೋಸ್ಕರನೇ ಕುಡೀತೀನೀ ಆಯ್ತಾ  ಮಿಶ್ಟರ್ರ್‍ಝ್ವರ್‍ಕೋವ್! ಸರ್ಕೇರಿಯನ್ ಹುಡ್ಗೀರ್ಗೆಲ್ಲಾ ಮಿಷನ್ನ್ ಬಿಡು… ನಮ್ಮ ಪಿತೃಭೂಮಿಗೆ ಬರೋ ಟೆರರಿಶ್ಟಗಳ್ನೆಲ್ಲ ಢಗ ಢಗ ಢಗ ಅಂತ ಗನ್ನಲ್ಲೇ    ಸುಟ್ಟು ಹಾಕ್ಬಿಡು ಮತ್ತೆ… ಮತ್ತೆ….. ಹ್ಞಾಂ … ನಿನ್ನ ಹೆಲ್ತಿಗೋಸ್ಕರನೇ  ಕುಡೀತಾ ಇದ್ದೀನೀ ಚಿನ್ನಾ.. ನೋಡಿಲ್ಲಿ ನಿನಗೇ ಅಂತಾನೇ ಈ ಹೆಂಡ ಕಳ್ಳ ಬಡ್ಡಿಮಗ್ನೇ! ಅಯ್ಯೋ ಅಯ್ಯೋ ನೀನ್ ಚೆನ್ನಾಗಿರ್ಲೇ ಬೇಕು… ನೀವೆಲ್ಲ ಧರೆಗೆ ದೊಡ್ಡವರಪ್ಪ… ಕೇಳ್ಸ್ತಾ ಏಯ್…!  ಲೋ   ಝ್ವರ್‍ಕೋವ್! ಕೇಳ್ಸ್ತೇನೋ”

ಝ್ವರ್‍ಕೋವ್ ಎದ್ದ. ಒಂದು ಆಳವಾದ ಬಿಸಿಉಸಿರು. ಅವನ ಕತ್ತಿನ ನರಗಳೆಲ್ಲ ಉಬ್ಬಿಬಿಗಿದಿತ್ತು. ಸಿಟ್ಟಲ್ಲಿ ಕೆಂಪಾಗಿದ್ದ ಕಂಗೆಟ್ಟ ನರಗಳಿಂದ ಕೀಲಿಟ್ಟ ಬೊಂಬೆಯಂತೆ ಕತ್ತನ್ನು ಒಂದೆರೆಡು ಸಲ ಎಡಕ್ಕೂ ಬಲಕ್ಕೀ ನುಲಿಸಿದ. ಮತ್ತೆ ಅಂದ,  “ಭಾರೀ ಪ್ರೀತಿ ತೋರ್ಸಿದ್ರಿ ಗುರುಗಳೇ… ನಮಸ್ಕಾರ…”

ಭೀಭತ್ಸವಾಗಿ ಭಂಗಗೊಂಡು, ಬಿಳಿಚಿಕೊಂಡಿದ್ದ ಝ್ವರ್‍ಕೋವ್ ಹಾಗೇ ನಿಂತು ನನ್ನನ್ನು ಕಣ್ಣಲ್ಲೇ ಸುಟ್ಟು ಬಿಡುವಂತೆ ನೋಡುತಿದ್ದ  “ಮಣ್ಣ್…. ಹಾಕ್ ಅವ್ನ ಬಾಯಿಗೆ,” ಘರ್ಜಿಸಿದ ಟ್ರೂಡೋಲಿಬೋವ್ ಮೇಜನ್ನು ಮುಷ್ಠಿಯಲ್ಲಿ ಬಡಿಯುತ್ತಾ.

“ಇಲ್ಲಾ… ಇಲ್ಲಾ ಈ ನನ್ಮಗಂಗೆ ಭಾರೀ ಕಡೀತೀದೆ,  ಮುಸುಡಿಗೆ ಸರಿಯಾಗಿ ಗುದ್ದು ಗುರೂ…” ಊಳಿಟ್ಟ ಫರ್‍ಪಿಚ್ಕಿನ್.

“ನಾವು ಇವ್ನ ಒದ್ದು ಹೊರಗ್ ಹಾಕ್ಬೇಕ್,” ಗೊಣಗಿದ ಸೈಮೊನವ್.

“ಸದ್ದು…!ಯಾರೂ ಅಲ್ಲಾಡಬೇಡಿ ಕಣ್ರೋ,” ಝ್ವರ್‍ಕೋವ್ ಗಂಭೀರವಾಗಿ ಕಿರುಚಿದ, ಹಬ್ಬಿದ್ದ ಅಸಮಾಧಾನಕ್ಕೆ ಪೂರ್ಣವಿರಾಮ ಹಾಕುತ್ತಾ, “ನಿಮ್ಗೆಲ್ಲಾ ಥ್ಯಾಂಕ್ಸ್ ನನ್ನ ಜತೆ ಇದ್ದಿದ್ದಕ್ಕೆ, ಆದ್ರೆ ಅವ್ನ  ಮಾತೆಲ್ಲಾ ತಿಪ್ಪೆ ಕಣ್ರೋ… ತಿಪ್ಪೆ ಥರಾನೇ ನೋಡ್ಬೇಕು ನಾವೂನು ಅವ್ನ… ತೋರಿಸ್ತೀನಿ ನೋಡಿ ಈಗ…”   

“ಅಣ್ಣಾ ಫರ್‍ಪಿಚ್ಕಿನ್ ನಾಳೆನೇ ನೀನಂದ್ಯಲ್ಲಾ ಆ ಮಾತಿಗೆ ತಕ್ಕ ಉತ್ರ ಕೊಟ್ಟು ನೆಮ್ಮದಿಯಾಗಿರ್ತೀನಿ   ನಾನು!” ದೊಡ್ಡ ದನಿಯಲ್ಲಿ  ಫರ್‍ಫಿಚ್ಕಿನ್‍ನತ್ತ ತಿರುಗಿ ವಿಶೇಷವಾದ ಹುರುಪಲ್ಲಿ ಹೇಳಿದೆ.

“ಓಹೋ ಡ್ಯುಯಲ್ ತಾನೆ?  ಆಗಲಿ, ಅದಕ್ಕೇನಂತೆ ಭಾಳ ಸಂತೋಷ,” ಅವನೂ ಅದೇ ವೇಗದಲ್ಲಿ ಪ್ರತ್ಯುತ್ತರಿಸಿದ. ಆದರೆ ಈ ಸವಾಲು ಹಾಕುವಾಗ   ಬಹುಶಃ ನಾನು ತುಂಬಾ ಹಾಸ್ಯಾಸ್ಪದವಾಗಿ ಕಾಣುತ್ತಾ ಇದ್ದೆನೋ ಏನೋ ಅದಕ್ಕೆ ಎಲ್ಲರೂ,  ಫರ್‍ಪಿಚ್ಕಿನ್‍ನನ್ನು ಸೇರಿಸಿ, ಬಿದ್ದುಬಿದ್ದು ನಕ್ಕರು.

“ಒದ್ದು ಕಳಿಸ್ರೀ ಅವ್ನ…ತೊಲಗ್ಲೀ… ಕುಡಿದಿರೋದು ತಲೆಗೇರಿದೆ ಈ ಹಂದಿಗೆ” ಅಸಹ್ಯದಿಂದ ಉಗಿದ ಟ್ರೂಡೋಲಿಬೋವ್.  

“ಹೋಗೀ ಹೋಗೀ ಇವ್ನ ಕರೆದ್‍ನ್ನಲ್ಲಾ ಇಲ್ಗೇ, ನನ್ನ ಎಕ್ಕಡದಲ್ಲಿ ನಾನೇ ಹೊಡ್ಕೋಬೇಕು,” ಪಶ್ಚಾತಾಪ ಪಟ್ಟ ಸೈಮೊನವ್.

“ಇದೇ ಸರಿಯಾದ ಸಮಯ ಎಲ್ಲರಿಗೂ ಬಾಟಲಿಗಳಲ್ಲೇ ಬಡಿಯುದಕ್ಕೇ…” ಅಂತ ನಾನು ಯೋಚಿಸುತ್ತಾ ಒಂದು ಬಾಟಲಿ ಎತ್ತಿ ನನ್ನ ಗ್ಲಾಸನ್ನು ಭರ್ತಿ ಮಾಡಿದೆ. 

‘ಬೇಡ… ಕೊನೆ ತನಕ ಕೂರೋದೋ ಸರೀ!”  ಅಂದುಕೊಂಡೆ ಮನಸ್ಸಲ್ಲೇ “ಸಜ್ಜನರೇ ನಿಮ್ಗೂ ನಾನು ಹೋಗೋದೇ ಬೇಕಾಗಿರುವುದು! ಅದ್ಕೇ ಎಲ್ಲಾ ಮುಗಿಯುವರೆಗೂ ಇಲ್ಲೇ ನನ್ನ ಠಿಕಾಣಿ. ನೀವೆಷ್ಟು ಜೀವ ಇಲ್ದೇ ಇರೋರೂ ಅಂತ ತೋರ್ಸಕ್ಕೇ ಕಣ್ರೋ ಬಂದಿರೋದು ನಾನು. ಇಲ್ಲೇ ಕುಡಿತೀನೀ ಕಣ್ರೋ ನೋಡ್ತಾ ಇರೀ, ಯಾಕಂದ್ರೇ ಇದು ಪಬ್ಲ್ಕಿಕ್ಕ್ ಬಾರು; ಎಂಟ್ರೀ ಫಿೀ ಕೊಟ್ಟೆ ಬಂದೀರೋದು ಒಳ್ಗೆ ನಾನು, ಏನ್ ಬಿಟ್ಟಿ ಬಂದಿದ್ದೀನಾ ನಾನು…   ನೀವೆಲ್ಲಾ   ಅಸ್ತಿತ್ವವೇ ಇಲ್ದಿರೋ ದಾಳಗಳು ಕಣ್ರೋ… ಹೌದು ಬರೀ ದಾಳಗಳು ಅಷ್ಟೇ… ನಿಮ್ಮನ್ನ ಹೇಗೆ ಅಲಕ್ಷ್ಯ ಮಾಡ್ತೀನೀ ನೋಡ್ತಾ ಇರ್ರೋ ಬಡ್ಡಿಮಕ್ಳಾ… ಇಲ್ಲೇ ಇದ್ದು ಅಲಕ್ಷಾ ಮಾಡ್ತೀನಿ ನಿಮ್ಮನ್ನೆಲ್ಲಾ ಸುವರ್ರಗಳಾ…  ಹಾಗೆ ಹಾಡ್ತೀನಿ… ಮನಸಾದ್ರೆ ಕುಣೀತಿನಿ… ಆ ಎಲ್ಲ ಹಕ್ಕಿದೆ ನನ್ಗೆ ಇಲ್ಲಿ ಹ್ಞಾ…’

ಆದರೆ ನಾನು ಹಾಡಲೂ ಇಲ್ಲ, ಕುಣೀಲೂ ಇಲ್ಲ. ಅವರ ಕಡೆ ನೋಡದೆ ಇರಲು ಪ್ರಯತ್ನಿಸಿದೆ ಅಷ್ಟೆ. ಅವರ್ಯಾರೂ ಅಲ್ಲಿ ಇಲ್ಲವೇ ಇಲ್ಲ ಎನ್ನುವಂತೆ  ನಾನು ನಿರ್ಲಿಪ್ತನಾಗಿರುವ ಹಾಗೆ ನಟಿಸುತ್ತಿದ್ದರೂ ಅವರಾಗಿಯೇ ಬಂದು ನನ್ನ ಜತೆ ಮೊದಲು ಮಾತನಾಡಲಿ  ಎಂದು ತಾಳ್ಮೆಗೆಟ್ಟು ಕಾಯುತ್ತಲೂ ಇದ್ದೆ. ಆದರೆ, ಅಯ್ಯೋ, ಅವರಲ್ಲಿ ಒಬ್ಬರೂ ಬರಲೂ ಇಲ್ಲ, ಮಾತೂ ಆಡಲಿಲ್ಲ. ಮತ್ತೆ ಮತ್ತೆ, ಆ ಕ್ಷಣದಲ್ಲೇ ಅವರ ಜತೆ ರಾಜಿ ಮಾಡಿಬಿಡಬೇಕೆಂದು ಅದೆಷ್ಟು ಆಸೆ ಪಟ್ಟಿದ್ದೆ! ಎಂಟು ಗಂಟೆ ಆಗಿ ಕೊನೆಗೆ ಒಂಭತ್ತಾಯ್ತು. ಅವರೆಲ್ಲರೂ ಆ ಟೇಬಲ್ ಬಿಟ್ಟು, ಪುಟ್ಟದಾಗಿ, ಗುಂಡಗಿದ್ದ ಸೋಫ಼ಾದತ್ತ ಹೋದರು, ಝ್ವರ್‍ಕೋವ್ ಆ ಸೋಫಾದಲ್ಲಿ ಬಿದ್ದುಕೊಂಡು ಕಾಲನ್ನು ಇನ್ನೊಂದು ಮೇಜಿನ ಮೇಲಿಟ್ಟ. ನಿಜಕ್ಕೂ ಆ ಮೂರು ಹೆಂಡದ ಬಾಟಲಿಗಳ ಖರ್ಚನ್ನು ಅವನೇ ಭರಿಸಿದ್ದ. ಆದರೆ ಆತ ನನ್ನನ್ನು ಕರೆಯಲೇ ಇಲ್ಲ. ಬಿಡಿ ಅದೇನು ಅಚ್ಚರಿಯ ಸಮಾಚಾರವಲ್ಲ. ಅವರೆಲ್ಲರೂ ಈಗ ಅವನ ಸುತ್ತ ಮುತ್ತಿಕೊಂಡು ಬಹಳ ಧಾರ್ಮಿಕ ಶ್ರದ್ಧೆಯಲ್ಲಿ, ಆತ ಹೇಳುತ್ತಿರುವುದಕ್ಕೆ ಕಿವಿಗೊಟ್ಟಿದ್ದರು. ಅವನೆಂದರೆ ಅವರೆಲ್ಲರಿಗೂ ಬಹಳ ಪ್ರೀತಿ, ಮಮತೆ. “ಯಾಕ್ರಪ್ಪಾ… ಯಾಕ್ರಪ್ಪಾ ಇಷ್ಟು ಪ್ರೀತಿಸ್ತೀರ ಅವ್ನಾ…? ಯಾವ ವಿಷಯಕ್ಕೆ ಇಷ್ಟು ಪ್ರೀತಿ…” ನನ್ನಲ್ಲಿ ಈ ಪ್ರಶ್ನೆಗೆ ಉತ್ತರವಿರಲಿಲ್ಲ.  ಅಮಲಿನಲ್ಲಿ ಮತ್ತೇರಿ, ಒಬ್ಬರನ್ನೊಬ್ಬರು ಆಗಾಗ ತಬ್ಬುತ್ತಿದ್ದರು, ಮುತ್ತಿಡುತ್ತಿದ್ದರು.  ಕಕಾಸಸ್ ಬಗ್ಗೆ ಮಾತನಾಡುತ್ತಿದ್ದರು; ನಿಜವಾದ ಪ್ಯಾಶನ್‍ನ ಬಗ್ಗೆ; ಕೆಲ ಎಕ್ಕದಾಟಗಳ ಬಗ್ಗೆ, ಮೆತ್ತಗಿನ ಸೌಕರ್ಯಗಳುಳ್ಳ ನೌಕರಿಗಳ ಬಗ್ಗೆ  ಒಮ್ಮೆಲೆ ಪೊಡ್ಕ್‍ಹಾರ್‍ಝ್ಹೆಸ್ಕಿ ಎಂಬ ಹುಸ್ಸಾರ್‍ನ ಆದಾಯದ ವಿಷಯದ ಬಗ್ಗೆ… (ಆದರೆಇವರಲ್ಲಿ ಯಾರಿಗೂ ಆ ಹುಸ್ಸಾರ್‍ನ  ಪರಿಚಯವೇ ಇಲ್ಲದಿದ್ದರೂಅವನ ಆದಾಯ ಸಕತ್ತಾಗಿದೆ ಅಂತ ಹೇಳುವುದರಲ್ಲೇ ತೃಪ್ತಿ ಕಂಡಿದ್ದರು.) ಪ್ರಿನ್ಸೆಸ್ ಡಿ***ಳ(ಅವಳನ್ನು ಸಹಾ ಇಲ್ಲಿ ಯಾರೂ ನಿಜವಾಗಿಯೂ ನೋಡದೇ ಇದ್ದರೂ) ಅಸಾಮಾನ್ಯ ಚೆಲುವು-ಒಲವಿನ ಬಗ್ಗೆಯೆಲ್ಲಾ ಹರಟೆ ಹೊಡೆದು  ಕಟ್ಟಕಡೆಗೆ, ಈ ಬಗ್ಗೆಗಳ ಮಾತಲ್ಲೇ ಅವರೆಲ್ಲ  ಬಹಳ ದೂರ ಸಾಗಿ ಶೇಕ್ಸ್‍ಪಿಯರ್ ಅಮರ್ತ್ಯನೆಂದು ಒಪ್ಪಿಕೊಂಡರು.

ನಾನು ತಿರಸ್ಕಾರದ ನಗು ಬೀರುತ್ತಾ ಆ ಕೋಣೆಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಶತ-ಪಥ ಹಾಕುತ್ತಿದ್ದೆ. ಅವರೆಲ್ಲರೂ ನನ್ನ ವಿರುದ್ಧ ಬದಿಯಲ್ಲಿದ್ದರು. ಅವರಿಲ್ಲದೆಯೇ ನಾನು ಆರಾಮದಲ್ಲಿ ಇದ್ದೇನೇ   ಎಂದು ಅವರಿಗೇ ತೋರಿಸಲು ತುಂಬಾ ಒದ್ದಾಡುತ್ತಿದ್ದೆ.  ಹಾಗಿದ್ದರೂ ಆಗಲೇ ಬೇಕು-ಬೇಕೆಂದು ನನ್ನ ಹಿಮ್ಮಡಿಯನ್ನು ನೆಲದ ಮೇಲೆ ಜೋರಾಗಿ ಬಡಿಯುತ್ತಿದೆ. ಆಗ ಗಟ್ಟಿಯಾಗಿ ಸದ್ದಾಗುತ್ತಿತ್ತು. ಎಲ್ಲವೂ ವ್ಯರ್ಥವಾಯಿತು. ಅವರಲ್ಲಿ ಒಬ್ಬರೂ ನನ್ನತ್ತ ಗಮನ ಹರಿಸಲೇ ಇಲ್ಲ. ಮುಂದಿನ ಮೂರು ಗಂಟೆಗಳವರೆಗೂ, ಅಂದರೆ ಎಂಟರಿಂದ ಹನ್ನೊಂದರವರೆಗೂ ಹೀಗೆ ನಾನು ಮೂಲೆಯಿಂದ ಮೂಲೆಗೆ ಅಡ್ಡಾಡುತ್ತಿದ್ದೆ ಏಕೆಂದರೆ,  “ಅದ್ ನನ್ನಿಷ್ಟ ಕಣ್ರೋ, ನನ್ನ  ಯಾರ್ರ್ ತಡೀತಾರೆ!” ಆ ಕೋಣೆಗೆ   ಬಂದು ಹೋಗುತ್ತಿದ್ದ ಮಾಣಿ ಆಗಾಗ ನನ್ನನ್ನು ನೋಡಲು ನಿಲ್ಲುತ್ತಿದ್ದ. ಸುಮಾರು ಸಲ ತಿರುಗಿದ್ದಕ್ಕೆ ನನ್ನ ತಲೆ ಸುತ್ತುತ್ತಾ ಇತ್ತು. ನನಗೆ ಸನ್ನಿ ಹಿಡಿದಂತಾಗಿತ್ತು.   ಮೂರು ಗಂಟೆಗಳಲ್ಲಿ ಮೂರು ಸಲ ಬೆವರಿನ ಸ್ನಾನವಾಗಿ ಮರಳಿ ಮರಳಿ ಒಣಗಿಯೂ ಇದ್ದೆ. “ಹತ್ತು ವರುಷ ಉರುಳುವುದು, ಇಪ್ಪತ್ತು ವರುಷ, ನಲವತ್ತು ವರುಷ, ನಲ್ವತ್ತು ವರುಷಗಳಾದ ಮೇಲೂ ನನ್ನ ಜೀವನದ ಅರ್ಥಹೀನ, ಆ ಅಪಮಾನಕರ, ಅತ್ಯಂತ ನೀತಿಭ್ರಷ್ಟವಾದ, ಅತ್ಯಂತ ಅಸಂಗತವಾದ, ಅತ್ಯಂತ ಭಯಾನಕವಾದ ನಿಮಿಷಗಳನ್ನು ನೆನೆಸಿಕೊಳ್ಳುತ್ತಿರುತ್ತೇನೆ… ಇದಕ್ಕಿಂತ ಹೆಚ್ಚು ಯಾರನ್ನು ಯಾರೂ ಅವಮಾನಿಸಲು ಸಾಧ್ಯವೇ ಇಲ್ಲ, ಅದೂ ಅವರವರ ಸ್ವಇಚ್ಛೆಯಿಂದಲೇ ಒಬ್ಬನ  ತೇಜೋವಧೆ ಏನಾದರೂ ನಡೆದಿದ್ದರೇ ಅದು ಇಲ್ಲಿ ಮಾತ್ರವೇ” ಎನ್ನುವ  ಈ ಬೇಗುದಿ ಬೇರೆ ಆಗಾಗ ನನ್ನ ಹೃದಯ ಅರೆಯುತಿತ್ತು. ಆದರೂ ನಾನು ನಡೆಯುತ್ತಲೇ ಇದ್ದೆ. “ಓಹ್ ಅವರಿಗೇನಾದರೂ ನನ್ನಲ್ಲಿರುವ ಆಲೋಚನಲಹರಿ, ನನ್ನ  ಭಾವನ ಪ್ರವಾಹದ ತಾಕತ್ತು, ನನ್ನ ಪಕ್ವ ಬುದ್ಧಿಶಕ್ತಿಯ ಸಾಮರ್ಥ್ಯಗಳ ಅರಿವಿದ್ದರೆ!”  ಆಗಾಗ ಆ ಸೋಫಾದಲ್ಲಿದ್ದ ನನ್ನ ಶತ್ರುಗಳತ್ತ ಕೆಂಡಕಾರಿ ಹೀಗೆ ಮನಸಲ್ಲೇ ಅಂದುಕೊಳ್ಳುತ್ತಿದ್ದೆ. ಆದರೆ ನನ್ನ ಶತ್ರುಗಳು ನಾನು ಅಲ್ಲಿ ಗೈರಾಗಿದ್ದೇನೆ ಎನ್ನುವಂತೆ ವರ್ತಿಸುತ್ತಿದ್ದರು.   ನನ್ನ ಕಡೆ ಅವರು ತಿರುಗಿದ್ದು ಒಂದೇ ಒಂದು ಬಾರಿ, ಅದೂ ಶೇಕ್ಸ್‍ಪಿಯರ್‍ನ ಬಗ್ಗೆ  ಝ್ವರ್‍ಕೋವ್ ಮಾತನಾಡಲು ಶುರುಮಾಡಿದಾಗ. ಆ ಕ್ಷಣದಲ್ಲೇ ನಾನೊಂದು ನಿಂದನೆಯ ನಗೆಯಲ್ಲಿ ಆಸ್ಫೋಟಿಸಿದ್ದೆ. ನನ್ನ ಅಟ್ಟಹಾಸವು ಎಷ್ಟೊಂದು ಪರಿಣಾಮಕಾರಿಯಾಗಿಯೂ ಅಪಾಯಕಾರಿಯಾಗಿಯೂ ಇತ್ತೆಂದರೆ ಅವರೆಲ್ಲರೂ ಸಂಭಾಷಣೆಯನ್ನು ಹಠಾತ್ತಾಗಿ ನಿಲ್ಲಿಸಿ ಎರಡು ನಿಮಿಷಗಳ ಕಾಲ ನನ್ನನ್ನು ಗಮನಿಸಿದರು. ನಾನು ಆಗ, ಆ ಬಳಗದ ಯಾರನ್ನೂ ಗಮನಿಸದೆ,  ಮೌನವಾಗಿ ಗಂಭೀರವಾಗಿ ಆಚೆಈಚೆ ಅಡ್ಡಾಡಿದೆ. ಚೂರೂ ನಗಲಿಲ್ಲ. ಆದರೆ ಏನೂ ಘಟಿಸಲಿಲ್ಲ. ಅವರು ತಮ್ಮ ಸಂಭಾಷಣೆಯನ್ನು ಮೊಟಕುಗೊಳಿಸಿದರಾದರೂ, ಎರಡು ನಿಮಿಷಗಳ ಬಳಿಕ   ಮತ್ತೆ ನನ್ನನ್ನು ನಿರ್ಲಕ್ಷಿಸಿದರು. ಆಗ ಹನ್ನೊಂದನೆಯ ಗಂಟೆ ಬಡಿಯಿತು.

“ಏನ್ರೋ,” ಕಿರುಚಿದ ಝ್ವರ್‍ಕೋವ್, ತನ್ನ ಕುರ್ಚಿಯಿಂದ ಏಳುತ್ತಾ. “ಈಗ ಎಲ್ಲಾ ಅಲ್ಲಿಗೆ ಹೋಗೋಣ ಏನಂತೀರಾ.”

“ಓಹೋಹೊಹೋ! ಖಂಡಿತಾ ಹೋಗೇ ಹೋಗೋಣ…!” ಅಂದರು, ಮಿಕ್ಕವರು. ನಾನು ಏಕಾಏಕಿಯಾಗಿ ಝ್ವರ್‍ಕೋವ್‍ನನ್ನು ನೋಡಿದೆ. ಇವೆಲ್ಲದರಿಂದ ನಾನೆಷ್ಟು ನಜ್ಜುಗುಜ್ಜಾಗಿ ಛಿದ್ರವಾಗಿದ್ದೆ ಎಂದರೆ ನನ್ನ ಕತ್ತು ಸೀಳಿಕೊಂಡಾದರೂ ಎಲ್ಲವನ್ನು ಮುಗಿಸಬಯಸಿದ್ದೆ. ಜ್ವರ ಹಿಡಿದಿತ್ತು ನನಗೆ; ನನ್ನ ಕೂದಲು ಬೆವರಲ್ಲಿ ತೋಯ್ದು ಮತ್ತೆ ಒಣಗಿ ನನ್ನ ಹಣೆಗೆ ಅಂಟಿಕೊಂಡಿತ್ತು.

“ಝ್ವರ್‍ಕೋವ್! ನನ್ನನ್ನು ಕ್ಷಮಸಪ್ಪಾ,” ನಾನಂದೆ ಮೊನಚಾಗಿ, ಅಷ್ಟೇ ನಿರ್ಣಾಯಕವಾಗಿ. “ಫರ್‍ಫಿಚ್ಕಿನ್! ನೀನು ಕ್ಷಮ್ಸು…  ಎಲ್ರೂ ಕ್ಷಮ್ಸಿ,   ನಿಮ್ಮನ್ನೆಲ್ಲಾ  ರೇಗಿಸ್ದೇ. ಅವಮಾನ ಮಾಡ್ದೇ.”

“ಆಹಾ! ತುಪಾಕಿಯಾಟ ಅಂದ್ರೆ ಭಯ ಏನೋ,” ಎಂದು ಫರ್‍ಫಿಚ್ಕಿನ್ ಭುಸುಗುಟ್ಟಿದ, ವಿಷಕಾರುತ್ತಾ. ತೀಕ್ಷ್ಣವಾದ ಇರಿತದಿಂದ ಹೃದಯ ರಕ್ತ ಕಕ್ಕಿದಂತಹ ಅನುಭವವಾಯಿತು ನನಗೆ.

 “ಇಲ್ಲಪ್ಪ… ತುಪಾಕಿಯಾಟದ ಹೆದ್ರಿಕೆ ಇಲ್ಲಾ… ಫರ್‍ಪಿಚ್ಕಿನ್ ಇವೆಲ್ಲಾ ಇತ್ಯರ್ಥ ಆದ್ಮೇಲೂ   ನೀನು ನಾನು ಡ್ಯುಯೆಲ್ ಆಡೋಣ   ಆಗಂತೂ   ನೀನು ಒಪ್ಲೇ ಬೇಕು. ನಾಳೆನೇ ನೀನ್ ಆಡ್ಬೇಕ್… ನೀನೇ ಮೊದ್ಲು ಗುರಿಯಿಟ್ಟು ನನ್ನ್ ಕಡೆ ಗುಂಡು ಹಾರ್ಸಪ್ಪಾ…! ಅದೇ ನಾನು ಅಪ್ಪಿತಪ್ಪಿನೂ ನಿನ್ನ ಶೂಟ್ ಮಾಡಲ್ಲ ಗಾಳೀಲ್ ಗುಂಡ್ ಹೊಡೀತೀನಿ. ಡ್ಯುಯೆಲ್ ಅಂದ್ರೆ ನನ್ಗೇನ್ ಭಯ ಇಲ್ಲ ಅಂತ ಆಗ್ ಗೊತ್ತಾಗುತ್ತೆ ನಿನ್ಗೆ”

 “ಬನ್ನಿ… ಬನ್ನಿ… ಅವ್ನಗೆ ಅವ್ನೇ ಸಮಾಧಾನ ಮಾಡ್ಕೊಳಿತ್ತಿದ್ದಾನೆ” ಅಂದ ಸೈಮೋನವ್.

 “ಹುಚ್ಚ್-ಹುಚ್ಚಾಗಿ ಏನೇನೋ ಬೊಗಳ್ತಿದ್ದಾನೆ…” ಟ್ರೂಡೋಲಿಬೋವ್ ಸೇರಿಸಿದ.

“ಸರಿ, ಆದ್ರೆ ಇವ್ನ ದಾಟಿ ಮುಂದೆ ಹೋಗ್ಬೇಕಲ್ಲ ನಾವು. ಏನಪ್ಪಾ ದಾರಿ ಮಧ್ಯೆ ಯಾಕೆ ನಿಂತಿದ್ದೀಯಾ!… ಏನ್  ಬೇಕೀಗ ನಿನಗೆ?” ಝ್ವರ್‍ಕೋವ್ ಅವಹೇಳನವೇ ಶಬ್ಧಗಳಾದಂತೆ ಪ್ರಶ್ನಿಸಿದ. ಜಾಸ್ತಿ ಹೆಂಡ ಕುಡಿದು ಅವರ ಮುಖಗಳೆಲ್ಲಾ ಕೆಂಪಾಗಿದ್ದವು.   ಕಣ್ಣುಗಳು ಹೊಳೆಯುತಿದ್ದವು. 

“ನಿನ್ನ ಸ್ನೇಹ  ಝ್ವರ್‍ಕೋವ್… ನಿನ್ನ ಪ್ರೀತಿ ಬೇಕು ಅಷ್ಟೇ ಕಣೋ. ನಿನ್ನ, ನಿನ್ನ ನಾನು ರೇಗ್ಸಿ ಅವಮಾನ ಎಲ್ಲಾ ಮಾಡ್ದೇ,  ಆದ್ರೇ…”

“ಅವಮಾನನ? ಅದೂ ನೀ-ನೀನೀನು! ನ-ನನ-ನನಗೆ! ಅವಮಾನ ಮಾಡ್ತೀಯ  ನೋಡು ಚಿನ್ನ, ಒಂದು ವಿಷ್ಯಾ ತಲೆಗೆ ಹಾಕ್ಕೋ,  ತಾವು ಎಂತಹ ಸನ್ನಿವೇಶದಲ್ಲೂ ನಮ್ಮನ್ನ ಅವಮಾನ ಮಾಡೋದು ಆಗ್ದೇ ಇರೋ ಕೆಲಸ!” 

“ಏಯ್ ಸಾಕ್ ಮಾಡೋ… ತೊಲಗಿಲ್ಲಿಂದ, ದಾರಿ ಬಿಡೋ!” ಟ್ರೂಡೋಲಿಬೋವ್ ಖಚಿತವಾಗಿ ಹೇಳಿದ.

“ಒಲಂಪಿಯಾ ನನ್ನವಳು ಕಣ್ರೋ ಅದು ಗೊತ್ತು ತಾನೇ ಎಲ್ಲರಿಗೂ!” ಕೂಗಿದ  ಝ್ವರ್‍ಕೋವ್.

“ತಮ್ಮಾಜ್ಞೆ ಗುರುಗಳೇ, ನಮ್ದೇನು ಅಭ್ಯಂತರ ಇಲ್ಲ!” ಜವಾಬು ಕೊಡುತ್ತಾ ಅವರೆಲ್ಲರೂ ನಕ್ಕರು.

ನಾನಲ್ಲಿಯೇ ನಿಂತಿದ್ದೆ, ಘೋರವಾಗಿ ಅವಮಾನಕ್ಕೊಳಗಾಗಿ! ಜನರೆಲ್ಲರೂ ಮರಳಿ ಮನೆಗೆ ಹೋಗೋ ಸಮಯವದು. ಬರೀ ಗದ್ದಲ. ಟ್ರೂಡೋಲಿಬೋವ್ ಯಾವುದೋ ಕ್ಷುದ್ರಗೀತೆಯ ಹಾಡಲು ಬೇರೇ ಶುರು ಮಾಡಿದ. ಸೈಮೊನವ್ ಸ್ವಲ್ಪ ಹೊತ್ತು ಅಲ್ಲೇ ನಿಂತು ಮಾಣಿಗಳಿಗೆಲ್ಲಾ ಭಕ್ಷೀಸು ಕೊಡುತಿದ್ದ. ನಾನು ಅಚಾನಕ್ಕಾಗಿ ಅವನತ್ತ ಓಡಿದೆ.

“ಸೈಮೊನವ್… ನನ್ನ ಮಗ್ನೇ… ಬಿಚ್ಚು ನನ್ನ ಆರು ರೂಬಲ್ಸ್ ಬಿಚ್ಚು!” ಹತಾಶನಾಗಿ ನಿರ್ಣಾಯಕ ದನಿಯಲ್ಲಿ ಕೇಳುತ್ತಿದ್ದೆ. ಆತ ಮಿತಿಮೀರಿದ ಅಚ್ಚರಿಯಿಂದ, ಹೊಳೆಯುವಂತಹ ನೋಟದಲ್ಲಿ ನನ್ನನ್ನು ನೋಡಿದ. ಅವನೂ ಕುಡಿದಿದ್ದ.

“ಹಾಗಾದ್ರೆ ನೀನು ನಮ್ಮ ಜತೆ ಅಲ್ಲಿಗೆ ಬರೋದಿಲ್ಲ…?

“ಹೌದು!”

“ಏಯ್ ಮುಚ್ಕಂಡ್ ಹೋಗೋ ಹಾಗಾದ್ರೇ, ಯಾವ್ ದುಡ್ಡ್ನ ಕೇಳೋದ್ ನೀನು, ನನ್ಹತ್ರ ದುಡ್ಡಿಲ್ಲ ಮಾರಾಯ!” ಅಲಕ್ಷ್ಯದಲ್ಲಿ ಹಾಗಂದು, ನಿಂದನೆಯ ನಗೆ ನಕ್ಕು, ಕೋಣೆಯಿಂದ ಹೊರ ಹೋದ.

ನಾನವನ ಓವರ್‍ಕೋಟನ್ನು ಬಿಗಿಯಾಗಿ ಹಿಡಿದೆ. “ಏಯ್…ಏಯ್, ನೋಡಿಲ್ಲಿ ಸೈಮೊನವ್, ನಿನ್ಹತ್ರ ದುಡ್ಡಿದೆ. ನಾನು ನೋಡಿದ್ದೀನಿ ಆಯ್ತಾ… ಈಗ್ಯಾಕೆ ಕೊಡಲ್ಲ ಅಂತೀಯ ನನ್ನ್ ಮಗ್ನೇ? ಏನ್, ಕಳ್ಳನಾ ನಾನು…? ಹುಷಾರ್…! ಇಲ್ಲಗಿಲ್ಲ ಅಂದ್ರೆ ಅಷ್ಟೆ ಈಗ, ಗೊತ್ತಿಲ್ಲ ನಿನ್ಗೇ ಯಾಕ್ ನಾನು ದುಡ್ಡ್ ಕೇಳ್ತಾ ಇದ್ದೀನಿ ಅಂತ! ನನ್ನ ಇಡೀ ಬದುಕಿನ್ ಭವಿಷ್ಯ, ನನ್ನೆಲ್ಲಾ ಯೋಚನೆ, ಆ ಹಣದ ಮೇಲೆ ನಿಂತಿರೋದು…”

ಸೈಮೊನವ್ ಹಣವನ್ನು ಹೊರತೆಗೆದು, ಹೆಚ್ಚುಕಮ್ಮಿ ನನ್ನತ್ತ ಬಿಸಾಡಿದ. “ನಾಚ್ಕೆ, ಮಾನ ಮರ್ಯಾದೆ ಏನೂ ನಿನಗೆ ಇಲ್ಲ ಅಂದ್ರೆ ಎತ್ಕೋ  ಸೂ… ಥೂ” ಅಂತ ಬೈಗಳನ್ನು ಪೂರ್ಣಗೊಳಿಸದೆ ನಿಷ್ಕರುಣಿಯಾಗಿ ಕ್ಯಾಕರಿಸಿ ನೆಲಕ್ಕೆ ಉಗಿದು ಅವರನ್ನು ಕೂಡಿಕೊಳ್ಳಲು ಓಡಿದ.

ನಾನಲ್ಲೇ ನಿಶ್ಯಬ್ದವಾಗಿ ಸ್ಥಿರವಾದೆ. ಕೋಲಾಹಲ, ಅರ್ಧಂಬರ್ಧ ತಿಂದು ಬಿಟ್ಟಿದ್ದ ಚೂರೂಪಾರೂ ಮೂಳೆಮಾಂಸಗಳ ತುಂಡು, ನೆಲದ ಮೇಲಿದ್ದ ಒಡೆದ ವೈನ್ ಗ್ಲಾಸು, ಉಗಿದಿದ್ದ ಹೆಂಡ, ಸಿಗರೇಟಿನ ಚೂರುಗಳು, ನನ್ನ ತಲೆ ತುಂಬಾ ಹೊಗೆ ಮತ್ತು ಹೊಂದಿಕೊಳ್ಳದ ಆಲೋಚನೆಗಳು, ಕಹಿವ್ಯಥೆಯಲ್ಲಿ ಬಿರಿದ ನನ್ನ ಹೃದಯ, ಕೊನೆಯದಾಗಿ ಈ ಎಲ್ಲಾ ದೊಂಬರಾಟವನ್ನು ಸಿನಿಮಾಸಕ್ತನಂತೆ ಕುತೂಹಲದಿಂದ ನೋಡುತಿದ್ದ ಆ ಮಾಣಿ.

“ನಾನು ಅಲ್ಲಿಗೆ ಹೋಗುತ್ತಿದ್ದೇನೆ,” ಕೂಗಿದೆ. “ಒಂದೋ ಅವರು ನನ್ನೆದುರು ಮಂಡಿಯೂರಿ, ನನ್ನ ಪಾದಗಳನ್ನು ತಬ್ಬಿ, ನನ್ನ ಗೆಳೆತನವನ್ನ ಬಯಸಿ ಬಯಸಿ ಬೇಡಬೇಕು ಇಲ್ಲವೇ ಆ ಝ್ವರ್‍ಕೋವ್‍ಗೆ ಕಪಾಳಕ್ಕೆ ಮೋಕ್ಷ ಕೊಡೋ ಸೇಡಿನ ದೇವತೆ ನಾನು”  ’ಬರ್ತಾ ಇದ್ದೀನಿ  ಕಣ್ರೋ..’

 

ಮುಂದುವರೆಯುವುದು…

ಅನುವಾದ :  ಗೌತಮ್ ಜ್ಯೋತ್ಸ್ನಾ

ಚಿತ್ರ : ಮದನ್ ಸಿ.ಪಿ

ಪ್ರತಿಕ್ರಿಯಿಸಿ