ಅಧೋಲೋಕದ ಟಿಪ್ಪಣಿಗಳು – ಕಂತು ೯ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)

5

“ಅಂತೂ ಇಂತೂ ಬಂತು ಆ ಮುಖಾಮುಖಿ, ವಾಸ್ತವದ ಜತೆ ನನ್ನ ಘರ್ಷಣೆ…” ನನ್ನಷ್ಟಕ್ಕೇ ನಾನೇ ಗೊಣಗುತ್ತಾ ವೇಗವಾಗಿ ಇಳಿದೆ ಬಂದೆ. “ಪವಿತ್ರ ಪೋಪ್, ರೋಮ್ ಬಿಟ್ಟು ಬ್ರೆಜಿಲ್ ಕಡೆ ಹೊರಟ ಹಾಗಲ್ಲ ಈ ಸ್ಥಿತಿ; ಅದಕ್ಕಿಂತಲೂ ಭಿನ್ನ, ಹೌದು, ಕೊಮೊ ಸರೋವರದ ದಡದ  ಮೇಲಿನ  ಕೂಟಕ್ಕಿಂತಲೂ ಈ ಪರಿಸ್ಥಿತಿ ತೀರ ವಿಭಿನ್ನ… ಇದೇ ಬೇರೆ ಕಥೆ”

  ಮಿಂಚಿನಂತೆ ಬಂತೊಂದು ಯೋಚನೆ; ಈ ಹಾಳು ಮನಸ್ಸು ನನ್ನೇ ಛೇಡಿಸುವ ಆ ಯೋಚನೆ, “ಈ ವಿಷಯಕ್ಕೂ ನಕ್ರೆ  ಸೂಳೆಮಗ  ಕಣೋ ನೀನು ಸೂಳೆಮಗ!”

 “ಸರಿ ಹಾಗಾದ್ರೆ!” ನಾನು ಜೋರಾಗಿ ಬೊಬ್ಬೆ ಹಾಕಿದೆ. ನನ್ನದೇ ಪ್ರತಿಧ್ವನಿ, ನನ್ನದೇ ಪ್ರತ್ಯುತ್ತರ, “ಖತಂ… ಎಲ್ಲ ಇವತ್ತಿಗೆ ಖತಂ…!”

   ಎಲ್ಲೂ ಅವರ ಸುಳಿವಿರಲಿಲ್ಲ. ಆದರೂ ಗೊತ್ತಿತ್ತು ನನಗೆ  ಆ ಜನ ನುಸುಳಿರುವ  ರಹಸ್ಯ ತಾಣದ ವಿಳಾಸ.

ಆ ಒದ್ದೆ ಗಾಳಿಯ ಇರುಳಿನ ದೃಶ್ಯ ಇನ್ನೂ ನನಗೆ ಚೆನ್ನಾಗಿಯೇ ನೆನಪಿದೆ. ಆ ಮೂಲೆಯಲ್ಲಿ ಒಂದು ಜಟಕ ಗಾಡಿ ನಿಂತಿತ್ತು. ಅದರ ಸವಾರ ರೈತನ ಕೋಟು ತೊಟ್ಟಿದ್ದ. ಮಂಜು ಬೀಳುತಿತ್ತು. ಬಿಸಿ ಮಂಜು, ಹಬೆಯಾಡುತ್ತಿತ್ತು. ಆ ಲಡಕಾಸಿ ಕುದುರೆ ಹಿಮದಲ್ಲಿ ಆವೃತವಾಗಿ ಕೆಮ್ಮುತಿತ್ತು. ಇನ್ನೇನು ಗಾಡಿಯೊಳಗೆ ಹಾರ ಬೇಕೆಂದಿರುವಾಗ ಸೈಮೊನವ್ ವಾಪಾಸ್ಸು ಎಸೆದ ಆರು ರೂಬಲ್ಸ್  ಜ್ಞಾಪಕಕ್ಕೆ ಬಂತು; ಆ ಯೋಚನೆ ಮನಸ್ಸಿನಲ್ಲಿ ಸ್ರಾವವಾಗುತ್ತಿದ್ದಂತೆಯೇ ಬಂಡಿಯೊಳಗೆ ಮೂಟೆಯಂತೆ ಕುಸಿದೆ.

“ಇಲ್ಲ, ಹಾಗೇ ಸಾಧ್ಯವಿಲ್ಲ! ಬೇಕು ತುಂಬಾ ತುಂಬಾ ಶ್ರಮ ಹಾಕಬೇಕು ಆದದ್ದನ್ನೆಲ್ಲ ವಿಮೋಚನೆಗೊಳಿಸಲು!”   ಕಿರುಚಿದೆ ನಾನು. “ ಹೌದು ನಾನು ವಿಮೋಚನೆಗೊಳಿಸುತ್ತೇನೆ ಎಲ್ಲವನ್ನೂ, ಅಥವಾ ಈ ರಾತ್ರಿ  ನಾನೇ ಆ ಸ್ಥಳದಲ್ಲೇ ಕ್ಷಯಿಸಿ ಹೋಗುತ್ತೇನೆ, ಹೊಡೀ ಜಟಕಾ ಹ್ಞೂಂ…!” ಕುಂಡೆಯಿಂದ ಕೂಗುತ್ತಾ ಆಜ್ಞಾಪಿಸಿದೆ ಜಟಕಾ ಹೊಡೆಯಲು.

 ನಮ್ಮ ಅಂಬಾರಿ ಹೊರಟಿತು.   ತಲೆಯೊಳಗೆ ಚಂಡಮಾರುತ ಪರಿಭ್ರಮಣಿಸಿತ್ತು. “ಮಂಡಿಯೂರಿ ನನ್ನ ಪ್ರೀತಿಗಾಗಿ ಭಿಕ್ಷೆ ಬೇಡಬೇಕು ಅವರು- ಅಯ್ಯೋ ಇಲ್ಲಾ ಇಲ್ಲ…  ಅದೆಲ್ಲಾ ಎಲ್ಲಿ ಮಾಡುತ್ತಾರೆ ಆ ಕುನ್ನಿಗಳು.   ಭ್ರಮೆ, ಕಚಡಾ ಭ್ರಮೆ ಅಷ್ಟೇ ಅದು, ಜಿಗುಪ್ಸೆ ತರುವ ರೊಮ್ಯಾಂಟಿಕ್ಕ್ ಅದ್ಭುತ,  ಫ್ಯಾ೦ಟಸಿ! ಕಪಾಳಕ್ಕೆ…. ಆ ಝ್ವರ್‍ಕೋವ್ ಕಪಾಳಕ್ಕೆ  ಬಾರಿಸಲೇ ಬೇಕು… ಬೇಕು. ಅದೇ ಅನಿವಾರ್ಯ, ಅದೇ ನನ್ನ ತೀರ್ಮಾನ; ಈ ಅಂಬಾರಿ ಸವಾರಿ ಅದಕ್ಕೇ ತಾನೆ…”

“ಹೋಗೋ… ಬೇಗ ಹೋಗೋ. ಹೊಡೀ ಹೊಡೀ ಜಟ್ಕಾ…”

ಆ ಜಟಕಾರಾಜ ಲಗಾಮನ್ನು ಅವಸರವಸರದಲ್ಲಿ ಎಳೆಯಲು ಶುರು ಹಚ್ಚಿಕೊಂಡ.

“ಹೋದ ತಕ್ಷಣವೇ, ಒಂದೆರೆಡು ಸಲ ಉಗಿದು, ಅವನ ಮುಖಕ್ಕೆ ಪೆಟ್ಟುತ್ತೇನೆ… ಇಲ್ಲ…. ಇಲ್ಲ ಸುಮ್ಮನೆ ಹೋಗಿ ಸರಿಯಾಗಿ ಬಿಗಿದು ಬಿಡೋದೇ ಉತ್ತಮ…! ಅವರೆಲ್ಲಾ ಹಾಲಿನಲ್ಲಿ ಕೂತಿರುತ್ತಾರೆ. ಆಮೇಲೆ ಅವನು ಆ ಒಲಂಪಿಯಾ ಜತೆ ಸೋಫಾದಲ್ಲಿ ಬಿದ್ದಿರುತ್ತಾನೆ. ಆ ಹಾಳು ಮುಂಡೆ ಒಲಿಂಪಿಯ! ನನ್ನ ಮುಖ ನೋಡಿ ಕಿಸಿದು, ನನ್ನ ಆಚೆಗೆ ಕಳಿಸಿದ್ದಳಲ್ಲ ಆವತ್ತು… ಆ ಕತ್ತೆ ಲೌಡಿಯ, ಕೂದಲ ಹಿಡಿದು ದರದರ ಎಳೆದು ಮತ್ತೆ  ಝ್ವರ್‍ಕೋವ್‍ನ ಎರಡೂ ಕಿವಿಗಳನ್ನೂ ಹಿಂಡಿ… ಇಲ್ಲ ಎರಡೂ ಬೇಡ, ಒಂದು ಕಿವಿ ಸಾಕು- ಆ ಕಿವಿಯನ್ನೇ ಜಗ್ಗುತ್ತಾ ಆ ಕೋಣೆಯ ಸುತ್ತಲೂ ಅವನನ್ನು ಅಟ್ಟಾಡಿಸುತ್ತೇನೆ.  ಬಹುಶಃ ಆಗ ಅವರೆಲ್ಲ  ಒಟ್ಟಾಗಿ ನನ್ನ ಚಚ್ಚಿ ಹೊರಗೆ ಬಿಸಾಡುತ್ತಾರೆ. ಬಹುಶಃ… ಏನು ಖಡಾಖಂಡಿತವಾಗಿಯೂ ಬಿಸಾಡುತ್ತಾರೆ! ಬಿಸಾಡಲಿ! ಅವರೇನೇ ಮಾಡಿದರೂ ನಾನೇ ತಾನೇ ಮೊದಲು ಅವನಿಗೆ ತಪರಾಕಿ ಬಿಟ್ಟದ್ದು. ಈ ಯುದ್ಧ ಆರಂಭ ಮಾಡೀದ್ದೇ ನಾನು!  LAW OF HONOURಗೆ  ಆ ವಿಷಯ ಮಾತ್ರ ಮುಖ್ಯ ತಾನೇ! ಶುರುಮಾಡುವವನೇ ಜರಗುವ ಘಟನಾವಳಿಗಳ ಅಧಿಪತಿ. ಅವರೆಷ್ಟೇ ಬಡಿದರೂ, ನಾನು ಅವನ ಕಪಾಳಕ್ಕೆ ಬಿಗಿದಿರುವ ಬ್ರಾಂಡ್ ಇಮೇಜನ್ನೂ ಎಂತಹ ಒತ್ತದಿಂದಲೂ ನನ್ನ ಮನಸ್ಸಿಂದ ಅಳಿಸಿ ಹಾಕಲು ಆಗುವುದಿಲ್ಲ. ಅದಕ್ಕೋಸ್ಕರವಾದರೂ ಆ ಪಾಪಿ ನನ್ನ ಕೂಡೇ ಡ್ಯುಯೆಲ್ ಆಡಲು ಸಜ್ಜಾಗಲೇ ಬೇಕು ಆಗ.   ಈಗ ಬೇಕಾದರೇ ಈ ಬೋಳೀಮಕ್ಕಳು  ಭರ್ಜರಿಯಾಗಿ  ಒದೆಯಲಿ ನನ್ನ, ಅವರೇನು ಸಜ್ಜನರಲ್ಲ! ಟ್ರೂಡೋಲಿಬೋವ್ ಅಂತೂ ನಿರ್ದಯವಾಗಿ ಬಡಿಯುತ್ತಾನೆ ನನ್ನ, ಕೇಳುವುದೇ ಬೇಡ, ಮಹಾ ದಾಂಡಿಗನಾತ. ಫರ್‍ಫಿಚ್ಕಿನ್ ಒಂದು ಮೂಲೆ ಸೇರಿಕೊಂಡು ನನ್ನ ಕೂದಲೆಳೆಯುತ್ತಿರುತ್ತಾನೆ. ಎಳೆಯಲಿ… ಎಳೆಯಲಿ! ಆ ಗಂಡಾಂತರಕ್ಕೆ ನಾನು ಸಿದ್ಧನಾಗಿರುವೆ. ನನ್ನನ್ನು ಬಾಗಿಲತನಕ ಅಟ್ಟಾಡಿಸಿಕೊಂಡು ಹೊಡೆದು ಎಳೆಯುವಾಗ ಶಕ್ತಿ ಮೀರಿ ಕೂಗೇ ಕೂಗುತ್ತೇನೆ ನಾನು “ಕಳ್ಳ ನನ್ನ ಮಕ್ಳ, ನೀವ್ಯಾರು ನನ್ನ ಕಿರುಬೆರಳಿಗೂ ಸಮ ಇಲ್ರೋ…!” ಆಗಲಾದರೂ ಆ ಹಂದಿಗಳು ಈ ದುರಂತವನ್ನು ಖಂಡಿತ ಅರಿಯುತ್ತಾರೆ.

“ಬೇಗ… ಬೇಗ… ಜಟಕಾ ಹೊಡಿ… ಬೇಗ!”  ಸವಾರನತ್ತ ಮುಖ ಮಾಡಿ ಕ್ರೂರವಾಗಿ ಕೂಗಿದಾಗ, ಜಟಕಾವಾಲ ಹೆದರಿ ಹಾರಿ ಚಾವಟಿಯಲ್ಲಿ ಆ ಕುದುರೆಗೆ ಬಾರಿಸಿದ, ಅಷ್ಟು ಕ್ರೂರವಾಗಿ ಅರುಚಿದ್ದೆ ನಾನು.

“ನಾಳೆ ಬೆಳ್ಳಂಬೆಳಗ್ಗೆಯೇ ನಮ್ಮ ಕದನ. ನನಗೂ, ನನ್ನ ಸರಕಾರಿ ಕೆಲಸಕ್ಕೂ ಇದ್ದ ಋಣಾನುಬಂಧ ನೆಗೆದು ಬಿದ್ದು ಹೋಗುತ್ತದೆ ಆಗ, ಆಗಲಿ. ಆ ಹಲ್ಕಾ ಫರ್ಫಿಚ್ಕಿನ್ ತಮಾಷೆ ಮಾಡುತ್ತಿದ್ದ ಅಲ್ಲವೇ ನನ್ನ ಕಛೇರಿಯ ಬಗ್ಗೆ ಮಾತನಾಡುತ್ತಾ…  ಆದರೆ ಈ ಪಿಸ್ತೂಲನ್ನು ಎಲ್ಲಿಂದ ತರಲಿ? ಹುಚ್ಚು ಮಾತು! ಮೊದಲೇ ಈ ತಿಂಗಳ ಕೊನೆಗೆ ಸಿಗುವ ಸಂಬಳ ಕೇಳಿ ಖರೀದಿ ಮಾಡುತ್ತೇನೆ ಅಷ್ಟೇ. ಮತ್ತೆ ಮದ್ದುಗುಂಡು? ಏ… ಅದೆಲ್ಲಾ ಮತ್ತೆ, ಆದರೆ ನಾಳೆ ಬೆಳಗ್ಗೆ ಒಳಗೆ  ಇಷ್ಟೆಲ್ಲಾ ಸಿದ್ಧಮಾಡಲು ಸಮಯ  ಎಲ್ಲಿದೆ ನನ್ನ ಬಳಿ? ಡ್ಯುಯೆಲ್‍ಗೆ ಸೆಕೆಂಡ್ ಆಗಿ ಇರಲು ಇನ್ನೊಬ್ಬ  ಬೇಕಲ್ಲ, ಅವನನ್ನು ಈ ರಾತ್ರಿ ಎಲ್ಲಿ ಹುಡುಕಲಿ? ಮೊದಲೇ ಪರಿಚಯದವರು ಯಾರೂ ಇಲ್ಲ ನನಗೆ…  ಒಳ್ಳೇ ಹುಚ್ಚಾಟ ಆಯಿತಲ್ಲ!” ಮಹಾರೋಷದಲ್ಲಿ ನನ್ನನ್ನು ನಾನೇ ಜಾಡಿಸಿಕೊಂಡು  ಕಿರುಚಿದೆ, “ಆಯಿತು ಹುಚ್ಚಾಟವೇ! ಬೀದೀಲಿ ನಾನು ನೋಡೋ ಮೊದಲನೆಯ ವ್ಯಕ್ತಿಯೇ  ನನ್ನ ಸೆಕೆಂಡ್ ಆಗಲೇ ಬೇಕು, ಬೇರೇ ದಾರಿಯಿಲ್ಲ, ನೀರಿನಲ್ಲಿ ಮುಳುಗುತ್ತಿರುವ ಮನುಷ್ಯನನ್ನು ಅನಿವಾರ್ಯವಾಗಿಯಾದರೂ ಮೇಲೆತ್ತುವುದಿಲ್ಲವೇ ಹಾಗೆಯೇ ಇದೂ ಸಹ. ಸಾಯೋ ಆಟ ಆಡೋ ಜೂಜುಗಾರನಿಗಾಗಿಯೇ ಸಾಕ್ಷಿಯೊಂದು ಕೈಗೇ ಸಿಕ್ಕೇ ಸಿಗುತ್ತದೆ  ಇಂತಹ ಸಂಧರ್ಭದಲ್ಲಿ  ಎಣೆಯಿಲ್ಲದ ತಿಕ್ಕಲು-ತಿಕ್ಕಲು ಘಟನೆಗಳು ಘಟಿಸಲೆ ಬೇಕು, ನಾನು ಆಡೋ ಸಾಯೋ ಆಟಕ್ಕೆ ಅಂಪೈರ್ ಕೂಡ ಸಿಗಲೇ ಬೇಕು. ಬೇಕಾದರೆ   ನನ್ನ ವಿಭಾಗದ ಮುಖ್ಯಸ್ಥ ಆಂಟೋನಿಚ್ಚೇ ಇದ್ದಾನಲ್ಲ, ಅವನ ಹತ್ತಿರ ಹೋದರೆ    ಕೆಲಸ ಆದ೦ತೆ.  ಆ ಎದೆಗಾರಿಕೆ ಇದೆ ಆ ಮನುಷ್ಯನಿಗೆ. ಒಪ್ಪೇ ಒಪ್ಪುತ್ತಾನೆ, ಇಲ್ಲಾ ಒಪ್ಪಲೇ ಬೇಕು. ಒಪ್ಪಿ ಈ ಸಂಗತಿಯನ್ನು ರಹಸ್ಯವಾಗಿಡ ಬೇಕು   ಆಂಟೋನಿಚ್…”

ಆದರೆ ವಿನೋದದ ವಿಷಯವೆಂದರೆ ಆ ಕ್ಷಣದಲ್ಲೇ ನನ್ನ ಊಹೆಗಳ ಘೋರ ಅಸಂಗತ ಸ್ಥಿತಿಗಳು ಜಗತ್ತಿನ ಮಿಕ್ಕೆಲ್ಲರಿಗಿಂತಲೂ ನನ್ನ ಮನಸ್ಸಿಗೆ ಸುಸ್ಪಷ್ಟವಾಗಿ ಎದ್ದು ಕಾಣುತ್ತಿದ್ದವು. ನಾಣ್ಯದ ಮತ್ತೊಂದು ಮುಖವು ಸ್ಫುಟವಾಗಿಯೇ ಹೊಳೆಯುತ್ತಿತ್ತು. ಹಾಗಿದ್ದರೂ,

“ಹೊಡಿಯೋ… ಹೊಡಿಯೋ ಜಟ್ಕ  ಗಾಡಿನ, ಸೂಳೆಮಗ್ನೆ… ಓಡ್ಸೋ ಬೇಗ!”

“ರೀ ಸ್ವಾಮೀ…! ಓಡಿಸ್ತಿದ್ದೀನಲ್ಲ…” ಅಂದ ಆ ಮಣ್ಣಿನ ಮಗ.

 ಇದ್ದಕ್ಕಿದ್ದಂತೆ ನನ್ನ  ಮೈಯೆಲ್ಲಾ ಹಾವಿನಂತೆ ಹಬ್ಬುತ್ತಿದ್ದ ಶೀತಗಾಳಿಯ ಅರಿವಾಯಿತು. “ಓಹ್ ನೇರ… ನೇರ ಮನೆಗೆ ಹೋಗೋದು ಒಳ್ಳೇದು ಅಲ್ವಾ…? ಓ ದೇವರೇ! ಯಾಕೆ… ಯಾಕೆ ನಿನ್ನೆ ಈ ಡಿನ್ನರ್‍ಗೆ ಹೋಗೇ ತೀರುತ್ತೀನಿ ಅಂತ ಹಟ ಮಾಡಿದೆ! ಆದರೆ ಇಲ್ಲ… ಎಲ್ಲಾ ಬಿಟ್ಟು ಮತ್ತೆ ಮರಳಿ ಮನೆಗೆ  ಹೋಗಲು  ಸಾಧ್ಯವಿಲ್ಲ! …ಮತ್ತೆ ಮೂರು ಘಂಟೆ ನಡೆದದ್ದು… ಆ ಮೂಲೆಯಿಂದ ಈ ಮೂಲೆಗೆ? ಅವರೇ ಅವರೇ, ನಾನಷ್ಟು ನಡೆದಿದಕ್ಕೆ, ನನ್ನ ಮನಸ್ಸಿಗಾದ ಏಟಿಗೆಲ್ಲ ಅವರೇ ಪರಿಹಾರ ಕೊಡಬೇಕು! ಆ ನಿಂದನೆಯ ಕಲೆಯನ್ನು ಅವರೇ ತೊಳೆಯಬೇಕು!”

 “ಬೇಗ ಓಡ್ಸೋ..!”

ಆದರೆ ಅವರು ನನ್ನನ್ನು ಪೆÇೀಲಿಸರಿಗೆ ಹಿಡಿದು ಕೊಟ್ಟರೆ? ಇಲ್ಲಾ ಅಷ್ಟೆಲ್ಲಾ ಧೈರ್ಯ ಮಾಡಲ್ಲ ಅವರು! ಗುಲ್ಲು ಹಬ್ಬಿದರೆ ಅನ್ನೋ ಭಯವಿದೆ ಅವರಿಗೆ. ಆದರೆ ಝ್ವರ್‍ಕೋವ್ ನನ್ನನ್ನು ಇನ್ನೂ ನಿಂದಿಸಲು ಈ ಸವಾಲನ್ನು ಸ್ವೀಕರಿಸದೇ ಹೋದರೆ? ಹೌದು ಅವನು ಖಂಡಿತಾ ಹಾಗೆ ಮಾಡುತ್ತಾನೆ. ಆ ಥರ ಆದರೂ ಆಗ   ನಾನು ಈ ಮಕ್ಕಳಿಗೆ ನನ್ನ ಶಕ್ತಿಯ ಆಳ ಎಷ್ಟಿದೆ ಎಂದು ತೋರಿಸೇ ತೋರಿಸುತ್ತೇನೆ. ಅವನು ಯಾವ ಊರಿಗೆ ದೊಡ್ಡ ನೌಕರಿಗೆ ಅಂತ ಹೋಗುತ್ತಾ ಇದ್ದನೋ ಆ ಊರಿನ ರೈಲು ಹತ್ತುವಾಗ ಅವನ ಕಾಲು ಹಿಡಿದು ಬೀಳಿಸಿ ಅವನ ಕೋಟನ್ನ ಹರಿದು, ಅವನು ಮತ್ತೆ ಬೋಗಿ ಒಳಕ್ಕೆ ನುಗ್ಗಲ್ಲಿಕ್ಕೆ ಪ್ರಯತ್ನ ಮಾಡುವಾಗಲೇ, ಅವನ ಕೈ ಬೆರಳುಗಳಿಗೆ ನನ್ನ ಹಲ್ಲುಗಳನ್ನು ಬಲವಾಗಿ ಇಳಿಸಿ, ಆಳವಾಗಿ ಕಚ್ಚಿಚ್ಚ್ಚ್ಚ್ಚಿ ಕಿರುಚುತ್ತೇನೆ, ‘ನೋಡಿದ್ರಾ, ಯಾವ ತುದಿ ತನಕ ನೀವು ಒಬ್ಬ ಹತಾಶ ಮನುಷ್ಯನ್ನ ನೂಕಿದ್ರಿ ಅಂತ!’ ಆಗ ಆತ  ನನ್ನ ತಲೇಗೆ ಚಚ್ಚುವ; ಅದೇ ಸಮಯಕ್ಕೆ ಮಿಕ್ಕವರೆಲ್ಲ ನನ್ನ ಬೆನ್ನು, ಕತ್ತು, ಜುಟ್ಟು ಹಿಡಿದು ಎಳೆದು ಬಾರಿಸೋವಾಗ ಅಲ್ಲಿ ತಮಾಷೆ ನೋಡಲು ನೆರೆಯೋ ಗುಂಪನ್ನೇ ಕೆಕ್ಕರಿಸುತ್ತಾ   ಕೂಗುತ್ತೇನೆ, ‘ಸರ್ಕಾಸಿಯನ್ ಹುಡುಗಿರ ಜತೆ ಲಲ್ಲೆ ಹೊಡೆಯಲು ಹೊರಟಿರುವ     ಈ ಯುವ ಕುನ್ನಿ. ಈಗ ನನ್ನ ಎಂಜಲು ಅವನ ಮೋರೆಯಿಂದ ಇಳಿತಾ ಇದೆ, ಈ ಯುವ ಕುನ್ನಿಯ ನೋಡಿರಯ್ಯಾ…!”

ಹೌದೌದು… ಇದಾದ ಮೇಲೆ ಎಲ್ಲ ಖತಂ! ನನ್ನ ಆಫಿûೀಸು, ನನ್ನ ಡಿರ್ಪಾಟ್‍ಮೆಂಟು, ಈ ಭೂಮಿ ಮೇಲಿಂದಲೇ ಮಾಯ!  ನಾನಗ ಅರೆಶ್ಟಾಗಿ ಅವರ ಖೈದಿ! ನನ್ನ  ನೌಕರಿಯ ಗತಿ ಗೋವಿಂದ! ಜೈಲಲ್ಲಿ ಜಟ್ಕಾ ಹೊಡೀತ ಕೂತಿರೋ ನನ್ನ ಕೊನೆಗೆ  ಸೈಬೀರಿಯಕ್ಕೆ ಗಡಿಪಾರು ಮಾಡೇ ಬಿಡುತ್ತಾರೆ! ಇಷ್ಟಾದರೂ ನಾನು ಮಾತ್ರ ಚೂರೂ ತಲೆ ಕೆಡಿಸಿಕೊಳ್ಳಲ್ಲ! ಹದಿನೈದು ವರುಷ ಆದ ಮೇಲೆ ನಾನು ಬಿಡುಗಡೆಯಾಗುತ್ತೇನಲ್ಲ ಆಗ, ಹರಕಲು ಬಟ್ಟೆಯಲ್ಲಿ ಭಿಕ್ಷುಕನ ಹಾಗೆ ಬದುಕುತ್ತಾ ಇದ್ದರೂ ಅವನನ್ನು ಹಿಂಬಾಲಿಸುತ್ತೇನೆ ನಾನು. ಯಾವುದೋ ಒಂದು ಮಹಾನಗರದಲ್ಲಿ ಆತನನ್ನು ಪತ್ತೆ ಕೂಡ ಹಚ್ಚುತ್ತೇನೆ. ಅವನಿಗೊಬ್ಬಳು ಬೆಳೆದು ನಿಂತ ಮಗಳಿರುತ್ತಾಳೆ ಆಗ.  ಒಂದು ದಿನ ಹೊಂಚು ಹಾಕಿ, ಅವನ ಮನೆ ಕದಕ್ಕೆ ಒದ್ದು, ನುಗ್ಗಿ, ಅವನ ಜುಟ್ಟಿ ಹಿಡಿದು ಬೊಬ್ಬೆ ಹಾಕುವೆ ನಾನು, ‘ನೋಡೋ ಇಲ್ಲಿ ರಾಕ್ಷಸನೇ, ನನ್ನ ಬತ್ತಿದ ಕೆನ್ನೆಯ ನೋಡೀದ್ಯಾ… ನನ್ನ ಹರಕಲು ಬಟ್ಟೆಯ ನೋಡಿದ್ಯಾ, ನನ್ನ ಅಲೆಮಾರಿ ಬದುಕ ನೋಡಿದ್ಯಾ, ಎಲ್ಲವೂ ಖತಂ, ನನ್ನ ಜೀವನವೇ ಖತಂ!   ನನ್ನ ನೌಕರಿ, ನನ್ನ ಪ್ರಮೋಷನ್ನು, ನನ್ನ ಯೌವನದ ಶಕ್ತಿ, ತೇಜಸ್ಸು ಸಾಧನೆಗಳೂ ಖತಂ… ನನ್ನ ಸಂತೋಷ,  ನನ್ನ ಕಲೆ, ನನ್ನ ವಿಜ್ಞಾನ, ನಾನು ಪ್ರೀತಿಸುತ್ತಿದ್ದ ಹೆಣ್ಣು ಎಲ್ಲವೂ ಕಾಲದ ಜತೆ ತೂರಿ ಹೋಯ್ತಲ್ಲೋ…!- ಎಲ್ಲಾ ಆದದ್ದು ನಿನ್ನಿಂದಲೇ, ನೋಡ್ ಇಲ್ಲಿ ಬಂದೂಕುಗಳು… ಈ  ನನ್ನ ಬಂದೂಕುನ್ನು ವಿಸರ್ಜಿಸಲೆಂದು ಬಂದೆ ಇಲ್ಲಿ ಹಾಗೇ  ನಿನ್ನ ನಾನು… ಕ್ಷಮಿಸಿದ್ದೇನೆ…. ಹೌದು ಕಣೋ ಮನೆಹಾಳ ಬಡ್ಡಿಮಗನೇ ಕ್ಷಮಿಸಿದ್ದೀನಿ ನಿನ್ನ ನಾನು’ ಆಮೇಲೆ   ಗಾಳಿಯಲ್ಲಿ ಢಮಾರ್ ಅಂತ ಗುಂಡು ಹಾರಿಸಿ ಮಾಯವಾಗಿ  ಬಿಡುವೆ, ಆ ನಂತರ ಯಾವ ನರಪಿಳ್ಳೆಗೂ ಕಾಣದಂತೆ…”

 ಈ ಕಲ್ಪನೆಗಳೆಲ್ಲಾ ಪುಷ್ಕಿನ್‍ನ ಸಿಲ್ವಿಯೋ ಹಾಗೂ ಲೆಮಾಂಟೋನ ಮಸ್ಕರೇಡಿ ಕಾವ್ಯಗಳಿಂದ ಹೆಕ್ಕಿದ್ದು ಎಂದು ನನಗೆ ಅರಿವಿದ್ದರೂ ಇನ್ನೇನು  ನಾನು ಭಾವಪರವಶನಾಗಿ ಕಣ್ಣೀರು ಸುರಿಸುವುದರಲ್ಲಿದ್ದೆ! ಏನಾಯಿತೋ ಏನೋ ಇದ್ದಕ್ಕಿದಂತೆ ನಾನು ಭಯಾನಕವಾಗಿ ನಾಚಿ, ಗಾಡಿಯಿಂದ ಕೆಳಕ್ಕೆ ಜಿಗಿದು   ಹಿಮದಲ್ಲಿ ನಿಂತು ಬಿಟ್ಟೆ. ಹಾದಿಯ ಮಧ್ಯದಲ್ಲಿ ಜೋರಾಗಿ ಲಗಾಮು ಹಿಡಿದು ಗಾಡಿಯನ್ನು ನಿಲ್ಲಿಸಿದ ಜಟಕಾ ರಾಜ ಏದುಸಿರು ಬಿಡುತ್ತಾ ಅಚ್ಚರಿಯಲ್ಲಿ ನನ್ನ ನೋಡಿದ.

“ಏನ್ ಮಾಡೋದು ಈಗ… ಏನ್ ಮಾಡೋದು ಈಗ ಅಯ್ಯೋ ಅಯ್ಯೋ! ಅಲ್ಲೂ ಹೋಗಕ್ಕೆ ಆಗ್ತಾ ಇಲ್ಲ, ಹೋದ್ರಂತೂ ಅಲ್ಲಿ ಹುಚ್ಚಿನ ರಂಪಾಟ ಆಗುತ್ತೇ; ಹಾಗಂತ ಈ ವಿಷಯನ ಇಲ್ಲೇ ಬಿಡೋದಕ್ಕೂ ಆಗ್ತಾ ಇಲ್ವಲ್ಲ ದೇವ್ರೇ! ಓಹ್ ದೇವ್ರೇ! ಹೇಗೆ ಬಿಡೋದು… ಹೇಗಪ್ಪಾ ಬಿಡೋದೂ! ಇಷ್ಟೇಲ್ಲ ಅವ್ಮಾನ ಮಾಡಿಸ್ಕಂಡು  ಇಲ್ಲಾ, ಇಲ್ಲ!” ಮತ್ತೆ ಜಟಕಾಗಾಡಿಯೊಳಗೆ ಚಿಮ್ಮುತ್ತಾ ನಾನು ಕಿರುಚಿದ್ದೆ. ಇದೆಲ್ಲಾ ಪೂರ್ವನಿರ್ಧರಿತ! ಇದೇ ವಿಧಿ… ಇದೇ ಹಣೆಬರಹ! ಇದೇ ನನ್ನ ಕರ್ಮ ಬೇಗ…ಬೇಗ ಆ ಜಾಗಕ್ಕೆ… ಬೇಗ!

    ಹಾಗೇ ತಾಳ್ಮೆಗೆಟ್ಟು ಜಟಕಾ ಸವಾರನ ಗೋಣಿಗೆ ನನ್ನ ಮುಷ್ಟಿಯಿಂದ ಗುದ್ದಿದೆ.

 “ಅಯ್ಯೋ! ಏನ್ ಸಮಸ್ಯೆ ಸ್ವಾಮಿ? ಯಾಕ್ ಕಾಲ್ ಕೆರ್ಕಂಡ್ ಜಗಳಕ್ಕೇ ಬರ್ತೀರಲ್ಲಾ?,” ಪಾಪ ಬಡ ಮುದಿರೈತ ಅರುಚಿದ, ಚಾವಟಿಯಲ್ಲಿ ಅವನ ಕುದುರೆಗೆ ಬಾರಿಸುತ್ತಾ. ಆ ನೋವು ತಾಳಲಾರದೆ ಅದು ತನ್ನ ಹಿಮ್ಮಡಿಯನ್ನೇ ಹಾರಿ ಹಾರಿಸಿ ಪೇರಿ ಕಿತ್ತಿತ್ತು. ಒದ್ದೆ ಮಂಜು ಹಿಮವಾಗಿ ಪರಿವರ್ತನೆಯಾಗುವ ಸಮಯ. ಆ ಪದರಗಳನ್ನೆಲ್ಲ ನನ್ನ ಮೇಲೆ ಬೀಳ ಬಿಟ್ಟೆ. ಆಗ ತೀಕ್ಷ್ಣವಾಗಿ ಶೀತವಾಯು ಚಳಿಯ ರೂಪದಲ್ಲಿ ನನ್ನ ಚರ್ಮದೊಳಗೆ ಇಳಿಯುತಿತ್ತು. ಆದರೂ ಈ ಆಘಾತಗಳಿಗೆಲ್ಲ ಗಮನ ಕೊಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಎಲ್ಲ ಮರೆತಿದ್ದೆ. ಅಳಿಯುವ ಮುನ್ನವಾದರೂ ನಾನು ಆ ಧೂರ್ತನ ಕಪಾಳಕ್ಕೆ ಬಿಗಿದೇ ಬಿಗಿಯುತ್ತೇನೆಂದು ನಿಶ್ಚಯಿಸಿದ್ದೆ. ಈಗ ಅಳಿಯುವ ಕಾಲ ಬಂದೇ ಬಿಡುತ್ತಿದೆ. ಹಾಗಾದರೆ  ಅವನ ಕಪಾಳಕ್ಕೆ ಬಾರಿಸೋ ಆ ಘಳಿಗೆ ಹತ್ತಿರವಾಗುತ್ತಿದೆ, ಭೂಮಿಯ ಮೇಲಿನ ಎಂತಹ ಶಕ್ತಿಮೇಳಗಳೂ ಈ ಕರ್ಮ ನೆರವೇರುವವರೆಗೂ ನನ್ನ ಬೂದಿಯಾಗಿಸಲಾರವು.  ನಾವು ಕತ್ತಲ ಹಿಮವನ್ನು ಸೀಳಿಕೊಂಡು ಹೋಗುತಿದ್ದಾಗ  ಶವಸಂಸ್ಕಾರಕ್ಕಿರುವ ಪಂಜಿನಂತೆ ಬೀದಿ ದೀಪಗಳು ಏಕಾಂಗಿಯಾಗಿ ಖಿನ್ನತೆಯಲ್ಲಿ ಮಿಂಚಿದವು. ನನ್ನ ಓವರ್‍ಕೋಟು ಸಂಪೂರ್ಣವಾಗಿ ಹಿಮಾವೃತವಾಗಿತ್ತು. ಅದರೊಳಗೂ ಮಂಜು ನುಗ್ಗಿತ್ತು. ನನ್ನ ಜಾಕೆಟ್ಟಿನ ಒಳಗೂ ಹಾಗೂ ನನ್ನ ಟೈಯ ಕೆಳಗೂ ಹಿಮ ನುಸುಳಿ, ಕರಗುತ್ತಿತ್ತು. ನನ್ನನ್ನು ನಾನೇ ಬೆಚ್ಚಗಿರಸಲು ಮರೆತಿದ್ದೆ. “ಸಾಯ್ಲೀ! ಏನೇ ಆದ್ರೂ ಎಲ್ಲ ಬೇಗ ಖತಂ ಆಗುತ್ತೇ ಅಲ್ವಾ!”

ಕೊನೆಗೂ ಆ ಬಾಗಿಲ ಬುಡಕ್ಕೆ ಬಂತು ನಮ್ಮ ಅಂಬಾರಿ. ನಾನು ಏನು ಮಾಡುತ್ತಿದ್ದೇನೆ ಎನ್ನುವ ಪರಿಜ್ಞಾನವಿಲ್ಲದೆಯೇ ಹೊರನೆಗೆದೆ. ಆ ಮೆಟ್ಟಿಲುಗಳ ಇಳಿದು, ನನ್ನ ಕೈ ಕಾಲುಗಳಿಂದ  ಬಾಗಿಲ ಬಡಿಯತೊಡಗಿದೆ. ನನ್ನ ಕಾಲುಗಳು, ಮುಖ್ಯವಾಗಿ ನನ್ನ ಮಂಡಿಗಳು, ಭಯಾನಕವಾಗಿ ಬಲಹೀನವಾದಂತೆ ನಡುಗಿದ್ದವು. ಆಗ ಆ ಬಾಗಿಲು ತಕ್ಷಣ ತೆರೆಯಿತು; ಅವರಿಗೆ ನಾನು ಬರುತ್ತಿರುವ ಸುಳಿವಿತ್ತು ಎನ್ನುವಂತೆ! (ಬಹಶಃ ಸೈಮೊನವ್ ಇನ್ನೂ ಒಬ್ಬ ಬರಲಿಕ್ಕಿದಾನೆ ಎಂದವರಿಗೆ ಮೊದಲೇ ಹೇಳಿರಬೇಕು. ಸಾಮಾನ್ಯರಿಗೆ ಇದೊಂದು ಬಟ್ಟೆಯಂಗಡಿ. ವಿಶೇಷ ವ್ಯಕ್ತಿಗಳು ವಿಶೇಷ ಶಿ¥sóÁರಿಸಿನ ಮೇರೆಗೆ ಮಾತ್ರ ಸಂಜೆ ಇಲ್ಲಿಗೆ ಭೇಟಿನೀಡಬಹುದು. ಬಹಳ ಕಾಲದ ಹಿಂದೆಯೇ ಈ ವ್ಯಾಪಾರವನ್ನು  ಪೋಲಿಸರು ರದ್ದು ಮಾಡಿದ್ದರು.) ವೇಗವಾಗಿ ಹಾರಿದೆ ಒಳಗೆ. ಆ ಕಪ್ಪು ಅಂಗಡಿಯ ದಾಟಿ ಹಜಾರದೊಳಗೆ ನುಗ್ಗಿದೆ,  ಪರಿಚಿತ ಸ್ಥಳವದು. ಒಂದೇ ಒಂದು ಮೇಣದ ಬತ್ತಿ ಉರಿಯುತ್ತಿತ್ತು. ನಿಬ್ಬೆರಗಾಗಿ ನಿಂತೆ, ಅಲ್ಲಿ ಯಾರೂ ಇರಲಿಲ್ಲ.

“ಎಲ್ಲಿ ಅವರು?” ಯಾರನ್ನೋ ಕೇಳಿದೆ. ಅದರೆ ಅಷ್ಟೊತ್ತಿಗಾಗಲೇ ಅವರೆಲ್ಲಾ ಹೋಗಿ ಆಗಿತ್ತು.

  ಪೆದ್ದು ನಗುವಿನಲ್ಲಿ ಒಬ್ಬಳು ನನ್ನ ಕಡೆ       ಬಂದಳು. ಅವಳೇ ಇದರ ಮಾಲಕಿ, ನನ್ನ ಅಲ್ಪ ಪರಿಚಯ ಅವಳಗಿತ್ತು. ಒಂದು ನಿಮಿಷದ ತರುವಾಯ ಇನ್ನೊಂದು ಕೋಣೆಯ ಬಾಗಿಲು ತೆರೆಯಿತು. ಯಾರೋ ಒಳ ಬಂದರು. ಆದರೆ ನಾನು ಅಲ್ಲೇ ಯಾವುದಕ್ಕೂ ಮನಸ್ಸುಕೊಡದೆ ಶತಪಥ ಹಾಕುತಿದ್ದೆ; ಬಹುಶಃ ನನ್ನಷ್ಟಕ್ಕೆ ನಾನೇ ಮಾತನಾಡುತ್ತಿದ್ದೆ ಎನಿಸುತ್ತದೆ. ಸಾವಿನಿಂದ ಬಚಾವಗಿ ಅದನ್ನು ಅರಿತು ಆನಂದಿಸುವಂತೆ ನಾನು ಖುಷಿಯಲ್ಲಿದ್ದೆ. “ಖಂಡಿತಾ ಖಂಡಿತಾ, ಅವನ ಕಪಾಳಕ್ಕೆ ಬಿಗಿತಾ ಇದ್ದೆ! ಗುಮಾನಿಯೇ ಬೇಡ. ಆದರೆ ಅವರೇ ಮಾಯ! ಎಲ್ಲವೂ ಮಾಯಾ… ಎಲ್ಲವೂ ಮಾಯ!” ನಾನು ಸುತ್ತಲೂ ನೋಡಿದೆ. ಇನ್ನೂ ನನ್ನ ಇಂದ್ರಿಯಗಳು ಗೊಂದಲದಲ್ಲಿದ್ದವು. ಯಾಂತ್ರಿಕವಾಗಿ ಆಗಷ್ಟೇ ಆಗಮಿಸಿದ ಹುಡುಗಿಯತ್ತ ದೃಷ್ಟಿ ಹಾಯಿಸಿದೆ. ತಾಜಾ, ಯೌವನ ತುಂಬಿದ, ಮಂಕಾದ ಮೋರೆಯ ನೇರ ಗಾಢ ಹುಬ್ಬಿನ ಹುಡುಗಿ. ಅವಳ ನೋಟದಲ್ಲಿ ಸ್ಮಶಾನದ ಅಚ್ಚರಿಯಿತ್ತು. ಆ ಭಾವ ತಕ್ಷಣವೇ ಇಷ್ಟವಾಯಿತು ನನಗೆ. ಅವಳೇನಾದರೂ ನಕ್ಕಿದ್ದರೆ ಆಗಲೇ ನನ್ನೊಳಗಿನ ಸೇಡಿನ ಹಕ್ಕಿ ಊಳಿಟ್ಟು ಬಿಡುತಿತ್ತು. ಆದರೆ ಅವಳು ನಗಲಿಲ್ಲ. ಇನ್ನೂ ಆಳವಾಗಿ  ನೋಡಿದೆ, ಪ್ರಯಾಸ ಪಟ್ಟು ನೋಡುವಂತೆ. ನೇರ, ದಿಟ್ಟ ಕರುಣಾಮಯಿ ಮುಖವದು. ಹಾಗೆಯೇ ವಿಚಿತ್ರವಾದ ಗಾಂಭೀರ್ಯತೆಯೂ ಅಲ್ಲಿತ್ತು. ಆದರೆ ಈ ಗುಣಗಳೇ ಅವಳಿಗೆ ಮಾರಕ, ಅದು ನನಗೆ ಹೇಗೋ ಖಚಿತವಾಗಿ ತಿಳಿದಿತ್ತು.   ಅಲ್ಲಿಗೆ ಬರುವ ಪೆದ್ದರ್ಯಾರಿಗೂ ಈ ಬೆಡಗಿಯ ಸೌಂದರ್ಯದ ಅರಿವಿರಲಿಕ್ಕಿಲ್ಲ.  ತುಂಬಾ ಸರಳವಾಗಿ ತಯ್ಯಾರಾಗಿದ್ದ  ಹುಡುಗಿಯದು. ಉದ್ದಕ್ಕೆ  ಚೆನ್ನಾಗಿ ಬೆಳೆದಿದ್ದರೂ ಚೆಲುವೆ ಎನ್ನಲೂ ಆಗದು ಅವಳನ್ನು.  ಕೊಳಕಾದ ಕೇಡೊಂದು ಮೆಟ್ಟಿಕೊಂಡಿತು ನನ್ನ. ಅವಳ ಬಳಿ ಸಾರಿದೆ.

ಅಕಸ್ಮಾತ್ತಾಗಿ ನನ್ನ ಬಿಂಬವ ಕನ್ನಡಿಯಲ್ಲಿ ಕಂಡೆ. ಅಲ್ಲಿ ಕಂಡ ಕಲಕಿದ ಮುಖ ಸಂಪೂರ್ಣವಾಗಿ ಪ್ರಕ್ಷುಬ್ಧವಾಗಿ ನನಗೇ ವಾಕರಿಕೆ   ತರಿಸುತ್ತಿತ್ತು. ವಿವರ್ಣವಾಗಿ, ಕೋಪದಲ್ಲಿ, ಸ್ವಾರ್ಥದಲ್ಲಿ ಅದ್ದಿ ಹೋಗಿ, ಕೂದಲು ಕೆದರಿಕೊಂಡು. “ಪರ್ವಾಗಿಲ್ಲ, ಏನೂ ಬಿದ್ದು ಹೋಗ್ಲಿಲ್ಲ, ಈ ಥರ ಇದ್ರೆ ನಾನು…  ಹೌದು ಹೇಸಿಗೆ ಹುಟ್ಸೋ ಮುಖ ನಂದು, ಅವಳೂ ನನ್ನ ಹೇಸಿಗೆಲೇ ಕಾಣ್ತಾಳೇ ಅದಕ್ಕೇ ನನಗೆ ಖುಷಿ… ಹೌದು ಅದರಲ್ಲೇ ನನಗೆ ಖುಷಿ…”

6

ಎಲ್ಲೋ ಪರದೆಯ ಹಿಂದೆ ಗಡಿಯಾರವೊಂದು ಸೂಲು ಬಿಡುತಿತ್ತು; ಯಾರೋ ನೀರಿನಲ್ಲಿ ನಿಮ್ಮ ಮುಖವನ್ನು ದಬಾಯಿಸಿ ಮುಳುಗಿಸುತ್ತಿರುವಾಗ, ಉಸಿರುಕಟ್ಟಿ, ಗಾಳಿಯಿಲ್ಲದೆ ನಿಮ್ಮ ಬಡಿಯುತ್ತಿರುವ ಕೈ ನಿಧಾನಕ್ಕೆ ಜೀವ ಕಳೆದುಕೊಳ್ಳುವಂತೆ, ಯಾರೋ ಕುತ್ತಿಗೆ ಹಿಚುಕುತ್ತಿರುವಂತೆ. ಉದ್ದದ ವಿಲಕ್ಷಣ ಉಬ್ಬಸದ ನಂತರ ಕ್ಷುದ್ರವಾಗಿ ಎರಡು ಗಂಟೆಯೆಂದು ಹೊಡೆದುಕೊಳ್ಳುತ್ತಿತ್ತು. ನನಗೆ ಎಚ್ಚರವಾದದ್ದು ಆಗ. ಹಾಗಂತೆ ಇಷ್ಟೊತ್ತು ನಾನೇನು ಒಳ್ಳೆ ನಿದ್ದೆಯಲ್ಲಿರಲೇ ಇಲ್ಲ. ಅರ್ಧಬಂರ್ಧ ಜ್ಞಾನದಲ್ಲಿ ಹಾಗೇ ಬಿದ್ದಿದ್ದೆ ಅಷ್ಟೇ.

   ಆ ಕಿರಿದಾದ, ತಗ್ಗಿದ ಮಾಳಿಗೆಯ ಮನೆಯನ್ನು, ದೊಡ್ಡದೊಂದು ಬಟ್ಟೆಯ ಕಪಾಟು ಅದರ ಜತೆಗೆ ಪೆಟ್ಟಿಗೆಗಳು, ಚಿಂದಿ ಬಟ್ಟೆಗಳು, ಬಗೆಬಗೆಯ ಹೆಣ್ಣು  ಮಕ್ಕಳ ರಾಶಿ ಬಟ್ಟೆಗಳ ಚೂರುಪಾರುಗಳು, ಅದೂ ಇದೂ ಹಾಳುಮೂಳು ಕಸಗಳೇ ಮುಳುಗಿಸಿತ್ತು. ಮೇಜಿನ ಮೇಲೆ ಉರಿಯುತ್ತಿದ್ದ ಮೋಂಬತ್ತಿಯ ಮಿಣುಕು ಬೆಳಕು ಆಗಾಗ ಕಂಪಿಸುತ್ತಿತ್ತು.  ಇಡೀ ಕೋಣೆಯೇ ಆಳವಾಗಿ  ಕತ್ತಲಾಗುವ ಹೊತ್ತದು.

ಎಚ್ಚರಾಗಲು ಹೆಚ್ಚು  ಸಮಯ ಹಿಡಿಯಲಿಲ್ಲ. ನನ್ನ ಇಂದ್ರಿಯಗಳು ಜಾಗೃತವಾದವು.   ಇಷ್ಟು ಹೊತ್ತು ಇಲ್ಲೇ ಹೊಂಚು ಹಾಕಿ ಈಗ ಮತ್ತೆ  ಚಿರತೆಯಂತೆ ನನ್ನ  ಮೇಲೆರಗಲು ಕಾಯುತಿದ್ದ ಪ್ರತಿ ವಿಷಯಗಳು ನನ್ನ ಮನಸ್ಸಿನಲ್ಲಿ ಮಿಂಚಿದ್ದವು. ಹಾಗಿದ್ದರೂ, ನಾನು ಜ್ಞಾನವಿಲ್ಲದೆ ಅಲ್ಲಿ ಬಿದ್ದಿದ್ದಾಗಲೂ ಯಾವುದೋ ಒಂದು ಮರೆಯಲಾಗದಂತಹ ಅರಿವು ನನ್ನ ನೆನಪಿನಲ್ಲಿ ಅಚ್ಚೊತ್ತಿತ್ತು. ಇದರ ಸುತ್ತವೇ ನನ್ನ ಗಾಢ ಸ್ವಪ್ನಗಳು ಹಠ ಹಿಡಿದು ಪ್ರದಕ್ಷಿಣೆ ಹಾಕುತ್ತಿದ್ದುದು.  ಆದರೆ, ವಿಚಿತ್ರವೆಂದರೆ ನಾನು ಏಳುತ್ತಿದ್ದಂತೆ, ಈ ದಿನದ ಅನುಭವಗಳೆಲ್ಲಾ ಬಹಳ  ಕಾಲದ ಹಿಂದೆಯೇ ನಾನು ಬದುಕಿ ಬಿಟ್ಟಂತೆ  ಅನ್ನಿಸಿಯೂ ಇತ್ತು.

ತಲೆಯೊಳಗೆ ಹೊಗೆ ತುಂಬಿದಂತೆ ಅನಿಸಿಕೆ; ನನ್ನ ಮೇಲೇನೋ ಹಾರುತ್ತಾ, ಹಾರುತ್ತಾ ಉಜ್ಜುತ್ತಿರವಂತಹ ಭಾವನೆಯಿಂದ ನಡುಗಿ ಗಾಬರಿಯಾದೆ. ವ್ಯಥೆ ಮತ್ತು ಪಿತ್ತ ಒಳಗೆ ಮತ್ತೆ-ಮತ್ತೆ ಹೊತ್ತಿಕೊಂಡು ಆಚೆ ಹಾರಲು ಹವಣಿಸುತ್ತಿದ್ದವು. ಎರಡು ಅಗಲವಾಗಿ ತೆರೆದಿದ್ದ ಕಣ್ಣುಗಳು, ಆಳವಾದ ಕುತೂಹಲದಿಂದ ನನ್ನನ್ನು ಓದುತ್ತಿತ್ತು.   ಖಿನ್ನ ನಿರ್ಲಿಪ್ತತೆಯ ತಣ್ಣಗಿನ ಆ ಅನ್ಯ ನೋಟದಿಂದ ನಾನು ಪ್ರಕ್ಷುಬ್ಧನಾದೆ.

ಆ ಅಪರಿಚಿತ ಕಣ್ಣುಗಳಿಂದ ಒಂದು ಉದ್ವಿಗ್ನ ಆಲೋಚನೆ ನನ್ನ ತಲೆಯಲ್ಲಿ ನುಸುಳಿ, ನನ್ನ ದೇಹವನ್ನು ಸುಟ್ಟು ಒಳಗೆ ತೂರಿತು, ಒಬ್ಬ ಒದ್ದೆಯಾಗಿರುವ ಹಳಸಲು ನೆಲಮಾಳಿಗೆಯೊಳಗೆ ಅಡಿಯಿಟ್ಟಾಗ ಅನುಭವಿಸುವ ಹೊಲಸು ಕೋಲಾಹಲದಂತೆ. ಆ ಕಣ್ಣುಗಳು ಈಗಷ್ಟೇ ನನ್ನನ್ನು ಪರೀಕ್ಷಿಸಲು ಶುರು ಮಾಡಿದ್ದು ಸಹ ಇನ್ನೊಂದು ವಿಚಿತ್ರವೇ. ಎರಡು ಘಂಟೆಗಳಿಂದ ನಾನು ಈ ಜೀವಿಯ ಜತೆ ಒಂದೂ ಪದ ಮಾತಾಡಿಲ್ಲ ಎನ್ನುವುದೂ ಈಗ ನೆನೆಪಾಯಿತು. ಮತ್ತೆ ನನಗೆ ಮಾತನಾಡಬೇಕು ಎಂದೂ ಅನ್ನಿಸಿರಲಿಲ್ಲ ಬಿಡಿ.  ಸ್ವಲ್ಪ ಸಮಯದ ಹಿಂದೆ ಏಕೋ ಹೀಗೇ ಇರುವುದು ಇಷ್ಟವಾಗಿತ್ತು ನನಗೆ. ಆದರೆ ಇದ್ದಕ್ಕಿದಂತೆ ನನ್ನೊಳಗೆ   ಸ್ಫುಟವಾಗಿದ್ದ ಆಲೋಚನೆಯೊಂದು ಎದ್ದಿತು. ಇದು ಜೇಡದಂತೆ  ಅಸಂಗತ ಹಾಗೂ ಹೇಸಿಗೆ. ಆದರೆ   ಪ್ರೇಮವಿಲ್ಲದೆ  ಪಾಪದಲ್ಲಿ ಶುರುವಾಗುವ ಈ ನಾಚಿಕೆಗೆಟ್ಟ ಕಚ್ಚಾ ಕ್ರಿಯಾವಳಿಯಲ್ಲಿ ನಿಜಪ್ರೀತಿ  ಪರಿಪೂರ್ಣವಾಗುವುದು. ನಾವಿಬ್ಬರೂ ಬಹಳಕಾಲ ಹಾಗೆ ಇದ್ದೆವು, ಒಬ್ಬರನ್ನೊಬ್ಬರು ಬತ್ತಿ ಹೋಗುತ್ತಿರುವ ದೀಪದ ಬೆಳಕಲ್ಲಿ ನೋಡುತ್ತಾ. ನನ್ನ ಕಣ್ಣಲ್ಲಿ, ಕಣ್ಣಿಟ್ಟಾಗ ಅಪ್ಪಿ-ತಪ್ಪಿಯೂ ತನ್ನ ದೃಷ್ಟಿ ತಗ್ಗಿಸಲಿಲ್ಲ ಅವಳು. ಆ ಮುಖದ ಭಾವ  ಚೂರೂ  ಕದಲದೇ ಹಾಗೆಯೇ ಮಸುಕಿನಲ್ಲಿ ಹೊಳೆದಿತ್ತು, ಸತ್ತ ಖಳೆಯಲ್ಲಿ. ಅದಕ್ಕೇ ಏನೋ ಸ್ವಲ್ಪ ಹೊತ್ತಿನ ನಂತರ  ಹಠಾತ್ತಾಗಿ ನನ್ನ ಮನಸ್ಸು ಕೆಟ್ಟಿತು.

“ಏನೇ ನಿನ್ ಹೆಸ್ರು?”  ಇವೆಲ್ಲದ್ದಕ್ಕೂ ಬೇಗನೆ ಇತಿಶ್ರೀ ಹಾಡಲೆಂದೇ ಬಿಗುಮಾನದಿಂದ ಕೇಳಿದೆ.

“ಲೀಝಾ,” ಪಿಸುಗುಟ್ಟುವಂತೆ ಅಂದಳು, ಸಲಿಗೆಯಿಂದಲ್ಲ.  ಆದರೆ ನನ್ನನ್ನು ನೋಡುವುದನ್ನು ಬಿಟ್ಟಳು ಈಗ. ಸ್ವಲ್ಪ ಹೊತ್ತು ನಾನು ಏನೂ ಅನ್ನಲಿಲ್ಲ

‘ಇವತ್ತಿನ ಹವಾಮಾನ… ಆ ಮಂಜು… ಭಯಾನಕ ಅಯ್ಯಪ್ಪ!” ನನ್ನಷ್ಟಕ್ಕೇ ನಾನೇ ಗೊಣಗಿದೆ, ವಿಷಣ್ಣನಾಗಿ ತಲೆಯಡಿ ಕೈಯಿಟ್ಟು ಮಾಳಿಗೆಯ ನೋಡುತ್ತಾ.

ಅವಳೇನು ಅನ್ನಲಿಲ್ಲ ಇದೆಲ್ಲ ತುಂಬಾ ವಿಕಾರವಾಗಿತ್ತು.

“ಏನೂ ಇದೇ ಊರಿನವ್ಳ?” ಒಂದು ನಿಮಿಷವಾದ ನಂತರ,  ಅರೆ ಕೋಪದಲ್ಲಿ ಅವಳತ್ತ ನನ್ನ ತಲೆ ತಿರುಗಿಸಿ ಕೇಳಿದೆ.

“ಇಲ್ಲ.”

“ಮತ್ತೆ ಎಲ್ಲಿಂದ ಬಂದಿದ್ದು?”

“ರೀಗಾದಿಂದ,” ಬಹು ನೋವಿನಲ್ಲಿ ಪಿಸುಗುಟ್ಟಿದಳಾಕೆ.

“ಜರ್ಮನ್ನ?”

“ರಷ್ಯನ್.”

“ಸುಮಾರು ಸಮಯ ಆಯ್ತಾ ಇಲ್ಲಿ?”

“ಎಲ್ಲಿ?”

“ಓ ಎಲ್ಲಿ! ಇಲ್ಲಿ… ಈ ಜಾಗದಲ್ಲಿ!”

“ಒಂದು ರಾತ್ರಿ.” ಅವಳ ಪ್ರತ್ಯುತ್ತರಗಳು ಬಹಳ ಚುಟುಕಾಗಿದ್ದವು. ಮೋಂಬತ್ತಿ ಆರಿಹೋಗಿದ್ದರಿಂದ ಬಹಳ ಕತ್ತಲಾಗಿ ಅವಳ ಮುಖವನ್ನು ನಾನು ಈಗ ನೋಡಲೂ ಆಗುತ್ತಿರಲಿಲ್ಲ.

“ಅಪ್ಪ ಅಮ್ಮ ಯಾರಾದ್ರೂ ಇದ್ದಾರ ನಿನ್ಗೆ?”

“ಹೌದು… ಹ್ಞಾ ಇಲ್ಲ… ಅಂದ್ರೆ ಇದ್ದಾರೆ…”

“ಎಲ್ಲಿದಾರೆ?”

“ಅಲ್ಲೇ…ರೀಗಾದಲ್ಲಿ.”

“ಯಾರ್‍ವರು? ಏನ್ ಮಾಡ್ಕೊಂಡಿದ್ದಾರೆ?”

“ಹೀಗೇ ಇರೋ ಜನ ಅವ್ರೆಲ್ಲಾ”

“ಹೀಗೇ ಇರೋವ್ರು ಅಂದ್ರೆ ಏನರ್ಥ? ಏನ್ ಅವ್ರ ಕುಲಗೋತ್ರ? ಅಂದ್ರೇ ಕೆಲ್ಸ, ಕಾರ್ಯ…”

“ವ್ಯಾಪಾರಸ್ತರು.”

“ ಓಹೋ! ಮೊದ್ಲು ಅವ್ರ ಜತೇನೇ ಇದ್ಯಾ?”

“ಹೌದು.”

“ಎಷ್ಟು ವರ್ಷ ನಿನಗೀಗ?”

“ಇಪ್ಪತ್ತು.”

“ಮತ್ಯಾಕೆ ಅವರ್ನೆಲ್ಲ ಬಿಟ್ಟು ಬಂದಿದ್ದು…”

“ಸುಮ್ನೆ”

ಆ “ಸುಮ್ಮನೆ” ಅಂದರೆ, “ನನಗೆ ಸಾಕಾಗಿದೆ, ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡು” ಅನ್ನೋ ಅರ್ಥ.  ನಾವಿಬ್ಬರೂ ಮತ್ತೆ ಮೌನಕ್ಕೆ ಬಿದ್ದೆವು.

ನಾನ್ಯಾಕೆ ಆಗಲೇ ಅಲ್ಲಿಂದ ಜಾಗ ಖಾಲಿ ಮಾಡಲಿಲ್ಲ ಆ ದೇವರೇ ಬಲ್ಲ. ನನಗೂ ಸಾಕಾಗಿ ಖಿನ್ನತೆಯ ಗಾಳಿ ಹೊಡೆದಿತ್ತು.   ಇಡೀ ದಿನದ ಘಟನೆಗಳು ಮನಸ್ಸಲ್ಲಿ ಮತ್ತೆ ಪುನರಾವರ್ತನೆಯಾಯಿತು. ಇದ್ದಕ್ಕಿದ್ದಂತೆ   ಅದೇ ಬೆಳಿಗ್ಗೆ ಗಡಿಬಿಡಿಯಲ್ಲಿ ಕಛೇರಿಗೆ ಓಡುವಾಗ ಬೀದಿಯಲ್ಲಿ ಏನನ್ನೋ ನೋಡಿದ್ದು ಜ್ಞಾಪಕಕ್ಕೆ ಬಂದು,

 “ಇವತ್ತು ಬೆಳಿಗ್ಗೆ ಯಾರ್ದೋ ಶವಪೆಟ್ಟಿಗೇನ ಎತ್ತಿಕೊಂಡು ಹೋಗ್ತಾ ಇದ್ರು. ಅದ್ನ ಇನ್ನೇನು ಎತ್ತ್ ಹಾಕಿ ಬಿಡ್ತಿದ್ರು” ಅಚಾನಕ್ಕಾಗಿ ಬೊಬ್ಬೆ ಹೊಡೆದೆ, ಮಾತು  ಬೆಳೆಸೋ ಆಸೆಯಿಲ್ಲದಿದ್ದರೂ ಅಕಸ್ಮಾತಾಗಿ, ಹಾಗೆ ಸುಮ್ಮನೆ.

“ಶವದ ಪೆಟ್ಟಿಗೇನಾ?”

“ಹೌದು ಹೇ ಮಾರ್ಕೆಟ್‍ನಲ್ಲಿ*; ನೆಲಮಾಳಿಗೆಯಿಂದ ಅದ್ನ ಎತ್ತಿ ಆಚೆಗೆ ತರ್ತಾ ಇದ್ರು”

“ನೆಲಮಾಳಿಗೆಯಿಂದ ಆಚೆ?”

“ನೆಲ್‍ಮಾಳಿಗೆಯಿಂದಲ್ಲಾ ಕೆಲ್ಗಡೆ ಮಹ್ಡೀಯಿಂದ…  ಅಂದ್ರೆ ಅಡಿಯಿಂದ. ಕೊಳಕು ಮನೆಯಿಂದ*    ಆಚೆಗೆ…ಬರೀ ಹೊಲಸು ಸುತ್ತಾಮುತ್ತಾ…. ಮೊಟ್ಟೆ, ಸಿಪ್ಪೆ…. ಹಿಕ್ಕೆ…. ನಾತ… ಥೂ ಮಹಾ ಹೇಸಿಗೆ.”

ಮೌನ.

“ಕೆಟ್ಟದಿನ, ಯಾರನ್ನಾದ್ರೂ ಹೂಳಕ್ಕೆ ನಿನ್ನೆ ಮಾತ್ರ, ಅಂದ್ರೆ ಇವತ್ತಿನ ಬೆಳಗ್ಗೆ ಮಾತ್ರ ತುಂಬಾ ಕೆಟ್ಟ ದಿನ!” ಮೌನವನ್ನು ಓಡಿಸಲೆಂದೇ ಮತ್ತೆ ಶುರುಮಾಡಿದೆ.

“ಯಾಕೆ ಕೆಟ್ಟದಿನ?”

 “ಅದೇ ಮಂಜು, ಒದ್ದೆ, ಹಾ…ಹಾ… ಹ್ಹ್” ನಾನು ಆಕಳಿಸಿದೆ.

  “ಅದೇನು ದೊಡ್ಡ ವಿಷಯ ಅಲ್ಲ” ಸ್ವಲ್ಪ ಹೊತ್ತು ಸುಮ್ಮನಿದ್ದ ಅವಳು ಒಮ್ಮೆಲೆ ಹೇಳಿದಳು.

“ಇಲ್ಲಾ ಭಯಾಆಆನಕ…”(ಮತ್ತೆ ಆಕಳಿಸಿದೆ) “ಸ್ಮಶಾನದಲ್ಲಿ ಸಮಾಧಿತೋಡೋ ಮಂದಿ ಎಂಥಾ ದರಿದ್ರ ಕರ್ಮ ಇದೂ ಅಂತಾ ಶಾಪ ಹಾಕಿರ್ತಾರೆ, ಯಾಕಂದ್ರೇ ಮಂಜು ನೋಡೂ, ಚಳಿ… ಅವ್ರೂ ಒದ್ದೆ… ಮತ್ತೆ ಬಹುಶಃ ಆ ಗೋರಿಯೊಳ್ಗೂ ನೀರು ಹೋಗಿರಬಹುದೇನೋಪ್ಪಾ”

“ಅಲ್ಯಾಕೆ ನೀರು ಹೋಗುತ್ತೆ?” ಅವಳಂದಳು ಕುತೂಹಲದಲ್ಲಿ, ಆದರೆ ಮೊದಲಿಗಿಂತಲೂ  ಒರಟಾಗಿ, ಸಂಕ್ಷಿಪ್ತವಾಗಿ. ಹಠಾತ್ತಾಗಿ ನಾನು ಕೆರಳಿದೆ.

“ಮತ್ತೆ ಸಮಾಧಿಲಿ ನೀರು ಇದ್ದೇ ಇರುತ್ತೆ,   ಒಂದೇ ಒಂದು ಒಣ ಸಮಾಧಿನ ವೋಲ್ಕೊವ್ ಸ್ಮಶಾನದಲ್ಲಿ ನಿನ್ಗೆ ತೋಡಕ್ಕೆ ಆಗಲ್ಲ”

“ಯಾಕೆ?”

“ಏನ್ ಯಾಕೆ ನಿನ್ನ ಅಮ್ಮನ ತಲೇ! ಬರೀ ನೀರು ಹರಿಯೋ ಜಾಗ ಮಾರ್ಯಾತ್ತೀ ಅದೂ… ಜೌಗು ಭೂಮಿ. ಅದಕ್ಕೆ ನೆಗ್ದುಬಿದ್ದೋರ್ವನ್ನೆಲ್ಲ ಬರೀ ನೀರಲ್ಲೇ ಎಸೀತಾರೆ ಅಲ್ಲಿ;  ನಾನೇ ನೋಡಿದ್ದೀನಿ ಎಷ್ಟೋ ಸಲ…”

(ನಾನು ಯಾವತ್ತೂ ಅಂದರೆ ಒಂದು ಸಲಾನು ನೋಡಿಲ್ಲ, ಅಷ್ಟೇ ಯಾಕೆ ನಾನು ವೋಲ್ಕೊವ್ ಸಮಾಧಿಗೆ ಹೋಗಿಯೂ ಇಲ್ಲ, ಜನ ಅದರ ಬಗ್ಗೆ ಹೇಳಿರೋದನ್ನು ಕೇಳಿದ್ದೀನಿ ಅಷ್ಟೆ)

   “ನಿನಗೆ ಆ ಯೋಚನೆ ಬರಲ್ವಾ, ಅಂದ್ರೆ ಸಾಯೋ ಯೋಚ್ನೇ?”

   “ನನಗ್ಯಾಕೆ ಆ ಯೋಚ್ನೆ… ನಾನೇನ್ ಸಾಯ್ತಾ ಇಲ್ವಲ್ಲ…” ಅವಳ ಈ ಎದುರುತ್ತರ ಏಟಿನಿಂದ ಬಚಾವಾಗಲು ಇರೋ ಗುರಾಣಿಯಂತಿತ್ತು.

 “ಆದರೆ ಸತ್ತೇ ಸಾಯ್ತಿಯಲ್ಲ ನೀನು… ಇವತ್ತ್ ಸಾಯ್ಲಿಲ್ಲ ಅಂದ್ರೇ ನಾಳೆ… ಇಲ್ಲ ನಾಳಿದ್ದು… ಒಂದಲ್ಲ ಒಂದು ದಿನ ನೀನೂ ಖತಂ! ಅಲ್ಲಿ ಇವತ್ತು ಸಾಯ್ತಲ್ಲ ಒಂದ್ ಹೆಂಗ್ಸೂ ಹಂಗೇ   ನೀನು  ಗೊಟಕ್ ಅಂತೀಯ. ಅವಳೂ ಅಷ್ಟೇ ಆ ಸೂಳೆಗಳಲ್ಲಿ ಒಬ್ಳು… ಕ್ಷಯ ಹಿಡಿದು ನೆಗೆದ್ ಬಿದ್ಲು ಹ್ಹಾ… ಹ(ಪುಟ್ಟ ಆಕಳಿಕೆ)”

“ಆ ಸೂಳೆ ಆಸ್ಪತ್ರೆಲೀ ಸಾಯ್‍ಬೇಕಿತ್ತು…” (ಓಹೋ ಎಲ್ಲಾ ವಿಷಯ ಇವಳಿಗೆ ಮುಂಚೇನೇ ಗೊತ್ತಿದೆ, ಮತ್ತೆ “ಸೂಳೆ” ಅಂದ್ಲು  ಹೆಂಗ್ಸು ಅನ್ಲಿಲ್ಲ.)

“ಆ ಮನೇ ಮೇಡಂ ಹತ್ರ ಸಾಲ ತಕ್ಕಂಡ್ ತಕ್ಕಂಡ್ ಕೊನೆಗೇ ಅಲ್ಲೇ ಆಳು ದಾಸಿ ಎಲ್ಲ ಆಗಿದ್ಲು,” ನಾನು ಈ ಚರ್ಚೆಯಿಂದ ಜಾಸ್ತಿ ಜಾಸ್ತಿ ಕೆರಳುತ್ತಾ  ಮಾತನಾಡಿದೆ, “ಅದ್ಕೇ ಕ್ಷಯ ಇದ್ರೂ ಕತ್ತೇ ಥರ ಕೊನೇ ತನ್ಕ ಅಲ್ಲೇ ಗೇಯ್ತಾ ಗೇಯ್ತಾ ಕೆಮ್ಮೀ ಕೆಮ್ಮೀ… ಥೂ ಥೂ ಏನ್ ಜೀವ್ನಪ್ಪಾ… ಇಲ್ಲಿ  ಜಟ್ಕಾ ಹೊಡೀಯೋರೆಗೆಲ್ಲ ಹೋಗೊ ಬರೊ ಸೈನಿಕ್ರ ಹತ್ರ ಬರೀ ಅವ್ಳಾ ಕತೆ ಹೇಳೋದೇ ಒಂದು ಮಜ ಕೊಡೋ ಕಸ್ಬಾಗ್ಬಿಟ್ಟಿದೆ. ಬಹುಶಾ ಈ ಗಾಡಿ ಬಿಡೋ ಜನ ಎಲ್ಲ ಅವಳ ಹಳೇ ಮಿಂಡ್ರು ಅನ್ಸುತ್ತೆ. ಆ ಗ್ಯಾಂಗೋರೆಲ್ಲ ಜೋರಾಗ್ ಕಿಸೀತ  ಗುಂಡ್ ಹಾಕ್ತಾ ಆ ಸೂಳೆ ನೆನೆಸ್ಕಂಡ್ ಚೆನ್ನಗಿ ಕುಡೀತಾ ಇರ್ತಾರೆ.(ಇಲ್ಲೂ ಸಹ ನಾನೇ ಹಲವು ವಿಷಯಗಳನ್ನು ಹುಟ್ಟಿಸಿ-ಹುಟ್ಟಿಸಿ ಹೇಳಿದ್ದೆ)

 ಮೌನ. ಆಳ ಮೌನ. ಅವಳು ಅಲ್ಲಾಡದಂತಹ ಮೌನ.

“ ಸರೀ ಈಗಾ ಈ ಆಸ್ಪತ್ರೆಲಿ ಸತ್ತಿದ್ರೆ  ಏನ್ ಲಾಭಾ…?”

“ಎಲ್ಲಿ ಸತ್ರೆ ಏನೀಗ? ಅಲ್ಲಾ…  ಮತ್ತೆ…ನಾನು ಯಾಕ್ ಸಾಯ್ಲಿ? ಕಿರಿಕಿರಿಯಲ್ಲಿ ಸಿಡುಕಿದಳೀ.

“ಈಗಲ್ಲಪ್ಪಾ… ಮುಂದೆ ಒಂದು ದಿನ…”

“ಅದೇ ಯಾಕ್ ಈ ವಿಚಾರ…?”

 “ ಅದೇ ಯಾಕ್ ಅಲ್ವಾ! ಈಗ ನೀನಿನ್ನೂ ಎಳೇ ಹುಡುಗೀ! ಆಕರ್ಷಕವಾಗಿದ್ದೀಯ. ತಾಜಾ ಮೈ ಬೇರೆ. ಅದ್ಕೇ ಈ ರೇಟು ನಿನ್ಗೆ… ಆದ್ರೆ ಹಿಂಗೇ ಬದುಕ್ತಾ ಹೋದ್ರೆ ಒಂದ್ ವರ್ಷ ಕಳೆಯೋ ಒಳ್ಗೋ   ನೀನೂ  ಹೀಗೇ ಅಳ್ಸೋಗ್ತೀಯ”

“ಒಂದ್ ವರ್ಷನಾ?”

“ಒಂದೋ…. ಎರಡೋ… ಅದ್ಯಾಕೆ ಈಗ ಅಲ್ವಾ… ಹೋಗ್ಲೀ ಬಿಡೂ. ಆದ್ರೆ ನೆನೆಪಿಡ್ಕೋ ಇನ್ನೇನ್ ಕೆಲ್ವೇಕೆಲ್ವ್  ವರ್ಷ ಅಷ್ಟೇ ಆಮೇಲೆ ನಿನ್ನ ರೇಟು ಸೊಯ್ಯ್ಞೋ ಅಂತ ಬಿದ್ದ್ ಹೋಗುತ್ತೆ…” ನಾನು ಮತ್ಸರದಲ್ಲಿ ಮುಂದುವರಿಸಿದೆ, “ಆಗ ನೀನು ಇನ್ನೂ ಕೊಳ್ತ್ ಹೋಗಿರೋ ಜಾಗಕ್ಕೆ ರವಾನೆಯಾಗೋ  ಸ್ಥಿತಿ  ಬರುತ್ತೆ; ಆಮೇಲೆ ಅದಕ್ಕಿನ್ನ ಕೀಳಾಗಿರೋ ಇನ್ನೂ ಚೀಪಾಗಿರೋ ಇನ್ನೊಂದು ತಿಪ್ಪೆಗುಂಡಿಗೆ. ಏಳು ವರುಷ  ಹೋಗ್ತಿದ್ದ ಹಾಗೇ ನೀನು ಅದೇ ಆ ಹೇ ಮಾರ್ಕೆಟ್‍ನ ನೆಲಮಾಳಿಗೆಲಿ ಬಿದ್ದಿರ್ತೀಯ. ಅದೇನು ಅಷ್ಟು ಕೆಟ್ಟದಲ್ಲ. ಆದ್ರೆ  ಸಮಸ್ಯೆ ಅಂದ್ರೆ ನಿನ್ನ ಆರೋಗ್ಯ ಕ್ಷೀಣಿಸುತ್ತೆ, ಎದೆಲೀ ನೋವೋ, ಚಳಿಯೋ, ಅಥವಾ ಎಂಥದ್ದೋ! ಆ ಥರದ  ಜೀವನದಲ್ಲಿ ಎಂಥಾ ರೋಗನೂ ವಾಸಿ ಆಗಲ್ಲ. ಒಮ್ಮೆ ರೋಗ ನಿನ್ನ ಹಿಡೀತೋ ಆಮೇಲೆ ನಿನ್ನ ಬಿಟ್ಟು ಕದಲಲ್ಲ  ಅದು. ನಿನ್ನ ಗತಿ ಅಷ್ಟೇ ಆಮೇಲೆ!   ಸತ್ತೇ ಸಾಯ್ತೀಯ ಆಗ ಚಿನ್ನಾ”

“ಸರೀ ಆಯ್ತೂ… ನಾನು ಸಾಯ್ತೀನಿ…” ಕೋಪದಲ್ಲಿ ಅಲುಗಾಡಿ ಪ್ರತ್ಯುತ್ತರಿಸಿದಳು.

  “ಅಯ್ಯೋ! ಪಾಪ…”

     “ಯಾರಿಗೆ?”

      “ ಬದುಕನ್ನ ಬಿಡೋದು  ಪಾಪ ತಾನೇ?”

        ಮೌನ.

      “ಹೋಗ್ಲೀ ಯಾವತ್ತಾದ್ರೂ ಮದುವೇನೋ… ನಿಶ್ಚಿತಾರ್ಥನೋ ಆಗಿತ್ತಾ ನಿನಗೆ? ಹ್ಞಾಂ?”

        “ನಿನಗೆ ಅದೆಲ್ಲಾ ಗೊತ್ತಾಗಿ ಏನ್ ಆಗಬೇಕಿದೆ?”

        “ನಾನೇನ್ ಲಾಯರ್ ಅಲ್ಲಮ್ಮಾ, ನಿನ್ನ ವಿಚಾರಣೆನೂ ಮಾಡ್ತಿಲ್ಲ ನಾನು. ಅದೇ… ನನಗೇನಾಗಬೇಕ್ ಅಲ್ವಾ ಅದನೆಲ್ಲಾ ಕಟ್ಕಂಡೂ… ಆದ್ರೆ ಅದೇನ್ ಕೋಪ ಬರೋದು ನಿನಗೆ ಅಷ್ಟು?  ನಿನ್ದೇ ಸಾವ್ರ ಇರುತ್ತೆ, ನನಗೇನು ಆಗಬೇಕಿಲ್ಲಮ್ಮ ಅವನೆಲ್ಲಾ ಕೇಳಿ, ಆದರೆ ಪಾಪ   ಅನ್ನಿಸ್ತು ಅಷ್ಟೇ”

“ಯಾರು ಪಾಪ?”

  “ನೀನೇ… ಇನ್ನೇನ್ ನಾನಾ?”

 “ಪರ್ವಾಗಿಲ್ಲ” ಅವಳು ಕೇಳಿಸದೇ ಇರುವಷ್ಟು ಮೆಲ್ಲಗೆ  ಪಿಸುಗುಟ್ಟಿದಳು; ಮತ್ತೆ ಅಲುಗಾಡಿದಳು. ಇದರಿಂದ ನನ್ನ ತಲೆಗೆ ಕೋಪ ರುಮ್ಮನೆ ಏರಿತು. ಎಲಾ ಇವಳೆ! ನಾನಿಷ್ಟು ಮೃದುವಾಗಿ ಮಾತಾಡುತ್ತಾ ಇದ್ದೇನೆ ಆದರೆ ಇವಳು…!

“ಆದ್ರೇ ಏನ್ ಅನ್ನಿಸುತ್ತೆ ನಿನಗೆ? ನೀನೇನು ಮಹಾ ಸಾಧ್ವೀ ಅಂತನಾ, ಹ್ಞಾ?”

 “   ನನ್ಗೇನೂ ಅನ್ಸಿಲ್ಲ… ಏನೂ ಯೋಚ್ಸೂ ಇಲ್ಲ.”

“ಅದೇ… ಅದೇ… ನೀನ್ ಮಾಡ್ತಾ ಇರೋ ಮಹಾ ತಪ್ಪಮ್ಮ. ಯೋಚ್ಸಲ್ಲ ನೀನು. ಎಚ್ಚರ ಮಾಡ್ಕೋ ಸಮಯ ಹೀಗೆ ಇರಲ್ಲ ಸದಾ. ಇನ್ನೂ ನೀನು ಚಿಕ್ಕ್‍ಹುಡ್ಗೀ ಹ್ಞಾ! ಎಳೇ ಮಗೂ. ಚೆನ್ನಾಗೂ ಇದ್ದೀಯ ಮುದ್ದಾಗಿ, ಪ್ರೀತಿ ಮಾಡಕ್ಕೂ ಟೈಮಿದೆ ಇನ್ನಾ  ನಿಂಗೇ. ಮದ್ವೇನೂ ಆಗಿ ಖುಷಿಯಾಗಿರಬಹುದು…”

“ಮದುವೆ ಆದವರೆಲ್ಲ ಏನ್ ಖುಷಿಯಾಗಿ ಇದ್ದಾರ?”ಮೊನಚಾಗಿ, ಮುಂಚಿನ ಕಲ್ಲಿನರಾಗದಲ್ಲಿ ಚುಟುಕಾಗಿ ಕೇಳಿದಳು.

“ಹೌದಮ್ಮ ಎಲ್ರೂ ಏನು ಖುಷೀಲೀ ಬದುಕ್ತಿಲ್ಲ. ಹಂಗಿದ್ರೂ ಈ ಬಾಳಿಗಿಂತ ಅದೇ ಎಷ್ಟೋ ಮಜ ಬಿಡು. ಹೋಲಿಸಕ್ಕೆ ಆಗಲ್ಲ   ಅಷ್ಟು ಸೊಗಸು. ಪ್ರೀತಿನೇ   ಬದುಕು ಆಗ  ,   ಖುಷಿ ಇಲ್ದೇ ಇದ್ರೂ ಆ ಬದುಕೇ ಚೆನ್ನ. ಹಾಗೆ ಜೀವಂತವಾಗಿರೋದೇ ಚೆನ್ನ,  ಏನ್ ಸಮಸ್ಯೆಗಳಿದ್ರೂ ಆ ರೀತಿ ಇರ್ಬ್ರೆಕು   ಮತ್ತೆ ಇಲ್ಲಿ ಏನಿದೆ ದರಿದ್ರ… ಎಲ್ಲಾ ಕೊಳೆತು ನಾರೋ ವಾಸನೆ ಬಿಟ್ಟು… ಥೂ…!”

ಅಸಹ್ಯದಿಂದ ನನ್ನ ಸುತ್ತಲೂ ಕಣ್ಣು ಹಾಯಿಸಿದೆ.   ತಣ್ಣಗೆ ರೀಸನಬಲ್ಲಾಗಿ ಇರುವುದನ್ನು ಬಿಟ್ಟು ಎಷ್ಟೋ ನಿಮಿಷಗಳಾಗಿತ್ತು. ನನ್ನ ಮಾತುಗಳ ಜತೆ, ಭಾವನಾತ್ಮಕವಾಗಿ ಬೆರೆಯುತ್ತಿದ್ದೆ.  ಇದರಿಂದ ಉತ್ತೇಜಿತಗೊಂಡಿದ್ದೆ. ಕಾವು ಕೊಟ್ಟು ಸಂರಕ್ಷಿಸಿದ್ದ ನನ್ನ ಖಾಸಗೀ ಪುಟಾಣಿ ಆಲೋಚನೆಗಳನ್ನೂ, ನಾನೇ ಹುಟ್ಟಿಸಿದ ಗುಪ್ತ ಸಿದ್ಧಾಂತಗಳನ್ನೂ ವ್ಯಾಖ್ಯಾನಿಸಲು ಸಜ್ಜಾದೆ. ಹೊಸ ಲಕ್ಷ್ಯವೊಂದು ನನ್ನೊಳಗೆ ಮೆಲ್ಲಗೆ ಹೆಡೆಯೆತಿತ್ತು. ಇಷ್ಟೊತ್ತು ನಾನು ಆಡುತ್ತಿದ್ದ ಮಾತುಗಳು ನನಗರಿವಿಲ್ಲದಯೇ ಈಗ ಹಿಂದೆಲ್ಲ ಓದಿದ್ದ ಸಾಹಿತ್ಯ ಲೋಕದಿಂದ, ಗ್ರಂಥ ಭಂಢಾರಗಳಿಂದ ಪ್ರೇರಿತವಾಗುತ್ತಾ ರೂಪಾಂತರಗೊಳ್ಳುತ್ತಿದ್ದವು. ನನ್ನ ಅವಳ ಮುಂಚಿನ ಸಂಭಾಷಣೆ ಮಧ್ಯೆ ಏಳುತ್ತಿದ್ದ ಆಕಳಿಕೆಗಳು ಈಗ ಮಾಯ! ಅದೂ ಇದೂ ಮಾತಾಡಿ ಮತ್ತೆ ಹೇಗೇ ಮಾತು ಬೆಳೆಸೋದು ಅನ್ನೋ ಗೊಂದಲದಲ್ಲಿ ಸುಮ್ಮನೇ ಅವಳ ಮೂತಿ ನೋಡೋ ಆ ಬೇಜಾರೂ ಈಗ ಮಾಯ! ನನ್ನೊಳಗೆ ಎಂತಹುದಕ್ಕೋ ಅಗ್ನಿ ಸ್ಪರ್ಶವಾಯಿತು.

“ನನ್ನ ಕಡೆಗೆ ಗಮನ ಕೊಡಬೇಡ. ಬಹುಶಃ ನಾನು ನಿನಗಿಂತಲೂ ಹಾಳಾದವನು. ಅದೂ ಅಲ್ಲದೆ ಇಲ್ಲಿಗೆ ಬಂದಾಗಲೇ ನಾನು ಮಿತಿಮೀರಿ ಕುಡಿದಿದ್ದೆ.” ಹಾಗೇ ಹೇಳಿದರೂ ಮತ್ತೆ ಮುಂದಿನ ವಾಕ್ಯದಲ್ಲೇ ವೇಗವಾಗಿಯೇ ನನ್ನನ್ನು ನಾನು ಸಮರ್ಥಿಸಿಕೊಂಡೆ, “ಆಮೇಲೆ ಒಬ್ಬ ಗಂಡು, ಹೆಣ್ಣಿಗೆ ಯಾವತ್ತೂ ಮಾದರಿಯಾಗಲಾರ. ಅದೇ ಬೇರೆ, ನನ್ನ ಹೊಲಸಲ್ಲೇ ನಾನು ಒದ್ದಾಡಿ, ನನಗೆ ನಾನೇ ಕಳಂಕ ತರಬಹುದು; ಆದರೆ, ನಾನು ಯಾರ ಗುಲಾಮನೂ ಅಲ್ಲ. ಬಂದು ಹೋಗೋ ಯಾತ್ರಿಕ ನಾನು. ಇಲ್ಲಿ ನನ್ನಿಂದ ಆದ ಪಾಪಗಳನ್ನೆಲ್ಲ ಕಿತ್ತೆಸೆಯುತ್ತಿದ್ದಂತೆಯೇ ನಾನು ಮತ್ತೆ ಹೊಸ ಮನುಷ್ಯನಾಗಿ ಬಿಡುತ್ತೇನೆ. ಅದೇ ನಿನ್ನ ನೋಡು, ಮುಂಚಿನಿಂದಲೂ ನೀನೊಬ್ಬಳು ದಾಸಿ! ಹೌದು ದಾಸಿ! ಎಲ್ಲವನ್ನೂ ಕೊಟ್ಟು ಬಿಡಬೇಕು ನೀನು, ನಿನ್ನ ಸ್ವೇಚ್ಛೆಯನ್ನು, ನಿನ್ನ ಸ್ವಾತಂತ್ರ್ಯವನ್ನು… ನಿನ್ನ ಇಛ್ಚೆಗಳನ್ನೂ. ಈ ದಾಸ್ಯದ ಸರಪಳಿಗಳನ್ನು ಯಾವತ್ತಾದರೂ ತುಂಡುತುಂಡು ಮಾಡೋ ಆಸೆ ನಿನಗೆ, ಆದರೆ ಅದು ಅಸಾಧ್ಯ. ನಿಧಾನಕ್ಕೆ ಅವು ನಿನ್ನನ್ನು ಬಿಗಿಯಾಗಿ ಸುತ್ತಿ ಸುತ್ತಿ ನಿಶ್ಚಲಳನ್ನಾಗಿಸುತ್ತವೆ. ಏಕೆಂದರೆ, ಅಂತಹ  ಬಿಡುಗಡೆಯಾಗಲು ಬಿಡದ ನರಕದ ಬೇಡಿಗಳವು. ನನಗೆ ಆ ಸರಪಳಿಗಳ ಪರಿಚಯವಿದೆ. ನಾನು ಬೇರೆ ಯಾವುದರ ಬಗ್ಗೆಯೂ ಮಾತನಾಡುತ್ತಿಲ್ಲ, ಆಡಿದರೆ ನಿನಗೆ ಬಹುಶಃ ತಿಳಿಯುವುದೂ ಇಲ್ಲ, ಆದರೆ  ಈಗ ನೀನೇ ಹೇಳು ಬಹುಶಃ ಈ ಮನೆಯೊಡತಿಯ ಸಾಲದ ಹಂಗಲ್ಲಿ ಬಿದ್ದಿರುವೆ ಹೌದು ತಾನೆ? ಹೌದು ನೋಡಿದೆಯಾ… ನಿಜ ಹಾಗಾದರೆ ನನಗನ್ನಿಸಿದ್ದು…”ಅವಳೇನು ಉತ್ತರಿಸದೇ ಇದ್ದರೂ, ನಾನೇ ಅದು ನಿಜವೆಂದು ಪ್ರತಿಪಾದಿಸಿದ್ದೆ.  ಮೌನವಾಗಿ ಅವಳು ನನ್ನ ಮಾತುಗಳನ್ನೆಲ್ಲಾ ಹೀರಿಕೊಳ್ಳುವಂತೆ ಕೇಳಿಸಿಕೊಳ್ಳುತ್ತಿದ್ದಳು. “ಅದೇ ನಿನ್ನನ್ನು ಹೊಲೆದು ಹಾಕುವ ಸರಪಳಿ, ಇನ್ನು ಯಾವತ್ತೂ ಬಿಡುಗಡೆಯ ಮುಕ್ತಿ ನಿನಗಿಲ್ಲ; ಎಂದೆಂದೂ ಈ ಜಾಗದಿಂದ ಓಡಿ ಹೋಗದಂತೆ ನಿಗಾವಹಿಸಿ ಕಾಯುತ್ತಾರೆ ಈ ಜನ. ನಿನ್ನಾತ್ಮವನ್ನು ದೆವ್ವಕ್ಕೆ ಮಾರಿದಂತಾಗಿದೆ ನಿನ್ನ ಸ್ಥಿತಿ…

ಅದೇ ನಾನು ಬಹುಶಃ ದುಃಖಾತ್ಮನೇ, ಉದ್ದೇಶಪೂರ್ವಕವಾಗಿಯೇ ಬೇಗುದಿಯಿಂದ ರಾಡಿಗೆ ಇಳಿಯುತ್ತೇನೇನೋ. ಜನ ಕುಡಿಯುವುದು ಬೇಗುದಿಯ ಮರೆಯಲು ತಾನೆ? ನಾನು ಕ್ಲೇಷದಲ್ಲೇ ಇಲ್ಲಿಗೆ ಆಗಮಿಸಿರಬಹುದೇನೋ. ಈಗ ಸ್ವಲ್ಪ ಹೊತ್ತಿನ ಕೆಳಗೆ ನಾವಿಬ್ಬರೂ ಭೇಟಿಯಾದೆವು. ಇಬ್ಬರೂ ಒಂದು ಪದವನ್ನೂ ಉಚ್ಛರಿಸದೆ ಸುಮ್ಮನಿದ್ದೆವು. ಆಮೇಲೆ ನೀನು ನನ್ನನ್ನು   ಕಾಡು ಮೃಗದ ಹಾಗೆ ದಿಟ್ಟಿಸಿದ್ದೆ, ನಾನು ನಿನ್ನ ಹಾಗೆಯೇ ನೋಡಿದ್ದೆ.  ಇದು ಪ್ರೀತಿಯಲ್ಲ ತಾನೇ? ಮನುಷ್ಯರಿಬ್ಬರು ಪರಸ್ಪರ ಹತ್ತಿರವಾಗುವುದು ಹೀಗೇಯೇ? ಇಲ್ಲ, ಇದೆಲ್ಲ ಬರೀ ಘೋರ… ಭಯಂಕರ ಅಷ್ಟೇ!”

“ಹೌದು!” ಅವಳೂ ಒಪ್ಪಿದ್ದಳು ನನ್ನ ವಾದವನ್ನು; ಅವಸರದಲ್ಲಿ  ಅಷ್ಟೇ ಸೂಕ್ಷ್ಮವಾಗಿ. ಆ ಅವಸರದ ಹೌದು ನನ್ನನ್ನೂ ಚಕಿತಗೊಳಿಸಿತ್ತು. ಇವಳು ಹಾಗಾದರೆ ಇದೇ ಆಲೋಚನೆಯಲ್ಲಿ ಮುಳುಗಿ ನನ್ನನ್ನು ಅಷ್ಟು ಆಳವಾಗಿ ಕೆಲ ಕ್ಷಣಗಳ ಹಿಂದೆ ನೋಡುತ್ತಿದ್ದಳೇ? ಅಂದರೆ ಇವಳಿಗೂ  ಹಾಗೆ ಯೋಚಿಸುವ  ಶಕ್ತಿ ಇದೆ; “ಓಹೋ ನನ್ನದೇ ಸ್ವಭಾವದ ಇನ್ನೊಂದು ಆತ್ಮ!” ನನ್ನಷ್ಟಕ್ಕೇ ಅಂದುಕೊಂಡೆ, ನನ್ನ ಎರಡೂ ಕೈಗಳನ್ನು ತಿಕ್ಕುತ್ತಾ. ನಿಜಕ್ಕೂ ಇಷ್ಟು ಎಳೆ ಆತ್ಮವನ್ನು ಪರಿವರ್ತಿಸುವುದೇ ಆರಾಮದಾಯಕ ಆಟ.

  ಹೀಗೆ ಶಕ್ತಿ ಚಲಾಯಿಸೋ ಆಟವೀಗ ನನಗೆ ಮಜ ತರಿಸುತ್ತಿತ್ತು.

ಅವಳ ತಲೆಯನ್ನು ನನ್ನ ಹತ್ತಿರ ತಂದಳು. ಆ ಕತ್ತಲೆಯಲ್ಲಿ ಅವಳು ಅದನ್ನು ತನ್ನ ಕೈಮೇಲೆ ಊರಿರಬೇಕು. ಬಹುಶಃ ಅವಳು ನನ್ನನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಳು. ಅವಳ ಕಣ್ಣುಗಳನ್ನು ಸ್ಫುಟವಾಗಿ ನೋಡಲಾಗುತ್ತಿಲ್ಲವಲ್ಲ ಎಂದು ಕೊರಗಿದೆ. ಅವಳ ಆಳವಾದ ಉಸಿರಾಟ ಕೇಳಿಸಿತು.

“ಯಾವ ಕಾರಣದಿಂದ ಇಲ್ಲಿದ್ದೀಯ?” ಸ್ಪಷ್ಟವಾದ ಅಧಿಕಾರವಾಣಿಯಲ್ಲಿ ಶುರುಮಾಡಿದೆ.

“ಹಾಗೇ ಸುಮ್ಮನೆ…”

“ಆದರೆ ನಿಜಕ್ಕೂ ನಿನ್ನ ಅಪ್ಪನ ಮನೆಯೇ ಎಷ್ಟೋ ಲೇಸಾಗಿರಲಿಲ್ಲವೇ? ನಿನ್ನದೇ ಬೆಚ್ಚಗಿನ ಗೂಡದು… ಸ್ವಚ್ಛಂದ ಗೂಡು”

“ಆದರೆ ಆ ಮನೆ ನೀವಂದಷ್ಟು ಚೆನ್ನಾಗಿಲ್ಲದ್ದೇ ಇದ್ರೇ?”

 “ಈಗ ಅವಳ ಸ್ವರಕ್ಕೆ ತಕ್ಕಂತೆ ನಾನು ಶೃತಿ ಹಿಡಿದು ಮಾತನಾಡಿದರೆ ನನ್ನ ಕಾರ್ಯ ಸಿದ್ಧಿಯಾಗುತ್ತದೆ” ಎಂಬ ಯೋಚನೆಯೊಂದು ಮನಸ್ಸಲ್ಲಿ ಮಿಂಚಿತು. “ಬರೀ ಭಾವತಿರೇಕಗಳು ನನ್ನ ಗುರಿಯನ್ನು ಕೆಡಿಸುತ್ತವೆ”

ಆ ಯೋಚನೆಯೋನೋ ಈಗಷ್ಟೇ ಮಿಂಚಿತ್ತು. ಆದರೆ ಆಣೆ ಮಾಡುತ್ತೇನೆ, ಅವಳಲ್ಲಿ ನಾನು ತೋರಿದ್ದು ಅಪ್ಪಟ ಆಸಕ್ತಿ ಅಷ್ಟೇ. ಅದೂ ಅಲ್ಲದೆ ನಾನು ನಿತ್ರಾಣನಾಗಿದ್ದೆ. ಹೇಗೋ, ಏನೋ ಆಗಿ ಮನಸ್ಸು ಒಳ್ಳೇ ಲಹರಿಯಲ್ಲಿತ್ತು. ನಿಮಗೆ ಗೊತ್ತಿಲ್ಲ, ಕಪಟ ಮತ್ತು ಅಪ್ಪಟ ಭಾವನೆಗಳು  ಒಂದಕ್ಕೊಂದು ಅದ್ಭುತವಾಗಿ ಹೊಂದಿಕೊಳ್ಳುತ್ತವೆ.

“ಇರ್ಬಹುದು, ಅಥವಾ ಇಲ್ಲದೇ ಇರ್ಬಹುದು ಏನು ಬೇಕಾದರೂ ಆಗಬಹುದು,” ತರಾತುರಿಯಲ್ಲಿ ಉತ್ತರಿಸಿದೆ. “ನೋಡು ನನಗೆ ಖಾತ್ರಿ ಇದೆ, ಯಾರೋ ನಿನ್ನನ್ನು ನೋಯಿಸಿದ್ದಾರೆ, ಮತ್ತು ತಪ್ಪು ಅವರದ್ದು, ನಿನ್ನದಲ್ಲ. ನಿನ್ನ ಕತೆಯ ತಲೆ ಬುಡ ನನಗೆ ಗೊತ್ತಿಲ್ಲ. ಆದರೆ ನಿನ್ನಂತಹ ಮುಗ್ಧ ಹುಡುಗಿ ಅದು ತನ್ನದೇ ಇಚ್ಛಾನುಸಾರವಾಗಿ, ಇಲ್ಲಿರಲೇ ಕೂಡದು.”

“ನಾನೆಂತ ಮುಗ್ಧೆ?” ಅವಳು ಪಿಸುಗುಟ್ಟಿದಳು, ಕಿವಿಗೆ ಕೇಳಿಸದಂತೆ ಆದರೆ ನನಗೆ ಕೇಳಿಸಿತು.

 “ಅಯ್ಯೋ, ನಾನು ಅವಳನ್ನು ಪ್ರಭಾವಿಸುತ್ತಿದ್ದೇನೆ. ಇದು ಅಪಾಯಕಾರಿ. ಆದರೆ ಬಹುಶಃ ಇದೇ ಸರಿ…” ಅವಳು ಮೌನವಾಗಿದ್ದಳು.

“ನೋಡು ಲೀಝಾ- ಈಗ ನನ್ನ ಕಥೆ ಕೇಳು! ಆಗ ನಾನು ಮಗುವಾಗಿದ್ದಾಗ, ನನಗೆ ಕುಟುಂಬವೆಂಬುದು ಇದ್ದಿದ್ದರೆ,  ನಾನು  ಈ ಸ್ಥಿತಿಯಲ್ಲಿ ಇರುತ್ತಲೇ ಇರಲಿಲ್ಲ. ಆಗಾಗ ಅದನ್ನೇ ಯೋಚಿಸುತ್ತೇನೆ. ನೋಡು, ಕುಟುಂಬದಲ್ಲಿ ಏನೇ ಕೆಡುಕುಗಳಿದ್ದರೂ ಅಲ್ಲಿ ನಿನ್ನ ಅಮ್ಮ-ಅಪ್ಪ ಇದ್ದೇ ಇರುತ್ತಾರೆ. ಅವರೇನೂ ಶತ್ರುಗಳಲ್ಲ, ಅಪರಿಚಿತರೂ ಅಲ್ಲ, ಅವರು ಮಮತೆಯಲ್ಲಿ ನಿನ್ನನ್ನು – ವರ್ಷಕ್ಕೊಂದು ಸಲವಾದರೂ  ಮಮತೆಯಲ್ಲಿ-  ನೋಡಿಕೊಳ್ಳುತ್ತಾರೆ.  ಮನೆಯವರ ಜತೆ ಇರುವ ಅರಿವು ನಿನಗಿರುತ್ತದೆ.   ಅದೇ ನಾನು ಮನೆಯವರಿಲ್ಲದೆಯೇ ಬೆಳೆದವನು; ಬಹುಶಃ ಅದಕ್ಕೆ ಈಗ ನಾನು ನಾನಾಗಿದ್ದೇನೆ ಅಂದರೆ…  ಭಾವನೆಗಳಿಲ್ಲದ ಜೀವಿಯಾಗಿರುವೆ.”

ನಾನು ಮತ್ತೊಮ್ಮೆ ಮಾತು ನಿಲ್ಲಿಸಿದೆ.

 “ಬಹುಶಃ ಅವಳಿಗೆ ಅರ್ಥವಾಗುತ್ತಿಲ್ಲ” ನಾನು ಹಾಗೇ ಯೋಚಿಸಿದೆ, “ಆದರೆ ಇವೆಲ್ಲ ಎಷ್ಟು ಹಾಸ್ಯಾಸ್ಪದ: ಈ ನೀತಿಪಾಠ, ಮಣ್ಣು, ಮಸಿ…”

“ನಾನೊಬ್ಬ ತಂದೆಯಾಗಿದ್ದು, ನನಗೊಬ್ಬಳು ಮಗಳಿದ್ದರೆ, ಅವಳನ್ನು ನಾನು ನನ್ನ ಗಂಡು ಮಕ್ಕಳಿಗಿಂತ ಜಾಸ್ತಿಯೇ ಪ್ರೀತಿಸುತ್ತಿದ್ದೆ, ನಿಜವಾಗಲೂ ಬೇಕಾದರೆ ನಿನಗೆ ಪ್ರಮಾಣಮಾಡಿ ಹೇಳುತ್ತೇನೆ,” ಅವಳ ಜ್ಞಾನವನ್ನು ಬೇರೆ ಕಡೆ ತಿರುಗಿಸಲು ವಿಷಯ ಬದಲಿಸಿರುವೆ ಎಂಬಂತೆ ಬೇರೆ ಕೋನದಿಂದ ಮಾತನಾಡಲು ಯತ್ನಿಸುತ್ತಿದ್ದೆ. ನಾನು ನಿಜಕ್ಕೂ ಆಗ ನಾಚಿದ್ದೆ.

“ಯಾಕೆ ಹಾಗೆ?”ಅವಳು ಕೇಳಿದಳು.

ಓಹ್! ಅವಳು ಕಿವಿಗೊಟ್ಟಿದ್ದಾಳೆ, ಪರ್ವಾಗಿಲ್ಲ!

“ಯಾಕೆ ಅಂತ ಗೊತ್ತಿಲ್ಲ, ಹಾಗೆ ಸುಮ್ಮನೆ; ಲೀಝಾ ನೋಡು, ನನಗೊಬ್ಬ ಅಪ್ಪನ ಪರಿಚಯವಿತ್ತು. ಕಲ್ಲು ಮನಸ್ಸಿನ ಕಟ್ಟುನಿಟ್ಟಿನ ವ್ಯಕ್ತಿಯವನು. ಆದರೆ ತನ್ನ ಮಗಳೆದುರು ಮಾತ್ರ ಮಂಡಿಯೂರಿ, ಅವಳ ಕೈಗಳಿಗೆ ಪಾದಗಳಿಗೆ ಮುತ್ತಿಕ್ಕುತ್ತಿದ್ದ.  ಆ ಹುಡುಗಿಯನ್ನು ಎಷ್ಟು ಮುದ್ದು ಮಾಡಿದ್ದರೂ ಅವನಿಗೆ ತೃಪ್ತಿಯಾಗುತ್ತಿರಲಿಲ್ಲ. ಯಾವುದೋ ಸಾಯಂಕಾಲ ಆಕೆ ನೃತ್ಯಾಭ್ಯಾಸ ಮಾಡುತ್ತಿದ್ದರೆ   ಅವನು ಒಂದೇ ಜಾಗದಲ್ಲಿ ಸತತ ಐದು ಘಂಟೆಗಳ ಕಾಲ ಶಿಲೆಯಂತೆ ಅವಳನ್ನೇ ನೋಡುತ್ತಾ, ಒಂದು ಕ್ಷಣಕ್ಕೂ ಬೇರೆಡೆ ಕಣ್ಣು ಹೊರಳಿಸದೆ ನಿಂತಿರುತ್ತಿದ್ದ; ಅವಳದೇ ಗೀಳು ಹತ್ತಿತ್ತು ಅವನಿಗೆ. ನನಗೆ ಆ ಸ್ಥಿತಿ ಅರ್ಥವಾಗುತ್ತದೆ! ಅವಳು ಸುಸ್ತಾಗಿ ರಾತ್ರಿ ಮಲಗಿದ್ದರೆ, ಅವನು ಎದ್ದು ಅವಳಿಗೆ ಮುತ್ತಿಟ್ಟು, ಅವಳ ಹಣೆಗೆ ಶಿಲುಬೆ ನಮಸ್ಕಾರ ಮಾಡುತ್ತಿದ್ದ. ತಾನೇ ಕೊಳೆ ಕೋಟು ತೊಟ್ಟು, ಯಾರಿಗೂ ಹಣ ಬಿಚ್ಚದ ಜಿಪುಣನಾಗಿದ್ದರೂ, ಇದ್ದಬದ್ದ ದುಡ್ಡನ್ನೆಲ್ಲಾ ಅವಳಿಗಾಗೆ ಧಾರೆ ಎರೆಯುತಿದ್ದ ಈ ಶ್ರೀಮಂತ  ದುಬಾರಿ ಕಾಣಿಕೆಗಳಲ್ಲಿ  ಆ ಮಗುವನ್ನು  ಮುಳುಗಿಸುತ್ತಿದ್ದ. ಆ ಹುಡುಗಿ ಏನಾದರೂ ಅವನೆಲ್ಲಾ ಮೆಚ್ಚಿ ಕುಣಿದು ಮುತ್ತಿಟ್ಟರೆ, ಅದೇ ಆ ಅಪ್ಪನಿಗೆ ಅಪರಿಮಿತ ಆನಂದ. ತಂದೆ ಮಾತ್ರ   ಮಗಳನ್ನು ಅಷ್ಟು ಪ್ರೀತಿಸುವುದು. ತಾಯಿಗೂ ಅಂಥಾ ಪ್ರೀತಿ ಅಸಾಧ್ಯ. ಕೆಲವು ಹುಡುಗಿಯರು ತಮ್ಮ ಬದುಕಿನ ಅತೀ ಸುಂದರವಾದ ಸಮಯವನ್ನೆಲ್ಲ ಮನೆಯಲ್ಲೇ ಕಳೆಯುತ್ತಾರೆ! ನನಗೇನಾದರೂ ಹೆಣ್ಣು ಮಕ್ಕಳಿದ್ದರೆ ಆ ಮುದ್ದು ಹುಡುಗಿಯರನ್ನು ಮದುವೆ ಮಾಡಿಸಿ ಯಾರದೋ ಮನೆಗೆ ಖಂಡಿತಾ ಕಳುಹಿಸುತ್ತಿರಲಿಲ್ಲ.”

“ಯಾಕೆ? ಮತ್ತೇನ್ ಮಾಡ್ತಾ ಇದ್ದೇ”  ಕ್ಷೀಣ ಚಿಕ್ಕನಗುವಿನೊಂದಿಗೆ ಕೇಳಿದಳಾಕೆ.

“ಯಾರೋ ಇನ್ನೊಬ್ಬ ಆಕೆಯ ತುಟಿಗಳ ಒಡೆಯನಾದರೆ ಅನ್ನೋ ಯೋಚನೆಯೇ ನನ್ನ ಮನಸ್ಸಲ್ಲಿ ಕಿಚ್ಚು ಹತ್ತಿಸುತಿತ್ತು.   ದೇವರಾಣೆಗೂ ಹೊಟ್ಟೆ ಕಿಚ್ಚು ಪಡುವ ವಿಷಯವೇ ತಾನೆ ಇದು! ಯಾರೋ ಅಪರಿಚಿತನನ್ನೇ  ಹೆತ್ತ ಅಪ್ಪನಿಗಿಂತಲೂ   ಆಕೆ ಜಾಸ್ತಿಪ್ರೀತಿಸಿದರೆ? ಅದನೆಲ್ಲಾ ಬರೀ ಯೋಚನೆ ಮಾಡಿದರೂ ನನ್ನ ಹೃದಯ ಬೇಯತ್ತಿತ್ತು. ಹೌದು ಇವೆಲ್ಲ ಹುಚ್ಚಾಟವೇ. ಸ್ವಾಭಾವಿಕವಾಗಿಯೇ ಕೊನೆಗೆ ಎಲ್ಲರೂ ವಿವೇಚನೆಯಲ್ಲೇ ನಡೆದುಕೊಳ್ಳುತ್ತಾರೆ. ಆದರೂ, ಅವಳನ್ನು ಯಾರಿಗೋ ಮದುವೆ ಮಾಡಿಸಿ ಬೀಳ್ಕೊಡುವ ಮುನ್ನ, ಚಿಂತಾಕ್ರಾಂತನಾಗಿ ಸಾವಿನಷ್ಟು ಆಳವಾಗಿ ಚಿಂತಿಸುತ್ತಿದ್ದೆ ನಾನು. ಬಂದ ಗಂಡುಗಳಲ್ಲಿ ತುಂಬಾ ತಪ್ಪು ಹುಡುಕುತ್ತಿದ್ದೆ. ಆದರೆ ಕೊನೆಗೆ ಅವಳಿಗೆ ಯಾರು ಇಷ್ಟವಾಗುತ್ತಾನೋ ಆತನ ಜತೆಯೇ ಮದುವೆ ಗೊತ್ತು ಮಾಡುತ್ತಿದ್ದೆ. ಮತ್ತೆ ಅವಳಿಗೆ ಇಷ್ಟವಾದವನು, ತಂದೆಗೆ ಯಾವತ್ತೂ ಬೇರೆ ಎಲ್ಲರಿಗಿಂತಲೂ ನಿಕೃಷ್ಟವಾಗಿಯೇ ಕಾಣುತ್ತಾನೆ.  ಎಷ್ಟೋ ಸಂಸಾರಗಳಲ್ಲಿ ವಿಷಮ ಗಾಳಿ ಬೀಸುವುದು ಇದೇ ಕಾರಣಕ್ಕೆ.”

“ಎಷ್ಟೋ ಜನ ಅಪ್ಪಂದಿರು ತಾವು ಹುಟ್ಟಿಸಿರೋ ಹೆಣ್ಣು ಮಕ್ಳನ್ನ ಬೇಕಾದ್ರೆ ಖುಷಿಲೀ ಮಾರ್ತಾರೆ; ಆದ್ರೆ ಮದುವೆ ಮಾಡ್ಸಿ ಮರ್ಯಾದೆಲೀ ಕಳ್ಸಲ್ಲ” ಅಂದಳವಳು ಇದ್ದಕ್ಕಿದ್ದಂತೆ.

ಓಹೋ! ವಿಷ್ಯ ಇದೂ ಶಿಷ್ಯ!

“ಲೀಝಾ ನೋಡು, ಅದೆಲ್ಲಾ ಆಗುವುದು ಶಾಪಗ್ರಸ್ಥ ಕುಟುಂಬದಲ್ಲಿ, ಎಲ್ಲಿ ದೇವರು ಮತ್ತು ಪ್ರೀತಿ ಇರುವುದಿಲ್ಲವೇ ಅಲ್ಲಿ,” ಸ್ವಲ್ಪ ಉದ್ರೇಕಗೊಂಡೇ ಮುಂದುವರೆಸಿದೆ. “ಮತ್ತೆ ಎಲ್ಲಿ ಪ್ರೀತಿಯಿಲ್ಲವೋ ಅಲ್ಲಿ ಅರಿವು ಇರುವುದಿಲ್ಲ. ಅಂತಹ ಕುಟುಂಬಗಳಿವೆ. ಆದರೆ ನಾನಿಲ್ಲಿ ಅಂತಹ ಅನಿಶ್ಟಗಳ ಬಗ್ಗೆ ಮಾತನಾಡುತ್ತಿಲ್ಲ. ಮೇಲ್ನೋಟಕ್ಕೆ ಕಾಣುವಂತೆ ನಿನ್ನ ಕುಟುಂಬದಲ್ಲಿ ನಿನಗೆ ಕರುಣೆ, ದಯೆ ಮುಂತಾದ ಭಾವನೆಗಳ ಅನುಭವ ದಕ್ಕಿಲ್ಲವೇನೋ. ನಿನ್ನ ಮಾತಿನ ವೈಖರಿಯಲ್ಲೇ ನನಗೆ ಈ ಸತ್ಯ ತಿಳಿಯುತ್ತಿದೆ. ನಿಜಕ್ಕೂ ನೀನೊಬ್ಬಳು  ದುಃಖಿತೆ. ಹ್‍ಮ್ಞ್… ಇದೆಲ್ಲಾ ಬಡಜನರಿಗೆ ಸಾಮಾನ್ಯವಾಗಿ ಮೆಟ್ಟಿಕೊಳ್ಳುವ ಕಾಯಿಲೆಗಳು”

“ಮತ್ತೆ ಯಾರ್ ಹತ್ರ ದುಡ್ಡಿದೇ ಅವ್ರ ಸ್ಥಿತಿ ಇದಕ್ಕಿಂತ ಮೇಲೋ? ಪ್ರಾಮಾಣಿಕರು ಬಡವರಾಗಿದ್ರೂ ನೆಮ್ದಿಯಾಗ್ ಇರ್ತಾಲ್ಲ??”

“ಹ್ಞೂಂ… ಹೌದು ಬಹುಶಃ ಇರ್ಬಹುದು. ಮತ್ತೆ, ಇನ್ನೊಂದು ವಿಷಯ ಲೀಝಾ: ಜನ ಬರೀ ದುರಂತಗಳನ್ನು ಲೆಕ್ಕ ಇಡುತ್ತಾರೆ. ಅವರ ಅದೃಷ್ಟವನ್ನಲ್ಲ. ಅವರು ಎಲ್ಲಾ ಘಟನೆಗಳನ್ನು ಖಾತೆಗೆ ತೆಗೆದುಕೊಂಡು, ಲೆಕ್ಕ ಹಾಕಿದರೆ,  ಎಲ್ಲ ಪಿಂಡಗಳಿಗೂ ಸಂತೋಷವಾಗಿ ಇರೋಕ್ಕೆ ಸಾಕಷ್ಟು ಕಾರಣಗಳಿವೆ ಅಂತಾ ಗೊತ್ತಾಗುತ್ತದೆ.  ಸರಿ, ಒಂದು ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಆಗುತ್ತಿದ್ದರೆ…? ಆ ಕುಟುಂಬದ ಮೇಲೆ ದೇವರ ದಯೆಯಿದೆ, ಆ ಮನೆಯ ಪತಿ ತನ್ನ ಸತಿಯನ್ನು ತುಂಬಾ ಪ್ರೀತಿಸುತ್ತಾನೆ,  ಖುಷಿ-ಖುಷಿಯಲ್ಲಿ ನೋಡಿಕೊಳ್ಳುತ್ತಾನೆ, ಯಾವತ್ತೂ ತನ್ನವಳನ್ನು ಬಿಟ್ಟು ದೂರವೇ ಹೋಗುವುದಿಲ್ಲ… ನೀನೇ ಆ ಸತಿ ಆಗಿದ್ದರೆ ಲೀಝಾ ಎಷ್ಟು ಲೇಸಾಗಿರುತ್ತಿತ್ತು! ಅಂತಹ ಮನೆ ಸೇರುವುದೇ ಸ್ವರ್ಗ ಸುಖ! ಅಲ್ಲಿ ಕಷ್ಟನಷ್ಟಗಳಿದ್ದರೂ   ಒಳ್ಳೆಯದೇ, ಅವಿಲ್ಲದ ಜಾಗ ಎಲ್ಲಿದೆ ಹೇಳು! ಬಹುಶಃ ನೀನು ಮದುವೆಯಾದಾಗ ನಿನಗೆ ಇದೆಲ್ಲಾ ತಿಳಿಯುತ್ತದೆ. ಈಗ ನೀನು ಪ್ರೀತಿಸಿದವನನ್ನೇ   ಮದುವೆಯಾದೆ ಎನ್ನೋಣ; ಅವನ ಮತ್ತು ನಿನ್ನ ಹೊಸ ಬಾಳಿನ ಹೊಸ ವರುಷಗಳ ಬಗ್ಗೆ ಸುಮ್ಮನೆ ಯೋಚಿಸು:   ಆಗಾಗ ಆ ಬದುಕಲ್ಲಿ ನೀನು ಎಷ್ಟು ಆನಂದದಲ್ಲಿ ಇರುತ್ತೀಯ ಗೊತ್ತಾ  ಲೀಝಾ!  ಮೊದ-ಮೊದಲು  ಗಂಡನ ಜತೆ ಕಚ್ಚಾಡಿದರೂ, ಕೊನೆಗೆ ಅದು ಖುಷಿಯಲ್ಲೇ ಮುಕ್ತಾಯವಾಗುತ್ತದೆ. ಕೆಲವು ಸಲವಂತೂ ಹುಡುಗಿಯು ತನ್ನ ಪತಿಯನ್ನು ಜಾಸ್ತಿ ಪ್ರೀತಿಸಿದಷ್ಟು, ಜಾಸ್ತಿ ಜಗಳ ಆಡುತ್ತಾಳೆ. ಅಂತ ಹುಡುಗಿಯೊಬ್ಬಳು ನನಗೆ ನಿಜಕ್ಕೂ ಗೊತ್ತಿದ್ದಳು. ಅಷ್ಟೊಂದು ತೀವ್ರವಾಗಿ ಆ ಹುಡುಗನನ್ನು   ಪ್ರೀತಿಸುತ್ತಾ ಇದ್ದದ್ದಕ್ಕೇ ಆಕೆ ಅವನಿಗೆ ಆ ಪರಿಯ ಯಮಹಿಂಸೆ ಕೊಡುತ್ತಿದ್ದದ್ದು.  ಮತ್ತೆ ಅದನ್ನು ಅವನು  ಅರಿಯಬೇಕು ಎಂದೂ ಆಸೆ ಪಡುತ್ತಿದ್ದಳು!  ನಿನಗೆ ಗೊತ್ತೇ ಲೀಝಾ,  ಪುರಷನಿಗೆ ಬೇಕೆಂದೇ ಪ್ರೀತಿಯಿಂದ ಯಮಯಾತನೆ ನೀಡುವ ಕಲೆ ಹೆಣ್ಣಿಗೆ ಮಾತ್ರ ಸಿದ್ಧಿಸಿರುವುದು. ಆಮೇಲೆ ಅವಳು ಯೋಚಿಸುವಳು, ‘ಹೇಗಿದ್ದರೂ  ನಿನ್ನನ್ನು ತುಂಬಾ ಪ್ರೀತಿಸುವುದು, ಒಲುಮೆಯ ಕುಲುಮೆಯಲ್ಲಿ  ದಹಿಸುವುದು ಇದ್ದೇ ಇದೆ,  ಅದಕ್ಕೆ ಈಗ  ಸ್ವಲ್ಪ ಚಿತ್ರಹಿಂಸೆಯ ಸಹಿಸುಕೋ…’ ನೀನು ಹಾಗೇ ಮುದ್ದಿಸಿ ನಿನ್ನ ಗಂಡನ್ನು ಗೋಳಾಡಿಸುತ್ತಿದ್ದೆ ಕಣೇ; ಅಷ್ಟೇ ಅಲ್ಲಾ, ಮನೆಯಲ್ಲಿರುವ ಪ್ರತಿಯೊಬ್ಬರಿಗೂ ನಿಮ್ಮನ್ನು ಸುಮ್ಮನೇ ನೋಡುವುದೇ ಖುಷಿ.  ಅದೇ ಶಾಂತಿ, ನೆಮ್ಮದಿ, ಆನಂದ, ಘನತೆ… ಆದರೆ ಕೆಲವು ಹೊಟ್ಟೆ ಉರಿಯ ಹೆಣ್ಣು ಮಕ್ಕಳು ಇದ್ದಾರೆ. ಅಂತಹವಳೊಬ್ಬಳ ಪರಿಚಯವಾಗಿತ್ತು ನನಗೆ. ಅವಳ ಹುಡುಗ ಎಲ್ಲೋ ಸುತ್ತಲು ಆಚೆ ಹೋಗುವುದನ್ನೇ ಸಹಿಸದೇ, ಇದ್ದಕಿದ್ದಂತೆ ರಾತ್ರಿ ಹಾಸಿಗೆಯಿಂದ  ಚಂಗನೆ ನೆಗೆದು ಕಿಟಕಿಯ ಬಳಿ ನಿಂತು, ಹೊರಗೆ ಇಣುಕಿ, ‘ಈಗ ಅವನು ಅಲ್ಲಿ ಆ ಮನೆಯಲ್ಲಿ ಅವಳ ಜತೆ ಇರಬಹುದೆ?’ ಎಂದು ತಲೆಗೆ ಹುಳ ಬಿಟ್ಟುಕೊಂಡು ಕೊರಗುತ್ತಿದ್ದಳು. ಇದು ಕೆಟ್ಟದ್ದೇ…  ಮತ್ತೆ ಅವಳಿಗೂ ಗೊತ್ತು ಇದು ಕೆಟ್ಟದು ಅಂತ. ಆಗ ಅವಳ ಹೃದಯ ಗಕ್ಕನೆ  ನಿಲ್ಲುತ್ತದೆ;  ಅವಳಿಗೆ ಅವಳೇ ತು೦ಬಾ ಹಿ೦ಸೆ ಕೊಟ್ಟುಕೊಳ್ಳುತ್ತಾಳೆ…   ಇವೆಲ್ಲ ಪ್ರೀತಿಯಿಂದಲೇ. ಆದರೂ ಪುನಃ ಪುನಃ ಜಗಳವಾಡಿ ಅವನ ಕ್ಷಮೆ ಕೇಳುವುದು ಎಷ್ಟು ಚೆನ್ನ; ‘ಇದಕ್ಕೆಲ್ಲಾ ನನ್ನನ್ನೇ ಹಳಿಯಬೇಕು, ಎಲ್ಲ ನನ್ನದೇ ತಪ್ಪು’ ಎಂದು ಅವನನ್ನು ರಮಿಸುವುದು, ಆಗ ಅವರಿಬ್ಬರೂ ಬೆರುಗಲ್ಲಿ ಮೈಮರೆಯುವುದು, ಈಗಷ್ಟೇ ಭೇಟಿಯಾದವರಂತೆ, ಈಗಷ್ಟೇ ಮದುವೆಯಾದವರಂತೆ, ಈಗಷ್ಟೇ ಅವರ ಪ್ರೀತಿ ಶುರುವಾದ ಹಾಗೆ ಎಂತಹಾ ಸೋಜಿಗ ಇದೆಲ್ಲಾ!  ಮತ್ತೆ ಇನ್ನೊಂದು ಮಾತು;  ಜಗಳವಾದಾಗ ಅವರಲ್ಲಿ ಯಾರು ಸರಿ ಹಾಗೂ ಯಾರು  ತಪ್ಪು ಎಂದು ನ್ಯಾಯ ಹೇಳಲು ತಮ್ಮ-ತಮ್ಮ ಅಮ್ಮಂದಿರನ್ನು ಕರೆಯಲೇಬಾರದು. ಅವರೇ ಅವರವರ ನ್ಯಾಯಮೂರ್ತಿಗಳಾಗಬೇಕು. ಪ್ರೀತಿಯೇ ದೇವರ ರಹಸ್ಯ, ಅಪರಿಚಿತರ ಕಣ್ಣಿಂದ ಆ ರಹಸ್ಯವನ್ನು ಮುಚ್ಚಿಡಬೇಕು, ಎಂತಹಾ ಗುಟ್ಟುಗಳೇ ಇರಲಿ ಅದನ್ನು ಬಿಟ್ಟುಕೊಡಬಾರದು. ಅದೇ ಪವಿತ್ರತೆ, ಅದೇ ಚೆಲುವು. ಹಾಗಿದ್ದಾಗಲೇ ಪ್ರೀತಿ ಅರಳುವುದು. ಒಬ್ಬರನ್ನು ಒಬ್ಬರು ಹೆಚ್ಚು-ಹೆಚ್ಚು ಗೌರವಿಸಿದರೆ ಅದೇ ಎಷ್ಟೋ ನೀತಿಗಳಿಗೆ ಪಂಚಾಂಗ. ಈಗ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾಗಲೂ  ಪ್ರೀತಿಯೇಕೆ ಮಾಯವಾಗುತ್ತದೆ? ಅದನ್ನು ಇವರಿಬ್ಬರಿಗೆ ಉಳಿಸಿಕೊಳ್ಳಲು ಆಗದೇ? ಖಂಡಿತಾ ಆಗುತ್ತದೆ. ಆದರೆ ಪತಿಯು ಶುದ್ಧನೂ, ಪ್ರಾಮಾಣಿಕನಾಗಿದ್ದಾಗಲೂ ಪ್ರೀತಿಗೇಕೆ ಗ್ರಹಣ ಹಿಡಿಯುತ್ತದೆ? ಪ್ರೀತಿಯ ಮೊದಲ ಮಿಂಚು ಭೂಗತವಾಗಿ, ಸರಿದು ಹೋಗುತ್ತದೆ, ಅದು ನಿಜವೇ. ಆದರೆ ನಂತರ ಇನ್ನೂ ಶ್ರೇಷ್ಠವಾದ ಪ್ರೀತಿಯು ಉಗಮಿಸುತ್ತದೆ. ಅದೇ ಅವರಿಬ್ಬರ ಹೃದಯಗಳ ಬೆಸುಗೆ; ಆಗ ಪ್ರೇಮಿಗಳಿಬ್ಬರೂ ಜಗತ್ತಿನ ಜಟಿಲ ಸಮಸ್ಯೆಗಳನ್ನು ಜತೆಯಾಗಿ ಬಗೆಹರಿಸುತ್ತಾರೆ. ಆಗ ಅವರಿಬ್ಬರ ಮಧ್ಯ ಯಾವ ರಹಸ್ಯಗಳೂ ಇರುವುದಿಲ್ಲ.  ಆಗಲೇ ಮಕ್ಕಳು ಹುಟ್ಟುವುದು, ಬೆಳೆಯುವುದು ಎಲ್ಲಾ.  ಅವರಿಬ್ಬರೂ ಗಾಢವಾಗಿ ಪ್ರೀತಿಸುತ್ತಾ ಧೈರ್ಯದಲ್ಲಿದ್ದರೆ  ಮಹಾ ಕಷ್ಟದ ಸಮಯವೂ ಅವರಿಗೆ ಆನಂದವೇ. ಹ್ಞೂಂ ಲೀಝಾ ನೀನು ಅಂತ ಹುಡುಗನನ್ನು ಮದುವೆಯಾಗಿದ್ದರೆ ನಿನಗೆ ಆಗ ಕಾಯಕವೂ ಆನಂದ! ನೀನು ಮಕ್ಕಳಿಗೋಸ್ಕರ ರೊಟ್ಟಿ ಬಿಟ್ಟು ಬೇಕಾದರೂ ಇರಬಹುದು ಅದೂ ಆನಂದವೇ. ಆಮೇಲೆ ಆ ಮಕ್ಕಳು  ಇದಕ್ಕೋಸ್ಕರವೇ ನಿನ್ನನ್ನು ಜಾಸ್ತಿ ಪ್ರೀತಿಸುತ್ತಾರೆ. ಇದೇ ನಿನ್ನ ಭವಿಷ್ಯವನ್ನು ಒತ್ತೆಯಿಡುವುದೆಂದರೆ. ನಿನ್ನ ಮಕ್ಕಳು ಬೆಳೆಯುತ್ತಿದ್ದಂತೆಯೇ  ನೀನೇ ಅವರ ಆದರ್ಶ ಶಿಲ್ಪ,  ಬೆನ್ನೆಲುಬು   ಎಂದು ಆನಂದಿಸುವೆ. ನೀನು ಸತ್ತಾಗ ನಿನ್ನ  ಮಕ್ಕಳ ಭಾವನೆಗಳಲ್ಲಿ, ಕನಸುಗಳಲ್ಲಿ ಉಳಿದು,  ಮತ್ತೆ ಬಾಳುತ್ತೀಯ, ಏಕೆಂದರೆ ಅವರೇ ನಿನ್ನ ರೂಪಾಂತರ. ನೋಡು, ಎಷ್ಟು ಮಹತ್ವದ ಕಾರ್ಯವಿದು. ಇಂತಹ ಸನ್ನಿವೇಶಗಳಲ್ಲಿ ಹೇಗೇ ಅಪ್ಪ-ಅಮ್ಮ ಹತ್ತಿರವಾಗದೇ ಉಳಿಯುತ್ತಾರೆ? ಮಕ್ಕಳೆಂದರೆ ನರಕ ಹೊತ್ತು ತರುವ ಪೀಡೆಗಳು, ಆ ಪಿಂಡಗಳನ್ನು ಸಾಕುವುದೇ ಸಂಕಟ ಎಂದೆಲ್ಲಾ ಹೇಳುತ್ತಾರೆ ಕೆಲವರು.  ಯಾರು ಈ ಮಾತುಗಳಾಡುವ ಮೂಢರು? ಸ್ವರ್ಗದಿಂದ ಬಂದಿರುವ ಬಳುವಳಿಯೇ ಸಂತಾನ ಸೃಷ್ಟಿ!  ಪುಣಾಣಿ ಮಕ್ಕಳೆಂದರೆ ನಿನಗೆ ಇಷ್ಟವೇ ಲೀಝಾ? ನನಗಿಷ್ಟ, ತುಂಬಾ ತುಂಬಾ ಇಷ್ಟ. ಸುಮ್ಮನೆ ಕಲ್ಪಿಸಿಕೋ ಗುಲಾಬಿ ಬಣ್ಣದ ಮುದ್ದು ಪುಣಾಣಿ, ನಿನ್ನ  ಮೊಲೆ  ಚೀಪಿದಂತೆ. ಹಾಗೆ ಸತಿಯೊಬ್ಬಳು ಮಗುವಿನ ಜತೆ ಕೂತಿರುವಾಗ, ಯಾವ ಪತಿಗೆ ಹೇಗೇ ತಾನೆ  ಕೋಪ ಬರುತ್ತದೆ? ಆ ಮುದ್ದು ಪಾಪು, ಗುಂಡು-ಗುಂಡಾಗಿ ಮೈ ಮುರಿದು ನಿನ್ನನ್ನು ತಬ್ಬುವುದು; ಅದರ ದುಂಡು-ದುಂಡು ಕೈ-ಕಾಲುಗಳು, ಪುಟ್ಟ-ಪುಟ್ಟ ಶುದ್ಧ ಉಗುರುಗಳು, ಅವನೆಲ್ಲಾ ನೋಡುವುದೇ ಒಂದು ಸಂತೋಷ,   ಅವನ ಪುಟಾಣಿ ಕಣ್ಣುಗಳು ಎಲ್ಲವನ್ನು ಬಲ್ಲ ಮಹಾತ್ಮನಂತೆ ಹೊಳೆಯುತ್ತದೆ. ಮತ್ತೆ ಅವನು ಚೀಪುವಾಗ ಅವನ ಪುಟ್ಟ ಕೈಗಳು ನಿನ್ನ ಮೊಲೆಗಳನ್ನು ಹಿಂಡಿ ಆಡುತ್ತದೆ.  ಮತ್ತೆ ಅವನ ಅಪ್ಪ ಬಂದಾಗ ಈ ಪಾಪು ಮೊಲೆಯಿಂದ ಕೈ ತೆಗೆದು, ತಲೆಯನ್ನು ಹಿಂದೆ ಬಾಗಿಸಿ ಅಪ್ಪನನ್ನು ನೋಡುತ್ತಾನೆ, ನಗುತ್ತಾನೆ -ಇದೊಂದು ಭಯಾನಕ ತಮಾಷೆ ಎನ್ನುವಂತೆ-  ಆಹಾ! ರುದ್ರ ಚೆಲುವದು. ಮತ್ತೆ-ಮತ್ತೆ ಅಮ್ಮನ ಮೊಲೆಯನ್ನು ಕಚ್ಚುತ್ತಾನೆ, ಅವನ ಹಲ್ಲುಗಳನ್ನು ಸವೆಸಬೇಕಲ್ಲ ಅದಕ್ಕೆ! ಮತ್ತೆ ಅವಳಾಚೆ ಓರೆ ನೋಟ ಬೀರುತ್ತಾನೆ: ‘ನೋಡು ನಿನ್ನ ನಾ ಕಚ್ಚಿದೆ!’ ಎನ್ನುವಂತೆ. ಸಂತೋಷವಲ್ಲವೇ ಇದು? ಅಪ್ಪ-ಅಮ್ಮ-ಮಗು ಒಟ್ಟಿಗೆ ಇರುವಾಗ ಘಟಿಸುವ ಸ್ಮರಣೀಯ ಕ್ಷಣಗಳಿವು. ಎಲ್ಲವನ್ನೂ ಕ್ಷಮಿಸಲೂ ಯೋಗ್ಯವಾದ ಅಮೃತ ಘಳಿಗೆಗಳು. ಇಲ್ಲ, ಲೀಝಾ, ಇದರರ್ಥ, ತಾನು ಮೊದಲು ಬದುಕಬೇಕು ಮತ್ತು ತನ್ನನ್ನು ತಾನೇ ಕಲಿಯಬೇಕು; ಆಮೇಲೆ ಇತರರನ್ನು ದೂರವುದು, ನಿಂದಿಸುವುದು ಎಲ್ಲಾ…”

“ಚಿತ್ರಗಳಿಂದ ಇಂತಹ ಚಿತ್ರಗಳಿಂದ ನಿನ್ನನ್ನು ಒಬ್ಬ ಪ್ರಚೋದಿಸಬೇಕು” ಎಂದು ಮನಸ್ಸಲ್ಲೇ ಅಂದುಕೊಂಡೆ.  ಆದರೆ ದೇವರ ಸಾಕ್ಷಿಯಾಗಿ, ನಾನು ಪ್ರಾಮಾಣಿಕ ಭಾವನೆಗಳಲ್ಲಿ ಮಾತನಾಡಿದ್ದರಿಂದ ಇದ್ದಕ್ಕಿದ್ದಂತೆ   ನಾಚಿದ್ದೆ. ಒಂದು ಪಕ್ಷ ಆಕೆ ಅಚಾನಕ್ಕಾಗಿ ಬಿದ್ದು ಬಿದ್ದು ನಕ್ಕರೆ, ಆಗ ನಾನು ಎಲ್ಲಿ ಅಡಗಲಿ? ಈ ಆಲೋಚನೆ ನನ್ನನ್ನು ಉದ್ರಿಕ್ತನನ್ನಾಗಿಸಿತು. ನನ್ನ ಭಾಷಣದ ಕೊನೆಯಲ್ಲೇ ನಾನೇ ಭಾವೋದ್ರೇಕನಾಗಿದ್ದೆ. ಈಗ ನನ್ನ ಆತ್ಮಾಭಿಮಾನ ಹೇಗೋ ಗಾಯಗೊಂಡಿತ್ತು. ಮೌನ ಮುಂದುವರೆಯಿತು. ಆ ಚಿಂತೆಯಿಂದ ಅವಳನ್ನು ಮೊಳಕೈಯಿಂದ ತಿವಿಯುವ ಆಸೆಯಾಗುತಿತ್ತು.

“ಹೇಗೋ… ಹೇಗೋ ನೀನು…”  ಎನ್ನುತ್ತಾ ಶುರುಮಾಡಿದ ಅವಳು ಹಾಗೆ ನಿಲ್ಲಿಸಿದಳು.

ನನಗೀಗ ಎಲ್ಲವೂ ಅರ್ಥವಾಯಿತು. ಅವಳ ಧ್ವನಿ ಈಗ ನವ್ಯ ಟಿಪ್ಪಣಿಯೊಂದನ್ನು ಹೊತ್ತು ನಡುಗುತ್ತಿತ್ತು. ಮೊದಲಿನ ಸಂಕ್ಷಿಪ್ತ ಚುಟುಕು ನುಡಿಗಳೆಲ್ಲ ಮಾಯವಾಗಿತ್ತು. ಆ ಕಲ್ಲಿನ, ಸೋಲೊಪ್ಪದ ಸ್ವರವು ಅಳಿಸಿ ಹೋಗಿತ್ತು. ಆ ಸ್ವರ  ಮೃದುವಾಗಿತ್ತು, ನಾಚಿತ್ತು. ಎಷ್ಟು ನಾಚಿತ್ತೆಂದರೆ, ನಾನು ಆಗ ನಾಚಿದ್ದೆ. ತಪ್ಪಿತಸ್ಥ ಭಾವನೆಯಿಂದ ಬಳಲಿದ್ದೆ.

“ಏನೇ?”   ಅಂದೆ ನಾನು, ಮಮತೆ ತುಂಬಿದ ಕುತೂಹಲದಲ್ಲಿ.

“ಆದರೆ ನೀನು…”

“ಏನು?”

“ಹೇಗೋ ಹೇಗೋ ಒಂಥರಾ… ಅಂದ್ರೆ ಪುಸ್ತಕದಿಂದ ಓದಿದ ಥರ ಮಾತಾಡ್ದೇ…” ಎಂದಳು.  ಅವಳ ಸ್ವರದಲ್ಲಿ ಮತ್ತೆ ಆ ಹಳೆಯ ಕುಹಕದ ಧಾಟಿ ಪ್ರತ್ಯಕ್ಷವಾಗಿತ್ತು.

   ಅವಳ ಪ್ರತ್ಯುತ್ತರ ನನ್ನನ್ನು ಕುಟುಕಿತು. ಇದನಲ್ಲ ನಾನು ನಿರೀಕ್ಷಿಸಿದ್ದು.

 ಈ ಪರಿಶುದ್ಧ ಹೃದಯಿಗಳ ಆತ್ಮವನ್ನು ದೋಚಲು ಹೊಂಚುಹಾಕುತ್ತಿರುವ ನನ್ನಂಥ ಮಂದಿ,  ಅಹಂಕಾರದಲ್ಲಿ  ನಿರಂತರವಾಗಿ ಇಂಥವರ ಮನಸ್ಸಿನ ಮೇಲೆ ದಂಡೆತ್ತಿ ಬಂದಾಗ, ಕಟ್ಟ ಕಡೆಯ ಘಳಿಗೆಯ ತನಕವೂ  ಶರಣಾಗಲು ಹಿಂದೇಟು ಹಾಕುವ ಭೋಳೆ ಸ್ವಭಾವದ ಮನುಷ್ಯರಿವರು. ಇವರೆಲ್ಲ ತಮ್ಮ ನಿಜ ಭಾವನೆಗಳನ್ನು ಏಕಾಏಕಿ ನಿಮ್ಮ ಮುಂದೆ ತೋರ್ಪಡಿಸಲು ಹೆದರಿ ಮುದುಡುತ್ತಾರೆ, ಅಥವಾ ಅವರ ಅಳಿದುಳಿದ ಅಹಂನ ಕೊನೆಯ ಕಿಡಿಗಳು ಅದಕ್ಕೆ ಅಡ್ಡಿ ಮಾಡಬಹುದುವುದೇನೋ. ಛೇ! ಅಂಜುಬುರುಕಿಯಾಗಿ,  ಹೆದರಿ ಅವಳ ಆಂತರ್ಯದ ಗುಪ್ತ ದನಿಯನ್ನು ಕೊನೆಗೂ ಉಚ್ಛರಿಸುವ ಮುನ್ನ ಬರುವ ಅಂತಿಮ ಹೋರಾಟದ ಕಡೇ ಪೀಠಿಕೆಯೆ ಈ ಪ್ರಯತ್ನಪೂರ್ವಕ, ಕೊನೆಯ ವ್ಯಂಗ್ಯ ಕಿಡಿ ನುಡಿ. ಇವನೆಲ್ಲಏಕೆ ನಾನು ಆಗಲೇ ಊಹಿಸಲಿಲ್ಲ…!     ನನಗಾಗ ಮಾತ್ಸರ್ಯದ ಗ್ರಹಣ ಹಿಡಿದಿತ್ತು.

“ನನ್ನನೇ ವ್ಯಂಗ್ಯ ಮಾಡ್ತೀಯೇನೆ ನಾಯಿ, ತಾಳು ನಿನ್ಗೆ ಇದೇ ಹಬ್ಬ ಇನ್ನು ಮಗ್ಳೇ…”

 

ಮುಂದುವರೆಯುವುದು…

ಅನುವಾದ :  ಗೌತಮ್ ಜ್ಯೋತ್ಸ್ನಾ

ಚಿತ್ರ : ಮದನ್ ಸಿ.ಪಿ

ಪ್ರತಿಕ್ರಿಯಿಸಿ