ನಿಜಕ್ಕೂ ಈ ಚಲನಚಿತ್ರ ಅತ್ಯಂತ ಹೊಸದಾದ ವಸ್ತುವನ್ನು ಪರಿಶೀಲಿಸುತ್ತಿದೆ. ಅದಕ್ಕೆ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಆದರೆ, ಮೂಲಭೂತ ವಿಷಯವೆಂದರೆ ಕಲೆಯ ಆತ್ಯಂತಿಕತೆಯಲ್ಲಿ ಅದರಷ್ಟಕ್ಕೇ ನಿಜವಾಗದೇ ವಸ್ತುವಿಗೆ ಬೆಲೆಯಿಲ್ಲ. ಆಧುನಿಕತೆಯ ಹೊದಿಕೆಯನ್ನ ನೀಟಾಗಿ ಹಾಸಿಕೊಂಡಿರುವ ಈ ಚಿತ್ರದ ಒಳಹರಿವು ಸಂಪೂರ್ಣ ಸಾಂಪ್ರದಾಯಿಕವಾದದ್ದು. ಮಾಡರ್ನ್ ಅನ್ನುವುದು ಈ ಚಿತ್ರದ ಸೋಗು. ಈ ಚಿತ್ರವನ್ನ ಹೆಚ್ಚಿನ ಜನ ಇಷ್ಟಪಡಲು ಮೂಲ ಕಾರಣ ಈ ಚಿತ್ರ ಪ್ರತಿಪಾದಿಸುವ ಯಥಾಸ್ಥಿತಿವಾದ.
ಈ ಕೆಳಗೆ ನಾನು ಬರೆಯಬೇಕಾಗಿ ಬಂದ ನೋಟವನ್ನು, ನನ್ನ ಸ್ನೇಹಿತರು ಅನೇಕರು ಹಂಚಿಕೊಂಡರೂ ಸಹ, ಕಡೆಗೆ ಯಾರೂ ಬರೆಯದೇ ಉಳಿದಿದ್ದರಿಂದ ನಾನು ಬರೆಯುತ್ತಿದ್ದೇನೆ. ನಾನು ಹೇಳಬೇಕಾಗಿದ್ದು ನಿಮ್ಮ ಮುಂದಿದೆ:
ಚಿತ್ರಕ್ಕೆ ನೇರವಾಗಿ ಸಂಬಂಧಿಸಿರದೇ ಇದ್ದರೂ ಸಹ, ಈ ಕಾಲದ ಈ ಬಗೆಯ ಕನ್ನಡ ಚಿತ್ರಗಳು ಎಲ್ಲಿ ನಿಲ್ಲುತ್ತಿವೆ ಎಂಬುದನ್ನು ಪರೀಕ್ಷಿಸುವುದಕ್ಕೋಸ್ಕರ ಇದು ಮುಖ್ಯ. ನಾತಿಚರಾಮಿ ನಾನು ನೋಡಬೇಕಾಗಿ ಬಂದದ್ದು ನೆಟ್ ಪ್ಲಿಕ್ಸ್ ನಲ್ಲಿ. ನಮ್ಮಲ್ಲಿ ಬಿಡುಗಡೆಯಾಗುವ ಚಿತ್ರಗಳಿಗೂ , ಪುಟ್ಟ ಊರುಗಳಲ್ಲಿ ಲಭ್ಯವಿರುವ ಚಿತ್ರ ಮಂದಿರಗಳಿಗೂ ತಾಳ ಮೇಳ ಇಲ್ಲದ್ದರಿಂದ ಮುಕ್ಕಾಲು ಪಾಲು ಸಿನೆಮಾಗಳು ಮುಕ್ಕಾಲು ಪಾಲು ಕನ್ನಡಿಗರಿಗೆ ನೋಡಲು ಸಿಗುವುದಿಲ್ಲ ಎಂಬುದು ಈ ಚಿತ್ರೋದ್ಯಮದ ವೈರುಧ್ಯ. ಇಲ್ಲಿ ನಾನು ನೆಟ್ ಪ್ಲಿಕ್ಸ್ ವಿಷಯವನ್ನು ಎಳೆದು ತರಲು ಇನ್ನೊಂದು ಕಾರಣವಿದೆ. ಕನ್ನಡ ಪ್ರೇಕ್ಷಕನ ಮಟ್ಟಿಗೆ ನಾತಿಚರಾಮಿ ಯ ವಸ್ತು ಅಪರೂಪದ್ದು ಎಂದು ಹೇಳಲಾಗಿದೆ. ಅದು ನಿಜವೂ ಹೌದು. ಆದರೇ, ಅದೇ ಒಬ್ಬ ನೆಟ್ ಪ್ಲಿಕ್ಸ್ ಪ್ರೇಕ್ಷಕನಿಗೆ ಈ ವಸ್ತು ಹೊಸತೇನಲ್ಲ. ಕನ್ನಡದ ಪ್ರೇಕ್ಷಕ ಇನ್ನೂ ಕನ್ನಡ ಚಿತ್ರಗಳ ಪ್ರೇಕ್ಷಕನಾಗಿಯಷ್ಟೇ ಉಳಿದಿದ್ದಾನೆಯೇ ಅಥವಾ ಸುಲಭದಲ್ಲಿ ಸಿಗುವ ಯುಟ್ಯೂಬ್, ಟೊರೆಂಟ್, ನೆಟ್ ಪ್ಲಿಕ್ಸ್, ಅಮೇಜಾನ್ ಮಾಧ್ಯಮಗಳಿಂದ ವಿಶ್ವ ಪ್ರೇಕ್ಷಕನಾಗಿ ಬದಲಾಗಿದ್ದಾನೆಯೇ ಎಂಬುದು ಪ್ರಶ್ನೆ. ಈ ಮಾಧ್ಯಮಗಳಲ್ಲಿ ಜಾಗತಿಕ ಸಿನೆಮಾಗಳನ್ನು ನೋಡುವ ಪ್ರೇಕ್ಷಕನಿಗೆ ನಾತಿಚರಾಮಿ ಚಿತ್ರದ ವಸ್ತು ಹೊಸತು ಎನಿಸಲಾರದು.
ಒಂಟಿ ಹೆಣ್ಣಿನ ’ಕಾಮ’ ದ ಬಯಕೆಯನ್ನೇ ವಸ್ತುವಾಗಿಟ್ಟುಕೊಂಡ ಸಿನೆಮಾ ನಾತಿಚರಾಮಿ. ಪುರುಷ ಪ್ರಧಾನ ಸಮಾಜದಲ್ಲಿ, ಹೀರೋ ವೈಭವೀಕರಣದ ಚಿತ್ರ ಜಗತ್ತಿನಲ್ಲಿ ಇಂತಹದೊಂದು ಗಂಭೀರ ವಿಷಯವನ್ನು ಆಯ್ದುಕೊಳ್ಳಲು ಹುಂಬ ಧೈರ್ಯ ಬೇಕಾಗುತ್ತದೆ. ಇಲ್ಲಿ ಧೈರ್ಯ ವನ್ನು ಎರಡು ಅರ್ಥದಲ್ಲಿ ಬಳಸಿಕೊಂಡಿದ್ದೇನೆ. ಒಂದು, ಈ ಕಥಾ ಹಂದರವುಳ್ಳ ಚಿತ್ರಗಳಿಗೆ ಬಂಡವಾಳ ಹಾಕುವ ಧೈರ್ಯ, ಇನ್ನೊಂದು ಇಷ್ಟು ಸೂಕ್ಷ್ಮ ವಿಷಯವನ್ನು ದೃಶ್ಯ ಮಾಧ್ಯಮದಲ್ಲಿ ಸಮರ್ಥವಾಗಿ ನಿರ್ವಹಿಸಬಲ್ಲೆ ಎಂಬ ಧೈರ್ಯ. ಮೊದಲನೆಯದು ವ್ಯವಹಾರಿಕವಾದದ್ದು; ಎರಡನೆಯದ್ದು ಪ್ರತಿಭೆ ಮತ್ತು ಕಲೆಗೆ ಸಂಬಂಧಿಸಿದ್ದು.
ಗೌರಿ ಎಂಬ ಯುವ ವಿಧವೆ ಚಿತ್ರದ ಕೇಂದ್ರ ಪಾತ್ರ. ಗಂಡ ತೀರಿಕೊಂಡು ವರುಷಗಳಾದರೂ ಭಾವನಾತ್ಮಕವಾಗಿ ತನ್ನ ದೈನಿಕದಲ್ಲಿ ಮಾನಸಿಕವಾಗಿ ಗಂಡನ ನೆನಪಿನಲ್ಲೇ ಇರುವ ಹೆಣ್ಣು ಗೌರಿ. ಇಷ್ಟೊಂದು ಗಾಢತೆ ಆ ಸಂಬಂಧದಲ್ಲಿ ಹೇಗೆ ಬಂತು ಎನ್ನುವುದರ ಕುರಿತು ಚಿತ್ರ ಏನನ್ನೂ ಹೇಳುವುದಿಲ್ಲ. ವ್ಯಕ್ತಿ ತೀರಿಕೊಂಡ ವರುಷಗಳ ನಂತರವೂ ಗೌರಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಆತ್ಮ ಸಂಗಾತಿಯ ಅವಶ್ಯಕತೆ ಇದೆ ಎನಿಸುವುದಿಲ್ಲ. ಆಕೆಯ ಸದ್ಯದ ತುರ್ತು ಮಾನಸಿಕ ಸಂಬಂಧಗಳ ಹಂಗಿಲ್ಲದೆ ತನ್ನ ದೈಹಿಕ ಹಸಿವನ್ನ ತೀರಿಸಿಕೊಳ್ಳುವುದು. ಮನಶಾಸ್ತ್ರಜ್ನನನ್ನು ಭೇಟಿಯಾದ ನಂತರ ಆಕೆಗೆ ಇದರ ಅಗತ್ಯದ ಮನವರಿಕೆ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಮತ್ತು ಈ ಹಸಿವನ್ನ ತೀರಿಸಿಕೊಳ್ಳಲು ಆಕೆ ಆರಿಸಿಕೊಳ್ಳುವುದು ಸುರೇಶ್ ಎಂಬ ವ್ಯಕ್ತಿಯನ್ನ.
ಆಕೆ ಸುರೇಶ್ ನನ್ನೇ ಯಾಕೆ ಆಯ್ದುಕೊಳ್ಳುತ್ತಾಳೆ ಅನ್ನುವುದು ನಮ್ಮೆದುರಿಗಿನ ಇನ್ನೊಂದು ಪ್ರಶ್ನೆ. ಇದಕ್ಕೆ ಪೂರಕವಾಗಿ ಚಿತ್ರ ನಿರ್ದೇಶಕರು ಕಟ್ಟಿ ಕೊಟ್ಟಿರುವ ದೃಶ್ಯಗಳಲ್ಲಿ , ಬಸ್ ಸ್ಟ್ಯಾಂಡಿನಲ್ಲಿ ಗೌರಿಯನ್ನು ಹಿಂಬಾಲಿಸುವ ಹುಡುಗರು ಮತ್ತು ಆಫೀಸಿನಲ್ಲಿ ತನ್ನ ದೇಹದ ಆಸೆ ತೀರಿಸುವ ಆಮಿಶ ತೋರಿಸುವ ಮ್ಯಾನೇಜರ್ ಇವರುಗಳಿಗಿಂತ ತನ್ನನ್ನು ಕಣ್ಣೆತ್ತಿಯೂ ನೋಡದ ಸುರೇಶನನ್ನು ಆಕೆ ಬಯಸುವುದೇಕೆ? ಗೌರಿಯ ನಿಜವಾದ ಅಗತ್ಯ ಕಾಮದ ಹಸಿವೇ ಆಗಿದ್ದರೆ ಅವಳು ಸುರೇಶನನ್ನ ಆಯ್ದುಕೊಂಡದ್ದೇಕೆ? ನಗರದಲ್ಲಿ ದುಡಿಯುತ್ತಿರುವ ವಿದ್ಯಾವಂತ ಹೆಣ್ಣಾಗಿ ಕಾಮದ ಬಯಕೆಯನ್ನ ತೀರಿಸಿಕೊಳ್ಳುವ ಹಲವಾರು ಸಾಧ್ಯತೆಗಳು ಆ ಪಾತ್ರಕ್ಕಿದ್ದಿರಬಹುದೇ? ಚಿತ್ರ ಈ ಕುರಿತು ಏನನ್ನೂ ಮಾತನಾಡುವುದಿಲ್ಲ. ಸಮಸ್ಯೆ ಇರುವುದು ಇಲ್ಲಿ. ಹೌದು, ನಿಜಕ್ಕೂ ಈ ಚಲನಚಿತ್ರ ಅತ್ಯಂತ ಹೊಸದಾದ ವಸ್ತುವನ್ನು ಪರಿಶೀಲಿಸುತ್ತಿದೆ. ಅದಕ್ಕೆ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಆದರೆ, ಮೂಲಭೂತ ವಿಷಯವೆಂದರೆ ಕಲೆಯ ಆತ್ಯಂತಿಕತೆಯಲ್ಲಿ ಅದರಷ್ಟಕ್ಕೇ ನಿಜವಾಗದೇ ವಸ್ತುವಿಗೆ ಬೆಲೆಯಿಲ್ಲ. ಕಡೆಯ ವಾಕ್ಯ ಅರ್ಥವಾಗಲಿಲ್ಲವೇ? – ಮುಂದಿನ ವಾಕ್ಯದಲ್ಲಿ ವಿವರಣೆಯಿದೆ: ಒಂದು ಚಲನಚಿತ್ರದ ಆಶಯ ಅತ್ಯಂತ ಪ್ರಗತಿಪರವಾಗಿರಬಹುದು. ಆದರೆ, ಸಿನೆಮಾದ ಚೌಕಟ್ಟಿನಲ್ಲಿಯೇ ಅದು ನಿಜವಾಗಬೇಕು. ಆಗ ಅದು ಒಳ್ಳೆಯ ಚಿತ್ರ.
ಚಿತ್ರದ ಇನ್ನೊಂದು ಪ್ರಮುಖ ಪಾತ್ರವಾದ ಸುರೇಶ್ ಕಾಮದ ವಿಷಯದಲ್ಲಿ ಹೆಂಡತಿಯಿಂದ ಪೂರ್ಣ ಸಂತೃಪ್ತ. ಆದರೇ, ತಾನು ಹಳ್ಳಿ ಹುಡುಗಿಯನ್ನು ಮದುವೆಯಾಗುವ ಬದಲು ಪೇಟೆ ಹುಡುಗಿಯನ್ನು ಮದುವೆಯಾಗಬೇಕಿತ್ತೆನ್ನುವುದು ಆತನ ಗಿಲ್ಟ್ ಮತ್ತದರ ಪರಿಣಾಮ ದಿನ ನಿತ್ಯ ಹೆಂಡತಿಯ ಮೇಲೆ ವಿನಾಕಾರಣ ರೇಗುತ್ತಾನೆ. ಸುರೇಶನ ಹೆಂಡತಿ “ಹಳ್ಳಿ ಗಮಾರಿ ಎನ್ನುತ್ತದೆ ಚಿತ್ರ. ಆದರೆ ಎಲ್ಲೂ ಆಕೆಯ ಗಮಾರತನ ಏನು ಎನ್ನುವುದು ಚಿತ್ರಿತವಾಗುವುದಿಲ್ಲ. ಸುರೇಶನ ತಲೆಯಲ್ಲಿಯೇ ತನ್ನ ಹೆಂಡತಿ ಗಮಾರಿ ಎಂದಿದ್ದರೆ ಆ ಗಮಾರತನ ಆತನ ಕಲ್ಪನೆಯ ಗಮಾರತನವೇ ಆಗಿರಬೇಕು. ಯಾವುದು ಆ ಗಮಾರತನ? ಪ್ರತಿಮನೆಯಲ್ಲಿಯೂ ಟಿವಿಗಳಲ್ಲಿ ಪ್ರಸಾರವಾಗುವ ಸೀರಿಯಲ್ ಗಳಲ್ಲಿ ಬರುವ ಹೆಣ್ಣಿನ ಗಮಾರತನವೋ, ಅಥವಾ “ಯವ್ವಿ ಯವ್ವಿ” ಅನ್ನುತ್ತಿದ್ದ ಹೆಣ್ಣಿನ ಗಮಾರತನವೋ?” ಅದು ಚಿತ್ರದಲ್ಲಿಯೇ ನಿಜವಾದ ಹೊರತೂ ಈ ಎಲ್ಲವೂ ತುರುಕಿದ್ದಾಗಿ ಮತ್ತು ಕಲೆಯ ಶಿಲ್ಪದಿಂದಲೇ ಭಿನ್ನವಾದ “ವಾದ”ಗಳಾಗಿ ಕಾಣುತ್ತವೆ. ಚಿತ್ರವು ಎಸ್ಸೆಯಾಗಬಾರದು. ನೋಡಿ: ಸುರೇಶನಿಗೆ ನಿಜವಾಗಿಯೂ ನಗರದ ಮನಸ್ಥಿತಿಯ ಮುಂದುವರಿದ ಹೆಣ್ಣೇ ಬೇಕಾಗಿದ್ದರೆ, ಗೌರಿ ತನ್ನ ಮನದ ಬಯಕೆ ತೋಡಿಕೊಂಡಾಗ ಆಕೆಯನ್ನ ತಿರಸ್ಕಾರದಿಂದ ನೋಡುತ್ತಿರಲಿಲ್ಲ. ಸರಳ.
ಈ ಮೇಲಿನ ಎರಡು ಪಾತ್ರ ಪೋಷಣೆಯಲ್ಲಿನ ದೌರ್ಬಲ್ಯವೇ ಚಿತ್ರದ ಮೂಲ ಸಮಸ್ಯೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದ ವರೆಗೂ ಹೆಚ್ಚು ಕಡಿಮೆ ಒಂದೇ ಮುಖಭಾವ ಹೊತ್ತ ಗೌರಿಯ ಪಾತ್ರ ಗೋಜಲು ಗೋಜಲಾಗಿದೆ. ಶೃತಿ ಹರಿಹರನ್ ಅಭಿನಯ ಕೂಡ ಒಂದು ಹಂತದ ನಂತರ ಏಕತಾನತೆಯಿಂದ ಬಳಲುತ್ತದೆ. ಕಾಮದ ಹಸಿವು ಮತ್ತು ಗಂಡನ ನೆನಪಿನ ಒಳಗೆ ಬಂಧಿಸಿಟ್ಟ ಆ ಪಾತ್ರಕ್ಕೆ ಅದರ ಹೊರಗೆ ಒಂದು ವ್ಯಕ್ತಿತ್ವವನ್ನ ಕಟ್ಟಿ ಕೊಡುವ ಪ್ರಯತ್ನವೇ ಕಾಣುವುದಿಲ್ಲ. ಈ ಕಾರಣಕ್ಕೇ ತನ್ನ ಮ್ಯಾನೇಜರ್ ನ ಮೇಲೆ ಗೌರಿ ಏಕಾಏಕಿ ರೇಗುವುದು ನಮಗೆ ಸಹಜವೆನಿಸುವುದಿಲ್ಲ. ಆಕೆಯೊಳಗಿನ ಕಾಮದ ಉತ್ಕಟತೆಯಾಗಲೀ ಅದನ್ನ ಪಡೆಯಲಾಗದ ಅನಿವಾರ್ಯ ಸಂಕಟಗಳಾಗಲಿ ದೃಶ್ಯಗಳಲ್ಲಿ ದಾಖಲಾಗಲಿಲ್ಲ. ಸುರೇಶನ ಪರಿಚಯವಾದ ನಂತರ ಆತನೊಂದಿಗೆ ಸುತ್ತಾಡುವ ದೃಶ್ಯಗಳು ಗೌರಿಗೆ ತನ್ನ ಭಾವನೆಗಳನ್ನ ಹಂಚಿಕೊಳ್ಳುವ ಮನಸ್ಸೊಂದು ಬೇಕಿದೆ ಎನಿಸುತ್ತದೆಯೇ ಹೊರತು ಆಕೆಯ ದೇಹದ ಬಯಕೆಯ ಆಕಾಂಕ್ಷೆ ಸೂಕ್ಷ್ಮವಾಗಿಯೂ ಪ್ರಕಟಗೊಳ್ಳುವುದಿಲ್ಲ. ಹೀಗಾಗಿ ಆಕೆ ಸುರೇಶನೊಡನೆ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಡುವುದು ಅನಿರೀಕ್ಷಿತವಾದ ಹೇರಿಕೆ ಎಂದೆನಿಸುತ್ತದೆ.
ಈ ರೀತಿ ಚಿತ್ರದ ಎರಡೂ ಪಾತ್ರಗಳು ಹುಸಿ ತೋರಿಕೆಯದ್ದಾಗಿ ಈ ಪಾತ್ರಗಳ ಮೇಲೆ ನಿಂತಿರುವ ಚಿತ್ರದ ಶಿಲ್ಪವೇ ಕುಸಿದು ಬಿದ್ದಿದೆ.
ಚಿತ್ರದ ಉತ್ತರಾರ್ಧದ ಘಟನಾವಳಿಗಳು ನನ್ನ ಈ ಮಾತುಗಳನ್ನ ಪುಷ್ಟಿಕರಿಸುತ್ತವೆ.
ಸುರೇಶನ ಹೆಂಡತಿ ಗಂಡನಿಗೆ ಪ್ರತಿರೋಧ ತೋರಿ ದೇಹ ಹಂಚಿಕೊಳ್ಳಲು ನಿರಾಕರಿಸುತ್ತಾಳೆ. ಸುರೇಶ ಗೌರಿಯ ಈ ಹಿಂದಿನ ಬೇಡಿಕೆಯಂತೆ ಆಕೆಯೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒಪ್ಪಿಕೊಳ್ಳುತ್ತಾನೆ. ಅವರು ಸೇರಬೇಕಾಗಿದ್ದ ದಿನವೇ ಗೌರಿಯ ಮಾವ ಮನೆಗೆ ಬಂದು ಗೌರಿಯ ಕುರಿತು ಪ್ರಶಂಸೆಯ ಮಾತುಗಳನ್ನಾಡುತ್ತಾರೆ. ಮಾವನ ಮನಸ್ಸುಗಳಿಂದ ಗೌರಿಯ ಮನಸ್ಸು ಭಾರವಾಗುತ್ತದೆ. ಹೀಗಿದ್ದೂ ಗೌರಿ ಮತ್ತು ಸುರೇಶ ನ ನಡುವೆ ದೈಹಿಕ ಸಂಪರ್ಕ ಏರ್ಪಡುತ್ತದೆ. ಗೌರಿ ಮನೆಯ ಗೋಡೆಯ ಮೇಲೆ ಆಕೆಯ ಗಂಡನ ಫೋಟೊಗಳನ್ನು ನೋಡಿದ ಸುರೇಶನಿಗೆ ಹೆಂಡತಿಯ ನೆನಪಾಗಿ ಆತ ಪೂರ್ತಿ ಬದಲಾಗುತ್ತಾನೆ. ಮನೆಗೆ ಬಂದು ಪ್ರೀತಿಯಿಂದ ಹೆಂಡತಿಯನ್ನು ತಬ್ಬಿಕೊಳ್ಳುತ್ತಾನೆ. ಅತ್ತ ಗೌರಿ ತನ್ನ ದೈನಿಕವನ್ನು ಸಂಪೂರ್ಣ ಆವರಿಸಿದ್ದ ಗಂಡನಿಂದ ಹೊರ ಬರುತ್ತಾಳೆ.
ಚಿತ್ರದಲ್ಲಿ ಬರುವ ಈ ದೃಶ್ಯಗಳನ್ನು ಹೀಗೆ ಕ್ರಮವಾಗಿ ಜೋಡಿಸಿದ್ದು ಹೇಗೆ ಇಡಿಯ ಕತೆ ಸೋಗಲಾಡಿತನದಿಂದ ಕೂಡಿದೆ ಎಂಬುದನ್ನು ಚರ್ಚಿಸುವುದಕ್ಕೆ. ಸುರೇಶನ ಹೆಂಡತಿ ದೈಹಿಕ ಸಂಪರ್ಕ ನಿರಾಕರಿಸಿದ ತಕ್ಷಣ ಸುರೇಶ ಗೌರಿಯ ಲೈಂಗಿಕ ಬೇಡಿಕೆ ಒಪ್ಪಿಕೊಳ್ಳುತ್ತಾನೆ. ಆ ದಿನವೇ ಗೌರಿಯ ಮಾವ ಬಂದು ಗೌರಿಯ ಕುರಿತು ಪ್ರಶಂಸೆಯ ಮಾತುಗಳನ್ನಾಡುವುದು ಮುಂದಿನ ದೃಶ್ಯದಲ್ಲಿ ಬರುವ ಲೈಂಗಿಕ ದೃಶ್ಯಕ್ಕೆ ಮಾರಲ್ ಜಸ್ಟಿಫಿಕೇಷನ್ ತರ ಇದೆ. ದೇಹದ ಬಯಕೆಯನ್ನು ತೀರಿಸಲಷ್ಟೇ ಆಕೆ ಸುರೇಶನನ್ನು ಕೂಡುತ್ತಿದ್ದಾಳೆಯೇ ವಿನಃ ಮಾನಸಿಕವಾಗಿ ಆಕೆ ಇನ್ನೂ ಪರಿಶುದ್ಧಳು ಎನ್ನುವ ಸೂಕ್ಷ್ಮ ಈ ದೃಶ್ಯದಲ್ಲಿದೆ. ಇದಕ್ಕೆ ಪೂರಕವೆಂಬಂತೆ ಸುರೇಶನೊಡನೆ ಕಳೆಯುವ ಲೈಂಗಿಕ ಕ್ಷಣಗಳಲ್ಲೂ ಆಕೆಯೊಳಗೆ ಇಷ್ಟು ವರ್ಷದಿಂದ ಕಾದಿದ್ದ ಗಳಿಗೆ ಸಿಕ್ಕ ಸುಖ, ಸಂತೋಷ, ಸಮಾಧಾನಗಳಾಗಲೀ ಕಾಣುವುದಿಲ್ಲ. ಇನ್ನು ಇದರ ನಂತರ ಏಕಾಏಕಿ ಸುರೇಶನಿಗೆ ಪಾಪಪ್ರಜ್ನೆ ಕಾಡಿ ಹೆಂಡತಿಯ ಬಳಿ ಓಡುವುದು ನಮ್ಮ ಕಮರ್ಶಿಯಲ್ ಸಿನೆಮಾಗಳ ಗಿಮಿಕ್ ಗಿಂತ ಕಡಿಮೆ ಏನಿಲ್ಲ.
ಇಲ್ಲಿ ನನ್ನ ವಾದವೆಂದರೆ ಸುರೇಶ ಮತ್ತು ಗೌರಿ ಕೂಡಿದ್ದೇ ಸುಳ್ಳು. (ಇಂಗ್ಲೀಷಿನಲ್ಲಿ ಫೇಕಡ್ ಇಟ್ ಅನ್ನುತ್ತಾರಲ್ಲ ಹಾಗೆ). ಬಹುಶಃ ಈ ಅತೃಪ್ತಿಯಿಂದಲೇ ಸುರೇಶನಿಗೆ ಮತ್ತೆ ಹೆಂಡತಿಯ ನೆನಪಾಗಿ ಆಕೆಯ ಬಳಿ ಓಡಿ ಹೋಗಿದ್ದೇ ಹೊರತು, ಚಿತ್ರ ಹೇಳುವಂತೆ ಆತ ಬದಲಾದ ಎನ್ನುವುದನ್ನ ನಂಬುವುದು ಕಷ್ಟ.
ಆಧುನಿಕತೆಯ ಹೊದಿಕೆಯನ್ನ ನೀಟಾಗಿ ಹಾಸಿಕೊಂಡಿರುವ ಈ ಚಿತ್ರದ ಒಳಹರಿವು ಸಂಪೂರ್ಣ ಸಾಂಪ್ರದಾಯಿಕವಾದದ್ದು. ಮಾಡರ್ನ್ ಅನ್ನುವುದು ಈ ಚಿತ್ರದ ಸೋಗು.. ಈ ಚಿತ್ರವನ್ನ ಹೆಚ್ಚಿನ ಜನ ಇಷ್ಟಪಡಲು ಮೂಲ ಕಾರಣ ಈ ಚಿತ್ರ ಪ್ರತಿಪಾದಿಸುವ ಯಥಾಸ್ಥಿತಿವಾದ. ಇದುವೇ ಈ ಚಿತ್ರದ ಆತ್ಮ ಎನ್ನುವುದು ಮೇಲಿನ ಸಂಗತಿಗಳು ಸ್ಪಷ್ಟವಾಗಿ ನಿರೂಪಿಸುತ್ತವೆ.
ಮನೋವೈದ್ಯನಾಗಿ ಬರುವ ಕರ್ವಾಲೋ ಚಿಕಿತ್ಸಕನಿಗಿಂತ ಹೆಚ್ಚಾಗಿ ಫಿಲಾಸಾಫರ್ ತರ ಕಾಣುತ್ತಾನೆ. ಈ ಪಾತ್ರಕ್ಕೆ ಕನ್ನಡ ಕಾದಂಬರಿ ಲೋಕದ ಜನಪ್ರಿಯ ಪಾತ್ರವೊಂದರ ಹೆಸರಿಟ್ಟದ್ದು, ತೇಜಸ್ವಿಯವರ ಆಸಕ್ತಿಯ ವಿಷಯಗಳನ್ನು ಆ ಪಾತ್ರದ ಮೇಲೆ ಬಲವಂತವಾಗಿ ಹೇರಿರುವುದು ಅಸಂಬದ್ಧವಾಗಿದೆ. ತೇಜಸ್ವಿ ಅಂಶವನ್ನು ಹೊರಗಿಟ್ಟು ನೋಡಿದರೂ ಆ ಪಾತ್ರ ಚಿತ್ರದ ಹೊರಗೇ ನಿಲ್ಲುತ್ತದೆ.
ಕಡೆಯದಾಗಿ, ಚಿತ್ರದ ನಾಯಕಿಯ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಕೊಡಬೇಕು ಎಂಬ ಕೋರಿಕೆಗಳು ಕೂಡ ಕೆಲವು ಕಡೆ ವ್ಯಕ್ತವಾಗಿವೆ. ಪರಿಸರವಾದಿ ಚಿತ್ರವೊಂದರಲ್ಲಿ ಸಾಲುಮರದ ತಿಮ್ಮಕ್ಕನನ್ನು ಹಾಕಿಕೊಂಡಾಗ ಅವರ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಕೊಡಿ ಎನ್ನುವುದು ಎಷ್ಟು ಸಮಸ್ಯೆಯೋ – ಇದೂ ಹಾಗೆಯೇ!ಹಾಗಿರುವ ಸಮಸ್ಯೆಯನ್ನಿಟ್ಟುಕೊಂಡು ಈ ಬರವಣಿಗೆಯನ್ನು ನಿಮ್ಮೆದುರಿಗೆ ಇಡಬೇಕಾಗಿ ಬಂದಿದೆ. ಏಕೆಂದರೆ ಒಂದು ಚಲನಚಿತ್ರವು ನಮ್ಮ “ರಾಜ್ಯ, ಸಂಸ್ಕೃತಿ, ಭಾಷೆ, ಲಿಂಗ, ಯಾಜಮಾನ್ಯ…” ಇತ್ಯಾದಿಗಳನ್ನು ಒಡೆದು ಮಾಡಲ್ಪಟ್ಟಿದೆ ಎಂದಾದಾಗ ಅದು ನಿಜಕ್ಕೂ ಹೆಮ್ಮೆಯ ವಿಷಯವೇ ಹೌದು. ಆದರೆ, ಕ್ಷಮಿಸಿ, ಒಬ್ಬ ಸಿನೆಮಾ ವೀಕ್ಷಕನಾಗಿ ಮತ್ತು ಜಗತ್ತಿನ ಸಿನೆಮಾದ ಓದುಗನಾಗಿ ನನಗೆ ಸಿನೆಮಾ ಒಂದು ರೂರ್ಪುಗೊಳ್ಳುವುದೇ ಮೂಲಭೂತವಾಗಿ ಬರವಣಿಗೆಯಲ್ಲಿ ಎಂಬ ಅರಿವಿದೆ. ಬರವಣಿಗೆ ಎಂಬುದು ಕಥೆ ಕಾದಂಬರಿ, ಪತ್ರಿಕೋದ್ಯಮ, ಫೇಸ್ಬುಕ್ ಸ್ಟೇಟಸ್ ಎಂಬರ್ಥದ ಬರವಣಿಗೆಯಲ್ಲ. ಸಿನೆಮಾ ಬರವಣಿಗೆಯ ರೀತಿಯಲ್ಲೇ ಒಂದು ಭಿನ್ನತೆಯಿದೆ. ಅದು ಈ ಚಿತ್ರದಲ್ಲಿ ಹೇಗೆಲ್ಲ ಒಡಮೂಡಿಲ್ಲ ಎಂಬುದನ್ನು ಹೇಳುವುದು ನನಗೆ ಮುಖ್ಯವಾಗಿ ಕಾಣುತ್ತದೆ.
ಋತುಮಾನದ ಸಂಪಾದಕರಲ್ಲೊಬ್ಬರಾದ ಕಿರಣ್ ಸಾಗರದವರು . ಸಾಹಿತ್ಯ ಮತ್ತು ಸಿನೆಮಾ ಆಸಕ್ತಿಯ ವಿಷಯಗಳು. ಉದ್ಯೋಗ ನಿಮಿತ್ತ ಕುಮುಟದಲ್ಲಿ ನೆಲೆಸಿದ್ದಾರೆ .
ಬಹಳ ಚೆನ್ನಾಗಿ ವಿಶ್ಲೇಷಿಸಿದ್ದೀರಿ ಸರ್. ನಮ್ಮ ಮನಸ್ಸಿನಲ್ಲಿ ಮೂಡಿದ ಅಷ್ಟೂ ಪ್ರಶ್ನೆಗಳಿಗೆ ಸಮರ್ಪಕವಾಗಿ ಅಕ್ಷರದ ರೂಪ ಕೊಟ್ಟಿದ್ದಿರಿ. ಧನ್ಯವಾದಗಳು
At last I saw someone who hooked it right… Hahaha…..happy to read. I totally agree.
The only sensible review for this over rated film. Thank you ruthumana
Sensible review. I totally agree with you.
Nice review, After watching this film lot of questions on both character,now I got all answer.Thank you….
Yes you are right. But I think you were not supposed to waste your time for writing on this cinema. It won’t deserve so long write up.
Even I had expressed the same reaction when I watched this movie.
And I felt your column could have been bit shorter. It is lag.
Allignment is not good for reading on a mobile phone
ಚಿತ್ರವನ್ನು ಅರ್ಥ ಮಾಡಿಕೊಳ್ಳುವಲ್ಲಿ ಲೇಖಕರು ಎಡವಿದ್ದಾರೆ. ಸೋತಿದ್ದಾರೆ ಅನ್ನೋದು ಸ್ಪಷ್ಟ.
ಚೆಂದ ವಿಶ್ಲೇಷಿಸಿದ್ದೀರಿ
ನಮಗೆ ಹೇಳಬೇಕು ಎನಿಸಿದ್ದು ನೀವು ಬರೆದ ಹಾಗಿದೆ ! ನಮ್ಮ ಸುಮಾರು ಪ್ರಶ್ನೆಗಳನ್ನು ನೀವು ಉತ್ತರಿಸಿದ್ದೀರಿ ; ಧನ್ಯವಾದಗಳು