ಜಲ್ಲಿಕಟ್ಟು – ಒಂದು ಸಾಮಾಜಿಕ ಆಟ

ಅಂಗಮಾಲಿ ಡೈರೀಸ್ , ಈ . ಮ. ಯೂ ಚಿತ್ರಗಳಿಂದ ಪ್ರಸಿದ್ಧಿಗೆ ಬಂದ ಮಲಯಾಳಂ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸೆರಿ ಯವರ ಇತ್ತೀಚಿನ ಚಿತ್ರ “ಜಲ್ಲಿಕಟ್ಟು” ತನ್ನ ಕಥೆ ಮತ್ತು ದೃಶ್ಯ ನಿರೂಪಣೆಗೆ ಎಲ್ಲೆಡೆ ಪ್ರಶಂಶೆ ವ್ಯಕ್ತವಾಗುತ್ತಿದೆ. ಮಲಯಾಳಂ ಲೇಖಕ ಎಸ್. ಹರೀಶ್ ಅವರ “ಮಾವೋಯಿಸ್ಟ್” ಕಥೆ ಆಧಾರಿತ ಈ ಚಿತ್ರದ ಕುರಿತು ಕೆ. ಅರವಿಂದ ಮಿತ್ರ ಋತುಮಾನಕ್ಕಾಗಿ ಬರೆದ ಲೇಖನ .

ರುಸ್ಸೋನ ಸಾಮಾಜಿಕ ಒಪ್ಪಂದದ ಸಿದ್ಧಾಂತ ಮಾನವನ ಮೂಲಭೂತ ಗುಣವಾದ ಹಿಂಸೆ ಮತ್ತು ಹಿಂಸಿಸುವ ಅಧಿಕಾರವನ್ನು ರಾಜ್ಯ, ಸೈನ್ಯ ಹಾಗೂ ಆರಕ್ಷಕ ಪಡೆಗಳಿಗೆ ಸಾಂಸ್ಥಿಕವಾಗಿ ನೀಡಿ, ನಿಯಮಿತವಾಗಿ ಪ್ರಭುತ್ವದ ಅಧಿಕಾರದ ಮೂಲಕ ಜನರ ಬದುಕನ್ನು ವ್ಯವಸ್ಥಿತ ರೂಪಕ್ಕೆ ತರುವ ಪ್ರಯತ್ನವೇ ಆಗಿದೆ. ಹದಿನೆಂಟನೇ ಶತಮಾನದ ಈ ಚಿಂತನೆಯನ್ನು ಇಪ್ಪತ್ತನೇ ಶತಮಾನದ ತತ್ವಜ್ಞಾನಿಗಳು ಮುಂದುವರೆಸುತ್ತಾ ಸಾಂಸ್ಥೀಕರಣಗೊಂಡರೂ ಕೂಡ ಹಿಂಸೆಯ ಹಲವು ರೂಪಗಳು ಮಾನವ ಸಂಸ್ಕೃತಿಯಲ್ಲಿ ವ್ಯಕ್ತವಾಗುತ್ತಿರುತ್ತದೆ ಎಂಬ ಅಭಿಪ್ರಾಯವನ್ನು ಮಂಡಿಸುತ್ತಾರೆ. ಮೂಲಗುಣವಾದ ಹಿಂಸೆಯು ಮಾನವನ ಅಭಿವ್ಯಕ್ತಿಯ ಭಾಗವಾಗಿ ಬರವಣಿಗೆ, ಚಿತ್ರಕಲೆ ಹಾಗೂ ನೃತ್ಯ ಕಲೆಗಳಿಗಿಂತ ಹೆಚ್ಚಾಗಿ ಆಟಗಳಲ್ಲಿ ದೈಹಿಕ ಕಾರ್ಯಗಳ ಮೂಲಕ ತೋರ್ಪಡುತ್ತದೆ. ಸಂಸ್ಕೃತಿಯಲ್ಲಿ ಆಟಗಳ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಹೋಮೋ ಲೂಡೆನ್ಸ್ ಪುಸ್ತಕದಲ್ಲಿ ಹುಯ್‌ಜಿ಼ಂಗಾ ಅವರು, ಆಟವು ಸಾಮಾನ್ಯ ಜೀವನಕ್ಕಿಂತ ಸ್ವಲ್ಪ ಭಿನ್ನವಾದ ಪ್ರಕ್ರಿಯೆಯಾಗಿದ್ದು ಮಾನವನ ದೈಹಿಕ ಕಾರ್ಯಕ್ಷಮತೆಯನ್ನು ಬಯಸುತ್ತದೆ ಎಂದು ವ್ಯಾಖ್ಯಾನಿಸುತಾತ್ತಾ “ನಿಯಮಗಳಿದ್ದರೂ ಕೂಡ ಆಟವು ಸರಿ ತಪ್ಪುಗಳಾಚೆ ಘಟಿಸುತ್ತದೆ, ಸತ್ಯ-ಅಸತ್ಯದ ನಡುವೆ ನಡೆಯುವ ಕ್ರಿಯೆಯಾಗುತ್ತದೆ” ಎಂಬ ಮಾತುಗಳನ್ನೂ ಸೇರಿಸುತ್ತಾರೆ.

ಆಟವೆಂದರೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಷ್ಟೇ ಅಲ್ಲ. ಕ್ರೀಡೆಗಳು ರಾಷ್ಟ್ರೀಯತೆಯನ್ನು ಬಿಂಬಿಸುವ, ಸ್ಪರ್ಧಿಗಳಿಗೆ ದೇಶವನ್ನು ಮೆರೆಸಲು ಒತ್ತಡ ಹಾಕುವ ಸಾಧನಗಳಾಗಿಯಷ್ಟೇ ಉಳಿದಿವೆ. ಆಟಗಳೂ ಕೂಡ ಕಲೆಗಳಂತೆ ಅದಿಮ ಗುಣಗಳನ್ನು ಕಲಕುವ, ಕಲ್ಪನೆಗೆ ಇಂಬು ನೀಡುವ, ಮನಸ್ಸಿನಲ್ಲಿ ಅಡಗಿರುವ ಹಿಂಸೆಯನ್ನು ದೈಹಿಕ ಶ್ರಮದ ಮೂಲಕ ಹೊರತೆಗೆಯುವ ಸಾಧನಗಳಾಗಿವೆ.

ಹೌದು, ಯುದ್ಧೋನ್ಮಾದದ ರೀತಿಯ ಸ್ಪರ್ಧೆ, ಪ್ರತಿರೋಧ, ಹಿಂಸೆ ಹಾಗೂ ಶಾಂತಿ ಹೀಗೆ ಎಲ್ಲಾ ಭಾವನೆಗಳೂ ಮೇಳೈಸಿರುವ ಪ್ರಕ್ರಿಯೆಯೇ ಆಟ. ಹಲವು ಬಗೆಯ ದೈಹಿಕ ಶ್ರಮವನ್ನು ಬಯಸುವ ಆಟಗಳು, ಮನುಷ್ಯ ಹಾಗೂ ಪ್ರಾಣಿಗಳ ಅಂತರ್ ಸಂಬಂಧ ವನ್ನು ಬೇಡುತ್ತವೆಯಾದರೂ, ಬದುಕುಳಿಯುವಿಕೆಯೇ ಮುಖ್ಯವೆನಿಸಿದಾಗ, ಈರ್ವರ ನಡುವಿನ ಅಂತರ ನಶಿಸಿ, ಮಾನವನಲ್ಲಿ ಮೇಳೈಸಿದೆಯೆಂದು ಭಾವಿಸಲಾದ ಮಾನವತ್ವ, ಹಾಗೂ ಅಹಿಂಸೆಯ ಪೊರೆಯನ್ನು ಕಳಚುವಂತೆ ಮಾಡುತ್ತವೆ. ಜೊತೆಗೆ ಮಾನವ ತನ್ನಂತೆಯೇ ಪ್ರಕೃತಿಯ ಭಾಗವಾಗಿರುವ ಪ್ರಾಣಿಗಳ ಮೇಲೆ ಪಾರಮ್ಯ ಮೆರೆಯುವ ಉನ್ಮಾದದಲ್ಲಿ ನಾಗರೀಕತೆಯ ನಿಯಮಗಳನ್ನು ಇಲ್ಲವಾಗಿಸಿ, ತನ್ನಲ್ಲಿ ಸುಪ್ತವಾಗಿರುವ ಮೃಗೀಯ ವ್ಯಕ್ತಿತ್ವವನ್ನು ಅನಾವರಣಗೊಳಿಸುವಂತೆ ಈ ಆಟಗಳು ಮನುಷ್ಯನನ್ನು ಉದ್ರೇಕಿಸುತ್ತವೆ. ಈ ಎಲ್ಲಾ ಆಯಾಮಗಳನ್ನು ಒಳಗೊಂಡ ಆಟಕ್ಕೆ ಉತ್ತಮ ನಿದರ್ಶನ ಜಲ್ಲಿಕಟ್ಟು.

 

ಜಲ್ಲಿಕಟ್ಟು ಅಥವಾ ಸಲ್ಲಿಕಟ್ಟುವಿನ ಮೂಲವನ್ನು ಕೆದಕುತ್ತಾ ಹೋದಂತೆ, ಸಂಗಂ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿರುವ ‘ಗೂಳಿಯ ಅಪ್ಪುಗೆ’ ಎಂಬ ಅರ್ಥ ನೀಡುವ ಪದವು ಮುಖಾಮುಖಿಯಾಗುತ್ತದೆ. ಸಲ್ಲಿಯನ್ನು ನಾಣ್ಯವೆಂದು ಅರ್ಥೈಸುವುದಾದರೆ, ಕಟ್ಟು ಎಂಬುದು ಗಂಟು ಎಂದಾಗುತ್ತದೆ. ಜನರ ಮಧ್ಯೆ ಓಡಲು ಬಿಡಲಾದ ಮದವೇರಿದ ಗೂಳಿಗೆ ತಡೆಯೊಡ್ಡಿ, ಅದರ ಬೆನ್ನಿನ ಉಬ್ಬಿಗೆ ಕಟ್ಟಿದ ನಾಣ್ಯಗಳ ಗಂಟನ್ನು ಪಡೆಯುವುದು, ತನ್ಮೂಲಕ ಪರಾಕ್ರಮ ಮೆರೆಯುವುದು ಈ ಆಟದ ವೈಶಿಷ್ಟ್ಯ. ಪ್ರತಿರೋಧ, ಕಾನೂನು ಸಮರಗಳ ಹೊರತಾಗಿಯೂ ಇಂದಿಗೂ ಜಲ್ಲಿಕಟ್ಟು ತಮಿಳುನಾಡಿನ ಐತಿಹ್ಯ ಸಾರುವ ಪ್ರಮುಖ ಆಚರಣೆಗಳಲ್ಲಿ ಒಂದೆನಿಸಿದೆ. ಹಿಂಸೆ-ಅಹಿಂಸೆಯ ಚೌಕಟ್ಟಿನಲ್ಲಿ ನೋಡುವುದಾದರೆ ಮಾನವರು ಹಿಂಸೆಯನ್ನು ತಮ್ಮ ಮೇಲೂ ಹಾಗೂ ಪ್ರಾಣಿಯ ಮೇಲೂ ಹೇರಿಕೊಳ್ಳುವ ಆಟ ಜಲ್ಲಿಕಟ್ಟು.

ಭಾರತದಲ್ಲಿ ಕ್ರೀಡೆಗಳ ಬಗ್ಗೆ ಹಲವಾರು ಚಲನಚಿತ್ರಗಳು ನಿರ್ಮಾಣವಾಗಿದ್ದರೂ ಅವುಗಳು ತಂಡಗಳ ಹಾಗೂ ದೇಶಗಳ ಸೋಲು ಗೆಲುವಿನಾಟಗಳ ಚರ್ಚೆಯಲ್ಲಿಯೇ ಕಳೆದುಹೋಗಿವೆ. ಸಂಸ್ಕೃತಿಯ ಮೂಲವನ್ನು ಧ್ವನಿಸುವಂತಹ, ಮಾನವ ಹಾಗೂ ಪ್ರಾಣಿಯ ಸಂಬಂಧದ ಹಲವು ಆಯಾಮಗಳನ್ನು ಪ್ರಶ್ನಿಸುವ, ಮಾನವನ ಜೀವನವೇ ಆಟವಾಗುವಂತಹ ಚಲನಚಿತ್ರವೊಂದನ್ನು ಲಿಜೋ ಜೋಸ್ ಪೆಲ್ಲಿಸೆರಿ ಅವರು ಜಲ್ಲಿಕಟ್ಟು ಎಂಬ ಹೆಸರಿನಲ್ಲಿ ನಿರ್ಮಿಸಿ ನಿರ್ದೇಶಿಸಿದ್ದಾರೆ. ಎಸ್ ಹರೀಶ್ ಅವರ ‘ಮಾವೋಯಿಸ್ಟ್’ ಕತೆಯನ್ನು ಆಧರಿಸಿದ ಈ ಚಿತ್ರದ ತಿರುಳು ತೀರಾ ಸರಳ. ಹಳ್ಳಿಯೊಂದರ ಜೀವನ ಯಾಂತ್ರಿಕವಾಗಿಯೇ ಸಾಗುತ್ತಿರುತ್ತದೆ. ಹಳ್ಳಿಯ ಬದುಕಿನ ಒಡಲಿನಲ್ಲಿ ಅನೇಕರ ಹಗೆ, ದ್ವೇಷ, ಪ್ರೇಮ, ಕಾಮಗಳು ಅಡಗಿವೆ. ಇಂತಹ ಸಂದರ್ಭದಲ್ಲಿ ಮಾಂಸಕ್ಕಾಗಿ ಎಳೆದು ತಂದ ಕೋಣವೊಂದು ತಪ್ಪಿಸಿಕೊಂಡು ಆತಂಕದ ವಾತಾವರಣವನ್ನು ಉಂಟುಮಾಡುತ್ತದೆ. ಕೋಣವನ್ನು ಹಿಡಿಯಲು ಊರ ಗಂಡಸರೆಲ್ಲಾ ಪಣತೊಟ್ಟು ಅದನ್ನು ಹಿಂಬಾಲಿಸುತ್ತಾ ತಮ್ಮಲ್ಲಿ ಅಡಗಿದ್ದ ಮೃಗೀಯ ಭಾವನೆಗಳನ್ನು ಹೊರಹಾಕುವುದೇ ಚಿತ್ರದ ಕತೆ. ಟೊರಾಂಟೋ ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಈ ಚಿತ್ರ ಪ್ರದರ್ಶನದ ನಂತರ ನಿರ್ದೇಶಕ ಲಿಜೋ, ಜಲ್ಲಿಕಟ್ಟು ಆಟಕ್ಕೂ ಈ ಚಿತ್ರಕ್ಕೂ ನೇರ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಅದು ನಿಜವೇ ಆದರೂ, ಇಡೀ ಚಿತ್ರವೇ ಆಟದಂತೆ ಭಾಸವಾಗುತ್ತದೆ. ಎಮ್ಮೆಯು ತಪ್ಪಿಸಿಕೊಂಡಾಗ ಹಳ್ಳಿಯ ಗಂಡಸರ ನಡುವೆಯೇ ನಿಯಮಗಳಿಲ್ಲದ ಸ್ಪರ್ಧೆಯೊಂದು ಏರ್ಪಟ್ಟು, ಎಲ್ಲರೂ ಅದರ ಹಿಂದೆ ಬೀಳುವುದಲ್ಲದೇ ಅದನ್ನು ಮೊದಲು ಮಥಿಸುವವರಾರು ಎಂಬ ಪ್ರಶ್ನೆ ಏಳುತ್ತದೆ. ಎಮ್ಮೆಯಿಂದಾಗುವ ಹಾನಿಯನ್ನು ತಪ್ಪಿಸುವ ಬದಲು ಅದನ್ನು ಹಿಡಿಯುವ, ಪುರುಷ ಪರಾಕ್ರಮವನ್ನು ಸಾಧಿಸುವ ಸ್ಪರ್ಧೆ ಏರ್ಪಡುತ್ತದೆ. ಯಾವಾಗಲೂ ಸ್ಪರ್ಧಿಸುವ, ಪ್ರಕೃತಿಯನ್ನು ಕೈಯಲ್ಲಿ ಹಿಡಿದು ಬೀಗಬೇಕೆನ್ನುವ, ಶಕ್ತ ಪ್ರಾಣಿಯೊಂದನ್ನು ಪಳಗಿಸಿ ಕೊಂದು ಪುರುಷ ಪಾರಮ್ಯವನ್ನು ಮೆರೆಯುವ ಹಳ್ಳಿಯ ಜನರ ಬದುಕೇ ಆಟವಾಗುವುದು ಜಲ್ಲಿಕಟ್ಟು ಸಿನಿಮಾದ ಸಂದೇಶ.

ಹಳ್ಳಿ ಜೀವನದ ಹಿನ್ನೆಲೆಯಲ್ಲಿಯೇ ಚಿತ್ರಿತವಾಗಿರುವ ಭಾರತದ ಚಿತ್ರಗಳಲ್ಲಿ ಗ್ರಾಮ ಜೀವನವನ್ನು ಬಿಂಬಿಸಲು ಹಸು, ಕರು, ಕೊಟ್ಟಿಗೆ, ಹೊಲಗದ್ದೆಗಳ ಶಾಟ್ಸ್ಗಳನ್ನು ಬಳಸಲಾಗುತ್ತಿದೆ. ಚಿತ್ರದ ತೊಂಭತ್ತು ನಿಮಿಷದ ಕಾಲಾವಧಿಯಲ್ಲಿ ಹತ್ತು ನಿಮಿಷಗಳ ಕಾಲ ಗ್ರಾಮದ ಚಿತ್ರಣವನ್ನು ಸಿನಿಮಾದ ಆಶಯಕ್ಕೆ ತಕ್ಕಂತೆ ಕಟ್ಟಿಕೊಡುತ್ತಾರೆ. ಮಲಗಿರುವ ಜನರ ಧೀರ್ಘ ಉಸಿರಾಟದಿಂದ ಶುರುವಾಗುವ ಸಿನಿಮಾ, ತದನಂತರ ಚಿಕ್ಕ ಚಿಕ್ಕ ಕೀಟಗಳನ್ನು ತೋರಿಸುತ್ತಾ, ಅದೇ ಊರಿನ ಮಾಂಸ ಮಾರಾಟಗಾರರು ಗಜಗಾತ್ರದ ಎಮ್ಮೆಯೊಂದನ್ನು ಕೊಂದು ಅದರ ಮಾಂಸವನ್ನು ತುಂಡು ಮಾಡಿ ಪ್ರೀತಿಪಾತ್ರರಿಗೆ ಹೆಚ್ಚಿಗೆ ನೀಡುತ್ತಾ, ಕಾಯುತ್ತಾ ನಿಂತ ಜನರೊಂದಿಗೆ ಚೌಕಾಶಿ ಮಾಡುತ್ತಾ, ಅಲ್ಲೇ ಓಡಾಡುತ್ತಿದ್ದ ನಾಯಿಗೂ ಪಾಲನ್ನು ನೀಡುವೆಡೆಗೆ ಸಾಗುತ್ತದೆ. ಹೀಗೆಯೇ ಮುಂಜಾನೆ ಕಡಿಯುವ ಸಂದರ್ಭದಲ್ಲಿ ಎಮ್ಮೆಯು ತಪ್ಪಿಸಿಕೊಂಡು ಓಡುವ ಭರದಲ್ಲಿ ಹುಲ್ಲಿನ ಮೆದೆಗೆ ಬೆಂಕಿ ತಾಗಲು ಕಾರಣವಾಗುತ್ತದೆ. ಈ ಘಟನೆ ಅನೇಕರ ಜೀವನದ ಮೇಲೆ ನೇರ ಪ್ರಭಾವ ಬೀರುತ್ತದೆ. ಮಾಂಸದ ಅಂಗಡಿಯವ ಕಾಲನ್ ವಾರ್ಕ್ಯ, ಇವನ ತಂಗಿ ಸೋಫಿû. ಇವರಿಗೆ ಆಂಟೋನಿ ಹಾಗೂ ಕುಟ್ಟಚ್ಚಾನ್ ಎಂಬ ಇಬ್ಬರು ಸಹಾಯಕರು. ಇಬ್ಬರಿಗೂ ಸೋಫಿûಯ ಮೇಲೆ ಆಸೆ. ಇದೇ ಜಗಳದಲ್ಲಿ ಆಂಟೋನಿಯ ಕುತಂತ್ರದಿಂದ ಶಕ್ತಿಶಾಲಿ ಕುಟ್ಟಚ್ಚಾನ್ ಜೈಲು ಸೇರಿ ಊರು ಬಿಟ್ಟಿದ್ದಾನೆ. ಇವರ ಅಂಗಡಿಯ ಮಾಂಸ ಊರ ಹಿರಿಯನ ಮಗಳ ನಿಶ್ಚಿತಾರ್ಥಕ್ಕೂ ಬೇಕು, ಅವನ ಮಗಳಿಗೆ ನಿಶ್ಚಿತಾರ್ಥದ ಹಿಂದಿನ ರಾತ್ರಿಯೇ ತನ್ನ ಪ್ರಿಯಕರನೊಂದಿಗೆ ಓಡಿಹೋಗುವ ಚಿಂತೆ, ಗೋಮೂತ್ರದಲ್ಲಿ ನಂಬಿಕೆ ಇಟ್ಟ ಆಯುರ್ವೇದ ಪಂಡಿತನಿಗೆ ಪ್ರಾಣಿಬಲಿ ತನ್ನ ತೋಟಕ್ಕೆ ಹಾನಿಯಾಗುವವರೆಗೂ ಇಷ್ಟವಿಲ್ಲ. ತಪ್ಪಿಸಿಕೊಂಡು ಓಡಿದ ಎಮ್ಮೆ ಪಂಡಿತನ ತೋಟದ ಗಿಡಗಳನ್ನು ತುಳಿದು, ಬ್ಯಾಂಕ್ ಒಂದರ ಒಳಗೆ ನುಗ್ಗಿ ರಾತ್ರಿಯಷ್ಟರಲ್ಲಿ ಕಾಡು ಸೇರುತ್ತದೆ. ಎಮ್ಮೆ ಮಾಡಿದ ರಾದ್ಧಾಂತದಿಂದ ಬೇಸತ್ತ ವಾರ್ಕ್ಯನಿಗೆ ಕುಟ್ಟಚ್ಚಾನ್‌ನನ್ನು ಕರೆಸಲೇಬೇಕಾದ ಅನಿವಾರ್ಯ. ಕುಟ್ಟಚ್ಚಾನ್‌ಗೆ ಆಂಟೋನಿಯ ಮೇಲಿನ ಹಗೆಯನ್ನು ತೀರಿಸಿಕೊಳ್ಳುವ ಧಾವಂತ. ಇವನ ವಿರುದ್ಧ ಮೆರೆಯಲು ಹವಣಿಸುವ ಆಂಟೋನಿ, ಹೀಗೆ ಇಡೀ ಹಳ್ಳಿಯೇ ತನಗೇ ಗೊತ್ತಿಲ್ಲದಂತೆ ಆಟದ ಚೌಕಟ್ಟಿನಲ್ಲಿ ಬಿದ್ದು ತನ್ನ ನಾಗರಿಕತೆಯನ್ನೇ ಅನುಮಾನಿಸುವಂತೆ ವರ್ತಿಸುತ್ತದೆ.

ಜಲ್ಲಿಕಟ್ಟು ಒಂದು ಸಂಘಟಿತ ಅವ್ಯವಸ್ಥೆ. ಇದರ ಚಿತ್ರಕತೆಯ ಅಧ್ಯಯನವು ಅನೇಕ ಮಜಲುಗಳನ್ನು ತೆರೆದಿಡುತ್ತದೆ. ಇಟಲಿ ದೇಶದ ತತ್ವಜ್ಞಾನಿ ಜಿರ್ಯಾಜಿಯೋ ಅಗಂಬೆನ್ ತನ್ನ ಹೋಮೋ ಸಾಕರ್ ಪುಸ್ತಕದಲ್ಲಿ ದಿ ಸ್ಟೇಟ್ ಆಫ್ ಎಕ್ಸೆಪ್ಷನ್ ಎಂಬ ಸ್ಥಿತಿಯನ್ನು ವಿವರಿಸುತ್ತಾನೆ. ರಾಜ್ಯದ ಚಟುವಟಿಕೆಗಳು ಸಾಮಾನ್ಯ ರೀತಿಯಲ್ಲಿ ಸಾಗುತ್ತಿದ್ದಾಗ, ಪ್ರಭುತ್ವವು ಜನರ ಹಾಗೂ ರಾಜ್ಯದ ಮೇಲೆ ಹೆಚ್ಚಿನ ಹಿಡಿತವನ್ನು ಸಾಧಿಸಲು ಅಸಾಮಾನ್ಯ ಘಟನೆಗಳನ್ನು ಸೃಷ್ಟಿಸುತ್ತಿರುತ್ತದೆ ಅಥವಾ ಯಾವುದಾದರೂ ಅಸಾಮಾನ್ಯ ಘಟನೆ ಘಟಿಸಿದರೆ ಸಮಾಜವನ್ನು ತಹಬಂದಿಗೆ ತರಲು ತನ್ನ ಪರಿಧಿಯನ್ನು ಜನರ ವೈಯುಕ್ತಿಕ ಬದುಕಿನೆಡೆಗೂ ಚಾಚುತ್ತದೆ. ಉದಾಹರಣೆಗೆ, ಊರಿನ ಯಾವುದೋ ಭಾಗದಲ್ಲಿ ಗಲಾಟೆಯಾದಾಗ, ಸಮಾಜದ ಶಾಂತಿ ಕಾಪಾಡುವ ಹೆಸರಿನಲ್ಲಿ ಊರಿನಲ್ಲಿ ಕರ್ಫ್ಯೂ ಜಾರಿ ಮಾಡಿ ಜನರ ಹಕ್ಕುಗಳನ್ನೇ ನಿಯಂತ್ರಿಸುವ ಪ್ರಕ್ರಿಯೆ. ಇದೇ ರೀತಿಯ ಎಕ್ಸೆಪ್ಷನಲ್ ಸಂದರ್ಭಗಳನ್ನು ಬಳಸಿ ಕರ್ಫ್ಯೂ ಇರುವ ಸಮಾಜವನ್ನೇ ಮಾದರಿ ಸಮಾಜ ಎಂದು ಹೇಳುವ ಪ್ರಭುತ್ವದ ಪ್ರಕ್ರಿಯೆಯನ್ನು ದಿ ಸ್ಟೇಟ್ ಆಫ್ ಎಕ್ಸೆಪ್ಷನ್ ಎಂದು ಅಗಂಬೆನ್ ಕರೆಯುತ್ತಾನೆ.

ಸಿನಿಮಾದ ಶುರುವಿಗೆ ಹಳ್ಳಿಯ ಜನರು ರಾತ್ರಿಯಿಂದ ಬೆಳಗಿನವರೆಗೆ ಮಾಡುವ ಚಟುವಟಿಕೆಗಳನ್ನು ಚಿತ್ರಿಸುತ್ತಾ ಅಲ್ಲಿರುವ ನಾರ್ಮಲ್ಸಿಯನ್ನು ಲಿಜೋ ನೋಡುಗರಿಗೆ ಭಾಸವಾಗುವಂತೆ ಮಾಡುತ್ತಾರೆ. ಎಮ್ಮೆಯು ತಪ್ಪಿಸಿಕೊಂಡು ಊರ ಹೊಲ ಬೀದಿಗಳಲ್ಲಿ ತೊಂದರೆ ಉಂಟುಮಾಡುವುದು ಎಕ್ಸೆಪ್ಷನಲ್ ಸ್ಥಿತಿ. ಈ ಸ್ಥಿತಿಯ ಲಾಭ ಪಡೆಯಲು ಪೊಲೀಸರು, ಆಂಟೋನಿ, ಕುಟ್ಟಚ್ಚಾನ್ ಹೀಗೆ ಎಲ್ಲರೂ ಹೊಯ್ದಾಡುತ್ತಾರೆ. ಈ ಸ್ಥಿತಿಯನ್ನು ಲಿಜೋ ಚಿತ್ರಕತೆಯೇ ಇಲ್ಲದ ನೈಜಘಟನೆಯನ್ನು ಚಿತ್ರಿಸಿರುವಂತೆ ನಿರ್ದೇಶಿಸಿದ್ದಾರೆ. ಚಿತ್ರದ ತಾಂತ್ರಿಕತೆ ಅನೇಕ ಯಶಸ್ವಿ ಪ್ರಯೋಗಗಳಿಗೆ ಸಾಕ್ಷಿ. ಲಿಜೋ ಅವರು ತಮ್ಮ ಅಂಗಮಾಲೈ ಡೈರೀಸ್ ಹಾಗೂ ಜಲ್ಲಿಕಟ್ಟು ಚಿತ್ರಗಳಲ್ಲಿ ಸಿನಿಮಾ ದೃಶ್ಯಗಳ ಸೌಂದರ್ಯಶಾಸ್ತ್ರವನ್ನು ಬದಲಾಯಿಸುತ್ತಾರೆ. ಮರ, ಗಿಡ, ಬಳ್ಳಿ, ನೀಲಿ ಆಕಾಶ, ಮಳೆ, ತಿಳಿನೀರಿನ ಹಿನ್ನೆಲೆಯಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿ ನಟನೆಯ ಸೌಂದರ್ಯವನ್ನು ಹೆಚ್ಚಿಸುವುದು ಸಿನಿಮಾದ ಸಾಮಾನ್ಯ ವ್ಯಾಕರಣ. ಲಿಜೋ ತಮ್ಮ ದೃಶ್ಯಗಳನ್ನು ಸಾಮಾನ್ಯವಾಗಿ ಚಲನಚಿತ್ರದ ಪರಿಭಾಷೆಯಲ್ಲಿ ಸುಂದರವಾಗಿರದ ಹಿನ್ನೆಲೆಯಲ್ಲೇ ಚಿತ್ರಿಸುತ್ತಾರೆ. ಆಂಟೋನಿ ತನ್ನ ಮೊದಲ ದೃಶ್ಯದಲ್ಲಿ ಅನ್ಯ ಮನಸ್ಕನಾಗಿ ಮಾಂಸವನ್ನು ತುಂಡು ಮಾಡುತ್ತಿದ್ದರೆ, ವಾರ್ಕ್ಯನ ಮುಖ ಕಾಣುವುದು ದನದ ಮಾಂಸ ಕತ್ತರಿಸುತ್ತಿರುವ ಫ್ರೇಮ್ನಲ್ಲಿ. ಈ ಚಿತ್ರದಲ್ಲಿ ಪ್ರಕೃತಿಯು ನವಿರು ಭಾವನೆಗಳ ಪ್ರತಿರೂಪದಂತಿರದೆ, ಮಾನವರ ಕ್ರೌರ್ಯವನ್ನೇ ಎತ್ತಿಹಿಡಿಯುವಂತೆ ಚಿತ್ರಿತವಾಗಿದೆ. ಇದೇ ವ್ಯಾಕರಣಕ್ಕೆ ಇಂಬು ನೀಡುವಂತೆ ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣವಿದೆ. ಮೂರು ನಾಲ್ಕು ಶಾಟ್ಸ್ಗಳು ಅಗತ್ಯವಿರುವ ದೃಶ್ಯಗಳನ್ನೂ ಒಂದೇ ಶಾಟ್ಸ್ನಲ್ಲಿ ಚಿತ್ರೀಕರಿಸಿರುವುದು ಚಿತ್ರಕ್ಕೆ ನೈಜತೆಯ ವೇಗವನ್ನು ತಂದುಕೊಡುತ್ತದೆ. ಅಂಗಮಾಲೈ ಡೈರೀಸ್‌ನ ಹನ್ನೆರಡು ನಿಮಿಷಗಳ ಒಂದೇ ಶಾಟ್‌ನ ಕೊನೆಯ ದೃಶ್ಯವನ್ನೂ ಮೀರಿಸುವ, ನೈಜ ಜೀವನದಲ್ಲಿ ಸಮಸ್ಯೆಯಾದರೆ ಆಗಬಹುದಾದ ಅವ್ಯವಸ್ಥೆಯನ್ನು ದೃಶ್ಯಗಳ ಮೂಲಕ ಗಿರೀಶ್ ಸಶಕ್ತವಾಗಿ ಚಿತ್ರಿಸಿದ್ದಾರೆ. ಸಂಕಲನಕಾರರು ಈ ಚಿತ್ರಕ್ಕೆಂದೇ ವಿಶಿಷ್ಟವಾದ ದೃಶ್ಯಗಳನ್ನು ಪೋಣಿಸುವ ಕ್ರಮವನ್ನು ಸೃಷ್ಟಿಸಿದ್ದಾರೆ. ತಪ್ಪಿಸಿಕೊಂಡ ಪ್ರಾಣಿಯನ್ನು ಹಿಡಿಯಲು ಓಡುವ ದೃಶ್ಯಗಳ ನಂತರ ಅನೇಕ ಸ್ಥಿರ ಚಿತ್ರಗಳಂತಿರುವ ದೃಶ್ಯವನ್ನು ಗಡಿಯಾರದ ಸದ್ದಿನಂತಿರುವ ಹಿನ್ನೆಲೆ ಸಂಗೀತದೊAದಿಗೆ ಹೆಣೆಯುತ್ತಾರೆ. ಮಳೆಯ ಕಾರಣದಿಂದ ಬಾವಿಯಿಂದ ಮೇಲೆತ್ತುವಾಗ ಎಮ್ಮೆಯು ಮತ್ತೆ ತಪ್ಪಿಸಿಕೊಂಡು ಒಬ್ಬನ ಸಾವಿಗೆ ಕಾರಣವಾಗುತ್ತದೆ. ಈ ದೃಶ್ಯದಲ್ಲಿ ಮನುಷ್ಯರ ಸೋಲಿನ ಶೂನ್ಯತೆಯನ್ನು ಹೇಳಲು, ಕೆಸರಿನ ಮೇಲಿನ ಪಾದದ ಗುರುತುಗಳು, ಆರಿದ ಲಾಟೀನು ಹೊಗೆಯನ್ನು ಹಲವು ಸೆಕೆಂಡ್‌ಗಳಷ್ಟು ಕಾಲ ಮಳೆಯ ದೃಶ್ಯದೊಂದಿಗೆ ಸಂಕಲನ ಮಾಡಲಾಗಿದೆ. ಶಾಟ್ಸ್ಗಳು ಕಡಿಮೆ ಇರುವುದೂ ಕೂಡ ಸಂಕಲನಕ್ಕೆ ಒಂದು ದೊಡ್ಡ ಸವಾಲು ಎಂದೇ ಹೇಳಬಹುದು. ಸಿಂಕ್ ಸೌಂಡ್ ಮೂಲಕ ದೀರ್ಘ ಉಸಿರಾಟ, ಗಡಿಯಾರದ ಟಿಕ್ ಟಿಕ್ ಸದ್ದು, ಪ್ರಾಣಿಗಳ ಸದ್ದಿನಂತೆ ಕೇಳುವ ಮನುಷ್ಯರ ಹೂಂಕಾರದ ಶಬ್ಧಗಳನ್ನು ರೆಕಾರ್ಡ್ ಮಾಡಿ ಹಿನ್ನಲೆ ಸಂಗೀತದೊAದಿಗೆ ಬೆರೆಸಿರುವುದು ಚಿತ್ರಕ್ಕೆ ತೀವ್ರತೆಯನ್ನು ತಂದುಕೊಡುತ್ತದೆ.

ತಮ್ಮ ಸಿನಿಮಾಗಳಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡುವ ಲಿಜೋ ರೂಪಕಗಳನ್ನು ವಾಚ್ಯಗೊಳಿಸುವುದು ಅಚ್ಚರಿಯಾಗುತ್ತದೆ. ಅವರ ಸಿನಿಮಾಗಳ ಆರಂಭ ಮತ್ತು ಅಂತ್ಯ ರೋಚಕವಾಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ಕಾಡುಮನುಷ್ಯರನ್ನು ಚಿತ್ರಿಸಿ ಸಿನಿಮಾದ ರೂಪಕತೆಗೆ ಭಂಗ ತರುತ್ತಾರೆ. ಇಷ್ಟಾದರೂ, ಈ ಚಿತ್ರ ನೋಡುವುದೇ ಒಂದು ವಿಶಿಷ್ಟ ಅನುಭವ. ಫಿಲಂ ಕಂಪಾನಿಯನ್ ಯೂಟ್ಯೂಬ್ ಚಾನಲ್‌ನ ವಿಮರ್ಶಕ ಭಾರದ್ವಾಜ್ ರಂಗನ್ ಈ ಸಿನಿಮಾದ ಕುರಿತು ಪ್ರಾಯೋಗಿಕ ಚಿತ್ರವನ್ನೂ ಮನರಂಜನಾತ್ಮಕವಾಗಿ ಮಾಡುವ ಕಲೆಗೆ ಅತಿ ಉತ್ತಮ ಉದಾಹರಣೆ ಎಂದು ಹೇಳಿರುವುದು ಸತ್ಯವಾದ ಮಾತು.

 

(ಸ್ನೇಹಿತರಾದ ಕುಪ್ನಳ್ಳಿ ಭ್ಯರಪ್ಪ ಮತ್ತು ನನ್ನಿ ವಿ.ಕೆ ಲೇಖನಕ್ಕೆ ಸಂಬಂಧ ಪಟ್ಟ ಮಾಹಿತಿಗಳನ್ನು ಒದಗಿಸಿರುತ್ತಾರೆ)

One comment to “ಜಲ್ಲಿಕಟ್ಟು – ಒಂದು ಸಾಮಾಜಿಕ ಆಟ”
  1. ಲೇಖನ ಚೆನ್ನಾಗಿದೆ. ಇಷ್ಟವಾಯಿತು.

    ನನಗೆ ಕಡೆಯ ದೃಶ್ಯದ ನಂತರ ಇನ್ನೊಂದು ದೃಶ್ಯವನ್ನು ಸೇರಿಸಿರುವುದು ರೂಪಕತೆಗೆ ಭಂಗ ತಂದಂತೆ ಅನಿಸಲಿಲ್ಲ. ನನ್ನಂಥ ಸಾಮಾನ್ಯ ಪ್ರೇಕ್ಷಕನಿಗೆ ಸಂದೇಶವನ್ನು ಸರಿಯಾಗಿ ತಲುಪುವಂತೆ ಹೋದರೆ ರಸಭಂಗವಾದಂತೆನಿಸುತ್ತದೆ. ಒಂದೆರಡು ಕನ್ನಡ ಸಿನಿಮಾಗಳನ್ನು ನೋಡಿದೆ. ಅದರಲ್ಲೊಂದಕ್ಕೆ ಪ್ರಶಸ್ತಿ ಬಂದಿದ್ದರೂ ಹೆಚ್ಚು ಜನರಿಗೆ ತಲುಪಲಿಲ್ಲ. ಅದಕ್ಕೆ ಕಾರಣ ದ್ವಂದ್ವವಾಗಿಯೇ ಅಂತ್ಯವನ್ನು ಹೇಳಲು ಪ್ರಯತ್ನಿಸಿದ್ದು ಅಂತ ಅನ್ನಿಸಿತು.

    ಜಲ್ಲಿಕಟ್ಟು, ಇಡೀ ಸಿನಿಮಾವನ್ನು ಮನರಂಜನೆಗಾಗಿಯೇ ಎಂಬಂತೆ ನೋಡಿದ ನನಗೆ ಕಡೆಯ ಆ ದೃಶ್ಯದಿಂದ ಮತ್ತೊಮ್ಮೆ ಇಡೀ ಸಿನಿಮಾವನ್ನು ಇನ್ನೊಂದು ಆಯಾಮದಿಂದ ಅರ್ಥೈಸಿಕೊಳ್ಳಲು ಸಹಕಾರಿಯಾಯಿತು.

ಪ್ರತಿಕ್ರಿಯಿಸಿ