ಕರ್ನಾಟಕದ ಮಾತುಗಳು: ಬಹುತ್ವದ ಆಡುಂಬೋಲ

ಕರ್‍ನಾಟಕದ ಇತಿಹಾಸದ ಉದ್ದಕ್ಕೂ ಬಿನ್ನ ಕಾಲದಲ್ಲಿ ಬಿನ್ನ ವಲಯಗಳಲ್ಲಿ ಬೇರೆ ಬೇರೆ ಮಾತುಗಳು ಬೆಳೆದಿವೆ. ಈ – ಬೆಳವಣಿಗೆ ಕರ್‍ನಾಟಕದ ಬೆಳವಣಿಗೆಗೆ ಕನ್ನಡಿ ಹಿಡಿಯುತ್ತದೆ. ಕರ್‍ನಾಟಕ ರಾಜ್ಯದಲ್ಲಿ ಕನ್ನಡ ಪ್ರದಾನ ಮಾತು, ಅದರೊಂದಿಗೆ ದೊಡ್ಡ ಸಂಕೆಯ ಮಾತುಗರು ಇರುವ ಮತ್ತು ಕಡಿಮೆ ಸಂಕೆಯ ಮಾತುಗರು ಇರುವ ಹಲವು ಮಾತುಗಳು ಇವೆ. ಇದು ಕರ್‍ನಾಟಕದ ಬದುಕಿನ ವಿವಿದ ಮಗ್ಗುಲುಗಳನ್ನು ತೋರಿಸುತ್ತದೆ. ಕರ್‍ನಾಟಕವನ್ನು ತಿಳಿದುಕೊಳ್ಳುವುದಕ್ಕೆ, ಕರ್‍ನಾಟಕದ ಬೆಳವಣಿಗೆಗೆ ಈ ಬಾಶಿಕ ಆಯಾಮದ ಅರಿವು ಅವಶ್ಯ. ಈ ಬಾಶಿಕ ಆಯಾಮದ ಪರಿಚಯಾತ್ಮಕ ಬರವಣಿಗೆ ಇಲ್ಲಿದೆ.

ಕರ್‍ನಾಟಕದ ಇತಿಹಾಸದುದ್ದಕ್ಕೂ ಭಿನ್ನ ಕಾಲದಲ್ಲಿ ಭಿನ್ನ ವಲಯಗಳಲ್ಲಿ ಬೇರೆ ಬೇರೆ  ಮಾತುಗಳು ಬೆಳೆದುಬಂದವು. ಈ ಹಿನ್ನೆಲೆಯಲ್ಲಿ ಕರ್‍ನಾಟಕ ರಾಜ್ಯದಲ್ಲಿ ಕನ್ನಡ ಪ್ರದಾನ ಂಆತು, ಅದರೊಂದಿಗೆ ದೊಡ್ಡ ಸಂಖ್ಯೆಯ ಮಾತುಗಳು ಇರುವ ಮತ್ತು ಕಡಿಮೆ ಸಂಖ್ಯೆಯ ಮಾತುಗಳು ಕಂಡುಬಂದಿವೆ. ಇವೆಲ್ಲವೂ ಕರ್‍ನಾಟಕದ ಬಹುತ್ವವನ್ನು ತೋರಿಸುತ್ತದೆ.

ಕರ್ನಾಟಕ ತಿಳಿದಿರುವ ಇತಿಹಾಸದ ಕಾಲದಿಂದಲೂ ಬಹುಬಾಶಿಕ ಪ್ರದೇಶ. ಇಲ್ಲಿ ಹಲವಾರು ಬಾಶೆಗಳು ಬಳಕೆಯಲ್ಲಿವೆ ಎಂಬುದು ಒಂದು ಮುಕ್ಯವಾದ ವಿಚಾರ, ಆದರೆ ಬಾಶೆಗಳ ಕೂಡುಬಾಳುವೆ ಆಳಸಂಬಂದಗಳನ್ನು ಹೊಂದಿದ್ದಿತು, ವ್ಯಾಪಕವಾದ ವಿಸ್ತಾರವನ್ನು ಹೊಂದಿದ್ದಿತು ಎಂಬುದು ಇನ್ನೂ ದೊಡ್ಡ ವಿಚಾರ. ಇಶ್ಟು ಮಾತ್ರವಲ್ಲದೆ ಬಾಶೆಗಳ ನಡುವಿನ ಸಂಬಂದ ಬಾರತವೆ ಬೆರಗಾಗುವ, ಜಗತ್ತಿನ ಹಲವು ಕುತೂಹಲದ ಬೆಳವಣಿಗೆಗಳನ್ನೂ ಕೊಟ್ಟಿದೆ. ಬರವಣಿಗೆಯಲ್ಲಿ ಕರ್ನಾಟಕದ ಬಿನ್ನ ಬಾಶೆಗಳು ಅವುಗಳ ಇತಿಹಾಸ, ಬೆಳವಣಿಗೆ, ಅವುಗಳ ಸಾಮಾಜಿಕತೆ ಮೊದಲಾದ ವಿಚಾರಗಳನ್ನು ಸಣ್ಣದಾಗಿ ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದೆ.

                ಮನುಶ್ಯ ಬಾಶೆ ಕನಿಶ್ಟ 50-60 ಸಾವಿರ ವರುಶಗಳ ಹಿಂದೆಯೆ ಬೆಳೆದಿದೆ.ಆದರೆ ನಮ್ಮ ಅರಿವಿಗೆ ಬರುವ ಕರ್ನಾಟಕದ, ದಕ್ಕನದ ಬಾಶಿಕ ಇತಿಹಾಸಸುಮಾರು ನಾಲ್ಕಯ್ದು ಸಾವಿರ ವರುಶಗಳಶ್ಟು ಮಾತ್ರ. ಮೂಲದ್ರಾವಿಡಕರ್ನಾಟಕದ ಪರಿಸರದಲ್ಲಿ ಬಳಕೆಯಲ್ಲಿದ್ದಿತೆ ಎಂಬುದು ಅಸ್ಪಶ್ಟ.ಮೂಲದ್ರಾವಿಡ ಪ್ರದೇಶದ ಬಗೆಗೆ ತಿಳುವಳಿಕೆ ಇರದಿರುವುದೆ ಇದಕ್ಕೆ ಕಾರಣ.ಆದರೆ ಅದರಿಂದ ಬೆಳೆದ ಮೂಲತೆಂಕುದ್ರಾವಿಡ ಕರ್ನಾಟಕದ ಪರಿಸರದಲ್ಲಿ ಬಳಕೆಯಲ್ಲಿ ಕಂಡಿತ ಇದ್ದಿತು.ಕನ್ನಡ ಮೂಲತೆಂಕುದ್ರಾವಿಡದಿಂದ ಸ್ವತಂತ್ರಗೊಂಡ ಕಾಲವನ್ನು ಸುಮಾರು 3000-3500 ವರುಶ ಹಿಂದೆ ಎಂದೆನ್ನಬಹುದು.ಅಂದಿನಿಂದ ಕನ್ನಡ ಪ್ರದೇಶದಲ್ಲಿ ಬಳಕೆಯಲ್ಲಿದೆ. ಕಾಲಕ್ಕೆ ದ್ರಾವಿಡವಲ್ಲದ ಇತರ ಬಾಶೆಗಳು ಕೂಡ ಇಲ್ಲಿ ಬಳಕೆಯಲ್ಲಿದ್ದವೆ ತಿಳಿಯದು.ಆದರೆ ದ್ರಾವಿಡ ಬಾಶೆಗಳಾದ ತಮಿಳು, ತೆಲುಗು ಮೊದಲಾದವು ಕನಿಶ್ಟ ಮೂರ್ನಾಲ್ಕು ಸಾವಿರ ವರುಶಗಳಶ್ಟು ಹಿಂದೆ ಸ್ವತಂತ್ರವಾಗಿದ್ದವು ಮತ್ತು ಅವು ಇಂದಿನ ಕರ್ನಾಟಕ ಪ್ರದೇಶದಲ್ಲಿ ಒಟ್ಟೊಟ್ಟಿಗೆ ಬದುಕಿದ್ದವು.ತಮಿಳು, ತೆಲುಗು ಮಾತ್ರ ಅಲ್ಲದೆ, ಮಲಯಾಳಂ, ತುಳು, ಕೊಡವ, ತೊದ, ಕೋತ, ಇರುಳ ಮೊದಲಾದ ಹಲವಾರು ಬಾಶೆಗಳು ಕೂಡ ಇಲ್ಲಿ ಹೇಳಬೇಕು.ಕರ್ನಾಟಕ ಪ್ರದೇಶದ ಬಹುಬಾಗ ಕನ್ನಡ ಬಳಕೆಯಲ್ಲಿ ಇದ್ದಿತು ಎಂಬುದು ನಿಜವಾದರೂ ಅಲ್ಲಲ್ಲಿ ಮೇಲೆ ಉಲ್ಲೇಕಿಸಿದ ಬಾಶೆಗಳೂ ಇದ್ದವು.ಕರ್ನಾಟಕದ ಬಹುಬಾಗ, ಮಹಾರಾಶ್ಟ್ರ ಮತ್ತು ತಮಿಳುನಾಡಿನ ಕೆಲಬಾಗ ಹಾಗೆಯೆ ಆಂದ್ರಪ್ರದೇಶ, ತೆಲಂಗಾಣ, ಕೇರಳಗಳ ಕೆಲವೆಡೆ ಕನ್ನಡದ ಊರಹೆಸರುಗಳು ಇರುವುದು ಕನ್ನಡವು ಸುಮಾರು ಮೂರು ಸಾವಿರ ವರುಶಗಳ ಹಿಂದೆ ಎಲ್ಲೆಲ್ಲಿ ಬಳಕೆಯಲ್ಲಿದ್ದಿತು ಎಂದು ಹೇಳುವುದಕ್ಕೆ ಆದಾರ ಒದಗಿಸುತ್ತದೆ.ಇದರ ಇನ್ನೊಂದು ಆಯಾಮವೆಂದರೆ ಇಶ್ಟೆ ವರುಶಗಳ ಹಿಂದೆ ಇಂದಿನ ಕರ್ನಾಟಕದ ಒಳಗೆ ತುಳು, ಕೊಡವ ಮಾತ್ರವಲ್ಲದೆ ತಮಿಳು, ತೆಲುಗು ಮೊದಲಾದ ಬಾಶೆಗಳ ಊರ ಹೆಸರುಗಳೂ ಇವೆ. ಕೋಲಾರಕ್ರಿಶ್ಣಗಿರಿಚಿತ್ತೂರಿನಂತಾ ಪ್ರದೇಶದಲ್ಲಿ ಕನ್ನಡತಮಿಳುತೆಲುಗು ಇವು ಪರಸ್ಪರ ಕೂಡಿ ಬದುಕಿದ್ದ ಕಾಲದ ಪಳೆಯುಳಿಕೆಗಳು ಇನ್ನೂ ದೊರೆಯುತ್ತವೆ ಎನಿಸುತ್ತದೆ.ಇವುಗಳನ್ನು ಸೂಕ್ಶ್ಮವಾಗಿ ನೋಡಬೇಕಿದೆ. ಪ್ರದೇಶದಲ್ಲಿ ಗುಡಿಹಳ್ಳಿಗುಡಿಪಳ್ಳಿ-(ಗು[ಕು]ಡಿಪಳ್ಳಯ್) ಇಂತಾ ಹೆಸರುಗಳು ದೊರೆಯುವುದನ್ನು ಗಮನಿಸಬೇಕು. ಮಂಗಳೂರು ಮತ್ತು ಕೊಡಗು ಪರಿಸರಗಳಲ್ಲಿ ಕ್ರಮವಾಗಿ ತುಳುಕನ್ನಡ, ಕೊಡವಕನ್ನಡ, ಕಾಸರಗೋಡಿನ ಕೆಳಬಾಗದಲ್ಲಿ ತುಳುಕನ್ನಡಮಲಯಾಳಂ ಹೀಗೆ ಪರಸ್ಪರ ಬಳೆಯಲ್ಲಿರುವುದನ್ನು ಕಾಣಬಹುದು.ಇವುಗಳನ್ನು ಗಮನಿಸಿದಾಗ ಕರ್ನಾಟಕ ಪ್ರದೇಶ ತಿಳಿದ ಇತಿಹಾಸದ ಕಾಲದಿಂದಲೂ ಬಹುಬಾಶಿಕ ಪ್ರದೇಶ ಮತ್ತು ಬಹುಬಾಶೆಗಳ ಬಹು ಆಯಾಮದ ಸಂಬಂದಗಳನ್ನು ಹೊಂದಿ ಬದುಕಿದ್ದ ಪ್ರದೇಶವೂ ಆಗಿದೆ.

                ಕನ್ನಡ ಬಾಶೆಯ ಬೆಳವಣಿಗೆಯನ್ನು ತುಸು ಗಮನಿಸುವುದಾದರೆ, ಮೂಲಕನ್ನಡ ಕಾಲವನ್ನು ಸುಮಾರು 3000-3500 ವರುಶಗಳ ಕಾಲದಿಂದ ಕ್ರಿಸ್ತಶಕದ ಹತ್ತಿರದವರೆಗೆ ಹೇಳಬಹುದು.ಮೂಲದ್ರಾವಿಡದ ವ್ಯಂಜನಕೊನೆ ಪದಗಳು ಸ್ವರಕೊನೆಗಳಾಗಿ ಬೆಳೆಯುವ ಪ್ರಕ್ರಿಯೆ ಮೂಲಕನ್ನಡದ ಕಾಲದಲ್ಲಿಯೆ ಶುರುವಾಗಿದ್ದಿತು.ಕನ್ನಡದೊಳಗೆ ಬಿನ್ನತೆಗಳು ಕ್ರಿಸ್ತಶಕದ ಕಾಲದಿಂದಲೆ ಆಗಿರುವಂತಿದೆ.ಇದರಿಂದಾಗಿ ಕನ್ನಡವು ಬಡಗನ್ನಡ (ಉತ್ತರ ಕರ್ನಾಟಕ, ತೆಲಂಗಾಣು, ಮಹಾರಾಶ್ಟ್ರ, ಗೋವಾ), ತೆಂಗನ್ನಡ (ದಕ್ಶಿಣ ಕರ್ನಾಟಕ, ಆಂದ್ರಪ್ರದೇಶ, ಕೇರಳ, ತಮಿಳುನಾಡಿನ ಕೆಲವು), ಪಡುಗನ್ನಡ (ಕರಾವಳಿ) ಎಂದು ಮೂರು ಗುಂಪುಗಳಾಗಿ ಬಹುಹಿಂದೆಯೆ ಒಡೆದುಕೊಂಡವು. ನೀಲಗಿರಿ ಕನ್ನಡವೂ ಕೂಡ ಹೀಗೆಯೆ ಹಳೆಯ ಒಡೆತವಾಗಿರಬೇಕು. ಆದರೆ ಇನ್ನೂ ಹೆಚ್ಚಿನ ಅರಿವು ಬೇಕಿದೆ. ಇವುಗಳು ಮತ್ತೆ ಹಲವಾರು ಒಳನುಡಿಗಳಾಗಿ ಬೆಳೆದಿವೆ. ಇಂದು ಕಲಬುರಗಿ ಕನ್ನಡ, ಮಸ್ಕಿ ಕನ್ನಡ, ದಾರವಾಡ ಕನ್ನಡ, ಚಾಮರಾಜನಗರ ಕನ್ನಡ, ಕೋಲಾರ ಕನ್ನಡ ಎಂದು ಗುರುತಿಸಬಹುದಾದ ಹಲವು ಕನ್ನಡದ ಒಳನುಡಿಗಳು ಕಮ್ಮಿ ಎಂದರೂ ಸಾವಿರ ವರುಶಗಳಶ್ಟು ಹಿಂದೆ ಇತರ ಕನ್ನಡಗಳಿಂದ ಬಿನ್ನತೆಗಳನ್ನು ಬೆಳೆಸಿಕೊಂಡು ಸ್ವತಂತ್ರವಾಗಿ ಬೆಳೆಯತೊಡಗಿವೆ.ಇದು ಕನ್ನಡದೊಳಗೆ ಅಡಗಿರುವ ಬಹುತ್ವದ ಅದಮ್ಯ ಚಿಲುಮೆಆನಂತರ ಬವುದ್ದ, ಜಯ್ನಗಳು ದಕ್ಕನಕ್ಕೆ ಬರುವವರೆಗೆ ಕನ್ನಡ ಇತರೆಲ್ಲ ದ್ರಾವಿಡ ಬಾಶೆಗಳ ಜೊತೆಗೆ ಬದುಕಿದ್ದಿತು.

                ಆಡಳಿತ, ದರ್ಮ, ಆರ್ತಿಕ ಕಾರಣಗಳಿಗಾಗಿ ಕರ್ನಾಟಕ ಪ್ರದೇಶಕ್ಕೆ ಬಂದ ಉತ್ತರದ ಪಂತಗಳು ಮತ್ತು ಸಾಮ್ರಾಜ್ಯಗಳು ಬಾಶೆಗಳನ್ನೂ ಕಡೆ ತರುತ್ತವೆ. ಬಹುಹಿಂದಿನ ಇತಿಹಾಸವನ್ನು ಬವುದ್ದ ಮತ್ತು ಜಯ್ನ ಪಡೆದುಕೊಳ್ಳುತ್ತವೆ. ಬವುದ್ದ ಹಿನ್ನೆಲೆಯ ಅಸೋಕ ಹಾಕಿಸಿದ ಹಲವಾರು ಪಾಲಿ ಶಾಸನಗಳು ಕರ್ನಾಟಕದ ತುಂಬ ಸಿಗುತ್ತವೆ ಮತ್ತು ಇಂದಿನ ಹಯ್ದರಾಬಾದ ಕರ್ನಾಟಕ ಪ್ರದೇಶದಲ್ಲಿ ಹೆಚ್ಚು ಇಡಿಕಿರಿದಂತೆ ಸಿಗುತ್ತವೆ. ಅಸೋಕನ ಶಾಸನಗಳಲ್ಲಿ ದೊರೆಯುವುದು ಎಂದು ಬಹುಕಾಲ ನಂಬಿದ್ದ ಇಸಿಲ ಪದ ಕನ್ನಡ ಮತ್ತು ಪಾಲಿಗಳ ನಡುವಿನ ಆಳ ಅನುಸಂದಾನದ ಕತೆ ಹೇಳುತ್ತಿದ್ದಿತು. ಇತ್ತೀಚೆಗೆ ಪದದ ಮೂಲವನ್ನು ಸಮಸ್ಯೀಕರಿಸಿದೆ. ಇದರ ಹೊರತಾಗಿಯೂ ಸನ್ನತಿಕನಗನಹಳ್ಳಿ ಪ್ರದೇಶದಲ್ಲಿ ಸ್ತಾಪಿಸಿದ ಬಹುದೊಡ್ಡ ಬವುದ್ದ ಸ್ತೂಪ ನೆಲದ ಎಲ್ಲಮ್ಮ ಮೊದಲಾದ ಪಂತಗಳು ಮತ್ತು ಬವುದ್ದ, ಹಾಗೆಯೆ ಕನ್ನಡ ಮತ್ತು ಪಾಲಿ ಇವುಗಳ ನಡುವಿನ ಅನುಸಂದಾನದ ಕತೆಯನ್ನು ಹೇಳುತ್ತಿವೆ.ಇದರ ಪಲವಾಗಿಯೆ ದಕ್ಕನಕ್ಕೆ ಬಂದ ಬವುದ್ದ ದರ್ಮ ದಕ್ಕನದ ಪ್ರಬಾವದಿಂದ ಹಲವಾರು ಗುಣಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತದೆ. ಸಂಸ್ಕ್ರುತ ದ್ವನಿವಿಗ್ನಾನದ ಹಿನ್ನೆಲೆಯಲ್ಲಿ ಪಾಲಿ ಬಾಶೆಗೆ ಲಿಪಿಯನ್ನು ಹೊಂದಿಸಲಾಗಿದ್ದಿತು.ಪಾಲಿಯೊಡನೆಯ ಅನುಸಂದಾನ ಕನ್ನಡ ಬಾಶೆಗೆ ಲಿಪಿಯನ್ನು ಕ್ರಿಸ್ತಪೂರ್ವದಲ್ಲಿಯೆ ಬೆಳೆಸುವುದಕ್ಕೆ ಕಾರಣವೂ ಆಯಿತು.

                ಬುದ್ದನ ನೆಲದ ಬಾಶಾಬಗೆ ಪಾಲಿಯಾಗಿದ್ದಿತು. ಬವುದ್ದ ಪಂತವನ್ನೆ ಅನುಸರಿಸಿದರೂ ಶಾತವಾಹನರ ಕಾಲದಿಂದ ಇದು ದಕ್ಕನದ ಬಾಶಾಬಗೆಯಾದ ಪ್ರಾಕ್ರುತವಾಗಿ ಬಳಕೆಯಾಗುತ್ತದೆ.ಜಯ್ನರ ವಿಶಾಲ ನೆಲೆಯ ಪ್ರಾಕ್ರುತ ಎಂಬುದರ ಪರಿಕಲ್ಪನೆ ಕನ್ನಡವನ್ನು ಜಯ್ನರು ತಮ್ಮದೆ ಬಾಶೆ ಎಂದು ಪರಿಗಣಿಸಲು ಸಾದ್ಯವಾಯಿತು. ಹೀಗಾಗಿ ಜಯ್ನರು ಕನ್ನಡದಲ್ಲಿ ಬಹುದೊಡ್ಡ ಪ್ರಯೋಗಗಳನ್ನು ಮಾಡಲು ಸಾದ್ಯವಾಯಿತು.ಹಲವು ಪ್ರಾಕ್ರುತಗಳ ನಡುವೆ ಮರಾಟಿ ಪ್ರಾಕ್ರುತ ಶಿಶ್ಟ ಎಂಬ ಸ್ತಾನ ಪಡೆದುಕೊಳ್ಳುವುದಕ್ಕೂ ಕನ್ನಡಕರ್ನಾಟಕ ಹೆಚ್ಚು ಕಾರಣ.ಇಂದಿನ ಉತ್ತರ ಕರ್ನಾಟಕ ಮತ್ತು ಮಹಾರಾಶ್ಟ್ರ ಪ್ರದೇಶಗಳಲ್ಲಿ ನಡೆದ ಕನ್ನಡಪ್ರಾಕ್ರುತಗಳ ಅನುಸಂದಾನ ಎರಡೂ ಬಾಶೆಗಳನ್ನು ಪರಸ್ಪರ ಬೆರೆತುಹೋಗುವಶ್ಟು ಆಳಕ್ಕೆ ಬೆಳೆಯುತ್ತದೆ.ಹೀಗೆ ಕನ್ನಡ ಮತ್ತು ಪ್ರಾಕ್ರುತಗಳ ನಡುವಿನ ಅನುಸಂದಾನದಲ್ಲಿ ಬೆಳೆದ ಬಾಶೆಯೆ ಮರಾಟಿ.ಆದ್ದರಿಂದಲೆ ಮರಾಟಿ ವ್ಯಾಕರಣದ ಬಹುಬಾಗ ಮತ್ತು ಪದಕೋಶದಲ್ಲಿಕನ್ನಡವೆ ತುಂಬಿಕೊಂಡಿದೆ.ಆದ್ದರಿಂದಲೆ ಹಳೆಯ ಮರಾಟಿ ಕ್ರುತಿಯಾದ ಗ್ನಾನೇಶ್ವರಿಯನ್ನು ಓದಲು ಕನ್ನಡದ ಸಹಾಯ ಬೇಕಾಗುತ್ತದೆ ಎಂಬ ವಿಚಾರ ಇದೆ.ಕನ್ನಡದಲ್ಲಿ ತಾಲವ್ಯ /ಚ್/ ಮತ್ತು /ಜ್/ ದ್ವನಿಗಳು ಇವೆ. ನಾಲಗೆಯನ್ನು ಇನ್ನೂ ತುಸು ಮುಂದಕ್ಕೆ ತಂದು ಉಚ್ಚರಿಸಬಹುದಾದ ಇನ್ನೊಂದು ಬಗೆಯ ವರ್ತ್ಸತಾಲವ್ಯ ದ್ವನಿಗಳಾದ /ಚ್./ ಮತ್ತು /ಜ್./ ದ್ವನಿಗಳು ಉತ್ತರ ಕರ್ನಾಟಕದಲ್ಲಿ ಕಂಡುಬರುತ್ತವೆ. ಇವು ತೆಲಂಗಾಣದ ತೆಲುಗಿನಲ್ಲಿಯೂ ಕಂಡುಬರುತ್ತವೆ. ಹಾಗೆಯೆ ಮರಾಟವಾಡದ ಮರಾಟಿಯಲ್ಲಿ ಕೆಲವು ಓಡಿಯಾಗಳಲ್ಲಿಯೂ ಕಂಡುಬರುತ್ತವೆ. ಎರಡು ಬಿನ್ನ ಮನೆತನಕ್ಕೆ ಸೇರಿದ ಬಾಶೆಗಳು ಹೀಗೆ ಒಂದು ಸಮಾನ ಗುಣವನ್ನು ಬೆಳೆಸಿಕೊಳ್ಳುವುದು ಸಾಮಾನ್ಯವಾಗಿ ಸಾದ್ಯವಿಲ್ಲ. ಹೀಗೆ ಸಾದ್ಯವಾಗುವುದು ನೂರಾರು ವರುಶಗಳ ಆಳಸಂಬಂದದ ಕೂಡುಬಾಳುವೆಯಿಂದ ಮಾತ್ರ.ಹೀಗೆ ಬೆಳೆದ ಮರಾಟಿ ಮುಂದೆ ಮರಾಟರ ಆಳ್ವಿಕೆ ಕಾಲಕ್ಕೆ ಆಡಳಿತದ ಬಾಶೆಯಾಗಿ ಅದಕ್ಕಿಂತ ಮಿಗಿಲಾಗಿ ಕಾಲದದೊಡ್ಡ ವ್ಯಾಪಾರದ ಬಾಶೆಯಾಗಿ ಬೆಳೆದು ತಿರುಗಿ ಕನ್ನಡವನ್ನು ಬಹುವಾಗಿ ಪ್ರಬಾವಿಸಿತು.ಹೀಗೆ ಇಂದಿನ ಮಹಾರಾಶ್ಟ್ರ ಬಾಗದ ಹಲವು ಪ್ರದೇಶವನ್ನು ಮರಾಟಿ ಆವರಿಸಿಕೊಂಡಿತು.

                ಶಾತವಾಹನರ ನಂತರ ಬಾಗದ ಆಡಳಿತ ನಡೆಸಿದ ಕದಂಬ ತಮ್ಮ ಬವುದ್ದ ನಿಶ್ಟೆಯನ್ನು ಮುಂದುವರೆಸಿದರು.ಆದರೆ ಕದಂಬರು ಬಹುಬೇಗ ತಮ್ಮ ದಾರ್ಮಿಕ ನಿಶ್ಟೆಯನ್ನು ವಯಿದಿಕದ ಕಡೆಗೆ ತಿರುಗಿಸಿದರು.ಆಗ ಕರ್ನಾಟಕಕ್ಕೆ ಅದಿಕ್ರುತವಾಗಿ ಸಂಸ್ಕ್ರುತ ಪ್ರವೇಶ ಪಡೆಯುತ್ತದೆ.ಕನ್ನಡ ವ್ಯಾಪಕವಾಗಿ ಬಳಕೆಯಲ್ಲಿದ್ದ ಪ್ರದೇಶಕ್ಕೆ ಪ್ರಾಕ್ರುತದ ಪ್ರವೇಶವಾದ ಬಳಿಕ ಸುಮಾರು ಆರುನೂರು ವರುಶಗಳ ಕಾಲ ಪ್ರಾಕ್ರುತ ಮುಕ್ಯವಾಗಿ ಸಾಹಿತ್ಯ, ಶಾಸ್ತ್ರ, ಆಡಳಿತದಲ್ಲಿ ಇದ್ದಿತು, ಕ್ರಮೇಣ ಬಳಕೆಯಲ್ಲಿ ಬೆಳೆದು ಮರಾಟಿಯಾಗಿ ಪರ್ಯವಸನ ಹೊಂದಿತು.ಆನಂತರ ಸಂಸ್ಕ್ರುತ ಬಂದಿತು.ಸಂಸ್ಕ್ರುತವು ವಯಿದಿಕದ ಹಿಂದೆ ಬಂದಿತು.ಅದುವರೆಗೆ ಹಲವು ಏಳುಬೀಳುಗಳನ್ನು ಕಂಡಿದ್ದ ಸಂಸ್ಕ್ರುತ ದಕ್ಕನಕ್ಕೆ ಬರುವ ಮೂಲಕ ಮತ್ತೊಮ್ಮೆ ರಾರಾಜಿಸತೊಡಗಿತು.ಬಾರತದಲ್ಲಿ ಮಂಕಾಗಿದ್ದ ವಯಿದಿಕದ ಬೆಳವಣಿಗೆ ಸಂಸ್ಕ್ರುತವನ್ನು ಮತ್ತೆ ಆತುಕೊಂಡಿತು.ಕರ್ನಾಟಕದಲ್ಲಿ ಇದು ದರ್ಮ ಮಾತ್ರವಲ್ಲದೆ ಆಡಳಿತ, ಸಾಹಿತ್ಯ, ಶಾಸ್ತ್ರ ಮೊದಲಾದ ವಲಯಗಳನ್ನು ಆವರಿಸಿಕೊಂಡಿತು.ಸಂಸ್ಕ್ರುತವು ಎಂದೂ ಸಾಮಾನ್ಯರ ಜೀವನಕ್ಕೆ ಇಳಿಯದಿದ್ದರೂ ಶಿಶ್ಟ ವಲಯಗಳಲ್ಲಿ ಕನ್ನಡವಾಗಿದ್ದ ಸಂಸ್ಕ್ರುತ ಸಾಮಾನ್ಯ ಬದುಕಿಗೆ ಹರಿದುಬಂದಿತು.ಸಂಸ್ಕ್ರುತ ಆನಂತರ ಮಯ್ಸೂರು ಅರಸರ ಕಾಲದವರೆಗೆ ಆಡಳಿತದ ಆಸುಪಾಸಿನಲ್ಲಿ ಉಳಿದಿದ್ದಿತು.ಕದಂಬರ ಕಾಲಕ್ಕೆನೆ ಕನ್ನಡವು ಆಡಳಿತದ ಸ್ತಾನವನ್ನು ಆವರಿಸಿತಾದರೂ ಪ್ರಾಕ್ರುತ ಮತ್ತು ಸಂಸ್ಕ್ರುತಗಳ ಜೊತೆಗೆ ಸ್ತಾನವನ್ನು ಹಂಚಿಕೊಂಡಿದ್ದಿತು.ಕದಂಬರ ನಂತರ ಹೊರಗಿನಿಂದ ಬಂದು ಆಡಳಿತದಲ್ಲಿದ್ದು ಸಾಮಾಜಿಕ ಮೇಲಂತಸ್ತನ್ನು ಅನುಬವಿಸುತ್ತಿದ್ದ ಸಂಸ್ಕ್ರುತದ ಜೊತೆಗೆ ಕನ್ನಡ ಜಗಳವನ್ನು ಶುರು ಮಾಡುತ್ತದೆ.ಕನ್ನಡ ಒಂದು ಅಸ್ತಿತ್ವವಾಗಿ, ಒಂದು ಪರಿಕಲ್ಪನೆಯಾಗಿ ರೂಪುಗೊಳ್ಳುತ್ತದೆ.ಇದನ್ನು ಇಂದಿನ ಪರಿಬಾಶೆಯಲ್ಲಿ ಗುರ್ತಿಕೆ (ಅಯ್ಡೆಂಟಿಟಿ) ಎಂದು ಹೇಳಬಹುದು.ಚಾಲುಕ್ಯರ ಕಾಲದ ಕರ್ಣಾಟ ಬಲ, ಕರ್ಣಾಟೇಶ್ವರ ಕತಾ ಮೊದಲಾದ ಪದಗಳು ಇದನ್ನೆ ಹೇಳುತ್ತವೆ. ಮುಂದೆ ರಾಶ್ಟ್ರಕೂಟರ ಕಾಲದಲ್ಲಿ ಕನ್ನಡವು ಹೆಚ್ಚು ಮನ್ನಣೆಯನ್ನು ಪಡೆದುಕೊಂಡಿತು. ಕಾಲದಲ್ಲಿ ಕನ್ನಡದಲ್ಲಿ ಹೆಚ್ಚು ಸಾಹಿತ್ಯ, ಶಾಸ್ತ್ರ, ಶಾಸನ ಬರುತ್ತವೆ. ಅಲ್ಲದೆ ಕವಿರಾಜಮಾರ್ಗವೂ ಬರುತ್ತದೆ.ಸಂಸ್ಕ್ರುತವನ್ನು ತಿರಸ್ಕರಿಸುವ ದೊಡ್ಡ ಬಂಡಾಯವಾಗಿ ಕಾಲದ ಬೆಳವಣಿಗೆಗಳನ್ನು ನೋಡಬೇಕಿದೆ.ಯತಿಯನ್ನು ಮೀರುವ ಮತ್ತು ಪ್ರಾಸವನ್ನು ಪ್ರತಿಶ್ಟಾಪಿಸುವ ಕೆಲಸವೆ ಕನ್ನಡವನ್ನು ಸಂಸ್ಕ್ರುತದ ಎದುರು ಪ್ರತಿಶ್ಟಾಪಿಸುವುದಾಗಿದ್ದಿತು.ಪ್ರಾಕ್ರುತವು ಸಾಮಾನ್ಯರ ಬಳಿಗೆ ಬರುತ್ತದೆ. ಹಾಗಾಗಿ ಅದು ಮರಾಟಿಯಾಗಿ ಬೆಳೆಯುತ್ತದೆ. ಆದರೆ ಸಾಮಾನ್ಯರ ಬಳಿಗೆ ಬಾರದ ಸಂಸ್ಕ್ರುತ ಕೇವಲ ಆಸ್ತಾನದೊಳಗೆ ಉಳಿದುಕೊಳ್ಳುತ್ತದೆ ಮತ್ತು ಕ್ರಮೇಣ ವಿದ್ವತ್ತಿನ ಬಾಶೆಯಾಗಿ ಉಳಿದು ಕೊನೆಗೆ ಇಂದಿಗೆ ಇಲ್ಲವಾಗಿಬಿಡುತ್ತದೆ.

                ರಾಶ್ಟ್ರಕೂಟರ ಕಾಲದ ಕನ್ನಡದ ಬೆಳವಣಿಗೆಗಳನ್ನೂ ಅಂದಿನ ಸಾಮಾಜಿಕ, ದಾರ್ಮಿಕ ಮೊದಲಾದ ಬೆಳವಣಿಗೆಗಳನ್ನು ಇಟ್ಟುಕೊಂಡು ತುಸು ಅವಲೋಕಿಸಬೇಕು.ಬಡಕಲಾಗುತ್ತಿದ್ದ ಬವುದ್ದ, ಬಲವಾಗಿದ್ದ ಜಯ್ನ,ಗಟ್ಟಿಯಾಗಿಯೆ ಇದ್ದ ಬಾಗವತ ಇವುಗಳ ಜೊತೆಗೆ ನೆಲದ ಬೇರುಗಳೊಂದಿಗೆ ಬದುಕಿದ್ದ ಸ್ತಳೀಯ ಎಲ್ಲಮ್ಮ, ಪಾಶುಪತ ಮೊದಲಾದ ಹಲವು ಮತಪಂತಗಳು, ತಮಿಳಿನ ಸಿದ್ದ ಶಯಿವದ ಪ್ರಬಾವ ಮೊದಲಾದವು ಸೇರಿ ಸಾಮಾಜಿಕ ತಳಮಳವನ್ನು ಹೆಚ್ಚಿಸಿದ್ದವು. ಕಾಲಕ್ಕೆ ಇಸ್ಲಾಂ ಮತ್ತು ಅದರೊಂದಿಗೆ ಬೀದಿಯಲ್ಲಿಯೆ ಉಳಿದ ಸೂಪಿ ನೆಲಕ್ಕೆ ಬಂದಿದ್ದವು.ಇದರಿಂದಾಗಿ ಆಸ್ತಾನದೊಳಗಿದ್ದ ಜಯ್ನ, ವಯಿದಿಕ ಮೊದಲಾದವರು ಬೀದಿಗೆ ಬಂದರು.ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಕನ್ನಡದ ಬಳಕೆಯ ರಚನೆ ವ್ಯಾಪಕವಾಗಿ ಬದಲಾಗುತ್ತದೆ.ಸುಮಾರು ಒಂಬತ್ತುಹತ್ತನೆಯ ಶತಮಾನಗಳಲ್ಲಿ ಶಾಸನಗಳನ್ನು ತುಂಬಿಕೊಂಡ ಸಂಸ್ಕ್ರುತಬೂಯಿಶ್ಟವಲ್ಲದ ಕನ್ನಡ, ಹತ್ತುಹನ್ನೊಂದನೆಯ ಶತಮಾನದ ವೇಳೆಗೆ ಸಾಹಿತ್ಯದೊಳಗೆ ಬರುತ್ತದೆ. ಜಂಜಾಟ ಮುಂದುರೆದು ವಯಿದಿಕಬಾಗವತ ಹಿನ್ನೆಲೆಯ ದಾಸರು ಸಂಸ್ಕ್ರುತದೊಂದಿಗೆ ಜಗಳವಾಡಿ ಕನ್ನಡವನ್ನು ಆತುಕೊಳ್ಳುತ್ತಾರೆ. ಕಾಲದ ಹಲವಾರು ಶಯಿವ ಪಂತಗಳೂ ಕನ್ನಡದ ಬೆಳವಣಿಗೆಗೆ ಬಿನ್ನ ರೀತಿಯಲ್ಲಿ ಪೂರಕವಾಗುತ್ತವೆ.

                ಆನಂತರ ಆಡಳಿತದಲ್ಲಿ ಆಗುವ ಮಹತ್ವದ ಬೆಳವಣಿಗೆಗಳಿಂದಾಗಿ ಬಹಮನಿ ಸಾಮಗ್ರಾಜ್ಯದ ಸ್ತಾಪನೆ ಆಗುತ್ತದೆ.ಇದರಿಂದಾಗಿ ಅರಸರ ದಾರ್ಮಿಕ ಬಾಶೆಯಾಗಿ ಅರಾಬಿಕ್, ಅದುವರೆಗೆ ವ್ಯಾಪಾರದ ಬಾಶೆಯಾಗಿ ಪರಿಚಯವಾಗಿದ್ದ ಪರ್ಶಿಯನ್ ಈಗ ಅರಸರ ಬಾಶೆಯಾಗಿ, ಆಡಳಿತ ಬಾಶೆಯಾಗಿ ಬಳಕೆಗೆ ಬರುತ್ತದೆ.ಇದು ಕನ್ನಡ ಮತ್ತು ಪರ್ಶಿಯನ್ ಇವುಗಳ ನಡುವಿನ ಅನುಸಂದಾನಕ್ಕೆ ಎಡೆಯೊದಗಿಸುತ್ತದೆ.ಆಳರಸರ, ಮೇಲಂತಸ್ತಿನ ಪರ್ಶಿಯನ್ ಮತ್ತು ನೆಲದವರ, ಸಾಮಾನ್ಯರ ಕನ್ನಡ ಇವುಗಳು ಪರಸ್ಪರ ಬೆರೆತು ಕನ್ನಡ ವ್ಯಾಕರಣ ರಚನೆ ಮತ್ತು ಪರ್ಶಿಯನ್ ಪದಕೋಶಗಳು ಸೇರಿ ಉರ್ದು ಬೆಳೆಯುತ್ತದೆ. ಬೆಳವಣಿಗೆ ಕಲಬುರಗಿಯಲ್ಲಿಯೆ ಆಗುತ್ತದೆ.ಮುಂದೆ ಉರ್ದು ನೆಲದ ಬಹುದೊಡ್ಡ ಬಾಶೆಯಾಗಿ ಬೆಳೆಯುತ್ತದೆ.ಹದಿನಾಲ್ಕನೆ ಶತಮಾನದ ಬಂದೆನವಾಜನಿಂದ ಆರಂಬಗೊಂಡ ಉರ್ದು ಬರವಣಿಗೆ ಆದಿಲ್ ಶಾಹಿಗಳ ಕಾಲಕ್ಕೆ ಹಲವು ಸಾಹಿತ್ಯ, ಶಾಸ್ತ್ರ ಕ್ರುತಿಗಳು ಬರುವಂತಾಗುತ್ತದೆ.ಇದು ಮುಂದೆ ಆದಿಲ್ ಶಾಹಿ, ಸುರಪುರದ ದೊರೆಗಳು, ಮಯ್ಸೂರು ರಾಜರು, ನಿಜಾಮರು ಮೊದಲಾದವರ ಆಸ್ತಾನದೊಳಗೆ ಸ್ತಾನವನ್ನು ಪಡೆದುಕೊಳ್ಳುತ್ತದೆ.

                ನಡುಗಾಲದಲ್ಲಿ ಕೊರವ, ಕೊರಚ ಮೊದಲಾದ ಹಲವಾರು ಬಿನ್ನ ಬಾಶಿಕ ಸಮುದಾಯಗಳು ಕರ್ನಾಟಕವನ್ನು ಪ್ರವೇಶಿಸುತ್ತವೆ. ಇವು ತಮ್ಮದೆ ಸಂಗೀತ, ಕಲೆ ಮೊದಲಾದ ಕಾರಣಕ್ಕೆ ಮತ್ತು ಅಡವಿಯಿಂದ ದೂರವಾಗುತ್ತಿದ್ದ ನಾಡಿಗೆ ಅಡವಿಯ ವಸ್ತುಗಳನ್ನು ತರುವುದಕ್ಕೆ ಮೊದಲಾಗಿ ನೆಲದ ಬಾಗವಾಗಿ ಬೆರೆತುಕೊಳ್ಳುತ್ತವೆ. ತಮ್ಮ ಬಿನ್ನತೆಯನ್ನು ಹಾಗೆಯೆ ಉಳಿಸಿಕೊಂಡು ಬರುವ ಇಂತಾ ಹಲವಾರು ಸಮುದಾಯಗಳು, ಒಳಗುಂಪುಗಳು ನಾಡಿನ ತುಂಬ ಇವೆ.ಕರ್ನಾಟಕದಲ್ಲಿ ಮಾತ್ರ ಬಳಕೆಯಲ್ಲಿರುವ ತಮಿಳುನಾಡಿನಿಂದ ಬರುವ ತಮಿಳಿನ ಒಳನುಡಿ ಸಂಕೇತಿ ಸಮುದಾಯವೂ ಇಂತದೆ. ಹಾಗೆಯೆ, ಅರುವು, ಅರುವುಮು ಮೊದಲಾದ ಹಲವು ಬಿನ್ನ ಒಳನುಡಿಗಳೂ ಬಂದಿವೆ. ನಡುಗಾಲದಲ್ಲಿ ತೆಲುಗು ಮಾತನಾಡುವ ಹಲವಾರು ಸಮುದಾಯಗಳು ಕರ್ನಾಟಕದೊಳಗೆ ಬರುತ್ತವೆ. ಚೆಂಚು, ವಡರಿ ಇವು ಬಹುದೊಡ್ಡ ಸಮುದಾಯಗಳು. ಇವಲ್ಲದೆ ದಾಸರು, ಕಿಳ್ಳೆಕ್ಯಾತರು ಮೊದಲಾಗಿ ಹಲವರನ್ನು, ತೆಲುಗನ್ನು ಮರೆತು ಕನ್ನಡವಾಗಿರುವ ಹಲವಾರು ಸಮುದಾಯಗಳನ್ನೂ ಇಲ್ಲಿ ಹೇಳಬಹುದು.ಮಲಯಾಳಮ್ಮಿನ ಹೆಚ್ಚು ಸಂಬಂದ ಇರುವ ಪಣಿಯರು, ಹಾಗೆಯೆ ಮಲೆಕುಡಿ ಮೊದಲಾದವರೂಬಹು ಹಿಂದಿನಿಂದಲೆ ಕನ್ನಡದ ಸಂಪರ್ಕದೊಂದಿಗೆ ಇದ್ದಾರೆ.ಆನಂತರ ಕರ್ನಾಟಕಕ್ಕೆ ಬರುವ ಇನ್ನೊಂದು ದೊಡ್ಡ ಸಮುದಾಯ ಲಂಬಾಣಿ.ಉತ್ತರದ ಅರಸರ ಸಯಿನ್ಯದ ಜೊತೆ ಬಂದು ಸುಮಾರು ನಾಲ್ಕು ನೂರು ವರುಶಗಳಿಂದ ಕರ್ನಾಟಕದ ನಾಡಿನೆಲ್ಲೆಡೆ ನೆಲೆ ನಿಂತಿದ್ದಾರೆ.ಸಂಗೀತ, ಕಲೆ, ಸವುಂದರ್ಯ ಹೀಗೆ ವಿವಿದ ವಲಯಗಳಲ್ಲಿ ಇವರ ಕೊಡುಗೆ ಕನ್ನಡ ಬದುಕಿಗೆ ಅನನ್ಯ.ಬಹುಶಾ ಇದೆ ಕಾಲಕ್ಕೆ ಮರಾಟಿ ಆಡಳಿತ ಬಾಶೆಯಾಗಿ ಬೆಳೆದು ಕನ್ನಡದ ಮೇಲೆ ಹೆಚ್ಚು ಪ್ರಬಾವ ಬೀರುತ್ತದೆ.ಅದಕ್ಕಿಂತಲೂ ಮುಕ್ಯವಾಗಿ ಮರಾಟಿ ಕನ್ನಡವನ್ನು ಪ್ರಬಾವಿಸುವುದು ವ್ಯಾಪಾರದ ಕಾರಣಕ್ಕೆ. ಇಂದಿಗೂ ಕಲಬುರಗಿ ಪರಿಸರದಲ್ಲಿ ಮರಾಟಿ ಅಂಕಿಗಳೆ ಬಳಕೆಯಲ್ಲಿವೆ. ಆನಂತರ ಮರಾಟಿ ಹತ್ತಿರದ ಬಾಶೆಯನ್ನಾಡುವ ಪಾರ್ದಿ ಮೊದಲಾದವರು, ಮರಾಟಿಯ ಬಿನ್ನ ಒಳನುಡಿಗಳನ್ನಾಡುವ ಹಲವು ಸಮುದಾಯಗಳು ಬರುತ್ತವೆ. ಇದೆ ಕಾಲಕ್ಕೆ ಗುಜರಾತಿ, ರಾಜಸ್ತಾನಿ, ಮಾರ್ವಾಡಿ ಮೊದಲಾದ ಬಾಶೆಗಳು ವ್ಯಾಪಾರಕ್ಕೆ ಮುಕ್ಯವಾಗಿ ಮತ್ತು ಇತರೆ ಕಾರಣಗಳಿಗಾಗಿ ಕರ್ನಾಟಕವನ್ನು ಹೆಚ್ಚು ಪ್ರವೇಶಿಸುತ್ತವೆ. ಇದೆ ದಾರಿಯಲ್ಲಿ ಪಂಜಾಬಿಯೂ ಬರುತ್ತದೆ.

                ಆನಂತರ ಇಂಗ್ಲೀಶು ವ್ಯಾಪಾರ, ಆಡಳಿತ ಕಾರಣಕ್ಕೆ ಕರ್ನಾಟಕವನ್ನು ಪೋರ್ಚುಗೀಸು ಮೊದಲಾಗಿ ಇತರ ಯುರೋಪಿನ ಬಾಶೆಗಳ ಜೊತೆಗೆ ಪ್ರವೇಶಿಸುತ್ತದೆ.ಆದರೆ ಇಂಗ್ಲೀಶು ಆಡಳಿತ ಹಿಡಿಯುವಲ್ಲಿ ಯಶವಾಗುವುದರಿಂದ ಇಂಗ್ಲೀಶು ಕರ್ನಾಟಕದ ಮಹತ್ವದ ಬಾಶೆಯಾಗಿ ಬೆಳೆಯುತ್ತದೆ.ಕನ್ನಡದ ಆದುನಿಕತೆಯನ್ನು ಇಂಗ್ಲೀಶಿನ ಬರುವಿಕೆಯಿಂದಲೆ ಗುರುತಿಸಲಾಗುತ್ತದೆ.ಕನ್ನಡ ಸಾಹಿತ್ಯವನ್ನು ಇಂಗ್ಲೀಶು ಇಡಿಯಾಗಿ ಬದಲಿಸಿಬಿಡುತ್ತದೆ.ಶಿಕ್ಶಣ, ಆಡಳಿತ, ಸಂಶೋದನೆ ಮೊದಲಾಗಿ ಹಲವು ವಲಯಗಳಲ್ಲಿ ಪ್ರಾಬಲ್ಯ ಪಡೆಯುವ ಇಂಗ್ಲೀಶು ಇಂದಿನ ಕರ್ನಾಟಕದ ಆಡಳಿತ ಬಾಶೆಯಾಗುವಶ್ಟು ಬೆಳೆಯುತ್ತದೆ.

                ಆದುನಿಕ ಕಾಲದಲ್ಲಿ ಇನ್ನೂ ಹೆಚ್ಚು ಹೆಚ್ಚು ವಲಸೆಗಳು ನಡೆಯುತ್ತಲೆ ಇವೆ. ಸುಮಾರು ನೂರರಶ್ಟು ವರುಶಗಳ ಹಿಂದೆಯೆ ಮದ್ಯಪ್ರದೇಶದ ಕಾಂದೇಶ ಪ್ರದೇಶದಿಂದ ಹಲವಾರು ಸಣ್ಣ ಸಣ್ಣ ಬಿನ್ನ ಬಾಶಿಕ/ ಬಿನ್ನ ಒಳನುಡಿಯ ಸಮುದಾಯಗಳು ಬಂದಿವೆ ಮತ್ತು ಅವು ಸಣ್ಣ ಸಂಕೆಯಲ್ಲಿದ್ದು ನಾಡಿನ ಎಲ್ಲೆಡೆ ಹರಡಿಕೊಂಡಿವೆ. ಹಾಗೆಯೆ ಉದ್ಯೋಗ, ಕೂಲಿ, ಆದುನಿಕ ಕಾಲದ ಶಿಕ್ಶಣ, ಸರಕಾರ ಕೆಲಸ ಮೊದಲಾದ ಕಾರಣಕ್ಕೆ ಇಡಿಯ ಉತ್ತರ ಬಾರತದ ಹಲವಾರು ಬಾಗಗಳಿಂದ ದೊಡ್ಡ ಸಂಕೆಯ ಮಂದಿ ವಲಸೆ ಬಂದು ಇಲ್ಲಿ ನೆಲೆ ನಿಂತಿದ್ದಾರೆ. ನೇಪಾಲಿ, ಓಡಿಯಾದಂತಾ ಬಾಶೆಗಳು, ಅವುಗಳ ಬಿನ್ನ ಒಳನುಡಿಗಳು ಮತ್ತು ಮುಕ್ಯವಾಗಿ ಹಿಂದಿ, ಹಿಂದಿಯ ಹಲವಾರು ಒಳನುಡಿಗಳು ಇಂದು ಕರ್ನಾಟಕದೊಳಗೆ ನೆಲೆ ಕಂಡುಕೊಂಡಿವೆ. ಬಿಹಾರಿ, ಬೋಜಪುರಿ, ಮಯ್ತಿಲಿ, ಹರಿಯಾಣ್ವಿ, ಜಾರ್ಕಂಡಿ, ಹಿಮಾಚಲಿ ಮೊದಲಾದವನ್ನು ಹೆಸರಿಸಬಹುದು.ಹಾಗೆಯೆ ಆಸ್ಸಾಮಿ ಒಳಗೊಂಡು ಹಲವು ಈಶಾನ್ಯದ ಬಾಶೆಗಳೂ ಬಂದಿವೆ.

                ಸ್ವತಂತ್ರ ಬಾರತದ ನಂತರ ಚೀನಾದೊಡನೆಯ ಯುದ್ದದ ನಂತರ ಟಿಬೇಟಿಯನ್ನರು ದೊಡ್ಡ ಸಂಕೆಯಲ್ಲಿ ಬಂದು ಮುಂಡಗೋಡ, ಬಯಲುಕುಪ್ಪೆ ಕೇಂದ್ರಗಳಲ್ಲಿ ನೆಲೆ ನಿಂತಿದ್ದಾರೆ. ಹಾಗೆಯೆ ಪಾಕಿಸ್ತಾನದೊಂದಿಗಿನ 1971 ಯುದ್ದದ ನಂತರ ಇಂದಿನ ಬಾಂಗ್ಲಾದಿಂದ ವಲಸೆ ಬಂದ ಬಂಗಾಳಿ ಮಾತನಾಡುವವರು ರಾಯಚೂರು ಜಿಲ್ಲೆಯ ಸಿಂದನೂರು ಪರಿಸರದಲ್ಲಿ ದೊಡ್ಡ ಸಂಕೆಯಲ್ಲಿ ನೆಲೆ ನಿಂತಿದ್ದಾರೆ. ಆದುನಿಕ ಜಗತ್ತಿನ ಉದ್ಯೋಗ, ವಲಸೆ, ತಾಂತ್ರಿಕ ಬೆಳವಣಿಗೆ ಮೊದಲಾದವು ಕಾರಣವಾಗಿ ಇಂದು ಜಾಗತಿಕ ವಲಸೆ ಸಾಮಾನ್ಯವಾಗಿದ್ದು ಜಗತ್ತಿನ ಹಲವು ಬಾಶೆಗಳು ಬೆಂಗಳೂರಿನಲ್ಲಿ ಅಲ್ಲಲ್ಲಿ ಕೇಳಿಸುತ್ತಿರುತ್ತವೆ.

                ಹೀಗೆ ಕರ್ನಾಟಕ ಯಾವತ್ತೂ ಬಹುಬಾಶಿಕ ಪ್ರದೇಶ. ಇಲ್ಲಿ ಬಹುಬಾಶಿಕತೆಯ ಆಳವನ್ನು ಅರ್ತ ಮಾಡಿಕೊಳ್ಳುವುದಕ್ಕೆ ಒಂದೆರಡು ನಿದರ್ಶನಗಳನ್ನು ಗಮನಿಸಬಹುದು.ಕನ್ನಡಮರಾಟಿ ಇವು ಬಿನ್ನ ಮನೆತನಕ್ಕೆ ಸೇರುವ ಬಾಶೆಗಳು. ಆದರೆ ಸಮಾನವಾದ ಬೆಳವಣಿಗೆಗಳನ್ನು ಇವು ತೋರಿಸುತ್ತವೆ. ರಾಯಚೂರು ಮೊದಲಾದ ಪರಿಸರಗಳಲ್ಲಿ ಕನ್ನಡ ಮತ್ತು ತೆಲುಗುಗಳು ವಾಕ್ಯ ಹಂತದಲ್ಲಿ ಬೆರೆತು ಬಳಕೆಯಾಗುತ್ತವೆ. ಇವು ಜಗತ್ತಿನಲ್ಲಿಯೆ ಸಮಾಜಬಾಶಾವಿಗ್ನಾನ, ಬಾಶಾನಂಟಿನ ಅದ್ಯಯನಕ್ಕೆ ಒಳ್ಳೆಯ ಮಾದರಿಗಳನ್ನೂ ಕೊಡುತ್ತವೆ. ಹಯ್ದರಾಬಾದ ಕರ್ನಾಟಕ, ತೆಲಂಗಾಣ ಮತ್ತು ಮರಾಟವಾಡ ಪ್ರದೇಶಗಳ ಕನ್ನಡ, ತೆಲುಗು, ಮರಾಟಿ ಮತ್ತು ಉರ್ದು ಬಾಶೆಗಳು ಒಂದು ಸಮಾನ ತಾನವನ್ನು, ಗತಿಯನ್ನು ಹಂಚಿಕೊಳ್ಳುತ್ತವೆ. ಸಂಸ್ಕ್ರುತಕ್ಕೆ ಪರ್ಶಿಯನ್ ಪ್ರತ್ಯಯ ಸೇರಿಸಿ ಹೊಸ ಕನ್ನಡ ಪದ ಹುಟ್ಟುತ್ತವೆ, ಇಂಗ್ಲೀಶ್ ಪದಕ್ಕೆ ಸಂಸ್ಕ್ರುತ ಪ್ರತ್ಯಯ ಸೇರಿಸಿ ಹೊಸ ಕನ್ನಡ ಪದಗಳು ಹುಟ್ಟುತ್ತವೆ.ಒಂದೆ ಮನತೆನಕ್ಕೆ ಸೇರಿದ ಕನ್ನಡ ಮತ್ತು ತೆಲುಗುಗಳು ವ್ಯಾಪಕವಾದ ಪ್ರಬಾವವನ್ನು ಪರಸ್ಪರ ಬಾಶೆಗಳ ಮೇಲೆ ತೋರಿಸುತ್ತವೆ.

ಇದೆಲ್ಲವನ್ನು ಗಮನಿಸಿದಾಗ ಕರ್ನಾಟಕ ನಿರಂತರವಾಗಿ ಬಾಶೆಗಳ ಬಹುದೊಡ್ಡ ಬಹುತ್ವದ ಆಡುಂಬೋಲವಾಗಿದ್ದಿತು ಎಂದು ಹೇಳಬಹುದು.ದೊಡ್ಡ ಬಾಶೆ, ಸಣ್ಣ ಬಾಶೆ, ಸಾಹಿತ್ಯಶಾಸ್ತ್ರಗಳ, ದರ್ಮದ ಬಾಶೆ, ಆಡಳಿತದ ಬಾಶೆ ಇವೆಲ್ಲವನ್ನೂ ಬದುಕಿನ ಬಾಶೆಗಳಾಗಿ ಬಂದ ಸಣ್ಣ ಸಣ್ಣ ಬಾಶೆಗಳನ್ನೂ ಒಳಗೊಂಡು ಇತಿಹಾಸ ಬೆಳೆದಿದೆ. ಎಲ್ಲ ಬಾಶೆಗಳಿಂದ ಕರ್ನಾಟಕ ಶ್ರೀಮಂತ, ವಯಿವಿದ್ಯ ಆಗಿದೆ.ಇದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕಿರುವುದು ಇಂದಿನ ಜರೂರು.

3 comments to “ಕರ್ನಾಟಕದ ಮಾತುಗಳು: ಬಹುತ್ವದ ಆಡುಂಬೋಲ”
  1. ಕರ್ನಾಟಕದ ಬಾಷಿಕ ಬಹುತ್ವ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

    • ಮಾನ್ಯರೆ,
      ಲಿಪಿ ಬಗೆಗೆ ತಮ್ಮ ಈ ಪ್ರತಿಕ್ರಿಯೆ ಎಂದು ಬಾವಿಸಿ,
      ಕನ್ನಡದ ಲಿಪಿ ಬದಲಾವಣೆ ಕನ್ನಡ ಬಾಶೆಯ ಮತ್ತು ಕನ್ನಡ ಮಾತುಗ ಸಮಾಜದ ಬೆಳವಣಿಗೆಗೆ ಒಂದು ದಾಪುಗಾಲ ಆಗುತ್ತದೆ ಎಂಬ ಬಾಶಾವಿಗ್ನಾನ ಹಿನ್ನೆಲೆಯ ಆಲೋಚನೆಯಲ್ಲಿ ಮಾಡಿದ ಪ್ರಯೋಗ ಇದು.
      ಶರಣು,

ಪ್ರತಿಕ್ರಿಯಿಸಿ