ಋತುಮಾನವು ಸುಚಿತ್ರ ಫಿಲ್ಮ್ ಸೊಸೈಟಿ ಸಹಯೋಗದಲ್ಲಿ ನಡೆಸಿದ ಮಾಕ್ಬೆತ್ ಆಧಾರಿತ ಚಲನಚಿತ್ರೋತ್ಸವದ ಸಂವಾದದಲ್ಲಿ ಎತ್ತಲಾದ ಪ್ರಶ್ನೆಯೊಂದಕ್ಕೆ ದಯಾನಂದ್ ಉತ್ತರ ಹುಡುಕುವ ಪ್ರಯತ್ನವನ್ನಿಲ್ಲಿ ಮಾಡಿದ್ದಾರೆ .
ಮನುಷ್ಯ ದುರಂತಗಳಿಗೆ ಮನುಷ್ಯ ಮಾತ್ರ ಕಾರಣವೋ ಅಥವಾ ವಿಧಿ ಎಂಬುದು ಇದನ್ನೆಲ್ಲಾ ತನ್ನ ಅಂಕೆಯಲ್ಲಿ ಆಡಿಸುತ್ತಿರುತ್ತದೆಯೋ?
ನಿಜವಾಗಿಯೂ ವಿಧಿ ಎಂಬುದು ಇದೆಯೋ ಅಥವಾ ಮನುಷ್ಯರು ತಮ್ಮ ಕೇಡುಗಳನ್ನು ವಿಧಿ ಎಂಬುದರ ತಲೆಗೆ ಕಟ್ಟಿ ತಾವು ನಿರಾಳರಾಗಲು ಬಯಸುತ್ತಾರೋ?
ಭವಿಷ್ಯದ ಕನಸುಗಳಿಗಾಗಿ ವರ್ತಮಾನದಲ್ಲಿ ಎಂತೆಂಥಾ ಕೇಡುಗಳನ್ನಾದರೂ ಮಾಡುವ ಮನುಷ್ಯ ಮುಂದೆ ಪಾಪಪ್ರಜ್ಞೆಯಿಂದ ಬೇಯುವ ಹೊತ್ತಿಗೆ ತೀರಾ ಏಕಾಂಗಿಯಾಗಿಬಿಡುವುದು ಯಾಕೆ?
ಷೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಪರಿಧಿಯೊಳಗೆ ಹೊಕ್ಕ ದಿನದಿಂದಲೂ ಈ ಪ್ರಶ್ನೆಗಳು ತಲೆಯೊಳಗೆ ಗುಂಗಾಡುತ್ತಲೇ ಇವೆ. ಇತ್ತೀಚೆಗೆ ಗೆಳೆಯರ ಗುಂಪಿನ ಮಾತುಕತೆ ವೇಳೆ ಷೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕವನ್ನು ರೂಪಾಂತರಿಸಿ ತಯಾರಾಗಿರುವ ಸಿನಿಮಾಗಳ ಪೈಕಿ ಲೇಡಿ ಮ್ಯಾಕ್‌ಬೆತ್ ಪಾತ್ರವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ಶೋಧಿಸಿರುವ ಯಾವುದಾದರೂ ಸಿನಿಮಾ ಇದೆಯೇ ಎಂಬ ಪ್ರಶ್ನೆ ಹುಟ್ಟಿತು. ಮ್ಯಾಕ್‌ಬೆತ್ ನಾಟಕ ಪ್ರಯೋಗಗಳ ಆದಿಯಾಗಿ ರೂಪಾಂತರಗೊಂಡಿರುವ ಹಲವು ಸಿನಿಮಾಗಳಲ್ಲೂ ಲೇಡಿ ಮ್ಯಾಕ್‌ಬೆತ್‌ಳೇ ಮ್ಯಾಕ್‌ಬೆತ್‌ನ ಕೇಡುಗಳಿಗೆ ಕಾರಣ, ಮ್ಯಾಕ್‌ಬೆತ್ ನಡೆಸುವ ಕೊಲೆಗಳ ಸರಣಿಗೆ ಆರಂಭದ ‘ರಕ್ತತಿಲಕ’ವಿಟ್ಟ ವಿಲನ್ ಈಕೆಯೇ ಎಂಬಂತೆ ಬಿಂಬಿಸಲಾಗಿದೆ. ಆದರೆ, ಲೇಡಿ ಮ್ಯಾಕ್‌ಬೆತ್ ಪ್ರಚೋದನೆಯ ಹಿಂದಿರಬಹುದಾಗಿದ್ದ ಒತ್ತಡಗಳೇನು ಎಂಬುದನ್ನು ಸಿನಿಮಾಗಳ ಮೂಲಕ ಶೋಧಿಸಿರುವ ಉದಾಹರಣೆಗಳು ಕಾಣುತ್ತಿಲ್ಲ.
ಷೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕದಲ್ಲಿ ಲೇಡಿ ಮ್ಯಾಕ್‌ಬೆತ್ ದುರಾಸೆಯತ್ತ ನಡೆಯುತ್ತಾ, ಅಸಹಜವಾಗುತ್ತಾ, ಡಂಕನ್ ಕೊಲೆಗಾಗಿ ಮ್ಯಾಕ್‌ಬೆತ್‌ನನ್ನು ಹುರಿದುಂಬಿಸುವುದಕ್ಕೂ ಮೊದಲು ಅತಿಮಾನುಷ ಶಕ್ತಿಗಳನ್ನು (spirits) ಆವಾಹಿಸುವ ಸಂದರ್ಭದಲ್ಲಿ, ‘unsex me here’ ಎನ್ನುತ್ತಾಳೆ (Act 1, Sence 5). ಇಲ್ಲಿ ಮ್ಯಾಕ್‌ಬೆತ್‌ನ ಕೇಡುಗಳಿಗೆಲ್ಲಾ ಕೊನೆಗೆ ಲೇಡಿ ಮ್ಯಾಕ್‌ಬೆತ್‌ಳನ್ನೇ ದೂಷಿಸುವ ಪರಿಪಾಠ ಮುಂದೆ ಶುರುವಿಟ್ಟುಕೊಳ್ಳಬಹುದೆಂಬ ‘ಪೂರ್ವಪ್ರಜ್ಞೆ’ಯಿಂದ ಷೇಕ್ಸ್‌ಪಿಯರ್ ಈ ಮಾತನ್ನು ಲೇಡಿ ಮ್ಯಾಕ್‌ಬೆತ್ ಬಾಯಿಯಿಂದಲೇ ಹೇಳಿಸಿದ್ದಾನೆ ಎನಿಸುತ್ತದೆ! ಕೇಡಿನ ಸಂದರ್ಭದಲ್ಲಿ ತನ್ನನ್ನು unsex ಆಗಿಸುವಂತೆ ‘spirits’ ಆವಾಹಿಸುವ ಲೇಡಿ ಮ್ಯಾಕ್‌ಬೆತ್, ತಾನು ಸ್ತ್ರೀತನವನ್ನು ಮೀರಿ ಈ ಕೇಡಿಗೆ ಸಿದ್ಧವಾಗುತ್ತಿರುವ ಸೂಚನೆಯನ್ನು ನೀಡುತ್ತಾಳೆ. ಅದೇ ಸಂಭಾಷಣೆಯ ಮುಂದಿನ ಕೆಲ ಸಾಲುಗಳಲ್ಲೂ ಇದು ಸ್ಪಷ್ಟವಾಗುತ್ತದೆ.
ಕೇಡಿಗೆ ಉಂಟೆ ಅಂಗ-‘ಲಿಂಗ’?
ತನ್ನ ಎದೆಹಾಲು ಕುಡಿದು ಮುಂದಾಗುವ ಕೇಡಿಗೆ ಗಟ್ಟಿಗೊಳ್ಳುವಂತೆ spiritsಗೆ ಹೇಳುವ ಲೇಡಿ ಮ್ಯಾಕ್‌ಬೆತ್ ‘Come to my woman’s breasts’ ಎನ್ನುತ್ತಾಳೆ. ಇಲ್ಲಿ ‘woman’s breasts’ ಎನ್ನುವ ಮಾತುಗಳು ತುಂಬಾ ಮುಖ್ಯವಾಗುತ್ತವೆ. ತನ್ನ ಸ್ತ್ರೀತನವನ್ನೇ ಮೀರಿಕೊಂಡು ಕೇಡಿಗೆ ಸಿದ್ಧಗೊಳ್ಳುತ್ತಿರುವ ಲೇಡಿ ಮ್ಯಾಕ್‌ಬೆತ್ ಆ ವೇಳೆಗೆ ನಿಜವಾಗಿಯೂ ಹೆಣ್ಣಾಗಿ ಉಳಿದಿದ್ದಳೇ ಎಂಬುದು ಪ್ರಶ್ನೆ. ಹೀಗಾಗಿ ಡಂಕನ್‌ನ ಹತ್ಯೆಗೆ ಮ್ಯಾಕ್‌ಬೆತ್‌ನನ್ನು ಹುರಿಗೊಳಿಸುತ್ತಿರುವ ಲೇಡಿ ಮ್ಯಾಕ್‌ಬೆತ್ ಇಲ್ಲಿ ಲಿಂಗವನ್ನು ಮೀರಿಕೊಳ್ಳುತ್ತಿರುವವಳು. ಈ ಹತ್ಯೆಯ ಪ್ರಚೋದನೆಯ ಹಿಂದೆ ಲೇಡಿ ಮ್ಯಾಕ್‌ಬೆತ್ ಎಂಬ ಹೆಣ್ಣು ಇದ್ದರೂ ‘ಹೆಣ್ಣುತನ’ ಇಲ್ಲ ಎಂಬುದನ್ನು ಷೇಕ್ಸ್‌ಪಿಯರ್ ಸೂಕ್ಷ್ಮವಾಗಿ ಹೇಳಿರಬಹುದು. ಕೆಡುಕಿಗೆ ಸ್ತ್ರೀ- ಪುರುಷ ಎಂಬ ಲಿಂಗಬೇಧ ಇಲ್ಲ ಎಂದು ಷೇಕ್ಸ್‌ಪಿಯರ್ ಇಲ್ಲಿ ಸೂಕ್ಷ್ಮವಾಗಿ ಹೇಳಲು ಯತ್ನಿಸಿದ್ದರೂ ಮುಂದೆ ಮ್ಯಾಕ್‌ಬೆತ್ ರೂಪಾಂತರಿಸಿಕೊಂಡು ಸಿನಿಮಾ ಮಾಡಿರುವ ಹಲವರು ಈ ಸೂಕ್ಷ್ಮತೆಯನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ಏಕೆ ಮಾಡಲಿಲ್ಲ ಎಂಬ ಪ್ರಶ್ನೆಯೂ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಲೇಡಿ ಮ್ಯಾಕ್‌ಬೆತ್ ತನ್ನನ್ನು unsex ಆಗಿಸುವಂತೆ ಕೇಳುತ್ತಿರುವ ದೃಶ್ಯವನ್ನು ರಂಗದ ಮಿತಿಗಳಿಗಿಂತ ಸಿನಿಮಾದಲ್ಲಿ ಭಿನ್ನವಾಗಿ ಹೇಳಲು ಇದ್ದ ಸಾಧ್ಯತೆಗಳನ್ನು ಅಕಿರ ಕುರೊಸಾವರಿಂದ (ಥ್ರೋನ್ ಆಫ್ ಬ್ಲಡ್-1957) ಹಿಡಿದು ಅಭಯ್ ಸಿಂಹರವರೆಗೆ (ಪಡ್ಡಾಯಿ-2018) ಎಲ್ಲರೂ ಕೈಬಿಟ್ಟಿದ್ದಾರೆ ಎನಿಸುತ್ತದೆ. ಕೇವಲ ಕೇಡಿನ ದೃಷ್ಟಿಯಿಂದ ಮಾತ್ರವಲ್ಲ, ಅಧಿಕಾರದ ಲಾಲಸೆಗೆ ಬಿದ್ದಿರುವ ಮ್ಯಾಕ್‌ಬೆತ್ ತಲೆಗೆ ಹತ್ಯೆಯ ‘ದುರಾಲೋಚನೆ’ಯನ್ನು ತುಂಬುವ ಲೇಡಿ ಮ್ಯಾಕ್‌ಬೆತ್‌ಗೆ ಆ ಆಲೋಚನೆಯ ಹಿಂದೆ ಇದ್ದಿರಬಹುದಾದ ಪ್ರೇರೇಪಣೆ, ಪ್ರಚೋದನೆಗಳು ಏನು, ಎಂಥವು ಎಂಬುದನ್ನೂ ಈ visual textಗಳು ಶೋಧಿಸದಿರುವುದು ಇವುಗಳ ಮಿತಿ ಇರಬಹುದು. ಅಥವಾ ರೂಪಾಂತರಿಸಿಕೊಂಡಿರುವ ನಿರ್ದೇಶಕರಿಗೆ ಈ ದೃಷ್ಟಿಕೋನಕ್ಕಿಂತ ಕೇಡಿನ ಕಥೆಯನ್ನು ಭಿನ್ನವಾಗಿ ಹೇಳುವುದೇ ಮುಖ್ಯವಾಗಿರಬಹುದು. ವಿಶಾಲ್ ಭಾರದ್ವಾಜ್ ರೂಪಾಂತರದಲ್ಲಿ (ಮಕ್ಬೂಲ್-2004) ನಾಯಕಿಯ (ನಿಮ್ಮಿ) ಅಭೀಪ್ಸೆ ಮುಖ್ಯ ಎನಿಸಿದರೂ ಜಹಾಂಗೀರ್‌ನನ್ನು ಕೊಂದ ರಕ್ತದ ಕಲೆ ಅಂಟುವುದು ಕೊನೆಗೂ ಅವಳ ಕೈಗೇ.
spiritsಗೆ ಏಕಿಲ್ಲ ಮೂರ್ತರೂಪ?
ತನ್ನನ್ನು unsex ಆಗಿಸುವಂತೆ ಕೇಳಿಕೊಳ್ಳುವ ಲೇಡಿ ಮ್ಯಾಕ್‌ಬೆತ್ ನಿಜಕ್ಕೂ ಆ ಹೊತ್ತಿಗೆ unsex ಆಗಿದ್ದಳೇ? ಡಂಕನ್ ಹತ್ಯೆಯ ಹೊತ್ತಿಗೆ unsex ಆಗಿದ್ದು ಮತ್ತೆ ‘ಹೆಣ್ಣಾ’ದ ಲೇಡಿ ಮ್ಯಾಕ್‌ಬೆತ್ ಪಾಪದ ಕುಲುಮೆಯಲ್ಲಿ ತನ್ನನ್ನು ತಾನು ಉರಿಸಿಕೊಂಡಿದ್ದನ್ನು ಪ್ರಾಯಶ್ಚಿತ್ತ ಎಂಬಂತೆ ನೋಡಬಹುದೇ? ಲೇಡಿ ಮ್ಯಾಕ್‌ಬೆತ್ ತನ್ನ ಈ ಪಾಪಪ್ರಜ್ಞೆಯ ಸಂಕಟವನ್ನು ನಿವಾರಿಸಿಕೊಳ್ಳಲು ಮತ್ತೆ ವಿಧಿಯ ಕಡೆಗೆ ಏಕೆ ನೋಡಲಿಲ್ಲ? ಡಂಕನ್ ಹತ್ಯೆಯ ವೇಳೆ ಅವಳನ್ನು ‘ಗಟ್ಟಿ’ಗೊಳಿಸುವ? spirits ಆಕೆ ಮನೋಸಂಕಟದಿಂದ ಬೇಯುವಾಗ ಕೈ ಹಿಡಿಯಲಿಲ್ಲವೇ? ನಿಜಕ್ಕೂ ಡಂಕನ್ ಕೊಂದಿದ್ದು ಲೇಡಿ ಮ್ಯಾಕ್‌ಬೆತ್‌ಳ ಪ್ರಚೋದನೆಯೋ ಅಥವಾ ಮ್ಯಾಕ್‌ಬೆತ್‌ನ ಮಹತ್ವಾಕಾಂಕ್ಷೆಯ ಕನಸೋ? ಲೇಡಿ ಮ್ಯಾಕ್‌ಬೆತ್ ಕಡೆಯಿಂದ ನಿಂತು ಈ ಕಥೆಯನ್ನು ನೋಡಿದರೆ ಇಂಥ ಅದೆಷ್ಟೋ ಪ್ರಶ್ನೆಗಳ ಸರಣಿಗಳು ಬೆಳೆಯುತ್ತವೆ. ಆದರೆ, ಮ್ಯಾಕ್‌ಬೆತ್ ಆಧಾರಿತ ಎಂದು ಹೇಳಿಕೊಳ್ಳುವ ಸಿನಿಮಾಗಳಲ್ಲಿ ಈ ಪ್ರಶ್ನೆಗಳು ಏಕೆ ಹುಟ್ಟುವುದಿಲ್ಲ. ಅಲ್ಲದೆ, ಮ್ಯಾಕ್‌ಬೆತ್‌ನಲ್ಲಿನ witchesಗೆ ಬೇರೆ ಬೇರೆ ವೇಷ ತೊಡಿಸುವ ನಿರ್ದೇಶಕರು, spiritsಗೆ ಮೂರ್ತರೂಪ ಕೊಡುವ ಪ್ರಯತ್ನ ಮಾಡಲಿಲ್ಲವೇಕೆ ಎಂಬುದು ನನ್ನನ್ನು ಬಹುವಾಗಿ ಕಾಡುತ್ತಿರುವ ಪ್ರಶ್ನೆ.
ಒಂದು ಕೊಲೆಯಿಂದ ಕೈಗಂಟಿದ ರಕ್ತವನ್ನು ಮತ್ತೆ ಮತ್ತೆ ತೊಳೆದುಕೊಳ್ಳುತ್ತಿರುವ ಲೇಡಿ ಮ್ಯಾಕ್‌ಬೆತ್, ಅದೇ ಹೊತ್ತಿಗೆ ಆಪ್ತರೂ ಸೇರಿದಂತೆ ಹಲವರ ಕೊಲೆಗಳ ಸರಣಿ ನಡೆಸಿದ ಮ್ಯಾಕ್‌ಬೆತ್ ಇಬ್ಬರೂ ಪಾಪಪ್ರಜ್ಞೆಯಲ್ಲಿ ಬೇಯುತ್ತಿರುವವರೇ. ಹಿಂದೆ ಯಾವುದಕ್ಕಾಗಿ ಕನಸಿದ್ದರೋ ಅದು ನೆರವೇರಿದರೂ ಅದರಿಂದ ಇಬ್ಬರಿಗೂ ನೆಮ್ಮದಿ ಇಲ್ಲ. ಆದರೆ, ಪಾಪಪ್ರಜ್ಞೆಯ ತೀವ್ರ ಹಾತಾಶೆಯಲ್ಲಿ ಮ್ಯಾಕ್‌ಬೆತ್‌ಗಿಂತ ಹೆಚ್ಚಾಗಿ ಹಿಂಸೆ ಅನುಭವಿಸುವುದು ಲೇಡಿ ಮ್ಯಾಕ್‌ಬೆತ್. ತನ್ನನ್ನೇ ತಾನು ಕೊಂದುಕೊಳ್ಳುವ ಹೊತ್ತಿಗಾದರೂ ಲೇಡಿ ಮ್ಯಾಕ್‌ಬೆತ್‌ಗೆ ಈ ಹತಾಶೆ ಕಡಿಮೆಯಾಗಿತ್ತೋ ಹೇಗೋ. ಆದರೆ, ಈ ಒಳತೋಟಿಗಳನ್ನು ವಿಸ್ತರಿಸಲು ರೂಪಾಂತರದ ಸಿನಿಮಾ ನಿರ್ದೇಶಕರು ತಲೆಕೆಡಿಸಿಕೊಂಡಂತಿಲ್ಲ.
ಪಡ್ಡಾಯಿ ಸಿನಿಮಾದಲ್ಲಿ ಮಾಧವ ದೋಣಿಯಲ್ಲಿ ಒಂಟಿಯಾಗಿ ತನ್ನ ‘ನೆಚ್ಚಿನ ಕಡಲಿ’ನ ಒಡಲಲ್ಲಿ ಲೀನವಾಗುವ ಅಂತ್ಯ ದೃಶ್ಯವಿದೆ. ಆದರೆ, ಸುಗಂಧಿಯ ಸಾವಿಗೆ ಈ ಘನತೆ ಇಲ್ಲ. ರೂಪಾಂತರಗಳ ಮಾತು ಒತ್ತಟ್ಟಿಗಿರಲಿ ಷೇಕ್ಸ್‌ಪಿಯರ್‌ನ ಇಡೀ ನಾಟಕದಲ್ಲೇ ಲೇಡಿ ಮ್ಯಾಕ್‌ಬೆತ್‌ಳ ನಿಜವಾದ ಹೆಸರು (Gruoch) ಒಂದು ಬಾರಿಯೂ ಕೇಳಿಬರುವುದಿಲ್ಲ! ಇಲ್ಲಿ ಅವಳು ಮ್ಯಾಕ್‌ಬೆತ್‌ನ ಹೆಂಡತಿ ಲೇಡಿ ಮ್ಯಾಕ್‌ಬೆತ್ ಅಷ್ಟೇ. ಇದನ್ನು ಷೇಕ್ಸ್‌ಪಿಯರ್ ಉದ್ದೇಶಪೂರ್ವಕವಾಗಿ ಮಾಡಿದ್ದಾನೋ ಅಥವಾ ಇದು ಆ ಕಾಲದೇಶದ ಪ್ರತಿಫಲನವೋ? ನಿಜಕ್ಕೂ ಲೇಡಿ ಮ್ಯಾಕ್‌ಬೆತ್ ಕೇಡಿನ ಪ್ರತಿರೂಪವೇ ಆಗಿದ್ದರೆ ಯಾಕೆ ಪದೇ ಪದೇ ರಕ್ತ ಮೆತ್ತಿರುವ ಭ್ರಮೆಯಲ್ಲಿ ಕೈ ತೊಳೆಯುತ್ತಿದ್ದಳು, ಯಾಕೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ತನ್ನನ್ನು ಪಾಪದ ಕುಲುಮೆಯಲ್ಲಿ ಯಾಕೆ ಬೇಯಿಸಿಕೊಳ್ಳುತ್ತಿದ್ದಳು? ಹಲವು ಪಾಶ್ಚಿಮಾತ್ಯ ವಿಮರ್ಶಕರು ಹೇಳುವಂತೆ ನಿಜಕ್ಕೂ ಲೇಡಿ ಮ್ಯಾಕ್‌ಬೆತ್ ತನ್ನ ಮಗುವನ್ನು ಕಳೆದುಕೊಂಡಿದ್ದಳೇ? ಒಂದುಕಡೆ ಮಗುವನ್ನು ಕಳೆದುಕೊಂಡಿರುವ ನೋವು, ಮತ್ತೊಂದುಕಡೆ ಕೊಲೆಯಿಂದಲೂ ಅಧಿಕಾರ’ಸುಖ’ ಸಿಗದ ಹತಾಶೆ ಲೇಡಿ ಮ್ಯಾಕ್‌ಬೆತ್‌ಳನ್ನು ಹೇಗೆಲ್ಲಾ ಕಾಡಿರಬಹುದು? ತೀವ್ರವಾದ ಪಾಪಪ್ರಜ್ಞೆಯಲ್ಲಿ ಬೇಯುವ ಲೇಡಿ ಮ್ಯಾಕ್‌ಬೆತ್ ಮನೋಸಂಕಟಗಳು ಎಂಥವು? ಸಾಯುವ ಹೊತ್ತಿಗೆ ಲೇಡಿ ಮ್ಯಾಕ್‌ಬೆತ್ ಅನುಭವಿಸಿದ ಮನೋವೇದನೆ ಎಂಥದ್ದು? ಮ್ಯಾಕ್‌ಬೆತ್ ರೂಪಾಂತರದ ಸಿನಿಮಾಗಳು ಇಂಥ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗುವುದೇ ಇಲ್ಲ.
‘ಋತುಮಾನ’ ಮತ್ತು ‘ಸುಚಿತ್ರ ಫಿಲ್ಮ್ ಸೊಸೈಟಿ’ ಅಕ್ಟೋಬರ್ 6ರಂದು ಆಯೋಜಿಸಿದ್ದ ಮ್ಯಾಕ್‌ಬೆತ್ ಆಧಾರಿತ ಸಿನಿಮಾಗಳ ಪ್ರದರ್ಶನ ಹಾಗೂ ಸಂವಾದದಲ್ಲೂ ಈ ಪ್ರಶ್ನೆಯನ್ನು ಚರ್ಚಿಸಲಾಯಿತು. ಮ್ಯಾಕ್‌ಬೆತ್ ನಾಟಕದ ವಿನ್ಯಾಸದ ಮಿತಿಯ ಕಾರಣಕ್ಕೆ ಫೆಮಿನಿಸ್ಟಿಕ್ ಇಂಟರ್‌ವೆನ್ಷನ್ ಕಷ್ಟ ಎಂಬ ಮಾತುಗಳೇ ಈ ಚರ್ಚೆಯಲ್ಲೂ ಕೇಳಿಬಂದವು. ಷೇಕ್ಸ್‌ಪಿಯರ್ ನಾಟಕವಾಗಿ ರೂಪಾಂತರಿಸಿರುವ ಕಥೆಯ ಮಿತಿಯನ್ನು ಸ್ತ್ರೀವಾದಿ ದೃಷ್ಟಿಕೋನದ ಮೂಲಕ ಮೀರುವ ‘ಸಾಹಸ’ ಯತ್ನಗಳೇನಾದರೂ ಜಾಗತಿಕಮಟ್ಟದಲ್ಲಿ ಆಗಿವೆಯೇ ಎಂದು ಹಲವು ಚಿತ್ರತಜ್ಞರಲ್ಲಿ ವಿಚಾರಿಸಿದೆ. ಎಂ.ಕೆ. ರಾಘವೇಂದ್ರ, ಡೇವಿಡ್ ಬಾಂಡ್, ಬಿ. ಸುರೇಶ, ಎನ್.ಎ.ಎಂ. ಇಸ್ಮಾಯಿಲ್, ಕೆ. ಫಣಿರಾಜ್ ಸೇರಿದಂತೆ ಹಲವರು ತಮ್ಮ ಗಮನಕ್ಕೆ ಬಂದಿದ್ದಂತೆ ಅಂತಹ ಪ್ರಯತ್ನಗಳು ಆಗಿಲ್ಲ ಎಂದೇ ಹೇಳಿದರು. ಈ ಮೂಲಕ ಮ್ಯಾಕ್‌ಬೆತ್ ಕುರಿತ ಫೆಮಿನಿಸ್ಟಿಕ್ ಇಂಟರ್‌ವೆನ್ಷನ್ ಸಿನಿಮಾಗಳಲ್ಲಿ ಏನಿರಬಹುದು ಎಂಬ ನನ್ನ ಕುತೂಹಲ ಇನ್ನೂ ಕುತೂಹಲವಾಗಿಯೇ ಉಳಿದಿದೆ.
ನಾನಿಲ್ಲಿ ಪ್ರಸ್ತಾಪಿಸಿರುವ ಕೆಲವು ವಿಷಯಗಳು ಕೂದಲು ಸೀಳುವ ಅಥವಾ ಷೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ text ಅನ್ನೇ ಸಿನಿಮಾ ಮೂಲಕ ಮೀರಬೇಕೆಂದು ಹೇಳುತ್ತಿರುವ ವಾದದಂತೆ ಕಾಣಬಹುದು. ಒಂದು ಕೃತಿಯನ್ನು ಹೀಗೇ ಕಟ್ಟಬೇಕೆಂದು ಅಥವಾ ಹೀಗೆ ಕಟ್ಟಬಾರದೆಂದು ಹೇಳುವ ಅಧಿಕಾರ ಯಾರಿಗೂ ಇಲ್ಲ; ಅದು ಕೃತಿಕಾರರ ಸ್ವಾತಂತ್ರ್ಯ. ಆದರೆ, ಷೇಕ್ಸ್‌ಪಿಯರ್ ಕೂಡಾ ‘ಚರಿತ್ರೆ’ಯನ್ನು ನಾಟಕವಾಗಿಸುವಾಗ ಹಲವು ಮಿತಿಗಳನ್ನು ಮೀರಿದ್ದಾನೆ. ತನ್ನ ನಾಟಕಕ್ಕೆ ಬೇಕಾದಂತೆ ರಫೇಲ್ ಹಾಲಿನ್‌ಷೆಡ್‌ನ ಕ್ರಾನಿಕಲ್‌ಗಳನ್ನು ಷೇಕ್ಸ್‌ಪಿಯರ್ ಮಾರ್ಪಡಿಸಿಕೊಂಡಿದ್ದಾನೆ. ಹೀಗಾಗಿ ಫೆಮಿನಿಸ್ಟಿಕ್ ದೃಷ್ಟಿಕೋನದಿಂದಲೂ ಮ್ಯಾಕ್‌ಬೆತ್ ಅನ್ನು ತೋರಿಸಲು ಸಾಧ್ಯವಿದೆ. ಈಗಾಗಲೇ ಇಂಥ ಪ್ರಯತ್ನಗಳೇನಾದರೂ ನಡೆದಿದ್ದರೆ ಈ ಬರಹವನ್ನು ಓದಿದವರು ನನ್ನ ಕಣ್ಣು ತೆರೆಸಬಹುದು.
ಬಿ. ಸುರೇಶರ ಜತೆಗೆ ಮಾತನಾಡುವಾಗ ಒಂದು ಸಿನಿಮಾ ಉತ್ಸವಕ್ಕೆ ಆಗುವಷ್ಟು ಮ್ಯಾಕ್‌ಬೆತ್ ರೂಪಾಂತರದ ಸಿನಿಮಾಗಳು ತಯಾರಾಗಿವೆ ಎಂಬ ಮಾತನ್ನು ಹೇಳಿದರು. ಇಂಥದ್ದೊಂದು ‘ಸಮಗ್ರ ಮ್ಯಾಕ್‌ಬೆತ್ ಸಿನಿಮೋತ್ಸವ’ ನಮ್ಮಲ್ಲಿ ನಡೆದರೆ ನನ್ನಂಥವರ ಗ್ರಹಿಕೆಯ ಮಿತಿಗಳನ್ನು ಮೀರಿಕೊಳ್ಳಬಹುದೇನೋ! ಷೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಮನುಷ್ಯರ ಕೇಡು, ಪಾಪಪ್ರಜ್ಞೆ ಹಾಗೂ ಒಳತೋಟಿಯ ಬಗ್ಗೆ ಸಾವಿರಾರು ಪ್ರಶ್ನೆಗಳನ್ನು ಎತ್ತುವಂತ ಕೃತಿ. ರೂಪಾಂತರದಲ್ಲೂ ಈ ಕೃತಿಗೆ ಪೂರ್ಣನಿಷ್ಠವಾಗಿರಬೇಕೆಂದು ಹೊಸ ವಿಸ್ತಾರಗಳ ಕಡೆಗೆ ತೆರೆದುಕೊಳ್ಳದಿದ್ದರೆ ಹೊಸ ಒಳನೋಟಗಳು ಹುಟ್ಟಿ ಬೆಳೆಯುವುದಾದರೂ ಹೇಗೆ?
ಒಳ್ಳೆಯ ವಿಶ್ಲೇಷಣೆ.. ಕೂದಲು ಸೀಳಿ ನೋಡುವ ಕೆಲಸ ಅನಿಸಲಿಲ್ಲ.,
ಅನುಪಮಾ ಪ್ರಸಾದ್
ಲೇಡಿ ಮ್ಯಾಕ್ ಬೆತ್ ಆಂತರ್ಯ ಹೊಕ್ಕಿ ನೋಡುವ ದಯಾನಂದ “ಕವಿ” ಅವರ ಪ್ರಯತ್ನ ಇಷ್ಟವಾಯಿತು.