ಕಿತ್ತು ತಿನ್ನುವ ಬಯಕೆಗಳ ತೀವ್ರತೆಯ ಸುತ್ತ..

ಭಾಸ್ಕರ್ ಹಜಾರಿಕಾ ನಿರ್ದೇಶನದ ಅಸ್ಸಾಮಿ ಚಿತ್ರ ಆಮಿಸ್ ಬಗ್ಗೆ ಒಂದು ಪ್ರತಿಕ್ರಿಯೆ

ಕಥೆಯ ಅಂತ್ಯವಷ್ಟೇ ಕಥೆಗಾರನ ಒಳಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಆ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಮಾರ್ಗವೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿ ಬಹಳ ಸಂಭ್ರಮಿಸಲ್ಪಡುತ್ತಿರುವ ಅಸ್ಸಾಮಿ ಭಾಷೆಯ ‘ಆಮಿಸ್’ ಸಿನೆಮಾದ ಅಂತ್ಯ ಮತ್ತು ಮಾರ್ಗಗಳು ಹಲವು ದ್ವಂದ್ವಗಳನ್ನು, ಗೊಂದಲಗಳನ್ನು ಎಬ್ಬಿಸುವುದಲ್ಲದೆ, ಸ್ವಲ್ಪ ಸೂಕ್ಷ್ಮವಾಗಿ ಸಿನೆಮಾ ವೀಕ್ಷಿಸಿದರೆ ಕಥೆಗಾರ/ನಿರ್ದೇಶಕ ಈ ಸಂದರ್ಭದಲ್ಲಿ ಹೇಳುತ್ತಿರುವ ಈ ಕಥೆಯ ಒಳಗುಟ್ಟಿನ ಬಗ್ಗೆ ಸಂಶಯ ಮೂಡದೆ ಇರದು. ಆ ಸಂಶಯ ಇಲ್ಲದೆ ಸಿನೆಮಾ ಬರೀ ಸಂಭ್ರಮವಾಗಿ ಹೋದರೆ, ಒಂದು ಸಿನೆಮಾ ಪ್ರೋಪೋಗಾಂಡವಾಗಿ/ಪ್ರಚಾರವಾಗಿ ಪ್ರೇಕ್ಷಕರನ್ನು ಮ್ಯಾನಿಪುಲೆಟ್ ಮಾಡುವ ಶಕ್ತಿಯನ್ನು ನಾವು ನಿರ್ಲಕ್ಷಿಸಿದಂತೆ. 

ಅಂತ್ಯ ಮೂಡುವವರೆಗೂ ಪ್ಲೇಟೋನಿಕ್ ಪ್ರೀತಿ (ಲೈಂಗಿಕದೈಹಿಕ ಆಕರ್ಷಣೆಯಿಲ್ಲದ ಪ್ರೀತಿ) ಎಂದಷ್ಟೇ ಪ್ರೇಕ್ಷಕನಿಗೆ ಸುಳಿವು ನೀಡಿ ಕೊನೆಗೆ ಕಾನೂನಿನ ಅಡಿಯಲ್ಲಿ ಬಂಧಿಯಾಗುವ ನಡು ವಯಸ್ಕ ವಿವಾಹಿತ ಮಹಿಳೆ ನಿರ್ಮಲಿ ಮತ್ತು ಸಂಶೋಧನಾ ವಿದ್ಯಾರ್ಥಿ ಸೋಮನ್ ಕೈ ಕೈ ಹಿಡಿದುಕೊಳ್ಳುವ ದೃಶ್ಯ, ವಿವಾಹದಾಚೆಗಿನ-ವಯಸ್ಸಿನ ಅಂತರಗಳನ್ನು ಮೀರಿ ಹುಟ್ಟಬಹುದಾದ ಸಂಬಂಧಗಳ ಸೆಕ್ಶ್ಯುಯಲ್ ಟ್ಯಾಬೂ ಮುರಿಯುವ ಇರಾದೆ ಇರುವಂತೆ ಗೋಚರಿಸಿದರೂ, ಅಲ್ಲಿಯವರೆಗೂ ಕಟ್ಟಿಕೊಟ್ಟ ಪಯಣದಲ್ಲಿ ನಿರ್ದೇಶಕನಲ್ಲಿ/ಕತೆಗಾರನಲ್ಲಿ ಅದೇ ಮಟ್ಟದ ಸ್ಫೂರ್ತಿ-ಬದ್ಧತೆ- ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತದೆ. ಗಂಡ ಅಸ್ಸಾಂನ ಮೂಲೆಗಳಲ್ಲಿರುವ ನಿರ್ಲಕ್ಷಿತ ಪ್ರದೇಶಗಳಲ್ಲಿ ಸೇವೆ ಮಾಡುವ ವೈದ್ಯನಾಗಿರುವುದರಿಂದ ಮತ್ತು ಮನೆಯಿಂದ ದೀರ್ಘಕಾಲ ದೂರ ಉಳಿಯುವುದರಿಂದ ಒಂಟಿಯಾಗಿ ಮಗನ ಜೊತೆಗೆ ಜೀವಿಸುವ ಮಕ್ಕಳ ವೈದ್ಯೆ ನಿರ್ಮಲಿಗೆ, ಈಶಾನ್ಯ ರಾಜ್ಯಗಳಲ್ಲಿ ಹಲವು ಬಗೆಯ ಮಾಂಸದ ಖಾದ್ಯಗಳ ಬಗ್ಗೆ ಸಂಶೋಧನೆ  ಮಾಡುತ್ತಿರುವ ಪಿ ಎಚ್ ಡಿ ವಿದ್ಯಾರ್ಥಿ ಸುಮೊನ್ ಪರಿಚಯ ಆಗುತ್ತದೆ. ಅಷ್ಟೇನೂ ಡಲ್ ಅಲ್ಲದಿದ್ದರೂ, ಅಷ್ಟು ಉತ್ಸಾಹದ ಜೀವನವೂ ಇಲ್ಲದ ನಿರ್ಮಲಿಗೆ, ಸೋಮನ್ ತನ್ನ ‘ಮೀಟ್ ಕ್ಲಬ್’ ನಿಂದ ಪರಿಚಯಿಸುವ ಕಾಡು ಮೊಲ, ಬಾವುಲಿ, ಕ್ಯಾಟ್ ಫಿಶ್ ಖಾದ್ಯಗಳು ರೋಮಾಂಚನ ನೀಡುತ್ತವೆ. ಹೊಸ ಹೊಸ ಬಗೆಯ ಮಾಂಸ ಖಾದ್ಯಗಳ ಅನ್ವೇಷಣೆ, ವಿಕೋಪಕ್ಕೆ-ವಿಲಕ್ಷಣಕ್ಕೆ ತಿರುಗುತ್ತದೆ. ಈ ಮಾಂಸಪ್ರಿಯರು ತಮ್ಮನ್ನೇ ತಿನ್ನುಕೊಳ್ಳುವತ್ತ ಸ್ವಾಭಾವಿಕ ಭಡ್ತಿ ಪಡೆದುಕೊಳ್ಳುತ್ತಾರೆ ಮತ್ತು ಆ ದಾಹ ಹೆಚ್ಚುತ್ತಾ ಹೋದಂತೆ ಅದನ್ನು ಒಮ್ಮೆಲೇ ಪರಿಹರಿಸಿಕೊಳ್ಳಲು ಮುಂದಾಗುತ್ತಾರೆ. 

ಇಂತಹ ವಿಲಕ್ಷಣಕ್ಕೆ ತಿರುಗುವ ಮಾಂಸಾಹಾರ ಅನ್ವೇಷಣೆ ಮನೋರೋಗವೋ ಎಂಬ ಸಂದೇಹ ಪ್ರೇಕ್ಷಕನಲ್ಲಿ ಮೂಡಿದರೂ, ನಿರ್ದೇಶಕ ಕಟ್ಟಿಕೊಡುವ ಪಯಣವಾಗಲೀ ಅಂತ್ಯವಾಗಲೀ ಅದನ್ನು ಸೂಚಿಸುವುದಿಲ್ಲ. ಅಂದರೆ ಅಂತಹ ಗೊಂದಲ ಮೂಡಿಸಿ, ಮಾಂಸಾಹಾರಿಗಳ ಕೊನೆಯ ಗುರಿ ನರಭಕ್ಷರಾಗುವುದು ಎಂಬ ಪೂರ್ವಾಗಹದ ಆಹಾರ ಬ್ರಾಹ್ಮಣ್ಯ ಕಥೆಯಲ್ಲಿ ನುಸುಳಿದೆ. ಅದು ಪೂರ್ವಾಗ್ರಹವಷ್ಟೇ ಆಗಿರಲಿಕ್ಕಿಲ್ಲ, ಅದು ಉದ್ದೇಶಿತ ಪ್ರಚಾರವೇ ಆಗಿರಬಹುದು ಅನ್ನಿಸದೆ ಕೂಡ ಇರದು. ಒಂದು ದೃಶ್ಯದಲ್ಲಿ, ಗಂಡ ಅಚಾನಕ್ ಆಗಿ ಮನೆಗೆ ವಾಪಾಸಾಗಿ ರಾತ್ರಿ ಊಟದಲ್ಲಿ ಬರೀ ಸಸ್ಯಾಹಾರ ಇರುವುದರಿಂದ ಕನಲಿ ದುಃಖಿತಳಾಗುವ ನಿರ್ಮಲಿ, ಓಡಿಹೋಗಿ ರೆಫ್ರಿಜರೇಟರ್ ನಿಂದ ಚಿಕನ್ ಎತ್ತುಕೊಂಡು ಗಬಗಬ ತಿನ್ನುವ ದೃಶ್ಯ ಬಹಳ ಕುತ್ಸಿತ ಬುದ್ಧಿಯ ಪ್ರೇರೇಪಣೆಯಿಂದ ಮೂಡಿಸಲಾಗಿದೆ ಅನ್ನಿಸದೆ ಇರದು. ಇಲ್ಲ ಅದು ಸೆಕ್ಸ್ಯುಯಲ್ ಡಿಪ್ರೇವೇಶನ್ ಗೆ ರೂಪಕ ಇರಬಹುದು ಮತ್ತು ತನ್ನ ಮಾಂಸವನ್ನೇ ಕಿತ್ತು, ಹುರಿದು ಖಾದ್ಯವಾಗಿಸಿ ಮತ್ತೊಬ್ಬರಿಗೆ ತಿನ್ನಿಸುವ ದೃಶ್ಯಗಳು ತೀವ್ರವಾದ ಲೈಂಗಿಕ ಪ್ಯಾಶನ್ ಗೆ ರೂಪಕ ಎನ್ನುವುದಾದರೆ, ರೂಪಕಗಳ ಸೃಷ್ಟಿಯಲ್ಲಿ ನಿರ್ದೇಶಕನಿಗೆ ಸ್ವಲ್ಪವೂ ಸೂಕ್ಷ್ಮತೆ ಇಲ್ಲವೆನ್ನಬಹುದು. ರಾಜಕೀಯವಾಗಿ ಬಹಳ ರಿಗ್ರೆಸ್ಸಿವ್ ಆದ ಮೇಲು ಪದರವನ್ನು ಕಟ್ಟಿರುವ ನಿರ್ದೇಶಕ ನಿಜವಾಗಿಯೂ ಬಹಳ ಅಪಾಯಕಾರಿಯಾದ ಕಥೆಯನ್ನು ಹೇಳಿದ್ದಾನೆ. ಆಹಾರ ಸಂಸ್ಕೃತಿ ದೃಷ್ಟಿಯಿಂದ ದೇಶದೆಲ್ಲೆಡೆ ಅಲ್ಪಸಂಖ್ಯಾತರು ಹಲ್ಲೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ (ನೂರಾರು ವರ್ಷಗಳಿಂದ ಸಸ್ಯಾಹಾರಿ ಶ್ರೇಷ್ಠ ಎಂಬ ಕೆಟ್ಟ ಸಂಪ್ರದಾಯ ಮೇಲಾಳ್ವಿಕೆ ಪಡೆದು ಉಳಿದವರು ಅಪಮಾನಕ್ಕೆ ನೂಕಲ್ಪಟ್ಟಿರುವ ಪರಂಪರೆಯಲ್ಲಿ) ಮಾಂಸಾಹಾರಿಗಳು ಕೊನೆಗೆ ನರಭಕ್ಷಕರಾಗುತ್ತಾರೆ ಎಂದು ಕಟ್ಟಿಕೊಡುವ ಮೊದಲ ಪದರದ ಕಥೆ ಬಹಳ ಕೃತಕವಾದದ್ದು ಮತ್ತು ಕೃತ್ರಿಮ ಬುದ್ದಿಯಿಂದ ಕೂಡಿರುವಂತದ್ದು. ನಿರ್ಮಲಿ ಮತ್ತು ಸೋಮನ್ ರ ಈ ಪ್ರೇಮದ ಪಯಣದ ಒಂದು ದೃಶ್ಯದಲ್ಲಿ, ಸೋಮನ್ , ನಿರ್ಮಲೆ ಮನೆಯ ಶೌಚಾಲಯದಲ್ಲಿ ಆಕೆಯ ಮೇಲು ಉಡುಪನ್ನು ಮೂಸಿ ನೋಡುವ ಮತ್ತು ಬಾವುಲಿ ಖಾದ್ಯ ಸವಿದು ಏಕಾಂಗಿಯಾಗಿ ಮನೆಗೆ ಹಿಂದಿರುಗುವ ನಿರ್ಮಲಿ, ಗಂಡನ ಬಳಿ ಅಸ್ಪಷ್ಟವಾಗಿ ತನ್ನ ಗಿಲ್ಟ್ ವ್ಯಕ್ತಪಡಿಸುವ ದೃಶ್ಯಗಳು, ಇದು ಸೆಕ್ಸ್ಯುಯಲ್ ಪ್ಯಾಶನ್ ಬಗೆಗಿನ ಸಿನೆಮಾ ಇರಬಹುದು (ಪ್ಲೇಟೋನಿಕ್ ಪ್ರೀತಿಯಷ್ಟೇ ಇಲ್ಲದೆ ಇರಬಹುದು) ಎಂಬ ಸುಳಿವುಗಳನ್ನು ಬಿಟ್ಟುಕೊಟ್ಟರೂ, ಅದನ್ನು ಬಗೆಹರಿಸುವುಲ್ಲಿ ಸಿನೆಮಾ ಸಂಪೂರ್ಣ ವಿಫಲವಾಗಿದೆ. ರೂಪಕವಾಗಿ ನೋಡಲು ಹೋದರು ಕೊನೆಯಲ್ಲಿ ನಡೆಯುವ ಹತ್ಯೆ ಯಾವುದನ್ನು ಪ್ರತಿನಿಧಿಸುತ್ತ್ತದೆ? ಇಡೀ ಸಮಾಜವನ್ನು ತಿರಸ್ಕರಿಸುವುದನ್ನೇ? ಹೀಗೆ ಗೊಂದಲದ- ಅಸ್ಪಷ್ಟತೆಯ ಗೂಡಾಗಿ ಹೊಮ್ಮುವ ಈ ಸಿನೆಮಾದ ಎರಡನೆ ಪದರದ ಕಥೆಯನ್ನು ಯೋಚಿಸಲು-ತಿಳಿಯಲು ಸಾಧ್ಯವಾಗದ ಪ್ರೇಕ್ಷಕರಿಗೆ ಒಂದು ಚೀಪ್ ಥ್ರಿಲ್ ಸಿನೆಮಾವಾಗಿ, ಹತ್ಯೆಯ ಬಗ್ಗೆ ಒಂದು ಪಶ್ಚ್ಯಾತಾಪದ ಹೇಳಿಕೆಯನ್ನೂ ನೀಡದೆ ಕೇವಲ ಮನರಂಜನೆಯಾಗಿ ಮುಕ್ತಾಯವಾಗುತ್ತದೆ. ಮಾಂಸಾಹಾರದ ಬಗ್ಗೆ ಗಿಲ್ಟ್ ಹುಟ್ಟಿಸುವ ಪ್ರಚಾರದ ಸಿನೆಮಾವಾಗಿ ಉಳಿದುಕೊಂಡುಬಿಡುತ್ತದೆ.



ಚಿತ್ರದ ಟ್ರೇಲರ್


ಇದು ಪ್ರೋಪೋಗಾಂಡ ಸಿನೆಮಾ ಆಗಿರಬಹುದು ಎನ್ನಲು ಇನ್ನಷ್ಟು ಕಾರಣಗಳು ನಮಗೆ ಗೋಚರಿಸುತ್ತವೆ. ಈಶಾನ್ಯ ರಾಜ್ಯಗಳಲ್ಲಿ ಸ್ವಾಭಾವಿಕವಾಗಿ ಆಹಾರ ಸಂಸ್ಕೃತಿಯಾಗಿರುವ ವಿವಿಧ ಪ್ರಾಣಿಪಕ್ಷಿಗಳ ಖಾದ್ಯಗಳ ಹೆಸರುಗಳನ್ನು ಸಂಭಾಷಣೆಯ ಮೂಲಕ ಕೇಳಿಸಿ, ತಿನಿಸುಗಳ ದೃಶ್ಯಗಳನ್ನು ಮೊದಲಾರ್ಧದಲ್ಲಿ ತೋರಿಸಿದರೂ, ವಿವರಗಳು ಇಲ್ಲದೆ ಆ ಭಾಗ ಸೊರಗುತ್ತದೆ. ಯಾವುದೇ ಖಾದ್ಯದ ಸಿದ್ಧತೆಯ ಬಗ್ಗೆ ಒಂದೂ ದೃಶ್ಯಾವಳಿ ಕಾಣುವುದಿಲ್ಲ ಆದರೆ ನರಭಕ್ಷಣೆಯ ಖಾದ್ಯಗಳ ಭಾಗ ಪ್ರಾರಂಭವಾದಾಗ, ಅದು ಆಹಾರವಾಗಿ ಸಿದ್ಧವಾಗುವ ಪ್ರಕ್ರಿಯೆಯ ವಿವರಗಳು ಏಕಾಏಕಿ ಪ್ರಾರಂಭವಾಗುತ್ತವೆ. ಅಪ್ಪ ತಂದುಕೊಟ್ಟ ಕೋಳಿಮರಿ ಬೆಳೆದ ಮೇಲೆ ಅದನ್ನು ಆಹಾರಕ್ಕಾಗಿ ಕತ್ತರಿಸುವ ಬಗ್ಗೆ ಮೂಡುವ ಸಂಭಾಷಣೆ, ನಾಯಿಗಳ ಬಗ್ಗೆ ಪ್ರೀತಿಯಿರುವುದರಿಂದ ತಿನ್ನುವುದಕ್ಕೆ ಮನಸ್ಸಾಗುವುದಿಲ್ಲ ಅನ್ನುವುದು ಅದನ್ನು ಪ್ರಶ್ನೆ ಮಾಡುವುದು ಇಂತಹ ಸಂಭಾಷಣೆಗಳು ಕೂಡ ಆಕಸ್ಮಿಕವಾಗಿ ಸಿನೆಮಾದಲ್ಲಿ ಸುಳಿದಿರುವಂತೆ ಭಾಸವಾಗುವುದಿಲ್ಲ. ಇಂತಹ ಸುಲಭ ರೋಚಕತೆ ಮೂಡಿಸುವ ಸಿನೆಮಾಗಳನ್ನು ಅತ್ಯುತ್ತಮ ಸಿನೆಮಾಗಳ ಸಾಲಿಗೆ ನಿಲ್ಲಿಸುವ ಮತ್ತು ಈ ಸಿನೆಮಾ ಪ್ರತಿನಿಧಿಸುತ್ತಿರಬಹುದಾದ ಮೃದು ರಾಜಕೀಯ ಪಿತೂರಿಯನ್ನು ಮನಗಾಣದೆ ಈ ಸಿನೆಮಾ ನೋಡುವುದು ಅಪಾಯಕಾರಿಯಾಗಬಲ್ಲುದು. 

ಕೊನೆಗೊಂದು ಮಾತು: ಇಂದ್ರಿಯಗಳ ಅಪೇಕ್ಷೆಯ ತೀವ್ರತೆಯ ಕಥೆ ಹೇಳುವಾಗ, ಕೆಲವು ಅಪ್ರಬುದ್ಧ ಸಾಮಾಜಿಕ ನಿಶಿದ್ಧಗಳನ್ನು ವಿರೋಧಿಸುವುದು, ಮುರಿಯುವುದು ಒಳ್ಳೆಯ ಸಂಪ್ರದಾಯ. ಆದರೆ ಅದು ಉತ್ತಮ ಕಥೆಯಾಗುವುದು ಅಥವಾ ಉತ್ತಮ ಸಿನೆಮಾ ಆಗುವುದು ಅಂತಹ ನಿಶಿದ್ಧಗಳನ್ನು ಅವಲೋಕಿಸುವಾಗ ವಿಕ್ಷಿಪ್ತತೆಯ ಅಂಚಿಗೆ ಹೋಗದಂತೆ ಎಚ್ಚರಿಕೆ ವಹಿಸಿ ವಿವಿಧ ಆಯಾಮಗಳನ್ನು ಎಕ್ಸ್ಪ್ಲೋರ್ ಮಾಡಿದಾಗ ಮತ್ತು ಅವುಗಳನ್ನು ಪ್ರೇಕ್ಷಕನಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿದಾಗ. ಸದಾ ಜೊತೆಯಲ್ಲಿ ಇರದ ಬೋರ್ ಎನಿಸುವಂತಹ, ತಲೆ ಕೂದಲಿಲ್ಲದ ಕ್ಲೀಷೆಯ/ಕಪ್ಪು ಬಿಳುಪಿನ ಮಾದರಿಯಲ್ಲಿ ಗಂಡನ ಪಾತ್ರ ಸೃಷ್ಟಿ ಮಾಡುವುದರಿಂದ ಆಗಲೀ, ನರಭಕ್ಷಕತೆಯ ರೋಚಕತೆ ಸೃಷ್ಟಿ ಮಾಡುವುದರಿಂದ ಆಗಲೀ ಒಂದು ಕಥೆ ಅತ್ಯುತ್ತಮ ಸಿನೆಮಾವಾಗಿ ರೂಪುಗೊಳ್ಳುವುದಿಲ್ಲ. ಕ್ಯಾರಿಕೇಚರ್ಡ್ ಗಂಡನ ಪಾತ್ರವನ್ನು ಕಟ್ಟುವ ಬದಲು, ಅವನು ಮಾಡುತ್ತಿರುವ ಕೆಲಸ ಕೂಡ ರೋಚಕತೆಯಿಂದ ಕೂಡಿರುವಂತದ್ದೆ ಎಂಬುದನ್ನು ಮನಗಾಣಿಸಿಯೂ, ನಿರ್ಮಲಿಯ ತೊಳಲಾಟವನ್ನು ಸರಿಯಾಗಿ ಎಸ್ಟಾಬ್ಲಿಶ್ ಮಾಡಿ ಸಂಘರ್ಷವನ್ನು ವಿಕ್ಷಿಪ್ತತೆಯ ಅಂಚಿಗೆ ಹೋಗದಂತೆ ತಡೆದು ಅವಲೋಕಿಸಿ ಕಥೆಯನ್ನು ಕಟ್ಟಿದ್ದರೆ ಬಹುಶಃ ಸಿನೆಮಾ ಅತ್ಯುತ್ತಮವಾಗುತ್ತ ನಡೆಯುವ ಸಾಧ್ಯತೆ ಇತ್ತೇನೋ! .

One comment to “ಕಿತ್ತು ತಿನ್ನುವ ಬಯಕೆಗಳ ತೀವ್ರತೆಯ ಸುತ್ತ..”

ಪ್ರತಿಕ್ರಿಯಿಸಿ