ನೀಲಿ ನವಿಲಿನ ಕಣ್ಣವಳು

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ನ ಪ್ರಸ್ತಿದ್ಧ “Eyes of a Blue Dog” ಕತೆಯ ಕನ್ನಡಾನುವಾದ ನಿಮ್ಮ ಭಾನುವಾರದ ಓದಿಗೆ ..

ಆಗ ಅವಳು ನನ್ನತ್ತ ನೋಡಿದಳು. ಅವಳು ಇದೇ ಮೊದಲ ಸಲ ನನ್ನನ್ನು ನೋಡುತ್ತಿರುವಳೇನೋ ಎಂದುಕೊಂಡೆ. ಆದರೆ, ನನ್ನ ಬೆನ್ನ ಹಿಂದೆ ಇದ್ದ ದೀಪವೊಂದರ ಆಚೆ ಬದಿ ನಿಂತು ಅವಳು  ನನ್ನತ್ತ ನೋಡುತ್ತಿರುವ ಅರಿವಾದಾಗ, ನನಗೆ ಹೊಳೆದದ್ದು, ವಾಸ್ತವದಲ್ಲಿ  ನಾನು ಮೊದಲನೇ ಸಲ ಆಕೆಯನ್ನು ನೋಡುತ್ತಿರುವೆ  ಎಂದು. ಸಿಗರೇಟಿಗೆ ಬೆಂಕಿ ತಾಗಿಸಿ, ನಾನು ಕುಳಿತಿದ್ದ ಕುರ್ಚಿಯ ಚಕ್ರವೊಂದರ ಮೇಲೆ ಭಾರ ಹಾಕಿ ಅವಳೆಡೆಗೆ ತಿರುಗುವ ಮುನ್ನ, ಒಂದು ಸಾರಿ ಜೋರು ಧಮ್ ಎಳೆದು ದಟ್ಟವಾದ ಹೊಗೆ ಬಿಟ್ಟೆ. ಆಕೆ ಪ್ರತೀ ರಾತ್ರಿಯೂ ನನ್ನನ್ನು ನೋಡುತ್ತಿರುವಳೇನೋ ಎನ್ನುವ ಹಾಗೆ ಆ ದೀಪದ ಪಕ್ಕದಲ್ಲಿ ನನ್ನನ್ನೇ ನೋಡುತ್ತಾ ನಿಂತಿದ್ದಳು. ಆ ಮುಂದಿನ ಕೆಲವು ಕ್ಷಣಗಳು  ಇನ್ನ್ಯಾವುದರ ಪರಿವೆಯೂ ಇರದ ಹಾಗೆ, ನಾನು ಕುಳಿತ ಕುರ್ಚಿಯ ಚಕ್ರವೊಂದರ ಮೇಲೆ  ಭಾರ ಹಾಕಿ, ಅಲ್ಲಿ,  ಅವಳು ತನ್ನ ನೀಳ ಕೈಗಳನ್ನು ದೀಪದ ಮೇಲಿರಿಸಿ, ಒಬ್ಬರನ್ನೊಬ್ಬರು ನೋಡುತ್ತಾ ಕಳೆದೆವು. ಆಕೆಯ ಕಣ್ಣ ರೆಪ್ಪೆಗಳು ಎಂದಿನಂತೆ ಹೊಳೆಯುತ್ತಿದ್ದವು. ಆ ಕ್ಷಣದಲ್ಲಿ ನನಗೆ ತಟ್ಟನೆ ನೆನಪಿಗೆ ಬಂದು, ನಾನು ಪ್ರತಿಬಾರಿಯೂ ಅವಳಿಗೆ ಹೇಳುವ ಹಾಗೆ “ನೀಲಿ ನವಿಲಿನ ಕಣ್ಣುಗಳು”  ಎಂದೆ. ಅವಳು ದೀಪದ ಮೇಲಿರಿಸಿದ್ದ ತನ್ನ ಕೈಗಳನ್ನು ತೆಗೆಯದೆ: “ಇದೊಂದು!, ನಾವಿಬ್ಬರು ಎಂದೂ ಮರೆಯುವುದಿಲ್ಲ.” ಜೋರಾಗಿ ನಿಟ್ಟುಸಿರು ಬಿಡುತ್ತಾ ಹೇಳಿದಳು ‘ನೀಲಿ ನವಿಲಿನ ಕಣ್ಣುಗಳು’, ನಾನು ಹೋದ ಹೋದಲ್ಲೆಲ್ಲ ಸಿಕ್ಕಸಿಕ್ಕ ಕಡೆ ಗೀಚಿದ್ದೇನೆ’.  

ಆಕೆ ನಿಧಾನವಾಗಿ ಡ್ರೆಸ್ಸಿಂಗ್ ಟೇಬಲ್ ಬಳಿ ಹೋಗಿ, ತನ್ನೆದುರಿಗಿದ್ದ ವೃತ್ತಾಕಾರದ ಕನ್ನಡಿಯ ಅನಂತ ಪ್ರತಿಫಲನಗಳ ಕೊನೆಯ ಬೆಳಕಿನಲ್ಲಿ ನನ್ನ ಕಡೆಗೆ ನೋಡುತ್ತಿರುವುದನ್ನು  ಗಮನಿಸಿದೆ. ಆಕೆ ತನ್ನ ಕೆಂಡದಂತಹ ಕಣ್ಣುಗಳಿಂದ ನನ್ನನ್ನೇ  ನೋಡುತ್ತಿದ್ದಳು: ಹಾಗೆ ನೋಡುತ್ತಲೇ ತನ್ನ ಮುಂದಿದ್ದ ಮುತ್ತಿನ ಮಣಿಗಳ ಹೊದಿಕೆಯಿದ್ದ ಸಣ್ಣ ಪೆಟ್ಟಿಗೆಯೊಂದನ್ನು ತೆರೆದು ತನ್ನ ಮುಖಕ್ಕೆ ಪೌಡರ್ ಹಚ್ಚಿಕೊಂಡು ಅಲಂಕರಿಸಿಕೊಳ್ಳತೊಡಗಿದಳು. ಅಲಂಕಾರ ಮುಗಿದ ನಂತರ, ಮತ್ತೆ ಆ ದೀಪದ ಬಳಿಗೆ ಹೋಗಿ: “ನನಗೆ ಒಮ್ಮೊಮ್ಮೆ  ಇನ್ನ್ಯಾರೋ ಈ ಕೋಣೆಯ  ಬಗ್ಗೆ ಕನಸು ಕಾಣುತ್ತಿರುವ ಹಾಗೆ, ನನ್ನ ರಹಸ್ಯಗಳನ್ನೆಲ್ಲ  ಕದಿಯುತ್ತಿರುವ ಹಾಗೆ ದಿಗಿಲಾಗುತ್ತದೆ” ಎನ್ನುತ್ತಾ ತನ್ನ ನೀಳ ನಡುಗುವ ಕೈಗಳನ್ನು ದೀಪದ ಬೆಂಕಿಗೆ ಚಾಚಿ ಹಿಡಿದು “ನಿನಗೆ ಚಳಿಯಾಗುತ್ತಿಲ್ಲವಾ?” ಎಂದು ಕೇಳಿದಳು. “ಒಂದೊಂದು ಸಲ ಆಗುತ್ತೆ” ಎಂದೆ. “ಈಗ ನಿನಗೂ ಚಳಿಯಾಗಲೇಬೇಕು” ಎಂದಳು. ಆ ಕ್ಷಣ ಯಾಕೆ ನನಗೆ ಒಂಟಿತನ ಕಾಡುತ್ತಿರಲಿಲ್ಲ ಎನ್ನುವುದು ಅರಿವಾಯಿತು: ಈ ಕೊರೆಯುವ ಚಳಿಯೇ ನನಗೆ ನನ್ನ ಏಕಾಂತದ ಅರಿವನ್ನು ಖಾತ್ರಿಯಾಗಿಸುತ್ತಿತ್ತು. “ಈಗ ಅನುಭವಕ್ಕೆ ಬರುತ್ತಿದೆ” ಎಂದೆ, “ಎಷ್ಟ್ ವಿಚಿತ್ರವಾಗಿದೆ, ಇದೆಂಥಾ ನೀರವ ರಾತ್ರಿ, ಬಹುಶ ನನ್ನ ಹೊದಿಕೆ ಕೆಳಗೆ ಬಿತ್ತೇನೋ”. ಆಕೆ ನನ್ನ ಮಾತಿಗೆ ಪ್ರತಿಕ್ರಿಯಿಸದೆ, ನಿಧಾನವಾಗಿ ಕನ್ನಡಿಯ ಬಳಿ ಹೋದಳು, ನಾನು ಅವಳಿಗೆ ಬೆನ್ನು ಮಾಡಿ ಕುರ್ಚಿ ತಿರುಗಿಸಿ ಕೂತೆ. ಅವಳೇನು ಮಾಡುತ್ತಿದ್ದಾಳೆ ಎನ್ನುವುದು ಅವಳತ್ತ  ನೋಡದೆಯೇ ನನಗೆ ತಿಳಿಯುತ್ತಿತ್ತು. ಆಕೆ ಆ ಕನ್ನಡಿಯ ಮುಂದೆ ಕೂತು, ನನ್ನ ಬೆನ್ನನ್ನೇ ನೋಡುತ್ತಿದ್ದಳು ಹಾಗೂ ನನ್ನ ಪ್ರತಿಬಿಂಬ, ಆ ಕನ್ನಡಿಯ ಆಳವನ್ನು ಮುಟ್ಟಿ ಪ್ರತಿಫಲಿಸಿ, ಆಕೆಯ ನೋಟದಲ್ಲಿ ಸೆರೆಯಾಗಿತ್ತು. ಆಕೆಯ ನೋಟ ಕೂಡ ಆ ಕನ್ನಡಿಯ ಆಳವನ್ನು ತಲುಪಿ ನನ್ನನ್ನು ತಲುಪವಷ್ಟರಲ್ಲಿ – ಆಕೆ ತನ್ನ ತುಟಿಗಳಿಗೆ ಒಂದು ಸುತ್ತು  ಕಡು ಕೆಂಪು ಬಣ್ಣದ ಲಿಪ್ ಸ್ಟಿಕ್ ಲೇಪಿಸಿಕೊಂಡು ಮತ್ತೊಂದು ಸುತ್ತು ಲೇಪಿಸಿಕೊಳ್ಳಲು ಸಿದ್ಧವಾಗುತ್ತಿದ್ದಳು. ನನ್ನೆದುರಿಗಿದ್ದ ನುಣುಪಾದ ಗೋಡೆಯಲ್ಲಿ ನನಗೆ ಆಕೆಯ ಬಿಂಬ ಕಾಣದಿದ್ದರೂ – ಅದೃಶ್ಯ ಕನ್ನಡಿಯ ಹಾಗೆ –  ನನ್ನ ಹಿಂದೆ ಅವಳೆಲ್ಲಿ ಕುಳಿತಿದ್ದಾಳೆ ಎನ್ನುವುದು ನನ್ನೆದುರಿಗೆ ಒಂದು ಕನ್ನಡಿ ಇದೆಯೇನೋ ಅನ್ನುವ ಹಾಗೆ ತಿಳಿಯುತ್ತಿತ್ತು. “ನಾನು ನಿನ್ನನ್ನು ನೋಡಬಲ್ಲೆ” ಎಂದೆ. ಹಾಗಂದ ಕೂಡಲೇ ಅಚ್ಚರಿಯಿಂದ  ಕಣ್ಣೇರಿಸಿ ಅವಳೆದುರಿಗಿದ್ದ ಕನ್ನಡಿಯಲ್ಲಿ  ನನ್ನನ್ನು ನೋಡುತ್ತಿದ್ದಿದ್ದು, ಅವಳೆಡೆಗೆ ಬೆನ್ನು ಮಾಡಿ ಕೂತ ನನಗೆ ಸ್ಪಷ್ಟವಾಗಿ ಗೊತ್ತಾಗುತಿತ್ತು. ನಂತರ ಆಕೆ ಮತ್ತೆ ಕಣ್ಣನ್ನು ತನ್ನ ಬ್ರಾ ದ  ಕಡೆಗಿಳಿಸಿ  ಮಾತನಾಡದೆಯೇ ಕೂತಳು. ನಾನು ಮತ್ತೊಮ್ಮೆ “ನಾನು ನಿನ್ನನ್ನು ನೋಡಬಲ್ಲೆ” ಎಂದೆ. ಅವಳು ಮತ್ತೊಮ್ಮೆ ಕಣ್ಣೇರಿಸಿ “ಸಾಧ್ಯಾನೇ ಇಲ್ಲ” ಎಂದಳು. ನಾನು “ಯಾಕೆ ಹಾಗಂತೀಯ,” ಎಂದೆ. ಅದಕ್ಕವಳು, ತನ್ನ ಪ್ರಶಾಂತ ಕಣ್ಣುಗಳನ್ನು ಬ್ರಾ ದ ಮೇಲಿಂದ ತೆಗೆಯದೆ ಹೇಳಿದಳು: “ಯಾಕೆಂದರೆ ನೀನು ಆ ಗೋಡೆಯ ಕಡೆ ಮುಖ ಮಾಡಿ ಕುಳಿತಿದ್ದೀಯಾ.” ನಾನು ಕುಳಿತಿದ್ದ ಕುರ್ಚಿಯನ್ನು ಅವಳೆಡೆಗೆ ಸರ್ರನೆ ತಿರುಗಿಸಿದೆ. ನನ್ನ ಬಾಯಲ್ಲಿದ್ದ  ಸಿಗರೇಟ್ ಬೀಳದ ಹಾಗೆ  ಕಚ್ಚಿ ಹಿಡಿದಿದ್ದೆ. ನಾನು ಕನ್ನಡಿಯ ಕಡೆಗೆ ಮುಖ ಮಾಡಿದ್ದಾಗ ಆಕೆ ಆ ದೀಪದ ಬಳಿ ಹೋಗಿ ತನ್ನೆರಡು ಕೈಗಳನ್ನು ಒಂದು ಹಂಸದ ಹಾಗೆ ದ್ವೀಪದ ಜ್ವಾಲೆಗೆ, ತನ್ನ ಮುಖಕ್ಕೆ ಬಿಸಿ ತಾಕದ ಹಾಗೆ ಹಿಡಿದಿದ್ದಳು. “ನಾನು ಗೋಡೆಯ ಕಡೆಗೆ ತಿರುಗಿ ಕೂರುತ್ತೇನೆ” ಎಂದೆ. “ಬೇಡ, ಹೇಗಿದ್ದರೂ ನಿನಗೆ  ನಾನು ಕಾಣಿಸ್ತೇನೆ, ಆಗಲೇ ಕಂಡ ಹಾಗೆ” ಎಂದು ಹೇಳಿ ಮುಗಿಸುವುದರಲ್ಲಿ ಬಹುತೇಕ ಬೆತ್ತಲಾಗಿದ್ದಳು. “ನನಗೆ ಯಾವಾಗಲೂ ನಿನ್ನನ್ನು ಹೀಗೆಯೇ ನೋಡಬೇಕೆನ್ನುವ ಆಸೆ, ನಿನ್ನ ಹೊಟ್ಟೆಯ ಚರ್ಮ ಯಾರೋ ಹೊಡೆದ ಹಾಗೆ ಆಳವಾದ ಗುಳಿಗಳಿಂದ ತುಂಬಿವೆ” ನನ್ನ ಮಾತುಗಳ ಪರಿಣಾಮ ನನಗೆ ಸ್ಪಷ್ಟವಾಗುವಷ್ಟರಲ್ಲಿ ಅವಳು ನಿಶ್ಚಲವಾಗಿ ನಿಂತಳು, ತನ್ನನ್ನು ತಾನು ಆ ದೀಪದ ಬೆಳಕಿನಲ್ಲಿ ಬೆಚ್ಚಗಾಗಿಸಿಕೊಳ್ಳುತ್ತ, “ಕೆಲವೊಮ್ಮೆ ನಾನು ಲೋಹದ ಗೊಂಬೆಯೇನೋ ಅನ್ನಿಸುತ್ತದೆ”. “ಕೆಲವೊಮ್ಮೆ, ನಾನು ನನ್ನ ಹೃದಯದ ಮೇಲೆ ಭಾರ ಹಾಕಿ ಮಲಗಿದ್ದಾಗ, ನನ್ನ ಇಡೀ ದೇಹ ಟೊಳ್ಳಾದ ಹಾಗೆ ಮತ್ತು ನನ್ನ ಚರ್ಮ ಲೋಹದ ಹಾಳೆಯೇನೋ ಅನ್ನುವ ಹಾಗೆ ಅನುಭವವಾಗುತ್ತದೆ, ಯಾರೋ ನನ್ನ ಹೊಟ್ಟೆಗೆ ಒದ್ದು ಒದ್ದು ಕರೆದ ಹಾಗೆ ನನ್ನ ದೇಹದೊಳಗೆ ತಾಮ್ರವಿರುವ ಹಾಗೆ ಸದ್ದು ಕೇಳಿಸುತ್ತದೆ. “ಹೇಗೆಂದರೆ –  ಸಂರಕ್ಷಿಸಿ ಇಟ್ಟ ಲೋಹದ ಹಾಗೆ” ಎಂದು ದೀಪಕ್ಕೆ ಮತ್ತಷ್ಟು ಹತ್ತಿರವಾದಳು. “ನಿನ್ನೊಳಗಿನ ಆ ಶಬ್ದ ಕೇಳಬೇಕೆನ್ನಿಸುತ್ತಿದೆ” ಎಂದೆ. “ಅಕಸ್ಮಾತ್ ಎಂದಾದರೂ ನಾವಿಬ್ಬರು ಭೇಟಿಯಾದರೆ, ನೀನು ನನ್ನ ಪಕ್ಕೆಲುಬುಗಳ ಬಳಿ ಕಿವಿ ಇಟ್ಟು ಕೇಳಿಸಿಕೋ, ನಿನಗೆ ಆ ಪ್ರತಿಧ್ವನಿಗಳು ಕೇಳಿಸುತ್ತದೆ, ನಾನು ಯಾವಾಗಲೂ ಎಡಕ್ಕೆ ತಿರುಗಿ ಮಲಗುವುದು, ನೀನು ಹಾಗೆ ಮಾಡಬೇಕೆಂದು ನನಗೆ ಬಹಳ ಆಸೆ” ಹಾಗೆ ಮಾತನಾಡುತ್ತ ಏದುಸಿರು ಎಳೆದುಕೊಳ್ಳುತ್ತಾ ಬಹಳ ಉದ್ವೇಗಕ್ಕೊಳಗಾದಳು, ಹಾಗೂ ಹಲವು ವರ್ಷಗಳ ಕಾಲ ಆಕೆ ಬದುಕಿನಲ್ಲಿ ನನಗಾಗಿ ಎದುರು ನೋಡುವುದಲ್ಲದೆ ಬೇರೇನೂ ಮಾಡಿಲ್ಲವೆಂದಳು. ತನ್ನ ಇಡೀ ಬದುಕನ್ನು ನಾ ಹೇಳುವ ಆ ಒಂದು ವಾಕ್ಯದಿಂದ ನಿಜ ಜೀವನದಲ್ಲಿ ನನ್ನನ್ನು  ಹುಡುಕಲು ಕಳೆದಿದ್ದಳಂತೆ: “ನೀಲಿ ನವಿಲಿನ  ಕಣ್ಣುಗಳು”. ಮತ್ತು ಬೀದಿ ಬೀದಿಗಳಲ್ಲಿ ಜೋರಾಗಿ, ಅದನ್ನೇ  ಹೇಳುತ್ತಾ ಓಡಾಡಿದ್ದಳಂತೆ, ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿರುವ ಒಬ್ಬನೇ ವ್ಯಕ್ತಿ ನಾನಾಗಿರುತ್ತೇನೆಂಬುದು ಅವಳ ನಂಬಿಕೆ.  

 

“ನಿನ್ನ ಕನಸುಗಳಲ್ಲಿ ಪದೇಪದೇ ಭೇಟಿಯಾಗಿ ‘ನೀಲಿ ನವಿಲಿನ ಕಣ್ಣುಗಳು‘ ಎನ್ನುವವನು ನಾನೇ.”

 

ಅವಳು ತಾನು ಹೋದ ರೆಸ್ಟೋರೆಂಟ್ಗಳಲ್ಲೆಲ್ಲ ಆರ್ಡರ್ ಮಾಡುವ ಮೊದಲು ‘ನೀಲಿ ನವಿಲಿನ ಕಣ್ಣುಗಳು‘ ಎನ್ನುತ್ತಿದ್ದಳಂತೆ, ಆ ವಾಕ್ಯವನ್ನೇ ಎಂದೂ ಕೇಳದ ಆ ವೈಟರ್ಗಳು ಗೊಂದಲಕ್ಕೊಳಗಾಗಿ ಅಮಾಯಕರ ಹಾಗೆ ನೋಡುತ್ತಿದ್ದರಂತೆ. ಆಕೆ ಹೋದಲ್ಲೆಲ್ಲ ನಾಪ್ಕಿನ್ ಗಳ ಮೇಲೆ, ಟೇಬಲ್ಗಳ ಮೇಲೆ ಎಲ್ಲೆಂದರಲ್ಲಿ ‘ನೀಲಿ ನವಿಲಿನ ಕಣ್ಣುಗಳು’ ಎಂದು ಗೀಚುತ್ತಿದ್ದಳಂತೆ. ಒಮ್ಮೆ ಔಷಧಿ ಅಂಗಡಿಯೊಂದರಲ್ಲಿ ಆಗ ತಾನೆ ನೆಲ ಸ್ವಚ್ಚ ಮಾಡಿದ್ದರಿಂದ ಬಂದ ವಾಸನೆ, ನನ್ನನ್ನು ಕನಸಿನಲ್ಲಿ ಭೇಟಿ ಮಾಡಿದ ಕೋಣೆಯೊಂದರ ವಾಸನೆಗೆ ಹೋಲುತ್ತಿದ್ದರಿಂದ “ಅವನು ಇಲ್ಲೇ ಎಲ್ಲೋ ಹತ್ತಿರದಲ್ಲಿದ್ದಾನೆ” ಎಂದುಕೊಂಡು ಅಲ್ಲಿನ ಕೆಲಸಗಾರನ ಬಳಿ ಹೋಗಿ “ನನ್ನ ಕಣ್ಣನ್ನು ನೋಡಿ ‘ನೀಲಿ ನವಿಲಿನ ಕಣ್ಣುಗಳು’ ಎನ್ನುವ ಒಬ್ಬ ವ್ಯಕ್ತಿಯನ್ನು  ನಾನು ಯಾವಾಗಲೂ ಕನಸಿನಲ್ಲಿ ಭೇಟಿಯಾಗುತ್ತೇನೆ” ಎಂದಾಗ ಆತ “ನಿಜ ಹೇಳಬೇಕೆಂದರೆ, ನಿಮ್ಮ ಕಣ್ಣುಗಳು ಹಾಗೆಯೇ ಇವೆ” ಎಂದನಂತೆ. ಆಗ ಆಕೆ ಅವನಿಗೆ “ನಾನು ಅದೇ ವಾಕ್ಯವನ್ನು, ಅದೇ ರೀತಿ ಹೇಳಿದ ವ್ಯಕ್ತಿಯನ್ನು ಹುಡುಕುತ್ತಿದ್ದೇನೆ ” ಎಂದಾಗ ಆ ಕೆಲಸದವನು ಜೋರಾಗಿ ನಕ್ಕು ಮುಂದಿನ ಗ್ರಾಹಕನ ಬಳಿ ಹೋದನಂತೆ. ಅವಳು ಆಗತಾನೆ ಸ್ವಚ್ಛಗೊಳಿಸಿದ ಆ ಅಂಗಡಿಯ ನೆಲದ ಮೇಲೆ ಕಡುಕೆಂಪು ಬಣ್ಣದ ಲಿಪ್ ಸ್ಟಿಕ್ ಬಳಸಿ “ನೀಲಿ ನವಿಲಿನ ಕಣ್ಣುಗಳು” ಎಂದು ಬರೆಯಲು ಶುರುಮಾಡಿದಳಂತೆ. ಆ ದೀಪದ ಬಳಿ ನಿಂತು ಆ ಘಟನೆಯನ್ನು ನೆನಪಿಸ್ಕೊಳ್ಳುತ್ತ ಹೇಳುತ್ತಾಳೆ, ಮರಳಿ ಅವಳ ಬಳಿ ಬಂದ ಆ ಅಂಗಡಿಯವನು, ಆಕೆ ಬರೆದ್ದನ್ನೆಲ್ಲ ಅಳಿಸಿ ಶುದ್ದ ಮಾಡು ಎಂದು ಬಯ್ದನಂತೆ. ಇಡೀ ಮಧ್ಯಾಹ್ನ ಆ ಕಟ್ಟಡದ ಪ್ರತೀ ಮಹಡಿಯನ್ನೂ ಆಕೆ “ನೀಲಿ ನವಿಲಿನ ಕಣ್ಣುಗಳು” ಎನ್ನುತ್ತಾ ಸ್ವಚ್ಛ ಮಾಡಿದಳಂತೆ, ಎಷ್ಟರ ಮಟ್ಟಿಗೆಂದರೆ, ಕೊನೆಗೆ ಜನರೆಲ್ಲಾ ಅಂಗಡಿಯ ಬಳಿ ನೆರೆದು ಹುಚ್ಚಿ ಎಂದು ಕರೆಯುವವರೆಗೂ ಮುಂದುವರೆಸಿದ್ದಳಂತೆ.

ಇಷ್ಟೆಲ್ಲಾ ಹೇಳಿ ಮುಗಿದ ಬಳಿಕ ಆಕೆ ಸುಮ್ಮನಾದಳು, ನಾನು ಆ ಕೋಣೆಯ ಒಂದು ಮೂಲೆಯಲ್ಲಿ, ಕೂತು, ನಾನು  ಕೂತಿದ್ದ ಕುರ್ಚಿಯನ್ನು ಹಿಂದೆ ಮುಂದೆ ಮಾಡುತ್ತ್ತಿದ್ದೆ. “ಪ್ರತಿ ದಿನ ಬೆಳಗ್ಗೆ ಎಚ್ಚರವಾದಾಗ, ನಿನಗೆ ಕನಸಿನಲ್ಲಿ ಹೇಳಿದ ವಾಕ್ಯವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ ಸೋಲುತ್ತೇನೆ. ಆದರೆ ನಾಳೆ ಖಂಡಿತ ಈ ಮಾತನ್ನು ಮರೆಯುವುದಿಲ್ಲ. ಆದರೆ ಸಮಸ್ಯೆ ಏನೆಂದರೆ, ಪ್ರತೀ ಸಾರಿ ನಾನು ಹೀಗೆಯೇ ಹೇಳುತ್ತೇನೆ ಮತ್ತು ಪ್ರತೀ ಬಾರಿ ಬೆಳಗ್ಗೆ ಎಚ್ಚರವಾದಾಗ ಮರೆತು ಬಿಟ್ಟಿರುತ್ತೇನೆ” ಎಂದೆ. ಅದಕ್ಕವಳು “ನಾವು ಭೇಟಿ ಮಾಡಿದ ಮೊದಲನೇ ದಿನ ನೀನೆೇ ಈ ವಾಕ್ಯ ಹೇಳಿದ್ದು” ಎಂದಳು. “ನಾನು ಹಾಗೆ ಹೇಳಿದ್ದು ಯಾಕೆಂದರೆ ನಿನ್ನ ಬೂದಿಯಂತಹ ಕಣ್ಣುಗಳನ್ನು ನೋಡಿ, ಆದರೆ ಪ್ರತಿ ಬೆಳಗ್ಗೆ ಎಚ್ಚರವಾದಾಗ ಮರೆತುಹೋಗುತ್ತೇನೆ” ಎಂದೆ. ಅದಕ್ಕವಳು ತನ್ನ ಮುಷ್ಠಿ ಬಿಗಿ ಹಿಡಿದು, ಏದುಸಿರು ಬಿಡುತ್ತ, ದೀಪದ ಆ ಬಳಿಯಿಂದಲೇ ಹೇಳಿದಳು “ಕನಿಷ್ಠ ನಾವೀಗ  ಭೇಟಿಯಾಗುತ್ತಿರುವ ಊರಿನ ಹೆಸರನ್ನಾದರೂ ನೆನಪಿಟ್ಟುಕೊಂಡಿದ್ದರೆ!”  

“ನಿನ್ನನ್ನು ಒಮ್ಮೆ ಮುಟ್ಟಿ ನೋಡಬೇಕೆನಿಸುತ್ತಿದೆ” ಎಂದೆ. ಬೆಳಕಿನಲ್ಲಿ ಹೊಳೆಯುತ್ತಿದ್ದ ಅವಳ ಮುಖವನ್ನು ನನ್ನೆಡೆಗೆ ತಿರುಗಿಸಿದಳು, ಅವಳ ನೋಟ, ಅವಳ ದೇಹದ ಹಾಗೆಯೇ, ಉರಿಯುತಿತ್ತು. “ನೀನು ಯಾವತ್ತೂ ಹೀಗೆ ಹೇಳಿರಲಿಲ್ಲ” ಎಂದಳು. “ನಾನು ಈಗ ಹೇಳುತ್ತಿದ್ದೇನಲ್ಲ, ನಿಜವಾಗಿಯೂ ಕೇಳುತಿದ್ದೇನೆ” ಎಂದೆ. ದೀಪದ ಆ ಬದಿಯಿಂದ ಆಕೆ  ಒಂದು ಸಿಗರೇಟ್ ಕೇಳಿದಳು. ನನ್ನ ಬೆರಳುಗಳ ನಡುವೆ ಸಿಲುಕಿದ್ದ ಸಿಗರೇಟ್ ಕಾಣೆಯಾಗಿತ್ತು. ಸಿಗರೇಟ್ ಸೇದುತ್ತಿದ್ದುದ್ದು  ಮರೆತೇಹೋಗಿತ್ತು ಕೂಡ. “ಯಾವ ಊರ ಗೋಡೆಗಳ ಮೇಲೆ ಬರೆದೆ ಎನ್ನುವುದು ಯಾಕೆ ನನಗೆ ನೆನಪಿಲ್ಲ” ಎಂದು ಹಪಹಪಿಸಿದಳು. ನಾನಂದೆ: “ನಾಳೆ ಬೆಳಗ್ಗೆ ಎಚ್ಚರವಾದಾಗ ಯಾಕೆ ಆ ಪದಗಳು ನನಗೆ ನೆನೆಪಿರುವುದಿಲ್ಲವೋ ಅದೇ ಕಾರಣಕ್ಕೆ”. ಅವಳು ಸಪ್ಪೆಮೋರೆ ಹಾಕಿ ಹೇಳಿದಳು “ಇಲ್ಲ. ಕೆಲವೊಮ್ಮೆ ಅದನ್ನೂ ಕೂಡ ನಾನು ಇನ್ನೊಂದು ಕನಸಿನಲ್ಲಿ ಕಂಡಿದ್ದೇನೆ”. ನಾನು ಕುರ್ಚಿಯಿಂದ ಎದ್ದು ಅವಳಿದ್ದ ದೀಪದ ಕಡೆಗೆ ಹೋದೆ. ಆಕೆ ನಾನೆಷ್ಟೇ ಸಮಿಪಹೋಗಲು ಪ್ರಯತ್ನಿಸಿದರೂ ನನ್ನ ಕೈಯ್ಯಳತೆಗಿಂತ ಸ್ವಲ್ಪ ದೂರವೇ ಇದ್ದಳು, ನಾನೆಷ್ಟೇ ಪ್ರಯತ್ನ ಪಟ್ಟರೂ ಆ ದೀಪದಿಂದಾಚೆಗೆ ನನ್ನ ಕೈ ತಲುಪುತ್ತಿರಲಿಲ್ಲ. ನಾನು ಆ ಸಿಗರೇಟ್ ಹಿಡಿದ ಕೈಯ್ಯನ್ನು ಅವಳೆಡೆಗೆ ಚಾಚಿದೆ, ಅವಳು ಆ ಸಿಗರೇಟನ್ನು ತನ್ನ ತುಟಿಗಳ ಮಧ್ಯೆ ಇಟ್ಟುಕೊಂಡು ನಾನು ಲೈಟರ್ ಹಚ್ಚುವ ಮೊದಲೇ ದೀಪದ ಬೆಳಿಕಿನಿಂದ ಹಚ್ಚಿಕೊಂಡಳು. “ಈ ಪ್ರಪಂಚದ ಯಾವುದೋ ಊರ ಗೋಡೆಗಳ ಮೇಲೆ ನೀನು ಬರೆದದ್ದು ಇರಲೇಬೇಕು, ಒಂದು ವೇಳೆ ನನಗೆ ಇದೊಂದು ವಾಕ್ಯ ನೆನಪಾದರೆ: ’ನೀಲಿ ನವಿಲಿನ ಕಣ್ಣುಗಳು‘, ನಾನು ನಿನ್ನನ್ನು ಹುಡುಕಬಹುದು. ಅವಳು ನಿಧಾನಕ್ಕೆ ತನ್ನ ದೃಷ್ಟಿಯನ್ನು ಮೇಲೇರಿಸಿದಳು, ಈಗ ಅವಳ ತುಟಿಗಳ ಮಧ್ಯೆ ಉರಿಯುವ ಕೆಂಡ ಇತ್ತು. “ನೀಲಿ ನವಿಲಿನ ಕಣ್ಣುಗಳು” ಎನ್ನುತ್ತಾ ದೀರ್ಘವಾದ ನಿಟ್ಟುಸಿರು ಬಿಟ್ಟಳು, ಆ ಸಿಗರೇಟ್ ತುಟಿಯಿಂದ ನೇತಾಡುತ್ತಿರುವ ಹಾಗೆಯೇ, ಅರ್ಧ ಕಣ್ಣು ಮುಚ್ಚಿ ಏನೋ ಯೋಚಿಸುತ್ತ ನಿಂತಳು. ಸಿಗರೇಟಿನಿಂದ ಜೋರಾಗಿ ಒಮ್ಮೆ ಧಮ್ ಎಳೆದುಕೊಂಡು ತನ್ನ ಬೆರಳ ಮಧ್ಯೆಯಿದ್ದ  ಸಿಗರೇಟ್ ನೋಡುತ್ತಾ ಹೇಳಿದಳು ” ಇದು ಬೇರೆಯದೇ ಜಗತ್ತು , ನಾನು ಬೆಚ್ಚಗಾಗುತ್ತಿದ್ದೇನೆ”. ಬಹಳ ನಿರಾಸಕ್ತಿಯಿಂದ ಹಾಗು ಇದೆಲ್ಲಾ ಕ್ಷಣಿಕವೇನೋ ಅನ್ನುವ ಭಾವ ಅವಳ ದನಿಯಲ್ಲಿ ತುಂಬಿತ್ತು. ಹೇಗೆಂದರೆ,  ಅವಳಾಡುತಿದ್ದ ಪದಗಳನ್ನು ಒಂದು ಹಾಳೆಯ ಮೇಲೆ ಬರೆದು ಆ ದೀಪದ ಬಳಿ ತಂದು, ನಾನು ಓದಲು ಶುರು ಮಾಡಿದ ಹಾಗೆ “ನಾನು ಬೆಚ್ಚ…. ” ಅವಳು ಆ ಹಾಳೆಯನ್ನು ತನ್ನ ಹೆಬ್ಬೆರಳು ಮತ್ತು ಕಿರುಬೆರಳ ಮಧ್ಯೆ ಸುಡುತ್ತಾ ತಿರುಗಿಸಿದ ಹಾಗೆ  “…ಗಾಗುತ್ತಿದ್ದೇನೆ” ಎಂದು ಓದಿ ಮುಗಿಸಲು ಆ ಹಾಳೆ ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ನೆಲಕ್ಕೆ ಬಿದ್ದು ಬೂದಿಯಾದ ಹಾಗೆ. “ಒಳ್ಳೆಯದಾಯಿತು”, ಎಂದೆ. “ಕೆಲವೊಮ್ಮೆ ನೀನು ಹಾಗೆ ನಡುಗುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ .”   

*****  

ನಾವಿಬ್ಬರೂ ಬಹಳ ವರ್ಷಗಳಿಂದ ಕನಸಿನಲ್ಲಿ ಭೇಟಿಯಾಗುತ್ತಿದ್ದೇವೆ. ನಾವಿಬ್ಬರೂ ಹೀಗೆ ಜತೆಗಿದ್ದಾಗ, ಯಾರಾದರೊಬ್ಬರು  ಚಮಚವೊಂದನ್ನೋ ಅಥವಾ ಇನ್ನೇನನ್ನೋ ಹೊರ ಪ್ರಪಂಚದಲ್ಲಿ ಬೀಳಿಸಿದಾಗ ಉಂಟಾದ ಸದ್ದಿಗೆ ಕನಸಿನಿಂದ ಎಚ್ಚರಗೊಳ್ಳುತ್ತಿದ್ದೆವು. ನಿಧಾನವಾಗಿ ನಮ್ಮಿಬ್ಬರ ಸ್ನೇಹ ಇಂತಹ ಸಣ್ಣ ಸಣ್ಣ ವಸ್ತುಗಳ ಅಥವಾ ಘಟನೆಗಳ ಮೇಲೆ ಅವಲಂಬಿತವಾಗಿದೆ ಎನ್ನುವುದು ನಮಗೆ ಅರಿವಾಯಿತು. ನಮ್ಮ ಭೇಟಿ ಯಾವಾಗಲೂ ಹೀಗೆ , ಒಂದು ಸಣ್ಣ ಚಮಚ ಕೆಳಗೆ ಬೀಳುವುದರೊಂದಿಗೆ, ಅಥವಾ ಇನ್ನ್ಯಾವುದೋ ಸದ್ದಿನೊಂದಿಗೆ  ಕೊನೆಯಾಗುತ್ತಿತ್ತು.   ಈಗ, ಆಕೆ, ಅಲ್ಲಿ ಆ ದೀಪದ ಬಳಿ ನಿಂತು ನನ್ನನ್ನು ನೋಡುತ್ತಿದ್ದಳು. ಹಿಂದೊಮ್ಮೆ ನಾನು ಆಕೆಯನ್ನು ಖುರ್ಚಿಯೊಂದರ ಮೇಲೆ ಕೂರಿಸಿ ಜೋರಾಗಿ ಸುತ್ತಿಸುತ್ತಾ ಯಾವುದೋ ಅನಾಮಿಕ ಹೆಂಗಸನ್ನು ನೋಡುತ್ತಾ ನಿಂತಾಗ ಕೂಡ ಇದೇ ರೀತಿ ನೋಡುತ್ತಿದ್ದಳು. ಆ ಕನಸಿನಲ್ಲಿಯೇ ನಾನು ಆಕೆಗೆ ಮೊದಲ ಬಾರಿ ಕೇಳಿದ್ದು : “ಯಾರು ನೀನು?”.  “ನನಗೆ ನೆನಪಿಲ್ಲ” ಎಂದಿದ್ದಳು. “ಆದರೆ ನಾನು ನಿನ್ನನ್ನು ಎಲ್ಲೋ ನೋಡಿದ್ದೇನೆ” ಎಂದೆ.  ಅದಕ್ಕವಳು, ನಿರ್ಲಿಪ್ತವಾಗಿ   “ನಾನು ಒಮ್ಮೆ ನಿನ್ನ ಬಗ್ಗೆ ಕನಸು ಕಂಡಿದ್ದೆ ಎನಿಸುತ್ತದೆ, ಅದೂ ಇದೇ ಕೋಣೆಯಲ್ಲಿ” ಎಂದಳು. ” ಹಾಂ! ಈಗ ನೆನಪಿಗೆ ಬಂತು” ಎಂದೆ. ಅದಕ್ಕವಳು “ಬೇರೆ ಬೇರೆ ಕನಸುಗಳಲ್ಲೂ ಭೇಟಿಯಾಗಿದ್ದೇವೆಲ್ಲ, ಎಷ್ಟು ವಿಚಿತ್ರ!” ಎಂದಿದ್ದಳು ಅಷ್ಟೇ ನಿರ್ಲಿಪ್ತವಾಗಿ. 

ಒಂದೆರಡು  ಬಾರಿ ಸಿಗರೇಟ್ ದಮ್ಮೆಳೆದಳು. ನಾನು ಆ ದೀಪದ ಬಳಿ ಅವಳನ್ನೇ ನೋಡುತ್ತಾ ಸುಮ್ಮನೆ ನಿಂತಿದ್ದೆ. ಒಮ್ಮೆ ಆಕೆಯನ್ನು ನೆತ್ತಿಯಿಂದ ಪಾದದವರೆಗೂ ನೋಡಿದೆ, ಇನ್ನೂ ತಾಮ್ರದ ಗೊಂಬೆಯೇ, ಆದರೆ ಮುಂಚಿನ ಹಾಗೆ ತಣ್ಣಗಿನ ಲೋಹದ ಹಾಗಲ್ಲದೆ, ಹಳದಿ ಬಣ್ಣದ, ಮೆತ್ತಗಿನ, ಆಕಾರ ನೀಡಬಹುದಾದ ತಾಮ್ರದ ಹಾಗೆ. “ನಾನು ನಿನ್ನನ್ನು ಮುಟ್ಟಬೇಕು” ಮತ್ತೊಮೆ ಹೇಳಿದೆ. “ನೀನು ಎಲ್ಲವನ್ನು ಹಾಳುಗೆಡವುತ್ತೀಯ” ಎಂದಳು. “ಅದರಿಂದ ಅಂತಹ ಯಾವ ವ್ಯತ್ಯಾಸವೂ ಆಗುವುದಿಲ್ಲ, ಹಾಗೇ ಸುಮ್ಮನೆ ಆ ತಲೆದಿಂಬು ಕೆಳಗೆ ಬೀಳಿಸಿದರೆ ಈ ಕನಸಿನಿಂದ ಹೊರಗೆ ಹೋಗುತ್ತೇವೆ”.

ಆಕೆಯೆಡೆಗೆ ನನ್ನ ಕೈ ಚಾಚಿದೆ, ಆಕೆ ಸ್ವಲ್ಪವೂ ಚಲಿಸದೆ ಮತ್ತೊಮ್ಮೆ”ನೀನು ಎಲ್ಲವನ್ನೂ ಹಾಳುಗೆಡವುತ್ತೀಯ” ಎಂದಳು . “ಬಹುಶ,  ನೀನು ದೀಪದ ಈ ಬದಿ ಬಂದರೆ ನಾವು ಈ ಕನಸಿನಿಂದ  ಹೊರಬಂದು ಈ ಪ್ರಪಂಚದ ಯಾವ ಮೂಲೆಯಲ್ಲಿ ಎದ್ದೇಳುತ್ತೇವೋ.” ಆದರೆ ನಾನು ಮತ್ತೆ ಒತ್ತಾಯಿಸುತ್ತಾ ಹೇಳಿದೆ “ಅದರಿಂದ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ.” ಅದಕ್ಕವಳು “ಈಗ ನಾವು ಆ ದಿಂಬು ಕೆಳಗೆ ಬೀಳಿಸಿದರೆ, ನಾವು ಮತ್ತೊಮೆ ಇನ್ನೊಂದು ಕನಸಿನಲ್ಲಿ ಭೇಟಿಯಾಗುತ್ತೇವೆ. ಆದರೆ ನೀನು ಎಚ್ಚರವಾದಾಗ ಎಲ್ಲವನ್ನೂ ಮರೆತಿರುತ್ತೀಯ.” ನಿಧಾನವಾಗಿ ನಾನು ಹಿಂದೆ ಕುಳಿತಿದ್ದ ಕುರ್ಚಿಯ ಬಳಿ ಸಾಗಿದೆ, ಆಕೆ ತನ್ನೆರಡು ಕೈಗಳನ್ನು ದೀಪದ ಬೆಳಕಿನಲ್ಲಿ ಬೆಚ್ಚಗೆ ಮಾಡಿಕೊಳ್ಳುತ್ತ ನಾನು ಕುರ್ಚಿಯ ಮೇಲೆ ಕೂರುವುದಕ್ಕೂ ಮೊದಲೇ ಹೇಳಿದಳು “ನಾನು ಮಧ್ಯರಾತ್ರಿ ಅರ್ಧಂಬರ್ಧ ಅಚಾನಕ್ಕಾಗಿ ಕನಸಿನಿಂದ  ಎದ್ದಾಗ, ಹಾಸಿಗೆಯಲ್ಲಿ ಒದ್ದಾಡುತ್ತ ಇರುತ್ತೇನೆ ಮತ್ತು ಹಾಗಾದಾಗ ಆ ದಿಂಬು ಮುಂಜಾವಿನವರೆಗೂ ನನ್ನ ಮೊಣಕಾಲನ್ನು ಸುಡುತ್ತಾ ಇರುತ್ತದೆ”.  

ಅವಳ ಮಾತು ಕೇಳಿ ನಾನು ಮತ್ತೆ ಗೋಡೆಯ ಕಡೆ ಮುಖ ಮಾಡಿದೆ. “ಈಗಾಗಲೇ ಬೆಳಗಾಗುತ್ತಿದೆ ಅನಿಸುತ್ತಿದೆ, ರಾತ್ರಿ  ಎರಡು ಘಂಟೆಯ ವೇಳೆಯಲ್ಲಿ ನಾನು ಎಚ್ಚರವಾಗಿದ್ದೆ, ಆ ಸಮಯ ಕಳೆದು ಬಹಳ ಸಮಯವಾಗಿದೆ” ಎಂದು ಅವಳತ್ತ ನೋಡದೆ ಬಾಗಿಲ ಬಳಿ ಹೋದೆ. ನಾನು ಆ ಬಾಗಿಲ ಚಿಲಕಕ್ಕೆ ಕೈ ಹಾಕಿದಾಗ, ಅವಳು ಮತ್ತದೇ ಆತಂಕದ ಧ್ವನಿಯಲ್ಲಿ ಹೇಳಿದಳು “ಬಾಗಿಲು ತೆರೆಯಬೇಡಿ, ಆ ಹಜಾರದ ದಾರಿ ಬಹಳ ಕೆಟ್ಟ ಕನಸುಗಳಿಂದ ತುಂಬಿವೆ”. “ನಿನಗೆ ಹೇಗೆ ಗೊತ್ತು?” ಎಂದು ಕೇಳಿದೆ. “ಕೆಲವೇ ಕ್ಷಣಗಳ ಹಿಂದೆ ನಾನು ಅಲ್ಲಿ ಹೋಗಿದ್ದೆ, ನಾನು ನನ್ನ ಹೃದಯಕ್ಕೆ ಭಾರವಾಗುವಂತೆ ಎಡ ಬದಿಗೆ ಭಾರ ಹಾಕಿ  ಮಲಗಿದ್ದೆ ಎಂದು ಗೊತ್ತಾದ ಕ್ಷಣ ಮರಳಿ ಬಂದೆ” ಎಂದಳು.

ನಾನು ಬಾಗಿಲನ್ನು ಅರ್ಧ ತೆರೆದು ಹೊರ ಹೋಗಲು ಸಿದ್ದನಾಗಿದ್ದೆ. ಆ ಬಾಗಿಲು ತೆರೆದ ಕೂಡಲೇ ಒಳ ಬಂದ ತಣ್ಣನೆಯ ಗಾಳಿ, ತರಕಾರಿಯ ಒದ್ದೆ ಮಣ್ಣಿನ ವಾಸನೆ ತಂದಿತು.  “ಹೊರಗೆ ಯಾವ ಹಜಾರವೂ ಇಲ್ಲ ಅನ್ನಿಸುತ್ತಿದೆ, ಬಯಲುಸೀಮೆಯ ವಾಸನೆ ಬರುತ್ತಿದೆ” ಎಂದೆ. “ನನಗೆ ನಿನಗಿಂತ ಚನ್ನಾಗೇ ಗೊತ್ತು, ಅಲ್ಲಿ ಹೆಂಗಸೊಬ್ಬಳು ತನ್ನ ಹುಟ್ಟಿ ಬೆಳೆದ ಹಳ್ಳಿಯ ಕನಸ್ಸು ಕಾಣುತ್ತಿದ್ದಾಳೆ”. ಹಾಗೆ ಹೇಳುತ್ತಾ ತನ್ನ ಎರಡು ಕೈ ಕಟ್ಟಿ ಮಾತು ಮುಂದುವರೆಸಿದಳು “ಹಳ್ಳಿಯೊಂದರಲ್ಲಿ ಮನೆ ಕಟ್ಟುವ ಆಸೆ ಹೊಂದಿರುವ ಆದರೆ ನಗರವನ್ನು ಬಿಟ್ಟು ಹೋಗಲಾಗದ ಹೆಂಗಸೊಬ್ಬಳ ಕನಸ್ಸು ಅದು”. ನನಗೆ ಆ ಹೆಂಗಸನ್ನು  ಇನ್ನ್ಯಾವುದೋ ಕನಸ್ಸಿನಲ್ಲಿ  ಭೇಟಿಯಾದ ನೆನಪು. ನಾನಾಗಲೇ ಬಾಗಿಲು ಅರ್ಧ ತೆಗೆದಿದ್ದರಿಂದ ಏನೇ ಆದರೂ ಇನ್ನರ್ಧ ಘಂಟೆಯಲ್ಲಿ ನಾನು ಬೆಳಗಿನ ತಿಂಡಿ ತಿನ್ನುವ ಹೊತ್ತಿಗೆ ಹೋಗಲೇಬೇಕಾಗಿತ್ತು. ನಾನವಳಿಗೆ ಹೇಳಿದೆ “ಏನೇ ಆದರೂ, ನನಗೆ ಬೆಳಗ್ಗೆ ಎಚ್ಚರ ವಾಗಬೇಕೆಂದರೆ ಇಲ್ಲಿಂದ – ಈ ಕನಸಿನಿಂದ –  ಹೊರಡಲೇಬೇಕು”.  

ಹೊರಗಡೆ ಗಾಳಿ ಒಂದು ಕ್ಷಣ ಜೋರಾಗಿ ಸುಯ್ಯ್ ಗುಡುತ್ತಾ ಸದ್ದು ಮಾಡಿ, ನಂತರ ಸ್ತಬ್ದವಾಯಿತು, ಮತ್ತು ನಿದ್ರೆಯಲ್ಲಿದ್ದ ಯಾರೋ ಹಾಸಿಗೆಯ ಮೇಲೆ ಹೊರಳಾಡಿದಾಗ ಬರುವ  ಉಸಿರಾಟದ ಸದ್ದು ಕೇಳಿಸುತಿತ್ತು. ಆ ಬಯಲಿನಿಂದ ಬರುತ್ತಿದ್ದ  ಗಾಳಿಯ ಸುಳಿವಿರಲಿಲ್ಲ, ಹಸಿ ಮಣ್ಣಿನ ವಾಸನೆ ಕೂಡ ಕಾಣೆಯಾಗಿತ್ತು. “ನಾಳೆ ನಾನು ನಿನ್ನನ್ನು ಖಂಡಿತ ಗುರುತಿಸುತ್ತೇನೆ” ಎಂದೆ, “ರಸ್ತೆಯಲ್ಲಿ ‘ನೀಲಿ ನವಿಲಿನ ಕಣ್ಣುಗಳು’ ಎಂದು ಬರೆಯುತ್ತಿರುವ ಹೆಂಗಸು ಯಾರಾದರೂ ಕಂಡರೆ ನೀನೆೇ ಎನ್ನುವುದು ಖಾತ್ರಿ”. ಅವಳು ಅದು ಅಸಾಧ್ಯವೇನೊ ಎನ್ನುವ ದುಃಖಮಿಶ್ರಿತ ಶರಣಾಗತ ನಗುವಿನೊಂದಿಗೆ “ಹಾಗಿದ್ದರೂ, ನಾಳೆ ಎಚ್ಚರವಾದಾಗ ನೀನೇನನ್ನೂ ನೆನಪಿಡೋದಿಲ್ಲ” ಎಂದು ಆ ದೀಪದ ಮೇಲೆ ಕೈ ಇರಿಸಿದಳು. ಆ ಕ್ಷಣ ದುಃಖದ ಕಾರ್ಮೋಡ ಕವಿದು ಅವಳು ಅಸ್ಪಷ್ಟವಾಗಿ ಗೋಚರಿಸತೊಡಗಿದಳು “ರಾತ್ರಿ ಕಂಡ ಕನಸಿನ ಯಾವ ವಿವರಗಳೂ ಎಚ್ಚರವಾದ ಮೇಲೆ  ನೆನಪಿರದ ಮನುಷ್ಯ ನೀನೊಬ್ಬನೇ ಇರಬೇಕು “.


ಅನುವಾದ :  ಮಂಜುನಾಥ್‌ ಚಾರ್ವಾಕ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌. ವಿಶ್ವದ ಒಳ್ಳೆಯ ಕಥೆಗಳನ್ನು, ಬರಹಗಳನ್ನು ಕನ್ನಡಕ್ಕೆ ತರುವ ತವಕ ಹೊಂದಿರುವ ಮಂಜುನಾಥ್ ಒಳ್ಳೆಯ ಫೋಟೋಗ್ರಾಫರ್ ಕೂಡ.

 


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ instamojo.com/@Ruthumana

Download RUTHUMANA App here :

** Android *** : https://play.google.com/store/apps/details?id=ruthumana.app

** iphone ** : https://apps.apple.com/in/app/ruthumana/id1493346225

ಪ್ರತಿಕ್ರಿಯಿಸಿ