‘ಗೃಹಿಣಿ ಗೀತೆ’ : ಪ್ರತಿಭಾ ನಂದಕುಮಾರ್
ಚಿತ್ರ : ಸ್ನೇಹಜಯಾ ಕಾರಂತ
ಪೂರ್ಣ ಪದ್ಯ ಇಲ್ಲಿದೆ:
ಗೃಹಿಣಿ ಗೀತೆ
-ಪ್ರತಿಭಾ ನಂದಕುಮಾರ್
೧
ಮನೆಮಂದಿಗೆ ಎಲ್ಲಕ್ಕಿಂತ ಉತ್ತಮ ಹಲ್ಲುಪುಡಿ
ಆರಿಸಿ ಘಮ್ಮೆನ್ನುವ ಸೋಪಿನಲ್ಲಿ ಮಿಂದು
ಹುಬ್ಬೇರುವ ತಾಜಾ ಪೌಡರು ಚಿಮುಕಿಸಿ
ಶೇಕಡಾ ಇಪ್ಪತ್ತು ರಿಯಾಯಿತಿಯ ಸೀರೆ ಉಟ್ಟವಳೇ
ಸದಾ ನಗುನಗುತ್ತಾ ತುಪ್ಪದಲ್ಲಿ ಕರಿದು
ಪ್ರೆಷರ್ ಬಾಣಲೆಯಲ್ಲಿ ಹುರಿದು
ಎರಡೇ ನಿಮಿಷದಲ್ಲಿ ಸಿದ್ಧಪಡಿಸಿ
ಗೊಂಬೆಯಂತಹ ಮಕ್ಕಳಿಗೆ ಉಣಬಡಿಸುವವಳೇ
ಎಷ್ಟು ಕೊಟ್ಟರೇ ನಿನ್ನ ನಗೆಗೆ?
೨
ಕೆದರಿದ ಮುಂದಲೆಯಲ್ಲಿ
ಒರಳುಕಲ್ಲಿನ ಮುಂದೆ ತಿರುವುತ್ತ
ಕೂತವಳ ತುರುಬಲ್ಲಿ ಹೂವಿಲ್ಲ ಬರಿದು
ಕಿಟಕಿಯಾಚೆ ಉದುರಿ ಬೀಳುವ
ಮಲ್ಲಿಗೆಯ ಕಂಪು.
೩
ದಿಕ್ಕೆಟ್ಟ ಮನಸ್ಸಿನ ಗೊಂದಲ ಒರಸಿದ
ಬೆವರ ಹನಿ ಪುಟ್ಟ ಕೈಗಳ ಜಿಡ್ಡು ಕಲೆ
ಬಿಸಿ ಹಾಲು ಇಳಿಸುವಾಗ ತುಳುಕಿದ ನೊರೆ
ಸೊಂಟಕ್ಕೆ ಸಿಕ್ಕಿ ಉಂಟಾದ ಸುಕ್ಕು
ಕಳೆಯಲು ಬಂಡೆಕಲ್ಲಿಗೆ ಬಂದ
ಸತ್ತ ಹಾವಿನ ಸೆರಗು
ಏನು ನಿನ್ನ ಕೊರಗು?
೪
ಮೂಲ ದುಡಿತದ ಕೊನೆಗೆ
ಗಾಢ ನಿದ್ದೆ.
ನಡು ರಾತ್ರಿ ಕನವರಿಸುವ ಮಗು
ಯಾರೋ ಕೀಲಿ ಕೊಟ್ಟು
ಬೆನ್ನು ತಟ್ಟುವ ಕೈ
ಕನಸಿನಲ್ಲಿ ನಗು.
೫
ನಡುರಾತ್ರಿ ಮಗಳು
ಹುಡುಕುತ್ತ ಬಂದಾಗ
ಕವನ ರಚಿಸುತ್ತಿದ್ದ ಕೈ ಕ್ಷಣ ನಿಂತಿತು
ಮುದ್ದನ್ನೆತ್ತಿ ರಮಿಸಿ ತಟ್ಟಿ ಮಲಗಿಸಿತು
ಮತ್ತೆ ಬಂದು ಕೂತರೆ
ಕವನ ನಿದ್ದೆ ಹೋಗಿತ್ತು.
ಹುಟ್ಟೂರು ಉಡುಪಿ . ಸದ್ಯ ವೃತ್ತಿನಿಮಿತ್ತ ಬೆಂಗಳೂರಿನಲ್ಲಿದ್ದಾರೆ. ಕವಿತೆ ಮತ್ತು ಚಿತ್ರ ಬರೆಯುವುದೆಂದರೆ ಇಷ್ಟ.