ಗ್ವಿಲೆರ್ಮೊ ರೋಡ್ರಿಗಸ್ ಸಂದರ್ಶನ : ಎ.ಕೆ.ಆರ್ ಆಸಕ್ತಿ ಇದ್ದದ್ದು ಕಾವ್ಯವು ಬದುಕಿನ ಸಹಜ ಲಯಕ್ಕೆ ಹತ್ತಿರವಾದದ್ದು ಎಂಬುದನ್ನ ತೋರಿಸುವಲ್ಲಿ..

ಗ್ವಿಲೆರ್ಮೊ ರೋಡ್ರಿಗಸ್, ಇಂಡೋ-ಸ್ಪ್ಯಾನಿಷ್ ಸಾಂಸ್ಕೃತಿಕ ಸಂಬಂಧಗಳ ಉತ್ತೇಜನಕ್ಕೆ ಸಕ್ರಿಯವಾಗಿ ದುಡಿಯುತ್ತಿರುವವರು. ಸ್ಪೇನ್‍ನಲ್ಲಿನ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿರುವ , ಭಾರತ ಮತ್ತು ಸ್ಪೇನ್ ನಡುವಿನ ಸಾಂಸ್ಕೃತಿಕ ಸಂಬಂಧವನ್ನುಬಲಪಡಿಸುವ ನಿಟ್ಟಿನಲ್ಲಿ ಮಾದರಿಯಾಗಿರುವ Casa de la India ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ ನಿರ್ದೇಶಕರು. ಉತ್ಸಾಹಿ ಪ್ರವಾಸಿ Guillermo Rodriguez, ತಮ್ಮ ೯೦ ರ ದಶಕದ ಭಾರತ ಪ್ರವಾಸದಲ್ಲಿ ಭಾರತೀಯ ಕಾವ್ಯಲೋಕಕ್ಕೆ ರಾಮಾನುಜನ್ ರ ಅನುವಾದಗಳ ಮೂಲಕ ತೆರೆದುಕೊಂಡರು ಹಾಗು ಈ ಮೂಲಕವೇ ಕವಿ-ವಿದ್ವಾಂಸ ರಾಮಾನುಜನ್ ರ ಬದುಕು ಬರಹಗಳ ಬಗ್ಗೆ ವಿಶೇಷ ಆಸಕ್ತಿಯನ್ನು ರೂಪಿಸಿಕೊಂಡರು. ಎ. ಕೆ. ರಾಮಾನುಜನ್ ಕಾವ್ಯ ಬದುಕಿನ ಕುರಿತಾದ “When Mirrors Are Windows: A View of A.K. Ramanujan’s Poetics” ಪುಸ್ತಕದ ಲೇಖಕರು ಮತ್ತು ಕೃಷ್ಣ ರಾಮಾನುಜನ್ ಜೊತೆಗೂಡಿ ಗ್ವಿಲೆರ್ಮೊ ರೋಡ್ರಿಗಸ್ ಸಂಪಾದಿಸಿರುವ “Journeys: A POET’S DIARY” ಪುಸ್ತಕ ರಾಮಾನುಜನ್ ಅವರ ವೈಯಕ್ತಿಕ ದಿನಚರಿಗಳು ಮತ್ತು ಪತ್ರಿಕಾ ಬರಹಗಳಿಗೆ ಪ್ರವೇಶವನ್ನು ನೀಡುತ್ತದೆ . ಋತುಮಾನಕ್ಕಾಗಿ ಸಂವರ್ತ ಸಾಹಿಲ್ ಗ್ವಿಲೆರ್ಮೊ ರೋಡ್ರಿಗಸ್ ಅವರನ್ನು ಸಂದರ್ಶಿಸಿದ್ದಾರೆ.

೧. ಸಂವರ್ತ: ನನ್ನ ಮೊದಲ ಪ್ರಶ್ನೆ ಅಥವಾ ಬೇಕಿದ್ದರೆ ಮನವಿ ಎಂದೇ ಕರೆಯೋಣ. ಈ ಎ.ಕೆ.ಆರ್ ಅವರ ಸಮಗ್ರ ಬದುಕನ್ನು ಒಂದು ಪ್ರತಿಮೆ ಅಥವಾ ರೂಪಕದ ಮೂಲಕ ಕಟ್ಟಿಕೊಡಬಹುದೇ? ಮತ್ತೂ ಆ ಪ್ರತಿಮೆ/ರೂಪಕದ ಮೂಲಕ ಹೊಳೆಯುವ ಎ.ಕೆ.ಆರ್ ಅವರ ಹಲವು ಆಯಾಮಗಳನ್ನು ವಿವರಿಸಬಹುದೇ?

ರೋಡ್ರಗಿಸ್: ಎ.ಕೆ.ಆರ್ ಬದುಕು ಮತ್ತು ಕಾವ್ಯದುದ್ದಕ್ಕೂ ಹಲವು ನಿರ್ಧಾರಕ ಅನ್ನಬಹುದಾದ ಪ್ರತಿಮೆಗಳ ಸಾಲೇ ಇದೆ. ಮತ್ತದು ಹೆಚ್ಚಾಗಿ ಪ್ರಕೃತಿಯೊಡನೆ ನಿಕಟವಾದ ಸಂಬಂಧ ಹೊಂದಿದೆ. ಮರ, ಕಿತ್ತಳೆ ಹಣ್ಣು, ಹಾವು ಹೀಗೆ. ಆದರೆ, ಇವೆಲ್ಲದಕ್ಕಿಂತ ಹೆಚ್ಚಾಗಿ ಕಿಟಕಿ ಗಾಜು ಎ.ಕೆ.ಆರ್ ಕಾವ್ಯ ಮತ್ತು ಅಸ್ತೆಟಿಕ್ಸ್ ನಲ್ಲಿ ಬರುವ ಬಹು ನಿಗೂಢ ಮತ್ತು ಪ್ರಬಲವಾದ ಪ್ರತಿಮೆ ಅಂತ ನನಗನಿಸುತ್ತೆ.
ಅವರೊಮ್ಮೆ ತಮ್ಮ ಡೈರಿಯಲ್ಲಿ ಹೀಗೆ ಗೀಚಿದ್ದರು ” ಗಾಜು ಒಳ್ಳೆಯದು..ಹೊರಗಿನವನನ್ನು ಅದು ಪ್ರತಿಬಿಂಬಿಸುತ್ತದೆ ಮತ್ತು ಒಳಗಿನವನನ್ನು ಪುನರಾವರ್ತಿಸುತ್ತದೆ.
ನಾವು ಎಲ್ಲಿ ನಿಂತಿದ್ದೇವೆ ಮತ್ತು ಬೆಳಕು ಗಾಜನ್ನು ಹೇಗೆ ಹಾದು ಹೋಗುತ್ತಿದೆ ಎಂಬುದರ ಮೇಲೆ ನೀವು ನಿಮ್ಮ ಪ್ರತಿಬಿಂಬವನ್ನೂ ಅಥವಾ ಕಿಟಕಿಯ ಮೂಲಕ ಹೊರ ಜಗತ್ತನ್ನೂ ಕಾಣುವಿರಿ. ಅದೇ ಆಚೆಗೆ ನಿಂತವನಿಗೆ ಗಾಜಿನ ಹಿಂದಿನ ನೀವು ಕಾಣಲಾರಿರಿ ಬದಲಿಗೆ ಆತ ತನ್ನ ಪ್ರತಿಬಿಂಬವನ್ನಷ್ಟೇ ಅದರಲ್ಲಿ ಕಾಣುತ್ತಾನೆ. ಹಾಗಾಗಿ ಕಿಟಕಿಯ ಗಾಜು ಮನುಷ್ಯನೊಳಗಿನ ಸಂಕೀರ್ಣತೆಯ ರೂಪಕವಾಗುತ್ತದೆ ಹಾಗೂ ಒಳಗಿನ ಮತ್ತು ಹೊರಗಿನ ’ನೋಟ; ವನ್ನು ಮತ್ತದರ ಪರಸ್ಪರ ಸಂಬಂಧವನ್ನು ತೆರೆದಿಡುತ್ತದೆ. ಗಾಜು ಸೂಕ್ಷ್ಮವಾದದ್ದು ಅಂತೆಯೇ ತಾನೂ ಕೂಡ. ಎರಡೂ ಒಡೆದು ತುಂಡುಗಳಾಗಬಹುದು.
ರಾಮಾನುಜಮ್ ಅವರು ಬಳಸಿರುವ ಗಾಜಿನ ರೂಪಕಗಳು ಅವರು ಜಗತ್ತನ್ನು ಕಲೆದೊಸ್ಕೊಪಿಚ್ ರೀತಿ ನೋಡುವ ಮತ್ತು ಸತ್ಯ ಯಾವತ್ತೂ ಸಣ್ಣ ಸಣ್ಣ ತುಣುಕುಗಳಲ್ಲಿರುತ್ತದೆ ಎಂಬ ಅವರ ನಂಬಿಕೆಗೂ ಸಾಕ್ಷಿಯಾಗಿದೆ. ಇವರ ಕಾವ್ಯದಲ್ಲಿ ಹೇರಳವಾಗಿ ಕನ್ನಡಿ ಮತ್ತು ಗಾಜಿನ ಬಳಕೆಯಿದೆ. ಗ್ರಹಿಕೆ, ದೃಷ್ಟಿಕೋನ ಮತ್ತು ನೋಟದ ಪರಿಣಾಮ ಈ ಮೂರನ್ನೂ ಇಟ್ಟುಕೊಂಡು ಹೇಗೆ ನಾವು ಒಂದು ಪ್ರತಿಮೆಯನ್ನ ನಮ್ಮೊಳಗೆ ಕಟ್ಟಿಕೊಳ್ಳಬಹುದು ಮತ್ತು ಹೀಗೆ ಕಟ್ಟಿಕೊಳ್ಳುವುದರ ಮೂಲಕ ಅರ್ಥದ ಕೇಂದ್ರದಿಂದ ಹೇಗೆ ಅರ್ಥವನ್ನು, ಪ್ರತಿಬಿಂಬವನ್ನೂ ವಿಸ್ತರಿಸಿಕೊಳ್ಳಬಹುದು .. ಪ್ರತಿಫಲನ ಮತ್ತು ಸ್ವ ಪ್ರತಿಫಲನ

೨. ಸಂವರ್ತ: ಎ.ಕೆ ಆರ್ ಒಬ್ಬ ಬರಹಗಾರ ಮತ್ತು ವಿಚಾರವಾದಿಯಾದ ಬಗೆಯ ಕುರಿತು ಬೆಳಕು ಚೆಲ್ಲುವಿರಾ? ಈ ಆಗುವ ಪ್ರಕ್ರಿಯೆಯಲ್ಲಿ ಅವರ ಬದುಕಿನ ಮಹತ್ವದ ಘಟ್ಟಗಳನ್ನು ಗುರುತಿಸಬಹುದೇ? ಅಂದರೆ ಅವರ ಸೃಜನಶೀಲ ಮತ್ತು ಬೌದ್ದಿಕ ಬೆಳವಣಿಗೆಯ ಹಾದಿಯಲ್ಲಿ..

ರೊಡ್ರಗೀಸ್: ರಾಮಾನುಜನ್ ಬದುಕಿನ ಹಲವು ಮಹತ್ವದ ಘಟನೆಗಳು ಅವರ ಬೌದ್ದಿಕ ಬೆಳವಣಿಗೆ ಮತ್ತು ಬರಹಗಾರನನ್ನಾಗಿ ರೂಪಿಸಿದವು . ಉದಾಹರಣೆಗೆ ೧೯೪೩ ರಲ್ಲಿ , ಹದಿನಾಲ್ಕನೇ ವಯಸಿನಲ್ಲಿ ಇತಿಹಾಸ ಪರೀಕ್ಷೆಯಲ್ಲಿ ಫೇಲಾದದ್ದೇ ಅವರು ಕನ್ನಡದಲ್ಲಿ ಬರೆಯಲು ತೊಡಗಿದರು. ಯೌವ್ವನದಲ್ಲಿ ತನ್ನ ಜನಿವಾರವನ್ನು ಕಿತ್ತೊಗೆಯುವ ಮೂಲಕ ಬ್ರಾಹ್ಮಣ ಸಂಪ್ರದಾಯದಿಂದ ದೂರ ಸರಿದರು. ಬದಲಿಗೆ ವಿಚಾರವಾದ, ಅಸ್ತಿತ್ವವಾದ ಮತ್ತಿತರ ತತ್ವಶಾಸ್ತ್ರದ ಕಡೆ ಆಸಕ್ತರಾದರು. ಜೊತೆಗೆ ಬ್ರಾಹ್ಮಣ ವಿರೋಧಿಯಾಗಿದ್ದ ವೀರಶೈವ ಭಕ್ತಿ ಕಾವ್ಯವನ್ನ ಅಪ್ಪಿಕೊಂಡರು. ಮುಂದೆ ೧೯೫೦ ರಲ್ಲಿ ಅವರು ಬೆಳಗಾವಿಯಲ್ಲಿ ಇಂಗ್ಲೀಶ್ ಅಧ್ಯಾಪಕರಾಗಿದ್ದಾಗ ಅವರ ಆಸಕ್ತಿ ಜನಪದದತ್ತ ಹರಿಯಿತು. ಅಲ್ಲಿ ಮೌಖಿಕ ಜನಪದ ಕತೆಗಳನ್ನು ಮತ್ತು ಸ್ತ್ರೀ ನಿರೂಪಣೆಗಳನ್ನ ಸಂಗ್ರಹಿಸಿದರು. ಇದು ಸಹ ಅವರ ಬದುಕಿನ ಫಲಪ್ರದ ಸಮಯವಾಗಿತ್ತು. ಇಂಗ್ಲೀಶ್ ಭಾಷೆಯಲ್ಲಿ ಅವರು ಕವಿಯಾಗಿ ಬೆಳೆಯುತ್ತಿದ್ದರು. ೧೯೫೮ ರಲ್ಲಿ ಇಂಗ್ಲೀಷ್ ಕಲಿಸುವ ಕೆಲಸದಿಂದ ಬೆಸತ್ತು ಪುಣೆಗೆ ಭಾಷಾಶಾಸ್ತ್ರ ಕಲಿಸಲು ತೆರಳಿದರು. ಅಲ್ಲಿಂದ ೧೯೫೯ರಲ್ಲಿ ಅಮೆರಿಕೆಯಲ್ಲಿ ವಿದ್ವಾಂಸರಾಗಿ ಪ್ರಕಾಶಿಸಿದರು. ಅವರು ಅಮೆರಿಕೆಗೆ ಹೋಗಿದ್ದು, ಮತ್ತು ರಾಮಾನುಜನ್ ಅವರ ಬೇರೆ ಬೇರೆ ಕ್ಷೇತ್ರಗಳ ನಡುವೆ, ಸಂಪ್ರದಾಯ-ಸಂಸ್ಕೃತಿಗಳ ನಡುವಿನ ಅತ್ತಿಂದಿತ್ತ ಪಯಣ ಅವರ ಬಹು ಸಾಂಸ್ಕೃತಿಕ ಬೌದ್ಧಿಕತೆಯನ್ನು ರೂಪಿಸಿತು ಮತ್ತು ಸೃಜನಶೀಲ ಹಸಿವನ್ನ ತಣಿಸಿತು.

೩. ಅವರ ಸಣ್ಣ ಪ್ರಬಂಧದ ೩೦೦ ರಾಮಾಯಾಣ ದ  ಶೀರ್ಷಿಕೆ ಯ ಹಾಗೆ , ೩೦೦ ರಾಮಾನುಜರು ಇದ್ದರು ಎನ್ನಬಹುದೇ ? ೩೦೦  ಅನ್ನುವುದು ಉತ್ಪ್ರೇಕ್ಷೆಯ ಹಾಗೆ ತೋರಬಹುದು . ಆದರೆ ರಾಮಾನುಜನ್ ಕವಿಯಾಗಿ , ಆಂಗ್ಲಬಾಷೆಯಿಂದ ಕನ್ನಡಕ್ಕೆ ಅನುವಾದಕರಾಗಿ , ಕನ್ನಡದಿಂದ ಆಂಗ್ಲ ಭಾಷೆಗೆ ಅನುವಾದಕರಾಗಿ , ಪ್ರಬಂಧ ಕಾರರಾಗಿ , ಮಾನವ ಶಾಸ್ತ್ರಜ್ಞನಾಗಿ , ಕನ್ನಡ ಲೇಖಕನಾಗಿ , ಆಂಗ್ಲ ಭಾಷ ಲೇಖಕನಾಗಿ , ಕನ್ನಡ ಓದುಗನಾಗಿ , ಆಂಗ್ಲ ಓದುಗನಾಗಿ , ತಮಿಳ್ ಓದುಗನಾಗಿ , ಸಂಶೋಧಕನಾಗಿ , ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು . ಇಂತಹ ವೈವಿದ್ಯಮಯವಾದ ಕ್ಷೇತ್ರಗಳಲ್ಲಿ ಕೆಲಸಮಾಡಿದ ರಾಮಾನುಜರ ಮೇಲೆ ಒಂದು   ಕ್ಷೇತ್ರದ ಪ್ರಭಾವ  ಇನ್ನೊಂದರ ಮೇಲೆ ಎಷ್ಟರ ಮಟ್ಟಿಗೆ ಆಗಿತ್ತು ? ಒಬ್ಬ ಸಂದರ್ಶಕನಾಗಿ , ನಮ್ಮ (ಕಲ್ಪಿತ ) ಓದುಗರ ಪರವಾಗಿ  ಈ ವಿಷಯದ  ಮೇಲೆ ವಿವರವಾಗಿ, ಉದಾಹರಣೆಗಳೊಂದಿಗೆ ಮಾತನಾಡಿ ಎಂದು ಕೇಳಿಕೊಳ್ಳುತ್ತೇನೆ.

ರಾಮಾನುಜನ್ ರ ಜೀವನ ಮತ್ತು ಕಾರ್ಯ ಕ್ಷೇತ್ರಗಳು ಬಹುಸ್ತರಗಳಿಂದ ಕೂಡಿದ್ದವು . ಮೈಸೂರಿನಿಂದ ಚಿಕಾಗೊ ಗೆ ಹೋಗಿ ನೆಲೆಸಿದಾಗ , ಮತ್ತು ವಿಶ್ವಾದ್ಯಂತ ಹೋದಲ್ಲೆಲ್ಲ ಅವರು , ಒಬ್ಬ ಕಲಾವಿದನಾಗಿ ಮತ್ತು ವಿದ್ವಾಂಸರಾಗಿ , ತಮ್ಮ ಈ ಬಹುಶಿಸ್ತೀಯ ಮನೋಧರ್ಮವನ್ನು ಬಿಟ್ಟುಕೊಟ್ಟಿರಲಿಲ್ಲ .   ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಅವರ ವೃತ್ತಿಯ ಸಂಧರ್ಭದಲ್ಲಿ  ಈ ವೈವಿಧ್ಯಮಯ ಆಸಕ್ತಿಗಳು ಚೆನ್ನಾಗಿ ಆರೈಕೆಗೊಂಡು ಮತ್ತಷ್ಟು ಪಟ್ಟು ಹೆಚ್ಚು ಪುಷ್ಟಿಗೊಂಡವು. ಒಮ್ಮೆ ಚಿದಾನಂದ ದಾಸ್ ಗುಪ್ತ ರವರು ೧೯೮೩  ನಡೆಸಿದ ಸಂದರ್ಶನದಲ್ಲಿ ಈ ರೀತಿ ಹೇಳಿದ್ದರು : “ನಾನು ನನ್ನ ಯೌವ್ವನದ ದಿನಗಳಲ್ಲಿದ್ದ ಬಹುಮುಖವಾದ ಆಸಕ್ತಿಗಳನ್ನು ಇನ್ನೂ ಉಳಿಸಿಕೊಂಡಿರುವುದು ನಿಜಕ್ಕೂ ನನ್ನ ಅದೃಷ್ಟ ಎಂದು ನಂಬಿದ್ದೇನೆ, ಏಕೆಂದರೆ  ಈ ಬಗೆಯ ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ  ಜಾಗದಲ್ಲಿ ನಾನು ಇದ್ದೇನೆ. ಈ ರೀತಿಯ ಆಸಕ್ತಿಗಳು ನನ್ನ ಮುಖ್ಯ ಕ್ಷೇತ್ರದ ಹೊರಗಿನ   ಕೇವಲ ಹವ್ಯಾಸವಾಗಿಯಷ್ಟೇ ನೋಡದಿರುವುದು ನಿಜಕ್ಕೂ ಸಂತೋಷದ ವಿಷಯ  “. ರಾಮಾನುಜನ್ ರ ಕಲಾತ್ಮಕ ಮತ್ತು ಬೌದ್ಧಿಕತೆಯಲ್ಲಿದ್ದ ಈ “ಬಹುಮುಖೀಯತೆ ” , ಅವರೇ ತಮ್ಮ ಪ್ರಬಂಧಗಳಲ್ಲಿ ಹೇಳಿರುವ ಹಾಗೆ , ಭಾರತೀಯ ಸಾಹಿತ್ಯ ಕಲಾಕೃತಿಗಳ ಬಹು ಮುಖ್ಯ ಲಕ್ಷಣ. ರಾಮಾನುಜನ್ ರು ಅಧ್ಯಯನ ಮಾಡಿದ ಬಹು ಸಂಸ್ಕೃತಿಗಳು , ಭಾಷೆಗಳು ಮತ್ತು ಕ್ಷೇತ್ರಗಳು , ಅವರೊಳಗೆ ಒಂದು ಕ್ರಿಯಾಶೀಲ ಒಡನಾಟವನ್ನು ಸೃಷ್ಟಿಸಿ  ಅವರ ವೈಯಕ್ತಿಕ ಆಸಕ್ತಿಗಳ ಮೇಲೆ ಮತ್ತು ಅವರ ವೈವಿಧ್ಯಮಯ ಸಂಶೋಧನೆಯ ಮೇಲೆ, ಕವಿತೆಗಳ ಮಾತು ಅನುವಾದಗಳ ಮೇಲೆ  ಪರಿಣಾಮ ಬೀರಿತ್ತು . ಮತ್ತು ಅವರ ಆಸಕ್ತಿಗಳು ಯಾವಾಗಲೂ ಶಾಸ್ತ್ರೀಯ ಕಲಾ ಪ್ರಕಾರ ಮತ್ತು ಜನ ಸಮೂಹಗಳ ನಡುವೆ  ಪ್ರಚಲಿತದಲ್ಲಿರುವ ಜಾನಪದ ಕಲಾ ಪ್ರಕಾರಗಳ ಮತ್ತು ನಾಣ್ನುಡಿಗಳ ಮಧ್ಯೆ ಸಮತೋಲನ ಕಾಯ್ದುಕೊಳ್ಳುತ್ತಿದ್ದರು . ಈ ಹಲವು ವಾಸ್ತವಗಳು ಸ್ವತಂತ್ರ ವಾಗಿ ಅಸ್ಥಿತ್ವದಲ್ಲಿರದೆ , ಒಂದಕ್ಕೊಂದು ಪೂರಕವಾಗಿ-ಅವಲಂಬಿತವಾಗಿ “ಒಂದೇ” ಆಗಿದ್ದವು.

೪. ಸಂವರ್ತ: ರಾಮಾನುಜನ್ ಬಗೆಯ- ಅವರ ಅವ್ಯಕ್ತ ಆಲೋಚನೆಗಳೂ ಸೇರಿದಂತೆ- ಕಾವ್ಯ ಕುಸುರಿ ಇದೆಯೇ? ಇದ್ದರೆ ಅದನ್ನ ಹೇಗೆ ಅರ್ಥೈಸುವುದು?

ರಾಮಾನುಜನ್ ಅವರಿಗೆ ಬರವಣಿಗೆ, ನಿಗದಿತ ಅವಧಿಯಲ್ಲಿ ಮತ್ತೆ ಮತ್ತೆ ಪುನರಾವರ್ತೆನೆಗಳ್ಳುವ ಹಾಗು ಯಾವ ನಿರ್ಧಿಷ್ಟ ಕೊನೆಯೂ ಇಲ್ಲದ ಪ್ರಕ್ರಿಯೆ. ಕಾವ್ಯದಲ್ಲಿ ಯಾವ ಪೂರ್ವ ನಿರ್ಧಾರಿತ ತೀರ್ಮಾನಗಳಿರುವುದಿಲ್ಲ ; ವೆಲರಿ ಹೇಳುವ ಹಾಗೆ, ರಾಮಾನುಜನ್ ರಿಗೆ ಕಾವ್ಯ “ಇನ್ನು ಸಾಕು “ ಎಂದು ನಿಲ್ಲಿಸಿಬಿಟ್ಟದ್ದು ಮಾತ್ರ. ಅವರ ಪ್ರಕಾರ, ಕಾವ್ಯ ಪೂರ್ವ ಸಿದ್ಧತೆಯಿಂದ ಮೊದಲೇ ನಿಶ್ಚಯಿಸಿದಂತೆ ಬರೆಯಲು ತೊಡಗುವಂಥದಲ್ಲ. ಭಾಷಾ ಶಾಸ್ತ್ರವನ್ನು ಶಿಸ್ತಿನಿಂದ ಅಧ್ಯಯನ ಮಾಡಿದ ರಾಮಾನುಜನ್ನ ರಿಗೆ ಭಾಷೆಯ ಬಳಕೆಯ ಬಗ್ಗೆ ಅಪಾರ ಜಾಗರೂಕತೆ. ಅವರಿಗೆ ಒಮ್ಮೆ ಬರೆದುದನ್ನ ಮತ್ತೆ ಬರೆಯುವುದು, ತಿದ್ದುವುದು, ಮತ್ತೆ ಮತ್ತೆ ಪರಿಷ್ಕರಿಸಿದಾಗ ಮಾತ್ರ ಕಾವ್ಯ ಸಾಧ್ಯವಾಗುವ ಬಗ್ಗೆ ನಂಬಿಕೆ, ನೀರಿನಲ್ಲಿ ಚೆಹರೆಯೊಂದು ಮುಖದ ಆಕಾರದಂತೆ ಸ್ಪಷ್ಟವಾಗುವ ಹಾಗೆ. ಅವರೇ ವಿವರಿಸಿದಂತೆ ಕವಿತೆಯ ಹುಟ್ಟು ಒಂದು ಕದಲಿಕೆಯಲ್ಲಿ. ಆದರೆ ಜಾಗರೂಕತೆಯಿಂದ ಪೋಷಿಸಿ, ಆರೈಕೆ ಮಾಡಿ, ಒಪ್ಪಗೊಳಿಸದೇ ಹೋದರೆ ಈ ಕದಲಿಕೆ ಕಳೆದು ಹೋಗುತ್ತದೆ, ಹಾಳಾಗಿ ಹೋಗುತ್ತದೆ. ಉದಾಹರಣೆಯಾಗಿ ಈ ತಿಳುವಳಿಕೆಯನ್ನು ನಾವು ಅವರ ‘Children, Dreams, Theorems’ ಪದ್ಯದಲ್ಲಿ ಗುರುತಿಸಬಹುದು.

೫. ಸಂವರ್ತ: ಬರವಣಿಗೆಯಲ್ಲಿ ತೊಡಗಿರುವಾಗ ರಾಮಾನುಜನ್ ರನ್ನು ಕಾಡುತ್ತಿದ್ದ ಮತ್ತೆ ಬರೆಯಲಾರೆನೆಂಬ ಭಯ ಯಾವ ಬಗೆಯದ್ದು.. ಇದು ಒಟ್ಟಾರೆ ರಾಮಾನುಜನ್ ಎಂಬ ಬರಹಗಾರನ ಕುರಿತು ಏನನ್ನು ಹೇಳುತ್ತದೆ?

ರೊಡ್ರಗಿಸ್: ರಾಮಾನುಜನ್ ಧೀರ್ಘಕಾಲದವರೆಗೆ ತೀವ್ರವಾದ ಅಸ್ತಿತ್ವದ ಆತಂಕದಿಂದ ಬಳಲುತ್ತಿದ್ದರು. ಸದಾ ಕೇಂದ್ರಕ್ಕಾಗಿ … ಮತ್ತೆ ಮತ್ತೆ ಮರುಕಳಿಸುವ ಭಯ ಮತ್ತು ವೈಯಕ್ತಿಕ ಖಿನ್ನತೆ ಯ ಪರಿಹಾರವನ್ನವರು ಮನಶಾಸ್ತ್ರದಲ್ಲಿ ಹುಡುಕುತ್ತಿದ್ದರು. ಕಾವ್ಯ ರಚನೆ ಅವರಿಗೆ ತನ್ನನ್ನು ತಾನು ಪಡೆದುಕೊಳ್ಳುವ ಮಾರ್ಗವಾಗಿತ್ತು. ತನ್ನನ್ನು ಕಾಡುತ್ತಿದ್ದ ಅಸ್ತಿತ್ವವಾದಿ ಆತಂಕಗಳಿಗೆ ಕಾವ್ಯ ಏಕಕಾಲಕ್ಕೆ ಪರಿಹಾರವೂ , ಸೃಜನಶೀಲವಾಗಿ ಹೊರ ಹಾಕುವ ಮಾರ್ಗವೂ ಆಗಿತ್ತು. ಅವರ ಮೊದ ಮೊದಲ ಕವಿತೆಗಳಲ್ಲೂ (ದ ಸ್ತ್ರೈಡರ್, ೧೯೬೫) ಈ ತಲ್ಲಣಗಳನ್ನು ಕಾಣಬಹುದು. ತನ್ನ ತಲೆಯ ತುಂಬ ಅನ್ಯ ಕವಿಗಳ ಪ್ರತಿಮೆ, ನುಡಿಗಟ್ಟುಗಳನ್ನು ತುಂಬಿಕೊಂಡಿರುವ ಸ್ವಪ್ರಜ್ನೆಯುಳ್ಳ ಕವಿಯೊಳಗೆ ಅದನ್ನು ತನ್ನದಾಗಿಸಲಾರದ ಭಯ, ಆತಂಕ. ಈ ಆತಂಕದ ಜೊತೆಗೆ ಮೂಲಸ್ವರೂಪದ (ಕಾಮ, ಸಾವು, ಬೀಳುವ ಇವೆ ಮುಂತಾದ) ಭಯ ಜೀವನದುದ್ದಕ್ಕೂ ರಾಮಾನುಜನ್ ರನ್ನ ಕಾಡಿದವು.

೬. ಸಂವರ್ತ: ರಾಮಾನುಜನ್ ಗೆ ಈ ಜಗತ್ತಿನಲ್ಲಿ ಸಹಜ ಕೌತುಕಗಳ ಬಗ್ಗೆ ಅಚ್ಚರಿಯ ಮೆಚ್ಚುಗೆ ಇತ್ತೆನಿಸುತ್ತದೆ. ಇದು ಅವರ ಎಲ್ಲ ಕೃತಿಗಳಲ್ಲಿ ಒಂದು ಆಶಯವಾಗಿ ಬರುವುದನ್ನ ಕಾಣಬಹುದಲ್ಲವೇ? ಅವರು ಈ ಸಹಜ ಕೌತುಕಗಳನ್ನು ಹೇಗೆ ಗುರುತಿಸಿ ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಿಸುತ್ತಾರೆ..?

ರೊಡ್ರಗಿಸ್: ಈ ವಿಷಯದ ಕುರಿತು ನಾನು ನನ್ನ ’When Mirrors are Windows’ ಪುಸ್ತಕದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದೇನೆ. ಎ.ಕೆ.ಆರ್ ಕಾವ್ಯಕ್ಕೆ ತತ್ವಮಿಮಾಂಸೆಯ ಕಲಾತ್ಮಕ ಬೆಡಗಿನ ಅರಿವಿದೆ. ಹೀಗಿದ್ದೂ ಕಾವ್ಯ ಹೇಗೆ ದೈವಿಕ ಸ್ಪೂರ್ತಿಗಿಂತ ಹೊರತಾದದ್ದು , ಬದುಕಿನ ಸಹಜ ಲಯಕ್ಕೆ ಹತ್ತಿರವಾದದ್ದು ಎಂಬುದನ್ನ ತೋರಿಸುವಲ್ಲಿ ರಾಮಾನುಜನ್ ಗೆ ಹೆಚ್ಚಿನ ಆಸಕ್ತಿಯಿದೆ. ಅವರದ್ದು ಕಲೆ ಮತ್ತು ಬದುಕು ಎರಡರಲ್ಲೂ ಪ್ರಯೋಗಶೀಲ ಮನಸ್ಸು. ಹಾಗಾಗಿ ಕಾವ್ಯದಲ್ಲಿ ಬೆಡಗು ಅವರಿಗೆ ಶ್ರೇಷ್ಟತೆಯ ಮಾನದಂಡವಾಗಿರಲಿಲ್ಲ. ರಾಮಾನುಜನ್ ಕಲೆಯನ್ನು ವಿಶೇಷವಾದ ಸಂಭವ- ಎಲ್ಲೂ, ಹೇಗೂ ಸಂಭವಿಸಬಹುದಾದದ್ದು ಎಂದು ತಿಳಿದಿದ್ದರು. ಅದೆಷ್ಟು ಸಹಜವೆಂದರೆ ಮರವೊಂದರಲ್ಲಿ ಎಲೆಗಳಿರಬಹುದು, ಇಲ್ಲದಿರಬಹುದು ಎಂಬಷ್ಟೇ. (ಕೀಟ್ಸ್ ನ ಮಾತು). ಕಾವ್ಯ ಸ್ಪೂರ್ತಿ ಅವರಿಗೆ ವಿರೋಧಾಭಾಸದ ಸಂಗತಿಯಾಗಿತ್ತು ಮತ್ತು ಸಹಜ ಕೌತುಕದ ವಿಷಯವಾಗಿತ್ತು. “ಕಾವ್ಯ ತನ್ನಷ್ಟಕ್ಕೆ ಹುಟ್ಟುವಂತಹದ್ದು. ಹಾಗಾಗಿ ತನ್ನನ್ನು ತಾನು ಕಾಪಾಡಿಕೊಳ್ಳಬೇಕು” ಅಂತ ೧೯೮೦ ರಲ್ಲಿ ಅವರು ಮುರಳಿ ವೆಂಕಟೇಶ್ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ” ಕಾವ್ಯ ನಿಗೂಢವಾದದ್ದು. ಆದರೆ ನಿಗೂಢತೆಯೂ ಅಸಾಮಾನ್ಯವೇನಲ್ಲ. ಆದರೇ ನಾವೇ ಕಾವ್ಯವನ್ನ ಪವಾಡವೇನೋ ಎಂಬಂತೆ ಮಾಡಿಬಿಡುತ್ತೇವೆ.”

ಕವಿಗೆ ಸಮರ್ಪಕವಾದ ಪದಗಳು ಮತ್ತದಕ್ಕೆ ಪೂರಕವಾದ ಪ್ರತಿಮೆ ಸಿಕ್ಕಾಗಲೂ ಕಾವ್ಯ ಕಲ್ಪನೆಯ ಮೂಲ ಆತನಿಗೆ ನಿಗೂಢವಾಗಿಯೇ ಇರುತ್ತದೆ. ಹಾಗಾಗಿ ಅವರ ಹಲವಾರು ಕವಿತೆಗಳು- ಮುಖ್ಯವಾಗಿ ಬದುಕಿನ ಕೊನೆಯ ಘಟ್ಟದಲ್ಲಿ ಬರೆದ ಕಾವ್ಯಗಳು (ಬ್ಲಾಕ್ ಹೆನ್- ೧೯೯೫) ಈ ’ನಿಗೂಢತೆ’ ಯ ಕುರಿತೇ ಮಾತನಾಡುತ್ತವೆ ಹಾಗೂ ಕಾವ್ಯ ರಚನೆಯ ಕುರಿತಾದ ಅಭಿಮತವನ್ನೆ ಪ್ರಶ್ನಿಸುತ್ತವೆ. ರಾಮಾನುಜನ್ ರ ಕಾವ್ಯಗಳಲ್ಲಿ ಈ ಸಹಜ ಕೌತುಕ ಹೇಗೆ ಗುಪ್ತಗಾಮಿನಿಯಾಗಿ ಹರಿದಿದೆ ಎಂಬುದನ್ನ ಅವರ ರಚನೆಗಳ ನಡುವಿನ ಅಮೂರ್ತತೆಯನ್ನ ಅರ್ಥಮಾಡಿಕೊಂಡೇ ತಿಳಿಯಬೇಕು.

 


ಸಂವರ್ತ ಸಾಹಿಲ್

ಕವಿತೆ, ಸಿನೆಮಾ, ಸಾಮಾಜಿಕ ಚಿಂತನೆ-ಹೋರಾಟ ಹೀಗೆ ಹಲವಾರು ರಂಗಗಳಲ್ಲಿ ತೊಡಗಿಕೊಂಡಿರುವ ಸಂವರ್ತ ಸಾಹಿಲ್ ಅವರದ್ದು ಬಹುಮುಖ ಪ್ರತಿಭೆ. ‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ  ಅವರ ‘ಬಾಳ್ಕಟ್ಟೆ’ ಅಂಕಣ ಬರಹಗಳು ಇದೀಗ ಪುಸ್ತಕ ರೂಪದಲ್ಲಿ ಹೊರಬಂದಿವೆ. ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟವಾದ ಕವಿತೆಗಳನ್ನು ‘ರೂಪರೂಪಗಳನು ದಾಟಿ’ ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿಸಿದ್ದಾರೆ. ಮರಾಠಿ ದಲಿತ ಯುವ ಕವಿ ಯೋಗೇಶ್ ಮೈತ್ರೇಯ ಅವರ ಆಯ್ದ ಕವನಗಳನ್ನು “ಓದುವುದೆಂದರೆ ಸ್ಪರ್ಶಿಸಿದಂತೆ” ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿತ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ .

One comment to “ಗ್ವಿಲೆರ್ಮೊ ರೋಡ್ರಿಗಸ್ ಸಂದರ್ಶನ : ಎ.ಕೆ.ಆರ್ ಆಸಕ್ತಿ ಇದ್ದದ್ದು ಕಾವ್ಯವು ಬದುಕಿನ ಸಹಜ ಲಯಕ್ಕೆ ಹತ್ತಿರವಾದದ್ದು ಎಂಬುದನ್ನ ತೋರಿಸುವಲ್ಲಿ..”
  1. Pingback: “Poetry for him is an Ordinary Mystery.” : Guillermo Rodriguez on A.K. Ramanjuan (Interview) | Crazy Mind's Eye

ಪ್ರತಿಕ್ರಿಯಿಸಿ