ಷಾರ್ಕ್‍ನ ಬಾಯಿಂದ – ೧

ನೊಬೆಲ್ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಮತ್ತುಎಸ್ತರ್ ಡುಫ್ಲೋ ನಮ್ಮ ನಡುವಿನ ಅಪರೂಪದ ಅರ್ಥಶಾಸ್ತ್ರಜ್ಞರು. ಅವರ ಯೋಚನೆಯ ಕ್ರಮವೇ ಬೇರೆ ಥರದ್ದು. ನಾವು ಒಪ್ಪಿಕೊಳ್ಳಬೇಕು ಅಂತಲ್ಲ. ಯಾವುದೇ ವಿಷಯದಲ್ಲೂ ತೀರಾ ಪ್ರೀತಿಯಿಂದ , ತೀವ್ರತೆಯಿಂದ ಅಧ್ಯಯನ ಮಾಡುತ್ತಾರೆ. ಹಲವು ಮಗ್ಗಲುಗಳಿಂದ ನೋಡಲು ಪ್ರಯತ್ನಿಸುತ್ತಾರೆ. ಅವರ ಪುಸ್ತಕ “ಗುಡ್‌ ಎಕಾನಮಿಕ್ಸ್‌ ಫಾರ್‌ ಹಾರ್ಡ ಟೈಮ್ಸ್‌” ಓದುತ್ತಿದ್ದೇವೆ. ಅನುವಾದವಲ್ಲದಿದ್ದರೂ “ಸ್ವಲ್ಪ ವಿವರವಾಗಿ ಟಿಪ್ಪಣೆ ಮಾಡಿಕೊಳ್ಳುತ್ತಿದ್ದೇವೆ. ಅದರ ಮೊದಲ ಅಧ್ಯಾಯ ವಲಸೆಯನ್ನು ಕುರಿತು ಇದೆ. ಅದರ ಮೊದಲ ಭಾಗವನ್ನು ಇಲ್ಲಿ ಕೊಡಲಾಗಿದೆ. ಮುಂದಿನ ಸಂಚಿಕೆಯಲ್ಲಿ ಉಳಿದ ಭಾಗವನ್ನು ಹಾಕುತ್ತೇವೆ.

ಟಿ.ಎಸ್‌ ವೇಣುಗೋಪಾಲ್ ಮತ್ತು ಶೈಲಜಾ

ಇತ್ತೀಚಿನ ದಿನಗಳಲ್ಲಿ ಯುರೋಪ್ ಮತ್ತು ಅಮೆರಿಕೆಯ ರಾಜಕಾರಣದಲ್ಲಿ ವಲಸೆ ಅನ್ನೋದು ಮುಖ್ಯ ವಿಷಯವಾಗಿಬಿಟ್ಟಿದೆ. ಇದು ಇಂದು ರಾಜಕೀಯವಾಗಿ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಅತ್ಯಂತ ಪ್ರಭಾವಶಾಲಿ ವಿಷಯವಾಗಿದೆ. ಐರೋಪ್ಯ ದೇಶಗಳ ಮುಖ್ಯವಾಹಿನಿಯ ಪಕ್ಷಗಳಿಗೂ ಇದಕ್ಕೆ ಸಂಬಂಧಿಸಿದಂತೆ ಹೊಂದಾಣಿಕೆ ಕಷ್ಟವಾಗುತ್ತಿದೆ. ಅವುಗಳು ಪ್ರತಿಪಾದಿಸುತ್ತಿರುವ ಉದಾರವಾದಿ ಪರಂಪರೆ ಹಾಗೂ ಗಡಿಯಲ್ಲಿ ಕಾಣುತ್ತಿರುವ ಅಪಾಯ -ಇವೆರಡನ್ನು ಹೊಂದಿಸಿಕೊಳ್ಳುವುದಕ್ಕೆ ಹೆಣಗುತ್ತಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅದರ ತೀವ್ರತೆ ಅಷ್ಟು ಇಲ್ಲ. ಆದರೂ ದಕ್ಷಿಣ ಆಫ್ರಿಕಾದಲ್ಲಿ ಜಿಂಬಾಬ್ವೆಯ ನಿರಾಶ್ರಿತರ ಮೇಲೆ ನಡೆಯುತ್ತಿರುವ ಕಾಳಗವಾಗಲಿ, ಬಾಂಗ್ಲಾದೇಶದಲ್ಲಿ ರೋಹಿಂಗ್ಯ ಬಿಕ್ಕಟ್ಟಾಗಲಿ, ಮತ್ತು ಭಾರತದಲ್ಲಿ ಅಸ್ಸಾಮಿನ ಪೌರತ್ವ ಮಸೂದೆಯಾಗಲಿ ಇವೆಲ್ಲಾ ಅದಕ್ಕೆ ಗುರಿಯಾದವರಿಗೆ ಆತಂಕಕಾರಿ ವಿಷಯಗಳೇ.

ವಲಸೆಯ ಬಗ್ಗೆ ಯಾಕೆ ಇಷ್ಟೊಂದು ಆತಂಕ? ಈಗ ಅಂದರೆ 2017ರಲ್ಲಿ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ವಲಸೆ ಬಂದಿರುವರ ಸಂಖ್ಯೆ ಸುಮಾರಾಗಿ 1960ರಲ್ಲಿ ಅಥವಾ 1990ರಲ್ಲಿ ಇದ್ದಷ್ಟೇ ಇದೆ. ಅಂದರೆ ಸುಮಾರು 3%. ಯೂರೋಪಿಗೆ ಬರುವ ಐರೋಪ್ಯೇತರರ ಸಂಖ್ಯೆ 2.5 ಮಿಲಿಯನ್. ಅದು ಒಟ್ಟು ಜನಸಂಖ್ಯೆಯ 0.5% ಕೂಡ ಇಲ್ಲ. ಅವರಲ್ಲಿ ಹೆಚ್ಚಿನವರು ಕೆಲಸಕ್ಕಾಗಿಯೋ, ಕುಟುಂಬದವರನ್ನು ಸೇರಿಕೊಳ್ಳುವುದಕ್ಕೋ ಒಟ್ಟಲ್ಲಿ ಕಾನೂನುಬದ್ಧವಾಗಿಯೇ ಬಂದವರು. ವಲಸೆ ಬಂದವರ ಸಂಖ್ಯೆಯ ಬಗ್ಗೆ, ಅವರ ಧರ್ಮದ ಬಗ್ಗೆ ಅಗಾಧವಾದ ತಪ್ಪು ಗ್ರಹಿಕೆಯಿದೆ. ಉದಾಹರಣೆಗೆ ಇಟಲಿಗೆ ವಲಸೆ ಬಂದವರ ಸಂಖ್ಯೆ ಶೇಕಡ 10. ಆದರೆ ಶೇಕಡ 26ರಷ್ಟು ಜನ ವಲಸೆ ಬಂದಿದ್ದಾರೆ ಎಂದು ಇಟಲಿಯ ಜನ ಭಾವಿಸಿದ್ದಾರೆ. ಹಾಗೆಯೇ ಮುಸಲ್ಮಾನ ವಲಸಿಗರ ಸಂಖ್ಯೆಯನ್ನು ಸಾಮಾನ್ಯವಾಗಿ ಸ್ವಲ್ಪ ಹೆಚ್ಚಾಗಿಯೇ ಭಾವಿಸಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಮಧ್ಯ ಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದಿಂದ ಬರುವವರ ಸಂಖ್ಯೆಯನ್ನು ವಾಸ್ತವಕ್ಕಿಂತ ಎಲ್ಲರೂ ಹೆಚ್ಚಾಗಿಯೇ ಕಲ್ಪಿಸಿಕೊಂಡಿರುತ್ತಾರೆ. ಜೊತೆಗೆ ಇವರೆಲ್ಲರ ದೃಷ್ಟಿಯಲ್ಲಿ ವಲಸಿಗರು ಅಷ್ಟೊಂದು ಸುಶಿಕ್ಷಿತರಲ್ಲ, ಅವರು ಬಡವರು, ಹೆಚ್ಚಿನಂಶ ನಿರುದ್ಯೋಗಿಗಳು ಮತ್ತು ಅವರೆಲ್ಲಾ ಸರ್ಕಾರದ ಕೃಪೆಯಲ್ಲಿ ಬದುಕುತ್ತಿರುವ ಜನ.

ರಾಜಕಾರಣಿಗಳು ವಾಸ್ತವಾಂಶವನ್ನು ವಿರೂಪಗೊಳಿಸಿ ಜನರಲ್ಲಿ ಗಾಬರಿ ಮೂಡಿಸುತ್ತಾರೆ. ಇದು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಒಳ್ಳೆಯ ತಂತ್ರ ಅನ್ನುವುದನ್ನು ಹಲವು ಪ್ರಯೋಗಗಳು ತೋರಿಸಿವೆ. ವಾಸ್ತವವನ್ನು ತೀರಾ ಸೂಕ್ಷ್ಮವಾಗಿ ಗಮನಿಸಿ, ಪರೀಕ್ಷಿಸಿ ನೋಡುವ ದೇಶಗಳಲ್ಲೂ ಇದು ನಿಜ. ಇದಕ್ಕೆ ಸಂಬಂಧಿಸಿದಂತೆ ಅಮೇರಿಕೆಯಲ್ಲಿ ಒಂದು ಪ್ರಯೋಗ ಮಾಡಲಾಗಿದೆ. ಅದರಲ್ಲಿ ಜನರಿಗೆ ಎರಡು ರೀತಿಯ ಪ್ರಶ್ನೆಗಳನ್ನು ಕೇಳಲಾಯಿತು. ವಲಸೆಯನ್ನು ಕುರಿತು ಜನರ ಅಭಿಪ್ರಾಯ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಒಂದಿಷ್ಟು ಪ್ರಶ್ನೆಗಳನ್ನು ರೂಪಿಸಲಾಗಿತ್ತು. ಇನ್ನೊಂದು ಗುಂಪು ಪ್ರಶ್ನೆಗಳನ್ನು ವಲಸೆಯ ಬಗ್ಗೆ ಜನರ ಜ್ಞಾನವನ್ನು ತಿಳಿದುಕೊಳ್ಳುವ ಉದ್ದೇಶದಿಂದ ರೂಪಿಸಲಾಗಿತ್ತು. ಮೊದಲು ವಲಸೆಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ಕುರಿತು ಪ್ರಶ್ನೆ ಕೇಳಲಾಯಿತು. ನಂತರ ವಲಸೆಯನ್ನು ಕುರಿತು ಅವರ ಅಭಿಪ್ರಾಯವನ್ನು ಕೇಳಲಾಯಿತು. ಅದರಲ್ಲಿ ಬಹುಪಾಲು ಜನ ವಲಸೆಯ ವಿರುದ್ಧವಾದ ನಿಲುವನ್ನು ವ್ಯಕ್ತಪಡಿಸಿದರು. ಅವರಿಗೆ ವಲಸೆಯನ್ನು ಕುರಿತಂತೆ ಇದ್ದ ಮಾಹಿತಿ ಸರಿಯಿರಲಿಲ್ಲ. ಅವರಿಗೆ ವಲಸೆಗೆ ಸಂಬಂಧಿಸಿದಂತೆ ನಿಜವಾದ ಮಾಹಿತಿಯನ್ನು ನೀಡಿದಾಗ ಮಾಹಿತಿಗೆ ಸಂಬಂಧಿಸಿದಂತೆ ಅವರ ಗ್ರಹಿಕೆಯೇನೋ ಬದಲಾಯಿತು. ಆದರೆ ವಲಸೆಯನ್ನು ಕುರಿತ ಅವರ ನಿಲುವಿನಲ್ಲಿ ಮಾತ್ರ ಯಾವುದೇ ಬದಲಾವಣೆಗಳೂ ಆಗಲಿಲ್ಲ. ಅವು ಹಾಗೆಯೇ ಉಳಿಯಿತು. ಫ್ರಾನ್ಸಿನ ಚುನಾವಣೆಯ ವಿಷಯದಲ್ಲೂ ಹೀಗೆ ಆಯಿತು. ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ ಮೆರಿನ್ ಲೆ ಪೆನ್ ವಲಸಿಗರ ಬಗ್ಗೆ ಪದೇ ಪದೇ ತಪ್ಪು ಮಾಹಿತಿ ನೀಡಿ ಪೂರ್ವಗ್ರಹ ಸೃಷ್ಟಿಸಿದ್ದಳು. ಆಕೆಯು ನೀಡಿದ್ದ ಮಾಹಿತಿ ಸುಳ್ಳು ಎಂದು ಸಾಬೀತಾದ ಮೇಲೆಯೂ ಆಕೆಗೇ ಮತ ಹಾಕಬೇಕೆಂಬ ಜನರ ನಿಲುವು ಮಾತ್ರ ಬದಲಾಗಲಿಲ್ಲ. ವಾಸ್ತವ ಸಂಗತಿ ಮತ್ತು ಮಾಹಿತಿಗಳಿಂದ ಜನರ ನಿಲುವು ಬದಲಾಗುವುದಿಲ್ಲ. ವಲಸೆಯನ್ನು ಕುರಿತ ಯೋಚನೆಯೇ ಅವರಲ್ಲಿ ಸಂಕುಚಿತ ಮನೋಭಾವವನ್ನು ಸೃಷ್ಟಿಸಿಬಿಡುತ್ತದೆ. ವಾಸ್ತಾವಾಂಶಕ್ಕೆ ಅಲ್ಲಿ ಅವಕಾಶವೇ ಇಲ್ಲ.

ಸತ್ಯವನ್ನು ಜನ ಯಾಕೆ ಅಲಕ್ಷಿಸುತ್ತಾರೆ? ಅದಕ್ಕೆ ಒಂದು ಮುಖ್ಯ ಕಾರಣವಿದೆ. ಅರ್ಥಶಾಸ್ತ್ರದ ಒಂದು ಅಂಶ ಇಲ್ಲಿ ಕೆಲಸ ಮಾಡುತ್ತಿದೆ. ಅವರಿಗೆ ತಾವು ನಂಬಿರುವುದು ಸಂಪೂರ್ಣ ಸರಿ ಅಂತ ಅನ್ನಿಸಿಬಿಟ್ಟಿದೆ. ಅದು ಸರಿ ಇಲ್ಲ ಅನ್ನೋದಕ್ಕೆ ಪುರಾವೆ ಸಿಕ್ಕರೂ ಅದನ್ನು ಮೀರಿ ಯೋಚಿಸುವುದಕ್ಕೆ ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಒಂದು ಆಕರ್ಷಕ ತರ್ಕ ಕೆಲಸ ಮಾಡುತ್ತಿದೆ. ಅದು ನಮ್ಮನ್ನು ದಾರಿತಪ್ಪಿಸುತ್ತದೆ. ಜಗತ್ತಿನ ತುಂಬಾ ಬಡ ಜನರಿದ್ದಾರೆ. ಅವರು ತಮ್ಮ ಸ್ಥಳವನ್ನು ಬಿಟ್ಟು ಅಲ್ಲಿಗಿಂತ ಉತ್ತಮ ಸ್ಥಿತಿಯಲ್ಲಿರುವ ನಮ್ಮ ದೇಶಕ್ಕೆ ಬಂದರೆ ಅವರ ಆದಾಯ ಹೆಚ್ಚುತ್ತದೆ. ಆದರೆ ಇದರಿಂದ ನಮ್ಮ ಕೂಲಿ ಕಡಿಮೆಯಾಗುತ್ತದೆ. ಮತ್ತು ನಮ್ಮಲ್ಲಿ ಹೆಚ್ಚಿನವರ ಸ್ಥಿತಿ ಹದಗೆಡುತ್ತದೆ. ಇದೊಂದು ಅದ್ಭುತ ವಾದ. ಅರ್ಥಶಾಸ್ತ್ರದ ಪ್ರಖ್ಯಾತ ಬೇಡಿಕೆ -ಪೂರೈಕೆ ನಿಯಮ ಹೇಳುವುದೂ ಇದನ್ನೇ. ಜನರಿಗೆ ಹೆಚ್ಚು ಹಣಬೇಕು ಹಾಗಾಗಿ ಎಲ್ಲಿ ಹೆಚ್ಚು ಹಣ ಸಿಗುತ್ತದೆಯೋ ಅಲ್ಲಿಗೆ ಹೋಗುತ್ತಾರೆ. ಆಗ ಅಲ್ಲಿ ಕೆಲಸಗಾರರ ಸಂಖ್ಯೆ (ಪೂರೈಕೆ) ಹೆಚ್ಚುತ್ತದೆ. ಸ್ವಾಭಾವಿಕವಾಗಿಯೇ ಅವರ ಸಂಖ್ಯೆ ಹೆಚ್ಚಾದಂತೆ ಪ್ರತಿಯೊಬ್ಬರ ಕೂಲಿಯೂ ಕಡಿಮೆಯಾಗುತ್ತದೆ. ಇದರಿಂದ ವಲಸಿಗರಿಗೆ ಲಾಭವಾಗಬಹುದು. ಆದರೆ ಸ್ಥಳೀಯರಿಗೆ ತೊಂದರೆಯಾಗುತ್ತದೆ. ದೇಶ “ತುಂಬಿದೆ” ಎನ್ನುವಾಗ ಟ್ರಂಪ್ ಹೇಳಲು ಪ್ರಯತ್ನಿಸುತ್ತಿರುವುದೂ ಇದೇ ಭಾವನೆಯನ್ನು.

ತರ್ಕ ತೀರಾ ಸರಳವಾಗಿದೆ ಮತ್ತು ಸಲೀಸಾಗಿ ಮರುಳು ಮಾಡುತ್ತದೆ. ಆದರೆ ವಾಸ್ತವವಾಗಿ ಈ ತರ್ಕ ಸರಿಯಿಲ್ಲ. ಮೊದಲನೆಯದಾಗಿ ಬೇರೆ ಬೇರೆ ದೇಶಗಳಲ್ಲಿ ಇರುವ ಕೂಲಿಯ ಬೇರೆ ಬೇರೆ ಮೊತ್ತವನ್ನು ನೋಡಿಕೊಂಡು ಜನ ವಲಸೆ ಹೋಗುವುದಿಲ್ಲ. ಅದು ಹಾಗೆ ಸಂಪೂರ್ಣವಾಗಿ ಕೂಲಿಯನ್ನೇ ಅವಲಂಬಿಸಿಲ್ಲ. ಹಲವು ಮಂದಿ ತಾವಿರುವ ಸ್ಥಳ ಬಿಟ್ಟು ಬೇರೆ ಕಡೆಗೆ ವಲಸೆ ಹೋಗಲು ಕಾತುರರಾಗಿದ್ದಾರೆ ಅನ್ನುವುದು ನಿಜ. ಇನ್ನುಳಿದವರಿಗೂ ಹಾಗೆ ಹೋಗುವುದಕ್ಕೆ ಸಾಧ್ಯವಿದೆ. ಹಾಗಿದ್ದಾಗ್ಯೂ ಅವರೆಲ್ಲರೂ ಯಾಕೆ ಹೋಗುತ್ತಿಲ್ಲ ಎನ್ನುವ ಒಗಟಿಗೂ ಉತ್ತರ ಕಂಡುಕೊಳ್ಳಬೇಕು.

ಎರಡನೆಯದಾಗಿ ಹೆಚ್ಚು ಕೌಶಲ್ಯವಿಲ್ಲದ ಜನ ದೊಡ್ಡ ಸಂಖ್ಯೆಯಲ್ಲಿ ವಲಸೆ ಬಂದರೆ ಸ್ಥಳೀಯರಿಗೆ ಅದರಿಂದ ತೊಂದರೆಯಾಗುತ್ತದೆ ಎನ್ನುವ ವಿಚಾರಕ್ಕೆ ಪುರಾವೆಗಳಿಲ್ಲ. ವಾಸ್ತವವಾಗಿ ವಲಸೆಯಿಂದ ವಲಸಿಗರು ಹಾಗೂ ಸ್ಥಳೀಯರು ಇಬ್ಬರ ಸ್ಥಿತಿಯೂ ಉತ್ತಮಗೊಳ್ಳುತ್ತದೆ. ಕಾರ್ಮಿಕ ಮಾರುಕಟ್ಟೆಯ ವಿಶಿಷ್ಟ ಲಕ್ಷಣವೇ ಇದಕ್ಕೆ ಕಾರಣ. ಬೇಡಿಕೆ-ಪೂರೈಕೆಯ ನಿಯಮಗಳಿಗೆ ಕಾರ್ಮಿಕ ಮಾರುಕಟ್ಟೆ ತಾಳೆಯಾಗುವುದಿಲ್ಲ.

ಮನೆ ಬಿಡುವುದು

ಬ್ರಿಟಿಷ್ ಸೊಮಾಲಿಯನ್ ಕವಿ ವಾರ್ಸನ್ ಶೈರ್ ಬರೆಯುತ್ತಾರೆ:

ಯಾರು ತಾನೇ ಮನೆ ಬಿಟ್ಟು ಹೊರಡುವರು
ಅದು ಶಾರ್ಕ್ ಬಾಯಿಯಲ್ಲದಿದ್ದರೆ
ನೀವು ಗಡಿರೇಖೆಯತ್ತ ಓಡುವುದು
ಇಡೀ ನಗರವೇ ಓಡಲಾರಂಭಿಸಿದಾಗ ಮಾತ್ರ
ನಿಮ್ಮ ನೆರೆಹೊರೆ ನಿಮಗಿಂತ ವೇಗವಾಗಿ ಓಡುತ್ತಿರುವಾಗ
ನೀವು ಶಾಲೆಗೆ ಜೊತೆಯಲ್ಲಿ ಹೋದ ಹುಡುಗ
ಹಳೇ ಟಿನ್ ಫ್ಯಾಕ್ಟರಿಯ ಹಿಂದೆ ತಲೆತಿರುಗುವಂತೆ ಮುತ್ತಿಟ್ಟವನು
ತನ್ನ ದೇಹಕ್ಕಿಂತ ದೊಡ್ಡ ಗನ್ ಹಿಡಿದು ನಿಂತಿರುವಾಗ
ನೀವು ಮನೆ ಬಿಟ್ಟು ಹೋಗುವುದು
ಅದು ನಿಮ್ಮನ್ನು ಇರಲು ಬಿಡದಿದ್ದಾಗಲಷ್ಟೆ

ಪದ್ಯದ ಅನುವಾದ: ಶಶಿಕುಮಾರ್

ಶೈರ್ ಸ್ಪಷ್ಟವಾಗಿ ಏನನ್ನೋ ಹೇಳುತ್ತಿದ್ದಾರೆ. ಇರಾಕ್, ಸಿರಿಯಾ, ಗ್ವಾಟೆಮಾಲಾ ಮತ್ತು ಯೆಮನ್ ಜಗತ್ತಿನ ಅತ್ಯಂತ ಬಡರಾಷ್ಟ್ರಗಳೇನಲ್ಲ. ಆದರೆ ಜನ ಅವನ್ನು ಬಿಡಲು ತವಕಿಸುತ್ತಿದ್ದಾರೆ. ಇರಾಕಿನಲ್ಲಿ ತಲಾ ವರಮಾನ ಲೈಬಿರಿಯಾಗಿಂತ 20ಪಟ್ಟು ಹೆಚ್ಚಿಗೆ ಇದೆ. ಅಲ್ಲಿಯ ವರಮಾನ ಮೊಜಾಂಬಿಕ್ ಗಿಂತ ಕನಿಷ್ಠ 10 ಪಟ್ಟು ಹೆಚ್ಚಿಗೆ ಇದೆ. 2016ರಲ್ಲಿ ಯೆಮನ್ನಿನಲ್ಲಿ ವರಮಾನ ತೀವ್ರವಾಗಿ ಕುಸಿದಿರುವುದು ನಿಜ. ಹಾಗಾದ ನಂತರವೂ ಅಲ್ಲಿಯ ರಾಷ್ಟ್ರೀಯ ವರಮಾನ ಲೈಬೀರಿಯಾಕ್ಕಿಂತ ಮೂರು ಪಟ್ಟು ಹೆಚ್ಚಿಗೆ ಇದೆ. ಅಧ್ಯಕ್ಷ ಟ್ರಂಪ್‍ನ ನೆಚ್ಚಿನ ಶತ್ರು ಮೆಕ್ಸಿಕೋ ಕೂಡ ಮೇಲ್ ಮಧ್ಯಮ ಆದಾಯವಿರುವ ದೇಶ. ಅಲ್ಲಿ ಜಾರಿಯಲ್ಲಿರುವ ಕ್ಷೇಮಾಭಿವೃದ್ಧಿ ಕ್ರಮಗಳು ಜನ ಮೆಚ್ಚಿಗೆಗಳಿಸಿವೆ. ಅಷ್ಟೇ ಅಲ್ಲ ಅವುಗಳನ್ನು ಉಳಿದ ಕಡೆಗಳಲ್ಲಿ ವ್ಯಾಪಕವಾಗಿ ಅನುಸರಿಸುತ್ತಿದ್ದಾರೆ. ಅಲ್ಲಿನ ಜನ ವಾಸ್ತವವಾಗಿ ಬಡತನದಿಂದ ಒದ್ದಾಡುತ್ತಿಲ್ಲ. ಆದರೆ, ಅಲ್ಲಿ, ದಿನನಿತ್ಯದ ಬದುಕು ಅಸ್ತವ್ಯಸ್ತಗೊಂಡಿದೆ. ಇದು ಅವರ ಬದುಕನ್ನು ದುಸ್ತರಗೊಳಿಸಿದೆ. ಅಲ್ಲಿ ಯಾವುದೂ ನಿಶ್ಚಿತವಲ್ಲ. ಎಲ್ಲವೂ ಅನಿರ್ದಿಷ್ಟ. ಉತ್ತರ ಮೆಕ್ಸಿಕೊದಲ್ಲಿ ನಡೆಯುತ್ತಿರುವ ಡ್ರಗ್ ಸಮರದ ಪರಿಣಾಮವಾಗಿ ಉಂಟಾಗಿರುವ ಹಿಂಸೆ, ಗ್ವಾಟೆಮಾಲಾದಲ್ಲಿನ ಮಿಲಿಟರಿ ಒಳಸಂಚು, ಮಧ್ಯ ಪ್ರಾಚ್ಯದಲ್ಲಿನ ನಾಗರಿಕ ಯುದ್ಧಗಳು ಜನರ ಬದುಕಿನ ನೆಮ್ಮದಿಯನ್ನು ಕೆಡಿಸಿವೆ. ನೇಪಾಳದಲ್ಲಿ ಆಗಿರುವುದೂ ಹೀಗೆ. ಅಲ್ಲಿ ಕೃಷಿ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಜನ ವಲಸೆ ಹೋಗಲಿಲ್ಲ. ಆದರೆ ಅಲ್ಲಿ ಹಿಂಸೆ ತೀವ್ರವಾದಾಗ ಜನ ವಲಸೆ ಹೊರಡಲು ಪ್ರಾರಂಭಿಸಿದರು. ಅವರೆಲ್ಲಾ ಶಾರ್ಕ್‍ನ ಬಾಯಿಂದ ತಪ್ಪಿಸಿಕೊಂಡು ಓಡುತ್ತಿದ್ದರು. ಅವರಿಗೆ ಮರಳಿ ಬಂದು ನೆಲಸುವುದಕ್ಕೆ ಒಂದು ಮನೆ ಇದೆ ಅಂತ ಅನ್ನಿಸಿರಲಿಲ್ಲ. ಹಾಗಾಗಿ ಅವರು ಊರುಬಿಟ್ಟು ಹೊರಟಿದ್ದರು. ಅಂತಹ ಸಂದರ್ಭದಲ್ಲಿ ಅವರನ್ನು ತಡೆಯುವುದಕ್ಕೆ ಯಾರಿಗೂ ಸಾಧ್ಯವಿಲ್ಲ.

ಇದಕ್ಕೆ ವ್ಯತಿರಿಕ್ತವಾದ ಇನ್ನೂ ಒಂದು ಮಗ್ಗುಲು ವಲಸೆಗೆ ಇದೆ ಎನ್ನುವುದೂ ನಿಜ. ಏನೇ ಆಗಲಿ ಹೊರಗೆ ಹೋಗಲೇ ಬೇಕೆನ್ನುವ ವಲಸಿಗರೂ ಇದ್ದಾರೆ. ಸತ್ಯಜಿತ್ ರಾಯ್ ಅವರ ಅಪರಾಜಿತೋ ಚಲನಚಿತ್ರದ ನಾಯಕ ಅಪು ಥರದವರು. ಒಂದು ಕಡೆ ಹಳ್ಳಿಯ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಅಮ್ಮ, ಇನ್ನೊಂದು ಕಡೆ ಅಪಾರ ಅವಕಾಶಗಳನ್ನು ನೀಡುತ್ತಿರುವ ಪಟ್ಟಣ. ಅವೆರಡರ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಸಮಸ್ಯೆ ಅವರದ್ದು. ಚೀನಾದಿಂದ ವಲಸೆ ಬಂದ ತಂದೆತಾಯಂದಿರಿಗೆ ಎಂದಾದರೊಂದು ದಿನ ತಮ್ಮ ಮಕ್ಕಳು ಹಾರ್ವರ್ಡ್‍ಗೆ ಓದುವುದಕ್ಕೆ ಹೋಗಬಹುದು ಎನ್ನುವ ಆಸೆ. ಅದೇ ಆಸೆಯಿಂದ ಕಷ್ಟಪಟ್ಟು ಎರಡು ಕಡೆ ದುಡಿಯುತ್ತಾರೆ. ಹೊಟ್ಟೆಬಟ್ಟೆ ಕಟ್ಟಿ ಹಣ ಉಳಿಸುತ್ತಾರೆ.

ಇಂತಹವರ ನಡುವೆಯೇ ಹೊರಗೆ ಹೋಗುವುದಕ್ಕೆ ಬಯಸದೇ ಇದ್ದಲ್ಲೇ ಉಳಿಯುವ ಜನರೂ ಇದ್ದಾರೆ. ಅವರ ಸಂಖ್ಯೆಯೇ ಹೆಚ್ಚು. ಅವರನ್ನು ಯಾವುದೇ ಆಂತರಿಕ ಅಥವಾ ಬಾಹ್ಯ ಒತ್ತಡವೂ ಕಾಡುವುದಿಲ್ಲ. ಅವರ್ಯಾರು ಡಾಲರ್ ಹಿಂದೆ ಓಡುವ ಜನರಲ್ಲ. ತಾವಿರುವ ಹಳ್ಳಿಯಲ್ಲೇ ಸಂತೋಷವಾಗಿರುತ್ತಾರೆ. ಅವರಿಗೆ ಗಡಿ ದಾಟಿಹೋಗುವುದೂ ಕಷ್ಟವಿಲ್ಲ. ಯಾವ ನಿರ್ಬಂಧವು ಅವರಿಗೆ ಅಡ್ಡಿಯಾಗಿಲ್ಲ. ಪಟ್ಟಣಗಳಿಗೆ ವಲಸೆ ಹೋಗಿದ್ದರೆ ಅವರ ವರಮಾನ ಹೆಚ್ಚುತ್ತಿತ್ತ್ತು. ಆದರೂ ಅವರು ಹೋಗಲು ಬಯಸುತ್ತಿರಲಿಲ್ಲ. ಒಂದು ಸಮೀಕ್ಷೆಯ ಪ್ರಕಾರ ಬಿಹಾರ್ ಮತ್ತು ಉತ್ತರಪ್ರದೇಶದಿಂದ ವಲಸೆ ಬಂದು ದೆಹಲಿಯ ಕೊಳಚೆ ಪ್ರದೇಶಗಳಲ್ಲಿ ಬದುಕುತ್ತಿರುವವರು ಹೆಚ್ಚು ಸಂಪಾದಿಸುತ್ತಿದ್ದಾರೆ. ಮನೆಬಾಡಿಗೆ ಕೊಟ್ಟ ಮೇಲೂ ಪ್ರತಿ ಕುಟುಂಬಕ್ಕೆ ಸರಾಸರಿ ಎರಡು ಡಾಲರ್ ಉಳಿಯುತ್ತದೆ. ಉತ್ತರಪ್ರದೇಶ ಹಾಗೂ ಬಿಹಾರಿನಲ್ಲಿ ಕೆಳವರ್ಗದ ಶೇಕಡ 30ರಷ್ಟು ಜನಕ್ಕೆ ದಿನಕ್ಕೆ ಒಂದು ಡಾಲರ್ ಕೂಡ ಸಿಗುವುದಿಲ್ಲ. ದೆಹಲಿಗೆ ಹೋಗಿದ್ದರೆ ಅವರ ವರಮಾನ ದುಪ್ಪಟ್ಟಾಗುತ್ತಿತ್ತು. ಆದರೂ ನೂರಾರು ಮಿಲಿಯನ್ ಜನ ದೆಹಲಿಗೆ ವಲಸೆ ಹೋಗದೆ ತಮ್ಮ ಊರಲ್ಲೇ ಉಳಿದುಕೊಂಡಿದ್ದಾರೆ.

ವಲಸೆ ಹೋದರೆ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಅನ್ನೋದು ಗೊತ್ತಿದ್ದರೂ ಅವರು ವಲಸೆ ಹೋಗಲಿಲ್ಲ. ಇಂತಹವರು ಇರುವುದು ಕೇವಲ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾತ್ರವಲ್ಲ. ಬೇರೆಲ್ಲಾ ದೇಶಗಳಲ್ಲೂ ಇದ್ದಾರೆ. ಗ್ರೀಸಿನಲ್ಲಿ 2010 ಹಾಗೂ 2015ರ ಆವಧಿಯಲ್ಲಿ ಆರ್ಥಿಕ ಬಿಕ್ಕಟ್ಟು ತುಂಬಾ ತೀವ್ರವಾಗಿತ್ತು. ಆದರೂ ಎಲ್ಲರೂ ದೇಶ ಬಿಟ್ಟು ಹೋಗಲಿಲ್ಲ. ದೇಶವನ್ನು ಬಿಟ್ಟು ಹೋದ ಗ್ರೀಕರ ಸಂಖ್ಯೆ 3,50,000ಕ್ಕಿಂತ ಕಡಿಮೆ. ಅಂದರೆ ಒಟ್ಟು ಜನಸಂಖ್ಯೆಯ ಶೇಕಡ 3ರಷ್ಟು ಕೂಡ ಅಲ್ಲ. 2013-14ರಲ್ಲಿ ಗ್ರೀಸಿನಲ್ಲಿ ನಿರುದ್ಯೋಗದ ದರ ಶೇಕಡ 27ರಷ್ಟಿತ್ತು. ಗ್ರೀಸ್ ಐರೋಪ್ಯ ದೇಶಗಳಲ್ಲಿ ಒಂದು. ಗ್ರೀಕರು ಯುರೋಪಿಯನ್ ಯೂನಿಯನ್ ಸದಸ್ಯರು. ಅವರು ಯೂರೋಪಿನಲ್ಲಿ ಎಲ್ಲಿ ಬೇಕಾದರೂ ಮುಕ್ತವಾಗಿ ಓಡಾಡಬಹುದಿತ್ತು, ಕೆಲಸ ಮಾಡಬಹುದಿತ್ತು. ಆದರೂ ಬಹಳ ಜನ ವಲಸೆ ಹೋಗಲಿಲ್ಲ.

ವಲಸೆಯ ಲಾಟರಿ

ಇದರಲ್ಲಿ ಯಾವ ಒಗಟೂ ಇದ್ದ ಹಾಗಿಲ್ಲ. ನಾವು ಬಹುಶಃ ವಲಸೆಯಿಂದ ಆಗಬಹುದಾದ ಅನುಕೂಲವನ್ನು ಉತ್ಪ್ರೇಕ್ಷಿಸುತ್ತಿದ್ದೇವೆ ಅಷ್ಟೆ. ವಲಸೆಯ ಲಾಭವನ್ನು ನಾವು ಲೆಕ್ಕ ಹಾಕುತ್ತಿರುವ ಕ್ರಮದಲ್ಲೇ ಒಂದು ಸಮಸ್ಯೆ ಇದೆ. ಲೆಕ್ಕಚಾರ ಮಾಡುವಾಗ ವಲಸಿಗರ ಕೂಲಿಯನ್ನಷ್ಟೇ ನೋಡುತ್ತೇವೆ. ಹಾಗೆ ವಲಸೆ ಹೋಗುವುದಕ್ಕೆ ಮತ್ತು ವಲಸೆ ಹೋದ ನಂತರ ಯಶಸ್ವಿಯಾಗಿ ಬದುಕುವುದನ್ನು ಸಾಧ್ಯಮಾಡಿದ ಇತರ ಹಲವು ಕಾರಣಗಳನ್ನು ನಾವು ಪರಿಗಣಿಸುವುದೇ ಇಲ್ಲ. ಹಾಗೆ ವಲಸೆ ಹೋಗುವವರಿಗೆ ವಿಶೇಷ ನೈಪುಣ್ಯವೋ, ಅಥವಾ ವಿಶೇಷವಾದ ಸಾಮಥ್ರ್ಯವೋ ಇದ್ದಿರಬಹುದು. ಅದರಿಂದಾಗಿಯೇ ಅವರಿಗೆ ಹೆಚ್ಚಿಗೆ ಸಂಪಾದಿಸುವುದಕ್ಕ್ಕೆ ಸಾಧ್ಯವಾಗಿರಬಹುದು. ಅವರು ತಮ್ಮ ಊರಿನಲ್ಲೇ ಉಳಿದಿದ್ದರೂ ಅಷ್ಟನ್ನು ದುಡಿಯುತ್ತಿದ್ದರು. ಹೆಚ್ಚಿನ ವಲಸಿಗರು ಮಾಡುವ ಕೆಲಸಗಳಿಗೆ ಅಂತಹ ವಿಶೇಷ ಪರಿಣತಿಯೇನು ಬೇಕಾಗಿಲ್ಲ. ಅವರು ಮಾಡುವ ಕೆಲಸಕ್ಕೆ ಗಂಭೀರವಾದ ದೈಹಿಕ ಶ್ರಮ ಬೇಕು. ಅದಕ್ಕೆ ತುಂಬಾ ಶಕ್ತಿ ಹಾಗೂ ತಾಳ್ಮೆ ಬೇಕು. ನಿರ್ಮಾಣದ ಕೆಲಸವನ್ನೋ, ಹಣ್ಣು ಕೀಳುವ ಕೆಲಸವನ್ನೋ ಅಥವಾ ಲ್ಯಾಟಿನ್ ಅಮೇರಿಕೆಯ ಜನ ಅಮೇರಿಕೆಯಲ್ಲಿ ಮಾಡುವ ಕೆಲಸವನ್ನೋ ಒಂದು ನಿಮಿಷ ಯೋಚಿಸಿ. ಪ್ರತಿನಿತ್ಯ ಅವರ ಹಾಗೆ ದುಡಿಯೋದಕ್ಕೆ ಎಲ್ಲರಿಗೂ ಸಾಧ್ಯವಿಲ್ಲ.

ಹಾಗಾಗಿ ವಲಸಿಗರ ಆದಾಯವನ್ನು ವಲಸೆ ಹೋಗದೇ ಉಳಿದುಕೊಂಡವರ ವರಮಾನದೊಂದಿಗೆ ಹಾಗೆ ಸರಳವಾಗಿ ಹೋಲಿಸುವುದು ಸರಿಯಲ್ಲ. ವಲಸೆ ಹೋಗುವುದರಿಂದ ಹೇರಳವಾದ ಲಾಭ ಇದೆ. ಅದಕ್ಕೆ ಅವರು ವಲಸೆ ಹೋಗುತ್ತಿದ್ದಾರೆ ಅಂತ ಕೆಲವರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಆ ರೀತಿಯಲ್ಲಿ ಅವರಿಬ್ಬರ ಆದಾಯವನ್ನು ಹೋಲಿಸುವುದಕ್ಕೆ ಸಾಧ್ಯವಿಲ್ಲ. ಇದನ್ನೇ ಅರ್ಥಶಾಸ್ತ್ರಜ್ಞರು ಗುರುತಿಸುವುದರಲ್ಲಿನ ಸಮಸ್ಯೆ ಎಂದು ಕರೆಯುತ್ತಿರುವುದು. ಅವರ ವರಮಾನದಲ್ಲಿ ವ್ಯತ್ಯಾಸವಿದೆ. ಆದರೆ ಅದಕ್ಕೆ ಅವರು ಬೇರೆ ಬೇರೆ ಕಡೆಗಳಲ್ಲಿ ಕೆಲಸಮಾಡುತ್ತಿರುವುದೇ ಕಾರಣ ಎಂದು ಹೇಳುವುದಕ್ಕೆ ಆಗುವುದಿಲ್ಲ. ಹಾಗೆ ಹೇಳಬೇಕಾದರೆ ನಮಗೆ ಕಾರ್ಯಕಾರಣ ಸಂಬಂಧ ಸ್ಪಷ್ಟವಾಗಿ ಸಾಬೀತಾಗಬೇಕು.

ಇದಕ್ಕಿರುವ ಒಂದು ಸರಳವಾದ ದಾರಿಯೆಂದರೆ ಲಾಟರಿ ಕ್ರಮವನ್ನು ಅನುಸರಿಸಿ ಅಧ್ಯಯನ ಮಾಡುವುದು. ಲಾಟರಿಯಲ್ಲಿ ಗೆದ್ದವರು ಹಾಗೂ ಸೋತವರ ನಡುವೆ ಇರುವುದು ಒಂದೇ ಒಂದು ವ್ಯತ್ಯಾಸ. ಗೆದ್ದವರ ಬಗಲಿಗೆ ಅದೃಷ್ಟ ಇದೆ ಅಷ್ಟೆ. ಉಳಿದಂತೆ ಇಬ್ಬರೂ ಒಂದೆ. ಲಾಟರಿ ಗೆದ್ದು ಬೇರೆ ದೇಶಕ್ಕೆ ಹೋದವರ ವರಮಾನದಲ್ಲಿ ವ್ಯತಾಸವಾಗಿದ್ದರೆ ಆಗ ಅದಕ್ಕೆ ವಲಸೆ ಕಾರಣ ಎನ್ನಬಹುದೇನೋ. ಇದಕ್ಕೆ ಸಂಬಂಧಿಸಿದಂತೆ ಟೋಂಗಾದ ದಕ್ಷಿಣ ಪೆಸಿಫಿಕ್‍ನ ಸಣ್ಣ ದ್ವೀಪವೊಂದನ್ನು ಒಂದು ಅಧ್ಯಯನ ಮಾಡಲಾಗಿದೆ. ಅಲ್ಲಿಂದ ವಲಸೆ ಹೋದವರೆಲ್ಲರೂ ಸಾಮಾನ್ಯವಾಗಿ ತುಂಬಾ ಬಡವರು. ಕೆಲವರು ವೀಸಾ ಲಾಟರಿಯಲ್ಲಿ ಗೆದ್ದು ನ್ಯೂಜಿûಲ್ಯಾಂಡಿಗೆ ಹೋದರು. ಕೆಲವರು ಅಲ್ಲೇ ಉಳಿದುಕೊಂಡರು. ಅಧ್ಯಯನದ ಪ್ರಕಾರ ಹಾಗೆ ವಲಸೆ ಹೋದವರ ವರಮಾನ ಒಂದೇ ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಯಿತು. ಹಾಗೆ ಭಾರತದಿಂದ ಅಮೇರಿಕೆಗೆ ಹೋದ ಸಾಫ್ಟ್‍ವೇರ್ ಉದ್ಯೋಗಿಗಳ ವರಮಾನ ಭಾರತದಲ್ಲೇ ಉಳಿದ ಅವರ ಇತರ ಸಹೋದ್ಯೋಗಿಗಳಿಗಿಂತ ಆರು ಪಟ್ಟು ಹೆಚ್ಚಾಯಿತು.

ಲಾವಾ ಬಾಂಬುಗಳು
ಆದರೆ ಇಲ್ಲೂ ಒಂದು ಸಮಸ್ಯೆ ಇದೆ. ವೀಸಾ ಲಾಟರಿಗೆ ಅರ್ಜಿ ಹಾಕಿದವರನ್ನಷ್ಟೇ ಇದು ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಆದರೆ ಅರ್ಜಿ ಹಾಕದವರ ಸ್ಥಿತಿ ತುಂಬಾ ಭಿನ್ನವಾಗಿರಬಹುದು. ಅವರಿಗೆ ವಲಸೆ ಹೋಗುವುದರಿಂದ ಅಂತಹ ಲಾಭವಾಗದೇ ಇರಬಹುದು. ಉದಾಹರಣೆಗೆ ಅವರಿಗೆ ಬೇಕಾದ ನೈಪುಣ್ಯತೆ ಇಲ್ಲದೇ ಇರಬಹುದು. ಪರಿಸ್ಥಿತಿಯ ಒತ್ತಡದಿಂದ ಆಕಸ್ಮಿಕವಾಗಿ ವಲಸೆ ಹೋದ ಜನರನ್ನು ಕುರಿತು ನಡೆದಿರುವ ಅಧ್ಯಯನಗಳು ಈ ನಿಟ್ಟಿನಲ್ಲಿ ಹಲವು ಹೊಳವುಗಳನ್ನು ನೀಡುತ್ತದೆ.

ವೆಸ್ಟ್‍ಮನ್ ದ್ವೀಪಗಳು ಐಸ್‍ಲ್ಯಾಂಡಿನ ಕರಾವಳಿಯಲ್ಲಿನ ದ್ವೀಪಸಮೂಹ. ಅವು ಸಂಪದ್ಭರಿತ ಮೀನುಗಾರಿಕಾ ಪ್ರದೇಶಗಳು. 1973ರ ಜನವರಿ 23ರಂದು ಅಲ್ಲಿ ಜ್ವಾಲಾಮುಖಿ ಸ್ಫೋಟಿಸಿತು. ನಾಲ್ಕು ಗಂಟೆಗಳ ಅವಧಿಯಲ್ಲಿ ಅಲ್ಲಿದ್ದ 5200 ಜನರನ್ನು ಪಾರುಮಾಡಲಾಯಿತು. ಒಬ್ಬ ಮರಣಹೊಂದಿದ. ಆದರೆ ಈ ಸ್ಫೋಟ ಐದು ತಿಂಗಳ ಕಾಲ ಮುಂದುವರೆಯಿತು. ದ್ವೀಪದಲ್ಲಿದ್ದ ಸುಮಾರು ಮೂರನೇ ಒಂದು ಭಾಗದಷ್ಟು ಮನೆಗಳು ಲಾವಾರಸದಿಂದಾಗಿ ನಾಶವಾದವು. ದ್ವೀಪದ ಪೂರ್ವಭಾಗದಲ್ಲಿದ್ದ ಮನೆಗಳು ಲಾವಾದ ಹರಿವಿಗೆ ಸಿಲುಕಿ ನಾಶವಾದವು. ಮತ್ತು ಲಾವಾ ಬಾಂಬುಗಳು ಸಿಡಿದ ರಭಸಕ್ಕೆ ಉಳಿದ ಕಡೆಗಳಲ್ಲಿ ಅಲ್ಲಿ ಇಲ್ಲಿ ಕೆಲವು ಮನೆಗಳು ನಾಶವಾದವು. ಉಳಿದೆಡೆ ಅಂತಹ ಅನಾಹುತ ಆಗಿರಲಿಲ್ಲ. ಚೆನ್ನಾಗಿದ್ದ ಮನೆಗಳಿಗೆ ಮಾರುಕಟ್ಟೆ ಮೌಲ್ಯ ಎಷ್ಟು ಇತ್ತೋ ನಾಶವಾದ ಮನೆಗಳ ಮಾರುಕಟ್ಟೆ ಮೌಲ್ಯವೂ ಅಷ್ಟೇ ಇತ್ತು. ಅವುಗಳಲ್ಲೂ ಅದೇ ರೀತಿಯ ಜನ ಬದುಕುತ್ತಿದ್ದರು. ಸಾಮಾಜ ವಿಜ್ಞಾನಿಗಳು ಪ್ರಾಕೃತಿಕ ಪ್ರಯೋಗ ಎಂದು ಕರೆಯುವುದು ಇದನ್ನೇ. ಪ್ರಕೃತಿ ದಾಳವನ್ನು ಉರುಳಿಸಿತು. ಕೆಲವರು ಮನೆ ಕಳೆದುಕೊಂಡರು. ಕೆಲವರಿಗೆ ತೊಂದರೆಯಾಗಲಿಲ್ಲ. ಆದರೆ ಇಬ್ಬರಿಗೂ ಯಾವುದೇ ಮುನ್ಸೂಚನೆಯೂ ಇರಲಿಲ್ಲ.

ಆನಂತರದಲ್ಲಿ ಮನೆ ಕಳೆದುಕೊಂಡವರಿಗೆ ಅವರ ಮನೆ ಹಾಗೂ ಜಮೀನಿನ ಮೌಲ್ಯದ ನಗದನ್ನು ವಿತರಿಸಿದರು. ಆ ಹಣದಲ್ಲಿ ಅವರು ಹಾಳಾದ ಮನೆಯನ್ನು ಮತ್ತೆ ಕಟ್ಟಿಕೊಳ್ಳಬಹುದಿತ್ತು. ಇಲ್ಲವೇ ಹೊಸ ಮನೆಯನ್ನು ಕಟ್ಟಿಕೊಳ್ಳಬಹುದಿತ್ತು ಅಥವಾ ತಮಗೆ ಅನುಕೂಲವಾಗುವ ಬೇರೆ ಸ್ಥಳಕ್ಕೆ ವಲಸೆ ಹೋಗಬಹುದಿತ್ತು. ಮನೆ ನಾಶವಾಗಿ ಹೋದವರಲ್ಲಿ ಶೇಕಡ 48ರಷ್ಟು ಬೇರೆ ಕಡೆಗೆ ಹೋದರು (ಮನೆ ನಾಶವಾಗದಿದ್ದವರಲ್ಲಿಯೂ ಶೇಕಡ 27ರಷ್ಟು ಜನ ಬೇರೆ ಕಡೆಗೆ ಹೋದರು). ಐಸ್‍ಲ್ಯಾಂಡ್ ಸಣ್ಣ ದ್ವೀಪ. ಆದರೆ ಅದು ತುಂಬಾ ಸುಸಂಘಟಿತವಾದ ದೇಶ. ಅಲ್ಲಿ ತೆರಿಗೆ ಮತ್ತು ಇತರ ದಾಖಲೆಗಳನ್ನು ವ್ಯವಸ್ಥಿತವಾಗಿ ಇಡಲಾಗಿದೆ. ಅವನ್ನು ಬಳಸಿಕೊಂಡು ವೆಸ್ಟ್‍ಮನ್ ದ್ವೀಪದ ಎಲ್ಲಾ ಮೂಲನಿವಾಸಿಗಳು ಸಾಧಿಸಿದ ದೀರ್ಘಕಾಲೀನ ಆರ್ಥಿಕ ಪ್ರಗತಿಯ ಹಾದಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಿತ್ತು. ಅಷ್ಟೇ ಅಲ್ಲದೆ, ಲಾವಾ ಸ್ಫೋಟದಲ್ಲಿ ಸಿಲುಕಿಕೊಂಡ ಪ್ರತಿಯೊಬ್ಬ ವ್ಯಕ್ತಿಯ ತಂದೆ ತಾಯಿ ಯಾರು ಎನ್ನುವುದನ್ನು ಗುರುತಿಸಲು ವಿಸ್ತೃತವಾದ ಜೆನೆಟಿಕ್ ಮಾಹಿತಿಯ ನೆರವನ್ನು ಪಡೆದುಕೊಳ್ಳಬಹುದಿತ್ತು.

ಈ ಎಲ್ಲಾ ಮಾಹಿತಿಯನ್ನು ಆಧರಿಸಿ ನಡೆಸಿದ ಸಂಶೋಧನೆಯಲ್ಲಿ ಕೆಲವು ಅಂಶಗಳು ಸ್ಪಷ್ಟವಾದವು. ಲಾವಾ ಸ್ಪೋಟದ ಸಮಯದಲ್ಲಿ ಮನೆ ಕಳೆದುಕೊಂಡವರಲ್ಲಿ 25ಕ್ಕಿಂತ ಕಡಿಮೆ ವಯಸ್ಸಿನವರು ಹೆಚ್ಚಿನ ಆರ್ಥಿಕ ಪ್ರಗತಿಯನ್ನು ಸಾಧಿಸಿದರು. 2014ರ ಹೊತ್ತಿಗೆ ಪಿತ್ರಾರ್ಜಿತ ಮನೆಗಳನ್ನು ಕಳೆದುಕೊಂಡವರೆಲ್ಲರೂ ಉಳಿದವರಿಗಿಂತ 3000 ಡಾಲರ್‍ಗಳಷ್ಟು ಹೆಚ್ಚು ಹಣ ಸಂಪಾದಿಸಿದರು. ವಾಸ್ತವವಾಗಿ ಮನೆಯನ್ನು ಕಳೆದುಕೊಂಡವರೆಲ್ಲಾ ಬೇರೆ ಕಡೆಗೆ ಹೋಗಲಿಲ್ಲ. ಅಲ್ಲಿನ ಯುವಕರಲ್ಲಿ ಹೆಚ್ಚಿನವರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕಾಗಿದ್ದವರು. ಅಲ್ಲೇ ಉಳಿದಿದ್ದರೆ ಬೆಸ್ತರಾಗಿ ಮುಂದುವರಿಯುತ್ತಿದ್ದರೇನೊ. ಆದರೆ ಅನಿವಾರ್ಯವಾಗಿ ವಲಸೆ ಹೋಗಬೇಕಾಗಿ ಬಂದದ್ದರಿಂದ ತಮಗೆ ಪರಿಣತಿ ಇರುವ ಕ್ಷೇತ್ರಗಳಲ್ಲಿ ಉದ್ಯೋಗ ಕಂಡುಕೊಳ್ಳುವ ಸಾಧ್ಯತೆಗಳು ತೆರೆದುಕೊಂಡೆವು. ಮೀನುಗಾರಿಕೆಯಲ್ಲೇ ಪರಿಣತಿಯನ್ನು ಪಡೆದುಕೊಳ್ಳುವ ಗೋಜಿಗೆ ಅಷ್ಟಾಗಿ ಹೋಗದ ಯುವಕರಿಗಂತೂ ಇದು ಇನ್ನೂ ಸುಲಭವಾಗಿತ್ತು. ಮನೆ ಇದ್ದವರಲ್ಲಿ ಹೆಚ್ಚಿನವರು ಅಲ್ಲಿಯೇ ಉಳಿದು, ಜೀವನೋಪಾಯಕ್ಕೆ ತಮ್ಮ ಪೂರ್ವಿಕರಂತೆ ಮೀನುಗಾರಿಕೆಯನ್ನೇ ಅವಲಂಬಿಸಿದರು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಫಿನ್‍ಲ್ಯಾಂಡಿನಲ್ಲಿಯೂ ಹೀಗೇ ಆಯಿತು. ಯುದ್ಧದಲ್ಲಿ ಜರ್ಮನಿ ಸೋತುಹೋಯಿತು. ಅದರ ಮಿತ್ರಪಕ್ಷವಾದ ಫಿನ್‍ಲ್ಯಾಂಡ್ ತನ್ನ ದೊಡ್ಡ ಭೂಭಾಗವನ್ನು ಸೋವಿಯತ್ ಒಕ್ಕೂಟಕ್ಕೆ ಬಿಟ್ಟುಕೊಡಬೇಕಾಯಿತು. ಆ ಭಾಗದ ಜನಸಂಖ್ಯೆ 4,30,000. ಅದು ಫಿನ್‍ಲ್ಯಾಂಡಿನ ಒಟ್ಟು ಜನಸಂಖ್ಯೆಯ ಶೇಕಡ 11ರಷ್ಟು. ಅಷ್ಟು ಜನರನ್ನೂ ಅಲ್ಲಿಂದ ಖಾಲಿ ಮಾಡಿಸಿ, ದೇಶದ ಉಳಿದ ಕಡೆಗಳಲ್ಲಿ ಅವರಿಗೆ ಮರುವಸತಿಯನ್ನು ಕಲ್ಪಿಸಿಕೊಡಬೇಕಾಯಿತು.

ಹೀಗೆ ಮರುವಸತಿ ಪಡೆದ ಜನ ಯುದ್ಧಕ್ಕೆ ಮೊದಲು ಫಿನ್‍ಲ್ಯಾಂಡಿನ ಉಳಿದ ಜನರಂತೆಯೇ ಇದ್ದರು. ಅವರಿಗೆ ಹೇಳಿಕೊಳ್ಳುವಂತಹ ಒಳ್ಳೆಯ ಉದ್ಯೋಗ ಇದ್ದಿರಬಹುದಾದ ಸಾಧ್ಯತೆಗಳು ಕಡಿಮೆ. ಒಕ್ಕಲೆಬ್ಬಿಸಿದ ಅಪಮಾನ ಮತ್ತು ನೋವು ಅವರನ್ನು ಕಾಡುತ್ತಲೇ ಇತ್ತು. ಆದರೂ 25 ವರ್ಷಗಳ ಅವಧಿಯಲ್ಲಿ ಅವರು ಉಳಿದವರಿಗಿಂತ ಹೆಚ್ಚು ಶ್ರೀಮಂತರಾದರು. ಬಹುಶಃ ಅವರು ಉಳಿದವರಿಗಿಂತ ಹೆಚ್ಚು ಚಲನಶೀಲರಾಗಿದ್ದರು ಎನಿಸುತ್ತದೆ. ತಮ್ಮ ಆಧಾರವನ್ನೇ ಕಳೆದುಕೊಂಡು, ಬೇರೆಡೆಗೆ ವಲಸೆ ಹೋಗಬೇಕಾಗಿ ಬಂದದ್ದರಿಂದ ಅವರು ಇನ್ನೂ ಹೆಚ್ಚು ಸಾಹಸಶೀಲರಾದರು ಎನಿಸುತ್ತದೆ.

ಈ ಉದಾಹರಣೆಗಳು ಜನ ಕೇವಲ ಆರ್ಥಿಕ ಕಾರಣಗಳಿಂದ ವಲಸೆ ಹೋಗುವುದಿಲ್ಲ. ಹಾಗೆ ವಲಸೆ ನಡೆಯಬೇಕಾದರೆ ಒಂದು ಯುದ್ದವೋ ಅಥವಾ ಗಂಭೀರವಾದ ಅವಘಡವೋ ಸಂಭವಿಸಬೇಕು ಎನ್ನುವುದು ಸ್ಪಷ್ಟವಾಗುತ್ತದೆ.

ಅವರಿಗೆ ತಿಳಿದಿದೆಯೇ?

ವಲಸೆ ಹೋಗುವುದರಿಂದ ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಬಹುದು ಎಂಬ ಅರಿವು ಬಡಜನರಿಗೆ ಇಲ್ಲ. ಆದ್ದರಿಂದ ಅವರು ವಲಸೆ ಹೋಗುತ್ತಿಲ್ಲ ಎಂದು ಎನ್ನಿಸಬಹುದು. ಆದರೆ ಜನ ವಲಸೆ ಹೋಗದೇ ಇರುವುದಕ್ಕೆ ನಿಜವಾದ ಕಾರಣ ಅದು ಅಲ್ಲ. ಬಾಂಗ್ಲಾದೇಶದಲ್ಲಿ ನಡೆಸಿದ ಒಂದು ಕುತೂಹಲಕಾರಿ ಕ್ಷೇತ್ರ ಅಧ್ಯಯನ ಇದನ್ನು ಸ್ಪಷ್ಟಗೊಳಿಸುತ್ತದೆ.

ಬಾಂಗ್ಲಾದೇಶದೊಳಗೆ ಜನ ಮುಕ್ತವಾಗಿ ವಲಸೆ ಹೋಗಬಹುದು. ಅವರಿಗೆ ಯಾವುದೇ ರೀತಿಯ ಕಾನೂನಿನ ನಿರ್ಬಂಧವೂ ಇಲ್ಲ. ಅಲ್ಲಿ ಕೆಲವು ಕಾಲ ತುಂಬಾ ದುರ್ಭೀಕ್ಷ ಕಾಡುತ್ತದೆ. ಅದನ್ನು ಅವರು ಮೊಂಗಾ ಸಮಯ (ಹಸಿವಿನ ಸಮಯ) ಎಂದೇ ಕರೆಯುತ್ತಾರೆ. ಆಗ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಹಣ ಸಂಪಾದನೆಗೆ ಅವಕಾಶವೇ ಇರುವುದಿಲ್ಲ. ಅಂತಹ ದುರ್ಭಿಕ್ಷದ ಸಂದರ್ಭದಲ್ಲಿಯೂ ಜನ ಕೆಲಸ ಹುಡುಕಿಕೊಂಡು ನಗರಗಳಿಗೆ ಹೋಗುವುದಿಲ್ಲ. ನಗರಗಳಲ್ಲಿ ಅವರಿಗೆ ಕಟ್ಟಡ ನಿರ್ಮಾಣದಲ್ಲಿ ಹಾಗೂ ಸಾರಿಗೆ ಉದ್ಯಮದಲ್ಲಿ ಕಡಿಮೆ ಕೌಶಲದ ಕೆಲಸಗಳು ಸಿಗುತ್ತವೆ. ಅದರೂ ಅವರು ಹೋಗುವುದಿಲ್ಲ. ಅದಕ್ಕೆ ಕಾರಣವನ್ನು ಕಂಡುಕೊಳ್ಳಲು ಸಂಶೋಧಕರು ಒಂದು ವಿಭಿನ್ನವಾದ ಕ್ರಮವನ್ನು ಪ್ರಯತ್ನಿಸಿದರು. ಉತ್ತರ ಬಾಂಗ್ಲಾದ ರಂಗಪುರದಲ್ಲಿ ಮೊಂಗಾ ಋತುವಿನಲ್ಲಿ ಕಾಲಿಕ ವಲಸೆಯನ್ನು ಉತ್ತೇಜಿಸಲು ಒಂದು ಪ್ರಯೋಗ ನಡೆಸಲಾಯಿತು. ಅಲ್ಲಿಯ ಸರ್ಕಾರೇತರ ಸಂಸ್ಥೆಯೊಂದು ಕೆಲವು ಹಳ್ಳಿಗರನ್ನು ಯಾದೃಚ್ಛಿಕವಾಗಿ ಆರಿಸಿಕೊಂಡಿತು. ಅವರಲ್ಲಿ ಕೆಲವರಿಗೆ ವಲಸೆಯ ಅನುಕೂಲಗಳನ್ನು ಕುರಿತಂತೆ ಅಂದರೆ ನಗರಗಳಲ್ಲಿ ಎಷ್ಟು ಕೂಲಿ ದೊರಕುತ್ತೆ ಎಂಬ ಮಾಹಿತಿಯನ್ನು ನೀಡಲಾಯಿತು. ಮತ್ತೆ ಕೆಲವರಿಗೆ ಅಂತಹ ಮಾಹಿತಿಯ ಜೊತೆಗೆ 11.50 ಡಾಲರುಗಳನ್ನು ನಗದು ಅಥವಾ ಸಾಲದ ರೂಪದಲ್ಲಿ (ನಗರಕ್ಕೆ ಹೋಗಲು ಟಿಕಿಟ್ ಮತ್ತು ಒಂದೆರಡು ದಿನಗಳು ಊಟಕ್ಕೆ ತಗಲುವ ಖರ್ಚನ್ನು ನಿಭಾಯಿಸುವಷ್ಟು) ನೀಡಲು ನಿರ್ಧರಿಸಲಾಯಿತು. ಆದರೆ ಈ ಸೌಲಭ್ಯ ವಲಸೆ ಹೋದವರಿಗೆ ಮಾತ್ರ ಎಂಬ ಷರತ್ತನ್ನು ವಿಧಿಸಲಾಯಿತು.

ಅವರಲ್ಲಿ ಶೇಕಡ 22 ಕುಟುಂಬಗಳು ಇದರಿಂದ ಉತ್ತೇಜಿತಗೊಂಡವು. ಈ ಉತ್ತೇಜನ ಇಲ್ಲದೇ ಹೋಗಿದ್ದಲ್ಲಿ ಅವರು ತಮ್ಮ ಕುಟುಂಬದಿಂದ ಯಾರನ್ನೂ ವಲಸೆ ಹೋಗಲು ಕಳುಹಿಸುತ್ತಿರಲಿಲ್ಲ. ವಲಸೆ ಹೋದವರಲ್ಲಿ ಹೆಚ್ಚಿನವರಿಗೆ ಕೆಲಸ ಸಿಕ್ಕಿತು. ಹಾಗೆ ಹೋದವರು ತಮ್ಮ ವಲಸೆಯ ಅವಧಿಯಲ್ಲಿ ಸರಾಸರಿ 105 ಡಾಲರುಗಳಷ್ಟು ಹಣವನ್ನು ಸಂಪಾದಿಸಿದರು. ಅದರಲ್ಲಿ 66 ಡಾಲರುಗಳನ್ನು ಊರಿನಲ್ಲಿದ್ದ ತಮ್ಮ ಮನೆಯವರಿಗೆ ಕಳುಹಿಸಿದರು. ಅವರ ಕ್ಯಾಲೋರಿ ಬಳಕೆಯೂ ಶೇಕಡ 50ರಷ್ಟು ಹೆಚ್ಚಾಯಿತು. ಹೆಚ್ಚು ಕಡಿಮೆ ಉಪವಾಸ ಮಾಡಿಕೊಂಡಿದ್ದ ಕುಟುಂಬಗಳಿಗೆ ಒಳ್ಳೆಯ ಆಹಾರವನ್ನು ಸೇವಿಸುವುದಕ್ಕೂ ಸಾಧ್ಯವಾಯಿತು.

ಆದರೆ ಹೀಗೆ ವಲಸೆ ಹೋಗುವುದಕ್ಕೆ ಅವರಿಗೆ ಒಂದು ಸರ್ಕಾರೇತರ ಸಂಸ್ಥೆಯ ಉತ್ತೇಜನ ಏಕೆ ಬೇಕಾಯಿತು? ಕಡುದಾರಿದ್ರ್ಯ ವಲಸೆ ಹೋಗಲು ಅವರನ್ನೇಕೆ ಪ್ರಚೋದಿಸಲಿಲ್ಲ?

ಈ ಸಂದರ್ಭದಲ್ಲಿ ಒಂದು ಅಂಶ ಸ್ಪಷ್ಟವಾಗಿದೆ. ಅವರು ವಲಸೆ ಹೋಗದಿರುವುದಕ್ಕೆ ಮಾಹಿತಿಯ ಕೊರತೆ ಕಾರಣವಲ್ಲ. ಮಾಹಿತಿ ಪಡೆದವರೆಲ್ಲಾ ವಲಸೆ ಹೋಗಲಿಲ್ಲ. ಮಾಹಿತಿಯ ಜೊತೆಗೆ ಹಣ ಸಿಕ್ಕವರು ಮಾತ್ರ ವಲಸೆ ಹೋಗಲು ಮನಸ್ಸು ಮಾಡಿದರು. ಅಷ್ಟೇ ಅಲ್ಲ, ಹೀಗೆ ವಲಸೆ ಹೋಗಿ ಹಣ ಸಂಪಾದಿಸಿದವರಲ್ಲಿ ಕೇವಲ ಅರ್ಧದಷ್ಟು ಮಂದಿ ಮಾತ್ರ ಮುಂದಿನ ಮೊಂಗಾ ಋತುವಿನಲ್ಲಿ ಮತ್ತೆ ವಲಸೆ ಹೋದರು. ಉದ್ಯೋಗ ಸಿಗುತ್ತದೆ, ಹೆಚ್ಚಿಗೆ ಹಣ ಸಂಪಾದಿಸಬಹುದು ಅನ್ನುವುದು ಸ್ವತಃ ಅನುಭವಕ್ಕೆ ಬಂದಿದ್ದರೂ ಅವರು ವಲಸೆ ಹೋಗಲಿಲ್ಲ.

ಆರ್ಥಿಕವಾಗಿ ಲಾಭದಾಯಕವಾಗಿದ್ದರೂ ಎಲ್ಲರೂ ವಲಸೆ ಹೋಗುವುದಿಲ್ಲ, ಎಲ್ಲೋ ಕೆಲವರಷ್ಟೇ ವಲಸೆ ಹೋಗುತ್ತಿದ್ದಾರೆ ಅಂತಾದರೆ ಅವರನ್ನು ಹೋಗದಂತೆ ತಡೆಯುತ್ತಿರುವುದಕ್ಕೆ ಬೇರೇನೋ ಕಾರಣ ಇರಬೇಕು. ಈ ಒಗಟನ್ನು ನಂತರದಲ್ಲಿ ಬಿಡಿಸಲು ಪ್ರಯತ್ನಿಸೋಣ. ಅದಕ್ಕಿಂತ ಮೊದಲು ವಲಸೆಗಾರರಿಗೆ ಸಂಬಂಧಿಸಿದಂತೆ ಕಾರ್ಮಿಕ ಮಾರುಕಟ್ಟೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ. ಅದರಲ್ಲೂ ನಿರ್ದಿಷ್ಟವಾಗಿ ವಲಸಿಗರಿಂದಾಗಿ ಸ್ಥಳೀಯರಿಗೆ ನಷ್ಟವಾಗುತ್ತಿದೆ ಎಂದು ಹೆಚ್ಚಿನವರು ಈಗ ನಂಬಿದ್ದಾರೆ. ಆ ನಂಬಿಕೆ ನಿಜವೇ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.

ಎಲ್ಲರ ಅಭಿವೃದ್ಧಿಗಾಗಿ ಆರ್ಥಿಕ ನಿಯಮವನ್ನು ರೂಪಿಸುವುದು ಸಾಧ್ಯವೇ?

ಅರ್ಥಶಾಸ್ತ್ರದ ಕ್ಷೇತ್ರದಲ್ಲಿ ಈ ಪ್ರಶ್ನೆ ತುಂಬಾ ಬಿಸಿ ಚರ್ಚೆಯ ವಸ್ತು. ಆದರೆ ಲಭ್ಯವಿರುವ ಎಲ್ಲಾ ಪುರಾವೆಗಳೂ ಸಾಮಾನ್ಯವಾಗಿ ಈಗ ಇರುವ ನಂಬಿಕೆಗೆ ವಿರುದ್ಧವಾದುದನ್ನೇ ಸೂಚಿಸುತ್ತವೆ. ತುಂಬಾ ದೊಡ್ಡ ಪ್ರಮಾಣದಲ್ಲಿ ಜನ ವಲಸೆ ಬಂದರೂ ಒಟ್ಟಾರೆ ಕೂಲಿಯ ಮೇಲಾಗಲಿ ಅಥವಾ ಸ್ಥಳೀಯ ಜನರ ಉದ್ಯೋಗದ ಅವಕಾಶಗಳ ಮೇಲಾಗಲಿ ಯಾವುದೇ ರೀತಿಯ ಋಣಾತ್ಮಕ ಪರಿಣಾಮ ಆಗುವುದಿಲ್ಲ ಎಂದು ಬಹುತೇಕ ಮಾಹಿತಿಗಳು ಸೂಚಿಸುತ್ತವೆ.

ಅಷ್ಟಾಗಿಯೂ ಈ ಚರ್ಚೆ ಮುಂದುವರಿದೇ ಇದೆ. ಇದಕ್ಕೆ ಒಂದು ಕಾರಣವೆಂದರೆ ಇದನ್ನು ಅರ್ಥಮಾಡಿಸುವುದು ಅಷ್ಟೊಂದು ಸುಲಭವಲ್ಲ. ಹೆಚ್ಚಿನ ದೇಶಗಳು ವಲಸೆಯನ್ನು ನಿರ್ಬಂಧಿಸಿವೆ. ಅದರಲ್ಲೂ ತಮ್ಮ ಆರ್ಥಿಕತೆ ಕಷ್ಟದಲ್ಲಿದ್ದಾಗಲಂತೂ ವಲಸಿಗರನ್ನು ಅವು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಸಹಜವಾಗಿಯೇ ವಲಸಿಗರು ಕೂಡ ಲಾಭದಾಯಕವಾದ ಅವಕಾಶವನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. ನೀವು ಸ್ಥಳೀಯರ ಕೂಲಿಯನ್ನು ಹಾಗೂ ಒಟ್ಟಾರೆ ಬಂದಿರುವ ವಲಸಿಗರ ಸಂಖ್ಯೆಗೆ ಸಂಬಂಧಿಸಿದಂತೆ ಒಂದು ನಕ್ಷೆ ತಯಾರಿಸಿದರೆ ಏರು ಮುಖದ ರೇಖೆ ಮೂಡುತ್ತದೆ. ಅಂದರೆ ವಲಸಿಗರು ಹೆಚ್ಚಿದಂತೆಲ್ಲಾ ಕೂಲಿಯೂ ಏರುತ್ತದೆ ಎಂದರ್ಥ. ಇದು ವಲಸೆಪರ ಪ್ರತಿಪಾದಿಸುವವರಿಗೆ ಒಳ್ಳೆಯ ಸುದ್ದಿ. ಆದರೆ ಅಂತಹ ನಿರ್ಧಾರಕ್ಕೆ ಬರುವುದು ಸಂಪೂರ್ಣ ಸರಿಯಲ್ಲ. ವಲಸೆಯಿಂದ ಸ್ಥಳೀಯರ ಕೂಲಿಯ ಮೇಲೆ ಆಗಬಹುದಾದ ನಿಜವಾದ ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕಾದರೆ ವಲಸೆಯಿಂದಾಗುವ ಬೇರೆ ಪರಿಣಾಮಗಳನ್ನೂ ಗಮನಿಸಬೇಕು. ಕೇವಲ ಕೂಲಿಗೆ ಸಂಬಂಧಿಸಿದ ಅಂಶಗಳನ್ನು ಪರಿಗಣಿಸಿದರೆ ಸಾಲುವುದಿಲ್ಲ. ಏಕೆಂದರೆ ಸ್ಥಳೀಯರೂ ಕೂಡ ಲಾಭದಾಯಕವಾದ ಉದ್ಯೋಗವನ್ನೇ ಆರಿಸಿಕೊಳ್ಳುತ್ತಾರೆ. ಇದರೊಂದಿಗೆ ಇನ್ನೂ ಹಲವು ಸಾಧ್ಯತೆಗಳನ್ನೂ ನಾವು ಗಮನಿಸಬೇಕು. ಉದಾಹರಣೆಗೆ ವಲಸಿಗರು ನಿರಂತರವಾಗಿ ಬರುತ್ತಿರುವುದರಿಂದ ಹಲವು ಸ್ಥಳೀಯ ಕಾರ್ಮಿಕರೇ ನಗರದಿಂದ ಹೊರಹೋಗುತ್ತಿರಬಹುದು. ಅದರಿಂದಾಗಿಯೂ ಸ್ಥಳೀಯ ಕೂಲಿದರ ಕುಸಿಯದೇ ಇರುವ ಸಾಧ್ಯತೆಯೂ ಇರಬಹುದು. ನಾವು ಕೇವಲ ಊರಲ್ಲೇ ಉಳಿದುಕೊಂಡವರ ಕೂಲಿಯನ್ನು ಗಮನಿಸಿದರೆ, ವಲಸೆ ಹೋಗಬೇಕಾಗಿ ಬಂದವರ ನೋವನ್ನು ನಿರ್ಲಕ್ಷಿಸಿದಂತಾಗುತ್ತದೆ. ಇನ್ನೂ ಒಂದು ಸಾಧ್ಯತೆಯಿದೆ. ವಲಸಿಗರ ಸಂಖ್ಯೆ ಹೆಚ್ಚಿಗೆ ಇರುವ ನಗರಗಳಿಗೆ ಕೆಲಸಗಾರರು ಸುಲಭವಾಗಿ ಸಿಗುತ್ತಾರೆ ಎನ್ನುವ ಕಾರಣಕ್ಕೆ ಹೆಚ್ಚಿನ ಕೈಗಾರಿಕೆಗಳು ಬರಬಹುದು. ಜೊತೆಗೆ ಕೈಗಾರಿಕೆಗಳನ್ನು ಕಳೆದುಕೊಂಡ ನಗರಗಳಲ್ಲಿ ಕೆಲಸಗಾರರಿಗೆ ಆಗಿರುವ ನಷ್ಟವನ್ನು ನಾವು ನಿರ್ಲಕ್ಷಿಸಿಬಿಡುವ ಸಾಧ್ಯತೆಯೂ ಇದೆ.

ಡೇವಿಡ್ ಕಾರ್ಡ್ ಈ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ತನ್ನ ಅಧ್ಯಯನದಲ್ಲಿ ಒಂದು ಒಳ್ಳೆಯ ಕ್ರಮವನ್ನು ಅನುಸರಿಸಿದ್ದಾನೆ. ಕ್ಯೂಬಾದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಏಪ್ರಿಲ್ 20, 1980ರಲ್ಲಿ ಭಾಷಣ ಮಾಡುತ್ತಾ ಕ್ಯೂಬಾದ ನಿವಾಸಿಗಳಿಗೆ ವಲಸೆ ಹೋಗುವುದಕ್ಕೆ ಅಧಿಕಾರ ನೀಡುತ್ತಾನೆ. ಅದರ ಪರಿಣಾಮ ಅನಿರೀಕ್ಷಿತವಾಗಿತ್ತು. ಜನ ತಕ್ಷಣ ಊರು ಬಿಡಲು ಪ್ರಾರಂಭಿಸಿದರು. 1980ರ ಏಪ್ರಿಲ್ ಮತ್ತು ಸೆಪ್ಟೆಂಬರ್ ಆವಧಿಯಲ್ಲಿ 1,25,000 ಕ್ಯೂಬಾದ ನಿವಾಸಿಗಳು ಮಿಯಾಮಿಗೆ ವಲಸೆ ಹೋದರು. ಹಾಗೆ ವಲಸೆ ಹೋದವರಿಗೆ ಯಾವುದೇ ಶಿಕ್ಷಣವಿರಲಿಲ್ಲ. ಹಾಗೊಂದು ವೇಳೆ ಇದ್ದರೂ ಆ ಶಿಕ್ಷಣ ತುಂಬಾ ಕಡಿಮೆ ಮಟ್ಟದ್ದಾಗಿತ್ತು. ಹೀಗೆ ವಲಸೆ ಹೋದವರಲ್ಲಿ ಹಲವರು ಮಿಯಾಮಿಯಲ್ಲಿ ಖಾಯಮ್ಮಾಗಿ ನೆಲೆಸಿದರು. ಮಿಯಾಮಿಯ ಕಾರ್ಮಿಕರ ಸಂಖ್ಯೆಯಲ್ಲಿ 7% ಹೆಚ್ಚಳವಾಯಿತು.

ಕೂಲಿಯ ಮೇಲೆ ಇದರ ಪರಿಣಾಮ ಏನಾಯಿತು? ಇದನ್ನು ಕಂಡುಕೊಳ್ಳಲು ಕಾರ್ಡ್ “Difference in Differences Approach” ಎಂಬ ಕ್ರಮವನ್ನು ಬಳಸಿದ. ಅವನು ಮಿಯಾಮಿಯಲ್ಲಿ ಕೂಲಿಯಲ್ಲಿ ಆದ ಬದಲಾವಣೆಯನ್ನು, ಮಿಯಾಮಿಯಲ್ಲೇ ನೆಲೆಸಿರುವ ಸ್ಥಳೀಯರ ಉದ್ಯೋಗದ ದರದೊಂದಿಗೆ ಹೋಲಿಸಿದ. ವಲಸಿಗರು ಬರುವುದಕ್ಕೆ ಮುಂಚಿನ ಮತ್ತು ನಂತರದ ಪರಿಸ್ಥಿತಿಗಳನ್ನು ಅಧ್ಯಯನ ಮಾಡಿದ. ಅದನ್ನು ಅಮೆರಿಕೆಯ ಇನ್ನೂ ನಾಲ್ಕು ನಗರಗಳಲ್ಲಿ (ಅಟ್ಲಾಂಟಾ, ಹ್ಯೂಸ್ಟನ್, ಲಾಸ್ ಏಂಜಲಿಸ್, ಟಂಪಾ) ಇರುವ ಪರಿಸ್ಥಿತಿಯೊಂದಿಗೆ ಹೋಲಿಸಿ ನೋಡಿದ. ಮಾರಿಯೇಲಿಟೋಸ್ ವಲಸಿಗರು ಬಂದ ನಂತರ ಮಿಯಾಮಿಯಲ್ಲಿ ಈಗಾಗಲೇ ನೆಲೆಸಿದ್ದವರ ಕೂಲಿ ಮತ್ತು ಉದ್ಯೋಗದಲ್ಲಿ ಆಗಿರುವ ಬದಲಾವಣೆಯನ್ನು ಉಳಿದ ನಗರಗಳೊಂದಿಗೆ ಹೋಲಿಸಿ ನೋಡುವುದು ಹೀಗೆ ಮಾಡುವುದರ ಉದ್ದೇಶವಾಗಿತ್ತು.

ವಲಸಿಗರು ಬಂದ ತಕ್ಷಣ ಅಥವಾ ಕೆಲವು ವರ್ಷಗಳ ನಂತರವಾಗಲಿ ವಲಸೆಯಿಂದ ಸ್ಥಳೀಯರ ಕೂಲಿಯ ಮೇಲೆ ಯಾವುದೇ ಪರಿಣಾಮವೂ ಆಗಲಿಲ್ಲ ಅನ್ನುವುದು ಕಾರ್ಡ್‍ನ ಅಧ್ಯಯನದಿಂದ ತಿಳಿಯುತ್ತದೆ. ಈ ಘಟನೆಗೂ ಮೊದಲೇ ಬಂದು ನೆಲೆಸಿದ್ದ ಕ್ಯೂಬಾದ ವಲಸಿಗರ ಕೂಲಿಯ ಮೇಲೂ ವಲಸೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.

ಇದೊಂದು ಮಹತ್ವದ ಅಧ್ಯಯನ. ವಲಸೆಯ ಪರಿಣಾಮಗಳನ್ನು ಕುರಿತಾದ ಪ್ರಶ್ನೆಗಳಿಗೆ ಒಂದು ಸಮರ್ಥವಾದ ಉತ್ತರವನ್ನು ನೀಡುವ ದಿಕ್ಕಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಮಿಯಾಮಿಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಿಗೆ ಇವೆ ಎನ್ನುವ ಕಾರಣಕ್ಕೆ ವಲಸಿಗರು ಅದನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಅದು ಕ್ಯೂಬಾಕ್ಕೆ ತುಂಬಾ ಸಮೀಪzಲ್ಲಿದೆ ಎನ್ನುವ ಕಾರಣಕ್ಕೆ ಅದನ್ನು ಆಯ್ಕೆ ಮಾಡಿಕೊಂಡಿದ್ದರು. ಈ ವಲಸೆ ತುಂಬಾ ಅನಿರೀಕ್ಷಿತವಾಗಿತ್ತು. ಹಾಗಾಗಿ ಕಾರ್ಮಿಕರಿಗಾಗಲಿ, ಕಂಪನಿಗಳಿಗಾಗಲಿ ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸುವುದಕ್ಕೆ ಅವಕಾಶವೇ ಇರಲಿಲ್ಲ. ಅಂದರೆ ಕಾರ್ಮಿಕರಿಗೆ ಬಿಟ್ಟುಹೋಗುವುದಕ್ಕಾಗಲಿ ಅಥವಾ ಕಂಪನಿಗಳಿಗೆ ಬಂದು ಅಲ್ಲಿ ನೆಲೆಸುವುದಕ್ಕಾಗಲಿ ಸಾಧ್ಯವಿರಲಿಲ್ಲ. ಕಾರ್ಡ್ ಅಧ್ಯಯನಕ್ಕೆ ಬಳಸಿದ ಕ್ರಮ ಹಾಗೂ ಅದರ ತೀರ್ಮಾನ ಎರಡೂ ತುಂಬಾ ಪ್ರಭಾವಶಾಲಿಯಾಗಿತ್ತು. ವಲಸೆಯ ವಿಷಯದಲ್ಲಿ ಬೇಡಿಕೆ-ಪೂರೈಕೆ ನಿಯಮಗಳು ಅನ್ವಯವಾಗುವುದಿಲ್ಲ ಅನ್ನುವುದನ್ನು ಬಹುಶಃ ಮೊತ್ತಮೊದಲ ಬಾರಿಗೆ ಈ ಅಧ್ಯಯನ ತೋರಿಸಿತು.

ಈ ಅಧ್ಯಯನವನ್ನು ಕುರಿತು ವ್ಯಾಪಕವಾದ ಚರ್ಚೆಗಳು ನಡೆದವು. ಖಂಡನೆ ನಿರಾಕರಣೆಗಳು ನಡೆದವು. ಬಹುಶಃ ಅರ್ಥಶಾಸ್ತ್ರದಲ್ಲಿ ಈ ಪ್ರಾಯೋಗಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ನಡೆದಷ್ಟು ಚರ್ಚೆ-ಪ್ರತಿಚರ್ಚೆಗಳು, ಅದು ಹುಟ್ಟು ಹಾಕಿದ ಭಾವೋದ್ರೇಕ ಹಾಗೂ ರೋಷ ಇನ್ಯಾವುದೇ ಸಂದರ್ಭದಲ್ಲೂ ಕಂಡುಬಂದಿಲ್ಲ. ಜಾರ್ಜ್ ಬೋರ್ಜಸ್ ಪ್ರಾರಂಭದಿಂದಲೂ ಇದರ ಪ್ರಬಲ ವಿರೋಧಿ. ಕೌಶಲವಿಲ್ಲದ ವಲಸಿಗರನ್ನು ಹೊರಗಿಡಬೇಕು ಎನ್ನುವ ಸಿದ್ಧಾಂತದ ಪ್ರಬಲ ಪ್ರತಿಪಾದಕ. ಇಡೀ ಘಟನೆಯನ್ನು ಅವನು ಮತ್ತೆ ವಿಶ್ಲೇಷಣೆಗೆ ಒಳಪಡಿಸಿದ. ಹೋಲಿಕೆಗಾಗಿ ಇನ್ನಷ್ಟು ನಗರಗಳನ್ನು ಆರಿಸಿಕೊಂಡ. ಕೇವಲ ಹೈಸ್ಕೂಲಿಗೇ ಓದನ್ನು ಮೊಟಕುಗೊಳಿಸಿದ ಹಿಸ್ಪ್ಯಾನೇತರ ಪುರುಷರನ್ನು ಮಾತ್ರ ಅವನು ವಿಶ್ಲೇಷಣೆಗೆ ಆರಿಸಿಕೊಂಡ. ಅವನ ದೃಷ್ಟಿಯಲ್ಲಿ ನಿಜವಾಗಿ ಕಾಳಜಿ ತೋರಿಸಬೇಕಾದದ್ದು ಅವರಿಗಷ್ಟೇ ಆಗಿತ್ತು. ಅವನ ವಿಶ್ಲೇಷಣೆಯ ಪ್ರಕಾರ ಬೇರೆ ನಗರಗಳಿಗೆ ಹೋಲಿಸಿದರೆ ಆ ಘಟನೆಯ ನಂತರ ಮಿಯಾಮಿಯಲ್ಲಿ ಕೂಲಿಯು ತುಂಬಾ ತೀವ್ರವಾಗಿ ಕುಸಿಯಲಾರಂಭಿಸಿತ್ತು. ಆದರೆ ನಿಜವಾಗಿ ಹೋಲಿಸಿ ನೋಡಬೇಕಾದದ್ದು ಕ್ಯೂಬಾದ ವಲಸಿಗರ ಜೊತೆ ಹೈಸ್ಕೂಲ್ ಬಿಟ್ಟ ಹಿಸ್ಪ್ಯಾನಿಸ್ ಹುಡುಗರನ್ನು. ಹಾಗಾಗಿ ಹೈಸ್ಕೂಲ್ ಬಿಟ್ಟ ಹಿಸ್ಪ್ಯಾನಿಸ್ ಹುಡುಗರು ಮತ್ತು ಹೆಂಗಸರಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸೇರಿಸಿಕೊಂಡು ಮತ್ತೆ ವಿಶ್ಲೇಷಿಸಿದಾಗ ಫಲಿತಾಂಶ ತಲೆಕೆಳಕಾಯಿತು. ಮಿಯಾಮಿ ಹಾಗೂ ಉಳಿದ ನಗರಗಳ ನಡುವೆ ಕೂಲಿಯಲ್ಲಿ ಯಾವುದೇ ಗಣನೀಯವಾದ ವ್ಯತ್ಯಾಸವೂ ಕಾಣಲಿಲ್ಲ. ಆದರೂ ಬೋರ್ಜ್‍ಸ್‍ಗೆ ಇದು ಸಮ್ಮತವೆನಿಸಲಿಲ್ಲ. ಮ್ಯಾರಿಯೆಲ್ ಬೋಟ್‍ಲಿಫ್ಟ್ ಕುರಿತ ಚರ್ಚೆ ಮುಂದುವರಿಯುತ್ತಲೇ ಇದೆ.

ಬೆಂಬಲಿಸುವವರು ಹಾಗೂ ವಿರೋಧಿಸುವವರು ಇಬ್ಬರೂ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡರು. ಅವರ ರಾಜಕೀಯ ನಿಲುವುಗಳು ಅವರ ಅಭಿಪ್ರಾಯವನ್ನು ನಿರ್ಧರಿಸುತ್ತಿತ್ತು. ಈ ಅಧ್ಯಯನದಿಂದಾಗಿ ಅವರ ಮನಸ್ಸೇನು ಬದಲಾಗಲಿಲ್ಲ. ಮೂವತ್ತು ವರ್ಷಗಳ ಹಿಂದೆ ಯಾವುದೋ ಒಂದು ನಗರದಲ್ಲಿ ನಡೆದ ಘಟನೆಯನ್ನೇ ವಲಸೆ ಸಿದ್ಧಾಂತಕ್ಕೆ ಆಧಾರವಾಗಿ ಇಟ್ಟುಕೊಳ್ಳುವುದು ಇಬ್ಬರಿಗೂ ತಾರ್ಕಿಕವಾಗಿ ತೋರಲಿಲ್ಲ.

ಅದೃಷ್ಟವಶಾತ್ ಕಾರ್ಡ್‍ರವರ ಅಧ್ಯಯನದಿಂದ ಸ್ಫೂರ್ತಿಪಡೆದ ಹಲವು ವಿದ್ವಾಂಸರು ಈ ನಿಟ್ಟಿನಲ್ಲಿ ಅಧ್ಯಯನವನ್ನು ಮುಂದುವರಿಸಿದ್ದಾರೆ. ವಲಸೆ ಹೋಗಬೇಕಾದ ಸ್ಥಳಗಳ ಬಗ್ಗೆ ಯಾವುದೇ ಮುನ್ಸೂಚನೆಯೂ ಇಲ್ಲದೆ ಅಥವಾ ಆ ಬಗ್ಗೆ ಯಾವುದೇ ನಿಯಂತ್ರಣವೂ ಇಲ್ಲದೆ ಜನ ವಲಸೆ ಹೋಗಬೇಕಾಗಿ ಬಂದ ಇದೇ ಬಗೆಯ ಘಟನೆಗಳನ್ನು ಗುರುತಿಸುವ ಪ್ರಯತ್ನವನ್ನು ಹಲವರು ಮಾಡಿದ್ದಾರೆ. 1962ರಲ್ಲಿ ಅಲ್ಜೀರಿಯಾ ಫ್ರಾನ್ಸಿನ ಹಿಡಿತದಿಂದ ಸ್ವತಂತ್ರವಾಯಿತು. ಅನಂತರÀ ಐರೋಪ್ಯ ಮೂಲದ ಅಲ್ಜೀರಿಯನ್ನರನ್ನು ಫ್ರಾನ್ಸಿಗೆ ಮರಳಿ ಕಳುಹಿಸಲಾಯಿತು. ಆ ಬಗ್ಗೆಯೂ ಒಂದು ಅಧ್ಯಯನ ನಡೆದಿದೆ. 1990ರಲ್ಲಿ ಸೋವಿಯತ್ ಒಕ್ಕೂಟವು ವಲಸೆಹೋಗುವುದರ ಮೇಲಿದ್ದ ನಿರ್ಬಂಧವನ್ನು ತೆರವುಗೊಳಿಸಿದಾಗ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಜನ ಇಸ್ರೇಲಿಗೆ ವಲಸೆ ಹೋದರು. ಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ ಇಸ್ರೇಲಿನ ಜನಸಂಖ್ಯೆ ಶೇಕಡ 12ರಷ್ಟು ಹೆಚ್ಚಾಯಿತು. ಈ ಬೃಹತ್ ವಲಸೆಯ ಪರಿಣಾಮವನ್ನು ಕುರಿತಂತೆಯೂ ಅಧ್ಯಯನ ನಡೆದಿದೆ. ಅಂತೆಯೇ ಮಹಾನ್ ವಲಸೆಯ ಯುಗದಲ್ಲಿ (1910-1930) ಯುರೋಪಿನಿಂದ ಅಮೆರಿಕೆಗೆ ದೊಡ್ಡ ಪ್ರಮಾಣದಲ್ಲಿ ಜನ ವಲಸೆ ಬಂದಾಗ ಉಂಟಾದ ಪರಿಣಾಮವನ್ನು ಕುರಿತೂ ಅಧ್ಯಯನವಾಗಿದೆ. ಈ ಎಲ್ಲಾ ಅಧ್ಯಯನಗಳು ವಲಸೆಯಿಂದ ಸ್ಥಳೀಯರ ಮೇಲೆ ಯಾವುದೇ ಪ್ರತಿಕೂಲವಾದ ಪರಿಣಾಮವಾಗಿಲ್ಲ ಎನ್ನುವುದನ್ನೇ ಸೂಚಿಸುತ್ತದೆ. ನಿಜವಾಗಿ ಹೇಳಬೇಕೆಂದರೆ ಎಷ್ಟೋ ಸಲ ವಲಸೆಯಿಂದ ಅನುಕೂಲವೇ ಆಗಿದೆ. ಉದಾಹರಣೆಗೆ ಅಮೇರಿಕಾಕ್ಕೆ ಐರೋಪ್ಯರು ವಲಸೆ ಬಂದಿದ್ದರಿಂದ ಅಮೇರಿಕೆಯಲ್ಲಿ ಒಟ್ಟಾರೆಯಾಗಿ ಉದ್ಯೋಗದಲ್ಲಿ ಹೆಚ್ಚಳವಾಗಿದೆ. ಸ್ಥಳೀಯರು ಫೋರ್‍ಮನ್ನುಗಳು ಮತ್ತು ಮ್ಯಾನೇಜರುಗಳಾಗಿದ್ದಾರೆ. ಹಾಗೆಯೆ ಕೈಗಾರಿಕಾ ಉತ್ಪಾದನೆಯೂ ಹೆಚ್ಚಾಗಿದೆ.

ಇನ್ನೊಂದು ಇತ್ತೀಚಿನ ಅಧ್ಯಯನವೂ ಇದೇ ತೀರ್ಮಾನವನ್ನು ಪುಷ್ಟೀಕರಿಸುತ್ತದೆ. ಪಶ್ಚಿಮ ಯುರೋಪಿಗೆ ಜಗತ್ತಿನ ವಿಭಿನ್ನ ಕಡೆಗಳಿಂದ ನಿರಾಶ್ರಿತರು ತಂಡೋಪತಂಡವಾಗಿ ಬಂದಿದ್ದಾರೆ. ಅದರಿಂದ ಸ್ಥಳೀಯರ ಮೇಲೆ ಎಂತಹ ಪರಿಣಾಮವಾಗಿದೆ ಎನ್ನುವುದನ್ನು ಕುರಿತ ಅಧ್ಯಯನವೂ ಇದನ್ನೇ ಪುಷ್ಟೀಕರಿಸುತ್ತದೆ. ಡೆನ್ಮಾರ್ಕ್‍ನ ಸಂದರ್ಭದಲ್ಲಿ ಆಗಿರುವ ಅಧ್ಯಯನವಂತೂ ತೀರಾ ಕುತೂಹಲಕಾರಿಯಾಗಿದೆ. ಡೆನ್ಮಾರ್ಕ್ ಹಲವು ದೃಷ್ಟಿಯಿಂದ ಒಂದು ಅದ್ಭುತವಾದ ದೇಶ. ನಿಮಗೆ ಅಲ್ಲಿಯ ಪ್ರತಿಯೊಬ್ಬ ವ್ಯಕ್ತಿಯನ್ನು ಕುರಿತ ವಿವರವಾದ ದಾಖಲೆಗಳು ಸಿಗುತ್ತವೆ. ಪ್ರಾರಂಭದಲ್ಲಿ ನಿರಾಶ್ರಿತರನ್ನು ಬೇರೆ ಬೇರೆ ನಗರಗಳಿಗೆ ಕಳುಹಿಸಲಾಗುತ್ತಿತ್ತು. ಹಾಗೆ ಕಳುಹಿಸುವಾಗ ಅವರ ಇಷ್ಟಾನಿಷ್ಟಗಳನ್ನಾಗಲಿ, ಕೆಲಸ ಹುಡುಕಿಕೊಳ್ಳುವುದರಲ್ಲಿ ಅವರಿಗೆ ಇರುವ ಸಾಮಥ್ರ್ಯವನ್ನಾಗಲಿ ಪರಿಗಣಿಸುತ್ತಿರಲಿಲ್ಲ. ಅಲ್ಲಿ ಮುಖ್ಯವಾಗಿದ್ದದ್ದು ಎರಡೇ ಅಂಶ. ಒಂದು ಸಾರ್ವಜನಿಕ ವಸತಿಯ ಲಭ್ಯತೆ ಮತ್ತು ಎರಡನೆಯದಾಗಿ ಅವರಿಗೆ ನೆಲೆಕಲ್ಪಿಸಲು ಆಡಳಿತಕ್ಕೆ ಇರುವ ಸಾಮಥ್ರ್ಯ. 1994 ಮತ್ತು 1998ರ ನಡುವೆ ವಲಸಿಗರು ದೊಡ್ಡ ಪ್ರಮಾಣದಲ್ಲಿ ಡೆನ್ಮಾರ್ಕಿಗೆ ಬಂದರು. ಅವರೆಲ್ಲರೂ ಬೋಸ್ನಿಯಾ, ಆಫ್ಗಾನಿಸ್ತಾನ್, ಸೊಮಾಲಿಯಾ, ಇರಾಕ್, ಇರಾನ್, ವಿಯೆಟ್ನಾಂ, ಶ್ರೀಲಂಕಾ, ಮತ್ತು ಲೆಬಾನಾನ್ ಮುಂತಾದ ತೀರಾ ವಿಭಿನ್ನ ದೇಶಗಳಿಂದ ಬಂದವರಾಗಿದ್ದರು. ಅವರೆಲ್ಲರೂ ಯಾದೃಚ್ಛಿಕವಾಗಿ ಇಡೀ ಡೆನ್ಮಾರ್ಕಿನ ಉದ್ದಗಲಕ್ಕೂ ಚೆದುರಿ ಹೋಗಿದ್ದರು. 1998ರಲ್ಲಿ ಆಡಳಿತವು ಉದ್ಯೋಗ ನೀಡುವ ನೀತಿಯನ್ನು ಕೈಬಿಟ್ಟಿತು. ಆಗ ಹೆಚ್ಚಿನ ಸಂದರ್ಭಗಳಲ್ಲಿ ವಲಸಿಗರು ತಮ್ಮ ಊರಿನ, ಅಥವಾ ತಮ್ಮ ಸಮುದಾಯದ ಅಥವಾ ತಮ್ಮ ಜನಾಂಗಕ್ಕೆ ಸೇರಿದ ಜನ ಈಗಾಗಲೇ ಎಲ್ಲಿ ನೆಲೆಸಿದ್ದರೋ ಅಲ್ಲಿಗೆ ಹೋದರು. ಉದಾಹರಣೆಗೆ ಮೊದಲ ಬಂದ ಇರಾಕಿ ವಲಸಿಗರು ಎಲ್ಲಿ ನೆಲೆಸಿದ್ದರೋ ಅಲ್ಲಿಗೇ ಅನಂತರ ಬಂದ ಇರಾಕಿ ವಲಸಿಗರು ಹೋದರು. ಇದರ ಪರಿಣಾಮವಾಗಿ ಡೆನ್ಮಾರ್ಕಿನ ಕೆಲವು ಸ್ಥಳಗಳಲ್ಲಿ ವಲಸಿಗರು ಕೇಂದ್ರೀಕೃತವಾದರು. ಇವೆಲ್ಲಾ 1994 ಮತ್ತು 1998ರ ಆವಧಿಯಲ್ಲಿ ಡೆನ್ಮಾರ್ಕ್ ಸರ್ಕಾರಕ್ಕೆ ವಲಸಿಗರಿಗೆ ಪುನರ್ವಸತಿಯನ್ನು ಕಲ್ಪಿಸುವುದಕ್ಕೆ ಸಾಧ್ಯವಿದ್ದ ಸ್ಥಳಗಳು. ವಲಸಿಗರು ಅಲ್ಲಿ ಕೇಂದ್ರಿಕೃತವಾಗುವುದಕ್ಕೆ ಇರಬಹುದಾದ ಕಾರಣ ಅದೇ ಅನ್ನಿಸುತ್ತದೆ.

ಡೆನ್ಮಾರ್ಕಿನ ಅಧ್ಯಯನವೂ ಈವರೆಗಿನ ಇತರ ಅಧ್ಯಯನಗಳ ತೀರ್ಮಾನಕ್ಕೇ ಬಂದಿತ್ತು. ಹೆಚ್ಚಿನ ವಲಸೆಗಾರರು ಆಕಸ್ಮಿಕವಾಗಿ ಬಂದು ನೆಲೆಸಿದ ನಗರಗಳಲ್ಲಿಯೂ ಕೂಲಿ, ಉಳಿದ ನಗರಗಳಿಗಿಂತ ಭಿನ್ನವಾಗಿರಲಿಲ್ಲ. ಮತ್ತು ವಲಸೆಯಿಂದ ನಿರಕ್ಷರಸ್ತ ಸ್ಥಳೀಯರ ಮೇಲೆ ಯಾವುದೇ ನೇತ್ಯಾತ್ಮಕ ಪರಿಣಾಮವೂ ಆಗಲಿಲ್ಲ.

ಈ ಎಲ್ಲಾ ಅಧ್ಯಯನಗಳು ಹೇಳುವುದು ಒಂದೇ ಅಂಶವನ್ನು- ಕಡಿಮೆ ಕೌಶಲದ ವಲಸಿಗರಿಂದ ಸ್ಥಳೀಯರ ಕೂಲಿಗಾಗಲಿ ಅಥವಾ ಉದ್ಯೋಗಕ್ಕಾಗಲಿ ಯಾವುದೇ ತೊಂದರೆಯೂ ಆಗುವುದಿಲ್ಲ. ಆದರೆ ಈಗ ನಡೆಯುತ್ತಿರುವ ರಾಜಕೀಯ ಚರ್ಚೆ ಹುಟ್ಟುಹಾಕಿರುವ ಬಿಸಿಯ ಪರಿಣಾಮವಾಗಿ ಅದರಲ್ಲಿ ತೊಡಗಿಕೊಂಡಿರುವ ಜನರಿಗೆ ರಾಜಕೀಯದಿಂದಾಚೆಗೆ ನೋಡುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ಇದರ ನಡುವೆ ಒಂದು ಸಮಚಿತ್ತದ, ಕ್ರಮಬದ್ಧ ದನಿಯೂ ಇದೆ. ಅಮೇರಿಕೆಯ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಶೈಕ್ಷಣಿಕ ಔತ್ತಮ್ಯಕ್ಕೆ ಜಗತ್ತಿನಾದ್ಯಂತ ಗೌರವಿಸಲ್ಪಡುವ ಸಂಸ್ಥೆ. ಅದು ಒಂದು ವಿಷಯವನ್ನು ಕುರಿತಂತೆ ವೈಜ್ಞಾನಿಕ ಒಮ್ಮತವನ್ನು ಮೂಡಿಸುವ ದೃಷ್ಟಿಯಿಂದ ಒಂದು ತಂಡವನ್ನು ರಚಿಸಿ ವರದಿಯನ್ನು ಸಿದ್ಧಪಡಿಸುತ್ತದೆ. ಹಾಗೆಯೇ ವಲಸೆಗೆ ಸಂಬಂಧಿಸಿದಂತೆ ಅದು 267 ಪುಟಗಳ ವರದಿಯನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ವರದಿಯನ್ನು ಸಿದ್ಧಪಡಿಸುವ ತಂಡದಲ್ಲಿ ವಿಷಯದ ಪರವಾಗಿ ವಾದಿಸುವವರು, ಅದನ್ನು ವಿರೋಧಿಸುವವರು ಎಲ್ಲರೂ ಇರುತ್ತಾರೆ. ಅವರು ಸಿದ್ಧಪಡಿಸುವ ವರದಿಯಲ್ಲಿ ಒಳ್ಳೆಯದು, ಕೆಟ್ಟದ್ದು, ವಿಕೃತವಾಗಿರುವುದು ಎಲ್ಲವೂ ಇರುತ್ತವೆ. ಅಂತಿಮವಾಗಿ ಒಟ್ಟಾರೆ ಅಭಿಪ್ರಾಯವನ್ನು ಕ್ರೋಢೀಕರಿಸಿ ನೀಡುತ್ತಾರೆ. ವಲಸೆ ಕುರಿತು ಪ್ರಕಟಿಸಿರುವ ಅದರ ನಿರ್ಣಯ ಕೂಡ ಉಳಿದ ಅಧ್ಯಯನಗಳ ಧ್ವನಿಯನ್ನೇ ಪ್ರತಿಧ್ವನಿಸುತ್ತದೆ. ಅದೂ ಕೂಡ “ಒಟ್ಟಾರೆಯಾಗಿ ಸ್ಥಳೀಯರ ಕೂಲಿಯ ಮೇಲೆ ವಲಸೆಯ ಪರಿಣಾಮ ಅತ್ಯಲ್ಪ” ಎಂದು ದಾಖಲಿಸುತ್ತದೆ.

ವಲಸೆಯ ವಿಷಯದಲ್ಲಿ ವಿಶೇಷವಾದದ್ದು ಏನು?

ಯಾವುದೇ ಸರಕಿನ ಪೂರೈಕೆ ಹೆಚ್ಚಾದರೆ ಅದರ ಬೆಲೆ ಕಡಿಮೆಯಾಗುತ್ತದೆ ಎನ್ನುವುದು ಪ್ರಸಿದ್ಧ ಬೇಡಿಕೆ-ಪೂರೈಕೆ ನಿಯಮ. ಆದರೆ ಇದು ವಲಸೆಗೆ ಅನ್ವಯವಾಗುತ್ತಿಲ್ಲ. ಜನ ವಲಸೆ ಬಂದರೂ ಕೂಡ ಕಡಿಮೆ ಕೌಶಲ ಹೊಂದಿರುವ ಸ್ಥಳೀಯ ಕೆಲಸಗಾರರ ಕೂಲಿ ಕಡಿಮೆಯಾಗುವುದಿಲ್ಲ ಎನ್ನುವುದು ಸ್ಪಷ್ಟ. ಆದರೂ ಇದನ್ನು ಅಮೂಲಾಗ್ರವಾಗಿ ಚರ್ಚಿಸಿ, ಇದಕ್ಕೆ ಕಾರಣಗಳನ್ನು ಕಂಡುಕೊಳ್ಳುವುದು ಒಳ್ಳೆಯದು. ಇದನ್ನು ಗ್ರಹಿಸಿಕೊಳ್ಳದೇ ಹೋದರೆ ವಲಸೆಗೆ ಸಂಬಂಧಿಸಿದ ದತ್ತಾಂಶಗಳಲ್ಲಿ ಅಥವಾ ಪರಿಸ್ಥಿತಿಯಲ್ಲಿ ಏನೋ ವಿಶೇಷವಿದೆ ಎಂದು ಅಚ್ಚರಿಯಿಂದ ನೋಡುತ್ತಿರುತ್ತೇವೆ.

ಪ್ರಸ್ತುತವಾದ ಹಲವು ಅಂಶಗಳನ್ನು, ವಿಚಾರಗಳನ್ನು ಬೇಡಿಕೆ-ಪೂರೈಕೆ ನಿಯಮವು ಸಂಪೂರ್ಣವಾಗಿ ಕಡೆಗಣಿಸುತ್ತದೆ, ಪರಿಗಣಿಸುವುದೇ ಇಲ್ಲ. ಮೊದಲನೆಯದಾಗಿ ಕಾರ್ಮಿಕರು ವಲಸೆ ಬಂದಾಗ ಬೇಡಿಕೆಯ ರೇಖೆ ಬಲಕ್ಕೆ ಚಲಿಸುತ್ತದೆ. ಇದರಿಂದ ಸಾಮಾನ್ಯವಾಗಿ ಆಗುವಂತೆ ಇಳಿಮುಖ ಚಲನೆ ತಪ್ಪಿಹೋಗುತ್ತದೆ. ಯಾಕೆಂದರೆ ಹೊಸದಾಗಿ ವಲಸೆ ಬಂದವರು ಹಣವನ್ನು ಖರ್ಚುಮಾಡುತ್ತಾರೆ. ಅವರು ಹೋಟೆಲ್ಲುಗಳಿಗೆ ಹೋಗುತ್ತಾರೆ, ಕ್ಷೌರ ಮಾಡಿಸಿಕೊಳ್ಳುತ್ತಾರೆ, ಸಮಾನುಗಳನ್ನು ಕೊಂಡುಕೊಳ್ಳುತ್ತಾರೆ. ಇವೆಲ್ಲವೂ ಉದ್ಯೋಗವನ್ನು ಸೃಷ್ಟಿಸುತ್ತವೆ. ಇವೆಲ್ಲಾ ಹೆಚ್ಚಾಗಿ ಸ್ಥಳೀಯರು ಮಾಡುತ್ತಿದ್ದ ಕಡಿಮೆ ಕೌಶಲದ ಕೆಲಸಗಳು. ಅವುಗಳಿಗೆ ಬೇಡಿಕೆ ಹೆಚ್ಚುವುದರಿಂದ ಅವರ ಕೂಲಿ ಹೆಚ್ಚುತ್ತದೆ (ಚಿತ್ರ 2.2). ಇದರಿಂದಾಗಿ ಹೆಚ್ಚು ಜನ ಕಾರ್ಮಿಕರು ವಲಸೆ ಬಂದರೆ, ನಾವು ನಿರೀಕ್ಷಿಸಿದಂತಹ ದುಷ್ಪರಿಣಾಮ ಆಗುವುದಿಲ್ಲ. ಅಂದರೆ ಕೂಲಿ ಮತ್ತು ನಿರುದ್ಯೋಗ ಕಮ್ಮಿಯಾಗುವುದಿಲ್ಲ.

ಒಂದು ವೇಳೆ ಹೆಚ್ಚುವರಿ ಬೇಡಿಕೆಗೆ ಅವಕಾಶ ಇಲ್ಲದೇ ಹೋದರೆ ವಲಸೆಯಿಂದ ಸ್ಥಳೀಯರ ಮೇಲೆ ದುಷ್ಪರಿಣಾಮಗಳಾಗುತ್ತವೆ. ಇದಕ್ಕೆ ಪುರಾವೆಗಳಿವೆ. ಝೆಕ್ ಕಾರ್ಮಿಕರಿಗೆ ಜರ್ಮನಿಯ ಗಡಿಯಲ್ಲಿ ಕೆಲಸ ಮಾಡುವುದಕ್ಕೆ ಕೆಲ ದಿನಗಳ ಮಟ್ಟಿಗೆ ಅವಕಾಶ ಮಾಡಿಕೊಡಲಾಯಿತು. ಈ ಪ್ರಕ್ರಿಯೆ ಉತ್ತುಂಗದಲ್ಲಿದ್ದಾಗ ಪ್ರತಿನಿತ್ಯ ಜರ್ಮನಿಯ ಗಡಿ ನಗರಗಳಲ್ಲಿ ಸುಮಾರು ಶೇಕಡ 10ರಷ್ಟು ಕಾರ್ಮಿಕರು ಝೆಕ್ ಗಣರಾಜ್ಯದಿಂದ ಪ್ರಯಾಣ ಮಾಡುತ್ತಿದ್ದರು. ಆಗ ಸ್ಥಳೀಯರ ಕೂಲಿಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಆದರೆ ಝೆಕ್ ಕಾರ್ಮಿಕರು ತಾವು ಸಂಪಾದಿಸಿದ್ದನ್ನು ತಮ್ಮೂರಿನಲ್ಲಿ ಖರ್ಚುಮಾಡಲು ತೆಗೆದುಕೊಂಡು ಹೋಗಲು ಪ್ರಾರಂಭಿಸಿದಾಗ ಪರಿಸ್ಥಿತಿ ಬದಲಾಯಿತು. ಸ್ಥಳೀಯರ ಉದ್ಯೋಗದಲ್ಲಿ ದೊಡ್ಡ ಕುಸಿತವುಂಟಾಯಿತು. ವಲಸಿಗರು ಬಂದ ಸ್ಥಳದಲ್ಲಿ ಹಣ ಖರ್ಚು ಮಾಡದೆ ಆ ಆದಾಯವನ್ನು ತಮ್ಮ ತಾಯ್ನಾಡಿಗೆ ಕಳುಹಿಸಿಬಿಟ್ಟರೆ ಅತಿಥೇಯ ದೇಶಗಳಿಗೆ ವಲಸೆಯ ಆರ್ಥಿಕ ಲಾಭ ಸಿಗುವುದಿಲ್ಲ. ಆಗ ಇಳಿಜಾರಿನ ಬೇಡಿಕೆಯ ರೇಖೆ ಬಲಕ್ಕೆ ಚಲಿಸುವುದಿಲ್ಲ. ಹಳೆಯ ಬೇಡಿಕೆಯ ರೇಖೆಯ ಮೇಲೆ ಚಲಿಸುತ್ತಿರುತ್ತೇವೆ (ಚಿತ್ರ 2.1). ಅಂದರೆ ಉದ್ಯೋಗ ಕುಸಿಯುತ್ತದೆ.

ಕಡಿಮೆ ಕೌಶಲವುಳ್ಳ ಕಾರ್ಮಿಕರ ವಲಸೆಯಿಂದ ಕಾರ್ಮಿಕರ ಬೇಡಿಕೆ ಹೆಚ್ಚುವುದಕ್ಕೆ ಇನ್ನೊಂದು ಕಾರಣವಿದೆ. ವಲಸೆಯಿಂದ ಯಾಂತ್ರೀಕರಣದ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಕಡಿಮೆ ಕೂಲಿಗೆ ಕೆಲಸ ಮಾಡುವ ಕಾರ್ಮಿಕರು ನಿಯಮಿತವಾಗಿ, ಖಾತ್ರಿಯಾಗಿ ದೊರಕುತ್ತಾರೆ ಎಂದಾದಾಗ ಕೆಲಸಗಾರರನ್ನು ಕಡಿತಗೊಳಿಸುವ ತಂತ್ರಜ್ಞಾನ ಆಕರ್ಷಕವಾಗಿ ತೋರುವುದಿಲ್ಲ. 1964ರ ಡಿಸೆಂಬರ್‍ನಲ್ಲಿ ಕ್ಯಾಲಿಫೋರ್ನಿಯಾಗೆ ಮೆಕ್ಸಿಕೋದಿಂದ ವಲಸೆ ಬಂದಿದ್ದ ಕೃಷಿ ಕಾರ್ಮಿಕರಿಂದ ಸ್ಥಳೀಯರ ಕೂಲಿ ಕಡಿಮೆಯಾಗುತ್ತಿದೆ ಅನ್ನುವ ಕಾರಣದಿಂದ ಅವರನ್ನು ಹೊರಗೆ ಅಟ್ಟಲಾಯಿತು. ಆದರೆ ಅವರು ಹೊರಗೆ ಹೋಗಿದ್ದರಿಂದ ಸ್ಥಳೀಯರಿಗೆ ಏನೂ ಪ್ರಯೋಜನವಾಗಲಿಲ್ಲ. ಕೂಲಿಯಲ್ಲಾಗಲಿ ಅಥವಾ ಉದ್ಯೋಗದಲ್ಲಾಗಲಿ ಹೆಚ್ಚಳವಾಗಲಿಲ್ಲ. ವಲಸಿಗರು ಹೊರಗೆ ಹೋದ ತಕ್ಷಣ ಅವರನ್ನು ನೇಮಿಸಿಕೊಂಡಿದ್ದ ತೋಟಗಳು ಎರಡು ಕೆಲಸ ಮಾಡಿದವು. ಮೊದಲನೆಯದಾಗಿ ಅವರು ಉತ್ಪಾದನೆಯನ್ನು ಯಾಂತ್ರೀಕರಿಸಿದರು. ಉದಾಹರಣೆಗೆ 1950ರಿಂದಲೂ ಟೊಮ್ಯಾಟೋ ಫಸಲನ್ನು ಕಟಾವು ಮಾಡುವ ಯಂತ್ರಗಳಿದ್ದವು. ಪ್ರತಿ ಕಾರ್ಮಿಕನಿಗೆ ಹೋಲಿಸಿದರೆ ಅದು ಉತ್ಪಾದನೆಯನ್ನು ದುಪ್ಪಟ್ಟು ಮಾಡುವ ಸಾಮಥ್ರ್ಯ ಹೊಂದಿತ್ತು. ಆದರೆ ಅವು ನಿಧಾನವಾಗಿ ಬಳಕೆಗೆ ಬರುತ್ತಿದ್ದವು. ವಲಸಿಗರು ಹೊರಗೆ ಹೋದೊಡನೆ, ಅವು ಮೂರೇ ವರ್ಷದಲ್ಲಿ ಶೇಕಡ ನೂರರಷ್ಟು ಬಳಕೆಗೆ ಬಂದವು. ವಲಸಿಗರೇ ಇಲ್ಲದಿದ್ದ ಪ್ರಾಂತ್ಯಗಳಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಎರಡನೆಯದಾಗಿ ಯಾವ ಬೆಳೆಗಳಿಗೆ ಯಂತ್ರಗಳ ಅಳವಡಿಕೆ ಸಾಧ್ಯವಿರಲಿಲ್ಲವೋ ಅವುಗಳನ್ನು ಬೆಳೆಯುವುದನ್ನೇ ನಿಲ್ಲಿಸಿಬಿಟ್ಟರು. ಹೀಗಾಗಿಯೇ ಕ್ಯಾಲಿಫೋರ್ನಿಯಾದಲ್ಲಿ ಆಸ್ಪರಾಗಸ್, ತಾಜಾ ಸ್ಟ್ರಾಬೆರಿಗಳು, ಲೆಟ್ಯೂಸ್, ಸಿಲೆರಿ, ಉಪ್ಪಿನಕಾಯಿಗೆ ಬಳಸುವ ಸೌತೇಕಾಯಿ ಮುಂತಾದ ರುಚಿಕರವಾದ ವಸ್ತುಗಳನ್ನು ತಾತ್ಕಾಲಿಕವಾಗಿಯಾದರೂ ಬೆಳೆಯುವುದನ್ನು ನಿಲ್ಲಿಸಿಬಿಟ್ಟರು.

ವಲಸೆಯಿಂದಾಗುವ ಮೂರನೆಯ ಪರಿಣಾಮ ಅಂದರೆ ಉತ್ಪಾದನೆಯ ವ್ಯವಸ್ಥೆಯಲ್ಲೇ ಬದಲಾವಣೆಯಾಗಬಹುದು. ಇದರಿಂದ ಕಡಿಮೆ ಕೌಶಲ ಹೊಂದಿರುವ ಸ್ಥಳೀಯರಿಗೆ ಹೊಸ ಕೆಲಸಗಳು ಸೃಷ್ಟಿಯಾಗಬಹುದು. ನಾವು ಈ ಹಿಂದೆ ಚರ್ಚಿಸಿದ ಡೆನ್ಮಾರ್ಕಿನ ಘಟನೆಯಲ್ಲೂ ಹೀಗೆ ಆಯಿತು. ಡೆನ್ಮಾರ್ಕಿನ ಸ್ಥಳೀಯ ಕಡಿಮೆ ಕೌಶಲದ ಕಾರ್ಮಿಕರಿಗೆ ವಲಸೆಗಾರರು ಬಂದದ್ದರಿಂದ ಲಾಭವಾಯಿತು. ಅವರಿಗೆ ಕೆಲಸದಲ್ಲಿ ಬದಲಾವಣೆ ಸಾಧ್ಯವಾಯಿತು. ಅವರು ದೈಹಿಕ ಶ್ರಮದ ಕೆಲಸವನ್ನು ಬಿಟ್ಟು ಇತರ ಉನ್ನತ ಕೆಲಸಗಳನ್ನು ಮಾಡಲಾರಂಭಿಸಿದರು. ಹೆಚ್ಚು ಹೆಚ್ಚು ಜಟಿಲವಾದ ಕೆಲಸಗಳನ್ನು ಮಾಡತೊಡಗಿದರು. ಅದಕ್ಕೆ ಅವರಿಗೆ ಇನ್ನೂ ಉನ್ನತಮಟ್ಟದ ಸಂಹವಹನ ಕೌಶಲ ಮತ್ತು ತಾಂತ್ರಿಕ ಪರಿಣತಿ ಬೇಕಾಯಿತು. ಈ ಕೆಲಸಗಳಿಗೆ ವಲಸಿಗರು ಪೈಪೋಟಿ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ. ಏಕೆಂದರೆ ತೀರಾ ಆರಂಭದಲ್ಲಿ ಬಂದ ವಲಸಿಗರಿಗೆ ಡೇನಿಷ್ ಭಾಷೆಯೇ ಬರುತ್ತಿರಲಿಲ್ಲ. 19ನೇ ಶತಮಾನದ ಕೊನೆ ಮತ್ತು 20ನೇ ಶತಮಾನದ ಆರಂಭದಲ್ಲಿ ಯುರೋಪಿನಿಂದ ಜನ ಅಮೆರಿಕೆಗೆ ವಲಸೆ ಬಂದ ಸಂದರ್ಭದಲ್ಲಿಯೂ ಸ್ಥಳೀಯರು ಉನ್ನತ ಕೆಲಸಗಳಿಗೆ ಚಲಿಸಿದ ಪ್ರಕ್ರಿಯೆ ನಡೆಯಿತು.

ಕಡಿಮೆ ಕೌಶಲದ ಸ್ಥಳೀಯರು ಮತ್ತು ವಲಸಿಗರ ನಡುವೆ ನೇರವಾದ ಸ್ಪರ್ಧೆ ಅನಿವಾರ್ಯವಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. ಅವರಿಬ್ಬರೂ ಬೇರೆ ಬೇರೆ ಕೆಲಸಗಳನ್ನು ಮಾಡಬಹುದು. ಹೆಚ್ಚು ಸಂವಹನವನ್ನು ಬೇಡುವ ಕೆಲಸಗಳಲ್ಲಿ ಸ್ಥಳೀಯರೂ ಮತ್ತು ಕಡಿಮೆ ಸಂವಹನ ಸಾಕೆನ್ನುವ ಕೆಲಸಗಳಲ್ಲಿ ವಲಸಿಗರೂ ತಜ್ಞತೆಯನ್ನು ಸಾಧಿಸಿಕೊಳ್ಳಬಹುದು. ಕೆಲಸಕ್ಕೆ ವಲಸಿಗರು ಲಭ್ಯವಿರುವುದರಿಂದ ಕಂಪನಿಗಳು ಹೆಚ್ಚಿನ ಕಾರ್ಮಿಕರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಬಹುದು. ಸರಳವಾದ ಕೆಲಸಗಳನ್ನು ವಲಸಿಗರು ಮಾಡಿದರೆ, ಅದಕ್ಕೆ ಪೂರಕವಾದ ಮತ್ತು ಹೆಚ್ಚು ಲಾಭದಾಯಕವಾದ ಕೆಲಸಗಳನ್ನು ಸ್ಥಳೀಯರು ಮಾಡುತ್ತಾರೆ.

ಇನ್ನು ನಾಲ್ಕನೆಯದಾಗಿ ಸ್ಥಳೀಯರು ಮಾಡುವುದಿಲ್ಲವೆಂದು ತಿರಸ್ಕರಿಸುವ ಕೆಲಸಗಳನ್ನು ವಲಸೆ ಕಾರ್ಮಿಕರು ಮಾಡುತ್ತಾರೆ. ಉದಾಹರಣೆಗೆ ಹುಲ್ಲುಹಾಸುಗಳನ್ನು ಕತ್ತರಿಸಿ ಒಪ್ಪ ಮಾಡುವುದು, ಬರ್ಗರ್‍ಗಳನ್ನು ಮೊಗುಚಿಹಾಕಿ, ಹದವಾಗಿ ಬೇಯಿಸುವುದು, ಮಕ್ಕಳನ್ನು ಮತ್ತು ಖಾಯಿಲೆಯವರನ್ನು ನೋಡಿಕೊಳ್ಳುವುದು, ಇವುಗಳನ್ನೆಲ್ಲಾ ಅವರು ಮಾಡುತ್ತಾರೆ. ಇಲ್ಲೆಲ್ಲೂ ಅವರು ಸ್ಥಳೀಯರಿಗೆ ಸ್ಪರ್ಧಿಗಳಲ್ಲ. ಅವರಿಗೆ ಪೂರಕವಾಗಿ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ವಲಸಿಗರ ಸಂಖ್ಯೆ ಹೆಚ್ಚಾಗಿದ್ದಾಗ ಅಂತಹ ಸೇವೆಗಳ ದರ ಕುಸಿಯುತ್ತದೆ. ಅಷ್ಟೇ ಅಲ್ಲ ಇದರಿಂದ ಸ್ಥಳೀಯ ಕಾರ್ಮಿಕರ ಮೇಲಿರುವ ಒತ್ತಡವೂ ಕಡಿಮೆಯಾಗುತ್ತದೆ. ಆಗ ಅವರು ಬೇರೆ ಕೆಲಸಗಳನ್ನು ಮಾಡಬಹುದು. ಅದರಲ್ಲೂ ನಿರ್ದಿಷ್ಟವಾಗಿ ಉನ್ನತ ಕೌಶಲಗಳನ್ನು ಹೊಂದಿರುವ ಮಹಿಳೆಯರಿಗೆ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಅವಕಾಶವಾಗುತ್ತದೆÉ. ಹೀಗೆ ವಿಶೇಷ ಪರಿಣತಿ ಇರುವ ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಹೆಚ್ಚೆಚ್ಚು ಕಾಲಿಟ್ಟಷ್ಟೂ ಕಡಿಮೆ ಕೌಶಲವಿರುವ ಕಾರ್ಮಿಕರಿಗೆ ಮನೆಯೊಳಗೆ (ಶಿಶುಪಾಲನೆ, ಅಡುಗೆ, ಸ್ವಚ್ಛಗೊಳಿಸುವ ಕೆಲಸ) ಅಥವಾ ಹೊರಗೆ ಅವರ ಸ್ಥಾಪಿಸಬಹುದಾದ ಉದ್ದಿಮೆಗಳಲ್ಲಿ ಉದ್ಯೋಗ ಹೆಚ್ಚೆಚ್ಚು ಸಿಗುತ್ತದೆ.

ವಲಸಿಗರು ಎಂತಹವರು ಅನ್ನುವುದನ್ನೂ ವಲಸಿಗರಿಂದ ಆಗುವ ಪರಿಣಾಮ ಅವಲಂಬಿಸಿರುತ್ತದೆ. ತುಂಬಾ ಉದ್ಯಮಶೀಲರಾದವರು ವಲಸೆ ಬಂದರೆ ಅವರು ಹೊಸ ಉದ್ಯಮಗಳನ್ನು ಪ್ರಾರಂಭಿಸಿ, ಸ್ಥಳೀಯರಿಗೆ ಕೆಲಸಗಳನ್ನು ನೀಡಬಹುದು. ಒಂದು ವೇಳೆ ಅವರು ಯಾವುದೇ ಪರಿಣತಿ ಇಲ್ಲದೇ ಇರುವವರಾದರೆ, ಆಗ ಅವರು ಕಡಿಮೆ ಕೌಶಲವುಳ್ಳ ಸ್ಥಳೀಯ ಕಾರ್ಮಿಕ ಸಮೂಹದೊಂದಿಗೆ ಸೇರಿಕೊಳ್ಳಬೇಕಾಗುತ್ತದೆ ಮತ್ತು ಸ್ಥಳೀಯ ಕೌಶಲರಹಿತ ಕಾರ್ಮಿಕ ಸಮೂಹ ಅವರೊಂದಿಗೆ ಸ್ಪರ್ಧಿಸಬೇಕಾಗುತ್ತದೆ.

ಯಾರು ವಲಸೆ ಹೋಗುತ್ತಾರೆ ಎನ್ನುವುದು ವಲಸಿಗರು ಎದುರಿಸಿ ಮೀರಿಕೊಳ್ಳಬೇಕಾಗಿರುವ ನಿರ್ಬಂಧಗಳನ್ನೂ ಅವಲಂಬಿಸಿದೆ. 19ನೇ ಶತಮಾನದ ಕೊನೆ ಮತ್ತು 20ನೇ ಶತಮಾನದ ಪ್ರಾರಂಭದಲ್ಲಿ ಆದ ಬೃಹತ್ ವಲಸೆಯ ಕಾಲದಲ್ಲಿ ಅಮೆರಿಕೆಗೆ ಬಂದ ನಾರ್ವೆಯ ವಲಸಿಗರ ಬಗ್ಗೆ ಒಂದು ಸಮೀಕ್ಷೆ ನಡೆದಿದೆÉ. ಆ ಕಾಲದಲ್ಲಿ ಅವರಿಗೆ ಪ್ರಯಾಣದ ಖರ್ಚನ್ನು ನಿಭಾಯಿಸುವುದಕ್ಕೆ ಸಾಧ್ಯವಾದರೆ ಸಾಕಿತ್ತು. ಇನ್ಯಾವುದೇ ರೀತಿಯ ತಡೆ ಅವರಿಗಿರಲಿಲ್ಲ. ಆ ಸಮೀಕ್ಷೆಯಲ್ಲಿ ವಲಸೆ ಹೋದ ಕುಟಂಬದ ಸದಸ್ಯರನ್ನು ಮತ್ತು ವಲಸೆ ಹೋಗದೆ ಅಲ್ಲೇ ಉಳಿದುಕೊಂಡ ಕುಟುಂಬಗಳೊಂದಿಗೆ ಹೋಲಿಸಿ ವಿಶ್ಲೇಷಿಸಲಾಗಿದೆÉ. ವಲಸೆ ಹೋದವರು ಸಾಮಾನ್ಯವಾಗಿ ಅತ್ಯಂತ ಬಡ ಕುಟುಂಬಕ್ಕೆ ಸೇರಿದವರು. ಹಾಗೆ ವಲಸೆ ಹೋದವರ ತಂದೆಯವರ ಆರ್ಥಿಕಸ್ಥಿತಿ ಅಲ್ಲಿಯ ಒಟ್ಟಾರೆ ಜನರ ಸರಾಸರಿ ಆರ್ಥಿಕಸ್ಥಿತಿಗೆ ಹೋಲಿಸಿದರೆ ಕೆಟ್ಟದಾಗಿಯೇ ಇತ್ತು.

ಆದರೆ ಇಂದು ವಲಸೆ ಬರುವವರು ಕೇವಲ ಪ್ರಯಾಣದ ಖರ್ಚನ್ನು ಹೊಂದಿಸಿಕೊಂಡರೆ ಸಾಲದು, ಸಾಮಾನ್ಯವಾಗಿ ವಲಸಿಗರ ವಿರುದ್ಧವಿರುವ ಇಮಿಗ್ರೇಷನ್ ನಿಯಂತ್ರಣ ವ್ಯವಸ್ಥೆಯನ್ನು ಎದುರಿಸುವ ಕೆಚ್ಚು, ದಿಟ್ಟತನ ಅವರಿಗಿರಬೇಕು. ಈ ಕಾರಣದಿಂದಾಗಿಯೇ ಹಾಗೆ ವಲಸೆ ಬರುವವರಿಗೆ ಅಸಾಧಾರಣ ಪ್ರತಿಭೆ, ಕೌಶಲಗಳು, ಮಹತ್ವಾಕಾಂಕ್ಷೆ, ತಾಳ್ಮೆ, ಹಾಗೂ ಧಾರಣಶಕ್ತಿ ಇರುತ್ತದೆ. ಹಾಗಾಗಿಯೇ ಅವರಿಗೆ ಉದ್ಯೋಗವನ್ನು ಸೃಷ್ಟಿಸುವುದಕ್ಕೆ ಸಾಧ್ಯವಾಗುತ್ತದೆ. ಅಥವಾ ಹಾಗೆ ಉದ್ಯೋಗ ಸೃಷ್ಟಿಸಬಲ್ಲ ಮಕ್ಕಳನ್ನು ಬೆಳೆಸಿ ಪೋಷಿಸುವುದಕ್ಕೆ ಸಾಧ್ಯವಾಗುತ್ತದೆ. 2017ರಲ್ಲಿ ಅಮೆರಿಕೆಯ ಅತ್ಯಂತ ಶ್ರೀಮಂತ 500 ಕಂಪನಿಗಳಲ್ಲಿ ಶೇಕಡ 43ರಷ್ಟು ಕಂಪನಿಗಳನ್ನು ಹುಟ್ಟುಹಾಕಿದವರು ಅಥವಾ ಅದಕ್ಕೆ ನೆರವಾದವರು ವಲಸಿಗರು ಅಥವಾ ವಲಸಿಗರ ಮಕ್ಕಳು. ಅದಕ್ಕಿಂತ ಅಮೆರಿಕೆಯ ಅತ್ಯುನ್ನತ 25 ಕಂಪನಿಗಳಲ್ಲಿ ವಲಸಿಗರು ಹುಟ್ಟುಹಾಕಿದ ಕಂಪನಿಗಳು ಶೇಕಡ 52ರಷ್ಟು ಇವೆ. ಹಾಗೆಯೇ ಉನ್ನತ 35 ಕಂಪನಿಗಳಲ್ಲಿ ಶೇಕಡ 57ರಷ್ಟು ಕಂಪನಿಗಳು ವಲಸಿಗರು ಸ್ಥಾಪಿಸಿದ ಕಂಪೆನಿಗಳು. 13 ಅತ್ಯಂತ ಶ್ರೀಮಂತ ಬ್ರಾಂಡ್‍ಗಳನ್ನು ಹೊಂದಿರುವ ಕಂಪೆನಿಗಳಲ್ಲಿ 9 ಕಂಪನಿಗಳು ವಲಸಿಗರ ಸೃಷ್ಟಿ. ಹೆನ್ರಿ ಫೋರ್ಡ್ ಐರ್ಲಂಡಿನ ವಲಸಿಗನೊಬ್ಬನ ಮಗ. ಸ್ಟೀವ್ ಜಾಬ್‍ನ ತಂದೆ ಸಿರಿಯಾದವನು. ಸೆರ್ಜಿ ಬ್ರಿನ್ ಹುಟ್ಟಿದ್ದು ರಷ್ಯಾದಲ್ಲಿ. ಜೆಫ್ ಬೆಜ಼ೋ ತನ್ನ ಮಲತಂದೆಯ ಮೈಕ್ ಬೆಜ಼ೋನ ಹೆಸರನ್ನು ಉಳಿಸಿಕೊಂಡಿದ್ದ. ಮೈಕ್ ಕ್ಯೂಬಾದ ವಲಸಿಗ.

ತಮ್ಮ ಊರಲ್ಲಿದ್ದಾಗ ಅಂತಹ ಹೇಳಿಕೊಳ್ಳುವಂತಹ ವಿಶೇಷತೆ ಇಲ್ಲದವರು ಕೂಡ ಬೇರೆ ದೇಶಕ್ಕೆ ವಲಸೆ ಹೋದಾಗ ಹೊಸದನ್ನು ಮಾಡಲು ಪ್ರಯತ್ನಿಸುತ್ತಾರೆ. ಅವನು ಅಲ್ಲಿ ವಿದೇಶವೊಂದರಿಂದ ಬಂದ ವಲಸಿಗ, ಅವನಿಗೆ ನೆರವಾಗುವ ಸಾಮಾಜಿಕ ಸಂಬಂಧಗಳೂ ಇರುವುದಿಲ್ಲ, ಇವೆಲ್ಲಾ ಸೇರಿಕೊಂಡು ಹೊಸದೇನನ್ನಾದರೂ ಮಾಡುವುವ ಒತ್ತಡ ಅವನಿಗಿರುತ್ತದೆ. ಮೊದಲು ಮನೆಯಲ್ಲಿ ಉಂಡ ತಟ್ಟೆಯನ್ನೂ ತೊಳೆಯದಿದ್ದ ಹಲವು ಬಂಗಾಳಿ ಯುವಕರು ಕೈಯಲ್ಲಿ ಹಣವಿಲ್ಲದೇ ಹೋದಾಗ ಬ್ರಿಟಿಷ್ ಅಥವಾ ಅಮೆರಿಕೆಯ ನಗರಗಳ ಹೋಟೆಲ್ಲುಗಳಲ್ಲಿ ತಟ್ಟೆಗಳನ್ನು ಶುಚಿಗೊಳಿಸುವುದನ್ನು ಸಂತೋಷವಾಗಿಯೇ ಮಾಡುತ್ತಿದ್ದ ಹಲವು ಪ್ರಕರಣಗಳನ್ನು ಅಭಿಜಿತ್ ಉಲ್ಲೇಖಿಸುತ್ತಾರೆ. ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆ ನಾವು ಹಿಂದೆ ಗಮನಿಸಿದ ಐಸ್‍ಲ್ಯಾಂಡಿನ ಬೆಸ್ತರ ವಿಷಯದಲ್ಲಿ ಆಗಿದೆ. ತಾವು ವಲಸೆ ಹೋದ ಸ್ಥಳಗಳಲ್ಲಿ ಹೆಚ್ಚಿನವರು ಕಾಲೇಜಿಗೆ ಹೋಗುತ್ತಿದ್ದುದನ್ನು ಗಮನಿಸಿದ ಅವರಿಗೆ ವಿದ್ಯಾಭ್ಯಾಸ ಒಳ್ಳೆಯ ಪರ್ಯಾಯವಾಗಿ ತೋರಿರಬಹುದು.

ಹಾಗಾಗಿ ಬೇಡಿಕೆ- ಪೂರೈಕೆಯ ವಿಷಯದಲ್ಲಿ ವಲಸೆಯ ಪ್ರಕ್ರಿಯೆಯನ್ನು ವಿವರಿಸುವುದು ಕಷ್ಟ. ವಲಸಿಗರ ಪ್ರವೇಶದಿಂದ ಕಾರ್ಮಿಕರ ಬೇಡಿಕೆ ಹೆಚ್ಚುತ್ತಿದೆ. ಮತ್ತು ಕಾರ್ಮಿಕರ ಸರಬರಾಜು ಕೂಡ ಹೆಚ್ಚುತ್ತಿದೆ. ವಲಸಿಗರು ಹೆಚ್ಚಾದಷ್ಟು ಕೂಲಿ ಕಡಿಮೆಯಾಗದೇ ಇರುವುದಕ್ಕೆ ಇದು ಒಂದು ಕಾರಣ. ಇದಕ್ಕಿಂತಲೂ ಗಂಭೀರವಾದ ಸಮಸ್ಯೆ ಕಾರ್ಮಿಕ ಮಾರುಕಟ್ಟೆಯ ಸ್ವಭಾವದಲ್ಲಿಯೇ ಇದೆ. ಕಾರ್ಮಿಕ ಮಾರುಕಟ್ಟೆ ನಿಜವಾಗಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಬೇಡಿಕೆ-ಪೂರೈಕೆ ನಿಯಮವನ್ನು ಬಳಸಿ ವಿವರಿಸುವುದಕ್ಕೆ ಕಷ್ಟ.

ಕೂಲಿಕಾರ್ಮಿಕರು ಮತ್ತು ಕಲ್ಲಂಗಡಿ ಹಣ್ಣುಗಳು

ಢಾಕಾ, ದಿಲ್ಲಿ, ಅಥವಾ ದಕಾರ್‍ಗಳಲ್ಲಿ ಮುಂಜಾವಿನಲ್ಲಿ ಎದ್ದು ಹೋದರೆ ಕೆಲವೊಮ್ಮೆ ಬಹು ಮುಖ್ಯವಾದ ಕೂಡುದಾರಿಗಳಲ್ಲಿ ಇರುವ ಫುಟ್‍ಪಾತ್‍ಗಳಲ್ಲಿ ಸಾಮಾನ್ಯವಾಗಿ ಗಂಡಸರು ಗುಂಪುಗುಂಪಾಗಿ ಮುದುರಿ ಕುಳಿತಿರುವುದು ತೀರಾ ಸಾಮಾನ್ಯವಾಗಿ ಕಣ್ಣಿಗೆ ಬೀಳುವ ದೃಶ್ಯ. ಅವರೆಲ್ಲರೂ ಕೆಲಸವನ್ನು ಹುಡುಕಿಕೊಂಡು ಬಂದಿರುವವರು. ಯಾರಾದರು ಕೂಲಿಗೆ ಅದರಲ್ಲೂ ಸಾಮಾನ್ಯವಾಗಿ ಕಟ್ಟಡ ಕಟ್ಟುವ ಕೆಲಸಕ್ಕೆ ತಮ್ಮನ್ನು ಕರೆದೊಯ್ಯಬಹುದು ಎಂದು ಕಾಯುತ್ತಿರುವವರು.
ಇಂತಹ ದೈಹಿಕಕ್ರಮದ (ಕೂಲಿ) ಮಾರುಕಟ್ಟೆಗಳು ತುಂಬಾ ಅಪರೂಪವೇ ಎನ್ನುವುದು ಒಬ್ಬ ಸಮಾಜವಿಜ್ಞಾನಿಯನ್ನು ಕಾಡುವ ಪ್ರಶ್ನೆ. ಗ್ರೇಟರ್ ದಿಲ್ಲಿಯೊಂದರಲ್ಲಿಯೇ ಸುಮಾರು 20 ಮಿಲಿಯನ್ ಜನ ಇದ್ದಾರೆ. ಹಾಗಾಗಿ ಪ್ರತಿ ರಸ್ತೆಯ ತಿರುವಿನಲ್ಲಿಯೂ ಇಂತಹ ಗುಂಪುಗಳನ್ನು ಸಹಜವಾಗಿಯೇ ಕಲ್ಪಿಸಿಕೊಳ್ಳಬಹುದು. ವಾಸ್ತವವಾಗಿ ಸುತ್ತಮುತ್ತ ಕಣ್ಣು ಹಾಯಿಸಿದರಷ್ಟೇ ಇದು ಕಾಣುವುದಕ್ಕೆ ಸಾಧ್ಯ.

ದಿಲ್ಲಿ ಮತ್ತು ದಕಾರ್‍ಗಳಲ್ಲಿ ಕೆಲಸ ಖಾಲಿ ಇದೆ ಎನ್ನುವ ಜಾಹೀರಾತು ಬೋರ್ಡುಗಳು ತೀರಾ ಅಪರೂಪ. ವೆಬ್‍ಸೈಟುಗಳಲ್ಲಿ ಮತ್ತು ಎಂಪ್ಲಾಯ್‍ಮೆಂಟ್ ಪೋರ್ಟಲ್‍ಗಳಲ್ಲಿ ಸಾಕಷ್ಟು ಜಾಹೀರಾತುಗಳು ಬರುತ್ತವೆ, ನಿಜ. ಆದರೆ ಈ ಕೆಲಸಗಳು ಹಳ್ಳಿಯ ಒಬ್ಬ ಸಾಮಾನ್ಯ ದನಕಾಯುವವನಿಗೆ ನಿಲುಕುವಂಥದ್ದೇ ಅಲ್ಲ. ಇದಕ್ಕೆ ವಿರುದ್ಧವಾದ ಸನ್ನಿವೇಶವನ್ನು ಬಾಸ್ಟನ್‍ನಲ್ಲಿ ಕಾಣಬಹುದು. ಬಾಸ್ಟನ್ನಿನ ಸಬ್‍ವೇನಲ್ಲಿ ಕೆಲಸದ ಅವಕಾಶಗಳ ಬಗ್ಗೆ ಲೆಕ್ಕವಿಲ್ಲದಷ್ಟು ಜಾಹಿರಾತುಗಳು ಮತ್ತು ಘೋಷಣೆಗಳು ಪ್ರಕಟವಾಗುತ್ತವೆ. ಆದರೆ ಅಲ್ಲಿ ಕೆಲಸ ಪಡೆಯಬೇಕಾದರೆ ತೀರಾ ಕ್ಲಿಷ್ಟವಾದ ಒಗಟುಗಳನ್ನು ಬಿಡಿಸಿ, ಪ್ರಶ್ನೆಗಳನ್ನು ಉತ್ತರಿಸಿ ತಮ್ಮ ಜಾಣ್ಮೆಯನ್ನು ಸಾಬೀತುಪಡಿಸಬೇಕು. ಜಾಹೀರಾತುದಾರರಿಗೆ ಕೆಲಸಗಾರರು ಬೇಕು. ಆದರೆ ಕೆಲಸಗಾರರಿಗೆ ಕೆಲಸ ಸಲೀಸಾಗಿ ಸಿಗಬಾರದು. ನಾವು ಇಲ್ಲಿ ಕಾರ್ಮಿಕ ಮಾರುಕಟ್ಟೆಗಳ ಒಂದು ಮೂಲಭೂತ ಲಕ್ಷಣವನ್ನು ಕಾಣಬಹುದು.

ಕೆಲಸಗಾರರನ್ನು ನೇಮಿಸಿಕೊಳ್ಳುವುದಕ್ಕೂ ಸಗಟು ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಅದು ಎರಡು ಕಾರಣಗಳಿಗಾಗಿ ವಿಭಿನ್ನ. ಕೆಲಸಗಾರನೊಂದಿಗಿನ ಸಂಬಂಧ ಒಂದು ಚೀಲ ಕಲ್ಲಂಗಡಿ ಹಣ್ಣುಗಳನ್ನು ಕೊಳ್ಳುವುದಕ್ಕಿಂತ ದೀರ್ಘಕಾಲಿಕವಾದುದು. ನೀವು ಕೊಂಡ ಕಲ್ಲಂಗಡಿ ಹಣ್ಣುಗಳು ನಿಮಗೆ ಇಷ್ಟವಾಗದಿದ್ದಲ್ಲಿ ಮುಂದಿನ ವಾರ ನೀವು ಬೇರೆಯವನಿಂದ ಕೊಳ್ಳಬಹುದು. ಹೆಚ್ಚಿನ ಸಂಸ್ಥೆಗಳು ಕೆಲಸ ಹುಡುಕಿಕೊಂಡು ಬಂದವರನ್ನೆಲ್ಲಾ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಕೆಲಸಗಾರ ಸಮಯಕ್ಕೆ ಸರಿಯಾಗಿ ಬರುತ್ತಾನೆಯೇ, ಅವನ ಕೆಲಸ ತೃಪ್ತಿಕರವಾಗಿ ಇರುತ್ತದೆಯೇ, ತನ್ನ ಸಹೋದ್ಯೋಗಿಗಳೊಡನೆ ಜಗಳವಾಡುತ್ತಾನೆಯೇ, ಗಿರಾಕಿಗಳ ಜೊತೆ ಚೆನ್ನಾಗಿ ನಡೆದುಕೊಳ್ಳುತ್ತಾನೆಯೇ ಅಥವಾ ತುಟ್ಟಿ ಯಂತ್ರವನ್ನೇನಾದರೂ ಒಡೆದುಹಾಕುತ್ತಾನೆಯೇ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಇನ್ನು ಎರಡನೆಯದಾಗಿ ಕಲ್ಲಂಗಡಿ ಹಣ್ಣಿನ ಗುಣಮಟ್ಟವನ್ನು ನಿರ್ಧರಿಸಿದಷ್ಟು ಸುಲಭವಾಗಿ ಕಾರ್ಮಿಕನೊಬ್ಬನ ಗುಣಮಟ್ಟವನ್ನು ನಿರ್ಧರಿಸುವುದಕ್ಕಾಗುವುದಿಲ್ಲ. ಕಾರ್ಲ್‍ಮಾಕ್ರ್ಸ್ ಏನೇ ಹೇಳಲಿ, ಲೇಬರ್ ಎನ್ನುವುದು ಉಳಿದ ಸರಕುಗಳಂತೆ ಒಂದು ಸಾಮಾನ್ಯ ಸರಕಲ್ಲ.

ಹಾಗಾಗಿ ಸಂಸ್ಥೆಗಳು ತಾವು ಕೆಲಸಕ್ಕೆ ತೆಗೆದುಕೊಳ್ಳುವವರನ್ನು ಪರೀಕ್ಷಿಸಬೇಕಾಗುತ್ತದೆ. ತುಂಬಾ ಹೆಚ್ಚಿನ ಸಂಬಳ ಕೊಡುವ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವಾಗ ಈ ಸಂಸ್ಥೆಗಳು ಸಂದರ್ಶನ, ಪರೀಕ್ಷೆ, ರೆಫರೆನ್ಸ್ ಇತ್ಯಾದಿಗಳನ್ನು ನಡೆಸುತ್ತಾರೆ. ಅವುಗಳ ಮೇಲೆ ಹಣ ಮತ್ತು ಸಮಯ ಎರಡನ್ನು ವ್ಯಯಿಸುತ್ತಾರೆ. ಇದು ಸಂಸ್ಥೆಗಳು ಹಾಗೂ ಕೆಲಸಗಾರರು ಇಬ್ಬರಿಗೂ ದುಬಾರಿ. ಆದರೂ ಇದು ಸಾರ್ವತ್ರಿಕವಾದ ಪದ್ಧತಿಯಾಗಿದೆ. ಇಥಿಯೋಪಿಯಾದಲ್ಲಿ ಒಂದು ಮಧ್ಯಮ ಮಟ್ಟದ ಗುಮಾಸ್ತನ ಕೆಲಸಕ್ಕೆ ಅರ್ಜಿಹಾಕಿಕೊಳ್ಳುವುದಕ್ಕೆ ಹಲವು ದಿನಗಳು ಬೇಕಾಗುತ್ತದೆ ಮತ್ತು ಹಲವು ಸಲ ಹೋಗಬೇಕಾಗುತ್ತದೆ. ಅರ್ಜಿಯನ್ನು ಹಾಕುವುದಕ್ಕೆ ತನಗೆ ಬರಬಹುದಾದ ತಿಂಗಳ ವೇತನದ ಹತ್ತನೇ ಒಂದು ಭಾಗ ಖರ್ಚಾಗುತ್ತದೆ ಎಂದು ಒಂದು ಅಧ್ಯಯನ ಹೇಳುತ್ತದೆ. ಇಷ್ಟಾದರೂ ಕೆಲಸ ಸಿಗುವ ಸಾಧ್ಯತೆಗಳು ಕಡಿಮೆ. ಅದರಿಂದಾಗಿ ಹೆಚ್ಚಿನವರು ಅರ್ಜಿಯನ್ನೇ ಹಾಕುವುದಿಲ್ಲ. ಈ ಕಾರಣಕ್ಕಾಗಿಯೇ ಕಡಿಮೆ ವೇತನದ ಕೆಲಸಗಳಿಗೆ ಕೆಲಸಗಾರರನ್ನು ಆಯ್ಕೆ ಮಾಡುವಾಗ ಸಂಸ್ಥೆಗಳು ಸಾಮಾನ್ಯವಾಗಿ ಸಂದರ್ಶನವನ್ನು ಮಾಡುವುದಿಲ್ಲ. ತಮ್ಮ ನಂಬುಗಸ್ಥರ ಶಿಫಾರಸ್ಸುಗಳನ್ನು ಆಧರಿಸಿ ಆಯ್ಕೆ ಮಾಡುತ್ತಾರೆ. ಉದ್ಯೋಗವನ್ನು ಹುಡುಕಿಕೊಂಡು ನೇರವಾಗಿ ಸಂಸ್ಥೆಗಳಿಗೇ ಬಂದು, ಕಡಿಮೆ ವೇತನಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಒಪ್ಪಿಕೊಂಡರೂ ಅಂತಹವರನ್ನು ಸಾಮಾನ್ಯವಾಗಿ ಸಂಸ್ಥೆಗಳು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಇಲ್ಲಿ ಬೇಡಿಕೆ-ಪೂರೈಕೆಯ ನಿಯಮ ಕೆಲಸಮಾಡುತ್ತಿಲ್ಲ.

ಈ ಪ್ರಕ್ರಿಯೆಯ ಪರಿಣಾಮಗಳು ಹಲವು. ಅನುಭವಿ ಕಾರ್ಮಿಕರಿಗೆ ಹೊಸಬರಿಂದ ಹೆಚ್ಚಿನ ಸ್ಪರ್ಧೆಯ ಆತಂಕ ಇಲ್ಲ. ಅವರು ಹೆಚ್ಚು ಸುರಕ್ಷಿತರು. ಧನಿ ಅವರನ್ನು ಚೆನ್ನಾಗಿ ಬಲ್ಲ. ಹಾಗಾಗಿ ಅವರನ್ನು ನಂಬುತ್ತಾನೆ. ಈಗಾಗಲೇ ಕೆಲಸ ಮಾಡಿರುವುದು ಅವರಿಗೆ ಬಹಳ ದೊಡ್ಡ ಅನುಕೂಲ. ಆದರೆ ಇದು ವಲಸಿಗನ ಪಾಲಿಗೆ ಕೆಟ್ಟ ಸುದ್ದಿ.

ಇದರ ಎರಡನೆಯ ಪರಿಣಾಮ ಇನ್ನೂ ದುರದೃಷ್ಟಕರವಾದದ್ದು. ಸರಿಯಾಗಿ ಕೆಲಸ ನಿರ್ವಹಿಸದೆ ಹೋದ ಕೆಲಸಗಾರರಿಗೆ ಹೆಚ್ಚೆಂದರೆ ಏನು ಶಿಕ್ಷೆ ಕೊಡಬಹುದು? ತೀರಾ ಕಠಿಣ ಶಿಕ್ಷೆ ಅಂದರೆ ಅವರನ್ನು ಕೆಲಸದಿಂದ ತೆಗೆಯಬಹುದು. ಆದರೆ ನಿಜವಾಗಿ ಅದು ಕಠಿಣ ಶಿಕ್ಷೆ ಆಗುವುದು ಯಾವಾಗ? ಅವರಿಗೆ ಸಾಕಷ್ಟು ಸಂಬಳ ಬರುತ್ತಿದ್ದು, ಅವರು ಅಲ್ಲಿ ಮುಂದುವರಿಯಲೇ ಬೇಕು ಅಂತ ಯೋಚಿಸುತ್ತಿದ್ದಾಗ ಮಾತ್ರ ಕೆಲಸ ಕಳೆದುಕೊಳ್ಳುವುದು ಕಠಿಣ ಶಿಕ್ಷೆಯಾಗುತ್ತದೆ. ಅಂದರೆ ಕಾರ್ಮಿಕರು ವೈಶಿಷ್ಟ್ಯಪೂರ್ಣವಾಗಿ ಕೆಲಸ ಮಾಡುವಂತೆ ಮಾಡಲು ಕಂಪನಿಯು ಅವರಿಗೆ ಸಾಕಷ್ಟು ಒಳ್ಳೆಯ ಪಗಾರವನ್ನು ಕೊಡುತ್ತಿರಬೇಕು. ಹಾಗಿದ್ದಾಗ ಮಾತ್ರ ಕೆಲಸದಿಂದ ವಜಾ ಮಾಡಿದರೆ ಕಾರ್ಮಿಕರಿಗೆ ನಷ್ಟವಾಗುತ್ತದೆ. ಇದನ್ನೇ ಅರ್ಥಶಾಸ್ತ್ರಜ್ಞರು ಪರಿಣಾಮಕಾರಿ ಕೂಲಿ ಎಂದು ಕರೆಯುವುದು. ಹಾಗಾಗಿ ಕಂಪನಿಗಳು ತಮ್ಮ ಅನುಭವಿ ಕಾರ್ಮಿಕರಿಗೆ ಕೊಡುವ ಸಂಬಳ ಮತ್ತು ಹೊಸಬರಿಗೆ ಕೊಡಬೇಕಾಗಿರುವ ಸಂಬಳದ ನಡುವೆ ಅಂತಹ ದೊಡ್ಡ ಅಂತರವಿದ್ದಿರಲಿಕ್ಕೆ ಸಾಧ್ಯವಿರಲಿಲ್ಲ ಅನ್ನಿಸುತ್ತದೆ. ಸಂಸ್ಥೆಯೊಳಗೆ ವೇತನದಲ್ಲಿ ತುಂಬಾ ತಾರತಮ್ಯ ಇದ್ದರೆ ಕಾರ್ಮಿಕರು ಇಷ್ಟಪಡುವುದಿಲ್ಲ. ಅವರು ತಾರತಮ್ಯವನ್ನು ದ್ವೇಷಿಸುತ್ತಾರೆ. ಅದರಿಂದ ಸಂಸ್ಥೆಯ ಉತ್ಪಾದನಾ ಸಾಮಥ್ರ್ಯ ಕುಂಠಿತವಾಗುತ್ತದೆ.
ಸ್ಥಳೀಯ ಕೆಲಸಗಾರರು ಈಗಾಗಲೇ ಮಾಡುತ್ತಿರುವ ಕೆಲಸಗಳನ್ನು ವಲಸಿಗರು ಇನ್ನೂ ಕಡಿಮೆ ಸಂಬಳಕ್ಕೆ ಮಾಡುವುದಕ್ಕೆ ಮುಂದೆ ಬಂದರೂ ಅವರಿಗೆ ಕೆಲಸ ಸಿಗುವ ಅವಕಾಶಗಳು ಕಡಿಮೆ. ಹಾಗಾಗಿಯೇ ವಲಸಿಗರು ದೇಸೀ ಜನರು ಮಾಡಲು ಬಯಸದ ಕೆಲಸಗಳನ್ನೇ ಮಾಡುತ್ತಾರೆ. ಮತ್ತು ಅವರು ಹೋಗದ ನಗರಗಳಿಗೇ ಹೋಗುತ್ತಾರೆ. ಅಲ್ಲಿ ಅವರು ಯಾರ ಕೆಲಸವನ್ನೂ ಕಸಿದುಕೊಳ್ಳುತ್ತಿಲ್ಲ.  ಅವರು ಆ ಕೆಲಸ ಮಾಡದೇ ಹೋದರೆ ಅದು ಹಾಗೆ ಉಳಿಯುತ್ತದೆ.

ನಿಪುಣರ ಗುಂಪು

ಈತನಕ ನಾವು ಕೌಶಲವಿಲ್ಲದ ವಲಸಿಗರಿಂದ ಸ್ಥಳೀಯರ ಮೇಲೆ ಆಗಬಹುದಾದ ಪರಿಣಾಮಗಳನ್ನು ಕುರಿತು ಚರ್ಚಿಸಿದೆವು. ಕೌಶಲವಿರುವ ವಲಸಿಗರ ಬಗ್ಗೆ ಅಂತಹ ವಿರೋಧವಿಲ್ಲ. ಬದಲಾಗಿ ಅವರ ಪರವಾಗಿ ಕೌಶಲವಿಲ್ಲದ ವಲಸಿಗರನ್ನು ವಿರೋಧಿಸುವವರೂ ಕೂಡ ವಕಾಲತ್ತು ವಹಿಸುತ್ತಾರೆ. ಕಡಿಮೆ ಕೌಶಲವುಳ್ಳ ವಲಸಿಗರು ಕಡಿಮೆ ಕೌಶಲವುಳ್ಳ ಸ್ಥಳೀಯರಿಗೆ ಸ್ಪರ್ಧಿಗಳಲ್ಲ ಎನ್ನುವುದನ್ನು ವಿವರಿಸಲು ನಾವು ಹಲವು ವಾದಗಳನ್ನು ಈವರೆಗೂ ಚರ್ಚಿಸಿದೆವು. ಆದರೆ ಇವು ಕೌಶಲವುಳ್ಳ ವಲಸಿಗರಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಮೊದಲನೆಯದಾಗಿ ಅವರಿಗೆ ಕನಿಷ್ಠ ವೇತನಕ್ಕಿಂತಲೂ ಹೆಚ್ಚಿನ ಸಂಬಳವನ್ನು ನೀಡಲಾಗುತ್ತದೆ. ಅವರಿಗೆ efficiency wage ಕೂಡ ಕೊಡಬೇಕಾಗಿಲ್ಲ. ಏಕೆಂದರೆ ಅವರು ಮಾಡುವ ಕೆಲಸಗಳೇ ಆಸಕ್ತಿದಾಯಕವಾಗಿರುತ್ತವೆ. ಅದನ್ನು ಮಾಡುವುದೇ ಒಂದು ಸಂತಸದ ವಿಷಯ. ಹಾಗಾಗಿ ಅವರಿಗೆ ಹೆಚ್ಚಿನ ಪಗಾರ ಕೊಡಬೇಕಾಗದೇ ಇರಬಹುದು. ಹಾಗಾಗಿ ವಲಸಿಗನಿಂದ ಸ್ಥಳೀಯರ ಸಂಬಳಕ್ಕೆ ತೊಂದರೆಯಾಗುತ್ತದೆ ಎಂದು ಹೇಳುವುದು ಕಷ್ಟ. ಇನ್ನು ಎರಡನೆಯದಾಗಿ, ಒಬ್ಬ ಕೌಶಲವುಳ್ಳ ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಮಾಲಿಕರು ಅರ್ಜಿದಾರರ ವ್ಯಕ್ತಿತ್ವ ಮತ್ತು ವಿಶ್ವಾಸಾರ್ಹತೆಗಿಂತ ಹೆಚ್ಚಾಗಿ ಅವರ ಕೌಶಲದ ಬಗ್ಗೆ ಹೆಚ್ಚು ಕಾತುರರಾಗಿರುತ್ತಾರೆ. ಉದಾಹರಣೆಗೆ ದಾದಿಯರನ್ನು ನೇಮಿಸಿಕೊಳ್ಳುವಾಗ ಹೆಚ್ಚಿನ ಆಸ್ಪತ್ರೆಗಳು ಅವರಿಗೆ ಕಾನೂನುರೀತ್ಯಾ ಬೇಕಾದ ಅರ್ಹತೆಗಳಿವೆಯೇ ಮತ್ತು ಅವರು ನರ್ಸಿಂಗ್ ಬೋರ್ಡ್ ಪರೀಕ್ಷೆಯನ್ನು ಪಾಸು ಮಾಡಿದ್ದಾರೆಯೇ ಎನ್ನುವುದರತ್ತ ಗಮನ ಕೊಡುತ್ತಾರೆ. ವಿದೇಶೀ ಮೂಲದ ದಾದಿಯೊಬ್ಬಳಿಗೆ ಎಲ್ಲಾ ಅರ್ಹತೆಗಳೂ ಇದ್ದು ಅವಳು ಕಡಿಮೆ ಸಂಬಳಕ್ಕೆ ಕೆಲಸಮಾಡುವುದಕ್ಕೆ ಸಿದ್ಧವಿದ್ದಲ್ಲಿ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಕ್ಕೆ ಯಾವುದೇ ಆಕ್ಷೇಪವೂ ಇರಬಾರದು. ಅದಕ್ಕಿಂತ ಹೆಚ್ಚಾಗಿ ಸರಣಿ ಸಂದರ್ಶನಗಳು ಮತ್ತು ಪರೀಕ್ಷೆಗಳು ಇಲ್ಲದೆ ಅಂತಹ ಕೆಲಸಗಾರರನ್ನು ಆಸ್ಪತ್ರೆಯವರು ನೇಮಕ ಮಾಡಿಕೊಳ್ಳುವುದೇ ಇಲ್ಲ ಮತ್ತು ವಲಸಿಗರು ಹಾಗೂ ಸ್ಥಳೀಯರ ನಡುವೆ ಅಂತಹ ವ್ಯತ್ಯಾಸ ಕಾಣುವುದಿಲ್ಲ. ಹಾಗಾಗಿಯೇ ಸ್ಥಳೀಯ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ರಾಜ್ಯಗಳಲ್ಲಿ ನರ್ಸಿಂಗ್ ಬೋರ್ಡ್ ನಡೆಸುವ ಪರೀಕ್ಷೆಯನ್ನು ತೆಗೆದುಕೊಳ್ಳುವುದಕ್ಕೆ ಒಲವಿರುವುದಿಲ್ಲ.

ಇಷ್ಟಾಗಿಯೂ ಕೌಶಲವುಳ್ಳ ಕಾರ್ಮಿಕರ ವಲಸೆಯ ಪರಿಣಾಮ ಒಂದೇ ಬಗೆಯಾಗಿಲ್ಲ. ವಲಸೆ ಬಂದ ಇಂತಹ ಕಾರ್ಮಿಕರ ಸೇವೆಗಳು ಕಡಿಮೆ ವೆಚ್ಚದಲ್ಲಿ ಸಿಗುವುದರಿಂದ ಕಡಿಮೆ ಕೌಶಲವಿರುವ ಸ್ಥಳೀಯ ಕಾರ್ಮಿಕರಿಗೆ ಅವರಿಂದ ಅನುಕೂಲವಾಗುತ್ತದೆ. ಅಮೆರಿಕೆಯ ಅತ್ಯಂತ ಬಡ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರೆಲ್ಲರೂ ಅಭಿವೃದ್ಧಿಶೀಲ ದೇಶಗಳಿಂದ ಬಂದಿರುವ ವಲಸಿಗರು. ಆದರೆ ಇವರು ಅಂತಹುದೇ ಕೌಶಲವಿರುವ ಸ್ಥಳೀಯ ಕೆಲಸಗಾರರಿಗೆ ಪ್ರತಿಸ್ಪರ್ಧಿಗಳಾಗುತ್ತಾರೆ. ಅದರಿಂದ ಸ್ಥಳೀಯರ ಉದ್ಯೋಗಾವಕಾಶಗಳಿಗೆ ತೊಂದರೆಯಾಗುತ್ತದೆ. (ಉದಾಹರಣೆಗೆ ದಾದಿಯರು, ವೈದ್ಯರು, ಇಂಜಿನಿಯರುಗಳು ಮತ್ತು ಕಾಲೇಜು ಅದ್ಯಾಪಕರು).

ಯಾವ ಕ್ಯಾರವಾನ್

ವಲಸೆ ಕುರಿತಂತೆ ಇರುವ ತಪ್ಪುಕಲ್ಪನೆಗಳೆಲ್ಲವೂ ಮುರಿದುಬೀಳುತ್ತಿವೆ. ಕಡಿಮೆ ಕೌಶಲವುಳ್ಳವರು ಶ್ರೀಮಂತ ದೇಶಗಳಿಗೆ ವಲಸೆ ಹೋಗುವುದರಿಂದ ಸ್ಥಳೀಯರ ಕೂಲಿ ಮತ್ತು ಕೆಲಸ ಕುಗ್ಗುತ್ತದೆ ಎನ್ನುವುದಕ್ಕೆ ಯಾವ ಪುರಾವೆಗಳೂ ಇಲ್ಲ. ಅಥವಾ ಕಾರ್ಮಿಕ ಮಾರುಕಟ್ಟೆ ಅನ್ನುವುದು ಹಣ್ಣಿನ ಮಾರುಕಟ್ಟೆಯ ಹಾಗಲ್ಲ. ಬೇಡಿಕೆ ಮತ್ತು ಪೂರೈಕೆಯ ನಿಯಮಗಳು ಇದಕ್ಕೆ ಅನ್ವಯಿಸುವುದಿಲ್ಲ. ಆದರೆ ರಾಜಕೀಯವಾಗಿ ವಲಸೆ ಎನ್ನುವುದು ತುಂಬಾ ಸ್ಫೋಟಕಕಾರಿಯಾದ ವಿಷಯ. ಏಕೆಂದರೆ ಮುಂದೆ ವಲಸಿಗರ ಪ್ರವಾಹವೇ ಹರಿದು ಬರಲಿದೆ. ಅವರೊಡನೆ ವಿದೇಶೀಯರ, ಗುಂಪು, ಅಪರಿಚಿತ ಭಾಷೆಗಳು ಮತ್ತು ಸಂಪ್ರದಾಯಗಳು ನಮ್ಮ ಶುದ್ಧವಾದ ಏಕಸಂಸ್ಕøತಿಯ ಮೇಲೆ ದಾಳಿಮಾಡುತ್ತವೆ ಎನ್ನುವ ಆಲೋಚನೆಯೊಂದಿಗೆ ಅದು ತಳುಕುಹಾಕಿಕೊಂಡಿರುತ್ತದೆ.

ಆದರೆ ನಾವೀಗಾಗಲೇ ಗಮನಿಸಿದಂತೆ ವಲಸಿಗರು ತಂಡೋಪತಂಡವಾಗಿ ಅಮೆರಿಕಕ್ಕೆ (ಇಂಗ್ಲೆಂಡಿಗೆ, ಫ್ರಾನ್ಸಿಗೆ) ಲಗ್ಗೆ ಇಡಲು ಅವಕಾಶವನ್ನು ಕಾಯುತ್ತಿದ್ದಾರೆ ಮತ್ತು ಅವರನ್ನು ಸೇನಾಬಲ ಬಳಸಿ (ಗೋಡೆ ಕಟ್ಟಿ) ಬಾರದಂತೆ ತಡೆಯಬೇಕು ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ. ಭಯಂಕರ ವಿಪತ್ತೊಂದು ಅವರ ಮೇಲೆ ಎರಗಿ, ಅವರನ್ನು ಅವರ ನಾಡಿನಿಂದ ಆಚೆ ತಳ್ಳದ ಹೊರತು ಬಹುಪಾಲು ಬಡಜನರು ತಮ್ಮೂರಿನ ತಮ್ಮ ಮನೆಗಳಲ್ಲಿರಲು ಬಯಸುತ್ತಾರೆ. ಅವರು ಸುಮ್ಮನೆ ಬಂದು ನಮ್ಮ ದೇಶದ ಬಾಗಿಲು ತಟ್ಟುತ್ತಿಲ್ಲ. ಅವರಿಗೆ ತಮ್ಮ ತಾಯ್ನಾಡಿನಲ್ಲಿಯೇ ಇರಬೇಕೆಂಬ ಇಚ್ಛೆಯಿದೆ. ಬೇರೆ ದೇಶವಲ್ಲ ತಮ್ಮದೇ ದೇಶದ ಸ್ಥಳೀಯ ರಾಜಧಾನಿಗೆ ಹೋಗುವ ಆಸೆ ಕೂಡ ಅವರಿಗಿಲ್ಲ. ಈ ಎಲ್ಲಾ ವಾಸ್ತವಾಂಶಗಳನ್ನು ಮುಂದಿಟ್ಟರೂ ಶ್ರೀಮಂತ ದೇಶಗಳ ಜನರು ಇದನ್ನು ನಂಬುವುದಕ್ಕೆ ತಯಾರಿಲ್ಲ. ಈ ಮನಃಸ್ಥಿತಿಯನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?.

2 comments to “ಷಾರ್ಕ್‍ನ ಬಾಯಿಂದ – ೧”
  1. Pingback: ಷಾರ್ಕ್‍ನ ಬಾಯಿಂದ – ೨ – ಋತುಮಾನ

ಪ್ರತಿಕ್ರಿಯಿಸಿ