ಷಾರ್ಕ್‍ನ ಬಾಯಿಂದ – ೨

ನೊಬೆಲ್ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಮತ್ತುಎಸ್ತರ್ ಡುಫ್ಲೋ ಅವರ ಪುಸ್ತಕ ““ಗುಡ್‌ ಎಕಾನಮಿಕ್ಸ್‌ ಫಾರ್‌ ಹಾರ್ಡ ಟೈಮ್ಸ್‌”” ಮೇಲಿನ ಟಿಪ್ಪಣಿಗಳ ಎರಡನೇ ಭಾಗ

 

ಮೊದಲನೇ ಭಾಗವನ್ನು ಇಲ್ಲಿ ಓದಿ..

ಷಾರ್ಕ್‍ನ ಬಾಯಿಂದ – ೧

ಸಂಬಂಧಗಳು

ಜನರು ಯಾಕೆ ವಲಸೆ ಹೋಗುವುದಕ್ಕೆ ಬಯಸುವುದಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ಬಹುಕಾಲದಿಂದ ಒಂದು ಕಡೆಯಲ್ಲಿಯೇ ನೆಲೆಸಿರುವ ಸ್ಥಳೀಯರ ಜೊತೆ ಸ್ಪರ್ಧಿಸುವುದು ವಲಸಿಗರಿಗೆ ಕಷ್ಟವಾಗುತ್ತದೆ. ಅವರಿಗೆ ಒಂದು ಗೌರವಯುತವಾದ ಕೆಲಸ ಸಿಗುವುದು ಸುಲಭವಲ್ಲ. ಒಳ್ಳೆಯ ಕೆಲಸ ಸಿಗಬೇಕಾದರೆ ಉದ್ಯಮದ ಒಡೆಯರು ವಲಸಿಗರ ಸಂಬಂಧಕರಾಗಿರಬೇಕು. ಇಲ್ಲವೇ ಗೆಳೆಯರಾಗಿರಬೇಕು ಅಥವಾ ಗೆಳೆಯರ ಗೆಳೆಯರೋ ಅಥವಾ ಅವನ ಕುಲದವರೋ ಆಗಿರಬೇಕು. ಅದೂ ಇಲ್ಲದಿದ್ದಲ್ಲಿ ಅವರನ್ನು ಅರ್ಥಮಾಡಿಕೊಳ್ಳುವಂತಹ ವ್ಯಕ್ತಿಗಳಾಗಿರಬೇಕು. ಆಗಷ್ಟೇ ಉತ್ತಮ ಕೆಲಸ ಸಿಗುವ ಸಾಧ್ಯತೆ ಇರುತ್ತದೆ. ವಲಸಿಗರು ತಮ್ಮ ಪರಿಚಿತರು ಇರುವ ಸ್ಥಳಗÀಳಿಗೇ ಬರುವುದು ಈ ಕಾರಣಕ್ಕಾಗಿಯೇ. ಅಲ್ಲಿ ಕೆಲಸ ಹುಡುಕಿಕೊಳ್ಳುವುದು ಸುಲಭ ಮತ್ತು ಆ ಊರಿನಲ್ಲಿ ಅವರಿಗೆ ನೆಲೆಯೂರಲು ಪರಿಚಿತರು ಸಹಾಯ ಮಾಡುತ್ತಾರೆ. ಹೀಗೆ ಪರಿಚಿತರು ಈಗಾಗಲೇ ವಲಸೆ ಬಂದು, ಗಟ್ಟಿಯಾಗಿ ನೆಲೆಯೂರಿದ್ದರೆ, ಅನಂತರ ವಲಸೆ ಬರುವವರಿಗೆ ಅನುಕೂಲವಾಗುತ್ತದೆ. ಆದರೆ ರಕ್ತಸಂಬಂಧ, ಬಾಂಧವ್ಯದ ಸೆಳೆತ ಎಲ್ಲದಕ್ಕಿಂತಲೂ ಹೆಚ್ಚು ಬಲವಾದುದು.

ಮಳೆಯಿಲ್ಲದೆ ಬರಕ್ಕೀಡಾದ ಮೆಕ್ಸಿಕೋದ ಹಳ್ಳಿಗಳಿಂದ ಜನ ವಲಸೆ ಹೋಗುತ್ತಿದ್ದರು. ಅವರಲ್ಲಿ ಹಲವರು ಅಮೇರಿಕೆಗೆ ಬಂದು ನೆಲೆಸಿದರು. ಇದರಿಂದಾಗಿ ಮುಂದೆ ಆಯಾ ಹಳ್ಳಿಗಳಿಂದ ಬರುವ ವಲಸಿಗರಿಗೆ ಸುಲಭವಾಗುತ್ತಿತ್ತು. ಏಕೆಂದರೆ ಅಮೆರಿಕೆಯಲ್ಲಿ ಸುರಕ್ಷಿತವಾದ ಕೆಲಸದಲ್ಲಿರುವ ತಮ್ಮೂರಿನ ಜನರ ಜೊತೆ ಅವರಿಗೆ ಸಂಬಂಧ ಸಾಧ್ಯವಾಗುತ್ತಿತ್ತು. ಅನಂತರ ಬಂದವರಿಗೆ ಕೆಲಸ ಹುಡುಕಿಕೊಳ್ಳಲು ಈ ಹಳೆಯ ವಲಸಿಗರು ಸಹಾಯ ಮಾಡುತ್ತಿದ್ದರು. ಇದನ್ನು ಕೈವನ್ ಗಮನಿಸಿದ್ದರು. ಅವರು ಒಂದೇ ಬಗೆಯ ಹವೆ ಇರುವ ಮೆಕ್ಸಿಕೋದ ಎರಡು ಹಳ್ಳಿಗಳನ್ನು ಹೋಲಿಸಿ ನೋಡಿದರು. ಇವುಗಳಲ್ಲಿ ಒಂದು ಹಳ್ಳಿಯಲ್ಲಿ ಹಿಂದೆ ಒಮ್ಮೆ ಬರ ಬಂದಿತ್ತು. ಆಗ ಒಂದಿಷ್ಟು ಜನ ಅಲ್ಲಿಂದ ವಲಸೆ ಹೋಗಿದ್ದರು. ಇನ್ನೊಂದು ಹಳ್ಳಿಯಲ್ಲಿ ಹಾಗೆ ಬರ ಬಂದಿರಲಿಲ್ಲ. ಹಾಗಾಗಿ ಅಲ್ಲಿಂದ ಜನ ವಲಸೆ ಹೋಗಿರಲಿಲ್ಲ. ಹಿಂದೆ ಬರಬಂದಿದ್ದ ಹಳ್ಳಿಯಿಂದ ಈಗ ವಲಸೆ ಹೋಗುವ ಜನರಿಗೆ ಕ್ಷಾಮ ಬರದೇ ಇದ್ದ ಹಳ್ಳಿಯಿಂದ ವಲಸೆ ಹೋಗುವ ಜನರಿಗಿಂತ ಬೇಗ ಕೆಲಸ ಸಿಗುವ (ಒಳ್ಳೆಯ ಕೆಲಸ ಸಿಗುವ) ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎನ್ನುವುದು ಕೈವನ್ ಅವರ ಊಹೆಯಾಗಿತ್ತು. ವಾಸ್ತವದಲ್ಲಿ ನಡೆದದ್ದೂ ಹಾಗೆಯೇ. ಪರಿಚಯದ ಜಾಲ ಮುಖ್ಯವಾಗುತ್ತದೆ.
ನಿರಾಶ್ರಿತರ ಪುನರ್ವಸತಿಯ ವಿಷಯದಲ್ಲೂ ಇದು ನಿಜ. ತಮ್ಮ ದೇಶದ ನಿರಾಶ್ರಿತರು ಈ ಮೊದಲೇ ಬಂದು ನೆಲಸಿರುವ ಸ್ಥಳಗಳಲ್ಲಿ ಹೊಸದಾಗಿ ಬರುವ ನಿರಾಶ್ರಿತರಿಗೆ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚು. ಈಗಾಗಲೇ ನೆಲೆನಿಂತ ನಿರಾಶ್ರಿತರಿಗೆ ತಮ್ಮ ದೇಶದ ಹೊಸ ನಿರಾಶ್ರಿತರ ಪರಿಚಯ ಇಲ್ಲದೇ ಇರಬಹುದು. ಆದರೂ ತಮ್ಮ ರಾಷ್ಟ್ರದವರಿಗೆ ಸಹಾಯ ಮಾಡಬೇಕೆಂಬ ಒತ್ತಡ ಅವರ ಮೇಲಿರುತ್ತದೆ.

ಸಂಬಂಧಗಳು ಮತ್ತು ಬಂಧುಗಳು ಇರುವವರಿಗೆ ಅನುಕೂಲಗಳು ಹೆಚ್ಚು. ಆದರೆ ಅವು ಇಲ್ಲದೇ ಇರುವವರ ಕಥೆ ಏನು? ಅಂತಹವರು ನಿಸ್ಸಂಶಯವಾಗಿ ಹೆಚ್ಚು ಪ್ರತಿಕೂಲ ಪರಿಸ್ಥಿತಿಯಲ್ಲಿರುತ್ತಾರೆ. ಶಿಫಾರಸ್ಸುಗಳೊಂದಿಗೆ ಬರುವವರು ಉಳಿದವರೆಲ್ಲರ ಅವಕಾಶಗಳನ್ನು ಹಾಳುಮಾಡುತ್ತಾರೆ. ಶಿಫಾರಸ್ಸುಗಳನ್ನು ತಂದ ಕಾರ್ಮಿಕರನ್ನೇ ನೇಮಿಸಿಕೊಂಡು ಅಭ್ಯಾಸವಾಗಿರುವ ಮಾಲೀಕರು ಶಿಫಾರಸ್ಸಿಲ್ಲದೆ ಬರುವವರನ್ನು ಅನುಮಾನದಿಂದ ನೋಡುತ್ತಾರೆ. ಇದು ಈಗ ಎಲ್ಲರಿಗೂ ತಿಳಿದಿದೆ. ಹಾಗಾಗಿ ಈಗ ಎಲ್ಲರೂ ಶಿಫಾರಸ್ಸು ಪಡೆಯಲು ಕಾಯುತ್ತಾರೆ. ಶಿಫಾರಸ್ಸು ಪಡೆಯಲು ಸಾಧ್ಯವಾಗದವರು ಕೆಲಸಕ್ಕಾಗಿ ಸಂಸ್ಥೆಯಿಂದ ಸಂಸ್ಥೆಗೆ ಅಲೆಯುತ್ತಾರೆ. ಆದರೆ ಮಾಲೀಕರು ಅವರನ್ನು ಗಮನಿಸುವುದೂ ಇಲ್ಲ. ಮತ್ತು ಇದು ಸರಿ ಕೂಡ.

ನೋಬೆಲ್ ಪ್ರಶಸ್ತಿ ಪಡೆದಿರುವ ಜಾರ್ಜ್ ಅಕೆರ್‍ಲಾಫ್ 1970ರಲ್ಲಿ “ಮಾರ್ಕೆಟ್ ಫಾರ್ ಲೆಮನ್ಸ್” ಎಬ ಲೇಖನವೊಂದನ್ನು ಪ್ರಕಟಿಸಿದರು. ಅದನ್ನು ಪ್ರಕಟಿಸಿದಾಗ ಅವರು ಇನ್ನೂ ಪಿಎಚ್‍ಡಿ ವಿದ್ಯಾರ್ಥಿ. ಸಾಮಾನ್ಯವಾಗಿ ಜನ ತಮ್ಮ ಬಳಿಯಿರುವ ಕಳಪೆ ಕಾರನ್ನು ಮಾರಲು ಪ್ರಯತ್ನಿಸುತ್ತಾ ಇರುತ್ತಾರೆ. ಅವರಿಗೆ ಬೇಡ ಎನ್ನುವ ಕಾರಣಕ್ಕೆ ಅದನ್ನು ಮಾರುತ್ತಿದ್ದಾರೆ ಅನ್ನುವುದು ಕೊಳ್ಳುವವರಿಗೂ ಗೊತ್ತಿರುತ್ತದೆ. ಕೊಳ್ಳುವವರಿಗೆ ಕಾರಿನ ಗುಣಮಟ್ಟದ ಬಗ್ಗೆ ಅನುಮಾನ ಉಂಟಾದಷ್ಟೂ ಮಾರುಕಟ್ಟೆಯಲ್ಲಿ ಅದರ ಬೆಲೆ ಕಡಿಮೆಯಾಗುತ್ತದೆ. ಬೆಲೆ ಕಡಿಮೆಯಾದಾಗ ಅವರು ಅದನ್ನು ಮಾರುವುದಿಲ್ಲ ಅಥವಾ ಮಾರಿದರೂ ತಮ್ಮ ಪರಿಚಿತರಿಗೆ ಮಾರುತ್ತಾರೆ. ತಮಗೆ ಕಾರು ಉಪಯೋಗಕ್ಕೆ ಬರುವುದೇ ಇಲ್ಲ ಅಂತಾದಾಗ ಮಾತ್ರ ಮುಕ್ತ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಅಂದರೆ ಕಳಪೆ ಕಾರುಗಳು ಮತ್ತು ಕಡಿಮೆ ಗುಣಮಟ್ಟದ ಕೆಲಸಗಾರರು ಮಾತ್ರ ಮುಕ್ತಮಾರುಕಟ್ಟೆಯಲ್ಲಿ ದೊರೆಯುತ್ತಾರೆ. ಇಂತಹ ಪ್ರಕ್ರಿಯೆಯನ್ನು ಪ್ರತಿಕೂಲ ಆಯ್ಕೆ ಅಂದರೆ Adverse Selection ಎಂದು ಕರೆಯುತ್ತಾರೆ.

ಮನೆಯ ಸುಖಗಳು

ದಿಲ್ಲಿಯ ಕೊಳಚೆ ಪ್ರದೇಶದ ನಿವಾಸಿಗಳನ್ನು ಒಮ್ಮೆ ಅಭಿಜಿತ್ ಸಂದರ್ಶಿಸುತ್ತಾರೆ. ಅಲ್ಲಿ ಅವರಿಗೆ ತುಂಬಾ ಇಷ್ಟವಾದ ಅಂಶ ಯಾವುದು ಎಂದು ಕೇಳುತ್ತಾರೆ. ಅಲ್ಲಿ ಆ ನಿವಾಸಿಗಳಿಗೆ ಇಷ್ಟವಾಗಿದ್ದ ಹಲವು ಅಂಶಗಳಿದ್ದವು. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅವರಿಗೆ ಹಲವು ಆಯ್ಕೆಗಳು ಸಾಧ್ಯವಿದ್ದವು. ವೈದ್ಯಕೀಯ ಸೌಲಭ್ಯವಿತ್ತು. ಕೆಲಸ ಹುಡುಕಿಕೊಳ್ಳುವುದು ಹೆಚ್ಚು ಸುಲಭವಾಗಿತ್ತು. ಅವರಿಗೆ ಇಷ್ಟವಾಗದೇ ಇದ್ದದ್ದು ಅಲ್ಲಿನ ವಾತಾವರಣ. ಅದರಲ್ಲಿ ಅಚ್ಚರಿಯೇನಿಲ್ಲ. ಇಡೀ ಪ್ರಪಂಚದಲ್ಲಿ ದಿಲ್ಲಿಯ ಗಾಳಿ ಅತ್ಯಂತ ಕಲುಷಿತವಾದದ್ದು. ಸಂದರ್ಶಿಸಿದವರಲ್ಲ್ಲಿ ಶೇಕಡ 69ರಷ್ಟು ಜನ ತಮ್ಮ ಸುತ್ತ ಮುತ್ತಲಿರುವ ಮೋರಿ ಗಟಾರಗಳನ್ನು ಚರಂಡಿಗಳನ್ನು ಸರಿಪಡಿಸಬೇಕು ಎಂದರು. ಶೇಕಡ 54ರಷ್ಟು ಜನ ಸುತ್ತಲಿರುವ ಕಸದರಾಶಿಯನ್ನು ತೆಗೆಯಬೇಕೆಂದರು. ಅವರು ಹೇಳುವುದೆಲ್ಲಾ ಸರಿ. ಅಲ್ಲೆಲ್ಲಾ ಚರಂಡಿಗಳು ಕಟ್ಟಿಕೊಂಡಿರುವುದು, ಕಸ ರಾಶಿರಾಶಿಯಾಗಿ ಬಿದ್ದಿರುವುದು ಸರ್ವೇಸಾಮಾನ್ಯ. ಹೆಚ್ಚಿನ ಬಾರಿ ಅಲ್ಲಿ ಮೋರಿಗಳೇ ಇರುವುದಿಲ್ಲ. ಇವೆಲ್ಲಾ ಒಟ್ಟಾಗಿ ಸೇರಿಕೊಂಡು ಕೊಳಚೆ ಪ್ರದೇಶಗಳಿಗೇ ವಿಶಿಷ್ಟವಾದ ಒಂದು ನಾತ ಸೃಷ್ಟಿಯಾಗಿರುತ್ತದೆ.

ಕೊಳಚೆ ಪ್ರದೇಶಗಳಲ್ಲಿ ಬದುಕುವವರು ಸಾಮಾನ್ಯವಾಗಿ ತಮ್ಮ ಜೊತೆಗೆ ಕುಟುಂಬದವರನ್ನು ಕರೆತರುವುದಿಲ್ಲ. ಅಲ್ಲಿ ಬದುಕು ತುಂಬಾ ದುರ್ಭರ ಎನಿಸಿದಾಗ ಅವರೇ ಮನೆಗೆ ಹೋಗಿ ಬರುತ್ತಾರೆ. ರಾಜಸ್ತಾನದ ಗ್ರಾಮೀಣ ಪ್ರದೇಶಗಳಲ್ಲಿ ಹಣಸಂಪಾದನೆಗೆಂದು ವಲಸೆ ಹೋಗಿರುವವರು ತಿಂಗಳಿಗೊಮ್ಮೆ ಮನೆಗೆ ಬರುತ್ತಾರೆ. ಎಲ್ಲೋ ಕೆಲವರು ಎರಡು ಮೂರು ತಿಂಗಳು ಬಾರದೇ ಇರಬಹುದು. ಹೆಚ್ಚಿನ ವಲಸಿಗರು ತಮ್ಮ ಹಳ್ಳಿಯ ಹತ್ತಿರದಲ್ಲೇ ಉಳಿದುಕೊಳ್ಳುತ್ತಾರೆ. ಹಾಗಾಗಿ ಅವರಿಗೆ ಸಿಗುವ ಕೆಲಸಗಳು ಮತ್ತು ಅವರು ಪಡೆದುಕೊಳ್ಳಬಹುದಾದ ಕೌಶಲಗಳೂ ಸೀಮಿತವಾಗಿರುತ್ತವೆ.

ಆದರೆ ಅವರೇಕೆ ಕೊಳಚೆ ಪ್ರದೇಶಗಳಲ್ಲಿ ಅಥವಾ ಅದಕ್ಕಿಂತ ಹೊಲಸಾಗಿರುವ ಸ್ಥಳಗಳಲ್ಲಿ ಉಳಿದುಕೊಳ್ಳುತ್ತಾರೆ? ಅದಕ್ಕಿಂತ ಒಳ್ಳೆಯ ಸ್ಥಳಗಳಲ್ಲಿ ಬದುಕಬಾರದೆ? ಕೆಲವರಿಗಾದರೂ ಈಗ ಕೊಡುತ್ತಿರುವುದಕ್ಕಿಂತ ಹೆಚ್ಚಿನ ಬಾಡಿಗೆ ಕೊಡುವುದಕ್ಕೆ ಸಾಧ್ಯವಿದೆ. ಇದು ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆ. ಅಲ್ಲಿ ಇದಕ್ಕಿಂತ ಸುಮಾರಾದ ಸ್ಥಳ ಅವರ ಕೈಗೆಟುಕುವುದಿಲ್ಲ. ಮಧ್ಯಮ ಸ್ತರದ ಮನೆಗಳು ನಮ್ಮಲ್ಲಿ ಲಭ್ಯವಿಲ್ಲ. ಮೂರನೆಯ ಪ್ರಪಂಚದ ಹೆಚ್ಚಿನ ನಗರಗಳಲ್ಲಿ ಈ ಜನಸಮುದಾಯಕ್ಕೆ ಬೇಕಾದ ಮೂಲಭೂತ ವ್ಯವಸ್ಥೆ ಇಲ್ಲವೇ ಇಲ್ಲ. ಇತ್ತೀಚಿನ ವರದಿಯೊಂದರ ಪ್ರಕಾರ, 2016ರಿಂದ 2040ರ ಅವಧಿಗೆ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಲು ಭಾರತಕ್ಕೆ 4.5 ಟ್ರಿಲಿಯನ್, ಕೆನ್ಯಾಕ್ಕೆ 223 ಬಿಲಿಯನ್ ಡಾಲರ್ ಮತ್ತು ಮೆಕ್ಸಿಕೋಗೆ 1.1 ಟ್ರಿಲಿಯನ್ ಡಾಲರ್‍ಗಳು ಬೇಕು. ಇದರರ್ಥವೇನೆಂದರೆ, ಸ್ವಲ್ಪ ಮರ್ಯಾದೆಯಿಂದ ಬದುಕಬಹುದಾದ ಒಳ್ಳೆಯ ಗುಣಮಟ್ಟದ ಮೂಲವ್ಯವಸ್ಥೆ ಹೆಚ್ಚಿನ ನಗರಗಳಲ್ಲಿ ಕೂಡ ಕಷ್ಟ. ಎಲ್ಲೋ ಕೆಲವು ಕಡೆ ಮಾತ್ರ ಇರುತ್ತದೆ. ಆದರೆ ಅವುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ. ನಿವೇಶನದ ಬೆಲೆಯೂ ಗಗನದಲ್ಲಿರುತ್ತದೆ. ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿ ಬೆಲೆಯ ಕೆಲವು ನಿವೇಶನಗಳು ಭಾರತದಲ್ಲಿವೆ. ಹೀಗೆ ದುಬಾರಿ ಬೆಲೆ ಕೊಡಲಾಗದೆ ಜನ ನಗರದ ಹೊರವಲಯದಲ್ಲಿ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಆ ಪ್ರದೇಶಗಳು ಅಡ್ಡಾದಿಡ್ಡಿಯಾಗಿ ಬೆಳೆಯುತ್ತವೆ. ಯಾರೂ ಆಕ್ರಮಿಸಿಕೊಳ್ಳದೆ ಉಳಿದಿರುವ ಜಾಗದಲ್ಲಿ ಬಡವರು ನೆಲಸುತ್ತಾರೆ. ಅಲ್ಲಿ ಒಳಚರಂಡಿ ವ್ಯವಸ್ಥೆ ಇದೆಯೋ ಇಲ್ಲವೋ, ನೀರಿನ ಪೈಪುಗಳು ಇವೆಯೋ ಇಲ್ಲವೋ ಮುಂತಾದವುಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಇರೋದಕ್ಕೆ ಒಂದು ಚೂರು ಜಾಗಕ್ಕಾಗಿ ಹತಾಶರಾಗಿರುತ್ತಾರೆ. ಹಾಗೆ ಅವರು ವಾಸಿಸುತ್ತಿರುವ ಆ ಜಾಗ ಕೂಡ ಅವರದಲ್ಲ. ಹಾಗಾಗಿ ಯಾರು, ಯಾವ ಕ್ಷಣದಲ್ಲಿ ತಮ್ಮನ್ನು ಒಕ್ಕಲೆಬ್ಬಿಸುತ್ತಾರೋ ಎನ್ನುವ ಆತಂಕದಲ್ಲೇ ಇರುತ್ತಾರೆ. ಆದ್ದರಿಂದ ಅವರು ತಾತ್ಕಾಲಿಕ ಗುಡಿಸಿಲುಗಳನ್ನು ಕಟ್ಟಿಕೊಳ್ಳುತ್ತಾರೆ. ಇವು ನಗರದ ಹೊರಮೈಯಲ್ಲಿ ಗಾಯದ ಗುರುತುಗಳಂತೆ ಎದ್ದು ಕಾಣುತ್ತವೆ. ಇವೇ ತೃತೀಯ ಜಗತ್ತಿನ ಪ್ರಖ್ಯಾತ ಕೊಳಚೆ ಪ್ರದೇಶಗಳು.

ನಗರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಡ್ ಗ್ಲೇಸರ್ ಬರೆದಿರುವ ಟ್ರಯಂಫ್ ಆಫ್ ದ ಸಿಟಿ ಒಂದು ಅದ್ಭುತವಾದ ಪುಸ್ತಕ. ಅದರಲ್ಲಿ ನಗರ ನಿರ್ಮಾಣವನ್ನು ಯೋಜಿಸುವವರು ಈ ಪರಿಸ್ಥಿತಿಯನ್ನು ಹೇಗೆ ಮತ್ತಷ್ಟು ಉಲ್ಬಣಗೊಳಿಸುತ್ತಾರೆ ಎನ್ನುವುದನ್ನು ವಿವರಿಸಿದ್ದಾರೆ. ಮಧ್ಯಮವರ್ಗದ ಜನರಿಗೆ ಒತ್ತೊತ್ತಿಗೆ, ಎತ್ತರಕ್ಕೆ ಮನೆ ಕಟ್ಟಿಕೊಳ್ಳುವುದಕ್ಕೆ ಅವರು ಅವಕಾಶ ಕೊಡುವುದಿಲ್ಲ. ಅದಕ್ಕೆ ಬದಲಾಗಿ ಉದ್ಯಾನ ನಗರಿಯನ್ನು ಕಟ್ಟುವುದು ಅವರ ಗುರಿಯಾಗಿರುತ್ತದೆ. ಗೃಹನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳು ಪ್ಯಾರಿಸ್, ನ್ಯೂ ಯಾರ್ಕ್ ಅಥವಾ ಸಿಂಗಪುರದಲ್ಲಿ ಇರುವುದಕ್ಕಿಂತಲೂ ಭಾರತದಲ್ಲಿ ಹೆಚ್ಚು ಬಿಗಿಯಾಗಿವೆ. ಹಾಗಾಗಿ ನಗರಗಳು ಅಡ್ಡಾದಿಡ್ಡಿಯಾಗಿ ಹರಡಿಕೊಂಡಿರುತ್ತವೆ. ಹೆಚ್ಚಿನ ಭಾರತೀಯ ನಗರಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಲು ತುಂಬಾ ದೂರ ಪ್ರಯಾಣ ಮಾಡಬೇಕಾಗುತ್ತದೆ. ಇದೇ ಸಮಸ್ಯೆ ಚೀನಾ ಮತ್ತು ಇನ್ನೂ ಹಲವು ದೇಶಗಳಲ್ಲೂ ಇವೆ. ಆದರೆ ಇಷ್ಟು ತೀವ್ರ ಸ್ವರೂಪದಲ್ಲಿಲ್ಲ.

ಇಂತಹ ನಿಯಮಗಳಿಂದಾಗಿ ಕಡಿಮೆ ಆದಾಯದವರು, ವಲಸಿಗರು ತುಂಬಾ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಜನಸಂದಣಿಯಿರುವ ಕೊಳಚೆ ಪ್ರದೇಶವೊಂದರಲ್ಲಿ ತೂರಿಕೊಳ್ಳಬೇಕಾಗುತ್ತದೆ (ಅದೃಷ್ಟ ಚೆನ್ನಾಗಿದ್ದು ಅದು ಸಿಕ್ಕರೆÉ), ಇಲ್ಲದಿದ್ದರೆ ಪ್ರತಿದಿನ ಗಂಟೆಗಟ್ಟಲೆ ಪ್ರಯಾಣಕ್ಕೆ ತಯಾರಿರಬೇಕು, ಅಥವಾ ಸೇತುವೆಯ ಅಡಿಯಲ್ಲೋ, ತಾನು ಕಟ್ಟುತ್ತಿರುವ ಕಟ್ಟಡದ ನೆಲದ ಮೇಲೋ, ತನ್ನ ರಿಕ್ಷಾದೊಳಗೋ ಅಥವಾ ತನ್ನ ಲಾರಿಯಡಿಯಲ್ಲೋ, ಇಲ್ಲವೇ ರಸ್ತೆಬದಿಯಲ್ಲಿ ಅಂಗಡಿಯೊಂದರ ಚಾಚಿರುವ ಮಾಡಿನ ಕೆಳಗೋ ಮಲಗಬೇಕಾಗುತ್ತದೆ. ಇವೆಲ್ಲಾ ನಿರಾಸೆಗಳನ್ನೂ ಮೀರಿಕೊಂಡು ಕೆಲಸ ಹುಡುಕಿ ನಡೆದರೆ ಕಡಿಮೆ ಕೌಶಲವಿರುವ ವಲಸಿಗರಿಗೆ ಸಿಗುವುದು ಯಾರೂ ಮಾಡಲು ಇಷ್ಟಪಡದ ಕೆಲಸಗಳು. ಕೊನೆಯ ಪಕ್ಷ ಇದು ಪ್ರಾರಂಭದಲ್ಲಂತೂ ನಿಜ. ನೀವು ಎಲ್ಲೋ ಆಕಸ್ಮಿಕವಾಗಿ ಸಿಕ್ಕಿಹಾಕಿಕೊಂಡಾಗÀ, ನಿಮಗೆ ಇನ್ಯಾವುದೇ ಆಯ್ಕೆಯೇ ಇಲ್ಲದಿದ್ದಾಗ, ಆ ಕೆಲಸಗಳನ್ನು ಮಾಡಬಹುದು. ಆದರೆ ಮನೆ, ಮಠ, ಗೆಳೆಯರು, ಎಲ್ಲರನ್ನೂ ಬಿಟ್ಟು ಪ್ರಪಂಚದ ಇನ್ನೊಂದು ಮೂಲೆಗೆ ಬಂದು ಸೇತುವೆಯಡಿ ಮಲಗಿಕೊಂಡು, ನೆಲವನ್ನು ಅಥವಾ ಬಸ್ಸಿನ ಟೇಬಲ್ಲುಗಳನ್ನು ಸ್ವಚ್ಛಗೊಳಿಸಿಕೊಂಡು ಬದುಕುವುದರಲ್ಲಿ ಎಂತಹ ಉತ್ಸಾಹ ಇರುವುದಕ್ಕೆ ಸಾಧ್ಯ? ಸಧ್ಯದ ಕಷ್ಟಗಳು, ನೋವು ಇವುಗಳಿಂದಾಚೆಗೆ ಯೋಚಿಸುತ್ತಾ, ಉದ್ಯೋಗದ ಏಣಿಯನ್ನು ನಿರಂತರ ಹತ್ತುತ್ತಾ, ಬಸ್‍ಬಾಯ್‍ನಿಂದ ಸರಣಿ ಹೋಟೆಲ್‍ಗಳ ಮಾಲಿಕನಾಗುವುದನ್ನು ಧ್ಯಾನಿಸುವ ವಲಸಿಗ ಮಾತ್ರ ಇವೆಲ್ಲಾ ಸವಾಲುಗಳನ್ನು ಎದುರಿಸಬಲ್ಲ.

ಮನೆಯ ಸೆಳೆತ ಎಂದರೆ ಅದು ಕೇವಲ ದೈಹಿಕ ಸುಖಸಾಧನಗಳು ಮತ್ತು ಶಾರೀರಿಕ ಅನುಕೂಲಗಳು ಮಾತ್ರವಲ್ಲ. ಅವುಗಳನ್ನು ಮೀರಿದ್ದು. ಬಡಜನರ ಬದುಕು ಬಹು ಬೇಗನೆ ಘಾಸಿಗೊಳಗಾಗುತ್ತದೆ. ಸ್ಥಿರವಾದ ಆದಾಯವಿರುವುದಿಲ್ಲ. ಹೇಳಿಕೊಳ್ಳುವ ಆರೋಗ್ಯವೂ ಇರುವುದಿಲ್ಲ. ಪರಿಚಿತರು ಹಾಗೂ ಬಂಧುಗಳ ನಡುವೆ ಇದ್ದಾಗ ಕಷ್ಟದ ಹೊತ್ತಿನಲ್ಲಿ ನೆರವು ಸಿಗುವ ಸಾಧ್ಯತೆ ಇರುತ್ತದೆ. ಊರನ್ನು ತೊರೆದು ಹೋಗಿದ್ದಾಗ ಅವರ ಸಂಪರ್ಕ ಹಾಗೂ ಸಾಮಿಪ್ಯ ಎರಡನ್ನೂ ಕಳೆದುಕೊಳ್ಳುತ್ತಾರೆ. ಹೆಚ್ಚಿನ ಜನಗಳ ಜೊತೆ ಗೆಳೆತನ, ಬಾಂಧವ್ಯ ಇದ್ದಾಗ ಅಪಾಯಕ್ಕೆ, ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆಗಳು ಕಡಿಮೆ. ಇವೆಲ್ಲವನ್ನು ಎದುರಿಸುವ ಶ್ರೀಮಂತಿಕೆ ಇದ್ದವರು ಅಥವಾ ತೀರಾ ಹತಾಶ, ನಿರಾಶಾದಾಯಕ ಸ್ಥಿತಿಯಲ್ಲಿ ಇರುವವರು ಮಾತ್ರ ಊರು ಬಿಟ್ಟು ಹೋಗಬಹುದು.

ಹೊರದೇಶಗಳಿಗೆ ವಲಸೆ ಹೋಗುವವರಿಗೂ ಈ ಮಾತು ಅನ್ವಯಿಸುತ್ತದೆ. ಮುಂದಿನ ದಿನಗಳಲ್ಲಿ ಅವರಿಗೆ ಇಷ್ಟು ಸೌಕರ್ಯವೂ ಸಿಗುವುದಿಲ್ಲ. ಮತ್ತು ಪರಿಚಯದ ಜಾಲ ವಹಿಸುವ ಪಾತ್ರವೂ ಕೂಡ ಕಡಿಮೆಯಾಗುತ್ತದೆÉ. ಹಾಗಾಗಿ ಅವರು ವಲಸೆ ಹೋಗುವುದೇ ಆದರೆ ಅವರು ಏಕಾಂಗಿಯಾಗಿಯೇ ಹೋಗಬೇಕಾಗುತ್ತದೆ. ತಮಗೆ ಪ್ರಿಯವಾದ, ಪರಿಚಿತವಾಗಿರುವ ಎಲ್ಲವನ್ನೂ ತೊರೆದು ಹೋಗಬೇಕಾಗುತ್ತದೆ. ಮತ್ತೆ ಹಲವು ವರ್ಷಗಳು ಇವು ಯಾವುದೂ ಅವರಿಗೆ ಸಿಗುವುದಿಲ್ಲ.

ಕೌಟುಂಬಿಕ ನಂಟುಗಳು

ಸಾಂಪ್ರದಾಯಿಕ ಸಮುದಾಯಗಳಲ್ಲಿನ ಜೀವನಕ್ರಮವೇ ಒಂದರ್ಥದಲ್ಲಿ ವಲಸೆಗೆ ತಡೆಯೊಡ್ಡುತ್ತದೆ. ಅಭಿವೃದ್ಧಿ ಅರ್ಥಶಾಸ್ತ್ರದ ಆದ್ಯರಲ್ಲಿ ಒಬ್ಬರಾದ ಹಾಗೂ 1979ರಲ್ಲಿ ನೋಬೆಲ್ ಪಾರಿತೋಷಕ ಪಡೆದ ಕ್ಯಾರೀಬಿಯದ ಆರ್ಥಿಕ ತಜ್ಞ ಆರ್ಥರ್ ಲಿವೀಸ್ ಇದಕ್ಕೆ ಸಂಬಂಧಿಸಿದಂತೆ 1954ರಲ್ಲಿ ಒಂದು ಲೇಖನವನ್ನು ಪ್ರಕಟಿಸಿದ್ದಾರೆ. ಆ ಪ್ರಸಿದ್ಧ ಲೇಖನದಲ್ಲಿ ಅವರು ಒಂದು ಸರಳವಾದ ಅಭಿಪ್ರಾಯವನ್ನು ಮುಂದಿಡುತ್ತಾರೆ. ಪಟ್ಟಣದಲ್ಲಿ ಕೆಲಸ ಮಾಡಿದರೆ ನಿಮಗೆ ವಾರಕ್ಕೆ 100 ಡಾಲರ್ ಸಂಬಳ ದೊರಕುತ್ತದೆ ಅಂತ ಭಾವಿಸಿಕೊಳ್ಳಿ. ಹಳ್ಳಿಯಲ್ಲಿ ಅಂತಹ ಯಾವುದೇ ಕೆಲಸವೂ ಇಲ್ಲ ಎಂದುಕೊಳ್ಳಿ. ಹಳ್ಳಿಯಲ್ಲಿ ನಿಮ್ಮ ಕುಟುಂಬದ ಜಮೀನಿನಲ್ಲಿ ಕೆಲಸ ಮಾಡಿದರೆ ಅದರಿಂದ ವಾರಕ್ಕೆ ಒಟ್ಟು 500 ಡಾಲರ್ ಆದಾಯ ಸಿಗುತ್ತದೆ. ಅದನ್ನು ನೀವೂ ಸೇರಿದಂತೆ ನಾಲ್ಕು ಜನ ಸಹೋದರರು ಹಂಚಿಕೊಂಡರೆ ಪ್ರತಿಯೊಬ್ಬರಿಗೂ ತಲಾ 125 ಡಾಲರ್ ದೊರಕುತ್ತದೆ. ನೀವು ಊರು ಬಿಟ್ಟು ಹೋದರೆ ನಿಮ್ಮ ಸೋದರರು ನಿಮಗದರಲ್ಲಿ ಪಾಲು ಕೊಡದೇ ಇರಬಹುದು. ಇನ್ನು ನೀವು ವಲಸೆ ಹೋಗುವ ಜಾಗದಲ್ಲಿ ನೀವು ಮಾಡುವ ಕೆಲಸ ನಿಮಗೆ ಹಿತ ಕೊಡದೇ ಇದ್ದು, ಅಲ್ಲಿಯೂ ನೀವು ಇಷ್ಟೇ ದುಡಿಯಬೇಕಾಗಿದ್ದಲ್ಲಿ ನೀವು ಅಲ್ಲಿಗೇಕೆ ಹೋಗುತ್ತೀರಿ? ಜಮೀನಿನಲ್ಲಿ ನಿಮ್ಮ ಅವಶ್ಯಕತೆ ಇರಲಿ ಬಿಡಲಿ ಇದು ನಿಜ ಎನ್ನುವುದು ಲೀವಿಸರ ಒಳನೋಟವಾಗಿತ್ತು. ಒಂದು ವೇಳೆ ನೀವು ಜಮೀನಿನಲ್ಲಿ ದುಡಿಯದೇ ಹೋಗಿದ್ದರೂ ಕುಟುಂಬಕ್ಕೆ 500 ಡಾಲರ್ ಆದಾಯ ಬರುತ್ತಿದ್ದ ಪಕ್ಷದಲ್ಲಿ, ನೀವು ಪಟ್ಟಣದಲ್ಲಿ ಕೆಲಸ ಮಾಡಲು ಹೋಗಿದ್ದರೆ ಆಗ ಕುಟುಂಬದ ಆದಾಯಕ್ಕೆ ನೀವು 100 ಡಾಲರ್ ಸೇರಿಸಬಹುದು. ಆದರೆ ನೀವು ಹಾಗೆ ಮಾಡುವುದಿಲ್ಲ. ಏಕೆಂದರೆ ಆಗ ನಿಮ್ಮ ಸಹೋದರರು 500 ಡಾಲರ್‍ಗಳನ್ನು ತಮ್ಮಲ್ಲೇ ಹಂಚಿಕೊಂಡುಬಿಡಬಹುದು. ನಿಮಗೆ ಕೇವಲ ನೀವು ದುಡಿದ 100 ಡಾ¯ರ್ ಮಾತ್ರ ಸಿಗುತ್ತದೆ. ಭೂಮಿ ಕೇವಲ ಒಂದು ಉದಾಹರಣೆ ಅಷ್ಟೆ. ಅದು ಟ್ಯಾಕ್ಸಿ ನಡೆಸುವ ವ್ಯಾಪಾರವೋ ಅಥವಾ ಇನ್ನೇನೋ ಆಗಿರಬಹುದು. ಆಗಲೂ ನಾವು ಮನೆಯಲ್ಲೇ ಉಳಿಯುತ್ತೇವೆ.

ಲೀವಿಸ್ ಸೂಚಿಸುವುದೇನೆಂದರೆ, ನೀವು ಜಮೀನಿನಿಂದ ದೂರವೇ ಇದ್ದರೂ ನಿಮಗೆ 50 ಡಾಲರ್ ಕೊಟ್ಟೇ ಕೊಡುತ್ತೇವೆ ಎಂದು ನಿಮ್ಮ ಕುಟುಂಬದವರು ನಿಮಗೆ ಭರವಸೆ ನೀಡಿದರೆ, ನಿಮಗೂ 150 ಡಾಲರ್ ಸಿಗುತ್ತದೆ ಮತ್ತು ನಿಮ್ಮ ಮೂರು ಸಹೋದರರಿಗೂ 150 ಡಾಲರ್‍ಗಳು ಸಿಗುತ್ತದೆ. ಇದರಿಂದ ಕುಟುಂಬದ ಪ್ರತಿಯೊಬ್ಬರಿಗೂ ಒಳ್ಳೆಯದಾಗುತ್ತದೆ. ಆದರೆ ಅದು ಹಾಗಾಗುವುದಿಲ್ಲ. ಅವರು ಹೀಗೆ ಕೊಟ್ಟ ಭರವಸೆಗಳನ್ನು ಸುಲಭವಾಗಿ ಮರೆತುಬಿಡಬಹುದು. ಒಮ್ಮೆ ನೀವು ಊರುಬಿಟ್ಟು ಹೊರಗೆ ಹೋದರೆ ನಿಮ್ಮನ್ನು ಕೌಟುಂಬಿಕ ವ್ಯವಹಾರದ ಭಾಗವಾಗಿ ಪರಿಗಣಿಸದೆಯೇ ಹೋಗಬಹುದು. ಹಾಗಾಗಿ ನಿಮ್ಮ ಹಕ್ಕನ್ನು ಉಳಿಸಿಕೊಳ್ಳುವುದಕ್ಕಾಗಿ ನೀವು ಊರಿನಲ್ಲಿಯೇ ಉಳಿದುಕೊಳ್ಳುತ್ತೀರಿ. ಇದರಿಂದಾಗ ಗ್ರಾಮೀಣ ಕಾರ್ಮಿಕರು ನಗರದ ಹೆಚ್ಚು ಉತ್ಪಾದಕ ಕ್ಷೇತ್ರವನ್ನು ಸೇರಿಕೊಳ್ಳುವ ಪ್ರಕ್ರಿಯೆ ನಿಧಾನವಾಗುತ್ತದೆ. ಇದು ದೇಶದೊಳಗೂ ನಿಜ, ಹೊರಗೂ ನಿಜ ಎನ್ನುವುದು ಲೀವಿಸ್ ಅವರ ಅಭಿಪ್ರಾಯ. ಹಾಗಾಗಿ ಲಿವೀಸ್ ಅವರು ಕಲ್ಪಿಸಿಕೊಳ್ಳುವ ವ್ಯವಸ್ಥೆಯಲ್ಲಿ ವಲಸೆ ಪ್ರಮಾಣ ತುಂಬಾ ಕಡಿಮೆ ಇರುತ್ತದೆ.

ಸಂಬಂಧಗಳು, ಉದಾಹರಣೆಗೆ ಕುಟುಂಬ ಕೆಲವು ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ರೂಪುಗೊಂಡಿವೆ. ಆದರೆ ಅವುಗಳಿಂದ ಇಡೀ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಭಾವಿಸಬಾರದು. ಉದಾಹರಣೆಗೆ ವೃದ್ಧಾಪ್ಯದಲ್ಲಿ ಮಕ್ಕಳು ತಮ್ಮನ್ನು ಬಿಟ್ಟು ಹೋಗಬಹುದು ಎಂಬ ಆಲೋಚನೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಖರ್ಚು ಮಾಡದೇ ಇರಬಹುದು. ಹೆಚ್ಚಿನ ಶಿಕ್ಷಣ ಇಲ್ಲದ ಮಕ್ಕಳು ನಗರಕ್ಕೆ ಹೋಗುವ ಸಾಧ್ಯತೆಯಿಲ್ಲ, ಹಾಗಾಗಿ ಅವರು ತಮ್ಮೊಂದಿಗೆ ಉಳಿಯುತ್ತಾರೆ ಎಂದು ಅವರು ಯೋಚಿಸಬಹುದು. ದಿಲ್ಲಿಯ ಸಮೀಪವಿರುವÀ ಹರಿಯಾಣದಲ್ಲಿ ಒಂದು ಅಧ್ಯಯನ ನಡೆದಿದೆ. ಬ್ಯಾಕ್ ಆಫೀಸ್ ಕೆಲಸಗಳಿಗೆ ನೇಮಕಾತಿ ನಡೆಯುತ್ತಿತ್ತು. ಇರುವ ಅವಕಾಶವನ್ನು ಕುರಿತಂತೆ ನೇಮಕಾತಿ ಮಾಡಿಕೊಳ್ಳುವ ಕಂಪೆನಿಗಳ ಸಹಯೋಗದಲ್ಲಿ ಸಂಶೋಧಕರ ತಂಡವು ಗ್ರಾಮೀಣ ಜನರಿಗೆ ಮಾಹಿತಿಯನ್ನು ಒದಗಿಸಿತು. ಈ ಕೆಲಸ ಬೇಕಿದ್ದರೆ ಮೊದಲನೆಯದಾಗಿ ಅವರು ಹೈಸ್ಕೂಲ್‍ಶಿಕ್ಷಣ ಮುಗಿಸಿರಬೇಕು. ಎರಡನೆಯದಾಗಿ ಊರು ಬಿಟ್ಟು ನಗರಕ್ಕೆ ಬರಲು ತಯಾರಿರಬೇಕು. ಈ ಜಾಹೀರಾತಿಗೆ ಸಂಬಂಧಿಸಿದಂತೆ ಮಾಡಿದ ಪ್ರಚಾರಕ್ಕೆ ಹೆಣ್ಣು ಮಕ್ಕಳ ತಂದೆತಾಯಿಯರು ಚೆನ್ನಾಗಿ ಪ್ರತಿಕ್ರಿಯಿಸಿದರು. ಅವರನ್ನು ಚೆನ್ನಾಗಿ ಓದಿಸಿದರು, ಅನಂತರ ಮದುವೆ ಮಾಡಿದರು. ಪ್ರಚಾರ ಮಾಡದ ಹಳ್ಳಿಗಳಿಗೆ ಹೋಲಿಸಿ ನೋಡಿದಾಗ ಇದು ಸ್ಪಷ್ಟವಾಗಿ ಕಾಣುತ್ತಿತ್ತು. ಅಷ್ಟೇ ಅಲ್ಲ ಅವರಿಗೆ ಒಳ್ಳೆಯ ಆಹಾರವನ್ನು ಕೊಡುತ್ತಿದ್ದರು. ಅದರಿಂದ ಅವರಲ್ಲಿ ಹೆಚ್ಚಿನವರು ಸುಪುಷ್ಟವಾಗಿ, ಎತ್ತರವಾಗಿ ಬೆಳೆದಿದ್ದರು. ಆದರೆ ಗಂಡುಮಕ್ಕಳ ವಿಷಯದಲ್ಲಿ ಹಾಗಾಗಿರಲಿಲ್ಲ. ಒಟ್ಟಾರೆಯಾಗಿ ಅವರ ಶಿಕ್ಷಣದಲ್ಲಿ ಸುಧಾರಣೆಯಾಗಲಿಲ್ಲ. ಗಂಡು ಮಕ್ಕಳು ಪಟ್ಟಣಕ್ಕೆ ಹೋಗಿ ಸಂಪಾದಿಸಲಿ ಎಂದುಕೊಂಡಿದ್ದ ಕುಟುಂಬಗಳು ಮಾತ್ರ ಚೆನ್ನಾಗಿ ಸ್ಪಂದಿಸಿದ್ದವು. ಆದರೆ ಗಂಡುಮಕ್ಕಳು ಮನೆಯಲ್ಲೇ ಇರಬೇಕೆಂದು ಬಯಸಿದ್ದ ಮನೆಗಳಲ್ಲಿ ಹುಡುಗರ ಶಿಕ್ಷಣವನ್ನು ಬೇಗನೇ ಮೊಟುಕುಗೊಳಿಸಿದ್ದರು. ಅವರ ವಿಕಾಸ ಸಾಧ್ಯವಾಗಿರಲಿಲ್ಲ.

ಕಠ್ಮಂಡುವಿನಲ್ಲಿ ನಿದ್ದೆ ಬಾರದಿದ್ದದ್ದು

ಬಾಂಗ್ಲಾದೇಶದಲ್ಲಿ ಮತ್ತೊಂದು ಪ್ರಯೋಗ ಮಾಡಲಾಯಿತು. ಬೃಹತ್ ನಗರಗಳಲ್ಲಿ ಕೆಲಸದ ಸಾಧ್ಯತೆಗಳನ್ನು ಹುಡುಕಿಕೊಳ್ಳಿ ಎಂದು ಕೆಲವು ಹಳ್ಳಿಯವರಿಗೆ ತಿಳಿಸಲಾಯಿತು. ಖರ್ಚಿಗಾಗಿ ಅವರಿಗೆ 11.50 ಡಾಲರ್ ಹಣ ಕೊಡಲಾಯಿತು. ಹಾಗೆ ಹೋದ ಕೆಲವರಿಗೆ ಒಳ್ಳೆಯ ಅವಕಾಶಗಳೂ ಸಿಕ್ಕವು. ಕೆಲವರಿಗೆ ಕೆಲಸ ಸಿಗದೆ ಬರಿಗೈಲಿ ಹಿಂದಿರುಗಬೇಕಾಯ್ತು. ಸ್ವತಃ ತಾವೇ ಪ್ರಯಾಣದ ಖರ್ಚನ್ನು ಭರಿಸಬೇಕಾಗಿದ್ದಲ್ಲಿ ಅವರಿಗೆ ಖಂಡಿತಾ ಕಷ್ಟವಾಗುತ್ತಿತ್ತು. ಬಹುಪಾಲು ಜನರಿಗೆ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇಷ್ಟವಿಲ್ಲ. ಅದರಲ್ಲೂ ವಿಶೇಷವಾಗಿ ಕನಿಷ್ಠ ಆದಾಯದ ಮಟ್ಟದಲ್ಲಿ ಬದುಕುತ್ತಿರುವರು ಯಾವುದೇ ರಿಸ್ಕ್ ತೆಗೆದುಕೊಳ್ಳುವುದಕ್ಕೂ ಸಿದ್ಧವಿರುವುದಿಲ್ಲ. ಏಕೆಂದರೆ ಸ್ವಲ್ಪ ನಷ್ಟವಾದರೂ ಅವರು ಉಪವಾಸ ಸಾಯಬೇಕಾಗುತ್ತದೆ. ಜನ ಹೊಸ ಪ್ರಯತ್ನ ಮಾಡದಿರುವುದಕ್ಕೆ ಈ ಹೆದರಿಕೆ ಕಾರಣ ಇರಬಹುದೆ?

ಈ ವಿವರಣೆಯಲ್ಲಿ ಒಂದು ಸಮಸ್ಯೆ ಇದೆ. ಭಾವಿ ವಲಸಿಗರಿಗೆ ಇನ್ನೊಂದು ಆಯ್ಕೆಯೂ ಸಾಧ್ಯ. ಅವರೇ ತಮ್ಮ ದುಡಿಮೆಯಿಂದಲೇ 11.50 ಡಾಲರನ್ನು ಉಳಿಸುವುದಕ್ಕೆ ಸಾಧ್ಯವಿದೆ. ಕೆಲಸ ಸಿಗದೆ ಹೋದರೆ ಮನೆಗೆ ಮರಳಿ ಬರಬಹುದು. ಅದರಿಂದ ಅವರ ಸ್ಥಿತಿ ಹಿಂದೆ ಇದ್ದುದಕ್ಕಿಂತ ಕೆಟ್ಟದಾಗೇನೂ ಇರುವುದಿಲ್ಲ. ಹೆಚ್ಚಿನವರು ಹಾಗೆ ಉಳಿತಾಯ ಮಾಡುತ್ತಿರಬಹುದು. ಅವರು ಹಣ ಉಳಿಸುತ್ತಾರೆ. ಆದರೆ ಬೇರೆ ವಸ್ತುಗಳನ್ನು ಕೊಳ್ಳುವುದಕ್ಕಾಗಿ ಹಣ ಉಳಿಸುತ್ತಿರುತ್ತಾರೆ. ಇದಕ್ಕೆ ಹಲವು ಪುರಾವೆಗಳಿವೆ. ಅದನ್ನು ಬಳಿಸಿಕೊಂಡು ವಲಸೆ ಹೋಗುವುದಿಲ್ಲ. 11.50 ಡಾಲರ್‍ಗಳನ್ನು ಉಳಿಸುವುದು ಕಷ್ಟವಾಗಬಾರದು. ಅದು ಅವರ ಮಿತಿಯಲ್ಲಿಯೇ ಇದೆ. ಆದರೆ ಅವರು ಯಾಕೆ ಹಾಗೆ ಮಾಡುತ್ತಿಲ್ಲ. ಬಹುಶಃ ಒಂದು ಕಾರಣವೆಂದರೆ ಅವರು ವಲಸೆಯಿಂದ ಆಗುವ ಅಪಾಯವನ್ನು ಇರುವುದಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಊಹಿಸಿಕೊಳ್ಳುತ್ತಾರೆ. ನೇಪಾಳದಲ್ಲಿ ಮಾಡಿರುವ ಅಧ್ಯಯನವೊಂದು ಇದರ ಬಗ್ಗೆ ಬೆಳಕು ಚೆಲ್ಲುತ್ತದೆ.
ಇಂದು ದುಡಿಯುವ ವಯಸ್ಸಿನ ಐದನೇ ಒಂದು ಭಾಗದಷ್ಟು ನೇಪಾಳಿ ಗಂಡಸರು ಕನಿಷ್ಠ ಒಮ್ಮೆಯಾದರೂ ಕೆಲಸಕ್ಕಾಗಿ ಬೇರೆ ದೇಶಕ್ಕೆ ಹೋಗಿ ಹೋಗಿಬಂದಿರುತ್ತಾರೆ. ಅವರಲ್ಲಿ ಹೆಚ್ಚಿನವರು ಮಲೇಶ್ಯಾ, ಕತಾರ್, ಸೌದಿ ಅರೇಬಿಯಾ ಅಥವಾ ಯುನೈಟೆಡ್ ಅರಬ್ ಎಮರೈಟ್ಸ್‍ನಲ್ಲಿ ಕೆಲಸ ಮಾಡುತ್ತಾರೆ. ಸಾಮಾನ್ಯವಾಗಿ ಅವರು ಒಬ್ಬ ನಿರ್ದಿಷ್ಟ ಮಾಲಿಕನೊಂದಿಗೆ ಕೆಲಸದ ಒಪ್ಪಂದ ಮಾಡಿಕೊಂಡು ಕೆಲವು ವರ್ಷಗಳು ಮಾತ್ರ ಹೋಗಿ ಬರುತ್ತಾರೆ.

ಈ ಸನ್ನಿವೇಶಗಳಲ್ಲಿ ವಲಸಿಗರಿಗೆ ವಲಸೆ ಹೋಗುವುದಕ್ಕೆ ತಗುಲುವ ಖರ್ಚು ಮತ್ತು ದೊರಕುವ ಲಾಭ ಎರಡರ ಸ್ಪಷ್ಟ ಅರಿವಿರುತ್ತದೆ ಎನ್ನುವುದು ಖಾತ್ರಿ. ಏಕೆಂದರೆ ವೀಸಾ ದೊರಕಬೇಕಾದರೆ ಕೆಲಸದ ಪ್ರಸ್ತಾಪ ಇರಲೇಬೇಕು. ಆದರೆ ನಾವು ಭೇಟಿ ಮಾಡಿದ ನೇಪಾಳದ ಸರ್ಕಾರಿ ಅಧಿಕಾರಿಗಳು ಈ ವಲಸಿಗರಿಗೆ ತಾವು ಯಾವುದಕ್ಕೆ ಸಿಲುಕಿಹಾಕಿಕೊಳ್ಳುತ್ತಿದ್ದೇವೆ ಎನ್ನುವುದರ ಅರಿವೇ ಇಲ್ಲ ಎಂಬ ಆತಂಕ ವ್ಯಕ್ತಪಡಿಸಿದರು. ಅವರೆಲ್ಲಾ ತಮಗೆ ತುಂಬಾ ಆದಾಯ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬೇರೆ ದೇಶಗಳಲ್ಲಿ ಬದುಕೋದು ಎಷ್ಟು ಕಷ್ಟ, ಅಲ್ಲಿನ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದರ ಅರಿವೇ ಅವರಿಗಿಲ್ಲ ಎಂದು ನಮಗೆ ತಿಳಿಸಿದರು. ಅಧಿಕಾರಿಗಳ ಈ ಮಾತಿನ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ನಮ್ಮ ತಂಡದಲ್ಲಿಯೇ ಇದ್ದ ನೇಪಾಳದ ಪಿಎಚ್‍ಡಿ ವಿದ್ಯಾರ್ಥಿ ಮಹೇಶ್ವರ ಶ್ರೇಷ್ಠ ನಿರ್ಧರಿಸಿದ. ಅವನು ಒಂದು ಸಣ್ಣ ತಂಡದೊಂದಿಗೆ ಕಠ್ಮಂಡುವಿನ ಪಾಸ್‍ಪೋರ್ಟ್ ಆಫೀಸಿನಲ್ಲಿ ಕುಳಿತುಕೊಂಡ. ಏಕೆಂದರೆ ವಲಸೆ ಹೋಗುವವರೆಲ್ಲರೂ ಪಾಸ್‍ಪೋರ್ಟಿಗೆ ಅರ್ಜಿ ಸಲ್ಲಿಸಲು ಅಲ್ಲಿಗೆ ಬರುತ್ತಿದ್ದರು. ಅಲ್ಲಿ ಅವನು ಅರ್ಜಿ ಹಾಕಲು ಬಂದ ಮೂರು ಸಾವಿರಕ್ಕೂ ಹೆಚ್ಚು ಜನ ಕೆಲಸಗಾರರನ್ನು ವಿವರವಾಗಿ ಸಂದರ್ಶನ ಮಾಡಿದ. ಅವರಿಗೆ ಎಷ್ಟು ಸಂಬಳ ನೀಡುತ್ತಾರೆ, ಅವರು ಎಲ್ಲಿಗೆ ಹೋಗುತ್ತಿದ್ದಾರೆ ಮತ್ತು ವಿದೇಶದಲ್ಲಿ ಜೀವನ ಸ್ಥಿತಿ ಹೇಗಿದೆ ಮುಂತಾದ ವಿವರಗಳು ಅವರಿಗೆ ತಿಳಿದಿದೆಯೇ ಎಂಬುದನ್ನು ಕೇಳಿ ಅವರಿಂದ ಮಾಹಿತಿ ಸಂಗ್ರಹಿಸಿದ. ಈ ಭಾವಿ ವಲಸಿಗರು ತಾವು ಸಂಪಾದಿಸಬಹುದಾದ ಆದಾಯವನ್ನು ಕುರಿತು ಬೇಕಾದ್ದಕ್ಕಿಂತ ಸ್ವಲ್ಪ ಹೆಚ್ಚಿನ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದರು. ತಾವು ಸಂಪಾದಿಸಲು ಸಾಧ್ಯವಿರುವುದಕ್ಕಿಂತ 25% ಹೆಚ್ಚಿಗೆ ಅಂದಾಜು ಮಾಡಿಕೊಂಡಿದ್ದರು. ಅದಕ್ಕೆ ಹಲವು ಕಾರಣಗಳೂ ಇದ್ದಿರಬಹುದು. ಬಹುಶಃ ಅವರನ್ನು ಕೆಲಸಕ್ಕೆ ಹೊಸದಾಗಿ ನೇಮಕ ಮಾಡಿಕೊಳ್ಳುತ್ತಿದ್ದವನು ಅವರಿಗೆ ಸುಳ್ಳು ಹೇಳಿರುವ ಸಾಧ್ಯತೆಗಳೂ ಇದ್ದವು. ಹಾಗೆಯೇ ಅವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಾಯಬಹುದಾದ ಸಾಧ್ಯತೆಯನ್ನೂ ಹೆಚ್ಚಾಗಿಯೇ ಅಂದಾಜು ಮಾಡಿಕೊಂಡಿದ್ದರು. ಎರಡು ವರ್ಷಗಳ ಕಷ್ಟ ಕಾರ್ಪಣ್ಯದಿಂದ ಪ್ರತಿ 10,000 ವಲಸಿಗರಲ್ಲಿ ಕನಿಷ್ಠ 10 ಜನರಾದರೂ ಸಾಯುತ್ತಾರೆ ಎಂದು ಅವರು ಭಾವಿಸಿದ್ದರು. ಆದರೆ ವಾಸ್ತವವಾಗಿ ಹಾಗೆ ಸಾಯುವವರ ಸಂಖ್ಯೆ ಕೇವಲ 1.3 ಮಾತ್ರ.

ವಲಸೆ ಹೋಗಿಯೇ ಹೋಗುತ್ತಾರೆಂಬ ಖಾತ್ರಿ ಇರುವ ಕೆಲವು ಭಾವಿ ನೇಪಾಳಿ ವಲಸಿಗರಿಗೆ ವಿದೇಶದಲ್ಲಿ ಅವರಿಗೆ ನಿಜವಾಗಿ ಬರುವ ಸಂಬಳ, ಮರಣದ ಪ್ರಮಾಣ ಇವುಗಳನ್ನು ಕುರಿತು ಮಹೇಶ್ವರ್ ಒಂದಿಷ್ಟು ಮಾಹಿತಿಗಳನ್ನು ನೀಡಿದ. ಅನಂತರ ಈ ಮಾಹಿತಿಗಳಿಂದ ಅವರ ತೀರ್ಮಾನಗಳು ಬದಲಾಯಿತೇ ಎಂಬುದನ್ನು ಪರೀಕ್ಷಿಸಿ ನೋಡಿದ. ಈ ಮಾಹಿತಿಗಳಿಂದ ಅವರಿಗೆ ಉಪಯೋಗವಾಗಿತ್ತು ಎನ್ನುವುದು ತಿಳಿದು ಬಂದಿತು. ಅವು ಅವರ ತೀರ್ಮಾನವನ್ನು ಪ್ರಭಾವಿಸಿದ್ದವು. ಸಂಬಳದ ಬಗ್ಗೆ ಮಾಹಿತಿ ಸಿಕ್ಕವರು ಎರಡು ತಿಂಗಳ ನಂತರವೂ ನೇಪಾಳದಲ್ಲೇ ಉಳಿದುಕೊಂಡಿದ್ದರು. ಆದರೆ ತಾವು ಭಾವಿಸಿದ ಪ್ರಮಾಣದಲ್ಲಿ ಸಾವು ಸಂಭವಿಸುವುದಿಲ್ಲ ಎಂದು ಮನವರಿಕೆಯಾದವರು ವಲಸೆ ಹೋಗುವ ತೀರ್ಮಾನ ತೆಗೆದುಕೊಂಡಿದ್ದರು. ಬಹುಶಃ ಸಾವಿಗೆ ಸಂಬಂಧಿಸಿದಂತೆ ಇದ್ದ ತಪ್ಪು ಮಾಹಿತಿ ಸಂಬಳಕ್ಕೆ ಸಂಬಂಧಿಸಿದ ಮಾಹಿತಿಗಿಂತ ಹೆಚ್ಚು ಭೀಕರವಾಗಿತ್ತೆಂದು ಕಾಣುತ್ತದೆ. ಎರಡೂ ಮಾಹಿತಿಗಳನ್ನು ಪಡೆದವರು ವಲಸೆ ಹೋಗಿದ್ದ ಸಾಧ್ಯತೆಗÀಳು ಹೆಚ್ಚಾಗಿದ್ದವು. ಹಾಗಾಗಿ ವಲಸಿಗರಿಗೆ ಸಂಬಂದಿಸಿದಂತೆ ನೇಪಾಳಿ ಸರ್ಕಾರದ ಅಭಿಪ್ರಾಯ ತಪ್ಪಾಗಿತ್ತು. ವಾಸ್ತವವಾಗಿ ವಲಸಿಗರನ್ನು ಸ್ವದೇಶದಲ್ಲಿ ಉಳಿಸುತ್ತಿದ್ದುದು ತಪ್ಪು ಮಾಹಿತಿಗಳು.

ಜನರು ಹೆಚ್ಚಿನ ಪ್ರಮಾಣದಲ್ಲಿ ಜನ ಸಾಯುತ್ತಾರೆ ಎಂದು ಯಾಕೆ ಅಂದಾಜು ಮಾಡಿಕೊಂಡಿದ್ದರು? ಸಮಸ್ಯೆಯೇನೆಂದರೆ ಪತ್ರಿಕೆಗಳು ವರದಿ ಮಾಡುವಾಗ ಒಂದು ನಿರ್ದಿಷ್ಟ ಪ್ರಾಂತ್ಯದಿಂದ ಎಷ್ಟು ಜನ ವಲಸೆ ಹೋದರು ಎಂಬುದನ್ನು ತಿಳಿಸುವುದಿಲ್ಲ. ಬದಲಾಗಿ ಸತ್ತವರ ಸಂಖ್ಯೆಯನ್ನು ಮಾತ್ರ ತಿಳಿಸುತ್ತಾರೆ. ಹಾಗಾಗಿ ಕೆಲಸಗಾರರಿಗೆ 100 ಮಂದಿಯಲ್ಲಿ ಒಬ್ಬ ಸತ್ತನೋ ಅಥವಾ 1000 ಮಂದಿಯಲ್ಲಿ ಒಬ್ಬ ಸತ್ತನೋ ತಿಳಿಯುವುದಿಲ್ಲ. ಈ ಮಾಹಿತಿಯ ಕೊರತೆಯಿಂದಾಗಿ ಜನ ಸ್ವಲ್ಪ ಅತಿಯಾಗಿಯೇ ಪ್ರತಿಕ್ರಿಯಿಸುತ್ತಾರೆ. ತಮ್ಮ ಜಿಲ್ಲೆಯಿಂದ ವಲಸೆ ಹೋಗಿರುವವರು ಸತ್ತರೆ, ಸ್ವಾಭಾವಿಕವಾಗಿಯೇ ಆ ಜಿಲ್ಲೆಯಿಂದ ವಲಸೆ ಹೋಗುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಸಹಜವಾಗಿಯೇ ವಲಸೆಯ ಆಕಾಂಕ್ಷಿಗಳು ತಾವು ವಲಸೆ ಹೋಗುವ ಸ್ಥಳಗಳಲ್ಲಿ ದೊರಕಬಹುದಾದ ಸೌಲಭ್ಯಗಳ ಬಗ್ಗೆ ಗಮನ ಹರಿಸುತ್ತಾರೆ.

ನೇಪಾಳದಲ್ಲಿ ಬಹಳಷ್ಟು ನೇಮಕಾತಿ ಸಂಸ್ಥೆಗಳು ಇವೆ. ಕೆಲಸಗಾರರು ದೊಡ್ಡ ಸಂಖ್ಯೆಯಲ್ಲಿ ವಲಸೆ ಹೋಗಿಬರುತ್ತಿದ್ದಾರೆ. ಜೊತೆಗೆ ವಿದೇಶಗಳಿಗೆ ಹೋಗುವ ವಲಸಿಗರ ಕ್ಷೇಮದ ಬಗ್ಗೆ ಸರ್ಕಾರಕ್ಕೆ ನೈಜ ಕಾಳಜಿ ಇದೆ. ಇಷ್ಟೆಲ್ಲಾ ಇದ್ದಾಗಲೂ ಕೂಡ ನೇಪಾಳದಲ್ಲಿ ಜನರಿಗೆ ಸರಿಯಾದ ಮಾಹಿತಿಗಳು ತಿಳಿದಿಲ್ಲ. ಅಂಥದ್ದರಲ್ಲಿ ಇಂತಹ ಯಾವುದೇ ಮಾಹಿತಿಗಳು ಇಲ್ಲದೆ, ಎಲ್ಲೋ ಇರುವ ಭಾವಿ ವಲಸಿಗರಿಗೆ ಎಂತೆಂತಹ ಗೊಂದಲಗಳಿರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಈ ಗೊಂದಲ ಎರಡು ಬಗೆಯಲ್ಲಿ ಪರಿಣಾಮ ಬೀರಬಹುದು. ನೇಪಾಳದಲ್ಲಿ ಆದಂತೆ ಅದರಿಂದ ವಲಸೆಯ ಪ್ರಮಾಣ ಕಮ್ಮಿಯಾಗಬಹುದು ಅಥವಾ ಜನ ತುಂಬಾ ಆಶಾವಾದಿಗಳಾಗಿದ್ದರೆ ಅದು ವಲಸೆಯನ್ನು ಹೆಚ್ಚಿಸಬಹುದು. ಆದರೆ ವಲಸೆ ಹೋಗುವುದರ ವಿರುದ್ಧ ಒಂದು ವ್ಯವಸ್ಥಿತವಾದ ಪೂರ್ವಗ್ರಹ ಏಕಿದೆ?

ರಿಸ್ಕ್ ವರ್ಸಸ್ ಅನಿರ್ದಿಷ್ಟತೆ

ಮಹೇಶ್ವರ್ ಸಂದರ್ಶಿಸಿದ ವ್ಯಕ್ತಿಗಳು ಹೀಗೆ ಮರಣ ಪ್ರಮಾಣವನ್ನು ಉತ್ಪ್ರೇಕ್ಷಿಸಿರುವುದನ್ನು ಸಾರ್ವತ್ರಿಕವಾಗಿ ಇರುವ ಭೀತಿಯ ಒಂದು ರೂಪಕವನ್ನಾಗಿ ಪರಿಗಣಿಸಬೇಕು. ವಲಸೆ ಎಂದರೆ ಪರಿಚಿತವಾದ್ದನ್ನು ಬಿಟ್ಟು ಅಪರಿಚಿತವಾದ ಸನ್ನಿವೇಶಕ್ಕೆ ಕಾಲಿಡುವುದು. ಈ ಗೊತ್ತಿಲ್ಲದÀ ಪರಿಸ್ಥಿತಿ ಎನ್ನುವುದು ಅರ್ಥಶಾಸ್ತ್ರಜ್ಞರು ವಿವರಿಸುವಂತೆ ಕೇವಲ ಏನೇನು ಆಗಬಹುದು, ಅವುಗಳ ಸಾಧ್ಯತೆ ಎಷ್ಟು ಅನ್ನುವುದರ ಪಟ್ಟಿಯಲ್ಲ. ಅರ್ಥಶಾಸ್ತ್ರದಲ್ಲಿ ಫ್ರಾಂಕ್ ನೈಟ್ ಕಾಲದಿಂದಲೂ ಲೆಕ್ಕಹಾಕಬಹುದಾದ ರಿಸ್ಕ್ (ಶೇಕಡಾ 50 ಹೀಗಾಗುವ ಸಂಭಾವ್ಯತೆ ಮತ್ತು ಶೇಕಡಾ 50 ಹಾಗಾಗುವ ಸಂಭಾವ್ಯತೆ) ಮತ್ತು ಲೆಕ್ಕಹಾಕಲಾಗದ ಅಪಾಯಗಳ ನಡುವೆ ಭೇದವನ್ನು ಗುರುತಿಸುವ ಒಂದು ದೀರ್ಘವಾದ ಪರಂಪರೆಯೇ ಇದೆ. ಇದನ್ನು ಡೋನಾಲ್ಡ್ ರಮ್ಸ್‍ಫೀಲ್ಡ್ “ಅಪರಿಚಿತವಾದ ಅಪರಿಚಿತಗಳು” (unknown unknowns) ಎಂಬ ಅವಿಸ್ಮರಣೀಯವಾದ ಮಾತುಗಳ ಮೂಲಕ ವಿವರಿಸಿದ. ನೈಟ್ ಶಾಖೆಯ ಅರ್ಥಶಾಸ್ತ್ರಜ್ಞರು ಇದನ್ನು ಅನಿಶ್ಚಿತತೆ (uncertainty) ಎಂದು ಕರೆದರು. ರಿಸ್ಕ್ ಮತ್ತು ಅನಿಶ್ಚತತೆಗೆ ಮನುಷ್ಯರು ತುಂಬಾ ವಿಭಿನ್ನವಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಫ್ರಾಂಕ್ ನೈಟ್‍ಗೆ ಮನದಟ್ಟಾಗಿತ್ತು. ಹೆಚ್ಚಿನವರು ಅಪರಿಚಿತವಾದ ಅಜ್ಞಾತಗಳ ಜೊತೆ ವ್ಯವಹರಿಸಲು ಇಷ್ಟಪಡುವುದಿಲ.್ಲ ಸಮಸ್ಯೆಯ ಸ್ವರೂಪವಾಗಲಿ ಅದರ ವ್ಯಾಪ್ತಿಯಾಗಲಿ ಸ್ಪಷ್ಟವಾಗಿ ಗೊತ್ತಿಲ್ಲದಿದ್ದಾಗ ಅವರು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ.

ವಲಸೆ ಹೋಗಬೇಕು ಅಂದುಕೊಂಡಿರುವ ಬಾಂಗ್ಲಾದೇಶದ ಗ್ರಾಮೀಣ ಜನರಿಗೆ ನಗರ (ಅಥವಾ ಬೇರೆ ದೇಶ) ಅನ್ನುವುದು ಅನಿಶ್ಚಿತತೆಗಳ ಗೂಡು. ಅವರಿಗೆ ತಮ್ಮ ಕೌಶಲಗಳಿಗೆ ಮಾರುಕಟ್ಟೆಯಲ್ಲಿ ಎಂತಹ ಬೆಲೆ ಸಿಗುತ್ತದೆ ಅನ್ನುವುದು ಗೊತ್ತಿಲ್ಲ. ಅದೊಂದೇ ಅಲ್ಲ ನೂರಾರು ಇತರ ಗೊಂದಲಗಳು ಅವರನ್ನು ಕಾಡುತ್ತಿರುತ್ತವೆ. ಯಾರು ತಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಬಹುದು? ತುಂಬಾ ಸ್ಪರ್ಧೆಯನ್ನು ಎದುರಿಸಬೇಕಾಗಬಹುದೇ? ಮಾಲಿಕನಿಂದ ಶೋಷಣೆಗೆ ಒಳಗಾಗಬೇಕಾಗಬಹುದೇ? ಎಂತಹ ಶಿಫಾರಸ್ಸು ಪತ್ರಗಳು ಬೇಕಾಗಬಹುದು? ಕೆಲಸ ದೊರಕುವುದಕ್ಕೆ ಎಷ್ಟು ದಿನ ಬೇಕಾಗಬಹುದು? ಅಲ್ಲಿಯವರಗೆ ಜೀವನೋಪಾಯ ಹೇಗೆ? ಎಲ್ಲಿ ವಾಸ ಮಾಡುವುದು? ಹೀಗೆ ನೂರಾರು ಪ್ರಶ್ನೆಗಳು ಅವರನ್ನು ಕಾಡುತ್ತಿರುತ್ತವೆ. ಉತ್ತರ ಕಂಡುಕೊಳ್ಳಲು ಅವರಿಗೆ ಯಾವುದೇ ಅನುಭವವೂ ಇಲ್ಲ. ಎಲ್ಲ ಸಾಧ್ಯಾಸಾಧ್ಯತೆಗಳನ್ನು ಅವರೇ ಕಲ್ಪಿಸಿಕೊಳ್ಳಬೇಕು. ಹಾಗಾಗಿ ಹಲವರು ವಲಸೆ ಹೋಗಲು ಹಿಂಜರಿಯುತ್ತಾರೆ. ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಅಸ್ಪಷ್ಟ ಅಪರಿಚಿತ ಲೋಕಕ್ಕೆ

ವಲಸೆ ಎಂದರೆ ಅದು ಅಪರಿಚಿತ ಲೋಕಕ್ಕೆ ಧುಮುಕುವುದು ಅಂತಲೇ. ಹಾಗಾಗಿಯೇ ಹಲವರು ವಲಸೆ ಹೋಗುವುದಕ್ಕೆ ಇಷ್ಟಪಡುವುದಿಲ್ಲ. ವಲಸೆಯಿಂದ ಸಣ್ಣಪುಟ್ಟ ಖರ್ಚನ್ನು ನಿಭಾಯಿಸಲು ಒಂದಿಷ್ಟು ಹಣ ಸೇರಿಸಿಕೊಳ್ಳಬಹುದು. ಹಾಗಿದ್ದಾಗ್ಯೂ ಜನ ವಲಸೆಗೆ ಹಿಂದೇಟು ಹಾಕುತ್ತಾರೆ. ವಲಸೆ ಹೋಗುವುದು ಅಪಾಯ ಅನ್ನುವುದಕ್ಕಿಂತ ಹೆಚ್ಚಾಗಿ ಅದರಲ್ಲಿ ತುಂಬಾ ಅನಿಶ್ಚಿತತೆ ಇದೆ. ಇದರ ಜೊತೆಗೆ ಜನರಿಗೆ ಕೈಯ್ಯಾರೆ ತೊಂದರೆ ತಂದುಕೊಳ್ಳುವುದು ಸ್ವಲ್ಪವೂ ಇಷ್ಟವಿಲ್ಲ. ಎಲ್ಲಾ ಕಡೆಯೂ ಅನಿಶ್ಚಿತತೆಗಳೇ ಇವೆ. ಜೊತೆಗೆ ಹೆಚ್ಚಿನ ವಿಷಯಗಳ ಮೇಲೆ ಅವರಿಗೆ ಯಾವುದೇ ನಿಯಂತ್ರಣವೂ ಇಲ್ಲ. ಇದು ಜನರಿಗೆ ದುಃಖದ ವಿಷಯ. ಇದೆಲ್ಲದಕ್ಕಿಂತ ಹೆಚ್ಚಾಗಿ ತಾವೇ ಸ್ವತಂತ್ರವಾಗಿ ಮಾಡಿಕೊಳ್ಳುವ ಆಯ್ಕೆಯಿಂದ ಗ್ರಹಚಾರ ಕೆಟ್ಟು, ತುಂಬಾ ಕಷ್ಟವನ್ನು ಅನುಭವಿಸಬೇಕಾಗಿ ಬಂದಾಗ ಜನ ಇನ್ನು ಹೆಚ್ಚು ದುಃಖಿತರಾಗುತ್ತಾರೆ. ಸುಮ್ಮನೆ ಇದ್ದಿದ್ದರೆ ಆಗಿತ್ತಲ್ಲ ಅಂತ ಪರಿತಪಿಸುತ್ತಾರೆ. ಇಂಥಹ ಸಂದರ್ಭದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದೇ ಮಾನದಂಡವಾಗಿಬಿಡುತ್ತದೆ. ಅರ್ಥಶಾಸ್ತ್ರದ ಮೇಲೆ ತುಂಬಾ ಪ್ರಭಾವ ಬೀರಿರುವ ಡೇನಿಯಲ್ ಕನ್ಹೇಮನ್ ಮತ್ತು ಅಮೋಸ್ ಟ್ವರ್ಸ್‍ಕಿ ಎಂಬ ಇಬ್ಬರು ಮನಃಶಾಸ್ತ್ರಜ್ಞರು ಈ ಪರಿಕಲ್ಪನೆಯನ್ನು ನಷ್ಟವನ್ನು ತಪ್ಪಿಸಿಕೊಳ್ಳುವುದು (Loss Aversion) ಎಂದು ಕರೆಯುತ್ತಾರೆ (2002ರಲ್ಲಿ ಕನ್ಹೇಮನ್ ಅರ್ಥಶಾಸ್ತ್ರದಲ್ಲಿ ನೋಬೆಲ್ ಪಾರಿತೋಷಕ ಪಡೆದರು. ಅಕಾಲ ಮರಣಕ್ಕೆ ತುತ್ತಾಗದಿದ್ದ ಪಕ್ಷದಲ್ಲಿ ಟ್ವರ್ಸ್‍ಕಿ ಕೂಡ ಪಡೆಯುತ್ತಿದ್ದರು).

ಅವರ ಈ ಆವಿಷ್ಕಾರದ ನಂತರ ಈ ಕುರಿತು ಬಂದ ಬರಹಗಳೆಲ್ಲವೂ ಈ ನಷ್ಟ ತಪ್ಪಿಸಿಕೊಳ್ಳುವ ಪ್ರವೃತ್ತಿಯನ್ನು ಒಪ್ಪಿಕೊಳ್ಳುತ್ತವೆ. ಮತ್ತು ಇದರಿಂದ ಜನರ ಹಲವು ವಿಚಿತ್ರವಾದ ವರ್ತನೆಗಳನ್ನು ವಿವರಿಸುವುದಕ್ಕೆ ಸಾಧ್ಯವಾಗಿದೆ ಎಂದು ತಿಳಿಸಿವೆ. ಉದಾಹರಣೆಗೆ ಜನ ಮನೆಯ ಮೇಲಿನ ವಿಮಾ ಯೋಜನೆಗೆ ತುಂಬಾ ದೊಡ್ಡ ಮೊತ್ತದ ಪ್ರೀಮಿಯಂ ಕಟ್ಟುತ್ತಾರೆ. ಅದರಿಂದ ಅವರಿಗೆ ಸಿಗುವ ತೆರಿಗೆ ತೀರಾ ಅತ್ಯಲ್ಪ. ಮುಂದೆ ಯಾವುದೋ ಆಕಸ್ಮಿಕದಿಂದ ಮನೆಗೆ ದೊಡ್ಡ ಹಾನಿಯಾಗಿ, ದೊಡ್ಡ ಮೊತ್ತದ ಹಣ ಭರಿಸಬೇಕಾಗಿ ಬಂದಾಗ ಇದರಿಂದ ನೆರವಾಗುತ್ತದೆ ಎನ್ನುವ ಆಲೋಚನೆಯಿಂದ ಅವರು ಮಿಮೆ ಮಾಡಿಕೊಳ್ಳುತ್ತಾರೆ. ಈ ಯೋಚನೆಯಿಂದಾಗಿ ಈಗ ತುಂಬಾ ದೊಡ್ಡ ಪ್ರಮಾಣದ ಪ್ರೀಮಿಯಂ ಕಟ್ಟುತ್ತಿದ್ದೇವೆ ಎಂದು ಅವರಿಗೆ ಅನ್ನಿಸುವುದಿಲ್ಲ. ಅದರಲ್ಲಿ ಅವರಿಗೆ ಯಾವ ತಪ್ಪು ಕಾಣುವುದಿಲ್ಲ. ಮುಗ್ಧ ಗ್ರಾಹಕರು ಹೆಚ್ಚಿನ ವಾರೆಂಟಿಗಾಗಿ ತುಂಬಾ ಬೆಲೆ ತೆತ್ತು ವಸ್ತುಗಳನ್ನು ಕೊಂಡುಕೊಳ್ಳುವ ನಿರ್ಧಾರದ ಹಿಂದೆಯೂ ಇದೇ ಮನಃಸ್ಥಿತಿ ಕೆಲಸ ಮಾಡುತ್ತಿರುತ್ತದೆ. ಒಟ್ಟಾರೆ ಹೇಳುವುದಾದರೆ ನಷ್ಟವನ್ನು ತಪ್ಪಿಸಿಕೊಳ್ಳಬೇಕೆನ್ನುವ ಯೋಚನೆ ನಮ್ಮ ನಿರ್ಧಾರವನ್ನು ಪ್ರಭಾವಿಸುತ್ತದೆ. ಅತ್ಯಂತ ಸಣ್ಣ ರಿಸ್ಕ್ ಕೂಡ ನಮ್ಮನ್ನು ತುಂಬಾ ಚಿಂತೆಗೀಡು ಮಾಡುತ್ತದೆ. ಸಾಮುದಾಯಿಕವಾಗಿ ಎಲ್ಲರೂ ವಲಸೆ ಹೋಗುವುದಿಲ್ಲ. ನಾವು ವಲಸೆ ಹೋಗಲು ನಿರ್ಧರಿಸಿದಾಗ ಅದು ತುಂಬಾ ದೊಡ್ಡ ಆಯ್ಕೆಯಾಗಿಬಿಡುತ್ತದೆ. ಅದಕ್ಕೆ ನಾವೇ ಜವಾಬ್ದಾರರು. ಹಾಗಾಗಿ ಹಲವರು ಈ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಎಂದು ಸಲೀಸಾಗಿ ಊಹಿಸಬಹುದು.

ಕೊನೆಯದಾಗಿ ವಲಸೆಯಲ್ಲಿ ಆಗಬಹುದಾದ ಸೋಲನ್ನು ಜನ ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ವಲಸೆಯಿಂದ ತುಂಬ ಯಶಸ್ಸು ಗಳಿಸಿದ ಹಲವು ಕಥೆಗಳನ್ನು ಅವರು ಕೇಳಿದ್ದಾರೆ. ಹೆಮ್ಮೆಯಿಂದ ಅದನ್ನು ಹೇಳಿಕೊಳ್ಳುವುದನ್ನು ಕೇಳಿದ್ದಾರೆ. ಹಾಗಾಗಿ ತಮ್ಮ ಸೋಲನ್ನು ಜಗತ್ತು ಹೇಗೆ ನೋಡುತ್ತದೆ ಅನ್ನುವುದಕ್ಕಿಂತ ಅದು ತಮ್ಮ ನ್ಯೂನತೆಯನ್ನು ತೋರಿಸುತ್ತದೆ ಅನ್ನುವ ಭಾವನೆಯನ್ನು ಮೀರಿಕೊಳ್ಳುವುದು ಅವರಿಗೆ ಕಷ್ಟ. ಎಸ್ತರಳ ತಾತ ಆಲ್ಬರ್ಟ್ ಗ್ರಾನ್‍ಜಾನ್ ಒಬ್ಬ ಪಶುವೈದ್ಯರಾಗಿದ್ದರು. ಫ್ರಾನ್ಸಿನ ಲೆ ಮನ್ಸ್ ಎಂಬಲ್ಲಿ ಒಂದು ಕಸಾಯಿಖಾನೆಯನ್ನು ನಡೆಸುತ್ತಿದ್ದರು. ಆಲ್ಬರ್ಟ್ ಒಮ್ಮೆ ತನ್ನ ಪತ್ನಿ ಮತ್ತು ನಾಲ್ಕು ಚಿಕ್ಕ ಮಕ್ಕಳನ್ನು ಅರ್ಜೆಂಟೈನಾಗೆ ಕರೆದುಕೊಂಡು ಹೊರಟರು. ಆಗ ದೋಣಿಯಲ್ಲಿ ಹಲವು ವಾರಗಳ ಪ್ರಯಾಣ ಮಾಡಬೇಕಿತ್ತು. ಅವರಿಗೆ ಅದೊಂದು ಸಾಹಸದ ಕೆಲಸವಾಗಿತ್ತು. ಅದೇ ಅವರಿಗೆ ಪ್ರೇರಣೆಯೂ ಆಗಿತ್ತು. ತನ್ನ ಕೆಲವು ಪರಿಚಿತರನ್ನು ಪಾಲುದಾರರನ್ನಾಗಿ ಮಾಡಿಕೊಂಡು ಪಶುಸಾಕಣೆ ಮಾಡುವ ಒಂದು ಅಸ್ಪಷ್ಟವಾದ ಯೋಜನೆಯನ್ನೂ ಹಾಕಿಕೊಂಡಿದ್ದರು. ಆದರೆ ಕುಟುಂಬ ಅಲ್ಲಿಗೆ ಬಂದು ಸೇರಿದ ವರ್ಷದೊಳಗಾಗಿಯೇ ಆ ಯೋಜನೆ ವಿಫಲವಾಯಿತು. ತೋಟದಲ್ಲಿನ ಪರಿಸ್ಥಿತಿ ಅವರು ಭಾವಿಸಿದ್ದಕ್ಕಿಂತಲೂ ಹೆಚ್ಚು ಕಠಿಣವಾಗಿತ್ತು. ಆ ಸಾಹಸೋದ್ಯಮಕ್ಕೆ ಅವರು ತಂದ ಹಣ ಸಾಲದು ಎಂದು ಪಾಲುದಾರರು ಆಕ್ಷೇಪಿಸಿದರು. ಅವರೊಂದಿಗೆ ಜಗಳ ಮಾಡಿಕೊಂಡರು. ಅವರ ಕುಟುಂಬ ಅಪರಿಚಿತ ದೇಶದಲ್ಲಿ, ಯಾವ ಆದಾಯವೂ ಇಲ್ಲದೆ ದೂರದ ಯವುದೋ ಒಂದು ಕೊಂಪೆಯಲ್ಲಿ ಸಿಲುಕಿಕೊಂಡಿತು. ಹಾಗೆ ನೋಡಿದರೆ ಫ್ರಾನ್ಸಿಗೆ ಮರಳುವುದು ಅವರಿಗೆ ತುಂಬಾ ಕಷ್ಟವೇನಾಗಿರಲಿಲ್ಲ. ಯುದ್ದದ ನಂತರ ಫ್ರಾನ್ಸ್ ಚೇತರಿಸಿಕೊಳ್ಳುತ್ತಿತ್ತು. ಸುಲಭವಾಗಿ ಕೆಲಸ ಸಿಗುತ್ತಿತ್ತು. ಅವರ ಸೋದರರು ಆರ್ಥಿಕವಾಗಿ ಸುಸ್ಥಿಯಲ್ಲಿದ್ದರು. ಫ್ರಾನ್ಸಿಗೆ ತಮ್ಮ ಅಣ್ಣನನ್ನು ಕರೆಸಿಕೊಳ್ಳುವುದು ಅವರಿಗೆ ಕಷ್ಟವಾಗುತ್ತಿರಲಿಲ್ಲ. ಆದರೆ ಆಲ್ಬರ್ಟ್, ಮರಳಿ ಹೋಗಲು ಸಿದ್ಧನಿರಲಿಲ್ಲ. ನಷ್ಟ ಅನುಭವಿಸಿ, ಪ್ರಯಾಣದ ಖರ್ಚನ್ನು ಸಹೋದರರಿಂದ ಪಡೆದು, ಖಾಲಿ ಕೈಯಲ್ಲಿ ವಾಪಸ್ಸು ಹೋಗುವುದು ಆಲ್ಬರ್ಟ್‍ಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅದು ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಇದನ್ನು ಹಲವಾರು ವರ್ಷಗಳ ನಂತರ ಸ್ವತಃ ಎಸ್ತರಳ ಅಜ್ಜಿ ಇವಲೀನ್ ಎಸ್ತರ್‍ಗೆ ಹೇಳಿದಳು. ಅವರು ಎರಡು ವರ್ಷಗಳ ಕಾಲ ಅಲ್ಲೇ ದಟ್ಟದಾರಿದ್ರ್ಯದಲ್ಲಿ ಜೀವನ ನಡೆಸಿದರು. ಹಾಗಿದ್ದಾಗ್ಯೂ ದೇಶೀ ಮಂದಿಗಿಂತ ತಾವು ಉತ್ತಮರು ಎನ್ನುವ ಮೇಲರಿಮೆಗೆಗೇನು ಕೊರತೆ ಇರಲಿಲ್ಲ. ಮಕ್ಕಳು ಮನೆಯಲ್ಲಿ ಸ್ಪಾನಿಷ್ ಮಾತಾಡುವಂತಿರಲಿಲ್ಲ. ಎಸ್ತರಳ ತಾಯಿ ವಯೋಲೈನ್ ಅರ್ಜೆಂಟೈನಾದಲ್ಲಿ ಶಾಲೆಗೆ ಹೋಗದೆ, ದೂರಶಿಕ್ಷಣದ ಮೂಲಕ ತನ್ನ ಓದು ಮುಗಿಸಿದಳು. ಮನೆಯಲ್ಲಿ ತನ್ನ ವಿರಾಮದ ಸಮಯವೆಲ್ಲವನ್ನೂ ಮನೆಗೆಲಸ ಮಾಡುತ್ತಾ, ಮಕ್ಕಳ ಸವೆದ ಚಪ್ಪಲಿಯನ್ನು ಸರಿಪಡಿಸುತ್ತಾ ಕಾಲಕಳೆದಳು. ಕೊನೆಗೆ ಇನ್ಸ್‍ಟಿಟ್ಯೂಟ್ ಮೆರಿಯುಕ್ಸ್ ಎಂಬ ಫ್ರೆಂಚ್ ಔಷಧಿ ಕಂಪನಿಯಲ್ಲಿ ಆಲ್ಬರ್ಟ್‍ಗೆ ಕೆಲಸ ಸಿಕ್ಕಿತು. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಕ್ರಮೇಣ ಸುಧಾರಿಸಿತು. ಅವರು ಅರ್ಜೆಂಟೈನಾದಲ್ಲಿ ಹತ್ತು ವರ್ಷಗಳು ಇದ್ದು ನಂತರ ಪೆರು, ಕೊಲಂಬಿಯಾ ಮತ್ತು ಸೆನೆಗಾಲ್ ಹೋದರು. ಆಲ್ಬರ್ಟ್‍ನ ಆರೋಗ್ಯ ಕ್ಷೀಣಿಸಿತೊಡಗಿದಾಗ (ಆಗ ಆಲ್ಬರ್ಟ್‍ಗೆ ಹೇಳಿಕೊಳ್ಳುವಂತಹ ವಯಸ್ಸೇನಾಗಿರಲಿಲ್ಲ) ಅವರು ಫ್ರಾನ್ಸಿಗೆ ಮರಳಿದರು. ಆ ಹೊತ್ತಿಗೆ ಅವರು ಬದುಕಿನಲ್ಲಿ ಒಂದಿಷ್ಟು ಸಾಧಿಸಿದ್ದೇವೆ ಎಂದು ಹೇಳಿಕೊಳ್ಳಬಹುದಾದ ಸ್ಥಿತಿಗೆ ಬಂದಿದ್ದರು. ಆದರೂ ಆ ಕಾರ್ಪಣ್ಯದ ಬದುಕು ಅವರ ಆರೋಗ್ಯವನ್ನು ಬಲಿ ತೆಗೆದುಕೊಂಡಿತ್ತು. ಫ್ರಾನ್ಸಿಗೆ ಮರಳಿದ ಕೆಲವೇ ದಿನಗಳಲ್ಲಿ ಆಲ್ಬರ್ಟ್ ತೀರಿಕೊಂಡರು.

ಸೋಲಿನ ಭಯ ರಿಸ್ಕ್ ಇರುವ ಸಾಹಸಕ್ಕೆ ಕೈಹಾಕದಂತೆ ಮಾಡುತ್ತದೆÉ. ಹಲವರು ಪ್ರಯತ್ನಿಸುವುದೇ ಬೇಡವೆಂದು ಸುಮ್ಮನಾಗಿಬಿಡುತ್ತಾರೆ. ಎಲ್ಲರೂ ತಾವು ಬುದ್ದಿವಂತರು, ಕಠಿಣ ಪರಿಶ್ರಮ ಮಾಡುವವರು ಮತ್ತು ನೈತಿಕವಾಗಿ ಸರಿ ಇರುವವರು ಎನ್ನುವ ಚಿತ್ರವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಏಕೆಂದರೆ ನಾವು ಪೆದ್ದರು, ಸೋಮಾರಿಗಳು ಮತ್ತು ನೀತಿನಿಷ್ಠೆ ಇಲ್ಲದವರು ಎಂದು ಒಪ್ಪಿಕೊಳ್ಳುವುದು ನಮಗೇ ಸಾಧ್ಯವಿಲ್ಲ. ಜೊತೆಗೆ, ನಮ್ಮ ಬಗ್ಗೆ ಒಳ್ಳೆಯ ಭಾವನೆ ಇದ್ದಾಗಷ್ಟೇ ನಮಗೆ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸುವುದಕ್ಕೆ ಬೇಕಾದ ಆತ್ಮಸ್ಥೈರ್ಯ ಸಾಧ್ಯವಾಗುವುದು. ನಮ್ಮ ಬಗ್ಗೆ ಒಳ್ಳೆಯ ಇಮೇಜನ್ನು ಇಟ್ಟುಕೊಳ್ಳುವುದು ಮುಖ್ಯ ಅನ್ನುವುದು ಸತ್ಯವಾದರೆ, ಅದಕ್ಕೆ ಮೆರಗುಕೊಟ್ಟು ಎದ್ದು ಚೆನ್ನಾಗಿ ಕಾಣುವಂತೆ ಮಾಡುವುದಕ್ಕೂ ಅರ್ಥವಿದೆ. ಈ ಪ್ರಕ್ರಿಯೆಯಲ್ಲಿ ನಮ್ಮ ಬಗ್ಗೆ ಇರುವ ಋಣಾತ್ಮಕ ಮಾಹಿತಿಗಳನ್ನೆಲ್ಲಾ ಸಕ್ರಿಯವಾಗಿ ಸೋಸಿಬಿಡುತ್ತೇವೆ. ಅಥವಾ ನಮಗೆ ತೊಂದರೆಯಾಗಬಹುದಾದ ತೀರ್ಮಾನಗಳನ್ನು ಆದಷ್ಟು ತೆಗೆದುಕೊಳ್ಳದೇ ಇರುವುದು. ಉದಾಹರಣೆಗೆ ಒಬ್ಬ ಭಿಕ್ಷುಕನಿಗೆ ಭಿಕ್ಷೆ ಕೊಡದೇ ಹಾಗೆ ಅವನನ್ನು ದಾಟಿಹೋದರೆ ನಾವು ಉದಾರಿಗಳಾಗುವುದಿಲ್ಲ. ಹಾಗಾಗ ಅವರನ್ನು ಗಮನಿಸದೇ ರಸ್ತೆ ದಾಟಿಬಿಟ್ಟರೆ ನಾನು ಉದಾರಿಯಲ್ಲಿ ಅನ್ನುವ ಭಾವನೆಯಿಂದ ತಪ್ಪಿಸಿಕೊಳ್ಳಬಹುದು. ಪರೀಕ್ಷೆಯೊಂದಕ್ಕೆ ಚೆನ್ನಾಗಿ ಅಭ್ಯಾಸ ಮಾಡಲು ಆಗದೇ ಹೋದ ಒಳ್ಳೆಯ ವಿದ್ಯಾರ್ಥಿಯೊಬ್ಬ ತಾನು ಓದಿದ್ದರೆ ಚೆನ್ನಾಗಿ ಮಾಡುತ್ತಿದ್ದೆ ಎಂದುಕೊಂಡು, ತಾನು ಬುದ್ದಿವಂತ ಎನ್ನುವ ಭಾವನೆಯನ್ನು ಉಳಿಸಿಕೊಳ್ಳಬಹುದು. ಅದೇ ರೀತಿಯಲ್ಲಿ ವಲಸೆ ಹೋಗದೆ ಊರಲ್ಲೇ ಉಳಿದುಕೊಂಡ ವ್ಯಕ್ತಿ, ವಲಸೆ ಹೋಗಿದ್ದರೆ ತಾನು ತುಂಬಾ ಯಶಸ್ವಿಯಾಗುತ್ತಿದ್ದೆ ಎನ್ನುವ ಭಾವನೆಯೊಂದಿಗೆ ಜೀವಿಸಿಬಿಡಬಹುದು.

ಯಥಾಸ್ಥಿತಿಯನ್ನು ಉಳಿಸಿಕೊಳ್ಳುವ ಮನಃಸ್ಥಿತಿಯನ್ನು ಮೀರಿಕೊಳ್ಳಬೇಕಾದರೆ ನಮಗೆ ಕನಸು ಕಾಣುವುದಕ್ಕೆ ಸಾಧ್ಯವಾಗಬೇಕು. ಅಥವಾ ತುಂಬಾ ಅತಿಯಾದ ಆತ್ಮವಿಶ್ವಾಸವಿರಬೇಕು. ಹಾಗಾಗಿಯೇ ಯಶಸ್ವೀ ಉದ್ದಿಮೆದಾರರಾಗಿ ಹೊರಹೊಮ್ಮಿರುವವರಲ್ಲಿ ಹೆಚ್ಚಿನವರು ಒಂದು ವಿಶೇಷವಾದ ಸ್ಫೂರ್ತಿಯಿಂದ ವಲಸೆ ಹೋದಂತಹವರು. ಕೇವಲ ಹತಾಶೆಯಿಂದ ಅಥವಾ ಶ್ರೀಮಂತಿಕೆಯ ಆಸೆಯಿಂದ ಇಲ್ಲವೇ ಉನ್ನತ ಶಿಕ್ಷಣದ ಕನಸನ್ನು ಇಟ್ಟುಕೊಂಡು ಹೋದವರಲ್ಲಿ ಇಂತಹ ಯಶಸ್ವೀ ಉದ್ದಿಮೆದಾರರು ಕಂಡುಬಂದಿರುವುದು ಕಡಿಮೆ.

ಟೊಕೆವಿಲ್ಲೆ ನಂತರ

ಆದರೆ ಈ ನಿಯಮಕ್ಕೆ ಅಮೆರಿಕ ಒಂದು ಅಪವಾದ ಎನ್ನುತ್ತಾರೆ. ಏಕೆಂದರೆ ಅವರಲ್ಲಿ ಹೆಚ್ಚಿನವರು ರಿಸ್ಕ್ ಎದುರಿಸಿ ಹೊಸ ಅವಕಾಶಗಳೊಂದಿಗೆ ಮುಖಾಮುಖಿಯಾಗುವುದನ್ನು ಬಯಸುತ್ತಾರೆ. ಅಥವಾ ಕೊನೇಪಕ್ಷ ಅವರ ಬಗ್ಗೆ ಅಂತಹ ಒಂದು ಭಾವನೆ ಇದೆ. ಅಲೆಕ್ಸಿಸ್ ಡಿ ಟೊಕೆವಿಲ್ಲೆ 19ನೇ ಶತಮಾನದಲ್ಲಿ ಫ್ರಾನ್ಸಿನಲ್ಲಿದ್ದ ಒಬ್ಬ ಕುಲೀನ. ಅವನು ಅಮೆರಿಕೆಯನ್ನು ಒಂದು ಮುಕ್ತ ಸಮಾಜಕ್ಕೆ ಮಾದರಿ ಎಂದು ಭಾವಿಸಿದ್ದ. ಅಮೇರಿಕೆಯಲ್ಲಿರುವ ಚಡಪಡಿಕೆ ಅದಕ್ಕೆ ಒಂದು ಕಾರಣ ಎಂದು ಅಂದುಕೊಂಡಿದ್ದ. ಜನ ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ, ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಸದಾ ಚಲಿಸುತ್ತಲೇ ಇದ್ದರು. ಅಲ್ಲಿ ವಂಶಪಾರಂಪರ್ಯವಾದ ವರ್ಗ ವ್ಯವಸ್ಥೆ ಇಲ್ಲ ಮತ್ತು ಅವರಲ್ಲಿ ಹಣ ಸಂಗ್ರಹಿಸಬೇಕೆಂಬ ಒಂದು ನಿರಂತರವಾದ ತುಡಿತ ಇದೆ. ಅವರ ಚಡಪಡಿಕೆಗೆ ಇವೆರಡೂ ಕಾರಣ ಎನ್ನುತ್ತಾನೆ ಟೊಕೆವಿಲ್ಲೆ. ಅಲ್ಲಿ ಎಲ್ಲರೂ ಶ್ರೀಮಂತರಾಗಲು ಪ್ರಯತ್ನಿಸುತ್ತಿದ್ದರು. ಹಾಗಾಗಿ ಅವಕಾಶಗಳು ಎಲ್ಲೇ ಇರಲಿ, ಅವುಗಳ ಬೆನ್ನುಹತ್ತಿ ಹೋಗುತ್ತಿದ್ದರು. ಅದು ಅವರ ಜವಾಬ್ದಾರಿ ಅಂತ ಅವರು ಭಾವಿಸಿದ್ದರು.

ಇಂದಿಗೂ ಅಮೆರಿಕನ್ನರು ಈ ಅಮೆರಿಕನ್ ಕನಸನ್ನು ನಂಬಿದ್ದಾರೆ. ಅದರೆ ಇಂದು ಪರಿಸ್ಥಿತಿ ಬದಲಾಗಿದೆ. ಅಮೆರಿಕನ್ನರ ಶ್ರೀಮಂತಿಕೆಯಲ್ಲಿ ಅನುವಂಶಿಕತೆಯ ಪಾತ್ರ ಇದೆ. ಅದು ಯುರೋಪಿಗಿಂತಲೂ ಹೆಚ್ಚಾಗಿಯೇ ಇದೆ. ಬಹುಶಃ ಅದರಿಂದಾಗಿಯೇ ಅಮೆರಿಕೆಯಲ್ಲಿ ಚಡಪಡಿಕೆ ಕಮ್ಮಿಯಾಗಿದೆ. ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ವಲಸೆ ಕುರಿತು ಈಗ ಅವರಲ್ಲಿ ಅಸಹನೆಯೂ ಹೆಚ್ಚುತ್ತಿದೆ. ಅಮೆರಿಕನ್ನರು ಈಗ ಮೊದಲಿನಷ್ಟು ಚಲನಶೀಲರಾಗಿಲ್ಲ. 1950ರಲ್ಲಿ ಶೇಕಡ 7ರಷ್ಟು ಅಮೆರಿಕನ್ನರು ಬೇರೆ ದೇಶಗಳಿಗೆ ಪ್ರತಿವರ್ಷ ಹೋಗುತ್ತಿದ್ದರು. 2018ರಲ್ಲಿ ಅವರ ಸಂಖ್ಯೆ ಶೇಕಡ 4ಕ್ಕಿಂತಲೂ ಕಡಿಮೆಯಾಗಿದೆ. 1990ರಿಂದ ಹೀಗೆ ಹೋಗುವವರ ಸಂಖ್ಯೆ ಕಡಿಮೆಯಾಗತೊಡಗಿತು. ಅದು 2000ದ ಮಧ್ಯದ ಹೊತ್ತಿಗೆ ತೀವ್ರಗೊಂಡಿತು. ಅಷ್ಟೇ ಅಲ್ಲ ದೇಶದ ಒಳಗೂ ವಲಸೆಯ ಮಾದರಿಯಲ್ಲಿ ಗಮನಾರ್ಹ ಬದಲಾವಣೆಯಿದೆ. 1980ರ ಮಧ್ಯಭಾಗದವರಗೆ ಅಮೆರಿಕೆಯ ಶ್ರೀಮಂತ ರಾಜ್ಯಗಳಲ್ಲಿ ಜನಸಂಖ್ಯೆಯ ಹೆಚ್ಚಳ ವೇಗವಾಗಿತ್ತು. ಆದರೆ 1990ರಿಂದ ಇದು ತಪ್ಪಿದೆ. ಶ್ರೀಮಂತ ರಾಜ್ಯಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿರಲಿಲ್ಲ. ಆದರೆ ಉನ್ನತ ಕೌಶಲವಿರುವ ಕೆಲಸಗಾರರು ಈಗಲೂ ಬಡ ರಾಜ್ಯಗಳಿಂದ ಶ್ರೀಮಂತ ರಾಜ್ಯಗಳತ್ತ ವಲಸೆ ಬರುತ್ತಿದ್ದಾರೆ. ಆದರೆ ಕಡಿಮೆ ಕೌಶಲ ಹೊಂದಿರುವ ಕೆಲಸಗಾರರು ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಚಲಿಸುತ್ತಿದ್ದಾರೆ. ಈ ಎರಡೂ ಪ್ರವೃತ್ತಿಗಳನ್ನು ಗಮನಿಸಿದಾಗ 1990ರಿಂದಾಚೆಗೆ ಅಮೆರಿಕೆಯ ಕಾರ್ಮಿಕ ಮಾರುಕಟ್ಟೆ ಕೌಶಲದ ಆಧಾರದ ಮೇಲೆ ಸ್ಪಷ್ಟವಾಗಿ ಎರಡಾಗಿ ವಿಭಜಿತವಾಗಿದೆÉ. ಕರಾವಳಿಗಳು ಹೆಚ್ಚೆಚ್ಚು ಸುಶಿಕ್ಷಿತರನ್ನು ಆಕರ್ಷಿಸಿದರೆ, ಕಡಿಮೆ ಶಿಕ್ಷಣ ಹೊಂದಿರುವವರು ಒಳನಾಡಿನಲ್ಲಿ ಅದರಲ್ಲೂ ಹಳೆಯ ಔದ್ಯೋಗಿಕ ನಗರಗಳಾದ ಡೆಟ್ರಾಟ್, ಕ್ಲೀವ್‍ಲ್ಯಾಂಡ್ ಮತ್ತು ಪಿಟ್ಸ್‍ಬರ್ಗ್‍ನಲ್ಲಿ ಸೇರಿಕೊಳ್ಳುತ್ತಿದ್ದಾರೆ. ಈ ವ್ಯತ್ಯಾಸವು ಸಂಪಾದನೆ, ಬದುಕಿನ ಕ್ರಮ ಮತ್ತು ಮತದಾನದ ವಿಧಾನದಲ್ಲೂ ಕಾಣುತ್ತಿದೆ. ಕೆಲವು ಪ್ರಾಂತ್ಯಗಳು ತುಂಬಾ ಹಿಂದುಳಿದು ಮತ್ತೆ ಕೆಲವು ಪ್ರಾಂತ್ಯಗಳು ತುಂಬಾ ಮುಂದುವರಿದು ಒಂದು ಬಗೆಯ ಅವ್ಯವಸ್ಥೆಯ ಭಾವ ಕಂಡುಬರುತ್ತಿದೆ.

ತುಂಬಾ ಉನ್ನತ ಶಿಕ್ಷಣ ಪಡೆದಿರುವ ಸಾಫ್ಟ್‍ವೇರ್ ಅಥವಾ ಬಯೋಟೆಕ್ ಕೆಲಸಗಾರರಿಗೆ ಪಾಲೋ ಆಲ್ಟೋ, ಕ್ಯಾಲಿಫೋರ್ನಿಯಾ ಅಥವಾ ಕೇಂಬ್ರಿಡ್ಜ್, ವೆಸ್ಸಾಚುಸೆಟ್ಸ್ ಇಂತಹ ಸ್ಥಳಗಳ ಆಕರ್ಷಣೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಮತ್ತು ಅದರಲ್ಲಿ ಅಚ್ಚರಿಯೇನಿಲ್ಲ. ಆ ನಗರಗಳಲ್ಲಿ ಉನ್ನತ ಶಿಕ್ಷಣವಿರುವ ಕೆಲಸಗಾರರಿಗೆ ಒಳ್ಳೆಯ ಸಂಬಳ ದೊರಕುತ್ತದೆ ಮತ್ತು ಅಲ್ಲಿ ಅವರು ಬಯಸುವಂತಹ ಅನುಕೂಲಗಳು ಮತ್ತು ಸ್ನೇಹಿತರು ಸಿಗುವ ಸಾಧ್ಯತೆಗಳೂ ಹೆಚ್ಚು.

ಆದರೆ ಕಡಿಮೆ ಓದಿರುವ ಕೆಲಸಗಾರರು ಅಲ್ಲಿಗೇಕೆ ಹೋಗುವುದಿಲ್ಲ? ವಕೀಲರಿಗೆ ತೋಟದ ಮಾಲಿಗಳು, ಅಡುಗೆಯವರು ಮತ್ತು ಬಾರ್ ಅಟೆಂಡರುಗಳು ಬೇಕು. ಸುಶಿಕ್ಷಿತ ಕೆಲಸಗಾರರ ಸಾಂದ್ರೀಕರಣವು ಅಶಿಕ್ಷಿತ ಕೆಲಸಗಾರರಿಗಾಗಿ ಬೇಡಿಕೆಯನ್ನು ಸೃಷ್ಟಿಸಿ ಅವರನ್ನು ಚಲಿಸುವುದಕ್ಕೆ ಉತ್ತೇಜಿಸಬೇಕು. ಇದು ಅಮೆರಿಕೆ. ಹಾಗಾಗಿ ಇಲ್ಲಿ ಬಾಂಗ್ಲಾದೇಶದಂತೆ ಆಗುವುದಿಲ್ಲ. ಪ್ರತಿಯೊಬ್ಬರ ಬಳಿಯೂ ರಾಜ್ಯದಲ್ಲಿ ಅಷ್ಟೇ ಏಕೆ ದೇಶದಾದ್ಯಂತ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುವುದಕ್ಕೂ ಬಸ್‍ಟಿಕೇಟಿಗೆ ಹಣವಿರುತ್ತದೆ. ಎಲ್ಲರಿಗೂ ಸರಿಯಾದ ಮಾಹಿತಿ ತಿಳಿದಿರುತ್ತದೆ. ಎಲ್ಲರಿಗೂ ಯಾವ ನಗರಗಳಲ್ಲಿ ತುಂಬಾ ಹಣ ಸಿಗುತ್ತದೆ ಎನ್ನುವುದು ತಿಳಿದಿರುತ್ತದೆ.

ಉನ್ನತ ಶಿಕ್ಷಣ ಪಡೆದವರಿಗೆ ಹೋಲಿಸಿದರೆ ಕೇವಲ ಹೈಸ್ಕೂಲ್ ಶಿಕ್ಷಣವಷ್ಟೇ ಇರುವ ಕೆಲಸಗಾರರಿಗೆ ಇಂತಹ ಸಂಪದ್ಭರಿತ ನಗರಗಳಲ್ಲಿ ಆದಾಯದಿಂದ ಬರುವ ಲಾಭ ಕಡಿಮೆ. ಅದು ಅವರು ಅಲ್ಲಿಗೆ ಹೋಗದಿರುವುದಕ್ಕೆ ಒಂದು ಕಾರಣ. ಕಡಿಮೆ ಕೌಶಲದ ಕಾರ್ಮಿಕರಿಗೂ ಕೂಡ ಒಂದು ವೇಜ್ ಪ್ರೀಮಿಯಂ ಇದೆ. ಸಂಬಳಗಳ ದರವನ್ನು ಆನ್‍ಲೈನ್ ಹಾಕುವ ವೆಬ್‍ಸೈಟುಗಳ ಪ್ರಕಾರ ಸ್ಟಾರ್‍ಬಕ್ಸ್ ಬರಿಸ್ಟಾ ಕಂಪನಿಯು ಬಾಸ್ಟನ್ನಿನಲ್ಲಿ ಒಂದು ಗಂಟೆಗೆ 12 ಡಾಲರ್ ಮತ್ತು ಬೋಯ್ಸ್‍ನಲ್ಲಿ 9 ಡಾಲರ್‍ಗಳನ್ನೂ ನೀಡುತ್ತವೆ. ಇದು ಉನ್ನತ ಕೌಶಲ ಇರುವ ಕೆಲಸಗಾರರು ಪಡೆಯುವ ಲಾಭದಷ್ಟಿಲ್ಲ. ಆದರೆ ತೀರಾ ಕಡಿಮೆಯೂ ಅಲ್ಲ.

ಹೆಚ್ಚು ಕೌಶಲವಿರುವ ಕಾರ್ಮಿಕರ ಸಂಖ್ಯೆಯು ಹೆಚ್ಚಾಗುತ್ತಿದೆ. ವಸತಿಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಹಾಗಾಗಿ ಪಾಲೋ ಆಲ್ಟೋ, ಕೇಂಬ್ರಿಡ್ಜ್ ಮತ್ತು ಅಂತಹ ಇತರ ಸ್ಥಳಗಳಲ್ಲಿ ವಸತಿಗಾಗಿ ಮಾಡಬೇಕಾದ ವೆಚ್ಚವೂ ಮಿತಿಮೀರಿ ಹೋಗಿದೆ. ಒಬ್ಬ ವಕೀಲ ಮತ್ತು ಒಬ್ಬ ಗೃಹರಕ್ಷಕ ದಕ್ಷಿಣದ ಮೂಲೆಯಲ್ಲಿ ಸಂಪಾದಿಸುವುದಕ್ಕಿಂತ ಹೆಚ್ಚಾಗಿ ನ್ಯೂ ಯಾರ್ಕಿನಲ್ಲಿ ಸಂಪಾದಿಸುತ್ತಾರೆ. ಆದರೆ ಅವರಲ್ಲಿ ವ್ಯತ್ಯಾಸವಿದೆ. ಒಬ್ಬ ವಕೀಲ ನ್ಯೂಯಾರ್ಕಿನಲ್ಲಿ ಶೇಕಡ 45ರಷ್ಟು ಹೆಚ್ಚು ಸಂಪಾದಿಸಿದರೆ, ಒಬ್ಬ ಗೃಹರಕ್ಷಕ ಶೇಕಡÀ 32ರಷ್ಟು ಹೆಚ್ಚು ಸಂಪಾದಿಸುತ್ತಾನೆ. ನ್ಯೂ ಯಾರ್ಕಿನಲ್ಲಿ ವಕೀಲ ತನ್ನ ಆದಾಯದ ಶೇಕಡ 21ರಷ್ಟನ್ನು ವಸತಿಗಾಗಿ ಖರ್ಚುಮಾಡಿದರೆ, ಒಬ್ಬ ಗೃಹರಕ್ಷಕ ಶೇಕಡ 52ರಷ್ಟು ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ವಕೀಲನಿಗೆ ಖರ್ಚೆಲ್ಲಾ ಕಳೆದಮೇಲೆ ದಕ್ಷಿಣದಲ್ಲಿ ದೊರಕುವುದಕ್ಕಿಂತ ನ್ಯೂಯಾರ್ಕಿನಲ್ಲಿ ಸಾಕಷ್ಟು ಹೆಚ್ಚು ಹಣ ದೊರೆಯುತ್ತದೆ. ಆದರೆ ಗೃಹರಕ್ಷಕನ ವಿಷಯದಲ್ಲಿ ಪರಿಸ್ಥಿತಿ ಅದಕ್ಕೆ ತದ್ವಿರುದ್ಧ. ಅವರಿಗೆ ದಕ್ಷಿಣದಲ್ಲೇ ಹೆಚ್ಚು (ಶೇಕಡ 6ರಷ್ಟು) ಉಳಿಯುತ್ತದೆ. ಹಾಗಾಗಿ ಗೃಹರಕ್ಷಕನೊಬ್ಬ ನ್ಯೂಯಾರ್ಕಿಗೆ ಬರುವುದರಲ್ಲಿ ಯಾವ ಅರ್ಥವೂ ಇಲ್ಲ.

ಸ್ಯಾನ್ ಫ್ರಾನ್ಸಿಸ್ಕೋನ ಮಿಷನ್ ಜಿಲ್ಲೆ ಈ ವಿದ್ಯಮಾನಕ್ಕೊಂದು ಸಂಕೇತವಾಗಿಬಿಟ್ಟಿದೆ. 1990ರ ಕೊನೆಯ ಭಾಗದವರಗೆ ಅದು ಹಿಸ್‍ಪ್ಯಾನಿಸ್ ವಲಸೆಗಾರರೇ ಹೆಚ್ಚಾಗಿದ್ದ ಕಾರ್ಮಿಕರ ಪ್ರದೇಶವಾಗಿತ್ತು. ಆದರೆ ಟೆಕ್ ಉದ್ದಿಮೆಯಲ್ಲಿ ಕೆಲಸ ಮಾಡುವವರು ಅಲ್ಲಿಗೆ ಬರುವುದಕ್ಕೆ ಪ್ರಾರಂಭಿಸಿದ್ದರಿಂದ ಅಲ್ಲಿ ಮನೆಬಾಡಿಗೆ ಏರಲಾರಂಭಿಸಿತು. ಅಲ್ಲಿ ಒಂದು ಬೆಡ್‍ರೂಮ್ ಇರುವ ಅಪಾರ್ಟ್‍ಮೆಂಟಿಗೆ 2011ರಲ್ಲಿ 1900 ಡಾಲರ್ ಬಾಡಿಗೆ ಇದ್ದದ್ದು 2013ರ ಹೊತ್ತಿಗೆ 2675 ಡಾಲರ್ ಆಯಿತು. 2014ರ ಹೊತ್ತಿಗೆ 3250 ಡಾಲರ್‍ಗಳಿಗೆ ಏರಿತು. ಇಂದು ಮಿಷನ್ ಜಿಲ್ಲೆಯಲ್ಲಿ ಕನಿಷ್ಠ ಕೂಲಿ ಬರುವ ಯಾವ ವ್ಯಕ್ತಿಯೂ ಅಪಾರ್ಟ್‍ಮೆಂಟನ್ನು ಬಾಡಿಗೆಗೆ ಪಡೆಯುವುದಕ್ಕೆ ಸಾಧ್ಯವಿಲ್ಲ. ಅಲ್ಲಿನ ಟೆಕ್ ಕೆಲಸಗಾರರನ್ನು ಹೊರಗಟ್ಟಬೇಕೆಂಬ “ಮಿಷನ್ ಯುಪ್ಪಿ ಎರಾಡಿಕೇಷನ್ ಪ್ರೊಜೆಕ್ಟ್” ಪ್ರಾರಂಭವಾಯಿತು. ಎಷ್ಟೋ ಜನ ಟೆಕ್ಕಿಗಳ ಕಾರುಗಳನ್ನು ನಾಶಪಡಿಸಲಾಯಿತು. ಚಳುವಳಿ ಸಾರ್ವಜನಿಕ ಗಮನವನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯಿತು. ಆದರೆ ಕೊನೆಯಲ್ಲಿ ಅವರ ಪ್ರಯತ್ನ ವಿಫಲವಾಯಿತು.

ಬೆಳೆಯುತ್ತಿರುವ ನಗರಗಳ ಸಮೀಪದಲ್ಲಿ ಹೆಚ್ಚಿನ ಮನೆಗಳನ್ನು ಕಟ್ಟಬಹುದು. ಆದರೆ ಅದಕ್ಕೆ ಸಮಯ ಹಿಡಿಯುತ್ತದೆ. ಅದಕ್ಕಿಂತ ಹೆಚ್ಚಾಗಿ ಅಮೆರಿಕೆಯ ಹಳೆಯ ನಗರಗಳಲ್ಲಿ ಕಟ್ಟಡಗಳನ್ನು ಒತ್ತೊತ್ತಾಗಿ ಕಟ್ಟುವುದು ಸಾಧ್ಯವಿಲ್ಲ. ಅಲ್ಲಿಯ ಪ್ರಾಂತೀಯ ಕಾನೂನು ಅದಕ್ಕೆ ಅವಕಾಶಕೊಡುವುದಿಲ್ಲ. ಹೊಸ ಕಟ್ಟಡಗಳು ಈಗಿರುವ ಕಟ್ಟಡಗಳ ಮಾದರಿಯಲ್ಲೇ ಇರಬೇಕು, ಅವುಗಳಿಗಿಂತ ತುಂಬ ಭಿನ್ನವಾಗಿ ಕಟ್ಟುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಹೊಸದಾಗಿ ಬಂದ ವಲಸಿಗರಿಗೆ ಆಯ್ಕೆ ಕಷ್ಟ. ಅವರು ತುಂಬಾ ದೂರದ ಸ್ಥಳಗಳಲ್ಲಿ ಮನೆ ಮಾಡಬೇಕು, ಇಲ್ಲ ದುಬಾರಿಯಾದ ಬಾಡಿಗೆ ಕೊಡಬೇಕು.

ಅಮೆರಿಕೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಗಳು ಇರುವ ಕಡೆಗಳಲ್ಲೇ ಹೆಚ್ಚಿನ ಬೆಳವಣಿಗೆ ಆಗುತ್ತಿದೆ. ಇವೆಲ್ಲ ಸಾಮಾನ್ಯವಾಗಿ ತುಂಬಾ ಹಳೆಯ ನಗರಗಳು ಮತ್ತು ಅಲ್ಲೆಲ್ಲಾ ವಸತಿ ಹಾಗೂ ನಿವೇಶನಗಳು ತುಂಬಾ ದುಬಾರಿ. ಮತ್ತು ಆ ಪ್ರದೇಶಗಳಲ್ಲಿ ವಸತಿ ಮತ್ತು ನಿವೇಶನಗಳು ಬೆಳೆಯುವುದಕ್ಕೆ ಆಸ್ಪದವೇ ಇಲ್ಲ. ಹಲವಷ್ಟು ನಗರಗಳು ಯುರೋಪಿನ ನಗರಗಳ ಮಾದರಿಯಲ್ಲಿಯೇ ಇರುವ ನಗರಗಳು. ಬೆಳವಣಿಗೆಯನ್ನು ವಿರೋಧಿಸಿಕೊಂಡು ತಮ್ಮ ಐತಿಹಾಸಿಕ ಗುಣ ಮತ್ತು ಖ್ಯಾತಿಯನ್ನು ಉಳಿಸಿಕೊಳ್ಳುವ ಬಲವಾದ ಉಮೇದು ಹೊಂದಿರುವ ನಗರಗಳು. ಹಾಗಾಗಿ ಅಲ್ಲೆಲ್ಲಾ ತುಂಬಾ ಬಲವಾದ ಕಾಯಿದೆಗಳು ಜಾರಿಯಲ್ಲಿವೆ ಮತ್ತು ಬಾಡಿಗೆಗಳು ತುಂಬಾ ದುಬಾರಿ. ತೀವ್ರವಾಗಿ ಬೆಳೆಯುತ್ತಿರುವ ಸ್ಥಳಗಳಿಗೆ ಒಬ್ಬ ಸಾಮಾನ್ಯ ಅಮೆರಿಕನ್ ಪ್ರಜೆ ವಲಸೆ ಹೋಗದಿರುವುದಕ್ಕೆ ಇದು ಕೂಡ ಒಂದು ಕಾರಣವಿರಬಹುದು.

ತನ್ನ ಪ್ರಾಂತ್ಯದಲ್ಲಿನ ಆರ್ಥಿಕ ಕುಸಿತದಿಂದಾಗಿ ಕೆಲಸ ಕಳೆದುಕೊಂಡ ಕಾರ್ಮಿಕ, ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗಬೇಕಾಗಿ ಬಂದಾಗ ವಸತಿಯ ಪ್ರಶ್ನೆ ಇನ್ನಷ್ಟು ಜಟಿಲವಾಗುತ್ತದೆ. ಅವನಿಗೆ ಈಗಾಗಲೇ ಒಂದು ಮನೆ ಇದ್ದರೆ ಆರ್ಥಿಕ ಕುಸಿತದಿಂದಾಗಿ ಅದನ್ನು ಮಾರಾಟ ಮಾಡುವುದಕ್ಕೆ ಸಾಧ್ಯವಾಗದೇ ಇರಬಹುದು. ಅದಕ್ಕೆ ಒಳ್ಳೆಯ ಬೆಲೆ ಸಿಗದೇ ಇರಬಹುದು. ಆದರೆ ವಾಸಿಸುವುದಕ್ಕೆ ಅವನಿಗೆ ಕನಿಷ್ಠ ಪಕ್ಷ ಒಂದು ಮನೆಯಾದರೂ ಇದೆ. ಅವನಿಗೆ ಸ್ವಂತ ಮನೆ ಇಲ್ಲದಿದ್ದರೂ ಆರ್ಥಿಕ ಕುಸಿತದಿಂದ ಉನ್ನತ ಕೌಶಲದ ಕೆಲಸಗಾರನಿಗಿಂತ ಅವನಿಗೆ ಹೆಚ್ಚು ಲಾಭವಾಗುತ್ತದೆ. ಯಾಕೆಂದರೆ ತನ್ನ ಖರ್ಚಿನ ಬಹುಭಾಗವನ್ನು ಅವನು ಮನೆ ಬಾಡಿಗೆಗೆ ತೆರುತ್ತಿರುತ್ತಾನೆ. ಹಾಗಾಗಿ ಮನೆ ಬಾಡಿಗೆ ಕಮ್ಮಿಯಾದಾಗ ಸ್ವಾಭಾವಿಕವಾಗಿಯೇ ಅವನಿಗೆ ಹೆಚ್ಚು ಲಾಭವಾಗುತ್ತದೆ. ಇದೂ ಕೂಡ ಅವರನ್ನು ವಲಸೆ ಹೋಗದಂತೆ ತಡೆಯುವ ಒಂದು ಅಂಶ.

ತಾವು ಇರುವ ಕಡೆ ಅವಕಾಶಗಳು ಕಡಿಮೆ ಇದ್ದು, ಬೇರೆ ಕಡೆಗಳಲ್ಲಿ ಒಳ್ಳೆಯ ಅವಕಾಶಗಳು ಇದ್ದರೂ ವಲಸೆ ಹೋಗದಂತೆ ಅವರನ್ನು ತಡೆಯುವ ಇನ್ನೂ ಹಲವು ಅಂಶಗಳಿವೆ. ಅಮೆರಿಕೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ದುಬಾರಿ. ಅಲ್ಲಿ ನಿಯಮಗಳು ತುಂಬಾ ಕಟ್ಟುನಿಟ್ಟು ಮತ್ತು ಸಾರ್ವಜನಿಕ ಸಬ್ಸಿಡಿಗಳೂ ಇಲ್ಲ. ಆದಾಯ ಕಡಿಮೆ ಇರುವವರಿಗೆ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಒಂದು ವ್ಯವಸ್ಥೆ ಮಾಡುವುದು ಅಸಾಧ್ಯ. ಅವರಿಗಿರುವ ಒಂದೇ ದಾರಿ ಎಂದರೆ ಅಜ್ಜ ಅಜ್ಜಿಯರ ನೆರವು ಪಡೆಯುವುದು. ಅದು ಸಾಧ್ಯವಾಗದೆ ಹೋದಾಗ ಸಂಬಂಧಿಕರು ಅಥವಾ ಸ್ನೇಹಿತರ ನೆರವನ್ನು ಪಡೆಯಬೇಕಾಗುತ್ತದೆ. ಅವರು ನಿಮಗೆ ಸಹಾಯ ಮಾಡಲು ಒಪ್ಪದೇ ಹೋದರೆ ನೀವು ಮನೆ ಬಿಟ್ಟು ಹೋಗುವ ಮಾತೇ ಇಲ್ಲ. ಹೆಂಗಸರು ಹೊರಗೆ ಕೆಲಸಕ್ಕೆ ಹೋಗದೇ ಇದ್ದ ಕಾಲದಲ್ಲಿ ಇದು ದೊಡ್ಡ ಸಮಸ್ಯೆ ಆಗಿರಲಿಲ್ಲ. ಏಕೆಂದರೆ ಅವರೇ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಇಂದು ಅದು ದೊಡ್ಡ ನಿರ್ಣಾಯಕ ಸಂಗತಿ ಆಗಿಬಿಡುತ್ತದೆ.

ಇನ್ನೊಂದು ಸಂಗತಿಯೆಂದರೆ ಅವರು ಈಗ ಮಾಡುತ್ತಿರುವುದು ಖಾಯಂ ಕೆಲಸವಲ್ಲ. ಕೆಲಸ ಹೋದರೆ ಮನೆಯೂ ಹೋಗಿಬಿಡಬಹುದು. ಹೇಳಿಕೊಳ್ಳುವುದಕ್ಕೆ ಒಂದು ವಿಳಾಸವಿಲ್ಲದೇ ಹೋದರೆ ಕೆಲಸ ಸಿಗುವುದಕ್ಕೂ ಕಷ್ಟವಾಗುತ್ತದೆ. ಇಂತಹ ಹೊತ್ತಿನಲ್ಲಿ ಕುಟುಂಬ ಎನ್ನುವುದು ಅವರಿಗೆ ನೆರವಾಗುತ್ತದೆ. ಅದು ಅವರಿಗೆ ಆರ್ಥಿಕವಾಗಿ, ಭಾವನಾತ್ಮಕವಾಗಿ ಒಂದು ಒತ್ತಾಸೆÉ ನೀಡುತ್ತದೆ. ನಿರುದ್ಯೋಗಿ ಯುವಕರು ತಮ್ಮ ತಂದೆ ತಾಯಿಯರ ಮನೆಗೆ ಮರಳುತ್ತಾರೆ. ದುಡಿಯುವ ವಯಸ್ಸಿನÀ ಕೆಲಸಗಾರರಲ್ಲಿ ಶೇಕಡ 67ರಷ್ಟು ಜನ ತಮ್ಮ ತಂದೆ ತಾಯಿಯರ ಜೊತೆ ಅಥವಾ ತುಂಬಾ ಹತ್ತಿರದ ನೆಂಟರು ಇಲ್ಲವೇ ಗೆಳೆಯರ ಜೊತೆಗೆ ವಾಸಿಸುತ್ತಾರೆ (ಇಂತಹವರ ಸಂಖ್ಯೆ 2000ದಲ್ಲಿ ಶೇಕಡ 46ರಷ್ಟು ಇತ್ತು). ಈ ನೆಮ್ಮದಿ ಮತ್ತು ಸುರಕ್ಷೆಯನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗಲು ಯಾರೂ ಇಷ್ಟಪಡುವುದಿಲ್ಲ. ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಸ್ವಂತ ಊರಿನಲ್ಲಿ ಹಲವು ವರ್ಷಗಳು ಒಬ್ಬ ಮಾಲಿಕನ ಬಳಿ ಕೆಲಸ ಮಾಡಿಕೊಂಡು ಬಂದಿದ್ದವರಿಗೆ, ಆ ಕೆಲಸ ಹೋದಾಗ ಊರುಬಿಟ್ಟು ಹೋಗುವುದು ನಿಜವಾಗಿ ಕಷ್ಟದ ಕೆಲಸ. ಕೆಲಸ ಕಳೆದುಕೊಂಡ ಸಂಕಟದ ಜೊತೆಗೆ ಇಡೀ ಬದುಕನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸುವ ದುಗುಡ, ತಳಮಳಗಳೂ ಸೇರಿಕೊಂಡಿರುತ್ತವೆ. ತಂದೆಯಂತೆಯೇ ನೆಮ್ಮದಿಯಾದ ಕೆಲಸದಲ್ಲಿದ್ದು, ಅನಂತರ ಆರಾಮವಾಗಿ ನಿವೃತ್ತಿ ಹೊಂದುವ ಅನುಭವ ಇವರದಲ್ಲ. ತಮ್ಮ ಇಡೀ ನಿರೀಕ್ಷೆಯನ್ನು ಬದಲಿಸಿಕೊಂಡು, ಸಂಪೂರ್ಣ ಅಪರಿಚಿತ ನಗರಕ್ಕೆ ವಲಸೆ ಹೋಗಿ, ತಾವು ಕಲ್ಪಿಸಿಯೂ ಕೊಂಡಿರದÀ ಕೆಲಸವನ್ನು ಅತ್ಯಂತ ಕೆಳಹಂತದಿಂದ ಪ್ರಾರಂಬಿಸಬೇಕಾಗುತ್ತದೆ. ಇದನ್ನು ಅವರು ಊಹಿಸಿಕೊಂಡೂ ಇರುವುದಿಲ್ಲ. ಹಾಗಾಗಿ ಅವರು ಎಲ್ಲೂ ವಲಸೆ ಹೋಗದೆ ಹಳ್ಳಿಯಲ್ಲಿಯೇ ಉಳಿಯಲು ಬಯಸುವುದರಲ್ಲಿ ಅಚ್ಚರಿಯೇನಿಲ್ಲ.

ಕಮ್ ಬ್ಯಾಕ್ ಸಿಟೀಸ್ ಪ್ರವಾಸ

ಸಂಕಷ್ಟದಲ್ಲಿರುವ ಪ್ರದೇಶಗಳಿಂದ ವಲಸೆ ಹೋಗುವುದು ಜನರಿಗೆ ಕಷ್ಟ. ಹಾಗಾದರೆ ಕೆಲಸಗಳೇ ಯಾಕೆ ಅವರ ಬಳಿಗೆ ಬರಬಾರದು? ಕಂಪನಿಗಳು ಮುಚ್ಚಿಹೋಗಿವೆ, ಕಾರ್ಮಿಕರು ಕೆಲಸಕ್ಕೆ ಸಿಗುತ್ತಾರೆ, ಕೂಲಿಯು ಅಷ್ಟಿರುವುದಿಲ್ಲ, ಕಡಿಮೆ ಬಾಡಿಗೆಗೆ ಮನೆಗಳು ದೊರಕುತ್ತವೆ. ಪರಿಸ್ಥಿತಿಯ ಲಾಭ ಪಡೆದುಕೊಂಡು ಹೊಸ ಕಂಪೆನಿಗಳನ್ನು ಪ್ರಾರಂಭಿಸಬಹುದಲ್ಲವೇ? ಇಂತಹ ಚಿಂತನೆಯನ್ನು ಸಾಕಾರಗೊಳಿಸುವ ಒಂದು ಪ್ರಯತ್ನ ನಡೆಯಿತು. 2017ರ ಡಿಸೆಂಬರ್‍ನಲ್ಲಿ ಎಓಎಲ್ ಸಂಸ್ಥೆಯ ಸಹಸ್ಥಾಪಕರಲ್ಲಿ ಒಬ್ಬನಾದ ಬಿಲಿಯನೇರ್ ಸ್ಟೀವನ್ ಕೇಸ್ ಮತ್ತು ಹಿಲ್‍ಬಿಲ್ಲಿ ಎಲಿಜಿಯ ಲೇಖಕ ಜೆ. ಖ. ವಾನ್ಸ್ ಸೇರಿಕೊಂಡು ರೈಸ್ ಆಫ್ ದ ರೆಸ್ಟ್ ಎಂಬ ಹೂಡಿಕೆ ನಿಧಿಯನ್ನು ಪ್ರಾರಂಭಿಸಿದರು. ಇದಕ್ಕೆ ಅಮೆರಿಕದ ಖ್ಯಾತ ಬಿಲಿಯನೇರುಗಳು ಜೆಫ್ ಬೆಜೋನಿಂದ ಎರಿಕ್ ಸ್ಕೀಮಿಟ್ಜ್ ತನಕ ) ಹಣಸಹಾಯ ಮಾಡಿದರು. ಸಾಂಪ್ರದಾಯಿಕವಾಗಿ ಟೆಕ್ ಹೂಡಿಕೆದಾರರು ಬಂಡವಾಳ ಹೂಡಲು ಬಯಸದ ಪ್ರದೇಶಗಳಲ್ಲಿ ಬಂಡವಾಳ ಹೂಡುವ ಉದ್ದೇಶದಿಂದ ಇದು ಪ್ರಾರಂಭವಾಯಿತು. ಸಿಲಿಕಾನ್ ವ್ಯಾಲಿಯ ಕೆಲವು ಹೂಡಿಕೆದಾರರನ್ನು ಯಂಗ್‍ಟೌನ್ ಮತ್ತು ಅಕ್ರಾನ್, ಓಹಿಯೋ, ಡೆಟ್ರಾಯ್ಟ್, ಫ್ಲಿಂಟ್, ಮಿಚಿಗನ್, ಸೌತ್ ಬೆಂಡ್, ಇಂಡಿಯಾನಾ ಮುಂತಾದ ಸ್ಥಳಗಳಿಗೆ ಬಸ್ಸಿನಲ್ಲಿ ಪ್ರವಾಸ ಕರೆದೊಯ್ಯಲಾಯಿತು. ಅದನ್ನು ‘ದ ಕಮ್ ಬ್ಯಾಕ್ ಸಿಟೀಸ್ ಟೂರ್’ ಎಂದೇ ಕರೆದರು. ಅದರಲ್ಲಿ ಹಣ ತೊಡಗಿಸಿದವರಿಗೆ ಕೇವಲ ಅದೊಂದು ಲಾಭಗಳಿಸುವ ಪ್ರಯತ್ನವಾಗಿತ್ತು. ಒಂದು ಸಾಮಾಜಿಕ ಬದಲಾವಣೆ ತರುವ ಉದ್ದೇಶ ಅವರಿಗಿರಲಿಲ್ಲ. ಅದನ್ನು ಅವರು ಸ್ಪಷ್ಟಪಡಿಸಿದ್ದರು. ಬೇ ಪ್ರದೇಶದಲ್ಲಿ ಜನದಟ್ಟಣೆ ತುಂಬಾ ಇದೆ. ಅಲ್ಲಿ ಬದುಕುವ ಖರ್ಚು ತುಂಬಾ ಜಾಸ್ತಿ. ಒಳನಾಡಿನಲ್ಲಿ ಸೊಗಸಾದ ಅವಕಾಶಗಳಿವೆ ಎಂದು ಅವರು ಪತ್ರಿಕಾ ವರದಿಯಲ್ಲಿ ಒತ್ತಿಹೇಳಿದರು. ಇಷ್ಟೆಲ್ಲಾ ಹೇಳಿದರೂ ಅವರು ತಮ್ಮ ಪ್ರಯತ್ನವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಅನ್ನಿಸುತ್ತದೆ. ಹಾಗೆ ಅನುಮಾನಿಸುವುದಕ್ಕೆ ಕಾರಣಗಳೂ ಇವೆ. ಅವರು ಇದಕ್ಕಾಗಿ ಹೂಡಿದ್ದ ನಿಧಿಯ ಮೊತ್ತ ಕೇವಲ 150 ಮಿಲಿಯನ್ ಡಾಲರುಗಳು. ಅದು ಈ ಗುಂಪಿನ ಹೂಡಿಕೆದಾರರ ಪಾಕೆಟ್‍ಮನಿಗೂ ಸಮವಲ್ಲ. ಬೆಜೋಗಳು ಈ ಪ್ರಯತ್ನವನ್ನು ಬೆಂಬಲಿಸಿದರು ಅನ್ನವುದು ನಿಜ. ಆದರೆ ಡೆಟ್ರಾಯ್ಟನ್ನು ಅಮೆಜಾನಿನ ಎರಡನೇ ಕೇಂದ್ರಸ್ಥಾನ ಮಾಡುವಷ್ಟು ಉತ್ಸಾಹ ಅವರಿಗಿರಲಿಲ್ಲ. ಇಡೀ ಪ್ರಯತ್ನದ ಗುರಿ ಒಂದಿಷ್ಟು ಸಡಗರವನ್ನು ಮೂಡಿಸುವುದಾಗಿತ್ತು. ಕೆಲವು ಉದ್ಯಮಗಳು ಪ್ರಾರಂಭವಾಗುವಂತೆ ನೋಡಿಕೊಳ್ಳುವುದಾಗಿತ್ತು. ಉಳಿದವರನ್ನು ಉತ್ತೇಜಿಸುವ ಸಲುವಾಗಿ ಮೊದಮೊದಲು ಬಂಡವಾಳ ಹೂಡಿದವರ ಸುತ್ತ ಒಂದು ಸಡಗರ, ಚಟುವಟಿಕೆ ಮತ್ತು ಸಂಭ್ರಮದ ವಾತಾವರಣವನ್ನು ಮೂಡಿಸುವುದಾಗಿತ್ತು. ಈ ತಂತ್ರ ಹಾರ್ಲೆಮ್‍ನಲ್ಲಿ ಯಶಸ್ವಿಯಾಯಿತು. ಆದರೆ ಅಕ್ರಾನ್‍ನಲ್ಲಿ ಇದು ಯಶಸ್ವಿಯಾಗಲಿಲ್ಲ. ಅದಕ್ಕೆ ಕಾರಣವೇನಿರಬಹುದು? ಹಾರ್ಲೆಮ್ ನಗರದಲ್ಲಿ ಅಷ್ಟಾಗಿ ನಿವೇಶನಗಳು ಇಲ್ಲ ಅನ್ನುವುದನ್ನು ಬಿಟ್ಟರೆ ಅಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿದ್ದವು, ಸಡಗರವೂ ಇತ್ತು. ಹಾಗಾಗಿ ಒಂದಲ್ಲ ಒಂದು ದಿನ ಹಾರ್ಲೆಮ್ ಮತ್ತೆ ಚೇತರಿಸಿಕೊಳ್ಳುತ್ತಿತ್ತು. ಮರುಹುಟ್ಟು ಪಡೆಯುತ್ತಿತ್ತು ಅನ್ನುವುದರಲ್ಲಿ ಅನುಮಾನವಿತ್ತಿಲ್ಲ. ಆದರೆ ಆಕ್ರಾನ್ (ಅಥವಾ ಸೌತ್ ಬೆಂಡ್ ಅಥವಾ ಡೆಟ್ರಾಯ್ಟ್) ಬಗ್ಗೆ ಇಷ್ಟೊಂದು ಆಶಾವಾದಕ್ಕೆ ಅವಕಾಶವಿಲ್ಲ್ಲ. ಏಕೆಂದರೆ ಇಂದಿನ ದಿನಗಳಲ್ಲಿ ಶ್ರೀಮಂತ ಯುವಕ ಯುವತಿಯರಿಗೆ ಸೊಗಸಾದ ಹೋಟೆಲ್ಲುಗಳು, ಝಗಮಗಿಸುವ ಶೋಕಿಯಾದ ಬಾರುಗಳು ಮತ್ತು ಕೆಫೆಗಳು ಬೇಕು. ಅವರು ಪ್ರತಿಷ್ಠೆಯ ಬರಿಸ್ತಾಗಳಿಗೆ ಹೋಗಿ ತುಂಬಾ ದುಬಾರಿಯಾದ ಎಸ್‍ಪ್ರೆಸ್ಸೋಗಳನ್ನು ಕೊಂಡುಕೊಳ್ಳುವುದು ಅವರಿಗೆ ಕಷ್ಟವಿಲ್ಲ. ಆದರೆ ಇಂತಹ ಸ್ಥಳಗಳಲ್ಲಿ ಅವರು ಬಯಸುವ ಆಕರ್ಷಕ ಸೌಲಭ್ಯಗಳನ್ನು ದೊರೆಯುವಂತೆ ಮಾಡುವುದು ಸಾಧ್ಯವಿಲ್ಲ. ಅದಕ್ಕೆ ಕೊಳ್ಳುವ ಜನ ಬೇಕು. ಅದು ಕೋಳಿ ಮೊದಲೋ, ಮೊಟ್ಟೆ ಮೊದಲೋ ಎನ್ನುವ ಸಮಸ್ಯೆಯಿದ್ದಂತೆ. ಈ ಸೌಲಭ್ಯಗಳು ಇಲ್ಲದೇ ಹೋದರೆ ಸುಶಿಕ್ಷಿತ ಯುವಕರು ಕೆಲಸಕ್ಕೆ ಅಲ್ಲಿಗೆ ಬರುವುದಿಲ್ಲ. ಅಂತಹ ಶೋಕಿ ಕೆಲಸಗಾರರು ಇಲ್ಲದೇ ಹೋದರೆ ಈ ಸೌಲಭ್ಯಗಳು ಲಾಭದಾಯಕವಾಗಿ ಯಶಸ್ವಿಯಾಗುವುದಿಲ್ಲ.

ವಾಸ್ತವದಲ್ಲಿ ಒಂದೊಂದು ರೀತಿಯ ಉದ್ಯಮಗಳು ಒಂದೊಂದು ಕಡೆ ಕೇಂದ್ರೀಕೃತವಾಗಿರುತ್ತವೆ. ಉದಾಹರಣೆಗೆ ಸಾಫ್ಟವೇರ್ ಉದ್ದಿಮೆಗಳೆಲ್ಲಾ ಒಂದು ಕಡೆ ನೆಲಸಿರುತ್ತವೆ. ಇದಕ್ಕೆ ಆ ಸ್ಥಳಗಳ ಖ್ಯಾತಿ ಬಹುಮಟ್ಟಿಗೆ ಕಾರಣವಿರಬಹುದು ಅನ್ನಿಸುತ್ತದೆ. ನೀವು ಮುಸುಕಿನ ಜೋಳದ ಹೊಲದ ನಡುವೆ ಸಾಫ್ಟವೇರ್ ಕಂಪೆನಿ ಪ್ರಾರಂಭಿಸಿದರೆ ಗಿರಾಕಿಗಳಲ್ಲಿ ಅದರ ಬಗ್ಗೆ ವಿಶ್ವಾಸ ಮೂಡದೇ ಇರಬಹುದು. ನಿಮಗೆ ಹೊಸ ಕಾರ್ಮಿಕರು ಬೇಕಿದ್ದಾಗಲೆಲ್ಲಾ ಇಲ್ಲಿಗೆ ವಲಸೆ ಬನ್ನಿ ಎಂದು ಅವರನ್ನು ಒಪ್ಪಿಸುವುದು ಕಷ್ಟದ ಕೆಲಸ. ಒಂದೇ ಬಗೆಯ ಫ್ಯಾಕ್ಟರಿಗಳು ಪಕ್ಕಪಕ್ಕದಲ್ಲಿ ಇದ್ದಾಗ ಪಕ್ಕದ ಕಂಪೆನಿಯಿಂದ ಕೆಲಸಗಾರರನ್ನು ಸೆಳೆದುಕೊಳ್ಳುವುದು ಹೆಚ್ಚು ಸಲೀಸು. ಜೊತೆಗೆ ಕಾನೂನಿನ ತೊಡಕುಗಳೂ ಇವೆ. ಅಶುದ್ಧವಾದ ಉದ್ಯಮಗಳು ಒಂದು ಕಡೆ, ಹೋಟೆಲ್ ಬಾರ್ ಇವೆಲ್ಲಾ ಇನ್ನೊಂದು ಕಡೆ ಇರುವಂತೆ ಜ಼ೋನಿಂಗ್ ನಿಯಮ ಕೂಡ ಕೆಲಸ ಮಾಡುತ್ತಿದೆ. ಕೊನೆಯದಾಗಿ ಒಂದೇ ರೀತಿಯ ಉದ್ಯಮಗಳಲ್ಲಿ ಕೆಲಸ ಮಾಡುವ ಜನರ ಖಾಯಿಶ್‍ಗಳು (ಟೆಕಿಗಳು ಕಾಫಿ ಇಷ್ಟಪಡುತ್ತಾರೆ, ಹಣಹೂಡುವವರು ದುಬಾರಿ ವೈನ್ ಬಾಟಲ್‍ಗಳನ್ನು ಜಂಬದಿಂದ ಮೆರೆಸುತ್ತಾರೆ) ಸಾಮಾನ್ಯವಾಗಿ ಒಂದೇ ಬಗೆಯವು. ಹೀಗೆ ಉದ್ಯಮಗಳು ಒಂದು ಕಡೆ ಕೇಂದ್ರೀಕೃತವಾಗಿದ್ದರೆ ಅವರು ಬಯಸುವ ಸೌಲಭ್ಯವನ್ನು ಬದಗಿಸುವುದು ಹೆಚ್ಚು ಸುಲಭವಾಗುತ್ತದೆ.

ಈ ಕಾರಣಗಳಿಂದಾಗಿ ಒಂದೇ ಬಗೆಯ ಉದ್ಯಮಗಳು ಒಂದೇ ಕಡೆ ಬೆಳೆದುಕೊಂಡು ಹೋಗುವುದು ಸ್ವಾಭಾವಿಕ. ಬೇರೆಲ್ಲೋ ಸಣ್ಣದಾಗಿ ಪ್ರಾರಂಭಿಸಿ ಅದನ್ನು ಕ್ರಮೇಣ ದೊಡ್ಡದಾಗಿ ಬೆಳೆಸೋಣ ಅಂದುಕೊಳ್ಳುವುದು ಕಷ್ಟ. ಅಪಲಾಚಿಯದಲ್ಲಿ ಒಂದು ಬಯೋಟೆಕ್ ಕಂಪನಿಯನ್ನು ಊಹಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಸಿಟಿಗಳು ಮರಳಿ ಬರಲಿ, ಪ್ರಯಾಣ ಯಶಸ್ವಿಯಾಗಲಿ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ಅದು ಆಗುತ್ತದೆ ಅನ್ನುವ ವಿಶ್ವಾಸವಿಲ್ಲ. ಅಥವಾ ಡೆಟ್ರಾಯ್ಟ್‍ನಲ್ಲಿ ನಾವು ಭೂಮಿಯನ್ನು ಕೊಳ್ಳುವುದಿಲ್ಲ.

ಐಸೆನ್‍ಹೋವರ್ ಮತ್ತು ಸ್ಟಾಲಿನ್

ದೊಡ್ಡ ಪ್ರಮಾಣದ ಅಂತಾರಾಷ್ಟ್ರೀಯ ವಲಸೆ ಇಂದಿನ ನಿಜವಾದ ಸಮಸ್ಯೆಯಲ್ಲ. ಹೆಚ್ಚಿನ ಬಾರಿ ವಲಸೆಯಿಂದ ಸ್ಥಳೀಯರಿಗೆ ಆರ್ಥಿಕವಾಗಿ ಯಾವುದೇ ರೀತಿಯ ನಷ್ಟವೂ ಆಗುವುದಿಲ್ಲ್ಲ. ವಲಸೆಗಾರರಿಗೆ ಖಂಡಿತವಾಗಿ ಕೆಲವು ಅನುಕೂಲಗಳಿವೆ. ಹೆಚ್ಚಿನ ಬಾರಿ ಆರ್ಥಿಕ ಲಾಭ ಪಡೆಯಲು ಬೇರೆ ಪ್ರದೇಶಗಳಿಗೆ ಅಥವಾ ಬೇರೆ ದೇಶಗಳಿಗೆ ವಲಸೆ ಹೋಗುವುದಕ್ಕೆ ಜನರಿಗೆ ಸಾಧ್ಯವಾಗುತ್ತಿಲ್ಲ ಅಥವಾ ಹೋಗುವುದಕ್ಕೆ ಅವರಿಗೆ ಇಷ್ಟವಿಲ್ಲ. ಇದು ಈಗಿನ ನಿಜವಾದ ಸಮಸ್ಯೆ. ಅಂದರೆ ಪ್ರಗತಿಪರ ಸರ್ಕಾರವು ವಲಸೆ ಹೋಗುವವರನ್ನು ಪುರಸ್ಕರಿಸಿ, ಹೋಗಲು ಒಲ್ಲದವರನ್ನು ಶಿಕ್ಷಿಸಬೇಕು ಎಂದು ಇದು ಸೂಚಿಸುತ್ತಿದೆಯೇ?
ಇಂದು ಹೆಚ್ಚಿನ ಚರ್ಚೆಗಳು ವಲಸೆಯನ್ನು ಹೇಗೆ ಕಡಿಮೆ ಮಾಡಬೇಕು ಎನ್ನುವುದರ ಬಗ್ಗೆಯೇ ನಡೆಯುತ್ತಿವೆ. ಅಂತಹ ಸಮಯದಲ್ಲಿ ಈ ಮೇಲಿನ ಚಿಂತನೆಗಳು ವಿಚಿತ್ರ ಎನಿಸಬಹುದು. ಆದರೆ 1950ರ ದಶಕದಲ್ಲಿ ಅಮೆರಿಕ, ಕೆನಡಾ, ಚೀನಾ, ದಕ್ಷಿಣ ಆಫ್ರಿಕಾ, ಸೋವಿಯತ್ ರಷ್ಯಾ ಮುಂತಾದ ದೇಶಗಳೆಲ್ಲವೂ ಜನರು ಹೊಸ ಪ್ರಾಂತ್ಯಗಳಿಗೆ ವಲಸೆ ಹೋಗುವಂತೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಂಡವು. ವಲಸೆ ಹೋಗುವಂತೆ ಜನರನ್ನು ಒತ್ತಾಯಿಸುವಂತಹ ನೀತಿಗಳನ್ನು ರೂಪಿಸಲು ಆ ದೇಶಗಳಲ್ಲಿ ಗಂಭೀರವಾದ ಪ್ರಯತ್ನಗಳು ನಡೆದಿವೆ. ವಾಚ್ಯವಾಗಿ ಹೇಳದಿದ್ದರೂ ಇವುಗಳ ಹಿಂದೆ ಕ್ರೂರವಾದ ರಾಜಕೀಯ ಉದ್ದೇಶವಿತ್ತು (ತಾವು ಇಷ್ಟಪಡದ ಜನಾಂಗೀಯ ಗುಂಪನ್ನು ಹತ್ತಿಕ್ಕುವುದು ಅದರಲ್ಲಿ ಒಂದು). ಆದರೆ ಆ ಉದ್ದೇಶವನ್ನು ಆಧುನೀಕರಣದ ನುಡಿಗಟ್ಟಿನ ಉಡುಪು ತೊಡಿಸಿ ಮರೆಮಾಚುತ್ತಿದ್ದರು. ಈ ಆಧುನೀಕರಣದ ನುಡಿಗಟ್ಟುಗಳು ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯಲ್ಲಿನ ಆರ್ಥಿಕ ಕೊರತೆಗಳನ್ನು ಎತ್ತಿತೋರಿಸುತ್ತಿತ್ತು. ಅಭಿವೃದ್ಧಿಶೀಲ ದೇಶಗಳ ಆಧುನೀಕರಣದ ಅಜೆಂಡಾ ಈ ಉದಾಹರಣೆಗಳಿಂದ ಸ್ಫೂರ್ತಿ ಪಡೆದುಕೊಂಡಿವೆ.

ಗ್ರಾಮೀಣ ಪ್ರದೇಶಗಳನ್ನು ವಂಚಿಸಿ, ನಗರ ವಲಯಗಳಿಗೆ ಅನುಕೂಲ ಮಾಡಿಕೊಡುವಂತಹ ಬೆಲೆ ಮತ್ತು ತೆರಿಗೆ ನೀತಿಯನ್ನು ಅನುಸರಿಸುವ ಸುದೀರ್ಘ ಪರಂಪರೆಯೇ ಅಭಿವೃದ್ಧಿಶೀಲ ದೇಶಗಳ ಸರ್ಕಾರಗಳಲ್ಲಿ ಇದೆ. 1970ರಲ್ಲಿ ಆಫ್ರಿಕದ ಹಲವು ದೇಶಗಳು ಕೃಷಿ ಮಾರುಕಟ್ಟೆ ಬೋರ್ಡ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವು. ಇದೊಂದು ಕ್ರೂರವಾದ ತಮಾಷೆ. ಈ ಬೋರ್ಡ್‍ಗಳು ರೈತರು ತಾವು ಬೆಳೆಗಳನ್ನು ಮಾರುಕಟ್ಟೆಗೆ ತಂದು ಮಾರದಂತೆ ಮಾಡಿದವು. ಅನಂತರ ತಾವೇ ಅದನ್ನು ಅತ್ಯಂತ ಕಡಿಮೆ ಬೆಲೆಗೆ ಕೊಂಡು ನಗರದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮಾರುತ್ತಿದ್ದರು. ಬೆಲೆಗಳು ಅದೇ ಮಟ್ಟದಲ್ಲಿ ಇರುವಂತೆ ನೋಡಿಕೊಂಡರು. ಭಾರತ ಮತ್ತು ಚೀನಾದಂತಹ ದೇಶಗಳಲ್ಲಿ ನಗರದ ಗ್ರಾಹಕರಿಗೆ ತುಂಬಾ ಅವಶ್ಯಕವಾಗಿದ್ದ ಕೃಷಿ ಉತ್ಪನ್ನಗಳ ರಫ್ತನ್ನೇ ನಿಷೇಧಿಸಿದರು. ಇಂತಹ ನೀತಿಗಳಿಂದ ಕೃಷಿ ಲಾಭವಿಲ್ಲದ ಉದ್ಯಮವಾಯಿತು. ಜನ ತಮ್ಮ ಜಮೀನುಗಳನ್ನು ಬಿಡುವಂತೆ ಮಾಡಿದವು. ಇಂತಹ ನೀತಿಗಳಿಂದ ವಲಸೆ ಹೋಗಲಾರದ ಅತ್ಯಂತ ಬಡ, ಸಣ್ಣ ಹಾಗೂ ಭೂರಹಿತ ರೈತರ ಬದುಕು ತುಂಬಾ ತೊಂದರೆಗೀಡಾಯಿತು.

ವಲಸೆ ಆರ್ಥಿಕವಾಗಿ ಒಳ್ಳೆಯ ಕ್ರಮ. ಅದನ್ನು ಉತ್ತೇಜಿಸುವುದು ಒಳ್ಳೆಯದು. ಚಲನೆಯಿಂದ – ಅದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಇರಬಹುದು ಅಥವ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಇರಬಹುದು- ಜೀವನ ಮಟ್ಟದಲ್ಲಿ ಅಸಮಾನತೆ ಕಮ್ಮಿಯಾಗುತ್ತದೆ. ಜನರಿಗೆ ತಮ್ಮ ಪ್ರಾಂತ್ಯದಲ್ಲಿನ ಆರ್ಥಿಕ ಏರುಪೇರನ್ನು ತಡೆದುಕೊಳ್ಳುವ ಸಾಮಥ್ರ್ಯ ಸಾಧ್ಯವಾಗುತ್ತದೆ. ವಲಸೆ ಹೋಗುವುದರಿಂದ ಅವರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಅದರಿಂದ ಅವರಿಗೆ ಅನುಕೂಲವಾಗುತ್ತದೆ. ಒಂದು ಪ್ರದೇಶದಲ್ಲಿ ಆರ್ಥಿಕ ವಿಪತ್ತಿನಿಂದ ಸಂಕಷ್ಟ ಬಂದಾಗ ಜನ ಅಲ್ಲಿಂದ ಬೇರೆ ಕಡೆಗೆ ಹೋಗುತ್ತಾರೆ. ಒಂದು ಆರ್ಥಿಕ ವ್ಯವಸ್ಥೆ ತನಗೆ ಎದುರಾದ ಬಿಕ್ಕಟ್ಟನ್ನು ಅರಗಿಸಿಕೊಂಡು ವ್ಯವಸ್ಥೆಯಲ್ಲಿನ ರಚನೆಯನ್ನು ಮಾರ್ಪಡಿಸಿಕೊಳ್ಳುವ ಕ್ರಮವೇ ಇದು.

ಈಗಾಗಲೇ ಶ್ರೀಮಂತ ದೇಶಗಳಲ್ಲಿ ಮತ್ತು ಅನುಕೂಲಕರ ನಗರಗಳಲ್ಲಿ ವಾಸಿಸುತ್ತಿರುವ ನಾವು, ಇಲ್ಲಿ ಎಲ್ಲವೂ ಸೊಗಸಾಗಿದೆ ಹಾಗಾಗಿ ಎಲ್ಲರೂ ಇಲ್ಲಿಗೆ ಬರಲು ಬಯಸುತ್ತಾರೆ ಎಂದು ಭಾವಿಸಿಕೊಳ್ಳುತ್ತಿದ್ದೇವೆ. ಹೀಗೆ ಜನರನ್ನು ಆಕರ್ಷಿಸುವ ಯಶಸ್ವಿ ಆರ್ಥಿಕತೆ ಅರ್ಥಶಾಸ್ತ್ರಜ್ಞರಿಗೆ ಒಳ್ಳೆಯ ವಿಚಾರ. ಆದರೆ ಅಭಿವೃದ್ಧಿಶೀಲ ದೇಶಗಳ ನಗರ ನಿವಾಸಿಗಳಿಗೆ ಅಥವಾ ಶ್ರೀಮಂತ ದೇಶಗಳ ನಿವಾಸಿಗಳಿಗೆ ಇದು ಗಾಬರಿಯ ವಿಷಯ. ಇಡೀ ಪ್ರಪಂಚದ ಜನ ತಾವಿರುವ ಪ್ರದೇಶಗಳಿಗೆ ಬಂದುಬಿಡುತ್ತಾರೆ ಎನ್ನುವ ಕಲ್ಪನೆಯೇ ಅವರಲ್ಲಿ ಭೀತಿ ಹುಟ್ಟಿಸುತ್ತದೆ. ಉದ್ಯೋಗ, ವಸತಿ ಮತ್ತು ವಾಹನ ನಿಲ್ದಾಣಗಳ ಕೊರತೆ ಈಗಾಗಲೇ ಇದೆ. ಇನ್ನು ಅವರೆಲ್ಲಾ ಬಂದು, ಕೊರತೆಯಿರುವ ಈ ಸಂಪನ್ಮೂಲಗಳಿಗಾಗಿ ತಮ್ಮೊಡನೆ ಕಾದಾಡುವುದನ್ನು ಕಲ್ಪಿಸಿಕೊಂಡೇ ಗಾಬರಿಯಾಗುತ್ತಾರೆ. ಹೊರಗಿನವರು ಬರುವುದರಿಂದ ಸ್ಥಳೀಯರ ಸಂಬಳ ಮತ್ತು ಉದ್ಯೋಗದ ಅವಕಾಶ ಕಡಿಮೆಯಾಗುತ್ತದೆ ಎಂಬ ಆಲೋಚನೆಯೇ ತಪ್ಪು. ಆದರೆ ತೃತೀಯ ಜಗತ್ತಿನಲ್ಲಿ ಇನ್ನೂ ಅರೆಬರೆ ನಿರ್ಮಿಸಿರುವ ನಗರಗಳಲ್ಲಿ ಜನಸಂದಣಿ ಹೆಚ್ಚಾಗುತ್ತದೆ ಎನ್ನುವುದು ಸ್ವಲ್ಪ ಮಟ್ಟಿಗೆ ನಿಜ.

ವಲಸಿಗರು ನಮ್ಮನ್ನು ಮೀರಿಸಿ ಮೇಲುಗೈ ಸಾಧಿಸಬಹುದೆಂಬ ಎಂಬ ಹೆದರಿಕೆಯೂ ಅವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಕ್ಕೆ ಅಡ್ಡಿಯಾಗುತ್ತದೆ. ನಮಗಿಂತ ಭಿನ್ನ ಸಂಸ್ಕøತಿಯ ಜನ ದೊಡ್ಡ ಪ್ರಮಾಣದಲ್ಲಿ ಬಂದರೆ (ಇದು ಭಾರತದೊಳಗೇ ಜನ ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಬಂದು ನೆಲೆಸುವ ವಿಷಯದಿಂದ ಮೊದಲ್ಗೊಂಡು ಮೆಕ್ಸಿಕನ್ನರು ಅಮೆರಿಕೆಗೆ ಬಂದು ನೆಲೆಸುವ ವಿಷಯದವರೆಗೆ ಎಲ್ಲದಕ್ಕೂ ಅನ್ವಯವಾಗುತ್ತದೆ) ಅವರು ಈ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳುತ್ತಾರಾ, ಅಥವಾ ಈ ಸಂಸ್ಕøತಿಯನ್ನು ಬದಲಿಸಿಬಿಡುತ್ತಾರಾ, ಅಥವಾ ಅವರ ಸಂಸ್ಕøತಿ ಸಂಪೂರ್ಣವಾಗಿ ನಮ್ಮ ಸಂಸ್ಕøತಿಯೊಳಗೆ ಬೆರೆತು, ತನ್ನ ಅಸ್ಮಿತೆಯನ್ನೇ ಕಳೆದುಕೊಂಡು, ಜಾಗತೀಕರಣಗೊಂಡು ಯಾವ ರುಚಿಯೂ ಇಲ್ಲದ ಏಕರೂಪಿ ಸಂಸ್ಕøತಿ ಸೃಷ್ಟಿಯಾಗಿಬಿಡುತ್ತದಾ?

ಆದರೆ ನಾವು ಅಂತಹ ಕಾಲ್ಪನಿಕ ಸ್ವರ್ಗಕ್ಕೆ ಅಥವಾ ನರಕಕ್ಕೆ ಹತ್ತಿರದಲ್ಲೂ ಇಲ್ಲ. ನಾವು ಭಾವಿಸಿದಂತೆ ಜನ ಆರ್ಥಿಕವಾಗಿ ಯಶಸ್ವಿಯಾಗಿರುವ ಸ್ಥಳಗಳ ಆಕರ್ಷಣೆಗೆ ಒಳಗಾಗಿಲ್ಲ. ವಾಸ್ತವವಾಗಿ ಒದ್ದಾಡಿಕೊಂಡಾದರೂ ಅವರು ತಮ್ಮ ಊರಿನಲ್ಲೇ ಇರಲು ಬಯಸುತ್ತಾರೆ.  ಅಂದರೆ ಆಂತರಿಕ ಮತ್ತು ಬಾಹ್ಯ ವಲಸೆಯನ್ನು ಉತ್ತೇಜಿಸುವುದು ನಮ್ಮ ನೀತಿಯ ಆದ್ಯತೆಯಾಗಬೇಕು, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ಈ ಹಿಂದೆ ಮಾಡಿರುವಂತೆ ಜನರ ಮೇಲೆ ಒತ್ತಾಯ ತರಬಾರದು. ಹಾಗೆಯೇ ಕೆಟ್ಟ ರೀತಿಯ ಆರ್ಥಿಕ ಪ್ರೋತ್ಸಾಹವನ್ನು ಕೊಡಬಾರದು. ವಲಸೆಗೆ ಇರುವ ಮುಖ್ಯ ಅಡ್ಡಿಆತಂಕಗಳನ್ನು ನಿವಾರಿಸಬೇಕು. ಆ ಮೂಲಕ ವಲಸೆಯನ್ನು ಸರಾಗಗೊಳಿಸಬೇಕು.

ಇಡೀ ಪ್ರಕ್ರಿಯೆಯನ್ನು ಸರಳೀಕರಿಸಿ, ಸುಗಮಗೊಳಿಸಬೇಕು. ಜನರಲ್ಲಿ ಆ ಬಗ್ಗೆ ಸಂಪೂರ್ಣ ತಿಳುವಳಿಕೆ ಮೂಡಿಸಬೇಕು. ಆಗ ಕೆಲಸಗಾರ ಬಳಿ ವಲಸೆಯ ಖರ್ಚು ಮತ್ತು ದೊರಕುವ ಲಾಭ ಎರಡರ ಬಗ್ಗೆಯೂ ನಿಖರವಾದ ಮಾಹಿತಿ ಇರುತ್ತದೆ. ನಿರ್ಧಾರ ತೆಗೆದುಕೊಳ್ಳುವುದು ಸಲೀಸಾಗುತ್ತದೆ. ವಲಸೆಗಾರರು ಮತ್ತು ಅವರ ಕುಟುಂಬದವರಿಗೆ ಹಣ ಕಳುಹಿಸುವ ಮತ್ತು ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಿದರೆ ವಲಸೆಗಾರರಿಗೆ ತಾವು ಏಕಾಂಗಿ ಎನ್ನುವ ಭಾವನೆ ಹೋಗುತ್ತದೆ. ಸೋಲಿನ ಭೀತಿ ವಲಸೆಗಾರರನ್ನು ಸದಾ ಭೂತಾಕಾರವಾಗಿ ಕಾಡುತ್ತಿರುತ್ತದೆ. ವಿಫಲತೆಯಿಂದ ಅವರನ್ನು ರಕ್ಷಿಸುವ ಯಾವುದಾದರೊಂದು ವಿಮೆಯ ಬಗ್ಗೆ ಚಿಂತಿಸುವುದು ಒಳ್ಳೆಯದು. ಬಾಂಗ್ಲಾದೇಶದಲ್ಲಿ ಹೀಗೆ ಮಾಡಿದಾಗ ಅದು ಒಳ್ಳೆಯ ಪರಿಣಾಮ ಬೀರಿತ್ತು.

ಸ್ಥಳೀಯರಿಗೆ ವಲಸಿಗರನ್ನು ಸ್ವೀಕರಿಸುವುದಕ್ಕೆ ಸಾಧ್ಯವಾಗಬೇಕು. ಅದಕ್ಕೆ ವಲಸಿಗರು ಸ್ಥಳೀಯರ ಜೊತೆ ಒಂದಾಗುವ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. ಅವರಿಗೆ ವಸತಿ ಸೌಕರ್ಯವನ್ನು ಕಲ್ಪಿಸಿಕೊಡುವುದು, ವಲಸೆ ಬರುವುದಕ್ಕೆ ಮೊದಲೇ ಅವರಿಗೆ ಮಾಡಲು ಸೂಕ್ತವಾಗುವ ಉದ್ಯೋಗ ಯಾವುದೆಂದು ಗುರುತಿಸುವುದು, ಮಕ್ಕಳ ಆರೈಕೆಗೆ ನೆರವಾಗಲು ವ್ಯವಸ್ಥೆ ಮಾಡುವುದು, ಮುಂತಾದ ಕ್ರಮಗಳಿಂದ ಹೊಸಬರಿಗೆ ಬೇಗನೆ ಹೊಂದಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಈ ಸಲಹೆಗಳು ದೇಶದೊಳಗಿನ ಹಾಗೂ ಅಂತಾರಾಷ್ಟ್ರೀಯ ಎರಡೂ ವಲಸೆಗಳಿಗೆ ಅನ್ವಯಿಸುತ್ತದೆ. ಇದರಿಂದ ವಲಸೆ ಹೋಗಲು ಹಿಂಜರಿಕೆ ಇರುವವರನ್ನು ವಲಸೆಗೆ ಹೋಗುವಂತೆ ಪ್ರೋತ್ಸಾಹಿಸುವುದಕ್ಕೆ ಸಾಧ್ಯವಾಗುತ್ತದೆ. ಜೊತೆಗೆ ತುಂಬಾ ಬೇಗ ಅತಿಥೇಯ ಸಮುದಾಯದ ಸಹಜ ಬದುಕಿನ ಭಾಗವಾಗುವುದಕ್ಕೆ ಅವರಿಗೆ ಸಾಧ್ಯವಾಗುತ್ತದೆ. ಆದರೆ ನಾವೀಗ ಹೆಚ್ಚುಕಡಿಮೆ ಅದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಲ್ಲಿದ್ದೇವೆ. ಎಲ್ಲೋ ಕೆಲವು ಸಂಸ್ಥೆಗಳು ಮಾತ್ರ ನಿರಾಶ್ರಿತರಿಗೆ ಸಹಾಯ ಮಾಡುತ್ತಿವೆ. ಉಳಿದಂತೆ ಅವರಿಗೆ ಹೊಂದಿಕೊಳ್ಳುವುದಕ್ಕೆ ಅನುಕೂಲ ಆಗುವಂತಹ ಯಾವ ಪ್ರಯತ್ನಗಳೂ ಆಗುತ್ತಿಲ್ಲ. ವಿದೇಶದಿಂದ ಬಂದ ವಲಸೆಗಾರರಿಗೆ ಕಾನೂನುಬದ್ಧವಾಗಿ ಕೆಲಸ ಮಾಡುವ ಹಕ್ಕು ದೊರೆಯುವುದು ಕಷ್ಟ. ಅದಕ್ಕೆ ಹಲವು ಎಡರುತೊಡರುಗಳಿವೆ. ಇನ್ನು ದೇಶದೊಳಗೆ ವಲಸೆಗಾರರಿಗೆ ತಂಗಲು ಸ್ಥಳವಿಲ್ಲ. ಹತ್ತಾರು ಅವಕಾಶಗಳು ಇರುವಂತೆ ತೋರಿದರೂ, ಅವರು ಸಿಕ್ಕ ಮೊದಲ ಕೆಲಸವನ್ನೇ ಉಳಿಸಿಕೊಳ್ಳುವುದಕ್ಕೆ ಹೆಣಗುವ ಪರಿಸ್ಥಿತಿಯಲ್ಲಿದ್ದಾರೆ.

ವಲಸೆಗೆ ಬರುತ್ತಿರುವ ಪ್ರತಿಕ್ರಿಯೆಯ ಹಿಂದಿರುವ ರಾಜಕೀಯಕ್ಕೆ ಕೇವಲ ಅರ್ಥಶಾಸ್ತ್ರದ ತಪ್ಪು ಗ್ರಹಿಕೆ ಮಾತ್ರ ಕಾರಣವಲ್ಲ, ಗುರುತಿನ ರಾಜಕಾರಣವೂ ಅದಕ್ಕೆ ಬಹುಮಟ್ಟಿಗೆ ಕಾರಣ ಎನ್ನುವುದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅರ್ಥಶಾಸ್ತ್ರ ಮತ್ತು ರಾಜಕಾರಣಗಳ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲ ಎನ್ನುವುದು ಹೊಸ ವಿಷಯವೇನಲ್ಲ. ಐರೋಪ್ಯ ವಲಸೆಯ ಸುವರ್ಣಯುಗದಲ್ಲಿ ಐರೋಪ್ಯ ವಲಸಿಗರನ್ನು ಬರಮಾಡಿಕೊಂಡ ಅಮೆರಿಕೆಯ ನಗರಗಳೆಲ್ಲವೂ ಅವರಿಂದ ಆರ್ಥಿಕವಾಗಿ ತುಂಬಾ ಅನುಕೂಲ ಪಡೆದುಕೊಂಡವು. ಹಾಗಿದ್ದಾಗ್ಯೂ ವಲಸಿಗರ ವಿರುದ್ಧ ವ್ಯಾಪಕವಾದ ದ್ವೇಷಪೂರಿತ ರಾಜಕೀಯ ಪ್ರತಿಕ್ರಿಯೆ ವ್ಯಕ್ತವಾಯಿತು. ವಲಸೆಗೆ ಪ್ರತಿಕ್ರಿಯೆಯಾಗಿ ನಗರಗಳು ತೆರಿಗೆಗಳನ್ನು ಮತ್ತು ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸಿದವು. ಸಾರ್ವಜನಿಕ ವೆಚ್ಚದಲ್ಲಿಯೂ ಅಂತರ್‍ಜನಾಂಗೀಯ (ಇಂಟರ್ ಎಥ್ನಿಕ್) ಒಪ್ಪಂದಗಳಿಗೆ ಸಂಬಂಧಿಸಿದ (ಉದಾಹರಣೆಗೆ ಶಾಲೆಗಳು), ಅಥವಾ ಕಡಿಮೆ ಆದಾಯದ ಗುಂಪಿನ ವಲಸಿಗರಿಗೆ (ಚರಂಡಿಗಳು, ಕಸವನ್ನು ಸಂಗ್ರಹಿಸುವುದು, ಮುಂತಾದ ಕೆಲಸ ಮಾಡುತ್ತಿದ್ದ ವಲಸಿಗರಿಗೆ) ನೆರವಾಗುತ್ತಿದ್ದ ಸೇವೆಗಳಿಗೆ ಮಾಡುತ್ತಿದ್ದ ವೆಚ್ಚ ತೀವ್ರವಾಗಿ ಕಡಿತಗೊಂಡಿತು. ವಲಸೆಗಾರರು ಹೆಚ್ಚಾಗಿ ಇರುವ ನಗರಗಳಲ್ಲಿ ವಲಸೆಯನ್ನು ಬೆಂಬಲಿಸಿದ ಡೆಮಾಕ್ರೆಟಿಕ್ ಪಕ್ಷಕ್ಕೆ ಮತಗಳು ಕಡಿಮೆಯಾದವು. ಮತ್ತು ಕನ್ಸರ್ವೇಟಿವ್ ಪಕ್ಷದ ರಾಜಕಾರಣಿಗಳು, ಅದರಲ್ಲೂ ನಿರ್ದಿಷ್ಟವಾಗಿ 1924ರಲ್ಲಿ ನ್ಯಾಷನಲ್ ಆರಿಜಿನ್ಸ್ ಕಾಯಿದೆಯನ್ನು (ಅದು ಅಮೆರಿಕೆಗೆ ನಿರಾತಂಕವಾಗಿ ನಡೆಯುತ್ತಿದ್ದ ವಲಸೆಯನ್ನು ಕೊನೆಗೊಳಿಸಿತು) ಬೆಂಬಲಿಸಿದ ಅಭ್ಯರ್ಥಿಗಳನ್ನು ಜನ ಆಯ್ಕೆ ಮಾಡಿದರು. ತಮ್ಮ ಹಾಗೂ ಹೊಸದಾಗಿ ಬಂದ ವಲಸಿಗರ ನಡುವಿನ ಸಾಂಸ್ಕೃತಿಕ ಅಂತರಕ್ಕೆ ಇದು ಮತದಾರರ ಪ್ರತಿಕ್ರಿಯೆಯಾಗಿತ್ತು. ಜೊತೆಗೆ ಆ ಸಮಯದಲ್ಲಿ ಯಹೂದಿಗಳು ಮತ್ತು ಕ್ಯಾಥೊಲಿಕರನ್ನು ಸಂಪೂರ್ಣವಾಗಿ ಅನ್ಯರು, ಪರಕೀಯರು ಎಂದು ಭಾವಿಸುತ್ತಿದ್ದರು. ಅನಂತರದಲ್ಲಿ ಅವರು ಈ ಸಮಾಜದಲ್ಲಿ ಬೆರೆತುಹೋಗುವ ತನಕ ಇದು ಹೀಗೇ ಮುಂದುವರೆಯಿತು.

ಇತಿಹಾಸ ಮರುಕಳಿಸುತ್ತದೆ ಎನ್ನುವುದು ನಿಜ. ಆದರೆ ಅದು ಎರಡು ಮತ್ತು ಮೂರನೆಯ ಬಾರಿ ಮರುಕಳಿಸಿದಾಗಲೂ ಅದರ ಕಹಿಯೇನೂ ಕಡಿಮೆಯಾಗುವುದಿಲ್ಲ. ಆದರೆ ಹೀಗೆ ಅದು ಹಲವು ಬಾರಿ ಮರುಕಳಿಸುವುದರಿಂದ ಆ ಕೋಪಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಮತ್ತಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.

ಅಂತಿಮವಾಗಿ ಎಷ್ಟೇ ಉತ್ತೇಜನ ನೀಡಿದರೂ ಕೆಲವರು ಮನೆ ಬಿಟ್ಟು ಹೋಗುವುದಿಲ್ಲ ಎನ್ನುವುದನ್ನು ಮರೆಯಬಾರದು. ಜನರ ಈ ಪ್ರವೃತ್ತಿ ಯಾವುದೇ ಅರ್ಥಶಾಸ್ತ್ರಜ್ಞನ ಗ್ರಹಿಕೆಗೆ ವಿರುದ್ಧವಾಗಿದೆ. ಅವರ ನಿರೀಕ್ಷೆಯಂತೆ ಜನ ವರ್ತಿಸುತ್ತಿಲ್ಲ. ಜನರ ಈ ವರ್ತನೆ ಇಡೀ ಅರ್ಥವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜನರ ಈ ವರ್ತನೆ ಬಹಳಷ್ಟು ಆರ್ಥಿಕ ನೀತಿಗಳ ಪರಿಣಾಮವನ್ನು ಪ್ರಭಾವಿಸುತ್ತದೆ. ಹಾಗಾಗಿ ಸಾಮಾಜಿಕ ನೀತಿಯನ್ನು ರೂಪಿಸುವಾಗ ಜನರಲ್ಲಿರುವ ಚಲಿಸಲು ನಿರಾಕರಿಸುವ ಈ ಸ್ವಭಾವವನ್ನೂ ಗಣನೆಗೆ ತೆಗೆದುಕೊಳ್ಳಬೇಕು.

ಅನುವಾದಿತ ಟಿಪ್ಪಣಿ  : ಟಿ.ಎಸ್‌ ವೇಣುಗೋಪಾಲ್ ಮತ್ತು ಶೈಲಜಾ

ಪ್ರತಿಕ್ರಿಯಿಸಿ