ಚಿಪ್ಪುಹಂದಿ ಮತ್ತು ಕೋವಿಡ್-೧೯

ಪ್ರಾಣಿಗಳು ಮತ್ತು ಪರಿಸರದ ಜೊತೆಗಿನ ನಮ್ಮ ಸಂಬಂಧಗಳು ಹದಗೆಡುತ್ತಿರುದರ ಪರಿಣಾಮವಾಗಿ ಕೋವಿಡ್-೧೯ ತರಹದ ರೋಗಗಳ ಸೃಷ್ಟಿಗೆ ಅನುಕೂಲಕರವಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಭವಿಷ್ಯದಲ್ಲಿ ಈ ತರಹದ ಇನ್ನೂ ಹೆಚ್ಚಿನ ರೋಗಗಳು ಬರಲಿವೆ ಎಂದು ಸಿಡ್ನಿ ಮತ್ತುಓಸ್ಲೋ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಟಾಮ್ ವಾನ್ ಡೂರೇನ್ ಬರೆಯುತ್ತಾರೆ.

ಸರ್ವವ್ಯಾಪಿ ರೋಗವಾದ ಕೋವಿಡ್ – ೧೯ ನ ಉಗಮದ ಹಿಂದೆ ಚಿಪ್ಪುಹಂದಿಗಳ ಪಾತ್ರದ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಈ ಗಮನಾರ್ಹ ಜೀವಿಯಬಗ್ಗೆ ತಿಳಿಯದವರಿಗೆ ವಿವರಿಸುವುದಾದರೆ: ಚಿಪ್ಪು ಹಂದಿಗಳು ಅವುಗಳ ಹೆಸರೇ ಸೂಚಿಸುವಂತೆ ದೇಹ ಪೂರ್ತಿ ಚಿಪ್ಪುಗಳಿಂದ ಆವೃತವಾಗಿರುವ, ಇರುವೆ ತಿನ್ನುವ, ಅಪಾಯ ಎದುರಾದಾಗ ತಮ್ಮನ್ನೇ ತಾವು ಚೆಂಡಿನಂತೆ ಗೋಳಾಕಾರವಾಗಿ ಸುತ್ತಿಕೊಂಡು ಉರುಳುವ ಸಣ್ಣ ಗಾತ್ರದ ಪ್ರಾಣಿಗಳು.

ಏಷ್ಯಾ ಮತ್ತು ಆಫ್ರಿಕಾದಲ್ಲಿ ಒಟ್ಟು ಎಂಟು ಪ್ರಭೇದದ ಚಿಪ್ಪುಹಂದಿಗಳಿವೆ. ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಕಾನೂನು ಬಾಹಿರ ವ್ಯಾಪಾರವು ಇವುಗಳನ್ನ ಇಡೀ ಪ್ರಪಂಚದಲ್ಲಿಯೇ ಅತಿಹೆಚ್ಚು ಕಳ್ಳ ಸಾಗಾಣಿಕೆಗೆ ಒಳಪಟ್ಟಿರುವ ಕಾಡಿನ ಸಸ್ತನಿಯನ್ನಾಗಿಸಿರುವಿದರಿಂದ ಹೆಚ್ಚುಕಮ್ಮಿ ಎಲ್ಲ ಪ್ರಭೇದದ ಚಿಪ್ಪುಹಂದಿಗಳು ವಿನಾಶದ ಅಂಚಿಗೆ ಬಂದು ನಿಂತಿವೆ. ಕೋವಿಡ್ -೧೯ ರೋಗದ ತವರಾದ ಚೀನಾದಲ್ಲಿ ಚಿಪ್ಪುಹಂದಿಗಳನ್ನ ತಿನ್ನುವುದನ್ನ ಮತ್ತು ಅವುಗಳ ದೇಹದಭಾಗಗಳ ಉಪಯೋಗವನ್ನ ಕಾನೂನಿನ ಅಡಿಯಲ್ಲಿ ನಿರ್ಬಂಧಿಸಿದ್ದರೂ ಕೂಡ, ಅಲ್ಲಿಯಜನರಿಗೆ ಚಿಪ್ಪುಹಂದಿಗಳು ತುಂಬಾ ರುಚಿಕರವಾದ ಆಹಾರವಾಗಿರುವುದರಿಂದ ಮತ್ತು ಚೀನಾದ ಔಷಧ ಪದ್ದತಿಯಲ್ಲಿ ಈ ಜೀವಿಗಳ ದೇಹದ ಭಾಗಗಳಿಗೆ ತುಂಬಾ ಮಹತ್ವವಿರುವುದರಿಂದ ಇವುಗಳನ್ನ ಪದೇ ಪದೇ ಹಿಡಿದು ಮಾರಲಾಗುತ್ತದೆ.

ಚಿಪ್ಪುಹಂದಿಗಳ ದೇಹದಲ್ಲಿರುವ ವೈರಾಣುಗಳ ಮತ್ತು ಕೋವಿಡ್-೧೯ ವೈರುಣುವಿನ ವಂಶವಾಹಿನಿಗಳ ನಡುವೆ ಶೇಕಡಾ ೯೦ ರಷ್ಟು ಸಾಮ್ಯತೆಗಳಿವೆ ಎಂದು ಹಲವಾರು ವಂಶವಾಹಿನಿ ವಿಶ್ಲೇಷಣೆಗಳು (genetic analyses)ತೋರಿಸಿವೆ. ಆದಕಾರಣ ಕೆಲವು ವಿಜ್ಞಾನಿಗಳು ಕೋವಿಡ್-೧೯ ವೈರಾಣು ಚಿಪ್ಪು ಹಂದಿಗಳಿಂದ ಮನುಷ್ಯರಿಗೆ ಹರಡಿದೆಯೆಂದು ವಾದಿಸುತ್ತಾರೆ. ಈ ವಾದ ಒಂದುವೇಳೆ ಸತ್ಯವಾದರೂ ಕೂಡ, ಈ ವೈರಾಣುಗಳ ನೈಸರ್ಗಿಕ ಆಶ್ರಯದಾತರೆಂದು ನಂಬಲಾದ ಬಾವಲಿಗಳಿಂದ ವೈರಾಣುಗಳು ಚಿಪ್ಪುಹಂದಿಗಳಿಗೆ ಹರಡಿರುವ ಸಾಧ್ಯತೆಗಳಿವೆ.

ಆದರೆ ಈ ಎಲ್ಲ ವಾದಗಳ ನಡುವೆಯೂ ವೈರಾಣು ಮನುಷ್ಯರಿಗೆ ಯಾವ ಪ್ರಾಣಿಯಿಂದ ಬಂದಿರಬಹುದೆಂಬುದರ ಬಗ್ಗೆ ಅನಿಶ್ಚಿತತೆ ಇದೆ. ಉದಾಹರಣೆಗೆ ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನ ಹೇಳುವಂತೆ “ಈ ರೋಗಹರಡುವಲ್ಲಿ ಚಿಪ್ಪುಹಂದಿಗಳ ಪಾತ್ರದಬಗ್ಗೆ ಸಾಕಷ್ಟು ಅನುಮಾನಗಳಿದ್ದರೂ ಕೂಡ ವಂಶವಾಹಿನಿ ವಿಶ್ಲೇಷಣೆಗಳು ಈ ವಾದಕ್ಕೆ ಇನ್ನೂ ನಿರ್ಣಾಯಕವಾದ ಪುರಾವೆಗಳನ್ನು ಒದಗಿಸಿಲ್ಲ” ಆದಕಾರಣ ಮನುಷ್ಯರಿಗೆ ಈ ವೈರಾಣುವನ್ನು ಪಸರಿಸಿದ ಜೀವಿ ಯಾವುದೆಂಬುದರ ಹುಡುಕಾಟ ಇನ್ನೂ ಕೊನೆಗೊಂಡಿಲ್ಲ.

ಈ ಹುಡುಕಾಟ ತುಂಬಾ ಮುಖ್ಯವಾದುದು ಏಕೆಂದರೆ ಈ ವೈರಾಣುವಿನ ಮೂಲ ಯಾವುದೆಂದು ತಿಳಿದುಕೊಳ್ಳುವುದರಿಂದ ಅದು ಯಾವರೀತಿ ಹರಡುತ್ತದೆ ಎಂಬುದರರಬಗ್ಗೆ ಮಾಹಿತಿ ಲಭ್ಯವಾಗಿ ರೋಗನಿಯಂತ್ರಣಕ್ಕೆ ಹೊಸಕ್ರಮಗಳನ್ನ ತೆಗೆದುಕೊಳ್ಳಲು ಸಾಧ್ಯವಾಗಬಹುದು.

ಚಿಪ್ಪುಹಂದಿಗಳ ಬಗ್ಗೆ ಗಮನಹರಿಸುವ ಪ್ರಕ್ರಿಯೆಯು, ಇತರಜೀವಿಗಳ ಜೊತೆ ನಾವು ಹೊಂದಿರುವ ಸಂಬಂಧವು ಅವುಗಳ ಮೇಲೆ ಯಾವರೀತಿಯ ಕೆಟ್ಟ ಪರಿಣಾಮವನ್ನ ಉಂಟುಮಾಡಬಲ್ಲದು ಎಂಬುದರಬಗ್ಗೆ ಆಳವಾಗಿ ಯೋಚಿಸಲು ಆಹ್ವಾನವನ್ನ ನೀಡುತ್ತದೆ ಕೂಡ. ಈಗ ನಾವು ಅನುಭವಿಸುತ್ತಿರುವ ಈ ಸರ್ವವ್ಯಾಪಿರೋಗವು ಇಡೀ ಮನುಕುಲ ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯ ಲಕ್ಷಣವಷ್ಟೆ. ಪರಿಸರ ಮತ್ತು ಜೀವರಾಶಿಗಳ ಜೊತೆ ನಮ್ಮ ಸಂಬಂಧ ಹದಗೆಟ್ಟ ಪರಿಣಾಮವಾಗಿ ಉಧ್ಭವಿಸಿದ ರೋಗವಿದು.

ಪ್ರಾಣಿಮೂಲದಿಂದ ಬರುವ ಕೋವಿಡ್-೧೯ ರ ತರಹದ ರೋಗಗಳು ಇತ್ತೀಚಿಗೆ ಹೆಚ್ಚಾಗತೊಡಗಿವೆ. ಕಳೆದ ಕೆಲವು ದಶಕಗಳಲ್ಲಿ ಕೈಗೊಂಡ ಬಹಳಷ್ಟು ಸಂಶೋಧನೆಗಳ ಪ್ರಕಾರ ಇತ್ತೀಚಿಗೆ ಕಾಣಿಸಿಕೊಳ್ಳುತ್ತಿರುವ ಸಾಂಕ್ರಾಮಿಕ ರೋಗಗಳಲ್ಲಿ ಬಹುಪಾಲು ಪ್ರಾಣಿಮೂಲದಿಂದ ಬಂದವು. ಅದರರ್ಥ ಈ ರೋಗಾಣುಗಳು ಸಾಮಾನ್ಯವಾಗಿ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತಿರುತ್ತವೆ ಮತ್ತು ಸರಿಯಾದ ಸಮಯ,ಸಂದರ್ಭ ಒದಗಿಬಂದಾಗ ಮನುಷ್ಯರಿಗೆ ಪಸರಿಸಬಲ್ಲವು.

ಈಚಿನ ದಶಕಗಳಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ರೋಗಗಳಲ್ಲಿ ಮುಖ್ಯವಾದವುಗಳು ಎಬೋಲಾ, ಎಚ್ ಐ ವಿ, ಸಾರ್ಸ್ ಮತ್ತು ಹಕ್ಕಿಜ್ವರ.

ಈ ಎಲ್ಲ ರೋಗಾಣುಗಳು ತಮಗೆ ಆಶ್ರಯನೀಡಿದ ಪ್ರಾಣಿಗಳ ದೇಹದಿಂದ ಹೊರ ಹರಿದು ಮನುಷ್ಯರ ದೇಹವನ್ನ ಸೇರಿಕೊಳ್ಳಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು: ಪ್ರಾಣಿ ಪಕ್ಷಿಗಳ ಆವಾಸಸ್ಥಾನಗಳ ವಿನಾಶ , ಅತಿಯಾಗಿ ವಿಸ್ತಾರಗೊಳ್ಳುತ್ತಿರುವ ಆಧುನಿಕ ಕೃಷಿ, ಹವಾಮಾನ ಬದಲಾವಣೆ ಮತ್ತು ಬೆಳೆಯುತ್ತಿರುವ ವಿಶೇಷ (Exotic) ಪ್ರಾಣಿಗಳ ಮತ್ತು ಕಾಡು ಪ್ರಾಣಿ ಮಾಂಸದ ಮಾರುಕಟ್ಟೆ ( ವನ್ಯಜೀವಿ ಫಾರ್ಮ್ ಗಳಿಂದ ಬರುವ ಮಾಂಸವನ್ನೂ ಒಳಗೊಂಡು )

ಸರಳವಾಗಿ ಹೇಳಬೇಕೆಂದರೆ ಯಾವಯಾವ ಮಾನವಚಟುವಟಿಕೆಗಳು ಪ್ರಾಣಿ ಜನ್ಯ ಸಾಂಕ್ರಾಮಿಕ ರೋಗಗಳ ಉಗಮಕ್ಕೆ ಕಾರಣವಾಗುತ್ತಿವೆಯೋ ಅವೇ ಚಟುವಟಿಕೆಗಳು ಜೀವವೈವಿಧ್ಯದ ವಿನಾಶಕ್ಕೂ ಹಾಗೂ ದೊಡ್ಡ ದೊಡ್ಡ ಆಧುನಿಕ ಫಾರ್ಮಗಳಲ್ಲಿ ಪ್ರಾಣಿಗಳನ್ನ ಬೆಳೆಸಿ ಅವುಗಳ ಹಿಂಸೆಗೂ ಕಾರಣವಾಗಿವೆ.

ಹಕ್ಕಿಜ್ವರದ ಉದಾಹರಣೆಯನ್ನೇ ತೆಗೆದುಕೊಳ್ಳಿ ಈ ರೋಗ ಜಗತ್ತಿನ ಹಲವು ಭಾಗಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ ಮತ್ತು ಕೆಲವು ದೇಶಗಳಲ್ಲಿ ಈಗಾಗಲೇ ಹೆಚ್ಚುಕಡಿಮೆ ಶಾಶ್ವತವಾಗಿ ನೆಲೆಯೂರಿ ಸ್ಥಳೀಯ ರೋಗವೇ (endemic) ಆಗಿಬಿಟ್ಟಿದಿದೆ. ವಿಶ್ವ ಅರೋಗ್ಯ ಸಂಸ್ಥೆ ಹೇಳುವಂತೆ ‘ಹಕ್ಕಿಜ್ವರದ ರೋಗಾಣುಗಳು ಬಹಳಷ್ಟು ನೀರುಹಕ್ಕಿಗಳ ದೇಹದಲ್ಲಿ ಯಾವರೋಗಲಕ್ಷಣವನ್ನೂ ಉಂಟುಮಾಡದೆ ಮೌನವಾಗಿ ಕುಳಿತಿರುವುದರಿಂದ’ ಈ ರೋಗವನ್ನ ಅಷ್ಟು ಸುಲಭವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಈ ರೋಗಾಣುಗಳು ನೀರುಹಕ್ಕಿಗಳಿಂದ ಕೋಳಿಗಳಿಗೆ ಹರಡಿ ಅಲ್ಲಿಂದ ಮನುಷ್ಯದೇಹವನ್ನ ಸೇರುತ್ತವೆ.
ಕೋಳಿಗಳನ್ನು ದೊಡ್ಡ ಫಾರ್ಮ್ ಗಳಲ್ಲಿ ಕೂಡಿಹಾಕಿ ಅವುಗಳಿಗೆ ಹಕ್ಕಿಜ್ವರದ ವೈರಾಣು ಹರಡದಂತೆ ತಡೆಯಬಹುದೆಂದು ನಾವು ಅಂದುಕೊಂಡರೆ ಅದು ಶುದ್ಧ ಸುಳ್ಳು. ಬಹಳಷ್ಟು ಸಂಶೋಧನೆಗಳು ತಿಳಿಸಿರುವಂತೆ ದೊಡ್ಡ ಅತ್ಯಾಧುನಿಕ ಫಾರ್ಮ್ ಗಳೇ ಹಕ್ಕಿಜ್ವರದ ಬಿಕ್ಕಟ್ಟಿನ ಮೂಲವಾಗಿವೆ.

ಈತರಹದ ಫಾರ್ಮ್ ಗಳಲ್ಲಿ ಕೋಳಿಗಳ ಸಂಖ್ಯೆ, ದಟ್ಟಣೆ ಅಧಿಕವಾಗಿರುವುದರಿಂದ ಮತ್ತು ಇಲ್ಲಿರುವ ಕೋಳಿಗಳಲ್ಲಿ ವಂಶವಾಹಿನಿಗಳ ವೈವಿಧ್ಯತೆ ಬಹಳ ಕಡಿಮೆಯಿರುವುದರಿಂದ ಹಕ್ಕಿ ಜ್ವರ ಸುಲಭವಾಗಿ ತನ್ನ ಹಿಡಿತಸಾಧಿಸಿ ಹರಡುತ್ತದೆ . ಕೆಲವು ಸಂದರ್ಭಗಳಲ್ಲಿ ಫಾರ್ಮಿನ ಕಟ್ಟಡಗಳಲ್ಲಿ ಕೋಳಿಗಳ ಉಸಿರಾಟಕ್ಕೆ ಸಹಾಯವಾಗಲೆಂದು ಅಳವಡಿಸಿರುವ ವಾತಾಯನ ಘಟಕಗಳು (ventilation units) ರೋಗಾಣುಗಳನ್ನು ಹೊರಗಡೆಯ ಗಾಳಿಗೆ ಸೇರಿಸುತ್ತಿರುವುದು ಬೆಳಕಿಗೆಬಂದಿದೆ . ಹಾಗೆಯೇ ಕೋಳಿಫಾರ್ಮ ಗಳ ತ್ಯಾಜ್ಯಗಳಮೂಲಕ ರೋಗಾಣುಗಳು ಮಣ್ಣನ್ನೂ ಸೇರುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ರೋಗಾಣುಗಳು, ಸಾಕಿದ ಮತ್ತು ಕಾಡಿನ ಪಕ್ಷಿಗಳೆರಡಕ್ಕೂ ಹರಡುತ್ತವೆ .

ಇನ್ನು ನೀಫಾ ವೈರಾಣುವಿನ ಕತೆಗೆ ಬಂದರೆ: ೧೯೯೦ ರ ದಶಕದಕೊನೆಯ ಭಾಗದಲ್ಲಿ ಮೊದಲಬಾರಿಗೆ ಮಲೇಷಿಯಾದಲ್ಲಿ ಏಕಾಏಕಿ ಈ ವೈರಾಣು ತಲೆದೋರಿತು. ಈ ವೈರಾಣುವಿನ ನೈಸರ್ಗಿಕ ಆಶ್ರಯದಾತರಾದ ಹಣ್ಣು ತಿನ್ನುವ ಬಾವಲಿಗಳು,ಅತಿಹೆಚ್ಚು ದಟ್ಟಣೆಯಿಂದ ಕೂಡಿದ ಒಂದು ಹಂದಿ ಫಾರ್ಮಿನಲ್ಲಿ ನೆಟ್ಟ ಹಣ್ಣಿನ ಮರಗಳಿಂದ ಆಕರ್ಷಿಸಲ್ಪಟ್ಟು ಅಲ್ಲಿರುವ ಹಂದಿಗಳಿಗೆ ವೈರಾಣುಗಳನ್ನ ಹರಡಿದವು. ಆ ನಂತರ ರೋಗಗ್ರಸ್ಥ ಹಂದಿಗಳ ಮೂಲಕ ವೈರಾಣು ಮನುಷ್ಯರ ದೇಹ ಸೇರಿತು.

ಇಲ್ಲಿ ಇನ್ನೊಂದು ಬಹುಮುಖ್ಯ ವಿಷಯದ ಬಗ್ಗೆ ಗಮನಹರಿಸಬೇಕು. ಪ್ರಾಣಿಮೂಲದಿಂದ ಬರುವ ರೋಗಗಳ ಬಗ್ಗೆ ಚರ್ಚಿಸುವಾಗ ರೋಗ ಉಗಮಕ್ಕೆ ಕೆಲವು ಜನಾಂಗದವರು, ಅಥವಾ ದೇಶದವರು ಮಾತ್ರ ಕಾರಣವೆಂದು ಅವರನ್ನು ನಿಂಧಿಸುವ ಅಪಾಯವಿದೆ. ಉದಾಹರಣೆಗೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್ -೧೯ ರೋಗವನ್ನ “ವಿದೇಶಿ ಕಾಯಿಲೆ ” ಎಂದು ಲೇವಡಿ ಮಾಡಿದರು. ಹಾಗೆಯೆ ಜೆನ್ ಫಾಂಗ್ ಬರೆದಿರುವಂತೆ, ೨೦೦೩ ರಲ್ಲಿ ಸಾರ್ಸ್ ರೋಗ ತಲೆದೋರಿದಾಗ ಹೆಚ್ಚು ಕಡಿಮೆ ಎಲ್ಲ ತರಹದ ಪ್ರಾಣಿ ಪಕ್ಷಿ ಮತ್ತು ಕೀಟಗಳನ್ನ ತಿನ್ನುವ ಚೀನಿಯರ ವಿಲಕ್ಷಣ ಅಭ್ಯಾಸ ಮತ್ತು ಶುಚಿತ್ವದ ಬಗ್ಗೆ ಅವರಿಗಿರುವ ಅಸಡ್ಡೆಯ ಫಲಿತಾಂಶವೇ ಈ ರೋಗ ಎಂದು ಚೀನಿಯರನ್ನು ಹೀನಾಯವಾಗಿ ನಿಂದಿಸಲಾಯಿತು.

ಪ್ರತಿ ರೋಗಗಳಿಗಳಿಗೂ ತಮ್ಮದೇ ಆದ ನಿರ್ಧಿಷ್ಟವಾದ ಕತೆಗಳಿದ್ದರೂ ಕೂಡ (ದೇಶ, ಜನಾಂಗ ಇತ್ಯಾದಿ) ವಾಸ್ತವ ಏನೆಂದರೆ ಈ ಎಲ್ಲ ರೋಗಗಳ ಉಗಮಕ್ಕೆ ಪ್ರಮುಖ ಕಾರಣಗಳಾದ ಪ್ರಾಣಿಹಿಂಸೆ,ಅವುಗಳ ಆವಾಸಸ್ಥಾನಗಳ ವಿನಾಶ ಮತ್ತು ಜೀವ ವೈವಿಧ್ಯದ ನಾಶಗಳು ಈ ಜಗತ್ತಿನ ಯಾವುದೇ ಒಂದು ದೇಶ ಜನಾಂಗ ಅಥವಾ ಜಾತಿಯಿಂದ ಮಾತ್ರ ಆದದ್ದಲ್ಲ, ಬದಲಾಗಿ ಜಗತ್ತಿನ ಬಹುತೇಕ ಜನರ ಪಾತ್ರ ಇದರಲ್ಲಿದೆ.

ಉದಾಹರಣೆಗೆ ೧೯೯೦ ರ ದಶಕದ ಕೊನೆಯ ವರ್ಷಗಳಲ್ಲಿ ಬ್ರಿಟನ್ ದೇಶದಲ್ಲಿ ತಲೆದೋರಿದ ಹುಚ್ಚು ಹಸುವಿನ ರೋಗದಬಗ್ಗೆ ಚಿಂತಿಸಬಹುದು. ಸತ್ತ ಹಸು ಮತ್ತು ಕುರಿಗಳ ದೇಹದಿಂದ ಅಗ್ಗದ, ಪ್ರೊಟೀನ್ ಯುಕ್ತ ಆಹಾರವನ್ನ ತಯಾರಿಸಿ ಅವುಗಳನ್ನು ಹಸುಗಳಿಗೆ ತಿನ್ನಲು ನೀಡಿದ್ದರಿಂದ ಈ ರೋಗ ಹುಟ್ಟಿಕೊಂಡಿತು. ಈ ಪ್ರಕ್ರಿಯೆಯಲ್ಲಿ ಸಸ್ಯಾಹಾರಿ ಹಸುಗಳು ಮಾಂಸಾಹಾರಿಗಳಾಗಿ ಪರಿವರ್ತನೆಗೊಂಡಿದ್ದಲ್ಲದೆ ಸ್ವಜಾತಿ ಭಕ್ಷಕಗಳೂ ಆಗಿಬಿಟ್ಟವು. ಈ ರೋಗ ತಗಲಿದ ಹಸುವಿನ ಮಾಂಸ ಸೇವಿಸಿದ ಜನ ಕ್ರೆಸ್ಟ್ಜ್ ಫೆಲ್ಡ್ ಯಾಕೋಬ (Creutzfeldt-Jakob) ರೋಗವೆಂದು ಕರೆಯುವ ಮಾರಣಾಂತಿಕ ಮೆದುಳಿನ ಸಮಸ್ಯೆಯಿಂದ ನರಳಲು ತೊಡಗಿದರು.

ಅದೇತರ ಕಾಡುಪ್ರಾಣಿಗಳ ಆವಾಸಸ್ಥಾನಗಳ ವಿನಾಶದಿಂದಾಗಿ ಜಗತ್ತಿನಾದ್ಯಂತ ಬಹಳಷ್ಟು ಪ್ರಾಣಿಜನ್ಯರೋಗಗಳು ಹೊರಹೊಮ್ಮುತ್ತಿವೆ. ನೀಫಾ ವೈರಾಣುವಿನ ಹತ್ತಿರದ ಸಂಬಂಧಿಯಾದ ಹೆಂಡ್ರಾ ವೈರಾಣು ಆಸ್ಟ್ರೇಲಿಯಾದಲ್ಲಿ ಹಣ್ಣು ತಿನ್ನುವ ಬಾವಲಿಗಳಲ್ಲಿ ಕಂಡುಬರುತ್ತದೆ. ಆಸ್ಟ್ರೇಲಿಯಾದಲ್ಲಿ ಬಾವಲಿಗಳ ವಾಸ ಸ್ಥಾನಗಳಾದ ಕಾಡುಗಳನ್ನು ಕಡಿದು ಆ ಜಾಗದಲ್ಲಿ ಕೃಷಿ ಭೂಮಿಯನ್ನ ವಿಸ್ತರಿಸಿದ ಪರಿಣಾಮ ಬಾವಲಿಗಳ ದೇಹದಲ್ಲಿ ವಾಸವಾಗಿದ್ದ ಹೆಂಡ್ರಾ ವೈರಾಣುಗಳು ಕುದುರೆಗಳ ಮೂಲಕ ಮನುಷ್ಯರ ದೇಹವನ್ನು ಸೇರಿಬಿಟ್ಟವು.

ಕಳೆದ ಕೆಲವು ದಶಕಗಳಿಂದ ಹವಾಮಾನ ಬದಲಾವಣೆ, ತೋಟದ ಮಾಲೀಕರು ಮತ್ತು ಅಲ್ಲಿ ವಾಸವಿರುವ ಕೆಲವು ಸಮುದಾಯಗಳು ನೀಡುತ್ತಿರುವ ಮಿತಿ ಮೀರಿದ ಹಿಂಸೆಯಿಂದಾಗಿ ಬಾವಲಿಗಳು ತುಂಬಾ ಒತ್ತಡಕ್ಕೆ ಒಳಗಾಗಿವೆ. ಈಗ ಅಧಿಕವಾಗಿ ವ್ಯಾಪಿಸುತ್ತಿರುವ ಹೆಂಡ್ರಾ ವೈರಾಣುವಿನ ಸೋಂಕಿಗೂ ಮತ್ತು ಬಾವಲಿಗಳಲ್ಲಿ ಅಧಿಕಗೊಳ್ಳುತ್ತಿರುವ ಒತ್ತಡಕ್ಕೂ ಸಂಬಂಧ ಇದ್ದಂತೆ ಕಾಣುತ್ತಿದೆ.

ಅಮೇರಿಕಾ ದೇಶದಲ್ಲಿ ಕಂಡು ಬಂದ ಪಶ್ಚಿಮ ನೈಲ್ ವೈರಾಣು ಮತ್ತು ಲೈಮ್ ರೋಗಗಳೂ ಕೂಡ ವನ್ಯ ಜೀವಿಗಳ ಆವಾಸಸ್ಥಾನಗಳ ವಿನಾಶ ಮತ್ತು ನಶಿಸಿ ಹೋಗುತ್ತಿರುವ ಜೀವ ವೈವಿಧ್ಯದ ಪರಿಣಾಮವಾಗಿಯೇ ಮನುಷ್ಯರಿಗೆ ಪಸರಿಸಿದವು. ಈ ಎರಡೂ ರೋಗಾಣುಗಳು ತಮ್ಮ ಆಶ್ರಯದಾತ ಜೀವಿಗಳಿಂದ ತಮ್ಮ ವಾಹಕಗಳಾದ ಸೊಳ್ಳೆ ಮತ್ತು ಉಣ್ಣೆ ಗಳ ಮೂಲಕ (ಅನುಕ್ರಮವಾಗಿ) ಮಾನವರ ದೇಹವನ್ನ ಸೇರುತ್ತವೆ. ಮಿತಿ ಮೀರಿದ ಅಭಿವೃದ್ಧಿ ಚಟುವಟಿಕೆಗಳಿಂದ ಪಶು ಪಕ್ಷಿ ಕೀಟಗಳ ಆವಾಸಸ್ಥಾನ ಛಿದ್ರಗೊಂಡು ಮನುಷ್ಯರು ಮತ್ತು ಇವೆರಡು ರೋಗವಾಹಕಗಳ ನಡುವಿನ ಸಂಪರ್ಕ ಅಧಿಕಗೊಳ್ಳತೊಡಗಿತು. ಇನ್ನೊಂದೆಡೆ ಸುತ್ತಲಿನ ಪರಿಸರದಲ್ಲಿ ಪಕ್ಷಿ ಮತ್ತು ಸಸ್ತನಿಗಳ ವೈವಿಧ್ಯತೆ ಕುಸಿಯುತ್ತಿದ್ದಂತೆ ಇವೆರಡು ರೋಗವಾಹಕಗಳು ಅನಿವಾರ್ಯವಾಗಿ ರೋಗಾಣುವಿನ ಆಶ್ರಯದಾತ ಜೀವಿಗಳ ರಕ್ತವನ್ನೇ ಹೆಚ್ಚಾಗಿ ಹೀರತೊಡಗಿದವು. ಆದಕಾರಣ ರೋಗಾಣುಗಳನ್ನ ತಮ್ಮ ದೇಹದಲ್ಲಿ ಹೊಂದಿದ ಸೊಳ್ಳೆ ಮತ್ತು ಉಣ್ಣೆಗಳ ಪ್ರಮಾಣ ಸಹಜವಾಗಿಯೇ ಅಧಿಕಗೊಂಡಿತು.

ಈ ಮೇಲಿನ ವಿವರಗಳ ಮೂಲಕ ನಮಗೆ ಮನದಟ್ಟಾಗುವುದೇನೆಂದರೆ: ಹದ ತಪ್ಪಿದ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧದಿಂದಾಗಿ ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳು ಹೊರಹೊಮ್ಮುತ್ತಿವೆ. ಪ್ರಾಣಿಗಳನ್ನ ಶೋಷಣೆಗೊಳಪಡಿಸಿರುವ, ಅವುಗಳನ್ನ ಬಂಧನದಲ್ಲಿಟ್ಟಿರುವ ಮತ್ತು ಅವುಗಳನ್ನ ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತಿರುವುದರ ಪರಿಣಾಮದ ಫಲಿತಾಂಶವೇ ಈ ಎಲ್ಲ ರೋಗಗಳು.

ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನ ಉತ್ಪಾದಿಸುತ್ತಿರುವುದು ಮತ್ತು ಭೂಮಿಯನ್ನ ಅತಿಯಾದ ಪ್ರಮಾಣದಲ್ಲಿ ಮನುಷ್ಯರು ತಮ್ಮ ಬಳಕೆಗಾಗಿ ಅತಿಕ್ರಮಿಸುತ್ತಿರುವುದು ನಮ್ಮ ಇಂದಿನ ಪರಿಸ್ಥಿತಿಗೆ ಒಂದು ಮುಖ್ಯವಾದ ಕಾರಣವಾದರೆ, ಮಾಂಸ ಮತ್ತಿತರ ಪ್ರಾಣಿಜನ್ಯ ಆಹಾರ ಗಳನ್ನ ಹಿಂದೆಂದಿಗಿಂತ ಅಧಿಕಪ್ರಮಾಣದಲ್ಲಿ ಬಳಸುತ್ತಿರುವುದು ಇನ್ನೊಂದು ಕಾರಣವಾಗಿದೆ. ಹವಾಮಾನ ಬದಲಾವಣೆ ಮತ್ತು ಪ್ರಾಣಿಮೂಲದಿಂದ ಬರುವ ಸಾಂಕ್ರಾಮಿಕ ರೋಗಗಳೆರಡೂ ಆಧುನಿಕ ಆಹಾರ ವ್ಯವಸ್ಥೆಯ ಬಗ್ಗೆ ಮರುಚಿಂತನೆ ಮಾಡುವ ಅನಿವಾರ್ಯತೆಯನ್ನ ಸೃಷ್ಟಿಸಿರುವುದಂತೂ ನಿಜ.

ಚಿಪ್ಪುಹಂದಿಗಳು ಕೋವಿಡ್ -೧೯ ರೋಗದ ಮೂಲ ಆಗಿರಲಿ ಬಿಡಲಿ ಅವುಗಳ ಪರಿಸ್ಥಿತಿ ಮಾನವನ ಆಕ್ರಮಣಕ್ಕೆ ಒಳಗಾಗಿರುವ ಬೇರೆ ಜೀವಿಗಳ ಪರಿಸ್ಥಿತಿಗಿಂತ ಭಿನ್ನ ವಾಗೇನಿಲ್ಲ. ಒಂದು ವೇಳೆ ಚಿಪ್ಪು ಹಂದಿಯು ಯಾವಉದ್ದೇಶವಿಲ್ಲದೆಯೂ ಮತ್ತು ತನಗರಿವಿಲ್ಲದೆಯೂ ಕೋವಿಡ್ -೧೯ ರೋಗದ ಹರಡಲು ಕಾರಣನಾದ ಅಪರಾಧಿ ಎನಿಸಿಕೊಂಡು ಬಿಟ್ಟರೆ, ಮಾನವ ಚಟುವಟಿಕೆ ಗಳಿಂದಾಗಿ ವಿನಾಶದ ಅಂಚಿಗೆ ಸರಿದ, ತಮ್ಮ ಜೀವಿತದ ಬಹುಪಾಲನ್ನೂ ಮತ್ತು ತಮ್ಮ ಪರಿಸರವನ್ನೇ ಕಳೆದುಕೊಂಡು ಆಮೂಲಕ ತಮಗರಿವಿಲ್ಲದೆಯೇ ಪ್ರಾಣಿಜನ್ಯ ರೋಗಗಳನ್ನು ಮನುಷ್ಯರಿಗೆ ಪಸರಿಸುವಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣರಾಗುವ ಅದೆಷ್ಟೋ ಪ್ರಭೇದದ ಜೀವಿಗಳ ಸಾಲಿಗೆ ಚಿಪ್ಪುಹಂದಿಗಳೂ ಸೇರಿಬಿಡುತ್ತವೆ.

ನಮ್ಮಲ್ಲಿ ಯಾರ್ಯಾರಿಗೆ ಈ ವೈರಾಣುವಿನ ದಾಳಿಯಿಂದಾಗಿ ನಮ್ಮ ದಿನ ನಿತ್ಯದ ವ್ಯವಹಾರಗಳಿಂದ ಹಿಂದೆಸರಿದು ಮನೆಯಲ್ಲಿ ಏಕಾಂತದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆಯೋ, ಬಹುಶಃ ಅವರೆಲ್ಲ (ನಾವೆಲ್ಲ) ಈ ಬಿಕ್ಕಟಿನ ನಿರ್ಮಾಣಕ್ಕೆ ಕಾರಣವಾಗಿರುವ ಪರಿಸರದ ಜೊತೆಗಿನ ನಮ್ಮ ಸಂಬಂಧದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಒಂದುಕ್ಷಣ ಮೀಸಲಾಗಿಡಬಹುದೇನೋ.

ಈ ಸರ್ವ್ಯಾಪಿರೋಗವು (ಕೋವಿಡ್ -೧೯)ಒಬ್ಬ ವ್ಯಕ್ತಿಯ ದೇಹದ ಮೇಲೆ ಮತ್ತು ಇಡೀ ಒಂದು ಸಮುಧಾಯದ ಮೇಲೆ ಯಾವ ಪ್ರಮಾಣದಲ್ಲಿ ಹಿಡಿತವನ್ನ ಸಾಧಿಸಬಲ್ಲದು ಎಂಬುದನ್ನನಮ್ಮ ಸಮಾಜದಲ್ಲಿರುವ ವಿವಿಧ ತರಹದ ಅಸಮಮಾನತೆಗಳು ಮತ್ತು ಆರೋಗ್ಯಸೇವೆಗಳ ಲಭ್ಯತೆಯ ಪ್ರಮಾಣಗಳು ನಿರ್ಧರಿಸುತ್ತವೆ. ಈ ಅಂಶವನ್ನೂ ಒಳಗೊಂಡಂತೆ, ಸಮಾಜದ ಮತ್ತು ಮನುಷ್ಯರ ಮೇಲೆ ಈ ಸರ್ವವ್ಯಾಪಿ ರೋಗವು ಯಾವರೀತಿ ಪರಿಣಾಮವನ್ನ ಉಂಟುಮಾಡಬಲ್ಲದು ಎಂಬುದರ ಬಗ್ಗೆ ಬಹಳಷ್ಟು ಚಿಂತಕರು ನಮ್ಮ ಗಮನವನ್ನು ಸೆಳೆಯುತ್ತಿದ್ದಾರೆ. ಇವೆಲ್ಲ ತುಂಬಾ ಮಹತ್ವದ ವಿಚಾರಗಳು ಅದರಬಗ್ಗೆ ಯಾವುದೇ ಸಂಶಯವಿಲ್ಲ. ಆದರೆ ಈ ವಿಚಾರಗಳ ಆಚೆಗೂ ಯೋಚಿಸುವುದು ಇಂದಿನ ಅವಶ್ಯಕತೆಯಾಗಿದೆ.

ಜೀವ ಜಂತುಗಳ ಜೊತೆಗಿನ ನಮ್ಮ ಸಂಬಂಧದ ಕುರಿತು ಬಹಳ ಆಳವಾಗಿ ಯೋಚಿಸಬೇಕಿದೆ, ನಾವು ಇಡೀ ಜೀವ ಸಮೂಹಕ್ಕೆ ಯಾಕೆ ಋಣಿಗಳಾಗಿರಬೇಕೆಂಬುದರ ಬಗ್ಗೆ ಮತ್ತು ಸಕಲ ಜೀವ ರಾಶಿಗಳ ಜೊತೆ ಸಹಬಾಳ್ವೆಯನ್ನ ನಡೆಸುವ ಸಲುವಾಗಿ ವಿಭಿನ್ನ ದಾರಿಗಳನ್ನು ಹುಡುಕುವಲ್ಲಿ ನಾವೇಕೆ ಸೋಲುತ್ತಿದ್ದೇವೆ ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಅನುವಾದ : ದೀಪಕ್

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದವರಾದ ದೀಪಕ ಪರಿಸರ ಮಾನವಶಾಸ್ತ್ರದ ಸಂಶೋಧನಾ ವಿದ್ಯಾರ್ಥಿ.

ಪ್ರತಿಕ್ರಿಯಿಸಿ