ಕೊರೋನಾ ನಂತರದ ಜಗತ್ತು: ಸರ್ಕಾರವೆಂಬ ಗೂಢಚಾರಿ – ಭಾಗ ೧

ಇತ್ತೀಚಿನ ಬೌದ್ಧಿಕ ಪ್ರಪಂಚದ ರಾಕ್ ಸ್ಟಾರ್ ಮತ್ತು ಇತಿಹಾಸಕಾರ ಯುವಲ್ ನೋಹಾ ಹರಾರಿ ಕೊರೋನಾ ನಂತರದ ಪ್ರಪಂಚದ ಕುರಿತು ಇಲ್ಲಿ ಬರೆದಿದ್ದಾರೆ. ಕೊರೋನಾ ವೈರಸ್ ನ ನೆಪವಿಟ್ಟುಕೊಂದು ಸರ್ಕಾರಗಳು ನಾಗರಿಕರ ಮೇಲೆ ಗೂಢಾಚಾರಿಕೆ ನಡೆಸುವ ತಮ್ಮ ಕೆಲಸಗಳನ್ನು ಗಟ್ಟಿ ಮಾಡಿಕೊಳ್ಳುವ ಸಾಧ್ಯತೆಗಳು ಉಂಟುಮಾಡುತ್ತವೆ. “ನಿನ್ನ ಮಾಹಿತಿಯನ್ನು ನಮಗೆ ಕೊಡದೇ ಹೋದರೆ, ನಿನಗೆ ಅನಾರೋಗ್ಯ ಉಂಟಾದಾಗ ಏನು ಮಾಡುತ್ತಿ?” ಎಂಬ ಗುಮ್ಮ ತೋರಿಸಿ ಜನರನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವ ಬೇಜವಾಬ್ದಾರಿ  ರಾಜಕಾರಣಿಗಳ ಶಕ್ತಿ ಹೇಗೆ ಹೆಚ್ಚಾಗಬಹುದು ಎಂಬುದನ್ನು ಅವರು ಇಲ್ಲಿ ಚರ್ಚಿಸಿದ್ದಾರೆ.

ಮನುಷ್ಯಕುಲ ಈಗ ಒಂದು ಜಾಗತಿಕ ಸಂಕಟವನ್ನೆದುರಿಸುತ್ತಿದೆ. ಬಹುಶಃ ನಮ್ಮ ತಲೆಮಾರಿನ ಅತಿದೊಡ್ಡ ಸಂಕಟವೂ ಇದಾಗಿರಬಹುದು. ಜನ ಮತ್ತು ಸರ್ಕಾರಗಳು ಈ ಕೆಲವು ವಾರಗಳಲ್ಲಿ ತೆಗೆದುಕೊಳ್ಳುವ ನಿರ್ಧಾರ ಮತ್ತು ನಿಲುವುಗಳು ಮುಂಬರುವ ಅನೇಕ ವರ್ಷಗಳ ಜಗತ್ತಿನ ಹಣೆಬರಹವನ್ನು ನಿರ್ಧರಿಸಲಿದೆ. ಕೇವಲ ನಮ್ಮ ಆರೋಗ್ಯ ವ್ಯವಸ್ಥೆಯನ್ನಷ್ಟೇ ಅಲ್ಲದೇ, ಹಣಕಾಸು ವ್ಯವಸ್ಥೆ, ರಾಜಕೀಯ ಸಂಸ್ಕೃತಿಗಳನ್ನೂ ಸಹ ಈ ನಿರ್ಧಾರಗಳು ಪ್ರಭಾವಿಸಲಿವೆ. ಹಾಗಾಗಿ ನಾವು ತ್ವರಿತವಾಗಿ ಮತ್ತು ಹೆಚ್ಚಿನ ಸ್ಪಷ್ಟತೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಅಷೇ ಅಲ್ಲದೇ ಈ ನಿರ್ಧಾರಗಳಿಂದ ಕಾಲಾಂತರದಲ್ಲಿ ಆಗಬಹುದಾದ ಪರಿಣಾಮಗಳನ್ನೂ ನಾವು ಗಮನದಲ್ಲಿಟ್ಟುಕೊಂಡು ಯೋಚಿಸಬೇಕಿದೆ. ಅನೇಕ ಪರಿಹಾರಾಯ್ಕೆಗಳ ಮಧ್ಯೆ ನಮ್ಮ ಪರಿಹಾರವನ್ನು ಆಯ್ದುಕೊಳ್ಳುವಾಗ, ಸಧ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ತುರ್ತಿನ ಜೊತೆಗೇ ಈ ಬಿರುಗಾಳಿ ಬೀಸಿಹೋದ ನಂತರ ನಾವು ಬದುಕಲಿರುವ ಜಗತ್ತಿನ ಪರಿಸರದ ಕುರಿತೂ ನಾವು ಜಾಣ್ಮೆಯಿಂದ ಆಲೋಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಖಂಡಿತವಾಗಿಯೂ ಈ ಚಂಡಮಾರುತ ಬೀಸಿ ಮರೆಯಾಗುತ್ತದೆ. ಮನುಷ್ಯಕುಲ ಬದುಕುಳಿಯುತ್ತದೆ. . ನಮ್ಮಲ್ಲಿ ಬಹುತೇಕರು ಬದುಕಿ ಉಳಿಯುತ್ತೇವೆ ಸಹ. ಆದರೆ ಹಾಗೆ ಬದುಕುಳಿಯುವ ಆ ಪ್ರಪಂಚ ಪೂರ್ತಿಯಾಗಿ ಬೇರೆಯದ್ದೇ ಆಗಿರಲಿದೆ.

ತತ್ಕಾಲೀನವಾದ ಪರಿಹಾರೋಪಾಯಗಳು ಈ ಬಗೆಯ ತುರ್ತು ಸಂದರ್ಭಗಳಲ್ಲಿ ಅನಿವಾರ್ಯ ಹೌದು. ಅವು ಇತಿಹಾಸದ ನಡಿಗೆಯನ್ನು ಇದ್ದಕ್ಕಿದ್ದ ಹಾಗೆ ವೇಗವಾಗಿ ಚಲಿಸಿಬಿಡುವಂತೆ ಮಾಡುತ್ತವೆ. ಸಾಮಾನ್ಯ ಸಂದರ್ಭಗಳಲ್ಲಿ ಆರಾಮಾಗಿ ಚಿಂತಿಸಿ ತೆಗೆದುಕೊಳ್ಳುತ್ತಿದ್ದ ಕ್ರಮಗಳನ್ನು ಕೆಲವೇ ಗಂಟೆಗಳಲ್ಲಿ ತ್ವರಿತವಾಗಿ ನಿರ್ಧರಿಸಿ ಬಿಡುವಂತೆ ಮಾಡುತ್ತವೆ. ಬಾಲಿಶವಾದ ಅಥವ ಅಪಾಯಕಾರಿಯೇ ಆದ ತಂತ್ರಜ್ಞಾನಗಳಗಳನ್ನೂ ಸಹ ಬಳಕೆಗೆ ತಂದು “ಸದ್ಯದ ಸಂಕಟವನ್ನು ದಾಟಿಬಿಟ್ಟರೆ ಸಾಕಪ್ಪಾ…” ಎಂಬಂತೆ ಮಾಡಿಬಿಡುತ್ತವೆ – ಏಕೆಂದರೆ ಏನೂ ಮಾಡದೇ ಇದ್ದರೆ ಆಗುವ ಅಪಾಯ ಅದಕ್ಕಿಂತ ಹೆಚ್ಚಿನದ್ದಾಗಿರುತ್ತದೆ. ಈ ಬಗೆಯ ಸಾಮಾಜಿಕ ಪ್ರಯೋಗಗಳಿಗೆ ದೇಶದೇಶಗಳೇ ಪ್ರಯೋಗಪಶುಗಳಾಗಿ ಬಿಡುತ್ತವೆ. ಎಲ್ಲರೂ ಮನೆಯಿಂದಲೇ ಕೆಲಸ ಮಾಡುತ್ತ ಕುಳಿತು, ಸಾಮಾಜಿಕ ದೂರವನ್ನು ಅಳವಡಿಸಿಕೊಂಡುಬಿಟ್ಟರೆ ಏನಾಗಬಹುದು? ಶಾಲೆ ಕಾಲೇಜುಗಳು ಅಂತರ್ಜಾಲ ಪಾಠಕ್ಕೆ ಅಳವಡಿಸಿಕೊಂಡುಬಿಟ್ಟರೆ ಏನಾಗಬಹುದು? ಸಾಧಾರಣ ಸಂದರ್ಭಗಳಲ್ಲಿ ಸರ್ಕಾರಗಳು, ವ್ಯವಹಾರ ಸಂಸ್ಥೆಗಳು, ವಿದ್ಯಾನಿಲಯಗಳು ಇಂಥ ಪ್ರಯೋಗಗಳನ್ನು ನಡೆಸುವುದಕ್ಕೆ ಖಂದಿತವಾಗಿಯೂ ತಯಾರಿರುವುದಿಲ್ಲ. ಆದರೆ ಈಗಿನದ್ದು ಸಾಧಾರಣ ಸಂದರ್ಭವೇ ಅಲ್ಲ.

ಈ ಸಂಕಷ್ಟದ ಸಮಯದಲ್ಲಿ ನಮ್ಮೆದುರು ಎರಡು ಮುಖ್ಯವಾದ ಆಯ್ಕೆಗಳಿವೆ.

ಮೊದಲನೆಯದು : ನಾವು ಪ್ರಜೆಗಳೆಲ್ಲರ ಮೇಲೆ ಸರ್ಕಾರಗಳು ಸರ್ವಾಧಿಕಾರಯುತವಾಗಿ ಕಣ್ಗಾವಲಿಡುವುದು ಸರಿಯೇ? ಅಥವಾ ನಾಗರೀಕರಾದ ನಮ್ಮನ್ನು ಎಚ್ಚರದ ಆಯ್ಕೆಗೆ ಬಿಡುವುದು ಸರಿಯೇ? ಎಂಬುದರ ನಡುವಿನ ಆಯ್ಕೆ.

ಎರಡನೇಯದ್ದು: ಪ್ರತೀ ದೇಶವೂ ತನ್ನ ರಾಷ್ಟ್ರೀಯ ಮಾತ್ರವೇ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕೇ? ಅಥವಾ ಜಾಗತಿಕವಾಗಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕೇ? ಎಂಬುದರ ನಡುವಿನ ಆಯ್ಕೆ.

ನಮ್ಮ ದೇಹದೊಳಗೇ ಪೋಲೀಸರು 

ಈ ಜಾಗತಿಕ ಪಿಡುಗನ್ನು ಇಲ್ಲವಾಗಿಸಲು, ಜಗತ್ತಿನ ಜನರೆಲ್ಲರೂ ಒಂದಿಷ್ಟು ನಿಯಮಗಳನ್ನು ಪಾಲಿಸಲೇ ಬೇಕು. ಇದನ್ನು ಮಾಡುವುದಕ್ಕೆ ಎರಡು ವಿಧಾನಗಳಿವೆ. ಒಂದೋ – ಸರ್ಕಾರಗಳು ಜನರನ್ನು ಎಚ್ಚರದಿಂದ ಕಾಯುತ್ತ, ಅವರು ತಪ್ಪು ಮಾಡಿದರೆ ಶಿಕ್ಷೆಗೆ ಒಳಪಡಿಸುವುದು. ಈಗಿನ ತಂತ್ರಜ್ಞಾನಗಳು ಪ್ರತಿಯೊಬ್ಬ ನಾಗರಿಕನ ಮೇಲೂ ಸದಾಕಾಲ ಕಣ್ಣಿಟ್ಟು ಅವನ ಚಲನವಲನಗಳನ್ನು ಗಮನಿಸುವುದನ್ನು ಸಾಧ್ಯವಾಗಿಸಿವೆ. ೫೦ ವರ್ಷಗಳ ಕೆಳಗೆ ರಷ್ಯಾದ ಗೂಢಚಾರೀ ಸಂಸ್ಥೆ ಕೆಜಿಬಿಗೆ ೨೪೦ ಮಿಲಿಯನ್ ಸೋವಿಯತ್ ನಾಗರಿಕರೆಲ್ಲರ ಮೇಲೆ ದಿನಪೂರ್ತಿ ಕಣ್ಣಿಡುವುದು ಸಾಧ್ಯವಿರಲಿಲ್ಲ. ಅಥವಾ ಹಾಗೊಮ್ಮೆ ಮಾಹಿತಿಗಳನ್ನು ಸಂಗ್ರಹಿಸಿದ್ದರೂ ಅವೆಲ್ಲವನ್ನೂ ಸರಿಯಾಗಿ ಸಂಶ್ಲೇಷಿಸಿ ಅರ್ಥಮಾಡಿಕೊಂಡು ಅವುಗಳ ಮೇಲೆ ನಿರ್ಧಾರವನ್ನು ರೂಪಿಸುವುದು ದುಸ್ಸಾಧ್ಯವಿತ್ತು. ಅದು ಒಬ್ಬ ಮನುಷ್ಯನ ಮೇಲೆ ಕಣ್ಣಿಡಲು ಇನ್ನೊಬ್ಬ ಮನುಷ್ಯನನ್ನೇ ಬಳಸಿಕೊಳ್ಳಬೇಕಿತ್ತು – ಮತ್ತು ಪ್ರತಿಯೊಬ್ಬ ಮನುಷ್ಯನ ಮೇಲೂ ಇನ್ನೊಬ್ಬ ಕಣ್ಣಿಡುವಂತೆ ಮಾಡುವುದಂತೂ ಅಸಾಧ್ಯವಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಸರ್ಕಾರಗಳು ರಕ್ತಮಾಂಸ ತುಂಬಿದ ಪತ್ತೆದಾರಿಗಳ ಬದಲು ಅದ್ಭುತವಾದ ಸೆನ್ಸಾರ್ ಗಳು, ಕೋಟ್ಯಾಂತರ ಮಾಹಿತಿ ಬೀಜಗಳನ್ನು ತರ್ಕಬದ್ಧವಾಗಿ ಸಂಸ್ಕರಿಸಿ ಅರ್ಥಬದ್ಧ ವರದಿಗಳನ್ನು ರೂಪಿಸಬಲ್ಲ ಆಲ್ಗಾರಿದಂಗಳು ಸರ್ಕಾರದ ಸೇವೆಯಲ್ಲಿವೆ.

ಕೊರೋನಾವೈರಸ್ ನ ವಿರುದ್ಧದ ಹೋರಾಟದಲ್ಲಿ ಈಗಾಗಲೇ ಅನೇಕ ಸರ್ಕಾರಗಳು ಈ ಬಗೆಯ ಗೂಢಚಾರೀ ಯಂತ್ರಗಳನ್ನು ಬಳಸಿಕೊಳ್ಳಲು ಆರಂಭಿಸಿವೆ. ಇದರ ಮುಂಚೂಣಿಯಲ್ಲಿರುವುದು ಚೈನಾ. ಎಲ್ಲ ನಾಗರಿಕರ ಮೊಬೈಲುಗಳನ್ನು ಗುಟ್ಟಾಗಿ ಗಮನಿಸುವುದು, ಕೋಟ್ಯಾಂತರ “ಮುಖ-ಗುರುತಿಸುವ” ಕ್ಯಾಮರಾಗಳ ಅಳವಡಿಕೆ, ಪ್ರತಿಯೊಬ್ಬ ಮನುಷ್ಯನೂ ಖಡ್ಡಾಯವಾಗಿ ಅವನ ದೇಹ ತಾಪಮಾನ, ಆರೋಗ್ಯ ಸ್ಥಿತಿಯನ್ನು ವರದಿ ಮಾಡುವಂತೆ ಮಾಡುವುದು – ಈ ಎಲ್ಲದರ ಮೂಲಕ ತ್ವರಿತವಾಗಿ ಯಾವನಿಗೆ ಕೊರೋನಾವೈರಸ್ ಹಬ್ಬಿರಬಹುದು ಎಂದು ಗುರುತಿಸುವುದಷ್ಟೇ ಅಲ್ಲದೇ, ಅವನು ಎಲ್ಲೆಲ್ಲಿ ಓಡಾಡಿದ್ದ, ಯಾರ್ಯಾರ ಜೊತೆಗೆ ಸಂಪರ್ಕದಲ್ಲಿದ್ದ ಎಲ್ಲವನ್ನೂ ಕ್ಷಣಮಾತ್ರದಲ್ಲಿ ಕಂಡುಹಿಡಿದುಬಿಡುವ ವ್ಯವಸ್ಥೆ ಮಾಡಲಾಗಿದೆ. ಅನೇಕ ಬಗೆಯ ಆಪ್ ಗಳು ಪ್ರತಿಯೊಬ್ಬರಿಗೂ – ಅವರ ಸಮೀಪದಲ್ಲಿ ಎಲ್ಲಿಯಾದರೂ ಕೊರೋನಾ ಬಂದಿರುರುವ ವ್ಯಕ್ತಿ ಇರುವನೇ ಎಂದು ತಿಳಿಸುತ್ತದೆ.

ಇದೇನೂ ಪೂರ್ವ ಏಷಿಯಾಕ್ಕೆ ಮಾತ್ರವೇ ಸಂಬಂಧಪಟ್ಟ ಸಂಗತಿಯಲ್ಲ. ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು – ಉಗ್ರಗಾಮಿಗಳ ಮೇಲೆ ಕಣ್ಣಿಡಲು ಬಳಸಲಾಗುವ ಉಪಕರಣಗಳನ್ನು ಬಳಸಿ ಈ ಕೊರೋನಾಪೀಡಿತರನ್ನು ಗುರುತಿಸುವಂತೆ ಇಸ್ರೇಲಿನ ಸೈನ್ಯಕ್ಕೆ ಅನುಮತಿ ನೀಡಿದ್ದಾರೆ. ಸಂಸತ್ತಿನ ಸಮಿತಿಯು ಈ ನಿರ್ಧಾರವನ್ನು ವಿರೋಧಿಸಿದಾಗ ಆತ “ತುರ್ತು ಪರಿಸ್ಥಿತಿಯ” ಆಯ್ಕೆ ಬಳಸಿ ಉಳಿದ ಸಂಸದರ ಬಾಯಿಮುಚ್ಚಿಸಿದ.

ಇದೆಲ್ಲ ಏನು ಹೊಸದು ಎಂದು ನೀವು ಕೇಳಬಹುದು. ಇತ್ತೀಚಿನ ವರ್ಷಗಳಲ್ಲಂತೂ ಸರ್ಕಾರಗಳು ಮತ್ತು ಬೃಹತ್ ವ್ಯವಹಾರ ಸಂಸ್ಥೆಗಳು ಜನರ ಮೇಲೆ ಕಣ್ಣಿಡುವುದು, ಅವರನ್ನು ಗುಪ್ತವಾಗಿ ಹಿಂಬಾಲಿಸುವುದು, ಅವರ ನಿರ್ಧಾರಗಳನ್ನು ಅವರಿಗೇ ತಿಳಿಯದಂತೆ ಪ್ರಭಾವಿಸುವುದನ್ನು ಅತಿಹೆಚ್ಚಾಗಿ ಮಾಡುತ್ತ ಬಂದಿವೆ. ನಾವು ಈಗ ಎಚ್ಚೆತ್ತುಕೊಳ್ಳದೇ ಇದ್ದರೆ, ಈ ಕೊರೋನಾ ವೈರಸ್ಸಿನ ಕಾಲವೆಂಬುದು “ಮನುಷ್ಯನ ಮೇಲಿನ ಗೂಢಚಾರಿಕೆ” ಯ ಯುಗದ ಬಹುಮುಖ್ಯ ಸಂಧಿಕಾಲ ಎಂದು ಗುರುತಿಸುವ ಸಮಯ ಬರಲಿದೆ. ಏಕೆಂದರೆ ಈ ಬಗೆಯ ಗುಪ್ತಚರ ಸಲಕರಣೆಗಳನ್ನು ಬಳಸುವುದು ತಪ್ಪೇನೂ ಅಲ್ಲ ಎಂದೋ, ಅದು ಬಹಳ ಸರಿಯಾದ ವಿಚಾರ ಎಂದೋ ಅಥವಾ ಅದರಲ್ಲಿ ತಪ್ಪೇನಿದೆ ಎಂದೋ – ನಾವೇ ಆರಾಮಾಗಿ ಒಪ್ಪಿಕೊಂಡುಬಿಡುವ ಪರಿಸ್ಥಿತಿ ಉಂಟಾಗುತ್ತದೆ. ಅದಕ್ಕಿಂತ ಹೆಚ್ಚಿನ ಅಪಾಯವೆಂದರೆ ಈಗಿನಂತೆ ನಮ್ಮನ್ನು ಸರ್ಕಾರಗಳು ದೂರದಿಂದ ಗಮನಿಸದೇ, ನಮ್ಮ ದೇಹದೊಳಗೇ ಪೋಲೀಸರನ್ನು ಹೊಕ್ಕಿಸುವ ಕಾಲದ ತಿರುಗಣೆಯಲ್ಲಿ ನಾವು ನಿಂತಿದ್ದೇವೆ.

ಈಗ ನಿಮ್ಮ ಬೆರಳುಗಳು ಮೊಬೈಲಿನ ಮೇಲೆ ಕ್ಲಿಕ್ ಮಾಡಿದಾಗ, ಆ ಬೆರಳು ಏನನ್ನು ಕ್ಲಿಕ್ ಮಾಡಿತು ಎಂಬುದು ಮಾತ್ರವೇ ಸರ್ಕಾರಕ್ಕೆ ಬೇಕಾದ ಮಾಹಿತಿಯಾಗಿತ್ತು. ಆದರೆ ಇನ್ನುಮುಂದೆ ಸರ್ಕಾರಗಳು ಆ ಬೆರಳಿನ ತಾಪಮಾನ ಮತ್ತು ಅದರ ಮೂಲಕ ದೇಹದ ರಕ್ತದೊತ್ತಡಗಳನ್ನು ಗಮನಿಸಲು ತೊಡಗುತ್ತವೆ.

ತುರ್ತುಪರಿಸ್ಥಿತಿಯೆಂಬ ಸಿಹಿತಿಂಡಿ 

ಈ ಗೂಢಚಾರಿಕೆಯ ವ್ಯವಸ್ಥೆಯಲ್ಲಿ ನಮ್ಮ ಸ್ಥಾನವೇನು ಎಂದು ಅರ್ಥಮಾಡಿಕೊಳ್ಳಲು ಬಯಸುವ ನಮಗೆ ಎದುರಾಗುವ ಮೊದಲ ಸಮಸ್ಯೆ ಎಂದರೆ- ನಮ್ಮ ಮೇಲೆ ಯಾವ ಬಗೆಯ ಗೂಢಚಾರಿಕೆ ನಡೆಸಲಾಗುತ್ತಿದೆ ಎನ್ನುವುದೇ ಅರಿವಿಗೆ ಬಾರದಿರುವುದು. ಮತ್ತು ಮುಂಬರುವ ವರ್ಷಗಳಲ್ಲಿ ಇದು ಇನ್ನೇನನ್ನು ನಮ್ಮ ಮೇಲೆ ಎರಚುತ್ತದೆ ಎಂದು ತಿಳಿಯದಿರುವುದು. ಈ ಗೂಢಚಾರಿಕೆಯ ಸಾಧ್ಯತೆಗಳು ಊಹಿಸಲಾಗದ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿವೆ. ವರ್ಷದ ಕೆಳಗೆ ವಿಜ್ಞಾನ ಚಲನಚಿತ್ರ ದಂತೆ ಕಾಣಿಸುತ್ತಿದ್ದದ್ದು ಈಗ ಹಳೆಕಥೆ. ಸುಮ್ಮನೇ ಊಹೆಮಾಡಿ ನೋಡಿ. ಯಾವುದೋ ಒಂದು ಸರ್ಕಾರ ಎಲ್ಲ ಪ್ರಜೆಯೂ ಒಂದು ಬಯೋಮೆಟ್ರಿಕ್ ಬಳೆಯನ್ನು ತೊಟ್ಟುಕೊಳ್ಳಬೇಕು ಎಂದು ಆದೇಶಿಸುತ್ತದೆ. ಈ ಬಳೆ ನಿಮ್ಮ ಕೈನಾಡಿಯ ಮೂಲಕ ನಿಮ್ಮ ರಕ್ತದೊತ್ತಡ, ತಾಪಮಾನ ಎಲ್ಲವನ್ನೂ ದಿನವಿಡೀ ಗಮನಿಸುತ್ತಾ ಇರುತ್ತದೆ. ಇದರಿಂದ ದೊರಕುವ ದತ್ತಸಂಚಯವನ್ನು ಒಗ್ಗೂಡಿಸಿ ಆಲ್ಗಾರಿಥಮ್ ಗಳ ಮೂಲಕ ಅದೆಲ್ಲದರ ಅರ್ಥವನ್ನು ಮೂಡಿಸಿಕೊಳ್ಳುತ್ತದೆ. ನಿಮಗೇ ತಿಳಿಯುವ ಮುಂಚೆ ನೀವು ಇನ್ನೇನು ಅನಾರೋಗ್ಯಕ್ಕೆ ತುತ್ತಾಗುವವರಿದ್ದೀರಿ ಎಂದು ಅದಕ್ಕೆ ಗೊತ್ತಾಗುತ್ತದೆ. ನೀವು ಎಲ್ಲೆಲ್ಲಿ ಇದ್ದಿರಿ, ಯಾರ್ಯಾರನ್ನು ಭೇಟಿಯಾಗಿದ್ದಿರಿ ಎಂದೆಲ್ಲಾ ಅದಕ್ಕೆ ತಿಳಿದುಹೋಗುತ್ತದೆ. ಆಗ ಈ ರೋಗ ಹಬ್ಬುವ ಸರಪಳಿ ತುಂಡು ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಅಥವಾ ಅದನ್ನು ಪೂರ್ತಿಯಾಗಿ ತಡೆಹಿಡಿದೇ ಬಿಡಬಹುದು. ಕೆಲವೇ ದಿನಗಳಲ್ಲಿ ನಾವು ಈ ರೋಗವೇ ಇಲ್ಲದಂತೆ ಮಾಡಿಬಿಡಬಹುದು. ಅಬ್ಬಾ! ಏನದ್ಭುತ ಎನ್ನಿಸುತ್ತದೆಯಲ್ಲವೇ?.

ಆದರೆ ಅದರ ಇನ್ನೊಂದು ದೊಡ್ಡ ಸಮಸ್ಯೆ ಇಲ್ಲಿದೆ ನೋಡಿ. ಅದು ಈ ಗೂಢಚಾರೀ ವ್ಯವಸ್ಥೆಗೆ ಆನೆಬಲವನ್ನು ಕೊಡುತ್ತದೆ. ಸರ್ಕಾರದ ಈ ಕ್ರಮ ಅತ್ಯಂತ ಸಮರ್ಪಕವಾದದ್ದು ಎಂದು ಅದಕ್ಕೆ ಪುಷ್ಟಿ ನೀಡುತ್ತದೆ. ಈಗ ನೋಡಿ: ಈಗ ನಾನು ಸಿ.ಎನ್.ಎನ್ ಛಾನಲ್ (ಭಾರತದ ಎನ್.ಡಿ.ಟಿ.ವಿ ಎಂದಿಟ್ಟುಕೊಳ್ಳಿ – ಅನುವಾದಕ) ನ ಲಿಂಕ್ ಬದಲಿಗೆ ಫಾಕ್ಸ್ ಛಾನಲ್ ನ (ಭಾರತದ ರಿಪಬ್ಲಿಕ್ ಛಾನಲ್ ಎಂದಿಟ್ಟುಕೊಳ್ಳಿ – ಅನುವಾದಕ) ಲಿಂಕ್ ಕ್ಲಿಕ್ ಮಾಡಿದೆ ಎಂದಿಟ್ಟುಕೊಳ್ಳಿ. ಆಗ ನಿಮಗೆ ನನ್ನ ವ್ಯಕ್ತಿತ್ವ ಮತ್ತು ನನ್ನ ರಾಜಕೀಯ ಒಲವುಗಳು ಅರ್ಥವಾಗುತ್ತವೆ. ಇದರ ಜೊತೆಗೆ ಈ ಛಾನಲ್ ಗಳನ್ನು ನಾನು ನೋಡುವಾಗ – ನನ್ನ ರಕ್ತದೊತ್ತಡದ ಏರಿಳಿತ, ದೇಹದ ತಾಪಮಾನ, ಹೃದಯಬಡಿತಗಳು ಯಾವ ರೀತಿಯಲ್ಲಿ ಬದಲಾಗುತ್ತವೆ ಎಂದು – ಈ ಕೈಬಳೆಯ ಮೂಲಕ ಅರಿತುಕೊಂಡರೆ – ಏನು ನನಗೆ ಸಂತೋಷ ಉಂಟುಮಾಡುತ್ತದೆ, ಯಾವುದು ನನ್ನನ್ನು ಅಳಿಸುತ್ತದೆ ಮತ್ತು ಯಾವುದು ನನಗೆ ಅತ್ಯಂತ ಕೋಪ ತರಿಸುತ್ತದೆ ಎಂಬುದನ್ನೂ ನೀವು ಪತ್ತೆಹಚ್ಚಿಬಿದಬಹುದು.

ಖುಷಿ, ಸಿಟ್ಟು, ಬೇಜಾರು, ಪ್ರೇಮ ಇವೆಲ್ಲವೂ ಜ್ವರ ಕೆಮ್ಮುಗಳಂತೆ ಒಂದು ಜೈವಿಕ ಕ್ರಿಯೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಕೆಮ್ಮನ್ನು ಅರ್ಥಮಾಡಿಕೊಳ್ಳುವ ತಂತ್ರಜ್ಞಾನವೇ ನನ್ನ ಅಹಮ್ಮನ್ನೂ ಅರ್ಥಮಾಡಿಕೊಳ್ಳಬಹುದು. ದೊಡ್ಡ ದೊಡ್ಡ ಉದ್ದಿಮೆಗಳು ಈಮೂಲಕ ನಮ್ಮ ವ್ಯಕ್ತಿತ್ವವನ್ನು ನಮಗಿಂತ ಚೆನ್ನಾಗಿ ತಿಳಿದುಕೊಂಡುಬಿಡುತ್ತವೆ. ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲ, ಅದನ್ನು ತಮಗೆ ಬೇಕಾದ ಹಾಗೆ ತಿರುಚುವುದೂ ಅವುಗಳಿಗೆ ಸುಲಭವಾಗುತ್ತದೆ. ಆಗ ಅವುಗಳು ನಮಗೆ ಬೇಕಾದ ವಸ್ತುಗಳನ್ನೂ ಮಾರುತ್ತವೆ; ನಮಗೆ ಬೇಕಾದ ರಾಜಕಾರಣಿಯನ್ನೂ ಇಷ್ಟಪಟ್ಟು ಕೊಳ್ಳುವಂತೆ ಮಾಡುತ್ತವೆ. ( ಅಥವಾ ನಮ್ಮ ಸಹಜ ಇಚ್ಛೆಗೆ ಅಳವಡಿಕೆಯಾಗದ ಯಾವುದೋ ವಸ್ತುವನ್ನೋ, ರಾಜಕಾರಣಿಯನ್ನೋ ನಾವು ನಮಗೇ ತಿಳಿಯದಂತೆ ಇಷ್ಟಪಡುವಂತೆಯೂ ನಮ್ಮ ಆಯ್ಕೆಯನ್ನು ತಿರುಚುತ್ತವೆ – ಅನುವಾದಕ). ಈ ಜೈವಿಕ ಗೂಢಚಾರಿಕೆಯ ಎದುರು ಕೇಂಬ್ರಿಜ್ ಅನಾಲಟಿಕಾದಂಥ ದತ್ತಾಂಶ ತಿರುಚುವಿಕೆ ಯಾವುದೋ ಪುರಾತನ ಕಾಲದ ಸಾಹಸದಂತೆ ಮಾತ್ರ ಕಾಣಬಹುದು. ೨೦೩೦ರ ಉತ್ತರ ಕೊರಿಯಾವನ್ನು ಊಹಿಸಿಕೊಳ್ಳಿ. ಅಲ್ಲಿನ ನಾಗರೀಕರೆಲ್ಲರೂ ಈ ಕೈಬಳೆಯನ್ನು ತೊಟ್ಟುಕೊಂಡು ಅಲ್ಲಿಯ ಅಧಿನಾಯಕನ ಭಾಷಣ ಕೇಳುತ್ತಿದ್ದಾರೆ ಎಂದು ಭಾವಿಸಿ. ಆಗ ನಿಮಗೆ ಸಿಟ್ಟು ಬರುತ್ತಿದೆ ಎಂಬುದನ್ನು ಆ ಬಳೆ ತಿಳಿದು ಅಲ್ಲಿಯ ಸರ್ಕಾರಕ್ಕೆ ದಾಟಿಸಿದರೆ, ನೀವು ಸತ್ತಿರಿ ಎಂದೇ ಅರ್ಥ.

ಈ ಬಗೆಯ ಜೈವಿಕ ಗೂಢಚಾರಿಕೆ ತುರ್ತುಪರಿಸ್ಥಿಯಲ್ಲಿ ಬಳಸಲಾಗುವ ತಾತ್ಕಾಲಿಕ ಕ್ರಮ ಎಂದೂ ನೀವು ಸಮರ್ಥಿಸಿ ಮಾತನಾಡಬಹುದು. ಆದರೆ ಈ ಬಗೆಯ ತಾತ್ಕಾಲಿಕ ಕ್ರಮಗಳಿಗೆ ತುಂಬಾ ಕಾಲ ಬಾಳಿಬದುಕುವ ದುರ್ಬುದ್ಧಿಯಿದೆ. ಒಂದರ ನಂತರ ಒಂದು ತುರ್ತುಪರಿಸ್ಥಿತಿಗಳು ಬರುತ್ತಲೇ ಹೋದಾಗ ಈ ಕ್ರಮಗಳು ಸ್ಥಾಯಿಯಾಗಿಬಿಡುತ್ತವೆ. ಉದಾಹಾರಣೆಗೆ ನನ್ನ ತವರುದೇಶ ಇಸ್ರೇಲ್ ೧೯೪೮ರ ಸ್ವತಂತ್ರಯುದ್ಧದ ಸಮಯದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿತು. ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದು, ಪತ್ರಿಕೋದ್ಯಮದ ಮೇಲೆ ಬಿಗಿಹಿಡಿತ ದ ಜೊತೆಗೆ ಸಿಹಿತಿಂಡಿ ಮಾಡುವುದರ ಮೇಲೂ ನಿರ್ಬಂಧ ಹೇರಿತು ನಾನು ತಮಾಷೆ ಮಾಡುತ್ತಿಲ್ಲ. ಸ್ವಾತಂತ್ರ ಸಂಗ್ರಾಮ ಮುಗಿದು ಯಾವುದೋ ಕಾಲವಾಗಿದೆ. ಮತ್ತೊಮ್ಮೆಇಸ್ರೇಲ್ ಎಮರ್ಜೆನ್ಸಿ ಘೋಷಿಸಲಿಲ್ಲ. ಆದರೆ ೪೮ರಲ್ಲಿ ಗೋಷಿಸಿದ ಅನೇಕ ಚಿಕ್ಕಪುಟ್ಟ ನಿರ್ಬಂಧಗಳನ್ನು ಮಾತ್ರ ಹಾಗೆಯೇ ಮುಂದುವರೆಸಿತು. (ಪುಣ್ಯಕ್ಕೆ ಸಿಹಿತಿಂಡಿ ಮಾಡುವುದರ ಮೇಲಿನ ನಿರ್ಬಂಧವನ್ನು ಮಾತ್ರ ಕರುಣೆಯಿಂದ ೨೦೧೧ರಲ್ಲಿ ಹಿಂತೆಗೆದುಕೊಂಡಿತು.

ಒಂದೊಮ್ಮೆ ಈ ಕೊರೋನಾ ವೈರಸ್ಸಿನ ಕಾಟ ಪೂರ್ತಿಯಾಗಿ ಕಣ್ಮರೆಯಾದರೂ ಸಹ, ದತ್ತಾಂಶಗಳಿಗೆ ಹಸಿದ ಸರ್ಕಾರಗಳು – “ಇನ್ನೊಮ್ಮೆ ಕರೋನಾ ಮರುಕಳಿಸಿದರೆ ಏನು ಕತೆ?, ಇನ್ನೊಮ್ಮೆ ಎಬೋಲಾ ಬಂದರೆ ಏನು ಗತಿ” ಎಂದು ಗುಮ್ಮನ ಭಯಹುಟ್ಟಿಸಿ ಈ ಜೈವಿಕ ಗೂಢಚಾರಿಕೆಯನ್ನು ಮುಂದುವರೆಸುತ್ತವೆ. ಮನುಷ್ಯರ ವೈಯಕ್ತಿಕ ಜೀವನದ ಮೇಲೆ ದಾಳಿ ಆರಂಭವಾಗಿ ಬಹಳ ಕಾಲವಾಯಿತು. ಈ ಕರೋನಾವೈರಸ್ಸಿನ ಕಾಲ ಈ ಗೂಢಚಾರಿಕೆಯ ಮಿತಿ ಮೀರುವ ಕಾಲವಿರಬಹುದು. ಏಕೆಂದರೆ ನಿನಗೆ ವೈಯಕ್ತಿಕ ಸ್ವಾತಂತ್ರ ಬೇಕೋ ಅಥವಾ ಆರೋಗ್ಯ ಬೇಕೋ ಎಂದು ಕೇಳಿದರೆ ಜನ ಆರೋಗ್ಯವನ್ನೇ ಆಯ್ದುಕೊಳ್ಳುತ್ತಾರೆ.

ಕೈತೊಳೆಸುವ ಪೋಲೀಸಪ್ಪ

ನಿಮಗೆ ಆರೋಗ್ಯ ಬೇಕೋ, ವೈಯಕ್ತಿಕ ಸ್ವಾತಂತ್ರ ಬೇಕೋ? ಎಂದು ಜನರನ್ನು ಕೇಳುವುದೇ ಸಮಸ್ಯೆಯ ಮೂಲ. ಅವು ವಾಸ್ತವದಲ್ಲಿ ಸರಿಯಾದ ಆಯ್ಕೆಗಳೇ ಅಲ್ಲ. ನಾವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆರೋಗ್ಯ ಎರಡನ್ನೂ ಹೊಂದುವ ಹಕ್ಕುಳ್ಳವರು ಮತ್ತು ಎರಡನ್ನೂ ಹೊಂದಬೇಕಾದವರೂ ಕೂಡಾ. ಈ ಕೊರೋನಾವೈರಸ್ಸಿನಿಂದ ನಾವು ನಮ್ಮನ್ನು ಬಚಾವು ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕಾದ್ದು – ಈ ಗೂಢಾಚಾರೀ ವ್ಯವಸ್ಥೆಯನ್ನು ಬಳಸಿ ಅಲ್ಲ. ಬದಲಿಗೆ ನಮ್ಮ ಜನರನ್ನು ಎಚ್ಚರಿಸುವುದರ ಮೂಲಕ. ಅವರ ಅರಿವನ್ನು ವಿಸ್ತರಿಸಿ ತಿಳುವಳಿಕೆಯ ಆಯ್ಕೆಯನ್ನು ಮಾಡಿಕೊಳ್ಳುವ ಶಕ್ತಿಯನ್ನು ಅವರಲ್ಲಿ ವೃದ್ಢಿಸುವುದರ ಮೂಲಕ. ಇತ್ತೀಚಿನ ವಾರಗಳಲ್ಲಿ, ದಕ್ಷಿಣ ಕೋರಿಯ, ತೈವಾನ್, ಸಿಂಗಪೂರ್ ಗಳು ಈ ಕೊರೋನಾವನ್ನು ತಡೆಗಟ್ಟಲು ಅನೇಕ ಉಪಕ್ರಮಗಳನ್ನು ಕೈಗೊಂಡವು. ಅನೇಕ ತಂತ್ರಜ್ಞಾನಗಳನ್ನು ಬಳಸಿ, ಕೊರೋನಾ ಇರಬಹುದಾದ ವ್ಯಕ್ತಿಗಳನ್ನು ಗುರುತಿಸಿದರೂ ಸಹ ಅದಕ್ಕಿಂತ ಹೆಚ್ಚಾಗಿ ಈ ದೇಶಗಳು – ಜನರಿಗೆ ತಿಳುವಳಿಕೆ ನೀಡುವುದು, ತಮ್ಮ ಕ್ರಮಗಳನ್ನು ಪಾರದರ್ಶಕವಾಗಿ ಜನರ ಎದುರು ಇಡುವುದು ಮತ್ತು ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆಸುವುದಕ್ಕೇ ಹೆಚ್ಚು ಒತ್ತು ಕೊಟ್ಟವು.

ಕೇಂದ್ರೀಕೃತವಾದ ಮೇಲುಸ್ತುವಾರಿ ಮತ್ತು ಜನರಿಗೆ ಹೆದರಿಕೆ ಹುಟ್ಟಿಸಿ ನಿಯಮಗಳನ್ನು ಪಾಲಿಸುವಂತೆ ಮಾಡುವುದಕ್ಕಿಂತಲೂ ಇದು ಒಳ್ಳೆಯ ದಾರಿ. ಜನರಿಕೆ ವೈಜ್ಞಾನಿಕ ಮಾಹಿತಿಯನ್ನು ತಿಳಿಸಿಹೇಳುವ, ಸತ್ಯಗಳನ್ನು ಮರೆಮಾಚದೇ ತೋರಿಸುವ ಸರ್ಕಾರೀ ಸಂಸ್ಥೆಗಳಿದ್ದರೆ ಜನರ ವಿಶ್ವಾಸ ಹೆಚ್ಚುತ್ತದೆ. ಆಗ ಯಾವುದೇ ದೊಡ್ಡಣ್ಣನ ಭಯ ಕೂಡ ಅಗತ್ಯವಾಗುವುದಿಲ್ಲ. ಸಾರ್ವಜನಿಕರೂ ಸಹ ಸರಿಯಾಗಿಯೇ ನಡೆದುಕೊಳ್ಳುವ ಸಾಧ್ಯತೆ ಅಧಿಕವಾಗುತ್ತದೆ. ಆತ್ಮವಿಶ್ವಾಸವುಳ್ಳ ಮತ್ತು ತಿಳುವಳಿಕಸ್ಥ ಸಾರ್ವಜನಿಕರು ಯಾವತ್ತಿದ್ದರೂ ಭೀತರಾದ, ದಡ್ಡ ಜನಸಮೂಹಕ್ಕಿಂತಲೂ ಹೆಚ್ಚು ಶಕ್ತಿಯುಳ್ಳವರಾಗಿರುತ್ತಾರೆ.

ಈಗ ನೋಡಿ. ಸೋಪಿನಿಂದ ಕೈತೊಳೆದುಕೊಳ್ಳಬೇಕು ಎಂಬ “ಅರಿವ”ನ್ನು ಅನ್ವೇಷಿಸಿ ಪ್ರಚುರಪಡಿಸಿದ್ದು ಜಗತ್ತಿನ ಮುನ್ನಡೆಯಲ್ಲಿ ಪ್ರಮುಖ ಘಟ್ಟ. ಅದು ಮಿಲಿಯಾಂತರ ಜನರನ್ನು ಪ್ರತಿವರ್ಷವೂ ಕಾಪಾಡುತ್ತ ಬಂದಿದೆ. ನಾವೇನೋ ಇದನ್ನು ಅತೀ ಸಾಧಾರಣ ಕ್ರಿಯೆ ಎಂದೇ ನಿತ್ಯವೂ ಮಾಡುತ್ತ ಬಂದಿದ್ದರೂ ಅದನ್ನು ವಿಜ್ಞಾನಿಗಳು ಕಂಡುಹಿಡಿದು ಹೇಳಿದ್ದು ೧೯ನೇ ಶತಮಾನದಲ್ಲಷ್ಟೇ. ಅದಕ್ಕೂ ಮೊದಲು ವೈದ್ಯರುಗಳೂ, ದಾದಿಯರೂ ಸಹ ಆಪರೇಶನ್ ಮುಗಿದ ಮೇಲೆ ಕೈತೊಳೆಯದೇ ಮುಂದಿನ ಕೆಲಸಗಳಿಗೆ ನಡೆದುಬಿಡುತ್ತಿದ್ದರು. ಈಗ ಜಗತ್ತಿನ ಕೋಟ್ಯಂತರ ಜನರು ಕೈತೊಳೆಯುತ್ತಾರೆ. ಯಾರೋ ಪೋಲಿಸಪ್ಪ ಬಂದು ಹೊಡೆದು ಕೈತೊಳೆಸುತ್ತಾನೆ ಎಂಬ ಭೀತಿಯಿಂದ ಅಲ್ಲ; ಬದಲಿಗೆ ಅದು ಒಳ್ಳೆಯದು ಎಂಬ ತಿಳುವಳಿಕೆ ಬಂದ ಕಾರಣದಿಂದ. ಸಣ್ಣ ಕ್ರಿಮಿಕೀಟ ವೈರಾಣುಗಳು ನನ್ನ ದೇಹ ಪ್ರವೇಶಿಸಿ ಖಾಯಿಲೆ ಬರುವುದನ್ನು ಈ ಸೋಪು ತಡೆಯುತ್ತದೆ ಎಂಬ ಅರಿವೇ ನನಗೆ ಅದನ್ನು ಮಾಡುವಂತೆ ಮಾಡುತ್ತದೆ. ಈ ಅರಿವನ್ನು ಸತ್ಯದಿಂದ ಮಾತ್ರ ಪ್ರಚುರಪಡಿಸಬಹುದೇ ಹೊರತು ಕೋಲೇಟಿನಿಂದಲ್ಲ.

ಆದರೆ ಅಂಥ ದೊಡ್ಡಪ್ರಮಾಣದಲ್ಲಿ ತಿಳುವಳಿಕೆಯನ್ನು ಜನರಲ್ಲಿ ಹಂಚಲು ಮುಖ್ಯವಾಗಿ ಬೇಕಾದದ್ದು “ನಂಬಿಕೆ”. ಜನರು ವಿಜ್ಞಾನವನ್ನು ನಂಬಬೇಕು. ಸಾರ್ವಜನಿಕ ಸಂಸ್ಥೆಗಳನ್ನು ನಂಬಬೇಕು. ಮಾಧ್ಯಮಗಳನ್ನು ನಂಬಬೇಕು. ಕಳೆದ ಹತ್ತಾರು ವರ್ಷಗಳಲ್ಲಿ ಬೇಜವಾಬ್ದಾರಿ ರಾಜಕಾರಣಿಗಳು ವಿಜ್ಞಾನ, ಸಾರ್ವಜನಿಕ ಸಂಸ್ಥೆಗಳು, ಮಾಧ್ಯಮಗಳು ಎಲ್ಲದರ ಮೇಲಿನ ನಂಬಿಕೆಯನ್ನೇ ಸೋಪು ಹಾಕಿ ತೊಳೆದುಬಿಟ್ಟಿದ್ದಾರೆ. ಈಗ ಇದೇ ಬೇಜವಾಬ್ದಾರಿ ರಾಜಕಾರಣಿಗಳು – “ಜನರಿಗೇ ಬಿಟ್ಟರೆ ಅವರು ಯಾವುದನ್ನೂ ಸರಿಯಾಗಿ ಮಾಡುವುದಿಲ್ಲ” ಎಂಬ ಅಸ್ತ್ರ ಪ್ರಯೋಗಿಸಿ, ಜವಾಬ್ದಾರಿಯ ಹೊಣೆಯನ್ನು ಜನರ ಮೇಲೆಯೇ ಎತ್ತಿಹಾಕಿ ಸರ್ವಾಧೀಕಾರೀ ಪ್ರಯೋಗಗಳಿಗೆ ಕೈ ಹಾಕುತ್ತಾರೆ.

ವರ್ಷಾಂತರಗಳ ಕಾಲದಲ್ಲಿ ತಿಕ್ಕಿತೊಳೆದುಹೋದ ನಂಬಿಕೆಯನ್ನು ರಾತ್ರೋರಾತ್ರಿ ಪುನರ್ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಆದರೆ ಇದು ಎಂದಿನ ಸಾಧಾರಣ ರಾತ್ರಿಯಲ್ಲ. ಸಂಕಷ್ಟದ ಸಂದರ್ಭದಲ್ಲಿ ಬುದ್ಧಿ ತ್ವರಿತವಾಗಿ ಓಡುತ್ತದೆ. ವಿಚಾರಗಳು ತುಕ್ಕುಕಳೆದು ಚುರುಕಾಗುತ್ತವೆ. ನಿಮ್ಮ ಅಣ್ಣತಮ್ಮಂದಿರ ಜೊತೆಗೆ ಕಾಲಾಂತರ ಜಗಳಾಡಿರಬಹುದು. ಆದರೆ ಸಮಸ್ಯೆ ಬಂದು ಅವರಲ್ಲಿಗೆ ನೀವು ಧಾವಿಸಿದಾಗ ನಿಮ್ಮೊಳಗೆ ಇದ್ದ ಪ್ರೇಮದ ಬೆಚ್ಚನೆಯ ಭಾವ ಮತ್ತೆ ನಿಮ್ಮರಿವಿಗೆ ತಕ್ಷಣ ಒದಗಿಬರುತ್ತದೆ; ಒಬ್ಬರಿಗೊಬ್ಬರು ನೆರವಾಗಲು ಆಲೋಚಿಸದೇ ಧಾವಿಸುತ್ತೀರಿ. ಹೀಗಿರುವಾಗ, ಗೂಢಾಚಾರೀ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಬದಲು ಜನರಲ್ಲಿ ಈ ವ್ಯವಸ್ಥೆ, ಮಾಧ್ಯಮಗಳ ಕುರಿತು ನಂಬಿಕೆಯನ್ನು ಮರಳಿ ಪ್ರತಿಷ್ಟಾಪಿಸಲು ಇದು ಸರಿಯಾದ ಕಾಲ. ಖಂಡಿತವಾಗಿಯೂ ನಾವು ಈ ನವ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು; ಆದರೆ ಅವುಗಳನ್ನು ಬಳಸಿಕೊಳ್ಳಬೇಕಾದ್ದು ಜನರಲ್ಲಿ ವಿಶ್ವಾಸವನ್ನು ಮತ್ತೆ ಬೆಳೆಸುವ ಕಾರ್ಯಕ್ಕೆ ಮಾತ್ರ. ಅವರ ತಿಳುವಳಿಕೆಯನ್ನು ವೃದ್ಧಿಸುವುದಕ್ಕೆ ಮಾತ್ರ. ನನ್ನ ದೇಹದ ತಾಪಮಾನವನ್ನೋ ರಕ್ತದೊತ್ತಡವನ್ನೋ ಪತ್ತೆಹಚ್ಚಲು ಈ ತಂತ್ರಜ್ಞಾನ ಬಳಸಿಕೊಳ್ಳುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ ಅದನ್ನು ಗೂಢಚಾರಿಕೆಗೆ ಬಳಸಿಕೊಳ್ಳಬಾರದು ಅಷ್ಟೇ. ಬದಲಿಗೆ ಇದೇ ದತ್ತಾಂಶಗಳನ್ನು ಬಳಸಿ ಜನರ ತಿಳುವಳಿಕೆ ವಿಶ್ವಾಸಗಳನ್ನು ವೃದ್ಧಿಸಬೇಕು. ಸರ್ಕಾರಗಳು ಜನರಿಗೆ ಉತ್ತರ ಕೊಡುವ ನೈತಿಕತೆಗೆ ಈಡಾಗಬೇಕು.

ನನ್ನ ದೇಹವನ್ನು ನಾನೇ ಇಷ್ಟು ಸ್ಪಷ್ಟತೆಯಲ್ಲಿ ಗಮನಿಸಲು ಸಾಧ್ಯವಾದರೆ, ನಾನು ಇತರ ಜನರಿಗೆ ತೊಂದರೆ ಉಂಟುಮಾಡುತ್ತೇನೆಯೇ ಎಂದು ನನಗೂ ತಿಳಿಯುತ್ತದೆ. ಹಾಗೂ ನನ್ನ ಆರೋಗ್ಯವನ್ನು ಶಕ್ತವಾಗಿ ಕಾಪಾಡಿಕೊಳ್ಳಲೂ ಸಹಾಯವಾಗುತ್ತದೆ. ಹಾಗೆಯೇ ಇದೇ ದತ್ತಾಂಶಗಳನ್ನು ನಾನೇ ನೋಡಿಕೊಳ್ಳುವ ಹಾಗಿದ್ದಾಗ, ಸರ್ಕಾರ ನನಗೆ ಸತ್ಯ ಹೇಳುತ್ತಿದೆಯೇ ಅಥವಾ ಸುಳ್ಳು ಬೊಗಳುತ್ತ ಈ ಕೊರೋನಾವನ್ನು ತಡೆಯುವ ನಾಟಕವಾಡುತ್ತಿದೆಯೋ ಎಂಬುದೂ ತಿಳಿಯುತ್ತದೆ. ಈ ಗೂಢಚಾರಿಕೆಯ ಬಗ್ಗೆ ಹೇಳುವಾಗ ನೋಡಿ: ಈ ತಂತ್ರಜ್ಞಾನಗಳು ಜನರ ಮೇಲೆ ಕಣ್ಗಾವಲಿಡಲು ಕೇವಲ ಸರ್ಕಾರಗಳಿಗೆ ಸಹಾಯ ಮಾಡುವುದಷ್ಟೇ ಅಲ್ಲ; ಸರ್ಕಾರದ ಮೇಲೆ ಕಣ್ಣಿಡಲು ಜನರಿಗೂ ಸಹಾಯ ಮಾಡುತ್ತವೆ.

ಈ ಕೊರೋನಾ ವೈರಸ್ ಎಂಬ ಸಮಸ್ಯೆ ಜನರ “ನಾಗರಿಕತ್ವ” ದ ಪರೀಕ್ಷೆ ಕೂಡಾ. ಮುಂದೆ ಬರುವ ದಿನಗಳಲ್ಲಿ ವೈಜ್ಞಾನಿಕ ಮಾಹಿತಿ ಮತು ಪರಿಣತರ ಸಲಹೆಗಳನ್ನು ನಂಬಬೇಕೋ ಅಥವಾ ಸುಳ್ಳು ಕಥೆಗಳು ಮತ್ತು ಕಳ್ಳ ರಾಜಕಾರಣಿಗಳನ್ನೋ ಎಂಬ ಆಯ್ಕೆ ನಮ್ಮೆದುರು ದೊಡ್ಡದಾಗಲಿದೆ. ಇಲ್ಲಿ ನಾವು ಸರಿಯಾದ ಆಯ್ಕೆ ಮಾಡದೇ ಹೋದರೆ – ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರ್ಕಾರ ನಡೆಸುವ ಈ ಗೂಢಚಾರಿಕೆಯೇ ಸರಿಯಾದ ದಾರಿ ಎಂದು ನಾವು ನಂಬಿಕೊಂಡು – ನಮ್ಮೆಲ್ಲ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಲಿದೆ.

ಮುಂದುವರೆಯುವುದು ..

ಕನ್ನಡಕ್ಕೆ :

ಪಾಪಿಲಾನ್ ಹೆಸರಿನಲ್ಲಿ ಬರೆಯುವ ಅವಿನಾಶ್ ಜಿ , ಋತುಮಾನದ ಸಂಪಾದಕರಲ್ಲೊಬ್ಬರು . ಹುಟ್ಟೂರು ಸಾಗರ ತಾಲೂಕಿನ ಹೆಗ್ಗೋಡು . ಸದ್ಯ ಜರ್ಮನಿಯಲ್ಲಿ “ಕಂಪ್ಯುಟೇಶನಲ್ ಲಿಂಗ್ವಿಸ್ಟಿಕ್ಸ್ ” ವಿಷಯವಾಗಿ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ .

 

2 comments to “ಕೊರೋನಾ ನಂತರದ ಜಗತ್ತು: ಸರ್ಕಾರವೆಂಬ ಗೂಢಚಾರಿ – ಭಾಗ ೧”
  1. Pingback: ಕೊರೋನಾ ಕಾಲವೆಂಬುದು “ಮನುಷ್ಯನ ಮೇಲಿನ ಗೂಢಚಾರಿಕೆ”ಯ ಯುಗದ ಬಹುಮುಖ್ಯ ಸಂಧ್ಯಕಾಲ - Naanu gauri

  2. Pingback: ಕೊರೋನಾ ನಂತರದ ಜಗತ್ತು: ಸರ್ಕಾರವೆಂಬ ಗೂಢಚಾರಿ – ಭಾಗ ೨ – ಋತುಮಾನ

ಪ್ರತಿಕ್ರಿಯಿಸಿ