ಕೊರೋನಾ ನಂತರದ ಜಗತ್ತು: ಸರ್ಕಾರವೆಂಬ ಗೂಢಚಾರಿ – ಭಾಗ ೨

ಇತ್ತೀಚಿನ ಬೌದ್ಧಿಕ ಪ್ರಪಂಚದ ರಾಕ್ ಸ್ಟಾರ್ ಮತ್ತು ಇತಿಹಾಸಕಾರ ಯುವಲ್ ನೋಹಾ ಹರಾರಿ ಕೊರೋನಾ ನಂತರದ ಪ್ರಪಂಚದ ಕುರಿತು ಇಲ್ಲಿ ಬರೆದಿದ್ದಾರೆ. ಕೊರೋನಾ ವೈರಸ್ ನ ನೆಪವಿಟ್ಟುಕೊಂದು ಸರ್ಕಾರಗಳು ನಾಗರಿಕರ ಮೇಲೆ ಗೂಢಾಚಾರಿಕೆ ನಡೆಸುವ ತಮ್ಮ ಕೆಲಸಗಳನ್ನು ಗಟ್ಟಿ ಮಾಡಿಕೊಳ್ಳುವ ಸಾಧ್ಯತೆಗಳು ಉಂಟುಮಾಡುತ್ತವೆ. “ನಿನ್ನ ಮಾಹಿತಿಯನ್ನು ನಮಗೆ ಕೊಡದೇ ಹೋದರೆ, ನಿನಗೆ ಅನಾರೋಗ್ಯ ಉಂಟಾದಾಗ ಏನು ಮಾಡುತ್ತಿ?” ಎಂಬ ಗುಮ್ಮ ತೋರಿಸಿ ಜನರನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವ ಬೇಜವಾಬ್ದಾರಿ  ರಾಜಕಾರಣಿಗಳ ಶಕ್ತಿ ಹೇಗೆ ಹೆಚ್ಚಾಗಬಹುದು ಎಂಬುದನ್ನು ಅವರು ಇಲ್ಲಿ ಚರ್ಚಿಸಿದ್ದಾರೆ.

ಈ ಲೇಖನದ ಮೊದಲನೇ ಭಾಗವನ್ನು ಇಲ್ಲಿ ಓದಬಹುದು : https://ruthumana.com/2020/03/31/word-after-corona/

ಮೊದಲ ಆಯ್ಕೆಯ ಕುರಿತು ವಿವರವಾಗಿ ಭಾಗ ಒಂದರಲ್ಲಿ ನೋಡಿದೆವು. ಈಗ:

ನಮಗೆ ಬೇಕೊಂದು ಜಾಗತಿಕ ಸಮನ್ವಯ

ನಾವು ಎದುರಿಸಬೇಕಾದ ಎರಡನೇ ಆಯ್ಕೆಯೆಂದರೆ: ಪ್ರತೀ ದೇಶವೂ ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಮಾತ್ರವೇ ಕಾಪಾಡಿಕೊಳ್ಳಬೇಕೇ? ಅಥವಾ ಜಾಗತಿಕವಾಗಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕೇ? ಎಂಬುದರ ನಡುವಿನದ್ದು. ಈ ಕೊರೋನಾ ಎಂಬ ಪಿಡುಗು ಮತ್ತು ಅದರಿಂದ ಉಂಟಾಗಲಿರುವ ಆರ್ಥಿಕ ವಿಪತ್ತು ಎರಡೂ ಸಹ ಜಾಗತಿಕ ಸಮಸ್ಯೆಯೇ ಹೊರತು ಸ್ಥಳೀಯವಾದ್ದಲ್ಲ. ಹಾಗಾಗಿ ಅದರ ಪರಿಹಾರ ಕೂಡಾ ದೇಶದೇಶಗಳ ನಡುವಿನ ಸಮನ್ವಯದಿಂದ ಮಾತ್ರ ಸಾಧ್ಯ.

ಎಲ್ಲಕ್ಕಿಂತ ಮುಖ್ಯವಾಗಿ, ಈ ವೈರಸ್ ಅನ್ನು ಮಣಿಸಲು ನಾವು ಜಗತ್ತಿನಾದ್ಯಂತ ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಈ ವೈರಸ್ ನ ಎದುರು ಮನುಷ್ಯನಿಗಿರುವ ಹೆಚ್ಚಿನ ಬಲವೇ ಅದು. ಚೈನಾದಲ್ಲಿ ಕುಳಿತ ಕೊರೋನಾ ವೈರಸ್, ಅಮೇರಿಕಾದಲ್ಲಿ ಓಡಾಡುತ್ತಿರುವ ಕೊರೋನಾ ವೈರಸ್ ನ ಜೊತೆಗೆ “ಈ ಮನುಷ್ಯರಿಗೆ ಪಾಠ ಕಲಿಸೋಣ” ಎಂದು ಮಾತನಾಡಲಾರದು. ಆದರೆ ಚೈನಾ ಒಂದು ದೇಶವಾಗಿ, ಅಮೇರಿಕಾಕ್ಕೆ ವೈರಸ್ ಅನ್ನು ಮಣಿಸಲು ಏನು ಮಾಡಬಹುದು ಎಂಬ ಪರಿಹಾರೋಪಾಯಗಳನ್ನು ಹಂಚಿಕೊಳ್ಳಬಹುದು. ಇಟಲಿಯ ವೈದ್ಯನೊಬ್ಬ ಮಿಲಾನ್ ನಲ್ಲಿ ಬೆಳಿಗ್ಗೆ ಕಂಡುಕೊಳ್ಳುವ ಉಪಾಯ ಮಧ್ಯಾಹ್ನದ ಹೊತ್ತಿಗೆ ಟೆಹರಾನ್ ನಲ್ಲಿ ಸಾವಿರಾರು ಜೀವಗಳನ್ನು ಉಳಿಸಬಹುದು. ಬ್ರಿಟಿಷ್ ಸರ್ಕಾರ ತನ್ನೆದುರು ಅನೇಕ ಮಾರ್ಗೋಪಾಯಗಳನ್ನು ಹರಡಿಕೊಂಡು ಕಂಗಾಲಾಗಿ ಕುಳಿತಿರುವಾಗ, ತಿಂಗಳ ಹಿಂದೆ ಇದೇ ಸಮಸ್ಯೆಯನ್ನು ಎದುರಿಸಿದ್ದ ಕೊರಿಯಾ ಅದಕ್ಕೆ ಸಲಹೆ ನೀಡಬಹುದು. ಆದರೆ ಇವೆಲ್ಲ ಆಗುವುದಕ್ಕೆ ನಮಗೆ ಜಾಗತಿಕ ಸಮನ್ವಯ ಮತ್ತು ನಂಬಿಕೆಗಳು ಬಹಳ ಮುಖ್ಯ.

ದೇಶಗಳು ಮಾಹಿತಿಗಳನ್ನು ತಾವೇ ಮುಂದಾಗಿ ಹಂಚಿಕೊಳ್ಳುತ್ತ, ವಿನಯದಿಂದ ಇತರ ದೇಶಗಳ ಸಲಹೆಗಳನ್ನು ಸ್ವೀಕರಿಸುತ್ತ – ಅವುಗಳು ಸ್ವೀಕರಿಸಿದ ದತ್ತಾಂಶಗಳ ಬಗ್ಗೆ ವಿಶ್ವಾಸ ತೋರಿಸಬೇಕು. ಅಗತ್ಯ ವೈದ್ಯೋಪಕರಣಗಳು – ಮುಖ್ಯವಾಗಿ ಚಿಕಿತ್ಸಾ ಕಿಟ್ ಗಳು, ಉಸಿರಾಟ ಸಲಕರಣೆಗಳನ್ನು ತಯಾರಿಸಲು ಎಲ್ಲ ದೇಶಗಳು ತಕ್ಷಣ ಒತ್ತುಕೊಡಬೇಕು. ಪ್ರತೀ ದೇಶವೂ ತನ್ನಬಳಿಯಿರುವ ಸಲಕರಣೆಗಳನ್ನು ತನಗೆ ಮಾತ್ರ ಎಂದು ಗುಡ್ಡೆಹಾಕಿಟ್ಟುಕೊಳ್ಳುವ ಬದಲು, ಪರಸ್ಪರ ಸಹಕಾರ ತೋರಿ ಉತ್ಪಾದನೆ ಆರಂಭಿಸಿದರೆ ಮಾತ್ರ ಈ ಪ್ರಕ್ರಿಯೆಗೆ ವೇಗ ಒದಗಲು ಸಾಧ್ಯ. ಜೀವರಕ್ಷಕ ಸಾಧನಗಳು ಎಲ್ಲರಿಗೂ ಅಗತ್ಯಕ್ಕೆ ತಕ್ಕಂತೆ ಒದಗಲು ಸಾಧ್ಯ. ಯುದ್ಧ ಸಮಯದಲ್ಲಿ ದೇಶಗಳು ತಮ್ಮ ಕೈಗಾರಿಕೆಗಳನ್ನು “ರಾಷ್ಟ್ರೀಕರಣ” ಗೊಳಿಸುವ ಹಾಗೆಯೇ ಈ ಕೊರೋನಾದ ವಿರುದ್ಧ ಯುದ್ಧದಲ್ಲಿ ತಯಾರಿಕೆಯನ್ನು “ಮಾನವೀಕರಣ” ಗೊಳಿಸಬೇಕಾಗಿದೆ. ಕಡಿಮೆ ಕೊರೋನಾ ಕೇಸ್ ಗಳನ್ನು ಹೊಂದಿದ ಶ್ರೀಮಂತ ರಾಷ್ಟ್ರ, ಹೆಚ್ಚು ಕೇಸ್ ಗಳನ್ನು ಹೊಂದಿದ ಬಡದೇಶಕ್ಕೆ ಅಗತ್ಯ ವಸ್ತುಗಳನ್ನು ಪೂರೈಸಬೇಕು: ತನಗೆ ಸಂಕಟ ಒದಗಿದಾಗ ಆ ದೇಶ ಇನ್ನೊಂದು ರೂಪದಲ್ಲಿ ತನಗೆ ಒದಗಿಬರುತ್ತದೆ ಎಂಬ ಆಳವಾದ ನಂಬಿಕೆಯಲ್ಲಿ ಈ ಕ್ರಿಯೆ ಜರುಗಬೇಕು.

ವೈದ್ಯರು, ದಾದಿಯರುಗಳನ್ನು ಜಾಗತಿಕ ಮಟ್ಟದಲ್ಲಿ ಒಟ್ಟುಗೂಡಿಸುವ ತುರ್ತು ಈಗ ಇದೆ. ಸಧ್ಯಕ್ಕೆ ಕಡಿಮೆ ಸಮಸ್ಯೆಗೆ ಒಳಗಾಗಿರುವ ದೇಶಗಳು ಕೂಡಲೇ ತನ್ನಲ್ಲಿರುವ ನುರಿತ ಜನರನ್ನು ಅಗತ್ಯವಿರುವ ದೇಶಕ್ಕೆ ಕಳುಹಿಸುವುದರಿಂದ ಅವರಿಗೆ ಹೆಚ್ಚಿನ ಅನುಭವ ದೊರಕುತ್ತದೆ. ಒಂದೊಮ್ಮೆ ಈ ದೇಶಕ್ಕೂ ಸಮಸ್ಯೆ ಹಬ್ಬಿದರೆ, ಆಗ ಅಲ್ಲಿನ ಅನುಭವ ಹೆಚ್ಚಿನ ಉಪಯೋಗಕ್ಕೆ ಬರುತ್ತದೆ.

ಇದೇ ಸಹಕಾರ ಆರ್ಥಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಗತ್ಯವಾಗಿದೆ. ಸಧ್ಯದ ಜಾಗತಿಕ ಆರ್ಥಿಕತೆ ಪರಸ್ಪರ ಅವಲಂಬಿತವಾಗಿರುವ ವಿಸ್ತಾರ, ಉತ್ಪಾದನೆಯ ಬಳ್ಳಿ ಹಬ್ಬಿಕೊಂಡಿರುವ ವಿನ್ಯಾಸದಲ್ಲಿ – ಒಂದು ದೇಶ ತಾನಾಯಿತು ತನ್ನ ಪಾಡಾಯಿತು ಎಂದಿದ್ದು ಬಿಟ್ಟರೆ ಆಗ ಆರ್ಥಿಕ ಚಪ್ಪರವೇ ಕುಸಿದು ಬೀಳುತ್ತದೆ. ಸಮಸ್ಯೆ ಬಿಗಡಾಯಿಸುತ್ತದೆ. ನಮಗೀಗ ಒಂದು ಜಾಗತಿಕ ಕ್ರಿಯಾಯೋಜನೆಯ ಅವಶ್ಯಕತೆ ಇದೆ. ಮತ್ತು ಅದು ಈ ಕ್ಷಣವೇ ಇದೆ.

ಪರಸ್ಪರ ಸಹಕಾರ ಈಗ ಅಗತ್ಯವಾಗಿರುವುದು ಪ್ರಯಾಣದ ವಿಚಾರದಲ್ಲಿ. ಎಲ್ಲ ಅಂತರ್ರಾಷ್ಟ್ರೀಯ ಓಡಾಟವನ್ನು ಬಂದ್ ಮಾಡಿಬಿಟ್ಟರೆ ಬಹಳವೇ ಸಮಸ್ಯೆ, ದುಃಸ್ಥಿತಿ ಉಂಟಾಗುತ್ತದೆ. ಆಗ ಈ ಕೊರೊನಾದ ವಿರುದ್ಧ ಹೋರಾಟಕ್ಕೂ ಹಿನ್ನಡೆಯಾಗುತ್ತದೆ. ಮುಖ್ಯವಾದ ಮಂದಿಯಾದ ವಿಜ್ಜ್ಞಾನಿಗಳು, ರಾಜಕಾರಣಿಗಳು, ವೈದ್ಯರು, ಪತ್ರಕರ್ತರು, ಉದ್ಯಮಿಗಳು – ಇವರನ್ನು ಹೊರತುಪಡಿಸಿ ಉಳಿದವರಿಗೆ ಗಡಿಗಳನ್ನು ಮುಚ್ಚುವುದೇ ಸೂಕ್ತ. ಪ್ರಯಾಣ ಹೊರಡುವ ಜನರ ತವರುದೇಶದಲ್ಲಿಯೇ ಅವರನ್ನು ಪರೀಕ್ಷೆಗೆ ಒಳಪಡಿಸಿ ಪ್ರಯಾಣಕ್ಕೆ ಅನುವು ಮಾಡಿಕೊಡುವ ಸಂಧಾನಕ್ಕೆ ದೇಶಗಳು ಒಪ್ಪಂದ ಮಾಡಿಕೊಳ್ಳಬೇಕು. ಮುಂಚೆಯೇ ಪರೀಕ್ಷೆಗೆ ಒಳಗಾದ ಜನರನ್ನು ಇನ್ನೊಂದು ದೇಶ ಧೈರ್ಯದಿಂದ ತನ್ನೊಳಗೆ ಬಿಟ್ಟುಕೊಳ್ಳುತ್ತದೆ.

ದುರದೃಷ್ಟ ಎಂದರೆ, ಸಧ್ಯಕ್ಕೆ ಯಾವ ದೇಶವೂ ಇದರಲ್ಲಿ ಒಂದನ್ನೂ ಸರಿಯಾಗಿ ಮಾಡುವುದಿಲ್ಲ. ಇಡೀ ಜಗತ್ತಿಗೇ ಒಂದು ಬಗೆಯ ಪಾರ್ಶ್ವವಾಯು ಬಡಿದಿದೆ. ಸಂಧಾನದ ಮೇಜಿನ ಸುತ್ತ ತಿಳುವಳಿಕಸ್ಥರು ಯಾರೂ ಕುಳಿತಂತೆಯೇ ತೋರುವುದಿಲ್ಲ. ಸರಿಯಾಗಿ ನೋಡಿದರೆ, ವಾರಗಳ ಹಿಂದೆಯೇ ಜಾಗತಿಕ ನಾಯಕರು ಇದನ್ನು ಊಹಿಸಿ ಸಭೆಸೇರಿ ಚರ್ಚಿಸಿರಬೇಕಾಗಿತ್ತು. ಒಂದು ಕಾರ್ಯಯೋಜನೆಯನ್ನು ರೂಪಿಸಿಕೊಂಡು ಅನುವಾಗಿರಬೇಕಿತ್ತು. ಜಿ೭ ದೇಶಗಳ ನಾಯಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಸೇರಿದ್ದು ಈ ವಾರ. ಅದರಿಂದಲೂ ಏನೂ ಉಪಯುಕ್ತವಾದ ಯೋಜನೆ, ರೂಪುರೇಷೆಗಳು ಹೊರಬರಲಿಲ್ಲ.

೨೦೦೮ ರ ಆರ್ಥಿಕ ಕುಸಿತ, ೨೦೧೪ರ ಎಬೋಲಾ ವಿಪತ್ತುಗಳ ಸಮಯದಲ್ಲಿ ಅಮೇರಿಕಾ ನಾಯಕನಾಗಿ ದೇಶಗಳನ್ನು ಮುನ್ನಡೆಸಿತ್ತು. ಆದರೆ ಈಗಿನ ಅಮೇರಿಕ ತನ್ನ ನಾಯಕನ ಸ್ಥಾನವನ್ನು ಮಡಚಿ ಮೂಲೆಗಿಟ್ಟಿದೆ. ಅದಕ್ಕೆ ಈಗ “ಅಮೇರಿಕಾ ನಾನು ಗ್ರೇಟ್” ಎಂಬ ಗತ್ತೇ ಹೆಚ್ಚು ಮುಖ್ಯವಾಗಿದೆಯೇ ಹೊರತು, ಮನುಷ್ಯಕುಲದ ಉದ್ಧಾರವೋ, ಭವಿಷ್ಯವೋ ಖಂಡಿತ ಬೇಕಿಲ್ಲ.

ಈಗಿನ ಅಮೇರಿಕಾದ ಆಡಳಿತ ತನ್ನ ಸಮೀಪದ ಸ್ನೇಹಿತರನ್ನೂ ಕೈಬಿಟ್ಟಿದೆ. ಯೂರೋಪಿಯನ್ ಯೂನಿಯನ್ ನಿಂದ ಪ್ರಯಾಣಿಕರನ್ನು ನಿರ್ಬಂಧಿಸುವ ಮೊದಲು ಯೂರೋಪಿಯನ್ ಒಕ್ಕೂಟಕ್ಕೆ ಮುಂಚೆಯೇ ಒಂದು ಸೂಚನೆ ಕೊಡುವುದಿರಲಿ, ಅಂಥ ಮಹತ್ವದ ಕ್ರಮಕ್ಕೆ ಮೊದಲು ಅದನ್ನು ಸಂಪರ್ಕಿಸುವ ಕೆಲಸವನ್ನೂ ಮಾಡಲಿಲ್ಲ. ಅದರ ಬದಲು ಜರ್ಮನಿಯ ಔಷಧ ತಯಾರಿಕಾ ಸಂಸ್ಥೆಗೆ ಒಂದು ಬಿಲಿಯನ್ ಡಾಲರ್ ಕೊಟ್ಟು ಕೋವಿಡ್-೧೯ ನ ಲಸಿಕೆಯನ್ನು ಪೂರ್ಣ ಸ್ವಾಧೀನಪಡಿಸಿಕೊಳ್ಳುವ ಮಾತಾಡಿ ಜರ್ಮನಿಯ ಕೋಪಕ್ಕೂ, ತಿರಸ್ಕಾರಕ್ಕೂ ತುತ್ತಾಯಿತು. ಒಂದೊಮ್ಮೆ ಈಗಿನ ಆಡಳಿತ ತನ್ನ ನಡೆ ಬದಲಿಸಿಕೊಂಡು ಒಂದು ಕಾರ್ಯಯೋಜನೆಯೊಂದಿಗೆ ಮುಂದೆ ಬಂದರೂ ಸಹ – ಜವಾಬ್ದಾರಿಯೇ ತೆಗೆದುಕೊಳ್ಳದ ನಾಯಕನನ್ನು ಯಾರೂ ನಂಬುವುದಿಲ್ಲ. ತನ್ನ ತಪ್ಪನ್ನು ಯಾವತ್ತೂ ಒಪ್ಪಿಕೊಳ್ಳದೇ, ಸರಿಯಾದ್ದಕ್ಕೆಲ್ಲಾ ತಾನೇ ಕಾರಣ, ತಪ್ಪು ಮಾತ್ರ ಉಳಿದವರದ್ದೆಂದು ಗೂಬೆ ಕೂರಿಸುವ ನಾಯಕತ್ವ ಯಾರಿಗೂ ಬೇಕಿಲ್ಲ.

ಅಮೇರಿಕಾದ ಈ ಬೇಜಾವಾಬ್ದಾರಿಯಿಂದ ಖಾಲಿಯಾಗಿರುವ ಸ್ಥಳವನ್ನು ಯಾರಾದರೂ ತ್ವರಿತವಾಗಿ ವಹಿಸಿಕೊಂದು ಮುನ್ನಡೆಸದೇ ಹೋದರೆ, ಈ ವೈರಸ್ ನ ಹಾವಳಿಯನ್ನು ತಡೆಯುವುದು ಕಷ್ಟವಿದೆ ಮಾತ್ರವಲ್ಲ, ಮುಂಬರುವ ಅನೇಕ ವರ್ಷ ಅಂತರಾಷ್ಟ್ರೀಯ ಸಂಬಂಧಗಳು ವಿಷಮಯವಾಗುವ ಸಾಧ್ಯತೆಗಳು ಸ್ಪಷ್ಟವಾಗಿವೆ. ಎಲ್ಲ ಸಂಕಷ್ಟವೂ ಒಂದು ಅವಕಾಶವೇ. ಈ ಎಪಿಡಮಿಕ್ ನ ನೆಪದಲ್ಲಾದರೂ, ಜಾಗತಿಕ ವಿರಸವೆಂಬುದು ಮನುಷ್ಯಕುಲಕ್ಕೆ ಎಷ್ಟು ಅಪಾಯಕಾರಿಯಾಗಬಲ್ಲದು ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ.

ಇದು ಇಡೀ ಮನುಷ್ಯಕುಲ ಒಟ್ಟಾಗಿ ಮಾಡಬೇಕಾದ ಒಂದು ಆಯ್ಕೆ. ನಾವು ಪರಸ್ಪರ ವಿರಸದಿಂದ ಬಾಳಲು ತೀರ್ಮಾನಿಸುತ್ತೇವೋ ಅಥವಾ ಜಾಗತಿಕ ಹೊಂದಾಣಿಕೆಯನ್ನು ಬಳಸುತ್ತೇವೋ? ಒಂದೊಮ್ಮೆ ವಿಚ್ಛೇದವೇ ನಮ್ಮ ಆಯ್ಕೆಯಾಗಿದ್ದರೆ, ಈ ಪಿಡುಗನ್ನು ಕೊನೆಗಾಣಿಸುವುದು ಮಾತ್ರವೇ ದುಸ್ತರವಲ್ಲ, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ದುರಂತಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತೇವೆ. ಅಥವಾ ಸಮನ್ವಯದ ಪ್ರಾಮುಖ್ಯ ನಮ್ಮ ಅರಿವಿಗೆ ಬಂದರೆ, ಅದು ಕೊರೋನಾವೈರಸ್ ನ ವಿರುದ್ಧದ ಗೆಲುವು ಮಾತ್ರವೇ ಆಗುವುದಿಲ್ಲ; ಬದಲು ೨೧ನೇ ಶತಮಾನದಲ್ಲಿ ಮನುಷ್ಯ ಸಂಕುಲ ಎದುರಿಸಬಹುದಾದ ಇನ್ನೂ ಅನೇಕ ಪಿಡುಗುಗಳ ವಿರುದ್ಧದ ವಿಜಯವೂ ಆಗಲಿದೆ.

ಕನ್ನಡಕ್ಕೆ :

ಪಾಪಿಲಾನ್ ಹೆಸರಿನಲ್ಲಿ ಬರೆಯುವ ಅವಿನಾಶ್ ಜಿ , ಋತುಮಾನದ ಸಂಪಾದಕರಲ್ಲೊಬ್ಬರು . ಹುಟ್ಟೂರು ಸಾಗರ ತಾಲೂಕಿನ ಹೆಗ್ಗೋಡು . ಸದ್ಯ ಜರ್ಮನಿಯಲ್ಲಿ “ಕಂಪ್ಯುಟೇಶನಲ್ ಲಿಂಗ್ವಿಸ್ಟಿಕ್ಸ್ ” ವಿಷಯವಾಗಿ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ .

One comment to “ಕೊರೋನಾ ನಂತರದ ಜಗತ್ತು: ಸರ್ಕಾರವೆಂಬ ಗೂಢಚಾರಿ – ಭಾಗ ೨”

ಪ್ರತಿಕ್ರಿಯಿಸಿ