ಷಡಕ್ಷರಪ್ಪ ಶೆಟ್ಟರ್ : ಕರ್ನಾಟಕ ಸಂಸ್ಕೃತಿ ಓದಿನ ಕಾಲುದಾರಿಗಳು

ಶೆಟ್ಟರ್ ಅವರು ಹಲವು ಅಧ್ಯಯನ ಶಿಸ್ತುಗಳಲ್ಲಿ ತಮ್ಮ ಚಿಂತನೆಗಳನ್ನು ಬೆಳೆಸಿರುವುದನ್ನು ಅವರೆಲ್ಲ ಅಧ್ಯಯನಗಳ ಮೂಲಕ ನಾವು ಮನಗಾಣಬಹುದು. ಪ್ರಸ್ತುತ ಬರಹದಲ್ಲಿ ಶೆಟ್ಟರ್ ಅವರು ತಮ್ಮ ಚಿಂತನೆಗಳ ಮೂಲಕ ಕರ್ನಾಟಕ ಸಂಸ್ಕೃತಿ ಓದಿನ ಕಾಲುದಾರಿಗಳನ್ನು ಹೇಗೆ ರೂಪಿಸಿದ್ದಾರೆ, ಅವುಗಳ ಮುಖೇನ ಕರ್ನಾಟಕದ ನುಡಿ, ನುಡಿ ಪರಂಪರೆ, ಬರಹ ವ್ಯವಸಾಯ, ಲಿಪಿ ವಿಕಾಸ ಹಾಗೂ ಲಿಪಿಕಾರರನ್ನು ಕುರಿತ ಓದಿನ ಸಾಧ್ಯತೆಯ ಜಾಡುಗಳನ್ನು ಹೇಗೆ ನಿಚ್ಚಳಗೊಳಿಸಿದ್ದಾರೆ ? ಸಾಮಾಜಿಕ ಚರಿತ್ರೆಯ ಹಲವು ಮಾದರಿಗಳನ್ನು ಹೊಸದಾಗಿ ಕಂಡರಿಯಲು ಇಲ್ಲಿ ಯಾವೆಲ್ಲ ಅವಕಾಶಗಳು ಏರ್ಪಟ್ಟಿವೆ ? ಎಂದು ನೋಡಿದಾಗ ಮುಖ್ಯವಾಗಿ ಕನ್ನಡ-ತಮಿಳು, ಕನ್ನಡ-ಸಂಸ್ಕೃತ , ಕನ್ನಡ-ಪ್ರಾಕೃತ ನುಡಿಗಳ ನಡುವಣ ಅನುಸಂಧಾನದ ವಿನ್ಯಾಸಗಳು ಮತ್ತು ವೈಚಿತ್ರ್ಯಗಳನ್ನು ಏಕಕಾಲಕ್ಕೆ ಗುರುತಿಸುವ ಪ್ರಯತ್ನವನ್ನು ಶೆಟ್ಟರ್ ಅವರ ಬಹುತೇಕ ಬರಹಗಳಲ್ಲಿ ಕಾಣುತ್ತೇವೆ. ವಾಸ್ತುಶಿಲ್ಪ ಮತ್ತು ಶಾಸನಗಳ ನಡುವಣ ಐತಿಹಾಸಿಕ ಸಂಬಂಧಗಳು, ಇವುಗಳ ಪರಿಣಾಮದಿಂದ ಭಾಷೆಯೊಳಗೆ ಉಂಟಾಗಿರುವ ಸಾಂಸ್ಕೃತಿಕ ಪಲ್ಲಟಗಳನ್ನು ಹೇಗೆ ನೋಡಬೇಕು ಎನ್ನುವುದು ಅತ್ಯಂತ ಮಹತ್ವದ ಪ್ರಶ್ನೆಯಾಗಿದೆ. ಸಂಶೋಧನೆಯ ಪ್ರಕ್ರಿಯೆಯೊಳಗೆಯೇ ಏರ್ಪಡುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿಣಾಮ ಹಾಗೂ ಪ್ರಭಾವಗಳನ್ನು ಮರು ಪರಿಶೀಲಿಸುವ ವಿಧಾನಗಳು ಶೆಟ್ಟರ್ ಒಟ್ಟು ಅಧ್ಯಯನಗಳಲ್ಲಿ ಪ್ರಕಟಗೊಂಡಿವೆ. ಈ ವಿನ್ಯಾಸಗಳನ್ನು ಖಚಿತವಾಗಿ ವಿಶ್ಲೇಷಿಸಲು, ಶೆಟ್ಟರ್ ಅವರ ಮೂರು ಪ್ರಮುಖ ಹೊತ್ತಿಗೆಗಳನ್ನು ಇಲ್ಲಿ ಪರಿಗಣಿಸಲಾಗಿದೆ.

ನುಡಿ ಚರಿತ್ರೆ, ಪರಂಪರೆ ಹಾಗೂ ಅಸ್ಮಿತೆಯ ಚಹರೆಗಳನ್ನು ಗುರುತಿಸುವ ಇಡೀ ಪ್ರಕ್ರಿಯೆಯೊಳಗೆ ಹಲವು ಸಂಸ್ಕೃತಿ ಓದಿನ ಮಾದರಿಗಳನ್ನು ಕಳೆದ ಒಂದುಕಾಲು ಶತಮಾನದ ಅವಧಿಯಲ್ಲಿ ಕನ್ನಡ ವಿದ್ವತ್ ಲೋಕವು ಅನುಸರಿಸಿದೆ. ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಫ.ಗು. ಹಳಕಟ್ಟಿ, ಶಿ.ಶಿ. ಬಸವನಾಳ, ತೀನಂಶ್ರೀ, ಬಿಎಂಶ್ರೀ, ಡಿಎಲ್‍ಎನ್, ಸೇಡಿಯಾಪು, ನಾ.ಶಿ. ರಾಜಪುರೋಹಿತ, ಕಪಟಳರಾವ್, ಶಂಬಾ ಜೋಶಿ, ಚಿಮೂ, ಎಂ.ಎಂ. ಕಲಬುರ್ಗಿ, ಷ. ಶೆಟ್ಟರ್, ಡಿಎನ್‍ಎಸ್ ಭಟ್, ವೆಂಕಟಾಚಲಶಾಸ್ತ್ರಿ, ಕೆವಿಎನ್, ಡಿಆರ್‍ಎನ್ ಹಾಗೂ ರಹಮತ್ ತರೀಕೆರೆ ಮೊದಲಾದ ಕೆಲವರ ಅಧ್ಯಯನ ಮಾದರಿಗಳನ್ನು ಪರಿಶೀಲಿಸಿದರೆ, ಕನ್ನಡ ವಿದ್ವತ್ ಲೋಕದಲ್ಲಿ ಮೈದಾಳಿದ ಸಂಸ್ಕೃತಿ ಓದಿನ ಮಾದರಿಗಳ ಸ್ವರೂಪವನ್ನು ಅರಿಯಬಹುದು. ಇಲ್ಲಿ ಉಲ್ಲೇಖಿಸಿದ ಎಲ್ಲಾ ವಿದ್ವಾಂಸರು ಯಾವುದೇ ಒಂದು ಗೊತ್ತುಪಡಿಸಿದ ಓದಿನ ಮಾದರಿಯನ್ನು ಅನುಸರಿಸಿರುವುದಿಲ್ಲ. ಬದಲಾಗಿ ಅವರವರ ಅಧ್ಯಯನಶಿಸ್ತು ಹಾಗೂ ತಾತ್ವಿಕತೆಯ ಹಿನ್ನಲೆಯ ಮೂಲಕ ತಮ್ಮ ಸಂಸ್ಕೃತಿ ಓದಿನ ಮಾದರಿಗಳನ್ನು ರೂಪಿಸಿಕೊಂಡಿರುತ್ತಾರೆ. ಈ ಎಲ್ಲ ಮಾದರಿಗಳನ್ನು ಪ್ರಮುಖವಾಗಿ ಮೂರು ನೆಲೆಗಳಲ್ಲಿ ಗುರುತಿಸಬಹುದು:

1. ಕ್ಲಾಸಿಕಲ್ ಯುಗ (ಪ್ರಾಚೀನ ಕಾಲದಿಂದ ಶುರುವಾಗಿ ಐರೋಪ್ಯರ ಆಗಮನದವರೆಗೆ)
2. ವಸಾಹತು ಯುಗ (ಯುರೋಪಿನ ವಸಾಹತುಗಳ ಆಗಮನದಿಂದ ಸ್ವಾತಂತ್ರ್ಯ ಕಾಲದವರೆಗೆ)
3. ಸ್ವಾತಂತ್ರೋತ್ತರ ಯುಗ (1947 ರಿಂದ ಈ ಹೊತ್ತಿನವರೆಗೆ)

ಶೆಟ್ಟರ್ ಅವರ ಅಧ್ಯಯನಗಳನ್ನು ಕುರಿತ ನನ್ನ ವಿಶ್ಲೇಷಣೆಗಳ ಅನುಕೂಲಕ್ಕಾಗಿ ಈ ಮೂರು ದಾರಿಗಳನ್ನು ವ್ಯಾಪಕವಾಗಿ ಇಲ್ಲಿ ವರ್ಗೀಕರಿಸಲಾಗಿದೆ. ಕರ್ನಾಟಕ ಸಂಸ್ಕೃತಿ ಓದಿನ ದಾರಿಗಳು ಬಹುತೇಕವಾಗಿ ಇದೇ ಸ್ವರೂಪದಲ್ಲಿ ವಿಕಾಸಗೊಂಡಿವೆ. ಆದರೆ ಶೆಟ್ಟರ್ ಅವರು ಕ್ಲಾಸಿಕಲ್ ಯುಗಕ್ಕೆ ಸಂಬಂಧಿಸಿದ ಅಧ್ಯಯನಗಳನ್ನು ಕೈಗೊಂಡಿದ್ದರೂ, ಅವುಗಳನ್ನು ಯಥಾವತ್ತಾಗಿ ಈ ವರ್ಗೀಕರಣಕ್ಕೆ ಸೀಮಿತಗೊಳಿಸಿ ನೋಡಲು ಸಾಧ್ಯವಿಲ್ಲ. ಏಕೆಂದರೆ, ನುಡಿ ಸಂಸ್ಕೃತಿ ಗೆ ಸಂಬಂಧಿಸಿದ ಶೆಟ್ಟರ್ ಅವರು ಅಧ್ಯಯನಗಳು ಮೊದಲ ಸಹಸ್ರಮಾನಕ್ಕೆ ಮಾತ್ರ ಸೀಮಿತವಾಗಿವೆ. ಸಂಸ್ಕೃತ ನುಡಿ ಪರಂಪರೆಯ ಮೂಲಕ ಮೈದಾಳಿದ ತಾತ್ವಿಕ ವಿಧಿ ವಿಧಾನಗಳನ್ನು ಅನುಸರಿಸದೇ, ತಮಿಳು ಮತ್ತು ಪ್ರಾಕೃತ ಮೂಲಕ ತಮ್ಮ ಅಧ್ಯಯನ ಮಾದರಿಗಳನ್ನು ರೂಪಿಸಿಕೊಂಡಿರುವುದನ್ನು ಈ ಮುಂದಿನ ವಿಶ್ಲೇಷಣೆಗಳ ಕಣ್ನೋಟದಲ್ಲಿ ಮನಗಾಣಬಹುದು.

ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ: ಕನ್ನಡ ಅನನ್ಯತೆಯ ಮೂಲ ಬೇರುಗಳ ಶೋಧ

ಚರಿತ್ರೆಯನ್ನು ಕಟ್ಟುವ ಮತ್ತು ಮುರಿದು ಕಟ್ಟುವ ಪ್ರಕ್ರಿಯೆಯು ಒಂದು ಹುಡುಕಾಟದ ನೆಲೆಯನ್ನು ಆಧರಿಸಿಕೊಂಡು ರೂಪಗೊಳ್ಳುವುದು ಸಹಜ. ಈ ಪ್ರಕ್ರಿಯೆಯ ಗುರಿ-ಉದ್ದೇಶಗಳ ಆಶಯವನ್ನು ಅರಿತುಕೊಂಡಾಗ ಮಾತ್ರ ಅದರ ಮಹತ್ವ ಮನವರಕೆಯಾಗುವುದು. ಇಂತಹ ಒಂದು ಚರಿತ್ರೆಯನ್ನು ಪುನರ್ ಕಟ್ಟುವ ಮಹತ್ವದ ಪ್ರಕ್ರಿಯಯು ಪ್ರೊ. ಷ.ಶೆಟ್ಟರ್ ಅವರಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ” ಎಂಬ ಸಂಶೋಧನೆಯ ಫಲವಾಗಿ ನಮಗೆ ದಕ್ಕಿರುತ್ತದೆ. ಈ ಸಂಶೋಧನೆಯು ಯಾವುದೆ ನಿರ್ಣಾಯಕ ನಿಲುವುಗಳನ್ನು ಪ್ರಕಟಿಸುವ ಇರಾದೆಯನ್ನು ಅಂತೀಮವಾಗಿ ಇಟ್ಟುಕೊಳ್ಳದೇ ಬದಲಾಗಿ ಚಾರಿತ್ರಿಕ ಸತ್ಯದ ಸಾಧ್ಯತೆಗಳ ಸುಳುವುಗಳನ್ನು ಒದಗಿಸಿಕೊಡುವದರ ಬಗ್ಗೆ ಹೆಚ್ಚು ಒಲವನ್ನು ತೋರಿಸಿರುವುದು. ಸಧ್ಯದ ಪರಸ್ಥಿತಿಯಲ್ಲಿ ಕನ್ನಡದ ಪ್ರಾಚಿನತೆ/ಪರಂಪರೆಯ ನೆಲೆಗಳನ್ನು ಮತ್ತು ಅದರ ಚಹರೆಗಳನ್ನು ಗುರುತಿಸುವ ಹಂಬಲ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಸಂಶೋಧನೆಯು ಬಂದಿರುವುದು ಗಮನಾರ್ಹ. ಇಂತಹ ಹಂಬಲಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನದಂತಹ ಬೇಡಿಕೆಗಳೂ ಕಾರಣವಿರಬಹುದು. ಇದಕ್ಕಿಂತ ಹೆಚ್ಚಾಗಿ ಈ ಸಂಶೋಧನೆಯು ಕನ್ನಡದ ಪ್ರಾಚೀನತೆ ಮತ್ತು ಅದರ ಚಲನಶೀಲತೆಯನ್ನು ವಿವರಿಸಲು ಹೊಸ ಚೌಕಟ್ಟನ್ನು ನಿರ್ಮಿಸಿಕೊಡುತ್ತದೆ. ಈ ಒಂದು ಚೌಕಟ್ಟು ದ್ರಾವಿಡರ ಆಲೋಚನಕ್ರಮವೂ ಆಗುವ ಸಾಧ್ಯತೆಗಳ ನೆಲೆಗಳನ್ನು ಗುರುತಿಸುವ ಸಂದರ್ಭದ ಕ್ರಮವಾಗಿರಬಹುದು. ಒಂದು ಸಂಸ್ಕೃತಿ, ಭಾಷೆ ಹಾಗೂ ಅವುಗಳು ಗುರುತಿಸಿಕೊಂಡ ಅಧಿಕಾರದ ಸಂಬಂಧ ಮತ್ತು ಪ್ರತಿನಿಧಿಸುವ ಆಲೋಚನ ಕ್ರಮಗಳು ರೂಪಗೊಂಡ ಬಗೆಯನ್ನು ಹಾಗೂ ಅವುಗಳು ವಿಸ್ತಾರಗೊಂಡ ವಿಧಾನವನ್ನು ಪುನರ್‍ಶೋಧಿಸುವ ಪರಿಕರಗಳು ಇಂತಹ ಅಧ್ಯಯನಗಳಿಂದ ದೊರಕಲು ಸಾಧ್ಯ. ಏಕೆಂದರೆ, ಶೆಲ್ಡನ್ ಪೊಲಾಕ್ ಅವರ ಅಧ್ಯಯನ ಮಾದರಿಗಳು ಪಡೆದುಕೊಂಡಿರುವ ಪ್ರಾಮುಖ್ಯತೆ ಕನ್ನಡದ ಪಾರಂಪರಿಕ ಚಹರೆಗಳನ್ನು ಪ್ರಕಟಿಸುವದರ ಬದಲಾಗಿ ಸಂಸ್ಕೃತದಂತಹ ವಿಶ್ವಾತ್ಮಕ ಭಾಷೆಯ ಆಶ್ರಯದ ಅನುಸಂಧಾನದೊಂದಿಗೆ ಕನ್ನಡದಂತಹ ದೇಶಿ ಭಾಷೆಗಳು ತಮ್ಮ ಪರಂಪರೆಯನ್ನು ರೂಪಿಸಿಕೊಂಡವು ಎನ್ನುವ ಹುಸಿ ಸಾಂಸ್ಕೃತಿಕ ಕಲ್ಪನೆಗಳನ್ನು ಸ್ಥಾಪಿಸಿರುವವು. ಶೆಟ್ಟರ್ ಅವರ ಅಧ್ಯಯನವು ಈ ಮಾದರಿಗಳನ್ನು ನೇರವಾಗಿ ಅಡ್ರೆಸ್ ಮಾಡದಿದ್ದರೂ ಆ ಅಧ್ಯಯನಗಳು ಸೃಷ್ಟಿಸಿರುವ ಕಲ್ಪನೆಗಳನ್ನು ಹುಸಿ ಎಂದು ರುಜುವಾತುಪಡಿಸಲು ಸಹಾಯಕಾರಿ ಎನ್ನುವುದು ಮಾತ್ರ ಸ್ಪಷ್ಟ. ಹಾಗಾಗಿ, ಡಿ.ಎನ್.ಎಸ್.ಭಟ್ ಅವರು ಕನ್ನಡ-ಸಂಸ್ಕೃತದ ನಡುವಿನ ಸಂಬಂಧ ಮತ್ತು ಅನುಸಂಧಾನವನ್ನು ಕುರಿತು ಎತ್ತುವ ಪ್ರಶ್ನೆಗಳು ಕೂಡ ಶೆಟ್ಟರ್ ಅವರ ಅಧ್ಯಯನದ ಆಶಯಗಳಿಗೆ ಪೂರಕವಾಗಬಲ್ಲಂತವುಗಳಾಗಿವೆ. ಗತಕಾಲವನ್ನು ಮರುಸಂಪಾದಿಸುವ (Reclaiming the past) ಪ್ರಕ್ರಿಯೆಯು ಮೇಲ್ ನೋಟಕ್ಕೆ ಬಹಳ ಸರಳವಾಗಿ ಪರಿಣಮಿಸಬಹುದು ಆದರೆ, ಅದು ಸೃಷ್ಟಿಸುವ ಚಾರಿತ್ರಿಕ ಸಂಕೀರ್ಣತೆ ಬಹಳ ಜಟಿಲವಾದದ್ದು. ಆದ್ದರಿಂದ, ಇಂತಹ ಆಲೋಚನೆಗಳು ನಮ್ಮ ಚಾರಿತ್ರಿಕ-ಸಾಂಸ್ಕೃತಿಕ ತಿಳುವಳಿಕೆಯನ್ನು ವಿಸ್ತಾರಗೊಳಿಸುವ ಮಾನದಂಡಗಳಾಗುತ್ತವೆ. ಅಂದರೆ, ಶೆಟ್ಟರ್ ಅವರ ವಾದಗಳು ಚರಿತ್ರೆಯ ಸತ್ಯಗಳ ಪುನರ್ ಶೋಧವಾದುದ್ದರಿಂದ ಕನ್ನಡದ ಮೂಲ/ಆದಿಮ ಸ್ವರೂಪವನ್ನು ಅರ್ಥೈಸಿಕೊಳ್ಳಲು ಪೂರಕವಾಗುತ್ತವೆ. ಈ ಆಲೋಚನ ಕ್ರಮದಿಂದ ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿಯನ್ನು ತೋಲ್ಗಾಪ್ಪಿಯರ್ ಮತ್ತು ಶಂಗಂ ಕಾವ್ಯ ಹಾಗೂ ಕವಿರಾಜಮಾರ್ಗಕಾರ ಇವರ ಕೃತಿಗಳನ್ನು ಅನುಸರಿಕೊಂಡು ಕನ್ನಡ-ತಮಿಳ ಭಾಷೆಗಳು ರೂಪಿಸಿಕೊಂಡ ಪಾರಂಪರಿಕ ಅನನ್ಯತೆಯ ನೆಲೆಗಳ ಹಿಂದಿರುವ ಪ್ರೇರಣೆ ಮತ್ತು ಪ್ರಕ್ರಿಯೆಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನವಾಗಿದೆ.

“ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಳಯವಿಲೀನ ವಿಶದ ವಿಷಯವಿಶೇಷಂ” ಈ ಉಲ್ಲೇಖವು ಪಾರಂಪರಿಕವಾಗಿ ರೂಢಿಗೊಂಡ ಒಂದು ಪರಂಪರೆಯನ್ನು ಪ್ರತಿನಿಧಿಸುವಂತೆ ತೋರುವುದು. ಆದರೆ, ಕವಿರಾಜಮಾರ್ಗದ ಕಾವ್ಯಮೀಮಾಂಸೆಗೆ ಸಂಬಂಧಪಟ್ಟ ವಿವರಗಳನ್ನು ಗಮನಿಸಿದಾಗ, ಈ ಪರಂಪರೆಯು ಕನ್ನಡದ ಅಂತಸತ್ವವನ್ನು ಕಸಿಮಾಡಿಕೊಂಡು ರೂಪಗೊಳ್ಳುವದಕ್ಕಿಂತ ಹೆಚ್ಚಾಗಿ ಸಂಸ್ಕೃತ ಕಾವ್ಯಮೀಮಾಂಸೆಯೊಳ್ ಅವತರಿಸಿರುವುದು ಒಂದು ಚಾರಿತ್ರಿಕ ವಿಪರ್ಯಾಸವೇ ಸರಿ. ತಮಿಳ ಭಾಷಾ ಸಾಹಿತ್ಯವು ರೂಪಿಸಿಕೊಂಡ ಕಾವ್ಯಮೀಮಾಂಸೆಯ ಮಾದರಿಗಳಾದ “ಅಹಂ” ಮತ್ತು “ಪುರಂ” ಎಂಬಂತಹ ಕಲ್ಪನೆಗಳು ಯಾಕೆ ಕನ್ನಡಕ್ಕೆ ಸಾಧ್ಯವಾಗಲಿಲ್ಲ ಎನ್ನುವುದು ಯಕ್ಷ ಪ್ರಶ್ನೆ. ಈ “ಅಹಂ” ಮತ್ತು “ಪುರಂ” ಪ್ರಕಾರಗಳು ಒಂದು ಭಾಷಾ ಸಮುದಾಯದ ಸಾಹಿತ್ಯ ತತ್ವಗಳಾಗಿ ರೂಪಗೊಂಡು ಒಂದು ಪರಂಪರೆಯನ್ನು ನಿರ್ಮಿಸಿರುತ್ತವೆ. ಆದರೆ ಈ ಬಗೆಯ ಪ್ರೇರಣೆಯನ್ನು ಕವಿರಾಜಮಾರ್ಗಕಾರ ಒದಗಿಸಲಿಲ್ಲ. ಹಾಗಾಗಿ, ಕನ್ನಡದ ದೇಶಿಯ ಕಾವ್ಯಪ್ರಭೇದಗಳಂದೇ ಚಾಲ್ತಿಯಲ್ಲಿದ್ದ “ಚೆತ್ತಾಣ” ಮತ್ತು “ಬೆದಂಡ”ಗಳು ಎಂದೂ ಕನ್ನಡಭಾಷಾ ಸಮುದಾಯದ ಸಾಹಿತ್ಯ ತತ್ವಗಳಾಗಿ ರೂಪಗೊಂಡು ಒಂದು ಪರಂಪರೆಯನ್ನು ನಿರ್ಮಿಸಲಿಲ್ಲ. ಕವಿರಾಜಮಾರ್ಗಕಾರನು ಕಟ್ಟುವ ಕನ್ನಡ ಪ್ರಜ್ಞೆ ಮತ್ತು ಸಾಹಿತ್ಯ ಸಂವೇದನೆಯು ತೋಲ್ಗಾಪ್ಪಿಯರ್‍ನು ಸೃಷ್ಟಿಸಿದ ವಿಧಾನಕ್ಕಿಂತ ಭಿನ್ನವಾಗಿರುವುದಕ್ಕೆ ಯುಗಧರ್ಮವೇ ಮಾತ್ರ ಜವಾಬ್ದರಿಯಾಗಲಾರದು ಎನ್ನುವುದು ಪರಿಗಣಿಸಬೇಕಾದ ವಾದ. ಸಂಸ್ಕೃತ ಭಾಷೆಯು ಕನ್ನಡ ಜಗತ್ತನ್ನು ತನ್ನ ಒಡಲಲ್ಲಿರಿಸಿಕೊಂಡು ತನ್ನ ಆಂತರಿಕ ಧೋರಣೆಗಳನ್ನು ಆ ಮುಖೇನ ಪ್ರಕಟಿಸಿರುವುದು ಸ್ಪಷ್ಟವಾಗುವುದು. ಅಂದರೆ ಸಂಸ್ಕೃತದ ಪ್ರಭಾವ ಮತ್ತು ಯಜಮಾನಿಕೆಯು ಕನ್ನಡ ಪರಂಪೆಯನ್ನು ದ್ರಾವಿಡ ಪರಂಪರೆಗೆ ವಿಭಿನ್ನವಾಗಿ ರೂಪಿಸಿರುವುದು. ಇದನ್ನು ಇನ್ನೂ ಸ್ಪಷ್ಟಗೊಳಿಸಬೇಕಂದರೆ, ಕನ್ನಡದ ವೈಚಾರಿಕ, ಸಾಹಿತ್ಯಿಕ ನಿಲುವು-ನಿರ್ಧಾರಗಳು ಸಂಸ್ಕೃತದಿಂದಲೇ ನಿರ್ದೇಶನಗೊಂಡಿರುವುದೇ ಕಾರಣ. ವಿಚಿತ್ರವೆಂದರೆ, ಶೆಲ್ಡನ್ ಪೊಲಾಕ್ ಅವರಂತಹ ವಿದ್ವಾಂಸರ ಪ್ರಕಾರ ಕನ್ನಡದಂತಹ ಭಾಷೆಗಳು, “ಸಂಸ್ಕೃತ ಮೀಮಾಂಸೆಯ ವ್ಯವಸ್ಥೆಯು, ದೇಶೀ ಭಾಷೆಗೆ ಒಂದು ಚೌಕಟ್ಟನ್ನು ಹಾಕಿಕೊಟ್ಟು ಅದರ ಒಳಗೇ ತನ್ನ ಸ್ವೋಪಜ್ಞತೆಯನ್ನು ಪ್ರದರ್ಶಿಸಲಕ್ಕೆ ಅದಕ್ಕೆ ಅವಕಾಶ ಮಾಡಿಕೊಟ್ಟಿತು. ಇಂಥ ಅವಕಾಶವನ್ನು ಬಳಸಿಕೊಂಡು ದೇಶಭಾಷಾ ಸಾಹಿತ್ಯಗಳು ಉದ್ಭವಿಸಿದ ಪ್ರಕ್ರಿಯೆಯನ್ನೇ ನಾನು ‘ಸಾಹಿತ್ಯೀಕರಣ’ ಎಂದು ಕರದಿದ್ದೇನೆ; ಇದು, ಮೇಲ್ಮೆಯನ್ನು ಪಡೆದ ಒಂದು ಸಾಂಸ್ಕೃತಿಕ ಪದ್ಧತಿಯೊಂದಿಗೆ ಪೂರಕವಾದ ಸಂಬಂಧವನ್ನು ಇಟ್ಟುಕೊಂಡೇ ಹೊಸ ಸಾಹಿತ್ಯವೊಂದು ಸೃಷ್ಟಿಯಾಗು ಪ್ರಕ್ರಿಯೆ” (ಶಲ್ಡನ್ ಪೊಲಾಕ್: ವಿಶ್ವಾತ್ಮಕ ದೇಶ ಭಾಷೆ: 14:2003). ಎನ್ನುವ ಆಲೋಚನ ಕ್ರಮವು ಒಂದು ಹುಸಿವಾದ ಎನ್ನುವುದು ಶೆಟ್ಟರ್ ಅವರ ಈ ಅಧ್ಯಯನದಿಂದ ಪ್ರಕಟಗೊಳ್ಳುವುದು. ಅಂದರೆ, “ಯುಗಧರ್ಮವು ಬದಲಾಗಿ, ತನ್ನ ಜೇಷ್ಠತೆಯನ್ನು ಸಂಸ್ಕೃತ ಪ್ರತಿಷ್ಠಾಪಿಸಿಕೊಂಡಿದ್ದು ಮಾರ್ಗಕಾರನ ಕಾಲದಲ್ಲಿ, ಸಂಸ್ಕೃತ ಪದಗಳನ್ನು ದೇಸೀ ಭಾಷೆಗೆ ತಂದುಕೊಳ್ಳುವುದು ಹೆಮ್ಮೆಯ ಹಾಗೂ ಗೌರವಾನ್ವಿತ ಗುಣವಾಗಿ ಪರಿವರ್ತನೆಗೊಂಡಿತ್ತು. ಸಂಸ್ಕೃತದ ಉಕ್ತಿಮಾರ್ಗವನ್ನು ವಿವೇಚಿಸಿ, ಅವುಗಳನ್ನು ಕನ್ನಡಕ್ಕೆ ಹೊಂದಿಸಿಕೊಂಡಾಗ ಮಾತ್ರ ಕಾವ್ಯವು ನಿರ್ದುಷ್ಟವೂ ಶೋಭಾಯಮಾನವೂ ಆಗುವುದೆಂಬುದನ್ನು ಮಾರ್ಗಕಾರನು “ನೆಗಳ್ದರ್ದ ಕನ್ನಡಂಗಳೊಳಗಣಿತ-ಗುಣ-ವಿದಿತ-ಸಂಸ್ಕೃತೋಕ್ತ-ಕ್ರಮಮಂ ಬಗೆದೊಂದು ಮಾಡಿ ಪೇಳ್ದೊಡೆ ಸೊಗಯಿಸುಗಂ ಕಾವ್ಯಬಂಧಂ” ಎಂಬ ಮಾತಿನಲ್ಲಿ ಗಟ್ಟಿಗೊಳಿಸಿದನು (ಪು:12). ತೊಲ್ ಮತ್ತು ಮಾರ್ಗಕಾರನ ನಡುವೆ ಯುಗಧರ್ಮವನ್ನು ಗಮನದಲಿಟ್ಟಕೊಂಡು ಅವರು ರೂಪಿಸಿಕೊಂಡ ಭಾಷಿಕ ಪ್ರಜ್ಞೆಯನ್ನು ಅರ್ಥೈಸಿಕೊಳ್ಳುವ ಅಗತ್ಯವಿರುವುದು ಸ್ಪಷ್ಟವಾದರೂ ಚರಿತ್ರೆಯ ಪ್ರಕ್ರಿಯೆಯ ಒತ್ತಡದಲ್ಲಿ ಕನ್ನಡ ಭಾಷೆ ರೂಪಗೊಂಡ ಬಗೆಗಳ ವಿವರಗಳು ಶೆಟ್ಟರ್ ಅವರ ಸಂಶೋಧನೆಯಿಂದ ಸ್ಪಷ್ಟ. ಈ ಎಲ್ಲ ಕಾರಣಗಳಿಂದ ಕನ್ನಡ ಮತ್ತು ತಮಿಳ ಭಾಷೆಗಳು ಪ್ರತ್ಯೇಕವಾದ ಕಾವ್ಯಮೀಮಾಂಸೆಯನ್ನು ರೂಪಿಸಿಕೊಂಡಿರಲೂ ಸಾಧ್ಯ.

ಕ್ರಿ.ಪೂ.3ನೇ ಶತಮಾನದಿಂದ ಕ್ರಿ.ಶ.3ನೇ ಶತಮಾನದ ಮಧ್ಯದ ಅವಧಿಯ ಒಟ್ಟು ಚಾರಿತ್ರಿಕ ದಾಖಲೆಗಳನ್ನು ಪರಶೀಲಿಸಿದಾಗ ಸ್ಪಷ್ಟಗೊಳ್ಳುವ ಅಂಶವೇನೆಂದರೆ, ತಮಿಳ ಭಾಷೆಯು ಪ್ರೌಢ ಹಂತವನ್ನು ಮುಟ್ಟುವುದಕ್ಕೆ ಸುಮಾರು ಮೂರು ಶತಮಾನಗಳ ಮುಂಚೆಯೇ ಕನ್ನಡವು ‘ಲಿಪಿ’ ಮತ್ತು ‘ಭಾಷೆಯ ಪರಿಪೂರ್ಣತೆ’ಯನ್ನು ಗಳಸಿಕೊಂಡಿದ್ದನ್ನು ಹಲ್ಮಡಿ ಶಾಸನಗಳಂತಹ ದಾಖಲೆಗಳಿಂದ ಸಾಕ್ಷಿಕರಿಸಿರುವುದು ಗಮನಾರ್ಹ. ಈ ಸಾಕ್ಷ್ಯಾಧಾರಗಳು ಕನ್ನಡವು, ತಮಿಳಗಂಕ್ಕಿಂತಲೂ ಮುಂಚೆಯೇ ಅಕ್ಷರಸ್ಥ ಸಮುದಾಯವಾಗಿ ರೂಪಗೊಂಡಿರುವುದನ್ನು ಸ್ಪಷ್ಟಗೊಳಿಸುತ್ತವೆ. ಅಂದರೆ, ಅಶೋಕನು ಶಾಸನಗಳನ್ನು ಕಂಡರಿಸುವುದಕ್ಕಿಂತ ಬಹುಕಾಲ ಮುಂಚೆಯೇ ಪ್ರಾಕೃತ ಭಾಷೆಯು ಕರ್ನಾಟಕ-ಆಂದ್ರವನ್ನು ಪ್ರವೇಶಿಸಿತ್ತು ಎನ್ನುವುದು ಎರಡು ಐತಿಹ್ಯಗಳಿಂದ ನಿರೂಪಿಸಲ್ಪಟ್ಟಿರುವುದು. ಆ ಎರಡು ಐತಿಹ್ಯಗಳು ಜೈನ ಮತ್ತು ಬೌದ್ಧ ಮತಗಳಿಗೆ ಸೇರಿರುವುದು ವಿಶೇಷ. ಅಪಾರವಾದ ಮೌಖಿಕ ಪರಂಪರೆಯನ್ನು ಹೊಂದಿದ್ದರೂ ವೈದಿಕ ಸಂಸ್ಕೃತ ಮತ್ತು ಶಂಗಂ ತಮಿಳು ಪರಂಪರೆಗಳು ಲಿಪಿ ಶೂನ್ಯವಾಗಿದ್ದವು ಅನ್ನುವುದು ಗಮನಾರ್ಹವಾದ ವಿಚಾರ. ಆದರೆ, ಅದೇ ಸಂದರ್ಭದಲ್ಲಿ ಕನ್ನಡ ಮತ್ತು ತೆಲಗು ಭಾಷೆಗಳು “ಬ್ರಾಹ್ಮೀ” ಲಿಪಿಯ ವ್ಯವಹಾರವನ್ನು ರೂಢಿಸಿಕೊಂಡಿರುವುದು ಸಾಂಸ್ಕøತಿಕ-ಚಾರಿತ್ರಿಕವಾಗಿ ಮಾನ್ಯ ಮಾಡಿರುವಂತಹದು. ಈ ಒಂದು ಅಕ್ಷರ ಸಮಾಜದ ನಿರ್ಮಾಣವು ಸಾಧ್ಯವಾದದ್ದು ಮೌರ್ಯ ಸಾಮ್ರಾಜ್ಯದ ಅಶೋಕ ಚಕ್ರವರ್ತಿಯಿಂದ ಎನ್ನುವುದು ಸ್ಪಷ್ಟ. ಅಶೋಕನು ಒಟ್ಟು ಹದಿನೆಂಟು ಕಿಬ್ಬಂಡಿ ಶಾಸನಗಳನ್ನು ಕೊರಸಿರುವನು. ಅವುಗಳಲ್ಲಿ ಒಂಬತ್ತು ಶಾಸನಗಳು ಕರ್ನಾಟಕದಲ್ಲಿ ಮತ್ತೆರಡು ಆಂದ್ರಪ್ರದೇಶದ ಗಡಿ ಜಿಲ್ಲೆಗಳಲ್ಲಿ ಲಭ್ಯವಾಗಿರುತ್ತದೆ. ‘ಆದರೆ, ಇಂದಿನ ಭಾಷಾ ಮತ್ತು ರಾಜಕೀಯ ಗಡಿರೇಖೆಗಳನ್ನು ಅಳಿಸಿ ನೋಡಿದರೆ, ಈ ಹನ್ನೊಂದು ಶಾಸನಗಳು ಒಂದು ನಿರ್ದಿಷ್ಟ ಪ್ರದೇಶವನ್ನು ಹಂಚಿಕೊಂಡು, ಕೈ ಕೈ ಜೋಡಿಸಿ ನಿಂತಂತೆ ಕಾಣುತ್ತವೆ. ಅಂದರೆ, ಚಾರಿತ್ರಿಕಯುಗದ ಆರಂಭ ಕಾಲದಲ್ಲಿ ಲಿಪಿ-ಭಾಷಾ ಮಾಧ್ಯಮಗಳನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಂಡ ಹಿರಿಮೆ ಇಂದಿನ ಕರ್ನಾಟಕದ್ದು ಆಗಿತ್ತೆಂದು ಅರ್ಥ (ಪುಟ:72). ಹಾಗಾಗಿ, ಕನ್ನಡ ಮತ್ತು ಆಂದ್ರ ಭಾಷೆಗಳು ಲಿಪಿ ವ್ಯವಹಾರದಲ್ಲಿ ಭದ್ರ ನೆಲೆಯನ್ನು ಕಂಡುಕೊಂಡಿದ್ದವು ಎನ್ನುವುದು ವಾಸ್ತವ. ಈ ಕಾರಣದಿಂದಾಗಿ, ಉತ್ತರದ ಸಿಂಧುವಿನಿಂದ ದಕ್ಷಿಣದ ಕುಮಾರಿಯವರೆಗೂ ಏಕೈಕ ಲಿಪಿಯಾಗಿ ಬ್ರಾಹ್ಮೀ ಪ್ರಸಾರಗೊಳ್ಳಲು ಸಾಧ್ಯವಾಯಿತು. ಈ ಲಿಪಿ-ಭಾಷಾ ಮಾಧ್ಯಮದ ವ್ಯವಹಾರವನ್ನು ತಿರಸ್ಕರಿಸಿದ/ಪ್ರತಿರೋಧಿಸಿದ ಸಮುದಾಯ-ಜನಾಂಗಳು ಲಿಪರಹಿತವಾಗಿ ಉಳಿದುಕೊಂಡಿದ್ದವು. ಈ ಸಮುದಾಯ-ಜನಾಂಗಗಳಲ್ಲಿ ಎದ್ದು ಕಾಣುವವರು ತಮಿಳರು ಎನ್ನುವುದು ಚಾರಿತ್ರಿಕ-ಸಾಂಸ್ಕೃತಿಕವಾಗಿ ಗಮನಾರ್ಹವಾದ ಸಂಗತಿ. ತಮಿಳಿನ ದೇಶಿ ಪ್ರಭೇದವಾದ “ವಟ್ಟೆಳುತು” ಲಿಪಿ ಬಳಕೆಗೆ ಬಂದ ಕಾಲ ಕ್ರಿ.ಶ.4ನೇ ಶತಮಾನ; ಇದೇ ಕಾಲದಲ್ಲಿ ಕನ್ನಡವೂ ಪ್ರಬುದ್ಧ ಲಿಪಿಯಾಗಿ ಬೆಳೆದುನಿಂತು ಪ್ರಬುದ್ಧ ಭಾಷೆಯ ವಾಹನವಾಗಲು ಸನ್ನದ್ಧಗೊಳ್ಳತೊಡಗಿತ್ತು (ಪುಟ:25). ವಿಪರ್ಯಾಸದ ಸಂಗತಿ ಏನೆಂದರೆ ಈ ದೇಶ ಭಾಷೆಗಳಲ್ಲೆವೂ ಮೊತ್ತಮೊದಲು ಅಕ್ಷರರೂಪಕ್ಕೆ ಇಳದದ್ದೆ ಸಂಸ್ಕೃತ ಭಾಷೆಯ ಮಾಧ್ಯಮದ ಮೂಲಕ ಎನ್ನುವ ವಾದಗಳಿಗೇನು ಕಮ್ಮಿಯಿಲ್ಲ. ಆದರೆ ಶೆಟ್ಟರ್ ಅವರ ಸಂಶೋಧನೆಗಳು ಈ ವಾದಗಳನ್ನು ನಿರಾಕರಿಸುತ್ತವೆ ಎನ್ನುವುದು ವಿಶೇಷ.

“ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ…….” ಎಂಬ ಉಲ್ಲೇಖವು ಕನ್ನಡ ಅನನ್ಯತೆಯ ರೂಪಕವಾಗಿಯೇ ಚಾರಿತ್ರಿಕ-ಸಾಂಸ್ಕೃತಿಕ ಮಹತ್ವವನ್ನು ಪಡೆದುಕೊಂಡಿರುವುದು. ಒಂದು ನಾಡಿನ ಗಡಿಗಳನ್ನು ಗುರುತಿಸುವುದು ಕಾಡು, ಬೆಟ್ಟ, ನದಿ, ಸಾಗರಗಳೇ ಸಹಜವಾದ ಮೇರೆಗಳಾಗಿ ರೂಪಗೊಳ್ಳುವ ಕ್ರಿಯೆಯು ಇತಿಹಾಸದುದ್ದಕ್ಕೂ ಬೆಳೆದು ಬಂದಿರುವುದು ಸಹಜ. ಆದ್ದರಿಂದ, ಮಾರ್ಗಕಾರನು ‘ಗಂಗಮಂಡಲ’ವೆಂಬ ಗಂಗರ ಆಡಳಿತ ಘಟಕವಾಗಿದ್ದ ತಲಕಾಡಿನ ಗಡಿಭಾಗದ ಮೇರೆಗಳನ್ನು ಹೆಸರಿಸದೆ ಕಾವೇರಿಯನ್ನು ಮೇರೆಮಾಡಿಕೊಂಡು ಕನ್ನಡ ಜನಪದವನ್ನು ಭಾವಿಸಿಕೊಂಡದ್ದು ಗಮನಾರ್ಹ. ಮಾರ್ಗಕಾರನಿಗಿಂತ ಮುಂಚೆ ‘ಕಾವೇರಿ’ ನದಿ ಕುರಿತ ಉಲ್ಲೇಖ/ವಿವರಗಳ ಶೋಧ ನಡೆಸಿದರೆ ಅತ್ಯಲ್ಪ ವಿವರಗಳು ದೊರಕುತ್ತವೆ. ಕುತೂಹಲದ ವಿಷಯ ಏನೆಂದರೆ, ಕನ್ನಡದ ಮೊದಲ ಅರಸು ಮನೆತನವೆನ್ನುವ ಹೆಗ್ಗಳಿಕೆಗೆ ಹೆಸರಾಗಿರುವ ‘ಗಂಗರ’ ಕಾಲದ ಯಾವುದೇ ಶಾಸನ/ಕಾವ್ಯಗಳಲ್ಲಿ ಕಾವೇರಿ ಕುರಿತ ವಿವರಗಳು ಲಭ್ಯವಿಲ್ಲ. ಆದರೆ, ಇವರ ನೆರೆಯಲ್ಲಿದ್ದ ‘ಪುನ್ನಾಟ’ ವೆಂಬ ಬುಡಕಟ್ಟು ರಾಜ ಮನೆತನದವರು ಕಾವೇರಿಯನ್ನು ದಾಖಲಿಸಿರುವುದು ವಿಶೇಷ. 5-6 ನೇ ಶತಮಾನದಲ್ಲಿ ಯಳಂದೂರ ತಾಲ್ಲೂಕಿನ ಮಾಂಬಳ್ಳಿಯಲ್ಲಿ ದೊರೆತ ತಾಮ್ರಪಟ ಶಾಸನಯೊಂದರ ಉಲ್ಲೇಖ ಹೀಗಿದೆ “ಕಾಬೇರೀಕಪಿನೀಶ್ರೀನದೀಭಿಲಂಕೃತಸ್ಯ” (ಪುಟ:110). ಪುನ್ನಾಟ ದೊರೆಗಳಿಗೆ ಕಾವೇರಿ ದಕ್ಷಿಣ ಗಡಿಯಾಗಿರದೆ ಉತ್ತರ ಗಡಿಯಾಗಿರುವುದು ವಿಶೇಷ. ಬದಾಮಿ ಚಾಲುಕ್ಯರ ಕಾಲಾವಧಿಯ ಆರು ಶಾಸನಗಳಲ್ಲಿ ಕಾವೇರಿ (ಕವೇರ, ಕಮೇರ)ಯ ಉಲ್ಲೇಖಗಳು ದೊರೆಕಿರುತ್ತವೆ. ಆದರೆ, ಈ ಯಾವುದೆ ಉಲ್ಲೇಖವು ಕಾವೇರಿಯನ್ನು ಕನ್ನಡದ ಅನನ್ಯತೆಯನ್ನಾಗಿ ಆನುಷಂಗಕವಾಗಿಯಾದರೂ ಉಲ್ಲೇಖಿಸದೇ ಇರುವುದು ಗಮನಾರ್ಹ. ಈ ಎಲ್ಲ ಉಲ್ಲೇಖಗಳು ರಾಜಕೀಯ/ಯುದ್ಧ ಸಂಬಂಧಿ ವಿವರಗಳಿಗೆ ಸಂಬಂಧಿಸದವುಗಳಾಗಿವೆ. ಮಾರ್ಗಕಾರನ ನಂತರದ ಶಾಸನ/ಸಾಹಿತ್ಯದಲ್ಲಿ ಕಾವೇರಿ ನದಿ ಕುರಿತ ಉಲ್ಲೇಖಗಳು ದೊರೆತದ್ದು ಪೊನ್ನನ ಶಾಂತಿನಾಥ ಪುರಾಣದಲ್ಲಿ “ಕವೇರ ಕನ್ನಿಕೆ” ಮತ್ತು “ಕಾವೆರಿ-ಸ್ರವಂತೀ-ಸಮುತ್ತರಣಾನಂತರಂ”(ಪುಟ:108) ಮುಂತಾದವುಗಳಾಗಿವೆ. ತಮಿಳರು ಕಾವೇರಿಯೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧವನ್ನು ಪುಷ್ಟಿಕರಿಸುವುದಕ್ಕೆ ಅಪಾರ ಪುರಾವೆಗಳು ಶಂಗಂ ತಮಿಳಿನಿಂದ ದೊರಕುತ್ತವೆ. ಉದಾ: ಕಾವಿರಿ/ಕಾವೇರಿಯನ್ನು ಕುರಿತು ಶಂಗಂ ಕಾಲದ ಎಪಿಕ್ ಮತ್ತು ಕಾವ್ಯಗಳಾದ ಶಿಲಪ್ಪದಿಗಾರಂ, ಮಣಿಮೇಗಲೈ, ಪುರನಾನೂರು, ಅಗನಾನೂರು ಮತ್ತು ಪತ್ತುಪಾಟ್ಟು ಮುಂತಾದವುಗಳು. “ಶಂಗಂ ಚೋಳರಲ್ಲಿ ಕರಿಕಾಲ ಮತ್ತು ಕಿಳ್ಳ ವಿಶೇಷವಾಗಿ ಕಾವಿರಿಯೊಡನೆ ಗುರುತಿಕೊಂಡಿದ್ದರು ಎನ್ನಬಹುದು. ಶಿಷ್ಟಜನಪರಿಪಾಲಕನಾದ ಚೋಳನ ‘ಕನ್ಯೆ’ ಯೆಂದೇ ಕಾವಿರಿಯನ್ನು ಮಣಿಮೇಗಲೈ ಕಾವ್ಯವು ಗುರುತಿಸಿದರೆ, ಇವನನ್ನು ‘ಕಾವಿರಿನಾಡನ್’ ಎಂದು ಶಿಲಪ್ಪದಿಗಾರಂ ಸಂಬೋಧಿಸುವುದು” (ಪುಟ:100). ಆದರೆ, ಕಾವೇರಿ (ಕಾವಿರಿ) ಯನ್ನು ಕುರಿತು ಸಾಕಷ್ಟು ಉಲ್ಲೇಖ ಮತ್ತು 1314 ಸಾಲುಗಳ ಎಂಟು ಕವನಗಳು ಲಭ್ಯವಿದ್ದಾಗಲೂ ಈ ನದಿಯ ಉಗಮ ಸ್ಥಾನವನ್ನು ಕುರಿತು ಯಾವುದೇ ಉಲ್ಲೇಖಗಳು ಈ ಶಂಗಂ ಕಾಲದ ಕಾವ್ಯಗಳಲ್ಲಿ ಲಭ್ಯವಿಲ್ಲ ಎನ್ನುವುದು ಗಮನಾರ್ಹವಾದ ಸಂಗತಿ. ಇದಕ್ಕೆ ಸಾಂಸ್ಕೃತಿಕ-ರಾಜಕೀಯ ಪರಿಣಾಮಗಳು ಬಲವಾಗಿರುವುದೆ ಇದಕ್ಕೆ ಕಾರಣವಿರಬಹದು.

“ವಡವೇಂಗಡ ತೆನ್‍ಕುಮರಿ ಆಯಿಟೈ ತಮಿಳಕೂರಂ ನಲಕತ್ತು ಅಂದರೆ, ಉತ್ತರದ ವೇಂಕಟ ದಕ್ಷಿಣದ ಕುಮಾರಿವರೆಗೆ ವಿಸ್ತರಿಸಿದ್ದ ತಮಿಳು ಭಾಷಿಕರ ಪವಿತ್ರ ಪ್ರದೇಶ” ಗತಕಾಲದ ಹಲವು ದಾಖಲೆಗಳನ್ನು ಮರುಅಧ್ಯಯನ ಮಾಡುವುದರ ಮೂಲಕ ನಾಡು-ನುಡಿಯ ಮೇರೆಗಳನ್ನು ಗುರುತಿಸುವುದರ ಪ್ರಜ್ಞಾ ನೆಲೆಗಳನ್ನು ಆನುಷಂಗಿಕವಲ್ಲದೆ ಚಾರಿತ್ರಿಕ ಮುನ್ನೆಲೆಗೆ ತರುವ ಪ್ರಯತ್ನದ ಶೋಧಗಳನ್ನೆಬಹುದು. ಇವುಗಳು ಚಾರಿತ್ರಿಕ ಪ್ರಕ್ರಿಯೆಯ ಮೊತ್ತವನ್ನು ಪ್ರತಿನಿಧಿಸುವ ಗತಕಾಲದ ಚಾರಿತ್ರಿಕ-ಸಾಂಸ್ಕೃತಿಕ ದಾಖಲೆ/ ಸಾಕ್ಷ್ಯಾಧಾರಗಳನ್ನು ಅನುಸರಿಸಿಕೊಂಡು ವರ್ತಮಾನದ ಸಾಂಸ್ಕೃತಿಕ-ರಾಜಕೀಯ ಪ್ರಜ್ಞೆ ಅಥವಾ ಅನನ್ಯತೆಯ ನೆಲೆಗಳು ರೂಪಗೊಳ್ಳುತ್ತವೆ. 20ನೇ ಶತಮಾನದವರೆಗೆ ಪದಬಂಧದಲ್ಲೆ ಗಡಿನಕಾಶೆಯನ್ನು ಗುರುತಿಸಲು ಪ್ರಯತ್ನಪಟ್ಟವರು, ವೈಜ್ಞಾನಿಕ ಅನ್ವೇಷಣೆಯ ಫಲವಾಗಿ ಜನಾಂಗ, ಪ್ರದೇಶ ಮತ್ತು ಭಾಷೆಯಂತಹ ಚಾರಿತ್ರಿಕ ಸ್ಮೃತಿಗಳಿಗೆ ಗಡಿ-ನಕಾಶೆಯನ್ನು ರೂಪಿಸಿಕೊಳ್ಳುವ ಪ್ರಯತ್ನಗಳು ವಾರಸುದಾರಿಕೆಯ ಪ್ರತಿಪಾದನೆಗಳಾಗಿ ನಡೆದಿರುವವು. ತಮಿಳರು ಸಿದ್ಧಗೊಳಿಸಿದ ಈ ಕಾಲದ ‘ಕುಮರಿಕ್ಕಂಡಂ’ ನಕಾಶೆಯಲ್ಲಿ ‘ಕುಮರಿ’ , ‘ಪಖ್ರಳಿ’ , ‘ಕಣ್ಣಿ’ ‘ಪೇರಾಳಿ’ ನದಿಗಳು, ‘ತೆನ್‍ಕಡಲ್’ (ದಕ್ಷಿಣ ಸಾಗರ) ‘ತೊಂಡಮುದಲ್ ಕಡಲ್’ (ಆದಿ ಸಾಗರ) ‘ತೋಡ್ ಕಡಲ್’ (ಅಕ್ಕ ಪಕ್ಕದ ಸಾಗರಗಳು) ಮಹತ್ವದ ಸ್ಥಾನಪಡೆದುಕೊಂಡಿರುತ್ತವೆ. ತಮಿಳರು ತಮ್ಮ ಪರಂಪರೆಯ ಚಹರೆಗಳನ್ನು ಗಟ್ಟಿಗೊಳಿಸುವ ಮತ್ತು ಪುನರ್ ಶೋಧಿಸಿಕೊಳ್ಳಲು ಸಾಗರದಾಳದ ಅನ್ವೇಷಣೆ, ಕುಮರಿಕ್ಕಂಡಂ ಅವಶೇಷಗಳು ಮತ್ತು ಕಡಲ್ಕೋಳ ಐತಿಹ್ಯ ಹಾಗೂ ಕ್ಷೇತ್ರ ಚರಿತ್ರೆಗಳಂತಹ ಐತಿಹಾಸಿಕ ಕುರುಹುಗಳನ್ನು ರೇಖಾನಕ್ಷೆಗಳನ್ನು ಗುರುತಿಸುವುದಕ್ಕೆ ಪ್ರಮುಖ ಪರಿಕರಗಳಾಗಿರುತ್ತವೆ. ಈ ಮೇರೆಗಳನ್ನು ಶ್ರೀಲಂಕದ ಕೊರ್ಕೈ (ಕಪಡಾಪುರ) ವರೆಗೆ ಗುರುತಿಸುವ ಹಲವಾರು ಪುರಾವೆ/ಸಾಕ್ಷ್ಯಾಧಾರಗಳು ಪ್ರಾಚೀನ ಕಾವ್ಯಗಳಾದ ಮಣಿಮೇಗಲೈ, ನಟ್ರಣೈ, ಅಹನಾನೂರು ಮುಂತಾದವುಗಳಿಂದ ಲಭ್ಯ. ಇಂತಹದೇ ಸಾಕ್ಷ್ಯಾಧಾರಗಳನ್ನು ಬಳಸಿಕೊಂಡು ಪಾಶ್ಚಿಮಾತ್ಯ ವಿದ್ವಾಂಸರು ರೂಪಿಸಿದ “ಲೆಮೂರಿನ-ಗೊಂಡ್ವಾನ” ಭೂನಕ್ಷೆಯೊಡನೆ ಪ್ರತಿಸ್ಪರ್ಧಿಸ ತೊಡಗಿರುವುದಕ್ಕೂ ಸಾಧ್ಯ.

ಶಂಗಂ ಸಾಹಿತ್ಯದಲ್ಲಿ ತಮಿಳೇತರನ್ನು “ವಡುಗ” ಎಂಬ ಪದದಿಂದ ಗುರುತಿಸಿರುವುದನ್ನು ಗಮನಿಸಬಹುದು. ಈ “ವಡುಗ” ಪ್ರದೇಶವು ಒಂದು ಕಡೆ ವೆಂಕಟಾದ್ರಿ ಮತ್ತೊಂದು ಕಡೆ ನೀಲಗಿರಿಯ ಉತ್ತರಕ್ಕೆ ಹಬ್ಬಿತ್ತು. ಇಲ್ಲಿ ತಮಿಳು ಮತ್ತು ತಮಿಳೇತರ ಅರಸರ ನಡುವಿನ ಘರ್ಷನೆ ಮತ್ತು ಸೌರ್ಹಾದಕ್ಕೆ ಸಂಬಂಧಿಸಿದ ವಿವರಗಳನ್ನು “ಪತ್ತುಪಾಟ್ಟು” ಕಾವ್ಯದ ಕವಿ ಕಬೀಲ್ ಆರ್ಯ ಮತ್ತು ” ಪುರನಾನೂರಿ”ನ ಕವಿ ಮುರಂಜಿಯೊಲ್ ಮೂಡಿನಾಗನಾರ್ ಅವರು ಉಲ್ಲೇಖಿಸಿರುವರು. ಆದರೆ, ಇವರ ಉತ್ತರದ ಗಡಿಯಾಚೆಗಿನ ತಮಿಳೇತರರನ್ನು “ಆರ್ಯ”ರೆಂದು ಇನ್ನೂ ಕೆಲವು ಸಲ ಮೌರ್ಯ ಮತ್ತು ಶಾತವಾಹನ-ಇಕ್ಷ್ವಾಕುಗಳೊಡನೆ ಹೊಂದಾಣಿಕೆ ಮಾಡಿಕೊಂಡಿದ್ದರು. ಇದಕ್ಕೆ ಕಾರಣ ಪ್ರಾಕೃತ ಭಾಷೆ ಮಾತಾಡುವುದೆ ಕಾರಣ ಆಗಿರಬಹುದು, ಈ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗದೆ ಇರುವುದಕ್ಕೆ ತಮಿಳೇತರರು (ಕನ್ನಡ, ಕೊಂಕಣಿ, ತುಳು, ಕೊಡಗು ಮುಂತಾದವು ಲಿಪಿ ಮಾಧ್ಯಮವನ್ನು ರೂಢಿಸಿಕೊಂಡಿರಲ್ಲ) ಇವರಾರು ತಮಿಳಿನ ಲಿಪಿಯನ್ನು ಅಂಗೀಕರಿಸಿರಲಿಲ್ಲ. ಶಂಗಂ ಸಾಹಿತ್ಯದ ಉಲ್ಲೇಖಗಳನ್ನು ಬಲಪಡಿಸಲು ಯಾವುದೆ ಶಾಸನಗಳಾಧಾರ ಲಭ್ಯವಿಲ್ಲ. ಸಮಕಾಲೀನ ಶಾಸನಗಳಲ್ಲಿ ಕನ್ನಡ ಜನಾಂಗಗಳನ್ನು ಕುರಿತು ಉಲ್ಲೇಖಗಳಿರುತ್ತವೆ. ಉದಾ: ಅಗನಾನೂರಿನಲ್ಲಿ “ಕುಡನಾಡಪತಿ”ಯನ್ನು ಕೆಲವು ಬಾರಿ ಹೆಸರಿಸಲಾಗಿದೆ. ‘ಕುಡ’ ಅಂದರೆ ಪಶ್ಚಿಮ ‘ನಾಡು’ ಅಂದರೆ ದೇಶ, ಪ್ರದೇಶ, ಆಡಳಿತ ಘಟಕ, ಈ ಅಧಿಪತಿಯನ್ನು ‘ಎರುಮೈ ಊರವನೆಂದೂ’ ಗುರುತಿಸಲಾಗಿದೆ (ಪುಟ:119). ಶಂಗಂ ಕವಿಗಳು ಈ ತಮಿಳೇತರರನ್ನು ಗುರುತಿಸಲು ಎರಡು ವಿಶಿಷ್ಟ ಪದಗಳನ್ನು ಬಳಸಿರುವರು. ಅವುಗಳಂದರೆ, ‘ವಡುಗರು’ ಮತ್ತು ‘ವಡಮೊಳಿಯಾಳರ್’ ಇವುಗಳ ಪ್ರಸ್ತಾಪವು ‘ಪುರನಾನೂರು, ಕುರುಂತೊಗೈ, ಮತ್ತು ನಟ್ರಿಣೈ’ ಗಳಲ್ಲಿ ಕನಿಷ್ಠ ಒಂದೊಂದು ಬಾರಿ ಹಾಗೂ ‘ಅಹನಾನೂರಿ’ ನಲ್ಲಿ ಸುಮಾರು ಏಳು ಬಾರಿ ತಮಿಳೇತರಾದ ವಡುಗರನ್ನು ಕುರಿತ ಪ್ರಸ್ತಾಪವಿರುವುದು. ಅಂದರೆ, ಈ ಉಲ್ಲೇಖಗಳ ಪ್ರಕಾರ ವಡುಗರು ತಮಿಳಗಂ ಸಮೃದ್ಧ ಪ್ರದೇಶದಿಂದ ದೂರ, ‘ಬಹು-ಶೂಲ’ ಗಳ ವೀರನಾದ ಚೇರಕಟ್ಟೀಯ ರಾಜ್ಯದ ಗಡಿಯಾಚೆಗಿದ್ದರು. ಇವರು ತುಳಸೀ ಪುಷ್ಪಮಾಲೆಗಳಿಂದ ಅಲಂಕರಿಸಿಕೊಳ್ಳುತ್ತಿದ್ದರೆಂದೊ ತಮಿಳರಿಗೆ ಅರ್ಥವಾಗದ ಬೇರೊಂದು ಭಾಷೆಯನ್ನಾಡುತ್ತಿದ್ದರೆಂದೊ ಕವಿ ಮಾಮೂಲಣಾರ್ ಹೇಳಿರುವನು (ಪುಟ:135). ಈ ಉಲ್ಲೇಖದ ತಾತ್ಪರ್ಯವೆನಂದರೆ ನೀಲಗಿರಿಯಾಚೆಯ ಇಂದಿನ ಕನ್ನಡ ಪ್ರದೇಶವನ್ನು ಸೂಚಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ವಡುಗರು ಮತ್ತು ಎರುಮೈನವರು ತಮ್ಮ ಸ್ಥಳಿಯ/ ಆಂತರಿಕ ವ್ಯವಹಾರಕ್ಕೆ ತಮ್ಮದೆ ಭಾಷೆಯಲ್ಲಿ ಅಭಿವ್ಯಕ್ತಿಸುತ್ತಿದ್ದರು. ಆದರೆ ಅವರ ರಾಜಕೀಯ ಸಾಧನೆಗಳನ್ನು ಶಾಶ್ವತಗೊಳಿಸಲು ತಮಿಳು ಬ್ರಾಹ್ಮೀ ಲಿಪಿಯನ್ನು ಬಳಸುತ್ತಿದ್ದರು ಹಾಗೂ ತಮಿಳನ್ನು ಸಂಪರ್ಕ ಭಾಷೆಯನ್ನಾಗಿ ರೂಢಿಸಿಕೊಂಡಿದ್ದರು ಎನ್ನುವುದು ಗಮನಾರ್ಹ. ಮೈಸಿ, ಪುನ್ನಾಟ, ಕೊಂಗ ಎಂಬ ಪ್ರಾದೇಶಿಕ ಹೆಸರುಗಳ ಮೂಲಕವೇ ಗುರುತಸಲ್ಪಟ್ಟಿರುವ ಮಾರ್ಗಕಾರನಗಿಂತ ಮೊದಲ ಅರಸು ಮನೆತನಗಳು ಶಂಗಂ ಕಾಲದ ಮತ್ತು ಶಂಗಂ ನಂತರದ ತಮಿಳಗರ ಭಾಷಾ ಪ್ರದೇಶವಾದ ಉತ್ತರದಲ್ಲಿ ಆಳುತ್ತಿದ್ದರು. ಇವರು ಕೊಂಕಣಿ, ಕೊಡಗು, ತುಳು ಮತ್ತು ಕನ್ನಡ ಭಾಷೆಯನ್ನು ಹಂಚಿಕೊಂಡಿದ್ದವು. ಉದಾ: ಸಿತ್ತನ್ನವಾಸಲ್ ತಮಿಳು ಬ್ರಾಹ್ಮೀ ಶಾಸನ ಕ್ರಿ.ಪೂ.ಕಾಲದ ಕನ್ನಡಿಗರಿಗೆ ತಮ್ಮದೆ ಆದ ಲಿಪಿಯಿರದೆ, ಅವರಲ್ಲಿ ಕೆಲವು ತುಂಗಭದ್ರಾ ಪ್ರದೇಶದಲ್ಲಿ ಅಶೋಕ ಬ್ರಾಹ್ಮೀ ಲಿಪಿಯನ್ನೂ ಪ್ರಾಕೃತ ಭಾಷೆಯನ್ನು ವ್ಯವಹಾರಕ್ಕೆ ಅಳವಡಿಸಿಕೊಂಡಿದ್ದು ಕಂಡುಬರುತ್ತದೆ. ಕಾವೇರಿಯಾಚೆಯ ಪ್ರದೇಶದಲ್ಲಿ ತಮಿಳು ಬ್ರಾಹ್ಮೀ ಲಿಪಿಯನ್ನು ಹಾಗೂ ತಮಿಳು ಭಾಷೆಯನ್ನು ಬಳಸಿಕೊಂಡ ನಿದರ್ಶನಗಳು ದೊರಕುತ್ತವೆ (ಪುಟ:141). ಇದರ ಪರಿಣಾಮವಾಗಿ, ಎರುಮೈನಾಡು, ಕೊಡಗುನವರು, ಗೌಡ ಕನ್ನಡ, ಜೇನು ಕನ್ನಡದಂತಹ ಹಲವು ಕನ್ನಡ ಪ್ರಭೇದಗಳು ಸೃಷ್ಡಿಗೊಂಡಿರುವುಕ್ಕೂ ಸಾಧ್ಯ. ಈ ಹಿನ್ನಲೆಯಿಂದಲೆ ಮಾರ್ಗಕಾರನು ಕಾವೇರಿಯನ್ನು ಕೇವಲ ಒಂದು ನದಿಯಾಗಿ ಮಾತ್ರವೇ ಗ್ರಹಿಸದೆ ಒಂದು ನದಿ ಸಂಕೇತಿಸುವ ವಿಶಾಲ ಪ್ರದೇಶವನ್ನು (ದಕ್ಷಿಣ ಪ್ರದೇಶ) ರೂಪಕವಾಗಿ ಬಳಸಿಕೊಂಡು ‘ಕನ್ನಡದೊಳ್ ಭಾವಿಸಿದ ಜನಪದ’ ವೆಂಬ ಅನನ್ಯತೆಯ ಕುರುಹುವಾಗಿಸಿರುವುನು.

ಕನ್ನಡದ ಪ್ರಾಚೀನತೆ/ ಪರಂಪರೆಯ ಆರಂಭವು ‘ಇಸಿಲ್’ ನಂತಹ ಸಾಕ್ಷ್ಯಾಧಾರಗಳನ್ನು ಆಧರಸಿಕೊಂಡು ತೀರ್ಮಾನಿಸಿದ ನಿದರ್ಶನಗಳು ನಮಗೆ ಇತಿಹಾಸದುದ್ದಕ್ಕೂ ಸಿಗುತ್ತವೆ. ಆದರೆ, ಆರಂಭ ಕಾಲದ ತಮಿಳು ಹಾಗೂ ಶಂಗಂ (ಕ್ರಿ.ಪೂ.1ನೇ ಶತಮಾನ) ಕಾಲದ ತಮಿಳಿನ ಮೇಲೆ ಕನ್ನಡದ ಪ್ರಭಾವನ್ನು ಕುರಿತ ಹಲವಾರು ಉಲ್ಲೇಖಗಳು ಲಭ್ಯ. ಉದಾ: ಕನ್ನಡದ ಪ್ರಭಾವವು ತಮಿಳು ಮೇಲಾಗಿರುವುದಕ್ಕೆ ಡಾ.ಐರಾವತಂ ಮಾಹಾದೇವನ್ ಅವರ ಅಧ್ಯಯನಗಳು ಕೆಲವು ಸಾಕ್ಷ್ಯಾಧಾರಗಳನ್ನು ಒದಗಿಸುರುತ್ತವೆ. ಉದಾ: ಕ್ರಿ.ಪೂ 1 ರಿಂದ ಕ್ರಿ.ಶ.4ನೇ ಶತಮಾನದ ಕಾಲಾಧಿಯ ಶಾಸನಗಳಾದ ‘ತಿರುಪ್ಪರಂಕುನ್ರಮ್’, ‘ಅದಕಲ್-ಅ’, ಮತ್ತು ‘ನೆಡನೂರ್‍ಪತಿ’್ತ ಗಳು ಮುಖ್ಯ. ಈ ಶಾಸನಗಳ ಪ್ರಕಾರ ಕನ್ನಡದ ಪದಕೋಶ, ವ್ಯಾಕರಣ, ಮುಂತಾದ ವ್ಯಾಕರಣಾತ್ಮಕ ಪ್ರಕ್ರಿಯೆಗಳು ಸಮರ್ಥವಾಗಿ ರೂಪಗೊಂಡಿವೆ. ಮತ್ತು ಅವುಗಳು ಜೈನ ವಲಸೆಗಾರರ ಮೂಲಕ ಸಮಕಾಲೀನ ತಮಿಳು ಬ್ರಾಹ್ಮೀಯ ಮೇಲೆ ಹೇಗೆ ಪರಿಣಾಮ ಬೀರಿದ್ದವು ಎನ್ನುವ ವಿವರಗಳನ್ನು ಪ್ರಕಟಿಸುತ್ತವೆ. ಇದನ್ನು ‘ಪುನ್ನಾಟ’ರು ಬರೆಸಿದ ಶಾಸನಗಳಿಂದ ಸ್ಪಷ್ಟಪಡಿಸಬಹುದು. ಅಂದರೆ, ಈ ಕಾಲಕ್ಕಾಗಲೇ ಕನ್ನಡ ಪ್ರಬುದ್ಧಾವಸ್ಥೆಯನ್ನು ತಲುಪಿ ಶತಮಾನಗಳೆ ಗತಿಸಿದ್ದವು ಅನ್ನುವುದು ಸ್ಪಷ್ಟ. ತೊಲ್ಕಾಪ್ಪಿಯನಾರ್ ರಚಿಸಿದ (ಸೆನ್ತತಮಿಳ) ಭಾಷಾ ನಕ್ಷೆಯ ಹನ್ನೆರಡು ಕೋಟ್ಟಂ-ತಮಿಳ-ನಾಟುಗಳಲ್ಲಿ ಪುಣಣಾಟು (ಪುನ್ನಾಟ) ಒಂದಾಗಿತ್ತು ಎನ್ನುವುದು ಗಮನಾರ್ಹ. ಆದರೆ, ಕಾಲಕ್ರಮೇಣ ಕನ್ನಡದ ಹಲವು ರೂಪಾಂತರಗಳನ್ನು ಗಮನಿಸಿದಾಗ, ಕದಂಬ, ಪುನ್ನಾಟ ಅರಸರು ಬ್ರಾಹ್ಮೀಲಿಪಿ ಮತ್ತು ಪ್ರಾಕೃತ ಭಾಷೆಯನ್ನು ಬಳಸುತ್ತಿದ್ದು ಹಾಗೂ ಆ ಮಾಧ್ಯಮದಲ್ಲೆ ಶಾಸನಗಳನ್ನು ಬರೆಸಿರುವದು ವಾಸ್ತವ. ಆದರೂ ಪ್ರಾಕೃತದ ಪ್ರಭಾವ ಕುಗ್ಗಿ ಅದರ ಸ್ಥಾನವನ್ನು ಸಂಸ್ಕೃತ ಪಡೆದುಕೊಳ್ಳುವ ಸರಿಸುಮಾರು ಕಾಲದಲ್ಲಿ ಅಂದರೆ, ಕ್ರಿ.ಶ. 4ನೆಯ ಶತಮಾನದಾರಂಭದಲ್ಲಿ ಕನ್ನಡದ ಲಿಪಿವು ಬ್ರಾಹ್ಮೀ ಸ್ಥಾನವನ್ನು ಪಡೆದುಕೊಳ್ಳಲು ಮುಂದಾಗಿದ್ದು ಗಮನಾರ್ಹವಾದರೂ ಇದೇ ಸಂದರ್ಭದಲ್ಲಿ ‘ಸಂಸ್ಕೃತೀಕರಣ’ಗೊಂಡಿರುವುದನ್ನು ಅಲ್ಲಗಳೆಯುವಂತಿಲ್ಲ. ಈ ಪ್ರಕ್ರಿಯೆಯ ಪರಿಣಾಮವಾಗಿ ಕನ್ನಡವು ವಿಭಿನ್ನ ನೆಲೆಗಳಲ್ಲಿ ರೂಪಗೊಂಡಿದ್ದನ್ನು ಗಮನಿಸಬಹುದು.ಉದಾ: ಕನ್ನಡ ಭಾಷೆಯ ವಾಹನವಾಗಿ ಕನ್ನಡ ಲಿಪಿ ವಿಕಾಸಗೊಂಡಿರುವುದು, ಸಂಸ್ಕೃತ ಭಾಷೆಯನ್ನು ಕನ್ನಡ ಲಿಪಿ ಸಮರ್ಥವಾಗಿ ನಿರ್ವಹಿಸಿರುವುದು ಮತ್ತು ಸಂಸ್ಕೃತ ಪಾಠಗಳಲ್ಲಿ ಕನ್ನಡ ವಾಕ್ಯಗಳನ್ನು ಕೂಡಿಸಿಕೊಂಡು ಸಂಸ್ಕೃತ-ಕನ್ನಡ ಮಿಶ್ರ ಪಾಠಗಳನ್ನು ಸೃಷ್ಟಿಸಿರುತ್ತವೆ. ವ್ಯತರಿಕ್ತವಾಗಿ ಹೇಳುವದಾದರೆ, ಆರಂಭ ಕಾಲದ ಕರ್ನಾಟಕದ ಇತಿಹಾಸದಲ್ಲಿ ಹೆಜ್ಜೆಯ ಸ್ಪಷ್ಟ ಗುರುತನ್ನು ಮೂಡಿಸಿದವರಲ್ಲಿ ಮೂದಲಿಗರಾದ ಪುನ್ನಾಟರು ಮತ್ತು ಕದಂಬರು ಮೂಲತ ಶೂದ್ರರಾಗಿದ್ದರೆಂಬುದನು ತಮಿಳು ಶಂಗಂ ಸಾಹಿತ್ಯದಿಂದ ಅರಿತುಕೊಳ್ಳಬಹುದು.

ಚರಿತ್ರೆಯನ್ನು ಏಕಮುಖವಾಗಿ ನೋಡುವ ಪರಿಪಾಠವು ಇತಿಹಾಸದುದ್ದಕ್ಕೂ ಬೆಳೆದು ಬಂದಿದ್ದರ ಫಲವಾಗಿ, ಎಷ್ಟೋ ಚಾರಿತ್ರಿಕ ಸಾಕ್ಷ್ಯಾಧಾರಗಳು, ನಿಲುವು-ನಿರ್ಧಾರಗಳು, ಘಟನೆಗಳು, ಸಾಂಸ್ಕೃತಿಕ ಹಿರಿಮೆಗಳು ಯಾವುದೇ ಒಂದು ಜನಾಂಗ-ಸಮೂಹದ ಸ್ವತ್ತಾಗಿ ಆ ಸಮೂಹಗಳಿಗೆ ಸಾಂಸ್ಕೃತಿಕ ಯಜಮಾನಿಕೆ/ಪ್ರಾಬಲ್ಯವನ್ನು ದಕ್ಕಿಸಿ ಕೊಟ್ಟಿರುವುದು ನಿಜವಾದರೂ ಅದು ಅಪ್ಪಟ ಸುಳ್ಳು ಎನ್ನುವ ಆಲೋಚನ ಕ್ರಮಗಳು ಪ್ರೊ. ಷ. ಶೆಟ್ಟರ್ ಅವರ ಈ ಸಂಶೋಧನೆಯಿಂದ ನಿರೂಪಿಸಲ್ಪಟ್ಟಿರುವವು. ಅಂದರೆ, ಒಂದು ಚರಿತ್ರೆಯ ನಿರ್ಮಾಣವು ವೈವಿಧ್ಯ ನೆಲೆಗಳಿಂದ ರೂಪಗೊಂಡಿರುವದು ಮತ್ತು ಹಲವು ಸಾಂಸ್ಕೃತಿಕ ಸಂದರ್ಭಗಳ ಅಂತರ್‍ಚಲನಶೀಲತೆ ಇದಕ್ಕೆ ಸಾಕ್ಷಿ ಎನ್ನುವುದು ಸ್ಪಷ್ಟ. ಚರಿತ್ರೆ ಎನ್ನುವಂತಹದು ನಿರಂತರ ರೂಪಗೊಳ್ಳುವ ಜೀವಂತ ಪ್ರಕ್ರಿಯೆ ಇದರ ವೈಶಿಷ್ಟ್ಯ.

ಹಳಗನ್ನಡ: ನುಡಿ ಸಂಕಥನಗಳು

ನುಡಿಯರಿಮೆಯ ನಿಲುವುಗಳ ಸ್ವರೂಪವನ್ನು ಅರಿಯಲು ಮತ್ತು ಆ ಕುರಿತು ಚಿಂತಿಸಲು, ‘ನುಡಿ ಸಂಕಥನ’ಗಳ ರಾಚನಿಕ ಚೌಕಟ್ಟಿನ ಬಗೆಗೆ ಇಲ್ಲಿ ಚರ್ಚಿಸುವುದು ಅತ್ಯಂತ ಅಗತ್ಯವಾಗಿರುತ್ತದೆ. ಹಾಗಾಗಿ ‘ಹಳಗನ್ನಡ’ ಹೊತ್ತಿಗೆ ಹೇಗೆ ನುಡಿಯರಿಮೆಯ ಓದಿಗೆ ಒತ್ತಾಸೆಯಾಗುತ್ತದೆ ಎಂಬುದನ್ನು ತಿಳಿಯುವುದೇ ಈ ಬರಹದ ಗುರಿಯಾಗಿದೆ. ಕನ್ನಡಕ್ಕೆ ಬೇಕಾದ ಕನ್ನಡದ್ದೇ ತಿಳಿವಿನ ದಾರಿಗಳನ್ನು ತೋರಿಸುವ ಓದು ಮತ್ತು ಅರಿಕೆಗಳನ್ನು ಷ.ಶೆಟ್ಟರ್ ಅವರು ಅಧ್ಯಯನಗಳಲ್ಲಿ ಹೆಚ್ಚು ಹೆಚ್ಚು ಇರಾದೆಯಿಂದ ನಡೆಸಿರುತ್ತಾರೆ. ಪರಿಣಾಮವಾಗಿ ಈ ಹಳಗನ್ನಡ ಹೊತ್ತಿಗೆ ಇವತ್ತು ನಮ್ಮೆದುರಿಗಿದೆ. ತಾತ್ವಿಕವಾಗಿ ಹಾಗೂ ವೈಜ್ಞಾನಿಕವಾಗಿ ಶಾಸನಗಳ ಕುರಿತಾದ ಓದುಗಳ ಉದ್ದೇಶವನ್ನು ಸೀಮಿತಗೊಳಿಸಿ ನೋಡುವ ಕ್ರಮವೇ ಸರಿಯಾದುದಲ್ಲ. ತಿಳಿವಿನ ಮಾದರಿಗಳು ಮೈಪಡೆಯುವ ಪ್ರಕ್ರಿಯೆಯನ್ನು ಬಿಡಿಸಿ ನೋಡಲು ಯಾವುದೇ ಒಂದು ಗೊತ್ತುಪಡಿಸಿದ ನೆಲೆಯಿಂದ ನೋಡಲು ಆಗುವುದಿಲ್ಲ. ಆಯಾ ಕಾಲದ ಸನ್ನಿವೇಶಗಳನ್ನು ಮನಗಾಣಲು ಇರುವ ಆಕರಗಳು ಯಾವವು? ಅವುಗಳ ಸ್ವರೂಪ ಎಂತಹದು? ಅವುಗಳ ಹಿಂದಿರುವ ಗುರಿಗಳೇನು? ಎಂಬೆಲ್ಲ ಸಂಗತಿಗಳನ್ನು ಗೊತ್ತುಪಡಿಸಲು, ಆಯಾ ಕಾಲ ದೇಶಗಳಲ್ಲಿ ಹೊರಹೊಮ್ಮಿದ ಸಂಕಥನಗಳೇ ಸಾಕ್ಷಿಯಾಗಿರುತ್ತವೆ. ಹಾಗಾಗಿ ಕರ್ನಾಟಕದ ಮೊದಲ ಸಹಸ್ರಮಾನದ ಸಾಮಾಜಿಕ ಬದುಕಿನ ವಿನ್ಯಾಸಗಳನ್ನು, ನುಡಿ ರಚನೆ ಹಾಗೂ ತಾತ್ವಿಕತೆಯನ್ನು ಮತ್ತು ರಾಜಕೀಯ ನಿಲುವುಗಳನ್ನು ತಿಳಿಯಲು ಶಾಸನಗಳೇ ಮಹತ್ವದ ಆಕರಗಳಾಗಿವೆ. ಈ ಆಕರಗಳ ನಿರ್ಮಾಣದಲ್ಲಿ ಪಾಲ್ಗೊಳ್ಳುವವರ ಸಾಮಾಜಿಕ ಚರಿತ್ರೆ ಎಂತಹದು? ಹಾಗೂ ಅವುಗಳಿಗಾಗಿ ಬಳಸಿಕೊಂಡ ಸಂಪನ್ಮೂಲದ ಮಾದರಿಗಳಾವವು? ಎನ್ನುವುದನ್ನು ಕುರಿತು ಚಿಂತಿಸುವ ಬಗೆ ಮಹತ್ವದ್ದಾಗಿದೆ. ಈ ಕಾರಣದಿಂದ ಸಾಹಿತ್ಯ ಮತ್ತು ಸಾಮಾಜಿಕ ಚರಿತ್ರೆಯ ನಿಲುವುಗಳನ್ನು ಗುರುತಿಸಲು ಶಾಸನ ಸಂಕಥನಗಳು, ಅರಿಮೆ ಕಟ್ಟೋಣದ ಕುರುಹುಗಳಾಗಿವೆ.

ಸಾಮಾಜಿಕ ನುಡಿಯರಿಮೆಯ ತಿಳಿವಿನ ನೆಲೆಗಳನ್ನು ಅನುಸರಿಸಿಕೊಂಡು, ಶೆಟ್ಟರ್ ಅವರು ಯಾವುದೇ ಚರ್ಚೆಗಳನ್ನು ಇಲ್ಲಿ ಬೆಳಸುವುದಿಲ್ಲ. ಆದರೆ ಚಾರಿತ್ರಿಕ ಹಿನ್ನೆಲೆಯಿಂದ ಇಂತಹ ಅರಿಮೆಯ ಮಾದರಿಗಳನ್ನು ಕಟ್ಟಿಕೊಳ್ಳಲು ಸಾಕಷ್ಟು ಪುರಾವೆಗಳನ್ನು ಈ ಹೊತ್ತಿಗೆಯಲ್ಲಿ ಒದುಗಿಸುತ್ತಾರೆ. ಕಾಲ ದೇಶಗಳ ಒತ್ತಾಯದಿಂದ ನುಡಿಯೊಂದು ಪಡೆಯಬಹುದಾದ ಮಹತ್ವ ಎಂತಹದು ಎಂಬುದನ್ನು ಈ ಪುರಾವೆಗಳು ಪ್ರಾಮಾಣೀಕರಿಸುತ್ತವೆ. ಅಂದರೆ ನುಡಿ ಬೆರೆಕೆ, ಲಿಪಿ ಬೆರೆಕೆ ಎಂಬುದು ಸಹಜವಾಗಿ ನಡೆಯುವ ಸಂಗತಿಗಳಲ್ಲ. ಅಂತಹ ಬೆಳವಣಿಗೆಯ ಹಿಂದೆ ಸಾಮಾಜಿಕ, ರಾಜಕೀಯ ತೀರ್ಮಾಣಗಳು ಕೆಲಸ ಮಾಡುತ್ತವೆ. ಪ್ರಾಕೃತ, ಸಂಸ್ಕೃತ, ದೇಶಿ ನುಡಿಗಳ ನಡುವಣ ನಂಟಸ್ತಿಕೆ ನೆಲೆಗೊಂಡಿರುವುದು ಇಂತಹ ತೀರ್ಮಾಣಗಳಿಂದಲೇ. ಮತ್ತು ಈ ತೀರ್ಮಾಣಗಳಿಗೆ ಒಂದು ಚಾರಿತ್ರಿಕ ಸಮ್ಮತಿ ಹೇಗೆ ದೊರೆಯುತ್ತದೆ ಎಂಬುದು ಈ ಹೊತ್ತಿಗೆಯ ವಿಶ್ಲೇಷಣೆಗಳಿಂದ ನಿಚ್ಚಳವಾಗುತ್ತದೆ. ಹಾಗಾಗಿ ರಾಷ್ಟ್ರಕೂಟರ ಕಾಲದವರೆಗೆ ಕರ್ನಾಟಕ, ಕನ್ನಡ ಎಂಬಂತಹ ಗುರುತಿನ ರೂಪಕಗಳು, ರಾಜಕೀಯ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪಡೆದಿರಲಿಲ್ಲ. ಒಂದು ನಾಡಿನ ಸಾಮಾಜಿಕ, ಪ್ರಾದೇಶಿಕ ಚಹರೆ, ನುಡಿ ವೈಶಿಷ್ಟ್ಯಗಳು ಮುಂಚೂಣೆಗೆ ಬರುವುದು ಈ ಬಗೆಯ ರಾಜಕೀಯ, ಸಾಂಸ್ಕೃತಿಕ ಗುರುತಿನ ರೂಪಕಗಳ ಮೂಲಕವೇ ಹೊರತು ಅದೊಂದು ತಾನಾಗಿಯೇ ನೆಲೆನಿಲ್ಲುವ ನಾಡಿನ ಕಲ್ಪನೆಯಲ್ಲ ಎಂಬ ದಿಟವನ್ನು ಈ ಹೊತ್ತಿಗೆ ದಿಟ್ಟತನದಿಂದಲೇ ಹೇಳುತ್ತದೆ.

ಸಾಮಾಜಿಕ ಸನ್ನಿವೇಶದ ‘ಅರಿವಿನ ಮಾದರಿಗಳು’ ಶಾಸನಗಳಲ್ಲಿ ನೆಲೆಗೊಂಡಿರುವ ಬಗೆ ಮತ್ತು ಅವುಗಳಿಗೆ ಸಿಕ್ಕಿರುವ ರಾಜಕೀಯ, ಚಾರಿತ್ರಿಕ ಮಹತ್ವವೂ ಇಲ್ಲಿ ನಿಚ್ಚಳಗೊಂಡಿದೆ. ಹಾಗೂ ಸಾಮಾಜಿಕ ಪ್ರತ್ಯೇಕತೆಯ ವಿನ್ಯಾಸದ ರಾಚನಿಕ ಚೌಕಟ್ಟುಗಳನ್ನು ಕಂಡರಿಸುವ ಬಗೆಗಳು ಇಲ್ಲಿ ಗಮನಾರ್ಹವಾಗಿವೆ. ಎತ್ತುಗೆಗಾಗಿ ‘ಬಲಿ’ ಕುರಿತಾದ ಉಲ್ಲೇಖಗಳು, ಆಯಾ ಕಾಲದ ಸಾಮಾಜಿಕ, ರಾಜಕೀಯ ನಿಲುವುಗಳಿಂದ ಏರ್ಪಡುವ ಹಿಂಸೆಯ ಸ್ವರೂಪವನ್ನು ಸೂಚಿಸುತ್ತವೆ. ಸಾಮಾಜಿಕ ನುಡಿಯರಿಮೆಯ ಪ್ರಕಾರ ಇದೊಂದು ಹಿಂಸೆಯ ಸಾಂಕೇತಿಕ ನೆಲೆ ಮಾತ್ರವಲ್ಲ. ಬದಲಾಗಿ ಇಂತಹ ಸಾಂಕೇತಿಕ ಹಿಂಸೆಯೇ ಹೇಗೆ ಆಯಾ ಹೊತ್ತಿನ ಸಾಮಾಜಿಕ ಹಿಂಸಾತ್ಮಕ ರಚನೆಗಳನ್ನು ಎತ್ತಿ ತೋರಿಸುತ್ತವೆ ಎಂಬುದಾಗಿದೆ. ಆದ್ದರಿಂದ ಶಾಸನಗಳಿಗೆ ಇರುವ ‘ಸಾಂಕೇತಿಕ ಅಧಿಕಾರ’ ಮತ್ತು ಅವುಗಳಲ್ಲಿ ಮಂಡಿತವಾಗಿರುವ ಈ‘ಸಾಂಕೇತಿಕ ಹಿಂಸೆ’ಯ ಸ್ವರೂಪವನ್ನು, ಶೆಟ್ಟರ್ ಅವರು ತಮ್ಮೀ ಹೊತ್ತಿಗೆಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಜಾತಿ ಮತ್ತು ಕುಲಗಳ ಕುರಿತ ಚರ್ಚೆಗಳನ್ನು ಬೆಳೆಸುವಾಗಲೂ, ನಾವು ಅನುಸರಿಸಬೇಕಾದ ತಾತ್ವಿಕ ಚೌಕಟ್ಟುಗಳನ್ನು ಹೊಸದಾಗಿಯೇ ಕಟ್ಟಿಕೊಳ್ಳುವ ಜರೂರತೆಯನ್ನು ಇಲ್ಲಿಯ ಚರ್ಚೆಗಳಿಂದ ಅರಿಯಬಹುದಾಗಿದೆ. ಹಾಗಾಗಿ ಸಾಮಾಜಿಕ ಅಧಿಕಾರದ ಜಾಗಗಳಲ್ಲಿ ಉಂಟಾಗಿರುವ ಪಲ್ಲಟಗಳ ಮಾದರಿಯೊಂದು, ಶಾಸನಗಳ- ಲಿಪಿಕಾರರ ವೈವಿಧ್ಯತೆಯಿಂದಲೇ ನಮ್ಮ ಗಮನಕ್ಕೆ ಬರುತ್ತದೆ. ಶಾಸನಗಳನ್ನು ಬರೆಯುವ, ಬರೆಸುವ ಕೆಲಸದ ಹಿಂದಿರುವ ಗುರಿಗಳ ಸ್ವರೂಪ ಗೊತ್ತುಪಡಿಸಿದ ನೆಲೆಯಿಂದ ಕೂಡಿದ್ದರೂ, ಹಲವು ಬಗೆಯ ಸಾಮಾಜಿಕ ವಿನ್ಯಾಸಗಳನ್ನು ಕಂಡರಿಸುವ ಸೂತ್ರಗಳು ಇಂತಹ ಪ್ರಕ್ರಿಯೆಯಲ್ಲಿ ಅಡಕವಾಗಿರುತ್ತವೆ. ಈ ಮಾತಿಗೆ ಸಾಕ್ಷಿಯಾಗಿ, ‘ಬಿರುದು’ ಮತ್ತು ಇದರ ಒಳ ಉದ್ದೇಶಗಳು ಯಾರನ್ನು ಪ್ರತಿನಿಧಿಸುತ್ತವೆ ಮತ್ತು ಬದುಕಿನ ಯಾವ ವಿನ್ಯಾಸವನ್ನು ಈ ನಿಲುವುಗಳು ಸೂಚಿಸುತ್ತವೆ ಎಂಬುದನ್ನು ನಿಗಾಯಿಟ್ಟು ನೋಡಬೇಕಾಗುತ್ತದೆ.

ಸಮುದಾಯದ ಬೇರೆ ಬೇರೆ ನೆಲೆಗಳಿಂದ ಲಿಪಿಕಾರರು ಹೊರಹೊಮ್ಮಲು, ಆವತ್ತೀನ ರಾಜಕೀಯ ನಿರ್ಣಯಗಳು ಹೇಗೆ ಒತ್ತಾಸೆಯಾಗಿವೆ, ಮತ್ತು ಯಾವುದೇ ಒಂದು ಸಾಮಾಜಿಕ ಸಮೂಹದ ಪ್ರಾಬಲ್ಯವನ್ನು ಅಳಿಸುವ ಕ್ರಮಗಳು ಹೇಗೆ ಮೈದಾಳುತ್ತವೆ ಅನ್ನುವುದನ್ನು ಚರ್ಚಿಸಲು ಇಲ್ಲಿ ಸಾಕಷ್ಟು ಅವಕಾಶವಿರುತ್ತದೆ. ಆದರೆ ಕಲೆ, ಕುಶಲಕರ್ಮಿ ಮತ್ತು ಸೌಂಧರ್ಯ ಕಲ್ಪನೆಯ ನಡುವಣ ವ್ಯತ್ಯಾಸಗಳು ಹೇಗೆ ರಾಜಕೀಯ ಸ್ವರೂಪವನ್ನು ಒಳ್ಗೊಂಡಿರುತ್ತವೆ ಎಂಬುದಕ್ಕೆ, ಶಾಸನಗಳನ್ನು ಬರೆಯುವ ಲಿಪಿಕಾರರನ್ನು ಗುರಿತಿಸುವ ಬಗೆಯಲ್ಲಿಯೆ ಎದ್ದು ಕಾಣುತ್ತದೆ. ಅಂದರೆ ಲಿಪಿಕಾರರನ್ನು ಕೇವಲ ಶ್ರಮಿಕರನ್ನಾಗಿ ಮಾತ್ರ ಗುರುತಿಸಲಾಗಿದೆ. ಆಯಾ ಕೆಲಸಕ್ಕೆ ಬೇಕಾದ ಚಳಕಗಳನ್ನು ರೂಢಿಸಿಕೊಂಡ ಕುಶಲಕರ್ಮಿಗಳನ್ನಾಗಿ ನೋಡಲಾಗುತ್ತದೆ. ಕಲಾವಿದನಿಗೆ ಇರಬಹುದಾದ ಸೃಜನಶೀಲತೆ, ಸೌಂಧರ್ಯ ಕಲ್ಪನೆ ಈ ಲಿಪಿಕಾರರಲ್ಲಿ ಇರುವುದಿಲ್ಲ ಎಂಬ ನಂಬಿಕೆಯೂ ಆ ಹೊತ್ತಿನಲ್ಲಿಯೂ ಗಟ್ಟಿಯಾಗಿದ್ದವು ಎಂಬುದಕ್ಕೆ ಈ ಹೊತ್ತಿಗೆಯಲ್ಲಿ ಸುಳಿವುಗಳು ಸಿಗುತ್ತವೆ. ಕುಶಲಕರ್ಮಿಗಳು ಎಂದರೆ ಕೇವಲ ಶ್ರಮಿಕರು, ಅವರಿಗೆ ಯಾವುದೇ ಬಗೆಯ ಬೌದ್ಧಿಕ ಮತ್ತು ಸೌಂಧರ್ಯ ಕಲ್ಪನೆಯ ಗ್ರಹಿಕೆಗಳು ಇರುವುದಿಲ್ಲ ಎಂಬ ನಂಬಿಕೆಯು ಇವತ್ತಿಗೂ ಗಟ್ಟಿಯಾಗಿಯೇ ಇದೆ. ಲಿಪಿಗೆ ಕೊಟ್ಟಿರುವ ಬೌದ್ಧಿಕ ಚಹರೆಯ ಮಾನ್ಯತೆಯನ್ನು ಲಿಪಿಕಾರನಿಗೆ ಕೊಡುವುದಿಲ್ಲ. ಹಾಗೆಯೇ ಕಲಾಸೌಂಧರ್ಯವನ್ನು ರೂಪಿಸುವ ಕುಶಲಕರ್ಮಿಗೂ ಯಾಕೆ ಕಲೆಗೆ ಇರುವ ಮಾನ್ಯತೆಯನ್ನು ಕೊಡಲು ಆಗುವುದಿಲ್ಲ ಅನ್ನುವುದನ್ನು ಬಿಡಿಸಿ ನೋಡಬೇಕಿದೆ.

ಪ್ರಭುತ್ವದ ‘ಮುಖವಾಣಿ’ಯಂತೆ ಬಿಂಬಿತವಾಗಿದ್ದರೂ, ಸಮುದಾಯದ ಸಾಮಾಜಿಕ, ರಾಜಕೀಯ ವಿನ್ಯಾಸಗಳನ್ನು ತೋರಿಸುವ ಸಾಮಾಜಿಕ ಸೂಚ್ಯಂಕಗಳು ಶಾಸನಗಳ ಒಳಗೆಯೇ ಅಂತರ್ಗತ ಆಗಿರುತ್ತವೆ. ಜಾತಿ, ಧರ್ಮ, ನುಡಿ ಪ್ರಮಾಣೀಕರಣದ ನೆಲೆಗಳನ್ನು ಸಾಮಾಜಿಕ ನುಡಿಯರಿಮೆಯ ನೆಲೆಯಿಂದ ನೋಡಲು ಬೇಕಾದ ಆಕರಗಳು ಇಲ್ಲಿವೆ. ಯಾವುದೇ ಒಂದು ನುಡಿ ತನ್ನ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಸಾಂಸ್ಥಿಕ ಮತ್ತು ತಾತ್ವಿಕ ರಚನೆಗಳನ್ನು ಮೈಗೂಡಿಸಿಕೊಳ್ಳುವ ನೆಲೆಗಳು ಎಂತಹವು ಎನ್ನುವುದನ್ನೂ ಈ ಓದಿನಿಂದ ಅರಿಯಬಹುದು. ಮೊದಲ ಸಹಸ್ರಮಾನದ ಕನ್ನಡ ನುಡಿಯ ಡೈಗ್ಲೊಸಿಯಾದ ಸ್ವರೂಪವನ್ನು ಗಮನಿಸಿದರೆ ಈ ಮಾತು ನಿಚ್ಚಳವಾಗುತ್ತದೆ. ಕನ್ನಡ, ಪ್ರಾಕೃತ ಮತ್ತು ಸಂಸ್ಕೃತ ನುಡಿಗಳ ನಡುವಣ ಕೊಡುಕೊಳ್ಳುವಿಕೆಗೆ ಪೂರಕವಾದ ಸಾಕಷ್ಟು ವಿವರಗಳು ಈ ಹೊತ್ತಿಗೆಯಲ್ಲ್ತಿವೆ. ಈ ಬಗೆಯ ನುಡಿ ಒಡನಾಟದಿಂದ ಕನ್ನಡ ನುಡಿಯೊಳಗೆಯೇ ಆಗಿರುವ ಪಲ್ಲಟ ಮತ್ತು ಬದಲಾಣೆಗಳು, ಕನ್ನಡ ಸಮುದಾಯವನ್ನು ಇವತ್ತು ಹೇಗೆ ಆಳುತ್ತಿವೆ ಎಂಬ ದಿಟ ನಮ್ಮ ಕಣ್ಣೆದುರಿಗಿದೆ. ಆದರೆ ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ನುಡಿಗಳ ನಡುವಣ ನಂಟಿನ ಉದ್ದೇಶವನ್ನು ಪ್ರಾದೇಶಿಕ ನುಡಿ ರಾಜಕಾರಣಕ್ಕೆ ಹೊಂದಿಸಿಕೊಂಡು ನೋಡಲಾಗಿದೆ. ಈ ಬಹು ಭಾಷಿಕ ಆಳ್ವಿಕೆ [ಮಲ್ಟಿಪಲ್ ಲಿಂಗ್ವಿಸ್ಟಿಕ್ ರೆಜಿಮ್ಸ್]ಯಲ್ಲಿ ಪ್ರಾದೇಶಿಕ ಗುರುತಿಗೆ ಮಹತ್ವ ಬರುವುದಕ್ಕೆ ರಾಜಕೀಯ ಕಾರಣಗಳೇ ಬಲವಾಗಿವೆ ಹೊರತು ಸಾಂಸ್ಕೃತಿಕ ಕಾರಣಗಳಲ್ಲ. ಇವತ್ತಿಗೂ ಸಂಸ್ಕೃತ ಒಂದು ಪ್ರತಿಷ್ಠೆತೆಯ ಸಂಕೇತವಾಗಿ ಬೆಳೆಯಲು ಏನೆಲ್ಲ ಕಾರಣಗಳು ಇರಬಹುದು ಎಂಬುದಕ್ಕೆ ರಾಜಕೀಯ ಮತ್ತು ಧಾರ್ಮಿಕ ಕಾರಣಗಳೇ ಬಲವಾಗಿವೆ. ಏಕೆಂದರೆ ಯಾವುದೆ ನುಡಿ ರಾಜಕಾರಣದ ಅದಮ್ಯ ಉದ್ದೇಶ ಎತ್ನೊಲಿಂಗ್ವಿಸ್ಟಿಕ್ ಇನ್‍ಡಿಪೆಂಡೆನ್ಸಿಯನ್ನು ನೆಲೆಗೊಳಿಸುವ ಬಗೆಯಾಗಿರುತ್ತದೆ. ಹಲನುಡಿಗಳ ನಡುವೆ ಇರಬಹುದಾದ ಸಂವಾದಾತ್ಮಕ ನಂಟಸ್ತಿಕೆ ಏಕಾಲಪವಾದರೆ, ದೇಶಿ ನುಡಿಗಳ ಅಸ್ತಿತ್ವಕ್ಕೆ ಕುತ್ತು ಬರುತ್ತದೆ. ಭಾಷಿಕ ರೂಢಿಗಳಲ್ಲಿಯೇ ಇಂತಹ ವಿರೋಧಭಾಸಗಳು, ವೈರುಧ್ಯಗಳು ಹೇಗೆ ಅಂತರ್ಗತವಾಗಿರುತ್ತವೆ ಎಂಬ ಸಂಗತಿಗಳು ಇಲ್ಲಿ ಸಿಗುತ್ತವೆ.

ನುಡಿ ಮತ್ತು ತಾತ್ವಿಕ ವಿನ್ಯಾಸಗಳ ನಡುವಣ ನಂಟಸ್ತಿಕೆ ಗತಿತಾರ್ಕಿಕವಾಗಿರುತ್ತದೆ. ಈ ನೆಲೆಯಲ್ಲಿ ಅಂತರಗಳು ಉಂಟಾದಷ್ಟು, ಆಯಾ ನುಡಿ ಸಮುದಾಯಗಳಿಗೆ ಸಾಮಾಜಿಕ, ರಾಜಕೀಯ ಸವಾಲುಗಳು ಹೆಚ್ಚುತ್ತಲೇ ಇರುತ್ತವೆ. ಈ ಬಗೆಯ ಇಕ್ಕಟುಗಳ ಚರಿತ್ರೆ ಹೇಗೆ ನಿರ್ಮಾಣವಾಗುತ್ತದೆ ಎಂಬುದಕ್ಕೆ ಶೆಟ್ಟರ್ ಅವರ ‘ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ [2014]’ ಎಂಬೀ ಹೊತ್ತಿಗೆ ಸಾಕ್ಷಿಯಾಗಿದೆ. ಭಾರತದ ಸನ್ನಿವೇಶದಲ್ಲಿ ಸಾಹಿತ್ಯಕ ಮತ್ತು ಸಾಮಾಜಿಕ ಚರಿತ್ರೆಗಳಲ್ಲಿ ನುಡಿ ರಾಜಕಾರಣದ ಸ್ವರೂಪವನ್ನು ಅರಿಯಲು ಇದೊಂದು ಟೆಸ್ಟ್‍ಕೇಸ್ ಆಗಿರುತ್ತದೆ. ಈ ಹೊತ್ತಿಗೆಯ ಓದಿನ ಪರಿಣಾಮವಾಗಿ, ಇಲ್ಲಿಯ ವಿವರಗಳನ್ನು ಸಾಮಾಜಿಕ ನುಡಿಯರಿಮೆಯ ಚೌಕಟ್ಟಿಗೆ ಒಗ್ಗಿಸಿಕೊಂಡು, ಸಾಮಾಜಿಕ ಸಂಕಥನಗಳ ಬಗೆಗಳನ್ನು ಅರಿಯುವುದು ಈ ಬರಹದ ಗುರಿಯಾಗಿದೆ.

ಪ್ರಾಕೃತ ಜಗದ್ವಲಯ: ಬರಹ ಸಂಸ್ಕೃತಿಯ ಶೋಧ

ಹೆಸರಾಂತ ಚಿಂತಕರಾದ ಷ. ಶೆಟ್ಟರ್ ಅವರು ಇತ್ತೀಚಿನ ಹೊತ್ತಿಗೆಯ ಹೆಸರು “ಪ್ರಾಕೃತ ಜಗದ್ವಲಯ” (2018). ಹಲವು ಕಾರಣಗಳಿಗಾಗಿ ಈ ಹೊತ್ತಿಗೆ ಮಹತ್ವವನ್ನು ಪಡದುಕೊಂಡಿದೆ. ಚಾರಿತ್ರಿಕ ಪ್ರಾಕ್ತನಶಾಸ್ತ್ರದ ನೆಲೆಯಿಂದ ಕರ್ನಾಟಕದ ಚರಿತ್ರೆ, ಸಂಸ್ಕೃತಿ, ಭಾಷೆ, ಲಿಪಿ, ಶಾಸನಗಳಂತಹ ಮೊದಲಾದ ವಿದ್ಯಮಾನಗಳನ್ನು ತಲಸ್ಪರ್ಶಿಯಾಗಿ ಶೋಧಿಸುವ ಇರಾದೆಯನ್ನು ಇವರು ಹೊಂದಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಶಂಗಂ ತಮಿಳಿಗಂ ಮತ್ತು ಕನ್ನಡ ನಾಡುನುಡಿ, ಹಳಗನ್ನಡ: ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ, ಹಳಗನ್ನಡ (ಸಂ): ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ ಹಾಗೂ ಪ್ರಾಕೃತ ಜಗದ್ವಲಯ ಎಂಬೆಲ್ಲ ಹೊತ್ತಿಗೆಗಳನ್ನು ನೋಡಬಹುದು. ಈ ಎಲ್ಲ ಹೊತ್ತಿಗೆಗಳ ಮೂಲ ಉದ್ದೇಶ ಕನ್ನಡದ ಪ್ರಾಚೀನತೆಯ ಹುಡುಕಾಟವಾಗಿದೆ. ಆದರೆ ನುಡಿಯೊಂದರ ಪ್ರಾಚೀನತೆ ಎನ್ನುವುದು ಯಾವುದೇ ಒಂದು ನಿರ್ದಿಷ್ಟ ನೆಲೆಯಿಂದ ಮಾತ್ರ ಗುರುತಿಸಲು ಸಾಧ್ಯವಿಲ್ಲ ಎಂಬ ಚಾರಿತ್ರಿಕ ವಾಸ್ತವನ್ನೂ ಇವರ ಈ ಎಲ್ಲ ಪುಸ್ತಕಗಳು ಪ್ರಚುರಪಡಿಸುತ್ತವೆ. ಈ ಮಾತುಗಳನ್ನು ಹಿನ್ನಲೆಯಾಗಿಟ್ಟುಕೊಂಡು ಪ್ರಾಕೃತ ಜಗದ್ವಲಯ ಎನ್ನುವ ಪುಸ್ತಕವನ್ನು ವಿಶ್ಲೇಷಿಸಲಾಗಿದೆ.

ಪುರಾತನ ಎನ್ನುವ ಕಾರಣಕ್ಕೆ ನುಡಿಯೊಂದನ್ನು ಸಮೃದ್ಧವಾದದ್ದೆಂದು ತೀರ್ಮಾನಿಸಲು ಸಾಧ್ಯವಿಲ್ಲ. ಯಾವುದೇ ನುಡಿಯ ಪ್ರಾಚೀನತೆ ಎಂಬುದು ಚಾರಿತ್ರಿಕ-ಸಾಂಸ್ಕೃತಿಕ ವಿದ್ಯಮಾನಗಳ ಜೊತೆಗೆ ಹೇಗೆ ಅನುಸಂಧಾನ ಮಾಡಿದೆ ಎಂಬುದನ್ನು ಆಧರಿಸಿರುತ್ತದೆ. ನುಡಿಗೆ ಲಿಪಿ, ಬರವಣಿಗೆ, ಸೃಜನಶೀಲತೆಯ ಆಯಾಮಗಳು ದೊರಕಿದರೆ, ಆ ನುಡಿಗೆ ಸಾಮಾಜಿಕ-ಸಾಂಸ್ಕೃತಿಕ ಅಸ್ತಿತ್ವ, ಅಸ್ಮಿತೆ ಹಾಗೂ ರಾಜಕೀಯ ಮಾನ್ಯತೆ ಕೂಡ ಲಭ್ಯವಾಗುತ್ತದೆ. ಕನ್ನಡವನ್ನು ಇವತ್ತು ಪ್ರಾಚೀನ ನುಡಿಯೆಂದು ಗುರುತಿಸುವ ಪ್ರಕ್ರಿಯೆಯಲ್ಲಿಯೂ ಈ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳು ಮುಖ್ಯವಾಗಿವೆ. ಸಂಸ್ಕೃತ ಲಿಪಿ ವ್ಯವಸ್ಥೆಯನ್ನು ಪಡೆದುಕೊಂಡ ಮೇಲೆಯೇ ವಿಶ್ವಾತ್ಮಕ ಮಾನ್ಯತೆಯನ್ನು ಪಡೆಯಿತು. ಬುದ್ಧ ಮತ್ತು ಮಹಾವೀರ ಅವರುಗಳು ತಮ್ಮ ಅನುಯಾಯಿಗಳಿಗೆ ಪ್ರಾಕೃತ ನುಡಿಗಳಲ್ಲಿ ಬೋಧನೆ ಮಾಡಿದ್ದರಿಂದ ಅವುಗಳಿಗೆ ಪ್ರಾಧಾನ್ಯತೆ ಸಿಕ್ಕಿರುತ್ತದೆ. ಕ್ರಿ.ಪೂ 6ನೇ ಶತಮಾನದಿಂದ ಕ್ರಿ.ಶ 3ನೇ ಶತಮಾನದವರೆಗೆ ಪ್ರಾಕೃತ ನುಡಿ(ಗಳು) ಜನಸಾಮಾನ್ಯರ ನುಡಿಯಾಗಿದ್ದವು. ಈ ನುಡಿಗಳು ಬಹಳ ವರುಷಗಳ ಕಾಲ ಮೌಖಿಕ ಪರಂಪರೆಯಲ್ಲಿಯೇ ಇದ್ದವು. ಅಶೋಕ ಚಕ್ರವರ್ತಿ ಬ್ರಾಹ್ಮೀ ಲಿಪಿಯ ನಂಟನ್ನು ಪ್ರಾಕೃತ ನುಡಿಗಳೊಂದಿಗೆ ಬೆಸೆದಿರುವುದು ಚಾರಿತ್ರಿಕ. ಕನ್ನಡ ನುಡಿಯ ಇಡೀ ಬೆಳವಣಿಗೆಯನ್ನು ಗುರುತಿಸುವ ಇಂತಹ ಪ್ರಯತ್ನಗಳು ಈ ಹೊತ್ತಿಗೆಯ ಮಹತ್ವದ ಚರ್ಚೆಗಳಾಗಿವೆ.

ಭಾಷಾ ಅನುಸಂಧಾನ’ ಎಂಬ ಪ್ರಧಾನ ನೆಲೆಯಲ್ಲಿಯೇ ಈ ಹೊತ್ತಿಗೆಯ ಚರ್ಚೆಗಳು ಬೆಳೆದಿವೆ. ಇದು ಸಾಮಾಜಿಕ-ಚಾರಿತ್ರಿಕ ಭಾಷಾಧ್ಯಯನದ ನೆಲೆಯಿಂದ ರೂಪುಗೊಂಡ ಓದು. ಹಲವು ಅಧ್ಯಯನಶಿಸ್ತುಗಳ ಸಾಮಾನ್ಯ ಗ್ರಹಿಕೆಯನ್ನು ಈ ಪುಸ್ತಕ ಬಯಸುತ್ತದೆ. ಎಂಟು ಅಧ್ಯಾಯಗಳ ಈ ಹೊತ್ತಿಗೆ ಕೇವಲ ಒಂದು ಭಾಷೆಯ ಅಧ್ಯಯನವಲ್ಲ. ಪ್ರಾಕೃತ-ಸಂಸ್ಕೃತ-ಕನ್ನಡ ನುಡಿಗಳ ನಡುವಣ ಸಂಘರ್ಷ ಮತ್ತು ಅನುಸಂಧಾನ ಕುರಿತ ವಿಶ್ಲೇಷಣೆಯಾಗಿದೆ. ಬೌದ್ಧರು ನಿರ್ಮಿಸಿದ ಪ್ರಾಕೃತ ಜಗದ್ವಲಯದ ಈ ವ್ಯಾಪ್ತಿ ಅತ್ಯಂತ ವ್ಯಾಪಕವಾಗಿದೆ. ಪಾಲಿ, ಮಗಧಿ, ಅರ್ಧಮಾಗಧಿ, ಶೌರಸೇನಿ, ಮಹಾರಾಷ್ಟ್ರೀ, ಅಪಭ್ರಂಶ, ಪೈಶಾಚೀ ಮೊದಲಾದ ‘ಪ್ರಾಕೃತಂಗಳ್’ಗಳ ಸ್ವಾಯತ್ತತೆ, ಭಿನ್ನತೆ, ಪ್ರಾದೇಶಿಕತೆ, ಲಿಪೀಕರಣ, ಸಾಹಿತ್ಯ ಮುಂತಾದ ನಿಲುವುಗಳು ಇಲ್ಲಿ ವಿಶ್ಲೇಷಣೆಯ ನೆಲೆಗಳಾಗಿವೆ. ಬೌದ್ಧ ಧರ್ಮ, ಶಿಲಾಶಾಸನ, ಪ್ರಾಕೃತ ನುಡಿ, ಬ್ರಾಹ್ಮೀ ಲಿಪಿಗಳ ನಡುವಣ ಈ ನಂಟು ಭಾರತೀಯ ಸಾಂಸ್ಕೃತಿಕ ಚರಿತ್ರೆಯಲ್ಲಿಯೇ ಮಹತ್ವದ ನಡೆಯಾಗಿದೆ. ಆದರೆ ಬೌದ್ಧರಂತೆ ಪ್ರಾಕೃತವನ್ನು ಕಲ್ಬರಹದ ಮಾಧ್ಯಮವನ್ನಾಗಿ ಆರಂಭ ಕಾಲದಲ್ಲಿ ಜೈನರು ಬಳಸಿಕೊಳ್ಳಲಿಲ್ಲ (ಪು.2). ಆದರೆ ಆರಂಭ ಕಾಲದ ಜೈನರ ಕನ್ನಡ ಬರಹಗಳು ಸುಮಾರು ಆರನೇ ಶತಮಾನದಲ್ಲಿ ಪ್ರಕಟವಾಗಿವೆ.

ಕೆಳದಖ್ಖಣದ ಪ್ರಾಕೃತ ಭಾಷಾ ಇತಿಹಾಸದಲ್ಲಿ ಕ್ರಿ.ಶ ಮೂರನೇ ಶತಮಾನವು ಒಂದು ತಿರುವಿನ ಕಾಲ. ಏಕೆಂದರೆ, ಕಲ್ಬರಹದಿಂದ ತಾಮ್ರಪಟದ ಬರಹವು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಇಲ್ಲಿಯೇ. ಹಾಗೂ ಆರ್ನೂರು ವರುಷಗಳ ಈ ಭಾಷೆಯ ಏಕಸ್ವಾಮ್ಯವೂ ಅಂತ್ಯಗೊಂಡದ್ದು ಇದೇ ಶತಮಾನದಲ್ಲಿ. ಅರಸುಮನೆತನ, ಭಾಷಾರಾಜಕಾರಣ, ಧರ್ಮ ಇವುಗಳ ನಡುವಣ ಅನುಸಂಧಾನ ಮತ್ತು ಸಂಘರ್ಷದ ಮಾದರಿಗಳಲ್ಲಿ ಸಾಂಸ್ಕೃತಿಕ ಪಲ್ಲಟಗಳು ಏರ್ಪಟ್ಟವು. ಪರಿಣಾಮವಾಗಿ ಗದ್ಯ ಪ್ರಧಾನ ಪ್ರಾಕೃತವು ಮರೆಯಾಗಿ ಗದ್ಯ-ಪದ್ಯ ಮಿಶ್ರಿತ ಸಂಸ್ಕøತವು ಬಳಕೆಗೆ ಬಂದಿತು. ಅರಸುಮನೆತನದ ಮಧ್ಯಸ್ಥಿಕೆಯಿಂದ ಈ ನುಡಿ ಬಳಕೆಯ ಮಾದರಿಗಳಲ್ಲಿ ಪಲ್ಲಟಗಳಾದವು. ಇದು ದಖ್ಖಣದ ಅರಸುಮನೆತನಗಳ ಸಾಮನ್ಯ ವರ್ತನೆಯಾಗಿತ್ತು. ಭಾಷಿಕ, ಸಾಂಸ್ಕೃತಿಕವಾಗಿ ನೆಲೆಗೊಂಡಿದ್ದ ಪ್ರಾಕೃತ ನುಡಿಗಳನ್ನು ನಿರ್ಣಾಮ ಮಾಡುವ ಹುನ್ನಾರಗಳು ಇಲ್ಲಿ ಹೇಗೆ ಮುಂಚೂಣೆಗೆ ಬಂದವು ಎಂಬುದನ್ನು ಅತ್ಯಂತ ಖಚಿತವಾಗಿ ಚರ್ಚಿಸಿರುವದಿಲ್ಲ.

ಬೌದ್ದರು-ಜೈನರು-ವೈದಿಕರು ಭಾಷಾರಾಜಕಾರಣದ ಮೂರು ನೆಲೆಗಳು ಎನ್ನುವ ವಾಸ್ತವ ಮರೆತು, ಕೇವಲ ವೈದಿಕ-ಶೂದ್ರ ವಿನ್ಯಾಸಗಳಲ್ಲಿ ಮಾತ್ರ ಭಾಷಾರಾಜಕಾರಣವನ್ನು ವಿವರಿಸುತ್ತೇವೆ. ಇದೊಂದು ಅಪೂರ್ಣ ತಾತ್ವಿಕ ಚೌಕಟ್ಟವೆಂಬುದು ಈ ಪುಸ್ತಕದ ಹಲವು ಸೈದ್ಧಾಂತಿಕ ನಿರೂಪಣೆಗಳಿಂದ ಕಂಡುಬರುತ್ತದೆ. ಬರವಣಿಗೆಯ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಯಜಮಾನಿಕೆಯನ್ನು ಹೇಗೆ ಸಾಧಿಸಲಾಗಿದೆ ಎನ್ನುವ ಸ್ಪಷ್ಟ ತಾತ್ವಿಕ ನಿಲುವುಗಳು ಇಲ್ಲಿ ಮನವರಿಕೆಯಾಗುತ್ತವೆ. ಆದರೆ ಭಾಷಾಶಾಸ್ತ್ರೀಯ ಸಂಗತಿಗಳನ್ನು ಪರಿಣಾಮಕಾರಿಯಾಗಿ ಈ ಪುಸ್ತಕದಲ್ಲಿ ಬಳಸಿಕೊಂಡಿರುವುದಿಲ್ಲ. ಇಂತಹ ಕೆಲವು ಕೊರತೆಗಳನ್ನು ಹಳಗನ್ನಡ ಹಾಗೂ ಶಂಗಂ ತಮಿಳಗಂ ಮತ್ತು ನಾಡು ನುಡಿ ಪುಸ್ತಕದಲ್ಲಿಯೂ ಗುರುತಿಸಬಹುದು.

ದ್ವಿಭಾಷಿಕ ಪ್ರಕ್ರಿಯೆಯಲ್ಲಿಯೇ ಭಾಷಿಕ ಅಸಮಾನತೆ ಹಾಗೂ ಅಧಿಕಾರ ಕೇಂದ್ರಗಳು ರೂಪುಗೊಂಡಿರುವುದು ಸ್ಪಷ್ಟ. ಈ ಭಾಷಾ ಯಜಮಾನಿಕೆ ನೆಲೆಗೊಳ್ಳುವುದಕ್ಕೆ ಶಾಸನ-ಬರಹ ಮತ್ತು ಪ್ರಭುತ್ವದ ಒತ್ತಾಸೆ ಹೇಗೆ ಪೂರಕವಾಗಿದೆ ಎಂಬುದಿಲ್ಲಿ ಗಮನಾರ್ಹ. ಜೈನರು-ಬೌದ್ಧರು-ವೈದಿಕರು ತಮ್ಮ ತಾತ್ವಿಕ, ಸಾಹಿತ್ಯಿಕ ನಿರೂಪಣೆಗಳಿಗೆ ಹಾಗೂ ಜನಸಾಮನ್ಯರೊಂದಿಗೆ ಸಂವಹನ ಬೆಳೆಸಲು ರೂಪಿಸಿಕೊಂಡ ಭಾಷಿಕ ವಿನ್ಯಾಸಗಳು ಭಿನ್ನವಾಗಿವೆ. ಪ್ರಾಕೃತ, ಪ್ರಾಕೃತಮಿಶ್ರಿ ಸಂಸ್ಕೃತ ಹಾಗೂ ಸಂಸ್ಕೃತಮಿಶ್ರ ಪ್ರಾಕೃತ ನುಡಿಗಟ್ಟುಗಳು ತಲೆಯೆತ್ತಿದವು. ಇದು ಕೇವಲ ಭಾಷಾರಾಜಕಾರಣದ ಕುರುಹು ಮಾತ್ರವಲ್ಲ, ಧರ್ಮರಾಜಕಾರಣ ಮತ್ತು ಪ್ರಭುತ್ವಗಳ ನಡುವಣ ಅನುಸಂಧಾನವನ್ನೂ ಹಾಗೂ ಜನಭಾಷೆ-ಪ್ರಭುತ್ವಭಾಷೆಗಳ ನಡುವಣ ಸಂಘರ್ಷವನ್ನೂ ಏಕಕಾಲಕ್ಕೆ ಸೂಚಿಸುತ್ತವೆ. ಕರ್ನಾಟಕ ಮತ್ತು ಆಂದ್ರಪ್ರದೇಶಗಳು ಪ್ರಾಕೃತ ಮೂಲದಿಂದ ಸಂಸ್ಕೃತದ ಕಡೆಗೆ ಹೊರಳುವ ಬಗೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ಇವತ್ತಿನ ಭಾಷಾರಾಜಕಾರಣದ ಪರಿಣಾಮಗಳನ್ನು ಮನಗಾಣುತ್ತೇವೆ. ಒಂದು ಕಾಲದ ಭಾಷಾನೀತಿ ಹಾಗೂ ನಿರೂಪಣೆಗಳು, ಇವತ್ತು ಸಮುದಾಯಗಳ ಮೇಲೆ ಏನೆಲ್ಲ ಪ್ರಭಾವ-ಪರಿಣಾಮಗಳನ್ನು ಬೀರುತ್ತವೆ ಎನ್ನುವುದು ಮುಖ್ಯ. ಈ ಎಲ್ಲ ಚರ್ಚೆಗಳು, ಕರ್ನಾಟಕ ಸಂಸ್ಕೃತಿ ಓದಿನ ವಿಭಿನ್ನ ದಾರಿಗಳನ್ನು ರೂಪಿಸುವಲ್ಲಿ ಒತ್ತಾಸೆಯಾಗಿವೆ.

ಕನ್ನಡದ ಆಲೋಚನಾ ಮಾದರಿಗಳನ್ನು ಪ್ರಾಕೃತ ನುಡಿಪರಂಪರೆ ಹೇಗೆ ರೂಪಿಸಿದೆ ಎಂಬ ಖಚಿತ ತಾತ್ವಿಕತೆ ಇಲ್ಲಿ ಮಂಡಿತವಾಗಿಲ್ಲ. ಅಂತಹವೊಂದು ಆಯಾಮವನ್ನು ಗ್ರಹಿಸುವುದಕ್ಕೆ ಬೇಕಾಗುವ ವಿವರಗಳು ಈ ಹೊತ್ತಿಗೆಯಲ್ಲಿ ಸಾಕಷ್ಟು ಸಿಗುತ್ತವೆ. ಕನ್ನಡದ ಸಂವೇದನೆ, ಆಲೋಚನಾ ಪರಂಪರೆಗಳನ್ನು ಯೋಚಿಸುವಾಗೆಲ್ಲ ಸಂಸ್ಕೃತದ ಹಿರಿಮೆಯನ್ನು ಮಾತ್ರ ಕೊಂಡಾಡಲಾಗುತ್ತದೆ. ಪ್ರಾಕೃತ ಕನ್ನಡದ ಈ ಪರಂಪರೆಗಳನ್ನು ಹೇಗೆ ರೂಪಿಸಿದೆ ಎಂಬುದನ್ನು ಅರಿಯುವುದು ಜರೂರಾಗಿದೆ. ಸಂಸ್ಕೃತ ನುಡಿ ಪರಂಪರೆಯ ಬೌದ್ಧಿಕ ವಾತವರಣದಲ್ಲಿಯೇ ಕನ್ನಡ ಮತ್ತು ಕರ್ನಾಟಕ ಸಂಸ್ಕೃತಿ ಓದಿನ ಮಾದರಿಗಳು ಕಳೆದ ಒಂದು ಶತಮಾನದಲ್ಲಿ ಮುಂಚೂಣೆಗೆ ಬಂದಿರುತ್ತವೆ. ಇದೊಂದು ಅತ್ಯಂತ ಪ್ರಬಲವಾದ ಮಾರ್ಗ ಇದಕ್ಕೆ ಪರ್ಯಾಯವಾಗಿ ಮತ್ತೊಂದು ದೇಶಿ ಓದಿನ ಮಾರ್ಗವನ್ನು ರೂಪಿಸಬೇಕೆಂದರೆ, ಮೊದಲು ಕಾಲುದಾರಿಗಳು ರೂಪುಗೊಳ್ಳಬೇಕು, ಅಂತಹ ಕಾಲುದಾರಿಗಳ ಜಾಡುಗಳು ಷ. ಶೆಟ್ಟರ್ ಅವರ ಅಧ್ಯಯನಗಳಲ್ಲಿ ನಾವು ಕಾಣುತ್ತೇವೆ. ವಿಶೇಷವಾಗಿ ನುಡಿಕೇಂದ್ರಿತ ಅಧ್ಯಯನಗಳಲ್ಲಿ ಈ ಜಾಡುಗಳು ಅತ್ಯಂತ ಸ್ಪಷ್ಟವಾಗಿವೆ.

ಶೆಟ್ಟರ್ ಅವರ ವೈಚಾರಿಕತೆಯ ಸಾಫಲ್ಯತೆ

ಇದುವರೆಗೆ ಚರ್ಚಿಸಿದ ಬಹುತೇಕ ಸಂಗತಿಗಳು ಶೆಟ್ಟರ್ ಅವರ ಮೂರು ಹೊತ್ತಿಗೆಗಳನ್ನು ಮಾತ್ರ ನೆಲೆಯಾಗಿಸಿಕೊಂಡಿವೆ. ಪ್ರಾಸಂಗಿಕವಾಗಿ, ಅವುಗಳಿಂದ ಮೈದಾಳಬಹುದಾದ ಸಾಂಸ್ಕೃತಿಕ ಪರಿಣಾಮಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಅರವ ಅಧ್ಯಯನಗಳ ಮೂಲಕ ವ್ಯಕ್ತಗೊಳ್ಳುವ ಇಡೀ ತಾತ್ವಿಕತೆಯನ್ನು ಕರ್ನಾಟಕ ಸಂಸ್ಕೃತಿ ಓದಿನ ಚೌಕಟ್ಟಿಗೆ ಅನುಗುಣವಾಗಿ ವಿಶ್ಲೇಷಿಸುವುದು ಅತೀ ಮಹತ್ವದ ನೆಲೆಯಾಗಿದೆ. ಚರಿತ್ರೆಕಥನಗಳ ಕಣ್ನೋಟದ ಮೂಲಕ ನುಡಿ, ಸಂಸ್ಕೃತಿ, ಸಾಹಿತ್ಯ, ಶಾಸನ, ರಾಜಕಾರಣ ಮೊದಲಾದ ಬದುಕಿನ ವಿದ್ಯಮಾನಗಳನ್ನು ಒಂದು ವ್ಯಾಪಕವಾದ ತಾತ್ವಿಕ ವಿನ್ಯಾಸದೊಳಗೆ ಮಂಡಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಈ ಸವಾಲನ್ನು ಮೈಮೇಲೆ ಎಳೆದುಕೊಂಡು ಹಲವು ಮಹತ್ವದ ಅಧ್ಯಯನಗಳನ್ನು ಶೆಟ್ಟರ್ ಅವರು ರೂಪಿಸಿಕೊಟ್ಟಿದ್ದಾರೆ. ಪರಿಣಾಮವಾಗಿ ಕರ್ನಾಟಕದ ಸಾಹಿತ್ಯ, ಮೀಮಾಂಸೆ, ಚರಿತ್ರೆ, ಭಾಷೆ, ಭಾಷಾಶಾಸ್ತ್ರ, ವಾಸ್ತುಶಿಲ್ಪ, ಸಾಮಾಜಿಕ ನಡೆಗಳು ಮೊದಲಾದವುಗಳನ್ನು ಮರು ಓದಿಗೆ ಒಳಪಡಿಸಲು ಬೇಕಾಗಿರುವ ಅಧ್ಯಯನದ ಮಾದರಿಗಳು ಇವರ ಇಡೀ ಬರಹಗಳಲ್ಲಿ ಮೈದಾಳುತ್ತವೆ.

ಕನ್ನಡದ ಪುರಾತನತೆಯನ್ನು ಕಂಡುಕೊಳ್ಳುವಲ್ಲಿ ಇವರ ಅಧ್ಯಯನಗಳ ಸಾಫಲ್ಯತೆಯನ್ನು ಕಾಣಬಹುದು. ಮುಖ್ಯವಾಗಿ (1.) ಆಕರಗಳ ಪ್ರಾಮುಖ್ಯತೆ ಮತ್ತು ಆಯ್ಕೆ (2.) ಸಂಶೋಧನಾ ವಿಧಾನಗಳು ಮತ್ತು ತಾತ್ವಿಕತೆ (3.) ಮರೆತುಹೋದ ಹಳಗನ್ನಡ ಕಾವ್ಯಗಳು ಹಾಗೂ ಸಾಂಸ್ಕೃತಿಕ ಅಸ್ಮಿತೆ (4.) ಭಾಷಾ ರಾಜಕಾರಣ ಮತ್ತು ಅನುಸಂಧಾನದ ನೆಲೆಗಳು (5.) ಅರಸೊತ್ತಿಗೆ ಮತ್ತು ಕನ್ನಡ ನುಡಿ ಬೆಳವಣಿಗೆ ಹಾಗೂ ಲಿಪಿ ವ್ಯವಸಾಯ (6.) ಬಹುರೂಪಿ ಆಯಾಮಗಳ ದರ್ಶನ ಹಾಗೂ ಧಾರ್ಮಿಕ ಸಂಘರ್ಷ (7.) ಬಹುಭಾಷಿಕ ಶಾಸನಗಳು ಮತ್ತು ಗುರುತಿನ ರಾಜಕಾರಣ (8.) ಚರಿತ್ರೆಯ ನಿರ್ಮಾಣದಲ್ಲಿ ಭಾಷೆ ಹೇಗೆ ಪ್ರಬಲ ಅಸ್ತ್ರವಾಗಿದೆ. ಎಂಬಿತ್ಯಾದಿ ಸಂಗತಿಗಳಲ್ಲಿ ಶೆಟ್ಟರ್ ಅವರ ತಾತ್ವಿಕ ದರ್ಶನವನ್ನು ಕಾಣುತ್ತೇವೆ.

ಸಮಕಾಲೀನ ಸನ್ನಿವೇಶದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಅರಿಯಲು ನುಡಿ ಮತ್ತು ನುಡಿ ಸಂಕಥನಗಳಿಗೆ ಅತೀಯಾದ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಎಂಬ ಆರೋಪವಿದೆ. ಚಿಂತನೆಗಳನ್ನು ಅಭಿವ್ಯಕ್ತಿಸಲು ಮಾತ್ರ ನುಡಿಯನ್ನು ಬಳಸಲು ಸಾಧ್ಯವಿಲ್ಲ. ಏಕೆಂದರೆ, ಗ್ರಹಿಕೆಯ ಅಗಾಧತೆಯನ್ನು ಹಾಗೂ ತಾತ್ವಿಕತೆಯ ಸಾಧ್ಯತೆಯನ್ನು ಕಂಡರಿಯಲು ಭಾಷೆಯೇ ಮಹತ್ವದ ಸಂಗತಿಯಾಗಿದೆ. ಭಾಷೆ ಮತ್ತು ಚಿಂತನೆಗಳ ನಡುವಣ ಗಡಿಗೆರೆಯು ಅಳಿಸಿ ಹೋಗಿದೆಯೆಂದು ಹೇಗೆ ಹೇಳುವುದು. ಏಕೆಂದರೆ, ಯಾವ ಚಿಂತನೆ ಎಲ್ಲಿ ಯಾವಾಗ ಆರಂಭಗೊಳ್ಳುತ್ತದೆ. ಯಾವುದು ಎಲ್ಲಿ ಕೊನೆಗೊಳ್ಳುತ್ತದೆ ಎನ್ನುವುದನ್ನು ಗುರುತಿಸುವುದು ದುಸ್ತರ. ಹಾಗಾಗಿ ಯಾವುದೇ ಚಿಂತನೆಯ ಬೆಳವಣಿಗೆ ಮತ್ತು ಅದರ ಕ್ರೋಢೀಕರಣ ಹಾಗೂ ಭಾಷೆಗಳ ನಡುವೆ ಅಂತರಗಳಿವೆ ಎಂಬ ವಾದವನ್ನು ಶೆಟ್ಟರ್ ಅವರ ಅಧ್ಯಯನಗಳು ಒಪ್ಪುವುದಿಲ್ಲ. ಭಾಷಾ ಸಂಸ್ಕೃತಿಯ ಬಗೆಗೆ ಯೋಚಿಸುವಾಗ, ಆಯಾ ನುಡಿಯಲ್ಲಿ ಹುದುಗಿರುವ ತಾತ್ವಿಕತೆ ಬಗೆಗಿನ ಪ್ರಶ್ನೆಗಳನ್ನೂ ಕಡೆಗಣಿಸಲು ಸಾಧ್ಯವಿಲ್ಲ. ಅಂದರೆ ಭಾಷೆಯ ಪರಂಪರೆಯನ್ನು ಯೋಚಿಸುವುದೆಂದರೆ, ಆಯಾ ಭಾಷೆಯು ಉತ್ಪಾದಿಸುವ ‘ಜ್ಞಾನ ವಿನ್ಯಾಸ’ಗಳನ್ನು ಕುರಿತು ಯೋಚಿಸಬೇಕಾಗುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆಯಾ ಲೋಕದ ವಸ್ತು ವಿನ್ಯಾಸಗಳನ್ನು ಸೈದ್ಧಾಂತಿಕ ಹಾಗೂ ಸೃಜನಾತ್ಮಕವಾಗಿ ಬಣ್ಣಿಸಲು ಸಾಧ್ಯವಾಗುವುದು, ಆಯಾ ನುಡಿಗಳ ಬೆಳವಣಿಗೆಯಲ್ಲಿ ಕಾಣುತ್ತದೆ. ಇದೊಂದು ಚಾರಿತ್ರಿಕವೂ ಮತ್ತು ಸಾಂಸ್ಕೃತಿಕವೂ ಆದ ಬೆಳವಣಿಗೆಯಾಗಿದೆ. ದಿಟ, ಯಾವುದೇ ಒಂದು ಭಾಷೆಯಲ್ಲಿ ವಿಕಾಸಗೊಳ್ಳುವ ಜ್ಞಾನ ಹಾಗೂ ವೈಚಾರಿಕ ವಿನ್ಯಾಸಗಳನ್ನು ಕೇವಲ ಭಾಷೆಗೆ ಮಾತ್ರ ಸೀಮಿತಗೊಳಿಸಿ ನೋಡಲು ಸಾಧ್ಯವಿಲ್ಲ. ಭಾಷೆಯೊಂದಿಗೆ ತಳುಕು ಹಾಕಿಕೊಂಡಿರುವ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳನ್ನು ಒಳ್ಗೊಂಡಂತೆ ಜ್ಞಾನ ವಿನ್ಯಾಸಗಳನ್ನು ಕುರಿತು ಚಿಂತಿಸಬೇಕಾಗುತ್ತದೆ. ಈ ಆಲೋಚನಾ ಕ್ರಮಕ್ಕೆ ಪೂರಕವಾದ ಹಲವು ಹೊಳವುಗಳನ್ನು ಶೆಟ್ಟರ್ ಅವರ ಅಧ್ಯಯನಗಳಲ್ಲಿ ಕಾಣುತ್ತೇವೆ.

ಜ್ಞಾನ ಮತ್ತು ಅಧಿಕಾರ ಸಂಕಥನಗಳನ್ನು ಕುರಿತ ನಿಲುವುಗಳು ಶೆಟ್ಟರ್ ಅವರ ವಿಶ್ಲೇಷಣೆಗಳಲ್ಲಿ ಹೇಗೆ ಪ್ರಕಟಗೊಳ್ಳುತ್ತವೆ ಎನ್ನುವುದನ್ನು ಅರಿಯಲು, ಜ್ಞಾನಶಾಸ್ತ್ರಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಖಚಿತಪಡಿಸುವ ಸಾಕ್ಷಿಗಳು ಇಲ್ಲಿ ಲಭ್ಯವಾಗುತ್ತವೆ. ಈ ಜ್ಞಾನ ಮತ್ತು ಅಧಿಕಾರ ಸಂಕಥನಗಳನ್ನು ಚರಿತ್ರೆಯಲ್ಲಿ ನಿಭಾಯಿಸಿದ, ನಿರ್ವಹಿಸಿದ ಸ್ವರೂಪ ಮತ್ತು ವಿಧಾನವನ್ನು ಕುರಿತ ಶೆಟ್ಟರ್ ಅವರ ಮರು ವ್ಯಾಖ್ಯಾನಗಳನ್ನು, ಜ್ಞಾನಶಾಸ್ತ್ರದ ಕೊಡುಗೆಗಳೆಂದು ಅಧಿಕೃತಗೊಳಿಸುವುದು ಅವಶ್ಯ. ವಿಶೇಷವಾಗಿ ಜ್ಞಾನಶಾಸ್ತ್ರವೊಂದು ಜ್ಞಾನವನ್ನು ನಿಭಾಯಿಸುವಲ್ಲಿ ಹೇಗೆ ಕಾರ್ಯಪ್ರವೃತ್ತಗೊಳ್ಳಬೇಕು ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ. ಸಂಸ್ಕೃತಿ ಓದಿನಲ್ಲಿ ಜ್ಞಾನಶಾಸ್ತ್ರೀಯ ವೈಶಿಷ್ಟ್ಯ ಮತ್ತು ವಿನ್ಯಾಸಗಳನ್ನು ಮೌಲ್ಯಮಾಪನ ಮಾಡುವುದು ಅಗತ್ಯ. ಆದರೆ ಈ ಅಗತ್ಯತೆಯನ್ನು ಪ್ರತಿಪಾಧಿಸುವ ತಾತ್ವಿಕತೆಯ ಜರೂರಿದೆ ಎಂಬುದು ಗಮನಾರ್ಹ. ಶೆಟ್ಟರ್ ಅವರ ಚಿಂತನೆಗಳ ಪರಿಣಾಮದಿಂದ, ಜ್ಞಾನಮೀಮಾಂಸೆ ಮತ್ತು ಮೀಮಾಂಸಕರ ಹೊಣೆಗಾರಿಕೆಯನ್ನು ಅರಿಯಬಹುದಾಗಿದೆ.

ಯಾವುದೇ ಒಂದು ಅಧ್ಯಯನಶಿಸ್ತಿನ ಸ್ವರೂಪ, ಲಕ್ಷಣ ಹಾಗೂ ಪರಿಕಲ್ಪನೆಗಳು ಯಾವವು? ಅವುಗಳ ವಿಕಾಸಕ್ಕೆ ಇಲ್ಲವೇ ಹುಟ್ಟಿಗೆ ಕಾರಣವಾಗಿರುವ ಚಾರಿತ್ರಿಕ ಸಂಗತಿಗಳು ಯಾವವು? ಪರಿಣಾಮವಾಗಿ ಸಮುದಾಯದೊಳಗೆ ಏನೆಲ್ಲ ಪ್ರಯೋಜನಗಳು ಇಲ್ಲವೇ ಅಪಾಯಗಳು ತಲೆಯೆತ್ತುತ್ತವೆ ಎಂಬುದನ್ನು ಅರಿಯಬಹುದಾಗಿದೆ. ಸಮುದಾಯಗಳು ಎದುರಿಸುವ ಬಿಕ್ಕಟ್ಟುಗಳನ್ನು ನಿಭಾಯಿಸಲು ಯಾವ ಬಗೆಯ ಬೌದ್ಧಿಕ ಅಥವಾ ಜ್ಞಾನಶಿಸ್ತೀಯ ಕ್ರಮಗಳನ್ನು ನಾವು ಅನುಸರಿಸಬೇಕು ಎನ್ನುವುದು ಒಂದು ಸವಾಲೇ ಸರಿ. ಶೆಟ್ಟರ್ ಅವರು ಯೋಚಿಸುವ ವಿಧಾನ, ಅವರು ಆಕರಗಳನ್ನು ಬಳಸಿಕೊಳ್ಳುವ ಬಗೆಗಳು, ಹಾಗೂ ತಮ್ಮ ಅಧ್ಯಯನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಅವರು ರೂಪಿಸಿಕೊಂಡ ವೈಧಾನಿಕತೆ ಯಾವುದು? ಈ ವೈಧಾನಿಕತೆಯ ತಾತ್ವಿಕತೆ ಹೇಗಿದೆ? ಚರಿತ್ರೆ, ಸಂಸ್ಕೃತಿ, ರಾಜಕಾರಣ, ಸಾಹಿತ್ಯ ಮೊದಲಾದ ವಿದ್ಯಮಾನಗಳನ್ನು ಶೆಟ್ಟರ್ ಅವರು ಬಳಸಿಕೊಂಡರು ಎಂಬುದನ್ನು ಅರಿಯಲು ಅವರ ಅಧ್ಯಯನಗಳಲ್ಲಿ ಅವಕಾಶವಿದೆ. ಅಧಿಕಾರ ಮತ್ತು ಜ್ಞಾನ ಸಂಕಥನಗಳನ್ನು ಚರಿತ್ರೆಯಲ್ಲಿ ಹೇಗೆ ನಿಭಾಯಿಸಲಾಗಿದೆ ಅನ್ನುವುದು ಅಷ್ಟೇ ಪ್ರಮುಖವಾದ ವಿದ್ಯಮಾನವಾಗಿದೆ. ಈ ಮೇಲಿನ ಎಲ್ಲ ಚರ್ಚೆಗಳಲ್ಲಿ ವ್ಯಾಪಕವಾಗಿ ಭಾಷಿಕ ಸಂಕಥನಗಳನ್ನು ನೆಲೆಯಾಗಿಸಿಕೊಂಡ ವಿಶ್ಲೇಷಣೆಗಳಲ್ಲಿವೆ.

2 comments to “ಷಡಕ್ಷರಪ್ಪ ಶೆಟ್ಟರ್ : ಕರ್ನಾಟಕ ಸಂಸ್ಕೃತಿ ಓದಿನ ಕಾಲುದಾರಿಗಳು”
  1. ಕನ್ನಡ ಕರ್ನಾಟಕದ ಪ್ರಾಚೀನತೆ, ಅದರ ಬೆಳವಣಿಗೆಯಲ್ಲಿನ ರಾಜಕೀಯ ಅಧಿಕಾರದ ರಾಜಕಾರಣ, ಸಾಂಸ್ಕೃತಿಕ ರಾಜಕಾರಣ ಇವನ್ನು ಅರಿಯುವಲ್ಲಿ, ಆ ಮೂಲಕ ಕರ್ನಾಟಕ, ಕನ್ನಡಗಳ ಐಡೆಂಟಿಟಿಯನ್ನು ಕಾಣಬೇಕಾದ ದಾರಿಗಳನ್ನು ತೋರಿರುವ ಷಟ್ಟರ್ ಅವರ ಚಾರಿತ್ರಕ ತಿಳಿವಿನ ಚಿಂತನೆಯ ಮೇಟಿಯವರ ಬರೆಹ ಅರ್ಥಪೂರ್ಣವಾಗಿದೆ. ಷಟ್ಟರ್ ಅವರ ಅಧ್ಯನಗಳ ತಾತ್ವಿಕತೆಯ ಗುರುತುಗಳನ್ನು ಬಹಳ ನಿಕರವಾಗಿ ಗ್ರಹಿಸಿ ಮಂಡಿಸಲಾಗಿದೆ.ಷಟ್ಟರ್ ಅಧ್ಯನಗಳನ್ನು ಪ್ರವೇಶಿಸುವವರಿಗೆ ಉಪಯುಕ್ತ ದಾರಿಯೊಂದನ್ನು ಮೇಟಿಯವರು ಕಟ್ಟಿಕೊಟ್ಟಿದ್ದಾರೆ.

ಪ್ರತಿಕ್ರಿಯಿಸಿ