ಕೊರೋನ ನಂತರದ ಜಗತ್ತು: ನೋಮ್ ಚಾಮ್ಸ್ಕಿ ಸಂದರ್ಶನ

ಸುಮಾರು ೭೦ ವರ್ಷಗಳ ಕಾಲ ವಿದ್ವಾಂಸನಾಗಿ ತೊಡಗಿಸಿಕೊಂಡ ಚಾಮ್ಸ್ಕಿ, ಜಗತ್ತಿನ ಅನೇಕ ಮಹಾನ್ ಸ್ಥಿತ್ಯಂತರ, ದುರಂತ, ಕ್ಷೋಭೆಗಳಿಗೆ ಸಾಕ್ಷಿಯಾದವರು. ಈ ಎಲ್ಲ ಘಟನೆಗಳನ್ನು ವಾಸ್ತವದಲ್ಲಿ ಕಂಡದ್ದಷ್ಟೇ ಅಲ್ಲದೇ ಅವುಗಳಿಗೆ ಬೌದ್ಧಿಕವಾಗಿ ಪ್ರತಿಸ್ಪಂದಿಸುತ್ತ ಈ ಎಲ್ಲ ಆಗುವಿಕೆಗಳ ನಡುವೆ ಇರುವ ಕಾರ್ಯಕಾರಣಗಳನ್ನೂ, ಗುಣಲಕ್ಷಣಗಳನ್ನು, ಮೂಲಗಳನ್ನೂ ಕುರಿತು ಚಿಂತಿಸಿ ಚರ್ಚಿಸಿದವರು. ಸಮಾಜವಾದೀ ತಾತ್ವಿಕತೆಗೆ ನವೀನ ವೈಜ್ಞಾನಿಕ ಮತ್ತು ಮಾನವಿಕ ಆಯಾಮಗಳನ್ನು ನೀಡಿದವರು. ಈ ಸಂದರ್ಶನದಲ್ಲಿ ಕೊರೋನಾ ವೈರಸ್ಸಿನಿಂದ ಆಗುವ ಆರ್ಥಿಕ ಸಮಸ್ಯೆಗಳ ಬಗ್ಗೆ ಕ್ರೋವೆಷಿಯಾದ ಲೇಖಕ, ತತ್ವಶಾಸ್ತ್ರಜ್ಞ ಸ್ರೆಕೋ ಹೊವಾರ್ಟ್ ಜೊತೆ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾವು ನಮ್ಮನ್ನು ಮುಂಬರುವ ವಿಪತ್ತುಗಳಿಗೆ ಸಜ್ಜು ಮಾಡಿಕೊಳ್ಳುವುದು ಹೇಗೆ ಮುಖ್ಯ ಎಂದು ಚಿಂತಿಸಿದ್ದಾರೆ.

“ಕರೋನ ವೈರಸ್ಸಿನ ನಂತರದ ಜಗತ್ತು” ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಮತ್ತೊಮ್ಮೆ ಸ್ವಾಗತ. ನನಗೆ ಈ ವಿಶೇಷ ಕಾರ್ಯಕ್ರಮಕ್ಕೆ ನಿಮ್ಮೆಲ್ಲರನ್ನೂ ಸ್ವಾಗತಿಸಲು ಅತ್ಯಂತ ಹೆಮ್ಮೆ ಮತ್ತು ಸಂತೋಷವಾಗುತ್ತಿದೆ. ಏಕೆಂದರೆ ಈ ದಿನ ನಮ್ಮೊಡನೆ ಒಬ್ಬ ವಿಶೇಷ ಅತಿಥಿಯಿದ್ದಾರೆ. ನನಗೆ ಮಾತ್ರವಲ್ಲ, ಅನೇಕ ತಲೆಮಾರಿನ ಬಹುತೇಕ ಜನರಿಗೆ ಅವರೊಬ್ಬ ಹೀರೋ. ದುರದೃಷ್ಟವಶಾತ್ ನಾವಿಬ್ಬರೂ ಕೊರೋನಾ ಕಾರಣದಿಂದ ಈಗ ಸ್ವ-ಏಕಾಂತದಲ್ಲಿದ್ದೇವೆ. ನೋಮ್ ಚೋಮ್ಸ್ಕೀಯ ಪರಿಚಯವನ್ನು ನಾನು ಮಾಡಿಕೊಡುವ ಅವಶ್ಯಕತೆಯಿಲ್ಲ. ಏಕೆಂದರೆ ನಿಮ್ಮೆಲ್ಲರಿಗೂ ಅವರು ಯಾರೆಂದು ತಿಳಿದಿದೆ. ನೋಮ್ ಇಂದು ನಮ್ಮ ಜೊತೆ ಇರುವುದು ಬಹಳ ಖುಷಿಕೊಡುತ್ತದೆ . ನಮಸ್ಕಾರ ನೋಮ್, ನೀವು ಈಗ ಎಲ್ಲಿದ್ದೀರಿ? ಈಗಾಗಲೇ ನೀವು ಸ್ವ-ಏಕಾಂಗಿತನದಲ್ಲಿದ್ದೀರಿ? ದಯವಿಟ್ಟು ಹೇಳಿ.

ನೋಮ್: ನಾನು ಸದ್ಯಕ್ಕೆ ಅರಿಝೋನ ದ ಟುಸ್ಸಾನಿನಲ್ಲಿದ್ದೇನೆ. ಸ್ವ-ಏಕಾಂಗಿತನದಲ್ಲಿದ್ದೇನೆ.

ನೀವು 1928ರಲ್ಲಿ ಹುಟ್ಟಿದಿರಿ. ನನಗೆ ತಿಳಿದ ಹಾಗೆ ನೀವು ನಿಮ್ಮ ಮೊದಲ ಪ್ರಬಂಧವನ್ನು ನಿಮ್ಮ ಹತ್ತನೇ ವಯಸ್ಸಿನಲ್ಲಿ ಬರೆದಿರಿ. ಅದು ಬಾರ್ಸೆಲೋನಾ ನಗರವು ಕುಸಿದ ಕಾಲದ ಸ್ಪೈನ್ ದೇಶ ಮತ್ತದರ ಆಂತರಿಕ ಯುಧ್ಧದ ಬಗ್ಗೆ ಬರೆದುದಾಗಿತ್ತು. ಅದು 1928ರಲ್ಲಿ. ನನ್ನ ಪೀಳಿಗೆಗೆ ಅದು ತುಂಬಾ ಹಿಂದಿನ ಕತೆಯಂತೆ ತೋರುತ್ತದೆ. ನೀವು ಎರಡನೇ ಮಹಾಯುಧ್ಧದ ಕಾಲದಲ್ಲಿ ಬದುಕಿದ್ದಿರಿ. ನೀವು ಹಿರೋಶೀಮಾದ ಘಟನೆಗೆ ಸಾಕ್ಷಿಯಾಗಿದ್ದಿರಿ. ನೀವು ಹಲವು ಮುಖ್ಯವಾದ ರಾಜಕೀಯ , ಚಾರಿತ್ರಿಕ ಘಟನೆಗಳಿಗೂ ಸಾಕ್ಷಿಯಾಗಿದ್ದಿರಿ : ವಿಯೆಟ್ನಾಮಿನ ಬಿಕ್ಕಟ್ಟು, ತೈಲ ಬೆಲೆಗಳ ತಕರಾರುಗಳು ಮತ್ತು ಬರ್ಲಿನ್ ಗೋಡೆಯ ಕುಸಿತ….ಅದಕ್ಕೂ ಮೊದಲು ನೀವು ಚರ್ನೋಬಿಲ್ಲಿನ ದುರಂತಕ್ಕೂ ಸಾಕ್ಷಿಯಾಗಿದ್ದಿರಿ. ಅಲ್ಲಿಂದ ಮುಂದಕ್ಕೆ 9/11 ಕ್ಕೆ ಕಾರಣವಾದ ಚಾರಿತ್ರಿಕ ಜಾಗತಿಕ ಘಟನೆಗಳ ಸರಣಿಗೂ ಸಾಕ್ಷಿಯಾಗಿದ್ದಿರಿ. ಕ್ಷಮಿಸಿ, ನಾನು ನಿಮ್ಮಂಥ ಮಹಾನುಭಾವರ ಜೀವನವನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತಿದ್ದೇನೆ.ಅತ್ಯಂತ ಹತ್ತಿರದ ಘಟನೆಯೆಂದರೆ, 2007-2008ರ ಆರ್ಥಿಕ ಬಿಕ್ಕಟ್ಟು. ಇಂಥಹ ಸಮೃಧ್ಧ ಜೀವನದಲ್ಲಿ ಮುಖ್ಯವಾದ ಚಾರಿತ್ರಿಕ ಕಾರ್ಯವಿಧಾನಗಳಿಗೆ ನೀವು ಸಾಕ್ಷಿಯಷ್ಟೇ ಅಲ್ಲ, ಪಾತ್ರಧಾರಿಗಳೂ ಆಗಿರುವಂಥ ಹಿನ್ನೆಲೆಯಲ್ಲಿ, ನೀವು ಈ ಕರೋನ ವೈರಸ್ಸಿನ ಬಿಕ್ಕಟ್ಟನ್ನು ಹೇಗೆ ನೋಡುತ್ತೀರಿ? ಇದು ನ ಭೂತೋ ನ ಭವಿಶ್ಯತಿ ಎನ್ನುವಂಥ ಚಾರಿತ್ರಿಕ ಘಟನೆಯೇ? ನಿಮಗೆ ಇದರಿಂದ ಆಶ್ಚರ್ಯವಾಯಿತೇ? ಇದನ್ನು ನೀವು ಹೇಗೆ ನೋಡುತ್ತೀರಿ?

ನೋಮ್: ನನ್ನ ಪ್ರಥಮ ನೆನಪುಗಳು ಸುಮಾರು 1930ರವು. ಅವು ನನ್ನನೀಗ ಬಹಳ ಕಾಡುತ್ತವೆ. ನೀವು ಉಲ್ಲೇಖಿಸಿದ ಪ್ರಬಂಧ ಬಾರ್ಸೆಲೋನಾದ ಕುಸಿತದ ಮೇಲಷ್ಟೇ ಅಲ್ಲ, ಯೂರೋಪಿನ ತುಂಬೆಲ್ಲಾ ಹರಡಿದ್ದ ಫ್ಯಾಸಿಸಂ ಎಂಬ ಪ್ಲೇಗಿನ ಮೇಲಾಗಿತ್ತು. ನನಗೆ ಆಮೇಲೆ ತಿಳಿದು ಬಂದಂತೆ ಅದಕ್ಕಾಗಲೇ ಕೆಲವು ದಾಖಲೆಗಳಿದ್ದವು. ಅಷ್ಟು ಹೊತ್ತಿಗೆ ಅಮೆರಿಕಾದ ಆಂತರಿಕ ವಿಶ್ಲೇಷಕರಿಗೆ ಆಗಲೇ ಯುಧ್ಧ ಮುಗಿಯುವುದೆಂದು ತಿಳಿದಿತ್ತು. ಅಲ್ಲದೆ ಅವರಿಗೆ ಯುಧ್ಧ ಮುಗಿದ ನಂತರ ಜಗತ್ತು ಎರಡು ಭಾಗಗಳಾಗುವುದೆಂದೂ, ಅಮೆರಿಕದ ಪ್ರಭಾವ ಹೆಚ್ಚಾಗಿರುವ ಒಂದು ಭಾಗ ಮತ್ತು ಜರ್ಮನಿಯ ಪ್ರಭಾವ ಹೆಚ್ಚಾಗಿರುವ ಇನ್ನೊಂದು ಭಾಗ, ಎಂದೂ ತಿಳಿದಿತ್ತು. ನನ್ನ ಬಾಲ್ಯದ ಭಯಗಳು ಸಂಪೂರ್ಣವಾಗಿ ತಪ್ಪಾಗಿಯೇನೂ ಇರಲಿಲ್ಲ. ಆ ನೆನಪುಗಳು ಈಗ ಮತ್ತೆ ಬರುತ್ತವೆ. ನನಗೆ ಹಿಟ್ಲರನ ನವೆಂಬರ್ ರ್ಯಾಲಿಯ ಭಾಷಣಗಳನ್ನು ರೇಡಿಯೋದಲ್ಲಿ ಕೇಳಿದ ನೆನಪಿದೆ. ನನಗೆ ಒಂದು ಪದವೂ ಅರ್ಥವಾಗುತ್ತಿರಲಿಲ್ಲ ಆದರೆ ಅದರ ಹಿಂದಿದ್ದ ಭಾವ ಅರ್ಥವಾಗುತ್ತಿತ್ತು. ಅದರ ಹಿಂದಿದ್ದ ಬೆದರಿಕೆ ಅರ್ಥವಾಗುತ್ತಿತ್ತು. ಈಗ ಡೊನಾಲ್ಡ್ ಟ್ರಂಪನ ರ್ಯಾಲಿಗಳ ಭಾಷಣಗಳನ್ನು ಕೇಳಿದಾಗ ಅದೇ ಮತ್ತೆ ಮರುನುಡಿಯುತ್ತದೆ. ಅವನು ಫ್ಯಾಸಿಸ್ಟ್ ಎಲ್ಲಾ ಏನೂ ಅಲ್ಲ. ಅವನಿಗೆ ಅಷ್ಟಾಗಿ ಯಾವುದೂ ಸ್ಪಷ್ಟವಾದ ಸಿಧ್ದಾಂತಗಳಿಲ್ಲ . ಅವನು ತನ್ನ ಬಗ್ಗೆ ಮಾತ್ರ ಯೋಚಿಸುವ ಸ್ವಕೇಂದ್ರಿತವಾದ ಒಬ್ಬ ಸೋಷಿಯೋಪಾತ್ ವ್ಯಕ್ತಿ ಮಾತ್ರ. ಆದರೆ ಆ ಭಾವ ಮತ್ತು ಬೆದರಿಕೆ ಮಾತ್ರ ಹಿಂದಿನಂತೆಯೇ ಇದೆ. ಒಂದು ದೇಶದ, ಜನರ ಮತ್ತು ಜಗತ್ತಿನ ವಿಧಿಯ ಅಂಕೆ ಒಬ್ಬ ತಲೆಕೆಟ್ಟ ವಿದೂಷಕನ ಬಳಿ ಇರುವುದು ಆತಂಕಕಾರಿ. ಕರೋನ ವೈರಸ್ ಒಂದು ಗಂಭೀರ ಪರಿಸ್ಥಿತಿ. ಆದರೆ ಅದಕ್ಕಿಂತಾ ಹೆಚ್ಚಿನ ಭಯಾನಕ ಸ್ಥಿತಿಯೊಂದು ಬರಲಿದೆ. ನಾವು ನಾಶದ ಅಂಚಿನೆಡೆಗೆ ದೌಡಾಯಿಸುತ್ತಿದ್ದೇವೆ. ಮಾನವ ಚರಿತ್ರೆಯಲ್ಲಿ ಇದುವರೆಗೆ ನಡೆದ ಎಲ್ಲಾದ್ದಕ್ಕಿಂತಲೂ ಇದು ಅತಿ ಕೆಟ್ಟದ್ದು. ಡೊನಾಲ್ಡ್ ಟ್ರಂಪ್ ಮತ್ತವನ ಹಿಂಬಾಲಕರು ಈ ದೌಡಿನ ಮುಂಚೂಣಿಯಲ್ಲಿದ್ದಾರೆ.

ನಾವು ನಿಜವಾಗಿ ಎರಡು ಅಪಾಯಗಳನ್ನು ಎದುರಿಸುತ್ತಿದ್ದೇವೆ. ಒಂದು ಬೆಳೆಯುತ್ತಿರುವ ಅಣುಬಾಂಬು ಯುಧ್ಧದ ಬೆದರಿಕೆ. ಅದು ಶಸ್ತ್ರಾಸ್ತ್ರಗಳನ್ನು ಅಂಕೆಯಲ್ಲಿಡುವ ಪ್ರಯತ್ನಗಳನ್ನು ಚಿಂದಿ ಮಾಡಿ ಅಧಿಕಾರಶಾಹಿ ಆಡಳಿತಗಳಿಂದ ಬೃಹದಾಕಾರವಾಗಿ ಬೆಳೆದಿದೆ. ಎರಡನೆಯದು, ಹೆಚ್ಚುತ್ತಿರುವ ಜಾಗತಿಕ ಉಷ್ಣತೆಯ ಪಿಡುಗಿನ ಅಪಾಯ. ಎರಡೂ ಅಪಾಯಗಳನ್ನು ಎದುರಿಸಬಹುದು, ಆದರೆ ನಮಗೆ ಹೆಚ್ಚು ಸಮಯವಿಲ್ಲ. ಕರೋನ ವೈರಸ್ ಇನ್ನೊಂದು ಮಹಾ ಪಿಡುಗು ಮತ್ತು ಅದರ ದುಷ್ಪರಿಣಾಮ ಬಹಳ ಅಪಾಯಕಾರಿ. ಆದರೆ ಇದರಿಂದ ಚೇತರಿಸಿಕೊಳ್ಳುತ್ತೇವೆ. ಮತ್ತಿನ್ನೆರಡು ಅಪಾಯಗಳಿಂದ ಚೇತರಿಸಿಕೊಳ್ಳಲಾಗುವುದಿಲ್ಲ. ಅವು ನಮ್ಮನ್ನು ಸಮಾಪ್ತಿಗೊಳಿಸುತ್ತವೆ. ಅವನ್ನು ನಾವು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ, ನಮ್ಮ ಅಂತ್ಯ ನಿಶ್ಚಿತ. ಆದ್ದರಿಂದ ನನ್ನ ಬಾಲ್ಯದ ನೆನಪುಗಳು ನನ್ನನ್ನು ಕಾಡಲಾರಂಭಿಸಿವೆ.

ಅಣುಬಾಂಬಿನ ಯುಧ್ಧದ ಅಪಾಯ ; ಪ್ರಪಂಚ ಎಲ್ಲಿದೆ ಎಂದೊಮ್ಮೆ ಗಮನಿಸಿದರೆ, ಈ ಜನವರಿಯಲ್ಲಿ…ಅಂದರೆ ನಿಮಗೆ ಗೊತ್ತಿದ್ದಂತೆ, ಪ್ರತಿವರ್ಷ “ಡೂಮ್ಸ್ ಡೇ ಕ್ಲಾಕ್” ( ಜಗತ್ಪ್ರಳಯದ ಗಡಿಯಾರ) ಇದರ ನಿಮಿಷದ ಮುಳ್ಳನ್ನು ಸರಿಪಡಿಸಿ, ಮಧ್ಯರಾತ್ರಿಯ ಸಮಯಕ್ಕೆ ನಿರ್ಧಾರಿತ ದೂರದಲ್ಲಿ ಇಡುತ್ತಾರೆ. ಮಧ್ಯರಾತ್ರಿ ಜಗತ್ಪ್ರಳಯದ ಸಮಯವನ್ನು ಸಾಂಕೇತಿಕವಾಗಿ ಪ್ರತಿಪಾದಿಸುತ್ತದೆ. ಟ್ರಂಪ್ ಚುನಾಯಿತನಾದಂದಿನಿಂದ ಆ ನಿಮಿಷದ ಮುಳ್ಳು ಬೇಗ ಬೇಗ ಮಧ್ಯರಾತ್ರಿಯೆಡೆಗೆ ಚಲಿಸುತ್ತಿದೆ. ಕಳೆದ ವರ್ಷ ಅದು ಮಧ್ಯರಾತ್ರಿಯಿಂದ 2 ನಿಮಿಷವಷ್ಟೇ ದೂರವಿತ್ತು. ಅದು ಹಿಂದೆಲ್ಲಾ ವರ್ಷಗಳಿಗಿಂದ ಜಗತ್ಪ್ರಳಯಕ್ಕೆ ಸಮೀಪದಲ್ಲಿತ್ತು. ಈ ವರ್ಷ ನಿಮಿಷದ ಮುಳ್ಳನ್ನು ತೆಗೆದುಹಾಕಲಾಗಿದೆ. ಈಗ ಅದು ಇನ್ನೂ ವೇಗವಾಗಿ ಸೆಕೆಂಡುಗಳ ಲೆಖ್ಖದಲ್ಲಿ ಪ್ರಳಯದತ್ತ ಸಾಂಕೇತಿಕವಾಗಿ ಚಲಿಸುತ್ತಿದೆ. ಈಗ ಅದು ಮಧ್ಯರಾತ್ರಿಗೆ 100 ಸೆಕೆಂಡುಗಳಷ್ಟು ದೂರದಲ್ಲಿದೆ. ಇಷ್ಟು ಹತ್ತಿರದಲ್ಲಿ ಅದು ಯಾವಾಗಲೂ ಇರಲಿಲ್ಲ. ಮೂರು ಅಂಶಗಳು ಇಲ್ಲಿ ಉಲ್ಲೇಖಾರ್ಹ. ಅಣುಬಾಂಬಿನ ಯುದ್ಧದ ಅಪಾಯ, ಜಾಗತಿಕ ಉಷ್ಣತೆಯ ಅಪಾಯ ಮತ್ತು ಪ್ರಜಾಪ್ರಭುತ್ವದ ಕ್ಷೀಣಿಸುವಿಕೆ. ಇದು ಎಲ್ಲಕ್ಕಿಂತ ಅಪಾಯಕಾರಿ ಏಕೆಂದರೆ ನಾವು ನಂಬಿರುವಂತೆ ಇನ್ನೆಲ್ಲಾ ಬಿಕ್ಕಟ್ಟುಗಳನ್ನೂ ಎದುರಿಸಿ ನಿವಾರಿಸಲು ನಮಗಿರುವುದು ಪ್ರಜಾಪ್ರಭುತ್ವವೊಂದೇ. ಸ್ಪಷ್ಟವಾದ ಮಾಹಿತಿಯನ್ನು ಪಡೆದುಕೊಂಡ ಮತ್ತು ವಿಷಯಗಳನ್ನು ಅರಿತುಕೊಂಡ, ತೊಡಗಿಸಿಕೊಂಡ ಜನತೆ ತಮ್ಮ ಭವಿಷ್ಯವನ್ನು ತಾವೇ ಸ್ವತಃ ತಮ್ಮ ಹತೋಟಿಗೆ ತೆಗೆದುಕೊಳ್ಳುವುದು. ಚಿಂತನಶೀಲರಾಗಿ ವರ್ತಿಸುವುದು. ಅದು ನಡೆಯದಿದ್ದರೆ, ನಮ್ಮ ಅಂತ್ಯ ನಿಶ್ಚಿತ. ಈ ಸಮಾಜಘಾತುಕೀ ಜೋಕರುಗಳ ಕೈಯಲ್ಲಿ ಅಧಿಕಾರವಿದ್ದರೆ ನಾವು ಸತ್ತಂತೇ. ಆ ಅಂತ್ಯ ಹತ್ತಿರ ಬರುತ್ತಿದೆ. ಟ್ರಂಪ್ ಎಲ್ಲರಿಗಿಂತ ಅಪಾಯಕಾರಿ ಏಕೆಂದರೆ ಅಮೆರಿಕಕ್ಕೆ ಪ್ರಾಬಲ್ಯವಿದೆ. ನಾವು ಅಮೆರಿಕದ ಪತನವನ್ನು ಗುರುತಿಸಿ ಮಾತನಾಡುತ್ತಿದ್ದೇವೆ. ಅಮೆರಿಕವು ಕೊಲೆಪಾತುಕವಾದ ಮತ್ತು ವಿನಾಶಕಾರಿಯಾದ ನಿರ್ಬಂಧಗಳನ್ನು ಇತರರ ಮೇಲೆ ಹೇರುತ್ತದೆ. ಅದೊಂದೇ ರಾಷ್ಟ್ರ ಹಾಗೆ ಮಾಡಲು ಸಾಧ್ಯ. ಇರಾನ್ ಮತ್ತು ಅಫ್ಗಾನಿಸ್ಥಾನದ ಮೇಲೆ ಹೇರಿದ ನಿರ್ಬಂಧಗಳನ್ನು ಯೂರೋಪು ದ್ವೇಷಿಸಬಹುದು. ಆದರೆ ಅವುಗಳನ್ನು ಅನುಸರಿಸದೇ ಯೂರೋಪಿದೆ ಬೇರೆ ಗತಿಯಿಲ್ಲ. ಏಕೆಂದರೆ ಅಮೆರಿಕ ಎಲ್ಲಾದರ ಮೇಲೆ ದರ್ಪ ತೋರುವ ಪ್ರಬಲ ದೇಶ, ಇದು ಪ್ರಾಕೃತಿಕ ನಿಯಮವಲ್ಲ. ಅದು ಅಂತರಾಷ್ಟ್ರೀಯ ಒಪ್ಪಂದಗಳು. ಯೂರೋಪು ತಾನು ತೆಗೆದುಕೊಂಡ ನಿರ್ಧಾರದ ಶಿಸ್ತಿಗೆ ಬಧ್ಧ. ಆದರೆ ಯೂರೋಪು ವಾಶಿಂಗ್ಟನ್ನಿನಲ್ಲಿರುವ ಯಜಮಾನನಿಗೆ ತಲೆಬಾಗಲೇ ಬೇಕು, ಇತರ ದೇಶಗಳಿಗೆ ಬೇರಾವ ಆಯ್ಕೆಯೂ ಇಲ್ಲ. ಕರೋನ ವೈರಸ್ಸಿಗೆ ಹಿಂದಿರುಗೋಣ. ಇದರ ವಿಷಯದಲ್ಲಿ ಅತ್ಯಂತ ಕಠಿಣವಾದ ಮತ್ತು ಮನಸ್ಸಿಗೆ ದುಃಖವುಂಟುಮಾಡುವ ವಿಚಾರ ಎಂದರೆ, ಇಂಥ ಸಂದರ್ಭಗಳಲ್ಲೂ ಅಮೇರಿಕಾದ ನಿರ್ಬಂಧಗಳ ಪ್ರಯೋಗ. ಇರಾನಿನ ಮೇಲಿನ ನಿರ್ಬಂಧಗಳು ವೈರಸ್ಸಿನ ನೋವು ಯಾತನೆಗಳನ್ನು ಅತ್ಯಂತ ಹೆಚ್ಚಿಸುತ್ತವೆ. ಅದನ್ನು ತಿಳಿದೇ ನಿರ್ಬಂಧಗಳನ್ನು ಹೇರಲಾಗಿದೆ. ಇರಾನ್ ತನ್ನದೇ ಆದ ಅತಿದೊಡ್ಡ ಆಂತರಿಕ ಸಮಸ್ಯೆಗಳನ್ನೊಳಗೊಂಡಿದೆ. ಆದರೆ ಈ ನಿರ್ಬಂಧಗಳನ್ನು ಇರಾನ್ ಗೆ ಅದು ಸಮಸ್ಯ್ ಉಂಟುಮಾಡುತ್ತದೆ ಎಂಬ ಅರಿವಿದ್ದೇ, ಅಲ್ಲಿನ ಜನಗಳ ನೋವನ್ನು ಹೆಚ್ಚಿಸುವುದಕ್ಕೆಂಬ ಉದ್ದೇಶದಿಂದಲೇ ಆ ದೇಶದ ಕತ್ತು ಹಿಸುಕಲೆಂದೇ ಹೇರಲಾಗಿದೆ. ಯಾವ ಮುಚ್ಚುಮರೆಯಿಲ್ಲದೇ ಈ ನಿರ್ಬಂಧಗಳನ್ನು ಇರಾನಿನ ಜನತೆ ಯಾತನೆಗೊಳಪಡಲೆಂದೇ ರಚಿಸಲಾಗಿದೆ. ಇದರಿಂದ ಅವರು ಅನುಭವಿಸುವ ಯಾತನೆ ಅತ್ಯಂತ ಕಹಿಯಾದದ್ದು.

ಮಾನವರು ಒಬ್ಬರನ್ನೊಬ್ಬರು ಅವಲಂಬಿಸಿರುತ್ತಾರೆ. ಮಾನವರು ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದಾರೆ,. ಆದರೆ ಅವರ ಕಷ್ಟ ಸಹಿಷ್ಣುತೆ ಬೆರಗುಗೊಳಿಸುತ್ತದೆ. ಅವರು ಅತ್ಯಂತ ಕಡು ಕಾರ್ಪಣ್ಯಗಳ ನಡುವೆಯೂ ಬದುಕುಳಿದಿದ್ದಾರೆ. ಈ ಕರೋನ ವೈರಸ್ಸಿನ ಅತಿ ದೊಡ್ಡ ವ್ಯಂಗವೆಂದರೆ ಕ್ಯೂಬಾ ಯೂರೋಪಿಗೆ ಸಹಾಯ ಮಾಡುತ್ತಿದೆ. ಇದೊಂದು ಬೆರಗು. ಇದನ್ನು ಹೇಗೆ ವಿವರಿಸಬೇಕೋ ತಿಳಿಯುತ್ತಿಲ್ಲ. ಜರ್ಮನಿ ಗ್ರೀಸಿಗೆ ಸಹಾಯ ಮಾಡಲಾಗುತ್ತಿಲ್ಲ ಆದರೆ ಕ್ಯೂಬ ಯೂರೋಪಿನ ದೇಶಗಳಿಗೆ ಸಹಾಯ ಮಾಡುತ್ತಿದೆ.

ಸ್ವಲ್ಪ ನಿಧಾನಿಸಿ ಇದರ ಬಗ್ಗೆ ಯೋಚಿಸಿದರೆ, ಇಂಥ ಪರಿಸ್ಥಿತಿ ನಮ್ಮ ನಾಗರಿಕತೆಗೆ ಏನೆಂದು ಅರ್ಥ ನೀಡುತ್ತದೆ ಎಂದು ಚಿಂತಿಸಿದರೆ, ಪದಗಳು ಸೋಲುತ್ತವೆ. ಈ ದಿನಗಳಲ್ಲಿ ತಮ್ಮ ತಮ್ಮ ದೇಶಗಳಿಂದ ಓಡಿ ಬರುತ್ತಿರುವ ಸಾವಿರಾರು ನಿರಾಶ್ರಿತರನ್ನು ಮೆಡಿಟೆರೇನಿಯನ್ನಿನಲ್ಲಿ ಸಾವಿಗೆ ತಳ್ಳುತ್ತಿರುವಂಥಹ ಸಮಯದಲ್ಲಿ ನಮ್ಮ ನಾಗರಿಕ ಸಮಾಜದ ಬಗೆಗೆ ಏನೆಂದು ಹೇಳುವುದೆಂದು ತಿಳಿಯುವುದಿಲ್ಲ. ಇದು ವಿನಾಶಕಾರಿ ಸಂದರ್ಭ. ಪಾಶ್ಚಾತ್ಯ ದೇಶಗಳ ನಾಗರಿಕತೆಯ ಬಿಕ್ಕಟ್ಟು ಈ ಸಮಯದಲ್ಲಿ ಯೋಚಿಸಿದರೆ ಹತಾಶೆ ತರುವಂಥದು. ಅದು ನನ್ನ ಬಾಲ್ಯದಲ್ಲಿ ಕೇಳಿದ ರೇಡಿಯೋದಲ್ಲಿ ಹಿಟ್ಲರನ ರ್ಯಾಲಿಗಳ ಭಾಷಣದ ನೆನಪನ್ನೇ ಮತ್ತೆ ತರುತ್ತದೆ. ಅದರ ಹಿಂದಿನ ಜನಸ್ಥೋಮದ ಕೂಗು ಆಲಿಸಿದರೆ, ಮಾನವ ಜಾತಿಯು ವಿಕಾಸ ಹೊಂದಿದೆದೆಯಾ ಎಂದೆನ್ನಿಸುತ್ತದೆ.

ನೀವು ಪ್ರಜಾಪ್ರಭುತ್ವದ ಬಿಕ್ಕಟ್ಟಿನ ಬಗ್ಗೆ ಹೇಳಿದಿರಿ. ಈ ಸಮಯದಲ್ಲಿ ನಾವು ಚಾರಿತ್ರಿಕವಾಗಿ ಹಿಂದೆಂದೂ ಕಂಡಿರದ ಸಂದರ್ಭದಲ್ಲಿದ್ದೇವೆ. ಅಂದರೆ, ನಾನು ಈ ದಿನ ಓದಿದಂತೆ ಸುಮಾರು 2 ಬಿಲಿಯನ್ ಜನರು ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಅದು ಸ್ವ-ಏಕಾಂಗಿತನದಿಂದಾಗಿರಬಹುದು, ಅಥವಾ ರೋಗಕಾರಣಕ್ಕಾಗಿ ಬೇರ್ಪಡಿಸಲ್ಪಟ್ಟವರಾಗಿರಬಹುದು. 2 ಬಿಲಿಯನ್ ಜನರು ತಮ್ಮ ತಮ್ಮ ಮನೆಗಳಲ್ಲಿದ್ದಾರೆ. ಅಂದರೆ ತಮಗೆ ಮನೆ ಇರುವ ಅದೃಷ್ಟವಿರುವವರು. ಇದೇ ಸಮಯದಲ್ಲಿ ಯೂರೋಪು ಮತ್ತಿತರ ದೇಶಗಳು ತನ್ನ ಗಡಿಯನ್ನು ಮುಚ್ಚಿದೆ. ತನ್ನ ಒಳಗಡಿಗಳನ್ನಷ್ಟೇ ಅಲ್ಲ, ಹೊರಗಡಿಗಳನ್ನೂ ಮುಚ್ಚಿದೆ. ಫ್ರಾನ್ಸ್, ಸರ್ಬಿಯ, ಸ್ಪೈನ್ ಮತ್ತು ಇಟಲಿ ದೇಶಗಳಲ್ಲಿ ಕರ್ಫ್ಯೂ ಇದೆ. ಕೆಲವು ದೇಶಗಳಲ್ಲಿ ರಸ್ತೆಗಳಲ್ಲಿ ಸೈನ್ಯವಿದೆ. ನಾನು ನಿಮ್ಮನ್ನು ಕೇಳಲು ಇಚ್ಚಿಸುವುದೇನೆಂದರೆ. ನೀವು ಭಾಷಾತಜ್ಞರಾಗಿ ಈಗ ನೀವು ಕೇಳುತ್ತಿರುವ ಭಾಷೆ, ಅದರಲ್ಲೂ ಮಕ್ರೋನಿನಂಥ ಕೆಲವು ರಾಜಕಾರಣಿಗಳು ಯುಧ್ಧದ ಬಗ್ಗೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳು ಕೂಡ ವೈದ್ಯರುಗಳನ್ನು ” ಮುಂದಿನ ಸಾಲಿನ” ಯೋಧರಂತೆ ಪರಿಗಣಿಸುತ್ತವೆ. ವೈರಸ್ಸನ್ನು ಶತ್ರುವೆಂದು ಕರೆಯುತ್ತಾರೆ. ನನಗೆ ಅದರಿಂದ ನೆನಪಾಯಿತು, ಸದ್ಯ ನನ್ನ ಬಾಲ್ಯದ ನೆನಪಲ್ಲ, ಆದರೆ ಅದು ಆ ಕಾಲದಲ್ಲಿ ಬರೆದ ಒಂದು ಪುಸ್ತಕ. ಅದರ ಹೆಸರು “ದ ಲಾಂಗುವೇಜ್ ಆಫ್ ದ ಥರ್ಡ್ ರೈಚ್”. ಅಂದರೆ ಭಾಷೆಯ ಮೂಲಕ ಹೇಗೆ ಸಿದ್ಧಾಂತವನ್ನು ಹೇರಲಾಯಿತು ಎಂದು. ನಿಮ್ಮ ದೃಷ್ಟಿಕೋನದಲ್ಲಿ ಈ ಭಾಷೆ ಏನು ಹೇಳುತ್ತದೆ? ವೈರಸ್ಸನ್ನು ಏಕೆ ಶತ್ರುವೆಂದು ಕರೆದಿದ್ದಾರೆ. ಇದು ಹೊಸ ಪರವಾನಗಿ ಕೊಡುವ ಸ್ಥಿತಿಯ ಸಮರ್ಥನೆಗಾಗಿಯೇ? ಅಥವಾ ಇದು ಈ ಸಂಭಾಷಣೆಗಳಲ್ಲಿ ಎನನ್ನಾದರೂ ಹೆಚ್ಚು ಆಳವಾದುದನ್ನು ಸೂಚಿಸುತ್ತದೆಯೋ?

ನೋಮ್: ಈ ರೀತಿಯ ನುಡಿಗಳು ಮತ್ತು ಅದರ ಅರ್ಥ ಅತಿ ಮುಖ್ಯವಾದವು ಎಂದರೆ ಅತಿಶಯವೇನಲ್ಲ. ಈ ಬಿಕ್ಕಟ್ಟನ್ನು ನಿವಾರಿಸಬೇಕಿದ್ದರೆ ಅದಕ್ಕೆ ಯುಧ್ಧಕಾಲದ ಸ್ಥಿತಿ ಬೇಕು. ಒಂದು ರೆಜಿಮೆಂಟಿನಂಥ ಅಮೆರಿಕಕ್ಕೆ ಈ ಸಧ್ಯದ ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸಿಕೊಳ್ಳಲು ಬೇಕಾದಷ್ಟು ಸಂಪನ್ಮೂಲಗಳಿವೆ. ಎರಡನೇ ಮಹಾಯುಧ್ಧದ ನಂತರದ ಸಜ್ಜುಗೊಳಿಸುವಿಕೆ [ಮೊಬಿಲೈಸೇಶನ್] ಅಸಮಾನ್ಯ ಮಟ್ಟದ ಸಾಲವನ್ನು ತಂದೊಡ್ಡಿತು. ಅದನ್ನು ಈ ದೇಶ ನಿರೀಕ್ಷಿಸಿರಲಿಲ್ಲ. ಅದರಿಂದ ಅದು ತನ್ನ ಆರ್ಥಿಕ ಮಹಾಪತನದ ಸಮಯದಲ್ಲಿ ತಾನು ತಯಾರು ಮಾಡುವ ಸರಕುಗಳನ್ನು ನಾಲ್ಕರಷ್ಟು ಹೆಚ್ಚಿಸಿತು. ಈ ಸದ್ಯದಲ್ಲಿ ನಾವು ನೋಡುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ನಮಗೆ ಅದೇ ರೀತಿಯ ಸಜ್ಜುಗೊಳಿಸುವಿಕೆಯ ಅವಶ್ಯಕತೆಯಿದೆ, ಅದು ಯುದ್ಧಕಾಲದ ಮಟ್ಟಕ್ಕೆ ಇಲ್ಲದಿದ್ದರೂ ಅದರ ಅವಶ್ಯಕತೆಯಂತೂ ಇದ್ದೇ ಇದೆ. 2009 ರಲ್ಲಿ ಅಮೆರಿಕದಲ್ಲಿ ಪ್ರಾರಂಭವಾದ ಸ್ವೈನ್ ಫ್ಲ್ಯೂ ಕೂಡಾ ಈ ಬಿಕ್ಕಟ್ಟನ್ನು ತಂದೊಡ್ಡಿತ್ತು, ಅದನ್ನೂ ನಿವಾರಿಸಬೇಕಾಯಿತು. ಆದರೆ ಅದು ಅಮೆರಿಕ. ಈಗ ಮನೆಯೊಳಗೆ ಕುಳಿತಿರುವ ಈ 2 ಬಿಲಿಯನ್ ಜನರಲ್ಲಿ ಹೆಚ್ಚಿನವರು ಭಾರತದಲ್ಲಿದ್ದಾರೆ. ಭಾರತದಲ್ಲಿ ಏನಾಗುತ್ತದೆ? ಕೈಗೂ ಬಾಯಿಗೂ ಸಾಕಾಗುವಷ್ಟು ಮಾತ್ರ ಗಳಿಸುವ ಜನ ಮನೆಯೊಳಗೆ ಏಕಾಂಗಿತನದಲ್ಲಿ ಹೊಟ್ಟೆಗಿಲ್ಲದೆ ಸಾಯುತ್ತಾರೆ. ನಾಗರಿಕ ಜಗತ್ತಿನಲ್ಲಿ ಸಂಪಧ್ಬರಿತ ರಾಷ್ಟ್ರಗಳಿಂದ ಬೇರೆ ಜನರಿಗೆ ಸಹಾಯ ದೊರೆಯಬೇಕು. ಭಾರತದಂತೆ ಜಗತ್ತಿನ ಬಹಳ ಕಡೆಗಳಲ್ಲಿ ಜನರ ಕತ್ತು ಹಿಸುಕುವುದಕ್ಕಿಂತ ಹೆಚ್ಚಾಗಿ ಅವರಿಗೆ ಸಹಾಯದ ಅವಶ್ಯಕತೆಯಿದೆ. ನನಗೆ ತಿಳಿಯದು, ಈ ಬಿಕ್ಕಟ್ಟು ನಡೆದರೆ ಭಾರತದಲ್ಲಿ ಏನಾಗುತ್ತದೋ? ಈ ಸಂದಿಗ್ಧ ಪರಿಸ್ಥಿತಿ ಮುಂದುವರೆದರೆ, ಇನ್ನು ಹತ್ತಾರು ವರ್ಷಗಳಲ್ಲಿ ದಕ್ಷಿಣ ಪೂರ್ವ ಏಶಿಯಾ ಜನರ ವಾಸಕ್ಕೆ ಅಯೋಗ್ಯವಾಗಬಹುದು. ಬೇಸಿಗೆಯಲ್ಲಿ 55 ಡಿಗ್ರಿ ಇರುವ ರಾಜಾಸ್ಥಾನದಲ್ಲಿಯಂತೆ ಹೆಚ್ಚು ಹೆಚ್ಚು ಉಷ್ಣತೆ ಏರುತ್ತಾ ಹೋಗುತ್ತದೆ. ಆ ಪ್ರದೇಶದ ಅಣುಶಕ್ತಿ ರಾಷ್ಟ್ರಗಳು ಹೊಡೆದಾಡಬಹುದು.

ಈಗಿನ ಕರೋನಾ ವೈರಸ್ ಒಂದು ಅತಿ ಗಂಭೀರ ಸ್ಥಿತಿ. ಇದನ್ನು ನಾವು ಕಡೆಗಣಿಸಲಾಗುವುದಿಲ್ಲ. ಸಣ್ಣ ಸಣ್ಣ ಬಿಕ್ಕಟ್ಟುಗಳು ಈಗ ಕರೋನಾ ವೈರಸ್ ಮಾಡಿರುವಷ್ಟು ಅಲ್ಲೋಲಕಲ್ಲೋಲ ಮಾಡದಿರಬಹುದು. ಆದರೆ ಇವೆಲ್ಲಾ ಸೇರಿ ಈ ಪ್ರದೇಶವನ್ನು ಜೀವಿಸಲು ಅಯೋಗ್ಯವಾಗಿ ಮಾರ್ಪಾಡಾಗಿಸಬಹುದು. ಹೀಗಾಗಿ ನಮಗೆ ಸಂಭಾಳಿಸಲು ಅನೇಕ ಸಮಸ್ಯೆಗಳಿವೆ. ಸದ್ಯಕ್ಕೆ ಎದುರಿಗಿರುವ ಅತ್ಯಂತ ಗಂಭೀರವಾದ ಕರೋನಾ ವೈರಸ್ಸಿನಂತೆ ಮುಂಬರುವ ಇನ್ನೂ ಹೆಚ್ಚು ಗಂಭೀರವಾದ ಸಮಸ್ಯೆಗಳಿವೆ. ನಾಗರೀಕತೆಯ ಬಿಕ್ಕಟ್ಟು ಅವುಗಳಲ್ಲಿ ಒಂದು. ಈ ಕರೋನಾ ವೈರಸ್ಸಿನ ಕಠಿಣ ಪರಿಸ್ಥಿತಿ ಜನರಿಗೆ ಆ ಬಗ್ಗೆ ಮುಂದೇನು ಮಾಡಬೇಕು ಎಂದು ಕರೋನಾ ವೈರಸ್ಸಿನಿಂದ ಹೊರಗೆ ಚಿಂತಿಸಲು ಹಚ್ಚಿಕೊಡಬಹುದು. ನಮಗೆ ಈ ಪರಿಸ್ಥಿತಿಗೆ ನಮ್ಮನ್ನು ಮತ್ತೆ ತಂದಿಡುವಂಥಾ ಜಗತ್ತು ಬೇಕಾ? ಈ ಬಿಕ್ಕಟ್ಟು ಹೇಗೆ ತಲೆದೋರಿತು ಎಂಬುದರ ಬಗ್ಗೆ ನಾವು ಯೋಚಿಸಬೇಕು. ಈ ಕರೋನಾ ವೈರಸ್ ಬಿಕ್ಕಟ್ಟು ಏಕಿದೆ?

ಇದು ಮಾರ್ಕೆಟ್ಟುಗಳ ಬೃಹತ್ತಾದ ಸೋಲು. ಉಗ್ರ ನಿಯೊ-ಲಿಬೆರಲ್ (ನವ-ಉದಾರವಾದೀ) ವಾದದ ತಿರುಳಿನ ಫಲವಾಗಿ ಆದ ಸಾಮಾಜಿಕ ಆರ್ಥಿಕ ಸಮಸ್ಯೆಗಳ ತೀವ್ರತೆ ಮಾರ್ಕೆಟ್ಟುಗಳನ್ನು ತುಂಬಿವೆ. ಈ ರೀತಿಯ ಸರ್ವವ್ಯಾಪೀ ಸೋಂಕು ರೋಗಗಳ ಸಾಧ್ಯತೆಯ ಬಗ್ಗೆ ಬಹಳ ಕಾಲದಿಂದಲೂ ನಮಗೆ ಅರಿವಿತ್ತು. ಹಾಗೂ ಅದು ಕರೋನಾ ವೈರಸ್ಸೇ ಆಗಬಹುದೆಂಬ ಅಂದಾಜಿನ ತಿಳುವಳಿಕೆಯೂ ಹೆಚ್ಚಿನ ಮಟ್ಟದಲ್ಲಿ ಈಗಾಗಲೇ ಇತ್ತು. ಇದು ಹತ್ತು ವರ್ಷಗಳ ಹಿಂದೆ ಬಂದಿದ್ದ ಸಾರ್ಸ್ ಸೋಂಕು ಪಿಡುಗಿನ ಒಂದು ಸಣ್ಣ ರೂಪಾಂತರವಷ್ಟೇ. ಆ ಪಿಡುಗನ್ನು ನಾವು ನಿವಾರಿಸಿಕೊಂಡೆವು. ಅದರ ಶ್ರೇಣಿಯನ್ನು ಗುರುತಿಸಿದೆವು. ಲಸಿಕೆಗಳು ಲಭ್ಯವಿದ್ದವು. ಆಗಲೇ ಜಗತ್ತಿನಾದ್ಯಂತದ ಪ್ರಯೋಗಶಾಲೆಗಳಲ್ಲಿ ಮುಂದೆ ಬರಬಹುದಾದ ಸರ್ವವ್ಯಾಪಿ ಸೋಂಕಾದ ಕರೋನಾ ವೈರಸ್ಸಿನ ನಿಯಂತ್ರಣಕ್ಕಾಗಿ ಪ್ರಯೋಗಗಳನ್ನು ಮಾಡುವ ಸಾಧ್ಯತೆಯಿತ್ತು. ಹಾಗಾದರೆ ಅದನ್ನು ಯಾಕೆ ಮಾಡಲಿಲ್ಲ? ಮಾರ್ಕೆಟ್ಟುಗಳಿಂದ ಬಂದ ಸೂಚನೆಗಳು ತಪ್ಪಾಗಿದ್ದವು. ಔಷಧಿ ವ್ಯಾಪಾರ ಸಂಸ್ಥೆಗಳನ್ನು ಕೈಗೆ ನಾವು ನಮ್ಮ ಭವಿಷ್ಯವನ್ನು, ಮತ್ತು ವ್ಯಾಪಾರೀ ಸಂಸ್ಥೆಗಳು ಎಂದು ಕರೆಯಲ್ಪಡುವ (ಕಾರ್ಪೊರೇಟ್ಸ್) ಖಾಸಗಿ ದಬ್ಬಾಳಿಕೆಗಳ ವಶಕ್ಕೆ ನಮ್ಮನ್ನೂ ವಹಿಸಿಬಿಟ್ಟಿದ್ದೇವೆ. ಆ ಸಂಸ್ಥೆಗಳು ಜನತೆಗೆ ಕಾರ್ಯಗಳ ಲೆಕ್ಕ ಒಪ್ಪಿಸಬೇಕಾಗಿಲ್ಲದ ಬೇಜವಾಬ್ಧಾರಿಯ ಅಧಿಕಾರ ಹೊಂದಿವೆ. ಅವರಿಗೆ ತಾವು ಮಾನವರ ಚರ್ಮಕ್ಕೆ ಕ್ರೀಮುಗಳನ್ನು ಮಾಡುವುದು , ಲಸಿಕೆಗಳನ್ನು ತಯಾರುಮಾಡುವುದಕ್ಕಿಂತ ಹೆಚ್ಚು ಲಾಭಕಾರಿ. ಸರಕಾರಗಳಿಗೆ ಅದನ್ನು ನಿಯಂತ್ರಿಸುವುದು ಸಾಧ್ಯವಿತ್ತು. ಯುಧ್ಧಕಾಲದಲ್ಲಿ ಸರಕಾರಗಳು ಸಜ್ಜುಗೊಳಿಸಿ ಚಲಾಯಿಸಿದಂತೆ, ಅಂದರೆ, ನನಗೆ ಪೋಲಿಯೋ ವಿಷಯ ನೆನಪಿದೆ. ಅದು ಭಯಂಕರ ಅಪಾಯವಾಗಿತ್ತು. ಸರಕಾರೀ ಸಂಸ್ಥೆಗಳ ಕಾರ್ಯದಿಂದ ಅದು ಕೊನೆಗೊಂಡಿತು.

ಆದರೆ ಅದನ್ನು ಲಸಿಕೆ ಕಂಡುಹಿಡಿಯುವುದರ ಮೂಲಕ ನಿಯಂತ್ರಿಸಲಾಯಿತು. ಅದು ಸರಕಾರಗಳು ಒಳ್ಳೆಯ ಆಡಳಿತದ ಮೂಲಕ ಪ್ರೋತ್ಸಾಹಿಸಿದುದರಿಂದ ಅದು ಸಾಧ್ಯವಾಯಿತು. ಆ ಲಸಿಕೆಗೆ ಯಾವುದೇ ಪೇಟೆಂಟ್ ( ವ್ಯಾಪಾರೀ ಹಕ್ಕು) ಇಲ್ಲ. ಅದು ಎಲ್ಲರಿಗಾಗಿ, ಯಾರು ಬೇಕಾದರೂ ಬಳಸಿಕೊಳ್ಳಬಹುದು. ಆ ರೀತಿ ಈಗಲೂ ಮಾಡಬಹುದಿತ್ತು. ಆದರೆ ನವ-ಉದಾರವಾದದ ಪ್ಲೇಗು ಅದನ್ನು ತಡೆಗಟ್ಟಿದೆ. ನಾವು ಬದುಕುತ್ತಿರುವ ಜಗತ್ತಿನ ಬಗ್ಗೆ ಆರ್ಥಿಕ ತಜ್ಞರ ಜವಾಬ್ದಾರಿ ಬಹಳವಿದೆ. ಆ ಆರ್ಥಿಕ ತಜ್ಞರ ಸಿಧ್ದಾಂತಗಳು ವ್ಯಾಪಾರೀ ಸಂಸ್ಥೆಗಳ ವಲಯದಿಂದ ಬಂದಿದೆ. ಇದರ ಸರಿಯಾದ ರೂಪವನ್ನು ರೊನಾಲ್ಡ್ ರೀಗನ್ ತನ್ನ ಅರಳಿದ ಸೂರ್ಯಕಾಂತಿಯಂಥ ನಗೆಯೊಂದಿಗೆ ತನ್ನ ಮಾಲೀಕರಾದ ವ್ಯಾಪಾರೀ ಸಂಸ್ಥೆಗಳು ಬರೆದು ಕೊಟ್ಟ ಪಠ್ಯವನ್ನು ಓದಿದ ದೃಶ್ಯದಲ್ಲಿ ಕಾಣಬಹುದು. ಅದರಂತೆ, ” ಸರಕಾರಗಳು ಒಂದು ಸಮಸ್ಯೆ. ಅದರಿಂದ ಸರಕಾರಗಳನ್ನು ಬದಿಗೊತ್ತಿ ಬಿಡೋಣ. ನಿಯಂತ್ರಣವನ್ನು ವ್ಯಾಪಾರೀ ಸಂಸ್ಥೆಗಳ ಕೈಯಲ್ಲಿ ಕೊಟ್ಟು ಬಿಡೋಣ. ಜನತೆಯೆಡೆಗೆ ವ್ಯಾಪಾರೀ ಸಂಸ್ಥೆಗಳಿಗೆ ಯಾವ ಜವಾಬ್ದಾರಿಯೂ ಇರುವುದಿಲ್ಲ. ” ಅಟ್ಲಾಂಟಿಕ್‍ನ ಆ ಬದಿಗೆ ಥ್ಯಾಚರ್ ಸಮಾಜವನ್ನೇ ಒಂದು ವ್ಯಕ್ತಿಗಳ ಸಮೂಹವನ್ನಾಗಿ ಮಾಡಿ ಅವರನ್ನು ಮಾರ್ಕೆಟ್ಟುಗಳ ಅಂಕೆಗೆ ಎಸೆದು ಬಿಡುವ ಸಿಧ್ದಾಂತವನ್ನು ರೂಪಿಸಿದಳು. ಬಹಳ ವರ್ಷಗಳಿಂದ ಜಗತ್ತು ಈ ಪ್ರಭಾವಗಳಿಂದ ಯಾತನೆ ಪಡುತ್ತಿದೆ. ಈಗ ನಾವು ಯಾವ ಹಂತ ತಲುಪಿದ್ದೇವೆಂದರೆ ಸರಕಾರಗಳು, ನವ-ಉದಾರವಾದದ ಪ್ಲೇಗಿನಿಂದ ಹೊರ ಬಂದು ನಿರ್ಧಾರಗಳಲ್ಲಿ ನೇರವಾಗಿ ಕೈ ಹಾಕಿ ಲಸಿಕೆಗಳನ್ನು ಕಂಡುಹಿಡಿಯಬೇಕಾಗಿದೆ.

ಅದಕ್ಕಾಗಿ ಬೇಕಾಗುವ ಮಾಹಿತಿ ನಮ್ಮ ಬಳಿ ಇತ್ತು. ಅಕ್ಟೋಬರ್ 2019 ರಲ್ಲೇ, ಈ ಸೋಂಕು ಸ್ಪೋಟದ ಶುರುವಿನಲ್ಲೇ ನಮಗೆ ಚೆನ್ನಾಗಿ ತಿಳಿದಿತ್ತು ಅಂದರೆ ಈ ರೀತಿಯ ಸರ್ವವ್ಯಾಪೀ ಸೋಂಕು ರೋಗವು ಬರುವ ಸಾಧ್ಯತೆಯ ಬಗ್ಗೆ ಅಮೆರಿಕದಲ್ಲಿ ಮತ್ತು ಜಗತ್ತಿನಲ್ಲಿ ವಿಜ್ಞಾನಿಗಳಿಗೆ ಹೆಚ್ಚಾಗಿ ತಿಳುವಳಿಕೆಯಿತ್ತು. ಆದರೆ ಅದಕ್ಕಾಗಿ ಏನೂ ಮಾಡಲಿಲ್ಲ. ಈಗಿರುವ ಈ ಬಿಕ್ಕಟ್ಟು ರಾಜಕಾರಣಿಗಳ…..ಅದಕ್ಕೆ ಏನೆಂದು ಕರೆಯಲಿ….ವಿಶ್ವಾಸಘಾತುಕತನದಿಂದಾಗಿ ಇನ್ನೂ ಹದಗೆಟ್ಟಿತು. ರಾಜಕೀಯ ವ್ಯವಸ್ಥೆಗಳು ತಮಗೆ ಆಗಲೇ ಇದ್ದ ಮಾಹಿತಿಗೆ ಲಕ್ಷ್ಯಗೊಡದೆ ಕಡೆಗಣಿಸಿ ಈ ದುರಂತಕ್ಕೆ ದಾರಿ ಮಾಡಿಕೊಟ್ಟವು. ಡಿಸೆಂಬರ್ 31ಕ್ಕೆ ಚೈನ ಪ್ರಪಂಚದ ಆರೋಗ್ಯ ಸಂಸ್ಥೆಗಳಿಗೆ ನ್ಯುಮೋನಿಯಾ ರೀತಿಯ ಗೊತ್ತಿರದ ರೋಗಲಕ್ಷಣಗಳ ಬಗ್ಗೆ ವರದಿ ಮಾಡಿತು. ಒಂದು ವಾರದ ನಂತರ ಚೈನಾದ ವಿಜ್ಞಾನಿಗಳು ಅದು ಕರೋನಾ ವೈರಸ್ ಎಂದು ಗುರುತುಹಿಡಿದರು.

ಅಷ್ಟಲ್ಲದೆ, ಅದರ ಶ್ರೇಣಿಯನ್ನು ತಯಾರಿಸಿ ಜಗತ್ತಿಗೆ ನೀಡಿದರು. ಜಗತ್ತಿನ ಆರೋಗ್ಯ ಸಂಸ್ಥೆಗಳ ವರದಿಗಳನ್ನು ಓದಿದ ಎಲ್ಲಾ ವೈರಸ್ಸಿನ ತಜ್ಞರುಗಳಿಗೂ ಕರೋನಾ ವೈರಸ್ ಹರಡಿಲಿದೆಯೆಂಬ ಮಾಹಿತಿಯಿತ್ತು. ಅವರ್ಯಾರೂ ಏನೂ ಮಾಡಲಿಲ್ಲ. , ಕೆಲವರು ಅಂದರೆ ಚೈನ, ದಕ್ಷಿಣ ಕೊರಿಯಾ, ತೈವಾನ್, ಸಿಂಗಪುರದಂಥಾ ದೇಶಗಳು ಕ್ರಮಗಳನ್ನು ಕೈಗೊಂಡರು. ಅಲ್ಲೆಲ್ಲಾ ಕನಿಷ್ಟ ಪಕ್ಷ ಮೊದಲ ದಾಳಿ ಕಡಿಮೆಯಾದಂತಿದೆ. ಯೋರೋಪಿನಲ್ಲಿ ಅದು ಭಾಗಶಃ ಆಯಿತು. ಜರ್ಮನಿ, ಆ ಕಾಲಕ್ಕೆ ಸರಿಯಾಗಿ ತನ್ನ ಆಸ್ಪತ್ರೆ ವ್ಯವಸ್ಥೆಗಳನ್ನು ನವ-ಉದಾರವಾದಕ್ಕೆ ಬಿಟ್ಟುಕೊಡುವುದನ್ನು ತಡೆಹಿಡಿದಿತ್ತು. ಅದಕ್ಕೆ ರೋಗವನ್ನು ಗುರುತು ಹಿಡಿಯುವ ತಕ್ಕಮಟ್ಟಿಗಿನ ಸಾಮರ್ಥ್ಯವಿತ್ತು. ಅದು ತನ್ನದೇ ಆದ ಸ್ವಾರ್ಥದ , ಇತರರಿಗೆ ಸಹಾಯ ಮಾಡದ, ರೀತಿಯಲ್ಲಿ ಒಂದು ಮಟ್ಟದಲ್ಲಿ ರೋಗನಿಯಂತ್ರಣ ಮಾಡಿಕೊಂಡಿತು. ಅತಿ ಕೆಟ್ಟದ್ದಾಗಿ ಅನುಭವಿಸಿದವರು, ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕ. ಒಂದು ದಿನ, ಇದು ಬರಿಯ ಸಾಮಾನ್ಯ ಫ್ಲೂ ಎಂದು ಒಂದು ದಿನ ಹೇಳಿ, ಅದರ ಮಾರನೇ ದಿನ ಇದೊಂದು ಮಹಾ ಪಾತಕವೆಂದೂ ತನಗೆ ಯಾವಾಗಲಿಂದಲೋ ಗೊತ್ತಿತ್ತೆಂದೂ ಹೇಳುವ, ಅದರ ಮುಂದಿನ ದಿನ ವ್ಯಾಪಾರದ ಬಗ್ಗೆ ಮಾತನಾಡುವ, ತಾನು ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕೆಂದು ಅದರ ಹಿನ್ನೆಲೆಯಲ್ಲಿ ಮಾತನಾಡುವ ಅಮೆರಿಕದ ಅಧ್ಯಕ್ಷನಂಥವರ ಕೈಯಲ್ಲಿ ಜಗತ್ತಿನ ವಿಚಾರಗಳು ಕುಳಿತಿವೆ. ಅದು ದುರಂತ.

ಇದು ಬೃಹತ್ತಾದ ಮಾರುಕಟ್ಟೆಯ ವಿಫಲತೆಯಿಂದಾಗಿ ಪ್ರಾರಂಭವಾಯಿತು. ಸಾಮಾಜಿಕ ಆರ್ಥಿಕ ಜಗತ್ತಿನಲ್ಲಿರುವ ನವ-ಉದಾರೀವಾದದ ಸಮಸ್ಯೆಗಳಿಂದಾಗಿ ಇದು ಉಲ್ಬಣಗೊಂಡಿತು. ಮತ್ತು ಸಾಂಸ್ಥಿಕ ವ್ಯವಸ್ಥೆಗಳ ಕುಸಿತದಿಂದಾಗಿ ಇದು ಮುಂದುವರೆಯುತ್ತಿದೆ. ಆ ಸಂಸ್ಥೆಗಳು ಕಾರ್ಯನಿರತವಾಗಿದ್ದಿದ್ದರೆ ಇದನ್ನು ತಡೆಯಬಹುದಿತ್ತು. ಈ ವಿಚಾರಗಳನ್ನು ಗಹನವಾಗಿ ಯೋಚಿಸುವ ಅವಶ್ಯಕತೆಯಿದೆ. ಮುಂದೆ ಯಾವ ರೀತಿಯ ಪ್ರಪಂಚದಲ್ಲಿ ನಾವು ಬದುಕಬೇಕು ಎಂಬುದರ ಬಗ್ಗೆ ಆಳವಾಗಿ ಯೋಚಿಸಬೇಕಾಗಿದೆ. ಸಮಸ್ಯೆಗಳನ್ನು ದಾಟಿ ಹೇಗಾದರೂ ಮುಂದೆ ಹೋದರೆ, ನಂತರ ನಮಗೆ ಆಯ್ಕೆಗಳಿವೆ. ಅವು ಈ ಘೋರ ಸರಕಾರಗಳ ಬದಲಿಗೆ ಯಾವ ರೀತಿ ಆಡಳಿತಗಳನ್ನು ಆರಿಸಬೇಕು ಎಂಬುದರಿಂದ ಹಿಡಿದು, ಮಾನವೀಯ ಮೌಲ್ಯಗಳನ್ನು ಆಧರಿಸಿದ, ಖಾಸಗಿ ಲಾಭಗಳಿಗಲ್ಲದೆ ಮಾನವನ ಅವಶ್ಯಕತೆಗಳಿಗೆ ಒತ್ತು ಕೊಡುವ ಸಮಾಜದ ಆಮೂಲಾಗ್ರ ಪುನರ್ರಚನೆಯ ತನಕ ಇರಬೇಕು. ನಾವು ಇದನ್ನು ಮರೆಯುವಹಾಗಿಲ್ಲ, ಅಂದರೆ ಉಗ್ರ ಸರಕಾರಗಳನ್ನು ನವ-ಉದಾರೀವಾದಕ್ಕೆ ಹೋಲಿಸಬಹುದು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ನಿಜ ಹೇಳಬೇಕೆಂದರೆ, ನವ-ಉದಾರವಾದಿಗಳು ಕ್ರೂರ ಸರಕಾರಗಳ ಕ್ರೌರ್ಯವನ್ನು , ಎಲ್ಲಿತನಕ ಅವು ಆರ್ಥಿಕ ಲಾಭದ ಗಳಿಕೆಯನ್ನು ತಡೆಯುವುದಿಲ್ಲವೋ ಅಲ್ಲಿಯವರೆಗೆ ಬೆಂಬಲಿಸುತ್ತಾರೆ. ನವ-ಉದಾರವಾದದ ಹುಟ್ಟನ್ನು 1920ರ ವಿಯೆನ್ನಾದಲ್ಲಿ ಕಾಣಬಹುದು.

ಆಗ ಆಸ್ಟ್ರಿಯಾದ ಫ್ಯಾಸಿಸ್ಟ್ ಸರಕಾರ ಕಾರ್ಮಿಕ ಯೂನಿಯನ್ನುಗಳನ್ನು ಹೊಸಕಿಹಾಕಿತು. ಮೊದಲಿನ ಪ್ರೋಟೋ ಫ್ಯಾಸಿಸ್ಟ್ ಸರಕಾರವನ್ನು ಆಗಿನ ಸಾಮಾಜಿಕ ಪ್ರಜಾಪ್ರಭುತ್ವ ಬೆಂಬಲಿಸಿತು ಮತ್ತು ಹೊಗಳಿತು, ಏಕೆಂದರೆ ಅದು ಉತ್ತಮ ಆರ್ಥಿಕ ಲಾಭವನ್ನು ರಕ್ಷಿಸುತ್ತಿತ್ತು. ಪಿನೋಶೇ ಒಂದು ಕೊಲೆಪಾತುಕ ಸರ್ವಾಧಿಕಾರವನ್ನು ಚಿಲಿಯಲ್ಲಿ ಸ್ಥಾಪಿಸಿದ. ಅಲ್ಲಿನ ಜನ ಅದನ್ನು ಆರಾಧಿಸಿದರು. ಅವರೆಲ್ಲಾ ಈ ಸರಕಾರವನ್ನು ಬೆಂಬಲಿಸಿ ಹೋರಾಡಿದರು ಏಕೆಂದರೆ ಈ ಸರಕಾರ ಒಂದು ಅತ್ಯಾಕರ್ಶಕವಾದ ಸುಂದರ ಲಾಭದಾಯಕ ಆರ್ಥಿಕತೆಯನ್ನು ತೋರಿಸುತ್ತಿತ್ತು. ಒಂದು ಸಣ್ಣ ಪ್ರಮಾಣದ ಜನಸಂಖ್ಯೆ ಅತಿ ಶ್ರೀಮಂತರಾಗುತ್ತಿದ್ದರು. ಅದು ಸಾಲದು. ಸ್ವಯಂಘೋಷಿತ ಉದಾರವಾದಿಗಳಿಂದ ಮತ್ತೆ ಈ ರೀತಿಯ ತೆಳು-ಉದಾರವಾದೀ ಸರಕಾರಗಳು ಮತ್ತೊಮ್ಮೆ ಪ್ರತಿಷ್ಠಾಪನೆಗೊಳ್ಳಬಹುದೆಂಬ ಕಲ್ಪನೆಯೇನೂ ಅತಿಶಯೋಕ್ತಿಯಲ್ಲ. ಅದರ ಜೊತೆಗೆ ಸರಕಾರದ ಆಡಳಿತಗಳು ಅತ್ಯಂತ ಘೋರ ಹಿಂಸಾಚಾರವನ್ನು ನಡೆಸಬಹುದೆಂಬುದೂ ಒಂದು ದುಃಸ್ವಪ್ನ. ಅದು ಒಂದು ರೀತಿಯಲ್ಲಿ ಮುಂದೆ ನಡೇಯಬಹುದೆಂಬ ಸೂಚನೆ ಕಾಣುತ್ತದೆ. ಇದೇನು ಅನಿವಾರ್ಯವಲ್ಲ. ಜನರು ತಮ್ಮನ್ನು ಸಂಘಟಿಸಿಕೊಂಡು ತೊಡಗಿಸಿಕೊಂಡು, ಈಗಾಗಲೇ ಹಲವರು ಮಾಡುತ್ತಿರುವಂತೆ ಒಂದು ಇದಕ್ಕಿಂತ ಉತ್ತಮ ಜಗತ್ತನ್ನು ರಚಿಸಬಹುದು. ಅದರಿಂದ ನಾವು ಈಗ ಎದುರಿಸುತ್ತಿರುವ ಬೃಹದಾಕಾರದ ಸಮಸ್ಯೆಗಳನ್ನು ನಾವು ಎದುರಿಸಲು ಸಾಧ್ಯವಾಗಬಹುದು. ಸಮಸ್ಯೆಗಳು ಅಂದರೆ, ಹಿಂದೆಲ್ಲದಕ್ಕಿಂತ ಸಮೀಪದಲ್ಲಿರುವ ಅಣುಬಾಂಬುಯುಧ್ಧದ ಸಾಧ್ಯತೆ ಮತ್ತು ಪರಿಸರ ನಾಶದ ದುರಂತದ ತೊಂದರೆಗಳು ; ಇವುಗಳು ಒಂದು ಬಾರಿ ಬಂದೆರಗಿದರೆ ಇವುಗಳಿಂದ ಚೇತರಿಕೆ ಸಾಧ್ಯವಿಲ್ಲ. ಒಮ್ಮೆ ಆ ಮಟ್ಟಕ್ಕೆ ನಾವು ಕುಸಿದರೆ, ಎಲ್ಲಾ ಮುಗಿದಂತೆ, ಅಂತ್ಯ. ಅದು ನಮಗೇನೂ ಹೆಚ್ಚು ದೂರದಲ್ಲಿಲ್ಲ. ಆದ್ದರಿಂದ ಇದು ಮಾನವ ಇತಿಹಾಸದಲ್ಲೇ ಒಂದು ಅತ್ಯಂತ ಗಂಭೀರವಾದ ಪ್ರಮುಖವಾದ ಘಟ್ಟ. ಇದು ಕರೋನಾ ವೈರಸ್ಸಿನಿಂದಾಗಿ ಮಾತ್ರ ಅಲ್ಲ. ಆದರೆ ಕರೋನಾ ವೈರಸ್ ನಮ್ಮನ್ನು ಆ ಅರಿವಿನೆಡೆಗೆ ಆ ತಿಳುವಳಿಕೆಯೆಡೆಗೆ ಕರೆದುಕೊಂಡು ಹೋಗಿ ಈ ಸಂಪೂರ್ಣ ಕಾರ್ಯವೈಫಲ್ಯವೇ ಲಕ್ಷಣವಾಗಿರುವ ಸಾಮಾಜಿಕ-ಆರ್ಥಿಕ ವ್ಯವಸ್ಥೆಯಲ್ಲಿನ ಆಳವಾದ ಕುಂದುಕೊರತೆಗಳನ್ನು ನಮಗೆ ಮನಗಾಣಿಸಬೇಕು. ಮುಂದೆ ನಾವು ಬದುಕುಳಿಯಬೇಕಾದರೆ ಈ ಬದಲಾವಣೆ ಅತ್ಯಂತ ಅನಿವಾರ್ಯ. ಆದ್ದರಿಂದ ಈ ವೈರಸ್ ಒಂದು ಎಚ್ಚರಿಕೆಯ ಪಾಠವಾಗಿದೆ. ಈಗ ನಾವಿದನ್ನು ನಿವಾರಿಸಬೇಕು ಮತ್ತು ಮುಂದೆ ಹೀಗಾಗದಂತೆ ಬದಲಾವಣೆಗಳನ್ನು ಮಾಡಲು ಹೆಚ್ಚುಹೆಚ್ಚಾಗಿ ಆಲೋಚಿಸಬೇಕು.

ನಮಗೆ ಹೆಚ್ಚು ಸಮಯವಿಲ್ಲದುದರಿಂದ ನನ್ನ ಕಡೆಯ ಪ್ರಶ್ನೆಯನ್ನು ಕೇಳುತ್ತೇನೆ. ಬಹಳ ಜನರು ಸಾಮಾಜಿಕ ಚಳುವಳಿಗಳಲ್ಲಿ ಪಾತ್ರವಹಿಸಲು ಆಸಕ್ತರಾಗಿದ್ದಾರೆ. ಅವರು ಹತ್ತಾರು ವರ್ಷಗಳಿಂದ, ಜನರ ನಡುವಿನ ಭೌತಿಕ ಮತ್ತು ಸಾಮಾಜಿಕ ಸಾಮೀಪ್ಯವನ್ನು ಉಪಯೋಗಿಸಿಕೊಂಡು ಸಜ್ಜುಗೊಳಿಸಿ ಚಲಾಯಿಸಲು ತಯಾರಾಗಿದ್ದಾರೆ. ಆದರೆ ಈಗ ಅವರೆಲ್ಲಾ ” ಸಾಮಾಜಿಕ ಅಂತರ” ಎಂದು ಕರೆಯಲ್ಪಡುವ ಈ ಸ್ಥಿತಿಗೆ ನಿಧಾನವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ನನ್ನ ಪ್ರಶ್ನೆ ಇದು. ನೀವು ಈ ಸಾಮಾಜಿಕ ಅಂತರದ ಕಾಲದಲ್ಲಿ ಸಾಮಾಜಿಕ ಪ್ರತಿರೋಧದ ಭವಿಶ್ಯವನ್ನು ಹೇಗೆ ನೋಡುತ್ತೀರಿ? ಇದು ಹೀಗೇ ಕೆಲವು ತಿಂಗಳುಗಳು ಅಥವಾ ಒಂದೆರಡು ವರ್ಷಗಳು ಮುಂದುವರೆದರೆ, ಮತ್ತು ನಾವು ಸಾಮಾಜಿಕವಾಗಿ ಏಕಾಂಗಿತನದಲ್ಲಿ ನಮ್ಮ ನಮ್ಮ ಮನೆಗಳಲ್ಲಿ ಉಳಿದರೆ, ಅಂಥಾ ಸಮಯದಲ್ಲಿ ಜಗತ್ತಿನ ಪ್ರಗತಿಪರರಿಗೆ, ಕಾರ್ಯಕರ್ತರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಮತ್ತು ಬುಧ್ದಿಜೀವಿಗಳಿಗೆ ನಿಮ್ಮ ಸಲಹೆ ಏನು? ಈ ಸಂದರ್ಭದಲ್ಲಿ ಸಂಘಟಿಸುವುದು ಹೇಗೆ? ಈ ಜಾಗತಿಕ ಅಧಿಕಾರಶಾಹೀ ಪ್ರಭುತ್ವಗಳಿಂದ ಆಮೂಲಾಗ್ರ ಬದಲಾವಣೆ ಹೊಂದಿ ಒಂದು ಕನಸಿನ, ಸಮಾನತೆಯ, ನ್ಯಾಯಯುತ ಮತ್ತು ಒಮ್ಮತದ ಸ್ಥಿತಿಯೆಡೆಗೆ ಐತಿಹಾಸಿಕ ಮಾರ್ಪಾಡಾಗುವುದೆಂಬ ಭರವಸೆ ನಿಮಗಿದೆಯೇ?

ನೋಮ್ : ಮೊಟ್ಟಮೊದಲಿಗೆ ನಾವು , ಈಗಾಗಲೇ ಕಳೆದ ಕೆಲವು ವರ್ಷಗಳಿಂದ ಒಂದು ಬಗೆಯ ಸ್ವ-ಏಕಾಂಗಿತನಕ್ಕೆ ನಮ್ಮನ್ನು ಒಡ್ಡಿಕೊಂಡಿದ್ದೇವೆ ಎಂಬುದನ್ನು ಮನಸ್ಸಿನಲ್ಲಿಡಬೇಕು. ನೀವು ಒಂದು ಮ್ಯಾಕ್ ಡೋನಾಲ್ಡಿಗೆ ಹೋದರೆ ಒಂದು ನೋವುಂಟು ಮಾಡುವ ದೃಶ್ಯವನ್ನು ನೋಡಬಹುದು. ಹಲವು ಹದಿವಯಸ್ಸಿನ ಗೆಳೆಯರು ಒಂದು ಮೇಜಿನ ಸುತ್ತಾ ಕುಳಿತು ಹ್ಯಾಮ್ ಬರ್ಗರ್ ತಿನ್ನುತ್ತಿರುತ್ತಾರೆ. ಅಲ್ಲಿ ಎರಡು ಬಗೆಯ ಸಂಭಾಷಣೆಗಳು ಏಕಕಾಲದಲ್ಲಿ ನಡೆಯುತ್ತಿರುತ್ತವೆ. ಒಂದು ತಿಳಿಯಾದ ಗಂಭೀರವಲ್ಲದ ಕುಶಲ ಸಂಭಾಷಣೆ ಮತ್ತು ಇನ್ನೊಂದು ಅವರವರ ಫೋನುಗಳಲ್ಲಿ ಪ್ರತ್ಯೇಕವಾಗಿ ಯಾರೋ ಒಂದು ಅದೃಶ್ಯವಾದ ದೂರದಲ್ಲಿನ ವ್ಯಕ್ತಿಯೊಡನೆ ನಡೆಸುತ್ತಿರುವ ಸಂಭಾಷಣೆ. ಇವರೆಲ್ಲಾ ಏಕಾಂಗಿಯಾದ ಬೇರ್ಪಟ್ಟ ವ್ಯಕ್ತಿಗಳು. ಇದು ಅಸಮಾನ್ಯವಾದ ಬೆಳವಣಿಗೆ. ಥ್ಯಾಚರಳ ಸಮಾಜವಿಲ್ಲ ಎನ್ನುವಂಥಾ ಸಿಧ್ದಾಂತವು ಈಗ ಈ ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ತಾರಕಕ್ಕೇರಿದೆ. ಈ ಸಾಮಾಜಿಕ ಜಾಲತಾಣಗಳು ಜನರನ್ನು ಅತ್ಯಂತ ಹೀನರನ್ನಾಗಿ ಮಾಡಿವೆ. ವಿಶೇಷವಾಗಿ ಯುವಕರನ್ನು. ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ರಸ್ತೆ ಬದಿಯ ಕಾಲುಹಾದಿಗಳಲ್ಲಿ “ತಲೆ ಎತ್ತಿ ನೋಡಿ” ಎಂಬ ಫಲಕಗಳಿವೆ. ಯಾಕಂದರೆ ಅಲ್ಲಿ ಓಡಾಡುವ ಪ್ರತಿ ವಿದ್ಯಾರ್ಥಿಯೂ ತನ್ನ ಫೋನಿಗೆ ಅಂಟಿಕೊಂಡಿರುತ್ತಾನೆ. ಇಂಥಹ ಸಾಮಾಜಿಕ ಏಕಾಂಗಿತನ ಬಹಳ ಅಪಾಯಕಾರಿ. ಈಗ ನಾವು ಇನ್ನೊಂದು ರೀತಿಯ ಸ್ಥಿತಿಯಲ್ಲಿದ್ದೇವೆ. ಇದು ” ವೈರಸ್ಸಿನಿಂದಾದ ಏಕಾಂಗಿತನ”. ನಾವು ಸಾಮಾಜಿಕ ನಂಟುಗಳನ್ನು ಪುನರ್ರಚಿಸಬೇಕಾಗಿದೆ. ಯಾವ ವಿಧಾನದಲ್ಲಾಗಲೀ, ಜನರನ್ನು ಸಂಪರ್ಕಿಸುವ ಯಾವುದೇ ಮಾರ್ಗಗಳಿಂದಾಗಲೀ ಸಂಘಟನೆಗಳನ್ನು ಕಟ್ಟಿ ಬೆಳೆಸಿ, ಅದರ ವ್ಯಾಪ್ತಿಯನ್ನು ಹರಡುವುದಕ್ಕೆ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಕಾರ್ಯನಿರತರಾಗುವಂತೆ ಮಾಡಿ, ಅಂತರ್ಜಾಲದ ಮೂಲಕ, ನೀವು ಮಾಡುತ್ತಿರುವಂತೆ ಜನರನ್ನು ಒಗ್ಗೂಡಿಸಿ, ಎಲ್ಲರೂ ಸೇರಿ ಸಮಾಲೋಚಿಸಿ, ಚಿಂತಿಸಿ, ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರಗಳನ್ನು ಹುಡುಕಿ ಕಂಡು ಹಿಡಿದು ಅದಕ್ಕಾಗಿ ಕ್ರಿಯಾಶೀಲರಾಗಬೇಕು. ಇದನ್ನು ಮಾಡಲು ಸಾಧ್ಯ. ಇದು ಮಾನವರಿಗೆ ಅತ್ಯಗತ್ಯವೆನಿಸುವ ಮುಖಾಮುಖಿ ಸಂಪರ್ಕವಲ್ಲ. ಆ ರೀತಿಯ ಸಂಪರ್ಕ ಸದ್ಯಕ್ಕೆ ನಮಗೆ ದೊರೆಯುವುದಿಲ್ಲ. ಅದನ್ನು ಸದ್ಯಕ್ಕೆ ಒತ್ತಟ್ಟಿಗಿರಿಸಬೇಕು. ಮತ್ತು ನಮ್ಮ ನಿಲುವನ್ನು ಶಕ್ತಿಯುತಗೊಳಿಸಿ, ಕಾರ್ಯಚಟುವಟಿಕೆಗಳನ್ನು ಹೆಚ್ಚುಗೊಳಿಸಲು ಇತರ ವಿಧಾನಗಳನ್ನು ಹುಡುಕಬೇಕು. ಇದು ಸುಲಭವಲ್ಲ, ಕಷ್ಟಸಾಧ್ಯ.ಆದರೆ ಮಾಡಬಹುದು.

ನಿಮ್ಮ ಸ್ವ-ಏಕಾಂಗಿತನದಲ್ಲಿ ನಿಮ್ಮ ನಾಯಿ ಜೊತೆಗಿದೆ.
ನೋಮ್: ಹೌದು. ನನ್ನ ನಾಯಿ ಈ ಸಂಭಾಷಣೆಯಲ್ಲಿ ಜೊತೆಗೆ ಕುಳಿತುಕೊಂಡಿದೆ.

ನಿಮ್ಮ ಬಳಿ ಒಂದು ಪಕ್ಷಿ ಇದೆ, ಅಲ್ವಾ? ಅಥವಾ ಒಂದು ಗಿಣಿನಾ? ಅದರ ಸದ್ದು ಕೇಳುತ್ತಿತ್ತು.
ನೋಮ್: ಅದು ಒಂದು ಬಗೆಯ ಗಿಣಿ. ಅದು ಪೋರ್ಚುಗೀಸ್ ಭಾಷೆಯಲ್ಲಿ ” ಎಲ್ಲಾ ಜನರಿಗೂ ಪ್ರಭುತ್ವ” ಎನ್ನುತ್ತದೆ. ಅದು ನಾವು ವಾಶಿಂಗ್ಟನ್ನಿನಿಂದ ಕೇಳುವ ವ್ಯಾಕ್ಯಗಳಿಗಿಂತ ಹೆಚ್ಚು ಬುದ್ಧಿವಂತಿಕೆಯ ವಾಕ್ಯ.

ಅದ್ಭುತ. ತುಂಬಾ ಥ್ಯಾಂಕ್ಸ್ ನೋಮ್.

ಇದು ಈ ಸಂಭಾಷಣೆಗೆ ಒಂದು ಸುಂದರ ಅಂತ್ಯ. ಮತ್ತೆ ಮಾತಾಡೋಣ. ಎಲ್ಲಾರೂ ನಮ್ಮ ನಮ್ಮ ಮನೆಗಳಲ್ಲಿರೋಣ. ನಿಮ್ಮ ಗಿಣಿ ಮತ್ತು ನೀವು ಹೇಳಿದಾಗ ನಮ್ಮ ಮನೆಯಿಂದ ಹೊರಬರಲು ನಾವು ಕಾಯುತ್ತಿರುತ್ತೇವೆ.


ನೋಮ್ ಚಾಮ್ಸ್ಕಿ : ಆಧುನಿಕ ಭಾಷಾಶಾಸ್ತ್ರಕ್ಕೆ ಮುಂಪಂಕ್ತಿ ಹಾಕಿಕೊಟ್ಟ ಮನುಷ್ಯ, ಪ್ರಖರ ಸಾಮಾಜಿಕ ಚಿಂತಕ, ತಾತ್ವಿಕ ಎಂದೆಲ್ಲ ಕರೆಸಿಕೊಂಡ ನೋಮ್ ಚಾಮ್ಸ್ಕಿ ಗೆ ಈಗ ೯೧ ವರ್ಷ. ಕೈಯಿಟ್ಟ ಕ್ಷೇತ್ರದಲ್ಲೆಲ್ಲ ಆಳವಾದ್ದನ್ನೇ ಸಾಧಿಸಿದ ಛಾಮ್ಸ್ಕಿ ಭಾಷಾಶಾಸ್ತ್ರಕ್ಕೆ ತಾನು ಕೊಡಬಹುದಾದ ಕೊಡುಗೆಯನ್ನೆಲ್ಲ ನೀಡಿದ ಮೇಲೆ ಜಗತ್ತಿನ ಕ್ಯಾಪಿಟಲಿಸ್ಟ್ ರಾಜಕಾರಣದ ರೌದ್ರಮುಖಗಳ ಬಗ್ಗೆ ದಿಟ್ಟವಾಗಿ ಮತ್ತು ಸ್ಪಷ್ಟವಾಗಿ ಮಾತನಾಡತೊಡಗಿದರು. ಯುಧ್ಧ, ಭಾಷಾಶಾಸ್ತ್ರ, ಸಮಾಜದ ಮೇಲೆ ಅವರು ೧೦೦ ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಸ್ರೆಕೋ ಹೊವಾರ್ಟ್ (ಸಂದರ್ಶಕರು) :  ಕ್ರೋವೆಷಿಯಾದ ತತ್ವಶಾಸ್ತ್ರಜ್ಞ, ಲೇಖಕ ಮತ್ತು ರಾಜಕೀಯ ಕಾರ್ಯಕರ್ತ. ಜರ್ಮನ್ ವಾರಪತ್ರಿಕೆ “ದೆರ್ ಫ಼್ರೈಟಾಗ್” ಆತನನ್ನು ನಮ್ಮ ಕಾಲದ ಪ್ರಭಾವಶಾಲೀ ಮತ್ತು ಒಳನೋಟ ಹೊಂದಿದ ವ್ಯಕ್ತಿ ಎಂದು ವರ್ಣಿಸಿದೆ. ಯುಗೋಸ್ಲಾವಿಯಾ ದೇಶ ಒಡೆದು ಭಾಗವಾದ ನಂತರದ ಮೇಲಿನ ಆ ಭೂಪ್ರದೇಶದ ಪ್ರತಿಭಟನೆಯ ಧ್ವನಿಗಳಲ್ಲಿ ಇವರದ್ದು ಮುಖ್ಯ ಹೆಸರು.


ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಇವು ನನ್ನ ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .

8 comments to “ಕೊರೋನ ನಂತರದ ಜಗತ್ತು: ನೋಮ್ ಚಾಮ್ಸ್ಕಿ ಸಂದರ್ಶನ”
  1. ಬಹಳ ಅರ್ಥಪೂರ್ಣ ವಾಗಿದೆ ಚಾಮ್ಸ್ಕ್ಕಿಯ ವಿಚಾರ ಗಳು ಸ್ಫುಟವಾಗಿ ವೆ. ಆಲೋಚನೆ ಗೆ ತೆರೆದಿದೆ ಅನುವಾದ ಚೆನ್ನಾಗಿ ಮೂಡಿಬಂದಿದೆ ರಘುನಾಥ್ ಎಂ ಎಸ್ ಬೆಂಗಳೂರು

  2. ನನ್ನ ಹಿಂದಿನ ಪ್ರತಿಕ್ರಿಯೆಯಲ್ಲಿ ಅನುವಾದದ ಭಾಷೆ ಮತ್ತು ಶೈಲಿ ಬಗ್ಗೆ ಹೇಳುವುದನ್ನು ಅದು ಹೇಗೋ ಮರೆತು ಬಿಟ್ಟಿದ್ದೆ. ಕ್ಷಮಿಸಿ. ಸಂವಾದದ ಅನುವಾದ ತುಂಬಾ ಚೆನ್ನಾಗಿದೆ. ಕನ್ನಡ ಭಾಷೆಯಲ್ಲಿಯೇ ಸಂವಾದ ನಡೆದಿರಬಹುದೇ ಎನ್ನುವಷ್ಟು ಸಹಜವಾಗಿದೆ. ಈ ದಿಗ್ಗಜರ ಮಾತುಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿ ಅನುವಾದಿಸಿವುದು ಸುಲಭವಲ್ಲ. ಅನುವಾದ ಮಾಡಿ ಕೊಟ್ಟ ಲೇಖಕಿಗೆ ಕೃತಜ್ಞತೆಗಳು.

  3. ನೋಮ್ ಚಾಮಸ್ಕಿಯ ಮಾತುಗಳು ಇವತ್ತಿನ ಮನುಕುಲವನ್ನು ಎಚ್ಚರಿಸುವಂತಹ ಮಾತುಗಳು. ಅನುವಾದಕರಿಗೆ ನಮಸ್ಕಾರಗಳು

  4. ಈ ಅನುವಾದ ಸೊಗಸಾಗಿಧ. ಧನ್ಯವಾದಗಳು. ಚಾಮ್ಸಕಿ ಮಾತುಗಳು ನಾವು ನಂಬಿದ್ದಕ್ಕಿಂತ ಬೇರೆಯದೇ ವಿಷಯಗಳನ್ನು ಹೇಳುತ್ತಿವೆ.

  5. ಸಂವಾದ ಸಕಾಲಿಕವಾಗಿದೆ. ಅನುವಾದ ಸೊಗಸಾಗಿದೆ. ಧನ್ಯವಾದಗಳು.

ಪ್ರತಿಕ್ರಿಯಿಸಿ