ಏಪ್ರಿಲ್ 5 ರಂದು ಋತುಮಾನದಲ್ಲಿ ಪ್ರಕಟವಾದ ಲೇಖನ ಕುರಿತಾದ ಪ್ರತಿಕ್ರಿಯೆ ಇದು . ಮೂಲ ಲೇಖನದ ಕೊಂಡಿ ಇಲ್ಲಿದೆ. https://ruthumana.com/2020/04/05/science-justice-tejal-kanitkar/
ವಿಜ್ಞಾನದ ಸತ್ಯಗಳನ್ನು ಅರಿತೋ ಅರಿಯದೆಯೋ ಅಥವಾ ಅರಿತಿದ್ದೂ ಮರೆತವರಂತೆ ಬದುಕುವ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ದಿನನಿತ್ಯದ obscurantism ಎಂದು ಲೇಖಕರು ಕರೆದಿದ್ದಾರೆ.(ಇದನ್ನು ಗೊಡ್ಡುತನ ಎಂದು ಅನುವಾದಿಸಿದ್ದು ಅಸಮಗ್ರವಷ್ಟೇ ಅಲ್ಲ ತಪ್ಪು ಎಂದು ನನ್ನ ಸ್ಪಷ್ಟ ಅಭಿಪ್ರಾಯ) ಇದರ ಕಾರಣ, ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಷಯದ ಆಳವಾದ ಸಾಮಾಜಿಕ ಆಯಾಮಗಳ ಬಗ್ಗೆ ನನಗಿರುವ ಆಸಕ್ತಿಯೇ ನಾನು ಇದನ್ನು ಓದುವಂತೆ ಮಾಡಿದ್ದು. ಬಹುಶಃ ಈ ವಿಷಯದ ಚರ್ಚೆಗಳೆಲ್ಲವೂ ಒಂದೋ ವಿಜ್ಞಾನವೇ ಪರಮ ಸತ್ಯವಾದ್ದರಿಂದ ಅದನ್ನು ವಿರೋಧಿಸುವ ವಾದವೆಲ್ಲವೂ ಅಶಿಷ್ಟವೆಂದೋ, ಅಪಾಯಕಾರಿಯೆಂದೋ ; ಅಥವಾ ವಿಜ್ಞಾನಯುಗದ ಸೋಲುಗಳೆಲ್ಲವೂ ವಿಜ್ಞಾನದ ಸೋಲುಗಳು ಎಂಬ ಅತಿವಾದಗಳಲ್ಲಿ ಪರ್ಯವಸಾನವಾಗುತ್ತಿರುವುದು ದುರದೃಷ್ಟ. ಇದನ್ನು ಲೇಖಕರು ಗುರುತಿಸಿದ್ದಾರೆ ಕೂಡ. ಆದರೆ ಪ್ರಸ್ತುತ ವಿಷಯಕ್ಕೆ ಇದನ್ನು ಮೀರಿದ ಸಾಮಾಜೋ-ಸಾಂಸ್ಕೃತಿಕ ಆಯಾಮಗಳಿವೆ ಎಂಬುದನ್ನು ಲೇಖಕರು ಗಂಭೀರವಾಗಿ ಗಮನಿಸಿದಂತೆ ಕಾಣಿಸುವುದಿಲ್ಲ.
ಮೊದಲಿಗೆ ಎಲ್ಲ ನಾಗರಿಕತೆಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಸತ್ಯದಷ್ಟೇ ಮಹತ್ವದ ಪಾತ್ರಗಳನ್ನು ಉಳಿದೆರಡು ಮೂಲಭೂತ ಸಂಗತಿಗಳಾದ ಶಿವ ಮತ್ತು ಸೌಂದರ್ಯಗಳು ನಿರ್ವಹಿಸುತ್ತವೆ. ಸತ್ಯವು ಯಾವಾಗಲೂ ಗ್ರಹಿಕೆಯ ಸೂಕ್ಷ್ಮತೆಯನ್ನೂ, ಸೂಕ್ತವಾದ ತರಬೇತಿಯನ್ನೂ ಅಪೇಕ್ಷಿಸುತ್ತದೆಯಾದ್ದರಿಂದ ನಮ್ಮೆಲ್ಲ ಸಾಮಾಜಿಕ ಚಟುವಟಿಕೆಗಳಲ್ಲಿ ಸತ್ಯಕ್ಕಿಂತ ಸ್ವಲ್ಪ ಹತ್ತಿರದ ಸ್ಥಾನ ಶಿವಸೌಂದರ್ಯಗಳಿಗೆ ದಕ್ಕಿದೆ. ವಿಜ್ಞಾನಯುಗದ ಪೂರ್ವದಲ್ಲಿ ಈ ಪ್ರಕ್ರಿಯೆ ಎದ್ದುಕಾಣುತ್ತದೆ. ಹಾಗೆಂದರೆ ವಿಜ್ಞಾನಯುಗದ ಪೂರ್ವದಲ್ಲಿ ‘ಸತ್ಯ’ಕ್ಕೆ ಬೆಲೆಯಿರಲಿಲ್ಲ ಎಂದೇನೂ ಅಲ್ಲ. ಆಗ ಸತ್ಯನಿರೂಪಣೆಯ ಸೂಕ್ಷ್ಮಕಾರ್ಯವನ್ನು ಫಿಲಾಸಫಿ ಮತ್ತು ದರ್ಶನಶಾಸ್ತ್ರಗಳು ನಿರ್ವಹಿಸಿದ್ದವು. ವಿಜ್ಞಾನಯುಗ ಆರಂಭವಾದ ಮೇಲೆ ಸತ್ಯದ ಸ್ಥಾನಪಲ್ಲಟವಾಗಲು ಮೊದಲಾಯಿತು. ಇದು ಸತ್ಯಕ್ಕೆ ಮೊದಲ/ಮುಖ್ಯ ಸ್ಥಾನವನ್ನು ತಂದುಕೊಡುವುದಷ್ಟೇ ಆಗಿರದೇ ಸತ್ಯವೇ ಪರಮಾರ್ಥವೆಂಬಲ್ಲಿಗೂ ಹೋಯಿತು.
ಹೀಗಾದಲ್ಲಿ ತಪ್ಪೇನು ಎಂದು ನೀವು ಕೇಳಬಹುದು. ವಿಷಯ ಬಹಳ ಸರಳವಾಗಿದೆ. ಆದರೆ ಅದನ್ನು ನೋಡಲು ಸ್ವಲ್ಪ ತಾಳ್ಮೆ ಬೇಕಷ್ಟೇ. ಈ ವಿಜ್ಞಾನಸಂರಂಭದಲ್ಲಿ ಸಾಂಸ್ಕೃತಿಕ ಪ್ರತಿಮೆಗಳು, ಸಂಕೇತಗಳು(ನಾನಿಲ್ಲಿ ಹೇಳುತ್ತಿರುವುದು ಪುಷ್ಪಕವಿಮಾನ, ಗಣಪತಿಯ ಪ್ಲಾಸ್ಟಿಕ್ ಸರ್ಜರಿಗಳ ಬಗ್ಗೆ ಅಲ್ಲ ಎಂದು ತಮಗೆ ಗೊತ್ತು ಎಂದುಕೊಳ್ಳುತ್ತೇನೆ) ಹಿನ್ನೆಲೆಗೆ ಸರಿದದ್ದೇ ಅಲ್ಲದೆ ವಿಜ್ಞಾನದಿಂದ ಪ್ರಮಾಣಿತವಲ್ಲದ ಯಾವುದೂ ಸತ್ಯವೇ ಅಲ್ಲ ಎಂಬಂತಹ ಮನೋಭಾವ ಹಲವರಲ್ಲಿ ಬೆಳೆಯಿತು. ಆದರೆ ಯುಗಯುಗಗಳ ಕಾಲ ಈ ಪ್ರತಿಮೆಗಳು, ಸಂಕೇತಗಳು ಕೆಲವು ವೈಜ್ಞಾನಿಕವಾದ ಮತ್ತು ಮನೋವೈಜ್ಞಾನಿಕವಾದ ಕಾರ್ಯಗಳನ್ನು ನಿರ್ವಹಿಸುತ್ತ ಬಂದಿದ್ದವು. ಈಗ ಅವೆಲ್ಲವೂ ಗೊಡ್ಡುತನವಾದರೆ(ಈ ಶಬ್ದಕ್ಕೆ ಇದು ಸರಿಯಾದ ಜಾಗ) ಅವುಗಳು ನಿರ್ವಹಿಸುತ್ತಿದ್ದ ಕಾರ್ಯಗಳನ್ನು ಯಾರು ನೋಡಿಕೊಳ್ಳಬೇಕು? ಸರಳವಾದ ಉತ್ತರವೆಂದರೆ, ಈ ಪಲ್ಲಟಕ್ಕೆ ಕಾರಣವಾದ ವಿಜ್ಞಾನವೇ ನೋಡಿಕೊಳ್ಳಬೇಕಾದೀತು. ಆದರೆ ಇದು ಇಂದಿಗೂ ಸಾಧ್ಯವಾಗಿಲ್ಲ.
ಇದಕ್ಕೆ ಕಾರಣಗಳು ಬಹಳ ಸಂಕೀರ್ಣವಾಗಿವೆ. (ಇದಕ್ಕೇ ನನಗೆ ಈ ಮೇಲಿನ ಲೇಖನ ತುಂಬಾ ಹಾರಿಕೆಯ ಪ್ರಯತ್ನದಂತೆ ಕಂಡಿದ್ದು) ಮೊದಲಿಗೆ ವಿಜ್ಞಾನವು ಎಂದಿಗೂ ಸತ್ಯದ ಪರಿಧಿಯನ್ನು ಬಿಟ್ಟು ಶಿವ, ಸೌಂದರ್ಯಗಳ ಆವರಣವನ್ನು ವೈಜ್ಞಾನಿಕವಾಗಿ ಪ್ರವೇಶಿಸಲೇ ಇಲ್ಲ. ದಯವಿಟ್ಟು ಇದು ವಿಜ್ಞಾನದ ಮೇಲೆ ಹೂಡುತ್ತಿರುವ ದಾವೆಯಲ್ಲ. ಯಾಕೆ ಪ್ರವೇಶಿಸಲಿಲ್ಲ ಎಂಬುದೂ ಸಂಕೀರ್ಣವಾದ ಪ್ರಕ್ರಿಯೆಯೇ ಆಗಿದೆ. ಸರಳವಾದ ಕೆಲವು ಕಾರಣಗಳನ್ನು ಕೊಡುವುದಾದರೆ ವಿಜ್ಞಾನದ ವಾಸ್ತವಪ್ರಮಾಣಮಾದರಿಗಳು ಈ ಸಂಗತಿಗಳಲ್ಲಿ ತೀರ ಹೊಸ್ತಿಲಿನಾಚೆಗೆ ನಿಂತುಬಿಡುತ್ತವೆ. ಅಲ್ಲದೇ ಎಷ್ಟು ಜನ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಯೋಚಿಸಿ, ತಮ್ಮ ಕ್ಷೇತ್ರಜ್ಞಾನವನ್ನು ಲೋಕದ ಇತರ ಪ್ರಯೋಜನಪಾತ್ರಕ್ಕೆ ತುಂಬಲು ಪ್ರಯತ್ನ ಪಟ್ಟಿದ್ದಾರೆ ಎಂಬುದೂ ಮುಖ್ಯ ಸಂಗತಿಯೇ. ತುಂಬಾ ಸರಳವಾಗಿ ಹೇಳುವುದಾದರೆ ಇದು ಆಂಥ್ರೋಪಾಲಜಿಸ್ಟನ ಕೆಲಸ ಎಂದಷ್ಟೇ ವಿಜ್ಞಾನದ ಇತರ ಶಾಖೆಗಳವರು ಭಾವಿಸಿದಂತಿದೆ. ಒಟ್ಟಾರೆಯಾಗಿ ಫಿಲಾಸಫಿ ಒಂದು ಕಾಲದಲ್ಲಿ ಕಟ್ಟಿಕೊಟ್ಟಂತಹ ಪರಿಪೂರ್ಣವಾದ (i.e.Complete not essentially perfect) ಲೋಕದೃಷ್ಟಿಯನ್ನು ವಿಜ್ಞಾನ ಬೆಳೆಸಲಿಲ್ಲ. (ಇದೂ ಕೂಡ ದೂರಲ್ಲ, ವಾಸ್ತವವಷ್ಟೇ)
ಇದರ ಸಂದಿಗ್ಧ ಪರಿಣಾಮಗಳನ್ನು ವಿಜ್ಞಾನಲೋಕದಲ್ಲಿಯೇ ಕಾಣಬಹುದು. ಒಬ್ಬ ವಿಜ್ಞಾನಿಗೆ ತನ್ನ ಸಂಶೋಧನೆಯ ಅಂತಿಮ ಉದ್ದೇಶವೇನು? ಇದರ ಕಟ್ಟಕಡೆಯ ಪರಿಣಾಮವೇನು? ಇದಕ್ಕೆ ಸಂಬಂಧಿಸಿದ ಮೌಲಿಕ ಸಂಗತಿಗಳೇನು ಎಂಬುವುದು ಬಹುತೇಕ ಮುಖ್ಯವಾಗುವುದಿಲ್ಲ. ವಿಜ್ಞಾನಯುಗದ ಎಲ್ಲಾ ಅನಾಹುತಗಳಿಗೂ ಈ ಬೇಜವಾಬ್ದಾರಿತನಕ್ಕೂ ನೇರಾನೇರ ಸಂಬಂಧವಿದೆ ಎಂಬುದನ್ನು ನಾವು ಗಮನಿಸಬೇಕು. ನನಗೆ ಗೊತ್ತು, ನಾನು ಬೇಜವಾಬ್ದಾರಿ ಎಂದದ್ದು ಕೋಪ ತರಿಸುತ್ತದೆ ಎಂದು. ಆದರೂ ಇದು ಸತ್ಯ. ಅಣುವಿಜ್ಞಾನದ ವಿಪರೀತ ಪರಿಣಾಮಗಳಿಗೆ ವೈಜ್ಞಾನಿಕ ಜಗತ್ತು ಇಂದಿಗೂ ಜವಾಬ್ದಾರಿಯ ಉತ್ತರವನ್ನು ನೀಡಿಲ್ಲ. ಜೀವವೈವಿಧ್ಯದ ಮೇಲೆ ಏಕಸ್ವಾಮ್ಯ ಸಾಧಿಸಲು ಪ್ರಯತ್ನಿಸುತ್ತಿರುವ ಬಂಡವಾಳಶಾಹಿಗಳು ತಮ್ಮ ಬಳಿ ನೂರಾರು ಸಾವಿರಾರು ವಿಜ್ಞಾನಿಗಳನ್ನಿಟ್ಟುಕೊಂಡೇ ಈ ಕೆಲಸವನ್ನು ಮಾಡುತ್ತಿರುವುದು. ಆ ವಿಜ್ಞಾನಿಗಳಿಗೆ ಈ ನೈತಿಕ ಆಯಾಮ ಕಾಣಿಸುವುದಿಲ್ಲ. ಮಹಾಯುದ್ಧಗಳಲ್ಲಿ ಕಂಡುಹಿಡಿದ ರಾಸಾಯನಿಕಗಳನ್ನು ಇಂದಿಗೂ ತಿನ್ನುವ ಅನ್ನ ಬೆಳೆಯುವ ನೆಲಕ್ಕೆ ಉಣಿಸುತ್ತಿರುವುದರ ಬಗ್ಗೆ ಯಾವ ಕನ್ಫೆಷನ್ನೂ ಕಾಣಿಸುವುದಿಲ್ಲ. ಹಾಗೆ ಕಂಡುಬರುತ್ತಿರುವುದೂ ಅವರು ವಿಜ್ಞಾನದ ಮುಖ್ಯಧಾರೆಯನ್ನು ತೊರೆದು ಪತ್ರಕರ್ತರೋ, ಪರಿಸರ ಹೋರಾಟಗಾರರೋ, ಬರಹಗಾರರೋ ಆಗಿ ನಿಂತಾಗ ಮಾತ್ರ. ನಾವು ಹೋರಾಡಬೇಕಿರುವುದು ಬಂಡವಾಳಶಾಹಿಗಳ ವಿರುದ್ಧ ವಿಜ್ಞಾನದ ವಿರುದ್ಧವಲ್ಲ ಎಂದು ಲೇಖಕರು ಹೇಳುತ್ತಾರೆ. ನಿಜ. ಆದರೆ ಬಂಡವಾಳಶಾಹಿಗಳ ಕೈಯಲ್ಲಿರುವುದೂ ವಿಜ್ಞಾನಿಗಳೇ ಅಲ್ಲವೇ. ಇದೊಂದು ಪ್ಯಾರಡಾಕ್ಸ್ ಅಲ್ಲವೇ? ಅಥವಾ ಐರನಿಯೇ? ಇದು ಹೀಗಾಗಬೇಕಿರಲಿಲ್ಲ. ವಾಸ್ತವವಾಗಿ ವಿಜ್ಞಾನ ತಾನು ಬೆಳೆಸಲು ಉದ್ದೇಶಿಸಿರುವ ವೈಜ್ಞಾನಿಕತೆಯ ಭಾಗವಾಗಿಯೇ ಈ ನೈತಿಕತೆಯನ್ನು ಮೈಗೂಡಿಸಿಕೊಂಡು ಬೆಳೆಯಲಿಲ್ಲ. ಸತ್ಯವು ಶಿವವನ್ನು ನಿರಾಕರಿಸಿ ಬೆಳೆಯಬಹುದು ಎಂದುಕೊಂಡರೆ ಅದೊಂದು ಮೂರ್ಖತನವಷ್ಟೇ. ಈ ಎಲ್ಲ ಸಮಸ್ಯೆಗಳನ್ನೂ ನಾವು ಜನಸಾಮಾನ್ಯರ ಅನುದಿನದ obscurantism ಎಂದಷ್ಟೇ ಕರೆಯುವುದು ಸಮಸ್ಯೆಯನ್ನು ಹಗುರವಾಗಿ ಕಂಡದ್ದಷ್ಟೇ ಅಲ್ಲ, ಇದರಿಂದ ನಿಜವಾಗಿ ಏನನ್ನು ಸಾಧಿಸಲು ಹೊರಟಿದ್ದಾರೆ ಎನ್ನುವ ಅನುಮಾನ ಬರುವಂತಾಗುತ್ತದೆ. ಸಮಸ್ಯೆ ಅಷ್ಟೇ ಅಲ್ಲ. ವಿಜ್ಞಾನವನ್ನು ಪ್ರಯೋಗಾಲಯಕ್ಕೆ ಸೀಮಿತಗೊಳಿಸಿದ್ದು ರಾಜಕಾರಣ ಮಾತ್ರವಲ್ಲ, ಇದರಲ್ಲಿ ವಿಜ್ಞಾನಿಗಳ ಪಾತ್ರವೂ ಇದೆಯಲ್ಲವೇ?.
ಇಲ್ಲಿ ಇನ್ನೊಂದು ಸಂಗತಿಯನ್ನು ಸ್ವಲ್ಪ ಅಪಥ್ಯವೆನಿಸಿದರೂ ಹೇಳಲೇಬೇಕು. ವಿಜ್ಞಾನದ ಬಗ್ಗೆ ಮಾತುನಾಡುವವರಲ್ಲಿ ಇಂದು ಎರಡು ಪಂಗಡಗಳಿವೆ. ಒಂದು ಸ್ವತಃ ವಿಜ್ಞಾನಿಗಳು, ಇನ್ನೊಂದು ವಿಜ್ಞಾನದ ವಕ್ತಾರರು. ಈ ಎರಡನೆಯ ಗುಂಪು ವಿಚಿತ್ರವಾದ ವಿಜ್ಞಾನಸಂಬಂಧೀ ಮೂಢನಂಬಿಕೆಗಳನ್ನು ಹೊತ್ತುತರುತ್ತಿದೆ. ಸ್ವತಃ ಎಷ್ಟೋ ವಿಜ್ಞಾನಿಗಳಿಗೆ ವಿಜ್ಞಾನವು ಪರಮಾರ್ಥತಃ ಭೌತವಾದೀ ಎಂದು ನಂಬಿಕೆಯಿಲ್ಲ. ಆದರೆ ವಿಜ್ಞಾನದ ವಕ್ತಾರರಿಗೆ ಇದೆ. ವಿಜ್ಞಾನವು ಮೂಲಭೂತವಾಗಿ ಆಧುನಿಕತೆಯೆಂಬ ಜಾಗತಿಕ ಪ್ರಕ್ರಿಯೆಯನ್ನು ಪೋಷಿಸಿಕೊಂಡೇ ಬೆಳೆಯಬೇಕೆಂದಾಗಲೀ, ವಿಜ್ಞಾನವನ್ನು ಒಪ್ಪುವವರು ಆಧುನಿಕರೇ(ಇದೂ ಒಂದು ಸಂಕೀರ್ಣವಾದ ಫೆನಾಮೆನಾ, ಅದರ ಎಲ್ಲ ಅರ್ಥಗಳನ್ನೂ ನಾನಿಲ್ಲಿ ಧ್ವನಿಸಿಲ್ಲ) ಆಗಬೇಕೆಂದಾಗಲೀ ಸ್ವತಃ ವಿಜ್ಞಾನಿಗೆ ಇಲ್ಲ. ಆದರೆ ವಿಜ್ಞಾನದ ವಕ್ತಾರರಿಗೆ ಈ ಧೋರಣೆಯಿದೆ. ವಿಜ್ಞಾನ ಸಮಸಮಾಜದ ಸೃಷ್ಟಿಗೆ ಕಂಕಣಬದ್ಧವಾಗೇನೂ ನಿಂತಿಲ್ಲ. ಆದರೆ ಹಾಗೆ ಕಾಣಿಸುವ ಪ್ರಯತ್ನ ಇಲ್ಲಿ ನಡೆದಿದೆ. ಮೂಲಭೂತವಾಗಿ ಈ ಲೇಖನದಲ್ಲಿ ವಿಜ್ಞಾನ-ವೈಜ್ಞಾನಿಕತೆ-ಆಧುನಿಕತೆ-ಸಮಸಮಾಜ ಇತ್ಯಾದಿ ಕಲ್ಪನೆಗಳನ್ನು ಸಮಾನಾಂತರವಾಗಿ ನೋಡಿರುವುದೇ ಒಂದು ಗೋಜಲಿನ ಸಂಗತಿಯಾಗಿದೆ. ಅಥವಾ ನಿಜವಾದ ಅರ್ಥದಲ್ಲಿ obscurantism ಎನ್ನದೇ ವಿಧಿಯಿಲ್ಲ.
ಇಂದು ಜಾಗತಿಕವಾಗಿ ಕಾಣಬರುತ್ತಿರುವ ರಾಷ್ಟ್ರೀಯವಾದದ ಉದಯ, ಸಾಂಸ್ಕೃತಿಕ ರಾಜಕಾರಣದ ವಿವಿಧ ಸನ್ನಿವೇಶಗಳು ಇತ್ಯಾದಿ ಪ್ರಕ್ರಿಯೆಗಳಿಗೂ ವೈಜ್ಞಾನಿಕತೆಯ ಅಭಾವ ಕಾರಣವೆಂಬುದು ಭ್ರಮೆಯಷ್ಟೇ. ಅಥವಾ ಈ ಮೂಲಭೂತವಾದಿಗಳು ರಾಜಕೀಯವಾಗಿ ಪ್ರಬಲರಾಗುತ್ತಿದ್ದಾರೆ ಆದ್ದರಿಂದ ಹೀಗಾಗುತ್ತಿದೆ ಎಂದುಕೊಂಡರೂ ನಮ್ಮ ಅಭಿಪ್ರಾಯ ಅರ್ಧಸತ್ಯವಷ್ಟೇ ಆಗುತ್ತದೆ. ಇದರಿಂದ ಇಷ್ಟು ಶತಮಾನಗಳ ವಿಜ್ಞಾನದ ಪ್ರಗತಿ, ವೈಜ್ಞಾನಿಕ ಮನೋಭಾವ ಎಲ್ಲವನ್ನೂ ಮೀರುವಷ್ಟು ಮೂಢನಂಬಿಕೆ ಬೆಳೆದಿದೆ ಎಂದಂತಾಗುತ್ತದೆ ಅಷ್ಟೇ. ಇದರಿಂದ ಪ್ರಕ್ರಿಯೆಯನ್ನಷ್ಟೇ ಹೇಳಿದಂತಾಗುತ್ತದೆ ಕ್ರಿಯಾತ್ತ್ವವನ್ನಲ್ಲ. ಇಡಿಯ ಪ್ರಪಂಚದಲ್ಲಿ ಪಶ್ಚಿಮದ ಎನ್‍ಲೈಟನ್‍ಮೆಂಟ್ ಪ್ರಾಜೆಕ್ಟ್ ವಿರುದ್ಧ ಇಷ್ಟು ದೊಡ್ಡ ಸಾವ್ರಜನಿಕ ಪ್ರತಿಕ್ರಿಯೆ ಹುಟ್ಟುವಲ್ಲಿ ತುಂಬ ಸಂಕೀರ್ಣ ಸಂಗತಿಗಳು ಕೆಲಸ ಮಾಡುತ್ತಿವೆ. ಇದರಲ್ಲಿ ಸ್ವತಃ ತನ್ನ ಅತಿಯಿಂದಲೇ ನಂಬಿಕೆಯನ್ನು ಕಳೆದುಕೊಂಡ ಎನ್‍ಲೈಟನ್‍ಮೆಂಟ್ ಪ್ರಾಜೆಕ್ಟ್‍ನಿಂದ ಹಿಡಿದು ಪಶ್ಚಿಮದ ಅಪಾಯಕಾರಿ ಬೌದ್ಧಿಕ ಮತ್ತು ರಾಜಕೀಯ ಸಾಮ್ರಾಜ್ಯಶಾಹಿತ್ವದವರೆಗೆ ನೂರಾರು ಸಂಗತಿಗಳಿವೆ. ಇದನ್ನು ಅಷ್ಟು ಸರಳಗೊಳಿಸಿ ನೋಡಬೇಡಿ.
ಲೇಖಕರು ಭಾರತದಂತಹ ದೇಶದಲ್ಲಿ ಶಿಕ್ಷಣವು ಸಾರ್ವತ್ರಿಕವಾಗಲಿಲ್ಲ ಎಂದು ಮರುಗುತ್ತಾರೆ. ಆ ಮರುಕ ನಮಗೂ ಇದೆ. ಆದರೆ ಶಿಕ್ಷಣವು ನಮಗಿಂತ ತುಂಬಾ ವ್ಯಾಪಕವಾಗಿ ಪಸರಿಸಿದ ದೇಶಗಳಲ್ಲೂ ತಾನು ಸಂಕಲ್ಪಿಸಿದ ಜೀವನಸ್ಥೈರ್ಯವನ್ನೇನೂ ಕೊಟ್ಟಂತೆ ಕಾಣುವುದಿಲ್ಲ. ಹಾಗಿಲ್ಲದಿದ್ದರೆ ಪ್ರಸ್ತುತ ಮಾದರಿಯ ಶಿಕ್ಷಣಕ್ಕೆ ವಿರುದ್ಧವಾಗಿ ಇಂದು ಆಂದೋಲನಗಳು ರೂಪುಗೊಳ್ಳಬೇಕಿರಲಿಲ್ಲ. ಶಿಕ್ಷಣವನ್ನು ಅಷ್ಟು ಕಟ್ಟುನಿಟ್ಟಾಗಿ ಕೊಡುವ ಸಂಕಲ್ಪ ಮಾಡಿದ ಅಮೆರಿಕಾ, ಯೂರೋಪುಗಳಲ್ಲೂ ಡ್ರಾಪ್ ಔಟುಗಳ ಸಂಖ್ಯೆ ವರ್ಷವರ್ಷಕ್ಕೆ ಏರುತ್ತಲೇ ಇದೆಯಷ್ಟೇ. ಭಾರತದಂತಹ ದೇಶಕ್ಕೆ ಆಧುನಿಕ ಶಿಕ್ಷಣ ಏನು ಕೊಟ್ಟಿತು, ಏನು ಕಿತ್ತುಕೊಂಡಿತು ಎಂಬುದರ ಆಡಿಟಿಂಗ್ ಕೂಡ ಆಗಬೇಕಿದೆ. ಇದಕ್ಕೆ ಜನರ ಮೌಢ್ಯವನ್ನೋ, ‘ಮೂಲಭೂತವಾದಿಗಳು’ ಎಂದು ಲೇಬಲ್ ಮಾಡಿಟ್ಟಿರುವ ಕೆಲವು ಗುಂಪುಗಳನ್ನೋ ದೂರುವುದು ಪರಿಹಾರವಾಗಿ ಉಳಿದಿಲ್ಲ. ಅದರಿಂದ ಇನ್ನಷ್ಟು ರಾಜಕೀಯ ಗೊಂದಲಗಳನ್ನು ಸೃಷ್ಟಿಸಬಹುದಷ್ಟೇ. ಶಿಕ್ಷಣದ ಮೂಲಭೂತ ಪ್ರಕ್ರಿಯೆಯಲ್ಲಿ ನಾವು ಮರೆತ ಎಷ್ಟೋ ಸಂಗತಿಗಳಿದ್ದಾವಲ್ಲ, ಅವನ್ನು ಪುನಃ ಪ್ರತಿಷ್ಠಾಪಿಸಬೇಕಲ್ಲವೇ?
ಇತಿಹಾಸವನ್ನು ಮರೆಯಲು ನಮಗೆ ಏನೋ ಅಳುಕು ಎನ್ನುತ್ತಾರೆ ಲೇಖಕರು. ಇದು ನಿಜ. ಆದರೆ ಇದಕ್ಕೆ ಕಾರಣ ಲೇಖಕರು ಗುರುತಿಸಿದಂತೆ ಸಂಪೂರ್ಣ ಆಧುನಿಕರಾಗಲು ಹೆದರಿ ಹಾಗೆ ನಾಡೆದುಕೊಳ್ಳುತ್ತಾರೆ ಜನ ಎಂದುಕೊಳ್ಳುವುದು ಮತ್ತದೇ ತೇಲಿಕೆಯ ವಾದವಾಗುತ್ತದೆ. ಇತಿಹಾಸವು ಹಲವು ಸಂಕೀರ್ಣ ಸಂಗತಿಗಳನ್ನೂ, ಪ್ರತಿಮೆಗಳನ್ನೂ ಸಮಾಜಕ್ಕೆ ನಿರಂತರವಾಗಿ ನೀಡುತ್ತ ಬರುತ್ತಿರುತ್ತದೆ. ಈ ಎಲ್ಲ ಸಂಗತಿಗಳಿಗೆ ಅದರದೇ ಆದ ಪ್ರಾಮುಖ್ಯ ಮತ್ತು ಪ್ರಾಬಲ್ಯಗಳು ಆಯಾ ಸಮಾಜಗಳಲ್ಲಿರುತ್ತದೆ. ಅದು ವಿಜ್ಞಾನಿಯೊಬ್ಬನಿಗೆ ಅಪಸವ್ಯದ ಸಂಗತಿಯಾಗಿಬಿಟ್ಟರೆ ಅಲ್ಲಿ ಸಮಾಜಕ್ಕೂ ಆತನ ವಿಜ್ಞಾನಕ್ಕೂ ದೊಡ್ಡ ಕಂದಕವೇರ್ಪಟ್ಟಂತೆ. ಈ ಕಂದಕ ನಮ್ಮ ಮುಂದಿದೆ. ಇದನ್ನು ತುಂಬಬೇಕಾಗಿರುವುದು ಯಾರು? ಇದಕ್ಕೆ ವಿಜ್ಞಾನಿಗಳ ಮೇಲೆ, ವೈಜ್ಞಾನಿಕತೆಯ ಮೇಲೆ ದಾಳಿಯಾಗುತ್ತಿದೆ ಎಂದೆಲ್ಲಾ ರಾಜಕೀಯಗೊಳಿಸಲು ಹೋಗುವುದು ನಿಜವಾದ obscurantism . ಸತ್ಯ ಗೊತ್ತಿದ್ದೂ ಮುಚ್ಚಿಡುವುದೇ ಅಲ್ಲವೇ ನಿಜವಾದ obscurantism !
ಇಂತಹ ಇನ್ನೂ ಅನೇಕ ಸಂಗತಿಗಳಿವೆ. ಇಲ್ಲಿ ಎಲ್ಲವನ್ನೂ ಏಕಮುಖವಾಗಿ ನೋಡಲು ಪ್ರಯತ್ನಿಸಲಾಗಿದೆ. ಇನ್ನು ಜಾತಿವಿನಾಶಕ್ಕೂ ವಿಜ್ಞಾನಕ್ಕೂ ತಳುಕು ಹಾಕಿದ್ದಾಗಲೀ, ವಿಜ್ಞಾನಕ್ಕೆ ಸಮಸಮಾಜದ ಸೃಷ್ಟಿಯ ಜವಾಬ್ದಾರಿಯನ್ನು ವಹಿಸಿದ್ದಾಗಲೀ ಒಂದು ಕಾಲದಲ್ಲಿ ರಿಲಿಜನ್ನಿಗೆ ಭೂಮಿಯ ಮೇಲೆ ದೇವಸಾಮ್ರಾಜ್ಯವನ್ನು ಸೃಷ್ಟಿಸಲು ಕೊಟ್ಟ ಲೈಸೆನ್ಸಿನಷ್ಟೇ ಭಯಂಕರ ಯುಟೋಪಿಯಾ ಮಾತ್ರ. ಇದ್ಯಾವುದನ್ನೂ ಅರ್ಥಮಾಡಿಕೊಳ್ಳದೇ ವಿಜ್ಞಾನವನ್ನು ಕಾಪಾಡುವ ಮಹೋತ್ಸಾಹಮಾತ್ರರಾದರೆ ಗಾಂಧೀಜಿಯ ದೃಷ್ಟಿಕೋನ ತಿರೋಗಾಮಿಯಾಗಿ ಮಾತ್ರವೇ ಕಂಡುಬಿಡುತ್ತದೆ.
ಕಡೆಯದಾಗಿ ಇಷ್ಟೆಲ್ಲಾ ಹೇಳಿದ್ದು ಯಾರು ಏನು ಬೇಕಾದರೂ ಹೇಳಿಕೆಗಳನ್ನು ಕೊಡಲಿ ಅದನ್ನು ಸಮರ್ಥಿಸಬೇಕೆಂದಲ್ಲ. ಕಡೆಗೆ ವಿಜ್ಞಾನದ ವಕ್ತಾರರಿಗೂ ಬೇಕಿರುವುದು ಸ್ವಸ್ಥಸಮಾಜವಷ್ಟೇ ಎಂದಾದಲ್ಲಿ ಈ ಇಡಿಯ ಪ್ರಕ್ರಿಯೆ ಅರ್ಥವಾಗಲು ಸಮಾಜವನ್ನು ಸ್ವಲ್ಪ ಆಳವಾದ ಸಹಾನುಭೂತಿಯಿಂದ ನೋಡಬೇಕಾಗುತ್ತದೆ. ಹೀಗೆ ನೋಡಲು ಅಸಮರ್ಥರಾಗಿದ್ದೇ ಇಂದು ಜಗತ್ತಿನೆಲ್ಲೆಡೆ ಉದಾರವಾದಿಗಳು ಅಪ್ರಸ್ತುತರಾಗುತ್ತಿರುವುದಕ್ಕೆ ಕಾರಣ. ಸಮಾಜದ ಸಂಕೀರ್ಣ ಸಂರಚನೆಯಲ್ಲಿ ಸಾಂಸ್ಕೃತಿಕ ಸಂಗತಿಗಳ ಸ್ಥಾನಮಾನದ ಬಗ್ಗೆ ಇನ್ನೂ ಗಂಭೀರವಾದ ಅಧ್ಯಯನಗಳು ಆಗಬೇಕಿದೆ. ಜೊತೆಗೆ ಅವು ಸಮಾಜವನ್ನು ಕಟಕಟೆಗೆ ನಿಲ್ಲಿಸುವ ಪ್ರಯತ್ನಗಳಷ್ಟೇ ಆಗದೆ ಅದರೊಂದಿಗೆ ಸಹಾನುಭೂತಿಯಿಂದ ನಡೆಯಬೇಕಿದೆ. ಸಮಾಜಕ್ಕೆ truth ಗಿಂತ ಹತ್ತಿರದ ಸಂಗತಿ good and beauty ಎಂಬುದು ನಮಗೆ ನೆನಪಿರಬೇಕಷ್ಟೇ. ಜೊತೆಜೊತೆಗೆ ವಿಜ್ಞಾನದ ಆತ್ಮವಿಮರ್ಶೆಯೂ ಆಗಬೇಕಿದೆ. ಈ ಬಗೆಯ obscurantism ಧೋರಣೆಯಿಂದ ಅಷ್ಟೇನೂ ಪ್ರಯೋಜನವಿಲ್ಲವಷ್ಟೇ.
ಹುಟ್ಟಿದ್ದು ತುಮಕೂರಿನ ಬಳಿಯ ಹಾಗಲವಾಡಿಯಲ್ಲಿ (1988) . ಕಾಲೇಜು ವಿದ್ಯಾಸಕ್ಕೆಂದು ತುಮಕೂರು ಸೇರಿದ್ದು . ವಿದ್ಯಾಭ್ಯಾಸ ಕಾಲದಿಂದಲೂ ಸಂಸ್ಕೃತಿ , ಆಧ್ಯಾತ್ಮಗಳ ಸೆಳೆತ . ತುಮಕೂರು , ಹುಬ್ಬಳ್ಳಿಗಳ ಕೆಲ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಪ್ರ್ರಾರಂಭವಾದ ಈ ಹುಡುಕಾಟ , ಅದೇ ಜಾಡನ್ನು ಹಿಡಿದು ಮುಂದೆ ಉತ್ತರ ಭಾರತದ ಹಲವು ಪರಂಪರೆಯೊಂದಿಗೂ ಬೆರೆತು ಬೆಳೆದು , ಸಂಸ್ಕೃತ ಭಾಷೆ ಮತ್ತು ಭಾರತೀಯ ಶಾಸ್ತ್ರ ಪರಂಪರೆಯ ಅನುಸಂಧಾನ ಮಾರ್ಗಕ್ಕೂ ಎಡೆಮಾಡಿಕೊಟ್ಟಿತು . ಪ್ರಸ್ತುತ ಸಂಸ್ಕೃತ ಅಧ್ಯಾಪಕರಾಗಿ , ಭಾರತೀಯ ಸಂಸ್ಕೃತಿಯ ಸಂಶೋಧಕ ವಿಧ್ಯಾರ್ಥಿಯಾಗಿ ದುಡಿಯುತ್ತಾ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ . ಛಂದ ಪುಸ್ತಕ ಪ್ರಕಟಿಸಿರುವ ಕಾದಂಬರಿ “ನ್ಯಾಸ” ಇವರ ಮೊದಲ ಕೃತಿ .
ಅಂತು ಈ ಲೇಖನದ ಮೂಲಕ ಹರೀಶ್ ಹಾಗಲವಾಡಿಯವರು ಚರ್ಚೆಯ, ವಿಷಯದ ದಿಕ್ಕನ್ನು ತಪ್ಪಿಸಿಬಿಟ್ಟರು. ಶಿವ ಮತ್ತು ಸೌಂದರ್ಯವನ್ನು ಎಳೆದು ತಂದು ತಮ್ಮ ದೊಡ್ಡ ದೊಡ್ಡ ಪದಗಳ ಜೊತೆಗಿಟ್ಟು ಪ್ರಹಾರ ನಡೆಸಿದರು. ಈ ಮೂಲಕ ಗೊಡ್ಡುತನ , ಜಾತಿವಿನಾಶ, ವೇಮುಲನಾ ವಿಷಯಗಳನ್ನು ಮುಚ್ಚಿಹಾಕಿದರು. ರಾಜಕಾರಣಿಗಳು ತಮ್ಮ ಅವೈಜ್ಞಾನಿಕ ಹೇಳಿಕೆಗಳಿಂದ ಇದನ್ನೇ ಮಾಡುತ್ತಾರೆ ನೋಡಿ. Good and beauty ನಿಮಗೆ ಒಳಿತು ಮಾಡಲಿ!
ಚರ್ಚೆ ದಾರಿತಪ್ಪಿದ್ದೆಲ್ಲಿ ಎನಿಸುತ್ತದೆಯೋ ದಯವಿಟ್ಟು ನೀವೂ ಬರೆಯಿರಿ. ವಿಜ್ಞಾನ-ವೇಮುಲ ಬಾದರಾಯಣ ಸಂಬಂಧವನ್ನು ನಾವೂ ಅರಿಯುವ, ತಪ್ಪೇನಿಲ್ಲ. ಚರ್ಚೆಯನ್ನೇ ತಳ್ಳಿಹಾಕುವುದು ಅಷ್ಟೇನೂ ಒಳ್ಳೆಯದಲ್ಲ.
Harish, I think your thinking is on track, yes it is very puzzling when Scientists take ideological route, when talking about society. I think you should continue to be critical of such views which you have criticized.
Don’t bother about the moral comments people make.
Pingback: ತೇಜಲ್ ಕನಿಟ್ಕರ್ ಲೇಖನ ಕುರಿತಾಗಿ ಹರೀಶ ಹಾಗಲವಾಡಿ ಮಾತುಗಳಿಗೆ ಪ್ರತಿಕ್ರಿಯೆ : ಸುಬ್ರಮಣ್ಯ ಹೆಗಡೆ – ಋತುಮಾನ