ಬಾಬಾ ಸಾಹೇಬರು ಮತ್ತು ಕಲೆ

ಇದು ನನಗೆ ನಾನೆ ಬರೆದುಕೊಂಡಿರುವ ಶುಭಾಶಯ ಪತ್ರ! ನಿಮಗೂ ತೆರೆದಿಟ್ಟಿದ್ದೇನೆ ಅಷ್ಟೇ.

Being is always becoming. ಇದು ಬುದ್ಧನ ಮಾತು. ಮನುಷ್ಯನ ಇರುವಿಕೆಯು ರೂಪಾಂತರ ತತ್ವದೊಂದಿಗೆ ಬೆಸೆದುಕೊಂಡಿದೆ.ಅಂದರೆ ಮನುಷ್ಯ ಅನ್ನುವುದು ಇರುವ ಸ್ಥಿತಿಯಲ್ಲ ಬದಲಾಗಿ ಅದು ಆಗುವ ಪ್ರಕ್ರಿಯೆ ಸದಾ ಜಂಗಮವಾದ್ದು,ಚಲನಶೀಲವಾದ್ದು.ಬುದ್ದ ಇದನ್ನು ಬದುಕಿನ ಮೂಲತತ್ವವಾಗಿ ಬೋಧಿಸಿದ. ರೂಪಾಂತರ ಅನ್ನುವುದು ಬದುಕಿನ ಮೂಲತತ್ವವಾದ್ದರಿಂದ ಕಲೆಯ ಮೂಲತತ್ವವೂ ಕೂಡ ಅದುವೆ. ಅದು ಮನುಷ್ಯ ಘನತೆಯ ಕಡೆಗೆ, ಅರಿವಿನ ಕಡೆಗೆ ಚಲಿಸುವ ಪ್ರಕ್ರಿಯೆ. ಬಾಬಾ ಸಾಹೇಬ ಅಂಬೇಡ್ಕರರು ತಮ್ಮ ಬದುಕಿನುದ್ದಕ್ಕೂ ತಮ್ಮ ಬರವಣಿಗೆ,ಭಾಷಣ,ರಾಜಕಾರಣ ,ಸಾಮಾಜಿಕ ಹೋರಾಟ, ಪತ್ರಿಕೆ,ಬೌದ್ದಧರ್ಮ ಮತಾಂತರ, ಪ್ರಚಾರ ಈ ಎಲ್ಲವೂಗಳ ಮೂಲಕ ಬೋಧಿಸಿದ್ದು ಮತ್ತು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದು,ಇದೇ ಚಲನಶೀಲ ರೂಪಾಂತರ ತತ್ವಗಳನ್ನು ಅನ್ನುವುದು ನ್ನನ್ನ ಆಳದ ಭಾವನೆ. ಭಾರತದ ಸಂವಿಧಾನ ಕೂಡ ಅವರ ಈ ಪ್ರಯೋಗದ ಭಾಗವೇ ಆಗಿದೆ.

ಕಲೆಯ ವಿಷಯಕ್ಕೆ ಬಂದಾಗ ನಾವು ಪದೆ ಪದೆ ಹೇಳುತ್ತೇವೆ ಒಂದು ಮಾತು,ಕಾವ್ಯ,ನಟನೆ, ಸಂಗೀತ ಕೇಳುಗನ ನೋಡುಗನ ಎದೆಗೆ ನಾಟಬೇಕು,ಮುಟ್ಟಬೇಕು ,ತಾಕಬೇಕು ಆ ಮೂಲಕ ಆತ ರೂಪಾಂತರವಾಗಬೇಕೆಂದು ಪ್ರತಿಯೊಬ್ಬ ಕಲಾವಿದನೂ ಬಯಸುತ್ತಾನೆ.ಆದರೆ ಭಾರತ ಮುಟ್ಟಿಸಿಕೊಳ್ಳಲು ಬಯಸದ ದೇಶ. ಇಲ್ಲಿ ಅಸ್ಪೃಷ್ಯತೆ ಈಗಲೂ ಚಾಲ್ತಿಯಲ್ಲಿದೆ.ಇಲ್ಲಿ ಮುಟ್ಟುವ ಕುರಿತು, ಮುಟ್ಟಿಸಿಕೊಳ್ಳುವ ಕುರಿತು ಕ್ರೂರ ಲಿಖಿತ ಮತ್ತು ಅಲಿಖಿತ ನಿಯಮಗಳಿವೆ. ಯಾರ ಮಾತನ್ನು ಕೇಳಬೇಕು, ಯಾರ ಹಾಡನ್ನು ಕೇಳಬೇಕು, ಯಾರಿಗೆ ತಲೆದೂಗಬೇಕು,ಯಾರಿಗೆ ತಲೆ ತೂಗಬಾರದು ಹೀಗೆ ಹಲವಾರು ನಿಯಮಗಳಿವೆ ಭಾರತದಲ್ಲಿ ಬದುಕಿರುವ ಪ್ರತಿಯೊಬ್ಬರಿಗೂ ಇದು ಅರಿವಿಗೆ ಬಂದಿರುತ್ತದೆ. ಸೃಜನಶೀಲನೊಬ್ಬನಿಗೆ ರೂಪಾಂತರವೇ ಮುಖ್ಯವಾಗಿ ಆ ಮೂಲಕ ಬಿಡುಗಡೆಯೇ ಗುರಿಯಾದಾಗ ಆತ ಆ ದಾರಿಗೆ ಅಡ್ಡವಾಗಿರುವ ನಿಯಮಗಳನ್ನು ಮುರಿಯಲು ಹಿಂಜರಿಯಬಾರದು , ಹಿಂಜರಿಯುವವನಲ್ಲ.

‘ಮಹಾಡ್; ದಿ ಮೆಕಿಂಗ್ ಆಫ್ ದಿ ಫಸ್ಟ್ ದಲಿತ್ ರಿವೊಲ್ಟ್” ಪುಸ್ತಕದಲ್ಲಿ ನಮ್ಮ ಕಾಲದ ಬಹುಮುಖ್ಯ ಚಿಂತಕರಾದ, (ಮಾನವೀಯ ಹಕ್ಕುಗಳ ಹೋರಾಟದ ಕಾರಣದಿಂದಲೇ ಈ ಕ್ಷಣಕ್ಕೂ ಆಳುತ್ತಿರುವ ಸರ್ಕಾರದಿಂದ ಹಿಂಸೆ ಅನುಭವಿಸುತ್ತಿರುವ) ಆನಂದ್ ತೇಲ್ತುಂಬ್ಡೆ ಹೀಗೆ ಬರೆಯುತ್ತಾರೆ. “1927ರ ಮಾರ್ಚ್ 20 ಅಸ್ಪೃಷ್ಯ ಸಮುದಾಯದ ಜೊತೆ ಚವ್ಡಾರ್ ಕೆರೆಯತ್ತ ಹೆಜ್ಜೆ ಹಾಕಿದ ಬಾಬಾ ಸಾಹೇಬ್ ಅಂಬೇಡ್ಕರರು ಬೊಗಸೆಯಲ್ಲಿ ಕೆರೆಯ ಸಿಹಿನೀರು ಕುಡಿದರು ಸಾವಿರಾರು ವರ್ಷಗಳಿಂದ ಮರೆತು ಹೋಗಿದ್ದ ಇಂಡಿಯಾದ ಚರಿತ್ರೆ ಇದ್ದಕ್ಕಿದ್ದಂತೆ ಚಲಿಸಿತ್ತು” (ಹೀಗೆ ಇಂಡಿಯಾದ ಹಲವು ಚಾರಿತ್ರಿಕ ಚಲನೆಗಳಿಗೆ ಕಾರಣರಾದವರು ಬಾಬಾ ಸಾಹೇಬರು) ಇದಾದ ಮೇಲೆ ಹತ್ತು ವರ್ಷಗಳ ಕಾಲ ಬಾಬಾ ಸಾಹೇಬರು ಚೌವ್ಡಾರ್ ಕೆರೆಯ ನೀರಿಗಾಗಿ ಯೇಗಬೇಕಾಯಿತು! ಕೊಲೆ ಬೆದರಿಕೆಯನ್ನು ಎದುರಿಸಬೇಕಾಯಿತು.ಸದಾ ಕೊಳೆತ ಸ್ಥಿತಿಯಲ್ಲೆ ಇರಲು ಬಯಸುವ ಜಡತ್ವನ್ನು ಮುಟ್ಟಿ ಚಲಿಸಿವಂತೆ ಮಾಡುವುದು ಅಷ್ಟು ಸುಲಭವಲ್ಲ.! ಈ ಮಹಾಡ್ ಹೋರಾಟದ ಭಾಗವಾಗಿಯೆ ಬಾಬಾ ಸಾಹೇಬರು ಮನುಸ್ಮೃತಿಯನ್ನು ಸುಟ್ಟರು.

Image courtesy Siddesh Gautam

ಬಿಡುಗಡೆ ಬಯಸುವ ಯಾವುದೇ ಚೈತನ್ಯವು ದಂಗೆ ಏಳುತ್ತದೆ ,ಇದು ಬಹಳ ಸಹಜವಾದ ಪ್ರಕ್ರಿಯೆ.ಮನುಷ್ಯ ಘನತೆಯ ನಿರಾಕರಣೆ ತನ್ನ ಮೇಲು ತನ್ನ ಸುತ್ತಲಿನವರ ಮೇಲೂ ಧರ್ಮ, ಶಾಸ್ತ್ರ, ಸಂಸ್ಕೃತಿ ಹೆಸರಿನಲ್ಲಿ ನಡೆಯುವುದನ್ನು ಗಮನಿಸುವ ಯಾವುದೇ ಚೈತನ್ಯವೂ ಅದನ್ನು ವಿರೋಧಿಸದೆ ಇರಲಾರದು. ಅದು ದಂಗೆ ಏಳುತ್ತದೆ ಮತ್ತದು ಹಲವು ಸ್ವರೂಪಗಳನ್ನು ಪಡೆಯುತ್ತದೆ.ಅವಿಧೇಯತೆಯೂ ಅದರ ಒಂದು ಗುಣ ಮತ್ತು ಅಭಿವ್ಯಕ್ತಿ. ಈ ಅವಿಧೇಯ ಬಂಡುಕೋರತನ,ಸ್ವತಂತ್ರ ಮತ್ತು ಹೊಸ ಸೃಷ್ಠಿ ಬಯಸುವ ಚೈತನ್ಯದ,ಸತ್ವದ ಸಹಜ ರೂಪ. ಅದು ದಂಗೆ ಏಳದೇಹೋದರೆ ಅದು ಗುಲಾಮತನಕ್ಕೆ ಒಗ್ಗಿ ಹೋಗಿದೆ,ಸತ್ವಹೀನವಾಗಿದೆಯೆಂದೇ ಅರ್ಥ. ಸತ್ವಹೀನತೆಯು ಕಲಾಸೃಷ್ಠಿಯನ್ನು ಮಾಡಲಾರದು ಮತ್ತದು ಜೀವಂತಿಕೆಯಿಂದ ಬಹಳ ದೂರ ಉಳಿದು ಘನತೆಯನ್ನು ಕಳೆದುಕೊಂಡು ಜಡವಾಗಿಬಿಡುತ್ತದೆ. ಘನತೆಗಾಗಿ, ಬಿಡುಗಡೆಗಾಗಿ ದಂಗೆ ಎದ್ದ ಚೈತನ್ಯವನ್ನು,ಸತ್ವವನ್ನು ಬಾಬಾ ಸಾಹೇಬರು ಬಹಳ ಹದವಾಗಿ ಪಳಗಿಸಿಕೊಂಡಿದ್ದರು. ಮಹಾನ್ ವಿದ್ವಾಂಸರಾಗಿ ರೂಪುಗೊಂಡರು.ಬುದ್ದ ಗುರುವಿನ “ಪ್ರಜ್ಞಾ’ ಮತ್ತು “ಕರುಣಾ” ಸೂತ್ರದಲ್ಲಿ ಪಾಕಗೊಂಡು ದಕ್ಕಿದ ಹದಗೊಂಡ ಸಂಯೋಗವಾದರು.ಅದಕ್ಕೆ ಹಿಂಸೆಯ ಅಹಿಂಸೆಯ ಸ್ಪಷ್ಟ ಅರಿವಿತ್ತು. ಇತ್ತೀಚೆಗೆ ಕ್ಯಾರವಾನ್ ಪತ್ರಿಕೆಯ ಸಂದರ್ಶನವೊಂದರಲ್ಲಿ ಪ್ರೊಫೆಸರ್ ಐಶ್ವರಿಕುಮಾರ್ ಹೇಗೆ ಹೇಳುತ್ತಾರೆ. “Ambedkar is a constituonalist only because he is a revolutionary”

ಬಾಬಾ ಸಾಹೇಬರು ಗುಲಾಮತನವನ್ನು ಬಯಸುವ ಧರ್ಮ, ಸಂಸ್ಕೃತಿ, ವ್ಯಕ್ತಿ, ಅಧಿಕಾರ ಇಂತವುಗಳಿಗೆ ಸದಾ ಅವಿಧೇಯರಾಗಿಯೇ ಉಳಿದರು. ಜಾತ್ ಪತ್ ತೋಡಕ್ ಮಂಡಳಿಯವರಿಗೆ “ಜಾತಿವಿನಾಶ” ಉಲ್ಲೇಖಿಸಿದ್ದ ಒಂದಷ್ಟು ಪಠ್ಯವನ್ನು ತೆಗೆದು ಹಾಕಿ ಭಾಷಣ ಮಾಡಲಾರೆನೆಂದು ನಿರಾಕರದ್ದು, ಗಾಂಧಿ ಮತ್ತು ಕಾಂಗ್ರೇಸ್ ಜೊತೆಗಿನ ಜಗಳ, ಹಿಂದೂ ಕೋಡ್ ಬಿಲ್ ಪಾಸ್ ಆಗದಂತೆ ತಡೆದಾಗ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇವೆಲ್ಲವು ನ್ಯಾಯವನ್ನು ಚಲನಶೀಲತೆಯನ್ನು,ರೂಪಾಂತರವನ್ನು ಬಯಸುವ ಚೈತನ್ಯವು ಅನ್ಯಾಯದ ವಿರುದ್ದ,ಸ್ತಗಿತತೆಯ ವಿರುದ್ಧ ತೋರಿದ ಅವಿಧೇಯತೆ. ಇದಕ್ಕಾಗಿ ಅವರು ನೊಂದ ನೋವು ಅಷ್ಡಿಷ್ಟಲ್ಲ. ಹಿಂದೂ ಕೋಡ್ ಬಿಲ್ ಮಂಡನೆಯ ಹೊತ್ತಿಗಂತೂ ಸಂಸತ್ತಿನ ಹೊರಗೆ ಅದನ್ನು ವಿರೋಧಿಸಿ ಘೋಷಣೆಗಳು,ಧರಣಿಗಳು ನಡೆದವು, ಕೊಲ್ಲುವ ಬೆದರಿಕೆಗಳು ಬಂದವು, ಹಿಂದೂ ಕೋಡ್ ಬಿಲ್ ನಲ್ಲಿ ಅಣ್ಣನೊಂದಿಗೆ ತಂಗಿಗೆ ಮದುವೆಯಾಗುವ ಅವಕಾಶವಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಕೆಲವರಂತು ಅಂಬೇಡ್ಕರರು ಅಸ್ಪೃಷ್ಯರು ಆದ ಕಾರಣಕ್ಕೆ ಅವರು ಮಂಡಿಸುವ ಬಿಲ್ ಅನ್ನು ಒಪ್ಪಬಾರದು ಎಂದು ವಿರೋಧಿಸಿತ್ತಿದ್ದರು. ಅಸ್ಪೃಷ್ಯನನ್ನು ಆತ ಜ್ಞಾನವಂತನಾಗಿದ್ದರೂ ಗುರುವಾಗಿ ಒಪ್ಪಬಾರದೆಂಬ ಖಾಯಿಲೆ ಗತಕಾಲದಿಂದಲೂ ಭಾರತಕ್ಕೆ ಇದೆಯಲ್ಲ. ಭಾರತ ಬಾಬಾ ಸಾಹೇಬರನ್ನು ಗುರುವಾಗಿ ಇಂದಿಗೂ ಒಪ್ಪದಿರಲು ಈ ರೋಗಾಣುವಿನ ಪಾಲು ದೊಡ್ಡದಿದೆ. ಆದರೆ ಅರಿವೆನ್ನುವುದು ಕಾಲಾತೀತವಾದ್ದು ದೇಶಾತೀತವಾದ್ದು ಅದು ಜಾಗ ಮಾಡಿಕೊಂಡು ಹರಿದೇ ತೀರುತ್ತದೆ.ಇವತ್ತು ಇಂಡಿಯಾವಷ್ಟೇ ಅಲ್ಲ ಜಗತ್ತಿನಾದ್ಯಂತ ಬಾಬಾ ಸಾಹೇಬ್ ಅಂಬೇಡ್ಕರರು ತಮ್ಮ ವಿದ್ವತ್ತಿನ ಕಾರಣದಿಂದ ಮತ್ತು ಮನುಷ್ಯ ಘನತೆಯನ್ನು ಎತ್ತಿ ಹಿಡಿಯಲು ಅವರು ಜೀವಮಾನವಿಡಿ ರೂಪಿಸಿದ ಅರಿವಿನ ಕಾರಣದಿಂದ ಒಂದು ಜನಪದವಾಗಿ ಎಲ್ಲೆಡೆಯು ದನಿಯಾಗಿದ್ದಾರೆ. ಇದಕ್ಕೆ ಅನುವಾಗುವಂತೆ ಜಾಗತಿಕ ಒತ್ತಡವೊಂದು ಈ ಕಾಲಘಟ್ಟದಲ್ಲಿ ಸೃಷ್ಠಿಯಾಗಿದೆ ಮುಖ್ಯವಾಗಿ ಎಲ್ಲೆಡೆ ಯುವ ಸಮೂಹ ಅಂಬೇಡ್ಕರರ ಅರಿವನ್ನು ತಮ್ಮ ಪ್ರಜ್ಞೆಯ ಭಾಗವಾಗಿಸಿಕೊಳ್ಳುತ್ತಿದ್ದಾರೆ.

ಕಲೆಯ ಆತ್ಯಂತಿಕತೆಯ ಬಗ್ಗೆ ಹಲವರು ಹಲವು ಬಗೆಯ ಮಾತುನಾಡುತ್ತಾರೆ. ಆದರದು ಮೂಲಭೂತವಾಗಿ ಪ್ರಜ್ಞೆಯ ಉನ್ನತಿಯ ಮೂಲಕ ಅರಿವನ್ನು ವಿಸ್ತರಿಸಿಕೊಂಡು ಬಿಡುಗಡೆಯ ದಾರಿಯನ್ನೆ ಹಿಡಿಯುತ್ತದೆ. ಈ ದಾರಿಯಲ್ಲಿ ಒಳ ಮತ್ತು ಹೊರಗಣ್ಣುಗಳನ್ನು ಆರೋಗ್ಯಪೂರ್ಣವಾಗಿರಿಸಿಕೊಂಡು ಒಂದು ಸತ್ವಪೂರ್ಣ ಚೈತನ್ಯವನ್ನು ಸಾಧಿಕೊಳ್ಳುತ್ತದೆ. ಈ ಸೃಜನಶೀಲ ದಾರಿಯಲ್ಲಿ ಬರುವ ಅಡೆತಡೆಗಳಿಗೇನು ಕಡಿಮೆಯೇ? ದೇಹದ, ಜಾತಿಯ, ಧರ್ಮದ , ಲಿಂಗದ ,ಭಾಷೆಯ, ಇನ್ನು ಹೀಗೆ ಸೇರಿಕೊಳ್ಳುತ್ತಲೇ ಹೋಗುತ್ತವೆ. ಹೀಗೆ ಬಿಡುಗಡೆಗೆ ಇರುವ ಹಲವು ಅಡೆ ತಡೆಗಳನ್ನೆ ಬಾಬಾ ಸಾಹೇಬರು ಭಾರತದ ಮೈ ಮನಸ್ಸಿನಿಂದ, ಪ್ರಜ್ಞೆಯಿಂದ ತೊಡೆಯಲು ಹವಣಿಸಿದ್ದು. ಇಡೀ ಅಂಬೇಡ್ಕರರ ಚಿಂತನೆಯ ದಿಕ್ಕು ಇರುವುದು ಬಿಡುಗೆಡೆಯ ಕುರಿತೇ. ಹೇಳಿ ಕೇಳಿ ಬಾಬಾ ಸಾಹೇಬರು ಮಹತ್ವಾಕಾಂಕ್ಷೆಯ ಮನುಷ್ಯ ಅವರು ಬಯಸಿದ್ದು ಭಾರತದ ಮಹಾರೂಪಾಂತರವನ್ನು ಆದರದನ್ನು ಸಾಧಿಸಿಕೊಳ್ಳಲು ಭಾರತ ಇನ್ನೂ ಒದ್ದಾಡುತ್ತಿದೆ. ಅನ್ನ, ನೀರು, ನೆರಳು, ಪ್ರೀತಿ ,ಕಲಿಕೆ ಮನುಷ್ಯ ಕುಲದ ಉಳಿವಿಗೆ ತೀರ ಅನಿವಾರ್ಯವಾದ ಅತ್ಯತೆಗಳು. ಇದು ಎಲ್ಲರಿಗೂ ಸಿಗಬೇಕಾದ್ದು ನಿಜವಾದ ಜೀವಧರ್ಮ ಮತ್ತು ಲೋಕಧರ್ಮ. ಅಂತಯೇ ಮನುಷ್ಯಕುಲದ ಕೇಡು ಮತ್ತು ಕ್ರೌರ್ಯ ಅಡಗಿರುವುದು ಈ ಮೇಲಿನವುಗಳು ಎಲ್ಲರಿಗು ಸಿಗದಂತೆ ನೋಡಿಕೊಳ್ಳುವುದರಲ್ಲಿ ಮತ್ತು ಇವುಗಳನ್ನು ನಿರಾಕರಿಸಲು ಜಾತಿ, ಸಂಸ್ಕೃತಿ ,ಪಾವಿತ್ರ್ಯತೆ ಇಂತಹ ಕೈಗೆ ಸಿಗದ ಐಡಿಯಾಗಳನ್ನು ಅಸ್ತ್ರಗಳಾಗಿ ಬಳಸುವುದರಲ್ಲಿ.ಈ ಅಸ್ತ್ರಗಳು ಮಾಡಿದ ಕೇಡನ್ನು ತೊಡೆಯಲು ಬಾಬಾಸಾಹೇಬರು ಪಟ್ಟ ಪಾಡು ಅಷ್ಟಿಷ್ಟಲ್ಲ! ಇಡೀ ನೆಲದ ಕೊಳೆಯನ್ನು ಒಂಟಿ ಎರೆಹುಳುವೊಂದು ತೊಳೆಯಲು ಸಾಧ್ಯವೇ..

ಬಾಬಾ ಸಾಹೇಬರು 1954ರಲ್ಲಿ ತಮ್ಮ ಜೀವನ ತತ್ವಜ್ಞಾನದ ಬಗ್ಗೆ ತಮ್ಮ ಭಾಷಣದಲ್ಲಿ “ಯಾವುದು ನನ್ನ ಜೀವನದ ತತ್ವಜ್ಞಾನವಾಗಿದೇಯೋ ಅದು ಮೂರು ಶಬ್ಧಗಳಲ್ಲಿ ಅಡಗಿದೆ ಅವುಗಳೆಂದರೆ ಸ್ವಾತಂತ್ರ್ಯ, ಸಮಾನತೆ, ಹಾಗೂ ಸಹಭಾವ (Liberty, Equality ,Fraternity ). ನನ್ನ ಜೀವನದ ತತ್ವಜ್ಞಾನ, ನಾನು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದ ತತ್ವಜ್ಞಾನ ಎಂದು ಯಾರೂ ಭಾವಿಸಬಾರದು. ನನ್ನ ತತ್ವಜ್ಞಾನದ ಮೂಲ ರಾಜಕಾರಣವಾಗಿರದೆ ಧರ್ಮದ ಮೂಲದ್ದಾಗಿದೆ. ನನ್ನ ಗುರುಗಳಾದ ಭಗವಾನ್ ಬುಧ್ದನ ಪ್ರಭಾವದಿಂದ ನಾನು ಈ ತತ್ವವನ್ನು ಸ್ವೀಕರಿಸಿದ್ದೇನೆ” ಅನ್ನುತ್ತಾರೆ. ಅಂತೆಯೆ ಬುದ್ದ ತತ್ವಗಳನ್ನೆ ಭಾರತ ಸಂವಿಧಾನದ ಮೂಲ ಆಶಯದ ಭಾಗವಾಗಿಸಿದ್ದಾರೆ. ಬುದ್ದನ ಸಂಘದಂತೆ ಇಡಿಯ ಭಾರತವು ಬದುಕಿ ಬಾಳಬೇಕೆನ್ನುವುದು ಬಾಬಾ ಸಾಹೇಬರ ಆಶಯವೂ ಆಗಿದ್ದಿತು.

ಜಪಾನಿನ ರೈತಸಂತ ಮಸನೋಬು ಫುಕೋಕ ಹೀಗೆ ಅನ್ನುತ್ತಾನೆ (The ultimate goal of forming is not growing of crops ,but the cultivation and perfection of human beings) “ಮನುಷ್ಯನ ಕಟ್ಟಕಡೆಯ ಗುರಿ ಬೆಳೆ ಬೆಳೆಯುವುದಲ್ಲ, ಆ ಮೂಲಕ ಮನುಷ್ಯನೇ ಬೆಳೆಯುವುದು ಮತ್ತು ಪಕ್ವವಾಗುತ್ತಾ ಹೋಗುವುದು”. ‘Cultivation of human mind should be the ultimate aim of human existence” ಅನ್ನುತ್ತಾರೆ ಬಾಬಾ ಸಾಹೇಬರು ಮಿಗಿಲಾಗಿ ನಾಗ್ಪುರದ ಭಾಷಣದಲ್ಲಿ “ ಸಾಮಾಜಿಕ ಹೋರಾಟ ನನ್ನ ಆಧ್ಯಾತ್ಮಿಕ ದಾರಿ” ಅನ್ನುತ್ತಾರೆ. ಕಲೆಯ ಆತ್ಯಂತಿಕತೆಯು ಇದೇ ದಾರಿಯದು ಎಂದು ಭಾವಿಸುವುವನು ನಾನು.

ಈ ದಿಕ್ಕಿನಲ್ಲಿ ಬಾಬಾ ಸಾಹೇಬರ ಶಿಕ್ಷಣ, ‘ಸಂಘ’ಟನೆ. ಹೋರಾಟ ಸೂತ್ರವನ್ನು ಅವಲೋಕಿಸಬೇಕಿದೆ ನಾವು !
ಕೆಳಗಿನ ಪದ್ಯದೊಂದಿಗೆ ಮಾತು ಮುಗಿಸುತ್ತೇನೆ.
ಜೈ ಭೀಮ್!

ಜ್ಯೋತಿ ಕುಲದವನು ನೀನು; ಕತ್ತಲು ಬೆಳಕು ತಾನೇ ಆದ ಮಿಂಚುಹುಳುವು
ಮಹಾಮಳೆಯಾಗಿ ಸುರಿದು
ಬಾಯಾರಿದ ಪ್ರತಿಬಾಯಿಗೂ ನೀರ ದಾಟಿಸುವ ಹಠತೊಟ್ಟ ನೀರಗಂಟಿ
ಸುಡುಬಿಸಿಲಿಗೆ ಎದೆಯೊಡ್ಡಿ ನಿಂತು ನೆರಳು ಬಿತ್ತಿದ ಮರ
ಮಣ್ಣಿಗಂಟಿದ ಹುಣ್ಣುಗಳ ಬಿಡಿಸಿ
ನೆಲದ ಕಸರೆಯ ಬಗೆ ಬಗೆದು ಜಾಲಾಡಿದ
ಒಂಟಿ ಎರೆಹುಳು
ಅರಿವೆನ್ನುವುದು ಅನ್ನವೆಂದು ಕಲಿಸಿದ ಮಣ್ಣ ಜ್ಞಾನಿ
ಕಾಲದ ಜತೆ ಜತೆಗೆ ರೂಪಾಂತರವಾಗಿ
ತಲೆ ತಲೆಮಾರಿನ ತೊರೆಯೊಂದು
ಬಳುವಳಿಯಾಗಿ ನನ್ನೊಳಗೆ ಹರಿದಂತೆ
ತಾತ- ಅಣ್ಣ- ಅಯ್ಯ –ಅವ್ವ- ಅಕ್ಕಯ್ಯರಂತೆ
ನನ್ನೊಳಗಿನ ಚಲನೆಯಾಗಿ ಕರಗಿಹೊಗಿರುವ
ದೇಶಾತೀತ ಕಾಲಾತೀತ ಕರುಣೆಯ ಕಣ್ಣು
ಆ ಕರುಣೆಯ ಕಣ್ಣೆ ನನ್ನ ಪ್ರಜ್ಞೆ
ನಾನು ಮತ್ತು ಆ ಪ್ರಜ್ಞೆ ಒಂದೇ ಆಗಿ
ಅರಿವಾಗಿ
ಬೆಳಕಿನಷ್ಟೇ ದಾರಿಯಷ್ಟೇ ಸ್ಪಷ್ಟವಾಗಿ ಅಂದುಕೊಳ್ಳುತ್ತೇನೆ
ನಾನೇ ಅಂಬೇಡ್ಕರ!

ಅಂಬೇಡ್ಕರ್ ದಿನದ ಶುಭಾಶಯಗಳು !
ಜೈ ಭೀಮ್ !

4 comments to “ಬಾಬಾ ಸಾಹೇಬರು ಮತ್ತು ಕಲೆ”
  1. ತುಂಬ ಅರ್ಥಪೂರ್ಣ ಲೇಖನ. ಕಲೆಯ ಮೂಲಧಾತುವೇ ರೂಪಾಂತರಕ್ಕೆ ಸಂಬಂಧಿಸಿದ್ದು. ಅದನ್ನು ಸಾಮಾಜಿಕ ಬದುಕಿನೊಂದಿಗೆ ಮೇಳೈಸುತ್ತ ಅಂಬೇಡ್ಕರರನ್ನು ಓದಿದ್ದು ತುಂಬ ಖುಷಿ ತಂತು. ಹೆಚ್ಚು ಜನರಿಗೆ ಅಂಬೇಡ್ಕರ್ ಹೀಗೆಯೇ ಅರ್ಥವಾಗಬೇಕಿದೆ ಮಾಡಬೇಕಿದೆ. ಋತುಮಾನಕ್ಕೆ, ಗೆಳೆಯ ಲಕ್ಷ್ಮಣನಿಗೆ ವಂದನೆಗಳು

  2. ಅದ್ಭುತವಾದಂತಹ ಲೇಖನ ಲಕ್ಷಣ್, ರೂಪಾಂತರವೇ ಜೀವನದ ಮೂಲ ಧಾತು ಎನ್ನುವುದು ನಿರಂತರ ಸತ್ಯ. ವಿದ್ಯಾಭ್ಯಾಸದ ತತ್ವ ಹಾಗೂ ಸತ್ವಕ್ಕೆ ಅದರ ಉನ್ನತ ಉದ್ದೇಶವನ್ನು ಎತ್ತಿ ತೋರಿಸಿ ಹೊಸ ಕ್ರಾಂತಿಯನ್ನು ಸೃಷ್ಟಿಮಾಡಿದವರು ಬಾಬಾ ಸಾಹೇಬರು ಎನ್ನುವುದು ಇನ್ನೂ ಹೆಚ್ಚು ಹೆಚ್ಚು ಮನವರಿಕೆಯಾಗಬೇಕು. ಸಾಮಾಜಿಕ ಹೋರಾಟವನ್ನು ಸೈದ್ದಾಂತಿಕ ಮೌಲ್ಯಗಳ ಆಧಾರದ ಮೇಲೆ ಮೇಲಿಂದ ಮೇಲೆ ಸಾಧಿಸಿದರು. ಅವರೂ ಇನ್ನೂ ಹೆಚ್ಚು ಅರ್ಥವಾಗಬೇಕಾಗಿದೆ ಎನಿಸುತ್ತದೆ. ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಳ್ಳೆಯ ಲೇಖನ, ಹೀಗೆ ಬರೆಯುತ್ತಾ ಇರಿ…

  3. Very nice article Lakshman:-) it is also because of theatre how any of us can see anyone or anything through different lenses, theatre teaches us this empathy! So this article itself is a proof of how art can be transformational! Thanks for giving us this perspective.

  4. Fight for EQUALITY and Social justice is bigger than any other fight including fight for freedom. If Dr.Ambedkar message of inclusive society is well understood by people, the change will lead to Rama rajya

ಪ್ರತಿಕ್ರಿಯಿಸಿ