ಕೂತಲ್ಲೇ ನಿಮ್ಮನ್ನು ನಿಯಂತ್ರಿಸಲಾಗುತ್ತಿದೆ – ಭಾಗ ೨

ಬೇಹುಗಾರಿಕಾ ಬಂಡವಾಳಶಾಹಿಗಳು (Surveillance capitalists)  ಹೇಗೆ ವಿಜ್ಞಾನ , ವಿಜ್ಞಾನಿಗಳು, ರಹಸ್ಯಗಳು ಮತ್ತು ನಿಜವನ್ನು ನಿಯಂತ್ರಿಸುತ್ತಾರೆ ಎಂಬುದರ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ.

ಈ ಲೇಖನದ ಮೊದಲ ಭಾಗವನ್ನು ಇಲ್ಲಿ ಓದಿ : https://ruthumana.com/2020/04/13/you-are-now-remotely-controlled-part-1/

ಬೇಹುಗಾರಿಕಾ ಬಂಡವಾಳ ವ್ಯವಸ್ಥೆಯ ಆರ್ಥಿಕ ಯಶಸ್ಸು , ಎಷ್ಟರ ಮಟ್ಟಿಗೆ ಖಾತ್ರಿಯಾಗಿ ಭವಿಷ್ಯವನ್ನು ಅಂದಾಜಿಸುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ . ಮೊದ ಮೊದಲು ಈ ಯಾಂತ್ರಿಕ ಬುದ್ಧಿ ಶಕ್ತಿಗೆ ಅಪಾರ ಪ್ರಮಾಣದ ಅಂಕಿ ಅಂಶಗಳು ಅಗತ್ಯವಾಗಿತ್ತು . ಆದರೆ ತದನಂತರ ಅಂಕಿಅಂಶಗಳ ಪ್ರಮಾಣದಷ್ಟೇ ಮುಖ್ಯವಾಗಿ , ವಿಭಿನ್ನ ರೀತಿಯ ಅಂಕಿ ಅಂಶಗಳು ಕೂಡ ಅತ್ಯುತ್ತಮ ಸಾಫ್ಟ್ ವೆರಿಗೆ ಬೇಕು ಎಂದು ಅರಿವಾಯಿತು . ಈ ಹೊಸ ಹೊಳಹಿನಿಂದ ಶುರುವಾಗಿದ್ದೇ “mobile ಕ್ರಾಂತಿ “. ಬಳಕೆದಾರರು ತಮ್ಮ ಜತೆ ಕ್ಯಾಮೆರಾ , ಕಂಪ್ಯೂಟರ್ಸ್ , ಮೈಕ್ರೋಫೋನ್ ಎಲ್ಲವನ್ನು ತಮ್ಮ ಮೊಬೈಲ್ ನೊಳಗೆ ತೆಗೆದುಕೊಂಡು ಹೋಗುವ ಹಾಗೆ ಮಾಡಲಾಯಿತು . ಈ ಅತ್ಯಂತ ಹೆಚ್ಚು ಸ್ಪರ್ಧೆಯಿರುವ ಕ್ಷೇತ್ರದಲ್ಲಿ , ಅವರಿಗೆ ನೀವು ನಿಮ್ಮ ಮನೆಗಳಲ್ಲಿ ಗೋಡೆಗಳ ಮಧ್ಯೆ ಏನು ಮಾತನಾಡುತ್ತಿದ್ದೀರಿ ಎಂದು ತಿಳಿಯಬೇಕಿತ್ತು . ನಿಮ್ಮ ಕಾರ್ ಯಾವುದು , ನಿಮ್ಮ ಆರೋಗ್ಯದ ಸ್ಥಿತಿಯೇನು, ನೀವು ನೋಡುವ ಮನರಂಜನಾ ಕಾರ್ಯಕ್ರಮಗಳು ; ನಿಮ್ಮ ವಾಸ ಸ್ಥಳ , ನೀವು ಸಂಚರಿಸುವ ರಸ್ತೆ , ಹಾದು ಹೋಗುವ ಕಟ್ಟಡಗಳು ಮತ್ತು ನಿಮ್ಮ ನಗರದ ಜನರೆಲ್ಲರ ನಡಾವಳಿ ಎಲ್ಲವೂ ಬೇಕು . ಅವರಿಗೆ ನಿಮ್ಮ ಧ್ವನಿ ಬೇಕು , ನೀವು ಏನು ತಿನ್ನುತ್ತೀರಿ , ಏನು ಖರೀದಿಸುತ್ತೀರಿ ಲ ನಿಮ್ಮ ಮಕ್ಕಳ ಆಟದ ಸಮಯ , ಅವರ ಶಾಲೆಯ ವಿವರ ; ನಿಮ್ಮ ಮೆದುಳಿನ ತರಂಗಗಳು ಮತ್ತು ನಿಮ್ಮ ರಕ್ತದ ಹರಿವು ಎಲ್ಲವೂ ಬೇಕು. ಯಾವುದೂ ಇದರಿಂದ ಹೊರತಾಗಿಲ್ಲ

ನಮ್ಮ ಬಗ್ಗೆ ಹೊಂದಿರುವ ಅನಿಯಂತ್ರಿತ ಮಾಹಿತಿಯಿಂದ ಅನಿಯಂತ್ರಿತ ಅಧಿಕಾರ ನಮ್ಮ ಮೇಲೆ ಅವರಿಗೆ ಸಿಗುತ್ತದೆ , ಮತ್ತು ಈ ಮಾಹಿತಿ ಅಸಮಾನತೆಯಿಂದ ನಾವು ಮಾಡ ಬಹುದಾದ ವಿಷಯಗಳ ಮತ್ತು ನಮಗೆ ಅವರು ಮಾಡಬಹುದಾದ ವಿಷಯಗಳ ನಡುವಿನ ಅಂತರ ಹೆಚ್ಚಾಗುತ್ತದೆ . ಮಾಹಿತಿ ವಿಜ್ಞಾನಿಗಳು ಇದನ್ನು ಪರಿವೀಕ್ಷಣೆಯಿಂದ ವರ್ತನೆಯ ಕಡೆಗೆ ಸ್ಥಿತ್ಯಂತರ ಎಂದು ಕರೆಯುತ್ತಾರೆ , ಈ ಸ್ಥಿತಿಯಲ್ಲಿ , ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಿರುವ ನಮ್ಮ ಬಗೆಗಿನ ಅಂಕಿ ಅಂಶಗಳು , ನಮ್ಮನ್ನು ರಿಮೋಟ್ ಕಂಟ್ರೋಲಿನ ಹಾಗೆ ನಿಯಂತ್ರಿಸಲು ಸಾಧ್ಯವಾಗುವ ಸ್ಥಿತಿ ಉಂಟುಮಾಡುತ್ತದೆ . ಈಗ ಜನರು ಇಂತಹ ರಿಮೋಟ್ ಕಂಟ್ರೋಲ್ ನ ಹಿಡಿತಕ್ಕೆ ಸಿಕ್ಕಿದ್ದಾರೆ , ಹೇಗೆಂದರೆ ನಮ್ಮ ಭವಿಷ್ಯದ ನಡೆಯನ್ನು ಕರಾರುವಕ್ಕಾಗಿ ಅಂದಾಜು ಮಾಡಲು ಸಾಧ್ಯವಾಗಬೇಕೆಂದರೆ , ನಮ್ಮ ದೈನಂದಿನ ನಡಾವಳಿಯನ್ನು ಅವರ ವಾಣಿಜ್ಯದ ಅಗತ್ಯಕ್ಕೆ ತಕ್ಕಂತೆ ನಿರ್ದೇಶಿಸುವುದು ಅತ್ಯಂತ ಪರಿಣಾಮಕಾರಿ ವಿಧಾನ ಎಂದು ಅರಿತು ಕೊಂಡಿದ್ದಾರೆ . ಮೂರನೇ ಅನಿವಾರ್ಯತೆಯಾದ “economies of action” ನ ಮೇಲೆ ಅತ್ಯಂತ ತೀವ್ರವಾದ ಪ್ರಯೋಗಗಳು ಜಾರಿಯಲ್ಲಿವೆ. “ನಾವು ಸಂಗೀತವನ್ನು ಹೇಗೆ ಬರೆಯಬಹುದು ಎಂದು ಸಂಶೋಧಿಸುತ್ತಿದ್ದೇವೆ ” ಎನ್ನುತ್ತಾರೆ ಒಬ್ಬ ವಿಜ್ಞಾನಿ ” ನಂತರ ನಮ್ಮ ಸಂಗೀತಕ್ಕೆ ಅವರು ಕುಣಿಯುವ ಹಾಗೆ ಮಾಡುತ್ತೇವೆ “

“ಎಲ್ಲರನ್ನು ಕುಣಿಸುವ ” ಈ ಹೊಸ ಶಕ್ತಿ ಬಂದಮೇಲೆ ಯೋಧರನ್ನು ಬಳಸಿ ಭಯ ಉಂಟುಮಾಡುವುದಾಗಲಿ ಕೊಲೆ ಮಾಡುವುದಾಗಲಿ ಅವಶ್ಯಕತೆ ಇಲ್ಲ, ಬದಲಾಗಿ ಅದು ಒಂದು ಕಾಫಿ ಕಪ್ ನ ಜತೆ ಬರುತ್ತದೆ , ಗನ್ ನ ಜತೆಯಲ್ಲ . ಈ ಹೊಸಬಗೆಯ ನಿಯಂತ್ರಕ ಶಕ್ತಿ , ಇಂದು ಸರ್ವಾಂತರ್ಯಾಮಿ ಡಿಜಿಟಲ್ ಉಪಕರಣಗಳ ಮೂಲಕ , ಅಭಿಪ್ರಾಯಗಳನ್ನು ರೂಪಿಸುವುದರ ಮೂಲಕ , ಮಾನಸಿಕವಾಗಿ ಗುರಿಯಾಗಿಸಿಕೊಂಡು , ತಂತಾನೇ ಸ್ವಾಭಾವಿಕ ಆಯ್ಕೆಯಾಗಿ , ಪರಸ್ಪರ ಹೋಲಿಕೆ ಮಾಡಿಕೊಂಡು ಸಂತೋಷ – ದುಃಖಕ್ಕೆ ಈಡಾಗುವ ಮತ್ತು ಪ್ರತಿಫಲಗಳು ಮತ್ತು ಶಿಕ್ಷೆಗಳನ್ನು ನೀಡುತ್ತಾ , ಇವೆಲ್ಲದರ ಮೂಲಕ ತಮ್ಮ ಅಗತ್ಯಕ್ಕೆ ತಕ್ಕಂತೆ ಭಾವನೆಗಳನ್ನು ತಿರುಗಿಸಿಕೊಂಡು , ಮನುಷ್ಯನ ನಡಾವಳಿಗಳನ್ನು ತಮ್ಮ ಲಾಭಕ್ಕಾಗಿ ತಿರುಗಿಸಿಕೊಂಡು , ತಮ್ಮ ಬಳಕೆ ದಾರರನ್ನು ಸದಾ ಕಾಲ ಅಜ್ಞಾನದಲ್ಲಿ ಇಡಲು ಪ್ರಯತ್ನಿಸುವುದು

ಫೇಸ್ಬುಕ್ ನ ಈ ಭವಿಷ್ಯ ಸೂಚಕ ಜ್ಞಾನ , ಜನಾಭಿಪ್ರಾಯವನ್ನು ನಿರೂಪಿಸುವ ಶಕ್ತಿಯಾದದ್ದನ್ನು ಫೇಸ್ಬುಕ್ ೨೦೧೨ ಮತ್ತು ೨೦೧೪ ರಲ್ಲಿ ಪ್ರಕಟಿಸಿದ ಸಾಂಕ್ರಾಮಿಕ ಪ್ರಯೋಗ ದ ವರದಿಯಲ್ಲಿ , ತನ್ನ ಬಳಕೆದಾರರಿಗೆ ಪ್ರಜ್ಞಾಪೂರ್ವಕವಾಗಿ ನೀಡಿದ ಸೂಚನೆಗಳು ಹೇಗೆ ಸಾಮಾಜಿಕ ಅಭಿಪ್ರಾಯಗಳನ್ನು ಬದಲಾಯಿಸಿತು ಮತ್ತು ಮಧ್ಯಂತರ ಚುನಾವಣೆಯ ಮತದಾನದ ಮೇಲೆ ಪರಿಣಾಮ ಬೀರಿತು ಮತ್ತು ಆನಂತರ ಹೇಗೆ ಜನರನ್ನು ದುಃಖಿತರನ್ನಾಗಿ ಮತ್ತು ಸಂತೋಷದಿಂದಿರುವಂತೆ ಮಾಡಿತು ಎನ್ನುವುದು ಧಾಖಲಾಗಿದೆ. ಫೇಸ್ ಬುಕ್ ನ ಸಂಶೋಧಕರು ಈ ಪ್ರಯೋಗದ ಯಶಸ್ಸನ್ನು ಈ ಎರಡು ಕಾರಣ ನೀಡಿ ಸಂಭ್ರಮಿಸಿದರು , ಮೊದಲನೆಯಾದಾಗ , ವಾಸ್ತವ ಜಗತ್ತಿನ ಅಭಿಪ್ರಾಯಗಳನ್ನು ಪ್ರಜ್ಞಾಪೂರ್ವಕ ಸುಳಿವುಗಳನ್ನು ನೀಡುವುದರ ಮೂಲಕ ಬದಲಾಯಿಸಿದ್ದು ಮತ್ತು ಇದನ್ನು ಬಳಕೆದಾರರ ಅರಿವಿಗೆ ಬಾರದ ಹಾಗೆ ಮಾಡಲಾಗಿದ್ದು .

೨೦೧೬ ನೇ ಇಸವಿಯಲ್ಲಿ ಗೂಗಲ್ ಉತ್ಪ್ರೇಕ್ಷಿತ ವಾಸ್ತವದಲ್ಲಿ ನಡೆಯುವ ಪೋಕೆಮೊನ್ ಗೋ ಅನ್ನು ಬಳಸಿ ನಿಜ ಲೋಕದ ರಸ್ತೆಗಳಲ್ಲಿ “economies of action” ಅನ್ನು ಪ್ರಯೋಗಿಸಿತು . ಆಟದ ಬಳಕೆದಾರರಿಗೆ ತಾವು ನಿಜವಾದ ಆಟವೊಂದರ ಒತ್ತೆಯಾಳಾಗಿದ್ದೇವೆ ಮತ್ತು ನಮ್ಮ ನಡಾವಳಿಯನ್ನು ತಮ್ಮ ಲಾಭಕ್ಕೋಸ್ಕರ ಬದಲಾಯಿಸುತ್ತಿದ್ದರೆ , ಮತ್ತು ಕಲ್ಪಿತ ಪ್ರಾಣಿಯೊಂದನ್ನು ಹಿಡಿಯುವ ಆಟದಲ್ಲಿ ಪ್ರತಿಫಲ ಮತ್ತು ಶಿಕ್ಷೆಗಳಾಗಿ ಮ್ಯಾಕ್ ಡೊನಾಲ್ಡ್ , ಸ್ಟಾರ್ ಬಕ್ಸ್ ಮತ್ತು ಪಿಜ್ಜಾ ಅಂಗಡಿಗಳಲ್ಲಿ ಜನ ಒಟ್ಟುಗೂಡು ಮಾಡುವಂತೆ ಮಾಡಿ , ಹಾಗೆ ಒಟ್ಟು ಗೂಡಿಸಿದ್ದಕ್ಕೆ ಆ ಅಂಗಡಿಗಳಿಂದ ಹಣ ಪಾವತಿಯಾಗಿತ್ತು . ಅಂತರ್ಜಾಲವೊಂದರಲ್ಲಿ ಲಿಂಕ್ ಕ್ಲಿಕ್ ಮಾಡುವು ಹಾಗೆಯೇ , ಈ ಪ್ರಯೋಗದಲ್ಲಿ ಜನ ಒಂದು ಅಂಗಡಿಯಲ್ಲಿ ಒಟ್ಟು ಗೂಡುವ ಹಾಗೆ ಮಾಡಲಾಗಿತ್ತು

೨೦೧೭ ರಲ್ಲಿ , ಸುದ್ದಿ ಸೋರಿಕೆಯಾದ ಫೇಸ್ ಬುಕ್ ನ ದಾಖಲೆಯೊಂದು ಆಸ್ಟ್ರೇಲಿಯನ್ ಸಂಸ್ಥೆಯೊಂದಕ್ಕೆ ಸಿಕ್ಕಿ , ಹೇಗೆ ತನ್ನ ಬಳಿ ಇದ್ದ ಬಳಕೆದಾರರ ಮಾಹಿತಿ ಬಳಸಿ ಅವರ ನಡಾವಳಿಯನ್ನು ಬದಲಾಯಿಸಲು ಪ್ರಯೋಗ ನಡೆಸಿತ್ತು ಎಂದು ಹೊರಬಂದಿತ್ತು . ಈ ಪ್ರಯೋಗದ ಗುರಿ ೬ ಕೋಟಿ ಆಸ್ಟ್ರೇಲಿಯಾ ಮತ್ತು ನ್ಯೂ ಝೀ ಲ್ಯಾಂಡ್ ಯುವ ಜನತೆ . “ಅವರ ಪೋಸ್ಟ್ಗಳನ್ನು , ಫೋಟೋಗಳನ್ನು , ಮಾತುಕತೆಗಳನ್ನು ಮತ್ತು ಅಂತರ್ಜಾಲದ ಚಟುವಟಿಕೆಗಳನ್ನು ” ಬಳಸಿ “ಫೇಸ್ಬುಕ್ ಯಾವಾಗ ಆ ಯುವಕರು “ಒತ್ತಡ”ದಲಿದ್ದಾ ರೆ ” ಸಂತೋಷವಾಗಿದ್ದಾ ರೆ , ಆತಂಕಕ್ಕೀಡಾಗಿದ್ದರೆ , ಸೋತು ಹೋಗಿದ್ದಾರೆ , ಗೆಲುವಾಗಿದ್ದರೆ ಎನ್ನುವುದನ್ನು ತಿಳಿದುಕೊಳ್ಳಬಹುದು . ಇಷ್ಟು ವಿವರವಾದ ಮಾಹಿತಿಗಳನ್ನು ಬಳಸಿ , ಆ ಯುವಕರಿಗೆ ಯಾವಾಗ ಆತ್ಮವಿಶ್ವಾಸದ ಅಗತ್ಯ ಇದೆ ಎಂದು ನಿರ್ಧರಿಸಬಹುದು ಮತ್ತು ಯಾವಾಗ ಪ್ರಜ್ಞಾಪೂರ್ವಕ ಸೂಚನೆಗಳನ್ನು ನೀಡಿ ಅವರ ಭಾವನೆಗಳನ್ನು ನಿಯಂತ್ರಿಸಬಹುದು ಎಂದು ತಿಳಿದು ಕೊಳ್ಳಬಹುದಿತ್ತು . ಈ ಮಾಹಿತಿ ಬಳಸಿ ಅವರ ಭಾವನೆಗಳಿಗೆ ತಕ್ಕ ಹಾಗೆ ಜಾಹಿರಾತುಗಳನ್ನು ತೋರಿಸಿದರೆ , ಅವರು ಖಾತರಿಯಾಗಿ ಆ ಪದಾರ್ಥ ಕೊಳ್ಳುವ ಸಾಧ್ಯತೆ ಹೆಚ್ಚಾಗಿಸಬಹುದಿತ್ತು

ಫೇಸ್ಬುಕ್ ಈ ಎಲ್ಲ ನಡವಳಿಕೆಗಳು ತನ್ನದಲ್ಲ ಎಂದು ನಿರಾಕರಿಸಿತು . ಆದರೆ ಆ ಸಂಸ್ಥೆಯ ಮಾಜಿ ಮ್ಯಾನೇಜರ್ ಒಬ್ಬರು ಇದನ್ನು “ಹಸಿ ಹಸಿ ಸುಳ್ಳು ” ಎಂದು ಆಪಾದಿಸಿದ್ದರು . ಯಾವುದೇ ಬಗೆಯ ಪಾರದರ್ಶಕರ್ತೆ ಇಲ್ಲದೆ , ಆಂತರಿಕ ಪ್ರಜಾಪ್ರಭುತ್ವಗಳಿಲ್ಲದೆ, ಈ ಕಂಪೆನಿಗಳಲ್ಲಿ ಮಾಹಿತಿ ಅಸಮಾನತೆ ತಾಂಡವವಾಡುತ್ತಿದೆ . ಇದು ಅವರಿಗೆ ಗೊತ್ತು . ಯಾರಿಗೆ ಗೊತ್ತಿರಬೇಕು ಎಂದು ಅವರೇ ನಿರ್ಧರಿಸುತ್ತಾರೆ . ಯಾರು ನಿರ್ಧರಿಸಬೇಕು ಎನ್ನುವುದನ್ನೂ ಅವರೇ ನಿರ್ಧರಿಸುತ್ತಾರೆ

ಸಾರ್ವಜನಿಕರ ಬಳಿ ಇರುವ ಈ ಮಾಹಿತಿಯ ಕೊರತೆಯ ಪರಿಣಾಮ , ಬೇಹುಗಾರಿಕಾ ಬಂಡವಾಳ ಶಾಹಿಗಳ ಸಾಮೂಹಿಕ ಸಂವಹನದ ಮೇಲಿನ ಹಿಡಿತ ದಿಂದ ಮತ್ತಷ್ಟು ಉಲ್ಬಣಗೊಂಡಿದೆ . ಉದಾಹರಣೆಗೆ , ೨೦೧೯ನೇ ಇಸವಿ ಏಪ್ರಿಲ್ ೩೦ರಂದು ಮಾರ್ಕ್ zuckerberg ಅವನ ಸಂಸ್ಥೆಯ ವಾರ್ಷಿಕ ಸಾಫ್ಟ್ವೇರ್ ಡೆವೆಲಪರ್ ಸಮ್ಮೇಳನದಲ್ಲಿ “ಭವಿಷ್ಯ ನಿಂತಿರುವುದು ಖಾಸಗಿತನದ ಮೇಲೆ ” ಎಂದು ಘೋಷಿಸಿದ. ಕೆಲವು ವಾರಗಳ ನಂತರ , ಫೇಸ್ಬುಕ್ ಮೇಲೆ ತನ್ನ ಖಾಸಗೀ ಬದುಕಿನ ಗೌಪ್ಯತೆಗೆ ಧಕ್ಕೆಯಾಗಿದೆ ಎಂದು ಮೊಕದ್ದಮೆ ಹೂಡಿದ್ದ ಬಳಕೆದಾರನೊಬ್ಬ , ಫೇಸ್ಬುಕ್ ಬಳಕೆ ಮಾಡುವುದೇ ಖಾಸಗೀತನ ಎನ್ನುವುದು “ನ್ಯಾಯವಾಗಿ ” ಬಳಕೆದಾರನ ಹಕ್ಕು ಎನ್ನುವುದನ್ನು ನಿರಾಕರಿಸುತ್ತದೆ , ಎಂದು ತನ್ನ ಆಪಾದನೆಯಲ್ಲಿ ವಾದ ಮಾಡಿದ್ದ . ೨೦೧೯ನೇ ಇಸವಿ ಮೇ ತಿಂಗಳಲ್ಲಿ , ಗೂಗಲ್ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚ್ಚಯ್ ತನ್ನ ಟೈಮ್ಸ್ ಪತ್ರಿಕೆಯ ಲೇಖನದಲ್ಲಿ ತನ್ನ ಸಂಸ್ಥೆಗೆ “ಖಾಸಗೀತನ ಎನ್ನುವುದು ವಿಲಾಸದ ವಸ್ತುವಲ್ಲ ” ಎನ್ನುವ ಹೇಳಿಕೆಗೆ ಬದ್ಧವಾಗಿದೆ ಎಂದು ಬರೆದಿದ್ದ . ಐದು ತಿಂಗಳ ನಂತರ ಗೂಗಲ್ ಸಂಸ್ಥೆಯ ಗುತ್ತಿಗೆದಾದರರು ಅಟ್ಲಾಂಟ ಪಾರ್ಕಿನಲ್ಲಿದ್ದ ನಿರಾಶ್ರಿತ ಕಪ್ಪು ಜನಾಂಗದವರ ಮುಖ ಚಹರೆ ವಿವರಗಳನ್ನು ಸಂಗ್ರಹಿಸಿ ಪ್ರತಿಯಾಗಿ ೫ ಡಾಲರ್ ಉಡುಗೊರೆ ನೀಡುತ್ತಿದ್ದುದು ವರದಿಯಾಗಿತ್ತು

೨೦೧೮ರಲ್ಲಿ ಸೋರಿಕೆಯಾದ ಮತ್ತೊಂದು ದಾಖಲೆಯ ಪ್ರಕಾರ ಫೇಸ್ಬುಕ್ ತನ್ನ ನಡಾವಳಿಗಳನ್ನು ನಿರಾಕರಿಸುವುದನ್ನು ಮತ್ತಷ್ಟು ಅನುಮಾನಾಸ್ಪದವಾಗಿಸುತ್ತದೆ . ಈ ಗೌಪ್ಯವಾದ ದಾಖಲೆಯು ಫೇಸ್ಬುಕ್ ಬಳಸುವ ಮಾಹಿತಿ ಸಂಶ್ಲೇಷಣಾ ವಿಧಾನ ಮತ್ತು “ಭವಿಷ್ಯದ ಸೂಚಕ”ಗಳ ಲೆಕ್ಕ ಹಾಕುವ ಮಾದರಿಗಳ ಬಗ್ಗೆ ಒಳ ನೋಟ ನೀಡುತ್ತದೆ . ಈ ಮಾಹಿತಿ ತಂತ್ರಾಂಶಗಳು “ಪ್ರತಿ ದಿವಸ ಟ್ರಿಲಿಯನ್ ಗಟ್ಟಲೆ ಅಂಕಿ ಅಂಶ ಸಂಗ್ರಹಿಸುವ ಬಿಂದುಗಳನ್ನು ಬಳಕೆದಾರರ ಉಪಕರಣಗಳಿಗೆ ಸೇರಿಸಿ ” ನಂತರ “ಆ ಮಾಹಿತಿಗಳನ್ನು ಆ ಕ್ಷಣವೇ ಸಂಶ್ಲೇಶಿಸಿ ಭವಿಷ್ಯದ ಮುನ್ಸೂಚಕಗಳನ್ನು ” ಉತ್ಪಾದಿಸಲು ಬಳಸುತ್ತಾರೆ. ಫೇಸ್ಬುಕ್ ನ ಪ್ರಕಾರ ಈ ಮುನ್ಸೂಚಕಗಳನ್ನು ಉತ್ಪಾದಿಸುವ ವ್ಯವಸ್ಥೆ “ಪ್ರತಿ ಕ್ಷಣ ೬೦ ಲಕ್ಷ ಮುನ್ಸೂಚಕಗಳನ್ನು ಸೃಷ್ಟಿಸುತ್ತದೆ ” ಆದರೆ ಇದು ಯಾರಿಗಾಗಿ ಮಾಡುತ್ತಾರೆ ?

ಈ ವರದಿಯಲ್ಲಿ , ಈ ಅಸಾಮಾನ್ಯ ಸಾಮರ್ಥ್ಯ ವನ್ನು ಸಂಪೂರ್ಣವಾಗಿ ತನ್ನ ಕಾರ್ಪೊರೇಟ್ ಸಂಸ್ಥೆಗಳ “ಮುಖ್ಯ ವ್ಯಾವಹಾರಿಕ ಸ್ಪರ್ಧೆಗಳಿಗೆ ” ಅನುಕೂಲವಾಗುವ ಹಾಗೆ ಅಂತರ್ಜಾಲ ತಾಣಗಳ ವಿಳಾಸದ ಅಂದಾಜಿಗೆ , ವಯಕ್ತಿಕ ಮಟ್ಟದ ಜಾಹಿರಾತುಗಳ ಆಯ್ಕೆಗೆ , ಮತ್ತು ಬಳಕೆದಾರರ ಅಭಿಪ್ರಾಯಗಳನ್ನು ಬದಲಾಯಿಸುವ ಕಡೆಗೆ , ಬಳಸಲಾಗುವುದು ಎಂದು ದಾಖಲಾಗಿದೆ . ಉದಾಹರಣೆಗೆ ಫೇಸ್ ಬುಕ್ ನ ಒಂದು ಸೇವೆಯ ಹೆಸರು “ಬಳಕೆದಾರರ ನಿಷ್ಠೆ ಸೂಚಕ ” , ಮತ್ತು ಈ ಸೇವೆಯ ಪ್ರಕಾರ ಆ ಬಳಕೆದಾರ ಬ್ರಾಂಡ್ ಒಂದರ ಬಗೆಗಿನ ನಿಷ್ಠೆ ಬದಲಾಗುವಂತಿದ್ದರೆ ಅದನ್ನು ಮುಂಚೆಯೇ ಅಂದಾಜು ಮಾಡಿ , ಜಾಹೀರಾತುದಾರರಿಗೆ ತಿಳಿಸುತ್ತದೆ , ಮತ್ತು ಈ ಮಾಹಿತಿಯ ಸಹಾಯದಿಂದ ಆ ವ್ಯಕ್ತಿಯ ನಿಷ್ಠೆ ಮರಳಿ ಜಾಹಿರಾತುದಾರರ ಕಡೆಯೇ ವಾಲುವಂತೆ ಮಾಡಲು ಬೇಕಾದ ಕೊಡುಗೆಗಳನ್ನು , ಅಥವಾ ಸಂದೇಶಗಳನ್ನು ಬಳಕೆದಾರರಿಗೆ ತಲುಪಿಸಲಾಗುತ್ತದೆ.

ಅದೇ ವರ್ಷ ರಾಜಕೀಯ ವಿಶ್ಲೇಷಕ ಸಂಸ್ಥೆ ಕ್ಯಾಂಬ್ರಿಜ್ ಅನಾಲಿಟಿಕಾ ದ ಮಾಜಿ ಉದ್ಯೋಗಿ , ಕ್ರಿಸ್ಟೋಫರ್ ವಯ್ಲಿ , ಒಂದು ಮಹತ್ತರ ಗುಟ್ಟು ರಟ್ಟು ಮಾಡಿದ. “ನಾವು ಫೇಸ್ ಬುಕ್ ಅಂಕಿಅಂಶಗಳ ಸಹಾಯದಿಂದ ಕೋಟ್ಯಂತರ ಬಳಕೆದಾರರ ಮಾಹಿತಿ ಬಳಸಿ, ಅವರ ಬಗೆಗಿನ ಎಲ್ಲ ವಿಷಯಗಳನ್ನು ಬಳಸಿ ಅವರೊಳಗಿನ ಪೈಶಾಚಿಕ ಭಾವನೆಗಳನ್ನು ಹೊರ ಹಾಕುವ ವಿಧಾನಗಳ ರೂಪುರೇಷೆ ಸಿದ್ದ ಮಾಡುತ್ತಿದ್ದೆವು ” . ಮಿಸ್ಟರ್ ವಯ್ಲಿ ಹೇಳುವ ಪ್ರಕಾರ ಇದು “ಮಾಹಿತಿ ಯುದ್ದ ” ಮತ್ತು ಇಂತಹ ನಿಗೂಢವಾಗಿಯೇ ನಡೆಯುವ ಯುದ್ಧಗಳು ನಿಂತಿರುವುದು “ಮಾಹಿತಿ ಅಸಮಾನತೆ”ಯ ಮೇಲೆ ಮತ್ತು ಅದು ನೀಡುವು ಅನಿಯಂತ್ರಿತ ಅಧಿಕಾರದ ಮೇಲೆ . ಬಳಕೆದಾರರಿಗೆ ಮತ್ತು ಕಾನೂನು ನಿರ್ಮಿಸುವವರಿಗೆ ಗೊತ್ತಿರದ ಅಂಶ ಏನೆಂದರೆ , ಈ ಸಂಸ್ಥೆಗಳು ಬಳಕೆದಾರರ ಖಾಸಗೀ ಬದುಕಿನ ಮೇಲೆ ರಹಸ್ಯವಾಗಿ ದಾಳಿ ಮಾಡಿ ಪ್ರತೀ ದಿವಸ ಕೋಟ್ಯಂತರ ಜನರ ಅಂಕಿಅಂಶಗಳನ್ನು ಸಂಗ್ರಹಿಸುತ್ತಿದ್ದಾರೆ ,ಎನ್ನುವುದು . ಕೇಂಬ್ರಿಜ್ ಅನಾಲಿಟಿಕದ ಮಹತ್ತರ ಸಾಧನೆಯೆಂದರೆ , ವ್ಯಾಪಾರಕ್ಕಾಗಿ ಕಲೆ ಹಾಕಿದ ಅಂಕಿ ಅಂಶಗಳನ್ನು ಬಳಸಿ ರಾಜಕೀಯಕ್ಕಾಗಿ ಬಳಸಿಕೊಂಡಿದ್ದು .

ಇನ್ನೊಂದು ರೀತಿ ಹೇಳಬೇಕೆಂದರೆ , ಕೇಂಬ್ರಿಜ್ ಅನಾಲಿಟಿಕ ಸಂಸ್ಥೆ ಒಂದು ಪರಾವಲಂಬಿ ಜೀವಿ , ಮತ್ತು ಬೇಹುಗಾರಿಕಾ ಬಂಡವಾಳಶಾಹಿ ವ್ಯವಸ್ಥೆ ಅದರ ಆತಿಥೇಯ . ಈ ಬಗೆಯ ಮಾಹಿತಿ ಸಂಗ್ರಹದ ಮೇಲಿನ ಸ್ವಾಮ್ಯತೆಯಿಂದ , ಬೇಹುಗಾರಿಕಾ ಬಂಡವಾಳಶಾಹಿ ವ್ಯವಸ್ಥೆ , ಇವರ ಗುರಿಯಾಗಿದ್ದ ಬಳಕೆದಾರರ ಅಂಕಿ ಅಂಶಗಳನ್ನು ಸುಲಭವಾಗಿ ಒದಗಿಸಿತ್ತು , ಮತ್ತು ಈ ವ್ಯವಸ್ಥೆಯ ವಯಕ್ತಿಕ ಮಟ್ಟದ ಗುರಿ ಮತ್ತು ಅಭಿಪ್ರಾಯಗಳನ್ನು ಬದಲಾಯಿಸುವ ತಂತ್ರ ಅವರ ಆಯುಧಗಳಾಗಿ ಬದಲಾಯಿತು . ಮತ್ತು ಬಳಕೆದಾರರ ಬಗೆಗಿನ ಮಾಹಿತಿಯ ಮೇಲೆ ಬೇಹುಗಾರಿಕಾ ಬಂಡವಾಳಶಾಹಿಗಳ ಸಂಸ್ಥೆಗಳಿಗೆ ಇರದ ಯಾವುದೇ ಹೊಣೆಗಾರಿಕೆ ಮತ್ತು ಸೆಕ್ಷನ್ ೨೩೦ ರ ಪ್ರಕಾರ ದೊರಕಿದ್ದ ಸ್ವಾತಂತ್ರ್ಯದ ದುರ್ಬಳಕೆ ಮಾಡಿ , ಬಳಕೆದಾರರ ಒಳಗಿದ್ದ ಪೈಶಾಚಿಕ ಸ್ವಭಾವಗಳನ್ನು ಹೊರತರುವಲ್ಲಿ ಯಶಸ್ವಿಯಾದವು .

ಈ ಬಗೆಯ ಮಾಹಿತಿ ಅಸಮಾನತೆಯೊಂದೇ ಬಳಕೆದಾರರನ್ನು ಕೇಂಬ್ರಿಜ್ ಅನಾಲಿಟಿಕ ದಂತಹ ಸಂಸ್ಥೆಗಳು ಬಳಸಿಕೊಳ್ಳುವ ಹಾಗೆ ಮಾಡಿಲ್ಲ . ಇದಕ್ಕೂ ದೊಡ್ಡದಾದ ಮತ್ತು ಗಂಭೀರವಾದ ಸಮಸ್ಯೆಯೆಂದರೆ , ಈ ಬೇಹುಗಾರಿಕಾ ಬಂಡವಾಳಶಾಹಿಗಳು ಮಾಹಿತಿ ಅಸಮಾನತೆಯನ್ನೇ ನಮ್ಮ ಸಮಾಜದ ಹೊಸ ಬುನಾದಿಯನ್ನಾಗಿ ಮಾಡಿ, ಈ ಮಾಹಿತಿ ಯುದ್ದಗಳನ್ನು ದಿನನಿತ್ಯದ ಬದುಕಿನಲ್ಲಿ ಸಹಜಗೊಳಿಸಿ, ನಾವು ನಮ್ಮ ದಿನನಿತ್ಯದ ಸಾಮೂಹಿಕ ಚಟುವಟಿಕೆಗಳಿಗೆ ಅವಲಂಬಿತವಾಗಿರುವ ವ್ಯವಸ್ಥೆಯನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ . ಈ ಸಂಸ್ಥೆಗಳ ಬಳಿ ಮಾಹಿತಿಯಿದೆ , ಬೇಕಾದ ಯಂತ್ರಗಳಿವೆ , ರಹಸ್ಯಗಳಿವೆ ಮತ್ತು ಸುಳ್ಳುಗಳಿವೆ . ನಮ್ಮ ಖಾಸಗಿತನ ಅವರ ಬಳಿ ಇದೆ , ಮತ್ತು ಈ ಮಾಹಿತಿ ದರೋಡೆಕೋರರಿಂದ ನಮ್ಮನ್ನು ಸಂರಕ್ಷಿಕೊಳ್ಳಲು ಯಾವುದೇ ದಾರಿ ಇಲ್ಲದ ಹಾಗೆ ಮಾಡಿವೆ . ಯಾವುದೇ ಕಾನೂನಿನ ಸಹಾಯವಿಲ್ಲದೆ , ನಾವು ನಮ್ಮ ದಿನ ನಿತ್ಯದ ಬದುಕಿನಲ್ಲಿ , ಅಡಗಿ ಕೊಳಲು ಯತ್ನಿಸುತ್ತಿದ್ದೇವೆ ಹಾಗೂ ನಮ್ಮ ಮಕ್ಕಳು ಊಟದ ಸಮಯದಲ್ಲಿ ಎನ್ಕ್ರಿಪ್ಶನ್ ಬಗ್ಗೆ ಚರ್ಚಿಸುತ್ತಿದ್ದಾರೆ , ಮತ್ತು ಪ್ರತಿಭಟನಾಕಾರರು , ನಮ್ಮ ನಮ್ಮ ಕೌಟುಂಬಿಕ ಫೋಟೋಗಳ ಸಹಾಯದಿಂದ ನಿರ್ಮಿತವಾದ “ಮುಖದ ಚಹರೆ ಗುರುತು ಹಿಡಿಯುವ ” ಸಾಫ್ಟ್ ವೇರ್ ಗಳಿಂದ ತಪ್ಪಿಸಿ ಕೊಳ್ಳಲು ಮುಖಕ್ಕೆ ಮಾಸ್ಕ್ ಬಳಸುತ್ತಿದ್ದಾರೆ .

ಯಾವುದೇ ರೀತಿಯ ಮಾಹಿತಿ ಹಕ್ಕುಗಳು ಮತ್ತು ನಿಯಮಗಳು ಇಲ್ಲದಿರುವ ಈ ಸಮಯದಲ್ಲಿ , ಬೇಹುಗಾರಿಕಾ ಬಂಡವಾಳಶಾಹಿಗಳು ನಮ್ಮ ಸಮಾಜವನ್ನು ಮರುಸೃಷ್ಟಿ ಮಾಡಲು ಪ್ರಯತ್ನಿಸುತ್ತಾ , ಪ್ರಜಾಪ್ರಭುತ್ವವನ್ನು ತಲೆಕೆಳಗಾಗಿಸುತ್ತಿವೆ . ಕೆಳಗಿಂದ , ನಿಧಾನವಾಗಿ , ಮನುಷ್ಯನ ಸಾಂಸ್ಥಿಕತೆಯನ್ನು , ಖಾಸಗೀತನವನ್ನು ಆಕ್ರಮಿಸಿಕೊಳ್ಳುತ್ತ , ಸ್ವಾತಂತ್ರ್ಯ ಕಸಿದುಕೊಳ್ಳುತ್ತ , ವ್ಯಕ್ತಿಗಳು ಹೋರಾಟ ಮಾಡದ ಹಾಗೆ ಪರಿಸ್ಥಿತಿ ಸೃಷ್ಟಿಸುತ್ತಿವೆ .ಮೇಲಿನಿಂದ ಹೇರುತ್ತಿರುವ , ಮಾಹಿತಿ ಅಸಮಾನತೆ ಮತ್ತು ಅನ್ಯಾಯ ಮೂಲಭೂತವಾಗಿ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿವೆ

ಈ ಬೇಹುಗಾರಿಕಾ ಬಂಡವಾಳಶಾಹಿಗಳು ಕತ್ತಲೆಯಲ್ಲಿ ರಹಸ್ಯವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ನಮಗೆ ತಿಳಿದಿದೆ , ಆದರೆ ನಮ್ಮಿಂದ ಸಂಗ್ರಹಿಸಿದ ಮಾಹಿತಿಯನ್ನು ಏತಕ್ಕೆ ಬಳಸುತ್ತಾರೆ ನಮಗೆ ಸ್ಪಷ್ಟವಾಗಿ ತಿಳಿದಿಲ್ಲ . ನಮ್ಮ ಬಗ್ಗೆ ತಿಳಿದುಕೊಳ್ಳಲು ಅವರ ಬಳಿ ಎಲ್ಲ ವಿಧಾನಗಳಿವೆ , ಆದರೆ ಅವರ ಬಗ್ಗೆ ತಿಳಿದುಕೊಳ್ಳಲು ನಮ್ಮ ಬಳಿ ಯಾವುದೇ ದಾರಿ ಇಲ್ಲ . ನಮ್ಮ ಬಗೆಗಿನ ಮಾಹಿತಿ , ನಮಗಾಗಿ ಅಲ್ಲ . ಬದಲಾಗಿ ಇನ್ನೊಬ್ಬರ ಲಾಭಕ್ಕಾಗಿ ನಮ್ಮ ಮಾಹಿತಿ ಮಾರಾಟಕ್ಕಿದೆ . ೧೯೯೭ ರ Federal Trade Commission ಭೇಟಿಯ ನಂತರ ಆ ರೇಖೆಯನ್ನು ಎಳೆದೆ ಇಲ್ಲ , ಮತ್ತು ಜನರು ವ್ಯಾಪಾರ ಚರಾಸ್ತಿ ಯಾಗಿ ಬದಲಾಗಿದ್ದಾರೆ . ವಾಸ್ತವದಲ್ಲಿ ಬೇಹುಗಾರಿಕಾ ಬಂಡವಾಳಶಾಹಿಗಳು ಡಿಜಿಟಲ್ ಮಾಧ್ಯಮವನ್ನು ನಮ್ಮಿಂದ ಕಸಿದುಕೊಂಡಿದ್ದಾರೆ ಹಾಗೂ ಅದು ನಾವು ಮೊದಲೇ ಅಂದಾಜು ಮಾಡಿರದ ವಾಸ್ತವವೇನಲ್ಲ

ಅಮೆರಿಕಾದ ಸಂಸದರು ಈ ಹೊಸ ಬಿಕ್ಕಟ್ಟನ್ನು ಎದುರಿಸಲು ಮೀನಮೇಷ ಎಣಿಸುತ್ತಿರುವುದಕ್ಕೆ ಬಹಳಷ್ಟು ಕಾರಣಗಳಿವೆ . ಮುಖ್ಯವಾಗಿ , ಸೆಪ್ಟೆಂಬರ್ ೧೧ರ ಭಯೋತ್ಪಾದಕರ ದಾಳಿಯ ನಂತ್ರ ಸೃಷ್ಟಿಯಾದ ಬೇಹುಗಾರಿಕಾ ವ್ಯವಸ್ಥೆ , ಮತ್ತು ವಯಕ್ತಿಕ ಹಿತಾಸಕ್ತಿ ಯ ಬಗ್ಗೆ ಸರ್ಕಾರದ ಬದಲಾದ ನಿಲುವು ಮತ್ತು “ಎಲ್ಲ ಬಗೆಯ ಮಾಹಿತಿ ಸಂಗ್ರಹಿಸುವ ” ಹಂಬಲ . ರಾಜಕೀಯ ವಲಯದಲ್ಲಿ ಈ ಹೊಸ ಬೇಹುಗಾರಿಕಾ ವ್ಯವಸ್ಥೆ ಒಂದು ಹೊಸ ಭರವಸೆಯಾಗಿ ಕಾಣಲಾಗುತ್ತಿದೆ

ಬೇಹುಗಾರಿಕಾ ಬಂಡವಾಳಶಾಹಿಗಳು ತಮ್ಮನ್ನು ಸಂರಕ್ಷಿಸಿಕೊಳ್ಳಲು , ಸಾಕಷ್ಟು ಪ್ರಭಾವ ಬಳಸಿ , ವಿಧ ವಿಧವಾದ ಪ್ರಚಾರಗಳನು ಬಳಸಿ , ಸಂಸದರನ್ನು ಬೆದರಿಸಿ , ಗೊಂದಲ ಮೂಡಿಸಿ , ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಾಗೆ ಮಾಡಿದ್ದಾರೆ . ಹಾಗಾಗಿ ಈ ಸಂಸ್ಥೆಗಳು, ಅವು ಮಾಡುವ ಹಾನಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪರಿಶೀಲನೆಗೆ ಒಳಪಟ್ಟಿವೆ . ಈ ಎರಡು ಉದಾಹರಣೆಗಳನ್ನೇ ತೆಗೆದುಕೊಳ್ಳಿ

ಮೊದಲನೇ ವಾದ ಎಂದರೆ , ಪ್ರಜಾಪ್ರಭುತ್ವ ವ್ಯವಸ್ಥೆ ಸಮೃದ್ಧಿ ಮತ್ತು ಆವಿಷ್ಕಾರಗಳಿಗೆ ತೊಡಕು . ಈ ಹಿಂದಿನ ಗೂಗಲ್ ಅಧ್ಯಕ್ಷ Eric Schmidt ನ ೨೦೧೧ ಲೇಖನದ ಪ್ರಕಾರ , “ನಾವು ಅಂತರ್ಜಾಲದಿಂದ ನಮ್ಮ ಕೈ ಹೊರ ತೆಗೆದಿದ್ದೇವೆ … ಸರ್ಕಾರಗಳು ಕಾನೂನು ನಿರ್ಮಿಸುವಲ್ಲಿ ತಪ್ಪು ಮಾಡಬಹುದು ಮತ್ತು ಅದರಿಂದಾಗಿ ಇಡೀ ವ್ಯವಸ್ಥೆ ಕುಂಟುತ್ತಾ ಸಾಗುತ್ತದೆ ಎನ್ನುವುದು ನಮಗೆ ಸ್ಪಷ್ಟವಾಗಿ ತಿಳಿದಿದೆ ಮತ್ತು ನಮಗೆ ಇದು ನಿಜಕ್ಕೂ ಆತಂಕಕಾರಿ ವಿಷಯ ” . ಇದೆ ಬಗೆಯ ಯೋಚನಾ ಕ್ರಮ ಈ ಹಿಂದೆ ಬಳಸಿದ್ದವರು “Gilded Age barons”, ಮಾತು ಅವರನ್ನು ಈಗ ನಾವು “ದರೋಡೆಕೋರರು” ಎಂದು ಕರೆಯುತ್ತೇವೆ . ಅವರ ವಾದ ಹೇಗಿತ್ತೆಂದರೆ , ಸಮಾಜಕ್ಕೆ ಯಾವುದೇ ಕಾನೂನು ಬೇಕಾಗಿಲ್ಲ “law of survival of the fittest” “he “laws of capital”ಮತ್ತು “law of supply and demand” ಇಷ್ಟೇ ಸಾಕು ಎಂಬುದಾಗಿತ್ತು

ವಾಸ್ತವದಲ್ಲಿ ಅವರ ವಾದಕ್ಕೆ ವಿರುದ್ಧವಾಗಿ , ಬೇಹುಗಾರಿಕಾ ಬಂಡವಾಳಶಾಹಿ ವ್ಯವಸ್ಥೆ ಯಾವುದೇ ಹೊಸ ಆವಿಷ್ಕಾರ ಮಾಡುವುದಿಲ್ಲ . ಬಹಳ ಆಶಾದಾಯಕವಾದ ಅರ್ಥಶಾಸ್ತ್ರದ ಸಂಶೋಧನೆಯ ಪ್ರಕಾರ , ಸರ್ಕಾರಿ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳು ಹೊಸ ಆವಿಷ್ಕಾರಗಳಿಗೆ ಸಹಾಯಕವಾಗಿವೆ ಹಾಗೂ ಈ ಹೊಸ ತಂತ್ರಜ್ಞಾನದ ದೈತ್ಯ ಸಂಸ್ಥೆಗಳು ಯಾವುದೇ ಹೊಸ ಅನ್ವೇಷಣೆ ಮಾಡುತ್ತಿಲ್ಲ ಎಂದು . ಈ ಸಂಸ್ಥೆಗಳ ಬಳಿ ಇರುವ ಮಾಹಿತಿ ಯನ್ನು ಇವತ್ತಿನ ಅತಿ ಮುಖ್ಯ ಸಮಸ್ಯೆಗಳಾದ , ಇಂಗಾಲ ರಾಹಿತ್ಯ ಇಂಧನದ ಅನ್ವೇಷಣೆಗಾಗಲಿ , ಹಸಿವಿನ ನಿವಾರಣೆಗಾಗಲಿ , ಕ್ಯಾನ್ಸರ್ ಪರಿಹಾರಕ್ಕಾಗಲಿ , ಸಮುದ್ರದಲ್ಲಿ ತೇಲುತ್ತಿರುವ ಕೋಟ್ಯಂತರ ಟನ್ ಪ್ಲಾಸ್ಟಿಕ್ ಸ್ವಚ್ಛಮಾಡಲಾಗಲಿ, ಅಕಾಡೆಮಿಕ್ , ವೈದ್ಯರನ್ನು ಸೃಷ್ಟಿಮಾಡಲಾಗಲಿ , ಯಾವುದಕ್ಕೂ ಸಹಾಯವಾಗುತ್ತಿಲ್ಲ . ಬದಲಾಗಿ , ಈ ಇಡೀ ವ್ಯವಸ್ಥೆಯನ್ನು ಮುನ್ನಡೆಸುತ್ತಿರುವವರು ಅತ್ಯಂತ ಶ್ರೀಮಂತರಾದ ಜಾಣರು ಮತ್ತು ಈ ಎಲ್ಲ “computational power” ಹಾಗೂ ಎಲ್ಲ ಸಂಪನ್ಮೂಲಗಳೂ ಲಾಭವನ್ನೇ ಗುರಿಯಾಗಿಸಿಕೊಂಡಿರುವ ಅರ್ಥ ವ್ಯವಸ್ಥೆಗಾಗಿ ದುಡಿಸಿಕೊಳ್ಳಲಾಗುತ್ತಿದೆ .

ಎರಡನೆಯ ಬಗೆಯ ವಾದ ಎಂದರೆ , ಈ ಮುಂಚೂಣಿಯಲ್ಲಿರುವ ಬೇಹುಗಾರಿಕಾ ಬಂಡವಾಳಶಾಹಿ ಸಂಸ್ಥೆಗಳ ಗೆಲುವು ಅವರು ಜನರಿಗೆ ಎಷ್ಟು ಉಪಯುಕ್ತವಾಗಿದ್ದಾರೆ ಎನ್ನುವುದರ ದ್ಯೋತಕ . ಆದರೆ ಬೇಡಿಕೆಯ ಬದಿಯಿಂದ ನೋಡಿದರೆ ಈ ಹೊಸ ವ್ಯವಸ್ಥೆ ವಾಸ್ತವದಲ್ಲಿ ಒಂದು ಮಾರುಕಟ್ಟೆಯ ಸೋಲು . ಪೂರೈಕೆ ಮತ್ತು ಬೇಡಿಕೆಯ ನಡುವಿನ ಕಂದರವನ್ನು ಕಡಿಮೆ ಮಾಡದೆ , ಜನರು ತಮ್ಮ ಬಳಿ ಇನ್ನ್ಯಾವುದೇ ಬಗೆಯ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ , ಗ್ರಾಹಕರು ಈ ಬೇಹುಗಾರಿಕಾ ಬಂಡವಾಳಶಾಹಿಗಳ ರಹಸ್ಯ ಚಟುವಟಿಕೆಗಳು ಮತ್ತು ಪರಿಣಾಮಗಳನ್ನು ಅರಿತುಕೊಳ್ಳುವಲ್ಲಿ ಸಾಧ್ಯವಾಗದೆ , ಈ ವ್ಯವಸ್ಥೆಯಯನ್ನು ಬಳಸುತ್ತಿದ್ದಾರೆ . Pew Research Center ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ೮೧% ಅಮೇರಿಕಾದ ಜನರು ಈ ಕಂಪನಿಗಳು ಸಂಗ್ರಹಿಸುವ ಮಾಹಿತಿಗಳಿಂದಾಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಮತ್ತು ಈ ಕಂಪನಿಗಳ ಯಶಸ್ಸು ಅವಲಂಬಿತವಾಗಿರುವುದು ಬಲ ಪ್ರಯೋಗ ಮತ್ತು ಗೊಂದಲಮಯವಾಗಿಸಿಯೇ ಹೊರತು ಜನರ ನಿಜವಾದ ಅವಶ್ಯಕತೆಗಳನ್ನು ಪೂರೈಸಿಯಲ್ಲ ಎಂದು ಹೇಳಿದ್ದಾರೆ

ಇತಿಹಾಸಕಾರ Thomas McCraw ತನ್ನ ಪ್ರಶಸ್ತಿ ವಿಜೇತ ಪುಸ್ತಕ “history of regulation” ದಲ್ಲಿ ಒಂದು ಎಚ್ಚರಿಕೆಯ ಸಂದೇಶ ನೀಡುತ್ತಾನೆ . ಶತಮಾನಗಳಿಂದ “ಕಾನೂನು ನಿರ್ಮಿಸುವವರು ತಾವು ಕಾನೂನು ನಿರ್ಮಿಸುತ್ತಿರುವ ಉದ್ಯಮಕ್ಕೆ ಹೋಲುವ ಹಾಗೆ ಕಾನೂನು ನಿರ್ಮಿಸಲಾಗದೆ ಸೋತಿದ್ದಾರೆ “. ಈಗಿರುವ “privacy and antitrust” ಕಾನೂನುಗಳು ಅತ್ಯಂತ ಅಗತ್ಯ ಆದರೆ ಇವುಗಳಷ್ಟೇ ಇವತ್ತು ಸೃಷ್ಟಿಯಾಗಿರುವ “ಮಾಹಿತಿ ಅಸಮಾನತೆಯನ್ನು ” ಹೋಗಲಾಡಿಸಲು ಸಾಧ್ಯವಿಲ್ಲ .

೨೧ನೇ ಶತಮಾನದ ಈ ಸ್ಪರ್ಧಾ ಪ್ರಪಂಚಕ್ಕೆ ಹೊಸದೇ ಆದ ಕಾನೂನಿನ ಚೌಕಟ್ಟು ಮತ್ತು ಮಾಹಿತಿ ಹಕ್ಕುಗಳು ನಮ್ಮ ಪ್ರಜಾಪ್ರಭುತ್ವದ ಕಾನೂನಿನ ಚೌಕಟ್ಟಿನ ಒಳಗಡೆ ಸೇರಬೇಕು . ಈ ಬಗೆಯ ಹಕ್ಕುಗಳು ಮಾಹಿತಿ ಹಂಚುವ ಮತ್ತು ಹಂಚುವ ಮೊದಲು ಬಳಕೆದಾರರ ಗಮನಕ್ಕೆ ತರುತ್ತವೆ ಹಾಗು ಅವುಗಳ ದುರುಪಯೋಗವನ್ನು ತಡೆಯುತ್ತವೆ . ಒಬ್ಬ ವ್ಯಕ್ತಿಯ ಬದುಕನ್ನು ಅಂಕಿಅಂಶಗಳಾಗಿ ಬದಲಾಯಿಸುವ ಹಕ್ಕು ಸಂಪೂರ್ಣವಾಗಿ ಆ ವ್ಯಕ್ತಿಗೆ ಸೇರಿರಬೇಕಾಗಿದ್ದು ಪ್ರಜಾಪ್ರಭುತ್ವದ ಮೂಲಭೂತ ಲಕ್ಷಣ . ಅದರ ಅರ್ಥ , ಈ ಸಂಸ್ಥೆಗಳು ನಮ್ಮ ಮುಖ ಚಹರೆಯ ಮೇಲೆ ಹಕ್ಕನ್ನು ಹೊಂದಲಾಗುವುದಿಲ್ಲ , ಮತ್ತು ತಮ್ಮ ಲಾಭಕ್ಕಾಗಿ ಅದನ್ನು ಮಾರಿಕೊಳ್ಳುವ ಹಾಗಿಲ್ಲ . ಈ ಮಾಹಿತಿ ಹಕ್ಕುಗಳ ಬಗ್ಗೆ ಚರ್ಚೆ ಈಗಾಗಲೇ ಶುರುವಾಗಿದೆ , ಮತ್ತು “Amnesty International”ನ ವರದಿಯಲ್ಲಿ ಈಗಾಗಲೇ ದಾಖಲಾಗಿದೆ

ಬೇಡಿಕೆಯ ಕಡೆಯಿಂದ , ನಾವು “ಮನುಷ್ಯನ ಭವಿಷ್ಯದ ” ಬಗೆಗಿನ ಮಾರುಕಟ್ಟೆಗಳನ್ನು ಕಾನೂನು ಬಾಹಿರ ಮಾಡಿ , ಇವುಗಳಿಂದ ಉತ್ಪಾದನೆಯಾಗುತ್ತಿರುವ ಹಣಕಾಸು ಲಾಭವನ್ನು ನಿಯಂತ್ರಿಸಬಹುದು . ಇದೇನು ಅಂತಹ ಅಸಾಧ್ಯವಾದ ಬದಲಾವಣೆಯಲ್ಲ . ಉದಾಹರಣೆಗೆ , ಸಮಾಜಗಳು ಮನುಷ್ಯನ ಅಂಗಾಗಳನ್ನು , ಶಿಶುಗಳನ್ನು ಮತ್ತು ಗುಲಾಮರನ್ನು ಮಾರುವುದನ್ನು ಕಾನೂನು ಬಾಹಿರ ಮಾಡಿದ್ದೇವೆ . ಮತ್ತು ಈ ಎಲ್ಲ ಸಂದರ್ಭಗಳಲ್ಲೂ ಸಹ ಇಂತಹ ಮಾರುಕಟ್ಟೆಗಳು ನೈತಿಕವಾಗಿ ಅಸಹ್ಯಕರ ಮತ್ತು ಇಂಥಹವು ನಾವು ಅಂದಾಜಿಸುವ ಹಾಗೆಯೇ ಹಿಂಸಾ ಕೃತ್ಯಗಳಲ್ಲಿ ಕೊನೆಯಾಗುತ್ತವೆ ಎಂದು ನಮಗೆ ತಿಳಿದಿದೆ. ಈ ಮನುಷ್ಯನ ಭವಿಷ್ಯದ ಮಾರುಕಟ್ಟೆಗಳೂ ಕೂಡ ಇಂಥಹಃದೆ ಫಲಿತಾಂಶ ನೀಡಿ ನಮ್ಮ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತವೆ ಎಂದು ತೋರಿಸಬಹುದು .

ಒಂದು ಸ್ಪರ್ಧಾತ್ಮಕ ಹೊಸ ವ್ಯವಸ್ಥೆಯನ್ನು ಸೃಷ್ಟಿಸಲು , ಕಾನೂನು ನಿಮಾಣಮಾಡುವವರು ಹೊಸ ಬಗೆಯ ಯೋಚನಾಕ್ರಮಗಳನ್ನು ಅಳವಡಿಸಿಕೊಂಡು , ಶತಮಾನಗಳ ಹಿಂದೆ ವ್ಯಕ್ರಿ ಸ್ವಾತಂತ್ರ್ಯದ ಹಕ್ಕುಗಳಿಗೆ ಹೋರಾಡಿದ ಹಾಗೆ , ಸಂಘಟಿತರಾಗಿ ಹೋರಾಡಿ ಈ ಏಕ ಸ್ವಾಮ್ಯತೆ ಸಾಧಿಸರುವ ಬಂಡವಾಳಶಾಹಿ ಸಂಸ್ಥೆಗಳನ್ನು ನಿಯಂತ್ರಿಸಬೇಕು . ನಮ್ಮ ಸಂಸದರು , ಇಂತಹ ಅನಿಯಂತ್ರಿತ ಶಕ್ತಿಗಳ ಬಗ್ಗೆ ಎಚ್ಛೆತ್ತಿರುವ ಜನಗಳ ಜತೆ ಕೈ ಜೋಡಿಸಬೇಕು ಮತ್ತು ಇಂತಹ ಬೇಹುಗಾರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ರಕ್ಷಣೆಗೆ ನಿಲ್ಲಬೇಕು

ಮನುಷ್ಯನಿಂದ ನಿರ್ಮಿತವಾದ ಏನನ್ನಾದರೂ ಮನುಷ್ಯನೇ ನೆಲಗೆಡವಬಹುದು . ಬೇಹುಗಾರಿಕಾ ಬಂಡವಾಳಶಾಹಿ ವ್ಯವಸ್ಥೆ ಇನ್ನೂ ಹೊಸತು , ಕೇವಲ ೨೦ ವರ್ಷ ಹಿಂದಿನದು , ಆದರೆ ಪ್ರಜಾಪ್ರಭುತ್ವ ಹಳೆಯದು , ಹಲವಾರು ತಲೆಮಾರುಗಳ ಭರವಸೆ ಮತ್ತು ಹೋರಾಟದಿಂದ ನಿರ್ಮಿತವಾಗಿರುವುದು

ಬೇಹುಗಾರಿಕಾ ಬಂಡವಾಳ ಶಾಹಿಗಳು ಶ್ರೀಮಂತರು ಮತ್ತು ಶಕ್ತಿಶಾಲಿಗಳು , ಆದರೆ ಅವರಿಗೆ ದುರ್ಬಲತೆಗಳೇ ಇಲ್ಲ ಅನ್ನುವ ಹಾಗೇನಿಲ್ಲ. ಅವರಿಗೂ ಒಂದು ದುರ್ಬಲತೆಯಿದೆ , ಅದೇ ಭಯ . ಅವರಿಗೆ ಕಾನೂನು ನಿರ್ಮಿಸುವವರ ಮೇಲೆ ಭಯವಿದೆ . ಹೊಸ ಸಾಧ್ಯತೆಗಳನ್ನು ಹುಡುಕುತ್ತಿರುವ , ಮತ್ತದೇ ಹಳೆಯ ಪ್ರಶ್ನೆಗಳಾದ ಹೊಸ ಉತ್ತರ ಹುಡುಕುತ್ತಿರುವ ನಾಗರೀಕರ ಬಗ್ಗೆಗೆ ಭಯವಿದೆ , ಯಾರಿಗೆ ತಿಳಿದಿರಬೇಕು ? ಯಾರಿಗೆ ತಿಳಿದಿರಬೇಕು ಎಂದು ನಿರ್ಧರಿಸುವವರು ಯಾರು ? ಯಾರು ನಿರ್ಧರಿಸಬೇಕು ಎಂದು ನಿರ್ಧರಿಸುವವರು ಯಾರು ? ಸಂಗೀತ ಬರೆಯುವವರು ಯಾರು ಮತ್ತು ಆ ಸಂಗೀತಕ್ಕೆ ನರ್ತಿಸುವವರು ಯಾರು ? .

ಪೂರ್ಣ ಲೇಖನವನ್ನು ಪಿಡಿಫ್ ರೂಪದಲ್ಲಿ ಈ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು .
https://ruthumana.com/storage/2020/04/You-Are-Now-Remotely-Controlled-1.pdf

ಕನ್ನಡಕ್ಕೆ: ಮಂಜುನಾಥ್‌ ಚಾರ್ವಾಕ

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌. ವಿಶ್ವದ ಒಳ್ಳೆಯ ಕಥೆಗಳನ್ನು, ಬರಹಗಳನ್ನು ಕನ್ನಡಕ್ಕೆ ತರುವ ತವಕ ಹೊಂದಿರುವ ಮಂಜುನಾಥ್ ಒಳ್ಳೆಯ ಫೋಟೋಗ್ರಾಫರ್ ಕೂಡ.

ಮೂಲ : https://www.nytimes.com/2020/01/24/opinion/sunday/surveillance-capitalism.html

One comment to “ಕೂತಲ್ಲೇ ನಿಮ್ಮನ್ನು ನಿಯಂತ್ರಿಸಲಾಗುತ್ತಿದೆ – ಭಾಗ ೨”
  1. ತಮ್ಮ ಸಂವೇದನೆಗಳನ್ನು ಪ್ರಕಟಿಸಲು ಸಾಮಾಜಿಕ ಜಾಲತಾಣ ದಿಂದ ಮಾತ್ರ ಸಾಧ್ಯವೆಂದು ನಂಬಿರುವಾಗ, ಜನರಿಗೆ ತಮ್ಮ ಮಾಹಿತಿ ಲೀಕ್ ಆಗುತ್ತಿರುವ ಬಗ್ಗೆ ಗಮನವಿಲ್ಲ.ಗುಂಪುಗಳಿಗೆ ಮಾತ್ರ ಅವಕಾಶಕೊಡುತ್ತಿರುವ ಎಲ್ಲಾ ರೀತಿಯ ಪತ್ರಿಕೆಗಳ ಕೊಡುಗೆಯೂ ಬಹಳಷ್ಟಿದೆ

ಪ್ರತಿಕ್ರಿಯಿಸಿ