ಜಾತಿಯ ವಿಷವರ್ತುಲ ಇಂದಿನ ದಿನಗಳಲ್ಲಿ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದೆ. ಭಾರತದ ಸಂದರ್ಭದಲ್ಲಿ ಜಾತಿಗಳ ಕುರಿತು ಮಾತನಾಡುವುದೇ ಅಪರಾಧ ಎಂಬ ವಿಚಿತ್ರ ಮನೋಭಾವವಿದೆ. ಜಾತಿಯ ಕುರಿತು ಮಾತನಾಡಿದರೆ ಜಾತಿಯ ನಿರ್ಮೂಲನೆ ಆಗುವುದಿಲ್ಲ ಬದಲಾಗಿ ಅದು ಹಾಗೆಯೇ ಉಳಿಯಲು ಸಹಾಯ ಮಾಡಿದಂತಾಗುತ್ತದೆ ಎಂದು ವಾದಿಸುವವರಿದ್ದಾರೆ . ಆದರೆ ಜಾತಿ ನಮ್ಮ ಸಮಾಜದ ಕಟು ವಾಸ್ತವ . ಸಮಸ್ಯೆಗಳನ್ನು ಚರ್ಚಿಸದೆ ಅದರ ಪರಿಹಾರದ ಕುರಿತು ಮಾತನಾಡುವುದು ಮೂರ್ಖತನವಾಗುತ್ತದೆ. ಮುಕ್ತವಾಗಿ ನಮ್ಮ ಸಮಾಜದ ಜಾತಿ ವ್ಯವಸ್ಥೆಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ಚರ್ಚೆಗೆ ಒಡ್ಡಬೇಕು ಎಂಬ ಉದ್ದೇಶದಿಂದ ನಾವು ಹೊಸ ಸರಣಿಯನ್ನು ಆರಂಭಿಸುತಿದ್ದೇವೆ. ಇಂತಹ ಒಂದು ಪ್ರಯತ್ನವನ್ನು ‘ಪ್ರಜಾವಾಣಿ’ ಹಿಂದೆ ಮಾಡಿತ್ತು . ಗೋಪಾಲ್ ಗುರು ಮತ್ತು ಸುಂದರ ಸಾರುಕ್ಕೈ ಈ ಸಂವಾದದ ಸಮನ್ವಯಕಾರರಾಗಿದ್ದರು . ಪುಸ್ತಕ ರೂಪದಲ್ಲಿಯೂ ಈ ಸಂವಾದ ಈಗ ಲಭ್ಯವಿದೆ . ಜಾತಿಯ ವಿವಿಧ ಮುಖಗಳ ಮತ್ತು ಅದರ ಸಾಮಾಜಿಯ ಪರಿಣಾಮಗಳ ಚರ್ಚೆ ಇಂದಿಗೂ ಪ್ರಸ್ತುತವೇ . ಹಾಗಾಗಿ ಇಂದಿನ ಪರಿಸ್ಥಿಯಲ್ಲಿ ಜಾತಿಯನ್ನು ಅವಲೋಕಿಸುವ ಪ್ರಯತ್ನವನ್ನು ಮತ್ತೆ ಮಾಡುತಿದ್ದೇವೆ . ಈ ಸರಣಿಯಲ್ಲಿ ಮುಂದೆ ಹಲವು ಜನರ ವಿಡಿಯೋ , ಆಡಿಯೋ , ಬರಹಗಳು ಬರಲಿವೆ . ಈ ಮಾಲಿಕೆಯಲ್ಲಿ ಮೊದಲಿಗೆ ಸುಂದರ ಸಾರುಕ್ಕೈ ಅವರ ಮಾತುಗಳು ಮೂರು ಕಂತುಗಳಲ್ಲಿ ಪ್ರಕಟವಾಗುತ್ತವೆ. ಸುಂದರ ಸಾರುಕ್ಕೈ ಅವರು ಬೆಂಗಳೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‍ನಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರು.