ಟಿ. ಎಸ್. ವೇಣುಗೋಪಾಲ್ ಸಂಪಾದಿಸಿರುವ ಹಲವು ಪ್ರಮುಖ ಅರ್ಥಶಾಸ್ತ್ರಜ್ಞರ ಲೇಖನಗಳ ಮೂರನೇ ಸಂಚಿಕೆ . ಇಲ್ಲಿ ಲಗತ್ತಿಸಲಾದ ಪಿ.ಡಿ.ಎಫ್ ಪ್ರತಿಯನ್ನು ನೇರವಾಗಿ ಓದಬಹುದು ಮತ್ತು ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.
ಅರ್ಥ ಸಂಗ್ರಹದ ಮೂರನೆಯ ಸಂಚಿಕೆಯನ್ನು ಈಗ ನಿಮ್ಮ ಮುಂದೆ ಇಡುತ್ತಿದ್ದೇವೆ. ಸ್ವಾಭಾವಿಕವಾಗಿಯೇ ಎಲ್ಲಾ ಲೇಖನಗಳು ಕೊರೋನ ಮಹಾಮಾರಿಯ ಪರಿಣಾಮದಿಂದ ಉಂಟಾಗಬಹುದಾದ ಆರ್ಥಿಕ ಬಿಕ್ಕಟ್ಟನ್ನು ಕುರಿತೇ ಇದೆ. ಮತ್ತೆ ಅದೇ ಚರ್ಚೆ. ಜೀವ ಮುಖ್ಯವೋ ಜೀವನ ಮುಖ್ಯವೋ? ಹಾಗೇ ಇವೆರಡನ್ನು ಎದುರು ಬದುರು ಇಟ್ಟು, ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳುವುದು ಸರಿಯಲ್ಲ. ನಿಜ, ವೈರಾಣುವನ್ನು ನಿಯಂತ್ರಿಸುವುದು ಬಹಳ ಮುಖ್ಯ, ಅದಕ್ಕೆ ಆದ್ಯತೆ ಕೊಡಬಾರದು ಎಂದು ಯಾವ ಅರ್ಥಶಾಸ್ತ್ರಜ್ಞರು ಹೇಳುತ್ತಿಲ್ಲ. ಆದರೆ ಅದು ಸೃಷ್ಟಿಸುತ್ತಿರುವ, ಹಾಗೂ ಮುಂದೆ ಬರುವ ಆರ್ಥಿಕ ಬಿಕ್ಕಟ್ಟು ಅಷ್ಟೇ ಮುಖ್ಯ. ಅದನ್ನು ಗಮನಿಸದೇ ಹೋದರೆ ಮುಂದೆ ತೊಂದರೆ ತೀವ್ರವಾಗಬಹುದು ಅನ್ನುವ ಎಚ್ಚರಿಕೆ ಬೇಕು.
ಸಧ್ಯಕ್ಕೆ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ, ನಿರ್ಗತಿಕರಾಗಿದ್ದಾರೆ. ಅವರನ್ನು ಗಮನಿಸುವುದು ನಮ್ಮ ಕರ್ತವ್ಯ. ಅದಕ್ಕೆ ಎಲ್ಲಾ ದೇಶದ ಸರ್ಕಾರಗಳು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಅಮೆರಿಕೆ ೨ ಟ್ರಿಲಿಯನ್ ಡಾಲರನ್ನು ಅಂದರೆ ಒಟ್ಟು ಜಿಡಿಪಿ ಶೇಕಡ ೧೦ರಷ್ಟನ್ನು ಇದಕ್ಕಾಗಿ ಮೀಸಲಿಟ್ಟಿದೆ. ಬಹುಪಾಲು ರಾಷ್ಟ್ರಗಳು ಜಿಡಿಪಿಯ ೧೦ರಿಂದ ೧೫ರಷ್ಟನ್ನು ಖರ್ಚು ಮಾಡುತ್ತಿವೆ. ಭಾರತ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿದೆ. ಅದು ಜಿಡಿಪಿಯ ಶೇಕಡ ಒಂದಕ್ಕಿಂತ ಕಡಿಮೆ ಖರ್ಚುಮಾಡುತ್ತಿದೆ. ನಿಜ, ನಮ್ಮ ದೇಶ ಕೊರೋನ ಬರುವುದಕ್ಕಿಂತ ಮೊದಲೇ ಆರ್ಥಿಕ ಬಿಕ್ಕಟ್ಟಿನಲ್ಲಿತ್ತು. ಹಾಗಾಗಿ ಉಳಿದ ದೇಶಗಳಷ್ಟು ಅಲ್ಲದೇ ಹೋದರೂ ಜಿಡಿಪಿಯ ಶೇಕಡ ೫ರಷ್ಟಾದರೂ ಖರ್ಚು ಮಾಡುವುದು ಅನಿವಾರ್ಯ. ವಿತ್ತೀಯ ಶಿಸ್ತು ಇತ್ಯಾದಿ ವಿಷಯಗಳನ್ನು ಬದಿಗಿಡಬೇಕಾಗುತ್ತದೆ.
ಎರಡನೆಯದಾಗಿ ದುರ್ಬಲರಿಗೆ ಆಹಾರ ಹಾಗೂ ನಗದು ತಕ್ಷಣ ಸಿಗುವುದಕ್ಕೆ ವ್ಯವಸ್ಥೆ ಮಾಡುವುದು ಅನಿವಾರ್ಯ. ಇದು ಮಾನವೀಯ ಕಾರಣಕ್ಕೆ ಮಾತ್ರವಲ್ಲ. ಅರ್ಥಶಾಸ್ತ್ರದ ದೃಷ್ಟಿಯಿಂದಲೂ ಜನರ ಕೈಯಲ್ಲಿ ಹಣ ಇರಬೇಕು. ಆಗಷ್ಟೆ ಬೇಡಿಕೆ ಸಾಧ್ಯ.
ತುಂಬಾ ದಿನ ಲಾಕ್‌ಡೌನ್ ಸಾಧ್ಯವಿಲ್ಲ. ಮತ್ತೆ ಪ್ರಾರಂಭ ಮಾಡಲೇ ಬೇಕು. ಆ ಪ್ರಕ್ರಿಯೆಯನ್ನು ಕುರಿತು ಚಿಂತನೆ ಬೇಕು. ಸಿದ್ಧತೆ ಬೇಕು. ತಯಾರಿಯ ಕೊರತೆ ಎಲ್ಲದರಲ್ಲೂ ಕಾಣುತ್ತಿದೆ. ಪರಿಣತರ ಮಾತು ಕೇಳಿಸಿಕೊಳ್ಳೋಣ.
ಈ ದೃಷ್ಟಿಯಲ್ಲಿ ಹಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯವನ್ನು, ಚಿಂತನೆಗಳನ್ನು, ಸಲಹೆಗಳನ್ನು ಇಲ್ಲಿ ಒಂದು ಕಡೆ ಕೊಡಲಾಗಿದೆ. ಅಭಿಜಿತ್ ಬ್ಯಾನರ್ಜಿ, ರಘುರಾಂ ರಾಜನ್, ಕೌಶಿಕ್ ಬಸು, ಅಮರ್ತ್ಯಸೇನ್ ಮೊದಲಾದ ಪ್ರಖ್ಯಾತ ಅರ್ಥಶಾಸ್ತ್ರಜ್ಞರ ಮಾತುಗಳನ್ನು ಇಲ್ಲಿ ಸಂಗ್ರಹಿಸಿದ್ದೇವೆ. ಜೊತೆಗೆ ಕೇರಳದ ಪ್ರಯೋಗವನ್ನು ಕುರಿತಂತೆ ಅದರ ಮುಖ್ಯಮಂತ್ರಿಗಳ ಮಾತನ್ನು ಕೊಡಲಾಗಿದೆ. ಹಿಂದಿನ ಸಂಚಿಕೆಯಲ್ಲಿ ನೀಡಿದ್ದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೊ ಅವರ ವಲಸೆಕಾರ್ಮಿಕರ ಅಧ್ಯಯನದ ಎರಡನೆಯ ಭಾಗವಿದೆ.
ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ,
ವೇಣುಗೋಪಾಲ್
[3d-flip-book mode=”fullscreen” urlparam=”fb3d-page” pdf=”https://ruthumana.com/storage/2020/04/artha-3.pdf”]