ಕೊರೋನಾ ಕಾಲದಲ್ಲಿ ಗ್ರಾಮೀಣ ಬದುಕು : ಮುಂಡರಗಿ ತಾಲೂಕು

ಕೊರೊನಾ ಕಾಲದಲ್ಲಿನ ಗ್ರಾಮಿಣ ಬದುಕಿನ ಚಿತ್ರಗಳನ್ನ ಋತುಮಾನಕ್ಕಾಗಿ ಎ.ಆರ್.ವಾಸವಿ ಮತ್ತು ಕೆ.ಪಿ ಸುರೇಶ ಸಂಪಾದಿಸಿ ಕೊಟ್ಟಿದ್ದಾರೆ.ಇಂತಹ ನಾಡಿನ ಹತ್ತು ವಿವಿಧ ಹಳ್ಳಿಯ ಚಿತ್ರಗಳು ದಿನಕ್ಕೊಂದರಂತೆ ಕೊರೊನಾ ಕಾಲದಲ್ಲಿ ಗ್ರಾಮಿಣ ಬದುಕು ಅನ್ನುವ ಶೀರ್ಷಿಕೆಯಲ್ಲಿ ಋತುಮಾನದಲ್ಲಿ ಪ್ರಕಟವಾಗುತ್ತಿದೆ

ಜಾಗತಿಕವಾದ  ಕೋವಿಡ್-19 ಮಹಾಮಾರಿಯಿಂದ  ಗ್ರಾಮೀಣ  ಬದುಕಿನಲ್ಲಿ ನಿರ್ವಾತ ಸ್ಥಿತಿ ನಿರ್ಮಾಣವಾಗಿದೆ.  ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು ಏನೂ ಕೆಲಸ ಮಾಡದಂತಹ ಸ್ಥಿತಿಯು ಪ್ರತಿಯೊಬ್ಬ ವ್ಯಕ್ತಿ, ಸಮುದಾಯದಲ್ಲಿ ಮನೆ ಮಾಡಿದ್ದು, ಜನರು ಅಸಹಾಯಕತೆಯಿಂದ  ಕೈಚೆಲ್ಲಿ  ಮನೆಯಲ್ಲಿ ಕುಳಿತುಕೊಂಡಿದ್ದಾರೆ.

ಕೊರೋನಾ ವೈರಸ್ ಚೀನಾದಲ್ಲಿ ಹುಟ್ಟಿ ಜಾಗತಿಕವಾಗಿ ವ್ಯಾಪಿಸಿ, ಭಾರತದ ಚಿಕ್ಕ ಹಳ್ಳಿಗೂ ದಾಪುಗಾಲು ಇಟ್ಟು ಜನರ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ತಂದಿದೆ.ಯಾರೋ ಮಾಡಿದ ತಪ್ಪಿಗೆ, ಮತ್ತೊಬ್ಬರು ಶಿಕ್ಷೆಯನ್ನು ಅನುಭವಿಸುವಂತೆ ಆಗಿರುವದು ದುರಂತದ ಸಂಗತಿಯಾಗಿದೆ.

ಕೃಷಿ :

ರೈತರು ಹೊಲದಲ್ಲಿ ಬೆಳೆದ ವಾಣಿಜ್ಯ ,ತೋಟಗಾರಿಕೆ  ಬೆಳೆಗಳು ಮಾರಾಟ ಮಾಡದೇ, ಬಂದಿರುವ ಬೆಳೆಯು ಇದ್ದಲ್ಲಿಯೇ ಕೊಳೆಯುವಂತೆ ಆಗಿದೆ. ಬೇಸಿಗೆಯ ಮುಖ್ಯ ತೋಟಗಾರಿಕೆ  ಬೆಳೆಗಳಾದ ಕಲ್ಲಂಗಡಿ, ಕರಬೂಜ್, ಚಿಕ್ಕು, ಬಾಳೆ ಬೆಳೆಯ ಭರಪೂರ ಫಸಲು ಬಂದಿದ್ದರೂ, ಮಾರುಕಟ್ಟೆಯ ವ್ಯವಸ್ಥೆಯು ಇಲ್ಲದಂತೆ ಆಗಿ ಹೊಲದಲ್ಲಿ ಕೊಳೆಯುತ್ತಿದೆ. ವ್ಯಾಪಾರಿಗಳು ಬೇಡಿಕೆಯು ಇಲ್ಲ ಎನ್ನುವ ನೆಪವೊಡ್ಡಿ  ಬಾಯಿಗೆ ಬಂದಂತೆ ಬೆಲೆಯನ್ನು ಕೇಳುತ್ತಿದ್ದಾರೆ. ಇದರಿಂದ ಬೆಳೆ ಬೆಳೆದ ರೈತರು ರೋಸಿಹೋಗಿ ಕಲ್ಲಂಗಡಿ, ಕರಬೂಜ,ಪಪ್ಪಾಯಿಗಳನ್ನು ಹೊಲದಲ್ಲಿ ಹರಗುತ್ತಿದ್ದಾರೆ ಇಲ್ಲವೇ ನೆರೆಹೊರೆಯವರಿಗೆ ಹಂಚುತ್ತಿದ್ದಾರೆ.ಹೊಲದಲ್ಲಿಯೇ ಹಣ್ಣುಗಳು ಕೊಳೆಯುವಂತೆ ಆಗಿರುವ ದುರಂತದ ಸಂಗತಿಯಾಗಿದೆ.ತುರ್ತು ಸಂದರ್ಭದಲ್ಲಿ ಮಾರುಕಟ್ಟೆ ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಸರಕಾರಗಳು ವಿಫಲವಾಗಿರುವದೇ ಇದಕ್ಕೆಲ್ಲಾ ಕಾರಣ ಎಂಬಂತೆ ಆಗಿದೆ.

ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದ ರೈತ ಇಮಾಮಸಾಬ ಬಾಳನಾಯ್ಕರ ಮೂರು ಎಕರೇ ಪ್ರದೇಶದಲ್ಲಿ ಬಾಳೆ ಬೆಳೆದಿದ್ದರೂ, ಬೇಡಿಕೆ ಇಲ್ಲದ ಕಾರಣಕ್ಕೆ ಮೂರು ಲಕ್ಷ ಮೌಲ್ಯ ಬಾಳೆಯು ತೋಟದಲ್ಲಿ ಕೊಳೆಯುತ್ತಿದೆ. ಬಾಳೆ ಬೆಳೆಯಲು ರೈತ ಮಾಡಿದ ಖರ್ಚು ಸೇರಿದಂತೆ ಬರಬೇಕಿದ್ದ ಲಾಭವು ಸೇರಿ ಇಮಾಮಸಾಬನಿಗೆ ಏನಿಲ್ಲವೆಂದರೂ ನಾಲ್ಕು ಲಕ್ಷ ರೂಪಾಯಿಗಳ ನಷ್ಠವು ಉಂಟಾಗಿದೆ. ಅದೇ ಗ್ರಾಮದ ಇನೋರ್ವ ರೈತನ ನಾಗರಾಜನು 3.5 ಎಕರೇ ಪ್ರದೇಶದಲ್ಲಿ 2ಲಕ್ಷ ರೂಪಾಯಿಗಳ ಖರ್ಚು ಮಾಡಿ ಪಪ್ಪಾಯಿಯನ್ನು ಬೆಳೆದಿದ್ದನು.ಆದರೇ ಮಳೆಗಾಳಿಗೆ ಅರ್ಧದಷ್ಟು ಪಪ್ಪಾಯಿಯು ನೆಲಕ್ಕೆ ಉರುಳಿದ್ದರೇ, ಕಟಾವಿಗೆ ಬಂದ ಪಪ್ಪಾಯಿಯನ್ನು ಖರೀದಿಸುವರೇ ಇಲ್ಲದೇ ತೋಟದಲ್ಲಿಯೇ ಕೊಳೆಯುವಂತೆ ಆಗಿದ್ದು, ಲಕ್ಷಾಂತರ ರೂಪಾಯಿಗಳ ನಷ್ಟವನ್ನು ಅನುಭವಿಸುವಂತೆ ಆಗಿದೆ. ಹೆಸರೂರು ಗ್ರಾಮದ ವಿಶ್ವನಾಥ ಗಡ್ಡ ಎಂಬ ಯುವ ರೈತ ಮೂರು ಎಕರೆ ಕಲ್ಲಂಗಡಿಯನ್ನು ಬೆಲೆ ಕುಸಿದ ಕಾರಣಕ್ಕೆ ಹೊಲದಲ್ಲಿ ಹರಗಿರುವದು. ಇಂತಹ ನೂರಾರು ಕಥೆಗಳು ಗ್ರಾಮೀಣ ಪ್ರದೇಶದ ಹಳ್ಳಿಗಾಡಿನಲ್ಲಿ ಕಾಣ ಸಿಗುತ್ತವೆ. ಒಂದೆಡೆ ಪ್ರಕೃತಿ ವಿಕೋಪ ಮತ್ತೊಂದೆಡೆಗೆ ಕೊರೋನಾ ಕಾರಣಕ್ಕೆ ಮಾರುಕಟ್ಟೆಯ ಕುಸಿತವು ರೈತ ಸಮುದಾಯವನ್ನು ಆರ್ಥಿಕ ಸಂಕಷ್ಠಕ್ಕೆ ಗುರಿ ಮಾಡಿದೆ. ಇದರಿಂದ ಗ್ರಾಮೀಣ ಕೃಷಿಯನ್ನು ಆಧರಿಸಿ ಇರುವ ಉಪಕಸಬು, ಉದ್ಯೋಗಳಿಗೆ ಕತ್ತರಿಯಂತೂ ಬಿದ್ದಿದೆ. ರೈತರು ಯಾವುದೇ ಉತ್ಪನ್ನ ಮಾರಾಟ ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆಗಳು ಕೂಡಾ ಲಾಕ್ ಡೌನಿನ ಸುಳಿಯಲ್ಲಿ ಸಿಲುಕಿವೆ.

ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಒಂದು ನೂರು ರೈತ ಕುಟುಂಬಗಳು ಗ್ರಾಮದ ಲಾಕ್‍ಡೌನಿಗೆ ಪರ್ಯಾಯವಾಗಿ ಗ್ರಾಮವನ್ನು ತೊರೆದು ತೋಟದ ಮನೆಯಲ್ಲಿ ವಾಸಿಸುವ ಇಲ್ಲವೇ ಹೊಲದಲ್ಲಿಯೇ ಟೆಂಟ್ ಹಾಕಿಕೊಂಡು ದಿನಗಳನ್ನು ದೂಡುತ್ತಾ, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವದು ವಿಶೇಷ ಸಂಗತಿಯಾಗಿದೆ.

ವಲಸೆ : 

ಪ್ರತಿ ಗ್ರಾಮದಲ್ಲೂ ಬೇರೆ ರಾಜ್ಯಗಳಿಗೆ ಕೆಲಸ ಅರಸಿ ಗುಳೆ ಹೋದವರು ಪಡಬಾರದ ಕಷ್ಠಪಟ್ಟು, ಜೀವ ಉಳಿದರೇ ಸಾಕು, ಮರಳಿ ನಮ್ಮ ಊರಿಗೆ ತಲುಪಿದರೇ ಸಾಕೆಂದು ಮರಳಿ ಬಂದಿದ್ದಾರೆ. ಕೆಲವರು ಹೋಮ್ ಕಾರಂಟೈನ್ ಆದವರು ಗ್ರಾಮಗಳಲ್ಲಿ ಅಡ್ಡಾಡುವದು ಸಾಮಾನ್ಯವೆಂಬಂತೆ ಆಗಿದೆ. ಗ್ರಾಮಗಳಿಗೆ ಮರಳಿದವರ ಸಂಖ್ಯೆಯು ಶೇ.15ರಷ್ಟು ಇದ್ದರೇ, ಕೆಲಸ ಅರಸಿ ಗುಳೆ ಹೋದ ಕಾರ್ಮಿಕರ ಸಂಖ್ಯೆಯು ಗೋವೆ ಒಂದರಲ್ಲಿಯೇ 10 ಸಾವಿರದಷ್ಟು ಜನರು ಲಾಕ್‍ಡೌನ್ ಅಗಿರುವ ಅಂದಾಜು ಇದೆ. ಗೋವೆಯಲ್ಲಿ ಲಾಕ್ ಡೌನ್ ಆಗಿರುವವರಿಗೆ ಕೆಲಸವೂ ಇಲ್ಲ ತಿನ್ನಲು ಆಹಾರವು ಇಲ್ಲದಂತೆ ಆಗಿದೆ.ಈ ಜನರು ಗ್ರಾಮಕ್ಕೆ ಮರಳುವ ನಿರೀಕ್ಷೆಯಲ್ಲಿ ಇದ್ದಾರೆ. ಗೋವೆಯಲ್ಲಿ ಲಾಕ್‍ಡೌನಲ್ಲಿ ಸಿಲುಕಿರುವ ಜನರಿಗೆ ಗದಗ ಜಿಲ್ಲೆಯ ಹಾಲಿ ಮತ್ತು ಮಾಜಿ ಸಚಿವ, ಶಾಸಕರು, ಸಂಘ-ಸಂಸ್ಥೆಯವರು ಆಹಾರ ಧಾನ್ಯಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ಈ ಕಳುಹಿಸಿರುವ ಆಹಾರ ಧಾನ್ಯಗಳು ಲಾಕ್‍ಡೌನ್ ಆಗಿರುವ ಜನರಿಗೆ ರಾವಣನ ಹೊಟ್ಟೆಗೆ ಅರೇಕಾಸಿನ ಮಜ್ಜಿಗೆಯಂತೆ ಆಗಿರುವದಂತೂ ದುರಂತವೇ ಸರಿ.

ಕೆಲಸವು ಇಲ್ಲ ಕೊಳ್ಳುವ ಶಕ್ತಿಯೂ ಇಲ್ಲ:

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೂಲಿಯ ಕೆಲಸವಿಲ್ಲದೇ ಜನರು ನಿರುದ್ಯೋಗಿಗಳಾಗಿ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಪ್ರತಿದಿನವೂ ಕೂಲಿ ಕೆಲಸವನ್ನು ಮಾಡಿ ಕುಟುಂಬದ ತುತ್ತಿನ ಚೀಲ ತುಂಬುವ ಅನಿವಾರ್ಯತೆಯಿರುವವರಿಗೆ ಕೆಲಸದ ಅವಶ್ಯಕತೆಯಂತೂ ತುಂಬಾ ಇದೆ. ಸರಕಾರ ಪ್ರತಿಕುಟುಂಬಕ್ಕೂ ಪಡಿತರ ವಿತರಣೆ ಮಾಡುತ್ತದೆ. ಸಂಘ-ಸಂಸ್ಥೆಗಳು ಕೂಡಾ ಪಡಿತರ ಇನ್ನಿತರೇ ಸಾಮಾನುಗಳು ವಿತರಣೆ ಮಾಡುತ್ತಾರೆ ಎನ್ನುವ ಸಮಜಾಯಷಿ ನೀಡಿದರೂ, ಇದು ಎಷ್ಟು ದಿನ ನಡೆಯಲಿದೆ.? ಪಡಿತರ ನೀಡಿದ ಮಾತ್ರಕ್ಕೆ ಕುಟುಂಬದ ಬೇಡಿಕೆಗಳು ಮುಗಿದಂತೆ ಆಗುವದಿಲ್ಲವಲ್ಲ ?.

ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ಮತ್ತು ದಿನಸಿ ವಸ್ತುಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವದು ಹಗಲಿನಷ್ಠೆ ಸತ್ಯ. ಕೆಲಸವು ಇಲ್ಲ ಕೊಳ್ಳುವ ಶಕ್ತಿಯು ಕಡಿಮೆಯಾಗಿರುವಾಗ ದುಪ್ಪಟ್ಟು ಬೆಲೆ ಕೊಟ್ಟು ದಿನಸಿಯನ್ನು ಖರೀದಿಸುವದು ಹೇಗೆ ಸಾಧ್ಯವಾಗಲಿದೆ.? ಉದಾಹರಣೆಗೆ 1ಕೆಜಿ ಬೆಲ್ಲಕ್ಕೆ 40 ರೂಪಾಯಿಗಳು ಇದ್ದರೇ 50 ರೂಪಾಯಿಗಳು, ತರಕಾರಿ ಮತ್ತು ದಿನಸಿಗಳು ಪ್ರತಿ ಕೆಜಿಗೂ 10 ರೂಪಾಯಿಗಳು ಜಾಸ್ತಿ ಹಣವನ್ನು ಕೊಟ್ಟು ಖರೀದಿಸಬೇಕಾಗಿರುವ ಸ್ಥಿತಿ ನಿರ್ಮಾಣವಾಗಿದೆ. ಪಡಿತರ ವಿತರಣೆಯಲ್ಲಿ ಕೆಲವೆಡೆ ವಿಳಂಬವಾದರೂ, ಪಡಿತರದಿಂದ ಅಲ್ಪಮಟ್ಟಿಗಾದರೂ ನೆಮ್ಮದಿಯ ದಿನಗಳು ಜನರಲ್ಲಿ ಬಾಳಿನಲ್ಲಿವೆ.

ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ಧರ್ಮಸ್ಥಳ ಮಂಜುನಾಥೇಶ್ವರ ಸ್ವಸಹಾಯ ಗುಂಪುಗಳು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮೂರು ವಾರದ ಮಟ್ಟಿಗೆ ಸ್ಥಗಿತಗೊಳಿಸಿವೆ.

ಹು.ಬಾ. ವಡ್ಡಟ್ಟಿ

ಪತ್ರಿಕಾ ವರದಿಗಾರರು, ಮುಂಡರಗಿ ಗದಗ.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಪಡೆದಿರುವ ವಡ್ಡಟ್ಟಿ ಕಳೆದ ಎರಡು ದಶಕಗಳಿಂದ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ.  ‘ಬ್ರಿಟಿಶ್ ವಿರೋಧಿ ಹೋರಾಟ’; ಬಳುವಾಣಿ’;ರಿಯಾತ್ ಪದಗಳು’ ಇವರ ಪ್ರಕಟಿತ ಕೃತಿಗಳು.

ಪ್ರತಿಕ್ರಿಯಿಸಿ