ನಮ್ಮ ಪೂರ್ವಜರು ಎಲ್ಲಿಂದ ಬಂದರು ?

ನಮ್ಮನ್ನು ಒಟ್ಟಾಗಿ ಒಂದುಗೂಡಿಸುವ ನಮ್ಮೊಳಗಿನ ಸಮಾನತೆಗಳು ಬಹಳಷ್ಟಿವೆ. ನಾವು ಇಲ್ಲಿ ಸಾವಿರಾರು ವರ್ಷಗಳಿಂದ ನಡೆದ ಬಹುದಿಕ್ಕುಗಳ ಬಹುಹರಿವಿನ ವಲಸೆಗಳಿಂದ ಒಂದು ಸಮಾನವಾದ ನಾಗರೀಕತೆಯನ್ನು ರೂಪಿಸಿದ್ದೇವೆ. ನಮ್ಮ ಈಗಿರುವಂತೆ ಹೇಗಾದೆವು, ಎಂಬುದೊಂದು ಅತ್ಯಂತ ನವಿರೇಳಿಸುವ ಇತಿಹಾಸ. ಈಗಿನ ಭಾರತದ ಜನಸಂತತಿಯನ್ನು ರೂಪಿಸಿದ ನಾಲ್ಕು ಪ್ರಮುಖ ವಲಸೆಗಳ ಕುರಿತಾಗಿ ಟೋನಿ ಜೊಸೆಫ್ ಬರೆದಿರುವ ಲೇಖನ.

ಈವತ್ತಿನ ದಿನದಲ್ಲಿ ಭಾರತದ ಯಾವುದೇ ಸಮುದಾಯದ ಒಂದು ಗುಂಪನ್ನು ನೀವು ನೋಡಿದರೆ, ಅದು 4 ಬೇರೆ ಬೇರೆ ಜನಾಂಗದ ಒಂದು ಮಿಶ್ರಣ ಎಂಬುದು ನಿಮಗೆ ಗೋಚರಿಸುತ್ತದೆ. ಈ ಮಿಶ್ರಣ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಇದೆ . ಅಂದರೆ ಪೂರ್ವ ಭಾರತದಲ್ಲಿ ಅದು ಪೂರ್ವ ಏಶಿಯಾದ ಸಂತತಿಯಾಗಿರಬಹುದು ಹಾಗೂ ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಅದು ಪಶ್ಚಿಮ ಮತ್ತು ಮಧ್ಯ ಏಶಿಯಾದ ಸಂತತಿಯಾಗಿರಬಹುದು. ಹಾಗೆಯೇ ದಕ್ಷಿಣ ಭಾರತದಲ್ಲಿ ಮೊದಲ ಭಾರತೀಯ ಸಂತತಿ ಹೆಚ್ಚಾಗಿ ಕಾಣಬರುತ್ತದೆ. ಆದರೆ ಭಾರತದ ಹೆಚ್ಚೂಕಮ್ಮಿ ಎಲ್ಲಾ ಜನಸಂಖ್ಯೆಯ ಗುಂಪುಗಳೂ ಕೂಡ ಈ ನಾಲ್ಕು ಬಣಗಳು ವಿವಿಧ ಪ್ರಮಾಣಗಳಲ್ಲಿ ಬೆರೆತುಕೊಂಡ ಮಿಶ್ರಣಗಳಾಗಿವೆ. ಅನಾದಿ ಕಾಲದಲ್ಲಿ ಈ ನಾಲ್ಕೂ ಬಣಗಳು ನಮ್ಮ ಉಪಖಂಡಕ್ಕೆ ವಲಸೆ ಬಂದು ನಮ್ಮ ಜನಸಂಖ್ಯೆಯನ್ನು ರೂಪಿಸಿದವು.

ನಮ್ಮ ಪೂರ್ವಜರು ಎಲ್ಲಿಂದ ಬಂದರು ? ಮತ್ತು ಅವರ ಸಂತತಿಯ ಎಲ್ಲಿದ್ದು?

ಒಂದು ಆಸಕ್ತಿಕರವಾದ ಸಂಗತಿಯೆಂದರೆ ಈ ಹಿಂದಿನ ಕೆಲವು ವರ್ಷಗಳ ತನಕವೂ, ನಾವು ಯಾರು ಎಲ್ಲಿಂದ ಬಂದೆವು ಎಂಬ ಪ್ರಶ್ನೆಗೆ ಎಲ್ಲರೂ ಒಪ್ಪುವಂಥ ಉತ್ತರ ಹೇಳುವುದು ಬಹಳ ಕಷ್ಟವಾಗುತ್ತಿತ್ತು. ನಿಜ, ಭಾಷಾವಿಜ್ಞಾನ(philology), ಶಿಲಾಶಾಸನ ಶಾಸ್ತ್ರ ಮತ್ತು ಭಾಷಾಶಾಸ್ತ್ರಗಳನ್ನು (linguistics ), ಮತ್ತು ಪುರಾತತ್ವಶಾಸ್ತ್ರಗಳಂಥಹ ಇತಿಹಾಸಕ್ಕೆ ಸಂಬಂಧ ಪಟ್ಟ ಶಾಸ್ತ್ರಗಳ ಆಧಾರದ ಮೇಲೆ ಹಲವು ಊಹೆಗಳನ್ನು ಮಾಡಬಹುದಿತ್ತು. ಆದರೆ ಅವು ಊಹೆಗಳಷ್ಟೇ ಆಗಿರುತ್ತಿದ್ದವು. ಆದರೀಗ ಅದು ಬದಲಾಗಿದೆ. ಅದಕ್ಕೆ ಕಾರಣ, ಇತರ ವಿಷಯಗಳಿಗಿಂತ ಸ್ವಲ್ಪ ಹೊಸ ಅಧ್ಯಯನ ಕ್ಷೇತ್ರವಾದ ಜನಸಂಖ್ಯಾ ತಳಿಶಾಸ್ತ್ರ.( Population genetics). ಈಗ ಜಸಂಖ್ಯಾ ತಳಿಶಾಸ್ತ್ರಜ್ಞರಿಗೆ ಅಲ್ಲಲ್ಲಿ ಸಿಗುತ್ತಿರುವ ಹತ್ತಾರು ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ಜನರ ಆಸ್ತಿಪಂಜರಗಳಿಂದ DNAಗಳನ್ನು ಹೊರತೆಗೆದು ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತಿದೆ.

ಹಾಗೆ ಅರಿತುಕೊಂಡ ವಿಷಯಗಳನ್ನು ಆಧರಿಸಿ ಯಾವ ಜನಸಂಖ್ಯೆಯ ಜನರು, ಯಾವಾಗ, ಎಲ್ಲಿಂದ, ಎಲ್ಲಿಗೆ ಚಲಿಸಿದರು ಎಂದು ಕಂಡುಹಿಡಿಯಬಹುದಾಗಿದೆ. ಈ ಹಿಂದಿನ ಕೆಲವು ವರ್ಷಗಳಲ್ಲಿ ನೂರಾರು, ಸಾವಿರಾರು ಪ್ರಾಚೀನ DNA ಸ್ಯಾಂಪಲ್ಲುಗಳನ್ನು ಜಗತ್ತಿನಾದ್ಯಂತ ವಿವಿಧ ಭಾಗಗಳಿಂದ ಸಂಗ್ರಹಿಸಲಾಗಿದೆ. ಇದರಿಂದ ನಮಗೆ ಬೇರೆಬೇರೆ ಜನಸಂಖ್ಯೆಗಳು ಹೇಗೆ ರಚಿತವಾದವು ಎಂಬುದರ ಬಗ್ಗೆ ಹೆಚ್ಚು ಸ್ಪಷ್ಟ ಚಿತ್ರಣ ಮೂಡುತ್ತದೆ. ಈ ತಳಿಶಾಸ್ತ್ರ ಕ್ಷೇತ್ರದ ಸಂಶೋಧನೆಯ ಫಲಿತಾಂಶಗಳನ್ನು ನಾವು ಈಗಾಗಲೇ ನಮ್ಮ ಬಳಿ ಇರುವ ಪುರಾತತ್ವ ಶಾಸ್ತ್ರ, ಭಾಷಾವಿಜ್ಞಾನ, ಭಾಷಾಶಾಸ್ತ್ರ ಮುಂತಾದ ಇತರ ಜ್ಞಾನ ಶಾಖೆಗಳ ತಿಳುವಳಿಕೆಗಳೊಂದಿಗೆ ಜೋಡಿಸಿದಾಗ ನಮಗೆ, ನಮ್ಮ ಇತಿಹಾಸಪೂರ್ವದ ಬಗೆಗೆ ಒಂದು ಅತಿ ಉತ್ತಮ ನಿರ್ಧಾರ ಮೂಡುತ್ತದೆ. ಉದಾಹರಣೆಗೆ, ನಮಗೆ ಈಗಿರುವ ಯೂರೋಪಿನ ಇಂದಿನ ಜನಸಂಖ್ಯೆಯು ಮೂರು ಪ್ರಮುಖ ವಲಸೆಗಳ ಫಲಿತಾಂಶವಾಗಿದೆ ಎಂದು ತಿಳಿದು ಬಂದಿದೆ. ಆ ಮೂರು ವಲಸೆಗಳಲ್ಲಿ ಎರಡು ಇತ್ತೀಚಿನ ಹತ್ತುಸಾವಿರ ವರ್ಷಗಳ ಒಳಗಷ್ಟೇ ನಡೆದಿವೆ. ಮೊದಲಿಗೆ ಪಶ್ಚಿಮ ಏಸಿಯಾದ, ಅಂದರೆ ಈಗ ನಾವು ಟರ್ಕೀ ಎಂದು ಕರೆಯುವ ಪ್ರದೇಶದ ಮೊದಮೊದಲ ವ್ಯವಸಾಯ ನಡೆಸುವ ಜನರ ಒಂದು ಬಣ ಯೂರೋಪಿನ ಒಳಗೆ ಚಲಿಸಿತು. ಆ ಬಣದವರು ಅಲ್ಲಿನ ಬೇಟೆಗಾರ- ಆಹಾರ ಸಂಗ್ರಹಕಾರ ಜನಾಂಗವನ್ನು ಹೆಚ್ಚಿನಮಟ್ಟದಲ್ಲಿ ಸ್ಥಾನಪಲ್ಲಟ ಮಾಡಿ ಬದಲಿಗೆ ತಾವು ಅಲ್ಲಿ ನೆಲೆನಿಂತರು. ಅಲ್ಲದೆ ಸ್ವಲ್ಪ ಮಟ್ಟಿಗೆ ಅಲ್ಲಿನ ಬೇಟೆಗಾರ-ಸಂಗ್ರಹಕಾರ ಜನರೊಡನೆ ಮಿಳಿತವೂ ಆದರು.

ಮತ್ತೆ ಸುಮಾರು 5000 ವರ್ಷಗಳ ಹಿಂದೆ ಮಧ್ಯ ಏಸಿಯಾದ ‘ಸ್ಟೆಪ್’ ಹುಲ್ಲುಗಾವಲಿನಲ್ಲಿ ವಾಸಿಸುತ್ತಿದ್ದ ‘ಯಾಮ್ನಾಯ’ ಸಂಸ್ಕೃತಿಯ ಒಂದಷ್ಟು ಜನಾಂಗ ಯೂರೋಪಿನೊಳಗೆ ಚಲಿಸಿತು. ಅಲ್ಲಿ ಉಳಿದಿದುಕೊಂಡಿದ್ದ ಅಲ್ಪಸ್ವಲ್ಪ ಸಂಖ್ಯೆಯ ಬೇಟೆಗಾರ-ಸಂಗ್ರಹಕಾರರನ್ನೂ ಮತ್ತು ಹಿಂದಿನ ವಲಸೆಯಿಂದ ನೆಲೆನಿಂತಿದ್ದ ವ್ಯವಸಾಯಗಾರರನ್ನೂ ಅವರು ಹೆಚ್ಚಿನ ಮಟ್ಟದಲ್ಲಿ ಸ್ಥಾನಪಲ್ಲಟಗೊಳಿಸಿ ಬದಲಿಗೆ ತಾವೇ ಅಲ್ಲಿ ನೆಲೆಸಿದರು. ಅಲ್ಲದೆ ಸ್ವಲ್ಪ ಮಟ್ಟಿಗೆ ಅವರೊಡನೆ ಮಿಳಿತವೂ ಆದರು. ಹೀಗಾಗಿ ಈಗಿರುವ ಯೂರೋಪಿನ ಜನಸಂಖ್ಯೆ ಈ ಎರಡು ವಲಸೆಗಳಿಂದ ರಚಿತವಾಗಿದೆ.

ಮತ್ತೆ ನಮಗೆ ಅಮೆರಿಕದ ಮೂಲ ನಿವಾಸಿಗಳ ಜನಸಂಖ್ಯೆಯೂ ಕೂಡ ಏಶಿಯಾದಿಂದ ವಲಸೆ ಹೋದ ಮೂರು ಪ್ರಮುಖ ಜನಸಂಖ್ಯೆಯ ಬಣಗಳಿಂದ ರಚಿತವಾಗಿದೆ ಎಂದು ತಿಳಿದಿದೆ. ಆ ವಲಸೆಗಳು ಸುಮಾರು 16000 ವರ್ಷಗಳ ಹಿಂದೆ, ಅಥವಾ ಅದರಿಂದ ಸ್ವಲ್ಪ ಇತ್ತೀಚೆಗೆ, ಸೈಬೀರಿಯಾದಿಂದ ವಲಸೆ ಹೋಗಿತ್ತು. ಇದೇ ರೀತಿಯಲ್ಲಿ ನಮಗೆ ಪ್ರಮುಖ ವಲಸೆಗಳ ಪರಿಣಾಮವಾಗಿ ಹೇಗೆ ವಿವಿಧ ಜನಸಂಖ್ಯಾ ಗುಂಪುಗಳು ರಚಿತವಾದವು ಎಂಬುದರ ಬಗ್ಗೆ ಸ್ಪಷ್ಟ ತಿಳುವಳಿಕೆಯಿದೆ.

ಈಗ ನಿಮ್ಮಲ್ಲಿ ಪ್ರಶ್ನೆಗಳೆದ್ದಿರಬಹುದು. “ವಲಸೆಗಳು ಎಲ್ಲಾ ಕಾಲದಲ್ಲೂ ಎಲ್ಲಾ ಪ್ರದೇಶಗಳಲ್ಲೂ ನಡೆಯುತ್ತಿರುತ್ತವೆ. ಅವುಗಳಿಗೆ ನೀವು ಹೇಗೆ ನಿರ್ದಿಷ್ಠ ಆಕಾರವನ್ನು ಕೊಡಬಲ್ಲಿರಿ? ಯಾವ ವಲಸೆಯಿಂದ ಎಂಥಹ ಪರಿಣಾಮವಾಯಿತು? ಎಂದು ಹೇಗೆ ಅರಿತುಕೊಳ್ಳಬಲ್ಲಿರಿ?” ಎಂದು ಕೇಳಬಹುದು.  ಅದಕ್ಕೆ ಉತ್ತರ ಹೀಗಿದೆ, “ಅವುಗಳಿಗೆ ಒಂದು ಆಕಾರವನ್ನು ಕೊಡಲು ಒಂದು ಮಾರ್ಗವಿದೆ. ಅಂದರೆ ಒಟ್ಟಿನಲ್ಲಿ ಹೀಗೆ ಅರ್ಥಮಾಡಿಕೊಳ್ಳಬೇಕು. ನಾಲ್ಕು ಪ್ರಮುಖ ವಲಸೆಯ ವರ್ಗಗಳಿವೆ. ಅವುಗಳ ಪರಿಣಾಮವಾಗಿ ಪ್ರಪಂಚದ ಬಹುತೇಕ ಜನಾಂಗಗಳು ಆಕಾರಗೊಂಡವು. ಆ ನಾಲ್ಕು ವರ್ಗಗಳ ಪ್ರತಿ ವಲಸೆಯನ್ನೂ ಒಂದೊಂದು ಜಾಗತಿಕ ಶಕ್ತಿ/ಪ್ರಭಾವ ಚಾಲನೆಗೆ ಪ್ರಚೋದಿಸಿತು. ಅಂದರೆ, ನಾವು ಹಿಂದಿರುಗಿ ಗಮನಿಸಿದಾಗ ಆ ವಲಸೆಗಳು ಆ ಕಾಲಗಳಲ್ಲಿ ಏಕೆ ನಡೆಯಿತು ಎಂಬುದು ನಮಗೆ ತಿಳಿಯುತ್ತದೆ.

ಅವುಗಳಲ್ಲಿ ಮೊದಲ ವಲಸೆಯನ್ನು “ಆಫ್ರಿಕಾದಿಂದ ಹೊರಬಂದ ವಲಸೆ (Out of Africa)” ಎಂದು ಕರೆಯುತ್ತೇವೆ. ಇದರ ಬಗ್ಗೆ ಪ್ರಾಯಶಃ ನೀವು ಈಗಾಗಲೇ ಕೇಳಿರಬಹುದು ಅಥವಾ ಓದಿರಬಹುದು. ಇದು ಸುಮಾರು 70,000 ವರ್ಷಗಳ ಹಿಂದೆ ನಡೆಯಿತು. ಆಗ ಆಫ್ರಿಕಾದಲ್ಲಿ ಆಗ ಇದ್ದ ಜನಸಂಖ್ಯೆಯ ಒಂದು ಸಣ್ಣ ಉಪಬಣ ಅರೇಬಿಯನ್ ಪರ್ಯಾಯದ್ವೀಪ (Arabian Peninsula) ಪ್ರದೇಶಕ್ಕೆ ವಲಸೆ ಹೊರಟರು. ಮುಂದೆ ಕಾಲಾಂತರದಲ್ಲಿ ಜಗತ್ತಿನ ಇತರ ಎಲ್ಲಾ ಭಾಗಗಳಲ್ಲೂ ಜನರು ನೆಲೆಸುವಂತೆ ಮಾಡಲು ಈ ವಲಸೆಯೇ, ಮತ್ತವರ ಸಂತತಿಯೇ ಕಾರಣವಾಯಿತು. ಅವರು ತಲುಪಿದ ಕಡೆಯ ಖಂಡ ಅಮೆರಿಕಾ ಖಂಡ. ಅದನ್ನು ಅವರು ಸುಮಾರು 16000 ವರ್ಷಗಳ ಹಿಂದೆ ತಲುಪಿದರು. ಹಾಗಾಗಿ, 70,000 ವರ್ಷಗಳ ಹಿಂದಿನಿಂದ ಸುಮಾರು 16000 ವರ್ಷಗಳ ಹಿಂದಿನ ನಡುವಿನ ಅವಧಿಯಲ್ಲಿ ಪ್ರಪಂಚದ ‘ತಿಳಿದಿರುವ ಆಫ್ರಿಕಾದ ಜಗತ್ತನ್ನು” ಜನಮಯವನ್ನಾಗಿಸುವ ಕಾರ್ಯ ನಡೆಯಿತು.

ಮೊದಲ ವಲಸೆ – ಆಫ್ರಿಕಾದಿಂದ ಹೊರಗೆ ಹೊರಟದ್ದು

ಹಾಗಾಗಿ “ಯಾರು ಮೊದಲ ಭಾರತೀಯರು? ಯಾರು ಮೊದಲ ಜಪಾನೀಯರು, ಆಸ್ಟ್ರೇಲಿಯಾದವರು, ಅಮೇರಿಕಾದವರು…. ಎಂಬ ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ. ಅವರೆಲ್ಲರೂ ಒಂದೇ ಅಂದರೆ ಒಂದೇ ಮೂಲದ ಜನರು. ಅವರೆಲ್ಲರೂ “ಆಫ್ರಿಕಾದಿಂದ ಹೊರಬಂದ ವಲಸಿಗರು”.

ಅವರು ಆಫ್ರಿಕಾದಿಂದ ಹೊರಬಂದು ಎಲ್ಲಾ ಕಡೆ ಹರಡಿಕೊಂಡ ಮೇಲೆ ಒಂದು ಮಹತ್ವದ ಘಟನೆ ನಡೆಯಿತು. ಅದೇ “ಹಿಮಯುಗ”. ಈ ಹಿಮಯುಗ ಸಾವಿರಾರು ವರ್ಷಗಳವರೆಗೆ ನಡೆಯಿತು. ಆ ಹಿಮಯುಗದ ಕಾಲದಲ್ಲಿ, ಪ್ರಪಂಚದ ಬಹಳಷ್ಟು ಭಾಗ ವಾಸಿಸಲು ಅಯೋಗ್ಯವಾಗುತ್ತದೆ; ಎಷ್ಟೋ ಹರಿದ್ವರ್ಣ ದಟ್ಟ ಕಾಡುಗಳು ಮರಳುಗಾಡುಗಳಾಗುತ್ತವೆ. ಆದ್ದರಿಂದ ಈ ಹಿಮಯುಗದ ಕಾಲದಲ್ಲಿ ಆಗ ಬೆಳೆದು ಹರಡುತ್ತಿದ್ದ ಎಲ್ಲಾ ಆಧುನಿಕ ಮಾನವ ಗುಂಪುಗಳು ಒಂದರಿಂದ ಒಂದು ಬೇರ್ಪಟ್ಟವು. ಹಾಗಾಗಿ ಅವು ತಮ್ಮೊಳಗೆ ಕೆಲವು ಸಣ್ಣಪುಟ್ಟ ತಳೀಯ ವ್ಯತ್ಯಾಸಗಳನ್ನು ಕಲೆಹಾಕಿಕೊಂಡವು. ಆದ್ದರಿಂದ ಒಂದು ವಿಷಯವನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಈಗಿನ ಆಧುನಿಕ ಮಾನವರಾದ ನಾವು 99.9%  ವಂಶವಾಹಿ (Gene) ಗಳನ್ನು ನಮ್ಮನಮ್ಮಲ್ಲಿ ಹಂಚಿಕೊಂಡಿದ್ದೇವೆ. ಅಂದರೆ ನಮ್ಮಲ್ಲಿರುವ 99.9%  ವಂಶವಾಹಿ (Gene)ಗಳು ಮಿಕ್ಕ ಎಲ್ಲಾ ಮಾನವರಲ್ಲೂ ಇರುತ್ತವೆ. ಒಂದು ವಿಶಾಲವಾದ ನಿಟ್ಟಿನಲ್ಲಿ ಅವಲೋಕಿಸಿದರೆ ನಾನು ಉಲ್ಲೇಖಿಸಿದ ವ್ಯತ್ಯಾಸಗಳು ನಿಜಕ್ಕೂ ಬಹಳ ಸಣ್ಣಪುಟ್ಟ ವ್ಯತ್ಯಾಸಗಳು.

ಮತ್ತೆ, ಹಿಮಯುಗವು ಮುಗಿದ ನಂತರ ಅಂದರೆ ಸುಮಾರು 12,000 ವರ್ಷಗಳ ಹಿಂದೆ, ಪ್ರಪಂಚದ ಹಲವು ಪ್ರದೇಶಗಳಲ್ಲಿ ಹಲವು ಆಸಕ್ತಿಕರ ಘಟನೆಗಳು ನಡೆದವು. ಆಧುನಿಕ ಮಾನವ ಜನಾಂಗಗಳು ವ್ಯವಸಾಯ ಮಾಡಲು ಪ್ರಯೋಗಗಳನ್ನು ಮಾಡತೊಡಗಿದವು.

ಉದಾಹರಣೆಗೆ ನಮಗೆ ಈಗ ತಿಳಿದಿರುವಂತೆ ಆ ಸಮಯದಲ್ಲಿ ದಕ್ಷಿಣ ಏಶಿಯಾದಲ್ಲಿ ಜನರು ವಿವಿಧ ಗೆಡ್ಡೆಗೆಣಸುಗಳನ್ನೂ, ಬಾಳೆಹಣ್ಣನ್ನೂ ಬೆಳೆಯಲು ಪ್ರಯತ್ನಿಸುತ್ತಿದ್ದರು. ಆದರೆ ಈ ಬೆಳೆಗಳು ಹೆಚ್ಚು ವೃದ್ಧಿಸಲಿಲ್ಲ. ಅದರಿಂದಾಗಿ ಆ ಜನಾಂಗಗಳ ಬದುಕುವ ರೀತಿಯಲ್ಲಿ ಹೆಚ್ಚೇನೂ ಬದಲಾವಣೆಗಳಾಗಲಿಲ್ಲ. ಆದರೆ ಯಾವ ಜನಾಂಗಗಳಿಗೆ, ಅಕ್ಕಿ, ಗೋಧಿ ಅಥವಾ ಬಾರ್ಲಿಯಂಥಹ ಧಾನ್ಯಗಳನ್ನು ಬೆಳೆಸಬಹುದಾದಂಥ ಪ್ರದೇಶಗಳಲ್ಲಿ ವಾಸಿಸುವ ಅವಕಾಶ ದೊರೆಯಿತೋ ಅವರು ಬಹಳ ಅದೃಷ್ಟವಂತರಾದರು, ಏಕೆಂದರೆ ಈ ಧ್ಯಾನ್ಯಗಳು ಹೆಚ್ಚು ಫಲದಾಯಕ ಬೆಳೆಗಳು. ಇದರಿಂದಾಗಿ ಅವರು ತಮ್ಮ ಜೀವನಶೈಲಿಯನ್ನು ಬದಲಿಸಿಕೊಂಡು ಬೇಟೆಗಾರ-ಸಂಗ್ರಹಕಾರ ಬದುಕಿನಿಂದ ಬದಲಾಗಿ ರೈತರಾಗಲು ಸಾಧ್ಯವಾಯಿತು.

ಈ ಮೊದಮೊದಲ ವ್ಯವಸಾಯಗಾರರು ಈಜುಪ್ಟಿನವರು, ಮೆಸೊಪೊಟೇಮಿಯಾದವರು, ಭಾರತದವರೂ ಮತ್ತು ಚೀನಾದವರೂ ಆಗಿದ್ದರು. ಅವರು ವ್ಯವಸಾಯ ಮಾಡಲು ಪ್ರಾರಂಭಿಸಿದಾಗಿನಿಂದ ಅದರ ಪರಣಾಮವಾಗಿ ಅವರ ಜನಸಂಖ್ಯೆಯ ಸ್ಫೋಟವಾಯಿತು. ಏಕೆಂದರೆ ಬೇಟೆಗಾರ-ಸಂಗ್ರಹಕಾರ ಜನಸಂಖ್ಯೆಗಳಿಗಿಂತ ವ್ಯವಸಾಯ ಮಾಡುವವರ ಜನಸಂಖ್ಯೆ ಅತಿ ದೊಡ್ಡ ಮತ್ತು ಅತಿ ವೇಗವಾದ ಪ್ರಮಾಣದಲ್ಲಿ ಹೆಚ್ಚುತ್ತದೆ. ಆ ಜನಸಂಖ್ಯೆಯ ಹೆಚ್ಚಳದ ಅನಿವಾರ್ಯ ಪರಿಣಾಮಗಳೆಂದರೆ , ಅವು ವಲಸೆಗಳು. ಇದು ಜಗತ್ತಿನ ಜನಾಂಗ ಸ್ಥಿತಿಯ ಮೇಲೆ ಪ್ರಭಾವ ಬೀರಿದ ವಲಸೆಗಳು ನಡೆದುದದಕ್ಕೆ ಎರಡನೆಯ ಕಾರಣ. ಈ ಕ್ರಿಯೆಯನ್ನು ನಡೆಸಿದ ಚಾಲನ ಶಕ್ತಿಯೆಂದರೆ ಅದು ಪ್ರಕೃತಿಯ ಮೇಲೆ ಯಜಮಾನಿಕೆ ಮಾಡಿ ಅದನ್ನು ಅಂಕೆಯಲ್ಲಿಡುವ ಮಾನವನ ಸಾಮರ್ಥ್ಯ. ಅದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಾನವನು ವ್ಯವಸಾಯ ಮಾಡುವುದನ್ನು ಕಂಡುಕೊಂಡನು. ಹಿಂದೆ “ಆಫ್ರಿಕಾದಿಂದ ಹೊರಬಂದ ವಲಸೆ’ಯನ್ನು ಚಾಲನೆ ಮಾಡಿದ ಕಾರಣ ಕರ್ತೃ ಜಾಗತಿಕ ಶಕ್ತಿ ಪ್ರಮುಖವಾಗ ಹವಾಮಾನ ಬದಲಾವಣೆಯಾಗಿತ್ತು. ಅದು ಮಾನವನಷ್ಟೇ ಅಲ್ಲದೆ ಹಲವಾರು ಪ್ರಾಣಿಗಳು ವಲಸೆ ಹೊರಡುವುದಕ್ಕೂ ಕಾರಣವಾಯಿತು. ಇವು ಎರಡೂ ವಲಸೆಯ ಎರಡು ಕಾರಣಗಳು.

ಪ್ರಾಚೀನ ಈಜಿಪ್ಟಿನಲ್ಲಿ ಕೊಂಬಿನ ಜಾನುವಾರುಗಳು ಮತ್ತು ನೊಗದೊಂದಿಗೆ ಉಳುಮೆ. ಸಮಾಧಿಯಲ್ಲಿನ ಕೊಠಡಿಯೊಂದರಲ್ಲಿ ಸಿಕ್ಕಿರುವ ಚಿತ್ರಕಲೆ . ಕ್ರಿ.ಪೂ 1200

ಮಧ್ಯ ಏಶಿಯಾದ ಆಧುನಿಕ ಮಾನವ ಜನಾಂಗದ ಒಂದು ಪಂಗಡ ಕುದುರೆ ಸವಾರಿ ಮಾಡುವುದು ಹೇಗೆಂದು ಕಲಿತು ಅದನ್ನು ತಮಗೆ ಆಗಲೇ ತಿಳಿದಿದ್ದ ಲೋಹವಿದ್ಯೆಯ ಪ್ರಾವೀಣ್ಯದೊಡನೆ ಸೇರಿಸಿ ಉಪಯೋಗಿಸಿಕೊಳ್ಳುವುದನ್ನು ಪ್ರಾರಂಭಿಸಿದಾಗ ವಲಸೆಗೆ ಮೂರನೇ ಕಾರಣವೂ ಪ್ರಾರಂಭವಾಯಿತು.

ಊಹಿಸಿಕೊಳ್ಳಿ. ಆಗಿನ ಒಂದು ಆಧುನಿಕ ಮಾನವ ಜನಾಂಗದ ಒಂದು ಪಂಗಡ ಕುದುರೆ ಸವಾರಿ ಮಾಡುವುದನ್ನು ಕಲಿತರೆ , ಆ ಪಂಗಡ ಆಗಿನವರೆಗೂ ಮತ್ಯಾವ ಆಗಿನ ಆಧುನಿಕ ಮಾನವ ಜನಾಂಗದ ಪಂಗಡಗಳೂ ಕಲ್ಪಿಸಿಕೊಳ್ಳಲೂ ಆಗದಿರುವಂಥಹ ಒಂದು ಚಲನಾ ಶಕ್ತಿಯನ್ನು ಪಡೆಯುತ್ತದೆ. ಆ ಸಾಮರ್ಥ್ಯದಿಂದಾಗಿ ಅವರು ವಿಶಾಲವಾದ ಭೂಭಾಗಳಲ್ಲಿ ಚಲಿಸಲು ಸಾಧ್ಯವಾಯಿತು. ಹೀಗಾಗಿ ಅವರು ಮಧ್ಯ ಏಶಿಯಾದಿಂದ ಯೂರೋಪಿಗೆ ಚಲಿಸಿದರು. ಆಗಲೇ ಹೇಳಿದಂತೆ ಈ ‘ಯಾಮ್ನಾಯ’ ಎಂಬ ಪಂಗಡಗಳು ಯೂರೋಪಿಗೆ ಹೋಗಿ ಅಲ್ಲಿಯ ಜನಾಂಗದ ಸ್ಥಿತಿಯನ್ನು ಬದಲಾವಣೆ ಮಾಡಿದರು. ಅವರು ಮಧ್ಯ ಏಶಿಯಾದ ಜನಾಂಗದ ಸ್ಥಿತಿಯನ್ನೂ, ಪಶ್ಚಿಮ ಏಶಿಯಾದ , ದಕ್ಷಿಣ ಏಶಿಯಾದ ಅಲ್ಲದೆ ಬಹು ದೂರದ ಚೈನಾದ ಜನಾಂಗದ ಸ್ಥಿತಿಗಳನ್ನೂ ಸಹ ಬದಲಾಯಿಸಿದರು.

ಹೀಗೆ ಮಾನವನ ವಲಸೆಗೆ ಕಾರಣ ಕುದುರೆ ಸವಾರಿ ಮತ್ತು ಲೋಹವಿದ್ಯೆಯ ಮೇಲಿನ ಪ್ರಾವೀಣ್ಯ ಮತ್ತು ಅದು ಯೂರೋಪ್ ಮತ್ತು ಏಶಿಯಾದ, ಅಂದರೆ ಯುರೇಶಿಯಾದ ಅತಿ ಹೆಚ್ಚು ಭಾಗಗಳ ಜನಾಂಗದ ಸ್ಥಿತಿಯನ್ನು ಬದಲಾಯಿಸಿತು.

ನಾವು ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿರುವ ಹಾಗೂ ನಮ್ಮ ತಂದೆತಾಯಿ ಅಥವಾ ಅಜ್ಜಮುತ್ತಜ್ಜಂದಿರು ಯಾವುದೋ ಒಂದು ರೀತಿಯಲ್ಲಿ ಅದರ ಪರಿಣಾಮಗಳನ್ನು, ಕಾರ್ಪಣ್ಯಗಳನ್ನೂ ಅನುಭವಿಸಿರುವ ವಲಸೆಗಳು ಅಂದರೆ ಅವು ವಸಾಹತುಶಾಹೀ ವಲಸೆಗಳು. ಅವು ನಾಲ್ಕನೇ ರೀತಿಯ ಕಾರಣವಿರುವ ವಲಸೆಗಳು. ಯೂರೋಪಿನ ಆಧುನಿಕ ಮಾನವ ಜನಾಂಗದ ಕೆಲವು ಪಂಗಡಗಳು ಸಮುದ್ರಗಳ ಮೇಲೆ ಹೇಗೆ ಅತಿದೂರ ಪ್ರಯಾಣ ಮಾಡುವುದೆಂದು ಕಲಿತುಕೊಂಡದ್ದರಿಂದ ಈ ವಲಸೆಗಳು ನಡೆದವು. ಅವರು ನೀರಿನ ಆವಿಯಿಂದ ಚಲಿಸುವ ಹಡಗುಗಳನ್ನು ಕಂಡು ಹಿಡಿದು ಈಗಾಗಲೇ ಜನಸಂಖ್ಯೆಗಳಿರುವ ಭೂಭಾಗಗಳಿಗೆ ಪ್ರಯಾಣಿಸಿ ಅಲ್ಲಿಯ ಜನಾಂಗಸ್ಥಿತಿಗಳನ್ನು ಬದಲಾಯಿಸಿದರು. ಅಮೆರಿಕಾದ ಜನಾಂಗಸ್ಥಿತಿ ದೊಡ್ಡ ರೀತಿಯಲ್ಲಿ ಬದಲಾವಣೆ ಆಯಿತು. ಅಂತೆಯೇ ಆಸ್ಟ್ರೇಲಿಯಾದಲ್ಲಿ ಮತ್ತು ಇತರ ಭಾಗಗಳಲ್ಲೂ ನಡೆಯಿತು.

ಇವು ನಮಗೆ ತಿಳಿದಿರುವಂತೆ ಜಗತ್ತಿನ ಜನಾಂಗಸ್ಥಿತಿಯನ್ನು ಬದಲಿಸಿದ ನಾಲ್ಕು ಪ್ರಮುಖ ವಲಸೆಯ ವರ್ಗಗಳು. ಇವು ಜಗತ್ತಿನ ಜನಾಂಗದ ಸ್ಥಿತಿಯನ್ನು ಬದಲಿಸಿದವು.

ಇದು ನಮ್ಮನ್ನು ಇನ್ನೊಂದು ಪ್ರಶ್ನೆಯೆಡೆಗೆ ಕರೆದೊಯ್ಯುತ್ತದೆ. ಆ ಪ್ರಶ್ನೆ ಏನೆಂದರೆ, “ಹಾಗಾದರೆ ಭಾರತೀಯ ಜನಾಂಗಸ್ಥಿತಿಯನ್ನು, ದಕ್ಷಿಣ ಏಶಿಯಾದ ಜನಾಂಗಸ್ಥಿತಿಯನ್ನು ಈ ವಲಸೆಗಳು ಹೇಗೆ ರಚಿಸಿದವು?

ನನ್ನ ಮಟ್ಟಿಗೆ, ಈ ವಿಷಯದಲ್ಲಿ ಭಾರತ ಮತ್ತು ದಕ್ಷಿಣ ಏಶಿಯಾಗಳು ಒಂದೇ. ಭಾರತೀಯ ಉಪಖಂಡದ ಎಲ್ಲವೂ ಸೇರಿದ ಅವೆಲ್ಲವೂ ಸೇರಿದ ಪುರಾತನ ಭೂಭಾಗ. ಈಗ ನಾವು ಅಂದುಕೊಂಡಿರುವ ಈಗಿನ ಭಾರತ ಗಣರಾಜ್ಯವಲ್ಲ. ಹಾಗಾದರೆ ಭಾರತದ ಜನಾಂಗದ ಸ್ಥಿತಿಯನ್ನು ಈ ವಲಸೆಗಳು ಹೇಗೆ ರೂಪಿಸಿದವು? ಮೊದಲಿಗೆ ಇಲ್ಲಿ ನಾವು ಒಂದು ವಿಷಯವನ್ನು ನೆನಪಿಡಬೇಕು. ಅದೇನೆಂದರೆ ನಾಲ್ಕನೆಯ ವರ್ಗದ ವಲಸೆ ಅಂದರೆ ವಸಾಹತುಶಾಹೀ ವಲಸೆ ನಮ್ಮ ಜನಾಂಗಸ್ಥಿತಿಯ ಮೇಲೆ ಏನೂ ಪರಿಣಾಮ ಬೀರಲಿಲ್ಲ. ಬೀರಿದ್ದರೂ ಅದು ಅತ್ಯಂತ ಸ್ವಲ್ಪ.  ವಸಾಹತುಶಾಹೀ ವಲಸೆ ನಮ್ಮ ಸಂಸ್ಕೃತಿಯ ಮೇಲೆ ಹೆಚ್ಚು ಪ್ರಭಾವ ಬೀರಿತು ಆದರೆ ನಮ್ಮ ಜನಾಂಗಸ್ಥಿತಿಯೇನೂ ಬದಲಾಗಲಿಲ್ಲ. ಏಕೆಂದರೆ ಅಲ್ಲಿಂದ ಇಲ್ಲಿಗೆ ವಲಸೆ ಬಂದ ಜನರ ಸಂಖ್ಯೆ, ಆಗಲೇ ಇಲ್ಲಿ ನೆಲೆಸಿದ್ದ ಜನಸಂಖ್ಯೆಗೆ ಹೋಲಿಸಿದರೆ ಅತಿ ಕಡಿಮೆ ಇತ್ತು. ಆದ್ದರಿಂದ ನಮ್ಮ ಭಾರತದ ಜನಾಂಗಸ್ಥಿತಿಯ ಮೇಲೆ ಹೇಗೆ ಮತ್ತು ಯಾವುವು ಪರಿಣಾಮ ಬೀರಿದವು ಎಂದು ಅರ್ಥ ಮಾಡಿಕೊಳ್ಳಲು ನಾವು ಉಳಿದ ಮೂರು ವಲಸೆಗಳು ಈ ಪ್ರದೇಶವನ್ನು ಹೇಗೆ ಮಾರ್ಪಾಡು ಮಾಡಿದವು ಎಂದು ಅರ್ಥ ಮಾಡಿಕೊಳ್ಳಬೇಕು.

ರಷ್ಯಾದಲ್ಲಿ 31 ಸಾವಿರ ವರ್ಷಗಳ ಹಿಂದಿನ ಹಾಲುಹಲ್ಲಿನ ಪಳವಳಿಕೆಗಳು ಸಿಕ್ಕಿರುವ ಜಾಗ

ಸರಿ, ಹಾಗಾದರೆ ಶುರು ಮಾಡೋಣ. ಮೊದಲಿಗೆ “ಆಫ್ರಿಕಾದಿಂದ ಹೊರಬಂದ ವಲಸೆ“. ನಮಗೆ ಈಗ ಈ ‘ಆಫ್ರಿಕಾದಿಂದ ಹೊರಬಂದ ವಲಸೆ’ ಸುಮಾರು 70,000 ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಟಿತ್ತು ಮತ್ತು ಅದು ಭಾರತವನ್ನು ಸುಮಾರು 65,000 ವರ್ಷಗಳ ಹಿಂದೆ ತಲುಪಿತು ಎಂದು ಗೊತ್ತಿದೆ. (ಇವರನ್ನು ನಾವು ಮೊದಲ ಭಾರತೀಯರೆಂದು ಕರೆಯೋಣ ). ಅದು ನಮಗೆ ಹೇಗೆ ಗೊತ್ತು? ಹೇಗೆಂದರೆ ಪುರಾತತ್ವ ಶಾಸ್ತ್ರದಿಂದ ನಮಗೆ ಆಧುನಿಕ ಮಾನವರು ಸುಮಾರು 59,000 ವರ್ಷಗಳ ಹಿಂದೆ ಆಸ್ಟ್ರೇಲಿಯಾ ತಲುಪಿದ್ದರೆಂದೂ , ಸುಮಾರು 63,000 ವರ್ಷಗಳ ಹಿಂದೆ ದಕ್ಷಿಣ-ಪೂರ್ವ ಏಶಿಯಾವನ್ನು ತಲುಪಿದ್ದರೆಂದೂ ತಿಳಿದಿದೆ. ಅವರು ಅಲ್ಲಿಗೆ ತಲುಪಲು ಭಾರತ ಉಪಖಂಡದ ಮೂಲಕ ಹಾದು ಹೋಗಬೇಕಿತ್ತು. ಆದ್ದರಿಂದ ಅವರು, ಅಂದರೆ ಆಧುನಿಕ ಮಾನವರು ಸುಮಾರು 65,000 ವರ್ಷಗಳ ಹಿಂದೆ ಭಾರತದ ಭೂಪ್ರದೇಶಕ್ಕೆ ಬಂದರೆನ್ನುವುದು ತಾರ್ಕಿಕವಾಗಿ ಸಮಂಜಸವಾದ ಊಹೆ. ಆಸಕ್ತಿಕರವಾದ ವಿಷಯವೆಂದರೆ ಈವತ್ತಿಗೂ ಹೆಚ್ಚಾದ ಭಾರತೀಯ ಜನಸಂಖ್ಯಾ ಪಂಗಡಗಳು, ತಮ್ಮ ಒಳಗೆ ಸುಮಾರು 50-65% ಭಾಗ ಮೊದಲ ಭಾರತೀಯರ ಪೂರ್ವಜ-ಸಂತತಿಯನ್ನು ಹೊಂದಿರುತ್ತಾರೆ. ಅದು ನಮ್ಮ ಅತ್ಯಂತ ದೊಡ್ಡ ಪೂರ್ವಜ-ಸಂತತಿ.

ಮತ್ತೆ….ನಾನು ನನ್ನ ಪುಸ್ತಕದಲ್ಲಿ ಪೀಟ್ಜಾದ ಉಪಮೆಯನ್ನು ಕೊಡುತ್ತೇನೆ. ನೀವು ಭಾರತೀಯ ಜನಾಂಗಸ್ಥಿತಿಯನ್ನು ಒಂದು ಪೀಟ್ಜಾದ ಥರ ನೋಡುವುದಾದರೆ, ಮೊದಲ ಭಾರತೀಯ ಪೂರ್ವಜ-ಸಂತತಿ, ಅದರ ತಳಭಾಗದ ಪದರವಾಗುತ್ತದೆ. ಆ ತಳದ ಪದರವಿಲ್ಲದಿದ್ದರೆ , ಜನಾಂಗಸ್ಥಿತಿಯ ಪಿಟ್ಜಾನೇ ಇಲ್ಲವಾಗುತ್ತದೆ.

ಅದು ದಕ್ಷಿಣ ಏಶಿಯಾದ ಜನಸಂಖ್ಯೆಯನ್ನು ಬೇರೆಯವರಿಂದ ಬೇರ್ಪಡಿಸಿ ಗುರುತಿಸಬಲ್ಲ ಚಿನ್ಹೆ. ಏಕೆಂದರೆ ಪ್ರಥಮ ಭಾರತೀಯ ಪೂರ್ವಜ-ಸಂತತಿ ಈಗ ದಕ್ಷಿಣ ಏಶಿಯಾದಲ್ಲಿ ಮಾತ್ರ ಸಿಗುತ್ತದೆ. ಅದು ಭಾರತದ ಜನಾಂಗಸ್ಥಿತಿಯ ತಳಹದಿ ಹಾಕಿದ ಮೊದಲನೇ ವರ್ಗದ ವಲಸೆಯಾಯಿತು.

ಇನ್ನು ಎರಡನೇ ವರ್ಗದ ವಲಸೆ. ಅಂದರೆ ವ್ಯವಸಾಯ ಸಂಬಂಧಿತ ವಲಸೆ. ಇದರಲ್ಲಿ ಎರಡು ಬಗೆಗಳಿವೆ. ಒಂದು ಪಶ್ಚಿಮ ಏಶಿಯಾದಿಂದ ಬಂದಿದ್ದು ಇನ್ನೊಂದು ಪೂರ್ವ ಏಶಿಯಾದಿಂದ ಬಂದಿದ್ದು. ಇವೆರಡೂ ವಲಸೆಗಳು ಭಾರತದ ಜನಾಂಗಸ್ಥಿತಿಯನ್ನು ರೂಪಿಸುವಲ್ಲಿ ಪಾಲುಗೊಂಡಿವೆ. ವ್ಯವಸಾಯ ಸಂಬಂಧಿತ ವಲಸೆ ಭಾರತದಲ್ಲಿ ಪ್ರಾರಂಭವಾಗುವುದು, ಭಾರತದಲ್ಲಿ ವ್ಯವಸಾಯವೇ ಪ್ರಾರಂಭವಾದಾಗ. ಅದು ಈಗಿನ ಪಾಕಿಸ್ತಾನದ ಬಲೂಚಿಸ್ತಾನದ ಮೆಹೆರ್ಗಾಡ್ ಎಂಬಲ್ಲಿ ಸುಮಾರು 9000 ವರ್ಷಗಳ ಹಿಂದೆ ನಡೆದಿತ್ತು. ಅಲ್ಲಿಂದ ವ್ಯವಸಾಯವು ಉತ್ತರ-ಪಶ್ಚಿಮ ಭಾರತದಲ್ಲೆಲ್ಲಾ ಹರಡಿತು. ಹಾಗೆ ಸಾವಿರಾರು ವರ್ಷಗಳವರೆಗೆ ವ್ಯವಸಾಯವು ಆ ಪ್ರದೇಶದಲ್ಲೆಲ್ಲಾ ಹರಡುತ್ತಾ ಬಂದ ಮೇಲೆ ಅಂತಿಮವಾಗಿ ಅದು ಹರಪ್ಪಾ ನಾಗರಿಕತೆಯಾಗಿ ಕೊನೆಗೊಂಡಿತು. ಉತ್ತರ ಭಾರತದಲ್ಲಿ ಈ ವ್ಯವಸಾಯ ಕ್ರಾಂತಿಯನ್ನು ನಡೆಸಿದ ಜನರು ಒಂದು ಮಿಶ್ರಣವಾಗಿದ್ದರು. ಅವರು ನಾವು ಮೊದಲು ಮಾತನಾಡಿದ ಮೊದಲ ಭಾರತೀಯರ ಮತ್ತು ವ್ಯವಸಾಯ ನಡೆಸುವ ಪಶ್ಚಿಮ ಏಶಿಯಾದ ಇರಾನಿನ ಜನರಿಗೆ ನಂಟಿದ್ದ ಜನಾಂಗಗಳ ಮಿಶ್ರಣವಾಗಿದ್ದರು. ನಿರ್ದಿಷ್ಠವಾಗಿ ಹೇಳುವುದಾದರೆ ಇರಾನಿನ Zagros ಪರ್ವತ ಪ್ರಾಂತ್ಯದವರು. ಅವರು ಸುಮಾರು 12,000 ವರ್ಷದ ಹಿಂದೆ ಇಲ್ಲಿಗೆ ಬಂದಿದ್ದರು. ಆದ್ದರಿಂದ ಅದೊಂದು ಮಿಶ್ರಣವಾಗಿತ್ತು ; ಅಂದರೆ ಮೊದಲ ಭಾರತೀಯರು ಹಾಗೂ ಉತ್ತರ-ಪಶ್ಚಿಮ ಭಾರತ ಪ್ರದೇಶಗಳಲ್ಲಿ ಒಂದು ವ್ಯವಸಾಯ ಕ್ರಾಂತಿಯನ್ನು ನಡೆಸಿದ ಇರಾನಿನ ವ್ಯವಸಾಯ ಸಂಬಂಧಿತವಾದ ವಲಸೆ ಜನಾಂಗಗಳ ಮಿಶ್ರಣ. ಹೀಗೆ ಅದು ಭಾರತೀಯ ಜನಾಂಗಸ್ಥಿತಿಯನ್ನು ರೂಪಿಸಿದ ಎರಡನೇ ವರ್ಗದ ವಲಸೆ.

ಎರಡನೇ ವಲಸೆ – ಇರಾನಿನ ಜನರದ್ದು

ಮುಂದೇ ಇದೇ ಜನರು ಹರಪ್ಪ ನಾಗರಿಕತೆಯನ್ನು ಕಟ್ಟಿದರು. ಅಲ್ಲಿಂದ ಮುಂದೆ ಹರಪ್ಪಾ ನಾಗರೀಕತೆಯು ಸುಮಾರು ಕ್ರಿಸ್ತ ಪೂರ್ವ 1900 ನಲ್ಲಿ , ಬೇರೆ ಪ್ರದೇಶಗಳ ಮೇಲೂ ಅದೇ ಕಾಲದಲ್ಲಿ ಪ್ರಭಾವ ಬೀರಿದ ಒಂದು ಬಹುಕಾಲದ ಬರಗಾಲದಿಂದಾಗಿ ಅವಸಾನಗೊಂಡಾಗ ಅಲ್ಲಿನ ಜನರು ಅಲ್ಲಿಂದ ಮತ್ತೆ ಚಲಿಸಿದರು. ಅವರು ಉತ್ತರ ಪಶ್ಚಿಮದ ಹರಪ್ಪಾ ನಾಗರೀಕತೆಯ ಪ್ರದೇಶವನ್ನು ಬಿಟ್ಟು ಹೊರಟು ಭಾರತದ ಉಳಿದ ಎಲ್ಲಾ ಭಾಗಗಳಿಗೆ ಅಂದರೆ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ವಲಸೆ ಹೊರಟರು. ಹೀಗಾಗಿ ಅವರು ಉತ್ತರ ಭಾರತದ ಮತ್ತು ದಕ್ಷಿಣ ಭಾರತದ ಜನರ ಪೂರ್ವಜ-ಸಂತತಿಯವರಾದರು.

ಹಾಗಾಗಿ ನಾವು ಹರಪ್ಪ ನಾಗರೀಕತೆಯ ಪೂರ್ವಜ-ಸಂತತಿಯವರು ನಮ್ಮ ತಳಭಾಗದ ಮೇಲಿನ ಎರಡನೇ ಪದರ ಎನ್ನಬಹುದು. ಅದು ನಮ್ಮ ಪೀಟ್ಜಾದ ತಳದ ರೊಟ್ಟಿಯ ಮೇಲಿನ ಸಾಸ್. ಅವರು ಭಾರತ ಉಪಖಂಡದಲ್ಲಿ ಹರಡಿದಂತೆಲ್ಲಾ ತಮ್ಮ ಸಂಸ್ಕೃತಿಯನ್ನೂ ಹರಡಿದರು. ಅದು ನಮ್ಮನ್ನೆಲ್ಲ ಹಲವು ರೀತಿಯಲ್ಲಿ ಒಗ್ಗೂಡಿಸಿ ಒಟ್ಟಿಗೆ ಹಿಡಿದಿಡುವಂಥ ಒಂದು ಅಂಟು ಎನ್ನಬಹುದು. ಇವು ಭಾರತೀಯ ಜನಾಂಗಸ್ಥಿತಿಯನ್ನು ರೂಪಿಸಿದ ಎರಡನೇ ವರ್ಗದ ವಲಸೆಗಳು.

ಟಿಪ್ಪಣಿ : ಕಳೆದ ಸೆಪ್ಟೆಂಬರ್ ನಲ್ಲಿ ಪ್ರಕಟವಾದ ಹೊಸ ಸಂಶೋಧನಾ ಫಲಿತಾಂಶಗಳ ಪ್ರಕಾರ , ಸಿಂಧೂ ಬಯಲಿನ ನಾಗರೀಕತೆ ಕಟ್ಟಿದ ಇರಾನಿನ ಜನ ಅಲ್ಲಿಂದ ವಲಸೆ ಬಂದ ಕೃಷಿಕರಲ್ಲ ಬದಲಾಗಿ ಅದಕ್ಕಿಂತ ಮೊದಲಿನ ಇರಾನಿನ ಬೇಟೆಗಾರ – ಆಹಾರ ಸಂಗ್ರಾಹಕ ಜನ ಎಂದಿದೆ . ಅಂದರೆ ಇರಾನಿನಲ್ಲಿ ಕೃಷಿಯ ಅನ್ವೇಷಣೆಯಾಗುವ ಮೊದಲೇ ಅಲ್ಲಿನ ಒಂದಷ್ಟು ಜನ ಸಿಂಧೂ ಬಯಲಿನ ಕಡೆಗೆ ವಲಸೆ ಶುರು ಮಾಡಿದ್ದಾರೆ . ಹಾಗಾಗಿ ಮೊದಲ ಭಾರತೀಯರು ಮತ್ತು ಇರಾರಿನ ಬೇಟೆಗಾರ – ಆಹಾರ ಸಂಗ್ರಾಹಕ ಜನ ಒಟ್ಟಾಗಿ ಸಿಂಧೂ ಕಣಿವೆಯ ನಾಗರೀಕತೆ ಕಟ್ಟಿದರು ಬದಲಾಗಿ ಇರಾನಿನ ಕೃಷಿಕ ಜನರು ಅಲ್ಲ . ಮತ್ತು ಭಾರತದಲ್ಲಿ ಆರಂಭವಾದ ಕೃಷಿ ಪದ್ದತಿ ಸ್ಥಳೀಯವಾಗೆ ಅಭಿವೃದ್ದಿ ಹೊಂದಿರುವಂತದ್ದು.

ಈ ಸಂಶೋಧನೆಗಾಗಿ ವಂಶವಾಹಿ ತಜ್ಞರು ಸಿಂಧೂ ಬಯಲಿನ ನಾಗರೀಕತೆಯ ಪ್ರಮುಖ ತಾಣವಾದ ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯಲ್ಲಿರುವ ರಾಖಿಗಢಿಯ ಅವಶೇಷಗಳಲ್ಲಿ ಸಮಾಧಿಯಲ್ಲಿ ಸಿಕ್ಕಿದ ಇಬ್ಬರು ಪ್ರೌಢ ವಯಸ್ಕ ಪುರುಷರ, ಒಬ್ಬ ಮಹಿಳೆಯ ಮತ್ತು ಒಂದು ಮಗುವಿನ ಆಸ್ತಿಪಂಜರಗಳಲ್ಲಿ , ಮಹಿಳೆಯ ಅಸ್ತಿಪಂಜರದ ಕಿವಿಯಿಂದ ತೆಗೆಯಲಾದ ಡಿ ಎನ್ ಎ ಯನ್ನು ಪರೀಕ್ಷೆಗೊಳಪಡಿಸಿದರು .

ರಾಖಿಗಡಿಯಲ್ಲಿ ಸಿಕ್ಕಿದ ಅಸ್ತಿಪಂಜರವನ್ನು ಪರೀಕ್ಷಿಸುತ್ತಿರುವ ವಿಜ್ಞಾನಿಗಳು. ಇಲ್ಲಿನ ನಾಲ್ಕು ಆಸ್ತಿಪಂಜರಗಳಿಂದ ಡಿ ಎನ್ ಎ ಸ್ಯಾಂಪಲ್ ಹೊರತೆಗೆಯಲಾಯಿತು.

ಮೂರನೇ ವರ್ಗದ ವಲಸೆ ಸುಮಾರು 4000 ವರ್ಷಗಳ ಹಿಂದೆ ಅಥವಾ ಅದಕ್ಕೂ ಸ್ವಲ್ಪ ತಡವಾಗಿ ಪೂರ್ವ ಏಶಿಯಾದಿಂದ ಆಯಿತು. ಚೈನಾದಲ್ಲಿ ವ್ಯವಸಾಯ ನಡೆಯುವುದು ಪ್ರಾರಂಭವಾದ ಪರಿಣಾಮವಾಗಿ ಈ ವಲಸೆ ನಡೆಯಿತು. ಇದರಿಂದಾಗಿ ದೊಡ್ಡ ಜನಸಂಖ್ಯಾ ವಿಸ್ತರಣೆಯಾಯಿತು. ಆ ವಲಸೆಯು ಅಷ್ಟು ದೂರದಿಂದ ಹೊರಟು, ಮೊದಲು ಪೂರ್ವ ಏಶಿಯಾವನ್ನು ಹೊಕ್ಕು ಅಲ್ಲಿನ ಜನಾಂಗಸ್ಥಿತಿಯ ಮೇಲೆ ಪರಿಣಾಮ ಬೀರಿ, ಅಲ್ಲಿಂದ ದಕ್ಷಿಣ ಪೂರ್ವ ಏಶಿಯಾಗೆ ಬಂದು ಕೊನೆಯಲ್ಲಿ ಭಾರತವನ್ನು ತಲುಪಿತು.

ಈ ವಲಸಿಗರು ತಮ್ಮೊಂದಿಗೆ “ಆಸ್ಟ್ರೋ-ಏಶಿಯಾಟಿಕ್ ಭಾಷೆಗಳನ್ನು ಕರೆತಂದರು. ಉದಾಹರಣೆಗೆ ಖಾಸಿ ಮತ್ತು ಮುಂಡಾರಿ. ಈ ಭಾಷೆಗಳನ್ನು ಈಗಲೂ ಮಧ್ಯ ಭಾರತದಲ್ಲಿ ಮತ್ತು ಪೂರ್ವ ಭಾರತದಲ್ಲಿ ಆದಿವಾಸಿ ಜನರು ಮಾತನಾಡುತ್ತಾರೆ. ಈ ಭಾಷೆಗಳು ಲಾವೋಸ್, ವಿಯೆಟ್ನಾಮ್ ಮತ್ತಿತರ ದಕ್ಷಿಣ ಏಶಿಯಾ ದೇಶಗಳಲ್ಲಿ ಮಾತನಾಡುವ ‘Mon-Khmer” ಭಾಷಾ-ಕುಟುಂಬಕ್ಕೆ ಸೇರಿದ ಭಾಷೆಗಳು. ಹೀಗೆ ಇದು ಭಾರತದ ಜನಾಂಗಸ್ಥಿತಿಯನ್ನು ರೂಪಿಸಿದ ಮೂರನೇ ವರ್ಗದ ವಲಸೆಗಳು.

ಚೈನಾ ಪ್ರದೇಶದಿಂದ ಮೂರನೇ ವಲಸೆ ಮತ್ತು ಆಸ್ಟ್ರೋ-ಏಶಿಯಾಟಿಕ್ ಭಾಷಾ ಸಂಕುಲದ ಪ್ರಸರಣ

ನಾವು ಹಿಂದೆಯೇ ಚರ್ಚಿಸಿದಂತೆ,ಭಾರತದ ಜನಾಂಗಸ್ಥಿತಿಯನ್ನು ರೂಪಿಸಿದ ನಾಲ್ಕನೇ ವರ್ಗದ ವಲಸೆಗಳು ಮಧ್ಯ ಏಶಿಯಾದ ಸ್ಟೆಪ್ಪೀ ಪ್ರದೇಶದಿಂದ ಬಂದವುಗಳು. ಆ ವಲಸೆಗಳು ಸುಮಾರು 4 ಅಥವಾ 3 ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ಬಂದವುಗಳು. ಅಂದರೆ ಕ್ರಿಸ್ತ ಪೂರ್ವ 2000 ಮತ್ತು ಕ್ರಿಸ್ತ ಪೂರ್ವ 1500ರ ನಡುವೆ ಬಂದವುಗಳು. ಈ ವಲಸಿಗರು “ಇಂಡೋ-ಯೂರೋಪಿಯನ್” ಅಥವಾ “ಇಂಡೋ-ಆರ್ಯನ್“ಭಾಷೆಗಳನ್ನು ಮಾತನಾಡುತ್ತಿದ್ದರು. ಅವರು ತಮ್ಮನ್ನು ತಾವು ಆರ್ಯರೆಂದು ಕರೆದುಕೊಂಡರು. ಅವರು ಭಾರತ ಭೂಪ್ರದೇಶದೊಳಗೆ ಬಂದು ಉತ್ತರ ಭಾರತದಲ್ಲೆಲ್ಲಾ ತಮ್ಮ ಪಾರುಪತ್ಯವನ್ನು ಹರವಿದರು. ಅದರೊಂದಿಗೆ ಅವರ ಭಾಷೆಯಾದ “ಇಂಡೋ-ಆರ್ಯನ್” ಭಾಷೆಯೂ ಉತ್ತರ ಭಾರತದಲ್ಲೆಲ್ಲಾ ಹಬ್ಬಿತು.

ನಾಲ್ಕನೇ ವಲಸೆ – ಸ್ಟೆಪ್ ಹುಲ್ಲುಗಾವಲಿನ ಜನ (ಆರ್ಯ) ರ ವಲಸೆ ಪಥ

ನಾವು ಈಗಾಗಲೇ ಕಂಡಂತೆ, ಸುಮಾರು 4000 ದಿಂದ 3500 ವರ್ಶಗಳ ಹಿಂದಿನ ಕಾಲದ ಹೊತ್ತಿಗಾಗಲೇ , ಭಾರತದ ಜನಾಂಗಸ್ಥಿತಿಯ ಎಲ್ಲಾ ನಾಲ್ಕು ಘಟಕಗಳೂ ಭಾರತದಲ್ಲಿದ್ದವು. “ಆಫ್ರಿಕಾದಿಂದ ಹೊರಬಂದ ವಲಸಿಗರು” ಅಂದರೆ ಮೊದಲ ಭಾರತೀಯರು ಈಗಾಗಲೇ ಇಲ್ಲಿದ್ದರು. ಅಲ್ಲದೆ, ಪಶ್ಚಿಮ ಏಶಿಯಾದವರು, ಪೂರ್ವ ಏಶಿಯಾದವರು ಮತ್ತು ಮಧ್ಯ ಏಶಿಯಾದವರೂ ಇಲ್ಲಿದ್ದರು. ಮುಂದಿನ 1500-2000 ವರ್ಷಗಳವರೆಗೆ ಈ ನಾಲ್ಕೂ ವರ್ಗಗಳ ಜನರ ನಡುವೆ ಇಲ್ಲಿ ನಡೆಯುವ ರೀತಿಯ ಮಿಶ್ರಣ ಮತ್ತು ಅಂತರ-ಸಂಬಂಧಗಳು ತಳಿವಿಜ್ಞಾನದ ಪ್ರಾಕಾರ ಹಿಂದೆಂದೂ ನಡೆದಿರದಂಥದ್ದು ಮತ್ತು ಮುಂದೂ ಕೂಡ ನಡೆಯದಿರುವಂಥದ್ದು.

ನೀವು ಈಗಿನ ಯಾವುದೇ ಇಲ್ಲಿನ ಜನರ ಪಂಗಡವನ್ನು ಪರೀಕ್ಷಿಸಿದರೂ ಅವರೆಲ್ಲಾ ಈ ನಾಲ್ಕು ಜನಸಂಖ್ಯೆಗಳ, ವಿವಿಧ ಪ್ರಮಾಣಗಳಲ್ಲಿ ಬೆರೆತ ಒಂದು ಮಿಶ್ರಣ ಎನ್ನುವುದು ನಿಮಗೆ ತಿಳಿಯುತ್ತದೆ. ಪೂರ್ವ ಭಾರತದ ಜನರಲ್ಲಿ ನಾವು ಪೂರ್ವ ಏಶಿಯಾದ ಪೂರ್ವಜ-ಸಂತತಿಯನ್ನು ಹೆಚ್ಚಾಗಿ ಕಾಣುತ್ತೀರಿ; ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಪಶ್ಚಿಮ ಏಶಿಯಾದ ಮತ್ತು ಮಧ್ಯ ಏಶಿಯಾದ ಪೂರ್ವಜ-ಸಂತತಿಯನ್ನು ಹೆಚ್ಚಾಗಿ ಕಾಣುತ್ತೀರಿ; ಹಾಗೂ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪ್ರಥಮ ಭಾರತೀಯರ ಪೂರ್ವಜ ಸಂತತಿಯನ್ನು ಕಾಣುತ್ತೀರಿ. ಹಾಗಾಗಿ ಭಾರತದ ಯಾವುದೇ ಜನರ ಯಾವುದೇ ಪಂಗಡವನ್ನು ನೀವು ನೋಡಿದರೂ ಅದರಲ್ಲಿ ಈ ನಾಲ್ಕೂ ಪೂರ್ವಜ-ಸಂತತಿಗಳ ವಿವಿಧ ಪ್ರಮಾಣದ ಒಂದು ಮಿಶ್ರಣವು ನಮಗೆ ಕಾಣುತ್ತದೆ.

ಹಾಗಾದರೆ ಕ್ರಿಸ್ತಶಕ 100 ರಲ್ಲಿ ಏನಾಯಿತು? ತಳಿ ವಿಜ್ಞಾನಿಗಳ ಪ್ರಕಾರ ಸುಮಾರು ಕ್ರಿಸ್ತಶಕ 100 ರ ವೇಳೆಗೆ , ಅಂದರೆ ಸುಮಾರು 2000 ವರ್ಷಗಳ ಹಿಂದೆ ಈ ಬೆರೆಯುವಿಕೆ ನಿಂತುಹೋಯಿತು. ಏಕೆಂದರೆ ಆಗ ಅಂತರ್ ಸಮುದಾಯದ ಗಂಡು ಹೆಣ್ಣಿನ ಕೂಡುವಿಕೆ ನಿಂತವು ; ಅಂದರೆ ಜನರು ತಮ್ಮ ತಮ್ಮ ಸಮುದಾಯದ ಒಳಗೇ ಸಂಗಾತಿಯನ್ನು ಆರಿಸಿ ಮದುವೆ ಮಾಡಿಕೊಳ್ಳುವ ಪದ್ಧತಿ ಆಚರಣೆಗೆ ಬಂತು. ನಮಗೆ ಗೊತ್ತಿರುವಂತೆ ಇದು ಜಾತಿಪದ್ಧತಿಯಲ್ಲಿ ಮುಖ್ಯವಾದ ಪ್ರತ್ಯೇಕಿಸುವ ವೈಶಿಷ್ಟ್ಯ. ಹಾಗಾಗಿ ನಮಗೆ ಈಗ ಈ ಮುಂದಿನ ಪ್ರಶ್ನೆಗೆ ಉತ್ತರ ಸಿಕ್ಕಿತ್ತದೆ. ; “ಜಾತಿಪದ್ಧತಿ ಯಾವಾಗ ಪ್ರಾರಂಭವಾಯಿತು?”. ಜಾತಿಪದ್ಧತಿ 2000 ವರ್ಷಗಳ ಹಿಂದೆ ಪ್ರಾರಂಭವಾಯಿತು. ಅಂದರೆ ಮಧ್ಯಏಶಿಯಾದಿಂದ ತಮ್ಮನ್ನು ತಾವು ಆರ್ಯರೆಂದು ಕರೆದುಕೊಳ್ಳುತ್ತಿದ್ದ ಜನರು ಇಲ್ಲಿಗೆ ವಲಸೆ ಬಂದು ಬಹಳ ಕಾಲ ಕಳೆದ ನಂತರ ಜಾತಿಪದ್ಧತಿ ಇಲ್ಲಿ ಪ್ರಾರಂಭವಾಯಿತು. ಆದ್ದರಿಂದ ನಾವು ಜಾತಿಪದ್ಧತಿಯ ಆರಂಭವನ್ನು ಕ್ರಿಸ್ತಶಕ 100 ರ ಸುಮಾರಿಗೆ ಶುರುವಾದ ಒಂದು ರಾಜಕೀಯ ಬೆಳವಣಿಗೆಯಾಗಿ ನೋಡಬೇಕಾಗುತ್ತದೆಯೇ ಹೊರತು ಒಂದು ಅನಿವಾರ್ಯವಾದ, ಅಗತ್ಯವಾಗಿದ್ದ, ಸಹಜವಾದ, ಬೆಳವಣಿಗೆಯಂತೆ ಪರಿಗಣಿಸಲಾಗುವುದಿಲ್ಲ. ಇದೊಂದು ಅತಿ ಮುಖ್ಯವಾದ ಶೋಧನೆ. ಈ ವಿಧಾನದಲ್ಲಿ ನಾವು ಭಾರತದ ಜನಸಂಖ್ಯೆ ಈಗಿರುವ ರೀತಿಯಲ್ಲಿ ಏಕಿದೆ ಎಂಬುದನ್ನು ವಿವರಿಸಬಹುದು.

ನಾವು ನಮ್ಮನ್ನು ನೋಡುವ ರೀತಿಯಲ್ಲಿ ಮತ್ತು ಇತರರನ್ನು ನಾವು ನೋಡುವ ರೀತಿಯಲ್ಲಿ, ಆಗುವ ಬದಲಾವಣೆಗಳ ಮೇಲೆ, ಈ ಶೋಧನೆಯಿಂದ ನಮಗೆ ದೊರೆತ ಅರಿವು, ಒಂದು ಅತ್ಯಂತ ಪ್ರಮುಖವಾದ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಆದಿವಾಸಿಗಳನ್ನು ಭಾರತದ ಇತರ ನಿವಾಸಿಗಳು, ಅವರು ತಮ್ಮಿಂದ ಬಹಳ ಬೇರೆಯ ರೀತಿಯವರೆಂದೂ, ತಮಗೂ ಅವರಿಗೂ ಬಹಳ ವ್ಯತ್ಯಾಸಗಳಿವೆಯೆಂದೂ ಪರಿಗಣಿಸುತ್ತಾರೆ. ಆದರೆ ಈಗ ನಮಗೆ , ಭಾರತದ ನಿವಾಸಿಗಳಿಗೆ ಆದಿವಾಸಿಗಳು ಬಹಳ ಹತ್ತಿರದ ಸಂಬಂಧಿಕರೆಂದೂ, ಆದಿವಾಸಿಗಳ ಹೊರತಾಗಿ ಜಗತ್ತಿನ ಬೇರೆ ಭಾಗಗಳಲ್ಲಿ ಎಲ್ಲಿಯೂ ಭಾರತೀಯರಿಗೆ ಅವರಿಗಿಂತ ಹತ್ತಿರದ ಸಂಬಂಧಿಗಳಿಲ್ಲವೆಂದೂ ತಿಳಿದಿದೆ. ನಾನು ಆಗಲೇ ಹೇಳಿದಂತೆ ಭಾರತದ ಮುಕ್ಕಾಲುಮೂರು ಪಾಲು ಹೆಚ್ಚೂಕಮ್ಮಿ ಎಲ್ಲಾ ಜನರ ಪಂಗಡಗಳಿಗೂ ಭಾರತದ ಪ್ರಥಮ ಪೂರ್ವಜ-ಸಂತತಿಯವರೇ ಸುಮಾರು 50-60%ರಷ್ಟು ಪೂರ್ವಜರು.

ಆದ್ದರಿಂದ ಈ ಜ್ಞಾನ, ಅಂದರೆ, ಹರಪ್ಪಾ ನಾಗರೀಕತೆಯು ಭಾರತದ ಎಲ್ಲಾ ಜನರ ಆನುವಂಶಿಕಪ್ರಾಪ್ತಿಯೂ ಹೌದು ಎಂಬ ವಿಷಯ, ನಾವು ನಮ್ಮನ್ನು ನೋಡಿಕೊಳ್ಳುವ ಬಗೆಯನ್ನು ಬದಲಿಸಬೇಕು. ಹೀಗಾಗಿ ಹರಪ್ಪಾ ನಾಗರೀಕತೆಯಲ್ಲಿ ಒಂದು “ಪ್ರೋಟೋ-ದ್ರಾವಿಡಿಯನ್”(ಮೂಲ-ದ್ರಾವಿಡದ ಭಾಷೆ) ಭಾಷೆಯಿದ್ದಿರಬಹುದಾದ ಸಾಧ್ಯತೆಯಿದೆ. ಏಕೆಂದರೆ ಹರಪ್ಪಾ ನಾಗರೀಕತೆಯು ಆರ್ಯರು ಇಂಡೋ-ಯೂರೋಪಿಯನ್ ಭಾಷೆಗಳನ್ನು ಇಲ್ಲಿಗೆ ತರುವ ಬಹಳ ಮುಂಚೆಯೇ ಅಸ್ತಿತ್ವದಲ್ಲಿತ್ತು. ಬಹುಶಃ ಆರ್ಯರ ಜೊತೆಗೆ ಆಗಮಿಸಿದ ಇಂಡೋ-ಯೂರೋಪಿಯನ್ ಭಾಷೆ ಉತ್ತರ ಭಾರತದಲ್ಲಿ ಆಗ ಇದ್ದ ಮೂಲ ದ್ರಾವಿಡರ ಭಾಷೆಯ ಮೇಲೆ ಹರಡಿ ಅದರ ಮೇಲೆ ಮುಸುಕು ಹಾಕಿತು. ಆದರೆ ದಕ್ಷಿಣ ಭಾರತದಲ್ಲಿ ಆ ಭಾಷೆ ಉಳಿದುಕೊಂಡು ವೃದ್ಧಿಗೊಂಡಿತು ಹಾಗೂ ಕಾಲಾಂತರದಲ್ಲಿ ಅದು ದ್ರಾವಿಡದ ಬೇರೆಬೇರೆ ಭಾಷೆಗಳು ಮತ್ತು ನುಡಿಗಟ್ಟುಗಳಾಗಿ ಅಭಿವೃದ್ಧಿ ಹೊಂದಿತು.

ಹಾಗಾಗಿ ನಮ್ಮನ್ನು ಒಟ್ಟಾಗಿ ಒಂದುಗೂಡಿಸುವ ನಮ್ಮೊಳಗಿನ ಸಮಾನತೆಗಳು ಬಹಳಷ್ಟಿವೆ. ನಾವು ಇಲ್ಲಿ ಸಾವಿರಾರು ವರ್ಷಗಳಿಂದ ನಡೆದ ಬಹುದಿಕ್ಕುಗಳ ಬಹುಹರಿವಿನ ವಲಸೆಗಳಿಂದ ಒಂದು ಸಮಾನವಾದ ನಾಗರೀಕತೆಯನ್ನು ರೂಪಿಸಿದ್ದೇವೆ. ನಾವು ಈಗಿರುವಂತೆ ಹೇಗಾದೆವು, ಎಂಬುದೊಂದು ಅತ್ಯಂತ ನವಿರೇಳಿಸುವ ಇತಿಹಾಸ.ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಇವು ನನ್ನ ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .

One comment to “ನಮ್ಮ ಪೂರ್ವಜರು ಎಲ್ಲಿಂದ ಬಂದರು ?”
  1. ಲೇಖನ ಬಹಳ ಚೆನ್ನಾಗಿದೆ. ಹಲವು ವಿಷಯಗಳನ್ನು ತಿಳಿಸಿದ್ದಾರೆ. ಓದುತ್ತಾ ಓದುತ್ತಾ ಹಿಂದೆ ಇದ್ದಿರಬಹುದಾದ ನಾಗರಿಕತೆಯ ಕಲ್ಪನೆ ಸಿಕ್ಕಿತು. Quarantine ದಿನಗಳಲ್ಲಿ ಓದಿದ ಉತ್ತಮ ಲೇಖನ ಇದೇ ಆಗಿದೆ.

ಪ್ರತಿಕ್ರಿಯಿಸಿ