ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರ ನಂಬಿದ ಹಳ್ಳಿಯೊಂದರ ಪಾಡು-ಲಿಂಗನಾಪುರ

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ವ್ಯಾಪ್ತಿಗೆ ಸೇರಿಸುವ ಲಿಂಗನಾಪುರ ಗ್ರಾಮದಲ್ಲಿ ಸುಮಾರು ಒಂದು ಸಾವಿರದಷ್ಟು ಜನರು ವಾಸವಾಗಿದ್ದಾರೆ. ಈ ಗ್ರಾಮದ ಜನರಲ್ಲಿ ಕೆಲವೊಂದಷ್ಟು ಜನರು ದಿನ ಕೂಲಿ ಕೆಲಸಗಳಾದ ಗಾರೆ ಕೆಲಸ, ಮರ ಕೊಯ್ಯುವ ಕೆಲಸಗಳನ್ನು ಮಾಡುತ್ತಾರೆ, ಇಲ್ಲಿರುವ ಯುವಕರು ಹಾಗೂ ಕೆಲವೊಂದಷ್ಟು ಹೆಂಗಸರು  ಹತ್ತಿರದ  ಹಾರೋಹಳ್ಳಿ ಕೈಗಾರಿಕ ಪ್ರದೇಶದಲ್ಲಿರುವ  ರಟ್ಟು ಪ್ಯಾಕ್ಟರಿ, ಕುಕ್ಕರ್ ಪ್ಯಾಕ್ಟರಿ, ಗೊಂಬೆ ಮತ್ತು ಐಸ್ ಕ್ರೀಮ್ ಗಳಂತಹ ಪ್ಯಾಕ್ಟರಿಗಳಲ್ಲಿ ಕೆಳ ದರ್ಜೆ ಕೆಲಸಗಾರರಾಗಿ ಏಳೆಂಟು ಸಾವಿರಕ್ಕೆ ದುಡಿಯುತ್ತಿದ್ದಾರೆ.

ಈ ಊರಿನ  ಜನರು ಅರೆ ಕಾಲಿಕ ಕೃಷಿಯನ್ನು ಮಾಡುತ್ತಿದ್ದು. ಕೃಷಿಯನ್ನು ಹೆಚ್ಚಾಗಿ ಅವಲಂಬಿಸದೆ ಮನೆಗೆ ಬೇಕಾದ ರಾಗಿ ಮತ್ತು ಕಾಳುಗಳನ್ನಷ್ಟೆ ಬೆಳೆದುಕೊಳ್ಳುತ್ತಾರೆ.  ಬದುಕಿನ ಇನ್ನೆಲ್ಲ  ಅಗತ್ಯಗಳಿಗಾಗಿ ದಿನ ಕೂಲಿ ಕೆಲಸ ಹಾಗೂ ಪ್ಯಾಕ್ಟರಿ ಕೆಲಸಗಳ‌ನ್ನೇ ಹೆಚ್ಚು ಅವಲಂಬಿಸಿದ್ದಾರೆ.

ಸದ್ಯಕ್ಕೆ  ಲಾಕ್ ಡೌನ್ ನಿಂದಾಗಿ ಯಾವುದೇ ಕೆಲಸಗಳನ್ನು ಮಾಡಲು ಜನರಿಗೆ ಸಾಧ್ಯವಾಗುತ್ತಿಲ್ಲ. ಇಲ್ಲಿನ ಪ್ಯಾಕ್ಟರಿಗಳಿಗೆ ರಜೆ ಘೋಷಣೆ ಮಾಡಲಾಗಿದ್ದು ಪ್ಯಾಕ್ಟರಿಗಳಿಂದ ಸರಿಯಾಗಿ ಸಂಬಳ ಸಹ ಸಿಕ್ಕಿಲ್ಲ. ಈ ಲಾಕ್ ಡೌನ್ ಕಾರಣಕ್ಕೆ ಅರ್ಧ ಸಂಬಳವಾದರೂ ನೀಡಬೇಕಿತ್ತು ಆದರೆ ಇದ್ಯಾವುದು ಇಲ್ಲಿನ ಪ್ಯಾಕ್ಟರಿ ಕೆಲಸಗಾರರಿಗೆ ನೀಡಿಲ್ಲ. ಅಲ್ಲದೆ ದಿನ ಕೂಲಿ ಕೆಲಸಗಳು ಯಾವುದು ಇಲ್ಲದ ಕಾರಣ ಜನರು ಮನೆಯಲ್ಲಿಯೇ ಕಾಲ ಸವೆಸುವಂತಾಗಿದೆ. ಈ ಊರಿನ ಅರ್ಧದಷ್ಟು ಜನರು ಬಡವರಾಗಿದ್ದು ಅವರ ಬದುಕಿಗೆ ಕೂಲಿ ಕೆಲಸವೇ ಆಧಾರವಾಗಿತ್ತು. ಈಗ ಕೂಲಿ ಕೆಲಸ ಇಲ್ಲದಕ್ಕೆ ಮೂರು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ಸರ್ಕಾರದವರು ಹೇಳಿರುವ ಯಾವುದೇ ಪರಿಹಾರಗಳಾಗಲೀ, ಯಾವುದೇ ಮೂಲಭೂತ ವಸ್ತುಗಳಾಗಲೀ ಈ ಗ್ರಾಮಕ್ಕೆ ಇನ್ನೂ ಸಹ ತಲುಪಿಲ್ಲ. ಅಲ್ಲದೆ ಲಾಕ್ ಡೌನ್ ಶುರುವಾದಾಗಿಂದಲೂ ಪಡಿತರ ಅಂಗಡಿಗೆ  ರೇಷನ್ ಬಂದಿಲ್ಲ. ಪ್ರತಿ ತಿಂಗಳು ನೀಡಬೇಕಾಗಿದ್ದ ವೃದ್ಧಾಪ್ಯ ವೇತನ  ಎರಡು ಮೂರು ತಿಂಗಳಿಗೆ ನೀಡಲಾಗುತ್ತಿತ್ತು ಸದ್ಯಕ್ಕೆ ಇದು ಸಹ ಎರಡು ಮೂರು ತಿಂಗಳಿಂದ ಜನರಿಗೆ ಸಿಕ್ಕಿಲ್ಲ.. ಇದಲ್ಲದೆ ಇನ್ನಿತರೇ ಯಾವುದೇ ಸರ್ಕಾರಿ ಯೋಜನೆಗಳ್ಯಾವವು ಸಹ ಇಲ್ಲಿನ ಯಾರೊಬ್ಬರಿಗೂ ಸಿಕ್ಕಿಲ್ಲ. ಸದ್ಯಕ್ಕೆ ಊರಿನ ಜನರು ಈ ದಿನಗಳ ಅನಿವಾರ್ಯತೆಗಳನ್ನು ಪೂರೈಸಿಕೊಳ್ಳಲು ಬಡ್ಡಿ ಸಾಲಗಳನ್ನು  ತೆಗೆದುಕೊಂಡು ಜೀವಿಸುವಂತಾಗಿದೆ.

ಈ ಊರಿನಲ್ಲಿ ಯಾವುದೇ ದಿನಸಿ ಅಂಗಡಿಗಳಿಲ್ಲ. ದವಸ ಧಾನ್ಯ ಇನ್ನಿತರೇ ಆಹಾರ ಪದಾರ್ಧಗಳನ್ನು ಕೊಳ್ಳಬೇಕಾದರೆ ಐದು ಕಿ.ಮೀ ದೂರದಲ್ಲಿರುವ ಮರಳವಾಡಿಗೆ ಹೋಗಬೇಕು.  ಸದ್ಯಕ್ಕೆ ಅಕ್ಕ ಪಕ್ಕ ಊರಿನವರು ಬೆಳೆದಿರುವ ಸಣ್ಣ ಪುಟ್ಟ ತರಕಾರಿಗಳನ್ನು ಮೂರು ದಿನಕ್ಕೊಮ್ಮೆ ತಂದು ಊರಿನಲ್ಲಿ ಮಾರುತ್ತಿದ್ದಾರೆ. ಹಾಗಾಗಿ ಹೆಚ್ಚು ಬೆಲೆಯಲ್ಲಿ ಎರಡು ಮೂರು ತರಹದ ತರಕಾರಿಗಳು ಮಾತ್ರ ಸಿಗುತ್ತಿವೆ.

ಈ  ಹಳ್ಳಿಯಲ್ಲಿ ಯಾವುದೇ ಆರೋಗ್ಯ ಕೇಂದ್ರಗಳಿಲ್ಲ. ಆರೋಗ್ಯ ಸಮಸ್ಯೆ ಏನಾದರೂ ಎದುರಾದರೆ ದೂರದಲ್ಲಿರುವ ಮರಳವಾಡಿಗೆ ಹೋಗಬೇಕು. ಲಾಕ್ ಡೌನ್ ನಿಂದಾಗಿ ಯಾವುದೇ ವಾಹನಗಳ ಸಂಚಾರವಿಲ್ಲ. ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದರೆ ಮರಳವಾಡಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುವುದು ಸಹ ಕಷ್ಟದ ಕೆಲಸವಾಗಿದೆ. ಇದರ ಮಧ್ಯೆ ಈ  ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ  ಔಷಧಿಗಳು  ಸಿಗುತ್ತಿಲ್ಲ. ಹೆಚ್ಚಿನ ಬೆಲೆಯ ಔಷಧಿಗಳನ್ನುಹೊರಗಿನ ಮೆಡಿಕಲ್ ಶಾಪ್ ನಲ್ಲಿ ರೋಗಿಗಳು ತಗೋಬೇಕಾಗಿದೆ. ಊರಿನ ಜನರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಏನಾದರೂ ಎದುರಾದರೇ ಮನೆಯಲ್ಲೆ ಔಷಧಿಗಳನ್ನು ಮತ್ತು ಪ್ರಥಮ ಚಿಕಿತ್ಸೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಈ ಊರಿಗೆ ಸಂಬಂಧಿಸಿದ ಗ್ರಾಮ ಪಂಚಾಯತಿಯವರಾಗಲಿ ಅಥವಾ ಇಲ್ಲಿನ ಜನ ಪ್ರತಿನಿಧಿಗಳಾಗಲೀ ಗ್ರಾಮದ ಈಗಿನ ಯಾವ ಸಮಸ್ಯೆಗಳ ಬಗ್ಗೆನೂ ತಲೆ ಕೆಡಿಸಿಕೊಂಡಿಲ್ಲ.  ಸರ್ಕಾರದಿಂದ ಬರಬೇಕಾದ ಯಾವುದೇ ಪರಿಹಾರಗಳನ್ನು ಕೇಳುವಂತಹ ಕೆಲಸವನ್ನೂ ಸಹ ಮಾಡಿಲ್ಲ. ಅಲ್ಲದೆ ಮಹಾ ಮಾರಿಯಂತಿರುವ ಕರೋನಾ ಸೋಂಕಿನ ಕುರಿತಾಗಿ‌ನ ಕುರಿತಾಗಿ ಯಾವುದೇ ಜಾಗೃತಿ ಕೆಲಸವನ್ನು ಮಾಡಿಸಿಲ್ಲ. ಊರಿನ ಚರಂಡಿಗಳ‌ಲ್ಲಿ ಹೇರಳವಾಗಿ ಕೊಳಚೆ ತುಂಬಿದ್ದು ಅದನ್ನು ಆರೋಗ್ಯದ ದೃಷ್ಟಿಯಿಂದ ಸ್ವಚ್ಚಗೊಳ್ಳಿಸಬೇಕಾಗಿತ್ತು ಆದರೆ ಇದ್ಯಾವುದರ ಬಗ್ಗೆಯೂ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಗಮನ ವಹಿಸಿಲ್ಲ.

ಮೂರ್ನಾಲ್ಕು ದಿನಗಳಿಂದ ಸತತವಾಗಿ ಮಳೆ ಬಿದ್ದಿದ್ದು ಉಳುಮೆಗೆ ಇದು ಸರಿಯಾದ ಸಮಯವಾಗಿದ್ರೂ, ಹೊಲ ಉಳಲು ಟ್ರಾಕ್ಟರ್ ಗಳು ಸಿಗುತ್ತಿಲ್ಲ, ಸಿಕ್ಕರೂ ಹೆಚ್ಚು ಹಣ ನೀಡಬೇಕಾಗಿದೆ. ಸದ್ಯಕ್ಕೆ ಇಲ್ಲಿರುವ ಸಣ್ಣ ಪುಟ್ಟ ರೈತರಲ್ಲಿ ಯಾವುದೇ ತರಹದ ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ.

ಇಲ್ಲಿ ಯಾವುದೇ ತರಹದ ಬ್ಯಾಂಕಿಂಗ್ ವ್ಯವಹಾರ ಮಾಡಬೇಕಾದರೂ ಮರಳವಾಡಿಯಲ್ಲಿರುವ ಯೂಕೋ ಬ್ಯಾಂಕ್ ಒಂದಕ್ಕೆ ಹೋಗಬೇಕು. ಮರಳವಾಡಿ ಹೋಬಳಿಯ ವ್ಯಾಪ್ತಿಯ ಸುತ್ತೆಲ್ಲ ಹಳ್ಳಿಗಳಿಗೂ ಇದೊಂದೆ ಬ್ಯಾಂಕ್ ಇರುವುದು. ಸದ್ಯಕ್ಕೆ ಕೇಂದ್ರದ ಜನಧನ್ ಯೋಜನೆಯಿಂದ ಕೆಲವೊಬ್ಬರ ಅಕೌಂಟಿಗೆ  500 ರೂಪಾಯಿ ಹಣ ಜಮಾ ಆಗಿದೆ. ಆದರೆ ಅದನ್ನು ತೆಗೆದುಕೊಳ್ಳೋಕು ಒಂದು ವಾಹನ ವ್ಯವಸ್ಥೆಯಿಲ್ಲ. ಹೋಬಳಿಗೆ ಒಂದೇ ಒಂದು ಬ್ಯಾಂಕ್ ಇರುವ ಕಾರಣ ಸುತ್ತ ಮುತ್ತಲಿನ ಜನರು ಏಕ ಕಾಲದಲ್ಲಿ ಬ್ಯಾಂಕ್ ನ ಹತ್ತಿರ ಗುಂಪು ಸೇರಲುಬಹುದು. ಇದು ಸಹ ಸಧ್ಯದ ಪರಿಸ್ಥಿತಿಯಲ್ಲಿ ಅಪಾಯಕಾರಿಯಾಗಿದೆ.

ಮೊನ್ನೆ ಮೋದಿಯವರು ದೀಪ ಹಚ್ಚುವಂತೆ ಹೇಳಿದ್ದನ್ನು ಟಿವಿ ನ್ಯೂಸ್ ಗಳಲ್ಲಿ ಕೇಳಿದ ನಮ್ಮೂರಿನ ಜನರಿಗೆ. ದೀಪ ಹಚ್ಚಿ ಪೂಜೆ ಮಾಡಿದರೆ ಕೊರೋನಾ ವೈರಸ್ ಸಾಯುತ್ತದೆ ಎಂದು ಸುಳ್ಳು ಮಾಹಿತಿಯನ್ನು ಹಬ್ಬಿಸಲಾಗಿತ್ತು. ಇದರಿಂದ ಊರಿನ ಬಹುತ್ತೇಕ ಜನರು ಪೂಜೆ ಸಾಮಾನುಗಳನ್ನು ತರಿಸಿ ದೀಪ ಹಚ್ಚಿಸಿ ಪೂಜೆ ಮಾಡಿಸಿದ್ದಾರೆ. ಇವತ್ತಿನ ಸಂಕಷ್ಟದ ದಿನಗಳಲ್ಲಿ ಈ ರೀತಿಯಾದ ಸುಳ್ಳು ಮಾಹಿತಿಗಳೋ ಅಥವಾ ಜ್ಯೋತಿಷಿಗಳು ಬಿತ್ತರಿಸುವ ಮೌಢ್ಯಗಳೋ ಈ ಹಳ್ಳಿಯ ಜನರು ಇನ್ನಷ್ಟು ಸಂಕಷ್ಟಗಳಿಗೆ ದೂಡುವ ಸಾಧ್ಯತೆಗಳು ಹೆಚ್ಚಿದೆ.

ಬಹಳ ಮುಖ್ಯವಾಗಿ ಊರಿನಲ್ಲಿ ಅರ್ಧದಷ್ಟು ಜನರ ಬಡವರಾಗಿದ್ದು ಅವರ ಮನೆಯಲ್ಲಿ ರೇಷನ್ ಖಾಲಿಯಾಗಿದೆ. ಅಕ್ಕ ಪಕ್ಕದ ಮನೆಯವರ ಹತ್ತಿರ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಕೆಲವೊಂದಷ್ಟು ಮನೆಯವರು ತಮ್ಮಲ್ಲಿರುವುದನ್ನು  ಸಾಧ್ಯವಾಷಷ್ಟು ಮಟ್ಟಿಗೆ ಇಲ್ಲದವರಿಗೆ ನೀಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ರೀತಿ ಸಹಾಯ ಮಾಡುತ್ತಿರುವವರು ಸಹ ನಿರ್ಗತಿಕರಾಗಬಹುದು. ಈಗ ಈ ಬಡಜನರಿಗೆ ಊಟಕ್ಕೆ ಬೇಕಿರುವ ಅಗತ್ಯವಾದ ವಸ್ತುಗಳನ್ನಾದರೂ ಸರ್ಕಾರ ಪೂರೈಸಬೇಕಾಗಿದೆ.

ಊರಿನಲ್ಲೆ ಮೊದಲ ತಲೆಮಾರು ಹೈಸ್ಕೂಲು, ಪಿಯುಸಿಯವರೆಗಿನ ಶಿಕ್ಷಣ ಪಡೆದಿದ್ದಾರೆ. ಬಡತನದ ಕಾರಣಕ್ಕಾಗಿ ಮುಕ್ಕಾಲು ಭಾಗದಷ್ಟು ಮಕ್ಕಳು ಮತ್ತು ಯುವಜನರು ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಪ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದಾರೆ. ಮೂರ್ನಾಲ್ಕು ಜನರು ಮಾತ್ರ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು  ಪಾರ್ಟ್ ಟೈಂ ಕೆಲಸಗಳನ್ನು ಮಾಡಿಕೊಂಡು ಮುಂದುವರಿಸುತ್ತಿದ್ದಾರೆ. ಸದ್ಯಕ್ಕೆ ಊರಿನಲ್ಲಿರುವ ಈ ವಿದ್ಯಾರ್ಥಿಗಳಿಗೆ ಈ ಲಾಕ್ ಡೌನ್ ರಜೆಯಲ್ಲಿ ನಡೆಯುವ ಆನ್ ಲೈನ್ ಕ್ಲಾಸ್ ಗಳಿಗೆ ಭಾಗಿಯಾಗಲೂ ಬೇಕಾದ ಮೊಬೈಲ್ ಫೋನ್ ಗಳ ಮತ್ತು ಇಂಟರ್ ನೆಟ್ ಗಳ ಅನುಕೂಲಗಳಿಲ್ಲ.

ಈ ನಮ್ಮೂರಲ್ಲಿ ನಗರಕ್ಕೆ ಹೋಗಿ ಜೀವಿಸುತ್ತಿವವರ ಸಂಖ್ಯೆಯು ಕಡಿಮೆ ಇದ್ದು ನಗರದಿಂದ ವಾಪಸ್ಸು ಊರಿಗೆ ಬಂದವರ ಸಂಖ್ಯೆ ಬೆರಳಣಿಕೆಯಷ್ಟಿದೆ. ಇದಿಷ್ಟು ನಮ್ಮ ಊರಾದ ಲಿಂಗನಾಪುರದ ವಾಸ್ತವ ಚಿತ್ರಣವಾಗಿದೆ.

ಕಾವೇರಿ ದಾಸ್ ,ಬೆಂಗಳೂರು ಸೆಂಟ್ರಲ್ ವಿವಿಯಲ್ಲಿ ಕನ್ನಡ ಎಂ.ಎ ಮಾಡುತ್ತಿದ್ದಾರೆ

ಪ್ರತಿಕ್ರಿಯಿಸಿ