ಕೊರೊನಾ ಕಾಲದಲ್ಲಿನ ಗ್ರಾಮಿಣ ಬದುಕಿನ ಚಿತ್ರಗಳನ್ನ ಋತುಮಾನಕ್ಕಾಗಿ ಎ.ಆರ್.ವಾಸವಿ ಮತ್ತು ಕೆ.ಪಿ ಸುರೇಶ ಸಂಪಾದಿಸಿ ಕೊಟ್ಟಿದ್ದಾರೆ.ಇಂತಹ ನಾಡಿನ ಹತ್ತು ವಿವಿಧ ಹಳ್ಳಿಯ ಚಿತ್ರಗಳು ದಿನಕ್ಕೊಂದರಂತೆ ಕೊರೊನಾ ಕಾಲದಲ್ಲಿ ಗ್ರಾಮಿಣ ಬದುಕು ಅನ್ನುವ ಶೀರ್ಷಿಕೆಯಲ್ಲಿ ಋತುಮಾನದಲ್ಲಿ ಪ್ರಕಟವಾಗುತ್ತಿದೆ
ಗುಬ್ಬಿ ತಾಲ್ಲೂಕಿನಲ್ಲಿ ಯಾವುದೇ ಕರೊನಾ ಪ್ರಕರಣ ಇಲ್ಲ ಮತ್ತು ನಮ್ಮ ಸುತ್ತಲಿನ 10 ಕಿ.ಮೀ. ದೂರದಲ್ಲೂ ಯಾವುದೇ ಕೊರೊನಾ ಪ್ರಕರಣ ಇಲ್ಲ. ಮುಸ್ಲಿಂ ಭಾಂದವರು ದೆಹಲಿಯ ಜಮಾತ್‍ಗೆ ಹೋಗಿದ್ದು ತಪ್ಪು. ದೆಹಲಿಗೆ ಹೋಗಿದ್ದವರಿಗೂ ನಮಗೂ ಏನು ಸಂಪರ್ಕ ಇಲ್ಲ. ನಮ್ಮ ಸುತ್ತ-ಮುತ್ತ ಹಳ್ಳಿಯ ಜನರು ನಮ್ಮಿಂದಲೆ ಕೊರೊನಾ ಬರುತ್ತದೆ ಎಂದು ನಿಂದಿಸುವುದರಿಂದ ಬೇಸರವಾಗುತ್ತದೆ.
ಮೊಟಾರ್ ಬೈಂಡಿಗ್ ಮಾಡುತ್ತಿದ್ದ ವ್ಯಕ್ತಿಗೆ ಮೊದಲು ನೀವು ವೈಂಡಿಂಗ್ ಚೆನ್ನಾಗಿ ಮಾಡುತ್ತೀರಿ ಎಂದು ಜನರು ಬಂದು ಕುಳಿತು ಮೋಟಾರ್ ವೈಂಡಿಂಗ್ ಮಾಡಿಸಿಕೊಂಡು ಹೋಗುತ್ತಿದ್ದರು. ಆದರೆ ಈಗ ಕೆಲವರು ಮೊಟಾರು ರಿಪೇರಿ ಮಾಡಿಸಲು ಮನೆ ಹತ್ತಿರ ಬಂದರೂ ಸಹ ನೀವು ಮುಸ್ಲಿಂ ನಿಮಗೆ ಕೊರೊನಾ ಇದೆ ಎಂದು ಮೊಟಾರ್ ದೂರದಲ್ಲೇ ಇಟ್ಟು ರಿಪೇರಿ ಮಾಡಿ ಎಂದು ಹೋಗುತ್ತಾರೆ.
ಎರಡನೇ ವ್ಯಕ್ತಿಯ ಅನುಭವ: ರೇಷನ್ ತರಲು ಒಬ್ಬ ಮುಸ್ಲಿಂ ವ್ಯಕ್ತಿ ಹೋಗಿದ್ದರು. ನಿಯಮದ ಪ್ರಕಾರ ಒಂದು ಮೀಟರ್ ಅಂತರದಲ್ಲಿ ನಿಂತಿದ್ದರೂ ಅಲ್ಲಿ ನಿಂತಿದ್ದ ಜನರು ನೀವು ಮುಸ್ಲಿಂ ನಿಮಗೆ ಕೊರೊನಾ ಇದೆ ಎಂದು ಹೀಯಾಳಿಸಿ ಅಲ್ಲಿಂದ ಇನ್ನೂ ಸಾಕಷ್ಟು ದೂರ ಸರಿಸಿದರು (ನಿಲ್ಲಿಸಿದರು). ಅವರು ಬೇಸರದಲ್ಲೇ ರೇಷನ್ ಪಡೆದು ವಾಪಸ್ಸಾದರು.
ಮೂರನೇ ವ್ಯಕ್ತಿಯ ಅನುಭವ ಎರಡು ತಿಂಗಳ ಹಿಂದೆ ಹುಣಸೇ ಮರಗಳನ್ನು ವ್ಯಾಪರ ಮಾಡಿಕೊಂಡಿದ್ದರು. ಈಗ ಹಣ್ಣಿಗೆ ಬಂದಿದ್ದು, ಹುಣಸೇ ಹಣ್ಣು ಬಡಿಯಲು ಹೋಗಿದ್ದಾಗ ಬಾಯಾರಿಕೆಯಾಗಿ ಅಲ್ಲೇ ಪಕ್ಕದಲ್ಲಿ ಇದ್ದ ಮನೆಗೆ ಕುಡಿಯಲು ನೀರು ಕೇಳಲು ಹೋದರು. ಆಗ ಆ ಮನೆಯವರು ನೀವು ಮುಸ್ಲಿಂ ನಿಮಗೆ ಕೊರೊನಾ ಇದೆ ನೀವು ಬರಬೇಡಿ ಎಂದು ಹೇಳಿ ನೀರು ಕೊಡದೆ ಬಾಗಿಲು ಮುಚ್ಚಿದರು ಎಂದು ತಮ್ಮ ಅನುಭವ ಹಂಚಿಕೊಂಡರು.
-ಯತೀಶ್, ಕೃಷಿಕರು, ಸಿರಾ ತಾಲೂಕು, ತುಮಕೂರು
ಈ ಮುಸ್ಲಿಂ ವಿರೋಧಿ ನಿಲುವು ಭಯ ಹುಟ್ಟಿಸುವಷ್ಟು ವ್ಯಾಪಕವಾಗುತ್ತಿದೆ. ನನ್ನ ತಾಯಿ, ಹಳ್ಳಿಯವರು, ಎಂದಿಗೂ ಮುಸ್ಲಿಂ ವಿರೋಧಿ ನಿಲುವು ಬರಿ ಮಾತಿನಲ್ಲೂ ತಿಳಿಸಿದವರಲ್ಲ. ಆದರೆ, ಯಾಕೋ ನೆನ್ನೆ ಫೋನಿನಲ್ಲಿ ಮಾತನಾಡುತ್ತ, ಮುಸ್ಲಿಂರನ್ನು ವಿರೋಧಿಸುವ ಮಾತನ್ನು ಬಲು ಮೆಲ್ಲಗೆ ಆಡಿದರು. ಬೇಸರವಾಯಿತು. ಇಷ್ಟು ವರ್ಷಗಳಲ್ಲಿ ಎಂದಿಗೂ ಇಂತಹ ನಿಲುಹು ತಾಳದವರು, ಪ್ರೀತಿ ಭಾಂಧವ್ಯಗಳನ್ನು ಬಹು ಆಸ್ಥೆಯಿಂದ ತಿಳಿಸಿದವರನ್ನೂ ಸಹ ಈ ದ್ವೇಷದ ಭಾವನೆ ಹಬ್ಬಿತೇ. ಯಾರು ಕಾರಣ ಎಂದು ಹೇಳಬೇಕು? ನಂತರ ಸಾವರಿಸಿಕೊಂಡು ಅವರೇ ಈ ರೀತಿ ಮಾತನಾಡಬಾರದು ಎಂದರು. ಭಯವಾಗುತ್ತಿದೆ.
ಒಂದಿಡೀ ಜನಾಂಗವನ್ನು ತಪ್ಪಿತಸ್ಥರನ್ನಾಗಿ ಮಾಡಲೊರಟಿರುವ ಜನಗಳದೆಷ್ಟು ತಪ್ಪಿದೆಯೋ, ಅದೇ ಜನಾಂಗದಲ್ಲಿ ಕೆಲವರು ತಪ್ಪು ಮಾಡಿದಾಗ, ಅವರ ಹೆಸರನ್ನಿಟ್ಟು ಬಹಿರಂಗವಾಗಿ ಅವರ ತಪ್ಪನ್ನು ವಿರೋಧಿಸದ ಕೆಲವು ಪಟ್ಟಬಧ್ರ ಬುದ್ದಿಜೀವಿಗಳದೂ ಅಷ್ಟೇ ತಪ್ಪಿದೆ.
ಮುಸ್ಲಿಂ ವಿರೋಧಿ ಭಾವನೆ ಜನರಲ್ಲಿ ಪ್ರಬಲವಾಗಲು
ಮಾಧ್ಯಮಗಳ ಕೊಡುಗೆಯು ಅಪಾರ…