ಕೊರೋನ ನಂತರದ ಜಗತ್ತು : ಸಾಂಕ್ರಾಮಿಕ ರೋಗ ಮತ್ತು ಅಳಿವಿನಂಚಿನ ಬಾಶೆಗಳು

ಅಂಡಮಾನಿನ ಒಂದು ಕುಟುಂಬದಿಂದ ಕೇವಲ ಮೂರು ವ್ಯಕ್ತಿಗಳು ಒಂದು ಅಪರೂಪದ ಭಾಷೆ ಮಾತನಾಡುತ್ತಾರೆ. ಈ ಭಾಷಿಕ ಪರಂಪರೆ ಕೊರೋನಾದಂತ ಹೊಸ ಬೆದರಿಕೆಯನ್ನು ಹೇಗೆ ತಡೆದು ಉಳಿದುಕೊಳ್ಳಬಹುದು ?

ಕಳೆದಾರು ತಿಂಗಳಿನಿಂದ ಇಡಿಯ ಬೂಮಂಡಲವನ್ನೆ ಅಲುಗಾಡಿಸುತ್ತಿರುವ ಕರೊನಾ ರೋಗ ಜಗತ್ತಿನ ಆರ್ತಿಕತೆ ಮೊದಲಾಗಿ ಸಮಾಜದ ಎಲ್ಲ ವಲಯಗಳನ್ನೂ ಬಾದಿಸುವುದು ದಿಟ. ಆಯಾ ವಲಯದಲ್ಲಿರುವವರು ಇದನ್ನು ಸೂಕ್ಶ್ಮವಾಗಿ ಗಮನಿಸುತ್ತಿದ್ದಾರೆ ಕೂಡ. ಈ ರೋಗದಿಂದ ಬಾಶೆಗಳಿಗೆ ಏನಾದರೂ ಅಪಾಯ ಒದಗಬಹುದೆ ಎಂಬುದನ್ನು ನಾವು ಚಿಂತಿಸಬೇಕಿದೆ. ಕಂಡಿತ ಬಾಶಾವಿಗ್ನಾನಕ್ಕೂ ಇದರಿಂದ ಪೆಟ್ಟು ಬೀಳುವ ಅಪಾಯ ಇದೆ. ಮುಕ್ಯವಾಗಿ ಅಳಿವಿನಂಚಿನಲ್ಲಿರುವ, ಸಣ್ಣ ಸಣ್ಣ, ಬುಡಕಟ್ಟು ಬಾಶೆಗಳಿಗೆ ಅಪಾಯ ಒದಗುವ ಸಂಬವ ಇದೆ. ಬೆರಳೆಣಿಕಯೆ, ನೂರರಶ್ಟು ಸಂಕೆಯ ಹಲವು ಬಾಶೆಗಳು ಬಾರತದಾಗ ಇದ್ದು, ಅವುಗಳ ಸದಸ್ಯರಿಗೆ ರೋಗ ತಗುಲಿದರೆ ಏನಾಗಬಹುದು ಎಂಬ ಬಯ. ಇದು ಒಟ್ಟು ಮನುಶ್ಯ ಜಗತ್ತಿಗೆ, ಮನುಶ್ಯಗ್ನಾನಕ್ಕೆ ದೊಡ್ಡ ಅಪಾಯವನ್ನೂ ತಂದೊಡ್ಡುವ ಬಯ ಇದೆ.

ಈ ಲೇಕನವನ್ನು ಬರೆಯುವ ವೇಳೆಗೆ ಬಾರತದ ಸೋಂಕಿತರ ಸಂಕೆ ಇಪ್ಪತ್ನಾಲ್ಕು ಸಾವಿರದ ಅಂಕಿಗೆ ತಲುಪಿದೆ (24-04-2020). ಲಾಕ್ಡವುನ್ ಆಗಿ ತಿಂಗಳು ದಾಟಿದರೂ ಸೋಂಕಿತರ ಸಂಕೆ ಪ್ರತಿದಿನಕ್ಕೆ ಸಾವಿರದ ಆಸುಪಾಸಿನಲ್ಲೆ ಹೆಚ್ಚಾಗುತ್ತಿದೆ. ಬಾರತ ಈಗ ಕರೊನಾದ ಸಾಮಾಜಿಕ ಹರಡಿಕೆ ಬಯದಲ್ಲಿ ಇದೆ. ಕರೊನಾ ಒಂದು ವೇಳೆ ಸಾಮಾಜಿಕವಾಗಿ ಹರಡಿದರೆ ದೊಡ್ಡ ಪ್ರಮಾಣದ ಸಾವುನೋವು ಸಂಬವಿಸುತ್ತವೆ. ಮುಕ್ಯವಾಗಿ ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರಿಂದ ಒಬ್ಬರಿಗೆ ರೋಗ ತಗುಲುವುದು ಎಂದರೆ ಇಡಿ ಕುಟುಂಬಕ್ಕೆ, ಆ ಕುಟುಂಬ ಬದುಕಿರುವ ಪರಿಸರಕ್ಕೆ ಹರಡುವ ಬಯ ಇದೆ. ಕೂಡುಕುಟುಂಬಗಳಿರುವ ಬಾರತದಲ್ಲಿ, ಸರಿಯಾದ ದವಾಕಾನಿ ಮೊದಲಾದವು ಏನೂ ಇಲ್ಲದ ಪರಿಸರದಲ್ಲಿ, ಎಲ್ಲವೂ ಅಸ್ತವ್ಯಸ್ತವಾಗಿರುವ ಹಳ್ಳಿಬದುಕಿನಲ್ಲಿ ಸಾಮಾಜಿಕ ಹರಡಿಕೆ ದೊಡ್ಡ ಪ್ರಮಾಣದ ಅಪಾಯ. ಈ ಹೊಡೆತಕ್ಕೆ ಒಂದು ವೇಳೆ ಬುಡಕಟ್ಟುಗಳು, ಸಣ್ಣ ಸಣ್ಣ ಬಾಶೆಗಳ ಮಾತುಗರು ಸಿಲುಕಿದರೆ ಇಡಿಯ ಸಮುದಾಯವನ್ನೆ ಆಪೋಶನ ತೆಗೆದುಕೊಳ್ಳುವ ಬಯ ಕಾಡುತ್ತದೆ. ಕೆಲವೆ ಮಾತುಗರು ಇರುವ ಬಾಶೆಗಳು ಇಡಿಯಾಗಿ ಅಳಿದು ಹೋದರೆ ಎಂಬ ಬಯ ಇದೆ. ಸಣ್ಣ ಸಣ್ಣ ಬಾಶೆಗಳು ಸಾಮಾನ್ಯವಾಗಿ ಒಂದೆ ಪರಿಸರದಲ್ಲಿ ಬದುಕಿರುವುದನ್ನು ಕಾಣಬಹುದು. ಮುಕ್ಯವಾಗಿ ನೀಲಗಿರಿ ದಟ್ಟಡವಿ, ಅಂಡಮಾನ್ ದ್ವೀಪಗಳು, ಹಿಮಾಲಯ ಪರ್ವತ ಸಾಲು ಮೊದಲಾದ ಪ್ರದೇಶಗಳಲ್ಲಿ ಒಂದು ಬಾಶೆಯನ್ನು ಆಡುವ ಸಮುದಾಯ ಒಂದೆ ಕಡೆ ನೆಲೆ ನಿಂತಿರುವುದನ್ನು ಕಾಣಬಹುದು.

ಜಗತ್ತಿನಲ್ಲಿ ಯಾವತ್ತಿನಿಂದಲೂ ಬಾಶೆಗಳು ಸಾಯುತ್ತಲಿವೆ. ಸಣ್ಣ ಸಣ್ಣ ಬಾಶೆಗಳು ಸಾಮಾನ್ಯವಾಗಿ ಒಂದೆಡೆ ನೆಲೆಸಿರುತ್ತಿದ್ದವು. ಇಂತಾ ನೆಲೆಗಳಲ್ಲಿ ದೊಡ್ಡಪ್ರಮಾಣದ ಬೂಕಂಪವೊ, ಜ್ವಾಲಾಮುಕಿಯೊ, ಸುನಾಮಿಯೊ, ಬರವೊ, ಪ್ರವಾಹವೊ ಅಲ್ಲದೆ ಯುದ್ದಗಳು, ದಾರ್ಮಿಕ ಆಕ್ರಮಣಗಳು ಕಾರಣವಾಗಿ ಇಡಿಯ ಸಮುದಾಯಗಳು ಸತ್ತುಹೋದ ಹಲವು ನಿದರ್ಶನಗಳು ಜಗತ್ತಿನಾದ್ಯಂತ ಸಿಗುತ್ತವೆ. ಈಗ ಜಗತ್ತನ್ನು ಆವರಿಸಿಕೊಳ್ಳುತ್ತಿರುವ ಕರೊನಾ ಮಾರಿಯಿಂದ ಕೂಡ ಬಾಶೆಗಳು ಇಂತದೆ ಅಪಾಯವನ್ನು ಎದುರಿಸುತ್ತಿವೆ.

ಬಾರತದಲ್ಲಿ ಸಣ್ಣ ಬಾಶೆಗಳು ಹಲವು ಇವೆ. ಅಳಿವಿನಂಚಿನ ಬಾಶೆಗಳೂ ಹೆಚ್ಚಾಗಿವೆ. ಇವುಗಳಲ್ಲಿ ಬುಡಕಟ್ಟು ಬಾಶೆಗಳೆ ಹೆಚ್ಚು. ಈ ಸಮುದಾಯಗಳಲ್ಲಿ ಹಲವು ಸಾಮಾನ್ಯವಾಗಿ ಊರಿನಿಂದ ದೂರದಲ್ಲಿಯೆ ಇಲ್ಲ ಊರಿನ ಅಂಚಿನಲ್ಲಿಯೆ ಇರುವುದು ನಿಜ. ಯಾವುದೆ ರೀತಿಯ ಆದುನಿಕ ಸೇವೆ-ಸವುಲಬ್ಯಗಳು ಏನೂ ಇಲ್ಲದ ಸ್ತಿತಿಯಲ್ಲಿ ಇವೆ. ದುರಂತವೆಂದರೆ ಆದುನಿಕ ಸೇವೆ-ಸವುಲವ್ಯಗಳನ್ನು ಒದಗಿಸದ ಆದುನಿಕ ಸಮಾಜ ಅವರಿಗೆ ಆದುನಿಕ ರೋಗರುಜಿನಗಳನ್ನು ಕೊಟ್ಟುಬಿಟ್ಟಿದೆ. ಅವರ ಆಹಾರ ಪದ್ದತಿ, ಬದುಕಿನ ಪದ್ದತಿಯನ್ನು ಬದಲಿಸಿಬಿಟ್ಟಿದೆ, ಅವರ ಸಾಮಾಜಿಕ ರಚನೆಯನ್ನು ಬದಲಿಸಿಬಿಟ್ಟಿದೆ. ಇದರಿಂದ ಅವರ ಆರೋಗ್ಯದ ಮೇಲಿನ ನಿಯಂತ್ರಣವನ್ನು ಅವರು ಕಳೆದುಕೊಂಡುಬಿಟ್ಟಿದ್ದಾರೆ. ಆದುನಿಕ ಸಮಾಜ ಬಳುವಳಿಯಾಗಿ ಕೊಟ್ಟಿರುವ ರೋಗ-ರುಜಿನಗಳಿಗೆ ಅವರಲ್ಲಿ ಯಾವುದೆ ಪರಿಹಾರಗಳು ಇಲ್ಲ. ಆದುನಿಕ ದವಾಕಾನಿಗಳಿಗೆ ಬರಬೇಕು. ಆದರೆ ದವಾಕಾನಿಗಳು ಅವರಿಗೆ ಸುಲಬಕ್ಕೆ ಸಿಗುವುದಿಲ್ಲ. ಹಾಗಾಗಿ ಬುಡಕಟ್ಟುಗಳಿಗೆ ಈ ರೋಗ ತಗುಲಿದರೆ ಎಂಬ ಬಯ ಬೀಕರವಾಗಿ ಕಾಡುತ್ತಿದೆ.
ದುರಂತವೆಂದರೆ ಈಗಾಗಲೆ ಬ್ರೆಜಿಲ್ಲಿನಲ್ಲಿ ಬುಡಕಟ್ಟುಗಳಿಗೆ ಕರೊನಾ ಬಂದಿರುವುದು ಕೆಲವು ದಿನಗಳ ಹಿಂದೆ ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಗಿದ್ದಿತು. ಬಾರತದಲ್ಲಿ ಇಂತ ಸುದ್ದಿಗಳು ಇನ್ನೂ ಬಂದಿಲ್ಲವಾದರೂ ಬಾರತದ ಸ್ತಿತಿ ಬಲು ಅಪಾಯದ ಅಂಚಿನಲ್ಲಿ ಇದೆ. ಅಂಡಮಾನ್ ಜಗತ್ತಿನ ಅಪರೂಪದ ಬಾಶಿಕ ನೆಲೆ. ಅಂಡಮಾನಿನಲ್ಲಿ ಈ ಲೇಕನ ಬರೆಯುತ್ತಿರುವ ವೇಳೆಗೆ 29 ಮಂದಿಗೆ ಕರೊನಾ ದ್ರುಡಪಟ್ಟಿದೆ. ಅದರಲ್ಲಿ 18 ಮಂದಿಗೆ ಸುದಾರಣೆ ಆಗಿರುವುದು ಸಂತಸದ ವಿಶಯವೆ ಆದರೂ ಇದೊಂದು ಬಯ. ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ 9 ಮಂದಿಗೆ ಕರೊನ ಕಂಡುಬಂದಿದೆ. ನೀಲಗಿರಿ ದಕ್ಶಿಣ ಬಾರತದ ಅತ್ಯಂತ ದಟ್ಟವಾದ ಅಡವಿ ಇರುವ ಮತ್ತು ಹಲವಾರು ಬುಡಕಟ್ಟು ಬಾಶೆಗಳು ಬದುಕಿರುವ ಪ್ರದೇಶ. ಹಾಗೆಯೆ ಈ ರೋಗ ಹಲವಾರು ಬುಡಕಟ್ಟುಗಳು, ಬುಡಕಟ್ಟು ಬಾಶೆಗಳು ಇರುವ ಪ್ರದೇಶಗಳನ್ನೂ ಒಳಗೊಂಡು ಎಲ್ಲೆಡೆ ಕಂಡುಬಂದಿದೆ. ಕರ್ನಾಟಕದ ಸಂದರ್ಬದಲ್ಲಿ ಪಶ್ಚಿಮಗಟ್ಟ ಪ್ರದೇಶ ಹೀಗೆಯೆ ಬಹು ಸೂಕ್ಶ್ಮ, ಇಲ್ಲಿ ಹಲವು ಬಾಶೆಗಳು, ಕನ್ನಡದ ಹಲವು ವಿಶಿಶ್ಟ ಒಳನುಡಿಗಳೂ ಬದುಕಿವೆ. ಈ ಪ್ರದೇಶದ ಉದ್ದಕ್ಕೂ ಕರೊನಾ ಬಯಾನಕವಾಗಿ ಹಬ್ಬಿದೆ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಟ್ಟು 30 ಮಂದಿಗೆ ರೋಗ ತಗುಲಿದೆ. ಒಂದೆ ಕಡೆ ಕಂಡುಬರುವ ಸಮುದಾಯಗಳಿಗೆ ಕರೊನಾ ತಗುಲಿದರೆ ಇಡಿಯ ಸಮುದಾಯಕ್ಕೆ ಅಪಾಯ ಒದಗುವುದರಲ್ಲಿ ಅನುಮಾನವಿಲ್ಲ.

ಕಳೆದ ಎರಡು-ಮೂರು ದಶಕಗಳಲ್ಲಿ ಬಾಶೆಗಳ ಸಾವಿನಿಂದ ಆಗುವ ಅಪಾಯವನ್ನು ಅರಿತುಕೊಂಡ ಜಗತ್ತು ಅವುಗಳ ಮೇಲೆ ಕೆಲಸ ಮಾಡುತ್ತಿವೆ. ಬಾರತದಲ್ಲಿಯೂ ಕೆಲಸಗಳು ನಡೆದಿವೆಯಾದರೂ ಕಡಿಮೆ. ಕರ್ನಾಟಕದ ಮಟ್ಟಿಗೆ ಇದು ಇನ್ನೂ ಕಡಿಮೆ. ಯುನೆಸ್ಕೊ ಬಾರತದ 197 ಬಾಶೆಗಳನ್ನು ಅಳಿವಿನಂಚಿನಲ್ಲಿರುವ ಬಾಶೆಗಳೆಂದು ಪಟ್ಟಿ ಮಾಡಿದೆ. ಇವುಗಳಲ್ಲಿ ಹೆಚ್ಚಿನ ಬಾಶೆಗಳಿಗೆ ಕಡಿಮೆ ಸಂಕೆಯ ಮಾತುಗರು ಇದ್ದಾರೆ. ಬಾರತ ಸರಕಾರ 42 ಬಾಶೆಗಳನ್ನು ಅಳಿವಿನಂಚಿನಲ್ಲಿವೆ ಎಂದು ಪಟ್ಟಿಯೊಂದನ್ನು ಪ್ರಕಟಿಸಿದೆ. ಇವುಗಳಿಗೆ ಮಾತುಗರು ತುಂಬಾ ಕಡಿಮೆ. ಕೆಲವು ಬಾಶೆಗಳಿಗೆ ಕೇವಲ ಬೆರಳೆಣಿಕೆಯ ಮಾತುಗರು ಇದ್ದಾರೆ. ಇನ್ನು ಕೆಲವಕ್ಕೆ ನೂರಾರು ಮಂದಿ ಮಾತ್ರ, ಕೆಲವಕ್ಕೆ ಸಾವಿರದಶ್ಟು ಮಂದಿ ಮಾತುಗರು ಇದ್ದಾರೆ. ಈ ಬಾಶೆಗಳ ಮಾತುಗರಿಗೆ ಕರೊನಾ ಅಂಟಿದರೆ ದೊಡ್ಡ ಅಪಾಯ ಉಂಟಾಗಬಹುದು.

ಪ್ರತಿ ಬಾಶೆಯೂ ಒಂದು ಸಮುದಾಯದ ಸಾಂಸ್ಕ್ರುತಿಕ ರಚನೆಯನ್ನು ನಿರ್ದರಿಸುತ್ತದೆ. ಆ ಸಮುದಾಯದ ಲೋಕದ್ರುಶ್ಟಿಯನ್ನು, ನೂರಾರು ವರುಶಗಳ ಬದುಕಿನ ಅನುಬವದ ಮೊತ್ತವನ್ನು ಒಳಗೊಂಡಿರುತ್ತದೆ. ತಲೆಮಾರುಗಳ ಅಳು-ನಗು ಇದರೊಳಗೆ ಅಡಕಗೊಂಡಿರುತ್ತವೆ. ಬಾಶೆಗಳ ಸಾವು ಈ ಜಗತ್ತಿಗೆ ದೊಡ್ಡ ಕೊರತೆಯನ್ನು ಉಂಟುಮಾಡುತ್ತದೆ. ಪ್ರತಿ ಬಾಶೆಯೂ ಹಲವು ಬಿನ್ನತೆಗಳನ್ನು, ವಿಶಿಶ್ಟತೆಗಳನ್ನು ಹೊಂದಿರುತ್ತದೆ. ಜಗತ್ತು, ಪರಿಸರ ವಿವಿದತೆಯಿಂದ ಕೂಡಿದೆ. ಬಾಶೆಗಳೂ, ಬಾಶೆಗಳ ರಚನೆಯೂ ಈ ವಿವದತೆಯನ್ನೆ ಒಳಗೊಂಡಿರುತ್ತದೆ.

ಬಾಶೆಗಳ ರಚನೆಯಲ್ಲಿ ಹಲವು ಬಿನ್ನತೆಗಳು ಕಂಡುಬರುತ್ತವೆ. ದ್ವನಿ-ದ್ವನಿಮಾ, ಆಕ್ರುತಿಮಾ, ವಾಕ್ಯ, ಅರ್ತ, ಪ್ರಾಗ್ಮಾಟಿಕ್ಸ್, ಶಯ್ಲಿ ಮೊದಲಾಗಿ ಬಾಶೆಯ ಪ್ರತಿಯೊಂದು ಹಂತದಲ್ಲಿಯೂ ಬಾಶೆಗಳ ನಡುವೆ ಬಿನ್ನತೆಗಳನ್ನು ಕಾಣಬಹುದು. ವ್ಯಾಕರಣ ರಚನೆ ಕೇವಲ ತಾಂತ್ರಿಕ ಕೆಲಸ ಮಾತ್ರವಲ್ಲ. ಬಾಶೆ ಸಮಾಜದ ಬಾಗವಾಗಿರುವುದರಿಂದ, ಬಾಶೆಯ ರಚನೆಯು ಆ ಸಮುದಾಯದ ಸಂಸ್ಕ್ರುತಿಯನ್ನು ಪ್ರತಿಪಲಿಸುತ್ತದೆ. ಆ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ರಚನೆಯನ್ನು ಅವರ ಬಾಶೆಯ ರಚನೆ ನಿರ್ದರಿಸುತ್ತದೆ. ಹಾಗಾಗಿ ವ್ಯಾಕರಣ ಇಲ್ಲವೆ ಬಾಶೆಯ ರಚನೆಯನ್ನು ತಿಳಿದುಕೊಳ್ಳುವುದು ಎಂದರೆ ಆ ಸಮುದಾಯದ ಸಮಾಜವನ್ನು, ಸಂಸ್ಕ್ರುತಿಯನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕ. ಬಾಶೆಯ ಪದಗಳು ಆಯಾ ಸಮುದಾಯದ ಸಾಮುದಾಯಿಕ, ಸಾಂಸ್ಕ್ರುತಿಕ ಅರಿವನ್ನು ಒಳಗೊಂಡಿರುತ್ತವೆ. ನೀಲಗಿರಿಯ ದಟ್ಟವಾದ ಅಡವಿಯ ಸಾಕಶ್ಟು ಅರಿವನ್ನು ಅಲ್ಲಿನ ಹಲವಾರು ಬುಡಕಟ್ಟು ಬಾಶೆಗಳಲ್ಲಿ ಕಾಣಬಹುದು. ಸಮುದ್ರದ ಆಳವಾದ ಅರಿವು ಕಡಲ ತೀರದ ಬಾಶೆಗಳಲ್ಲಿ ಕಂಡುಬರುವಶ್ಟು ಒಳನಾಡಿನ ಬಾಶೆಗಳಲ್ಲಿ ಕಂಡುಬರುವುದಿಲ್ಲ. ಅಂಡಮಾನಿನ ಬಾಶೆಗಳು ಸಮುದ್ರದ ಅಗಾದ ಅರಿವನ್ನು ಹೊಂದಿರುವುದನ್ನು ನೋಡಬಹುದು. ಈ ಅರಿವು ಆ ಬಾಶೆಗಳ ಪದಕೋಶದಲ್ಲಿ, ಹಲವು ಬಾರಿ ಬಾಶಾ ಬಳಕೆಯಲ್ಲಿ ಅಡಗಿರುತ್ತದೆ. ಹಾಗಾಗಿ ವ್ಯಾಕರಣ ಮತ್ತು ನಿಗಂಟು ರಚನೆಗಳು ಹಲವು ಆಯಾಮಗಳಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತವೆ.
ಬಾಶೆಗಳ ಅದ್ಯಯನ ಕೇವಲ ಆ ಬಾಶೆಗಳ ವ್ಯಾಕರಣ, ನಿಗಂಟು ಬರೆಯುವುದು ಮಾತ್ರ ಅಲ್ಲ. ಬದಲಿಗೆ ಇಡಿಯಾಗಿ ಆಯಾ ಬಾಶೆಯನ್ನಾಡುವವರ ಸಾವಿರಾರು ವರುಶಗಳ ಅನುಬವವನ್ನು ಅರ್ತ ಮಾಡಿಕೊಳ್ಳುವುದು ಆಗಿರುತ್ತದೆ. ಈ ಅನುಬವದಿಂದ ಉದಿಸಿದ 1) ಸ್ರುಜನಾತ್ಮಕ ಅಬಿವ್ಯಕ್ತಿಗಳಾದ ಸಾಹಿತ್ಯ, ಕಲೆ, ಚಿತ್ರಕಲೆ, ಶಿಲ್ಪ ಮೊದಲಾದವು, ದೇಹದ, ಮನೆಯ, ಮನೆಬಳಕೆ ವಸ್ತುಗಳ ಮೇಲೂ ಕಂಡುಬರುವ ಕಲಾಬಿವ್ಯಕ್ತಿ, ದೇವರು-ಸಂಸ್ಕ್ರುತಿ ಸಂಬಂದಿತ ಆಚರಣೆ, ನಂಬಿಕೆ ಮೊದಲಾದವುಗಳಲ್ಲಿ ಕಂಡುಬರುವಂತವೂ, ಅವರ ಕಲ್ಪನಾವಿಲಾಸವೂ 2) ಗ್ನಾನ-ವಿಗ್ನಾನ; ಅಡುಗೆ ಮಾಡುವುದರಿಂದ, ಬಟ್ಟೆ ನೇಯುವುದರಿಂದ, ರೋಗ ತಿಳಿದುಕೊಳ್ಳುವ, ಅದಕ್ಕೆ ಮದ್ದು ಕೊಡುವುದು, ಕಾಲಾನುಕಾಲದ ಪರಿಸರದ ತಿಳುವಳಿಕೆ, ಗಾಳಿ-ಮಳೆ-ಬೆಳಕಿನ ಅರಿವು, ಸುತ್ತಲಿನ ಬದುಕಿನ ಬಾಗವಾದ ಬೂಮಿ, ನೀರು, ಗುಡ್ಡ, ಅಡವಿಗಳ ಜೀವರಾಶಿಗಳ ಅರಿವು ಮತ್ತು 3) ಅವರ ತಾತ್ವಿಕತೆ, ಲೋಕದ್ರುಶ್ಟಿ; ಬದುಕಿನ, ಸಮಾಜದ ಬಗೆಗೆ ಅವರದೆ ಆದ ಲೋಕದ್ರುಶ್ಟಿ, ಅದಕ್ಕೆ ತಕ್ಕಂತೆ ರೂಪುಗೊಂಡ ಬದುಕಿನ ಮತ್ತು ಸಮಾಜದ ಎಲ್ಲ ಆಯಾಮಗಳಲ್ಲಿನ ನಂಬಿಕೆ, ಆಚರಣೆ, ಸಂಪ್ರದಾಯ ಈ ಮೊದಲಾದವುಗಳನ್ನು ಅರಿತುಕೊಳ್ಳುವುದು. ಈ ಎಲ್ಲವನ್ನೂ ಬಾಶೆಗಳ ಅದ್ಯಯನ ಒಳಗೊಳ್ಳುತ್ತದೆ. ಪ್ರತಿಯೊಂದು ಬಾಶೆಯೂ ಮನುಶ್ಯ ಜಗತ್ತಿನ ಸ್ರುಜನಾತ್ಮಕತೆಗೆ, ಮನುಶ್ಯಗ್ನಾನದ ಒಟ್ಟುಮೊತಕ್ಕೆ ತನ್ನದೆ ಕೊಡುಗೆಯನ್ನು ಕೊಡುತ್ತದೆ.

ಕಳೆದ ಸುಮಾರು 50-60 ಸಾವಿರ ವರುಶಗಳಿಂದ ಮನುಶ್ಯರು ಬಾಶೆಗಳನ್ನು ಬಳಸುತ್ತಿದ್ದಾರೆ. ಬಾರತಕ್ಕೆ ಸಂಬಂದಪಟ್ಟಂತೆ ಅಂಡಮಾನಿನಲ್ಲಿ ನೆಲೆನಿಂತಿರುವವರು ಸುಮಾರು ಅಯವತ್ತು ಸಾವಿರ ವರುಶಗಳ ಹಿಂದೆಯೆ ಈ ನೆಲಕ್ಕೆ ಬಂದಿದ್ದಾರೆ. ಅಂದರೆ ಸುಮಾರು ಅಯವತ್ತು ಸಾವಿರ ವರುಶಗಳ ಕಾಲ ಈ ನೆಲದೊಂದಿಗೆ, ಈ ಪರಿಸರದೊಂದಿಗೆ ಅವರು ಬದುಕಿದ್ದಾರೆ. ಮನುಶ್ಯ ಬದುಕಿನ ಅನುಬವಗಳು ತಲೆಮಾರುಗಳಿಂದ ತಲೆಮಾರುಗಳಿಗೆ ಮುಂದುವರೆಯುವ ಹಾಗೆ ಅವು ಒಟ್ಟುಗೊಂಡು ಬಾಶಿಕ ಅಬಿವ್ಯಕ್ತಿಯನ್ನು ಪಡೆದುಕೊಂಡು ಕ್ರಮೇಣ ಬಾಶೆಯ ಅನುಬವದ ಬಾಗವಾಗಿ ಬೆಳೆಯುತ್ತವೆ. ಅವು ಆ ಸಮುದಾಯದ ಸಹಜ ಅರಿವಿನ ಬಾಗವಾಗಿಬಿಡುತ್ತವೆ. ಬಾಶೆಗಳ ಸಾವಿನಿಂದ ಇವೆಲ್ಲವನ್ನೂ ಕಳೆದುಕೊಳ್ಳುವ ಬಯ ಇದೆ. ಇಲ್ಲಿ ಒಂದು ನಿದರ್ಶನವನ್ನು ತೆಗೆದುಕೊಳ್ಳುವುದಾದರೆ, ಜಗತ್ತನ್ನೆ ಕಾಡಿಸಿದ ಸುನಾಮಿಯನ್ನು ಅರಿತುಕೊಳ್ಳಲು ಆದುನಿಕ ವಿಗ್ನಾನ ಸೋತಾಗ ಅಂಡಮಾನಿನ ಬುಡಕಟ್ಟು ಬಾಶೆಗಳಾದ ಜಾರವಾ ಮೊದಲಾದ ಸಮುದಾಯದವರು ಸುನಾಮಿ ಅಲೆಗಳು ಅಂಡಮಾನಿಗೆ ತಲುಪುವ ಮೊದಲು ಅದರ ಅರಿವನ್ನು ಪಡೆದುಕೊಂಡು ಎತ್ತರದ ಪ್ರದೇಶಗಳಿಗೆ ಹೋಗಿ ಯಾವುದೆ ಅಪಾಯವಿಲ್ಲದೆ ಉಳಿದುಕೊಂಡಿದ್ದವು. ಅವರಿಗೆ ಸಮುದ್ರದ ಅಲೆಗಳ ವರ್ತನೆಯನ್ನು ಹಿಡಿಯುವ ಅರಿವು ಇದೆ. ಇಂತಾ ಜಗತ್ತೆ ಬೆರಗುಗೊಂಡ ವಿಗ್ನಾನವನ್ನು ಈ ಬುಡಕಟ್ಟು ಬಾಶೆಗಳು ಹೊಂದಿವೆ.

ಬುಡಕಟ್ಟುಗಳು ಹೆಚ್ಚಿನ ಸಂದರ್ಬಗಳಲ್ಲಿ ಸ್ವಂತ ಬದುಕನ್ನು ಬದುಕುತ್ತಿರುತ್ತವೆ. ಉಳಿದ ಗುಂಪಿನ ಜೊತೆಗಿನ ಸಂಬಂದ ಕಡಿಮೆ, ದೊಡ್ಡದಾದ ಗುಂಪುಗಳ ಜೊತೆಗೆ ಇವರ ಸಂಬಂದ ಇರುವುದಿಲ್ಲ, ಇದ್ದರೂ ತುಂಬಾ ಕಡಿಮೆ. ಹಾಗಾಗಿ ಈ ಸಮುದಾಯಗಳು ತಮ್ಮ ನೂರಾರು ವರುಶಗಳ ಅನುಬವವನ್ನು ತಮ್ಮಲ್ಲಿ ಹುದುಗಿಸಿಟ್ಟುಕೊಂಡಿರುತ್ತವೆ. ಕೋತ, ಇರುಳ, ಕಾಟ್ಟುನಾಯಕ/ಜೇನುಕುರಬ ಮೊದಲಾದ ಬಾಶೆಗಳು ತಮ್ಮ ಸುಂದರ ಕಲಾಬಿವ್ಯಕ್ತಿಗೆ, ತಮ್ಮ ಅಡವಿಯ ಅಪಾರ ಅರಿವಿಗೆ ಪ್ರಸಿದ್ದ. ತೊದ ಜಗತ್ತಿನಲ್ಲಿಯೆ ಹಲವಾರು ವಿಶಿಶ್ಟ ಅಂಶಗಳಿಗಾಗಿ ಹೆಸರು ಪಡೆದಿದೆ. ಇರುಳರು ಜೇನು ಸಾಕಾಣಿಕೆ ಸೂಕ್ಶ್ಮಗಳನ್ನು ಅರಿತವರು. ಕೊರವರು, ಕೊರಚರು ಕಲಾವಿದರು-ಸಂಗೀತಗಾರರು, ಲಂಬಾಣಿಗರು (ಇವರು ದೊಡ್ಡ ಸಂಕೆಯಲ್ಲಿದ್ದಾರೆ) ಸಾಹಿತ್ಯ, ಕಲೆಗೆ ಹೆಸರು. ಹೀಗೆ ಪಟ್ಟಿ ಬೆಳೆಯುತ್ತದೆ.

ನೀಲಗಿರಿಯ ಊಟಿಯ ಸುತ್ತ ಕಂಡುಬರುವ ಜಗತ್ತಿನ ಒಂದು ಅಪರೂಪದ ಬುಡಕಟ್ಟು ಆಗಿರುವ ತೊದ ಬಾಶೆಯನ್ನು ಆಡುವವರು ಸಾವಿರ ಮಾತ್ರ. ತೊದ ಸಮುದಾಯದ ಇಡಿಯ ಜಗತ್ತು ಇರುವುದು ಊಟಿ ನಗರ (ಊಟಿ ಅವರದೆ ಊರು) ಮತ್ತು ಸುತ್ತಲ ಕೆಲವೆ ಕಿಲೊಮೀಟರುಗಳ ವ್ಯಾಪ್ತಿಯಲ್ಲಿ ಮಾತ್ರ. ಊಟಿ ನಗರದ ಎದೆಬಾಗದಲ್ಲಿ, ಅಂಚಿನಲ್ಲಿ ಬದುಕಿರುವ ತೊದ ಮಾತುಗರು ಬಹುತೇಕ ಬಡವರು, ಕೆಲವರು ಮಾತ್ರ ಇತ್ತೀಚೆಗೆ ಓದಿ ಸರಕಾರಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರದು ಕೂಡುಕುಟುಂಬ ವ್ಯವಸ್ತೆ, ಸಣ್ಣ ಸಣ್ಣ ಮನೆಗಳು, ಗುಡಿಸಲುಗಳು ಇವೆ. ನೀಲಗಿರಿ ಹಲವಾರು ಬುಡಕಟ್ಟುಗಳ ಆಗರ. ಇಲ್ಲಿ ತೊದ, ಕೋತ, ಇರುಳ, ಕಾಣಿಕ್ಕರ್, ಪಣಿಯ, ಕುರುಬ/ಕುರುಂಬ (ಜೇನುಕುರುಬ, ಕಾಡುಕುರುಬ ಮೊ.), ಸೋಲಿಗ, ಪಣಿಯ, ಎರವ ಮೊದಲಾದ ಹಲವಾರು ಬುಡಕಟ್ಟುಗಳು ಇವೆ. ಹೆಚ್ಚಿನ ಬುಡಕಟ್ಟುಗಳ ಮಾತುಗರ ಸಂಕೆ ತುಂಬಾ ಕಡಿಮೆ ಮತ್ತು ಇವು ನಿರ್ದಿಶ್ಟ ಪ್ರದೇಶದಲ್ಲಿ ನೆಲೆನಿಂತಿವೆ. ಕರ್ನಾಟಕದ ಬೆಳಾರಿಯನ್ನು ಯುನೆಸ್ಕೊ ಅಳಿವಿನಂಚಿನ ಬಾಶೆ ಎಂದು ಪಟ್ಟಿ ಮಾಡಿದೆ. ಬೆಳಾರಿ ಮಾತಾಡುವವರ ಬಗೆಗೆ ಹೆಚ್ಚಿನ ತಿಳುವಳಿಕೆ ಇಲ್ಲ. ಇವರು ಕರಾವಳಿ ಪರಿಸರದಲ್ಲಿ, ಉಡುಪಿ, ಮಂಗಳೂರು ಪರಿಸರದಲ್ಲಿ ಕಂಡುಬರುತ್ತಾರೆ. ಹಾಗೆಯೆ ಇವರೊಂದಿಗೆ ಕೊರಗರೂ ಇಲ್ಲಿಯೆ ಕಂಡುಬರುತ್ತಾರೆ. ಇದರ ಅಪಾಯವನ್ನು ಯಾರೊಬ್ಬರೂ ಅರ್ತ ಮಾಡಿಕೊಳ್ಳಬಹುದು. ಬೀದರಿನ ಪಾರ್ದಿಯನ್ನು, ಸಿಂದನೂರಿನ ಬೆಂಗಾಲಿಯನ್ನು (ಬೆಂಗಾಲಿ ಬಾಶೆಗಿಂತ ತುಂಬಾ ಬಿನ್ನವಾದ ಒಳನುಡಿ) ಇಲ್ಲಿ ಉಲ್ಲೇಕಿಸಬಹುದು. ಕರೊನಾದ ಹೆಚ್ಚಿನ ಅಪಾಯದಲ್ಲಿ ಇರುವ ಕಲಬುರಗಿ ಪ್ರದೇಶ ಹಲವಾರು ಬಾಶೆಗಳ ನೆಲೆ. ಅದರಲ್ಲೂ ಉತ್ತರ ಮತ್ತು ದಕ್ಶಿಣ ಬಾರತಗಳ ಹಲವು ಬಾಶೆಗಳು ಇರುವ ಮತ್ತು ಬೆರೆಯುವ ಜಾಗ. ಹಲವಾರು ವಲಯಗಳಲ್ಲಿನ ಉತ್ತರ-ದಕ್ಶಿಣಗಳ ಈ ಬೆರೆಯುವಿಕೆಗೆ ಆಕರವಾಗಿ ಇಲ್ಲಿನ ಹಲವು ಬಾಶೆಗಳ ವಿಬಿನ್ನ-ವಿಶಿಶ್ಟ ರಚನೆಗಳು ಇವೆ. ಕಲಬುರಗಿ ನಗರದಲ್ಲಿ ಗೊಂಡಿ, ಕೊಂಡ, ಉತ್ತರ ಹತ್ತಾರು ಬುಡಕಟ್ಟುಗಳು ಮೊದಲಾದ ಬಾಶೆಗಳ ಬೆರಳೆಣಿಕೆ ಸಂಕೆಯ ಮಾತುಗರು ನೆಲೆಸಿದ್ದಾರೆ. ಇಂತಾ ಸೂಕ್ಶ್ಮಗಳನ್ನು ಹಲವು ನಗರ ಕೇಂದ್ರಗಳಲ್ಲಿ ಕಾಣಬಹುದು. ಇತ್ತೀಚೆಗೆ ಬೆಂಗಳೂರಲ್ಲಿ ಹಮಾಲಿಯವರಿಗೆ ರೋಗ ತಗುಲಿ ಈ ಬಡವರಿಗೆ ರೋಗ ತಗುಲುವ ಬಯವನ್ನು ಹುಟ್ಟಿಸಿದೆ.

ನಾಡಿನ ಉದ್ದಗಲ ಹಲವಾರು ಬುಡಕಟ್ಟುಗಳು ಹರಡಿಕೊಂಡಿದ್ದಾರೆ. ಕರ್ನಾಟಕದ ತುಂಬಾ ಉತ್ತರದ ಕಾಂದೇಶದಿಂದ ಬಂದ ಬಿನ್ನ ಕಾಂದೇಶಿ ಒಳನುಡಿಗಳನ್ನು ಆಡುವ ಹಲವಾರು ಮಂದಿ ತೀರಾ ಸಣ್ಣ ಸಂಕೆಯಲ್ಲಿ ಇದ್ದಾರೆ. ರಾಜಸ್ತಾನದ ಮತ್ತು ಬಿಹಾರದ ಹಲವು ಒಳನುಡಿಗಳನ್ನು, ಬಿನ್ನ ಹಿಂದಿಗಳನ್ನು ಆಡುವವರು, ಈಶಾನ್ಯ ಬಾರತದ ಬಿನ್ನ ಬಾಶೆಯ ಹಿನ್ನೆಲೆಯವರು, ಪಂಜಾಬಿನ ಶೇಟ್ವಿಗಳು, ಗೂರ್ಕಾ ಆಡುವ ನೇಪಾಳಿ ಹಿನ್ನೆಲೆಯವರು ಮೊದಲಾದವರು ಇದ್ದಾರೆ. ತೆಲಂಗಾಣ, ಆಂದ್ರಪ್ರದೇಶಗಳ ಗಡಿಯ ಉದ್ದಕ್ಕೂ ಕಂಡುಬರುವ ಹಲವಾರು ತೆಲುಗು ಒಳನುಡಿಗಳನ್ನಾಡುವವರು, ಬೆಳಗಾವಿ, ಬೀದರುಗಳಲ್ಲಿ ಕಂಡುಬರುವ ಮರಾಟಿಯ ಒಳನುಡಿಗಳು, ಬೆಂಗಳೂರು ಸುತ್ತಮುತ್ತ ಕಂಡುಬರುವ ಅರುವು, ಕೋಲಾರದ ಅರುವುಮು ಮೊದಲಾದವು ನಾಡಿನ ನಿರ್ದಿಶ್ಟ ಪ್ರದೇಶಗಳಲ್ಲಿ ಮಾತ್ರ ಕಂಡುಬರುವಂತವರು. ಮುಕ್ಯವಾಗಿ ಇವರಲ್ಲಿ ಹಲವರು ಅಲೆಮಾರಿಗಳು ಇಲ್ಲವೆ ಅರೆ-ಅಲೆಮಾರಿಗಳು.

ಕರೊನದ ಅಪಾಯದ ವಿವಿದ ಮುಕಗಳನ್ನು ನಾವು ಅರ್ತ ಮಾಡಿಕೊಳ್ಳಬೇಕು. ಕರೊನಾ ರೋಗ ತಗುಲಿದರೆ ಸಾಯುವ ಅಪಾಯ ಒಂದು. ಆದರೆ, ದುಡಿತ ಇಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಸಾಯುವ ಅಪಾಯ ಇನ್ನೊಂದು. ಹೆಚ್ಚಾನುಹೆಚ್ಚು ಬುಡಕಟ್ಟುಗಳು ಹೀಗೆ ದುಡಿದು ತಿನ್ನುವವರು. ದುಡಿಮೆ ಇಲ್ಲದೆ ಬದುಕುವುದು ತುಂಬಾ ಕಶ್ಟವಾಗುತ್ತಿದೆ. ಇದರ ಅಪಾಯದ ಇನ್ನೊಂದು ಆಯಾಮವೂ ಇದೆ. ಬ್ರೀಟೀಶರ ಕಾಲದಿಂದ ಬುಡಕಟ್ಟುಗಳನ್ನು ಅಮಾನವೀಯವಾಗಿ ಕಾಣುವ ಪರಿ ಮೊದಲಾಗಿದೆ. ಸ್ವತಂತ್ರ ಬಾರತದಲ್ಲಿ ಅದು ಇನ್ನೂ ಮುಂದುವರೆದಿದೆ ಮಾತ್ರವಲ್ಲದೆ ಹೆಚ್ಚಾಗಿದೆ. ಹಳ್ಳಿಹಳ್ಳಿಗಳಲ್ಲಿ ಬುಡಕಟ್ಟುಗಳನ್ನು ಕಳ್ಳರೆಂದು ಪರಿಚಯಿಸುವ ಕೆಟ್ಟ ಚಾಳಿ ಇನ್ನೂ ಮುಂದುವರೆದಿದೆ. ಕರೊನಾದ ಸಾಮಾಜಿಕ ಸಮಸ್ಯೆ ಬಿಗಡಾಯಿಸುತ್ತಾ ಹೋದರೆ ಹಸಿವಿನ ತಾಂಡವ ಏಳುವ ಅಪಾಯ ಇದೆ. ಹಸಿವಿನ ತಾಂಡವದ ಸಮಸ್ಯೆಗಳಿಗೆ ಮೊದಲು ಆರೋಪಕ್ಕೆ ತುತ್ತಾಗುವವರು ತುಂಬಾ ಸಹಜವಾಗಿ ಬುಡಕಟ್ಟುಗಳು. ಇವೆಲ್ಲವೂ ಕ್ರಮೇಣ ಬುಡಕಟ್ಟುಗಳ ಮೇಲೆ ವಿಬಿನ್ನ ಪ್ರಬಾವ ಬೀರುವ ಸಾದ್ಯತೆ ಇರುತ್ತದೆ.

ಅಂಡಮಾನಿನ ಬೊ, ಕೊರ, ಜಾರವಾ, ಒಂಗೆ, ಗ್ರೇಟ್ ಅಂಡಮಾನೀಸ್, ಸೆಂಟಲೀಸ್ ಮೊದಲಾದ ಬಾಶೆಗಳನ್ನು ಆಡುವವರ ಸಂಕೆ ಕೇವಲ ಬೆರೆಳೆಣಿಕೆಯಶ್ಟು ಮಾತ್ರ. ಈ ಬಾಶೆಗಳ ರಚನೆ, ಇವುಗಳಲ್ಲಿ ಅಡಕಗೊಂಡಿರುವ ಅಗಾದ ವಿದ್ವತ್ತು ಜಗತ್ತಿನಲ್ಲಿಯೆ ಅಪರೂಪದವು. ಅಂಡಮಾನಿನ ದಟ್ಟಡವಿಗೆ ಕರೊನಾ ತಲುಪಿದರೆ ಇಲ್ಲಿನ ಹಲವಾರು ಬುಡಕಟ್ಟುಗಳು ಇಡಿಯಾಗಿ ಇಲ್ಲವಾಗುವ ಬಹುದೊಡ್ಡ ಅಪಾಯ ಕಾಣಿಸುತ್ತದೆ. ಬಾರತದಾಗ ಇಂತಾ ಸಣ್ಣ ಸಂಕೆಯ ಬಾಶೆಗಳ ಪಟ್ಟಿ ನೂರನ್ನು ದಾಟುತ್ತದೆ. ಹಿಮಾಲಯ ಪರ್ವತ ಸಾಲಿನ ಪರಿಸರದಲ್ಲಿ, ಈಶಾನ್ಯ ಬಾರತದಲ್ಲಿ ಗೊರುಮ್, ಆಕ, ಹಂಡೂರಿ, ಲಮೋಂಗ್ಸೆ, ಮ್ರಾ, ರುಗಾ, ತಾಯಿ ರೊಂಗ್, ತಾಯಿ ನೊರಾ, ತರಾಒ, ನೀಲಗಿರಿಯಲ್ಲಿ ತೊದ, ಕೋತ ಮೊದಲಾಗಿ ಹಲವು ಬುಡಕಟ್ಟುಗಳು ಕರ್ನಾಟಕದಲ್ಲಿ ಬೆಳಾರಿ, ಕೊರಗ ಮೊದಲಾದವು ಹೀಗೆಯೆ ಪಟ್ಟಿ ಬೆಳೆಸಬಹುದು. ಇಂತದೆ ಪರಿಸ್ತಿತಿ ಜಗತ್ತಿನ ಹಲವು ದೇಶಗಳಲ್ಲಿಯೂ ಕಂಡುಬರುತ್ತದೆ.

ಈ ಮೇಲೆ ಹೇಳಿದಂತೆ ಕರ್ನಾಟಕದ ಸಂದರ್ಬದಲ್ಲಿ ಇದುವರೆಗೆ ಸಾಯುತ್ತಿರುವ ಬಾಶೆಗಳ ಬಗೆಗೆ ಅದ್ಯಯನಗಳು ಇಲ್ಲದಿರುವುದರಿಂದ ಈ ಬಾಶೆಗಳು ಅಳಿದು ಹೋದರೆ ಅದು ಬಹುದೊಡ್ಡ ಅಪಾಯವೆನ್ನುವುದರಲ್ಲಿ ಅನುಮಾನವೆ ಇಲ್ಲ. ಕರೊನಾ ಸಾಂಕ್ರಾಮಿಕ ರೋಗದ ನಿಯಂತ್ರಣವಾಗಿ ವಾತಾವರಣ ತಿಳಿಯಾದ ಮೇಲೂ ಈ ಬಾಶೆಗಳ ಮೇಲೆ ಕೆಲಸ ಮಾಡುವುದಕ್ಕೆ ಕ್ಶೇತ್ರಕಾರ್ಯಕ್ಕೆ ಹೋಗುವ ವಾತಾವರಣ ಸರಿಗೊಳ್ಳುವುದಕ್ಕೆ ಇನ್ನೂ ಸಾಕಶ್ಟು ಸಮಯವಾಗಬಹುದು. ಆ ವೇಳೆಗೆ ಅವರ ಸಾಮಾಜಿಕ ಪರಿಸ್ತಿತಿ ಮೊದಲಾದವೂ ಹೇಗಿರುತ್ತವೆಯೊ ತಿಳಿಯದು.

ಈ ವಿಚಾರಗಳನ್ನು, ಮುಕ್ಯವಾಗಿ ಬುಡಕಟ್ಟುಗಳಿಗೆ ಸೋಂಕು ತಗುಲಿದರೆ ಆಗಬಹುದಾದ ಸಾಮಾಜಿಕ ಅಪಾಯ, ಒಟ್ಟು ಮನುಶ್ಯ ಕುಲಕ್ಕೆ ಒದಗಬಹುದಾದ ಗ್ನಾನದ ಹಾನಿಯ ಅಪಾಯ, ಪರಿಸರದ ಮೂಲತತ್ವವಾದ ಬಹುತ್ವವನ್ನು ಕಳೆದುಕೊಳ್ಳುವ ಅಪಾಯ, ಬುಡಕಟ್ಟುಗಳ ಹಸಿವಿನ ಅಪಾಯ ಈ ಎಲ್ಲವುಗಳನ್ನು ಸರಕಾರ, ಸಮಾಜ ಪರಿಗಣಿಸಿಬೇಕು. ಬುಡಕಟ್ಟುಗಳಿಗೆ ಮುಕ್ಯವಾಗಿ ಅಂಡಮಾನ್, ನೀಲಗಿರಿ, ಹಿಮಾಲಯ ಪರ್ವತ ಶ್ರೇಣಿ, ಓರಿಸ್ಸಾ, ಪಶ್ಚಿಮಗಟ್ಟ ಮೊದಲಾದ ಪ್ರದೇಶಗಳಲ್ಲಿ ಸಣ್ಣ ಸಂಕೆಯಲ್ಲಿರುವ ಬುಡಕಟ್ಟುಗಳಿಗೆ ಕರೊನಾ ಬಗೆಗೆ ಅರಿವು ಮೂಡಿಸುವ ಜರೂರಿದೆ. ಅವರನ್ನು ಎಚ್ಚರಿಕೆಯಿಂದ ಇರುವಂತೆ ಮಾಡಬೇಕು. ಅವರಿಗೆ ಒಮ್ಮೆ ರೋಗ ತಗುಲಿದರೆ ಆಗಬಹುದಾದ ಅಪಾಯ ಎದುರಿಸುವ ಸಿದ್ದತೆ ನಮ್ಮಲ್ಲಿ ಇಲ್ಲದಿರುವುದರಿಂದ ಈ ಎಚ್ಚರಿಕೆ ಅವಶ್ಯ. ಸಂಬಂದಪಟ್ಟವರು, ಸರಕಾರ ಈ ನಿಟ್ಟಿನಲ್ಲಿ ತುರ್ತಾಗಿ ಕೆಲಸಕ್ಕೆ ಮೊದಲಾಗಬೇಕಿದೆ.


*     ಕನ್ನಡದಲ್ಲಿ ಮಹಾಪ್ರಾಣ ದ್ವನಿಗಳು ಇಲ್ಲ, ಋ, ಷ್ ಮೊದಲಾದವು ಕೂಡ. ದ್ವನಿ ಇಲ್ಲದೆ ಲಿಪಿ ಇರುವುದು ಕನ್ನಡ ಕಲಿಕೆಯ ಸೋಲಿಗೆ ಮಹತ್ವದ ಕಾರಣಗಳಲ್ಲೊಂದು. ಹಾಗಾಗಿ ಕನ್ನಡ ಬರವಣಿಗೆಯಲ್ಲಿ ಲಿಪಿ ಬದಲಿಸಬೇಕಾದ ಅವಶ್ಯಕತೆ ಇದೆ ಎಂದು ಕೆಲವು ಭಾಷಾ ತಜ್ಞರು ಅಭಿಪ್ರಾಯಪಡುತ್ತಾರೆ. ಈ ಕಾರಣದಿಂದ ಕನ್ನಡದ ಸಹಜ ಬರವಣಿಗೆಯನ್ನು ಪ್ರಯೋಗಾತ್ಮಕವಾಗಿ ಇಲ್ಲಿ ಬಳಸಲಾಗಿದೆ.

ಪ್ರತಿಕ್ರಿಯಿಸಿ