ಕೊರೋನ ನಂತರದ ಜಗತ್ತು : ಎಚ್ಚರದ ಹೆಜ್ಜೆಗಳನ್ನು ಇಡೋಣ

ಈ ಅನಿಶ್ಚತತೆಯ ಕವಲುದಾರಿಯಲ್ಲಿಇಡುವ ತಪ್ಪು ಹೆಜ್ಜೆಗಳು ಮುಂದಿನ ದಶಕಗಳ ಕಾಲ ದೇಶ ಸಾಗಬೇಕಿರುವ ಪಥವನ್ನು ಬದಲಿಸಬಹುದು. ಈ ದೇಶದ ಬಡವರು, ಕೂಲಿಗಳು ಮತ್ತು ವಲಸೆ ಕಾರ್ಮಿಕರು ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನದ ಭಾರವನ್ನು ಹೊರಲು ನಾವು ಬಿಡಬಾರದು ಹಾಗೂ ಸಾಂಕ್ರಾಮಿಕ ರೋಗ ಹತೋಟಿಗೆ ಬರುವಷ್ಟರಲ್ಲಿ ನಾವು ನಮ್ಮ ಆರ್ಥಿಕತೆಯ ಅಡಿಪಾಯವನ್ನು ಶಿಥಿಲಗೊಳಿಸಿ ನಮ್ಮ ನೆಲ ಪಾಳುಭೂಮಿಯಾಗದಂತೆಯೂ ನಾವು ಎಚ್ಚರವಹಿಸಬೇಕು.

ಭಾರತದ ನಿರುದ್ಯೋಗ ದರವು ಈಗ ಶೇಕಡಾ 24 ರಷ್ಟಿದೆ, ಇದು ಸಾರ್ವಕಾಲಿಕ ಗರಿಷ್ಠವಾಗಿದೆ ಎಂದು ಅಧ್ಯಯನಗಳು ತೋರಿಸುತ್ತಿವೆ. ಮಾರ್ಚ್ ತಿಂಗಳಲ್ಲಿ ಸುಮಾರು ಒಂದು ಬಿಲಿಯನ್ ಡಾಲರ್ ಗಳಷ್ಟು ಬಂಡವಾಳವು ಭಾರತದಿಂದ ಬೇರೆ ದೇಶಗಳಿಗೆ ಹರಿದು ಹೋಯಿತು. ಈ ದಾಖಲೆ ಮೊತ್ತವು ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು.

ಕೋವಿಡ್-೧೯ರ ಸುರಂಗದಿಂದ ಹೊರಗೆ ಬಂದ ಮೇಲೆ ಜಗತ್ತು ಹೇಗೆ ಕಾಣಬಹುದು ಅಂತ ಊಹಿಸುವುದಕ್ಕೆ ಇದು ತುಂಬಾ ಬೇಗ ಆಯಿತು. ಸುರಂಗದ ತುದಿಯಲ್ಲಿ ಇನ್ನೂ ಬೆಳಕು ಕಾಣುತ್ತಿಲ್ಲ. ಹಿಂದೆ ಇನ್‌ಫ್ಲುಯೆಂಜಾ ರೋಗದ ವಿಷಯದಲ್ಲಿ ಆದ ಹಾಗೆ ಇದಕ್ಕೂ ಒಂದು ಒಳ್ಳೆಯ ಲಸಿಕೆಯನ್ನು ಕಂಡು ಹಿಡಿದು, ಹೆದರಿಕೆಯಿಲ್ಲದೆ ಈ ಕೋವಿಡ್ ಜೊತೆಯಲ್ಲೇ ಬದುಕುವುದಕ್ಕೆ ಸಾಧ್ಯವಾಗಬಹುದಾ? ಸಧ್ಯಕ್ಕೆ ನಮಗೆ ಗೊತ್ತಿಲ್ಲ. ಅಥವಾ ಇನ್ನೂ ಕೆಲವು ವರ್ಷ ಲಸಿಕೆ ಕಂಡುಹಿಡಿಯುವುದಕ್ಕೆ ಸಾಧ್ಯವಾಗದೆ ಕೋವಿಡ್-೧೯ರ ನೆರಳಿನಲ್ಲೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಾ, ಪದೇ ಪದೇ ಪರೀಕ್ಷೆ ಮಾಡಿಸಿಕೊಳ್ಳುತ್ತಾ ನಮಗೆ ವೈರಾಣು ಸೋಂಕು ತಗುಲಿಲ್ಲ್ಲ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳುತ್ತಾ ಪ್ರಾಣ ಕಾಪಾಡಿಕೊಳ್ಳುತ್ತಾ, ಜೀವನ ಸಾಗಿಸುತ್ತಾ ಇರಬೇಕಾಗುತ್ತಾ? ಅದೂ ಗೊತ್ತಿಲ್ಲ.

ಕೋವಿಡ್‌ನ ದಾರಿ ನಮಗೆ ಇನ್ನೂ ನಿಗೂಢವಾಗಿಯೇ ಇದೆ. ಹಾಗೆಯೇ ಅದರ ಪರಿಣಾಮವನ್ನು ಎದುರಿಸುವುದಕ್ಕೆ ತೆಗದುಕೊಳ್ಳಬೇಕಾದ ಆರ್ಥಿಕ ಕ್ರಮಗಳ ಬಗ್ಗೆಯೂ ನಮಗೆ ಸ್ಪಷ್ಟವಾಗಿ ಗೊತ್ತಿಲ್ಲ. ನಮಗೆ ಜಾಗತಿಕ ಯುದ್ಧ ಹಾಗೂ ಸಾಂಕ್ರಮಿಕ ಪಿಡುಗುಗಳ ಚರಿತ್ರೆಯಿಂದ ಅಂತಹ ದುರಂತಗಳು ಮಾಡಬಹುದಾದ ಪರಿಣಾಮಗಳ ಬಗ್ಗೆ ಒಂದಿಷ್ಟು ಗೊತ್ತಿದೆ. ಅಂತಹ ದುರಂತಗಳು ದೇಶಗಳ ಹಾದಿಯನ್ನು ತಿರುಗುಮುರುಗು ಮಾಡಿಬಿಡಬಹುದು ಅನ್ನುವುದನ್ನು ಚರಿತ್ರೆಯಲ್ಲಿ ನೋಡಿದ್ದೇವೆ. ಗೆದ್ದಿರುವವರು ಸೋಲಬಹುದು, ಸೋತಿರುವವರು ಗೆಲ್ಲಬಹುದು. ಎಲ್ಲವೂ ಅನಿಶ್ಚಿತ. ಹಾಗೆಂದು ಸುಮ್ಮನಿರಲಾಗುವುದಿಲ್ಲ. ಭವಿಷ್ಯದ ಸ್ಥಿತಿಗತಿಗಳ ಬಗ್ಗೆ ಯೋಚಿಸಬೇಕು. ಅದು ತುಂಬಾ ಮುಖ್ಯ. ಜಾಗತಿಕ ಆರ್ಥಿಕತೆ, ಮತ್ತು ಎಲ್ಲಾ ದೇಶಗಳ ಆರ್ಥಿಕತೆಗಳೂ ಸುಸ್ಥಿತಿಯಲ್ಲಿರಬೇಕು. ಅದಕ್ಕೆ ಸಾಧ್ಯವಾದ ಎಲ್ಲವನ್ನೂ ಮಾಡಬೇಕು. ಜನ ಅನಾವಶ್ಯಕವಾಗಿ ಸಂಕಟಪಡಬಾರದು. ರಾಷ್ಟ್ರಗಳ ಆರ್ಥಿಕತೆ ಯಾವ ಹಾದಿಯಲ್ಲಿ ಸಾಗುತ್ತಿದೆ ಅನ್ನುವ ಪ್ರಾರಂಭದ ಸೂಚನೆಗಳು ಕಾಣತೊಡಗಿವೆ. ಅದನ್ನು ಆಧರಿಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಮ್ಮ ನಡುವಿನ ವ್ಯತ್ಯಾಸಗಳನ್ನು ಬದಿಗಿಡಬೇಕು. ಮನುಕುಲದ ಮುಂದಿರುವ ಈ ಸವಾಲನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು. ಹಾಗೆ ಒಟ್ಟಾಗಿ ಕೆಲಸಮಾಡುವುದಕ್ಕೆ ಇದು ಸಕಾಲ.
ಈಗ ವೈರಾಣವನ್ನೂ ತಡೆಯಬೇಕು. ಆರ್ಥಿಕ ಚಟುವಟಿಕೆಯನ್ನೂ ಮುಂದುವರೆಸಿಕೊಂಡು ಹೋಗಬೇಕು. ಇದು ನಮ್ಮ ಮುಂದಿರುವ ದೊಡ್ಡ ಸವಾಲು. ಇವೆರಡರ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಜವಾದ, ಬಹುಮುಖ್ಯವಾದ ಸಮಸ್ಯೆ. ವೈರಾಣುವನ್ನು ನಿಯಂತ್ರಿಸುವ ಸಂದರ್ಭದಲ್ಲಿ ಬಡವರು, ಕಾರ್ಮಿಕರು ಮತ್ತು ವಲಸೆಗಾರರು ಸಂಕಟಕ್ಕೆ ಸಿಲುಕಬಾರದು. ಹಾಗೆಯೇ ಆರ್ಥಿಕತೆಯ ಬುನಾದಿಯೇ ನಾಶವಾಗುವುದಕ್ಕೆ ಬಿಡಬಾರದು. ಮಹಾಮಾರಿಯಿಂದ ಹೊರಬಂದ ಮೇಲೆ ಆರ್ಥಿಕ ಬರಡುಭೂಮಿಯಲ್ಲಿ ಇರುವುದು ನಮಗೆ ಬೇಕಿಲ್ಲ. ಜೀವ ಹಾಗೂ ಜೀವನದ ನಡುವಿನ ಆಯ್ಕೆ, ಜೀವ ಜೀವದ ನಡುವಿನ ಆಯ್ಕೆಯೂ ಹೌದು.

ಕೊರೋನಾ ವೈರಾಣುವನ್ನು ನಿಯಂತ್ರಿಸುವ ಭಾರತದ ಪ್ರಯತ್ನವನ್ನೂ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕೇವಲ ಕೇರಳದ ಪ್ರಯತವನ್ನು ಮಾತ್ರವಲ್ಲ. ಒಟ್ಟಾರೆ ದೇಶದ ಪ್ರಯತ್ನವನ್ನೂ ಮೆಚ್ಚಿಕೊಂಡಿದ್ದಾರೆ. ಕೇರಳದ ಪ್ರಯತ್ನವನ್ನಂತೂ ಎಲ್ಲಾ ದೇಶಗಳೂ ಕೊಂಡಾಡಿವೆ. ಕೋವಿಡ್-೧೯ ಪ್ರಕರಣಗಳು ಭಾರತದಲ್ಲಿ ಕಡಿಮೆ ಇದೆ. ಪ್ರತಿ ಒಂದುಕೋಟಿ ಜನರಲ್ಲಿ ಸಧ್ಯಕ್ಕೆ ೫ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೇವಲ ಬೆಲ್ಜಿಯಂಗೆ ಹೋಲಿಸಿ ಮಾತನಾಡುತ್ತಿಲ್ಲ. ಬೆಲ್ಜಿಯಂನಲ್ಲಿ ಸಾವಿನ ಸಂಖ್ಯೆ ಜಗತ್ತಿನಲ್ಲೇ ಅತಿ ಹೆಚ್ಚು ಇದೆ. ಅಲ್ಲಿ ಪ್ರತಿ ಕೋಟಿಗೆ ೫೧೮೦ ಜನ ಸಾಯುತ್ತಿದ್ದಾರೆ. ಬೇರೆ ಹಲವು ದೇಶಗಳಿಗಿಂತಲೂ ನಮ್ಮಲ್ಲಿ ಕಡಿಮೆ ಇದೆ. ಅಮೇರಿಕೆಯಲ್ಲಿ ಹಾಗೆ ಸಾಯುತ್ತಿರುವವರ ಸಂಖ್ಯೆ ೧೩೭೦. ಸ್ಪೈನಿನಲ್ಲಿ ೪೫೫೦, ಇಟಲಿಯಲ್ಲಿ ೪೦೮೦, ಇಂಗ್ಲೆಂಡಿನಲ್ಲಿ ೨೫೫೦ ಜನ ಸಾಯುತ್ತಿದ್ದಾರೆ.

ನಿಷ್ಪಕ್ಷಪಾತವಾಗಿ ಹೇಳುವುದಾದರೆ ಹೀಗೆ ಸಾಯುತ್ತಿರುವವರ ಸಂಖ್ಯೆ ಕಡಿಮೆ ಇರುವುದು ಭಾರತದಲ್ಲಿ ಮಾತ್ರವಲ್ಲ. ಆಫ್ರಿಕಾ ಹಾಗೂ ದಕ್ಷಿಣ ಏಷ್ಯಾದ ಹೆಚ್ಚಿನ ದೇಶಗಳಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಬಾಂಗ್ಲಾದೇಶದಲ್ಲಿ ೭, ಶ್ರೀಲಂಕಾದಲ್ಲಿ ೩, ಪಾಕಿಸ್ತಾನದಲ್ಲಿ ೯, ತಾಂಜೀನಿಯಾದಲ್ಲಿ ೨, ನೈಜೀರಿಯಾದಲ್ಲಿ ೧, ಇಥಿಯೋಪಿಯಾದಲ್ಲಿ ೦.೩. ಯೂರೋಪ್, ಉತ್ತರ ಅಮೇರಿಕಾ ಮತ್ತು ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ತುಂಬಾ ವ್ಯತ್ಯಾಸವಿದೆ. ಆ ದೇಶಗಳು ಹೆಚ್ಚು ಪ್ರತ್ಯೇಕವಾಗಿವೆ. ಹಾಗಾಗಿ ಇಲ್ಲಿ ಸಾವಿನ ಪ್ರಮಾಣ ಕಡಿಮೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಬಾಂಗ್ಲಾದೇಶೀಯರು ಜಗತ್ತಿನ ಎಲ್ಲಾ ಕಡೆಯೂ ಅತಿ ಹೆಚ್ಚು ಸಂಖ್ಯೆಯಲ್ಲಿ ಹಂಚಿಹೋಗಿದ್ದಾರೆ. ಇಥಿಯೋಪಿಯಾಕ್ಕೆ ಚೀನಾ ಜೊತೆ ತುಂಬಾ ಒಡನಾಟವಿದೆ. ಆದರೆ ಅವೆರಡು ದೇಶಗಳಲ್ಲಿ ಸಾವಿನ ಪ್ರಮಾಣ ತುಂಬಾ ಕಡಿಮೆ. ಹೀಗೇಕೆ?

ಸರಳವಾಗಿ ಹೇಳಬೇಕೆಂದರೆ ನಮಗೆ ಗೊತ್ತಿಲ್ಲ. ಅದು ಏನೇ ಆಗಲಿ, ವೈರಾಣುವನ್ನು ನಿಯಂತ್ರಣದಲ್ಲಿಡುವುದಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಸಂದರ್ಭದಲ್ಲಿ ಒಂದಂಶವನ್ನು ಮನವರಿಕೆ ಮಾಡಿಕೊಳ್ಳಬೇಕು. ರಿಸ್ಕೇ ಇಲ್ಲದ ಸ್ಥಿತಿ ಇರುವುದಕ್ಕೆ ಸಾಧ್ಯವಿಲ್ಲ. ಬದುಕಿನಲ್ಲಿ ರಿಸ್ಕೇ ಇಲ್ಲದ ಚಟುವಟಿಕೆಯೇ ಇಲ್ಲ. ವೈರಾಣುವನ್ನು ಮಣಿಸುವುದಕ್ಕೆ ಮರುಉತ್ಪಾದನೆಯ ಸಂಖ್ಯೆಯನ್ನು ಅಥವಾ ಆರ್-೦ ಅನ್ನು ಒಂದಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಆರ್-೦ ಅಂದರೆ ಪ್ರತಿ ಸೋಂಕಿತ ವ್ಯಕ್ತಿಯಿಂದ ಸೋಂಕು ಹರಡಿದ ಜನರ ಸಂಖ್ಯೆಯ ಸರಾಸರಿ. ಕೇರಳದಲ್ಲಿ ಆಗಿರುವಂತೆ ಯಾವುದೇ ಪ್ರದೇಶದಲ್ಲಿ ಆರ್-೦ ಸಂಖ್ಯೆ ಒಂದಕ್ಕಿಂತ ಕಡಿಮೆಯಾದರೆ, ಆ ಪ್ರದೇಶದಲ್ಲಿ ಸೋಂಕಿನ ಪ್ರಕರಣಗಳು ನಿಲ್ಲುತ್ತಿದೆ ಅಂತ ಅರ್ಥ.

ಈಗ ಲಾಕ್ ಡೌನ್‌ನಿಂದ ಹೇಗೆ ಹೊರಗೆ ಬರುವುದು ಎನ್ನುವುದು ಒಂದು ದೊಡ್ಡ ಆರ್ಥಿಕ ನೀತಿಯ ಸವಾಲು. ಇದನ್ನು ತುಂಬಾ ಜಾಗರೂಕತೆಯಿಂದ ನಿರ್ವಹಿಸಬೇಕು. ಆದರೆ ತ್ವರಿತವಾಗಿ ಮಾಡಬೇಕು. ಆಕ್ಸಫರ್ಡ್ ವಿಶ್ವವಿದ್ಯಾನಿಲಯದ ಕೆಲ ಸಂಶೋಧಕರು ಜಗತ್ತಿನ ೭೩ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೆ ತಂದಿರುವುದರ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಅವರ ಪ್ರಕಾರ ಲಾಕ್ ಡೌನ್‌ನನ್ನು ಹೆಚ್ಚು ಕಟ್ಟುನಿಟ್ಟಾಗಿ ಜಾರಿಗೆ ತಂದ ದೇಶಗಳಲ್ಲಿ ಭಾರತ ಪ್ರಥಮಸ್ಥಾನದಲ್ಲಿದೆ. ಕೆಲ ಕಾಲ ಇದು ಒಳ್ಳೆಯದು. ಅಷ್ಟೇ ಅಲ್ಲ ಭಾರತದಂತಹ ಹೆಚ್ಚು ಜನಸಂಖ್ಯೆ ಇರುವ ದೇಶಗಳಲ್ಲಿ ಇದು ನಿಜವಾಗಿ ಮೆಚ್ಚುವಂತಹದ್ದು. ಆದರೆ ಹೀಗೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದರಲ್ಲಿ ಪ್ರಥಮ ಸ್ಥಾನದಲ್ಲಿ ಬಹುಕಾಲ ಇರುವುದು ಯಾವುದೇ ದೇಶಕ್ಕೂ ಒಳ್ಳೆಯದಲ್ಲ. ಅದು ಬಡವರ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಮತ್ತು ದೇಶದ ದೀರ್ಘಕಾಲಿನ ಆರ್ಥಿಕತೆಗೆ ತೊಂದರೆ ಮಾಡುತ್ತದೆ. ಭಾರತದ ನಿರುದ್ಯೋಗ ದರ ಈಗ ಶೇಕಡ ೨೪ರಷ್ಟಿದೆ ಎಂದು ಹಲವು ಅಧ್ಯಯನಗಳು ತಿಳಿಸುತ್ತವೆ. ಈವರೆಗೂ ಎಂದೂ ಅದು ಇಷ್ಟಾಗಿರಲಿಲ್ಲ. ಮಾರ್ಚ್‌ನಲ್ಲಿ ಭಾರತದಿಂದ ಅಪಾರ ಪ್ರಮಾಣದ ಬಂಡವಾಳವು ಹೊರ ಹರಿದಿದೆ. ಒಂದೇ ತಿಂಗಳು ಸುಮಾರು ೧೫ ಬಿಲಿಯನ್ ಡಾಲರ್ ದೇಶದಿಂದ ಹೊರಗೆ ಹೋಯಿತು. ಹಿಂದೆಂದೂ ಈ ಪ್ರಮಾಣದ ಹೊರಹರಿವು ಆಗಿರಲಿಲ್ಲ. ಇದು ಇಡೀ ಅಭಿವೃದ್ಧಶೀಲ ರಾಷ್ಟ್ರಗಳಲ್ಲೇ ಅತಿ ಹೆಚ್ಚು. ಆರ್ಥಿಕತೆ ಸ್ಥಗಿತಗೊಂಡಿರುವುದರಿಂದ ಜಾಗತಿಕ ಉದ್ದಿಮೆದಾರರು ಹೀಗೆ ಪ್ರತಿಕ್ರಿಯಿಸುತ್ತಿದ್ದಾರೆ. ಇದರಿಂದ ಭಾರತದ ರೂಪಾಯಿ ದುರ್ಬಲವಾಗಿದೆ. ಈಗ ಅತ್ಯಂತ ಕೆಳಮಟ್ಟ ತಲುಪಿದೆ. ಇದೂ ಕೂಡ ಹಿಂದೆಂದೂ ಈ ರೀತಿ ಆಗಿರಲಿಲ್ಲ. ನಿಜ, ಇಂದು ಜಾಗತಿಕ ಪರಿಸ್ಥಿತಿ ಅತ್ಯಂತ ಸಂಕಷ್ಟದಲ್ಲಿದೆ. ಇಂತಹ ಕೆಲವು ಸಮಸ್ಯೆಗಳು ಅನಿವಾರ್ಯ. ಕೇವಲ ಕೆಲವು ದಿನಗಳು ಅಂತಾದರೆ ನಿರ್ವಹಿಸಿಬಿಡಬಹುದು. ಆದರೆ ಈ ಸಮಸ್ಯೆಗಳು ಬಹುಕಾಲ ಕಾಡುವುದಕ್ಕೆ ಪ್ರಾರಂಭಿಸಿಬಿಟ್ಟರೆ ಕಷ್ಟ. ಜಾಗತಿಕ ವ್ಯಾಪಾರದಲಿ, ರಫ್ತಿನಲ್ಲಿ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಬೇರೆ ದೇಶಗಳು ಕಸಿದುಕೊಳ್ಳಬಹುದು. ಕಾರ್ಮಿಕರ ಸಂಕಷ್ಟ ತೀವ್ರವಾಗಿಬಿಡುತ್ತದೆ.

ಮೇ ೩ರಂದು ಲಾಕ್‌ಡೌನ್ ಹಂತ ಮುಗಿದ ಮೇಲೆ, ನಾವು ವ್ಯವಹಾರವನ್ನು ಪ್ರಾರಂಭಿಸಬೇಕು. ಖಾಸಗೀ ಕ್ಷೇತ್ರಕ್ಕೆ ಅವಕಾಶ ಮಾಡಿಕೊಡಬೇಕು. ಅದರಲ್ಲೂ ವಿಶೇಷವಾಗಿ ಅಸಂಘಟಿತ ಉದ್ದಿಮೆಗಳನ್ನು ಮತ್ತು ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸುವುದಕ್ಕೆ ಅವಕಾಶ ಮಾಡಿಕೊಡಬೇಕು. ಅಲ್ಲಿ ಜನ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಕೈತೊಳೆದುಕೊಳ್ಳುವುದು ಇತ್ಯಾದಿ ಕ್ರಮಗಳು ಜಾರಿಯಲ್ಲಿರಬೇಕು. ಬಡ ಕಾರ್ಮಿಕರು ಕೆಲಸಕ್ಕೆ ಬರುವುದಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ನಮ್ಮ ತೋಟಗಳು ಮತ್ತು ಕಾರ್ಖಾನೆಗಳು ಕೆಲಸ ಮಾಡಬೇಕು. ನಿಯಮಗಳು ಜನ ಪಾಲ್ಗೊಳ್ಳುವುದಕ್ಕೆ ಪ್ರೋತ್ಸಾಹಿಸಬೇಕೇ ಹೊರತು ಅಧಿಕಾಶಾಹಿ ಅನುಮತಿ ಪಡೆಯುವಂತೆ ಇರಬಾರದು. ಭಾರತಕ್ಕೆ ಪರ್ಮಿಟ್ ರಾಜನ ದೀರ್ಘ ಇತಿಹಾಸವೇ ಇದೆ. ಎಲ್ಲ ವ್ಯವಹಾರಗಳನ್ನು ಅಧಿಕಾರಶಾಹಿ ನಿಯಂತ್ತಿಸುವ ಒಂದು ಪರಂಪರೆ ಇದೆ. ಇಂತಹ ಪ್ರವೃತ್ತಿ ದೊಡ್ಡ ಉದ್ದಿಮೆಗಳನ್ನು ಉಸಿರುಕಟ್ಟಿಸಿ ದೇಶದ ಆರ್ಥಿಕ ಬೆಳವಣಿಗೆ ಆಗದಂತೆ ಬಹುಕಾಲ ನೋಡಿಕೊಂಡಿದೆ. ಈ ಹಳೆಯ ಅಭ್ಯಾಸಕ್ಕೆ ಮರಳದಂತೆ ನೋಡಿಕೊಳ್ಳಬೇಕು. ಈ ಹಳೆಯ ಅಭ್ಯಾಸಕ್ಕೆ ಮರಳುವುದೆಂದರೆ ಭಾರತದ ಬೆಳವಣಿಗೆಗೆ ಇತಿಶ್ರೀ ಹಾಡಿದಂತೆಯೇ.

ಇಂದು ಭಾರತ, ಅಷ್ಟೇ ಏಕೆ ಎಲ್ಲಾ ಉದಯೋನ್ಮುಖ ರಾಷ್ಟ್ರಗಳು ಒಂದು ಕವಲುದಾರಿಯಲ್ಲಿವೆ. ಇಂದು ಜಗತ್ತು ಅನಿರೀಕ್ಷಿತವಾದ ತಿರುವುದಾರಿಯಲ್ಲಿದೆ. ಒಂದು ತಪ್ಪು ಹೆಜ್ಜೆಯೂ ತೀವ್ರವಾದ ದುಷ್ಪರಿಣಾಮ ಬೀರುತ್ತದೆ. ಅದು ತಪ್ಪಾಯಿತು, ಸರಿಪಡಿಸಿಕೊಂಡೆವು ಎನ್ನುವ ಒಂದು ಸಾಧಾರಣ ಘಟನೆಯಾಗುವುದಿಲ್ಲ. ತಪ್ಪುಹೆಜ್ಜೆಗಳು ದೇಶದ ಮುಂದಿನ ದಶಕಗಳ ಹಾದಿಯನ್ನೇ ಬದಲಿಸಿಬಿಡುತ್ತದೆ.

ಕೃಪೆ: ಇಂಡಿಯನ್ ಎಕ್ಸಪ್ರೆಸ್

ಅನುವಾದ: ಟಿ. ಎಸ್. ವೇಣುಗೋಪಾಲ್

ಪ್ರತಿಕ್ರಿಯಿಸಿ