ಸಾಮಾಜಿಕ ಒತ್ತಡ ನಮ್ಮ ಅಭಿಪ್ರಾಯಗಳನ್ನು ನಿರ್ಧರಿಸಬಲ್ಲದೇ ? : ಸೋಲೋಮನ್ ಆಶ್ಚ್ ಪ್ರಯೋಗ

೧೯೫೮ರಲ್ಲಿ ಸೋಲೋಮನ್ ಆಶ್ಚ್ ನಮ್ಮ ಸಾಮಾಜಿಕ ಅನುಸರಿಸುವಿಕೆಯನ್ನು ಅಧ್ಯಯಿಸಲು ಪ್ರಯೋಗಗಳನ್ನು ರಚಿಸಿದರು. ವಿವಿಧ ಪ್ರಯೋಗಗಳಲ್ಲಿ ಅಧ್ಯಯನ ಘಟಕಗಳು ಪ್ರದರ್ಶಿಸಿದ ಅನುಸರಿಸುವಿಕೆ ಆಶ್ಚರ್ಯಕಾರಿ ಹಾಗೂ ಚಿಂತಾಜನಕ ವಿಷಯವಾಗಿತ್ತು. ಸಾಮಾಜಿಕ ಒತ್ತಡ ನಮ್ಮನ್ನು ಏನನ್ನಾದರೂ ನಂಬುವಂತೆ ಮಾಡಬಲ್ಲದೇ ಎನ್ನುವ ಪ್ರಶ್ನೆಯನ್ನು ಈ ಅಧ್ಯಯನ ಹುಟ್ಟುಹಾಕಿತು.

ನಿಮ್ಮನ್ನು ನೀವು ಈ ಕೆಳಗಿನ ಸನ್ನಿವೇಶದಲ್ಲಿ ಊಹಿಸಿಕೊಳ್ಳಿ: ನೀವೊಂದು ಮನಶ್ಶಾಸ್ತ್ರ ಪ್ರಯೋಗಕ್ಕೆ ಪ್ರವೇಶ ಪಡೆಯುತ್ತೀರಿ. ಒಂದು ನಿರ್ದಿಷ್ಟ ದಿನದಂದು ನೀವು ಮತ್ತು ನಿಮ್ಮಂತೆಯೇ ಅಧ್ಯಯನ ಘಟಕಗಳು ಎಂದು ನೀವಂದುಕೊಂಡ ಏಳು ವ್ಯಕ್ತಿಗಳು ಬರುತ್ತೀರಿ ಮತ್ತು ಒಂದು ಸಣ್ಣ ಕೊಠಡಿಯಲ್ಲಿ ಕುಳಿತಿರುತ್ತೀರಿ. ನಿಮಗೆ ಆಗಿನ್ನೂ ತಿಳಿದಿಲ್ಲವಾದರೂ ಈ ವ್ಯಕ್ತಿಗಳು ವಾಸ್ತವದಲ್ಲಿ ಪ್ರಯೋಗಕಾರರ ಸಹವರ್ತಿಗಳು ಹಾಗೂ ಅವರ ನಡವಳಿಕೆಯನ್ನು ಜಾಗರೂಕತೆಯಿಂದ ಸ್ಕ್ರಿಪ್ಟ್ ಮಾಡಲಾಗಿದೆ. ನಿಜವಾದ ಅಧ್ಯಯನ ಘಟಕ ನೀವೊಬ್ಬರೇ.

ಪ್ರಯೋಗಕಾರರು ಬಂದು ನೀವು ಭಾಗವಹಿಸಲಿರುವ ಅಧ್ಯಯನವು ಜನರ ದೃಶ್ಯ ಗ್ರಹಿಕೆಯ ಕುರಿತಾದ ಅಧ್ಯಯನವೆಂದು ಹೇಳುತ್ತಾರೆ. ಅವರು ನಿಮ್ಮ ಮುಂದೆ ಎರಡು ಕಾರ್ಡ್‍ಗಳನ್ನು ಇಡುತ್ತಾರೆ. ಎಡಗಡೆ ಇರುವ ಕಾರ್ಡ್ ಒಂದು ಲಂಬವಾದ ರೇಖೆಯನ್ನು ಹೊಂದಿದೆ. ಬಲಗಡೆ ಇರುವ ಕಾರ್ಡ್‍ನಲ್ಲಿ ವಿವಿಧ ಉದ್ದ ಅಳತೆಯನ್ನು ಹೊಂದಿರುವ ಮೂರು ರೇಖೆಗಳನ್ನು ತೋರಿಸಲಾಗಿದೆ.

pastedGraphic.png 

ಪ್ರಯೋಗಕಾರರು ಒಬ್ಬೊಬ್ಬರಾಗಿ ಎಲ್ಲರಿಗೂ ಬಲದ ಕಾರ್ಡ್‍ನ ಯಾವ ರೇಖೆಯು ಎಡದ ಕಾರ್ಡ್‍ನ ರೇಖೆಯಷ್ಟೇ ಉದ್ದವಿದೆ ಎಂದು ಕೇಳುತ್ತಾರೆ. ಕೆಲವು ಪುನರಾವರ್ತನೆಗಳಲ್ಲಿ ಉಳಿದೆಲ್ಲ “ಅಧ್ಯಯನ ಘಟಕಗಳು” ಒಂದೇ ತಪ್ಪು ರೇಖೆಯನ್ನು ಹೆಸರಿಸುತ್ತಾರೆ. ನಿಮಗೆ ಅವರು ತಪ್ಪೆಂದು ಸ್ಪಷ್ಟವಾಗಿ ತಿಳಿದಿದೆ, ಆದರೆ ಅವರೆಲ್ಲರೂ ಒಂದೇ ಉತ್ತರ ನೀಡಿದ್ದಾರೆ.

ನೀವೇನು ಮಾಡುತ್ತೀರಿ? ಬಹುಮತದ ಜೊತೆ ನೀವೂ ಹೋಗುತ್ತೀರೋ ಅಥವಾ “ನಿಮ್ಮ ಕಾಲನ್ನೂರಿ” ನಿಮ್ಮ ಕಣ್ಣುಗಳನ್ನೇ ನಂಬುತ್ತೀರೋ?

೧೯೫೧ರಲ್ಲಿ ಸಾಮಾಜಿಕ ಮನಶ್ಶಾಸ್ತ್ರಜ್ಞ ಸೋಲೋಮನ್ ಆಶ್ಚ್ ಒಬ್ಬರ ಗ್ರಹಿಕೆಯನ್ನು ಇನ್ನಿತರರ ಒತ್ತಡವು ಹೇಗೆ ಬದಲಾಯಿಸಬಲ್ಲದು ಎಂದರಿಯಲು ಈ ಪ್ರಯೋಗವನ್ನು ರೂಪಿಸಿದರು. ಈ ಪ್ರಯೋಗದಲ್ಲಿ ಭಾಗಿಯಾದವರಲ್ಲಿ ಮೂರನೇ ಒಂದರಷ್ಟು ವ್ಯಕ್ತಿಗಳು ಬಹುಮತದ ಸ್ಪಷ್ಟ ತಪ್ಪಭಿಪ್ರಾಯದ ಜೊತೆಗೇ ಹೋದರು.

ನೀವು ಚಿತ್ರದಲ್ಲಿ ನೋಡಬಹುದಾದ ರೇಖೆಗಳನ್ನು ಆಶ್ಚ್ ಕಾಲೇಜಿನ ವಿದ್ಯಾರ್ಥಿಗಳಿಗೆ ಎಂಟರಿಂದ ಹತ್ತು ವಿದ್ಯಾರ್ಥಿಗಳ ಗುಂಪುಗಳಲ್ಲಿ ತೋರಿಸಿದರು. ದೃಶ್ಯ ಗ್ರಹಿಕೆಯನ್ನು ಅಧ್ಯಯನ ಮಾಡುತ್ತಿರುವುದಾಗಿ ಅವರಿಗೆ ಹೇಳಲಾಯಿತು ಹಾಗೂ ಪ್ರಯೋಗದಲ್ಲಿ ಅವರ ಕೆಲಸ ಬಲಗಡೆಯಲ್ಲಿರುವ ಯಾವ ರೇಖೆ ಎಡದ ರೇಖೆಯಷ್ಟೇ ಉದ್ದ ಉಳ್ಳದ್ದು ಎಂದು ಗುರುತಿಸುವುದಾಗಿತ್ತು. ನೀವೇ ನೋಡಬಹುದಾದಂತೆ, ಇದೊಂದು ಸರಳ ಕೆಲಸ ಹಾಗೂ ಸರಿಯಾದ ಉತ್ತರ ಸ್ಪಷ್ಟವಾಗಿತ್ತು. ಆಶ್ಚ್ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ದೊಡ್ಡದಾಗಿ ಹೇಳುವಂತೆ ಕೇಳಿದರು. ನಂತರ ಇದೇ ಪ್ರಕ್ರಿಯೆಯನ್ನು ೧೮ ವಿವಿಧ ರೇಖೆಗಳ ಚಿತ್ರಗಳೊಂದಿಗೆ ನಡೆಸಿದರು. ಪ್ರತಿ ಗುಂಪಿನಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ನಿಜವಾದ ಅಧ್ಯಯನ ಘಟಕವಾಗಿದ್ದರು. ಉಳಿದವರೆಲ್ಲ ಪ್ರಯೋಗದ ಸಹವರ್ತಿಗಳಾಗಿದ್ದು ಎರಡು ಬಾರಿ  ಉತ್ತರ ನೀಡಿ ನಂತರದ ಕೆಲವು ಇದಕ್ಕೆಂದೇ ನಡೆಸಲಾಗುವ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳನ್ನು ಕೊಡುವಂತೆ ನಿರ್ದೇಶಿಸಲ್ಪಟ್ಟಿದ್ದರು. ನಿಜವಾದ ಅಧ್ಯಯನ ಘಟಕವಾಗಿರುವ ವ್ಯಕ್ತಿಯು ಉತ್ತರ ನೀಡಲು ಕೊನೆಯಿಂದ ಎರಡನೆಯವರಾಗಿರುವಂತೆ ಆಶ್ಚ್ ಯೋಜಿಸಿದ್ದರು, ತನ್ಮೂಲಕ ಆ ವ್ಯಕ್ತಿ ತನ್ನ ಅಭಿಪ್ರಾಯ ಹೇಳುವ ಮೊದಲು ಬಹುತೇಕ ಸಹವರ್ತಿಗಳ ಅಭಿಪ್ರಾಯವನ್ನು ಕೇಳಿರುತ್ತಿದ್ದರು. ಈ ವ್ಯಕ್ತಿ ಉಳಿದವರ ಅಭಿಪ್ರಾಯದ ಜೊತೆಗೆ ಹೋದರೇ ?

pastedGraphic_1.png

ಮೇಲಿನ ಚಿತ್ರದಲ್ಲಿ ಸೋಲೋಮನ್ ಆಶ್ಚ್ ಬಲತುದಿತಲ್ಲಿದ್ದಾರೆ ಮತ್ತು ನಿಜವಾದ ಅಧ್ಯಯನ ಘಟಕ ಬಲದಿಂದ ಮೂರನೆಯವರಾಗಿದ್ದಾರೆ.

ಆಶ್ಚ್ ಅವರಿಗೆ ಅಚ್ಚರಿಯಾಗುವಂತೆ ಐವತ್ತು ಅಧ್ಯಯನ ಘಟಕಗಳಲ್ಲಿ ಮುವ್ವತ್ತೇಳು ವ್ಯಕ್ತಿಗಳು ನೀಡಿದ ಉತ್ತರಗಳು “ಸ್ಪಷ್ಟವಾಗಿ ತಪ್ಪಾದ” ಉತ್ತರಗಳಿಗೆ ತಾಳೆಯಾಯಿತು . ಹಾಗೂ ಅವರಲ್ಲಿ ೧೪ ವ್ಯಕ್ತಿಗಳು ಆರಕ್ಕಿಂತ ಹೆಚ್ಚು ‘ಸ್ಟೇಜ್’ ಮಾಡಲಾದ ಪರೀಕ್ಷೆಗಳಲ್ಲಿ ಈ ರೀತಿ ಬಹುಮತವನ್ನು ಅನುಸರಿಸಿದರು. ಗುಂಪಿನ ಇತರ ವ್ಯಕ್ತಿಗಳಿಂದ ಒಮ್ಮತದ ತಪ್ಪು ಉತ್ತರ ಬಂದಾಗ, ಸರಾಸರಿ ವ್ಯಕ್ತಿಯು ನಾಲ್ಕು ‘ಸ್ಟೇಜ್’ ಮಾಡಿದ ಪರೀಕ್ಷೆಗಳಲ್ಲಿ ಬಹುಮತವನ್ನು ಅನುಸರಿಸಿದರು. 

ಈ ಫಲಿತಾಂಶವನ್ನು ನೋಡಿ ಆಶ್ಚ್ ಕ್ಷೋಭೆಗೊಳಗಾದರು: “ನಮ್ಮ ಸಮಾಜದಲ್ಲಿ ಅನುಸರಿಸುವಿಕೆ ಎಷ್ಟು ಪ್ರಬಲವಾಗಿದೆಯೆಂದರೆ ಬುದ್ಧಿವಂತ ಹಾಗೂ ಸದಾಸಕ್ತಿಯುಳ್ಳ ಯುವ ಜನರು ಕೂಡ ಬಿಳಿಯನ್ನು ಕಪ್ಪೆಂದು ಹೇಳಲು ಸಿದ್ಧರಿದ್ದಾರೆ. ಇದು ನಮ್ಮನ್ನು ಚಿಂತೆಗೀಡು ಮಾಡಬೇಕಾದ ವಿಷಯ. ಏಕೆಂದರೆ ಇದು ನಮ್ಮ ಶಿಕ್ಷಣದ ಕುರಿತು ಪ್ರಶ್ನೆಗಳನ್ನೆತ್ತುತ್ತದೆ ಮತ್ತು ನಮ್ಮ ನಡವಳಿಕೆಯನ್ನು ನಿರ್ಧರಿಸುವ ಮೌಲ್ಯಗಳನ್ನು ಪ್ರಶ್ನಿಸುತ್ತದೆ.”

ಬಹುತೇಕ ಅಧ್ಯಯನ ಘಟಕಗಳು ಅನುಸರಿಸಲು ಏಕೆ ಅಷ್ಟೊಂದು ಸಿದ್ಧವಾಗಿದ್ದರು? ಪ್ರಯೋಗದ ನಂತರ ಅವರಲ್ಲಿ ಹಲವರು, ಇತರರನ್ನು ಅನುಸರಿಸಿ ಅವರು ಹೇಳಿದ ಉತ್ತರಗಳನ್ನು ಅವರೇ ಸ್ವತಃ ನಂಬಲಿಲ್ಲವೆಂದೂ, “ವಿಚಿತ್ರ”ವೆನ್ನಿಸಿಕೊಳ್ಳುವ ಅಥವಾ ನಗೆಪಾಟಲಾಗುವ ಭಯದಿಂದ ಗುಂಪಿನ ಅಭಿಪ್ರಾಯವನ್ನೇ ಹೇಳಿದ್ದಾಗಿಯೂ ಹೇಳಿದರು. ಅವರಲ್ಲಿ ಕೆಲವರು ಗುಂಪಿನ ಅಭಿಪ್ರಾಯವೇ ಸರಿಯಾದದ್ದೆಂದು ನಂಬಿದೆವೆಂದು ಹೇಳಿದರು.

ಈ “ಗೊಂದಲದಲ್ಲಿದ್ದಂತೆ ತೋರುವ ಮತ್ತು ಚಕಿತ” ವ್ಯಕ್ತಿಯು “ತಾನು ನೋಡಿದಂತೆಯೇ ಹೇಳಬೇಕು” ಎಂದು ಹೇಳಿ ಪ್ರತಿ “ಸ್ಟೇಜ್” ಮಾಡಿದ ಪರೀಕ್ಷೆಯಲ್ಲಿರೂ ಬಹುಮತದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದನು.

ಅಧ್ಯಯನ ಘಟಕಗಳು ನಿಜವಾಗಿಯೂ ತಪ್ಪುತ್ತರವನ್ನು ನಂಬಿದ್ದರೇ ಎಂದು ತಿಳಿಯಲು ಆಶ್ಚ್ ಪ್ರಯೋಗದ ಇನ್ನೊಂದು ಆವೃತ್ತಿಯನ್ನು ರೂಪಿಸಿದರು. ಉಳಿದವರ ಉತ್ತರ ಕೇಳಿದ ನಂತರ ಅವರಿಗೆ ಉತ್ತರವನ್ನು ಬರೆದು ತೋರಿಸುವ ಅವಕಾಶ ನೀಡಿದಾಗ ಅವರ ಅನುಸರಿಸುವಿಕೆಯ ಪ್ರಮಾಣ ಮೊದಲಿನ ಪ್ರಯೋಗಕ್ಕಿಂತ ಮೂರನೇ ಒಂದರಷ್ಟು ಕಡಿಮೆಯಾಯಿತು.

ಅನುಸರಿಸುವುದನ್ನು ಎರಡು ಕಾರಣಕ್ಕಾಗಿ ಮಾಡಲಾಗುತ್ತದೆ: ಗುಂಪಿನಲ್ಲಿ ಇತರರ ಇಷ್ಟಕ್ಕೆ ಪಾತ್ರವಾಗುವುದು ಮತ್ತು ಗುಂಪು ತಮಗಿಂತ ಹೆಚ್ಚು ತಿಳಿದಿದೆ ಎಂದು ಭಾವಿಸುವುದು. ನೀವು ಒಂದು ಅದ್ದೂರಿ ಔತಣಕೂಟಕ್ಕೆ ಹೋಗುತ್ತೀರಿ ಮತ್ತು ನಿಮ್ಮ ದುರಾದೃಷ್ಟಕ್ಕೆ ಪ್ಲೇಟಿನ ಪಕ್ಕದಲ್ಲಿ ನಾಲ್ಕು ಫೋರ್ಕ್‍ಗಳನ್ನು ಇರಿಸಲಾಗಿದೆ. ಮೊದಲನೇ ತಿನಿಸುಗಳು ಬಂದಾಗ ಯಾವ ಫೋರ್ಕ್ ಬಳಸಬೇಕೆಂದು ನಿಮಗೆ ಖಾತ್ರಿಯಿಲ್ಲ. ಬಹುತೇಕ ಜನರಂತೆ ನೀವೂ ಆಗಿದ್ದರೆ, ನೀವು ಸುತ್ತಮುತ್ತ ನೋಡಿ ಎಲ್ಲರೂ ಬಳಸುತ್ತಿರುವ ಫೋರ್ಕ್ ಅನ್ನೇ ಬಳಸುತ್ತೀರಿ. ನೀವಿದನ್ನು ಏಕೆ ಮಾಡುತ್ತೀರೆಂದರೆ ಗುಂಪಿನಿಂದ ನೀವು ಸ್ವೀಕೃತಿಗೊಳ್ಳಬೇಕು ಮತ್ತು ಉಳಿದವರಿಗೆ ನಿಮಗಿಂತ ಟೇಬಲ್ ರಿವಾ‍ಜುಗಳ ಕುರಿತು ಹೆಚ್ಚು ಮಾಹಿತಿಯೆಂದು ನೀವು ಭಾವಿಸುತ್ತೀರಿ.

ಅನುಸರಿಸುವಿಕೆ, ಗುಂಪಿನ ಗಾತ್ರ ಮತ್ತು ಬೆರೆಯುವಿಕೆ

ತಪ್ಪಭಿಪ್ರಾಯ ವ್ಯಕ್ತಪಡಿಸುತ್ತಿರುವ ಬಹುಸಂಖ್ಯೆಯವರು ಎಷ್ಟು ಜನರಿದ್ದಾರೆ ಎನ್ನುವುದು ಅನುಸರಿಸುವಿಕೆಯನ್ನು ನಿರ್ಧರಿಸುವ ಅಂಶಗಳಲ್ಲೊಂದು ಎಂದು ಆಶ್ಚ್ ಕಂಡುಕೊಂಡರು. ಒಂದು ಅಧ್ಯಯನ ಸರಣಿಯಲ್ಲಿ ಒಂದರಿಂದ ಹದಿನೈದು ಜನರ ವರೆಗೆ ತಪ್ಪು ಅಭಿಪ್ರಾಯ ನೀಡುವ ಸಹವರ್ತಿಗಳನ್ನಿಟ್ಟು ಅಭ್ಯಸಿಸಿದರು. 

pastedGraphic_3.png

ತಾವು ಎದುರಿಸಿದ ‘ಬಹುಮತ’ದ ಪ್ರಮಾಣದೊಂದಿಗೆ ಅಧ್ಯಯನ ಘಟಕದ ಉತ್ತರಗಳು ಬದಲಾದವು.

ಮೂರು ನಾಲ್ಕು ಜನರ ಗುಂಪಿನೊಂದಿಗೆ ದೊಡ್ಡ ಗುಂಪಿನಷ್ಟೇ ಅನುಸರಿಸುವಿಕೆಯನ್ನು ವ್ಯಕ್ತಿಗಳು ಪ್ರದರ್ಶಿಸುತ್ತಾರೆಂದು ಅವರು ಕಂಡುಕೊಂಡರು. ಆದರೆ ಅವರ ಕೆಲವು ಪ್ರಯೋಗಗಳಲ್ಲಿ ತಮಗೊಂದು “ಮಿತ್ರ”ರಿದ್ದರೆ ಅಧ್ಯಯನ ಘಟಕಗಳು ಬಹಳಷ್ಟು ಕಡಿಮೆ ಅನುಸರಿಸುವಿಕೆ ಪ್ರದರ್ಶಿಸಿದರು. ಈ ಪ್ರಯೋಗಗಳಲ್ಲಿ ಒಂದು ಸಹವರ್ತಿಗೆ ಸರಿಯಾದ ಉತ್ತರಗಳನ್ನು ನೀಡುವಂತೆ ಆಶ್ಚ್ ನಿರ್ದೇಶಿಸಿದ್ದರು. ಈ ಅನುಸರಿಸದ ಸಹವರ್ತಿ ಇದ್ದಾಗ ನಿಜವಾದ ಅಧ್ಯಯನ ಘಟಕಗಳು ಮೂಲ ಪ್ರಯೋಗಕ್ಕಿಂದ ನಾಲ್ಕನೇ ಒಂದರಷ್ಟು ಮಾತ್ರ ಅನುಸರಿಸುವಿಕೆಯನ್ನು ಪ್ರದರ್ಶಿಸಿದರು. ಇದಕ್ಕೆ ಹಲವು ಕಾರಣಗಳಿದ್ದವು. ಒಂದು, ತಪ್ಪಭಿಪ್ರಾಯ ಹೊಂದಿದ ಬಹುಸಂಖ್ಯೆಯ ಜನ ಭಿನ್ನಾಭಿಪ್ರಾಯವುಳ್ಳ ವ್ಯಕ್ತಿಯನ್ನು ನಗೆಗೀಡು ಮಾಡುತ್ತಿಲ್ಲ ಎಂದು ಅಧ್ಯಯನ ಘಟಕಕ್ಕೆ ಅರಿವಾಯಿರು. ಎರಡನೇಯದಾಗಿ, ಭಿನ್ನಮತದ ವ್ಯಕ್ತಿಯ ಇರುವಿಕೆಯಿಂದ ಅಧ್ಯಯನ ಘಟಕಕ್ಕೆ ಬಹುಸಂಖ್ಯೆಯ ಜನ ತಪ್ಪೆಂದು ಇನ್ನಷ್ಟು ಖಾತ್ರಿಯಾಗಲು ನೆರವಾಯಿರತು. ಮೂರನೆಯದಾಗಿ, ನಿಜವಾದ ಅಧ್ಯಯನ ಘಟಕವು ಈಗ ಬಹುಸಂಖ್ಯೆಯ ವ್ಯಕ್ತಿಗಳು ಹಾಗೂ ಭಿನ್ನಮತದ ವ್ಯಕ್ತಿಗಳಿಬ್ಬರಿಂದಲೂ ಸಾಮಾಜಿಕ ಒತ್ತಡ ಅನುಭವಿಸಿದರು. ಹಲವು ಅಧ್ಯಯನ ಘಟಕಗಳು ತಮ್ಮ ಭಿನ್ನಮತದ ಜೊತೆಗಾರರಂತಾಗಬೇಕೆನ್ನುವ ಬಯಕೆಯಿತ್ತೆಂದು ಹೇಳಿದರು.  ಒಬ್ಬ ಅಲ್ಪಸಂಖ್ಯಾತರಾಗುವುದು ಎರಡು ಅಲ್ಪಸಂಖ್ಯಾತರ ಗುಂಪಿನೊಳಗಿರುವುದಕ್ಕಿಂತ ಕಠಿಣವೆಂದು ತೋರುತ್ತದೆ.

ಕೆಲವು ಅಧ್ಯಯನ ಘಟಕಗಳು ಉಳಿದ ಜನರು ಸರಿಯಿದ್ದು ತಮ್ಮ ಗ್ರಹಿಕೆಯೇ ತಪ್ಪೆಂದು ಭಾವಿಸಿದ್ದಾಗಿ ಹೇಳಿದರು. ಇನ್ನು ಕೆಲವರು ತಾವೇ ಸರಿಯೆಂದು ತಿಳಿದಿದ್ದರೂ ಇತರರಿಗಿಂತ ಭಿನ್ನವಾಗಲು ಬಯಸಲಿಲ್ಲವೆಂದು ಹೇಳಿದರು. ಕೆಲವರಂತೂ ಬಹುಸಂಖ್ಯೆಯವರು ಹೇಳಿದಂತೆಯೇ ರೇಖೆಗಳ ಉದ್ದವನ್ನು ನೋಡಿದ್ದಾಗಿ ಹೇಳಿದರು.

ಬೇರೆ ಯಾರೂ ನೋಡದಿರುವಾಗ ನೀವೊಂದನ್ನು ನೋಡಿದ್ದೇವೆನ್ನುವುದು ಕಠಿಣ ಎಂದು ಆಶ್ಚ್ ತೀರ್ಮಾನಕ್ಕೆ ಬಂದರು. ಇನ್ನಿತರರಿಂದ ಉಂಟಾಗುವ ಗುಂಪಿನ ಒತ್ತಡ ನಿಮ್ಮ ಗ್ರಹಿಕೆಯನ್ನು ಮಾರ್ಪಾಡಾಗಿಸಿ, ವಕ್ರವಾಗಿಸಿ ನೀವು ಏನು ಬೇಕಾದರೂ ಕಾಣುವಂತೆ ಮಾಡಬಹುದು.

pastedGraphic_4.png 

ಈ ಲೇಖನವು ಇಂಗ್ಲಿಷ್‍ನಲ್ಲಿ age of the sage ವೆಬ್‍ಸೈಟ್‍ನಲ್ಲಿ ಪ್ರಕಟವಾಗಿತ್ತು.

ಅನುವಾದ: ಸುಬ್ರಹ್ಮಣ್ಯ ಹೆಗಡೆ ಅಲಹಾಬಾದಿನ ಹರೀಶ್-ಚಂದ್ರ ಸಂಶೋಧನಾ ಸಂಸ್ಥೆಯಲ್ಲಿ ಡಾಕ್ಟರೇಟೋತ್ತರ ಸಂಶೋಧಕರು.

One comment to “ಸಾಮಾಜಿಕ ಒತ್ತಡ ನಮ್ಮ ಅಭಿಪ್ರಾಯಗಳನ್ನು ನಿರ್ಧರಿಸಬಲ್ಲದೇ ? : ಸೋಲೋಮನ್ ಆಶ್ಚ್ ಪ್ರಯೋಗ”
  1. ಭಾಷೆ, ಸಾಹಿತ್ಯ, ಅನುವಾದ ಎಲ್ಲ ಇರುವುದು ಸಂವಹನಕ್ಕಾಗಿ. ಆ ಉದ್ದೇಶವೇ ಸಾಧ್ಯವಾಗದೇ ಹೋದಾಗ, ಅದರಿಂದ ಏನು ಉಪಯೋಗವೋ ಗೊತ್ತಿಲ್ಲ. ಸರಾಗವಾಗಿ ಓದಲು ಆಗದೇ ಶಬ್ದ ಹೆಕ್ಕಿ ಹೆಕ್ಕಿ ತಿಣುಕಾಡಬೇಕಾಯಿತು. ಮೊದಲು ಇದು ಅರ್ಥದ ತೊಡಕು ಎಂದುಕೊಂಡೆ. ಅದನ್ನು ಪರಿಶೀಲಿಸಲು ಇಂಗ್ಲಿಷ್ ಭಾಷೆಯಲ್ಲಿನ ಮೂಲ ಬರಹ ತೆಗೆದು ನೋಡಿದೆ. ಹರಕು ಮುರುಕು ಇಂಗ್ಲಿಷ್ ಭಾಷೆ ಬರುವ ನನಗೇ ಕನ್ನಡದ ಅನುವಾದಕ್ಕಿಂತ ಮೂಲ ಬರಹವೇ ಚೆನ್ನಾಗಿ ಅರ್ಥವಾಯಿತು. ಹಾಗಾಗಿ, ಇದು ಅರ್ಥದ್ದಲ್ಲ, ಅನುವಾದದ್ದೇ ತೊಡಕು ಅನ್ನಿಸಿತು.
    ಶಂಕರ ಮೊಕಾಶಿ ಪುಣೇಕರ ಅವರು ವಿಮರ್ಶೆಯ ಬಗ್ಗೆ ಮಾತನಾಡುತ್ತಾ “ಗರ್ಭವೇದನೆಯ ಅರಿವೇ ಇಲ್ಲದ ಅಕವಿ ವಿಮರ್ಶಕರು” ಎಂಬ ವಾಕ್ಯ ಬಳಕೆ ಮಾಡುತ್ತಾರೆ. ತತ್ವಪ್ರತಿಪಾದನೆಯನ್ನು ಮೊದಲು ಮಾಡಿ ಅದಕ್ಕೆ ಅನುಸಾರವಾಗಿ ಕಲೆ-ಕಾವ್ಯ ರಚಿಸುವ ಹವ್ಯಾಸವಿರುವವರ ಬಗ್ಗೆಯೂ ಇದೇ ಮಾತಿದೆ. ಅನುವಾದದ ಕುರಿತೂ ಇಂತಹ ಸಂ-ವೇದನೆಗಳಿಲ್ಲದಿರುವುದು ಖೇದಕರ. ಯಾವುದೋ ಭಯಾನಕ ಪ್ರಶ್ನೆ ಕೇಳಿ ಅದಕ್ಕೆ ಉತ್ತರಿಸಲು ಜನಸಾಮಾನ್ಯರಿಗೆ ನಿಲುಕದ ಶಬ್ದ ಬಳಕೆ ಮಾಡುವುದಕ್ಕಿಂತ ಸುಮ್ಮನಿರುವುದು ಲೇಸು ಎಂದು ತೇಜಸ್ವಿಯವರಿಂದ ನಾವು ಕಲಿತದ್ದು ಇದ್ದೇ ಇದೆ. ಮೂಲ ಪ್ರಬಂಧವನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ತನ್ನನ್ನು ಓದಲಿರುವ ನೂರಾರು ಮಂದಿಗೆ ಇದು ಹೇಗೆ ತಲುಪುತ್ತದೆ ಎಂಬುದನ್ನು ಪ್ರತಿ ಕ್ಷಣವೂ ಯೋಚನೆ ಮಾಡಲೇಬೇಕು. ಇದು ಒಬ್ಬ ಅನವಾದಕಿ/ಅನುವಾದಕನ ಜವಾಬ್ದಾರಿಯೂ ಹೌದು. 
    ಇಲ್ಲಿ ನಾನು ಹೇಳಿದ ಅಂಶಗಳನ್ನು ಓದಿ, ಇವುಗಳಿಗೆ ಅರ್ಥವಿಲ್ಲ, ಏನು ಹೇಳುತ್ತಿದ್ದಾರೋ ಅವರಿಗೇ ಗೊತ್ತಿಲ್ಲ ಎಂದು ನಿಮಗೆ ಅನ್ನಿಸಿದರೆ, ಒಪ್ಪುತ್ತೇನೆ ಅದು ಸಮಸ್ಯೆಯೇ. ಈ ಅನುವಾದದ್ದೂ ಕೂಡ ಅದೇ ಸಮಸ್ಯೆ.

ಪ್ರತಿಕ್ರಿಯಿಸಿ