ಸೋಲಿಗರ ಹಬ್ಬ ನಿಲ್ಲಿಸಿದ ಕೊರೋನಾ:  ಚಾಮರಾಜನಗರ ಜಿಲ್ಲೆ

ಕೊರೊನಾ ಕಾಲದಲ್ಲಿನ ಗ್ರಾಮಿಣ ಬದುಕಿನ ಚಿತ್ರಗಳನ್ನ ಋತುಮಾನಕ್ಕಾಗಿ ಎ.ಆರ್.ವಾಸವಿ ಮತ್ತು ಕೆ.ಪಿ ಸುರೇಶ ಸಂಪಾದಿಸಿ ಕೊಟ್ಟಿದ್ದಾರೆ.ಇಂತಹ ನಾಡಿನ ಹತ್ತು ವಿವಿಧ ಹಳ್ಳಿಯ ಚಿತ್ರಗಳು ದಿನಕ್ಕೊಂದರಂತೆ ಕೊರೊನಾ ಕಾಲದಲ್ಲಿ ಗ್ರಾಮಿಣ ಬದುಕು ಅನ್ನುವ ಶೀರ್ಷಿಕೆಯಲ್ಲಿ ಋತುಮಾನದಲ್ಲಿ ಪ್ರಕಟವಾಗುತ್ತಿದೆ

 “ಗೊರುಗೊರು ಕೋ ಗೊರುಕನ.. ಗೋರು ಗೋರು ಕ ಗೊರುಕನ

ದೊಡ್ಡ ಸಂಪಿಗೆ ನನ್ನ  ನೋಡಯ್ಯ ಕಾದು ಕಾಪಾಡಿ ಮಡುಗೊನಯ್ಯಾ.”

ಗೊರುಕನ ಹಾಡಿನ ಪಲ್ಲವಿ  ಬಿಳಿಗಿರಿರಂಗನ ಬೆಟ್ಟ ಸಾಲಿನ ಸೋಲಿಗರ ಹಬ್ಬಗಳ ಕಾಲದಲ್ಲಿ ಕಾಡಿನುದ್ದಕ್ಕೂ ಅನುರಣನಗೊಳ್ಳುತ್ತಿರುತ್ತದೆ. ಈ ಸಾಲುಗಳು ಪ್ರಾಚೀನ ದೈವವಾದ ದೊಡ್ಡ ಸಂಪಿಗೆಮರಕ್ಕೆ ಗೌರವ ಸೂಚಿಸುತ್ತೆ. ಕೆಲವುವರ್ಷಗಳಿಗೊಮ್ಮೆ ಸೋಲಿಗರು ಕೊಂಡ ಹಾಯುವ  ಆಚರಣೆಯೊಂದಿಗೆ  ರೊಟ್ಟಿ ಹಬ್ಬ ಆಚರಿಸುತ್ತಾರೆ.

ಈ ಹಬ್ಬಕ್ಕೆ ದೂರ ದೂರದ ಸೋಲಿಗರು ಬಂದು ಸೇರುತ್ತಾರೆ. ತಿಂಗಳುಗಳ ಮೊದಲೇ ಈ ಹಬ್ಬಕ್ಕೆ ತಯಾರಿ ನಡೆದಿರುತ್ತದೆ. ರಾತ್ರಿ ಇಡೀ ಹಾಡು-ಕುಣಿತ ನಡೆಯುವ ಹಬ್ಬ ಇದು. ಮುತ್ತುಗದ ಎಲೆಯಲ್ಲಿ ರಾಗಿರೊಟ್ಟಿ ಬೇಯಿಸಿ ಕುಂಬಳ ಕಾಯಿ- ಅವರೆ ಕಾಯಿ ಪಲ್ಯವನ್ನು ದೇವರಿಗೆ  ಅರ್ಪಿಸಲಾಗುತ್ತದೆ. ಪರಸ್ಪರ ಇಚ್ಛೆ ಪಟ್ಟ ಜೋಡಿಗಳು ಕಣ್ಮರೆಯಾಗಿ ಮದುವೆಯಾಗುವ ಸಂಪ್ರದಾಯ ಇರುವ ಈ ಪಂಗಡದಲ್ಲಿ,  ಈ  ಹಬ್ಬ ತರುಣ-ತರುಣಿಯರಿಗೆ ಪಸ್ಪರರನ್ನು ಆಯ್ಕೆಮಾಡಿಕೊಳ್ಳುವ ಸಂದರ್ಭ ಕೂಡಾ.

ಈ ಬಾರಿ ರೊಟ್ಟಿ ಹಬ್ಬ ಇಲ್ಲ. ಹಬ್ಬಕ್ಕಾಗಿ ಒಂದಷ್ಟು ಕಾಡು ಸವರಿದ ಬೋಳು ಜಾಗ ಗೊರುಕನ ಹಾಡಿನ ಲಯಕ್ಕಾಗಿ ಕಾದು ಕೂತಿದೆ. ಆದರೆ ಇಡೀ ದೇಶದ ಲಾಕ್ ಡೌನ್ ಆಜ್ಞೆಗನುಗುಣವಾಗಿ ಇಲ್ಲೂ ಜಿಲ್ಲಾಡಳಿತವು ದೊಡ್ಡ ಗುಂಪು ಸೇರುವುದನ್ನು ನಿಷೇಧಿಸಿದೆ.

ಹೆಚ್ಚಿನ ಉಳಿದ ಸಂದರ್ಭಗಳಂತೆ ಸೋಲಿಗರೂ ಇದನ್ನು ಒಪ್ಪಿಕೊಂಡಿದ್ದಾರೆ.ಟಿವಿಗಳಲ್ಲಿ ನ್ಯೂಸ್ ನೋಡಿ ಲೋಕಕ್ಕೇ ಮಾರಿ ಬಡಿದಿದೆ ಎನ್ನುತ್ತಾರೆ. ಪೂಜೆ ನಡೆಸಿ ಮಾರಮ್ಮನಿಗೆ ಎಡೆ ಇಡುತ್ತಿದ್ದಾರೆ. ಉಳಿದ ದೇವರುಗಳಿಗೂ ಪೂಜೆ ಸಲ್ಲಿಸಿ ನಮ್ಮ ಅಪರಾಧಗಳನ್ನು ಮನ್ನಿಸಿ ಎಂದು ಮೊರೆ ಇಡುತ್ತಿದ್ದಾರೆ.

ಪೌಷ್ಟಿಕ ಆಹಾರ ಯೋಜನೆಯಲ್ಲಿ ಇತ್ತೀಚೆಗೆ ಇವರಿಗೆ ಪಡಿತರ ನೀಡಲಾಗಿದೆ. ಜಿಲ್ಲಾಧಿಕಾರಿ ಸ್ವತಃ ಇದನ್ನು ಉಸ್ತುವಾರಿನಡೆಸಿದ್ದಾರೆ. ಇದೇ ಸಮಯಕ್ಕೆ  ಅಕ್ಕಪಕ್ಕದ ಪಟ್ಟಣಗಳಿಗೆ ಬಸ್ಸು ಸೇವೆಯೇ ಇಲ್ಲದ ಕಾರಣ ಸೋಲಿಗರಿಗೆ ಈಗ ಕೈತುಂಬಾ ಸಮಯವಿದೆ. ಹಲವರು ತಮ್ಮ ಹಿಂದಿನ ಜೀವನ ವಿಧಾನಗಳಿಗೆ ಮರಳಿದ್ದಾರೆ. ಕಾಡಿನಲ್ಲಿ ಜೇನು, ಗೆಡ್ಡೆ ಗೆನಸು ಸಂಗ್ರಹಿಸುವ ಕೆಲಸಮಾಡುತ್ತಿದ್ದಾರೆ.ಸೋಲಿಗರಿಗೆ ಕಾಡೇ ಅವರ ಮನೆ. ಹೊರಗಿನ ಪ್ರಪಂಚ ಪಿಡುಗಿಗೆ ತತ್ತರಿಸುತ್ತಿದ್ದರೆ ಈ ಕಾಡು ಅವರಿಗೆ ಸುರಕ್ಷೆಯ ಸ್ವರ್ಗವಾಗಿದೆ. ಈ ಅರಣ್ಯ ಹೀಗೇ ಇರುವಂತೆ ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯೂ ಆಗಿದೆ.

– ಸಮೀರಾ ಅಗ್ನಿಹೊತ್ರಿ,  ಬೆಂಗಳೂರು

ಪ್ರತಿಕ್ರಿಯಿಸಿ