ಕರೋನ ವೈರಸ್ ಮತ್ತು ಸಂವಿಧಾನ: ಹೊಣೆಗಾರಿಕೆಯ ಮಾದರಿಗಳು

ಇತ್ತೀಚಿನ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಕೆಲವು ತೀರ್ಪುಗಳ ಕುರಿತು ಹಲವು ನಿವೃತ್ತ ನ್ಯಾಯಮೂರ್ತಿಗಳು, ವಕೀಲರು ಮತ್ತು ಸಂವಿಧಾನ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ . ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಇಂತಹ ಪರಿಸ್ಥಿತಿಯಲ್ಲಿ ನಮ್ಮ ನ್ಯಾಯಾಂಗಕ್ಕಿರುವ ಸಾಂವಿಧಾನಿಕ ಹೊಣೆಗಾರಿಕೆ ಏನು ? ಅದು ಈ ಹೊಣೆಗಾರಿಕೆಯಿಂದ ಕೊಳ್ಳುತ್ತಿದೆಯೇ? ಎಂದಿಲ್ಲಿ ವಿಮರ್ಶಿಸಿದ್ದಾರೆ ಸಂವಿಧಾನ ತಜ್ಞ ಗೌತಮ್ ಭಾಟಿಯಾ .
ದೇಶಾದ್ಯಂತ ಲಾಕ್‍ಡೌನ್ ಆನ್ನು ಮೇ ೧೭ ರವರೆಗೆ ವಿಸ್ತರಿಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(NDMA) ಮತ್ತಷ್ಟು ನಿರ್ದೇಶನಗಳನ್ನು ನೀಡಿರುವಾಗ ಹಾಗು ದೇಶದ ಸರ್ವೋಚ್ಚ ನ್ಯಾಯಲದ ಮುಂದೆ ಸಾಕಷ್ಟು ವಿಧವಿಧವಾದ ಅರ್ಜಿಗಳಿರುವ ಈ ಸಮಯದಲ್ಲಿನಾವು ಒಂದು ಹೆಜ್ಜೆ ಹಿಂದೆ ಇಟ್ಟು ಸಂವಿಧಾನದ ಮೂಲ ತತ್ವಗಳ(first principles) ಮೌಲ್ಯವನ್ನುಪರಾಮರ್ಶಿಸುವುದು ಅಗತ್ಯವೆನಿಸುತ್ತದೆ: ಪ್ರಮುಖವಾಗಿ ಕಾರ್ಯಾಂಗದ ನೇತೃತ್ವದಲ್ಲಿ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುನ್ನು ಪರಿಹರಿಸುವಲ್ಲಿ ನ್ಯಾಯಾಂಗದ ಪಾತ್ರ.

 

ಹೊಣೆಗಾರಿಕೆಯ ವಿಷಯದ ಸುತ್ತ ಈ ಪ್ರಬಂಧವನ್ನು ರೂಪಿಸಲು ನಾನು ಬಯಸುತ್ತೇನೆ, ಮತ್ತು ಈ ಸನ್ನಿವೇಶದಲ್ಲಿ ಇದರ ಅರ್ಥವೇನೆಂದು ತಿಳಿಯೋಣ. ಹೊಣೆಗಾರಿಕೆಯ ಸಣ್ಣ ಭಾಗವಾಗಿ – ಇದನ್ನು ನಾವು “ಚುನಾವಣಾ ಹೊಣೆಗಾರಿಕೆ” ಎಂದು ಕರೆಯೋಣ – ಸತತವಾಗಿ ಜರುಗುವ ಚುನಾವಣೆಗಳ ಮೂಲಕ ಸಮ್ಮತಿಯನ್ನು ಸರ್ಕಾರಕ್ಕೆ ನೀಡಲಾಗುತ್ತದೆ. ಚುನಾವಣಾ ಪ್ರಕ್ರಿಯೆಯ ಮೂಲಕ ಸರ್ಕಾರದ ಹೊಣೆಗಾರಿಕೆಯನ್ನು ಪರೀಕ್ಷಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ. ಮಧ್ಯಂತರದ ಐದು ವರ್ಷಗಳ ಅವಧಿಯಲ್ಲಿ, ನಿರಂತರ ಜನಾದೇಶದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸರ್ಕಾರವನ್ನು ರೂಪಿಸಲಾಗುತ್ತದೆ ಮತ್ತು ಇದು ಬೇರೆ ಯಾವುದೇ ರೀತಿಯ ಹೊಣೆಗಾರಿಕೆಗೆ ಒಳಪಡುವುದಿಲ್ಲ. ಸರ್ಕಾರವು ತಪ್ಪುಗಳನ್ನು ಮಾಡಿದರೆ – ಉದಾಹರಣೆಗೆ, ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ – ಮುಂದಿನ ಚುನಾವಣೆಗಳಲ್ಲಿ ಅದನ್ನು ಮತಪೆಟ್ಟಿಗೆಯಲ್ಲಿ ಶಿಕ್ಷಿಸಲಾಗುತ್ತದೆ.

 

ಹೊಣೆಗಾರಿಕೆಯ ಈ ಕಲ್ಪನೆಯನ್ನು ಸ್ಪಷ್ಟಪಡಿಸಲು ಬಯಸುತ್ತೇನೆ, ನಿರ್ದಿಷ್ಟವಾಗಿ ನ್ಯಾಯಾಲಯದ ಕೆಲವು ಮಧ್ಯಸ್ಥಿಕೆಗಳನ್ನು ಟೀಕಿಸಲು (ಉಚಿತ ಕೋವಿಡ್ -19 ಪರೀಕ್ಷೆಯ ಕುರಿತಾದ ಅದರ ಆರಂಭಿಕ ಆದೇಶದಂತಹವುಗಳು, ಈಗ ಅವುಗಳ ಬಗ್ಗೆ ಸ್ವಲ್ಪ ಹಿಂದಕ್ಕೆ ಸರಿದಿದೆ) ಮತ್ತುಈ ಸಮಯದಲ್ಲಿ ಅದರ ಸರ್ಕಾರದ ಬಗೆಗಿನ ವರ್ತನೆಯನ್ನು ಕೊಂಡಾಡಲು(ಈ ವಿಷಯದಲ್ಲಿ, ಉದಾಹರಣೆಗೆ, ವಲಸೆ ಕಾರ್ಮಿಕರ). ಸಾಂಕ್ರಾಮಿಕ ರೋಗವನ್ನು ನಿರ್ವಹಿಸಲು ನ್ಯಾಯಾಲಯವನ್ನು ಆಯ್ಕೆ ಮಾಡಲಾಗಿಲ್ಲ ಮತ್ತು ಅದರ ನಿರ್ಧಾರಗಳ ಪರಿಣಾಮಗಳಿಗೆ (ಉಚಿತ ಪರೀಕ್ಷೆಯಂತಹ) ಇದು “ಜವಾಬ್ದಾರನಾಗಿರುವುದಿಲ್ಲ” ಎಂಬ ವಾದವು ಇದೆ. ಪರಿಣಾಮವಾಗಿ, ನ್ಯಾಯಾಲಯ ಹೊರಗುಳಿಯಬೇಕು ಮತ್ತು ಸರ್ಕಾರವು ಏನು ಮಾಡುತ್ತಿದೆ ಅದನ್ನು ಮಾಡಲು ಬಿಡಬೇಕು.

 

ಆದಾಗ್ಯೂ, ಹೊಣೆಗಾರಿಕೆಯ ಈ ಅಭಿವ್ಯಕ್ತಿ, ಪ್ರಜಾಪ್ರಭುತ್ವದ ಸಂಕೀರ್ಣತೆಗೆ ಹೊಂದಿಕೆಯಾಗುವುದಿಲ್ಲ. ಅಲ್ಲಿ ಸಂವಿಧಾನವು ಪ್ರಜ್ಞಾಪೂರ್ವಕವಾಗಿ ರಾಜ್ಯದ ಮೂರು ಶಾಖೆಗಳ ನಡುವೆ ಅಧಿಕಾರವನ್ನು ವಿಭಜಿಸುತ್ತದೆ ( ನಾನು ಈ ಪ್ರಬಂಧದ ಉದ್ದೇಶಗಳಿಗಾಗಿ ನಾಲ್ಕನೇ ಶಾಖೆಯ ಸಂಸ್ಥೆಗಳಾದ ಸಿಎಜಿಯಂತಹ ಸಂಸ್ಥೆಯನ್ನು ಮತ್ತು ಮಾಧ್ಯಮವನ್ನು ನಿರ್ಲಕ್ಷಿಸುತ್ತೇನೆ ). ಸರ್ಕಾರ  ಮತ್ತು ಸರ್ಕಾರದಿಂದ, ನಿರ್ದಿಷ್ಟವಾಗಿ ದಿನನಿತ್ಯದ ಆಡಳಿತದ ಪ್ರಶ್ನೆಗೆ ಬಂದಾಗ ಇತರ ಎರಡು ಶಾಖೆಗಳಿಗಿಂತ ಕಾರ್ಯಾಂಗ ಹೆಚ್ಚು ಜವಾಬ್ದಾರನಾಗಿರುತ್ತದೆ. ಮೊದಲನೆಯದು ಸಂಸತ್ತು (ಅಥವಾ ರಾಜ್ಯದ ಶಾಸಕಾಂಗಗಳು) – ಇವು ನಿಜವಾದ ಜನ ಪ್ರತಿನಿಧಿ ಸಂಸ್ಥೆಗಳು – ಮೇಲ್ವಿಚಾರಣೆ ಮತ್ತು ಪರಿಶೀಲನೆಯ ಅಧಿಕಾರವನ್ನು ಹೊಂದಿವೆ ಮತ್ತು ಕಾರ್ಯಾಂಗ ಕಾನೂನುಬದ್ಧ ಅಧಿಕಾರವನ್ನು ನಿರ್ವಹಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳುವುದು ಅದರ ಜಾವಾಬ್ದಾರಿ. ಎರಡನೆಯದು ನ್ಯಾಯಾಂಗ, ಇದು ಸರ್ಕಾರದ ಕ್ರಮಗಳು ಸಾಂವಿಧಾನಿಕವಾಗಿ ಖಾತರಿಪಡಿಸಿದ ಹಕ್ಕುಗಳನ್ನು ಮೀರದಂತೆ ನೊಡಿಕೊಳ್ಳುವುದು ಇದರ ಕಾರ್ಯ.

 

ಭಾರತದಲ್ಲಿ ಕೋವಿಡ್ -19 ಬಿಕ್ಕಟ್ಟನ್ನು ಹೇಗೆ ನಿಭಾಯಿಸಲಾಗಿದೆ ಎಂಬುದರ ಬಗ್ಗೆ ಗಮನಿಸಬೇಕಾದ ಮೊದಲ ವಿಷಯವೆಂದರೆ ಈ ಮೂರು ಶಾಖೆಗಳಲ್ಲಿ ಒಂದಾದ ಸಂಸತ್ತನ್ನು ಸಂಪೂರ್ಣವಾಗಿ ಬೈಪಾಸ್ ಮಾಡಿರುವುದು. ನಾನು ಬೇರೆಡೆ ಸ್ವಲ್ಪ ವಿವರವಾಗಿ ಬರೆದಂತೆ, ಸಾಂಕ್ರಾಮಿಕ ರೋಗವನ್ನು ಎದುರಿಸಲು ಎರಡು ಕಾನೂನುಗಳು – ಫೆಡರಲ್ ಮಟ್ಟದಲ್ಲಿ National Disaster Management Act (NDMA) ಮತ್ತು ರಾಜ್ಯ ಮಟ್ಟದಲ್ಲಿ Epedemict Deseases act(EDA)ಯನ್ನು ಬಳಸಲಾಗುತ್ತಿದೆ. ಇವುಗಳ ವ್ಯಾಪ್ತಿ ಹೆಚ್ಚಿದ್ದು,  ಅವು ಮೂಲಭೂತವಾಗಿ “ವಿಪತ್ತು” ಅಥವಾ “ಸಾಂಕ್ರಾಮಿಕ” ವನ್ನು ತಡೆಯಲು ಅಗತ್ಯವಿರುವ ’ಯಾವುದೇ’ ಕ್ರಮಗಳನ್ನು ತೆಗೆದುಕೊಳ್ಳಲು ಕಾರರ್ಯಾಂಗಕ್ಕೆ  ಅವಕಾಶ ಮಾಡಿಕೊಡುತ್ತವೆ. ಇದರ ಅರ್ಥವನ್ನು ಒಂದು ಕ್ಷಣ ಪರಿಗಣಿಸಿ: ಸಂವಿಧಾನದ ಅಡಿಯಲ್ಲಿ ತುರ್ತು ಘೋಷಣೆಗೆ ಸಂಸತ್ತು ಅನುಮೋದನೆ ನೀಡುವ ಅಗತ್ಯವಿದೆ. ಆದ್ದರಿಂದ, ಕೋವಿಡ್ -19 ರೊಂದಿಗೆ ವ್ಯವಹರಿಸಲು ಸಂವಿಧಾನದ ತುರ್ತು ಅಧಿಕಾರವನ್ನು ಬಳಸಲು ಸರ್ಕಾರ ಬಯಸಿದರೆ, ಅದು ಸಂಸತ್ತಿನ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಮತ್ತು ಅದು NDMA  ಮೂಲಕ ನಡೆಸುವ ಪರಿಶೀಲನೆಗಿಂತ ಹೆಚ್ಚಿನದಾಗಿರುತ್ತದೆ (ಅಂದರೆ, ಈಗ ಅದಾವುದೂ ಇಲ್ಲ )! ಅಲ್ಲದೆ, ಅನುಮೋದನೆಯೊಂದೇ ಸಂಸತ್ತಿನ ಏಕೈಕ ಕೆಲಸವಲ್ಲ: ಇತ್ತೀಚಿನ ವರ್ಷಗಳಲ್ಲಿ ಶಾಸನ ರಚನೆಯಲ್ಲಿ ಅದರ ಪಾತ್ರವು ಬಹಳ ಕಡಿಮೆಯಾಗಿದ್ದರೂ, ಅದರಲ್ಲೂ ವಿಶೇಷವಾಗಿ ಪಕ್ಷಾಂತರ-ವಿರೋಧಿ ಕಾನೂನು ಜಾರಿಯಲ್ಲಿ, ಆದರೂ ಸಂಸತ್ತು ದೇಶದ ಚುನಾಯಿತ ಪ್ರತಿನಿಧಿಗಳು ಸರ್ಕಾರ ಏನು ಮಾಡುತ್ತಿದೆ ಎಂದು ಚರ್ಚಿಸುವ ವೇದಿಕೆಯಾಗಿ ಉಳಿದಿದೆ; ಸಂಸತ್ತಿನಲ್ಲಿ ಏಳುವ ಪ್ರಶ್ನೆಗಳು ಮಂತ್ರಿಗಳಿಂದ ಮಾಹಿತಿಯನ್ನು ಹೊರತೆಗೆಯುವ ಪರಿಣಾಮಕಾರಿ ಮಾರ್ಗಗಳಾಗಿವೆ; ಮತ್ತು ಸಂಸದೀಯ ಸಮಿತಿಗಳು ಶಾಸಕಾಂಗ ಮೇಲ್ವಿಚಾರಣೆಯ ಪ್ರಮುಖ ಸಾಧನಗಳಾಗಿವೆ. ಗಮನಿಸಬೇಕಾದ ಅಂಶವೆಂದರೆ, ಇವೆಲ್ಲವನ್ನೂ  NDMA ಮತ್ತು EDAಗಳ ಮೂಲಕ ಬೈಪಾಸ್ ಮಾಡಲಾಗಿದೆ. ವಿರೋಧ ಪಕ್ಷದ ನಾಯಕರು ಪತ್ರಿಕಾಗೋಷ್ಠಿಗಳನ್ನು ನಡೆಸಲು ಬಿಟ್ಟು ಮತ್ತು – ಸಾಲಿಸಿಟರ್ ಜನರಲ್ ಹೇಳುವಂತೆ – ಈ ವಿಷಯದ ಬಗ್ಗೆ “ಟ್ವೀಟ್‌ಗಳನ್ನು ಸಿದ್ಧಪಡಿಸಿ”, ಏಕೆಂದರೆ ಅವರ ವಿಶಯಗಳನ್ನು ತಿಳಿಸಲು ಇದೊಂದೆ ಅವರಿಗಿರುವ ಏಕೈಕ ಮಾರ್ಗವಾಗಿದೆ. ಸದ್ಯಕ್ಕೆ, ಸಂಸತ್ತಿನ ಹೊಣೆಗಾರಿಕೆಯನ್ನು ಮರೆತುಬಿಡಿ -NDMA ಅಡಿಯಲ್ಲಿರುವ ಎಲ್ಲಾ ಆದೇಶಗಳನ್ನು ಗೃಹ ಕಾರ್ಯದರ್ಶಿ ಸಹಿ ಮಾಡಿರುವುದರಿಂದ, ಕ್ಯಾಬಿನೆಟ್‌ನ ಸಾಮೂಹಿಕ ಜವಾಬ್ದಾರಿಯು ಸಹ ಯಾವ ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲ.

 

ಎರಡು ಕಾರಣಗಳಿಗಾಗಿ ಇದು ಮುಖ್ಯವಾಗಿದೆ. ಮೊದಲನೆಯದು ಹೊಣೆಗಾರಿಕೆ ದ್ವಿಮುಖವಾದ ದಾರಿ. ಸರ್ಕಾರ – ಫೆಡರಲ್ ಮತ್ತು ರಾಜ್ಯ ಮಟ್ಟಗಳಲ್ಲಿ – ಶಾಸಕಾಂಗ ಹೊಣೆಗಾರಿಕೆಯಿಂದ ತನ್ನನ್ನು ತಾನೇ ಬೇರ್ಪಡಿಸಿಕೊಂಡಿದೆ. ಈ ಹೊಣೆಗಾರಿಕೆ ಪ್ರಜಾಪ್ರಭುತ್ವದ ಅಡಿಯಲ್ಲಿ ತಪಾಸಣೆ ಮತ್ತು ಸಮತೋಲನಗಳನ್ನು ಕಾಯ್ದುಕೊಳ್ಳಲು  ಅತ್ಯಗತ್ಯವಾಗಿದೆ. “ಚುನಾವಣಾ ಹೊಣೆಗಾರಿಕೆ”ಯ ಆಧಾರದ ಮೇಲೆ ಮುಕ್ತ ಕೈ ನೀಡಲಾಗಿದ್ದರಿಂದ ಅದು ದುರ್ಬಲಗೊಳ್ಳುತ್ತದೆ. ಎರಡನೆಯದು, ಸಂಸತ್ತಿನ ಮೇಲೆ ಗ್ರಹಣ ಕವಿದಿರುವುದರಿಂದ ಸರ್ಕಾರದ ಕಾರ್ಯಗಳನ್ನು ಪರಿಶೀಲಿಸಲು ನ್ಯಾಯಾಂಗವೊಂದೇ ಏಕೈಕ ಅಂಗವಾಗಿದೆ. ಮತ್ತೆ  ಗಮನಿಸಬೇಕಾದ ಅಂಶವೆಂದರೆ ನಾವು ಮಾತನಾಡುತ್ತಿರುವುದು ಶಾಸನದ ನ್ಯಾಯಾಂಗ ವಿಮರ್ಶೆಯಲ್ಲ (ಅಲ್ಲಿ ಬಲವಾದ  ಸಾಂವಿಧಾನದ ಆಶಯವಿದೆ  ಮತ್ತು ಜನ ಪ್ರಾತಿನಿಧ್ಯದೊಂದಿಗೆ ನೇರ ಸಂಪರ್ಕವಿದೆ),  ಆದರೆ ಶಾಸಕಾಂಗದ ಅಡಿಯಲ್ಲಿ ಕಾರ್ಯಾಂಗವು ಶಾಸನಗಳ ಅನುಷ್ಟಾನಗಳಲ್ಲಿ ತೋರುವ ಬದ್ದತೆಯನ್ನು.

 

ಮತ್ತೊಮ್ಮೆ, ಹುಟ್ಟಬಹುದಾದ ಅಪನಂಬಿಕೆಯನ್ನು  ಹೊಗಲಾಡಿಸಲು ಸ್ಪಷ್ಟಪಡಿಸುವುದೇನೆಂದರೆ,  ಸಾಂಕ್ರಾಮಿಕ ರೋಗದ ನಿರ್ವಹಣೆಯನ್ನು ನ್ಯಾಯಾಂಗವು ವಹಿಸಿಕೊಳ್ಳಬೇಕು ಎಂದು ಹೇಳುತ್ತಿಲ್ಲ. ಯಾರೂ ಅದನ್ನು ಹೇಳುತ್ತಿಲ್ಲ  ಮತ್ತು ಯಾರೂ ಅದನ್ನು ಹೇಳಿಲ್ಲ.  ಆದಾಗ್ಯೂ, ಸರ್ಕಾರ ತನ್ನ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸುತಿದೆಯೆಂದು ಪರಿಕ್ಷಿಸಲು ಮತ್ತು ಅದರ ಕಾರ್ಯಸೂಚಿಗಳ ಬಗ್ಗೆ ವಿವರಣೆ ಕೇಳಲು ನ್ಯಾಯಾಂಗ ಸಂವಿಧಾನದ ಅಡಿಯಲ್ಲಿ ಒಂದು ವೇದಿಕೆಯನ್ನು  ಒದಗಿಸುವುದು ಅದರ ಸಂವಿಧಾನಿಕ ಜಾವಾಬ್ದಾರಿಯಾಗಿದೆ. ಇದರ ಅರ್ಥವನ್ನು ಅರ್ಥಮಾಡಿಕೊಳ್ಳಲು, ಉದಾಹರಣೆಗೆ, ಉಚಿತ ಕೋವಿಡ್ -19 ಪರೀಕ್ಷೆಯನ್ನು ಒಳಗೊಂಡ ಪ್ರಕರಣದಲ್ಲಿ ಭೂಷಣ್ ಮತ್ತು ಭಟ್ ಜೆಜೆ ಅವರ ನ್ಯಾಯಪೀಠದ ವಿಡಂಬನಾತ್ಮಕ ಕಾರ್ಯಕ್ಷಮತೆಯನ್ನು ತೆಗೆದುಕೊಳ್ಳೋಣ. ಈ ಪ್ರಬಂಧದಲ್ಲಿ, ಉಚಿತ ಕೋವಿಡ್ -19 ಪರೀಕ್ಷೆಯನ್ನು ಕಡ್ಡಾಯಗೊಳಿಸುವ (ICMRನ ಮಾರ್ಗಸೂಚಿಗಳ ಅಡಿಯಲ್ಲಿ) ನ್ಯಾಯಪೀಠದ ಮೊದಲ ಆದೇಶದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ನ್ಯಾಯಲಯ ಕೊಟ್ಟಿರುವ ಆದೇಶದಲ್ಲಿ ಮರುಪಾವತಿಯ(reimbursement) ಪ್ರಶ್ನೆಗೆ ಸ್ಪಷ್ಟತೆ ಇಲ್ಲ ಮತ್ತು ಖಾಸಗಿ ಲ್ಯಾಬ್‌ಗಳು ಈ ಹಂತದಲ್ಲಿ ಸ್ಪಷ್ಟತೆ ಇಲ್ಲದೆ ಪರೀಕ್ಷೆಯನ್ನು ನಡೆಸುವ ನಿರೀಕ್ಷೆಯಿಲ್ಲ ಎಂಬುದು ಎಲ್ಲರು ಒಪ್ಪುವಂತದ್ದು. ಕೆಲವೇ ದಿನಗಳಲ್ಲಿ, ಇದೇ ನ್ಯಾಯಪೀಠವು ಸಂಪೂರ್ಣ ಮತ್ತು ವ್ಯತಿರಿಕ್ತವಾದ ಯು-ಟರ್ನ್ ಅನ್ನು ಪ್ರದರ್ಶಿಸಿತು ಮತ್ತು ಸಾಲಿಸಿಟರ್ ಜನರಲ್ನ ಆದೇಶದ ಮೇರೆಗೆ ಇನ್ನೂ ಅಸ್ಪಷ್ಟ ಆದೇಶವನ್ನು ಜಾರಿಗೊಳಿಸಿತು – ಖಾಸಗಿ ಲ್ಯಾಬುಗಳು ಉಳ್ಳವರಿಂದ ಶುಲ್ಕವನ್ನು ವಸೂಲು ಮಾಡಲು ಅವಕಾಶ ಕಲ್ಪಿಸಿತು (ಅಂದರೆ ಸರ್ಕಾರ ವಿನಾಯಿತಿ ಕೊಡದ ಎಲ್ಲರೂ ಶುಲ್ಕ ಪಾವತಿಸಬೇಕಾಗುತ್ತದೆ ).  ತಜ್ಞರ ಕಾರ್ಯಪಡೆಯೊಂದಿಗೆ ಸಮಾಲೋಚಿಸಿದ ನಂತರ ಪ್ರತಿ ಪರೀಕ್ಷೆಗೆ 4,500 ರೂ ನಿಗದಿ ಪಡಿಸಿರುವುದಾಗಿ ನ್ಯಾಯಾಲಯದಲ್ಲಿ ವಾದಿಸಲಾಯಿತು. ಆದಾಗ್ಯೂ, ಪತ್ರಿಕಾ ವರದಿಗಳು ತೋರಿಸಿದಂತೆ, ಅಂತಹ ಯಾವುದೇ ಸಮಾಲೋಚನೆ ನಡೆದಿಲ್ಲ ಮತ್ತು ವಾಸ್ತವವಾಗಿ ಸ್ವಹಿತಾಸಕ್ತಿವುಳ್ಳ ಕೆಲವೇ ಕೆಲವು ವ್ಯಕ್ತಿಗಳ ಜೊತೆ ಸಮಾಲೋಚಿಸಿ  4,500 ರೂ ನಿಗದಿಪಡಿಸಲಾಗಿದೆ ಎಂದು ಮೇಲ್ನೊಟಕ್ಕೆ ಕಂಡುಬರುತ್ತದೆ.

 

ಈಗ, ನಾವು ಪ್ರಬಂಧದಲ್ಲಿ ವ್ಯಾಪಕವಾಗಿ ಚರ್ಚಿಸಿದಂತೆ, ಉಚಿತ ಪರೀಕ್ಷೆಯ ವಿಷಯವನ್ನು ಒಂದು ಕ್ಷಣ ಬದಿಗಿಡೋಣ – ಸುಪ್ರೀಂ ಕೋರ್ಟ್ ಬೆಲೆ ನಿಗದಿಯಂತಹ ಸಣ್ಣ ಪುಟ್ಟ ವಿಷಯಗಳಿಗೆ ಸಮಯ ಕೊಡುವ ನಿರೀಕ್ಷೆಯೇ? ಖಂಡಿತವಾಗಿಯೂ ಇಲ್ಲ. ಆದರೆ, ಸರ್ಕಾರವು ಬೆಲೆಯನ್ನು ನಿಗದಿಪಡಿಸುವಲ್ಲಿ ತನ್ನದೇ ಆದ ತಜ್ಞರ ಸಮಿತಿಯನ್ನು ಸಂಪರ್ಕಿಸಿಲ್ಲ ಎಂಬ ಆರೋಪವಿದೆ. ಖಂಡಿತವಾಗಿಯೂ ಇದು ಸಾಂವಿಧಾನಿಕ ವಿಷಯವಲ್ಲ, ಇದು ಆಡಳಿತಾತ್ಮಕ ಕಾನೂನಿನ ಸಮಸ್ಯೆಯಾಗಿದೆ ಮತ್ತು ಮನಸ್ಸಿಗೆ ಬಂದಂತೆ ಮಾಡಿದ ಕೆಲಸವನ್ನು ತೋರಿಸುತ್ತದೆ. ಬೆಲೆಯ ಬಗ್ಗೆ ಸಮಾಲೋಚಿಸಿದ ವ್ಯಕ್ತಿಗಳು ಈ ವಿಷಯದಲ್ಲಿ ಸ್ವಹಿತಾಸಕ್ತಿ ಹೊಂದಿದ್ದಾರೆ ಎಂಬ ಅಂಶವು ಸಂಬಂಧಿತ ಸಂಗತಿಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ? ಹೌದು – ಇದು ಮತ್ತೊಮ್ಮೆಆಡಳಿತಾತ್ಮಕ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಸರ್ಕಾರಗಳು ಮನಸ್ಸಿಗೆ ಬಂದಂತೆ ನಿರ್ಧಾರಗಳನ್ನು ತೆಗೆದುಕೊಂಡಿರುವು ಕಂಡುಬರುತ್ತದೆ . ಸಾಂವಿಧಾನಿಕ ಕಾನೂನಿನ ಕ್ಷೇತ್ರವನ್ನು ನೊಡೋಣ,  ಬಜೆಟ್ ದೃಷ್ಟಿಯಿಂದ ಸಾಕಷ್ಟು  ಉಚಿತ ಪರೀಕ್ಷೆಗಳನ್ನು(ಕಟ್ಟುನಿಟ್ಟಾದ ಐಸಿಎಂಆರ್ ಮಾರ್ಗಸೂಚಿಗಳ ಅಡಿಯಲ್ಲಿಯೂ ಸಹ)ನಡೆಸಲು ಅಡ್ಡಿಯಾಗುತ್ತದೆ ಎಂಬುದು ಸರ್ಕಾರದ ಅಭಿಪ್ರಾಯವಿದ್ದರೆ, ಖಂಡಿತವಾಗಿಯೂ ಆ ಅಭಿಪ್ರಾಯವನ್ನು ಹಣಕಾಸಿನ ಆಧಾರದ ಮೇಲೆ ಸ್ಥಾಪಿಸಲಾಗಿದೆಯೇ? ಹಣಕಾಸಿನ ವಿಚಾರಗಳಲ್ಲಿ ಸರ್ಕಾರಕ್ಕಿರುವ ಬುಧಿವಂತಿಕೆಯಿಂದಾಗಿ ಕೋರ್ಟು ಈ ವಿಚಾರದಲ್ಲಿ ಬದಲಿ ವ್ಯವಸ್ಥೆಯಾಗಿ ಕೆಲಸ ಮಾಡುವುದಿಲ್ಲ, ಆದರೆ ಸಾಂವಿಧಾನಿಕ ಹಕ್ಕುಗಳ ದೃಷ್ಟಿಯಿಂದ ನ್ಯಾಯಲಯ ಉಚಿತ ಪರೀಕ್ಷೆಗಳಿಗೂ ಮತ್ತು  ಹೆಚ್ಚು ಪರೀಕ್ಷೆ ನಡೆಸಲು ಇರುವ ತೊಡಕಿನ ಸಂಬಂಧವನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಸರ್ಕಾರವನ್ನು ಪ್ರಶ್ನಿಸಬಹುದಾಗಿದೆ. ಸರ್ಕಾರದಿಂದ ಆಗದ ಅಥವಾ ಮೀರಿದ ಯಾವುದನ್ನೂ ಈಗ ಕೇಳುತ್ತಿಲ್ಲ.  ಸರಳವಾಗಿ – ಇದು  ಸಾರ್ವಜನಿಕ ವೇದಿಕೆಯಲ್ಲಿ ಇರಬೇಕಾದ ಮೂಲಭೂತ ಸಾರ್ವಜನಿಕ ಹೊಣೆಗಾರಿಕೆ.

 

ಆದರೆ, ನಾವು ನೋಡಿದಂತೆ, ನ್ಯಾಯಪೀಠವು ಇದಾವುದನ್ನೂ ಮಾಡಲಿಲ್ಲ. ಅದು ಏನು ಮಾಡಿದೆ ಎಂದರೆ ಎರಡು ಅತ್ಯಂತ ರಹಸ್ಯವಾದ ಆದೇಶಗಳನ್ನು ರವಾನಿಸಿದೆ – ಅವುಗಳಲ್ಲಿ ಒಂದು ಪರೀಕ್ಷೆಯನ್ನು ಉಚಿತಗೊಳಿಸಿದೆ (ಯಾವುದೇ ವಿವರಗಳಿಲ್ಲದೆ), ಮತ್ತು ಎರಡನೆಯದು ಮೊದಲನೆಯದರ ಹಿಮ್ಮೆಟ್ಟಿ ಖಾಸಗಿ ಲ್ಯಾಬ್‌ಗಳು ಮತ್ತು ಸರ್ಕಾರಕ್ಕೆ ಸಂಪೂರ್ಣ ಸ್ವತಂತ್ರವನ್ನುನೀಡಿತು (ಈಗಾಗಲೇ ಸರ್ಕಾರದ ವಿಮೆಯಿಂದ ಒಳಗೊಳ್ಳುವ ವ್ಯಕ್ತಿಗಳ ಒಂದು ವರ್ಗವನ್ನು ಹೊರತುಪಡಿಸಿ). ದುರದೃಷ್ಟವೆಂದರೆ, ಚುನಾಯಿತ ಸಂಸ್ಥೆಳ ನೀತಿಗಳ ನಿಯಮಗಳಲ್ಲಿ  ನ್ಯಾಯಾಂಗ  ಅಗೌರವ ತೋರುವ ಪ್ರಶ್ನೆಯಲ್ಲ ಆದರೆ ಸರ್ಕಾರದ ಹೊಣೆಗಾರಿಕೆಯನ್ನು ಅದರ ಕಾರ್ಯಗಳನ್ನು, ಆಡಳಿತಾತ್ಮಕ ವೈಚಾರಿಕತೆಯ ಮೂಲಭೂತ ಮಾನದಂಡಗಳನ್ನು, ಪ್ರಶ್ನಿಸಬೇಕಾದ ಕೋರ್ಟು ತನ್ನ ಪಾತ್ರವನ್ನು ತ್ಯಜಿಸಿರುವುದು.

ಲಾಕ್‌ಡೌನ್‌ನ ವಾರಗಳಲ್ಲಿ ಇದೇ ರೀತಿಯ ಪದತ್ಯಾಗವನ್ನು ಮಂಡಳಿಯಲ್ಲಿ ಕಾಣಬಹುದು: ಎಲ್ಲರಿಗೂ ತಿಳಿದಿರುವಂತೆ, ವಲಸಿಗರ ವಿಷಯವು ಮೊದಲು ಸುಪ್ರೀಂ ಕೋರ್ಟ್‌ನ ಮುಂದೆ ಬಂದಾಗ, ಎಲ್ಲಾ ವಲಸಿಗರು ದಿಗ್ಬಂಧನದಲ್ಲಿದ್ದು ಹಾಗು  ನಿರಾಶ್ರಿತ ಶಿಬಿರಗಳಲ್ಲಿ ಸೂಕ್ತವಾಗಿ ನೋಡಿಕೊಳ್ಳಲಾಗುತ್ತದೆ ಎಂಬ ಸಾಲಿಸಿಟರ್ ಜನರಲ್ ಹೇಳಿಕೆಯನ್ನು ನ್ಯಾಯಾಲಯವು ಒಪ್ಪಿಕೊಂಡಿತು.ಅದರ ನಂತರದ ಬಹು ವರದಿಗಳು ಅದು ನಿಜವಲ್ಲ ಎಂದು ತೋರಿಸಿಕೊಟ್ಟಿವೆ. ಆದ್ದರಿಂದ ನಮ್ಮ ಮುಂದಿರುವುದು,  ನ್ಯಾಯಾಲಯವು  ಸರ್ಕಾರದ ನೀತಿನಿಯಮಗಳಲ್ಲಿ ಹಸ್ತಕ್ಷೇಪ ಮಾಡದಿರುವುದಲ್ಲ, ಆದರೆ ತನ್ನ ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ತನ್ನದೇ ಆದ ಕಾನೂನು ಮಾನದಂಡಗಳಿಗೆ ಬದ್ಧವಾಗಿದೆಯೇ ಎಂಬುದರ ಬಗ್ಗೆ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಲು  ನ್ಯಾಯಾಲಯವು ವಿಫಲವಾಗಿರುವುದು. ಉದಾಹರಣೆಗೆ,  ಅಂಕಿ ಅಂಶಗಳಿಂದ ತುಂಬಿದ ವಿವರವಾದ ವರದಿಗಳು ವಲಸೆ ಕಾರ್ಮಿಕರ ಸಂಕಷ್ಟವನ್ನು ನಿವಾರಿಸಲು ಬಳಸಲಾಗದ ಕಾರ್ಮಿಕ ಕಲ್ಯಾಣ ಸೆಸ್ ರೂಪದಲ್ಲಿ ರಾಜ್ಯ ಸರ್ಕಾರಗಳು ಈಗಾಗಲೇ ಹಲವಾರು ಸಾವಿರ ಕೋಟಿ ರೂಪಾಯಿಗಳನ್ನು ತಮ್ಮ ಬಳಿ ಹೊಂದಿವೆ ಎಂದು ತೋರಿಸುತ್ತದೆ; ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ರೀತಿಯ ಉದ್ದೇಶಗಳಿಗಾಗಿ ನಿರ್ದಿಷ್ಟವಾಗಿ ಸಂಗ್ರಹಿಸಲಾದ ಹಣವಿದೆ ಮತ್ತು ಅದನ್ನು ಬಳಸುತ್ತಿಲ್ಲ; ಈ ಬಗ್ಗೆ ಖಂಡಿತವಾಗಿಯೂ  ಸರ್ಕಾರವನ್ನು ಕೇಳುವುದು ನ್ಯಾಯಾಲಯದ ಬಾಧ್ಯತೆಯಾಗಿದೆ, ವಿಶೇಷವಾಗಿ ಅದರ ಮೊದಲ ಸಮರ್ಥನೆಯು ಹಣದ ಕೊರತೆಯಾಗಿದ್ದರೆ?

 

ಬದಲಾಗಿ, ನಾವು ನೋಡಿದ ನ್ಯಾಯಾಧೀಶರು ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸುವುದು, “ತೃಪ್ತಿ” ವ್ಯಕ್ತಪಡಿಸುವುದು ಮತ್ತು ಎಷ್ಟು ಒಳ್ಳೆಯ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳುವುದು. ನ್ಯಾಯಾಂಗವು ಸರ್ಕಾರದ ಅಧೀನ ವಿಭಾಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿರುವ ದೇಶಕ್ಕೆ ಇದು ಸೂಕ್ತವಾಗಬಹುದು, ದೇಶದ ಆಡಳಿತದ ದೃಷ್ಟಿಯಿಂದ ನ್ಯಾಯಾಂಗವು ಸೇರಿದಂತೆ ಮೂರು ಭಾಗಗಳಾಗಿ ವಿಭಾಗಿಸಿಕೊಂಡಿರುವ  ದೇಶಕ್ಕೆ ಇದು ಸೂಕ್ತವಲ್ಲ. ಏಕೆಂದರೆ ಸರ್ಕಾರವು ನೀಡುವ ಪ್ರತಿಯೊಂದು ಹೇಳಿಕೆಯನ್ನು ಅದರಂತೆಯೇ ತೆಗೆದುಕೊಂಡರೆ ನೀವು ಯಾವುದನ್ನೂ “ಪರಿಶೀಲಿಸುತ್ತಿಲ್ಲ” ಮತ್ತು ಆಡಳಿತದ ಸಮತೋಲನವನ್ನು ಕಾಪಾಡುತ್ತಿಲ್ಲ ಎಂದಾಗುತ್ತದೆ.  ಕೆಲವು ಸರಳ ಪ್ರಶ್ನೆಗಳು (ಉಚಿತ ಪರೀಕ್ಷಾ ಪ್ರಕರಣದಂತೆ) ಆಂತರಿಕ ಅಸಂಗತತೆಯನ್ನು ಬಹಿರಂಗಪಡಿಸುತ್ತವೆ.

 

ಒಟ್ಟಾರೆಯಾಗಿ ಹೇಳುವುದಾದರೆ: ಗಣರಾಜ್ಯ ಪ್ರಜಾಪ್ರಭುತ್ವದ ಅಡಿಯಲ್ಲಿ, ಪರಿಶೀಲಿತ ಮತ್ತು ಸಮತೋಲನ ವ್ಯವಸ್ಥೆಗೆ ಬದ್ಧವಾಗಿದೆ, ಹೊಣೆಗಾರಿಕೆಯನ್ನು ಹಂಚಿಕೊಳ್ಳಲಾಗಿದೆ. ಒಂದು ರೀತಿಯ ಸೀಸರಿಸಂನಂತಲ್ಲದೆ(ಇದು ಜುಲಿಯಸ್ ಸೀಸರ್‍ನ ರಾಜಕೀಯ ಪರಿಕಲ್ಪನೆ), ಅಲ್ಲಿ ಹೊಣೆಗಾರಿಕೆಯು ಸತತ ಮೆಚ್ಚುಗೆಗೆ ಸೀಮಿತವಾಗಿದೆ, ಗಣರಾಜ್ಯ ಪ್ರಜಾಪ್ರಭುತ್ವವು ಹೊಣೆಗಾರಿಕೆಯನ್ನು ನಿರಂತರ ಪರಿಕಲ್ಪನೆಯೆಂದು ಪರಿಗಣಿಸುತ್ತದೆ; ನಿರ್ದಿಷ್ಟವಾಗಿ ಹೇಳುವುದಾದರೆ, ಸ್ಥಾಪಿತ ಕಾನೂನು ಮಾನದಂಡಗಳ ಅಡಿಯಲ್ಲಿ ಸರ್ಕಾರವು ಸಂಸತ್ತು ಮತ್ತು ಸ್ವತಂತ್ರ ನ್ಯಾಯಾಂಗಕ್ಕೆ ಜವಾಬ್ದಾರನಾಗಿರುತ್ತದೆ. ಕೋವಿಡ್ -19 ಬಿಕ್ಕಟ್ಟಿನ ನಿರ್ವಹಣೆಯು ಸಂಸತ್ತನ್ನು ಒಟ್ಟಾರೆಯಾಗಿ ಸಮೀಕರಣದಿಂದ ಹೊರಗಿಟ್ಟಿದೆ, ಉಳಿದದ್ದು ಮತ್ತೆರಡು ಅಂಗಗಳು ಮಾತ್ರ: ಸರ್ಕಾರ ಮತ್ತು ನ್ಯಾಯಾಂಗ. ಅಂತಹ ಪರಿಸ್ಥಿತಿಯಲ್ಲಿ, ಸ್ವತಂತ್ರ ನ್ಯಾಯಾಂಗವು ಸರ್ಕಾರವನ್ನು ಹೊಣೆಗಾರಿಕೆಗೆ ಗುರಿಮಾಡುವ ಪಾತ್ರವನ್ನು ವಹಿಸಬೇಕೆಂದು ಯಾರೊಬ್ಬರೂ ನಿರೀಕ್ಷಿಸುತ್ತಾರೆ: ನಿರ್ದಿಷ್ಟವಾಗಿ, ಆಡಳಿತವನ್ನು ಕೈಗೆತ್ತಿಕೊಳ್ಳಬಾರದು ಅಥವಾ ನೀತಿ ನಿಯಮಗಳ ಆಯ್ಕೆಗಳನ್ನು ಮಾಡಬಾರದು (ಉದಾಹರಣೆಗೆ, ಲಾಕ್‌ಡೌನ್ ಅನ್ನು ನಿರ್ಧರಿಸುವುದು, ಅಥವಾ ಅದರ ಉದ್ದ ), ಆದರೆ (ಅ) ಹಕ್ಕುಗಳನ್ನು ಗೌರವಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಮತ್ತು (ಆ) ದೂರದೃಷ್ಟಿಯ ಕ್ರಮಗಳನ್ನು ಕನಿಷ್ಠ ಕೆಲವು ನ್ಯಾಯಸಮ್ಮತವಾದ ತಾರ್ಕಿಕ ಕ್ರಿಯೆಯಿಂದ (ಅದರ ಆಡಳಿತಾತ್ಮಕ ಕಾನೂನು ಅರ್ಥದಲ್ಲಿ)  ಮಾಡಲಾಗಿದೆಯೇ ಎಂಬುದನ್ನು ಪರಶೀಲಿಸುವುದು. ಆದಾಗ್ಯೂ, ಈ ಎರಡೂ ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಕ್ರಮಗಳು ನಿರಾಶಾದಾಯಕವಾಗಿವೆ.

 

One comment to “ಕರೋನ ವೈರಸ್ ಮತ್ತು ಸಂವಿಧಾನ: ಹೊಣೆಗಾರಿಕೆಯ ಮಾದರಿಗಳು”
  1. ಅವುವಾದ ಅಚ್ಚುಕಟ್ಟಾಗಿದೆ.. ತ್ರಿಲೋಚನರ ಕನ್ನಡದ ಪದ ಪ್ರಯೊಗ ಸಮಂಜಸವಾಗಿದೆ. ಮೂಲ ಪ್ರಬಂಧದ ಆಶಯವನ್ನ ಬಲ ಪಡಿಸಿದ್ದೀರ 👍🏻

ಪ್ರತಿಕ್ರಿಯಿಸಿ