ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೩ : ‘ಮೈಸೂರಿನವರು, ಹೊರಗಿನವರು’ ಮತ್ತು ಕನ್ನಡ ಸಂಗೀತ

ಮೈಸೂರಿಗರು ಮತ್ತು ಹೊರಗಿನವರು ಎನ್ನುವ ಭೇದ ಮೂಲತಃ ಅರಸರ ಕಾಲದ ಉದ್ಯೋಗ ನೀತಿಯಿಂದ ಬಂದದ್ದು. ಆದರೆ ಸಂಗೀತದ ಕ್ಷೇತ್ರದಲ್ಲೂ ಈ ಭೇದ ತಕ್ಕಮಟ್ಟಿಗೆ ಕಾಣಿಸಿಕೊಂಡದ್ದೂ ನಾಲ್ವಡಿಯವರ ಸಮಯದಲ್ಲೆ. ಆದರೆ ಕನ್ನಡದಲ್ಲಿ ಸಂಗೀತಕ್ಕೆ ಬೇಡಿಕೆ ಬರಲು ಇತರೆ ಕಾರಣಗಳೂ ಇದ್ದುವು: ದೇವದಾಸಿಯರ ನಿರ್ಗಮನ, ನಾಟಕ ಕಂಪೆನಿಗಳ ಉಗಮ, ಇತ್ಯಾದಿ. ಈ ಕೆಲವು ಸಂಗತಿಗಳನ್ನು ಪ್ರಸ್ತುತ ಸಂಚಿಕೆಯಲ್ಲಿ ನೋಡೋಣ..

ಭಾಗ ೧ : ೧೯ನೇ ಶತಮಾನದ ಬೆಳವಣಿಗೆಗಳು ಮತ್ತು ಕರ್ನಾಟಕದ ಅಸ್ಮಿತೆ – https://ruthumana.com/2020/05/02/carnatic-music-kannada-and-kannadigas-part-1

ಭಾಗ ೨ : ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ –  https://ruthumana.com/2020/05/02/carnatic-music-kannada-and-kannadigas-part-2/

ಹತ್ತೊಂಬತ್ತನೇ ಶತಮಾನದ ಕೊನೆಯಿಂದ ಬ್ರಾಹ್ಮಣೇತರರ ಚಳುವಳಿ ಶುರುವಾಗುವ ತನಕ ಮೈಸೂರಿನಲ್ಲಿ ನಡೆಯುತ್ತಿದ್ದ ದೊಡ್ಡ ಚರ್ಚೆಯೆಂದರೆ ಮೈಸೂರಿನ ಆಡಳಿತ ಸೇವೆಗಳು ಮೈಸೂರಿನವರಿಗೆ ಮಾತ್ರ ಮೀಸಲಾಗಿರಬೇಕೆ; ಅಥವಾ ಈ ಸೇವೆಗಳಲ್ಲಿ ಸೇರಲು ‘ಹೊರಗಿನವರು’ ಕೂಡಾ ಪರೀಕ್ಷೆ ಬರೆಯಬಹುದೇ; ಅಥವಾ ಈ ಪರೀಕ್ಷೆಗಳೇ ಅನಗತ್ಯವೋ ಎಂಬ ವಿಷಯದ ಬಗ್ಗೆ. ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಆಡಳಿತ ಸೇವೆ ಮತ್ತು ಇತರೆ ಆಧುನಿಕ ಹುದ್ದೆಗಳಲ್ಲಿದ್ದವರು ಈ ವಿಷಯಗಳ ಕುರಿತಂತೆ ಎರಡು ಪಕ್ಷಗಳಾಗಿ ಒಡೆದು ಹೋಗಿದ್ದರು. ಇವರ ನಡುವಿನ ವಿವಾದ ಬಹುಪಾಲು ‘ಮೈಸೂರು’ ಬ್ರಾಹ್ಮಣರು ಮತ್ತು ‘ಮದ್ರಾಸಿ’ ಬ್ರಾಹ್ಮಣರ ಮಧ್ಯೆ ಆಧುನಿಕ ಅವಕಾಶಗಳ ಬಗ್ಗೆ ಇದ್ದಂಥ ವಿವಾದ. ಮದರಾಸಿನ ಅಥವಾ ತಮಿಳುನಾಡಿನ ಅನೇಕ ಬ್ರಾಹ್ಮಣರು ಮೈಸೂರಿನಲ್ಲಿ ದಿವಾನ್ ಅಥವಾ ಇನ್ನಿತರ ಉನ್ನತ ಹುದ್ದೆಗಳನ್ನು ಹೊಂದಿದ್ದರಿಂದ ಅನೇಕ ನೆಂಟರು, ಸ್ನೇಹಿತರು ಮತ್ತು ತಮಗೆ ಬೇಕಾದವರನ್ನು ತಮಿಳುನಾಡಿನಿಂದ ಕರೆಸಿಕೊಂಡು ತಮ್ಮ ಕಛೇರಿಗಳಲ್ಲಿ ಕೆಲಸಕ್ಕಿಟ್ಟುಕೊಂಡಿರುವುದು ಕಾಣುತ್ತದೆ. ಅಧಿಕಾರೀವರ್ಗದ ಅತ್ಯುನ್ನತ ಹುದ್ದೆಗಳು ಮದ್ರಾಸಿನಲ್ಲಿ ಆಧುನಿಕ ಶಿಕ್ಷಣ ಪಡೆದ ಬ್ರಾಹ್ಮಣ ವರ್ಗಕ್ಕೇ ಹೋಗುತ್ತಿತ್ತು.

ಬ್ರಾಹ್ಮಣೇತರ ಚಳುವಳಿ (Non-Brahmin Movement) ಶುರುವಾದಾಗ ಮತ್ತು ಬ್ರಾಹ್ಮಣೇತರರು ತಮಗೆ ಆಧುನಿಕ ಅವಕಾಶಗಳಲ್ಲಿ ಮೀಸಲಾತಿಯ ಬಗ್ಗೆ ಮಾತನಾಡಲಾರಂಭಿಸಿದಾಗ ಮೈಸೂರು-ಮದರಾಸೀ ಬ್ರಾಹ್ಮಣರ ಘರ್ಷಣೆ ಕಡಿಮೆಯಾಯಿತು! ಆದರೆ ಈ ಗುದ್ದಾಟದ ಪರಿಣಾಮಗಳನ್ನು ನಂತರವೂ ಕಾಣಬಹುದಾಗಿತ್ತು. ಉದ್ಯೋಗ ಭಡ್ತಿಯ ಸಂದರ್ಭದಲ್ಲೂ ಈ ಪ್ರಶ್ನೆ ತಲೆಯೆತ್ತುತಿತ್ತು (ಮೂರ್ತಿರಾಯರ ಸಂಜೆಗಣ್ಣಿನ ಹಿನ್ನೋಟದಲ್ಲಿ ಈ ಸಂಗತಿಗಳನ್ನು ಗಮನಿಸಬಹುದು). ಈ ರೀತಿ ‘ಪರಕೀಯ’ರ ಪ್ರಶ್ನೆಯು ಮೈಸೂರಿನ ನೌಕರರು ಮತ್ತು ಉದ್ಯೋಗಾರ್ಥಿಗಳನ್ನು ಕಾಡಿದುದಲ್ಲದೆ ಕರ್ನಾಟಕ ಸಂಗೀತದ ಸಂದರ್ಭದಲ್ಲೂ ಇದು ಕಾಣಿಸಿಕೊಂಡಿತ್ತು. ಮೈಸೂರಿನ ಸಂಗೀತಗಾರರಿಗೇನೂ ಈ ವಿಷಯದಲ್ಲಿ (ಪರಕೀಯ ಅಥವಾ ಸ್ಥಳೀಯ) ನಿಷೇಧಗಳಿರಲಿಲ್ಲ. ಅವರು ತಮಿಳುನಾಡಿಗೆ ಹೋಗುವುದು, ಕಛೇರಿಗಳನ್ನು ನಡೆಸುವುದು, ಸನ್ಮಾನ ಸ್ವೀಕರಿಸುವುದು, ಹಾಗೂ ಅಲ್ಲಿನ ಕಲಾವಿದರನ್ನು ಕರೆಸಿಕೊಳ್ಳುವುದು ವಾಡಿಕೆಯಾಗಿತ್ತು. ಆದರೆ ಆಸ್ಥಾನ-ವಿದ್ವಾನರಲ್ಲಿ ಆಗಾಗ ಒಳಸಂಚುಗಳು ಹಾಗೂ ಘರ್ಷಣೆಗಳು ನಡೆಯುತ್ತಿದ್ದುದು ತಿಳಿದುಬರುತ್ತದೆ. ಉದಾಹರಣೆಗೆ ಬಿಡಾರಂ ಕೃಷ್ಣಪ್ಪನವರಿಗೆ ತಮಿಳುನಾಡಿನಲ್ಲಿ ‘ಗಾಯನ ಶಿಖಾಮಣಿ’ ಎಂಬ ಬಿರುದು ಕೊಟ್ಟಾಗ ತಿರುವೈಯ್ಯಾರಿನ ಸುಬ್ರಹ್ಮಣ್ಯ ಅಯ್ಯರ್ ಎಂಬುವವರು ಕೃಷ್ಣಪ್ಪನವರಿಗೆ ಪತ್ರ ಬರೆದು ಸಂಗೀತಗಾರರ ಸಭೆಯನ್ನು ಸೇರಿಸಿ ಅಲ್ಲಿ ತಮ್ಮ ಕಲೆಯ ಪ್ರದರ್ಶನ ಮಾಡಿದರೆ ಮಾತ್ರ ಅವರ ಬಿರುದಿಗೆ ಬೆಲೆ ಬರುತ್ತದೆ ಎಂದು ಸವಾಲೆಸೆದರು. ಸಂಗೀತ ವಿಮರ್ಶಕ ಬಿ.ವಿ.ಕೆ. ಶಾಸ್ತ್ರಿಯವರ ಪ್ರಕಾರ ಈ ಪತ್ರ ಕನ್ನಡದಲ್ಲಿದ್ದು ರುಜು ಮಾತ್ರ ತಮಿಳಿನಲ್ಲಿತ್ತು. ಕೆಲವರ ಅಭಿಪ್ರಾಯದಂತೆ ಇದರಲ್ಲಿ ಮೈಸೂರಿನವರ ಕೈವಾಡವೇ ಇದ್ದಿರಬೇಕು ಎನ್ನುತ್ತಾರೆ ಅವರು. ಹೀಗೆ ಮೈಸೂರಿನ ಮೇಲ್ಜಾತಿಯ ಸಂಗೀತ ಶ್ರೋತೃಗಳಲ್ಲಿ ಉದ್ಯೋಗದ ಹಾಗೂ ಇತರ ಆಧುನಿಕ ಅವಕಾಶಗಳ ಬಗ್ಗೆ ಇದ್ದ ಆತಂಕಗಳು ಸಂಗೀತಗಾರರ ವೈಯಕ್ತಿಕ ಆತಂಕದೊಂದಿಗೆ ಕೂಡಿಕೊಳ್ಳುತ್ತಿದ್ದವು. ಹೀಗೆ ಉದ್ಯೋಗಾಕಾಂಕ್ಷಿಗಳಲ್ಲಿ ಸಾಮಾನ್ಯವಾಗಿದ್ದ ತಮಿಳು-ವಿರೋಧೀ ಸಂಕಥನ (discourse) ವನ್ನು ಹಲವು ಸಂಗೀತಗಾರರು ತಮ್ಮ ಕ್ಷೇತ್ರದಲ್ಲೂ ವೈಯಕ್ತಿಕ ನೆಲೆಯಲ್ಲಿ ಉಪಯೋಗಿಸಿದ ಸಾಧ್ಯತೆಗಳು ದಟ್ಟವಾಗಿದೆ. ಆದರೂ ರಾಜಪ್ರಭುತ್ವವು ಈ ವಿಚಾರವನ್ನು ಪೂರ್ಣವಾಗಿ ನಿರ್ಲಕ್ಷಿಸಿತು ಮತ್ತು ನಿರ್ಲಕ್ಷಿಸಬಹುದಾದ ಸ್ಥಿತಿಯಲ್ಲಿತ್ತು. ಸಾರ್ವಜನಿಕರ ಒತ್ತಡ ಅಷ್ಟೊಂದು ಇಲ್ಲದ ಕಾರಣ (ಮೇಲ್ಜಾತಿಗಳ ಸಂಘರ್ಷವಾಗಿ ಉಳಿದಿದ್ದರಿಂದ) ಮತ್ತು ವೈಯಕ್ತಿಕವಾಗಿ ಸಂಗೀತಗಾರರು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲವಾದ್ದರಿಂದ ಈ ತರಹದ ನಿರ್ಲಕ್ಷ ಸಹಜವಾಗಿತ್ತು. ಆದರೆ ಮೂಲತಃ ಉದ್ಯೋಗದ ವಿಷಯದಲ್ಲಿದ್ದ ಕನ್ನಡಿಗ-ತಮಿಳಿಗ ಎಂಬ ಭಿನ್ನತೆ ಕನ್ನಡ ಚಳುವಳಿಯ ವಲಯ ಸೇರಿ ಅರುವತ್ತು-ಎಪ್ಪತ್ತರ ದಶಕದಲ್ಲಿ ಕನ್ನಡ ಸಂಗೀತಗಾರ-ತಮಿಳು ಸಂಗೀತಗಾರ; ಕನ್ನಡ ಕೃತಿಗಳು-ಸಾಂಪ್ರದಾಯಿಕ ಕೃತಿಗಳು ಎಂಬ ಭಿನ್ನತೆ ಹೆಚ್ಚಿನ ಮುನ್ನೆಲೆಗೆ ಬಂತು. ಈ ವಿಷಯ ಮತ್ತೆ ನೋಡೋಣ.

ಆದರೆ ಗಣ್ಯ (elite) ಶೋತೃವರ್ಗಕ್ಕೆ ಭಾಷೆಯ ವಿಷಯದಲ್ಲಿ ದೊಡ್ಡ ಅಸಮಾಧಾನವೇನೂ ಇರಲಿಲ್ಲ. ಇಷ್ಟಕ್ಕೂ ಕರ್ನಾಟಕ ಸಂಗೀತದ ಭಾಷೆ ಬಹುತೇಕವಾಗಿ ತೆಲುಗು ಅಥವಾ ಸಂಸ್ಕೃತವಾಗಿತ್ತು. ಸಾಂಪ್ರದಾಯಿಕ ಶ್ರೋತೃಗಳು ಈ ಭಾಷೆಗಳಲ್ಲೇ ಕೃತಿಗಳನ್ನು ಆಸ್ವಾದಿಸುತ್ತಿದ್ದರು. ಆದರೆ ಇಪ್ಪತ್ತನೇ ಶತಮಾನದ ಎರಡು, ಮೂರು ಹಾಗೂ ನಾಲ್ಕನೇ ದಶಕದಲ್ಲಿ ಶ್ರೋತೃಗಣ ಹಿಗ್ಗಿದಂತೆಲ್ಲಾ ಕನ್ನಡದ ಹಾಡು/ಕೃತಿಗಳಿಗೆ ನಿಧಾನಕ್ಕೆ ಬೇಡಿಕೆ ಹೆಚ್ಚಾಯಿತು. ಬಿಡಾರಂ ಕೃಷ್ಣಪ್ಪನವರು ಈ ಪರಿಸ್ಥಿತಿಗೆ ತನ್ನದೇ ಉತ್ತರ ಹುಡುಕಿಕೊಂಡರು. ಶೋತೃಗಳು ಕನ್ನಡದಲ್ಲಿ ಸಂಗೀತ ಕಛೇರಿಗೆ ಬೇಡಿಕೆ ಇಟ್ಟಾಗಲೆಲ್ಲಾ ಅವರು ದಾಸ ಸಾಹಿತ್ಯದ ಹಾಡುಗಳನ್ನು ಶಾಸ್ತ್ರೀಯ ರಾಗಗಳಿಗೆ ಹೊಂದಿಸಿ ಕಛೇರಿಗಳಲ್ಲಿ ಬಳಸತೊಡಗಿದರು. ಇಡೀ ಕಛೇರಿಗಳನ್ನು ದಾಸ ಸಾಹಿತ್ಯದಿಂದಲೇ ಬಹಳಷ್ಟು ಸಲ ಕಟ್ಟಿಕೊಟ್ಟವರು ಕೃಷ್ಣಪ್ಪನವರು. ಇತರ ಸಂಗೀತಗಾರರಲ್ಲಿ ಚಿಕ್ಕರಾಮರಾವ್, ಚಿಂತಲಪಲ್ಲಿ ವೆಂಕಟರಾವ್, ಸುಬ್ಬರಾಮಯ್ಯ, ವೆಂಕಟೇಶ್ ಅಯ್ಯಂಗಾರ್ ಮುಂತಾದವರು ದಾಸ ಸಾಹಿತ್ಯವನ್ನು ತಮ್ಮ ಸಂಗೀತ ಕಛೇರಿಗಳಲ್ಲಿ ಬಳಸತೊಡಗಿದರು (ವಿ. ರಾಮರತ್ನಂ ಅವರ ಮೈಸೂರು ಒಡೆಯರು ಮತ್ತು ಕರ್ನಾಟಕ ಸಂಗೀತ ಎಂಬ ಪುಸ್ತಕದಲ್ಲಿ ಈ ವಿಷಯವನ್ನು ನೋಡಬಹುದು). ಕೃಷ್ಣಪ್ಪನವರ ಶಿಷ್ಯರಾದ ದೇವೇಂದ್ರಪ್ಪನವರು ದಾಸ ಸಾಹಿತ್ಯವಲ್ಲದೆ ವಚನಗಳಿಗೂ ರಾಗ ಸಂಯೋಜಿಸಿ ಹಾಡತೊಡಗಿದರು. ದೇವೇಂದ್ರಪ್ಪನವರು ಮತ್ತು ಅವರ ಶಿಷ್ಯರಾದ ಚಕ್ರಕೋಡಿ ನಾರಾಯಣಶಾಸ್ತ್ರಿಗಳು ತಮ್ಮ ಕಛೇರಿಗಳಲ್ಲಿ ಬೇರೆ ಹಾಡುಗಳ ಜೊತೆ ವಚನಗಳನ್ನೂ ಹಾಡತೊಡಗಿದರು. ದೇವೇಂದ್ರಪ್ಪನವರ ಪ್ರಕಾರ 1930ರ ಸುಮಾರಿಗೆ ವಚನಗಳನ್ನು ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಹಾಡಲು ತಮಗೆ ಉತ್ತೇಜನ ನೀಡಿದವರು (1960ರ ಕನ್ನಡ ಚಳುವಳಿ ಹೋರಾಟಗಾರ) ಅ.ನ. ಕೃಷ್ಣರಾಯರು. ನಂತರ ಒಮ್ಮೆ ದೇವೇಂದ್ರಪ್ಪನವರು ಧಾರವಾಡದಲ್ಲಿ ಕಛೇರಿ ನೀಡಿದಾಗ ಅದನ್ನು ಕೇಳಿ ಮಲ್ಲಿಕಾರ್ಜುನ ಮನ್ಸೂರರು ಹಿಂದೂಸ್ಥಾನಿ ಶೈಲಿಯಲ್ಲಿ ವಚನಗಳನ್ನು ಹಾಡಲಾರಂಭಿಸಿದರಂತೆ (ದೇವೇಂದ್ರಪ್ಪನವರು ಶ್ರೀ ಬಸವೇಶ್ವರ ಅಷ್ಟೋತ್ತರ ಶತವಚನಸುಧಾ ಎಂಬ ತಮ್ಮ ಪುಸ್ತಕದಲ್ಲಿ ಈ ವಿಷಯವನ್ನು ಹೇಳುತ್ತಾರೆ). ಈ ರೀತಿಯಲ್ಲಿ ‘ಭಕ್ತಿ’ ಸಾಹಿತ್ಯವೆಂದು ಗುರುತಿಸಲ್ಪಟ್ಟ ಪ್ರಕಾರವನ್ನು ಕಛೇರಿಗಳಲ್ಲಿ ಪ್ರಯೋಗಿಸುವ ಕ್ರಮ ಇಪ್ಪತ್ತು ಹಾಗೂ ಮೂವತ್ತರ ದಶಕದಲ್ಲಿ ಮೈಸೂರಿನಲ್ಲಿ ಆರಂಭವಾಯಿತು.

ಅರಮನೆಗೆ ಸಂಬಂಧಪಟ್ಟ ಶಾಸ್ತ್ರೀಯ ಸಂಗೀತ ಒಂದು ಪ್ರಕಾರವಾದರೆ ಸಾರ್ವಜನಿಕ ಕೇಳುಗರಿಗೆ ತೆರೆದುಕೊಂಡಿದ್ದ ಇತರೆ ಸಂಗೀತ ಪ್ರಕಾರಗಳಿದ್ದವು. ಇವುಗಳಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಹತ್ತಿರವಾಗಿ ದೇವದಾಸಿಯರು ಮತ್ತು ನಟ್ಟುವನಾರರ ಸಂಗೀತವು ದೇವಸ್ಥಾನಗಳಲ್ಲಿ ಎರಡು ಮುಖ್ಯ ಪ್ರಕಾರಗಳಾಗಿದ್ದವು. ಈ ಸಂಗೀತಗಾರರು ಮತ್ತು ಅರಮನೆ ಸಂಗೀತಗಾರರ ನಡುವೆ ನಿರಂತರ ಕೊಡು-ಕೊಳು ಇತ್ತು. ದೇವದಾಸಿ ಪದ್ಧತಿಯ ವಿರುದ್ಧ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ದಕ್ಷಿಣ ಭಾರತದ ಇತರೆ ಭಾಗಗಳಿಗಿಂತ ಮೈಸೂರು ರಾಜ್ಯದಲ್ಲಿ ಬಹು ಬೇಗನೆ (1892-1909) ರೂಪಿಸಲಾಯಿತು. ದಕ್ಷಿಣ ಕರ್ನಾಟಕದಲ್ಲಿ ಶೃಂಗಾರ, ಸಂಗೀತ, ಹಾಗೂ ನೃತ್ಯ ಈ ಮೂರೂ ಅಂಶಗಳನ್ನು ಒಳಗೊಂಡಂತಹ ದೇವದಾಸಿಯರ ಕಲೆ ತಮ್ಮ ಪ್ರಾಮುಖ್ಯತೆಯನ್ನು ಈ ಸಮಯದಲ್ಲಿ ಕಳೆದುಕೊಂಡಿದ್ದು ನಾವು ಗಮನಕ್ಕೆ ತೆಗೆದುಕೊಳ್ಳಬೇಕಾದ ವಿಷಯ. ದೇವದಾಸಿ ಪದ್ದತಿಯನ್ನು ರದ್ದುಪಡಿಸಿದ ಮೊದಲ ಸಂಸ್ಥಾನ ಮೈಸೂರಾಗಿದ್ದು 1891-1911ರ ಅವಧಿಯಲ್ಲಿ ಈ ಸಮೂಹಕ್ಕೆ ಸೇರಿದ್ದೇವೆಂದು ಹೇಳಿಕೊಳ್ಳುವವರ (ಇವರಲ್ಲಿ ದೇವದಾಸಿಯರು ಹಾಗೂ ಅವರ ಪಕ್ಕವಾದ್ಯದವರಾದ ನಟ್ಟುವನಾರರು ಇಬ್ಬರೂ ಸೇರಿದ್ದರು) ಸಂಖ್ಯೆ ಗಣನೀಯವಾಗಿ ಕಡಿಮೆಯಾಗತೊಡಗಿತು. 1891ರಲ್ಲಿ 7,442 ರಲ್ಲಿದ್ದ ಇವರ ಸಂಖ್ಯೆ 1911ರಲ್ಲಿ ಬರೇ 1,745 ಆಗಿ ಬಿಟ್ಟಿತ್ತು. ಈ ಸಂಸ್ಥಾನದಲ್ಲಿದ್ದ ದೇವದಾಸಿಯರು ಕನ್ನಡ, ತೆಲುಗು ಮತ್ತು ತಮಿಳು ಈ ಮೂರೂ ಭಾಷೆಗಳಲ್ಲಿ ಹಾಡಲು ಸಮರ್ಥರಾಗಿದ್ದು ಸಂದರ್ಭಕ್ಕೆ ತಕ್ಕಂತೆ ಅವುಗಳನ್ನು ಬಳಸಿಕೊಳ್ಳುತ್ತಿದ್ದರು. ‘ಜಾವಳಿ’ಗಳೆಂಬ ಸುಂದರವಾದ ಪ್ರಕಾರಗಳನ್ನು ತಮ್ಮ ಪ್ರದರ್ಶನಗಳಲ್ಲಿ ಉಪಯೋಗಿಸುತ್ತಿದ್ದರು. (ಜಾವಳಿಗಳು ಕೃಷ್ಣ ಮತ್ತು ಇತರ ದೇವರುಗಳನ್ನು ಆರಾಧಿಸುವ ಹಾಡುಗಳಾಗಿದ್ದವು. ಹಾಡು ಹಾಡುತ್ತಾ ಸಾಹಿತ್ಯಕ್ಕೆ ತಕ್ಕಂತೆ ಕೊಂಚ ಅಭಿನಯವನ್ನೂ ಮಾಡಿತೋರಿಸುತ್ತಿದ್ದರು. ಈ ಪ್ರದರ್ಶನಗಳಲ್ಲಿ ದೇವರು ಮತ್ತು ಪೋಷಕರ ಸಮೀಕರಣ ಚಾಲಾಕಿಯಾಗಿ ನಡೆಯುತ್ತಿತ್ತು.) ಈ ಸಮೂಹದ ಕ್ಷೀಣತೆಯಿಂದಾಗಿ ಒಟ್ಟಾರೆ ಕನ್ನಡದ ಹಾಡುಗಳ ಕೇಳ್ಮೆಯೂ ಕೂಡ ಕಡಿಮೆಯಾಗಿತ್ತೆಂದು ಊಹಿಸಬಹುದು. ಈ ಹೊತ್ತಿಗೆ ಮೈಸೂರಿನ ಸುತ್ತಮುತ್ತ ದೇವದಾಸಿಯರ ಪೋಷಕರಾಗಿದ್ದವರು ಆಧುನಿಕ ಕಾರಣಗಳಿಗೋಸ್ಕರ ಪೋಷಣೆಯಿಂದ ದೂರ ಸರಿದಾಗ ಇವರುಗಳು ತಮ್ಮನ್ನು ಇತರ ಹೆಸರುಗಳಲ್ಲಿ ವರ್ಗೀಕರಿಸಿಕೊಂಡು ಅಥವಾ ಬೇರೆ ಉದ್ಯೋಗಗಳನ್ನು ಹುಡುಕಿಕೊಂಡು ಬೆಂಗಳೂರು ಹಾಗೂ ಕೋಲಾರ ಜಿಲ್ಲೆಗಳ ಕಡೆಗೆ ಹೋದ ದಾಖಲೆ ಸಿಗುತ್ತವೆ (ಜಾನಕಿ ನಾಯರ್ ಅವರು ಬರೆದ ಲೇಖನ The Devadasi, Dharma and the State ನಲ್ಲಿ ನೋಡಬಹುದು). ಸಂಗೀತದಲ್ಲಿ ನಿಪುಣರಾದ ದೇವದಾಸಿಯರಲ್ಲಿ ಕೆಲವರು ತಮ್ಮ ಸಂಗೀತಕ್ಕೆ ಒಂದು ಮಾರುಕಟ್ಟೆ ರೂಪುಗೊಳ್ಳುವುದನ್ನು ಕಂಡುಕೊಂಡರು. ಉದಾಹರಣೆಗೆ ಬೆಂಗಳೂರು ನಾಗರತ್ನಮ್ಮ ಹಾಗೂ ಅಮ್ಮುಕಣ್ಣು ಮುಂತಾದವರು ಕನ್ನಡದಲ್ಲಿ ಹಾಡಿ ಧ್ವನಿಮುದ್ರಣ ಮಾಡಿದರು. ಅವು ಎಚ್.ಎಮ್.ವಿ ಸಂಸ್ಥೆಯ ವತಿಯಿಂದ ಜನವರಿ 1916ರಲ್ಲಿ ಬಿಡುಗಣೆಯಾದವು. ಇವರು ತಮಿಳು ಮತ್ತು ತೆಲುಗು ಹಾಡುಗಳನ್ನೂ ಧ್ವನಿಮುದ್ರಣ ಮಾಡಿದ್ದರು (ಹೆಚ್ಚಿನ ವಿವರಗಳನ್ನು ಮೈಕೆಲ್ ಕಿನ್ನಿಯರ್ ಅವರ The Gramaphone Company’s First Indian Recordings ಎಂಬ ಪುಸ್ತಕದಲ್ಲಿ ನೋಡಬಹುದು). ಆದರೆ ನಾಗರತ್ನಮ್ಮ ಅಂಥವರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಹೆಚ್ಚುತ್ತಿದ್ದ ಶ್ರೋತೃಗಣದಿಂದ ಕನ್ನಡ ಸಂಗೀತದ/ಹಾಡುಗಳ ಬೇಡಿಕೆಯೂ ಹೆಚ್ಚಿಯೇ ಇತ್ತು.

Clip Details: Bangalore Nagarathnamma was famous for her Sanskrit Shlokas and Virutthams along with Raga alapanas that she recorded for the Gramophone Company with a clear and chaste diction. Nagrathnamma sings a Carnatic Shlokam, ‘Gacchami achyuta’. | Archive of Indian Music (AIM)


ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ ಉಗಮವಾದ ನಾಟಕ ಕಂಪೆನಿಗಳು ಈ ಮೇಲಿನ ಸಂಗತಿಯನ್ನು ಭಾಗಶಃ ವಿವರಿಸಬಹುದೇನೋ. (ಆವರೆಗೆ ಫಾರ್ಸೀ ನಾಟಕ ಕಂಪೆನಿಗಳು ಮೈಸೂರಿಗೆ ಬಂದು ಪ್ರದರ್ಶನ ನೀಡುತ್ತಿದ್ದವು.) ಅಂದರೆ ದೇವದಾಸಿಯರ ನಿರ್ಗಮನದಿಂದಾಗಿ ಉಂಟಾದ ನಿರ್ವಾತವನ್ನು ಸ್ವಲ್ಪ ಮಟ್ಟಿಗೆ ನಾಟಕದ ಹಾಡುಗಳು ತುಂಬಿಸಿಕೊಟ್ಟವು. ಕನ್ನಡ ನಾಟಕಗಳಲ್ಲಿ ಕನ್ನಡದ್ದೇ ಹಾಡುಗಳನ್ನು ಬಳಸಲಾಗುತಿತ್ತು. ಇವು ಬಹುತೇಕ ಕರ್ನಾಟಕ ಸಂಗೀತಶೈಲಿಯನ್ನೇ ಅನುಸರಿಸುತ್ತಿದ್ದವು. ಬಿಡಾರಂ ಕೃಷ್ಣಪ್ಪ ಮತ್ತು ಚಿಕ್ಕರಾಮರಾವ್ ಅಂತಹವರು ಚಾಮರಾಜೇಂದ್ರ ನಾಟಕಸಭಾದಲ್ಲಿ ಹಲವಾರು ಪಾತ್ರಗಳಲ್ಲಿ ನಟಿಸುತ್ತಿದ್ದು ಈ ನಾಟಕ ಕಂಪನಿಗೆ ಅರಮನೆಯ ಆಶ್ರಯವಿತ್ತು.

‘ರಾಮವರ್ಮ – ಲೀಲಾವತಿ’ ನಾಟಕದಲ್ಲಿ ರಾಮವರ್ಮನ ಪಾತ್ರದಲ್ಲಿ ವರದಾಚಾರ್ಯರು. ‘ರಾಮವರ್ಮ – ಲೀಲಾವತಿ’ ಷೇಕ್ಸ್‌ಪಿಯರ್‌ನ ‘ರೋಮಿಯೊ ಜೂಲಿಯೆಟ್’ನ ಕನ್ನಡ ರೂಪಾಂತರ.)

ಚಾಮುಂಡೇಶ್ವರಿ ನಾಟಕ ಸಭಾ, ಗುಬ್ಬಿ ರಂಗ ಕಲಾವಿದರೂ ಹಾಗೂ ಪ್ರಖ್ಯಾತ ನಟರಾದ ವರದಾಚಾರ್ಯರ ರತ್ನಾವಳಿ ರಂಗಭೂಮಿ ಕಂಪೆನಿಯವರೆಲ್ಲಾ ಕನ್ನಡ ಹಾಡುಗಳನ್ನು ಧಾರಾಳವಾಗಿ ಬಳಸಲಾರಂಭಿಸಿದ್ದರು. ಸುಗಮ ಸಂಗೀತದ ಪ್ರಮುಖ ಹಾಡುಗಾರ್ತಿಯಾದ ಶ್ರೀಮತಿ ಎಚ್.ಆರ್. ಲೀಲಾವತಿಯವರ ಪ್ರಕಾರ ಬೆಳ್ಳಾವೆ ನರಹರಿ ಶಾಸ್ತ್ರಿಗಳ ನಾಟಕಗಳಲ್ಲಿ ತ್ಯಾಗರಾಜರ ಕೃತಿಗಳ ಶೈಲಿಯನ್ನು ಬಳಸುತ್ತಿದ್ದರು. ಮುದ್ರಿತ ನಾಟಕಗಳಲ್ಲಿ ಹಾಡಿನ ಜೊತೆಗೆ (ಮೂಲ ತ್ಯಾಗರಾಜ) ಕೃತಿಯ ಹೆಸರನ್ನೂ ಕೂಡ ನಮೂದಿಸುತ್ತಿದ್ದರಂತೆ (ಎಚ್.ಆರ್. ಲೀಲಾವತಿಯವರ ಸುಗಮ ಸಂಗೀತ: ಒಂದು ಸಿಂಹಾವಲೋಕನ ಎಂಬ ಪುಸ್ತಕದಲ್ಲಿ ಈ ವಿವರಗಳನ್ನು ನೋಡಬಹುದು). ನಾಟಕದ ಕೆಲವು ಹಾಡುಗಳು ಜಾವಳಿಗಳಿಗೆ ಸಮೀಪವಾಗಿದ್ದವು ಹಾಗೂ ಯಾವ ಸಮಯದಲ್ಲಾದರೂ ನಟರು ಈ ಹಾಡುಗಳನ್ನು ಹಾಡಬಲ್ಲವರಾಗಿದ್ದರು. ರಂಗಸ್ಥಳದಲ್ಲಿ ನಟಿಸುತ್ತಿದ್ದ ಪಾತ್ರವು ಸತ್ತುಹೋಗಿದ್ದರೂ ಕೂಡಾ ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಎದ್ದು ಹಾಡನ್ನು ಹಾಡಿ ಮತ್ತೆ ಸಾಯುವುದು ಸಹಜವಾಗಿತ್ತು! ಚಿಕ್ಕರಾಮರಾಯರಂಥವರ ವಿಷಯದಲ್ಲಿ ಈಗಾಗಲೆ ನೋಡಿರುವ ಹಾಗೆ ಸಾರ್ವಜನಿಕ ಸಂಗೀತ ಕಛೇರಿಗಳಲ್ಲಿ ತಮ್ಮ ನಾಟಕದ ಕನ್ನಡ ರಂಗಗೀತೆಗಳನ್ನು ಹಾಡುವಂತೆ ಒತ್ತಾಯಿಸುವ ಶ್ರೋತೃಗಳಿದ್ದರು. ಈ ರೀತಿ ನಾಟಕರಂಗ ಹಾಗೂ ಸಂಗೀತಕ್ಷೇತ್ರಗಳ ಮಧ್ಯೆ ಪರಸ್ಪರ ಸಂವಾದ ಹಾಗೂ ವಿನಿಮಯವಿತ್ತೆಂಬುದು ಗೊತ್ತಾಗುತ್ತದೆ. ಆಗಿನ ಕಾಲದಲ್ಲಿ ಆಧುನಿಕ ಸೌಂದರ್ಯಾಭಿರುಚಿಗಳು ಇನ್ನೂ ಪಕ್ವವಾಗಿರದ ಕಾರಣದಿಂದ ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತಕ್ಕೆ ಇದ್ದಂಥ ಶ್ರೋತೃಗಳು ಹೆಚ್ಚು-ಕಡಿಮೆ ಒಂದೇ ವರ್ಗಕ್ಕೆ ಸೇರಿದ್ದವರೆಂದು ಹೇಳಬಹುದು. ಹೀಗೆ ಇಪ್ಪತ್ತನೇ ಶತಮಾನದ ಮೈಸೂರಿನ ಸಾರ್ವಜನಿಕ ನಾಟಕ ಪ್ರದರ್ಶನಗಳಲ್ಲಿ ‘ಕನ್ನಡ ಸಂಗೀತ’ದ ರಸಿಕರ ಆಸೆಗಳನ್ನು ನೆರವೇರಿಸುವ ಪ್ರಯತ್ನಗಳಾಗುತ್ತಿದ್ದವು.

ಕರ್ನಾಟಕ ಸಂಗೀತ ಶೈಲಿಯಲ್ಲಿ ಕನ್ನಡ ಹಾಡುಗಳನ್ನು ರಚಿಸುವಂತೆ ಮಹಾರಾಜರು ನೀಡಿದ್ದ ಆಜ್ಞೆಯನ್ನು ಪಾಲಿಸಲು ಕೆಲವು ಸಂಗೀತಗಾರರು ತಯಾರಾದರು. ಬಿಡಾರಂ ಕೃಷ್ಣಪ್ಪ, ಪಿಟೀಲು ಟಿ.ಚೌಡಯ್ಯ, ಚಿಕ್ಕರಾಮರಾಯರು, ಶೇಷಣ್ಣ, ವೆಂಕಟಗಿರಿಯಪ್ಪ, ಶಿವರಾಮಯ್ಯನಂಥವರು ಕನ್ನಡದಲ್ಲಿ ಹಾಡುಗಳನ್ನು ರಚಿಸಿದರು. ಕೆಲವೊಮ್ಮೆ ಸಾಹಿತ್ಯವನ್ನೂ ರಚಿಸಿ ರಾಗವನ್ನೂ ಸಂಯೋಜಿಸುವ ವಾಗ್ಗೇಯಕಾರರ ಕೆಲಸ ಸಂಗೀತಗಾರರಿಗೆ ಕಷ್ಟವಾಗುತ್ತಿತ್ತು.

Mysore T. Chowdiah – (1895-1967)

ಹೀಗಾದಾಗ ಮಹಾರಾಜರು ಕನ್ನಡ ಸಾಹಿತಿಗಳಿಂದ ಮತ್ತು ಪಂಡಿತರುಗಳಿಂದ ಹಾಡುಗಳನ್ನು ಬರೆಸಿ ರಾಗ ಸಂಯೋಜನೆಯನ್ನು ಸಂಗೀತಗಾರರು ಮಾಡುವ ವ್ಯವಸ್ಥೆ ಮಾಡುತ್ತಿದ್ದರು. ಇದಕ್ಕೆಂದೇ ತಯಾರಾಗಿದ್ದ ಕನ್ನಡ ಕವಿಗಳ ತಂಡವೊಂದಿತ್ತು. ಇದರಲ್ಲಿ ನಂಜನಗೂಡು ಶ್ರೀಕಂಠಶಾಸ್ತ್ರಿ, ಅಯ್ಯಾಶಾಸ್ತ್ರಿ, ಆನವಟ್ಟಿ ರಾಮರಾವ್, ವಂಕಟರಮಣಯ್ಯ, ದೇವೋತ್ತಮ ಜೋಯಿಸ್, ಸೀತಾರಾಮ ಶಾಸ್ತ್ರಿ ಮತ್ತು ಆರ್.ಕೆ. ಕೃಷ್ಣಶಾಸ್ತ್ರಿ ಇವರು ಪ್ರಮುಖರು. ಇವರಲ್ಲಿ ಕೆಲವರು ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಿಂದ ನಾಟಕಗಳನ್ನು ಅನುವಾದಿಸಿ ಅಥವ ಸ್ವತಃ ನಾಟಕಗಳಿಗೆ ಸ್ಕ್ರಿಪ್ಟ್ ಬರೆದುಕೊಟ್ಟಿದ್ದರಲ್ಲದೆ ಹಲವು ನಾಟಕಗಳಿಗೆ ಹಾಡುಗಳನ್ನೂ ಬರೆದುಕೊಡುತ್ತಿದ್ದರು. ಇವರ ಸಾಹಿತ್ಯಕ್ಕೆ ಅರಮನೆ ಸಂಗೀತಗಾರರು ಸ್ವರಸಂಯೋಜನೆ ಮಾಡಿ ಮಹಾರಾಜರಿಗೆ ಅರ್ಪಿಸುತ್ತಿದ್ದರು. ಇಂಥ ಸಂಗೀತಗಾರರಿಗೆ ಮಹಾರಾಜರು ವಿಶೇಷ ಬಹುಮಾನಗಳನ್ನು ಕೊಡುತ್ತಿದ್ದರು.
ಅರಮನೆಯ ಸಂಗೀತಗಾರರಾಗಿದ್ದಾಗ್ಯೂ ಮಹಾರಾಜರ ಅಣತಿಗೆ ಸಮ್ಮತಿ ತೋರದೇ ಭಿನ್ನಾಭಿಪ್ರಾಯವಿರಿಸಿಕೊಂಡಿದ್ದ ಹಾಗೂ ಅದರ ಬಗ್ಗೆ ಮುಚ್ಚುಮರೆಯಿಲ್ಲದೆ ಮಾತನಾಡುತ್ತಿದ್ದ ಸಂಗೀತಗಾರರೂ ಇದ್ದರು. ಮೈಸೂರು ವಾಸುದೇವಾಚಾರ್ಯರು ಅವರಲ್ಲಿ ಪ್ರಮುಖರು. ಅವರ ವಾದವೇನಿತ್ತೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಮುಂದುವರೆಯುವುದು ..

ಅನುವಾದ: ಪ್ರೊ. ಎಸ್. ನಾರಾಯಣನ್

ಪ್ರತಿಕ್ರಿಯಿಸಿ