ಕೊರೊನಾ ಕಾಲದಲ್ಲಿನ ಗ್ರಾಮಿಣ ಬದುಕಿನ ಚಿತ್ರಗಳನ್ನ ಋತುಮಾನಕ್ಕಾಗಿ ಎ.ಆರ್.ವಾಸವಿ ಮತ್ತು ಕೆ.ಪಿ ಸುರೇಶ ಸಂಪಾದಿಸಿ ಕೊಟ್ಟಿದ್ದಾರೆ.ಇಂತಹ ನಾಡಿನ ಹತ್ತು ವಿವಿಧ ಹಳ್ಳಿಯ ಚಿತ್ರಗಳು ದಿನಕ್ಕೊಂದರಂತೆ ಕೊರೊನಾ ಕಾಲದಲ್ಲಿ ಗ್ರಾಮಿಣ ಬದುಕು ಅನ್ನುವ ಶೀರ್ಷಿಕೆಯಲ್ಲಿ ಋತುಮಾನದಲ್ಲಿ ಪ್ರಕಟವಾಗುತ್ತಿದೆ.
ಕೆಲಸಕ್ಕಾಗಿ ವಲಸೆ ಹೋಗಿದ್ದ ಜನರು ಕೊರೊನಾ ಲಾಕ್ ಡೌನ್ ಪರಿಣಾಮ ತಮ್ಮ ಊರಿನತ್ತ ದೌಡಾಯಿಸುವಂತೆ ಮಾಡಿತು. ಹೀಗೆ ಬೆಂಗಳೂರು ಮತ್ತು ಮೈಸೂರು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ನಾಗವಳ್ಳಿ ಗ್ರಾಮದ ಯುವಜನರು, ಹಲವು ಕುಟುಂಬಗಳು ತಮ್ಮ ಸ್ವ ಗ್ರಾಮಕ್ಕೆ ಮರಳಿದ್ದಾರೆ. ಈ ಊರಲ್ಲಿ ಸುಮಾರು 2400 ಕುಟುಂಬಗಳಿವೆ.. ಆ ಕುಟುಂಬಗಳಲ್ಲಿ ಯಾರಾದರೊಬ್ಬರು, ಕುಟುಂಬದ ಕೆಲವರು (ಮಗ-ಸೊಸೆ, ಮಗಳು, ಗಂಡ-ಹೆಂಡತಿ ಮಕ್ಕಳು) ರಷ್ಟು ಜನರು ಕೆಲಸಕ್ಕಾಗಿ ವಲಸೆ ಹೋಗಿದ್ದಾರೆ. ನಗರ ಪ್ರದೇಶಗಳಿಗೆ ವಲಸೆ ಹೋದವರು ಕಾರ್ಖಾನೆಗಳಲ್ಲಿ, ಗಾರ್ಮೆಂಟ್ಸ್, ಹೊಟೆಲ್, ಬೇಕರಿ, ಹಲವು ರಿಪೇರಿ ಕಂಪನಿಗಳಲ್ಲಿ, ಗಾರಾಜ್‍ಗಳಲ್ಲಿ, ಪಾನಿಪುರಿ ವ್ಯಾಪಾರ ಹಾಗೂ ವಾಹನ ಚಾಲಕರಾಗಿ ಮತ್ತಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ದುಡಿಯುವ ಬಹುತೇಕರು ದ್ವಿ-ಚಕ್ರ ವಾಹನ, ಟ್ರಕ್‍ಗಳು, ಕಾರುಗಳನ್ನು ಹೊಂದಿದ್ದಾರೆ.
ಹೀಗೆ ವಲಸೆ ಹೋಗಿದ್ದವರು ತಮ್ಮ ದುಡಿಮೆಯ ಸಂಪಾದನೆಯಲ್ಲಿ ತಮ್ಮ ಖರ್ಚನ್ನು ಸರಿದೂಗಿಸಿಕೊಂಡು, 5 ರಿಂದ 10 ಸಾವಿರ ರೂಪಾಯಿಗಳನ್ನು ಮನೆ, ಕೃಷಿ ಖರ್ಚಿಗೆ ಕೊಡುತ್ತಿದ್ದರು. ಮನೆ ನಿರ್ಮಾಣ ಮತ್ತು ಮದುವೆ ಖರ್ಚುಗಳಲ್ಲಿ ಸಾಲ ಮಾಡಿಯಾದರೂ ಲಕ್ಷ-ಎರಡು ಲಕ್ಷದವರೆಗೂ ಕೈ ಜೋಡಿಸುತ್ತಿದ್ದರು. ಆದರೆ ಮನೆ ಕಟ್ಟುವ ಖರ್ಚಿಗಾಗಿ ಮಕ್ಕಳಿಗೆ ತಂದೆ-ತಾಯಿ ಮಹಿಳಾ ಸಂಘಗಳ ಮೂಲಕ ಸಾಲ ತೆಗೆದುಕೊಟ್ಟು, ಆ ಸಾಲವನ್ನು ಮಕ್ಕಳು ತೀರಿಸುತ್ತಿದ್ದಾರೆ. ಮನೆ ಕಡೆಯಿಂದಲ್ಲೂ ಮಕ್ಕಳಿಗೆ ರಾಗಿ ಹಿಟ್ಟು, ಅಕ್ಕಿ, ಕಾಳು, ಸಾಂಬಾರ್ ಪೌಡರ್ ಸರಬರಾಜು ಆಗುತ್ತಿತ್ತು. ಹಬ್ಬ-ಹರಿದಿನಗಳಲ್ಲಿ 2-3 ದಿನಗಳು ತಮ್ಮ ಸ್ವ ಗ್ರಾಮಕ್ಕೆ ಬರುತ್ತಿದ್ದವರಿಗೆ ದಿಢೀರ್ ಕೊರೊನಾ ಲಾಕ್ ಡೌನ್ ವಾರಗಟ್ಟಲೇ ಅಲ್ಲ, ತಿಂಗಳುಗಟ್ಟಲೆ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್ ಡೌನ್ ಕಾರಣ ಆರಂಭದಲ್ಲೇ ಗ್ರಾಮಕ್ಕೆ ವಾಪಸ್ಸು ಬಂದಿದ್ದರಿಂದ ಕುಟುಂಬಗಳಲ್ಲಿ ಕೊರೊನಾ ಭಯ ಅಷ್ಟಾಗಿ ಕಂಡುಬರಲಿಲ್ಲ.
ಈ ಲಾಕ್ ಡೌನ್ ಒಂದು ರೀತಿಯಲ್ಲಿ ಕುಟುಂಬದವರ ಜೊತೆ ಸಮಯ ಕಳೆಯಲು ಸಾಧ್ಯವಾದರೂ ಆರಂಭದಲ್ಲಿ ಉಪಚರಿಸುತ್ತಿದ್ದ ರೀತಿಗೂ, ಆ ನಂತರದ ಉಪಚರಿಸುವ ರೀತಿಗೂ ವ್ಯತ್ಯಾಸಗಳಾಗುತ್ತಿವೆ. ಮನೆಯ ಕೆಲಸಗಳಲ್ಲಿ ಸಹಕರಿಸುತ್ತಿಲ್ಲ ಎಂತಲೊ; ಇರುವ ಹಣ ಅಥವಾ ಸಾಲ ಮಾಡಿ ಗೋಲಿ, ಇಸ್ಪೀಟ್ ಆಟಗಳಲ್ಲಿ ಕಳೆದುಕೊಳ್ಳುತ್ತಿದ್ದಾರೆ ಎಂತಲೋ ಕುಟುಂಬದಲ್ಲಿ ಬೇಸರ ಮೂಡಿದೆ. ಗಾರ್ಮೆಂಟ್‍ಗಳಲ್ಲಿ, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದು, ಈಗ ಮನೆಯಲ್ಲಿರುವ ಹೆಣ್ಣು ಮಕ್ಕಳು ಮನೆಯಲ್ಲಿ ಮನೆ ಕೆಲಸಗಳು ಮತ್ತು ಅಡುಗೆ ಕೆಲಸ ನಿರ್ವಹಿಸುತ್ತಿದ್ದು, ಬೇಸರ ಆದಾಗ ಅಕ್ಕ-ಪಕ್ಕದ ಮನೆಯವರೊಂದಿಗೆ ಅಥವಾ ತಮ್ಮ ಪರಿಚಯದವರೊಂದಿಗೆ ಮಾತುಕತೆ ಮಾಡುತ್ತಾರೆ. ಕೆಲವು ಸಮಯ ಟಿ.ವಿ. ವೀಕ್ಷಣೆ ಮಾಡುತ್ತಾರೆ.
ಒಂದು ಕುಟುಂಬದಲ್ಲಿ ಕಳೆದ ಒಂದು ವಾರದ ಹಿಂದೆ ಸಂಘದಲ್ಲಿ 70 ಸಾವಿರ ರೂಪಾಯಿಗಳ ಸಾಲ ಪಡೆದಿದ್ದು, ಆ ಹಣದಲ್ಲಿ ಮಗ ಪ್ರತಿ ದಿನಾ ಇಸ್ಪೀಟ್ ಆಟಕ್ಕೆ 2-3 ಸಾವಿರದಂತೆ 30 ಸಾವಿರ ರೂಪಾಯಿಗಳನ್ನು ಕಳೆದುಕೊಂಡಿದ್ದು, ತಾವು ಮಗನಿಗೆ ಏನು ಹೇಳಲಾಗದ ಸ್ಥಿತಿಯಲ್ಲಿರುವುದನ್ನು ಪೋಷಕರು ಹೇಳಿದ್ದಾರೆ. ಹೀಗೆ ಗೃಹ ಬಂಧಿಯಾಗಿರುವ ಯುವಕರು ಮತ್ತು ಪುರುಷರು ಅಲ್ಲಲ್ಲಿ ಗುಂಪುಗೂಡಿ ಮಾತನಾಡುವುದು, ಮಾಸ್ಕ್ ಹಾಕಿಕೊಳ್ಳುತ್ತಿಲ್ಲ ಮತ್ತು ಯಾವುದೇ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ.
ಕೆಲವು ಬೀದಿಗಳಲ್ಲಿ ಹುಡುಗರೆಲ್ಲಾ ಸೇರಿ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಆದರೆ ಈ ಸಂದರ್ಭಗಳಲ್ಲಿ ಇವರು ಯಾವುದೇ ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಕಿಕೊಳ್ಳಬೇಕೆಂಬ ನಿಯಮ ಪಾಲಿಸುತ್ತಿಲ್ಲ. ಈ ಬಗ್ಗೆ ಗುಂಪಿನಲ್ಲಿದ್ದವರನ್ನು ವಿಚಾರಿಸಿದರೆ ನಮ್ಮಲ್ಲಿ ಕೊರೊನಾ ಭಯ ಏನು ಇಲ್ಲ. ಹಾಗಾಗಿ ಸಮಸ್ಯೆ ಏನು ಇಲ್ಲ ಎನ್ನುತ್ತಾರೆ. ವಲಸೆಯಿಂದ ವಾಪಸ್ಸಾಗಿರುವ ಕುಟುಂಬಗಳಲ್ಲಿ ಇದ್ದ ಕಾಳು-ಕಡ್ಡಿ, ರಾಗಿ ಮತ್ತು ಪಡಿತರ ಅಕ್ಕಿಯನ್ನು ಉಪಯೋಗಿಸುತ್ತಿದ್ದು, ಊಟದ ಸಮಸ್ಯೆ ಏನು ಆಗಿಲ್ಲ. ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದವರಿಗೆ ಮನೆಯಲ್ಲಿ ಉಳಿಯಬೇಕಾಗಿರುವುದು ಒಂದು ರೀತಿಯ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಹಾಗಾಗಿ ಅವರು ಹೆಚ್ಚು ಸಮಯ ತಮ್ಮ ಮೊಬೈಲ್ ಜೊತೆ ಕಳೆಯುತ್ತಿದ್ದು, ಕೆಲವು ಸಮಯ ಸ್ನೇಹಿತರ ಜೊತೆಗೂಡಿ ಮೇಲೆ ತಿಳಿಸಿರುವಂತೆ ಬೇರೆ ಬೇರೆ ಆಟಗಳಲ್ಲಿ ಕಾಲಕಳೆಯುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಕೆಲಸ ಮಾಡಿ ರೂಢಿಯಿರುವವರು ವಲಸಿಗರು ತಾವು ಕೆಲಸ ಮಾಡುತ್ತಿದ್ದ ಕಡೆ ವಾಪಸ್ಸು ಹೋಗುವ ಕಾತುರದಲ್ಲಿದ್ದಾರೆ. ಅವರ್ಯಾರು ಗ್ರಾಮದಲ್ಲೇ ಉಳಿದು, ಕೃಷಿ ಮತ್ತು ಕೃಷಿಯೇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಮರಳಿ ವಲಸೆ ಹೋಗುವವರಲ್ಲಿ 50% ಜನರಿಗೆ ಮಾತ್ರ ತಾವು ಕೆಲಸ ಮಾಡುತ್ತಿದ್ದ ಕಡೆ ಕೆಲಸ ಸಿಗಬಹುದು. ಉಳಿದ 50% ಜನರು ಅತಂತ್ರ ಸ್ಥಿತಿಗೆ ಸಿಲುಕಿ, ತಾವು ಮಾಡುತ್ತಿದ್ದ ಕೆಲಸ ಬಿಟ್ಟು ತಮ್ಮ ಹಳ್ಳಿಯಲ್ಲೇ ಉಳಿಯಬಹುದು. ಅಂತಹವರಿಗೆ ಕೌನ್ಸಲಿಂಗ್ ಮಾಡುವ ಅವಶ್ಯಕತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅವರಿಗೆ ಪೂರಕ ಉದ್ಯೋಗಗಳು, ಗ್ರಾಮೀಣ ಕೈಗಾರಿಕೆಗಳನ್ನು ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಿದ್ದಲ್ಲಿ ವಲಸೆಯನ್ನು ತಡೆಗಟ್ಟಬಹುದು.
ಈ ಮರಳಿ ಬಂದ ವಲಸಿಗರು ಮತ್ತು ಅವರಿರುವ ಸಂದರ್ಭ ಅವರೆಂಥಾ ಬೇರು ಕಿತ್ತ ನಾಗರಿಕರಾಗಿದ್ದಾರೆ ಎಂಬುದನ್ನು ಎತ್ತಿತೋರಿಸುತ್ತಿದೆ. ಇಂಥಾ ಸಂಕಷ್ಟದ ಸಂದರ್ಭದಲ್ಲಿ ನಗರ ಅವರನ್ನು ತಿರಸ್ಕರಿಸುತ್ತೆ. ಆದರೆ ಹಳ್ಳಿಯ ಬದುಕಿನ ಲಯಕ್ಕೆ ಹೊಂದಿ ಬಾಳಲು ತಮಗೆ ಕಷ್ಟವಾಗುತ್ತಿರುವುದೂ ಅವರಿಗೆ ಅರಿವಿಗೆ ಬಂದಿದೆ. ವಲಸೆ ಹೋಗಿ ಬಂದವರ ದುಗುಡದ ಭಾರ ಇದು.
ಗಮನಿಸಬೇಕಾದ ಇನ್ನೊಂದುಅಂಶವೆಂದರೆ ಲಿಂಗಾಧಾರಿತ ಧೋರಣೆಯ ವ್ಯತ್ಯಾಸ. ಬಹುತೇಕ ವಲಸೆ ಹೊಗಿಕೆಲಸ ಮಾಡುತ್ತಿದ್ದ ಹೆಣ್ಣು ಮಕ್ಕಳುವಾಪಾಆದಾಗ ಸಹಜವಾಗಿಯೇ ಮನೆಕೆಲಸದಲ್ಲಿ ತೊಡಗಿಕೊಂಡಿದ್ದು, ನೆರೆಯವರ ಜೊತೆ ಹರಟೆ ಇತ್ಯಾದಿಯಲ್ಲಿ ತೊಡಗಿದ್ದರೆ, ಪುರುಷರು
ಮಾತ್ರಾ ಗ್ರಾಮಜೀವನದ ಕೌಟುಂಬಿಕ ಚೌಕಟ್ಟಿನೊಳಗೆ ತಮ್ಮ ಪಾತ್ರವನ್ನು ಸಹಜವಾಗಿ ನಿರ್ವಹಿಸುವುದರಲ್ಲಿ ಎಡವುತ್ತಿದ್ದಾರೆ.
– ಸುಂದರಮ್ಮ ಮತ್ತು ಪಿ.ವೀರಭದ್ರನಾಯ್ಕ
Veerabhadranaika : has a doctorate in Sociology from Mysore University and is currently with the Punarchith Collective, Nagavalli, Chamarajanagar Dt.
Sudramma : has worked for several years with Mahila Samakya and is currently with the Punarchith Collective, Nagavalli, Chamarajangar Dt.