ಮನೆಗೆ ಹೋಗಲು ಬಯಸಿರುವ ವಲಸೆ ಕಾರ್ಮಿಕರ ಹಕ್ಕುಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರ

CREDAI ಅವರು ಹೇಳಿದರು ಎನ್ನುವ ಕಾರಣಕ್ಕೆ ರಾಜ್ಯದ ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿ ಹೋಗಲು ಸಾಧ್ಯವಾಗದಂತೆ, ಕರ್ನಾಟಕ ಸರ್ಕಾರವು ರೈಲುಗಳನ್ನು ರದ್ದುಗೊಳಿಸಿದ ತೀರ್ಮಾನ ಆತಂಕಕಾರಿ ಮತ್ತು ಅಮಾನವೀಯ. ಸರ್ಕಾರ ಈ ಆದೇಶವನ್ನು ತಕ್ಷಣವೇ ಹಿಂತೆಗದುಕೊಳ್ಳಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ. ತಮ್ಮ ಪ್ರಯಾಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಕಾರ್ಮಿಕರ ಸ್ವಾಯತ್ತತೆಯನ್ನು ಮತ್ತು ಘನತೆಯನ್ನು ಸರ್ಕಾರವು ಮಾನ್ಯ ಮಾಡಬೇಕೆಂದು ಋತುಮಾನ ಆಗ್ರಹಿಸುತ್ತದೆ . ರಾಜ್ಯದ ಹಲವು ಸಂಘಟನೆಗಳು ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದಿರುವ ಈ ಬಹಿರಂಗ ಪತ್ರಕ್ಕೆ ಋತುಮಾನ ಧನಿಗೂಡಿಸುತ್ತದೆ. ನಮ್ಮ ಓದುಗರೂ ಈ ಪತ್ರವನ್ನು ಹಂಚಿಕೊಳ್ಳುವಂತೆ ಈ ಮೂಲಕ ಮನವಿಯನ್ನು ಮಾಡುತಿದ್ದೇವೆ.

ಮಾನ್ಯ ಶ್ರೀ ಬಿ.ಎಸ್ . ಯಡಿಯೂರಪ್ಪ

ಮುಖ್ಯ ಮಂತ್ರಿಗಳು
ಕರ್ನಾಟಕ
ಮಾನ್ಯರೇ

ವಿಷಯ : ವಲಸೆ ಕಾರ್ಮಿಕರ ಸಾಂವಿಧಾನಿಕ ಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ಹಾಗು ಅವರನ್ನು ಗೌರವಯುತವಾಗಿ ಸುರಕ್ಷಿತವಾಗಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕೆನ್ನುವ ಬಗ್ಗೆ

ರಾಜ್ಯದ ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿ ಹೋಗಲು ಸಾಧ್ಯವಾಗದಂತೆ, ಕರ್ನಾಟಕ ಸರ್ಕಾರವು ರೈಲುಗಳನ್ನು ರದ್ದುಗೊಳಿಸಿದ ಆತಂಕಕಾರೀ ಸುದ್ದಿಯಿಂದ ನಾವು ಆಘಾತಕ್ಕೊಳಗೊಂಡಿದ್ದೇವೆ. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವೆಲಪರ್ಸ್ ಅಸೋಸಿಯೇಶನ್ಸ ಆಫ್ ಇಂಡಿಯಾ (CREDAI), ಇವರ ನಡುವೆ ನಡೆದ ಮಾತುಕತೆ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಇದನ್ನು ನೈಋತ್ಯ ರೈಲ್ವೇಗೆ 2020 ರ ಮೇ 5 ರಂದು ಪತ್ರ ಮುಖೇನ ತಿಳಿಸಲಾಗಿದೆ.

ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಕ್ಕೆ ಮರಳಿದಲ್ಲಿ, ಕಟ್ಟಡ ನಿರ್ಮಾಣ ಉದ್ಯಮಕ್ಕೆ ಬಹು ದೊಡ್ಡ ಹೊಡೆತ ಬೀಳುತ್ತದೆ ಎಂದು ಬಿಲ್ಡರ್‍ಗಳು ಮತ್ತು ಕಾಂಟ್ರಾಕ್ಟರ್‍ಗಳು ಸರ್ಕಾರದೊಂದಿಗೆ ಲಾಬಿ ನಡೆಸಿದ್ದಾರೆ, ಹೀಗಾಗಿ ಸರ್ಕಾರವು ಅವರ ಮಾತು ಕೇಳಿ ಈ ನಿರ್ಧಾರವನ್ನು ಏಕಮುಖವಾಗಿ ತೆಗೆದುಕೊಂಡಿದೆ. ಮಾರ್ಚ್ 24 ರಿಂದಲೂ ಕಟ್ಟಡ ಕಾರ್ಮಿಕರು ಊಟಕ್ಕಾಗಿ ಹಾಗೂ ಹಣಕ್ಕಾಗಿ ಅಕ್ಷರಶ: ಭಿಕ್ಷೆ ಬೇಡುವಂತೆ ಮಾಡಿ, ಈ ಬಿಲ್ಡರ್‍ಗಳು ಮತ್ತು ಕಾಂಟ್ರಾಕ್ಟರ್‍ಗಳು ಅವರನ್ನು ಪೂರ್ತಿಯಾಗಿ ಕೈಬಿಟ್ಟಿದ್ದರು ಎಂದು ಲಾಕ್‍ಡೌನ್ ಸಂದರ್ಭದ ಪರಿಸ್ಥಿಯ ಬಗ್ಗೆ ಬಂದ ಹಲವಾರು ವರದಿಗಳು ಮತ್ತು ವ್ಯಕ್ತಿಗತ ಚಿತ್ರಣಗಳು ಎಚ್ಚರಿಸುತ್ತವೆ. ಕೆಲವು ವರದಿಗಳು ಹೇಳುವಂತೆ ಆ ಸಂದರ್ಭದಲ್ಲಿ 64% ಕಾರ್ಮಿಕರ ಕೈಯಲ್ಲಿ ಕೇವಲ ರೂ. 100 ಮಾತ್ರವೇ ಇತ್ತು. ಕೇವಲ 6% ಕಾರ್ಮಿಕರಿಗೆ ಪೂರ್ತಿ ವೇತನ ಸಿಕ್ಕಿತ್ತು, ಮತ್ತು ಪ್ರತೀ ಐವರಲ್ಲಿ ಒಬ್ಬರಿಗೆ ಮಾತ್ರವೇ ಆಹಾರ ಧಾನ್ಯಗಳು ದೊರಕಿತ್ತು. ಈ ಕಾರ್ಮಿಕರಿಗೆ ವೇತನ ಪಾವತಿ, ಆಹಾರ ಭದ್ರತೆ, ಆರ್ಥಿಕ ಭದ್ರತೆ ಮತ್ತು ಸುರಕ್ಷೆಯನ್ನು ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾದವು. ಆ ಮೂಲಕ ಕಾರ್ಮಿಕರ ಹಕ್ಕು, ಘನತೆಗಳನ್ನು ಕಟ್ಟಿಹಾಕಿದವು.

ಈ ಅತಂತ್ರದ ಪರಿಸ್ಥಿತಿಯ ನಡುವೆ, ಹಲವಾರು ಕಡೆಗಳಲ್ಲಿ, ಕಾರ್ಮಿಕರು ತಮ್ಮನ್ನು ತೆರವು ಗೊಳಿಸುವ ಬೆದರಿಕೆಯನ್ನು ಎದುರಿಸಿದರು, ಜೊತೆಗೆ ಪೊಲೀಸರ ದೌರ್ಜನ್ಯಕ್ಕೂ ಒಳಗಾದರು. ಈ ಅಸಹನೀಯ ಪರಿಸ್ಥಿತಿಯಲ್ಲಿ ಬದುಕಲು ನಿರಾಕರಿಸಿದ ಕಾರ್ಮಿಕರು ಸಾವಿರಾರು ಕಿ.ಮೀ ನಡೆದು ಹೋಗುತ್ತಿರುವ ದೃಶ್ಯ ಹಾಗೂ ಬೆಂಗಳೂರು ಮತ್ತು ಮಂಗಳೂರಿನಲ್ಲಿ ತಾವು ನಗರ ಬಿಡಲು ನೋಂದಣಿ ಮಾಡಿಸಿಕೊಳ್ಳಲು ಉದ್ದುದ್ದದ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬಂದವು. ಅವರ ಘನತೆಯನ್ನು ಮಣ್ಣುಗೂಡಿಸಿದ ಫಲವಾಗಿ ಈ ದೃಶ್ಯಗಳು ಕಂಡುಬಂದವು. ಕಾರ್ಮಿಕರು ಈ ರೀತಿಯ ತೀವ್ರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆಘಾತಕ್ಕೊಳಗಾದ ಬೆನ್ನಲ್ಲೇ, ಕರ್ನಾಟಕ ಸರ್ಕಾರವು ಈ ರೈಲುಗಳನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ಇದು ಕರ್ನಾಟಕವನ್ನು ಸಮೃದ್ಧಗೊಳಿಸಲು ತಮ್ಮ ಶ್ರಮ ಹಾಕಿದ ಕಾರ್ಮಿಕರ ಮೇಲೆ ಸರ್ಕಾರ ನಡೆಸಿದ ದೌರ್ಜನ್ಯವಾಗಿದೆ.

ಈ ಎಲ್ಲ ಅನಿಶ್ಚಿತ ಮತ್ತು ಗೊಂದಲದಿಂದ ಕೂಡಿದ ಪ್ರಯಾಣದ ಕುರಿತಾದ ಸರ್ಕಾರದ ಗೃಹ ಸಚಿವಾಲಯದ ಆದೇಶಗಳು ಮತ್ತು ಇದ್ದಕ್ಕಿದ್ದಂತೆ ರೈಲುಗಳನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ಈ ನಿಧಾರಗಳು ಹೃದಯ ಹೀನವಾದದ್ದು ಮತ್ತು ಅವು ವಲಸೆ ಕಾರ್ಮಿಕರ ಸಾಂವಿಧಾನಿಕ ಹಕ್ಕನ್ನೇ ನಿರಾಕರಿಸುವಂತದ್ದು. ಕಾರ್ಮಿಕರ ಓಡಾಟವನ್ನು ನಿರ್ಬಂಧಿಸುವ ಮೂಲಕ ರಾಜ್ಯ ಸರ್ಕಾರವು ಅವರ ಸಂವಿಧಾನ ಬದ್ಧ ಹಕ್ಕನ್ನು ತಡೆಹಿಡಿದಿರುವುದು ಖಂಡನೀಯ.

ರೈಲುಗಳನ್ನು ರದ್ದುಗೊಳಿಸಿರುವ ಈ ಕ್ರಮವು ವ್ಯಕ್ತಿಗಳ ಓಡಾಟವನ್ನು ನಿರ್ಬಂಧಿಸಿ ಸಂವಿಧಾನದ ಪರಿಚ್ಛೇದ 19(1)(ಡಿ) ಯ ಉಲ್ಲಂಘನೆಯಾಗುತ್ತದೆ. ತಾವೆಲ್ಲಿ ಬದುಕಬೇಕು ಎಂಬ ಕಾರ್ಮಿಕರ ಆಯ್ಕೆಯ ಸ್ವಾತಂತ್ರವನ್ನು ಈ ಆದೇಶವು ಉಲ್ಲಂಘಿಸುತ್ತಿದ್ದು, ಇದು ಸಂವಿಧಾನದ ಆರ್ಟಿಕಲ್ 21 ರ ಉಲ್ಲಂಘನೆಯಾಗುತ್ತದೆ. ರೈಲುಗಳನ್ನು ರದ್ದುಮಾಡಿ ಕಾರ್ಮಿಕರನ್ನು ಬಲವಂತವಾಗಿ ಉಳಿಸಿಕೊಂಡು ಕೆಲಸ ಮಾಡಿಸಿಕೊಳ್ಳುವ ಕ್ರಮವು ಸಂವಿಧಾನದ ಆರ್ಟಿಕಲ್ 23 ರ ಅಡಿಯಲ್ಲಿ ಬಲವಂತದ ದುಡಿಮೆಯಾಗುತ್ತದೆ.

ಆದ್ದರಿಂದ ಈ ಆದೇಶವನ್ನು ತಕ್ಷಣವೇ ಹಿಂತೆಗದುಕೊಳ್ಳಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ. ತಮ್ಮ ಪ್ರಯಾಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಕಾರ್ಮಿಕರ ಸ್ವಾಯತ್ತತೆಯನ್ನು ಮತ್ತು ಘನತೆಯನ್ನು ಸರ್ಕಾರವು ಮಾನ್ಯ ಮಾಡಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ. ಇಲ್ಲೇ ಉಳಿಯುವಂತೆ ಅಥವಾ ತಮ್ಮ ರಾಜ್ಯಗಳಿಗೆ ಮರಳಿ ಹೋಗುವಂತೆ ಯಾರನ್ನೂ ಒತ್ತಾಯಿಸಬಾರದು. ಕರ್ನಾಟಕ ಸರ್ಕಾರವು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಮತ್ತು ಯಾವುದೇ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಲು ಬಯಸಿದಲ್ಲಿ ಅವರನ್ನು ಗೌರವಯುತವಾಗಿ ಸುರಕ್ಷಿತವಾಗಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ.

 

ಧನ್ಯವಾದಗಳು

ಪ್ರತಿಕ್ರಿಯಿಸಿ