ಉತ್ಕಟ, ಉಜ್ವಲ, ಗಂಭೀರ: “ಸ್ವಪ್ನಲಿಪಿ”

ಸಾಹಿತ್ಯಿಕ ಮತ್ತು ಸಾಹಿತ್ಯೇತರ ಎರಡೂ ಕಾರಣಗಳಿಂದಲೂ ಬಹಳ ವಿಸ್ಮಯಕಾರಿಯಾಗಿ ಕಾಣುವ ತೆಲುಗು ಕವನಸಂಕಲನ “ಸ್ವಪ್ನಲಿಪಿ” ಯನ್ನು, ಈ ಮುಂಚೆ ಅನೇಕ ಕವಿತೆಗಳನ್ನು ನಳನಳಿಸುವಂತೆ ಅನುವಾದಿಸಿದ ಚಿದಾನಂದ ಸಾಲಿ ಕನ್ನಡಕ್ಕೆ ತಂದಿದ್ದಾರೆ. ಕೇಂದ್ರಸಾಹಿತ್ಯ ಅಕಾದೆಮಿ ಪ್ರಶಸ್ತಿ ಸಂದ ಈ ಕವನ ಸಂಕಲನವನ್ನು ಅಜಂತಾ ಅವರು ರಚಿಸಿದ್ದು. ಈ ಕನ್ನಡ ಅನುವಾದದ ಕುರಿತ ಪರಿಚಯಾತ್ಮಕ ವಿಮರ್ಶೆಯನ್ನು ಕಮಲಾಕರ ಕಡವೆ ಮಾಡಿದ್ದಾರೆ.

ಅಜಂತಾ ಎಂಬ ಕಾವ್ಯನಾಮದಡಿ ಸಾಹಿತ್ಯರಚನೆ ಮಾಡುತ್ತಿದ್ದ ತೆಲುಗು ಪತ್ರಕರ್ತ ಪೆನುಮೂರ್ತಿ ವಿಶ್ವನಾಥ ಶಾಸ್ತ್ರಿ (೧೯೨೯-೧೯೯೮) ಅವರ ಏಕಮೇವ ಕವನ ಸಂಕಲನ “ಸ್ವಪ್ನಲಿಪಿ” ೧೯೯೩ ರಲ್ಲಿ ಪ್ರಕಟವಾಯಿತು. ಈ ಸಂಕಲನದಲ್ಲಿ ಅಜಂತಾ ಅವರು ೧೯೪೮ ರಿಂದ ೧೯೯೨ರವರೆಗೆ ಬರೆದ ಒಟ್ಟೂ ೪೦ ಕವನಗಳಿಂದ ಆಯ್ದ ೨೯ ಕವನಗಳಿವೆ. ಇವುಗಳನ್ನು ಸಹ ಆಗೀಗ ತಿದ್ದಲಾಗಿದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಇವುಗಳಲ್ಲಿ ಕೆಲವು ಕವನಗಳನ್ನು ಬಿಟ್ಟರೆ ಉಳಿದ ಬಹುತೇಕ ೧೯೯೨ರವೆರೆಗೂ ಅಪ್ರಕಟಿತ ಕವನಗಳು.  ಕಾವ್ಯ ಏನೆನ್ನುವುದರ ಕುರಿತು ಖಚಿತ ದೃಷ್ಟಿಕೋನ ಇಟ್ಟುಕೊಂಡು ರಚಿಸಲ್ಪಟ್ಟ ಕವನಗಳಿವು ಎಂದು ಲೇಖಕರು ತಮ್ಮ ಮುನ್ನುಡಿ – “ಇಂಟ್ರೋ” – ಯಲ್ಲಿ ಹೇಳಿಕೊಂಡಿದ್ದಾರೆ. ಕಾವ್ಯವೊಂದು ಸ್ವಪ್ನಲಿಪಿ ಎನ್ನುತ್ತಾರೆ ಅಜಂತಾ. ಹೊರನೋಟಕ್ಕೆ ಇದು ಸಿಗ್ಮಂಡ್ ಫ಼್ರಾಯ್ಡ್-ನ ’ಕಾವ್ಯಾಭಿವ್ಯಕ್ತಿ ಎಂದರೆ ಮನುಷ್ಯನ ಸುಪ್ತಪ್ರಜ್ನೆಯ ಅವ್ಯಕ್ತ ಬಯಕೆಗಳ ಪರೋಕ್ಷ ಅಭಿವ್ಯಕ್ತಿ’ ಎಂಬ ತರ್ಕವನ್ನು ಜ್ನಾಪಿಸಬಹುದು. ಆದರೆ ಅಜಂತಾ ಬೇರೆಯೇ ಆದ ರೀತಿಯಲ್ಲಿ ಕಾವ್ಯ ಮತ್ತು ಸ್ವಪ್ನದ ಸಂಬಂಧವನ್ನು ವ್ಯಾಖ್ಯಿಸುತ್ತಾರೆ: “ಮನುಷ್ಯನೊಳಗೆ ಅಂತರ್ಗತವಾಗಿರುವ ಸ್ವಪ್ನಶಕ್ತಿಯನ್ನು, ಸ್ವಪ್ನ ಶಕ್ತಿಯ ಸಾರ್ವಭೌಮತ್ವವನ್ನು ಬಡಿದೆಬ್ಬಿಸುವ ಮೂಲಕ ಆತ ಬಯಸುತ್ತಿರುವ ಹೊಸ ಲೋಕವನ್ನು ಆವಿಷ್ಕಾರ ಮಾಡಲು ಸಾಧ್ಯವಾಗಬೇಕು ಎಂಬುದೇ ನನ್ನ ಕಾವ್ಯದ ಧ್ಯೇಯ” ಹಾಗಾಗಿಯೇ ಅದು “ಚಿತ್ ಕಲೆ”, “ಚಿತ್ರ, ವಿಚಿತ್ರ ವಾಕ್ಯ ಸಮುದಾಯ” (ಪು.೭) ಎಂದು ಅವರು ಹೇಳುತ್ತಾರೆ.

ಹೀಗೆ ಕಾವ್ಯವನ್ನು ಮನುಷ್ಯನ ವಾಸ್ತವ ಬದುಕಿನಲ್ಲಿ ಅಗೋಚರವಾಗಿ, ಅಸ್ಪಷ್ಟವಾಗಿ ಇರುವ ಕಲ್ಪನೆಗಳು ಸ್ವಪ್ನಶಕ್ತಿಯಲ್ಲಿ ಕಂಡುಕೊಳ್ಳುವ ಉನ್ನತ ಅಭಿವ್ಯಕ್ತಿ ಎಂದು ಅಜಂತಾ ಹೇಳುವಾಗ ಯುರೋಪಿನ ರಮ್ಯವಾದಿಗಳನ್ನು ನಮಗವರು ನೆನಪಿಸಿದರೆ ಆಶ್ಚರ್ಯವಿಲ್ಲ. ಮುಂದೆ ಲೇಖಕರು ಇದು ಯಾರ ಸ್ವಪ್ನದ ಅಭಿವ್ಯಕ್ತಿ ಎಂದು ಹೆಚ್ಚು ಸ್ಪಷ್ಟತೆ ಕೊಡುತ್ತ ಹೇಳುತ್ತಾರೆ: “ಮನುಷ್ಯ ಎಲ್ಲಿದ್ದರೂ ಒಂದೇ. ಭೂಮಿ ಮೇಲೆ ಮನುಷ್ಯನ ಮೊದಲ ಹೆಜ್ಜೆ ಸಪ್ಪಳ ಕೇಳಿಸಿದ ಮೊದಲ ಕ್ಷಣದಿಂದಲೂ ಮನುಷ್ಯನ ಅಂತರಾತ್ಮ ಒಂದೇ. ನಾನು ಪ್ರತಿ ಮನುಷ್ಯನಲ್ಲೂ ಇರುವೆ. ಪ್ರತಿ ಮನುಷ್ಯನ ಕನಸಲ್ಲಿ ಇರುವೆ.” (ಪು.೮) ಅವರ ಈ ಕಾವ್ಯಮೀಮಾಂಸೆ ಹೀಗೆ ಯುರೋಪಿನ ರಮ್ಯವಾದ, ಪುರಾತನ ಗ್ರೀಕ್ ತತ್ವಜ್ನಾನಿ ಅರಿಸ್ಟೋಟಲ್ ಮತ್ತು ಮಧ್ಯಯುಗೀನ ಕಾಶ್ಮೀರಿ ಮೀಮಾಂಸಕ ಅಭಿನವಗುಪ್ತನ “ಸಾಧಾರಣೀಕರಣ” ತರ್ಕಗಳನ್ನು ಏಕಕಾಲಕ್ಕೆ ನೆನಪಿಸುತ್ತವೆ. ಮನುಷ್ಯನ ಅಂತರಾಳದಲ್ಲಿ ಇಡೀ ಮಾನವ ಸಂಕುಲ ಅನುಭವಿಸುವ, ಅಭಿವ್ಯಕ್ತಗೊಳಿಸ ಬಯಸುವ, ಸಂವೇದನೆ, ಪ್ರಚೋದನೆ, ಪ್ರವೃತ್ತಿಗಳು ಸ್ವಪ್ನಸದೃಶ ಬಗೆಯಲ್ಲಿ ಹೂತಿರುತ್ತವೆ, ಮತ್ತು ಕಾವ್ಯ ಇವುಗಳ ಅಕ್ಷರ ರೂಪ. ಹಾಗಾಗಿಯೇ, ಅಜಂತಾ ಹೇಳುತ್ತಾರೆ, “ಕಾವ್ಯ ಒಂದು ರಹಸ್ಯ ಕ್ರೀಡೆ. ಸಂಪೂರ್ಣ ಅಜ್ನಾತ, ಸ್ವಪ್ನಮಯ, ಮಂತ್ರಮಾಯ.” (ಪು.೯) ಹೀಗೆ ತನ್ನ ಕಾವ್ಯದಲ್ಲಿನ ಅಭಿವ್ಯಕ್ತಿ ಸಾರ್ವತ್ರಿಕತೆ ಹೊಂದಿದೆ ಎಂದು ಬಗೆಯುವಲ್ಲಿ ಇರುವ ಅಪಾಯವನ್ನು ಯುರೋಪು-ಕೇಂದ್ರಿತ ವಿಚಾರ ಸರಣಿಗಳ ಸಂದರ್ಭದಲ್ಲಿ ನಾವು ನೋಡಿದ್ದೇವೆ. ಯಾವೊಂದು ಸಾಹಿತ್ಯವೂ ತನ್ನ ಹುಟ್ಟಿನ ಐತಿಹಾಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚೌಕಟ್ಟುಗಳಿಂದ ಸ್ವತಂತ್ರವಲ್ಲ ಎನ್ನುವ ಸಮಕಾಲೀನ ತರ್ಕ ಇಲ್ಲಿ ಜ್ನಾಪಕಕ್ಕೆ ತಂದುಕೊಳ್ಳುವುದು ಸೂಕ್ತ. ಆದ್ದರಿಂದ, ಅಜಂತಾರವರು “ಅಕ್ಷರಗಳಿಗೆ ಸಂಕೋಲೆಗಳಿಲ್ಲ” ಎಂದು ಹೇಳಿದಾಗ ನಮಗೆ ಇದೇ ಸಾರ್ವತ್ರಿಕತೆಯ ತರ್ಕವನ್ನು ಬಳಸಿ ವಿಶ್ವದ ಅದೇಷ್ಟೋ ಜನಸಮುದಾಯಗಳನ್ನು ಸಂಕೋಲೆಗಳಿಗೆ ಒಳಪಡಿಸಿದ ಸಂಕಥನಗಳ ಇತಿಹಾಸ ನೆನಪಾದರೆ ತಪ್ಪಿಲ್ಲ.

ಅಜಂತಾ ಅವರ ಈ ಕಾವ್ಯ ಮೀಮಾಂಸೆ ಅವರು ಕವನಗಳನ್ನು ರಚಿಸಿದ ನವ್ಯವಾದದ ಸಂದರ್ಭದಲ್ಲಿ ವಿಶಿಷ್ಟವೆಂದೇ ಹೇಳಬೇಕು. ನವ್ಯವಾದದಂತೆ ಇದು ವ್ಯಕ್ತಿವಾದಿ ದೃಷ್ಟಿಕೋನ ಹೊಂದಿಲ್ಲ. ಆದರೆ ಇಲ್ಲಿನ ಬಹುತಾಂಶ ಕವನಗಳು ನವ್ಯಕಾವ್ಯದ ನುಡಿಗಟ್ಟಿರುವವು. ಅಜಂತಾರದ್ದು ಮೂಲತಃ ಮುಕ್ತಛಂದಸ್ಸಿನ ಕಾವ್ಯ – ಅದೇ ತನ್ನ ಗುರಿ ಅಂತಲೂ ಅವರು ಹೇಳಿದ್ದಾರೆ. ಇಲ್ಲಿ ಕಾಣ ಬರುವ ಇನ್ನೂ ಮುಖ್ಯ ನವ್ಯದ ಅಂಶವೆಂದರೆ ಡಿಸ್ಟೋಪಿಯನ್ (ನರಕರೂಪಿ) ದೃಷ್ಟಿಕೋನ. ಇಲ್ಲಿನ ಕವನಗಳಲ್ಲಿ ನಮಗೆ ಗೋಚರಿಸುವುದು “ಭಯ ವಿಭ್ರಮೆಗಳ ನಡುವೆ ವಿಷಾದವಾಕ್ಯದಂತೆ ಸಾಗುವ ಜೀವನ” (ಪು.೨೪). “ಸ್ವಪ್ನಲಿಪಿ”ಯ ನಿರೂಪಕ, ಪ್ರಸಿದ್ಧ ಅಸಂಗತ ನಾಟಕಕಾರ ಬೆಕೆಟ್-ನನ್ನು ನೆನಪಿಸುವಂತೆ, ಪುನರುಚ್ಚರಿಸುತ್ತಾನೆ, “ಎಲ್ಲೂ ಯಾರೂ ಇಲ್ಲ, ಎಲ್ಲ ಮಲಗಿ ಬಿಟ್ಟಿದ್ದಾರೆ/ ಕತ್ತಲ ಅನಾಥಾಶ್ರಮದಲಿ ಎಲ್ಲ ತಲೆಮರೆಸಿಕೊಂಡಿದ್ದಾರೆ.” (ಪು.೨೭) ಅಜಂತಾ ತಮ್ಮ “ರೋಡುಗಳಿಗೆ ನಮಸ್ಕಾರ” ಕವನದಲ್ಲಿ ಹೇಳುವಂತೆ, ಅವರ ಕಾವ್ಯವೆಂದರೆ “ನರಕದ ಬಾಗಿಲುಗಳ ನಡುವೆ ಮನುಷ್ಯನ ಒಳಗಣ್ಣುಗಳ” (ಪು.೨೮) ನೋಟ. ಈ ನಿರೂಪಕನ “ನಿಷಿದ್ದನಗರ”ದಲ್ಲಿ ಮನುಷ್ಯರು “ದುಸ್ಸಹ”, “ದುರ್ಭರ” ದೃಶ್ಯಗಳನ್ನು ಕಾಣುತ್ತಿದ್ದಾರೆ, ಅವರ “ಪ್ರಶ್ನೆಗೆ ಉತ್ತರ ಪ್ರಶ್ನೆಯೇ”. (“ಕಂಪ್ಯೂಟರ್ ಚಿತ್ರಗಳು”). “ನಾನು ಪ್ರತಿನಿಧಿಸುತ್ತಿರುವ ಮನುಷ್ಯ ಹುಟ್ಟು ಶಾಪಗ್ರಸ್ಥ” ಎಂದು ಇಲ್ಲಿಯ ನಿರೂಪಕ ಹೇಳುವಾಗ ನನಗೆ ಜರ್ಮನ್ ತತ್ವಜ್ನಾನಿ ನೀತ್ಸೆ ತನ್ನ “On the Genealogy of Morals” ಎಂಬ ಗಂಥದಲ್ಲಿ ಹೇಳುವ ಈ ಮುಂದಿನ ಮಾತುಗಳು ನೆನಪಾದವು: ” “Man, the bravest of animals, and the one most accustomed to suffering, does not repudiate suffering as such; he desires it, he even seeks it out, provided he is shown a meaning for it, a purpose of suffering. The meaninglessness of suffering, not suffering itself, was the curse that lay over mankind so far.” ಹೀಗೆ ನಾವು ಹುಡುಕುತ್ತ ಹೋದರೆ ಇನ್ನೂ ಹೆಚ್ಚು ನವ್ಯಸಾಹಿತ್ಯದೊಂದಿಗಿನ ಸಾಮ್ಯತೆಗಳು ಕಾಣುವವು.

ಹಾಗೆ ಕಾಣುವ ಇನ್ನೊಂದು ಮುಖ್ಯ ಸಾಮ್ಯತೆ ಇಲ್ಲಿನ ಕವನಗಳ ಪ್ರಧಾನ ಧಾರೆಯೂ ಹೌದು, ಅದೆಂದರೆ ಇಲ್ಲಿ ಕಾಣಬರುವ ನಗರಪ್ರಜ್ನೆ. “ಸ್ವಪ್ನಲಿಪಿ”ಯ ಹಲವಾರು ಕವನಗಳು ನಗರಕೇಂದ್ರಿತವಾಗಿದ್ದು, ನಗರದ ಪ್ರತಿಮೆ, ಸಂಕೇತಗಳ ಮೂಲಕ ಸಾರ್ವತ್ರಿಕ, ಸಾರ್ವಕಾಲಿಕ ಸ್ಥಿತಿಯನ್ನು ಶೋಧಿಸುತ್ತಿವೆ. “ಇಂಡಿಯಾ, ಇಂಡಿಯಾ”, “ಡೇಟ್ ಲೈನ್ ಹೈದರಾಬಾದ್” ಅಥವಾ “ಕರ್ಫ್ಯೂ ನೆರಳಲ್ಲಿ…” ಕವನಗಳಲ್ಲಿ ಇದು ನಮಗೆ ಸ್ಪಷ್ಟವಾಗಿ ಗೋಚರಿಸುವುದು. ಪ್ರತಿಮೆ, ಸಂಕೇತಗಳಲ್ಲದೇ ನಗರದ ಅನುಭವಗಳು, ನಗರ ಸಂವೇದನೆ ಸಹ ಈ ಕವನಗಳಲ್ಲಿ ಸಾಮಾನ್ಯವಾಗಿ ಕಾಣಬರುತ್ತವೆ. ಉದಾಹರಣೆಗೆ “ಕರ್ಫ್ಯೂ ನೆರಳಲ್ಲಿ…” ಕವನದ ಈ ಸಾಲುಗಳನ್ನು ಗಮನಿಸಿ: “ಎಲ್ಲಿದ್ದೇನೆ ನಾನು ಎಲ್ಲಿದ್ದೇನೆ? / ನಗರದೊಳಗಾ? / ನಗರದ ನರಕದೊಳಗೆ ಬಾಯ್ತೆರೆಯುವ ಭೀಭತ್ಸದೊಳಗಾ?” (ಪು.೫೯) ಈ ಕವನಗಳಲ್ಲಿ ನವ್ಯಕಾವ್ಯದ ಅಂಶಗಳನ್ನು ಕಾಣಬಹುದು ಎಂದ ಮಾತ್ರಕ್ಕೆ ಅಷ್ಟು ಮಾತ್ರ ಎಂದೇನೂ ನನ್ನ ಅಭಿಮತವಲ್ಲ. ಅದಕ್ಕೆ ಹೊರತಾಗಿ ಇರುವ ಹಲವು ಕಾವ್ಯಸ್ವರೂಪಗಳು, ಸಂವೇದನೆಗಳು ನಮಗೆ ಈ ಕವನಗಳಲ್ಲಿ ಓದಲು ಸಿಗುತ್ತವೆ.

ಅವುಗಳಲ್ಲಿ ಒಂದು ವಿಷಯವನ್ನು ನಾನು ಒತ್ತಿ ಹೇಳಬಯಸುತ್ತೇನೆ. “ಸ್ವಪ್ನಲಿಪಿ” ಸಂಕಲನದ ಕವನಗಳಲ್ಲಿ ಒಂದು ವಿಶಾಲ, ಗಂಭೀರ, ತತ್ವಶಾಸ್ತ್ರೀಯ ಸಂವೇದನೆ ಕಾರ್ಯರತವಾಗಿದೆ. ಇಲ್ಲಿನ ಭೀಭತ್ಸ ವಿವರಗಳು ನಮ್ಮನ್ನು ಮೊದಲ ಓದಿನಲ್ಲಿ ಸೆಳೆಯುತ್ತಾವೆ; ಆದರೆ ಮರು ಓದಿನಲ್ಲಿ ಒಳಹೂರಣ ಗಹನವಾದದ್ದೆಂದು ಅರಿವಾಗುತ್ತದೆ. “ಗೋಡೆಗೆ ನೇತಾಡುತ್ತಿರುವ ದೇಹವಲ್ಲ, ಕನ್ನಡಿಯೆಂದರೆ / ಅದು ನಿನ್ನ ಅಂತರಂಗ” (ಪು.೬೯) ಎಂದು ನಿರೂಪಕ ಈ ಕವನಗಳ ನಿಜ ವಸ್ತು ಯಾವುದೆಂದು ಸೂಚಿಸುತ್ತಾನೆ. ಆತ “ಉರುಳುತ್ತಿರುವ ವಿಷಾದ ವೃಕ್ಷಗಳ ನೆರಳೊಳಗೆ / ಅದೃಶ್ಯ ಲೋಕಗಳ ಅರಸುತ್ತಿರುವ ಕನಸುಗಾರ” (ಪು.೭೫). ಈ ಸಾರ್ವತ್ರಿಕ ನಿರೂಪಕ ತನ್ನ ಸುತ್ತಣ ಜಗತ್ತನ್ನು ತೀರಾ ನಿಷ್ಠುರವಾಗಿ ನೋಡುತ್ತಾನೆ, ನಿರ್ದಾಕ್ಶ್ಯಣ್ಯವಾಗಿ ನಿರೂಪಿಸುತ್ತಾನೆ, ತೀವ್ರ ಜೀವನ ಪ್ರೀತಿಯೂ, ತೀವ್ರ ಸಿಟ್ಟು, ಅಸಮಾಧಾನ, ಅಸಹನೆಯೂ ಅವನಲ್ಲಿ ತಾನಿರುವ ಜಗದ ಬಗೆಗಿದೆ. ಆದರೆ, ಇದಕ್ಕೆ ಈ ಸಾರ್ವತ್ರಿಕ ಮಾನವ ತನ್ನನ್ನೇ ಜವಾಬ್ದಾರನನ್ನಾಗಿಸುತ್ತಾನೆ: “ನನ್ನ ತಲೆ ಮೇಲೆ ತೂಗಾಡುತ್ತಿರುವ ಕತ್ತಿಯ ಮೇಲೆ / ನನ್ನ ಹಸ್ತಾಕ್ಷರ ಹೊರತು ಬೇರೆ ಸಂಕೇತವಿಲ್ಲ”. (ಪು.೭೯)

ಸ್ವಪ್ನ ಈ ಸಂಕಲನದ ಪ್ರಧಾನ ಪದ. ಈ ಶಬ್ದದ ವಿಸ್ತಾರ ಹಲವು ಬಗೆಯಲ್ಲಿ ಆಗುತ್ತದೆ – ಸ್ವಪ್ನಶಕ್ತಿ, ಕತ್ತಲ ಚಿತ್ರಶಾಲೆ, ಸ್ವಪ್ನಸರಪಳಿ, ಸ್ವಪ್ನಾರಣ್ಯ, ಸ್ವಪ್ನಭೀಭತ್ಸಗಳು, ಸ್ವಪ್ನಗಡಿಗಳು, ಸ್ವಪ್ನಜಲ. ಸಾಲ್ವಡಾರ್ ಡಾಲಿಯನ್ನು ನೆನಪಿಸುತ್ತ “ಸ್ವಪ್ನಖಚಿತ ಶರೀರ”ದ ಈ ನಿರೂಪಕ ಹೇಳುತ್ತಾನೆ, “ಕರಗುತ್ತಿರುವ ಗಡಿಯಾರಗಳೊಂದಿಗೆ ಸಂಬಂಧವಿಲ್ಲ / ಜೀವನಸಂಘರ್ಷದಲಿ ಉಜ್ವಲವಾದ ಕ್ಷಣ ಒಂದೇ” (ಪು.೪೫). ಈ ನಿರೂಪಕನಿಗೆ “ಕನಸಿನ ಶಕ್ತಿಯ ವಿಜೃಂಭಣೆಯಲ್ಲಿ / ಸಂಕೋಲೆಗಳು ಹರಿಯುತ್ತಿರುವ ಸಪ್ಪಳ” ಕೇಳುತ್ತದೆ. (ಪು.೪೫) ಜೀವನದ ಮೂಲಭೂತ, ಗಹನ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ, ಉತ್ತರಗಳ ಶೋಧದಲ್ಲಿ ಎದುರಾಗುವ ಅಸಾಮಾನ್ಯ ಅಸಮಾಧಾನಗಳನ್ನು ಅರಗಿಸಿಕೊಳ್ಳುತ್ತ, ಮತ್ತೆ ಮತ್ತೆ ತಾನು ಜೀವಂತವಿದ್ದೇನಾ ಎಂದು ಪ್ರಶ್ನಿಸಿಕೊಳ್ಳುತ್ತಾನೆ. “ಕತ್ತಲ ಮೃತ್ಯುಶಿಲೆಗಳ ಮೇಲೆ ಕನಸಧೂಳಿಯೊಳಗೆ” (ಪು.೪೭) ನಡೆಯುತಿರುವಾಗ “ನನ್ನ ಶಬ್ದಶರೀರದ ಮೇಲಿನ ಮುಸುಕುಗಳನೆಲ್ಲ” ತೆಗೆಯುವ ಅನಿವಾರ್ಯತೆ ಕಾಣಬರುತ್ತದೆ; ಯಾಕೆಂದರೆ, “ಕತ್ತಲೆಯ ನಾಶದ ನಂತರವೇ ತಾನೇ ಹೊಸ ಸೃಷ್ಟಿ, ಹೊಸ ಪ್ರಪಂಚ!” (ಪು.೪೬).

ಅಜಂತಾ ಓರ್ವ ಅಸಾಧಾರಣ ಕಲ್ಪನಾಶಕ್ತಿಯ ಕವಿ ಎನ್ನುವಲ್ಲಿ ಯಾವುದೇ ಸಂಶಯವಿಲ್ಲ. ಈ ಸಂಕಲನದ ಪ್ರತಿ ಕವನವೂ ಇದಕ್ಕೆ ಸಾಕ್ಷಿ. ಉತ್ಕಟ ಭಾವನೆಗಳು, ಗಂಭೀರ ವಸ್ತುಗಳು, ತಿಕ್ಕಿತೀಡಿದ ನುಡಿಗಟ್ಟುಗಳು, ಹುರಿದಿಟ್ಟಷ್ಟು ಗರಿಗರಿ ಶಬ್ದಪ್ರಯೋಗಗಳು, ಗಹನ ಲಯ, ಉಜ್ವಲ ಪ್ರತಿಮೆಗಳು, ಹೀಗೆ ಹಲವಾರು ಕಾವ್ಯಗುಣಗಳು ಇಲ್ಲಿ ಮೇಳೈಸಿವೆ. ಪ್ರತಿ ಕವನವೂ ಒಂದು ರಹಸ್ಯದ ಶೋಧನೆಯಲ್ಲಿರುವ ಪ್ರಯಾಣದಂತೆ ವಿನ್ಯಾಸಗೊಂಡಿದೆ. ಅದೆಂದರೆ, ಸುತ್ತಮುತ್ತುತ್ತಿರುವ ಕತ್ತಲಲ್ಲಿ “ಹೆಬ್ಬುಲಿಯ ಎದೆಯಲ್ಲಿ ಕತ್ತಿ ಝಳಪಿಸುತ್ತಿರುವ ಮನುಷ್ಯ” (ಪು.೩೩) ಅಪಾರ ಜೀವನ ಪ್ರೀತಿಯೊಂದಿಗೆ, “ಸ್ವಚ್ಛವಾದ ಸೂರ್ಯೋದಯಗಳ ಹೂತಿಟ್ಟುಕೊಂಡಿರುವವರೇ ಎಲ್ಲ” (ಪು.೩೨) ಎಂಬ ತೀಕ್ಷ್ಣ ನಂಬಿಕೆಯಲ್ಲಿ “ನನ್ನ ಬೆನ್ನಟ್ಟಿರುವ ಜೀವನ ಇದು; / ಜೀವನವೋ ನಿರ್ಜೀವನವೋ?” (ಪು.೫೨) ಎಂದು ಬಾಳಿನ ಅಮೂಲಾಗ್ರ ಸಂಶೋಧನೆಯಲ್ಲಿ ತೊಡಗಿದ್ದಾನೆ. ಇಲ್ಲಿನ ಪ್ರತಿಮೆಗಳು ಜೀವನವನ್ನು ಅದರ ಋಣಾತ್ಮಕ ಸಂಧರ್ಭದಲ್ಲಿ ಚಿತ್ರಿಸುತ್ತಿದ್ದರೂ ಸಹ, ಈ ಕವನಗಳ ಒಳಚೇತನವು ಜೀವನಪರ ತಹತಹ ಹೊಂದಿದೆ: “…ಸ್ವಪ್ನಜಲದಲ್ಲಿ / ಸ್ವಚ್ಛವಾದ ಮನುಷ್ಯ ಒಂದು ಕ್ಷಣ ಸಾಕ್ಷಾತ್ಕರಿಸಿದರೂ ಸಾಕು / ಎರಡು ರಸ್ತೆಗಳು ಕೂಡುತ್ತಿರುವ ಸ್ಠಳದಲ್ಲಿ ಏನೋ ಒಂದು ಹೊಸ ಎಚ್ಚರ / ಹೊಸ ಭಾಷೆಯ ಆವಿರ್ಭಾವ” (ಪು.೩೦) ಎನ್ನುವಷ್ಟು ಆಶಾವಾದಿತ್ವ ಈ ಕವನಗಳಲ್ಲಿದೆ.

“ಸ್ವಪ್ನಲಿಪಿ”ಯನ್ನು ಓದುತ್ತ ಇದು ಕನ್ನಡಕ್ಕೆ ಅನುವಾದಗೊಂಡಿರುವ ಕೃತಿ ಎನ್ನುವುದೇ ಮರೆತು ಬಿಡುವಷ್ಟು ಸಹಜ ಲಯ, ಸ್ಪಷ್ಟ ಓಘ, ಸುಲಲೀತ ಅಭಿವ್ಯಕ್ತಿಗಳಿಂದ ಕವಿಯ ಮೂಲ ಕವನವನ್ನೇ ಓದಿದ ಅನುಭವವನ್ನು ನಮಗೆ ಒದಗಿಸುವಂತ ಪಾರದರ್ಶಕ ಬಗೆಯಲ್ಲಿ ಈ ಕವನಗಳ ಭಾಷಾಂತರ ಆಗಿದೆ. ಅನುವಾದಕರಾದ ಚಿದಾನಂದ ಸಾಲಿ ಕನ್ನಡದಲ್ಲಿ ಚಿರಪರಿಚಿತ ಹೆಸರು ನಿಜ. ಇಂತಹ ಕ್ಲಿಷ್ಟ, ಸಂಕೀರ್ಣ, ಉತ್ಕಟ ಕವನಗಳನ್ನು ತೆಲುಗು ಭಾಷೆಯಿಂದ ಕನ್ನಡಕ್ಕೆ ಯಶಸ್ವಿಯಾಗಿ ತರುವಲ್ಲಿ ಚಿದಾನಂದ ಸಾಲಿಯವರ ಭಾಷಾ ಪ್ರಾವೀಣ್ಯವೂ ಸಹ ಪ್ರಮುಖ ಪಾತ್ರ ವಹಿಸಿದೆ. ಹಲವು ಪದೋಪಯೋಗಗಳು ತೆಲುಗು ಶಬ್ದಗಳಿಂದ ಪ್ರೇರಿತವಾಗಿದ್ದರೂ ಸಹ ಕನ್ನಡಕ್ಕೆ ಸ್ವಾಗತಿಸಬೇಕಾದ ಶಬ್ದಗಳು. “ಸ್ವಪ್ನಲಿಪಿ” ತೆಲುಗು ಕಾವ್ಯ ಚರಿತ್ರೆಯಲ್ಲಿ ಒಂದು ಮಹತ್ವದ ಸಂಕಲನವಂತೆ. ಕನ್ನಡ ಕಾವ್ಯಾಸಕ್ತರ ದೃಷ್ಟಿಯಿಂದ ಈ ಅನುವಾದ ಅಂತೆಯೇ ಕನ್ನಡದಲ್ಲಿಯೂ ಒಂದು ಮಹತ್ವದ ಕೃತಿ.


ಮೂಲ ತೆಲುಗು: ಅಜಂತಾ  (ಪೆನುಮೂರ್ತಿ ವಿಶ್ವನಾಥ ಶಾಸ್ತ್ರಿ)

ಕನ್ನಡ ಅನುವಾದ: ಚಿದಾನಂದ ಸಾಲಿ

ಪ್ರಕಾಶನ: ಸಾಹಿತ್ಯ ಅಕಾದೆಮಿ, ಬೆಂಗಳೂರು

ಪುಟ: ೮೦; ಬೆಲೆ: ರೂ. ೧೦೦

ಪ್ರಕಟಣೆಯ ವರ್ಷ: ೨೦೧೯ (ಮೂಲ: ೧೯೯೩)

ಪ್ರತಿಕ್ರಿಯಿಸಿ