ಆರ್ಥಿಕತೆ ನೆಲಕಚ್ಚಿದೆ, ಸ್ಟಾಕ್ ಏರುತ್ತಿದೆ: ಏನಾಗುತ್ತಿದೆ?

ಅಮೇರಿಕಾಕ್ಕೆ ಅಹಿತವಾದದ್ದು, ಹಾನಿಕಾರಕವಾದದ್ದು ಕೆಲವೊಮ್ಮೆ ಮಾರುಕಟ್ಟೆಗೆ ಒಳ್ಳೆಯದಾಗುತ್ತದೆ. ಆರ್ಥಿಕತೆಗೆ ಸಂಬಂಧಿಸಿದ ಸುದ್ಧಿಗಳೆಲ್ಲಾ ಭೀಕರವಾಗಿದೆ. ಮೊನ್ನೆ ಪ್ರಕಟವಾದ ಮೊದಲ ಮೂರು ತಿಂಗಳಿಗೆ ಸಂಬಂಧಿಸಿದ ಜಿಡಿಪಿ ವರದಿ ನೋಡಿ ಗಾಬರಿಯಾಗಬೇಡಿ. ಮಾಮೂಲಿ ದಿನಗಳಾಗಿದ್ದರೆ ಆರ್ಥಿಕತೆ ವರ್ಷಕ್ಕೆ ಸುಮಾರು ಶೇಕಡ ೫ರಷ್ಟು ಕುಗ್ಗುತ್ತಿದೆ ಅಂದಿದ್ದರೆ, ಎಂತಹ ಕೆಟ್ಟ ಸುದ್ದಿ ಅಂತ ಜನ ಗಾಬರಿಯಾಗುತ್ತಿದ್ದರು. ಆದರೆ ಈಗ ಈ ವರದಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಒಂದೆರಡು ಹನಿಗಳು ಮಾತ್ರ. ಸರಿಯಾದ ಅಂಕಿಅಂಶ ಗಮನಿಸಿದರೆ ಆರ್ಥಿಕತೆ ಪ್ರಪಾತಕ್ಕೆ ಕುಸಿಯುತ್ತಿರುವುದು ಕಣ್ಣಿಗೆ ರಾಚುವಂತೆ ಕಾಣುತ್ತದೆ. ಅಮೇರಿಕೆಯ ಕಾಂಗ್ರೆಷನಲ್ ಬಜೆಟ್ ಆಫೀಸ್ ಪ್ರಕಾರ ನಿರುದ್ಯೋಗ ದರ ವರ್ಷದ ಕೊನೆಗೆ ಶೇಕಡ ೧೬ರಷ್ಟು ಆಗಬಹುದು. ಆ ಅಂದಾಜು ತುಂಬಾ ಕಮ್ಮಿ.

ಕೋವಿಡ್-೧೯ ಕಾಣಿಸಿಕೊಂಡ ಪ್ರಾರಂಭದ ಕೆಲವು ವಾರಗಳು ಸ್ಟಾಕ್ ಬೆಲೆಗಳು ಕುಸಿದಿತ್ತು. ಆದರೆ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡವು. ಈಗ ಅದು ಹೆಚ್ಚು ಕಡಿಮೆ ಮುಂಚಿನ ಸ್ಥಿತಿಗೇ ಬಂದಿದೆ. ಅಯ್ಯೋ, ಆರ್ಥಿಕತೆಯ ಸ್ಥಿತಿ ಹೀಗಿದೆಯಲ್ಲಾ ಅಂತ ಎಲ್ಲರೂ ಚಿಂತೆ ಮಾಡುತ್ತಿದ್ದಾಗ, ಸ್ಟಾಕ್ ಮಾರುಕಟ್ಟೆ ಸ್ಥಿತಿ ಚೆನ್ನಾಗಿಯೇ ಇದೆ. ನಿಜವಾಗಿ ಏನಾಗುತ್ತಿದೆ?

ನೀವು ಸ್ಟಾಕ್ ಬೆಲೆಗಳ ಆರ್ಥಿಕ ಪರಿಣಾಮವನ್ನು ಗಮನಿಸಬೇಕಾ? ಹಾಗಾದರೆ ಮೂರು ನಿಯಮಗಳನ್ನು ನೆನಪಿಟ್ಟುಕೊಳ್ಳಿ. ಒಂದನೇ ನಿಯಮ ಸ್ಟಾಕ್ ಮಾರುಕಟ್ಟೆ ಆರ್ಥಿಕತೆಯಲ್ಲ. ಎರಡನೆಯ ನಿಯಮ ಸ್ಟಾಕ್ ಮಾರುಕಟ್ಟೆ ಆರ್ಥಿಕತೆಯಲ್ಲ. ಮೂರನೆಯ ನಿಯಮ ಸ್ಟಾಕ್ ಮಾರುಕಟ್ಟೆ ಆರ್ಥಿಕತೆಯಲ್ಲ.

ಸ್ಟಾಕ್ ಸ್ಥಿತಿ – ಬಹುಪಾಲು ದುರಾಸೆ ಮತ್ತು ಗಾಬರಿಯ ನಡುವೆ ಹೋಯ್ದಾಡುತ್ತಿರುತ್ತದೆ. ನಿಜವಾದ ಆರ್ಥಿಕ ಬೆಳವಣಿಗೆ ಅನ್ನೋದು ಸೋತಿರುತ್ತದೆ ಅಥವಾ ಇರೋದೇ ಇಲ್ಲ ಅಥವಾ ಇವೆರಡರ ನಡುವೆ ಎಲ್ಲೋ ಇರುತ್ತದೆ. ೧೯೬೦ರಷ್ಟು ಹಿಂದೆಯೇ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಪಾಲ್ ಸ್ಯಾಮ್ಯುಯಲ್‌ಸನ್ ವ್ಯಂಗವಾಗಿ ಹೇಳಿದ್ದ, ’ಕಳೆದ ಐದು ಆರ್ಥಿಕ ಕುಸಿತದಲ್ಲಿ ಒಂಬತ್ತನ್ನು ಮಾರುಕಟ್ಟೆ ಮೊದಲೇ ಊಹಿಸಿತ್ತು!’

ಸ್ಟಾಕ್‌ನಲ್ಲಿ ಹೂಡುವುದನ್ನು ಬಿಟ್ಟು ಇನ್ನೇನು ಮಾಡಬಹುದು? ಬಾಂಡುಗಳನ್ನು ಕೊಳ್ಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಡುಗಳಿಂದ ಬರುವ ಆದಾಯ ತುಂಬಾ ಕಡಿಮೆ. ಅಮೇರಿಕೆಯ ಸರ್ಕಾರಿ ಬಾಂಡುಗಳಲ್ಲಿ ಹತ್ತು ವರ್ಷಗಳು ಹೂಡಿದರೆ ಶೇಕಡ ೦.೬ರಷ್ಟು ಸಿಗುತ್ತದೆ. ೨೦೧೮ರ ಕೊನೆಯ ಭಾಗದಲ್ಲಿ ನಿಮಗೆ ಶೇಕಡ ೩ಕ್ಕಿಂತ ಹೆಚ್ಚು ಸಿಗುತ್ತಿತ್ತು. ಮುಂದೆ ಸಂಭವಿಸುವ ಹಣದುಬ್ಬರಕ್ಕೂ ರಕ್ಷಣೆ ಬೇಕು ಅಂದುಕೊಂಡರೆ ಅಂತಹ ಬಾಂಡುಗಳಿಂದ ಆದಾಯ ಶೇಕಡ ಇನ್ನೂ ಅರ್ಧದಷ್ಟು ಕಡಿಮೆ.

ಹಾಗಾಗಿ ಕೋವಿಡ್-೧೯ ಕುಸಿತದ ನಡುವೆಯೂ ಕಂಪೆನಿಗಳಲ್ಲಿ ಸ್ಟಾಕ್ ಕೊಳ್ಳುವುದೇ ಇಂದಿಗೂ ಲಾಭದಾಯಕ. ಹಾಗಾಗಿಯೇ ಜನಕ್ಕೆ ಅದರ ಆಕರ್ಷಣೆ.
ಆದರೆ ಬಡ್ಡಿದರ ಯಾಕೆ ಅಷ್ಟು ಕಡಿಮೆ ಇದೆ? ಯಾಕೆಂದರೆ ಆರ್ಥಿಕತೆ ಮುಂದಿನ ಹಲವು ವರ್ಷಗಳು ಹೀಗೆ ಸೊರಗಿಕೊಂಡೇ ಇರುತ್ತದೆ ಅನ್ನುವ ನಿರೀಕ್ಷೆಯಲ್ಲಿ ಬಾಂಡ್ ಮಾರುಕಟ್ಟೆ ಇದೆ. ಫೆಡರಲ್ ರಿಸರ್ವ್ ಮುಂದಿನ ದಿನಗಳಲ್ಲೂ ಇದೇ ರೀತಿಯಲ್ಲಿ ಸುಲಭ-ನಗದು ನೀತಿಯನ್ನು ಅನುಸರಿಸಿಕೊಂಡು ಹೋಗುತ್ತದೆ ಅಂತ ನಂಬಿದೆ. ಅದನ್ನೇ ನಾನು ಹೇಳೋದು, ನಿಜವಾದ ಆರ್ಥಿಕತೆ ದುರ್ಬಲವಾಗಿ ಇರೋದರಿಂದಲೇ ಸ್ಟಾಕುಗಳು ಬಲವಾಗಿರೋದು.

ಈಗ ನೀವು ಒಂದು ಪ್ರಶ್ನೆ ಕೇಳಬಹುದು, ಆರ್ಥಿಕ ದುರ್ಬಲತೆ ಸ್ಟಾಕುಗಳಿಗೆ ಒಳ್ಳೆಯದು ಅಂತಾದರೆ, ಈ ವರ್ಷದ ಪ್ರಾರಂಭದಲ್ಲಿ ಮಾರುಕಟ್ಟೆ ಯಾಕೆ ಕುಸಿದಿತ್ತು? ಅದಕ್ಕೆ ಉತ್ತರ ಅಂದರೆ, ಮಾರ್ಚ್ ತಿಂಗಳಲ್ಲಿ ಕೆಲವು ವಾರಗಳು ೨೦೦೮ರ ಮಾದರಿಯ ಹಣಕಾಸು ಬಿಕ್ಕಟ್ಟಿನ ಅಂಚಿನಲ್ಲಿ ಜಗತ್ತು ತತ್ತರಿಸುತ್ತಿತ್ತು. ಆ ಸಮಯದಲ್ಲಿ ಹೂಡಿಕೆದಾರರು ಸ್ವಲ್ಪ ಅಪಾಯದ ಸುಳಿವು ಸಿಕ್ಕರೂ ಎಲ್ಲಾ ಗೋರಿಕೊಂಡು ಓಡುತ್ತಿದ್ದರು. ಆದರೆ ಬಿಕ್ಕಟ್ಟು ತಪ್ಪಿತು. ಫೆಡರಲ್ ಬ್ಯಾಂಕ್ ತೀವ್ರವಾದ ಕ್ರಮ ತೆಗೆದುಕೊಂಡಿತು. ಅದು ಎಲ್ಲಾ ರೀತಿಯ ಸೊತ್ತುಗಳನ್ನೂ ಹಿಂದೆಂದು ಕಾಣದಷ್ಟು ಪ್ರಮಾಣದಲ್ಲಿ ಖರೀದಿಸಿತು. ಅದು ಹಾಗೆ ಮಾಡದೇ ಹೋಗಿದ್ದರೆ ಇನ್ನೂ ದೊಡ್ಡ ದುರಂತದಲ್ಲಿ ನಾವು ಇಂದು ಇರುತ್ತಿದ್ದೆವು.

ಅದರಿಂದಾಗಿಯೇ ಡೋನಾಲ್ಡ್ ಟ್ರಂಪ್ ಯಾವುದೇ ಅರ್ಹತೆಯೂ ಇಲ್ಲದ, ಹುಚ್ಚು ಆರ್ಥಿಕ ಸಿದ್ಧಾಂತಗಳನ್ನು ಬೆಂಬಲಿಸುವ ಭವ್ಯ ಇತಿಹಾಸವಿರುವ ತನ್ನ ಹಿಂಬಾಲಕರನ್ನು ಫೆಡರಲ್ ರಿಸರ್ವ್ ಬೋರ್ಡ್‌ಗೆ ಆಯ್ಕೆ ಮಾಡಿಕೊಂಡಾಗ ಕಳವಳವಾಗುತ್ತದೆ. ಅಕಸ್ಮಾತ್ ಈ ಪಿಡುಗಿಗೆ ಟ್ರಂಪ್ ಆಡಳಿತ ಪ್ರತಿಕ್ರಿಯಿಸುತ್ತಿರುವಂತೆ, ಆಗಿನ ಆಡಳಿತ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಪ್ರತಿಕ್ರಿಯಿಸಿದ್ದರೆ ಈಗ ನಾವು ಎಲ್ಲಿರುತ್ತಿದ್ದೆವು ಊಹಿಸಿಕೊಳ್ಳಿ.

ಮತ್ತೆ ಸ್ಟಾಕುಗಳಿಗೂ ಮತ್ತು ಆರ್ಥಿಕ ವಾಸ್ತವಕ್ಕೂ ಯಾವುದೇ ಸಂಬಂಧವೂ ಇಲ್ಲ ಅನ್ನೊ ವಿಷಯಕ್ಕೆ ಬರೋಣ. ಇದೇನೂ ಹೊಸದಲ್ಲ. ೨೦೦೦ರ ಮಧ್ಯಭಾಗದಿಂದಲೇ ಪ್ರಾರಂಭವಾಗಿತ್ತು.

೨೦೦೭ರಿಂದಲೇ ಆಧುನಿಕ ಆರ್ಥಿಕತೆಯ ಬಗ್ಗೆ ನಾವು ಕಲಿತುಕೊಂಡಿರುವ ಋಣಾತ್ಮಕ ವಿಷಯಗಳನ್ನು ಒಮ್ಮೆ ಯೋಚಿಸಿ ನೋಡಿ. ನಾವು ಅಂದುಕೊಂಡಿದ್ದಕ್ಕಿಂತ ಈ ಮುಂದುವರಿದ ಆರ್ಥಿಕತೆ ತುಂಬಾ ಅಸ್ಥಿರವಾದದ್ದು. ಪದೇ ಪದೇ ಬಿಕ್ಕಟ್ಟಿಗೆ ಒಳಗಾಗುತ್ತಿರುತ್ತದೆ. ಉತ್ಪಾದಕತೆಯ ಬೆಳವಣಿಗೆ ಕುಸಿದಿದೆ. ಮಾಹಿತಿ ತಂತ್ರಜ್ಞಾನದಿಂದ ೧೯೯೦ರ ಹಾಗೂ ೨೦೦೦ರ ಮೊದಲ ಭಾಗದಲ್ಲಿ ಆಗಿದ್ದ ಪ್ರಗತಿ ಯಾವಾಗಲೋ ಒಮ್ಮೆ ಆಗುವಂತಹದ್ದು. ೧೫ ವರ್ಷಗಳ ಹಿಂದೆ ನಾವ್ಯಾರೂ ನಮ್ಮ ಆರ್ಥಿಕತೆ ಇಷ್ಟು ಹಾಳಾಗಬಹುದು ಅಂತ ನಿರೀಕ್ಷಿಸಿರಲಿಲ್ಲ.

ಸ್ಟಾಕ್ ಇಂದು ಸುಸ್ಥಿತಿಯಲ್ಲಿದೆ. ಜಿಡಿಪಿಗೆ ಬಾಂಡಿನ ಮೌಲ್ಯವನ್ನು ಹೋಲಿಸಿ ನೋಡಿದರೆ ಅದು ೨೦೦೭ಕ್ಕಿಂತ ಸಾಕಷ್ಟು ಹೆಚ್ಚಿದೆ. ಡಾಟ್ ಕಾಮ್ ಗುಳ್ಳೆ ಉತ್ತಂಗದಲ್ಲಿದ್ದಾಗ ಇದ್ದುದಕ್ಕಿಂತ ಅದರ ಮೌಲ್ಯ ಸ್ವಲ್ಪ ಹೆಚ್ಚಾಗಿಯೇ ಇದೆ. ಯಾಕೆ?

ಇದಕ್ಕೆ ಪರ್ಯಾಯವನ್ನು ಗಮನಿಸೋಣ. ಉತ್ತರ ಸಿಗಬಹುದು. ಮಹಾನ್ ಆರ್ಥಿಕ ಹಿಂಜಿರಿತದಿಂದ ಉದ್ಯೋಗದ ಪರಿಸ್ಥಿತಿ ಹೇಗೆ ಚೇತರಿಸಿಕೊಂಡಿತು? ಬಡ್ಡಿದರ ತುಂಬಾ ಕಡಿಮೆಯಾಗಿದ್ದು ಅದಕ್ಕೆ ಕಾರಣ ಅಂತ ಚರಿತ್ರೆ ಹೇಳುತ್ತದೆ. ಬಡ್ಡಿದರವನ್ನು ಕಡಿಮೆ ಮಾಡ್ತಿದಾರೆ ಅಂದರೆ ಅಲ್ಲಿ ಆರ್ಥಿಕತೆ ದುರ್ಬಲವಾಗಿದೆ ಅಂತಲೇ ಅರ್ಥ. ಒಳ್ಳೆಯ ಲಾಭ ಬರುತ್ತಿದ್ದರೂ ಉದ್ದಿಮೆಗಳು ಹೂಡುವುದಕ್ಕೆ ಬಯಸುವುದಿಲ್ಲ. ಸ್ಟಾಕುಗಳನ್ನು ಮರುಖರೀದಿ ಮಾಡುತ್ತಾರೆ. ಆದರೆ ಸ್ಟಾಕ್ ಬೆಲೆಯ ದೃಷ್ಟಿಯಿಂದ ಕಡಿಮೆ ದರ ಒಳ್ಳೆಯದು.

ಸ್ಟಾಕ್ ಮಾರುಕಟ್ಟೆ ಆರ್ಥಿಕತೆ ಅಲ್ಲ ಅಂತ ಹೇಳಿದೆ ಅಲ್ವಾ?

ಇದರರ್ಥ ಸಧ್ಯದ ಮಾರುಕಟ್ಟೆಯ ಅಂದಾಜುಗಳು ಸರಿ ಅಂತ ಅಲ್ಲ. ನನ್ನ ಅಂತರಾಳದ ಅನಿಸಿಕೆ ಅಂದರೆ ಹೂಡಿಕೆದಾರರು ಒಳ್ಳೆಯ ಸುದ್ಧಿಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಸತ್ಯ ಅಂದರೆ ಮಾರುಕಟ್ಟೆ ಯಾವ ದಿಕ್ಕಿನಲ್ಲಿ ಸಾಗಿದೆ ಅಂತ ನನಗೆ ಸ್ವಲ್ಪವೂ ಅಂದಾಜಿಲ್ಲ.

ಕೃಪೆ : nytimes.com

ಅನುವಾದ: ಟಿ. ಎಸ್. ವೇಣುಗೋಪಾಲ್

ಪ್ರತಿಕ್ರಿಯಿಸಿ