ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೫ : ‘ಕರ್ನಾಟಿಕ್’ ಸಂಗೀತ ಪರಂಪರೆ ಮತ್ತು ಮೈಸೂರಿನ ಸಂಗೀತ

“ಕರ್ನಾಟಿಕ್” ಸಂಗೀತ ಪರಂಪರೆಯ ಮೂಲಸ್ರೋತವೇನು? ಯಾವ ಸಂದರ್ಭದಲ್ಲಿ ಈ ಪರಂಪರೆ ಘನೀಕರಿಸಿತು? ಮೈಸೂರಿಗೂ ಈ ಪರಂಪರೆಗೂ ಇದ್ದ ಸಂಬಂಧವೇನು? ಈ ಸಂಬಂಧದಿಂದಾದ ಪರಿಣಾಮ ಏನು, ಎಂಬಿತ್ಯಾದಿ ಪ್ರಶ್ನೆಗಳನ್ನು ಇಲ್ಲಿ ಉತ್ತರಿಸಲು ಯತ್ನಿಸಲಾಗಿದೆ.

ಭಾಗ ೧ : ೧೯ನೇ ಶತಮಾನದ ಬೆಳವಣಿಗೆಗಳು ಮತ್ತು ಕರ್ನಾಟಕದ ಅಸ್ಮಿತೆ – https://ruthumana.com/2020/05/02/carnatic-music-kannada-and-kannadigas-part-1

ಭಾಗ ೨ : ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ –  https://ruthumana.com/2020/05/02/carnatic-music-kannada-and-kannadigas-part-2/

ಭಾಗ ೩ : ಮೈಸೂರಿನವರು, ಹೊರಗಿನವರು’ ಮತ್ತು ಕನ್ನಡ ಸಂಗೀತ – https://ruthumana.com/2020/05/03/carnatic-music-kannada-and-kannadigas-part-3/

ಭಾಗ ೪ : ಶಾಸ್ತ್ರೀಯತೆ, ಕನ್ನಡತನ ಮತ್ತು ಪೋಷಕರು – https://ruthumana.com/2020/05/09/carnatic-music-kannada-and-kannadigas-part-4/

ಕೃಷ್ಣರಾಜ ಒಡೆಯರ ಆದೇಶದಂತೆ ರಚಿಸಲ್ಪಟ್ಟ ಕನ್ನಡ ಕೃತಿಗಳು ಜನಪ್ರಿಯವಾಗಲಿಲ್ಲವೆಂದು ಈ ಹಿಂದಿನ ಸಂಚಿಕೆಯಲ್ಲಿ
ನೋಡಿರುತ್ತೇವೆ. ಉದಾಹರಣೆಗೆ ಮುತ್ತಯ್ಯ ಭಾಗವತರು ರಚಿಸಿದ ನೂರಾರು ಕೃತಿಗಳಲ್ಲಿ ಪ್ರಚಲಿತವಾಗಿರುವುದು ನಾಲ್ಕೈದು
ಮಾತ್ರ. ಬೇರೆ ಸಂಗೀತಗಾರರು ಸಂಯೋಜಿಸಿದ ಕೃತಿಗಳಂತೂ ಕೇಳಸಿಗುವುದೇ ಅಪರೂಪ. ಇದೇಕೆ ಹೀಗೆ?.  ಮಹಾರಾಜರಾಗಿದ್ದಾಗ್ಯೂ ಸಂಗೀತ ಸಂಪ್ರದಾಯವೊಂದರಲ್ಲಿ ಬದಲಾವಣೆ ತರಲಾಗಲಿಲ್ಲ ಏಕೆ? ಮೈಸೂರಿನ ಸಂಗೀತಗಾರರಿಗೆ ಕನ್ನಡದಲ್ಲಿ ಹಾಡುವುದು ಇಷ್ಟವಿರಲಿಲ್ಲವೆ? ಹಲವು ಪ್ರೇಕ್ಷಕರು ಕನ್ನಡ ಹಾಡುಗಳನ್ನು ಬಯಸಿaಯೂ ಏಕೆ ಹೀಗಾಯಿತು? ನೋಡೋಣ.

ಮೇಲಿನ ಪ್ರಶ್ನೆಗಳನ್ನುತ್ತರಿಸುವುದಕ್ಕೆ 19ನೇ ಶತಮಾನದ ಮೊದಲ ಭಾಗಕ್ಕೆ ಹೋಗಬೇಕಾಗುತ್ತದೆ. ಕರ್ನಾಟಕ ಸಂಗೀತದ ಹೆಸರಾಂತ ತ್ರಿಮೂತಿಗಳಾದ ತ್ಯಾಗರಾಜರು, ಮುತ್ತು ಸ್ವಾಮಿ ದೀಕ್ಷಿತರು, ಮತ್ತು ಶ್ಯಾಮಾಶಾಸ್ತ್ರಿಯವರು 19ನೇ ಶತಮಾನದ ಪ್ರಥಮಾರ್ಧದಲ್ಲಿ “ಕೃತಿ” ಯ ಸ್ವರೂಪವನ್ನು ಪಕ್ವಪಡಿಸಿ ಅದಕ್ಕೆ ಒಂದು ಪರಿಪೂರ್ಣತೆಯನ್ನು ಕೊಟ್ಟಿದ್ದರು. ಕರ್ನಾಟಕ ಸಂಗೀತದಲ್ಲಿ ಹಾಡುವ ಮುಖ್ಯ ರಚನೆಯಾಗಿ ಕೃತಿ ಮೂಡಿ ಬಂದದ್ದು ಇದೇ ಸಮಯದಲ್ಲಿ. ಕ್ರಮವಾಗಿ 1827, 1834 ಮತ್ತು 1847ರಲ್ಲಿ ದೀಕ್ಷಿತರು, ಶ್ಯಾಮಶಾಸ್ತ್ರಿಗಳು ಹಾಗೂ ತ್ಯಾಗರಾಜರ ನಿಧನದ ಸಂದರ್ಭದಲ್ಲೇ ಮರಾಠರ ಸಾಮ್ರಾಜ್ಯವು ಕುಸಿಯತೊಡಗಿತು. ತಮ್ಮ ಜೀವಿತಾವಧಿಯಲ್ಲೇ ತ್ಯಾಗರಾಜರು ತಮ್ಮ ಕೃತಿಗಳ ಗುಣಮಟ್ಟ ಮತ್ತು ಶ್ರೇಷ್ಠತೆಗೆ ಹೆಸರುವಾಸಿಯಾಗಿದ್ದರು. ಈ ಹೆಸರು ಅವರ ಕೃತಿಗಳಿಂದ ಮಾತ್ರ ಬಂದಿದ್ದಲ್ಲ. ತ್ಯಾಗರಾಜರು ಹೆಸರುವಾಸಿಯಾಗಲು ಮತ್ತೊಂದು ಕಾರಣ ಅವರು ಅನೇಕ ಶ್ರೀಮಂತ ಪೋಷಕರ ಆಶ್ರಯವನ್ನು ತಿರಸ್ಕರಿಸಿದ್ದರು. ಅವರ ಗುರುಗಳಾದ ಸೊಂಟಿ ವೆಂಕಟರಮಣಯ್ಯನವರು ತಮ್ಮ ಶಿಷ್ಯ ತ್ಯಾಗರಾಜರು ತಮಗಿಂತ ಉತ್ತಮ ಹಾಡುಗಾರರೆಂದು ಹೊಗಳಿ ತಮಗೆ ಶರಭೋಜಿ ಮಹಾರಾಜರು ಕೊಟ್ಟಿದ್ದ ಚಿನ್ನದ ಪದಕ ಮತ್ತು ಸರವನ್ನು ಅವರಿಗೆ ಕೊಟ್ಟುಬಿಟ್ಟರಂತೆ (ವಿಲಿಯಂ ಜಾಕ್ಸನ್ ಅವರು ಮದ್ರಾಸ್ ಅಕಾಡೆಮಿಯ ಜರ್ನಲ್‍ನಲ್ಲಿ 1993ರಲ್ಲಿ ಪ್ರಕಟಿಸಿದ Tyagaraja: Life and Lyrics ಎಂಬ ಪ್ರಬಂಧದಲ್ಲಿದೆ). ತಮಗೆ ಆಸ್ತಿ-ಪಾಸ್ತಿ ಏನೂ ಬೇಡ ಎಂಬ ತಮ್ಮ ಸಾಮಾನ್ಯ ಧಾಟಿಯಲ್ಲಿ ತಮ್ಮ ಬಳಿಯಿದ್ದ ಎಲ್ಲವನ್ನೂ ತಮ್ಮ ಗುರುಗಳ ಮಗಳ ವಿವಾಹದ ಸಮಯದಲ್ಲಿ ಹಿಂದಿರುಗಿಸಿಬಿಟ್ಟರು.

ಮೈಸೂರಿನ ಜಗನ್ಮೋಹನ್ ಅರಮನೆಯಲ್ಲಿರುವ ತ್ಯಾಗರಾಜರ ಚಿತ್ರಕಲೆ

ತ್ಯಾಗರಾಜರಿಗೆ ಅನೇಕ ಶಿಷ್ಯರಿದ್ದರು. ತಮ್ಮ ಗುರುಗಳ ನಿಧನ ಹಾಗೂ ಆಳುತ್ತಿದ್ದ ಮರಾಠರ ದೌರ್ಬಲ್ಯದಿಂದಾಗಿ ಈ ಶಿಷ್ಯರೆಲ್ಲ ತಮಿಳುನಾಡಿನ ಬೇರೆ ಬೇರೆ ಕಡೆ ವಲಸೆ ಹೋಗಿ ತ್ಯಾಗರಾಜರ ಖ್ಯಾತಿಯನ್ನು ಇನ್ನಷ್ಟು ಹಬ್ಬಿಸಿದರು. ತಂಜಾವೂರಿನ ಕೃಷ್ಣ ಭಾಗವತರಂತಹ ಹರಿಕಥೆ ವಿದ್ವಾಂಸರು ತ್ಯಾಗರಾಜರ ಉತ್ಕಟ ಭಕ್ತಿಯನ್ನು ಕುರಿತು ತಮ್ಮ ಉಪನ್ಯಾಸಗಳಲ್ಲಿ ಹೊಗಳುತ್ತಿದ್ದರು. ತಂಜಾವೂರಿನ ಮಹಾರಾಜ ಶರಭೋಜಿ ಅಲ್ಲದೆ ಮೈಸೂರು, ತಿರುವಾಂಕೂರು ರಾಜರುಗಳ ಆಶ್ರಯವನ್ನೂ ನಿರಾಕರಿಸಿ ತ್ಯಾಗಶೀಲ ಸಂಕೇತದ ರೂಪಕವಾಗಿ ಕಾಣಿಸಿಕೊಂಡದ್ದನ್ನು ಇವರು ತಮ್ಮ ಉಪನ್ಯಾಸಗಳಲ್ಲಿ ವಿಶೇಷೀಕರಿಸತೊಡಗಿದರು. ಲೌಕಿಕ ಆಸೆಗಳನ್ನೇ ತ್ಯಜಿಸಿದ ಜೀವನ-ಸಹಜಪಾತ್ರಕ್ಕಿಂತ ದೊಡ್ಡದಾಗಿ ಕಂಡುಬಂದರು. ತ್ಯಾಗರಾಜರ ಆಧ್ಯಾತ್ಮಿಕ ಮೌಲ್ಯಗಳು ಅವರ ಸಂಗೀತ ಕೃತಿಗಳಲ್ಲಿ ಹರಳುಗಟ್ಟಿ ಸಂಗೀತವೇ ಒಂದು ಉನ್ನತ ಆಧ್ಯಾತ್ಮಿಕ ಪಯಣವೆಂಬ ಅಭಿಪ್ರಾಯ ಕ್ರೋಢೀಕೃತವಾಯಿತು. ಶಾಸ್ತ್ರೀಯ ಸಂಗೀತದ ಜ್ಞಾತಿ ಅಭಿವ್ಯಕ್ತಿಗಳಾದ ದೇವಸ್ಥಾನಗಳಲ್ಲಿನ (ವಾದ್ಯ) ಸಂಗೀತ, ದೇವದಾಸಿಯರ ಸಂಗೀತ ಹಾಗೂ ಖಾಸಗಿಯಾಗಿ ನಡೆಯುತ್ತಿದ್ದ ಭಜನಾ ಸಂಗೀತದ ಮೇಲೂ ಈ ಅಭಿಪ್ರಾಯಗಳು ಪರಿಣಾಮ ಬೀರದೇ ಇದ್ದಿರಲು ಸಾಧ್ಯವಿಲ್ಲ. ಸಂಗೀತದ ವೃತ್ತಿಗೆ ಗೌರವಾನ್ವಿತ ಸ್ಥಾನವನ್ನು ಒದಗಿಸಿ ಲೌಕಿಕ ಆಸೆ ಆಕಾಂಕ್ಷೆಗಳ ತಿರಸ್ಕಾರದ ಸಂಕೇತವಾಗಿ ಅದನ್ನು ಪ್ರತಿನಿಧಿಸಿದವರಾಗಿ ತ್ಯಾಗರಾಜರು ಬಿಂಬಿತರಾದರು ಹಾಗೆಯೇ ಆ ಸಂಕೇತಗಳು ಶಾಸ್ತ್ರೀಯ ಸಂಗೀತವನ್ನೇ ಮರುನಿರೂಪಿಸುವಲ್ಲಿ ಮುಖ್ಯಪಾತ್ರ ವಹಿಸಿದರು. ಈ ಸಮಯದಲ್ಲಿ ಸಂಗೀತಗಾರರೆಲ್ಲ ತಮ್ಮ ಪರಂಪರೆಯನ್ನು ಮತ್ತು ವಂಶಾವಳಿಯನ್ನು ತ್ರಿಮೂರ್ತಿಗಳ, ವಿಶೇಷವಾಗಿ ತ್ಯಾಗರಾಜರ, ಹೆಸರುಗಳೊಡನೆ ಗುರುತಿಸಿಕೊಳ್ಳುತ್ತಿದ್ದರು. ತಮ್ಮ ಸಂಗೀತಕ್ಕೆ ಅಧಿಕೃತತೆಯ ಮುದ್ರೆ ದೊರಕಿಸಿಕೊಳ್ಳುವ ತವಕದಲ್ಲಿ ಹೀಗೆ ಗುರುತಿಸಿಕೊಳ್ಳುವ ಸಂಪ್ರದಾಯ ಇವತ್ತಿಗೂ ಮುಂದುವರೆಯುತ್ತಿದೆ.

ಆದರೆ ಇದರ ಜೊತೆಗೇ ಕರ್ನಾಟಕ ಸಂಗೀತದಲ್ಲಿ ಕೃತಿ ರೂಪದ ರಚನೆಗಳು ಹಾಗೂ ತ್ರಿಮೂತಿಗಳ ಪ್ರಾಬಲ್ಯದಂಥ ಸನ್ನಿವೇಶ 19ನೇ ಶತಮಾನದ ಆದಿಭಾಗದಲ್ಲೇ ಏಕೆ ಉಂಟಾಯಿತು ಎಂಬ ಬಗ್ಗೆಯೂ ಆಲೋಚನೆ ಮಾಡಬೇಕು. ಈ ಸಂಕ್ರಮಣ ಕಾಲದಲ್ಲಿ
ಸಂಗೀತದ ವಾಡಿಕೆಯ ಪೋಷಣೆಯೊಂದಿಗೆ ವಸಾಹತುಶಾಹಿಯಿಂದಾಗಿ ಹೊಸ ಬಗೆಯ ಪೋಷಣೆ ಪ್ರಾರಂಭವಾಗಿತ್ತು. ದಕ್ಷಿಣ
ಭಾರತದ ಕರ್ನಾಟಿಕ್‍ನಲ್ಲಿ, ಅಂದರೆ ಮುಖ್ಯವಾಗಿ ಮದರಾಸ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ (ಈಗಿನ ಕರ್ನಾಟಕ ಅಲ್ಲ) ಆಂಗ್ಲರ ಆಡಳಿತ ಪ್ರಾರಂಭವಾದಾಗ ಹಲವಾರು ಶ್ರೀಮಂತರು ವೈಯಕ್ತಿಕವಾಗಿ ಸಂಗೀತವನ್ನು ಪೋಷಿಸುವ
ಆಸಕ್ತಿಯನ್ನು ತೋರಿಸಿದರು. ಇವರೆಲ್ಲ ಹೊಸದಾಗಿ ಉಗಮವಾಗುತ್ತಿದ್ದ ಮೇಲು ಜಾತಿ ಮತ್ತು ಮಧ್ಯಜಾತಿಗಳನ್ನು ಒಳಗೊಂಡ
ಪ್ರಭುವರ್ಗದ ಅಂಗವಾಗಿದ್ದ ಶ್ರೀಮಂತ ವ್ಯಾಪಾರಿಗಳು, ಉದ್ಯಮಿಗಳು, ದುಭಾಷಿಗಳು ಮತ್ತು ಸ್ಥಳೀಯ ಮುಖ್ಯಸ್ಥರಾಗಿದ್ದರು. ಇವರಲ್ಲಿ ಅನೇಕರು ದೇವಸ್ಥಾನಗಳಲ್ಲಿ ಧರ್ಮಾಧಿಕಾರಿಗಳೂ ಆಗಿದ್ದವರು. ಇವರು ಸಂಗೀತಗಾರರು, ವಿದ್ವಾಂಸರು ಮತ್ತು ದೇವದಾಸಿಯರಿಗೆ ಆಶ್ರಯವೀಯುತ್ತಿದ್ದರು. ಈ ರೀತಿಯ ಒಂದು ವಿದ್ಯಮಾನವನ್ನು ವಿದ್ವಾಂಸ ವಿ. ರಾಘವನ್‍ರವರು ದಾಖಲಿಸಿದ್ದಾರೆ. (“Some Musicians and Their Patrons about 1800 A.D. in Madras City”, in Journal of Madras Academy of Music ). ರಾಘವನ್‍ರ ಪ್ರಕಾರ 18ನೇ ಶತಮಾನದ ಕೊನೆ ಹಾಗೂ 19ನೇ ಶತಮಾನದ ಮೊದಲ ಭಾಗದಲ್ಲಿ ಸಂಗೀತ ಮತ್ತು ದೇವದಾಸಿಯರನ್ನು ಪೋಷಿಸುತಿದ್ದ  ಪ್ರಮುಖ ವ್ಯಕ್ತಿಗಳೆಂದರೆ ಅಣ್ಣಾಸ್ವಾಮಿ ಪಿಳ್ಲೈ (ತಿರುವಲ್ಲಿಕ್ಕೇಣಿಯ ಪಾರ್ಥಸಾರಥಿ ದೇವಸ್ಥಾನದ ಧರ್ಮಕರ್ತ), ಎಸ್. ದೇವನಾಯಕ (ನುಂಗಂಬಾಕಂನ ಅಗತೀಶ್ವರ ದೇವಸ್ಥಾನದ ಧರ್ಮಕರ್ತ) ಮಣಲಿ ಮುತ್ತುಕೃಷ್ಣ ಮುದಲಿಯಾರ್ (ಮದರಾಸಿನ ಗೌರ್ನರ್ ಪಿಗಟ್‍ನ ಬಳಿ ಇದ್ದ ದುಭಾಷಿ), ಇವರ ಮಗನಾದ ಚೆನ್ನಯ್ಯ ಮುದಲಿಯಾರ್, ಕೊಲ್ಲ ರಾವಣಪ್ಪ ಚೆಟ್ಟಿ (ನಗರದ ತೆಲುಗು ವ್ಯಾಪಾರಿಗಳ ವರಿಷ್ಠ ಮತ್ತು ಬ್ರಿಟಿಷರ ಜೊತೆ ಮಾತುಕತೆಯಲ್ಲಿ ನಿಪುಣ) ಮುಂತಾದವರು. ಬ್ರಿಟಿಷ್ ಕಂಪೆನಿ ಸರ್ಕಾರದಿಂದ ಇಂಥ ವ್ಯಕ್ತಿಗಳಿಗೆ „ಇನಾಂ‟ಗಳು ಕೂಡಾ ದೊರೆಯುತ್ತಿದ್ದವು. ಇನಾಂಗಳು ಉಳ್ಳವರ (privileged) ಹಾಗೂ ವಿಶ್ರಾಂತ (leisured) ವರ್ಗದ ಜನರಿಗೆ ನೀಡಲಾಗುತ್ತಿದ್ದವು. „ಇನಾಂ‟ ಎಂದರೆ ಬಹುತೇಕವಾಗಿ ಒಂದು ರೀತಿಯ ಭೂದಾನವಾಗಿತ್ತು. ಆದರೆ ಇನಾಂ ಬೇರೆ ರೂಪದಲ್ಲೂ ಬೇರೆ ಬೇರೆ ವಸ್ತುಗಳನ್ನೂ ಒಳಗೊಂಡಿತ್ತು. ರಾಬರ್ಟ್ ಫ್ರೈಕನ್ಬರ್ಗ್ ಎನ್ನುವ ವಿದ್ವಾಂಸರೊಬ್ಬರ ಪ್ರಕಾರ 1869ರ ಸಾಲಿನ ಇನಾಮ್ ಹಿಡುವಳಿ ಪಟ್ಟಿಯಲ್ಲಿ
452 ತರಹದ ವಿಭಿನ್ನ ಬಗೆಗಳ ಇನಾಂಗಳು ಇದ್ದವು.  “ಇನಾಂ‟ ಗಳ ಸ್ವರೂಪವು ಏನೆಂಬುದು ಕೂಡ ಉದ್ದೇಶಪೂರ್ವಕವಾಗಿಯೇ ಸ್ಪಷ್ಟ ರೂಪದಲ್ಲಿ ಇರುತ್ತಿರಲಿಲ್ಲ. ಇದರಿಂದಾಗಿ  “ಇನಾಂ” ಗಳನ್ನು „ಮೌನ ಒಪ್ಪಂದಗಳು‟ (silent agreement) ಎಂದು ಕರೆಯಲಾಗುತ್ತಿತ್ತು. ಕರ್ನಾಟಿಕ್ ಪ್ರಾಂತ್ಯದ ಮೇಲೆ ಇದ್ದ ಕಂಪನಿಯ ಅಧಿಕಾರ ಮತ್ತು ಆಡಳಿತಗಳನ್ನು ಬಲಪಡಿಸುವುದರಲ್ಲಿ ಈ ಇನಾಂ ಅಥವಾ ಮೌನ ಒಪ್ಪಂದಗಳು ಒದಗಿಸಿದಷ್ಟು ಸೇವೆಯನ್ನು ಮತ್ತ್ಯಾವುದೂ ಒದಗಿಸಲಿಲ್ಲವೆಂದು ಫ್ರೈಕನ್ಬರ್ಗ್ ಹೇಳುತ್ತಾರೆ. ಅವರ ಪ್ರಕಾರ 19ನೇ ಶತಮಾನದ ಪ್ರಾರಂಭದಲ್ಲೇ „ಅತಿ ನೂತನ ಹಾಗೂ ಚಿಕ್ಕದಾದ‟ ಇನಾಂ ಎಂದರೆ ತಮಗೆ ಪ್ರಿಯವಾದ ನರ್ತಕಿಯರಿಗೆ ಕಂಪೆನಿಯ ಸಹಾಯದಿಂದ ಕೊಡುವ ಜೀವಾವಧಿ ಪಿಂಚಣಿ ಆಗಿತ್ತು (ಇನಾಂ ಕುರಿತಾದ ಎಲ್ಲಾ ವಿವರಗಳನ್ನೂ ಫ್ರೈಕನ್ಬರ್ಗ್ ಅವರ Company Circari in the Carnatic, c 1799-1859: The Inner Logic of Political Systems in India ಎಂಬ ಪ್ರಬಂಧದಿಂದ ಪಡೆಯಲಾಗಿದೆ). ಸಹಜವಾಗಿಯೇ ಈ ಪ್ರಿಯವಾದ ನರ್ತಕಿಯರ ಜೊತೆ ಒಂದು ಸಂಗೀತಗಾರರ ಗುಂಪು ಕೂಡ ಇರುತ್ತಿತ್ತು.  “ಇನಾಂ‟ ಗಳನ್ನು ಕೊಟ್ಟು ಸ್ಥಳೀಯರ ಬೆಂಬಲ ಗಳಿಸುವ ತಂತ್ರ ಕಂಪೆನಿಯದಾಗಿತ್ತು. ಈ ತರಹದ ನೂತನವಾದ ಆಶ್ರಯ ವಿಧಾನಗಳು ಎಷ್ಟೇ „ಚಿಕ್ಕದು‟ ಎನ್ನಿಸಿದರೂ ದಕ್ಷಿಣ ಭಾರತದ ಸಂಗೀತ ಚರಿತ್ರೆಯನ್ನು ನಿರ್ಮಿಸುವಲ್ಲಿ ಅದೇನೂ ಚಿಕ್ಕದಲ್ಲ. ಬ್ರಿಟಿಷರ ಈ ನೀತಿ 19ನೇ ಶತಮಾನದಲ್ಲಿ ಸಂಗೀತಕ್ಕೆ ಮತ್ತು ನಾಟ್ಯಕ್ಕೆ ತನ್ನದೇ ಆದ ರೀತಿಯಲ್ಲಿ ಒಂದು ವಿಲಕ್ಷಣವಾದ ಪೋಷಣೆಯಾಗಿತ್ತು.  “ಕರ್ಣೇಶು ಅಟತೇ ಇತಿ ಕರ್ಣಾಟಕಃ” (ಕರ್ಣ ಅಥವಾ ಕಿವಿಯಲ್ಲಿ ಯಾವುದು ಗುಂಜನೆಯಾಗುತ್ತದೋ ಅದುವೇ ಕರ್ಣಾಟಕ ಸಂಗೀತ) ಎಂಬಿತ್ಯಾದಿ ಕರ್ನಾಟಕ ಸಂಗೀತವೆಂಬ ಹೆಸರಿಗೆ ಅರ್ಥ ಹುಡುಕುವ ಯತ್ನಗಳು ಹಲವು ನಡೆದಿದ್ದರೂ ಕರ್ನಾಟಿಕ್ ಪ್ರಾಂತ್ಯದಲ್ಲಿ ಹರಳುಗಟ್ಟಿದ ಸಂಗೀತವಾದ್ದರಿಂದ ಆ ಹೆಸರು ಪಡೆದದ್ದೆಂದು ಇತಿಹಾಸದ ವಿದ್ಯಾರ್ಥಿಯೊಬ್ಬ ಸಾಮಾನ್ಯವಾಗಿ ಊಹಿಸಬಹುದು (ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕು). ವ್ಯಂಗ್ಯವೆಂಬಂತೆ „ಕರ್ನಾಟಕ ಸಂಗೀತ‟ವೆಂಬ ಹೆಸರು ನಮ್ಮ ರಾಜ್ಯದ ಹೆಸರಿನೊಂದಿಗೆ ಸಮೀಕರಣಗೊಂಡು ಕರ್ನಾಟಕ ಏಕೀಕರಣ ಮತ್ತು ಕನ್ನಡ ಚಳುವಳಿಯ ಕಾಲದಲ್ಲಿ ಚಳುವಳಿಗಾರರ ಕೈಬಲಪಡಿಸಿತು.

ಒಟ್ಟಾರೆ ಸಂಗೀತ ತ್ರಿಮೂರ್ತಿಗಳು 19ನೇ ಶತಮಾನದ ಪ್ರಾರಂಭದಲ್ಲಿ ಪ್ರಬಲವಾಗಲು ಕಾರಣ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ದೊರಕಿದ ಪೋಷಣೆಯಿಂದಾಗಿ ಎನ್ನಬಹುದು. ಶ್ಯಾಮಶಾಸ್ತ್ರಿಗಳು ತಂಜಾವೂರಿನ ಮರಾಠ ಆಸ್ಥಾನದಲ್ಲಿದ್ದರು. ಮುತ್ತುಸ್ವಾಮಿ ದೀಕ್ಷಿತರ ತಂದೆ ರಾಮಸ್ವಾಮಿ ದೀಕ್ಷಿತರು ವೆಂಕಟಕೃಷ್ಣ ಮುದಲಿಯಾರ್ (ಆಂಗ್ಲ ಗವರ್ನರನಾದ ಪಿಗಟ್‍ನಿಗೆ ದುಭಾಷಿಯಾದವರು) ಎಂಬುವವರ ಆಶ್ರಯದಲ್ಲಿದ್ದರು. ಪಾಶ್ಚಿಮಾತ್ಯ ಧಾಟಿಯಲ್ಲಿ ಹಲವು ರಾಗ ಸಂಯೋಜನೆ ಮಾಡಿದ್ದ ಮುತ್ತುಸ್ವಾಮಿ ದೀಕ್ಷಿತರಿಗೆ ಆ ಸಂಗೀತದ ಪರಿಚಯ ಆಗಿದ್ದು ವೆಂಕಟಕೃಷ್ಣ ಮುದಲಿಯಾರ್ ಮೂಲಕವೇ. ಇನ್ನು ತ್ಯಾಗರಾಜರ ಬಗ್ಗೆ ಹೇಳುವುದಾದರೆ ಈ ಮುಂಚೆಯೇ ನೋಡಿದಂತೆ ಅವರಿಗೆ ಹಲವು ಸಂಸ್ಥಾನಗಳಿಂದ ಆಸ್ಥಾನ ವಿದ್ವಾಂಸರಾಗಿ ಕರೆ ಇತ್ತು (ಅದನ್ನವರು ತಿರಸ್ಕರಿಸಿದರೆಂಬುದು ಬೇರೆ ವಿಷಯ). ತಂಜಾವೂರಿನ ಅರಸರ ಸಂಬಂಧಿಕರಾದ ಮೋತೀರಾವ್ ಮುಂತಾದ ಗಣ್ಯರು ತ್ಯಾಗರಾಜರನ್ನು ನೋಡಲು ಆಗಾಗ್ಯೆ ಬರುವುದು ಮಾಮೂಲಾಗಿತ್ತು (ವಿಲಿಯಂ ಜಾಕ್ಸನ್ ಅವರ Tyagaraja: Life and Lyrics ಎಂಬ ಪುಸ್ತಕದಲ್ಲಿ ನೋಡಬಹುದು). ತ್ಯಾಗರಾಜರ ಗುರುಗಳಾದ ಸೊಂಟಿ ವೆಂಕಟರಮಣಯ್ಯನವರು ಮತ್ತು ಇಬ್ಬದಿಯ ತಾತಂದಿರಾದ ಗಿರಿರಾಜ ಕವಿ ಮತ್ತು ವೀಣೆ ಕಾಳಹಸ್ತಿ ಐಯರ್‍ರವರು ತಂಜಾವೂರಿನ ತುಲಜಾಜಿಯ ಆಶ್ರಯದಲ್ಲಿದ್ದರು. ಕಾಳಹಸ್ತಿ ಐಯರ್‍ರವರಿಗೆ ಸಾಕಷ್ಟು ಭೂಮಿ ಕೂಡ ಕೊಡುಗೆಯಾಗಿ ಬಂದಿತ್ತು. ತ್ಯಾಗರಾಜರ ತಂದೆಯವರಾದ ರಾಮಬ್ರಹ್ಮಮ್ ರಾಮಾಯಣದ ಬಗ್ಗೆ ಉಪನ್ಯಾಸಗಳನ್ನು ನೀಡುತ್ತ ಎರಡನೆ ತುಳಜಾಜಿಯ (1763-87) ಆಶ್ರಯದಲ್ಲಿದ್ದರು ( ಸೀತಾ ಅವರ Tanjore as Seat of Music ಮತ್ತು ವಿಲಿಯಂ ಜಾಕ್ಸನ್ ಅವರ ಮೇಲೆ ಸೂಚಿಸಿದ ಪುಸ್ತಕದಿಂದ). ಈ ಎಲ್ಲ ಕಾರಣಗಳಿಂದಾಗಿ ತಾವು ಬಯಸಿದ್ದರೆ ಯಾವುದೇ ಸಮಯದಲ್ಲಿ ಯಾವುದೇ ರೀತಿಯ ಪ್ರಾಪಂಚಿಕ ಸಹಾಯ, ಸವಲತ್ತುಗಳನ್ನು ಪಡೆಯಬಹುದಾದ ಸ್ಥಿತಿ ತ್ಯಾಗರಾಜರದಾಗಿತ್ತು. ಅವರಿಗೆ ಸ್ವಂತಕ್ಕೋಸ್ಕರ ಯಾವುದೇ ರೀತಿಯ ಪೋಷಣೆಯ ಅಗತ್ಯವಿಲ್ಲದಿದ್ದರೂ ತಮ್ಮ ಅನೇಕ ಶಿಷ್ಯರಿಗೆ ಶ್ರೀಮಂತ ಸಂಸ್ಥಾನಗಳಲ್ಲಿ, ಜಮೀನುದಾರರಲ್ಲಿ ಮತ್ತು ಇತರೆ ಪೋಷಕರಲ್ಲಿ ಆಶ್ರಯ ದೊರಕುವಂತೆ ಮಾಡಿದ್ದರು. ಇಂಥ ಒಂದು ಸಂದರ್ಭದಲ್ಲಿ ತ್ರಿಮೂರ್ತಿಗಳಿಂದ „ಕೃತಿ‟ ಎಂಬ ರಚನೆ ಹರಳುಗಟ್ಟಿರುವುದು ಮಾತ್ರವಲ್ಲದೇ ಅಂದಿನಿಂದ ಇಂದಿನವರೆಗೂ ಕರ್ನಾಟಕ ಸಂಗೀತದ ಮುಖ್ಯಾಧಾರವೇ ಆಗಿರುತ್ತದೆ. ಹೀಗೆ ಗಟ್ಟಿಗೊಂಡ ರಚನೆಗಳು ತೆಲುಗು ಮತ್ತು ಸಂಸ್ಕೃತ ಭಾಷೆಯಲ್ಲಿದ್ದುದು ಇನ್ನೊಂದು ಮುಖ್ಯ ಸಂಗತಿ. ರಚನಾಕ್ರಮ ಮತ್ತು ಭಾಷಾ ಪ್ರಯೋಗ ಜೊತೆಜೊತೆಯಾಗಿ ಪಕ್ವಗೊಂಡು ಬೇರೆ ಭಾಷೆಗಳಲ್ಲಿ ಅಂಥಾ ರಚನೆ ಸಾಧ್ಯವಿಲ್ಲವೇನೋ ಎಂಬ ಘಟ್ಟಕ್ಕೆ ಬಂದು ನಿಂತದ್ದು ಒಂದು ನಿರ್ದಿಷ್ಟ ದೇಶ-ಕಾಲದ ಪೋಷಕ ವ್ಯವಸ್ಥೆಯ ಮೂಲಕ. ಹಾಗಾಗಿ ಮೈಸೂರು ವಾಸುದೇವಾಚಾರ್ಯರು ಕೃತಿ ರಚಿಸಲು ಕನ್ನಡದಲ್ಲಿ ಆಲೋಚನೆಗಳೇ ಬರುತ್ತಿರಲಿಲ್ಲ ಎಂದಾಗ ಅದು ರಚನೆ ಮತ್ತು ಭಾಷಾಪ್ರಯೋಗ ಪರಂಪರೆಯಲ್ಲಿ ಹಾಸುಹೊಕ್ಕಾಗಿದ್ದನ್ನು ಸೂಚಿಸುತ್ತಿತ್ತೇ ವಿನಃ ಅವರು ಕನ್ನಡ ಭಾಷಾದ್ವೇಶಿಯೆಂದೋ ಅಥವಾ ಮಹಾರಾಜರನ್ನು ಇಷ್ಟಪಡುತ್ತಿರಲಿಲ್ಲವೆಂದೋ ಅರ್ಥವಲ್ಲ. (ಹಾಗಂತ ಅವರು ಕನ್ನಡದಲ್ಲಿ ಎರಡು ಅಮೂಲ್ಯ ಪುಸ್ತಕಗಳನ್ನು ನಮಗೆ ಕೊಟ್ಟು ಹೋಗಿದ್ದಾರೆ: ನಾ ಕಂಡ ಕಲಾವಿದರು ಹಾಗೂ ನೆನಪುಗಳು.)

ಇಂಥ ಒಂದು ವ್ಯವಸ್ಥೆಯಲ್ಲಿ ಮೂಡಿ, ಬೆಳೆದು ಬಂದಂತಹ ಕರ್ನಾಟಕ ಸಂಗೀತವು ತ್ರಿಮೂರ್ತಿಗಳು ಮತ್ತು ಅವರ ಸಮಕಾಲೀನ ಗುರುಗಳ ಶಿಷ್ಯರು, ಪ್ರಶಿಷ್ಯರ ಮೂಲಕ ದಕ್ಷಿಣ ಭಾರತದಾದ್ಯಂತ ಪಸರಿಸಿತು. ಎಲ್ಲೇ ಪ್ರಚುರಗೊಂಡರೂ ಮೂಲ ಮಾತ್ರ ಕರ್ನಾಟಿಕ್-ತಂಜಾವೂರಿನ ಪ್ರದೇಶದಲ್ಲೇ ತೋರಿಬರುವಂಥ ಸ್ಥಿತಿ ಉದ್ಭವವಾಗಿತ್ತು. ಇಂಥ ಗುರು-ಶಿಷ್ಯ ಪರಂಪರೆಯಲ್ಲೇ ಮೈಸೂರಿನ ಹಲವು ಪ್ರಮುಖ ಸಂಗೀತಗಾರರು ಮೂಡಿ ಬಂದಿದ್ದರು. ಉದಾಹರಣೆಗೆ ಮೈಸೂರು ವಾಸುದೇವಾಚಾರ್ಯರು ಪಟ್ನಂ ಸುಬ್ರಮಣ್ಯ ಅಯ್ಯರ್ ಅವರ ಶಿಷ್ಯರಾಗಿದ್ದರು. ಅಯ್ಯರ್ ಅವರು ತ್ಯಾಗರಾಜರ ಶಿಷ್ಯ ಮಾನಂಬುಚಾವಡಿ ವೆಂಕಟಸುಬ್ಬಯ್ಯರ್ ಅವರ ಶಿಷ್ಯರಾಗಿದ್ದರು. ವೀಣೆ ಶೇಷಣ್ಣನವರು ತ್ಯಾಗರಾಜರ ಪ್ರಶಿಷ್ಯರಾದ ಮೈಸೂರು ಸದಾಶಿವರಾಯರ ಶಿಷ್ಯರಾಗಿದ್ದರು. ಮುತ್ತಯ್ಯ ಭಾಗವತರು ತ್ಯಾಗರಾಜರ ಸಮಾಧಿ ಇರುವ ತಿರುವಯ್ಯಾರಿನಲ್ಲೇ ಸಾಂಬಶಿವ ಅಯ್ಯರ್ ಅವರಲ್ಲಿ ಅಭ್ಯಾಸ ಮಾಡಿದ್ದರು. ಬಿಡಾರಂ ಕೃಷ್ಣಪ್ಪನವರು ಶೇಷಣ್ಣನವರಲ್ಲಿ ಉನ್ನತಾಭ್ಯಾಸ ಮಾಡಿದ್ದರು. ಹೀಗೆ ತಮಿಳುನಾಡಿನ ಸಂಗೀತಪರಂಪರೆಯಲ್ಲಿ ಹುದುಗಿಹೋದ ಮೈಸೂರಿನ ಸಂಗೀತಗಾರರು ಮಹಾರಾಜರ ಅಪ್ಪಣೆ ಪ್ರಕಾರ ಕನ್ನಡದಲ್ಲಿ ಕೃತಿಗಳನ್ನು ರಚಿಸಿದರೂ ಅದನ್ನು ಪ್ರಚಾರ ಮಾಡುವಂಥ ಕೆಲಸವನ್ನು ಮಾಡಲಿಲ್ಲ. ಪರಂಪರೆಯ ಶ್ರೋತೃಗಳಿಗೂ ಅದು ಬೇಡವಾಗಿತ್ತು.

ಇನ್ನು ಕನ್ನಡದಲ್ಲಿ ಕರ್ನಾಟಕ ಸಂಗೀತವನ್ನು ಅಥವಾ ಅದರಂತೆಯೇ ಇರುವ ಸಂಗೀತವನ್ನು ಬಯಸಿದ ಶ್ರೋತೃಗಳಿಗೆ ಕೊನೆಗೆ ಏನು ದಕ್ಕಿತು; ತಮಿಳುನಾಡಿನ ಕರ್ನಾಟಿಕ್‍ನಲ್ಲಿ ಬೆಳೆದುಬಂದಂಥ ಇಂಥ ಪರಂಪರೆಯೊಂದು ಮೈಸೂರಲ್ಲಿ ಯಾಕೆ ಸಾಧ್ಯವಾಗಲಿಲ್ಲ, ಎಂಬಿತ್ಯಾದಿ ವಿಷಯಗಳನ್ನು ಮುಂದಿನ
ಸಂಚಿಕೆಯಲ್ಲಿ ನೋಡೋಣ.

ಮುಂದುವರೆಯುವುದು ..

ಅನುವಾದ: ಪ್ರೊ. ಎಸ್. ನಾರಾಯಣನ್

3 comments to “ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೫ : ‘ಕರ್ನಾಟಿಕ್’ ಸಂಗೀತ ಪರಂಪರೆ ಮತ್ತು ಮೈಸೂರಿನ ಸಂಗೀತ”
  1. ಸಂಗೀತ ಕಲೆಯ ಬಳವಣಿಗೆಯ ಹಿಂದಿನ ಆರ್ಥಿಕ ರಾಜಕೀಯ ವಿದ್ಯಮಾನಗಳ ಚರ್ಚೆ ಬಹಳ ಉಪಯುಕ್ತವಾಗಿದೆ.

  2. Pingback: ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೬: ಶಾಸ್ತ್ರೀಯತೆ, ಕನ್ನಡ ಮತ್ತು ದಾಸರ ಪದಗಳು – ಋತುಮಾನ

ಪ್ರತಿಕ್ರಿಯಿಸಿ