ಅಹಾರ, ಪೌಷ್ಟಿಕಾಂಶ ಮತ್ತು ಬದುಕಿನ ಭದ್ರತೆ : ಸ್ವಾಮಿನಾಥನ್ ಎಂ ಎಸ್, ನಿತ್ಯಾ ರಾವ್

ಕೋವಿಡ್-೧೯ ಪಿಡುಗನ್ನು ನಿಯಂತ್ರಿಸುವುದಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಈ ಸಮಯದಲ್ಲಿ ಕೋಟ್ಯಾಂತರ ಗ್ರಾಮೀಣ ಜನ, ಅದರಲ್ಲೂ ವಿಶೇಷವಾಗಿ ನಗರದಲ್ಲಿರುವ ವಲಸೆ ಕಾರ್ಮಿಕರು ತೀವ್ರವಾದ ಆಹಾರ, ಪೌಷ್ಟಿಕಾಂಶ ಹಾಗು ಜೀವನ ಭಧ್ರತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದು ಎದ್ದು ಕಾಣುತ್ತಿದೆ. ಸರ್ಕಾರ ಒಂದಿಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಉದಾಹರಣೆಗೆ ಗೋಧಿ, ಬೇಳೆ ಹಾಗೂ ಎಣ್ಣೆಯನ್ನು ಪುಕ್ಕಟೆಯಾಗಿ ವಿತರಿಸುವ ನಿರ್ಧಾರ ಮಾಡಿದೆ. ಜೊತೆಗೆ ಇತರ ಅವಶ್ಯಕ ವಸ್ತುಗಳನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಕೊಳ್ಳುವುದಕ್ಕೆ ಅಂತ ೧೦೦೦ ರೂಪಾಯಿಗಳನ್ನು ಕೊಡುವುದಾಗಿಯೂ ಘೋಷಿಸಿದೆ. ಆದರೆ ಇಂದು ಈ ಸಮಸ್ಯೆಗೆ ಒಂದು ಸಮಗ್ರವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅದು ಸಾಧ್ಯವಾಗಬೇಕಾದರೆ ನಾವು ಆಹಾರದ ಭದ್ರತೆಯ ಸಮಸ್ಯೆಯ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆಗಷ್ಟೇ ಸಮಸ್ಯೆಗೆ ಒಟ್ಟಾರೆಯಾಗಿ ಒಂದು ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯ.

ಮೊದಲಿಗೆ ಆಹಾರ ಲಭ್ಯವಿರಬೇಕು. ಆಹಾರದ ಲಭ್ಯತೆ ಅದರ ಉತ್ಪಾದನೆಯನ್ನು ಅವಲಂಭಿಸಿರುತ್ತದೆ. ನಮ್ಮ ಪುಣ್ಯ, ಹಸಿರು ಕ್ರಾಂತಿಯಿಂದಾಗಿ ನಮಗೆ ಆ ಸಮಸ್ಯೆ ಇಲ್ಲ. ಮಾರುಕಟ್ಟೆಯಲ್ಲಿ, ಸರ್ಕಾರದ ಗೋದಾಮುಗಳಲ್ಲಿ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಇದೆ. ಇದು ಭಾರತೀಯ ರೈತರ ಮಹಾನ್ ಸಾಧನೆ. ಅಮದು ಮಾಡಿಕೊಂಡು ಬಳಸಬೇಕಾದ ಸ್ಥಿತಿ ಈಗ ಇಲ್ಲ. ಇಂದು ’ಆಹಾರ ಒಂದು ಹಕ್ಕು’ ಅಂತಾಗಿದೆ. ಆದರೂ ರೈತರು ನಮಗೆ ಬೇಕಾದಷ್ಟನ್ನು ಯಾವಾಗಲೂ ಉತ್ಪಾದಿಸಿಕೊಂಡು ಹೋಗುತ್ತಿರುತ್ತಾರೆ ಅಂತ ಅಂದುಕೊಂಡುಬಿಡುವುದಕ್ಕೆ ಆಗುವುದಿಲ್ಲ. ಕೃಷಿ ಕ್ಷೇತ್ರಕ್ಕೆ ಕೆಲವು ವಿಶೇಷವಾದ ರಿಯಾಯಿತಿಗಳನ್ನು ನೀಡಲಾಗಿದೆ. ಆದರೂ ಸಧ್ಯಕ್ಕೆ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲಸಗಾರರು ಸಿಗುತ್ತಿಲ್ಲ. ಅವರಿಗೆ ಬೇಕಾದ ಬೀಜಗಳು, ಇತ್ಯಾದಿ ಎಷ್ಟೋ ವಸ್ತುಗಳು ಸಿಗುತ್ತಿಲ್ಲ ಅಥವಾ ತುಂಬಾ ದುಬಾರಿಯಾಗಿದೆ. ಮಾರುಕಟ್ಟೆ ವ್ಯವಸ್ಥೆ ಸರಿಹೋಗಿಲ್ಲ. ಪೂರೈಕೆಯ ಸರಪಳಿಯೂ ಅಸ್ತವ್ಯಸ್ತವಾಗಿಯೇ ಇದೆ. ಒಳ್ಳೆಯ ಬೆಲೆಯೂ ಸಿಗುತ್ತಿಲ್ಲ. ಸಾರ್ವಜನಿಕ ಸಂಗ್ರಹಣೆಯೂ ಸಾಲುತ್ತಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ಇರುವುದಕ್ಕೆ ಸಾಧ್ಯವಿಲ್ಲ. ಬೇಡಿಕೆಯ ಕೊರತೆ ಇದೆ. ರೈತರ ಬೆಳೆಗಳನ್ನು, ಅದರಲ್ಲ್ಲೂ ಬೇಗನೆ ನಾಶವಾಗಬಲ್ಲ ಪದಾರ್ಥಗಳನ್ನು ಸಂಗ್ರಹಿಸಿಡುವುದಕ್ಕೆ ಅಥವಾ ಅವುಗಳ ಮೌಲ್ಯವೃದ್ಧಿಗೆ ಬೇಕಾದ ಸೌಲಭ್ಯಗಳ ಕೊರತೆ ಇದೆ. ಈ ಪಿಡುಗು ಖಾರಿಫ್ ಬಿತ್ತನೆಯ ಮೇಲೆ, ಆಹಾರದ ಲಭ್ಯತೆಯ ಮೇಲೆ ಎಂತಹ ಪರಿಣಾಮ ಬೀರಬಹುದು ಅನ್ನುವುದರ ಬಗ್ಗೆ ನಮಗೆ ಸ್ಪಷ್ಟ ಚಿತ್ರ ಇಲ್ಲ.

ವಿತರಿಸುತ್ತಿರುವ ಆಹಾರವನ್ನು ಹೆಚ್ಚು ಮಾಡಬೇಕು

ಸಮಸ್ಯೆಯ ಎರಡನೆಯ ಆಯಾಮ ಅಂದರೆ, ಲಭ್ಯವಿರುವ ಆಹಾರ ಜನಕ್ಕೆ ಸಿಗಬೇಕು. ಅದು ಜನರ ಕೊಳ್ಳುವ ಶಕ್ತಿಯನ್ನು ಅವಲಂಬಿಸಿರುತ್ತದೆ. ನೀವು ರೈತರಾಗಿದ್ದು ನಿಮ್ಮ ಆಹಾರವನ್ನು ನೀವೇ ಬೆಳದುಕೊಂಡರೆ ಪರವಾಗಿಲ್ಲ. ಇಲ್ಲದೇ ಹೋದರೆ ಅದನ್ನು ಕೊಳ್ಳಬೇಕು. ಸಧ್ಯಕ್ಕೆ ಸರ್ಕಾರ ಈ ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ರಕ್ಷಣೆಯ ಕಾಯ್ದೆ ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆಯ ಮೂಲಕ ಎಲ್ಲರಿಗೂ ಒಂದಿಷ್ಟು ಆಹಾರ ವಿತರಿಸುವುದಾಗಿ ಭರವಸೆ ನೀಡಿದೆ. ಅವರು ಕೊಡುತ್ತಿರುವ ಆಹಾರದ ಜೊತೆಗೆ ಬೇಳೆ, ಎಣ್ಣೆ ಇವನ್ನೂ ಸೇರಿಸಬೇಕು. ಆಹಾರದಲ್ಲಿ ಸೂಕ್ಷ್ಮ ಪೌಷ್ಟಿಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸೂಕ್ಷ್ಮ ಪೌಷ್ಟಿಕಾಂಶಗಳ ಕೊರತೆಯಿಂದ ಆಗುವ ಸಮಸ್ಯೆ ತಕ್ಷಣ ಗೋಚರವಾಗುವುದಿಲ್ಲ. ಲಾಕ್‌ಡೌನಿಂದಾಗಿ ಶಾಲೆಗಳು, ಅಂಗನವಾಡಿ ಕೇಂದ್ರಗಳು ನಡೆಯುತ್ತಿಲ್ಲ. ಮಕ್ಕಳಿಗೆ ಮದ್ಯಾಹ್ನದ ಊಟ ಮತ್ತು ಇತರ ಪೌಷ್ಟಿಕ ಆಹಾರಗಳು ತಪ್ಪಿಹೋಗಿದೆ. ಎನ್‌ಎಫ್‌ಎಸ್‌ಎ ಪ್ರತಿಪಾದಿಸುವ ಜೀವನ ಚಕ್ರದ ವಿಧಾನವನ್ನು ಪರಿಗಣಿಸಬೇಕು. ಮೊದಲ ವರ್ಷ ಮಗುವಿಗೆ ಸಿಗಬೇಕಾದ ಪೌಷ್ಟಿಕಾಂಶಗಳು ಸಿಗುವಂತೆ ನೋಡಿಕೊಳ್ಳಬೇಕು. ಅದು ಮಕ್ಕಳ ಗ್ರಹಣಶಕ್ತಿ ರೂಪುಗೊಳ್ಳುವ ಸಮಯ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡದೇ ಹೋದರೆ ಪೌಷ್ಟಿಕಾಂಶದ ಭದ್ರತೆಗೆ ಸಂಬಂಧಿಸಿದಂತೆ ಮಧ್ಯ ಹಾಗೂ ಧೀರ್ಘ ಕಾಲಿನ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ಆಹಾರದ ಭದ್ರತೆ, ಉತ್ತಮ ಪೌಷ್ಟಿಕಾಂಶಗಳು, ಒಳ್ಳೆಯ ಗುಣಮಟ್ಟದ ಆಹಾರ ಇವೆಲ್ಲಾ ಸಿಗಬೇಕು ಅಂದರೆ ಉದ್ಯೋಗದ ರಕ್ಷಣೆ ಇರಬೇಕು. ಇಂದು ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಜನರಿಗೆ ಕೆಲಸ ಇಲ್ಲ. ಉದ್ಯೋಗದ ರಕ್ಷಣೆ ಇಲ್ಲದೇ ಹೋದರೆ ಆಹಾರದ ಪೌಷ್ಟಿಕಾಂಶದ ಭದ್ರತೆಯೂ ಇರುವುದಿಲ್ಲ. ಜನ ಕೆಲಸ ಕಳೆದುಕೊಳ್ಳುವಂತಾಗಬಾರದು. ಇದಕ್ಕೆ ಒಂದು ದಾರಿ ಅಂದರೆ ಮೂಲ ಉತ್ಪನ್ನಗಳ ಮೌಲ್ಯ ವೃದ್ಧಿಸುವುದು. ಉದಾಹರಣೆಗೆ ಮ್ಯಾನ್ಮಾರಿನಲ್ಲಿ ರೈಸ್ ಬಯೋಪಾರ್ಕನ್ನು ಗಮನಿಸಬಹುದು. ಅಲ್ಲಿ ಹುಲ್ಲು, ತವಡು ಮತ್ತು ಇಡೀ ಬಯೋಮಾಸನ್ನು ಬಳಸಲಾಗುತ್ತಿದೆ. ಬಯೋಮಾಸ್ ಬಳಸೋದಕ್ಕೆ ಹೊಸ ತಂತ್ರಜ್ಞಾನ ಬೇಕಾಗುತ್ತದೆ. ಬಂಡವಾಳವನ್ನೂ ಹೂಡಬೇಕಾಗುತ್ತದೆ. ಹೈನುಗಾರಿಕೆಯ ಕ್ಷೇತ್ರದಲ್ಲಿ ಅಮುಲ್ ಮಾಡೆಲ್ ಗಮನಿಸಬಹುದು. ಅಲ್ಲಿ ಹಾಲಿನಿಂದ ಬೇರೆ ಉತ್ಪನ್ನಗಳನ್ನು ತಯಾರಿಸುವುದರ ಮೂಲಕ ಅದರ ಮೌಲ್ಯವನ್ನು ಹೆಚ್ಚಿಸಲಾಗಿದೆ. ಅದರಿಂದ ಹಾಲು ಉತ್ಪಾದಕರ ವರಮಾನ ಹೆಚ್ಚಾಗಿದೆ. ಹಾಗೆಯೇ ತೋಟಗಾರಿಕೆಗೆ ಸಂಬಂಧಿಸಿದಂತೆಯೂ ಆದ್ಯತೆಯ ಮೇಲೆ ಗಮನಕೊಡಬೇಕು. ಮಹಿಳಾ ರೈತರು ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಅವರ ತಂತ್ರಜ್ಞಾನ ಮತ್ತು ಆರ್ಥಿಕ ಸಬಲೀಕರಣಕ್ಕೆ ಗಮನ ನೀಡಬೇಕು.

ಮನರೇಗಾ ಯೋಜನೆಯಲ್ಲ್ಲಿ ಉದ್ಯೋಗ

ಸಣ್ಣ ಹಾಗೂ ಬಡ ರೈತರು ಮತ್ತು ಭೂರಹಿತ ಕುಟುಂಬಗಳು ಮತ್ತು ಅವರಲ್ಲಿನ ಮಹಿಳೆಯರಿಗೆ ಬದುಕಿನ ಸುರಕ್ಷತೆ ಒದಗಿಸುವುದಕ್ಕೆ ಇರುವ ಇನ್ನೊಂದು ಹಾದಿ ಅಂದರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು (ಮನರೇಗಾ) ಬಲಪಡಿಸುವುದು. ಮನರೇಗಾ ಯೋಜನೆಯಲ್ಲಿ ನೈಪುಣ್ಯವಿಲ್ಲದ ಶ್ರಮಿಕರನ್ನು ಮಾತ್ರ ಕಾರ್ಮಿಕರು ಎಂದು ಪರಿಗಣಿಸಲಾಗಿದೆ. ಅದಕ್ಕೆ ಕೃಷಿ ಕ್ಷೇತ್ರ ಮತ್ತು ತತ್ಸಂಬಂಧಿ ಕ್ಷೇತ್ರಗಳ ಕುಶಲ ಕೆಲಸಗಾರರನ್ನೂ ಸೇರಿಸಿಕೊಳ್ಳಬೇಕು. ಕೋವಿಡ್-೧೯ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜನರಿಗೆ ಉದ್ಯೋಗ ಹಾಗೂ ವರಮಾನ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರು ಮತ್ತು ಅವರು ತೊಡಗಿಕೊಂಡಿರುವ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಕುಶಲ ಕೆಲಸಗಳನ್ನೂ ಮನರೇಗಾ ವ್ಯಾಪ್ತಿಯಲ್ಲಿ ತರಬೇಕಾದದ್ದು ಅನಿವಾರ್ಯ. ಇದು ಮಹಿಳಾ ಕೃಷಿಕರು ಮತ್ತು ಕೆಲಸಗಾರರ ವಿಷಯದಲ್ಲಿ ತುಂಬಾ ಮುಖ್ಯ. ಅವರಿಗೆ ಕೇವಲ ಕಲ್ಲು ಸಾಗಿಸುವ ಅಥವಾ ನೆಲ ತೋಡುವ ಕೆಲಸವನ್ನು ಕೊಡಬಾರದು. ಈ ಮಹಿಳೆಯರು ಕೇವಲ ಕೃಷಿಯಲ್ಲಷ್ಟೇ ದುಡಿಯುತ್ತಿಲ್ಲ. ಅವರು ಮಕ್ಕಳನ್ನು, ಮುದುಕರನ್ನು ಮತ್ತು ರೋಗಿಗಳನ್ನು ನೋಡಿಕೊಳ್ಳುವುದು ಇತ್ಯಾದಿ ಹಲವು ಅವಶ್ಯಕ ಪಾಲನೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ. ಇದು ಕಣ್ಣಿಗೆ ಕಾಣುವುದಿಲ್ಲ. ಇದನ್ನು ಕೆಲಸಗಳೆಂದು ಗುರುತಿಸಬೇಕು. ಅದಕ್ಕೆ ಸೂಕ್ತ ಶಿಕ್ಷಣ ನೀಡಿ ಬೆಂಬಲಿಸಬೇಕು. ಪೌಷ್ಟಿಕಾಂಶದ ಬಗ್ಗೆಯೂ ಅವರಲ್ಲಿ ಅರಿವು ಮೂಡಿಸಬೇಕು.

ಆಹಾರೇತರ ಅಂಶಗಳ ಕಡೆಗೆ ಗಮನ

ಆಹಾರ ಭದ್ರತೆಯ ಮೂರನೆ ಅಯಾಮ ಅಂದರೆ ತಿಂದ ಆಹಾರವು ಮೈಗೆ ಹತ್ತಬೇಕು. ಅದಕ್ಕೆ ಮುಖ್ಯವಾಗಿ ಒಳ್ಳೆಯ ನೈರ್ಮಲ್ಯ, ಕುಡಿಯುವ ನೀರು, ಸಾರ್ವಜನಿಕ ಆರೋಗ್ಯ ಕಲ್ಯಾಣ ಮತ್ತು ಇತರ ಆರೋಗ್ಯೇತರ ಸೇವೆಗಳು ಮುಂತಾದುವೆಲ್ಲಾ ಬೇಕಾಗುತ್ತದೆ. ಈ ಎಲ್ಲಾ ಸೇವೆಗಳು ಸಿಗಬೇಕಾದರೆ ಸ್ಥಳೀಯ ಪಂಚಾಯಿತಿ ಸಮರ್ಥವಾಗಿರಬೇಕು. ಅವು ಉಳಿದ ಸ್ಥಳೀಯ ಸಂಸ್ಥೆಗಳೊಂದಿಗೆ ಹೊಂದಿಕೊಂಡು ಕೆಲಸಮಾಡಬೇಕು. ಕೋವಿಡ್-೧೯ರ ಸಂದರ್ಭದಲ್ಲಿ ಶುದ್ಧ ನೀರಿನ ಕೊರತೆಯ ಸಮಸ್ಯೆ ಎದ್ದು ಕಾಣುತ್ತಿದೆ. ಸೋಂಕು ಹರಡುವುದನ್ನು ತಪ್ಪಿಸುವುದಕ್ಕಾಗಿ ಪದೇ ಪದೇ ಕೈಗಳನ್ನು ತೊಳೆದುಕೊಳ್ಳುವುದು ಮುಖ್ಯವಾಗಿರುವ ಈ ಸಂದರ್ಭದಲ್ಲಿ ಇದು ಮುಖ್ಯವಾಗುತ್ತದೆ.
ಆಹಾರ ಲಭ್ಯವಿರಬೇಕು, ಅದು ಜನರಿಗೆ ಸಿಗುವಂತಾಗಬೇಕು ಮತ್ತು ಅದು ಅದು ಮೈಗೆ ಹತ್ತಬೇಕು. ಅವೆಲ್ಲಾ ಇದ್ದರೆ ಆಹಾರ ಹಾಗೂ ಪೌಷ್ಟಿಕಾಂಶಕ್ಕೆ ಸಂಬಂಧಿಸಿದಂತೆ ಒಂದು ಒಳ್ಳೆಯ ಸಧೃಡವಾದ ವ್ಯವಸ್ಥೆ ಇದೆ ಅನ್ನಬಹುದು. ಈ ಎಲ್ಲಾ ಆಯಾಮಗಳೂ ಇಂದು ಕೊರೋನಾ ವೈರಾಣುವಿನಿಂದ ಘಾಸಿಗೊಂಡಿವೆ.

ಕೃಷಿ, ಪೌಷ್ಟಿಕಾಂಶ ಮತ್ತು ಆರೋಗ್ಯ ಇವುಗಳ ನಡುವೆ ಸಂಬಂಧ ಇದೆ. ಅದು ತುಂಬಾ ಮುಖ್ಯ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಾರ್ವಜನಿಕ ಪಡಿತರ ಪದ್ಧತಿಯಿಂದ ಬೇಕಾದ ಕ್ಯಾಲೋರಿ ಸಿಕ್ಕಿರಬಹುದು. ಆದರೆ ಈ ಪಿಡುಗಿನ ಸಮಯದಲ್ಲಿ ಬೆಳೆಯನ್ನು ಕಟಾವು ಮಾಡುವುದಕ್ಕೇ ಆಗುತ್ತಿಲ್ಲ. ಬೇಗ ನಾಶವಾಗಿಬಿಡುವ ಹಣ್ಣು ಮತ್ತು ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸುವುದಕ್ಕೆ ಮತ್ತು ಒಳ್ಳೆಯ ದರದಲ್ಲಿ ಮಾರುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ರೈತರ ಆದಾಯಕ್ಕೆ ಮತ್ತು ಜೀವನಕ್ಕೆ ಹೊಡೆತ ಬಿದ್ದಿದೆ. ಅಷ್ಟೇ ಅಲ್ಲ ಬಳಕೆದಾರರಿಗೂ ಬೇಕಾದ ಪೌಷ್ಟಿಕಾಂಶ ಸಿಗುತ್ತಿಲ್ಲ. ರೈತರಿಗೆ ನಷ್ಟವಾಗುತ್ತಿದೆ. ಒಂದು ಕಾಲದಲ್ಲಿ ಬಹುಪಾಲು ಜನರಿಗೆ ಕೆಲಸ ಒದಗಿಸುತ್ತಿದ್ದ ಕೃಷಿ ಕ್ಷೇತ್ರದಲ್ಲಿ ಇಂದು ಕೆಲಸವೇ ಇಲ್ಲ. ಉತ್ಪಾದನೆಯ ಚಕ್ರ ಇದನ್ನೆಲ್ಲಾ ತಾಳಿಕೊಳ್ಳಬಲ್ಲುದೇ ಅನ್ನುವ ಅನುಮಾನ ಬರುತ್ತದೆ. ಜೊತೆಗೆ ಇದರಿಂದ ಪೌಷ್ಟಿಕಾಂಶ ಮತ್ತು ಆರೋಗ್ಯ ಭದ್ರತೆಯ ಮೇಲೆ ಸುಧೀರ್ಘವಾದ ಪರಿಣಾಮ ಉಂಟಾಗುತ್ತದೆ.

೧೯೬೦ರಲ್ಲಿ ಆಗಬಹುದಾಗಿದ್ದ ದೊಡ್ಡ ಕ್ಷಾಮವನ್ನು ಭಾರತ ತಪ್ಪಿಸಿಕೊಂಡಿತು. ಸರ್ಕಾರ ಅದಕ್ಕಾಗಿ ತಂತ್ರಜ್ಞಾನ ಹಾಗೂ ಸಾರ್ವಜನಿಕ ನೀತಿಯನ್ನು ಬಳಸಿಕೊಂಡಿತು. ರೈತರು ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವುದಕ್ಕೆ ನೆರವು ನೀಡಿತು. ಇಂದು ಸಮಸ್ಯೆ ಅಷ್ಟು ತೀವ್ರವಾಗಿಲ್ಲ. ಫಸಲು ಖರೀದಿ, ಬೆಳೆ ನಿರ್ಧಾರ ಮತ್ತು ಖರೀದಿಸಿದ ಆಹಾರ ಧಾನ್ಯಗಳ ವಿತರಣೆ ಇವುಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ಸಾರ್ವಜನಿಕ ನೀತಿ, ತಂತ್ರಜ್ಞಾನದ ಸುಧಾರಣೆ, ರೈತರ ಸಹಕಾರ ಇವೆಲ್ಲವನ್ನು ಒಟ್ಟುಗೂಡಿಸಿಕೊಂಡು ಪಿಡುಗಿನಿಂದ ಆಗಿರುವ ತೊಂದರೆಯನ್ನು ನಿರ್ವಹಿಸಬಹುದು. ಈ ಪಿಡುಗಿನಿಂದಾಗಿ ನಮಗೆ ರೈತರ ಅಪಾರ ಕೊಡುಗೆಯನ್ನು ಗುರುತಿಸುವುದಕ್ಕೆ ಸಾಧ್ಯವಾಗಬಹುದು ಅಂತ ನಿರೀಕ್ಷಿಸುತ್ತೇವೆ.

ಸ್ವಾಮಿನಾಥನ್ ಎಂ ಎಸ್, ನಿತ್ಯಾ ರಾವ್
ಮೇ ೨, ೨೦೨೦

ಸ್ವಾಮಿನಾಥನ್ ಎಂ ಎಸ್. ಪ್ರಖ್ಯಾತ ಕೃಷಿ ವಿಜ್ಞಾನಿ, ಎಂ ಎಸ್ ಸ್ವಾಮಿನಾಥನ್ ಸಂಶೋಧನಾ ಫೌಂಡೇಶನ್ ಸ್ಥಾಪಕ, ನಿತ್ಯಾ ರಾವ್ ಜೆಂಡರ್ ಹಾಗೂ ಡೆವಲಪ್‌ಮೆಂಟ್, ಇಂಗ್ಲೆಂಡಿನ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು.

ಕೃಪೆ : thehindu

ಅನುವಾದ: ಟಿ. ಎಸ್. ವೇಣುಗೋಪಾಲ್

ಪ್ರತಿಕ್ರಿಯಿಸಿ