ಕೊರೋನ ವೈರಸ್ ಸಂದರ್ಭದಲ್ಲಿ ಜಾಗತಿಕ ಎಡ – ಬಲ ರಾಜಕಾರಣ

ಕರೋನಾ ವೈರಾಣು ಒಂದು ಹೊಸ ಸಾಮಾಜಿಕ ಕರಾರನ್ನೇನೂ ಜಾರಿಗೆ ತಂದುಬಿಡುವುದಿಲ್ಲ.

ಈ ಸರ್ವವ್ಯಾಪೀ ವ್ಯಾಧಿಯಾದ ಕರೋನಾ ವೈರಾಣು ಪಿಡುಗು ಹರಡಿಕೊಂಡಿರುವಾಗ, ಎಡ ಮತ್ತು ಬಲ ಪಂಥಗಳಲ್ಲೆರಡರಲ್ಲೂ ಸರ್ವಾಧೀಕಾರೀ ರಾಷ್ಟ್ರಗಳನ್ನು ಮಾದರಿಯೆಂದು ಪರಿಗಣಿಸುವ ಜನರಿದ್ದಾರೆ. ಮತ್ತೆ ಕೆಲವರು, ನಮಗೆ ಈಗ ಅತ್ಯುತ್ತಮವಾದ ಸಮಾಜವಾದೀ ಪರಂಪರೆಯನ್ನು ಮರುಪಡೆಯುವ ಮತ್ತು ಮರುಸೃಷ್ಟಿಮಾಡುವ ಅಗತ್ಯವಿದೆಯೆಂದು ಆಲೋಚಿಸುತ್ತಾರೆ: ಅಂದರೆ ಯಾರು ರಾಷ್ಟ್ರದ ಬಗ್ಗೆ ಮತ್ತು ಪ್ರಜಾಪ್ರಭುತ್ವದ ಸ್ವಾಸ್ಥ್ಯದ ಬಗ್ಗೆ ಯೋಚಿಸುತ್ತಾರೋ, ಭೀತಿಯನ್ನು ಎದುರಿಸುವುದಕ್ಕೋಸ್ಕರ ಹೊಸ ಜಾಗತಿಕ ಸಾಮಾಜಿಕ ಕರಾರನ್ನು ಮುಂದಿಡುವ ಸಾಮರ್ಥ್ಯ ಹೊಂದಿರುವಂಥ ಸುಧೃಢ ನಾಗರಿಕ ಸಮಾಜಗಳಿಗೆ ಮೊರೆಯಿಡುತ್ತಾರೋ ಅಂಥವರು. ನಮಗೆ ಎಂಥಹ ರಾಷ್ಟ್ರಗಳು ಬೇಕು?

ನಾವು ಈಗಷ್ಟೇ ಒಂದು ಆತಂಕ ಭರಿಸುವಷ್ಟು ಮಟ್ಟಿಗಿನ ವಿಶ್ವಾಸದಿಂದ ರಾಷ್ಟ್ರಗಳು ಏನು ಮಾಡಬೇಕು ಎಂದು ಹೇಳುವ, ಹಾಗೂ ಅಗತ್ಯವಿದ್ದಲ್ಲಿ ವ್ಯಕ್ತಿಗಳಿಗೆ ಬಲವಂತದಿಂದಲಾದರೂ ‘ಅವರಿಗೆ ಯಾವುದು ಒಳಿತೆಂದು ರಾಷ್ಟ್ರಕ್ಕೆ ಗೊತ್ತಿದೆ’ ಎಂದು ನೆನಪು ಮಾಡಿಸುತ್ತಿರುವಂಥಹ, ಒಂದು ಸಂವತ್ಸರ ಕಾಲದ ಉದ್ದೇಶಪೂರ್ವಕ ಕಟ್ಟುಪಾಡುಗಳಿಂದ ನಾವು ಈಗಷ್ಟೇ ಬದುಕುಳಿದಿದ್ದೇವೆ. ಅವುಗಳಿಗೆಲ್ಲಾ ನಾವು ಹಿಂತಿರುಗಲು ಸಾಧ್ಯವಿಲ್ಲ. ಹಾಗಾಗಿ ನಾವು “ರಾಷ್ಟ್ರ” ಎಂದು ಮತ್ತೆ ಯೋಚಿಸುವುದೇ ಆದರೆ, ಅದರ ಮಿತಿಗಳ ಅರ್ಥವೇನು ಎಂಬುದರಿಂದ ಪ್ರಾರಂಭಮಾಡುವುದು ಉತ್ತಮ.

  • ಟೋನೀ ಜುಡ್ತ್. ಇಲ್ ಫೇರ್ಸ್ ದ ಲ್ಯಾಂಡ್.

ಸರ್ವಾಧಿಕಾರಗಳು – ಆರಿಸಿಕೊಂಡಾಗ

ಮಾರ್ಚ್ ಮೂರರಂದು ಹಂಗೇರಿಯ ಪ್ರಧಾನ ಮಂತ್ರಿ ವಿಕ್ಟರ್ ಓರ್ಬಾನ್ “ನಾವು ಕರೋನ ವೈರಾಣುವಿಗೂ ಕಾನೂನು ಬಾಹಿರ ವಲಸಿಗರಿಗೂ ಇರುವ ಒಂದು ರೀತಿಯ ಕೊಂಡಿಯನ್ನು ಅವಲೋಕಿಸುತ್ತಿದ್ದೇವೆ” ಎಂದು ಹೇಳಿದರು. ಅವರ ಮಾತುಗಳನ್ನು ಸಮರ್ಥಿಸುವ ಡೇಟಾವನ್ನು ನಾವು ಅವರಲ್ಲಿ ಕೇಳಿದಾಗ ಅವರು ಸುಮ್ಮನಾಗಿಬಿಟ್ಟರು. ಓರ್ಬಾನರ ಮಟ್ಟಿಗೆ ಕಾನೂನುಬಾಹಿರ ವಲಸಿಗರಿಗೂ ಮತ್ತು ಈ ಸೋಂಕಿಗೂ ಇರುವ ಕೊಂಡಿಗಳು ಎಲ್ಲಾರಿಗೂ ಸ್ಪಷ್ಟವಾಗಿ ಕಾಣಲೇ ಬೇಕು. ಈ ಹೇಳಿಕೆಯನ್ನು ಕೊಟ್ಟಾದ ಮೇಲೆ, ಈ ಅವಕಾಶವನ್ನೇ ಉಪಯೋಗಿಸಿಕೊಂಡು ಓರ್ಬಾನರು ಅವರಿಗೆ ಚೆನ್ನಾಗಿ ಮಾಡಲು ತಿಳಿದಿರುವ ಒಂದು ಕಾರ್ಯವನ್ನು ಮಾಡಿಯೇ ಬಿಟ್ಟರು. ಅಂದರೆ ಪರದೇಶದವರಿಗೆ ಆಶ್ರಯ ಬೇಡಲು ಇರುವ ಹಕ್ಕುಗಳನ್ನು ಮೊಟಕುಗೊಳಿಸುವುದು. ಈಗ ಇದೇ ಓರ್ಬಾನ್, ತಾನು ಯಾವ ಹಿಂಜರಿಕೆಯೂ ಇಲ್ಲದೆ “ಉದಾರವಾದಿಯಲ್ಲದ” ಆಡಳಿತ ಎಂದು ಯಾವುದನ್ನು ಕರೆಯುತ್ತಾನೋ ಆ ಆಡಳಿತದ ಸರ್ವಾಧಿಕಾರೀ ನಾಯಕನಾಗಿ, ಕಾರ್ಯನಿರ್ವಾಹಕ ಆದೇಶಗಳೊಂದಿಗೆ ಕೊನೆಯಿರದ ಅವಧಿಯ ಅಧಿಕಾರ ವಹಿಸಿಕೊಳ್ಳಲು ತಯಾರಾಗುತ್ತಿದ್ದಾನೆ. ಅವನೇನೋ ತಾನು ಹೀಗೆ ಮಾಡುತ್ತಿರುವುದು ಕರೋನಾ ವೈರಾಣು ಚಾಲ್ತಿಯಲ್ಲಿರುವವಗೆ ಮಾತ್ರಾ ಎಂದು ಹೇಳುತ್ತಿದ್ದಾನೆ, ನಿಜ. ಆದರೆ ಅವನು ಈ ವೈರಾಣು ಸೋಂಕನ್ನೇ ನೆಪವಾಗಿಟ್ಟುಕೊಂಡು ತನ್ನ ಹಾಗೂ ತನ್ನ ಸರಕಾರದ ಪ್ರಾಬಲ್ಯವನ್ನು ಗಟ್ಟಿಮಾಡಿಕೊಳ್ಳುತ್ತಿಲ್ಲ ಎಂದು ನಂಬುವುದಾದರೂ ಹೇಗೆ? ಹಂಗೇರಿಯಲ್ಲಿ ಸರಕಾರ ಬಹಳ ಶಕ್ತಿಯುತವಾಗಿದೆ. ಯಾವುದರಲ್ಲಿ ಶಕ್ತಿಯುತವಾಗಿದೆ ಅಂದರೆ; ರಾಜಕೀಯ ವಿರೋಧಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು, ಸೆಮಿಟೀಕ್-ವಿರೋಧಿ (ಜ್ಯೂಗಳ ವಿರುದ್ಧ) ಹಕ್ಕು ಚಲಾಯಿಸುವುದು ಹಾಗೂ ಲೈಂಗಿಕ, ಧಾರ್ಮಿಕ ಮತ್ತು ಜನಾಂಗೀಯ ವೈವಿಧ್ಯತೆಗಳ ವಿರುದ್ಧ ಆಕ್ರಮಣ ಮಾಡುವುದು ಇತ್ಯಾದಿ. ಚಿಕ್ಕದಾಗಿ ಹೇಳಬೇಕೆಂದರೆ, ಸಾಮಾಜಿಕ ನಿಯಂತ್ರಣವನ್ನು ಚಲಾಯಿಸುವುದು.

ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ನಾಯಕರಾದ ಕ್ಸೀ ಜಿನ್ಪಿಂಗ್, ಚೀನಾದ ಗಡಿಗಳೊಳಗೆ ಕರೋನಾ ವೈರಾಣುವಿನ ಸೋಂಕನ್ನು ನಿಯಂತ್ರಿಸುವಲ್ಲಿ, ಒಂದು ತುಲನಾತ್ಮಕ ಮಟ್ಟದ ಪರಿಣಾಮವನ್ನು ತೋರಿಸುತ್ತಿದ್ದಾರೆ. ಆದರೆ ಚೀನಾದ ಪರಿಣಾಮಗಳು ಒಂದು ಪ್ರಜಾಪ್ರಭುತ್ವದ ಕ್ರಮದ ಆಧಾರದ ಮೇಲಂತೂ ನಿಂತೇ ಇಲ್ಲ. ನಿಜ ಹೇಳಬೇಕೆಂದರೆ ಈ ವಿಷಯ ವೈರಾಣು ಸ್ಫೋಟದ ಮೊದಮೊದಲ ಕೆಲವು ವಾರಗಳಲ್ಲಿಯೇ ಸಾಬೀತಾಗಿತ್ತು. ಇದಕ್ಕೆ ಮೊದಲನೆಯ ಸಾಕ್ಷಿ ಎಂದರೆ, ದ ಲಾನ್ಸೆಟ್ ಎಂಬ ವೈದ್ಯಕೀಯ ನಿಯಮಿತ ಪತ್ರಿಕೆಗೆ ಬರೆದ ಒಂದು ಪತ್ರದಲ್ಲಿ ವೂಹಾನಿನ ಇಬ್ಬರು ದಾದಿಯರು, ತಾವು ಅನುಭವಿಸುತ್ತಿರುವ ಉಪಕರಣಗಳ ಕೊರತೆ ಮತ್ತು ತಾವು ಕೆಲಸ ಮಾಡಬೇಕಾಗಿ ಬಂದಿರುವ ಹೆದರಿಕೆ ಹುಟ್ಟಿಸುವಂಥ ಪರಿಸ್ಥಿತಿಗಳು ಇವುಗಳ ಬಗ್ಗೆ ಬರೆದಿದ್ದರು. ಆ ದಾದಿಯರನ್ನು ಚೀನಾದ ಸರಕಾರ ಜಬರ್ದಸ್ತಾಗಿ ಕೆಲಸದಿಂದ ತೆಗೆದು ಹಾಕಿತು. ಅಲ್ಲದೆ ಜನವರಿಯ ಮೊದಲಲ್ಲೇ ಈ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದ ವೈದ್ಯರಾದ ಲೀ ವೀನ್‍ಲಿಯಾಂಗ್ ಅವರ ಮೇಲೆ, ಚೀನಾದ ಸಾರ್ವಜನಿಕ ರಕ್ಷಣಾ ಮಂತ್ರಾಲಯದ ಪೋಲೀಸರು ಒತ್ತಡ ಹಾಕಿ ಅವರು ತಾನು “ಸುಳ್ಳು ಸುದ್ದಿ” ಗಳನ್ನು ಹರಡುತ್ತಿದ್ದೆ ಎಂದು ಹೇಳಿಕೆ ಕೊಡಿಸಿದರು. ಅದಾದ ಕೆಲವು ದಿನಗಳಲ್ಲೇ ಲೀ ಸ್ವತಃ ಕರೋನಾ ವೈರಾಣು ಸೋಂಕಿಗೆ ಬಲಿಯಾಗಿ ಮೃತಪಟ್ಟರು. ಕೊನೆಗೆ ಕರೋನ ವೈರಾಣು ಹರಡಲು ಪ್ರಾರಂಭಿಸಿದ ಮೇಲೆ ಚೀನಾ ಸರಕಾರ, ಅದನ್ನು ತಡೆಯಲು ತ್ವರಿತವಾಗಿ ಕಾರ್ಯನಿರತವಾಯಿತು. ಅಷ್ಟಲ್ಲದೆ ಅದು ತನ್ನ ದಮನಗೊಳಿಸುವ ಶಕ್ತಿಯನ್ನೂ ಹಾಗೂ ತನ್ನ ಸಾಮಾಜಿಕ ನಿಯಂತ್ರಣದ ಸಾಧನಗಳನ್ನು ಬಲಗೊಳಿಸಿಕೊಳ್ಳಲು ಸಹಾ ಕಾರ್ಯನಿರತವಾಯಿತು.

ಚೀನಾ ಒಂದು ಏಕ-ಪಕ್ಷದ ಆಡಳಿತದ ಅಡಿಯಲ್ಲಿದೆ ಮತ್ತು ಅದರ ನಾಯಕ ಕ್ಸೀ, ಪ್ರಾಬಲ್ಯದಲ್ಲಿ ಮಾವೋ -ತ್ಸೆ- ತುಂಗನನ್ನು ಅನುಕರಣೆ ಮಾಡುವ ಅಭಿಲಾಷೆ ಹೊಂದಿದ್ದಾರೆ ಎಂಬುದನ್ನು ನಾವು ಮರೆಯುವ ಹಾಗಿಲ್ಲ. ಹಾಗೂ ಅವನ ಹಿಡಿತದಲ್ಲಿ ಒಂದು ದೊಡ್ಡದಾದ, ಜನರ ನಿಯಂತ್ರಣಕ್ಕೆಂದೇ ಮೀಸಲಾದ ಡೇಟಾ ಇದೆ ಎಂಬುದನ್ನೂ ನಾವು ಮರೆಯುವ ಹಾಗಿಲ್ಲ. ಮಾಯಾ ವಾಂಗ್ ಮತ್ತು ಕೆನ್ನೆತ್ ರಾತ್ ಇವರುಗಳು ಅದನ್ನು ” ಒಂದು ಲೆವಿಯಾತನ್ ದೇಟಾ” ಎಂದು ಕರೆದಿದ್ದಾರೆ.

ಚೀನಾ ತನ್ನ ಜನಸಂಖ್ಯೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಸ್ಥಾಪಿಸಿದೆ. ಸರಕಾರಗಳನ್ನು ಹಿಡಿತದಲ್ಲಿಡಲು ಎದುರು ನೋಡುತ್ತಿರುವ ಪಾಶ್ಚಿಮಾತ್ಯ ಬಂಡವಾಳಶಾಹೀ ಬೃಹದ್ ವ್ಯಾಪಾರೀ ಸಂಸ್ಥೆಗಳಂತೆ ಇದು ಅಲ್ಲ , ಏಕೆಂದರೆ ಇಲ್ಲಿ ಅಂದರೆ ಚೀನಾದಲ್ಲಿ, ಸರಕಾರಕ್ಕೆ ಎದುರಾಗಬಲ್ಲ ಕಾನೂನುಬದ್ಧ ಕಟ್ಟಲೆಗಳ ಸಮತೋಲನೆಯ ತೂಕವಿಲ್ಲ. ಡೇಟಾದ ನಿಯಂತ್ರವನ್ನು ಇಲ್ಲಿ, ನೇರವಾಗಿ ಸರಕಾರವೇ ನಡೆಸುತ್ತದೆ. ದುರದೃಷ್ಟವಶಾತ್, ಪಾಶ್ಚಿಮಾತ್ಯ ಪ್ರಪಂಚದ ಹಲವಾರು ರಾಜಕೀಯ ವರ್ಗಗಳು ಅದರಲ್ಲೂ ಮುಖ್ಯವಾಗಿ ಕೆಲವು ತಮ್ಮನ್ನು ತಾವೇ ಉದಾರವಾದಿಗಳು ಮತ್ತು ಪ್ರಗತಿಪರರು ಎಂದು ಕರೆದುಕೊಳ್ಳುತ್ತಿರುವವರು ಚೀನಾದ ಪರಿಸ್ಥಿತಿಯನ್ನು ಸಂಭ್ರಮಿಸುತ್ತಿದ್ದಾರೆ. ಅವರ ಪ್ರಕಾರ ಈ ಏಸಿಯಾದ ದೇಶದಲ್ಲಿ ಪ್ರಜೆಗಳು ಗಂಭೀರವಾಗಿ ಜವಾಬ್ದಾರಿಯುತರಾಗಿ ರಾಷ್ಟ್ರದ ಆದೇಶಗಳನ್ನು ಪಾಲಿಸುತ್ತಿದ್ದಾರೆ, ಆಸ್ಪತ್ರೆಗಳನ್ನು ಕಟ್ಟಲಾಗುತ್ತಿದೆ ಹಾಗೂ ವಿಜ್ಞಾನಿಗಳು ಈ ಪರಿಸ್ಥಿತಿಗೆ ವಿಶೇಷ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂದರೆ ಅವರು ಚೀನಾದ ಸರಕಾರದ ದಕ್ಷ ಪಾತ್ರವನ್ನು ಹಾಡಿಹೊಗಳುತ್ತಿದ್ದಾರೆ. ಆದರೆ ಆ ದಕ್ಷತೆ ಯಾವಾಗಲೂ ನೈಜವಲ್ಲ. ಹೇಗೆಂದರೆ ಚೀನಾದ ಭ್ರಷ್ಟ ಪ್ರಾಂತೀಯ ಸರಕಾರಗಳು ಸರಕಾರಕ್ಕೇ ಸುಳ್ಳು ಮಾಹಿತಿಯನ್ನು ನೀಡಿಬಿಡುತ್ತವೆ. ಒಂದು ಏಕ-ಪಕ್ಷ ಆಡಳಿತದಲ್ಲಿರುವ ಆ ಸರಕಾರದಡಿಯಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಭರವಸೆ ಬಹಳ ಕಡಿಮೆ. ಅಂತಹ ಸರಕಾರದಡಿಯಲ್ಲಿ ಯಾವುದನ್ನು ಜನರ ಜವಾಬ್ದಾರೀಯುತ ನಡವಳಿಕೆ ಎಂದು ಬಿಂಬಿಸಲಾಗುತ್ತದೆಯೋ ಅದು,ಜನರು ತೋರುವ ಭೀತಿಯಿಂದ ಪ್ರೇರಿತವಾದ ಆಜ್ಞಾಪಾಲನೆ ಆಗಿರುವ ಸಾಧ್ಯತೆಗಳಿವೆ.

ಚೀನಾದಲ್ಲಿ ಸರಕಾರ ಭದ್ರವಾಗಿದೆ, ಹಾಗೂ ಕೆಲವು ನಿರ್ಧಿಷ್ಠ ಕಾಲದಲ್ಲಿ ಮತ್ತು ಕ್ಷೇತ್ರಗಳಲ್ಲಿ ಅದು ಪರಿಣಾಮಕಾರಿಯಾಗಿಯೂ ಇದೆ. ಆದರೆ ನಮಗೆ ಅಂಥಹ ಸರಕಾರ ಬೇಕಾ?

ಸುಮಾರು ಇದೇ ರೀತಿಯ ಸ್ಥಿತಿಯು ರಶ್ಯಾದಲ್ಲೂ ನಡೆಯುತ್ತಿದೆ. ಒಂದು ಜನಪ್ರಿಯ ಸಮಾಲೋಚನೆಯ ಮೂಲಕ ಅಲ್ಲಿ ವಾಲ್ಡಮೀರ್ ಪುಟಿನ್ ತನ್ನನ್ನು ತಾನು ಅಧಿಕಾರದಲ್ಲಿ ಶಾಶ್ವತಗೊಳಿಸಿಕೊಳ್ಳುತ್ತಿದ್ದಾನೆ. ಅವನ ಆ ಪ್ರಯತ್ನ ಈ ಸೋಂಕಿನ ಪ್ರಯುಕ್ತ ಇಲ್ಲಿಯವರೆಗಂತೂ ತಡೆಹಿಡಿಯಲ್ಪಟ್ಟಿಲ್ಲ. ಈ ವೈರಾಣುವಿಗೆ ಕೃತಜ್ಞನಾಗಿರುವ ಪ್ರಪಂಚದ ನಾಯಕರುಗಳಲ್ಲಿ ಪುಟಿನ್ ಕೂಡಾ ಒಬ್ಬ. ಈ ಸೋಂಕಿನಿಂದ ಜನರು ಅನುಭವಿಸುತ್ತಿರುವ ಆತಂಕದಿಂದಾಗಿ ಅವನ ವಿರುದ್ಧದ ಪ್ರತಿಭಟನೆಗಳು ಸಧ್ಯಕ್ಕೆ ತಣ್ಣಗಾಗಿವೆ. ರಶ್ಯಾದ ಈ ನಾಯಕ ಈ ಪ್ರತಿಭಟನೆಗಳನ್ನೇ ತನ್ನ ಪರವಾದ ವಾದವಾಗಿ ಮುಂದಿಡುತ್ತಾನೆ. ಅಂದರೆ, ತನ್ನ ಸರಕಾರ 2035ರ ವರೆಗೆ ಮುಂದುವರೆಯಬೇಕೆಂದೂ ಅದರಿಂದ ದೇಶ, ಶಾಂತಿಯುತವಾಗಿ ಕ್ರಮಬದ್ಧವಾಗಿ ( ಪ್ರತಿಭಟನೆಗಳಿಲ್ಲದೆ) ಮುಂದುವರೆಯುವ ಭರವಸೆ ಸಿಗುವುದೆಂದೂ ಅವನ ವಾದ. ಚೀನಾದಂತೆಯೇ ರಶ್ಯಾದಲ್ಲೂ ಪುಟಿನ್ನಿನ ಧೃಢ ಹಸ್ತವನ್ನು ಕಾಳಜಿ ತೋರುವ ಸರಕಾರ ಎಂದು ಬಹಳ ಜನ ಪರಿಗಣಿಸುತ್ತಾರೆ. ಕರೋನಾ ವೈರಸ್ಸಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಅವನ ವೇಗವಾದ ಕಾರ್ಯಾಚರಣೆಯನ್ನು ಪಶ್ಚಿಮದ ಪ್ರಗತಿಪರ ವರ್ಗಗಳು ಹೊಗಳಿವೆ. ಪಶ್ಚಿಮದ ಪ್ರಗತಿಪರರು ಅವರದೇ ಸಮಾಜಕಲ್ಯಾಣ ಸಿದ್ಧಾಂತದ ರಾಷ್ಟ್ರಗಳು ಈ ಸೋಂಕಿನ ವಿಷಮಸ್ಥಿತಿಯ ಎದುರು ತತ್ತರಿಸುವುದನ್ನೂ, ತಮ್ಮ ತಮ್ಮ ಸರಕಾರಗಳು ನಿಷ್ಕ್ರಿಯವಾಗಿ ಅಥವಾ ಆಲಸ್ಯದಿಂದ ಪ್ರತಿಕ್ರಿಯಿಸುವುದನ್ನೂ, ತಮ್ಮತಮ್ಮ ಆರೋಗ್ಯ ವ್ಯವಸ್ಥೆಗಳ ಬಿಕ್ಕಟ್ಟನ್ನೂ ಕಂಡಿದ್ದಾರೆ. ಆದರೆ ಮತ್ತೆ ಯೋಚಿಸಬೇಕು; ತನ್ನ ಅಧಿಕಾರಶಾಹೀ ಮುಖ ಮತ್ತು ಸರ್ವಾಧೀಕಾರೀ ಗುಣಗಳಿರುವ ರಶ್ಯಾದಂಥ ರಾಷ್ಟ್ರವನ್ನೇ ಪ್ರಗತಿಪರ ಜನರು ಎದಿರು ನೋಡುತ್ತಿರುವುದು?

ಉದಾಹರಣೆಗಳ ವ್ಯಾಪ್ತಿ ಬಹಳ ದೊಡ್ಡದಿದೆ. ಪ್ರೆಂಚ್ ತೀವ್ರಗಾಮೀ ಬಲದ ನಾಯಕಿ ಮಾರೀನ್ ಲ್ ಪೆನ್ ಕೂಡಾ ಒಂದು ಕಾಳಜಿಯುಳ್ಳ ರಾಷ್ಟ್ರವನ್ನು ಬಯಸುತ್ತಾಳೆ. ಅವಳು ಈ ಕರೋನಾ ವೈರಾಣುವಿನ ಸಮಯದಲ್ಲಿ ಅಂತಹ ಸರಕಾರಕ್ಕಾಗಿ ಮನವಿ ಮಾಡುತ್ತಾಳೆ. ಅವಳು ತಕ್ಷಣ ತನಗಾಗಲೇ ಮನಸ್ಸಿನಲ್ಲಿದ್ದ ಕಾರ್ಯಾಚರಣೆಗೆ ಕರೆ ಕೊಟ್ಟಳು. ಅದೇನೆಂದರೆ ಇಟಲಿಯೊಂದಿಗೆ ಫ್ರಾನ್ಸಿನ ಗಡಿಯನ್ನು ಮುಚ್ಚಿಬಿಡುವುದು. ಅವಳ ದೃಷ್ಟಿಯಲ್ಲಿ ಅದು ಶೆಂಜೆನ್ ಪ್ರದೇಶ ಅಂತ್ಯವಾಗಲು ನಾಂದಿಯಾಗಬಹುದು. ಇಟಲಿಯ ತೀವ್ರ ಬಲದ ನಾಯಕ ಮತ್ತೆಯೋ ಸಾಲ್ವಿನಿ ವಲಸೆಬಂದವರನ್ನು ತಪ್ಪಿತಸ್ತರನ್ನಾಗಿ ಹೆಸರಿಸಿಸಿದ. ಅದರಲ್ಲೂ “ಜನಾಂಗೀಯ ಮಿನಿ-ಮಾರುಕಟ್ಟೆ” (‘ethnic mini-markets’) ಗಳನ್ನು ಅವನು ದೂರಿದ. ಹಾಗೂ ಗ್ರೀಕ್ ತೀವ್ರವಾದೀ ಬಲ ಪಂಥದ ಸರಕಾರವು ಕರೋನಾ ತನ್ನ ಒಂದು ಪ್ರತಿಗಾಮೀ ಕಾರ್ಯಯೋಜನೆಯಾದ ” ಜನರನ್ನು ಬಲವಂತವಾಗಿ ಸೆರೆಹಿಡಿದಿಡುವ ಬಂಧನ ಕೇಂದ್ರಗಳ ಅಭಿವೃದ್ಧಿಯನ್ನು” ( the development of forced detention centres) ಮುಂದುವರೆಸಲು ವೈರಾಣುವಿನ ಬಿಕ್ಕಟ್ಟನ್ನು ಒಂದು ಒಳ್ಳೆಯ ಅನುಕೂಲಕರ ತಂತ್ರವೆಂದು ಪರಿಗಣಿಸಿತು. ಈ ಶಿಯೋಸ್ ಮತ್ತು ಲೆಸ್ಬೋಸ್ ದ್ವೀಪಗಳಲ್ಲಿರುವ, ಆಶ್ರಯಕೋರುವ ನಿರಾಶ್ರಿತರಿಗಾಗಿರುವ ಈ ಕೇಂದ್ರಗಳನ್ನು ನಯವಾಗಿ “ಮುಚ್ಚಿದ ಕ್ಯಾಂಪುಗಳು” (“closed camps”) ಎಂದು ಕರೆಯಲಾಗುತ್ತದೆ.

ಇಸ್ರೇಲಿನಲ್ಲಿ ಬಲಪಂಥೀಯ ಸರಕಾರ ಅಧಿಕಾರದಲ್ಲಿದೆ. ಆದರೆ ಇದು ಮಧ್ಯಪಂಥೀಯರು ಮತ್ತು ಪ್ರಗತಿಪರ ಬಲಗಳ ಸಮ್ಮಿಶ್ರ ಒಕ್ಕೂಟದವರಿಂದ ತನ್ನ ಅಧಿಕಾರವನ್ನು ಕಳೆದುಕೊಳ್ಳುವ ಅಪಾಯದಲ್ಲಿತ್ತು. ಅಲ್ಲಿಯೂ ಸಹ ಬೆಂಜಾಮೀನ್ ನೆಥನ್ಯಾಹೂ ಕರೋನಾ ವೈರಾಣುವಿನ ಲಾಭ ಪಡೆದುಕೊಂಡ. ಸಿಲ್ವ್ಯಾನ್ ಚಿಪೆಲ್ ಎಂಬ ಪತ್ರಕರ್ತ ಹೇಳುವಂತೆ, ಇಸ್ರೇಲಿನ ಪ್ರಧಾನಿ ಒಂದು ನಿಧಾನವಾಗಿ ಮುಂದುವರೆಯುವ ಸರಕಾರದ ವಿರುದ್ಧದ ಪ್ರತಿಭಟನೆಯನ್ನು ಛೇಡಿಸುತ್ತಿದ್ದಾನೆ. ಬರ್ನಾರ್ಡ್ ಅವಿಶಾಯಿ ಎಂಬ ಜೆರೂಸಲೆಮ್ಮಿನ ಹೀಬ್ರೂ ವಿಶ್ವವಿದ್ಯಾಲಯದ ಪ್ಪ್ರಾಧ್ಯಾಪಕನೂ ಇದೇ ಅಭಿಪ್ರಾಯದತ್ತ ಬೆರಳು ತೋರಿಸುತ್ತಾನೆ. ಅವನ ಪ್ರಕಾರ ಈಗ ಅನಿವಾರ್ಯವಾಗಿರುವ ಜನರ ನಡುವಿನ ಪ್ರತ್ಯೇಕತೆಗಳ ಲಾಭ ಪಡೆದುಕೊಂಡು ನೆಥನ್ಯಾಹೂ ತನ್ನನ್ನು ತಾನು ಅಧಿಕಾರದಲ್ಲಿ ಮುಂದುವರೆಸಿಕೊಳ್ಳುತ್ತಿದ್ದಾನೆ. ಎರಡು ವಾರಗಳ ಹಿಂದೆ ನಡೆದ, ಹಿಂದಿನ ಚುನಾವಣೆಯ ಮತಗಳ ಅಧಿಕೃತ ಎಣಿಕೆಯನ್ನು ಅವಲೋಕಿಸಿದಾಗ ನೆಥನ್ಯಾಹೂವಿನ ರಾಜಕೀಯ ಬಣ, ನೀಲಿ ಮತ್ತು ಬಿಳಿಯ ಸಮ್ಮಿಶ್ರ ಬಣದ ನಾಯಕನಾದ ಬೆನ್ನಿ ಗಾಂಟ್ಜ್‍ನ ನಾಯಕತ್ವದ ರಾಜಕೀಯ ಪಕ್ಷಕ್ಕಿಂತಲೂ 3 ಸ್ಥಾನಗಳಷ್ಟು ಸ್ಪಷ್ಟವಾಗಿ ಕಡಿಮೆ ಇತ್ತು. ಈ ವಿವಾದ ಯಾವ ಮಟ್ಟ ಮುಟ್ಟಿತ್ತೆಂದರೆ, ಇಸ್ರೇಲಿನ ಸರ್ವೋಚ್ಚ ನ್ಯಾಯಾಲಯದ ಅಧ್ಯಕ್ಷ ಎಸ್ತರ್ ಹಾಯುತ್, “ಕ್ನೆಸ್ಸೆತ್ತಿನ (ಇಸ್ರೇಲಿನ ಸದನ) ಬೀಗದ ಕೈ ಮೇಜಿನ ಮೇಲಿದೆ. ಯಾರು ಚುನಾವಣೆಯನ್ನು ಗೆಲ್ಲುತ್ತಾರೋ ಅವರು ಹೋಗಿ ಅದನ್ನು ತೆಗೆದುಕೊಳ್ಳುತ್ತಾರೆ ಎಂದು ಅನ್ನಿಸಬಹುದು. ಆದರೆ ಯಾರೋ ಒಬ್ಬರು ಆ ಬೀಗದ ಕೈಗಳನ್ನು ತೆಗೆದು ತಮ್ಮ ಜೇಬಿನಲ್ಲಿ ಇಟ್ಟುಕೊಂಡುಬಿಟ್ಟಿದ್ದಾರೆ.” ಇಸ್ರೇಲಿನವರೇ ಆದ , ಬೌದ್ದಿಕ ಜಗತ್ತಿನ ರಾಕ್‌ಸ್ಟಾರ್, ಯುವಾಲ್ ನೊವಾ ಹರಾರಿ ಹೀಗೆ ಹೇಳಿದ , “ಇಟಲಿ, ಫ್ರಾನ್ಸ್ ಮತ್ತು ಸ್ಪೈನಿನಲ್ಲಿ ತುರ್ತು ಪರಿಸ್ಥಿತಿಯ ಆಜ್ಞೆಗಳನ್ನು ಚುನಾಯಿತ ಸರಕಾರಗಳೇ ನೀಡಿವೆಯೇ ಹೊರತು ಜನರ ಸಹಮತವಿಲ್ಲದ ಯಾರಿಂದಲೋ ಅಲ್ಲ.” ಕಡೆಗೂ ನೆಥನ್ಯಾಹೂ ಕರೋನಾ ವೈರಾಣುವಿನ ವಿಷಮ ಸ್ಥಿತಿಯ ಕಾರಣದಿಂದ ಬಂದ ಸಾರ್ವಜನಿಕ ತುರ್ತುಪರಿಸ್ಥಿತಿಯ ಲಾಭ ಪಡೆದುಕೊಂಡೇ ಬಿಟ್ಟ. ಅವನು, ಮುಂದಿನ 18 ತಿಂಗಳುಗಳವರೆಗೆ ತಾನೇ ಅಧಿಕಾರದಲ್ಲಿ ಮುಂದುವರೆಯುತ್ತಾ ಇರಲು ಗಾಂಟ್ಜ್‍ನ ಬೆಂಬಲವನ್ನು ಗಿಟ್ಟಿಸಿದ. ಆ ಅವಧಿಯ ಅಂತ್ಯದಲ್ಲಿ ಗಾಂಟ್ಜ್‍ಗೆ ಅಧಿಕಾರವನ್ನು ಬಿಟ್ಟು ಕೊಡುತ್ತೇನೆಂದು ಅವನು ಮಾತು ಕೊಟ್ಟಿದ್ದಾನೆ.

ಲ್ಯಾಟಿನ್ ಅಮೆರಿಕದಲ್ಲಿ ದಂಡನಾತ್ಮಕ ಸಿದ್ಧಾಂತದ ಬಲಪಂಥವು ಕೂಡ ಇದರ ಲಾಭ ಪಡೆದುಕೊಂಡಿತು. ಪೆರುವಿನ ಅಧ್ಯಕ್ಷನಾದ ಮಾರ್ಟಿನ್ ವಿಜ಼್‌ಕಾರ ತಾನೊಬ್ಬ ಉದಾರವಾದಿಯ ಹಾಗೆ ತೋರ್ಪಡಿಸಿಕೊಂಡ. ಆದರೆ ಕೊನೆಯಲ್ಲಿ ತನ್ನ ಸರ್ವಾಧಿಕಾರೀ ನಡವಳಿಕೆಯನ್ನು ತೆರೆದಿಟ್ಟ. ಅಲ್ಲಿ ಕರ್ಫ್ಯೂ ಹೇರಿದ. ಕರ್ಫ್ಯೂನಿಂದ, ಸಮಾಜದ ಅತ್ಯಂತ ದುರ್ಬಲ ವರ್ಗದ ಜನರ ವಿರುದ್ಧ ಸೈನ್ಯವು ಹಿಂಸಾಚರಣೆ ಮಾಡಲು ಅನುಕೂಲ ಮಾಡಿಕೊಟ್ಟಿತು. ಆರ್ತೋ ಮುರಿಲ್ಲೋ ಎಂಬ ಏವೋ ಮೊರೇಲ್ಸ್‍ನನ್ನು ಸ್ಥಳಾಂತರಿಸಿದ ಬೊಲಿವಿಯಾದ ಗೃಹಮಂತ್ರಿ, ತಾನೇ ಒಬ್ಬ ಪೋಲಿಸಿನಂತೆ ಉಡುಪು ಧರಿಸಿಕೊಂಡು ಒಂದು ಉದ್ರೇಕಿಸುವ ಮಿಲಿಟರೀ ಭಾಷಣದೊಂದಿಗೆ, ಜನರೆಲ್ಲರನ್ನೂ ಜೈಲಿಗೆ ಕಳುಹಿಸುವ ಎಚ್ಚರಿಕೆಯನ್ನು ನೀಡುತ್ತಾ ಕರೋನಾ ವೈರಾಣುವಿನ ವಿರುದ್ಧ ಯುದ್ಧಕ್ಕೆ ಕರೆಮಾಡಿದ. ಇವರುಗಳೊಟ್ಟಿಗೆ ಜಾಯಿರ್ ಬಾಲ್ಸನಾರೋ ಅಂಥಹಾ ವೈರಾಣು ಬಿಕ್ಕಟ್ಟನ್ನು ಅಲ್ಲಗಳೆಯುವವರೂ ಇದ್ದಾರೆ. ಇವನಿಗಂತೂ ಜನರನ್ನು ತುಳಿಯುವ ಸರಕಾರದಲ್ಲಿ ನಂಬಿಕೆಯಿಡಲು ಕರೋನಾ ವೈರಾಣುವೇನೂ ಬೇಕಿಲ್ಲ.

ಜಗತ್ತಿನಲ್ಲಿ ಸರಕಾರಗಳು ಸರ್ವಾಧಿಕಾರಶಾಹೀಗಳಾಗಿ ಮರುಕಳಿಸಿದರೆ ಸಂತೋಷ ಪಡುವ ಬೇಕಾದಷ್ಟು ಪ್ರಗತಿಪರರಿದ್ದಾರೆ. ಆದರೆ ಬಹಳಷ್ಟು ಜನ ವಿಶ್ಲೇಷಕರ ಅಭಿಪ್ರಾಯದಂತೆ ಜಾಗತೀಕರಣ ಇನ್ನೂ ಅಂತ್ಯಗೊಂಡಿಲ್ಲ. ಅದು ಸರ್ವಾಧಿಕಾರಶಾಹಿಗಳಿಗೂ ತಿಳಿದಿದೆ. ನಿಜವಾಗಿ ಹೇಳಬೇಕೆಂದರೆ ಕೆಲವು ಜನರಿಗೆ ಬೇಕಾಗಿರುವುದೇನೆಂದರೆ ರಾಷ್ಟ್ರಗಳ ಗಡಿಗಳ ಒಳಗೆ, ಆಂತರಿಕವಾಗಿ ಸರ್ವಾಧಿಕಾರಶಾಹೀ ಆಡಳಿತಗಳಿರಬೇಕು, ಹಾಗೂ ವ್ಯಾಪಾರೀ ಜಾಗತಿಕ ಸ್ಥಿತಿ ಅಂತರರಾಷ್ಟಿಯ ಮಟ್ಟದಲ್ಲಿ ಇರಬೇಕು. ( ಕೆಲವರು ಇದನ್ನು “ರಾಷ್ಟ್ರೀಯ ಜಾಗತಿಕತೆ’ ಎಂದು ಕರೆಯುತ್ತಾರೆ. ಈ ಎರಡೂ ಪ್ರಪಂಚಗಳ ಅತ್ಯಂತ ಹೀನ ಸ್ಥಿತಿಯನ್ನು ಅಮೆರಿಕದಲ್ಲಿ ಕಾಣಬಹುದು : ಅಂದರೆ, ಒಂದು ರಚನಾಕ್ರಮವಿಲ್ಲದ ಆರೋಗ್ಯ ವ್ಯವಸ್ಥೆ, ಅಭಿವೃದ್ಧಿ ಹೊಂದುವುದನ್ನು ಮುಗಿಸಲಾರದ ಒಂದು ಸಮಾಜ ಕಲ್ಯಾಣ ರಾಷ್ಟ್ರ ಮತ್ತು ಪೊಳ್ಳು ಮಾತುಗಳ ಡೊನಾಲ್ಡ್ ಟ್ರಂಪ್‍ನ ಕೈಯಲ್ಲಿ ಅಧ್ಯಕ್ಷ ಸ್ಥಾನದ ಸರ್ವಾಧಿಕಾರ.

ಆರ್ಥಿಕ ಉದಾರವಾದಿಗಳ ( ಅಥವಾ ಅವರ ನಗೆಪಾಟಲಾಗುವ ಅವತಾರದ, ಇಚ್ಚಾ-ಸ್ವಾತಂತ್ರ್ಯವಾದಿತ್ವದ) ಬಿಕ್ಕಟ್ಟು ಮತ್ತು ಅಸಾಮರ್ಥ್ಯದಿಂದಾಗಿ ನಾವು ಒಂದು ರಾಷ್ಟ್ರದ ಶಕ್ತಿಯನ್ನು ಆಧರಿಸಿ ಅದರ ಸರಕಾರವನ್ನು ಹೊಗಳಿಬಿಡಬಾರದು. ಹಾಗೆಂದು ನಾವು ಎಲ್ಲಾ ಜಾಗತೀಕರಣದ ಆಲೋಚನೆಗಳನ್ನೂ ತೊರೆದು ನಮ್ಮನ್ನು ನಾವೇ ಒಂದು ಅಸಾಧ್ಯವಾದ ಮತ್ತು ಬಹುಶಃ ಒಂದು ಅನಪೇಕ್ಷಿತವಾದ, ಸಾಮಾಜಿಕ ಜೀವನವನ್ನು ಸಂಘಟಿಸುವ ಏಕೈಕ ಸಿದ್ಧಾಂತವಾಗಿ ರಾಷ್ಟ್ರ-ರಾಜ್ಯವು ಮರುಕಳಿಸುವುದರಲ್ಲಿ ಪ್ರತ್ಯೇಕಿಸಿಕೊಂಡುಬಿಡಬಾರದು. ಬಹಳಷ್ಟು ಸಾಮಾಜ ಶಾಸ್ತ್ರಜ್ಞರುಗಳು ಮತ್ತು ಅರ್ಥಶಾಸ್ತ್ರಜ್ಞರುಗಳು ಹೇಳುವಂತೆ ಜಾಗತೀಕರಣವು ಕೊನೆಗಾಣಲು ಇನ್ನೂ ಬೇಕಾದಷ್ಟು ಸಮಯವಿದೆ. ಉದಾರವಾದೀ ಜಾಗತೀಕರಣ ಅಥವಾ ಸರ್ವಾಧಿಕಾರಶಾಹೀ ಸರಕಾರಗಳೆರದೇ ನಮ್ಮೆದುರಿಗಿರುವ ಆಯ್ಕೆಗಳಲ್ಲ. ಸಮಾಜ ಕಲ್ಯಾಣ ಮತ್ತು ಪ್ರಜಾಪ್ರಭುತ್ವವಿರುವ ಸುಧೃಢ ರಾಷ್ಟ್ರಗಳು ಮತ್ತು ನಾಗರಿಕ ಸಮಾಜಗಳನ್ನೊಳಗೊಂಡ ಒಂದು ಜಾಗತಿಕ ಜಗತ್ತು ಬಹುಶಃ ಸಾಧ್ಯವಿದೆ.

ನಮಗೆ ಇನ್ನೂ ಹೆಚ್ಚು ರಾಷ್ಟ್ರದ ಕೈವಾಡ ಬೇಕಿದ್ದಲ್ಲಿ, ಅದು ಯಾವ ರೀತಿಯದಿರಬೇಕು ಎಂದು ನಾವು ಕೇಳುವುದೂ ಸಹ ತಪ್ಪಲ್ಲ.

ಪ್ರಜಾಪ್ರಭುತ್ವದ ( ಸಾಮಾಜಿಕ) ಅಸಮರ್ಥತೆ?

ಸರ್ವಾಧಿಕಾರತ್ವದ ಎದುರಿನಲ್ಲಿ (ಅದು ಕೆಲವು ಬಾರಿ ಸಮರ್ಥವಾಗಿರಲೂ ಬಹುದು) ಮುಂದುವರಿದ ಯೂರೋಪಿನ ಪ್ರತಿಕ್ರಿಯೆ ಏನು? ಖಂಡಿತವಾಗಿ ಅದು ಎಲ್ಲಾ ಕಡೆಯಿಂದಲೂ ಸಮನಾಗಿಲ್ಲ. ಎಲ್ಲಾ ವಿವಿಧ ದೇಶಗಳನ್ನು ಒಟ್ಟಿಗೆ ಪರಿಗಣಿಸಿ, ಅಂಕಿಅಂಶಗಳನ್ನು ಸುತ್ತಲೂ ಎರಚಿ, ಅಸಂಬದ್ಧ ಸಮಾಜಕಲ್ಯಾಣ ರಾಷ್ಟ್ರವನ್ನು ಎಲ್ಲಾದಕ್ಕೂ ತಪ್ಪಿತಸ್ಥವನ್ನಾಗಿ ಮಾಡುವುದು ಸುಲಭ. ಅದು ಭಾಗಶಃ ನಿಜವೂ ಆಗಿರಬಹುದು. ಆದರೆ ಸಂಪೂರ್ಣ ಸತ್ಯವಲ್ಲ. ಇಟಲಿಯು ವೈರಾಣು ಸೋಂಕಿನಲ್ಲಿ ಅಲ್ಲಲ್ಲಿ ಬಿದ್ದ ಹೆಣಗಳಿಂದ, ಹದ್ದು ಮೀರಿದ ನಿಷ್ಕ್ರಿಯತೆಯಿಂದ ಅಥವಾ ಅಕಾಲಿಕ ಕಾರ್ಯಾಚರಣೆಗಳಿಂದ ಅರ್ಥ ಮಾಡಿಕೊಳ್ಳಲಾಗದಂಥ ಧ್ವಂಸಕ್ಕೊಳಗಾದಂತೆ ತೋರುತ್ತಿದೆ. ಅದೇ ಜರ್ಮನಿಯಲ್ಲಿ ಹಾಗಾದಂತೆ ತೋರುತ್ತಿಲ್ಲ. ಅಲ್ಲಿ ಬಹಳ ಮಂದಿಗೆ ಸೋಂಕು ತಗುಲಿದೆ, ಆದರೆ ಸತ್ತವರ ಸಂಖ್ಯೆ ಬಹಳ ಕಡಿಮೆ. ಆ ಪ್ರದೇಶದಲ್ಲಿರುವ ಇತರ ರಾಷ್ಟ್ರಗಳಿಗಿಂತ ಜರ್ಮನಿಯ ಆರೋಗ್ಯ ವ್ಯವಸ್ಥೆ ( ಈಗ ಸಾಕಷ್ಟು ಒತ್ತಡದಲ್ಲಿದೆ) ಹೆಚ್ಚು ಸುಧೃಢವಾಗಿದೆ. ಇಟಲಿ ಮತ್ತು ಜರ್ಮನಿಯಲ್ಲಿರುವ ವ್ಯತ್ಯಾಸ ಬರೇ ಜರ್ಮನಿಯ ಸಮಾಜಕಲ್ಯಾಣ ರಾಷ್ಟ್ರವಾಗಿರುವ ಸ್ಥಿತಿಗೆ ಮಾತ್ರವೇ ಮೀಸಲೋ ಅಥವಾ ಜರ್ಮನಿಯು ಯೂರೋಪಿನಲ್ಲಿರುವ ಮುಂಚೂಣಿಯ ಸ್ಥಾನದಿಂದಲೂ ಆ ವ್ಯತ್ಯಾಸವಾಗಿದೆಯೋ? ಖಂಡಿತಾ ಇದು ಒಂದು ಕಾರಣಕ್ಕೆ ಮೀಸಲಲ್ಲ. ರಾಜಕೀಯ ನಿರ್ಣಯಗಳ ಬಗ್ಗೆಯೂ ಕೂಡ ಇದು ಬೆರಳು ತೋರಿಸುತ್ತದೆ. ನಿಜವಾಗಿಯೂ ಪ್ರಜಾಪ್ರಭುತ್ವ ಹಾಗೆಯೇ ಕೆಲಸ ಮಾಡುವುದು.

ಇದೇ ಮಾತನ್ನು ನಾವು ಪ್ರಾನ್ಸ್ ಗೂ ಸಹ ಅನ್ವಯಿಸಬಹುದು. ಅದು ಇನ್ನೂ ತನ್ನ, ಕಲ್ಯಾಣ ರಾಜ್ಯ ( welfare state )  ಸಿದ್ಧಾಂತಗಳಿಂದ ರಚಿಸಲ್ಪಟ್ಟ ಆರೋಗ್ಯ ವ್ಯವಸ್ಥೆಯ ಉಳಿಸಿಕೊಂಡಿದೆ ಆದರೆ ಆ ರಾಷ್ಟ್ರವೂ ಬಿಕ್ಕಟ್ಟನ್ನು ಎದುರಿಸುತ್ತಿದೆ ; ಅಲ್ಲಿ ಸುಮಾರು 700 ಜನ ಮಡಿದಿದ್ದಾರೆ. 20,000 ಮಂದಿಗೆ ಸೋಂಕು ತಗುಲಿದೆ. ಇದೆಲ್ಲವೂ ಸಮಾಜ ಕಲ್ಯಾಣದ ದುರ್ಬಲತೆಯೇ? ಖಂಡಿತವಾಗಿ ಅಲ್ಲ. ( ಮಾಕ್ರೋನ್ ಕಲ್ಯಾಣ ಯೋಜನೆಗಳನ್ನು ಸಮರ್ಥಿಸುತ್ತಾನೆ ಆದರೆ ಬಿಕ್ಕಟ್ಟನ್ನು ಎದುರಿಸುವಾಗ ಅವನು ಬಹಳಷ್ಟು ಪ್ರಶ್ನೆಗಳನ್ನೂ ಎದುರಿಸಬೇಕಾಗುತ್ತದೆ.) ಇವೆಲ್ಲಾ ರಾಜಕೀಯ ನಿರ್ಧಾರಗಳೂ ಹೌದು. ಈ ಸೋಂಕು ತೀವ್ರವಾಗಿದ್ದಾಗ್ಯೂ ಮಾಕ್ರೋನ್ ಮುನಿಸಿಪಾಲಿಟಿಯ ಮೊದಲ ಸುತ್ತಿನ ಚುನಾವಣೆಗಳನ್ನು ಮುಂದೂಡಲಿಲ್ಲ. ( ಆ ಚುನಾವಣೆಯಲ್ಲಿ ಹಿಂದೆಂದೂ ಇರದಿದ್ದಷ್ಟು ಸಂಖ್ಯೆಯಲ್ಲಿ ಜನ ಮತಚಲಾಯಿಸುವುದನ್ನು ವರ್ಜಿಸಿದ್ದುದು ಕೂಡ ಸಮಂಜಸವೇ ಆಗಿದೆ).

ನಿರ್ಧಾರಗಳಲ್ಲಿ ವ್ಯತ್ಯಾಸಗಳಿದ್ದರೂ ಸಹ ಇದಂತೂ ಅದರಷ್ಟೇ ನಿಜ; ಈಗಾಗಲೇ ಬಹಳವಾಗಿ ಚರ್ಚೆಯಲ್ಲಿದ್ದ ಸಮಾಜ ಕಲ್ಯಾಣ ಸಿದ್ಧಾಂತದ ರಾಷ್ಟ್ರಗಳ ಬಿಕ್ಕಟ್ಟು ಈಗ ಇನ್ನಷ್ಟು ಹೆಚ್ಚು ಸ್ಪಷ್ಟವಾಯಿತು. ಹಾಗೂ ಅದು ಬರೀ ಕರೋನಾ ವೈರಾಣುವಿನಿಂದ ಮಾತ್ರಾ ಅಲ್ಲ. ಈಗಾಗಲೇ ಆರೋಗ್ಯ ಕಲ್ಯಾಣ ವ್ಯವಸ್ಥೆಯಲ್ಲಿ ಸಮಸ್ಯೆಗಳಿದ್ದವು. ಕ್ವಾರೆಂಟಿನಿನ, ” ರೋಗ-ದಿಗ್ಬಂಧನ”ದ (ರೋಗಿಗಳನ್ನು ಅಥವಾ ರೋಗವಿರಬಹುದು ಎಂಬ ಸಂಶಯವಿರುವ ವ್ಯಕ್ತಿಯನ್ನು ಪ್ರತ್ಯೇಕಿಸಿ ದಿಗ್ಬಂಧನದಲ್ಲಿಡುವುದು) ಕಾರ್ಯನೀತಿಗಳಲ್ಲಿಯೂ ಸಮಸ್ಯೆಗಳಿದ್ದವು. ಅಂದರೆ, ಯಾವುದೇ ಆದಾಯ ಇಲ್ಲದ ಜನರೂ, ಮತ್ತು ಒಂದು ತಿಂಗಳಿಗೆ ಸ್ವಲ್ಪವೇ ಹಣವನ್ನು ಕಲ್ಯಾಣಯೋಜನೆಗಳಿಂದ ಪಡೆಯುವವರೂ, ಇವರೆಲ್ಲರೂ ಕೂಡ ಬೇರೆ ಸಂಪನ್ಮೂಲಗಳಿರುವ ಜನರ ಹಾಗೆಯೇ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕಾಗಿ ಬಂತು. ಇದು ಅಂಚಿನಲ್ಲಿರುವ ದೇಶಗಳಲ್ಲಿ ಮತ್ತು ಯೂರೋಪಿನ ಅತ್ಯಂತ ಬಡ ದೇಶಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಡೆನ್‍ಮಾರ್ಕ್ ಮತ್ತು ನಾರ್ವೇ ಅಂಥಹ ದೇಶಗಳು ಈ ಸೋಂಕನ್ನು ಚೆನ್ನಾಗಿ ಎದುರಿಸಿದವು. ಏಕೆಂದರೆ ಅವು ವೇಗವಾಗಿ, ಬುದ್ಧಿವಂತಿಕೆಯಿಂದ ಮತ್ತು ರಾಜಕೀಯ ಚಾಕುಚಕ್ಯತೆಯಿಂದ ತಮ್ಮ ತಮ್ಮ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಂಡಿದ್ದಷ್ಟೇ ಅಲ್ಲ, ಅವುಗಳ ಜೊತೆಗೆ ಆ ದೇಶಗಳಲ್ಲಿ ಇನ್ನೂ ಬಲವಾದ ಸಮಾಜಕಲ್ಯಾಣ ಸಂಸ್ಥೆಗಳು ಇರುವುದೂ ಒಂದು ದೊಡ್ಡ ಕಾರಣ. ವಿಭಿನ್ನ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡಿದ್ದರೂ ಸಹ ಈ ದೇಶಗಳು ಪರಿಣಾಮ ಬೀರುವಂಥ ಕೆಲಸ ಮಾಡಿವೆ. ಹಾಗಿದ್ದೂ ಆ ದೇಶಗಳೆಲ್ಲವೂ ಗಂಭೀರವಾದ ತೊಂದರೆಗಳನ್ನು ಅನುಭವಿಸುತ್ತಿವೆ. ಅವುಗಳಲ್ಲಿ ಕೆಲವು ರಾಷ್ಟ್ರೀಯತೆಯ ಆಕರ್ಷಣೆಗೆ ಒಳಗಾಗುತ್ತಲೂ ಇವೆ.

ನಿಜ ಹೇಳಬೇಕೆಂದರೆ ಸರ್ವಾಧಿಕಾರೀ ಮಾದರಿಗಳಿಗೆ ಹೋಲಿಸಿದರೆ ಪ್ರಜಾಪ್ರಭುತ್ವ ನಿಧಾನವಾಗಿರುವುದೇ ಅಲ್ಲದೆ ಕೆಲವು ಬಾರಿ ಅವುಗಳಿಗಿಂತ ಹೆಚ್ಚು ಅಸಮರ್ಥ ವಾಗಿರುವ ಸಾಧ್ಯತೆಗಳಿವೆ. ಆದರೂ ನಾವು ಆ ಸಾಧ್ಯತೆಯ ಆ ಬೆಲೆಯನ್ನು ತೆತ್ತಲೇ ಬೇಕು. ಬಹುಷಃ ನಾವು ಆ ಸಾಮರ್ಥ್ಯದ, ಆ ಕಾರ್ಯವೇಗದ ಮತ್ತು ಒಂದು ಪ್ರಜಾಪ್ರಭುತ್ವವನ್ನು ಕಾಯ್ದುಕೊಂಡೇ ಆ ವಿಷಯಗಳನ್ನು ಉದ್ದೇಶಿಸ ಬಲ್ಲ ದಕ್ಷತೆಯ ಬಗ್ಗೆಯೇ ಮರುಚಿಂತನೆ ಮಾಡಬೇಕು.

ಒಂದು ಹೊಸ ರಾಜಕೀಯ ಪರಿಕಲ್ಪನೆ.

ಆಡಮ್ ರಸ್ಮಿ ಎಂಬಾ ಕ್ವಾಟ್ರ್ಜ್ ಮತ್ತು ಫೈನಾನ್ಸಿಯಲ್ ಟೈಂಸ್‍ನ್ ಪತ್ರಿಕೆಗಳ ಪತ್ರಕರ್ತ ಹೀಗೆ ಹೇಳುತ್ತನೆ. “ಹಾಲಿಯ ಕರೋನಾ ಸೋಕಿನಂಥ ಬೃಹತ್ತಾದ ಏಳುಬೀಳುಗಳು ಸಾಮಾನ್ಯವಾಗಿ ಅಸಮಾನತೆಯನ್ನು ಕಡಿಮೆ ಮಾಡುತ್ತವೆ. ಅದಕ್ಕೆ ಮೊದಲನೆಯ ಮತ್ತು ಅತಿ ಮುಖ್ಯವಾದ ಕಾರಣ ಏನೆಂದರೆ, ಅಂಥಹ ಸಮಸ್ಯೆಗಳು ಎಲ್ಲಾರನ್ನೂ ಆರ್ಥಿಕ ಮುಗ್ಗಟ್ಟಿಗೆ ನೂಕುತ್ತವೆ. ಸಿರಿವಂತರ ಬಳಿ ಕಳೆದುಕೊಳ್ಳಲು ಹೆಚ್ಚು ಹಣವೂ ಇರುತ್ತದೆ. ಹೀಗೆ ನಶಿಸುತ್ತಿರುವ ಅವರ ಸಂಪತ್ತು, ಅವರನ್ನು, ಇತರರೆಲ್ಲರೂ ಅನುಭವಿಸುತ್ತಿರುವ ಸಂಕಟಕ್ಕೆ ತುಲನಾತ್ಮಕವಾಗಿ ಹತ್ತಿರ ಕರೆದುತರುತ್ತದೆ”. ಇವನು ದೃಷ್ಟಿಕೋನ, ಸರ್ಬಿಯನ್-ಅಮೆರಿಕನ್ ಅರ್ಥಶಾಸ್ತ್ರಜ್ಞನಾದ ಬ್ರಾಂಕೋ ಮಿಲಾನೋವಿಚ್‍ನ ಅಭಿಪ್ರಾಯದಂತೆಯೇ ಈ ಕಾಲದ ಗುಣಲಕ್ಷಣಗಳಿಗೆ ತಕ್ಕುದಾಗಿದೆ : ಎಲ್ಲರಿಗಿಂತಾ ಹೆಚ್ಚು ಲಾಭವನ್ನು ಯಾರು ಪಡೆಯುತ್ತಾರೋ ಅಂಥಹವರ ಮನೆ ಬಾಗಿಲನ್ನು ಒಂದು ಅನಿರೀಕ್ಷಿತ ಘಟನೆಯು ಬಂದು ತಟ್ಟುವಾಗ, ಅಸಮಾನತೆಯು ಹೆಚ್ಚು ಹೆಚ್ಚು ಗೋಚರವಾಗುತ್ತದೆ.

ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ವಾಲ್ಟರ್ ಶೀಡೆಲ್‍ರವರ ಅಭಿಪ್ರಾಯವನ್ನು ರಸ್ಮಿ ಮರುಪರಿಶೀಲಿಸುತ್ತಾರೆ. ಶೀಡೆಲ್ ಅವರ ಪುಸ್ತಕ  “The Great Leveler: Violence and the History of Inequality from the Stone Age to the Twenty-First Century” ಈ ಪುಸ್ತಕದಲ್ಲಿ ಅವರು ಬಹು ಕ್ರೂರವಾದ ರೀತಿಯಲ್ಲಿ ಸಮಾನತೆಯನ್ನು ತರುವ ನಾಲ್ಕು ವಿದ್ಯಮಾನಗಳನ್ನು ಹೆಸರಿಸಿದ : ಸೋಂಕುರೋಗಗಳು, ಕ್ರಾಂತಿ, ಮಹಾಯುದ್ಧಗಳು ಮತ್ತು ರಾಷ್ಟ್ರಾಡಳಿತಗಳ ಸಂಪೂರ್ಣ ಕುಸಿತ. ಶೀಡೆಲ್ಲನ ಪ್ರಕಾರ ಯಾವಾಗಲೂ ಸಮಾನತೆಯನ್ನು ತರುವುದು ಮಹಾ ದುರಂತಗಳೇ.

ಈಗ ಜಗತ್ತು ಅಂತಹ ಒಂದು ದುರಂತವನ್ನು ಎದುರಿಸುತ್ತಿದೆ. ಕರೋನಾ ವೈರಾನು ಎಲ್ಲೆಲ್ಲಿಗೆ ಹೋಗುತ್ತದೋ ಅಲ್ಲೆಲ್ಲಾ ಅದು ಜನರ ಪ್ರಾಣ ತೆಗೆಯುತ್ತದೆ. ಅದು ಎಲ್ಲರನ್ನೂ ತಲುಪುತ್ತದೆ. ಮಿಲ್ಲಿಯಗಟ್ಟಳೆ ಜನರು ಭೀತಿಯಿಂದ ತತ್ತರಿಸುತ್ತಿದ್ದಾರೆ. ಭವಿಶ್ಯದ ಜಗತ್ತು ನಡೆಯುವ ಕ್ರಮವೇ ಈಗ ಮತ್ತೆ ಒಂದು ಪ್ರಶ್ನಾರ್ಥಕ ಚಿನ್ಹೆಯಾಗಿ ಮುಂದೆ ಕೂತಿದೆ. ವ್ಯವಸ್ಥಿತ ಇತಿಹಾಸದ ಮತ್ತೊಂದು ಮಹಾ ಬಿಕ್ಕಟ್ಟಿನ ಸಂಧಿಕಾಲದ ಸ್ಥಿತಿಯಲ್ಲಿ ಈಗ ನಾವಿದ್ದೇವೆಂದು ಹಲವರು ಅಭಿಪ್ರಾಯ ಪಡುತ್ತಾರೆ. ಮತ್ತೆ ಕೆಲವರ ಅಭಿಪ್ರಾಯದಲ್ಲಿ ಇದೇ ನಿಜವಾದ 21ನೇ ಶತಮಾನದ ಆರಂಭ ಮತ್ತು ಸಧ್ಯದಲ್ಲೇ ನಾವು ನಮ್ಮ ಎಲ್ಲಾ ಆಲೋಚನೆಗಳನ್ನೂ ಮರುಜೋಡಣೆ ಮಾಡಲೇ ಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. ಮತ್ತೆ ಕೆಲವರು ಎರಡನೇ ಮಹಾಯುದ್ಧದ ನಂತರ ಸ್ಥಿತಿಗೆ ಹೋಲಿಸಬಲ್ಲಂತ ಸ್ಥಿತಿಗೆ ನಾವು ತಲುಪಲಿದ್ದೇವೆ ಎಂಬುದು ಮತ್ತೆ ಕೆಲವರ ಊಹೆ. ಅಂದರೆ ರಾಷ್ಟ್ರಾಡಳಿತಕ್ಕೆ ಮುಖ್ಯಪಾತ್ರದ ಜವಾಬ್ದಾರಿಯನ್ನು ವಹಿಸಿಕೊಡುವುದಕ್ಕೆ ನೀಡುವ ಒಪ್ಪಿಗೆಯನ್ನು ನಾವು ಮರಳಿ ಪಡೆಯುತ್ತೇವೆ. ಆದರೆ ಈಗಿನ ಸಮಸ್ಯೆಗಳು ಮತ್ತು ಸಂದರ್ಭಗಳು ಹಿಂದೆ ಕಳೆದುಹೋದ ಕಾಲದ ಸಮಸ್ಯೆ ಮತ್ತು ಸಂದರ್ಭಗಳಿಗಿಂತಾ ಬಹಳ ವಿಭಿನ್ನವಾಗಿರುತ್ತವೆ.

ಈ ಅಲ್ಲೋಲಕಲ್ಲೋಲದ ಗಡಿಬಿಡಿಯ ನಡುವೆ ಕೆಲವರು ಹಾಗೆ ಯೋಚಿಸಿರಬಹುದು. ಪ್ರಾಯಶಃ ಅದು ಸರಿಯೂ ಆಗಿರಬಹುದು. ಆದರೆ ಈ ಹೊಸ ಕ್ರಮದ ಒಪ್ಪಂದದ ಸಾಮಾಜಿಕ, ಜನಾಂಗೀಯ ಮತ್ತು ಕಾರ್ಯಸೂಚೀಯ ಆಧಾರವೇನು? ನಾವು ಈ ಹೊಸಕ್ರಮದಿಂದ ಏನನ್ನು ನೀರೀಕ್ಷಿಸಬೇಕು? ಏನನ್ನು ಉದ್ದೇಶಿಸಬೇಕು?

ಈ ಬಿಕ್ಕಟ್ಟಿನ ಫಲಿತಾಂಶಕ್ಕಾಗಿ ಬರಿದೇ ಕಾಯುವುದಷ್ಟೇ ಸಾಕಾಗುವುದಿಲ್ಲ. ಹೆಚ್ಚೂಕಡಿಮೆ ಒಂದು ಸಾಮಾನ್ಯ ಮಟ್ಟದಲ್ಲಿ ನೋಡಿದರೆ ತೀವ್ರವಾದ ಮಾರುಕಟ್ಟೆಯ ಮೂಲಭೂತವಾದಿಗಳು ಕಳೆದುಹೋಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಜನರು ಒಂದು ಸಕ್ರಿಯವಾದ ರಾಷ್ಟ್ರಾಡಳಿತವನ್ನು ಆಶಿಸುತ್ತಿದ್ದಾರೆ. ಆದರೆ ಅದೇ ಅದೇ ಆಡಲಿತದ ನಿಯಂತ್ರಣವನ್ನು, ಅದರ ಅಗತ್ಯವಾದ ಪಾತ್ರಗಳಲ್ಲಿ ಕೂಡಾ, ಚಿಂದಿಮಾಡಲು ಇಡೆ ಜನರು ತೀವ್ರವಾಗಿಸಹಕರಿಸಿದ್ದರು.

ಆದರೆ ಒಂದು ದಮನಕಾರಿ ಆಡಳಿತವು ಇದಕ್ಕೆ ಬದಲಾದ ಉತ್ತರವಾಗಬಾರದು ಎಂಬುದೂ ಇಷ್ಟೇ ಸ್ಪಷ್ತವಾಗಿದೆ. ಇದು ಸಮುದಾಯವನ್ನು ಮರಳಿ ಕಟ್ಟ್ಬೇಕಾದ ಸಂಗತಿಯಲ್ಲವೇ? ಆ ಮರುಕಟ್ಟಲ್ಪಟ್ಟ ಸಮುದಾಯದಲ್ಲಿ ರಾಷ್ಟ್ರಾಡಳಿತ ಕೇಂದ್ರ ಸ್ಥಾನವನ್ನು ಅಲಂಕರಿಸುವುದೇನೋ ನಿಜ; ಆದರೆ ಆ ಸ್ಥಾನ ಹಿಂದೆ ಇದ್ದ ಸ್ಥಾನವಲ್ಲ ಮತ್ತು ಮುಂದೆ ಅದು ಅಲಂಕರಿಸುವ ಸ್ಥಾನವಂತೂ ಅಲ್ಲವೇ ಅಲ್ಲ.

ಈಗಿನ ರಾಷ್ಟ್ರಾಡಳಿತ ಟೋನೀ ಜುಡ್ತ್ ತನ್ನ ಪುಸ್ತಕ ,”Reappraisals: Reflections on the Forgotten Twentieth Century”, “an intermediary institution” ಯಲ್ಲಿ ಉಲ್ಲೇಖಿಸಿದಂತೆ ಇದೆ. ಒಂದು ಸಕ್ರಿಯವಾದ ರಾಷ್ಟ್ರಾಡಳಿತ, ಇಂದು ಮಾನವ ಪ್ರಯತ್ನಗಳ ಮಿತಿಯನ್ನು ಪ್ರತಿನಿಧಿಸುತ್ತದೆ. ಇದು, ಜನರ, ಈ ಸಧ್ಯದ ಭೂತಕಾಲದಲ್ಲಿನ ಅತಿಗರ್ವದ ಪ್ರಜಾ(ರಾಮ)ರಾಜ್ಯದ ಅಭಿಲಾಷೆಗಳಿಗೆ ತದ್ವಿರುದ್ಧವಾಗಿದೆ. ನಮಗೆ ಬೇಕಾದುದೆಲ್ಲವನ್ನೂ ನಾವು ಸಾಧಿಸಿ ಪಡೆದುಕೊಳ್ಳಲು ಸಾಧ್ಯವಾಗದುದರಿಂದ, ಸಾಧ್ಯವಾಗುವ ವಿಷಯಗಳಲ್ಲಿ ನಮಗೆ ಅತ್ಯಂತ ಮುಖ್ಯವಾದವುಗಳನ್ನೂ ಮತ್ತು ನಮಗೆ ಹೆಚ್ಚಾಗಿ ಬೇಕಾದವುಗಳನ್ನೂ ನಾವು ಆರಿಸಿಕೊಳ್ಳಬೇಕು.

“ವಿವಿಧ ಸಾಧ್ಯತೆಗಳು ಹೊರಹೊಮ್ಮುವುದನ್ನು ಮಾರುಕಟ್ಟೆಯ ಬಲಗಳು ನಿರ್ಧರಿಸುವುದು, ಸಿದ್ಧಾಂತಗಳ ಮಟ್ಟದಲ್ಲಿ ಏನಾದರೂ ನಡೆಯುತ್ತದೆ ಎಂದು ನಂಬಿಕೊಳ್ಳುವುದು, ಮಾರುಕಟ್ಟೆಗಳ ಆದರ್ಶೀಕರಣ ಇವೆಲ್ಲವೂ ಇತ್ತೀಚಿನ ಅಥವಾ ಬಹುಶಃ ಕಟ್ಟಕಡೆಯದಾದ ಆಧುನಿಕತೆಯ ಭ್ರಮೆ. ಯಾವಯಾವ ಸರಕುಗಳು ಸ್ಥಾನಿಕವೆಂದೂ ಮತ್ತು ಅವುಗಳನ್ನು ಸಂಪತ್ತಿನಲ್ಲಿ ಮಾತ್ರವೇ ಪಡೆಯಬಹುದೆಂದೂ, ಯಾವಯಾವ ಸರಕುಗಳು ಮೂಲಭೂತವಾಗಿ ಅತ್ಯಗತ್ಯವಾದವುಗಳೆಂದೂ ಹಾಗೂ ಈ ಜೀವನಾಧಾರದ ತಳಮಟ್ಟದ ಸರಕುಗಳನ್ನು ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲೂ ಒದಗಿಸಿಕೊಡಲೇ ಬೇಕೆಂದೂ ಎಲ್ಲಾರೂ ಭಾಗಿಗಳಾಗಿರುವ ಒಮ್ಮತದ ನಿರ್ಧಾರವನ್ನು ರಾಷ್ಟ್ರಾಡಳಿತವೇ ಪ್ರತಿನಿಧಿಸಬಲ್ಲದು ಎಂಬುದೂ ಈ ಭ್ರಮೆಯ ಅಂಗ.”

ಕರೋನಾ ವೈರಾಣುವಿನಿಂದ ಒಂದು ಹೊಸ ಸಾಮಾಜಿಕ ಒಡಂಬಡಿಕೆಯೇನೂ ಬಂದೇಬರುತ್ತದೆ ಎಂದಲ್ಲ. ಆದರೆ ಇದರಿಂದ ಪ್ರಗತಿಪರರು ತಮ್ಮದಲ್ಲದ ರಾಷ್ಟ್ರಾಡಳಿತ ಪ್ರಬಲಗೊಳ್ಳುವುದನ್ನು ಚಪ್ಪಾಳೆ ತಟ್ಟಿ ಸಂಭ್ರಮಿಸುವ ಅಗತ್ಯವೇನೂ ಇಲ್ಲ. ಬದಲಾಗಿ ಕರೋನಾ ವೈರಾಣುವಿಂದ ಸಾಂಪ್ರದಾಯಿಕ ಸಾಮುದಾಯಿಕ ಎಡವನ್ನು ಮರಳಿ ಪಡೆಯುವ ಒಂದು ಅವಕಾಶದ ಕಿಂಡಿ ಲಭ್ಯವಾಗಬೇಕು. ಈ ಸಾಮುದಾಯಿಕ ಎಡವು ಒಂದು ಪ್ರಬಲ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಗ್ಗೆ ಯೋಚಿಸುತ್ತದೆ, ಒಂದು ಸುಧೃಢ ನಾಗರಿಕ ಸಮಾಜವನ್ನು ಬೆಳೆಸುತ್ತದೆ, ಒಂದು ಸಕ್ರಿಯವಾದ, ಸಾಮಾಜಿಕ ಒಪ್ಪಂದಗಳನ್ನು ರಕ್ಷಿಸುವ ರಾಷ್ಟ್ರಾಡಳಿತವನ್ನು ಆಶಿಸುತ್ತದೆ ಹಾಗೂ ಪ್ರಜಾಪ್ರಭುತ್ವದ ಸಿದ್ಧಾಂತಗಳಡಿಯಲ್ಲಿರುವ ರಕ್ಷಣಾಪಡೆಯನ್ನು ಪೋಷಿಸುತ್ತದೆ. ರಶ್ಯಾ ಅಥವಾ ಚೀನಾಗಳನ್ನು ಹೊಗಳಿಹಾಡುವುದೋ, ಅಥವಾ ರಾಷ್ಟ್ರಾಡಳಿತಕ್ಕೂ ವಿಜ್ಞಾನಕ್ಕೂ(ತಂತ್ರಜ್ಞಾನಕ್ಕೂ) ಒಂದು ವಿಶ್ಲೇಷಣಾರಹಿತ ಕೊಂಡಿಯನ್ನು ನಂಟುಹಾಕುವುದೋ ಮಾಡಿದರೆ ಅದರಿಂದ ನಮಗೇನೂ ಉಪಯೋಗವಾಗುವುದಿಲ್ಲ. ಈ ರೀತಿಯ ಕೊಂಡಿಯ ಗಂಟು, ನಾವು ಸದಾ ಟೀಕೆ ಮಾಡುವ, ಸಾಂಸ್ಥಿಕ ಧರ್ಮಗಳನ್ನು ರಾಷ್ಟ್ರಾಡಳಿತಕ್ಕೆ ಗಂಟು ಹಾಕಿದ ಹಾಗೆಯೇ ಆಗುತ್ತದೆ ಆದುದರಿಂದ ನಿರುಪಯೋಗಿಯಾಗುತ್ತದೆ. ಈಗ ಹಾಲಿಯಲ್ಲಿ ಅಷ್ಟೇನೂ ಉತ್ತಮವಾದ ಸ್ಥಿತಿಯಲ್ಲಿ ಮುಂದುವರೆಯುತ್ತಿಲ್ಲವಾದರೂ , ಈ ಪ್ರಜಾಪ್ರಭುತ್ವಕ-ಸಾಮಾಜಿಕ ಪರಂಪರೆಯನ್ನು ನಮಗೆ ಲಭ್ಯವಿರುವ ಒಂದು ಅತ್ಯುತ್ತಮ ಆಯ್ಕೆಯೆಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸಾರ್ವಜನಿಕ ಸೇವೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ( ಜನತೆಯನ್ನು ನಿಯಂತ್ರಿಸಲಾಗಲೀ, ಅವರ ಮೇಲೆ ನಿರ್ಬಂಧಿಸಲು ಕಣ್ಣಿಡಲಾಗಲೀ , ಅಥವಾ ಸಾಮಾಜಿಕ ಪ್ರಯೋಗಗಳನ್ನು ನಡೇಸಲಾಗಲೀ ಅಲ್ಲವೇ ಅಲ್ಲ), ಅತಿ ದುರ್ಬಲರಿಗೆ ನೈತಿಕ ಮೌಲ್ಯಗಳನ್ನು ಕೊಡುವ ಸಾಮಾಜಿಕ ಸಮಾಚಾರದಂತೆ ಧರ್ಮ, ( ಆದರೆ ಧರ್ಮ ವ್ಯಕ್ತಿಗಳ ಜೀವನವನ್ನು ನಿಯಂತ್ರಿಸಲು ಅಲ್ಲ. ಧರ್ಮವು ರಾಷ್ಟ್ರಾಡಳಿತದಲ್ಲಿ ಕೈಯ್ಯಾಡಿಸಲು ಶುರು ಮಾಡಿದರೆ ಖಂಡಿತಾ ಹಾಗಾಗುತ್ತದೆ) ಇರಬೇಕು, ಹಳೆಯ ಪ್ರಜಾಪ್ರಭುತ್ವಿಕ ಸಮಾಜವಾದದ ಪ್ರತಿಪಾದಕರು ವಿಜ್ಞಾನವು ರೋಗಗಳನ್ನು ದೂರಮಾಡುತ್ತದೆ ಎಂದು ನಂಬಿದ್ದರು. ಅಲ್ಲದೆ ಅವರು, ಒಂದು ಜಾತ್ಯಾತೀತ ಸಾಮಾಜಿಕ ಪಂಗಡದಲ್ಲಿ ಧರ್ಮಗಳ ದಯಾಪೂರ್ಣ ಭಾಗವನ್ನು ಮಿಳಿತಗೊಳಿಸಿಕೊಳ್ಳಬಹುದೆಂದೂ ನಂಬಿದ್ದರು. ಹಾಗೂ ರಾಷ್ಟ್ರಾಡಳಿತ ಮೂಲಭೂತ ಒಪ್ಪಂದಗಳನ್ನು ಎತ್ತಿಹಿಡಿಯುವ ಭರವಸೆ ಕೊಡಬೇಕೆಂದೂ ಹಾಗೂ ಎಂದಿಗೂ ಜನತೆಯನ್ನು ತುಳಿಯಬಾರದೆಂದೂ ಅವರು ನಂಬಿದ್ದರು.

ಹಾಗೆಂದರೆ, ಒಂದು ವೇಳೆ ಕರೋನಾ ವೈರಾಣು ಮತ್ತು ಅದರಿಂದ ಹೊರಡುವ ರಾಷ್ಟ್ರಾಡಳಿತಗಳ ಪ್ರತಿಕ್ರಿಯೆಗಳು ತಂತಾನೇ ಒಂದು ನವ ಸಾಮಾಜಿಕ ಒಡಂಬಡಿಕೆಯನ್ನು ಹುಟ್ಟುಹಾಕದಿದ್ದರೆ, ರಾಷ್ಟ್ರಗಳ ಕ್ರಮವನ್ನು ಕರೋನಾ ಸೋಂಕು ಮರುಸ್ಥಾಪಿತಗೊಳಿಸುತ್ತದೆ ಎಂಬ ಸರಳೀಕರಿಸಿದ ವಿವರಣೆಯಾಗಲೀ, ಅಥವಾ ಒಂದು ಆಶಾಭಾವದ ಪ್ರಗತಿಪರ ದೃಷ್ಟಿಕೋನದ ಪ್ರಕಾರ, ಆ ಹೊಸ ಕ್ರಮ ಹಿಂದಿದ್ದ ಸಮಾಜಕಲ್ಯಾಣ ಸಿದ್ಧಾಂತದ ರಾಷ್ಟ್ರಾಡಳಿತದ್ದೇ ಒಂದು ಹೊಸ ಅವತರಣಿಕೆಯಾಗಿರುತ್ತದೆ ಎಂಬುದಾಗಲೀ ಅವಸರದ ಅರ್ಥೈಸುವಿಕೆಗಳಾಗುತ್ತವೆ. ಅದೇ ಅವಸರದಲ್ಲಿ ಈ ವಿವರಣೆಯು ಎಡಪಂಥವು ಅದಕ್ಕಾಗಿ ಮಾಡಲೇಬೇಕಾಗಿರುವ ಕಾರ್ಯಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಂದರೆ, ‘ಎಡ’ವು ಅದಕ್ಕಾಗಿ ಬೇಕಾಗುವ ಸ್ಥಿತಿಯನ್ನು ಕಟ್ಟಿ ಪೋಷಿಸಬೇಕಾಗುತ್ತದೆ. ಅಲ್ಲದೆ ಕಾಳನ್ನು ಜೊಳ್ಳಿನಿಂದ ಬೇರ್ಪಡಿಸಿ ರಾಷ್ಟ್ರವನ್ನು ಒಂದು ಪೋಲೀಸ್ ರಾಷ್ಟ್ರ, ಅಂದರೆ ನಿಯಂತ್ರಣಗಳಿಂದ ತುಂಬಿದ ದೇಶವನ್ನಾಗಿ ಮಾಡದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದರೆ ಈ ಸೋಂಕಿನ ಉಪಸ್ಥಿತಿಯಲ್ಲಿ ಒಂದು ಸಾಮಾಜಿಕ ರಾಷ್ಟ್ರವನ್ನು ಕಟ್ಟುವುದು ಮತ್ತು ತನ್ನ ಕಾರ್ಯಾಚರಣೆಯಲ್ಲಿ ಕೆಲವು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲಾಗದ ಕೆಲವು ಆಯಾಮಗಳಾದ ಆರೋಗ್ಯ ಮತ್ತು ಜೀವಗಳನ್ನು ಮರುಗಳಿಸುವುದು. ಇವು ಅದರ ಬದಲಾಯಿಸಲಾರದ ಪಾತ್ರವಾಗಬೇಕು.

ಪ್ರಾಯಶಃ ಸಾಮಾಜಿಕ ಪ್ರಜಾಪ್ರಭುತ್ವದ ಮೇಲಿನ ಅವನ ಅತಿ ಉತ್ತಮ ಪ್ರಬಂಧವಾದ “Ill fares the land’ ನಲ್ಲಿ ಜುಡ್ತ್ ಇದೇ ವಿಷಯವನ್ನು ಮುಂದಿಡುತ್ತಾನೆ. ಒಂದು ಎಡಪಂಥೀಯ ಸಿದ್ಧಾಂತವನ್ನು ಅಭಿವೃದ್ಧಿಪಡಿಸಬೇಕು.ಏಕೆಂದರೆ, ಅದು ನೈತಿಕವಾಗಿ ಕಡ್ಡಾಯವಾಗಿ ಆಗಲೇಬೇಕಾದ ಸಂಗತಿಯಷ್ಟೇ ಅಲ್ಲ, ಅದರ ಮುಖ್ಯ ಕಾರಣ ಭೀತಿ. ಸರ್ವಾಧಿಕಾರಿಗಳು ಯಾವಾಗಲೂ ಅದನ್ನು ಪಾಲಿಸಿದ್ದಾರೆ. ಆದರೆ ಮುಂಬರುವ ದುರಂತಗಳು ಹಾಗೂ ಮೃತ್ಯುವಿನ ಭೀತಿ ಅತ್ಯುತ್ತಮ ಪ್ರಜಾಪ್ರಭುತ್ವಿಕ ಸಾಮಾಜಿಕ ವ್ಯವಸ್ಥೆಗಳಿಗೆ ದಾರಿ ಮಾಡಿಕೊಟ್ಟಿದೆ. “ಎಡ” ಇವುಗಳ ಬಗ್ಗೆ ಈಗ ಚಿಂತೆ ಮಾಡಬೇಕಲ್ಲವೇ? ಭಯವನ್ನು ಎದುರಿಸುವ ಮಾರ್ಗವೆಂದರೆ ಒಂದು ವಿಶಾಲವಾದ ಅರ್ಥದ ಭದ್ರತೆ.( ಸಾಮಾಜಿಕ ಭದ್ರತೆ, ಸಾರ್ವಜನಿಕ ಸಂರಕ್ಷಣೆ, ಸಮುದಾಯದ ಸಾಮಾಜಿಕ ನಂಟುಗಳು,ಪೋಷಿಸುವ ರಾಷ್ಟ್ರಾಡಳಿತ, ಖಾತ್ರಿಯಾದ ಪೌರತ್ವ). ಆದರೆ ಎಲ್ಲಾ ಸಮಾಜವಾದಿಗಳೂ ತಿಳಿದಿರುವಂತೆ ಭಯ ಬರಿಯ ಸರಳ ವಾಹಕವೊಂದೇ ಆಗಬಾರದು. ಅಂದರೆ ಹಕ್ಕುಗಳನ್ನು ಕಳೆದುಕೊಂಡುಬಿಡುವ ಭಯ ಅಥವಾ ಸಾಮಾಜಿಕ ದುರಂತಗಳು ತಮ್ಮಷ್ಟಕ್ಕೆ ತಾವೇ ಏನನ್ನೂ ಕಟ್ಟಲಾರವು. ಒಂದು ಸಮುದಾಯಕ್ಕೆ ಭರವಸೆ ನೀಡಲು ಆ ಬಗೆಯ ಕ್ರಮ ಏಕೆ ಉತ್ತಮವೆಂದು ವಿವರಿಸಲು ಧನಾತ್ಮಕ ಮೌಲ್ಯಗಳು ಬೇಕು. ಸಮಾಜವಾದಿಗಳು ಪ್ರಜಾಪ್ರಭುತ್ವ ಏಕೆ ಅಗತ್ಯವೆಂದು ವಿವರಿಸಬೇಕಾಗಬಹುದು. ಯಾತಕ್ಕಾಗಿ, ಯಾವ ರೀತಿಯ ರಾಷ್ಟ್ರಾಡಳಿತ ಬೇಕು ಎಂದೂ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಏಕೆ ಅವರು ನಂಬಿಕೆ ಇಡುತ್ತಾರೆಂದೂ, ಏಕೆ ಸಮಾನರಿರುವ ಒಂದು ಸಮಾಜ, ಲಾಭದಾಯಕ ಮತ್ತು ಉಪಯುಕ್ತ ಲೆಕ್ಕದಲ್ಲಿ ಕೂಡಾ ಒಂದು ಅಸಮಾನತೆಯ ಸಮಾಜಕ್ಕಿಂತ ಉತ್ತಮ ಫಲಿತಾಂಶಗಳನ್ನು ಕೊಡುತ್ತದೆ ಎಂದೂ ಸಮಾಜವಾದಿಗಳು ವಿವರಿಸಬೇಕಾಗುತ್ತದೆ.

ಇದಕ್ಕಾಗಿ ಬುದ್ಧಿಜೀವಿಗಳ ಮತ್ತು ರಾಜಕೀಯ ವಿಚಾರವಂತರ ಅಗತ್ಯವಿದೆ. ಈಗ ಕರೋನಾ ವೈರಾಣುವಿನ ವಿರುದ್ಧ ಒಂದು ಲಸಿಕೆಯ ಅಗತ್ಯದ ಒತ್ತಡವಿರುವುದರಿಂದ, ಯಾರಾದರೂ ಸಧ್ಯಕ್ಕೆ “ವೈದ್ಯರು’ ಮತ್ತು ವಿಜ್ಞಾನಿಗಳು ಮಾತ್ರಾ ಮಾತನಾಡಬೇಕು ಎಂದರೆ ಅಂಥಹವರನ್ನು ಲೆಜ಼ೆಕ್ ಕೊಲಕೌಸ್ಕಿ “ವಿಚಾರ ಶಕ್ತಿಯ ವಿರುದ್ಧದ ವಿಚಾರವಂತರು” ಎಂದು ಕರೆಯುತ್ತಾನೆ. ಅಂಥಹ ಜನರು ವರ್ತಮಾನದ ಒತ್ತಡದ ಸ್ಥಿತಿಯ ಕಾರಣದಿಂದ ಕಲ್ಪನಾತ್ಮಕವಾಗಿ ಮತ್ತು ತಾರ್ಕಿಕವಾಗಿ ಯೋಚಿಸುವುದನ್ನು ನಿರಾಕರಿಸುತ್ತಾರೆ. ಅವರು ತಮ್ಮ ಹೃದಯದಲ್ಲಿ ಎರಡನೇ ಮಹಾಯುದ್ಧಕಾಲದ “ಪಂಡಿತರನ್ನು” ಹೋಲುತ್ತಾರೆ. ಆ ಪಂಡಿತರು ಯುದ್ಧಕಾಲದಲ್ಲಿ ಜನರನ್ನು ಸಧ್ಯಕ್ಕೆ ನಿಶ್ಶಬ್ಧವಾಗಿದ್ದುಕೊಂಡು ಯುದ್ಧಾನಂತರದ ಅವಧಿಯ ಬಗೆಗೆ ಆಲೋಚಿಸಲು ಕೇಳಿಕೊಳ್ಳುತ್ತಿದ್ದರು. ಅದೃಷ್ಟವಶಾತ್ ಆಗ ಮಾಲ್ರೋ, ಗೀದ್, ಕೇಂಸ್, ಒರ್ವೆಲ್,ಬೆನ್ದಾ ಮತ್ತು ಬೆವೆರಿಜ್ಜ್ ಇದ್ದರು. ಈ ತಲೆಗಳ ಮೇಲೆಯೇ ನವಜಗತ್ತಿನ ನೈತಿಕ, ಆರ್ಥಿಕ ಮತ್ತು ರಾಜಕೀಯ ಅಡಿಪಾಯಗಳು ಕಟ್ಟಲ್ಪಟ್ಟವು. ಬಹುಶಃ ನಾವು ಈಗ ಬರಿಯ ತತ್ವಶಾಸ್ತ್ರಜ್ಞರು ಮತ್ತು ತಾರ್ಕಿಕ ಚಿಂತಕರು ಮಾತನಾಡತಕ್ಕವರೆಂದೂ, ಆ ರೀತಿಯ ತಲೆಗಳು ಈಗ ಇಲ್ಲವೆಂದೂ ಚಿಂತೆ ಮಾಡಬಹುದು. ಆದರೆ ಈಗ ಬ್ರಾಂಕೋ ಮಿಲಾನೋವಿಚ್, ಮಾರಿಯಾನ ಮಜ಼ುಕಾಟೋ, ಪಾಲ್ ಮೇಸನ್, ದಾನಿ ರೋಡ್ರಿಕ್ ಮತ್ತು ಶೆರಿ ಬರ್ಮನ್ನಿನಂಥಹವರೂ ಇದ್ದಾರೆ. ಇವರುಗಳು ಜಗತ್ತಿನ ಅತಿ ಮುಖ್ಯ ಜಾಗತಿಕ ಪ್ರತಿಪಾದಕರಲ್ಲಿ ಕೆಲವರು. ಅವರುಗಳು ಈಗ ಸಧ್ಯದಲ್ಲಿ ಈ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗಗಳ ಬಗ್ಗೆ ಆಲೋಚಿಸುತ್ತಿದ್ದಾರೆ.

ಎಡಪಂಥದಿಂದ ಬರುವ ಸೂಕ್ತ ಪರ್ಯಾಯಗಳು.

ಪ್ರಾಯಶಃ ” ಸಾಮಾಜಿಕ ಪ್ರಜಾಪ್ರಭುತ್ವ” (social democracy) ಎಂಬ ಪದ ಅತಿಯಾಗಿ ಒಂದು “ಯೂರೋಪಿನ ವಿಚಾರ” (European idea) ವನ್ನು ಉಲ್ಲೇಖಿಸುತ್ತದೆ. ಮೈಖೆಲ್ ಹುಲ್ಲೆಬಿಖ್ ಎಂಬ ಲೇಖಕ ಹೆಚ್ಚಾಗಿ ಅಣಕು ಮಾಡಿರುವ ” ಉದಾರವಾದೀ ಪ್ರಗತಿಪರತೆ” ಎಂಬ ಸಪ್ಪೆಯಾದ ಪದ ಮತ್ತು ಈ ಪದಗಳೆರಡರ ನಡುವೆ ಆಗಾಗ ನಿರ್ವಿಮರ್ಶಕತೆಯಿಂದ, ಗೊಂದಲ ಉಂಟುಮಾಡಿಕೊಳ್ಳುವ ಸಾಧ್ಯತೆಯಿದೆ. ಮೈಖೆಲ್ ಹುಲ್ಲೆಬಿಖ್ ಎಡಪಂಥದ ಐತಿಹಾಸಿಕ ವಂಶಾವಳಿಯನ್ನು ಅಲ್ಲಗೆಳೆಯಲು ಮತ್ತು ಅದರ ಬಗ್ಗೆ ತಾತ್ಸಾರ ತೋರಿಸಲು ನಿಶ್ಚಯಿಸಿದ್ದಾನೆ.

ಆದರೆ ಅದರ ಅಭಿವ್ಯಕ್ತಿ ” ಸಮಾಜ ಕಲ್ಯಾಣ” ವೂ ಆಗಬಹುದು. ಎರಡನೇ ಮಹಾಯುದ್ಧದ ನಂತರದ ಕಾಲದಲ್ಲಿ ಈ ಸಮಾಜ ಕಲ್ಯಾಣ ಎಂಬ ಪರಿಕಲ್ಪನೆ, ತನ್ನದೇ ಆದ ವಿಶಿಷ್ಠ ಗುಣಲಕ್ಷಣಗಳೊಂದಿಗೆ ಯೂರೋಪಿನ ಹೊರಗಿನ ದೇಶಗಳಲ್ಲೂ ಅಭಿವೃದ್ಧಿಗೊಂಡಿತು. ಸ್ಟೀಫನ್ ಜ಼್ವೀವ್ಗ್ ಹೇಳುವಂತೆ, ನಾವು “ನಿನ್ನೆಗೆ ಹಿಂದಿರುಗಲು” ಸಾಧ್ಯವಿಲ್ಲ. ಆದರೆ ಒಂದು ಸಮುದಾಯದ ಮೌಲ್ಯಗಳನ್ನು ಪುನಃಸ್ಥಾಪಿಸುವ ಒಮ್ಮತದ ಕಲ್ಪನೆಯನ್ನೂ ಮತ್ತು ಅತ್ಯಂತ ದುರ್ಬಲರಿಗೆ ಹಕ್ಕುಗಳಿರುವ ಮತ್ತು ಸ್ಪಷ್ಟವಾದ ನಿಯಮಗಳಿರುವ ಒಂದು ಸಾಂಘಿಕ ಸಮಾಜವನ್ನೂ ಮನಸ್ಸಿನಲ್ಲಿ ಮೂಡಿಸಿಕೊಳ್ಳುವುದು ಸಾಧ್ಯ.ಈ ಸೋಂಕಿನ ಕಾಲದ ನಡುವೆ ಅಥವಾ ಅದು ಕಳೆದ ಮೇಲೆ,ನಾವು ನಿನ್ನೆಗಳನ್ನು ನೆನಪಿಸಿಕೊಳ್ಳುತ್ತಿದ್ದರೆ ಅಥವಾ ನಿನ್ನೆಯ ಚಿತ್ರಗಳನ್ನು ಹೊರತರುತ್ತಿದ್ದರೆ, ಇವ್ಯಾವುದೂ ಆ ನಿನ್ನೆಯ ಪ್ರಪಂಚಕ್ಕೆ ನಾವು ಮತ್ತೆ ಕರೆಕೊಡುತ್ತಿದ್ದೇವೆಂದಲ್ಲ. ಅಂದರೆ, ನಮ್ಮ ಬಲವಾದ ವಿಚಾರಗಳಿಂದ ಒಂದು ಹೊಸ ದಿಗಂತದ ಉಸಾಬರಿಯನ್ನು ನಾವು ವಹಿಸಿಕೊಳ್ಳುತ್ತಿದ್ದೇವೆ ಎಂದರ್ಥ. ಆ ದಿಗಂತದಲ್ಲಿ ಪ್ರಾಯಶಃ “ಎಡ’ವು ಭೂತಕಾಲದ ಮೂಲತತ್ವಗಳನ್ನು ಭವಿಶ್ಯದ ಯೋಜನೆಗಳೊಂದಿಗೆ ಬಲವಾಗಿ ಜೋಡಿಸಬಹುದು. ಅಲ್ಲೇ ನಿರ್ಧಿಷ್ಠವಾಗಿ “ಖಿನ್ನ ಎಡವು”, ಭವಿಶ್ಯ-ಮುಖಿಗಳು ಮತ್ತು ವೇಗ-ಪ್ರತಿಪಾದಿಗಳೊಂದಿಗೆ ಸೇರಿಕೊಳ್ಳುತ್ತದೆ. ಒಟ್ಟಿಗೆ ಒಂದು ಸಮುದಾಯದ ವಿಚಾರವನ್ನು ಅವರು ಯೋಚಿಸಬಹುದು. ಆ ಸಮುದಾಯದಲ್ಲಿ ಆರೋಗ್ಯ ಸೇವೆಗಳು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಮರುಹುಟ್ಟುಹಾಕುವ ಅಗತ್ಯವಿರುವುದಿಲ್ಲ. ಆದರೆ ಅಲ್ಲಿ ಕೆಲವು ವಿಚಾರಗಳಲ್ಲಿ ಮುಂದುವರೆಯಲೇ ಬೇಕಾಗುತ್ತದೆ. ಆ ವಿಚಾರಗಳೆಂದರೆ ಸ್ವಯಮ್‍ಚಾಲನ ತಂತ್ರ , ಸಹಯೋಗೀ ಆರ್ಥಿಕತೆ, ಹವಾಗುಣಬದಲಾವಣೆ, ಲಿಂಗ ಸಂಬಂಧಗಳು ಹಾಗೂ ಸಾರ್ವರ್ತಿಕ ಮೂಲ ಆದಾಯಗಳು. ಯಾವ ಸೇವೆಗಳು ಸಾರ್ವಜನಿಕವಾಗಬೇಕೆಂದು ನಾವು ಬಯಸುತ್ತೇವೆ?

ಪ್ರಗತಿಪರ ಎಂದು ನಾವು ನಂಬಿಕೊಂಡಂಥಾ ಕಾರ್ಯನೀತಿಗಳನ್ನು ರಾಷ್ಟ್ರಾಡಳಿತದ ಯಾವ ಚೌಕಟ್ಟಿನ ಒಳಗೆ ಅಭಿವೃದ್ಧಿಪಡಿಸಬೇಕು? ಹೊಸ ಒಪ್ಪಂದದಲ್ಲಿ ಎಂದಿಗೂ ಸೌಲಭ್ಯಗಳೇ ಇಲ್ಲದವರಿಗೂ ಕೂಡ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಒದಗಿಸಿಕೊಡಲು,ಒಂದು ಸಾಮಾನ್ಯ ಸಾಮಾಜಿಕ ಕರಾರಿಗಿಂತ ಹೆಚ್ಚಿನದನ್ನು ನಾವು ಅಭಿವೃದ್ಧಿಪಡಿಸುವುದು ಹೇಗೆ? ಸಾಲ ಮತ್ತು ವ್ಯಾಪಾರಗಳ ಬಗ್ಗೆ ಏನು ಮಾಡಬೇಕು? ತೆರಿಗೆಯ ಸುಧಾರಣೆಯನ್ನು ಆಲೋಚಿಸುವುದು ಹೇಗೆ? ಈ ಎಲ್ಲಾ ಅಂಶಗಳೂ ಎಡಪಂಥದ ಅಂಶಗಳೇನಲ್ಲ. ಸ್ವಯಂಚಾಲನಾ ತಂತ್ರ ಮತ್ತು ಮೂಲಭೂತ ಆದಾಯವನ್ನು ಬಲಪಂಥವೂ ಹಿಡಿದುಕೊಳ್ಳಬಹುದು. ದಾದಿಯರ ಕ್ಷೇತ್ರವೂ ಸಹ ಸಂಬಳ ಹೆಚ್ಚುಕಡಿಮೆ ಆಗುತ್ತಿರುವುದಕ್ಕೆ ಒಂದು ಒಳ್ಳೆ ಪರ್ಯಾಯ ಆಯ್ಕೆಯಾಗಬಹುದು. ಈ ಅಂಶಗಳನ್ನು “ಎಡ’ ತನ್ನದೆಂದು ಹೇಳಿಕೊಂಡರೂ ಅವು ಅಸಲಿಯಲ್ಲಿ ಬರೇ ಎಡಪಂಥದವುಗಳಲ್ಲ.

ಒಂದು ಎಡಪಂಥದ ಫಲಿತಾಂಶವನ್ನು ಜನರು ಆಶಿಸಿದರೆ ಅದಕ್ಕಾಗಿ ಅವರು ತೀವ್ರಗಾಮೀ ವೇದಿಕೆಗಳಿಂದ ಕಾದಾಡಲು ತಯಾರಿರಬೇಕಾಗುತ್ತದೆ. ಹಿಂದಿನ ಸಪ್ಪೆ ಲಾಭಗಳು ಅದಕ್ಕೆ ಸಮನಾದ ಸಪ್ಪೆ ಯೋಜನೆಗಳಿಗೆ ಕಾರಣವಾಗಲಿಲ್ಲ ಎಂಬುದನ್ನು ನಾವು ಮರೆಯಬಾರದು. ಉದಾಹರಣೆಗೆ ಪ್ರಜಾಪ್ರಭುತ್ವಿಕ ಸಮಾಜವಾದಿಗಳು ಕಮ್ಯೂನಿಸ್ಟರಿಗೆ ಮತ್ತು ಟ್ರಾಟ್ಸ್ಕೀಯಿಸ್ಟ್ಸ್‍ಗಳಿಗೆ ಬಹಳಷ್ಟು ವಿಷಯಗಳಿಗೆ ಆಭಾರಿಯಾಗಿರಬೇಕು. ” ಬಂಡವಾಳಶಾಹಿಯೋತ್ತರ ಸ್ಥಿತಿಗೆ ತೀವ್ರಗಾಮೀ ಸಕ್ರಿಯತೆಯ ಅಗತ್ಯವಿದೆ ಎಂದು ಕೆಲವರು ಹೇಳುತ್ತಾರೆ. ಕಾರ್ಯಕ್ರಮ ಪಟ್ಟಿಗೆ ಕೊಂಡಿ ಹಾಕಿದ ಕೆಲವು ಹೊಸ ವಿಷಯಗಳು : ದಾದಿಯರ ಕ್ಷೇತ್ರ ಲಿಂಗ ಚರ್ಚೆಗೆ ಹಾದಿಯಾಗುತ್ತದೆ, ನವ-ಉದಾರವಾದದ ದೃಷ್ಟಿಕೋನದಿಂದ ಸೂಕ್ತವಾದ ಮಾರ್ಗದಲ್ಲಿ ಮಾತ್ರವೇ ಬಂದಿಲ್ಲದ ಒಬ್ಬ ಪೌರನ ಆದಾಯ, ಕೆಲಸವನ್ನು ಹಂಚಿಕೊಳ್ಳುವುದಕ್ಕೆ, ಈಗಾಗಲೇ ತೃತೀಯ ಜಗತ್ತಿನ ಪ್ರಾದೇಶಿಕ ಸಂಸ್ಥೆಗಳಲ್ಲಿ ಪರೀಕ್ಷಿಸಲ್ಪಟ್ಟ ಐಕ್ಯಮತ್ಯ-ಆಧಾರಿತ ಆರ್ಥಿಕತೆ. ಒಂದು ಮಟ್ಟದ ಅತಿ ಹೆಚ್ಚು ಯೋಜನೆಗಳಿಂದ ಮಾತ್ರಾ ಕೆಲವರು ಅಮೆರಿಕಾಕ್ಕೆ ಕನಿಷ್ಟ ಕಾರ್ಯಯೋಜನೆಗಳನ್ನು ಖಾತ್ರಿ ಮಾಡಲು ಸವಾಲೆಸೆಯುತ್ತಾರೆ. ಅಂಚಿನಲ್ಲಿರುವ ಲ್ಯಾಟಿನ್ ಅಮೆರಿಕದಲ್ಲಿ, ರಾಷ್ಟ್ರಾಡಳಿತ ಮತ್ತು ನಾಗರಿಕ ಸಮಾಜದ ನಡುವಿನ ಸಂಬಂಧಗಳ ಮತ್ತಷ್ಟು ಸಂಕೀರ್ಣವಾಗಿವೆ. ಅಲ್ಲಿ ಜನಪ್ರಿಯ ದಂಡುಗಳು ಒಂದು ರಕ್ಷಣಾತ್ಮಕ ತರ್ಕದೊಂದಿಗೆ ರಾಷ್ಟ್ರಾಡಳಿತದೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಆದರೆ ಈ ದೇಶಗಳಲ್ಲಿ ಆಗಲೇ ಈ ರೀತಿಯ ಅನುಭವಗಳಾಗಿವೆ: ನಿರುದ್ಯೋಗಿ ಕಾರ್ಮಿಕರ ಸಂಘಗಳು, ಸಮುದಾಯ ಆರೋಗ್ಯಸೇವೆಯ ಜಾಲಗಳು,ತುತ್ತತುದಿಯ ಅಂಚಿನ ಜಗತ್ತಿನಿಂದ ಸಂಘಟಿತವಾದ ದಾದಿಯರ ರಚನೆಯ ರಕ್ಷಣೆ, …ಇವೆಲ್ಲವೂ ಈಗ ಹೋರಾಟವನ್ನು ಮುನ್ನೆಡೆಸಲು ಅಗತ್ಯವಾಗುತ್ತವೆ. ಇವೆಲ್ಲಾ ಗೆಲ್ಲಬೇಕಾದ ವಿಷಯಗಳಲ್ಲ. ಹಲವು ಬಾರಿ ಇವು ರಕ್ಷಿಸಬೇಕಾದವುಗಳು.

ಕೇಲವು ದಿನಗಳ ಹಿಂದೆ ಬಿ.ಬಿ.ಸಿ. ಯ ರಾಜಕೀಯ ಸಲಹಾದಾರರಾದ ಪತ್ರಕರ್ತ ಅಲೆಕ್ಸ್ ಬೆಲ್ “ದ ಕುರಿಯರ್’ ನಲ್ಲಿ, ಕರೋನಾ ವೈರಾಣುವಿನ ಸಂದರ್ಭದಲ್ಲಿ ಹೀಗೆ ಬರೆದರು, ” ಸರಕಾರಗಳ ಮುಖ್ಯ ಕೆಲಸವೆಂದರೆ, ಹಿಂದೆ ಅರಿತಿದ್ದಂತೆ ತನ್ನ ಪೌರರನ್ನು ಯುದ್ಧದಿಂದ ಸಂರಕ್ಷಿಸುವುದಷ್ಟೇ ಅಲ್ಲ, ಅವರನ್ನು ಆಧುನಿಕ ಜೀವನದ ಅಸ್ಥಿರತೆಗಳಿಂದಲೂ ಕಾಪಾಡುವುದು, ಅಂದರೆ ಹವಾಮಾನ ಬದಲಾವಣೆ, ಆರ್ಥಿಕ ಹೊಡೆತಗಳು, ಸೋಂಕುರೋಗಗಳು ಮತ್ತು ಅಸಮಾನತೆಗಳಿಂದ ಕಾಪಾಡುವುದು. ಇವು ಆಧುನಿಕ ವೈರಿಗಳು. ಈ ಕೆಲಸಗಳು ಹೊಸ ಬೆವೆರಿಜ್ ವರದಿಯನ್ನು ಎತ್ತಿ ಹಿಡಿಯುವ ಸ್ಥಂಬಗಳಾಗಬೇಕು. ಒಬ್ಬ ವ್ಯಕ್ತಿ ಒಂದು ಆರ್ಥಿಕ ಸಂಸ್ಥೆಯಷ್ಟೇ ಸಮಾನನಾಗಬೇಕು ಮತ್ತು ಸಾರ್ವಜನಿಕ ಜಾಮೀನುಗಳು ಮತ್ತು ಸಹಾಯಹಸ್ಥಗಳು ಸಾರ್ವಜನಿಕರಿಗಾಗಿಯೇ ಇರಬೇಕು, ಅಂತಹ ಒಂದು ಹೊಸ ಕಲ್ಯಾಣ ಯೋಜನೆ ಜಾರಿಗೆ ಬರಬೇಕು….ಆದರೆ ಈಗ, ವ್ಯಕ್ತಿಗಳಿಗೆ ತಕ್ಷಣಕ್ಕೆ ಅನುಕೂಲವಾಗುವ ತೀವ್ರಗಾಮೀ ಆಚರಣೆಗಳಿಗೆ ಪ್ರಾಶಸ್ಥ್ಯ ಸಿಗುತ್ತಿದೆ. ಅಂದರೆ, ನಾವು ಬಿಟ್ಟುಹೋದ ಕಳೆದ ಮಹಾಯುದ್ಧದ ಕುರುಹಿನಿಂದಾದ ಒಡಕುಗಳಿಂದ ಯಾವ ಜನರು ಹಿಂದೆ ಉಳಿದುಹೋಗಿದ್ದಾರೋ, ಅವರ ಜೇಬಿಗೆ ಹಣ ಹಾಕುವುದು, ಅಂದರೆ ಸಮಾಜಕಲ್ಯಾಣ ರಾಷ್ಟ್ರಾಡಳಿತ.

ಅರ್ಜಂಟೈನಾದ ಅಧ್ಯಕ್ಷರು ಇತ್ತೀಚಿಗಿನ ಜಿ-20 ಗೆ ಜಾಗತಿಕ ಮಾರ್ಶಲ್ ಯೋಜನೆಯಗಾಗಿ ನೀಡಿದ ಪ್ರಸ್ಥಾವನೆ ಈ ದಿಕ್ಕಿಗೆ ಕೈಮಾಡಿ ತೋರಿಸುತ್ತದೆ.

ಅಷ್ಟಲ್ಲದೆ, ಇನ್ನೂ ಒಂದಿಷ್ಟು ಇದೆ. ಇದು ತೀವ್ರಗಾಮೀ ಹೋರಾಟವಷ್ಟೇ ಅಲ್ಲ, ಬದಲು ಸಮಾಜಕಲ್ಯಾಣ ರಾಷ್ಟ್ರಾಡಳಿತಗಳ ಮತ್ತು ಭವಿಷ್ಯವಾದೀ ಯೋಜನೆಗಳ ಧನಾತ್ಮಕ ಅಂಶಗಳನ್ನು ನೆನಪಿನಲ್ಲಿಡುವುದು. ಈ ಬಿಕ್ಕಟ್ಟಿನ ಸಮಯದಲ್ಲಿ ಪ್ರಗತಿಪರರು ನಿಜವಾಗಿಯೂ ಲಾಭ ಪಡೆಯಬಹುದಾದ ಪಾಠಗಳಲ್ಲೊಂದು ಯಾವುದು, ಎಂದರೆ ರಾಷ್ಟ್ರಾಡಳಿತದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದು. ತರ್ಕಬದ್ಧವಾಗಿ ಯೋಜನೆಗಳನ್ನು ಮಾಡುವುದರ ಅಗತ್ಯ ಮತ್ತು ಪ್ರಬಲವಾದ ಆರೋಗ್ಯ ವ್ಯವಸ್ಥೆಯನ್ನು ಆಧರಿಸಿದ ಸಾಮಾಜಿಕ ಒಡಂಬಡಿಕೆಯ ಅಗತ್ಯಗಳನ್ನೂ ಅರಿತುಕೊಳ್ಳುವುದು. ಆದರೆ ಅದರ ಜೊತೆಗೆ ಪ್ರಗತಿಪರರು ಉತ್ಪಾದಕತೆಯ ಮೌಲ್ಯವನ್ನೂ ಅರಗಿಸಿಕೊಳ್ಳಬೇಕು. ಅಲ್ಲದೆ ಈಗಿರುವ ಸಮಾಜ , ಯುದ್ಧೋತ್ತರ ಸಮಾಜದಂತಲ್ಲವೆಂದೂ ಈಗ ಹಿಂದಿನ ಕಾಲಕ್ಕಿಂತ ಸಮಾಜಗಳು ಹೆಚ್ಚುಹೆಚ್ಚು ವೈವಿದ್ಯಮಯವಾಗಿದೆಯೆಂಬುದನ್ನೂ ಅವರು ಅರಗಿಸಿಕೊಳ್ಳಬೇಕು. ಈ ಸಮಾಜದಲ್ಲಿ ವ್ಯಕ್ತಿಯ ಕ್ಷೇಮವು ಮುಖ್ಯವೇನೋ ಹೌದು. ಆದರೆ ಇಲ್ಲಿ ಕೈಕೆಳಗಿನ ವರ್ಗಗಳ ಆಸೆಗಳು ಎಡಪಂಥದ ಕಲ್ಪನೆ ಮಾತ್ರವಲ್ಲ. ಅವು ಬಲಪಂಥದಿಂದ ಪೋಷಿಸಲ್ಪಟ್ಟ ಸಾಂಸ್ಕೃತಿಕ ಮಾದರಿಗಳೊಂದಿಗೆ ಹೊಂದಿಕೆಯಾಗುತ್ತವೆ. ಹಾಗೂ ಅವು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಒಂದು ಪರವಾಗಿನಿ ಪಡೆದ ಸ್ಥಿತಿಯನ್ನು ಸಾಧಾರಣ ಸ್ಥಿತಿಯೆಂದು ಅರಗಿಸಿಕೊಳ್ಳಲಾಗುವುದಿಲ್ಲ. ಹಾಗಾದರೆ ನಾವು ಕಲ್ಪಿಸಿಕೊಳ್ಳುವ ಸಾಧಾರಣ ಸ್ಥಿತಿ ಯಾವುದು?

ಈ ವರ್ಷದ ಜನವರಿ 15 ರಂದು ಕರೋನಾ ವೈರಾಣುವಿನ ಬಿಕ್ಕಟ್ಟು ಶುರುವಾಗುವ ಸ್ವಲ್ಪ ಮುಂಚೆ, ರಾಜಕೀಯ ವಿಜ್ಞಾನಿ ಶೆರಿ ಬರ್ಮನ್ ಹೀಗೆ ಬರೆದ. ” ಜಗತ್ತು 1930 ರಲ್ಲಿ ಮತ್ತು 1940 ರಲ್ಲಿ ಎದುರಿಸಿದ ಸ್ಥಿತಿಗೆ ನಾವು ಎಷ್ಟುಮಾತ್ರವೂ ಹತ್ತಿರದಲ್ಲಿಲ್ಲ. ಆದರೆ ಎಚ್ಚರಿಕೆಯ ಚಿನ್ಹೆಗಳು ಸ್ಪಷ್ಟವಾಗಿವೆ. ಇನ್ನೊಂದು ದುರಂತ ಬರದೇ ಇರಲಿ ಮತ್ತು ಅದರಿಂದ ಮಾತ್ರಾ, ಅಂದರೆ, ಒಂದು ವಿಶಾಲ ರಾಜಕೀಯ ವ್ಯಾಪ್ತಿಯ ಉದ್ದಗಲಕ್ಕೂ ಇರುವ ಜನರು, ಹಾಲಿಯ ವಿಷಮ ಸಂಕಟಕ್ಕೆ ಸಾಮಾಜಿಕ ಪ್ರಜಾಪ್ರಭುತ್ವಿಕ ಪರಿಹಾರದ ಉಪಯುಕ್ತತೆಯನ್ನು ಆ ದುರಂತದಿಂದ ಮಾತ್ರವೇ ಅರಿತುಕೊಳ್ಳುವಂತೆ ಆಗದೆ ಇರಲಿ.”

ನಾವು ಆ ದುರಂತವನ್ನು ಅನುಭವಿಸುತ್ತಿದ್ದೇವೆಯೇ?

ಕೃಪೆ: progressive.international


ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಇವು ನನ್ನ ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .

ಪ್ರತಿಕ್ರಿಯಿಸಿ