ಕೃಷಿ ವ್ಯಾಪಾರೋದ್ಯಮದಲ್ಲಿನ ಸುಧಾರಣೆಗಳು ಹಿಂದಿನ ಘೋಷಣೆಗಳ ಪುನರಾವರ್ತನೆಗಿಂತ ಹೆಚ್ಚೇನೂ ಅಲ್ಲ
ವಿತ್ತ ಮಂತ್ರಿಗಳು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೆಲವು ಸುಧಾರಣೆಗಳನ್ನು ಘೋಷಿಸಿದ್ದಾರೆ. ಕೆಲವರು ಇದನ್ನು ಕೃಷಿಯಲ್ಲಿನ ೧೯೯೧ರ ಕ್ಷಣಗಳಿಗೆ ಹೋಲಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿಇದರಲ್ಲಿ ಅಂತಹುದೇನೂ ಇಲ್ಲ. ಪ್ರಧಾನ ಮಂತ್ರಿಗಳು ಘೋಷಿಸಿರುವ ಪ್ಯಾಕೇಜಿನಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿರುವ ನೆರವು ಅತ್ಯಲ್ಪ. ಬಹುಶಃ ಸುಧಾರಣೆಯ ಈ ಘೋಷಣೆಗಳು ಆ ಕಡೆಯಿಂದ ನಮ್ಮ ಗಮನವನ್ನು ಬೇರೆ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿವೆ ಅನ್ನಬಹುದು. ಈ ಸುಧಾರಣೆಗಳಲ್ಲಿ ಹೊಸದೇನೂ ಇಲ್ಲ. ಈಗಾಗಲೇ ಮಾಡಿರುವ ಘೋಷಣೆಗಳ ಮರುಹೇಳಿಕೆಗಳಷ್ಟೆ. ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಮಾಡಿರುವ ಮೂರು ಸುಧಾರಣೆಗಳನ್ನು ಘೋಷಿಸಲಾಗಿದೆ. ಒಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ (ಎಪಿಎಂಸಿ), ಎರಡನೆಯದು ಅವಶ್ಯಕ ಸರಕುಗಳ ಕಾಯ್ದೆ, ಮತ್ತು ಮೂರನೆಯದು ಗುತ್ತಿಗೆ ಕೃಷಿ ಕಾಯ್ದೆ. ಇವುಗಳನ್ನು ಕುರಿತಂತೆ ಮೂರು ದಶಕಗಳಿಂದ ಚರ್ಚೆ ನಡೆಯುತ್ತಲೇ ಇತ್ತು. ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಸಾಕಷ್ಟು ಸುಧಾರಣೆಗಳು ಆಗಿವೆ. ಎಪಿಎಂಸಿಯನ್ನು ಕುರಿತ ಮೊಟ್ಟಮೊದಲ ಸಮಗ್ರ ಮಾದರಿ ಕಾಯ್ದೆಯನ್ನು ೨೦೦೩ರಲ್ಲಿ ಸೂಚಿಸಲಾಗಿತ್ತು. ನಂತರ ಅದರಲ್ಲಿ ಇನ್ನೊಂದಿಷ್ಟು ಸುಧಾರಣೆಗಳನ್ನು ತರುವ ಪ್ರಯತ್ನಗಳು ೨೦೦೭ರಲ್ಲಿ, ೨೦೧೩ರಲ್ಲಿ ನಡೆದಿತ್ತು. ಮತ್ತು ಪ್ರಸ್ತುತ ಸರ್ಕಾರ ಕೂಡ ೨೦೧೭ರಲ್ಲಿ ಇಂತಹ ಪ್ರಯತ್ನವನ್ನು ಮಾಡಿತ್ತು.
ಎಪಿಎಂಸಿ ಮತ್ತು ರಾಜ್ಯಗಳು ಜಾರಿಗೊಳಿಸಿರುವ ಬದಲಾವಣೆಗಳು
ಎಪಿಎಂಸಿ ಕಾಯ್ದೆಯನ್ನು ಕುರಿತಂತೆ ಇರುವ ಮುಖ್ಯ ಟೀಕೆಯೆಂದರೆ ಅದರಲ್ಲಿ ವ್ಯಾಪಾರಿಗಳಿಗೆ ಮುಕ್ತ ಅವಕಾಶವಿಲ್ಲ. ಹಾಗಾಗಿ ರೈತರು ಮತ್ತು ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳನ್ನು ಕೊಳ್ಳುವುದು ಮತ್ತು ಮಾರುವುದು ಕಡ್ಡಾಯವಾಗುತ್ತದೆ.
ಎಪಿಎಂಸಿಯ ಕಾರ್ಯವೈಖರಿಯನ್ನು ಕುರಿತಂತೆ ಇರುವ ಟೀಕೆಗಳು ಸರಿಯಾಗಿಯೇ ಇದೆ. ಅದಕ್ಕೆ ಕೆಲವು ರಾಜ್ಯಗಳು ಸ್ಪಂದಿಸಿವೆ. ಸುಮಾರು ೧೭ ರಾಜ್ಯಗಳು ಎಪಿಎಂಸಿ ಕಾಯ್ದೆಯಲ್ಲಿ ಮಾರ್ಪಾಡು ಮಾಡಿಕೊಂಡು ಅದನ್ನು ಹೆಚ್ಚು ಉದಾರಗೊಳಿಸಿವೆ. ಮಂಡಿಗಳು ಕೆಲಸ ಮಾಡುವ ವಿಧಾನಗಳು ಕೂಡ ಎಲ್ಲಾ ರಾಜ್ಯಗಳಲ್ಲೂ ಒಂದೇ ರೀತಿ ಇಲ್ಲ. ಕೇರಳದಲ್ಲಿ ಎಪಿಎಂಸಿ ಕಾಯ್ದೆಯೇ ಇಲ್ಲ. ಬಿಹಾರ ಕೂಡ ಅದನ್ನು ೨೦೦೬ರಲ್ಲಿ ತೆಗೆದು ಹಾಕಿತು. ಆದರೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒರಿಸ್ಸಾ, ಗುಜರಾತ್ ಮತ್ತು ಆಂಧ್ರಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಹಣ್ಣು ಹಾಗೂ ತರಕಾರಿಗಳ ವ್ಯಾಪಾರಕ್ಕೆ ನಿಯಂತ್ರಣ ತೆಗೆದಿದ್ದಾರೆ. ಖಾಸಗಿ ಮಾರುಕಟ್ಟೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಒಂದು ಸಮಗ್ರ ವ್ಯಾಪಾರಿ ಲೈಸೆನ್ಸ್ ಜಾರಿಗೆ ತಂದಿದ್ದಾರೆ. ಮಾರುಕಟ್ಟೆಯ ಶುಲ್ಕವನ್ನು ಒಂದು ಕಡೆ ವಿಧಿಸುವ ಪದ್ಧತಿ ತಂದಿದ್ದಾರೆ. ತಮಿಳುನಾಡಿನ ಎಪಿಎಂಸಿಯಲ್ಲೂ ಸುಧಾರಣೆಯಾಗಿದೆ. ಅಲ್ಲಿ ಮಾರುಕಟ್ಟೆಯ ಶುಲ್ಕವೇ ಇಲ್ಲ. ಜಾರ್ಖಂಡ್, ಹಿಮಾಚಲ ಪ್ರದೇಶ್, ಉತ್ತರಾಕಾಂಡ್, ಹರಿಯಾಣ ಮತ್ತು ರಾಜಸ್ತಾನಗಳಲ್ಲೂ ಈ ರೀತಿಯ ಒಂದಲ್ಲ ಒಂದು ಸುಧಾರಣೆಗಳು ಜಾರಿಗೆ ಬಂದಿವೆ. ಹಲವು ರಾಜ್ಯಗಳು ಕೃಷಿಉತ್ಪನ್ನಗಳ ಮಾರುಕಟ್ಟೆಗಾಗಿ ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಉದಾಹರಣೆಗೆ ರೈತ ಸಂತೆ (ಕರ್ನಾಟಕ), ರೈತು ಬಜಾರ್ (ಆಂಧ್ರಪ್ರದೇಶ್ ಮತ್ತು ತೆಲಂಗಣಾ), ಉಜವರ್ ಸಂದೈ (ತಮಿಳುನಾಡು), ಅಪ್ನಿ ಮಂಡಿ (ಪಂಜಾಬ್) ಮತ್ತು ಕೃಷಕ್ ಬಜಾರ್ -ಒಡಿಶಾ
ಈ ಎಲ್ಲಾ ಸುಧಾರಣೆಗಳ ನಡುವೆಯೂ ಎಪಿಎಂಸಿ ಮಂಡಿಗಳಲ್ಲಿ ಎಲ್ಲಾ ಸಮಸ್ಯೆಗಳೂ ಉಳಿದೇ ಇವೆ. ಮಾರುಕಟ್ಟೆಗೆ ಒಳ್ಳೆಯ ಮೂಲಭೂತ ಸೌಕರ್ಯ ಇಲ್ಲ. ರೈತರಿಗೆ ಅವರ ಉತ್ಪನ್ನಗಳಿಗೆ ಒಳ್ಳೆ ಬೆಲೆ ಸಿಗುತ್ತಿಲ್ಲ. ಕಾಯ್ದೆಗಳನ್ನು ಮಾಡುವುದರ ಮೂಲಕ ಮಂಡಿಗಳ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗೆ ಮಂಡಿಗಳ ರಚನೆಯೂ ಸಮಸ್ಯೆಗೆ ಕಾರಣವಲ್ಲ. ನಿಜವಾದ ಸಮಸ್ಯೆ ಅಂದರೆ ಅವುಗಳ ಕೆಲಸದಲ್ಲಿ ರಾಜಕೀಯ ಹಸ್ತಕ್ಷೇಪ. ಕೆಲವು ಪ್ರಾಂತ್ಯಗಳಲ್ಲಷ್ಟೇ ಉತ್ಪನ್ನವಾಗುತ್ತಿರುವ ವಾಣಿಜ್ಯ ಬೆಳೆಗಳನ್ನು ಹಾಗೂ ಹಣ್ಣು ಮತ್ತು ತರಕಾರಿಗಳನ್ನು ವ್ಯಾಪಾರ ಮಾಡುವ ದೊಡ್ಡ ಮಂಡಿಗಳಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದು. ಈ ಎಲ್ಲಾ ನ್ಯೂನತೆಗಳ ನಡುವೆಯೂ ಎಪಿಎಂಸಿ ಮಂಡಿಗಳು ರೈತರಿಗೆ ಮಾರುಕಟ್ಟೆಯನ್ನು ಒದಗಿಸುವುದರಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತಿವೆ.
ಬಿಹಾರದ ಉದಾಹರಣೆ
ಈಗ ಹಲವು ರಾಜ್ಯಗಳಲ್ಲಿ ಸುಧಾರಣೆಗಳನ್ನು ತರಲಾಗಿದೆ. ಅದರಿಂದ ರೈತರಿಗೆ ಅನುಕೂಲ ಆಗಿದೆಯಾ? ಇದಕ್ಕೆ ತುಂಬಾ ಒಳ್ಳೆಯ ಉದಾಹರಣೆ ಅಂದರೆ ಬಿಹಾರ್. ಮಾರುಕಟ್ಟೆಯ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಖಾಸಗೀ ಹೂಡಿಕೆಗೆ ಅವಕಾಶ ಮಾಡಿಕೊಟ್ಟರೆ ರೈತರಿಗೆ ಹೆಚ್ಚಿನ ಆಯ್ಕೆಗಳು ಸಾಧ್ಯವಾಗುತ್ತವೆ. ಅದರಿಂದ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತದೆ. ಇದು ಸಾಮಾನ್ಯವಾಗಿ ಸುಧಾರಣೆಯ ಪರವಾಗಿ ಮಾಡುವ ವಾದ. ಆದರೆ ಬಿಹಾರದಲ್ಲಿ ಮಾರುಕಟ್ಟೆಯ ಮೂಲ ಸೌಕರ್ಯವನ್ನು ನಿರ್ಮಿಸುವುದಕ್ಕೆ ಖಾಸಗೀ ಮೂಲದಿಂದ ಯಾವುದೇ ಹೂಡಿಕೆಯೂ ಆಗಿಲ್ಲ್ಲ. ಅಷ್ಟೇ ಅಲ್ಲ ಎಪಿಎಂಸಿಯನ್ನು ರದ್ದುಗೊಳಿಸಿದ್ದರಿಂದ ರಾಜ್ಯದ ಈಗಿರುವ ಮೂಲ ಸೌಲಭ್ಯಗಳೂ (೫೪ ಮಾರುಕಟ್ಟೆ ಯಾರ್ಡುಗಳು) ಹಾಳಾಗುತ್ತಿವೆ. ಹಿಂದೆ ಎಪಿಎಂಸಿಯಲ್ಲಿ ಸಂಗ್ರಹವಾಗುತ್ತಿದ್ದ ಹಣವನ್ನು ಮಾರುಕಟ್ಟೆಯ ಯಾರ್ಡಗಳ ಆಧುನೀಕರಣಕ್ಕೆ, ರಸ್ತೆಗಳನ್ನು ನಿರ್ಮಿಸುವುದಕ್ಕೆ ಮತ್ತು ರೈತರಿಗೆ ಮಾರುಕಟ್ಟೆಯನ್ನು ಬಳಸಿಕೊಳ್ಳುವುದಕ್ಕೆ ಬೇಕಾದ ಇತರ ಮೂಲಸೌಕರ್ಯವನ್ನು ಒದಗಿಸುವುದಕ್ಕೆ ಬಳಸಲಾಗುತ್ತಿತ್ತ್ತು. ಕಾಯ್ದೆಯನ್ನು ರದ್ದುಗೊಳಿಸಿದ ಮೇಲೆ ಈ ಮಾರುಕಟ್ಟೆಯನ್ನು ಯಾರು ಬಳಸುತ್ತಿಲ್ಲ್ಲ. ಖಾಸಗಿ ಮಂಡಿಯನ್ನು ನಿರ್ಮಿಸಲು ಯಾವುದೇ ಹೂಡಿಕೆಯೂ ಆಗುತ್ತಿಲ್ಲ್ಲ. ಅದರ ಬದಲು ಯಾವುದೇ ನಿಯಂತ್ರಣವೂ ಇಲ್ಲದ ಖಾಸಗಿ ಮಾರುಕಟ್ಟೆಗಳು ತಲೆ ಎತ್ತಿವೆ. ಅವು ವ್ಯಾಪಾರಿಗಳಿಂದ ಹಾಗೂ ರೈತರಿಂದ ಮಾರುಕಟ್ಟೆ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಜೊತೆಗೆ ರೈತರ ಉತ್ಪನ್ನಗಳನ್ನು ತೂಕಮಾಡಲು, ವಿಂಗಡಿಸಲು, ಸಂಗ್ರಹಿಸಲು ಯಾವುದೇ ವ್ಯವಸ್ಥೆಯೂ ಇಲ್ಲ. ಖಾಸಗೀ ವ್ಯಾಪರಿಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನಿಯಂತ್ರಣವನ್ನು ತೆಗೆದಿರುವ ಇತರ ರಾಜ್ಯಗಳಲ್ಲೂ ಹೀಗೆ ಆಗಿದೆ. ಇತರ ಸೌಲಭ್ಯಗಳನ್ನು ಕಲ್ಪಿಸುವುದಿರಲಿ, ಮಾರುಕಟ್ಟೆ ಸ್ಥಳವನ್ನು ನಿರ್ಮಿಸುವುದಕ್ಕೂ ಯಾರೂ ಹಣ ಹೂಡಿಲ್ಲ.
ಎಪಿಎಂಸಿಯ ಆಚೆ ಖಾಸಗಿ ಮಂಡಿಗಳಲ್ಲಿ ರೈತರಿಗೆ ಒಳ್ಳೆಯ ಬೆಲೆ ಸಿಕ್ಕಿದೆ ಅನ್ನುವುದಕ್ಕೂ ಯಾವ ಪುರಾವೆಯೂ ಇಲ್ಲ. ಎಪಿಎಂಸಿಯ ವ್ಯವಹಾರದಲ್ಲಿ ಭ್ರಷ್ಟಾಚಾರ, ಒಳಒಪ್ಪಂದ ಇವೆಲ್ಲಾ ನಡೆಯುತ್ತಿದ್ದವು ಅನ್ನುವುದು ನಿಜ. ಆದರೆ ರೈತರಿಗೆ ಮೂಲಭೂತ ಸೌಕರ್ಯ ಸಿಗುತ್ತಿತ್ತು. ಆದರೆ ಎಪಿಎಂಸಿಯನ್ನು ತೆಗೆಯುವುದರಿಂದ ಸರ್ಕಾರ ಲಕ್ಷಾಂತರ ರೈತರಿಗೆ ಮಾರುಕಟ್ಟೆಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸುವ ಜವಾಬ್ದಾರಿಯಿಂದ ನುಣಚಿಕೊಂಡಿದೆ. ರೈತರಿಗೆ ಪ್ರತಿ ೫ಕಿಮೀ ಸುತ್ತಳತೆಯಲ್ಲಿ (ಅಂದರೆ ಸುಮಾರು ೮೦ ಚದರ ಕಿಮೀ ಮಾರುಕಟ್ಟೆ ಪ್ರದೇಶದಲ್ಲಿ) ಒಂದು ರೆಗ್ಯುಲೇಟೆಡ್ ಮಾರುಕಟ್ಟೆ ಇರಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಆದರೆ ಈಗ ೪೫೭ ಚದುರ ಕಿಮೀ ಪ್ರದೇಶಕ್ಕೆ ಒಂದು ರೆಗ್ಯುಲೇಟೆಡ್ ಮಾರುಕಟ್ಟೆ ಇದೆ. ನಮ್ಮಲ್ಲಿ ಈಗ ೭೦೦೦ ನಿಯಂತ್ರಿತ ಮಾರುಕಟ್ಟೆಗಳು ಮತ್ತು ೨೦,೦೦೦ ಗ್ರಾಮೀಣ ಮಾರುಕಟ್ಟೆಗಳು ಇವೆ. ಕನಿಷ್ಠ ಇದರ ಎರಡರಷ್ಟಾದರೂ ಬೇಕು. ಈಗಿರುವ ಹೆಚ್ಚಿನ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯವನ್ನು ಸುಧಾರಿಸಬೇಕಾಗಿದೆ. ಅದಕ್ಕೆ ಬಂಡವಾಳ ಹೂಡಬೇಕು.
ಎಪಿಎಂಸಿ ಕಾಯ್ದೆಯಲ್ಲಿ ಇರುವ ನ್ಯೂನತೆಗಳಿಂದಾಗಿಯೇ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತಿಲ್ಲ ಅನ್ನುವ ವಾದವೂ ಸರಿಯಿಲ್ಲ. ಶೇಕಡ ೮೦ಕ್ಕಿಂತ ಹೆಚ್ಚು ರೈತರು, ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮಂಡಿಗಳಲ್ಲಿ ಮಾರುವುದಿಲ್ಲ. ಅವರೆಲ್ಲಾ ಬಹುತೇಕ ಸಣ್ಣ ರೈತರು. ರೈತರಿಗೆ ಸಿಗುವ ಬೆಲೆಯನ್ನು ಮುಖ್ಯವಾಗಿ ಕೃಷಿ ಉತ್ಪನ್ನಗಳಿಗಿರುವ ಬೇಡಿಕೆ ನಿರ್ಧರಿಸುತ್ತದೆ. ಮಾರುಕಟ್ಟೆಯ ಸೌಲಭ್ಯವಲ್ಲ. ಇದಕ್ಕೊಂದು ಒಳ್ಳೆಯ ಉದಾಹರಣೆಯೆಂದರೆ ಹಾಲಿನ ಬೆಲೆಯಲ್ಲಿ ಆಗುತ್ತಿರುವ ಇಳಿತ. ಇದನ್ನು ವಿತ್ತಮಂತ್ರಿಗಳೇ ಹೇಳಿದ್ದಾರೆ. ಹಾಲಿಗೆ ಮಾರಾಟಕ್ಕೆ ಸಹಕಾರ ಹಾಗೂ ಖಾಸಗೀ ಡೈರಿಗಳಿವೆ. ಆದರೂ ಅದರ ಬೆಲೆ ಕುಸಿದಿದೆ. ಆರ್ಥಿಕತೆಯಲ್ಲಿನ ಬೇಡಿಕೆ ಕುಸಿದಿರುವುದು ಅದಕ್ಕೆ ಬಹು ಮುಖ್ಯ ಕಾರಣ. ಕೋವಿಡ್-೧೯ ಪಿಡುಗಿನಿಂದ ಜಾರಿಗೆ ತಂದಿರುವ ರಾಷ್ಟ್ರೀಯ ಲಾಕ್‌ಡೌನಿನಿಂದ ಸಮಸ್ಯೆ ತೀವ್ರವಾಗಿದೆ ಅಷ್ಟೆ. ಲಾಕ್‌ಡೌನಿಗಿಂತ ಮೊದಲೇ ಬೇಡಿಕೆ ಕುಸಿಯಲು ಪ್ರಾರಂಭವಾಗಿತ್ತು ಅನ್ನುವುದು ವಾಸ್ತವ.
ಬೇಡಿಕೆಯಲ್ಲಿ ಕುಸಿತ:
ಕಳೆದ ಎರಡು ವರ್ಷಗಳಿಂದ ವಾಣಿಜ್ಯದ ಒಪ್ಪಂದಗಳು (ಟರ್ಮ್ಸ ಆಫ್ ಟ್ರೇಡ್) ಕೃಷಿಗೆ ಪ್ರತಿಕೂಲವಾಗಿದೆ. ಕಳೆದ ವರ್ಷಗಳಲ್ಲಿ ಬಹುಪಾಲು ಕೃಷಿ ಸರಕುಗಳಿಗೆ ಸಂಬಂಧಿಸಿದಂತೆ ಬೆಲೆಯ ಹಣದುಬ್ಬರ ಋಣಾತ್ಮಕವಾಗಿತ್ತು. ದುರ್ಬಲವಾಗಿರುವ ಬೇಡಿಕೆ, ಜೊತೆಗೆ ಹಣದುಬ್ಬರವನ್ನು ಹಣಕಾಸು ಹಾಗೂ ವಿತ್ತೀಯ ನೀತಿಗಳ ಮೂಲಕ ನಿಯಂತ್ರಿಸಬೇಕೆನ್ನುವ ಧೋರಣೆ ಇವೆಲ್ಲಾ ಸೇರಿಕೊಂಡು ಕೃಷಿ ಉತ್ಪನ್ನಗಳ ಬೇಡಿಕೆ ತೀವ್ರವಾಗಿ ಕುಸಿದಿದೆ. ಮಾರುಕಟ್ಟೆಯಲ್ಲಿ ಕೊಳ್ಳುವ ಶಕ್ತಿ ಇರುವ ಬಳಕೆದಾರರು ಇರಬೇಕು. ಆಗ ಮಾರುಕಟ್ಟೆಯ ಆಯ್ಕೆ ಹೆಚ್ಚುತ್ತದೆ ಎಂಬ ವಾದಕ್ಕೆ ಅರ್ಥಬರುತ್ತದೆ. ಕೃಷಿ ಹಾಗೂ ರೈತರಿಗೆ ಸಂಬಂಧಿಸಿದಂತೆ ಸಮಗ್ರ ಆರ್ಥಿಕ (ಮ್ಯಾಕ್ರೊ) ಪರಿಸ್ಥಿತಿ ಸುಧಾರಿಸದೇ ಹೋದರೆ ಮಾರುಕಟ್ಟೆಗೆ ಸಂಬಂಧಿಸಿದಂತೆ ಎಷ್ಟೇ ಸುಧಾರಣೆ ತಂದರೂ ರೈತರಿಗೆ ಒಳ್ಳೆಯ ಬೆಳೆ ಸಿಗುವ ಸಾಧ್ಯತೆ ಇಲ್ಲ.
ವಿತ್ತೀಯ ಹೂಡಿಕೆ ಹೆಚ್ಚಬೇಕು
ಲಾಕ್‌ಡೌನ್‌ಗಿಂತ ಮೊದಲೇ ಸರ್ಕಾರ ಅದರಲ್ಲೂ ವಿಶೇಷವಾಗಿ ವಿತ್ತ ಮಂತ್ರಿಗಳು ವಿತ್ತೀಯ ಹೂಡಿಕೆಯನ್ನು ಹೆಚ್ಚಿಸಬೇಕಿತ್ತು. ಇದು ಆರ್ಥಿಕತೆಯಲ್ಲಿನ ಬೇಡಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ತಂಬಾ ಮುಖ್ಯ. ಲಾಕ್ ಡೌನ್ ನಂತರ ಆದಾಯದಲ್ಲಿ ಕುಸಿತ, ನಿರುದ್ಯೋಗ ಮತ್ತು ಬೇಡಿಕೆಯಲ್ಲಿ ಕುಸಿತ ಇವೆಲ್ಲಾ ತೀವ್ರವಾಗಿದೆ. ಬರುವ ವರ್ಷದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಕುಗ್ಗುವ ನಿರೀಕ್ಷೆ ಇದೆ. ಇಂತಹ ಪರಿಸ್ಥಿತಿಯಲ್ಲಂತೂ ಇಂತಹ ಹೂಡಿಕೆ ಅವಶ್ಯಕವಾಗಿ ಆಗಬೇಕು. ಜೊತೆಗೆ ಅಂತರರಾಷ್ಟ್ರಿಯ ಬೆಲೆಗಳಲ್ಲೂ ಕುಸಿಯುತ್ತಿರುವ ಪ್ರವೃತ್ತಿ ಕಾಣುತ್ತಿದೆ. ರೈತರಿಗೆ ಇಂದು ತುರ್ತಾಗಿ ರಕ್ಷಣೆ ಬೇಕಾಗಿದೆ. ಅವರ ಉತ್ಪನ್ನಗಳ ಬೆಲೆಗಳು ಕುಸಿಯದಂತೆ ನೋಡಿಕೊಳ್ಳಬೇಕಾಗಿದೆ.
ಸುಧಾರಣೆಗಳನ್ನು ಕುರಿತಂತೆ ಒಂದು ಕರಡನ್ನು ಸಿದ್ಧಪಡಿಸಿಕೊಳ್ಳದೆ, ರಾಜ್ಯಗಳ ಅಥವಾ ಸಂಬಂಧಪಟ್ಟ ಇತರರ ಜೊತೆಯಲ್ಲಿ ಚರ್ಚಿಸದೆ ಇಂತಹ ಸುಧಾರಣೆಗಳನ್ನು ಘೋಷಿಸುವುದರಿಂದ ಅಂತಹ ಪ್ರಯೋಜನವಾಗುವುದಿಲ್ಲ. ರೈತರ ಆದಾಯಕ್ಕೆ ಬೆಂಬಲವಾಗಿ ಆರ್ಥಿಕ ಬೆಂಬಲ ನೀಡಬೇಕು. ಇಲ್ಲದೇ ಹೋದರೆ ಇದು ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕೆ ಒಂದು ಸಾಧನವಾಗಬಹುದು ಅಷ್ಟೆ. ರೈತರಿಗೆ ಒಳ್ಳೆಯ ಬೆಲೆಯನ್ನು ಸಿಗುವಂತೆ ಮಾಡಬೇಕು ಎಂದು ಸರ್ಕಾರ ಗಂಭೀರವಾಗಿ ಅಂದುಕೊಂಡಿದ್ದರೆ ಅದು ವಿತ್ತೀಯ ಹೂಡಿಕೆಯನ್ನು ಹೆಚ್ಚಿಸಿ ಆರ್ಥಿಕತೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಬೇಕು. ಅದು ನಿಜವಾಗಿ ರೈತರ ಆದಾಯವನ್ನು ಹೆಚ್ಚಿಸುವುದಕ್ಕೆ ತುಂಬಾ ಸಹಕಾರಿ. ಇಂತಹ ಸುಧಾರಣೆಯ ಖಾಲಿ ಘೋಷಣೆಗಳಿಗಿಂತ ಅದು ಆಗಬೇಕು.
ಕೃಪೆ : thehindu
ಅನುವಾದ: ಟಿ. ಎಸ್. ವೇಣುಗೋಪಾಲ್
ಅಸೋಸಿಯೇಟ್ ಪ್ರೊಫೆಸರ್, ಸೆಂಟರ್ ಫಾರ್ ಎಕನಾಮಿಕ್ ಸ್ಟಡೀಸ್ ಅಂಡ್ ಪ್ಲಾನಿಂಗ್, ಜೆಎನ್ಯು ನವದೆಹಲಿ.
ಸರ್
ಈ ಕುರಿತು ನನ್ನದೊಂದು ಅನಿಸಿಕೆ
ಬದಲಾಗಲಿರುವ ರೈತ ಪರಿಕಲ್ಪನೆ
===============================
ವಾಣಿಜ್ಯ ಚಟುವಟಿಕೆಗಳಾದ ಕೃಷಿ ಉತ್ಪನ್ನಗಳ ಖರೀದಿ, ಉತ್ಪನ್ನ ಸಂಗ್ರಹ, ಬೆಲೆನಿಗದಿ, ಮಾರಾಟ ಇಂಥ ಚಟುವಟಿಕೆಗಳಲ್ಲಿ
ತೊಡಗಿರುವ ಕಾರ್ಪೋರೇಟ್ ಕಂಪನಿಯವ ರೆಲ್ಲರೂ ಇನ್ನು “ರೈತ” ವಾಖ್ಯಾನದಡಿ ಬರಬಹುದು. ಇದಕ್ಕೆ ಕಾರಣ ಎಪಿಎಂಸಿ (ತಿದ್ದುಪಡಿ)ಕಾಯ್ದೆ.
ಈ ಕಾಯ್ದೆಗನುಗುಣವಾಗಿ ರೈತರ ಫಸಲನ್ನು ಮುಂಚೆಯೇ ನಿಗದಿಯಾದ ದಿನಕ್ಕೆ ಮತ್ತು ಪೂರ್ವ ನಿಗದಿತ ಬೆಲೆಗೆ ಸರಕು ಖರೀದಿ ಖಾತ್ರಿ ದೊರೆತು ರೈತರಿಗೆ ಲಾಭವಾಗಲಿದೆ ಎನ್ನಲಾಗಿದೆ.
ಆದರೆ ರೈತರ ಪಾರಂಪರಿಕ ವಂಶಾನುಗತ ಸಂಪತ್ತಾದ ಭೂಒಡೆತನದ ಭದ್ರತೆಗೆ ಈ ಕಾಯಿದೆ ಕುತ್ತು ತರಲಿದೆ ಎಂಬ ವಿಷಯವನ್ನು ಉದ್ದೇಶ ಪೂರ್ವಕವಾಗಿ ಚರ್ಚೆಯಿಂದ ಹೊರಗಿಡಲಾಗುತ್ತಿದೆ.ಈ ಬಗ್ಗೆ ದನಿ ಎತ್ತಬೇಕಾಗಿದೆ.
“ಬೆಲೆಯ ಮಟ್ಟವನ್ನು ಮಾರುಕಟ್ಟೆ ಶಕ್ತಿ ಗಳು ನಿರ್ಧರಿಸಬೇಕು” ಎಂಬಂತೆ ವಾದಿಸಲಾಗಿದೆ ಬೆಲೆ ನಿಗದಿ ಅಧಿಕಾರ ಎಪಿಎಮ್ಸಿಗಳಿಂದ ಮಾರುಕಟ್ಟೆ ಶಕ್ತಿಗಳಿಗೆ ವರ್ಗವಾದರೆ ರೈತರಿಗೆ ಹೇಗೆ ಲಾಭವಾಗುತ್ತದೆ?
ಡಿ.ಎಮ್.ನದಾಫ
ಅಫಜಲಪುರ.